Oppanna.com

ಬಿದರೆ ದಾರಿಲಿ ‘ಬೆದುರ ಹೂಗುಗೊ’ ಚೆದುರಿ ಬಿದ್ದಿತ್ತು!

ಬರದೋರು :   ಒಪ್ಪಣ್ಣ    on   15/06/2012    77 ಒಪ್ಪಂಗೊ

ಆಚ ವಾರ ಮಾರ್ಕು ಲೆಕ್ಕಾಚಾರ ಆತು; ಕಳುದವಾರ ಬಾವಿ ತೆಗದಾತು; ಮತ್ತಾಣ ವಾರವೂ ಬಂದಾತು.
ನಾವು ಹೀಂಗೇ ಹೊತ್ತು ಕಳಕ್ಕೊಂಡು ಕೂದರೆ ಕಾಲ ಸುಮ್ಮನಿರ್ತೋ? ಇಲ್ಲೆ.
ಅದರಷ್ಟಕೇ ಮುಂದೆ ಹೋಗಿಂಡಿರ್ತು.
ಶುಬತ್ತೆಯ ಮಗಳು ಶಾಲೆಂದ ಕೋಲೇಜಿಂಗೆ ಹೋದಪ್ಪದ್ದೇ –  ಸರ್ಪಮಲೆಪುಳ್ಳಿ ಶಾಲಗೆ ಸೇರಿದ°;
ಅವ ಹೋಗಿಂಡಿದ್ದ ಬಾಲವಾಡಿಗೆ ಆಚಮನೆಗಾಯತ್ರಿ ಹೋಪಲೆ ಸುರುಮಾಡಿದ್ದು; ಗಾಯತ್ರಿ ಲಾಗ ಹಾಕಿಂಡಿದ್ದ ಉಯ್ಯಾಲೆಲಿ ಅದರ ಕುಂಞಿ ತಂಗೆ ನೇತೊಂಡಿದ್ದು ಈಗ!
ಎಲ್ಲವೂ ಒಂದೊಂದು ವೃತ್ತಾಕಾರ ಇದಾ; ಪ್ರಪಂಚ ನಿತ್ಯವೂ ಬೆಳಕ್ಕೊಂಡಿರ್ತು!
ಕಾಲದೊಟ್ಟಿಂಗೆ ಬೆಳವಣಿಗೆಯೂ ಆವುತ್ತಾ ಇರ್ತು; ಬೆಳವಣಿಗೆ ಒಟ್ಟಿಂಗೆ ಬದಲಾವಣೆಯೂ ಆವುತ್ತಾ ಇರ್ತು.
~

ಪ್ರಪಂಚದ ಒಟ್ಟಿಂಗೆ ಜಾಣನೂ ಬೆಳೆತ್ತ° ಇದಾ!
ಮೂಡಬಿದ್ರೆಯ ಆಳ್ವನ ಕೋಲೇಜಿಲಿ ಒಂದನೇ ಒರಿಶದ ಕೋಲೇಜಿಲಿ ಕಲ್ತು; ಈ ಸರ್ತಿ ಎರಡ್ಣೇ ಒರಿಶದ ಕೋಲೇಜು.
ಕಳುದವಾರ ಕ್ಲಾಸು ಸುರು ಆತಾಡ. ಇನ್ನು ಮನೆಗೆ ಬಪ್ಪದು ಆರು ತಿಂಗಳು ಕಳುದು.
ಅಷ್ಟು ಸಮಯ ಮನೆಲಿಯೂ ಕಾಣ, ಬೈಲಿಲಿಯೂ ಕಾಣ.
ಈಗ ಕ್ಲಾಸು ನೆಡೆತ್ತಾ ಇಕ್ಕು ಅವಂಗೆ; ಜಾ..ಣ ಮಾಣಿ – ಕಲಿಯಲಿ.
~

ಶಾಲೆ ಸುರು ಆದ್ದು ಕಳುದವಾರ ಆದರೆ, ಅದರಿಂದ ಒಂದು ವಾರ ಮದಲೇ ಸೇರ್ಲೆ ಹೋಗಿತ್ತಿದ್ದ.
ಮದಲಿಂಗೆ ಒಂದು ಶಾಲೆ ಸೇರಿರೆ – ಆ ಶಾಲೆ ನಾವಾಗಿಯೇ ಬಿಡುವನ್ನಾರ ಪುನಾ ಸೇರ್ಲೆ ಇಲ್ಲೆ; ಈಗ ಪ್ರತಿ ಒರಿಶವೂ ಪೈಸೆ ಕಟ್ಟಿ ಪುನಾ ಪುನಾ ಸೇರೇಕಡ – ಜಾಣ ಹೇಳಿತ್ತಿದ್ದ.
ಓ ಮೊನ್ನೆ ದೊಡ್ಡಜ್ಜನಲ್ಲಿ ಬದ್ಧ ಕಳಾತಲ್ಲದೋ – ಅದರ ಮುನ್ನಾಣದಿನವೇ ಅವ ಸೇರಿದ್ದು.
ಬೆಳಿವೇಷ್ಟಿ – ಕಪ್ಪುಕರೆ ಕನ್ನಡ್ಕದ ಮಾವಂದ್ರ “ಬರವಣಿಗೆ” ಆವುತ್ತಾ ಇತ್ತು; ಊಟಕ್ಷಿಣೆಗೆ ಇನ್ನೂ ಸುಮಾರು ಹೊತ್ತು ಇದ್ದು.
ನವಗೆ ಪುರುಸೋತೇ ಅಲ್ಲದೋ – ಜಾಣನ ಕೈಲಿ ಮಾತಾಡಿಗೊಂಡು ಕೂದೆ.

ಜಾಣಂಗೆ ಎರಡು ತಿಂಗಳು ರಜೆ ಇದ್ದ ಕಾರಣ ಊರುಗೊ ಹಲವು ಗುರ್ತಮಾಡಿಗೊಂಡನಡ.
ಒಂದು ವಾರ ಧಾರವಾಡ, ಒಂದು ವಾರ ಬೆಂಗುಳೂರು, ಒಂದು ವಾರ ಕೊಡೆಯಾಲ – ಎಲ್ಲವನ್ನೂ ನೋಡಿಗೊಂಡ.
ಹಪ್ಪಳ ಒತ್ತಲಪ್ಪಗ ಮನೆಲಿಲ್ಲೆ ಹೇದು ಜಾಣನ ಅಮ್ಮ ಬೇಜಾರುಮಾಡಿಗೊಂಡೂ, ಮೆಡಿಮುರಿವಲಪ್ಪಗ ಜಾಣ ಇರೇಕಾತು ಹೇದು ಅಪ್ಪ ಬೇಜಾರು ಮಾಡಿಗೊಂಡ್ರೂ – ಜಾಣನ ಊರಿಲಿ ಕಾಂಬಲೇ ಇಲ್ಲೆ!
ಅದಿರಳಿ.
~

ಜಾಣ ಕೋಲೇಜಿಂಗೆ ಸೇರ್ಲೆ ಮೂಡಬಿದ್ರೆಗೆ ಹೋದ ಬಗ್ಗೆ ಮಾತಾಡಿದ°.
ಅಪ್ಪಂದೇ, ಅವಂದೇ ಹೋದ್ಸಡ.
ಅಪ್ಪ ಒಟ್ಟಿಂಗಿಪ್ಪಗಾಳೇ ಸಾಮಾನುಕಟ್ಟ ಹೊರ್ಸು ಸುಲಭ ಹೇದು ಮಾಂಬ್ಳ, ಹಪ್ಪಳ, ಮೆಡಿ ಉಪ್ಪಿನಾಯಿ, ತುಪ್ಪ, ಜೇನ – ಎಲ್ಲವನ್ನೂ ಬೇರೆಬೇರೆ ಕಟ್ಟಲ್ಲಿ ಕಟ್ಟಿಂಡು ಕೊಂಡೋದವಡ. ಅದರ ಅಂಬಗಳೇ ಹೋಷ್ಟೆಲು ಕೋಣೆಲಿ ಮಡಗಿಕ್ಕಿ ಬಯಿಂದನಡ. ಇನ್ನು ಕೋಲೇಜು ಸುರು ಅಪ್ಪ ದಿನ ಕೈಬೀಸ ಹೋಪದು ಸುಲಬ ಇದಾ!
ಹಾಂಗೆ, ಸೇರ್ಲೆ ಹೋಪ ದಿನ ಇವನ ಕೈಲಿ ಅಪ್ಪನ ಬೇಗು, ಅಪ್ಪನ ಕೈಲಿ ಇವನ ಕಟ್ಟ. 😉
ಉದಿಯಪ್ಪಗ ಹೆರಟು, ಮಜ್ಜಾನ ಕೋಲೇಜಿಂಗೆ ಸೇರಿ, ಹೋಷ್ಟೆಲು ಕೋಣಗೆ ಒಂದರಿ ಹೋಗಿ, ಹೊತ್ತಪ್ಪಗ ಒಪಾಸು ಮನಗೆ ಹೆರಟು; ಇರುಳು ಎತ್ತಿದವಡ.
ಈ ಸಂಗತಿಯ ಎಡೆಲಿ ಒಂದು ವಿಶೇಷದ ಶುದ್ದಿ ಹೇಳಿದ°.
~
ಎರಡು ತಿಂಗಳ ರಜೆ ಕಳುದು ಮೂಡಬಿದ್ರೆಗೆ ಹೋಪಗ ಆ ಊರಿಂಗೆ ಊರೇ ಬದಲಿದ್ದಡ, ಎಂತಕೆ?
ಕಳುದ ಸರ್ತಿಯಾಣ ರಜೆ ಮುಗುಶಿ ಮನಗೆ ಬಪ್ಪಾಗ ಮಾರ್ಗದ ಕರೆ ನೋಡಿಗೊಂಡೇ ಬಯಿಂದ; ಊರು ಪೂರ್ತ – ಹಸುರುಹಸುರು. ತೋರತೋರದ ಬೆದುರ ಪುಂಡೆಲುಗೊ, ಅದರ ಸುತ್ತಲೂ ಬಂದ ಹಸುರು ಎಲೆಗೊ, ಹಸುರು ಮುಳ್ಳುಗೊ ಇದ್ದತ್ತು.
ಆದರೆ, ಈಗ ದೊಡ್ಡರಜೆ ಕಳುದು ಒಪಾಸು ಹೋಪಗ?
– ಹಸುರು ಎಲೆಯ ನೆಡುಕೆ ಬೆಳಿಬೆಳಿ ಹೂಗುಗೊ ತುಂಬಿ ಹೋಯಿದು; ಕೆಲವು ದಿಕ್ಕೆ ಅದಾಗಲೇ ಒಣಗಿ ಆ ಹೂಗುಗೊ ದಾರಿಗೆ ಬಿದ್ದಿದು. ಸಮಗಟ್ಟು ಮಳೆ ಬರೇಕಟ್ಟೆ ಆದ ಕಾರಣ ಇಡೀ ದಾರಿಗೆ – ಹರಗಿ ಮಡಗಿದ ಹಾಂಗೆ – ಬೆಳೀ ಕಾಣ್ತು; ಹೇಳಿದ.
ಅಪುರೂಪದ ಈ ಬೆದುರ ಹೂಗಿನ ಸಂಗತಿ ಮಾತಾಡುವನೋ ಕಂಡತ್ತು.
~

ಹಳೆಮನೆ ಅಣ್ಣಂಗೆ ಸಿಕ್ಕಿದ ಬೆದುರು ಅಕ್ಕಿ.

ಶುಬತ್ತೆಯ ಮಾರ್ಕು ಲೆಕ್ಕಾಚಾರಲ್ಲಿ “ನೂರು” ಹೇಂಗೆ ಲೆಕ್ಕವೋ, ಸಮಯ ಲೆಕ್ಕಾಚಾರಲ್ಲಿ “ಅರುವತ್ತು” ಲೆಕ್ಕ.
ಒಂದು ನಿಮಿಶಕ್ಕೆ ಅರುವತ್ತು ಕ್ಷಣ, ಒಂದು ಗಂಟೆಗೆ ಅರುವತ್ತು ನಿಮಿಷ, ಒಂದು ಗಳಿಗೆಗೆ ಅರುವತ್ತು ವಿಘಳಿಗೆ, ಒಂದು ದಿನಕ್ಕೆ ಅರುವತ್ತು ಗಳಿಗೆ – ಅರುವತ್ತು ಒರಿಶಕ್ಕೆ ಒಂದು “ಸಂವತ್ಸರ ಚಕ್ರ” ಇತ್ಯಾದಿ.
~

ವತ್ಸರ ಹೇದರೆ ಒರಿಶ – ಹೇದು ಅರ್ತ; ಭೂಮಿ ಸೂರ್ಯಮಾವನ ಎದುರೆ ಒಂದು ಸುತ್ತ ಸುಳಿವಲೆ ತೆಕ್ಕೊಂಬ ಸಮಯ.
ಭೂಮಿಯ ಹವಾಮಾನದ ವಿತ್ಯಾಸಂದಾಗಿ ಒರಿಶ ಒಂದಕ್ಕೆ – ಚಳಿ, ಮಳೆ, ಬೇಸಗೆ – ಮೂರು ಕಾಲಂಗೊ ಉಂಟಾವುತ್ತು; ಹಾಂಗೆಯೇ, ಆರು ಋತುಗೊ ಉಂಟಾವುತ್ತು. ಪ್ರತಿ ಒರಿಶ ಇದು ಪುನರಾವರ್ತನೆ ಆವುತ್ತು.
ಭೂಮಿಯ ಅಕ್ಷಲ್ಲಿಪ್ಪ ಮಾಲುವಿಕೆಯೇ ಇದಕ್ಕೆ ಕಾರಣ ಹೇಳುಗು ಮಾಷ್ಟ್ರುಮಾವ°.
ಪ್ರತಿ ಒರಿಶ ಇದು ಪುನರಾವರ್ತನೆ ಆವುತ್ತರೂ, ಒಂದೊರಿಶದ ಕಾಲಮಾನದ ಹಾಂಗೆ ಇನ್ನೊಂದೊರಿಶ ಇರ.

~

ಅರುವತ್ತೊರಿಶಕ್ಕೆ ಒಂದು ಸಂವತ್ಸರ ಚಕ್ರ – ಹೇಳಿ ಗೊಂತಿದ್ದು ನವಗೆ.
ಸಂವತ್ಸರ ಚಕ್ರ ಹೇದರೆ ಜೀವಮಾನ; ಜೀವಮಾನಲ್ಲಿ ಎಲ್ಲವನ್ನೂ ಕಾಂಗು.
ನಾಗರಿಕತೆ ಆರಂಭಲ್ಲಿ ಒಂದೊಂದೊರಿಶಕ್ಕೆ ಒಂದೊಂದು ಹೆಸರು ಮಡಗುತ್ತ ಕಾಲಲ್ಲಿ –  ಪ್ರಭವ ಸಂವತ್ಸರಂದ ತೊಡಗಿ ಅರುವತ್ತನೇ “ಕ್ಷಯ” ಸಂವತ್ಸರ ಒರೆಂಗೆ – ಒಂದೊಂದು ಒರಿಶಕ್ಕೆ ಒಂದೊಂದು ಹೆಸರು ಮಡಗಿದ್ದವು.
(ಸಂಕೊಲೆ: https://oppanna.com/makkoge/samvatsarango)

ಒರಿಶಕ್ಕೊಂದು ಹೆಸರು ಹೇದು ಅಂತೇ ಮಡಗಿದ್ದವೋ? ಇಲ್ಲೆ.
ಪ್ರತಿ ವತ್ಸರಕ್ಕೂ ಸಂವತ್ಸರದ ಹೆಸರಿಂಗೂ, ಆಯಾ  ಒರಿಶದ ಹವಾಮಾನಕ್ಕೂ ಒಳ್ಳೆತ ಸಮ್ಮಂದ ಇದ್ದತ್ತಾಡ ಮದಲಿಂಗೆ.
ಪ್ರತಿ ಅರುವತ್ತೊರಿಶಕ್ಕೊಂದರಿ ಅದೇ ವಾತಾವರಣ ಆವರ್ತನೆ ಆವುತ್ತ ಕಾರಣ, ಆಯಾ ಒರಿಶಕ್ಕೆ ಆ ಹೆಸರು ನಿಗಂಟು ಮಾಡಿದವು.

ಒಂದೊರಿಶ ಧವಸ ಧಾನ್ಯಂಗೊ ಅಲಫಲಂಗೊ ತುಂಬಿಹೋಕು, ಆ ಒರಿಶಕ್ಕೆ “ಬಹುಧಾನ್ಯ” ಹೇದು ಹೆಸರು ಮಡಗಿದವು.
ಮತ್ತೊಂದೊರಿಶ ಕರ್ಚು ಜಾಸ್ತಿ ಬಕ್ಕು, ಅದಕ್ಕೆ “ವ್ಯಯ” ಸಂವತ್ಸರ ಹೇದು ಮಡಗಿದವು.
ಒಂದೊರಿಶ ಇಡೀ ಆನಂದಂದ ತುಂಬಿಕ್ಕಾಡ; ಅದರ “ಆನಂದ” ಸಂವತ್ಸರ
ಹೀಂಗೇ ಅರುವತ್ತು ಒರಿಶ.
ಎರಡು ಸಂವತ್ಸರಚಕ್ರಕ್ಕೆ ಒಂದು “ಪರಮಾಯುಷ್ಯ” ಹೇಳ್ತದು ಜೋಯಿಶಜ್ಜನ ಲೆಕ್ಕ; ಪರಮಾಯುಷ್ಯ ಇಪ್ಪೋರು ಎಲ್ಲಾ ಸಂವತ್ಸರವನ್ನೂ ಎರಡು ಸರ್ತಿ ಕಾಣ್ತವಡ.

~

ಅರುವತ್ತೊರಿಶಕ್ಕೊಂದರಿ ಕ್ಷಯ ಸಂವತ್ಸರ ಬಂದುಗೊಂಡಿತ್ತಲ್ಲದೋ – ಅಂಬಗ ಕ್ಷಯವೂ ಬಂದುಗೊಂಡಿತ್ತು.
ಕ್ಷಯ ಸಂವತ್ಸರಲ್ಲಿ ಎಲ್ಲವೂ ಕ್ಷಯ ಆಗಿಕ್ಕು; ಆ ಒರಿಶ ಉಂಬಲೂ ಸಮಗಟ್ಟು ಇರ.
ಮಾಡಿದ ಕೃಷಿಗೊ ಸಮಗಟ್ಟು ಸಿಕ್ಕ; ಕುಡಿವಲೆ ನೀರು ಇರ, ಅಟ್ಟಲ್ಲಿ ಅಕ್ಕಿ ಇರ, ಬೇಶಲೆ ಕಿಚ್ಚು ಇರ- ಅಂತಾ ದಾರಿದ್ರ್ಯ ಬಕ್ಕು. ಒಬ್ಬಂಗಿಬ್ರಿಂಗಲ್ಲ; ಇಡೀ ಲೋಕಕ್ಕೇ ಬಕ್ಕು – ಹೇದು ಕಾಂಬುಅಜ್ಜಿ ಕತೆ ಹೇಳಿಗೊಂಡಿತ್ತಿದ್ದವು ಒಪ್ಪಣ್ಣ ಸಂಣ ಇಪ್ಪಾಗ.
ಆದರೆ, ಎಲ್ಲಾ ಕಷ್ಟಂಗಳ ಎಡಕ್ಕಿಲಿ ದೇವರು ರಜ್ಜ ಸುಖ ಕೊಡ್ತನಾಡ – ಹಾಂಗೇ, ಕ್ಷಯ ಸಂವತ್ಸರಲ್ಲಿ ತಿಂಬಲೆ ಎಂತೂ ಇಲ್ಲದ್ದೆ ಅಪ್ಪದು ಬೇಡ ಹೇದು “ಬೆದುರಿಲಿ” ಅಕ್ಕಿ ಬಪ್ಪ ಹಾಂಗೆ ಮಾಡ್ತನಾಡ – ಹೇಳಿ ಕತೆ ನಿಲ್ಲುಸುಗು.

ಸಣ್ಣ ಇಪ್ಪಗ ಈ ಕತೆ ಕೇಳುವಗ
– ಬೆದುರಿಲಿ ಅಕ್ಕಿಯೋ? ಚೆಲ, ಅದರ ಕಂಡಿದಿಲ್ಲೆನ್ನೇಪ್ಪಾ!
ಬತ್ತಲ್ಲಿ ಅಕ್ಕಿ ಬತ್ತು – ನೇಜಿ ನೆಟ್ಟು ಮೂರು ತಿಂಗಳಿಲಿ.
ಹುಲ್ಲಿಲಿಯೂ ಬಿತ್ತು ಅಪ್ಪದು ಕಂಡಿದು.
ಮಳೆಗಾಲ ತಿರುಗಿ ಹುಟ್ಟಿದ ಮುಳಿಯೂ ದಶಂಬ್ರಕ್ಕಪ್ಪಗ ಹಣ್ಣಕ್ಕು.
ಒರಿಶಕ್ಕೊಂದರಿ ಕಬ್ಬಿಲಿಯೂ ಹೂಗು ಬಪ್ಪದಿದ್ದು.
ರಾಗಿ –ಜೋಳ – ಮೆಕ್ಕೆ – ಹೀಂಗಿರ್ತ ಹುಲ್ಲು ಸೆಸಿಗಳಲ್ಲಿ ಎಲ್ಲದರ್ಲಿಯೂ ಬಿತ್ತು ಅಪ್ಪದು, ಬತ್ತ ಅಪ್ಪದು ಕಂಡು ಅರಡಿಗು; ಆದರೆ ಈ ಬೆದುರಿಲಿ ಬಿತ್ತು ಅಪ್ಪದು ಕಂಡೇ ಗೊಂತಿಲ್ಲೆನ್ನೇಪ್ಪ!
ಒಂದರಿ ಆದರೂ ಬೆದುರು ಅಕ್ಕಿ ಕಾಂಬಲೆ ಸಿಕ್ಕುಗೋ – ಹೇದು ಅನುಸೆಂಡಿತ್ತು ಒಪ್ಪಣ್ಣಂಗೆ.
~
ಕಾಂಬುಅಜ್ಜಿಯ ಜವ್ವನಲ್ಲಿ ಬೆದುರಕ್ಕಿ ಆಗಿತ್ತಾಡ ಒಂದರಿ. ಬೆದುರಿನ “ಕಟ್ಟೆ ಹೋಪದು” ಹೇಳಿಗೊಂಡಿದ್ದದು ಅವು.
ಊಟಕ್ಕೇ ಗೆತಿ ಇಲ್ಲದ್ದ ಎಷ್ಟೋ ಜೆನಂಗೊ ಈ ಬೆದುರ ಅಕ್ಕಿಯ ಕಂಡು ಭಾರೀ ಕೊಶಿ ಪಟ್ಟಿದವಾಡ.
ಹೂಗು ಹೋದ ಬೆದುರ ಹಿಂಡ್ಳಿನ ಅಡಿಲಿಪ್ಪ ಕಸವು ಕಲ್ಲು ಮುಳ್ಳಿನ ಬರಗಿ ತೆಗದು, ಸಗಣ ಉಡುಗಿ ಮನಾರ ಮಾಡಿ ಮಡಗಿತ್ತವಡ.
ಹೂಗು ಫಲಿಸಿ ಬತ್ತ ಆಗಿ ಕೆಳ ಬಿದ್ದಪ್ಪದ್ದೇ, ಎಲ್ಲವನ್ನೂ ಉಡುಗಿ, ಬಾಚಿ ಮನಗೆ ತಂದು, ಮೆರುದು – ಅಕ್ಕಿ ಮಾಡಿ ಉಂಡುಗೊಂಡಿತ್ತಿದ್ದವದ.
ಗೋಧಿಯ ನಮುನೆ ಕಾಂಬ ಅಕ್ಕಿ ಆಡ; ರುಚಿಯೂ ಹೆಚ್ಚುಕಮ್ಮಿ ಗೋಧಿಯ ಹಾಂಗೇಡ. ಹೆಜ್ಜೆ ಮಡಗಿರೆ ಉಂಬಲಕ್ಕಡ; ಮೆರಿವಗ ಸಿಕ್ಕಿದ ಕಡಿ ಪಾಯಿಸಕ್ಕೂ ಲಾಯಿಕಾವುತ್ತಾಡ.
ಕಾಂಬುಅಜ್ಜಿ ಹಲ್ಲಿಲ್ಲದ್ದ ಬಾಯಿಲಿ ನಾಲಗೆ ಮಡುಸಿ ವಿವರುಸಿಗೊಂಡಿತ್ತಿದ್ದವು.

ರಂಗಮಾವಂಗೂ ಈ ಸಂಗತಿಗೊ ಸರೀ ನೆಂಪಿಲ್ಲೆ; ಅಪ್ಪೋ ಅಲ್ಲದೋ ಹೇಳಿ ರಜ ರಜ ನೆಂಪು ಕಾಂಬದಷ್ಟೆ.
ಅದು ಕ್ಷಯ ಸಂವತ್ಸರ ಅಲ್ಲದ್ದರೂ, ಲೋಕಕ್ಕೆ ಭಾರೀ ಕಷ್ಟ ಆಗಿತ್ತಾಡ.

~
ಈಗ ಈ ಒರಿಶವೂ ಬೈಲಿಲಿ ಬೆದುರು ಪೂರ ಕಟ್ಟೆ ಹೋಯಿದು. ಪುನಾ ಹೂಗು ಬಿಟ್ಟಿದು; ಪುನಾ ಅಕ್ಕಿ ಆವುತ್ತು.
ರಂಗಮಾವ ಒರಿಶ ಲೆಕ್ಕ ಮಾಡಿ ಹೇಳಿದವು – ಈ ಸರ್ತಿ ಐವತ್ತೈದು ಒರಿಶಕ್ಕೇ ಬೆದುರು ಕಟ್ಟೆ ಹೋಯಿದು – ಹೇದು.
ಅಂಬಗ ಅರುವತ್ತೊರಿಶ? ಸಂವತ್ಸರ? ಕ್ಷಯ ಸಂವತ್ಸರ ಅಲ್ಲದ್ದರೂ ಕಟ್ಟೆ ಹೋಯಿದು. ಎಂತಗೆ?
– ಉತ್ತರ ಹೇಳುಲೆ ಕಾಂಬು ಅಜ್ಜಿ ಇಲ್ಲೆ, ಕಾಂಬು ಅಜ್ಜಿ ಇದ್ದಿದ್ದರೂ ಉತ್ತರ ಹೇಳುಲೆ ಎಡಿತ್ತಿತಿಲ್ಲೆ.
~

ಲೋಕದ ತಾಪಮಾನ ಏರಿದ ಕಾರಣ “ಬೇಗ” ಕಟ್ಟೆ ಹೋದ್ದದೋ ಏನೋ – ಹೇಳಿದವು ಮಾಷ್ಟ್ರುಮಾವ.
ವೈಜ್ಞಾನಿಕವಾಗಿ ನೋಡಿರೆ, ಚಳಿಪ್ರದೇಶಂದ ಸೆಕೆ ಪ್ರದೇಶಲ್ಲಿ “ಬೇಗ” ಹೂಗು-ಹಣ್ಣು ಆವುತ್ತಾಡ.
ಪ್ರಾಣಿಗಳೂ ಹಾಂಗೇ, ಮನುಷ್ಯರೂ ಹಾಂಗೇ – ಸೆಕೆ ಪ್ರದೇಶಲ್ಲಿ ಬೇಗ ಬೆಳೆತ್ತವಡ.
ಉದಾಹರಣೆಗೆ ಚಳಿಯ ಯುರೋಪಿನವರಿಂದ ಸಮಭಾಜಕದ ಹತ್ತರೆ ಇಪ್ಪ ಆಪ್ರಿಕದ ಮಕ್ಕೊ ಬೇಗ “ದೊಡ್ಡ” ಆವುತ್ತವಡ.

ಇದೇ ಕಾರಣಂದ ನೋಡಿರೆ – ಲೋಕದ ತಾಪಮಾನ ಹೆಚ್ಚಾಗಿಂಡಿದ್ದಿದಾ.
ಕಳುದ ತಲೆಮಾರು ಒರೆಂಗೂ ಅರುವತ್ತೊರಿಶಕ್ಕೆ ಕಟ್ಟೆ ಹೋಗಿಂಡಿದ್ದ ಬೆದುರು ಈ ಸರ್ತಿ ಐವತ್ತು – ಐವತ್ತೈದೇ ಒರಿಶಕ್ಕೆ ಕಟ್ಟೆ ಹೋತು!
ಪ್ರತಿ ಆವರ್ತನವೂ ಹೀಂಗೇ ಏರುಪೇರು ಆಗಿ ಆಗಿ – ಕ್ಷಯ ಸಂವತ್ಸರಂದ ಹಿಂದೆ ಹಿಂದೆ ಬಂದದಾಯಿಕ್ಕು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಪೂರ್ತಿ ಇದೇ ಕಾರಣ ಹೇಳುಲೆಡಿಯ; ಆದರೆ ಇದುದೇ ಒಂದು ಕಾರಣ ಆಯಿಕ್ಕು.

~

ಕಳುದ ಸರ್ತಿ ಕಟ್ಟೆ ಹೋಪಗ ಇದ್ದಿದ್ದ ಸಾಮಾಜಿಕ ಸ್ಥಿತಿ ಈಗ ತುಂಬ ಬದಲಾವಣೆ ಆಯಿದಡ.
ಐವತ್ತು-ಐವತ್ತೈದೊರಿಶ ಹಿಂದೆ – ಕಳುದ ಸರ್ತಿ ಕಟ್ಟೆ ಹೋಗಿಪ್ಪಾಗ ಎಲ್ಲೋರಿಂಗೂ ಬಂಙವೇ.
ಓ ಆ ಮಾರ್ಗದ ಕರೆ ಮಾಪುಳೆತ್ತಿಗೊ ಪೂರ ಬೆದುರ ಪುಂಡೆಲು ಹುಡ್ಕಿಗೊಂಡು ಹೋಗಿಂಡಿತ್ತ ದೃಶ್ಯ ಕಂಡುಗೊಂಡಿತ್ತಾಡ.
ಊರಿನ ಎಲ್ಲ ಕೃಷಿಕರೂ ಒಂದೊಂದು ಪುಂಡೆಲಿನ ಬುಡಕ್ಕೆ ಸಗಣ ಬಳುಗಿ ಮಡುಗ್ಗಡ. ದಿನಾ ಹೋಗಿ ಸಿಕ್ಕಿದ ಬತ್ತವ ತಂದು,
ಮೆರುದು ಅಕ್ಕಿ ಮಾಡಿ ಉಂಗು.
ಅಷ್ಟಾರೂ ಹೊಟ್ಟೆ ತುಂಬುಸುತ್ತ ಏರ್ಪಾಡು; ಪಾಪ!

ಆದರೆ, ಈ ಸರ್ತಿ ಕಟ್ಟೆ ಹೋದ್ದಲ್ಲಿ ಒಬ್ಬನೂ ಬತ್ತವ ಮುಟ್ಳೆ ಹೋಯಿದವಿಲ್ಲೆ; ಒಬ್ಬನೇ ಒಬ್ಬ ಮೆರುದ್ದವಿಲ್ಲೆ, ಒಬ್ಬನೂ ಅದರ ಉಂಡಿದವಿಲ್ಲೆ ಇದಾ! ಅಂತಾ ಬಂಙದ ಪರಿಸ್ಥಿತಿ ಆರಿಂಗೂ ಇಲ್ಲೆ. ಅರುವತ್ತೊರಿಶಲ್ಲಿ ಸಮಾಜ ಎಷ್ಟು ಬದಲಿತ್ತಪ್ಪೋ!
ಒಳ್ಳೆ ರೀತಿಲೇ ಬದಲಾವಣೆ ಆದ್ಸು – ಹೇಳ್ತದು ರಂಗಮಾವನ ಅಭಿಪ್ರಾಯ.
~

ಹಾಂ, ಓ ಮೊನ್ನೆ ಕೊರಗ್ಗು ಸಿಕ್ಕಿಪ್ಪಗ ಕೇಳಿದೆ, ಬೆದುರ ಬತ್ತವ ಮೆರುದು ಅಕ್ಕಿ ಮಾಡಿದೆಯೋ – ಹೇಳಿ!
ಏಯ್, ಎಲ್ಲಿಂದ, ಅದಕ್ಕೆ ಷ್ಟೋರಿಲಿ ಈಚ ಅಕ್ಕಿ ಸಿಕ್ಕುತ್ತು ಬೇಕಾದಷ್ಟು.
ಅದೂ ಅಲ್ಲದ್ದೆ – ಬೆದುರ ಬತ್ತವ ಉಂಬ ಮೊದಲು ಒಂದರಿ ಮೀನು-ಕುಡು ಬೆಂದಿ ಮಾಡಿ “ಬಳಸ್ಸುನೆ” ಹೇಳಿ ಮಾಡೇಕಡ.
ಎಂತದೇ “ಹೊಸ ಫಲ” ಆದರೂ – ಅದರ ಪಿತೃಗೊಕ್ಕೆ ಕೊಟ್ಟೇ ತಿಂಗಷ್ಟೆ ಇದಾ!
ಅದೆಲ್ಲ ಅಂತೇ ಕರ್ಚಿನ ಬಾಬ್ತು, ಅದರ ಬದಲು ಗಡಂಗಿಂಗಾದರೂ ಹೋಪಲಾಗದೋ ಕಂಡತ್ತು ಅದಕ್ಕೆ. ಹಾಂಗಾಗಿ ಈ ಸರ್ತಿ ಕೊರಗ್ಗುದೇ ತೆಗದ್ದಿಲ್ಲೆ.

~

ಒಂದರಿ ಹೂಗು ಹೋದ ಪುಂಡೆಲು ಅಲ್ಲಿಗೇ ಒಣಗಿ ಸಾವದಡ; ಬತ್ತ, ರಾಗಿ, ಕಬ್ಬು – ಇತರ ಹುಲ್ಲುಗಳ ಹಾಂಗೇ. ಬೆದುರು ಹೇದರೆ ಹುಲ್ಲೇ; ರಜ ದೊಡ್ಡ ಜಾತಿದು. ಅಷ್ಟೇ ಇದಾ.
ಮತ್ತೆ ಅದರ ಬಿತ್ತು ಹುಟ್ಟಿಯೇ ಆಯೇಕಷ್ಟೆ ಅಡ.
ಹಾಂಗಾಗಿ, ಒಂದರಿ ಇದ್ದ ಪುಂಡೆಲು ಅರುವತ್ತೊರಿಶಲ್ಲಿ ಸಂಪೂರ್ಣ ನಿರ್ನಾಮ ಆವುತ್ತು; ಮತ್ತೆ ಹೊಸ ಜಾಗೆಗಳಲ್ಲಿ ಪುಂಡೆಲು ಬೆಳೆತ್ತು. ತನ್ನಷ್ಟಕ್ಕೇ ಬೆದುರು ತನ್ನ ವಾಸಸ್ಥಾನವ ಸಂಪೂರ್ಣವಾಗಿ ಬದಲುಸೆಂಬ ವೆವಸ್ತೆ ಇದು!
~

ನಮ್ಮ ಊರಿನ ಹುಲ್ಲುಗಳ ಪೈಕಿ ಎತ್ತರವೂ, ದೀರ್ಘವೂ, ದೊಡ್ಡವೂ, ಗಟ್ಟಿಯೂ ಆದ ಬೆದುರು ಈ ಒರಿಶ ಕಟ್ಟೆ ಹೋವುತ್ತಾ ಇದ್ದು.
ಅನೇಕ ಗೆಡು-ಮರ-ಬಳ್ಳಿ-ಹಕ್ಕಿ-ಪ್ರಾಣಿಗೊಕ್ಕೆ ಆಸರೆ ಆದ ಈ ಬೆದುರು ಈ ಒರಿಶ ಕಟ್ಟೆ ಹೋಗಿ ಸಾವಲಾಯಿದು.
ಮನುಷ್ಯನ ಜೀವನಲ್ಲಿಯೂ ಹಲವು ದಿಕ್ಕೆ ಹಲವು ರೀತಿಲಿ ಉಪಯೋಗಕ್ಕೆ ಬತ್ತು.
ಬೆದುರಿನ ಬಾಲ್ಯಾವಸ್ಥೆಲಿ “ಕಣಿಲೆ” ಆಗಿ ಬೆಂದಿಗೆ ಉಪಯೋಗಿಸುದರಿಂದ ಹಿಡುದು, ಬೆಳಕ್ಕಟೆ ಬೆದುರು ಕೇರ್ಪು / ಅಡ್ಡ  ಆಗಿ ಉಪಯೋಗ ಆವುತ್ತು. ಮನೆ ಕಟ್ಳೆ ಕಲ್ತಪ್ಪಗ ಸುರೂವಿಂಗೆ ಗಟ್ಟಿಯ ಕೋಲು ಸಿಕ್ಕಿದ್ದು ಇದೇ ಬೆದುರು ಇದಾ.
ಲೂಟಿಮಕ್ಕೊಗೆ ಬಡಿಯಲೆ “ಕೋಲು”ಆಗಿ, ಬೈರಂಗೊಕ್ಕೆ ಹೆಡಗೆ ಮಾಡ್ಳೆ ಚೋಲಿಆಗಿ, ಬಟ್ಯಂಗೆ ಬೇಲಿಗೆ ಮಡುಗಲೆ ಮುಳ್ಳಾಗಿ, ಕಲಾವಿದರಿಂಗೆ ಕೊಳಲು ಆಗಿ, ತೊಂಡು ದೇಹಂಗೊಕ್ಕೆ ಆಧಾರದ “ದಂಟು ಕೋಲು” ಆಗಿ, ಮನುಷ್ಯನ ಅಕೇರಿಯಾಣ ಪ್ರಯಾಣಕ್ಕೆ ಚಟ್ಟ ಆಗಿ – ಅನೇಕ ರೀತಿಲಿ ಬೆದುರು ಉಪಯೋಗ ಆವುತ್ತು.

ಅಂತಾ ಬೆದುರು ಈ ಒರಿಶ ಸಾಯ್ತಾ ಇದ್ದು.
ನಮ್ಮ ಕಣ್ಣೆದುರೇ, ನಮ್ಮ ಸಣ್ಣ ಪ್ರಾಯಂದಲೇ ಇದ್ದ, ಬೆಳದ, ಬೃಹದಾಕಾರದ “ಬೆದುರು ಪುಂಡೆಲುಗೊ” ಈ ಒರಿಶ ಅಕೇರಿ.
ಬಪ್ಪ ಮಳೆಗಾಲ ಕಳುದು ನೋಡಿರೆ ಎಲ್ಲವೂ ಸತ್ತಿರ್ತು. ಮತ್ತೆ ಮುದದಿಂದ ಹುಟ್ಟಿ ಬರೇಕಟ್ಟೆ.

~

ಈ ಸರ್ತಿಯಾಣ ರಜೆಲಿ ಜಾಣ ಭಾಮಿನಿಯ ಗುರ್ತಮಾಡಿಗೊಂಡದು ನಿಂಗೊಗೆ ಅರಡಿಗನ್ನೇ?
ಬೆಂಗುಳೂರು, ಕೊಡೆಯಾಲ ಹೇದು ತಿರುಗುವಗಳೇ ರಜರಜ ಗುರ್ತ ಆಗಿದ್ದರೂ – ಕಾನಾವು ಉಪ್ನಾನಕ್ಕಪ್ಪಗ ಸರೀ ಗುರ್ತ ಆಗಿದ್ದತ್ತು. 😉
ಈಗ ಎಂತ ಮಾತಾಡ್ತರೂ, ಎಂತ ಹೇಳ್ತರೂ – ಕೇಳ್ತರೂ ಎಲ್ಲ ಭಾಮಿನಿಲೇ ಮಾತಾಡುದಡ.
ಮನೆಲಿ ಮೂರು-ನಾಕು ತಾಳ ಹಾಕಿಹಾಕಿ ಮೂರು ಬಟ್ಳುದೇ, ನಾಕು ಗಿಣ್ಣಾಲುದೇ ಞಗ್ಗಿದ್ದಡ; ಸುಮಾರು ಚಮ್ಚ ಕಾಣೆ ಆಯಿದಡ.
“ಸಾಕು ನಿನ್ನ ಪದ್ಯ, ಒಂದಾರಿ ನಿಲ್ಲುಸು” – ಹೇದು ಅಮ್ಮ ಪರಂಚಿರೂ ನಿಂದಿದಿಲ್ಲೇಡ!
ಅಮ್ಮ ಪರಂಚಿರೂ ನಿಲ್ಲುಸದ್ದೆ ಇರೇಕಾರೆ ಇವಂಗೆ ಅದೆಷ್ಟು ಧೈರ್ಯ ಇರೇಕು ಹೇದು ಜಾಣನ ಅಪ್ಪ ಆಶ್ಚರ್ಯ ಮಾಡಿಗೊಂಡಿದ್ದಿದ್ದವಾಡ; ಕೇಚಣ್ಣ ಹೇಳಿತ್ತಿದ್ದ°.
ಅದಿರಳಿ.
ಮೊನ್ನೆ ಮೂಡುಬಿದ್ರೆಯ ದಾರಿಯ ವರ್ಣನೆ ಮಾಡುವಗ ಜಾಣನೇ ಭಾಮಿನಿಲಿ ಹೀಂಗೆ ಹೇಳಿದ:
ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು

ಬಾಕಿ ಆದ ಐದು ಗೆರೆಗೊ ಒಪ್ಪಣ್ಣಂಗೆ ಮರದ್ದು; ಮುಳಿಯಭಾವಂಗೆ ಗೊಂತಿಕ್ಕೋ ಏನೋ!

~

ಒಂದೊಪ್ಪ: ವಾತಾವರಣದ ಬೆಶಿ ಏರಿ ಸಮತೋಲನ ಕೆಟ್ಟು ಹೋತು; ಬೆದುರು ಬೇಗ ಕಟ್ಟೆ ಹೋತು.  .

77 thoughts on “ಬಿದರೆ ದಾರಿಲಿ ‘ಬೆದುರ ಹೂಗುಗೊ’ ಚೆದುರಿ ಬಿದ್ದಿತ್ತು!

  1. ಎಂತದೇ ಆಗಲಿ ಒಪ್ಪಣ್ಣನ ಈ ಶುಧ್ಧಿಂದಾಗಿ ಬೈಲಿಲಿ ಸುಮಾರು ಜನರ ಪ್ರತಿಭೆ(ಭಾಮಿನೀ) ಹೆರ ಬಂದತ್ತು..ಒಂದಕ್ಕಿಂತ ಒಂದು ರೈಸುತ್ತಾ ಇದ್ದು…

  2. ಒಪ್ಪಣ್ಣಾ..,

    ಜೀವನ ಚಕ್ರ ತಿರುಗುತ್ತದರ ಬಗ್ಗೆ ವಿವರ್ಸಿಗೊಂಡೇ ಬೆದುರಿನ ಕತೆಯ ತೆಕ್ಕೊಂಡು ಹೋದ ರೀತಿ ತುಂಬಾ ಚೆಂದ ಆಯಿದು.
    ಬೆದುರು ಹುಟ್ಟಿದಲ್ಲಿಂದ ಸಾಯುವಲ್ಲಿವರೆಗೂ ಅದರ ಬೆಳವಣಿಗೆಯ ಪ್ರತಿ ಹಂತಲ್ಲಿಯೂ ಎಲ್ಲಾ ಜಾತಿಯ, ಎಲ್ಲಾ ಪ್ರಾಯದ ಜನಂಗೋಕ್ಕೆ ಉಪಕಾರಕ್ಕೆ ಬಪ್ಪಂಥಾದ್ದು. ಅದರ ಪೂರ್ಣಾಯುಷ್ಯಲ್ಲಿ ಅದು ಸರ್ವೋಪಯೋಗಿ ಆಗಿ ತನ್ನ ಜೀವನದ ಸಾರ್ಥಕತೆಯ ಕಾಣುತ್ತು ಅಲ್ಲದಾ? ಮನುಷ್ಯರಿಂಗೆ ಮಾಂತ್ರ ಅಲ್ಲದ್ದೆ ಪ್ರಾಣಿಗೊಕ್ಕೂ ಕೂಡಾ ಬೆದುರು ಪ್ರಯೋಜನಕಾರಿಯೇ ಅಲ್ಲದಾ? ತೋಡು, ಹೊಳೆ ಕರೆಲಿಪ್ಪ ಬೆದುರ ಪುಂಡೇಲಿಂದಾಗಿ ಭೂಮಿಯೂ ಒಳುದ್ದು ಅಲ್ಲದಾ? ಇಲ್ಲದ್ದರೆ ಪ್ರತಿ ಮಳೆಗಾಲಲ್ಲಿ ನೀರ ಹರಿವಿನ ರಭಸಕ್ಕೆ ಎಷ್ಟೋ ಜಾಗೆಗೋ ರಜ್ಜ ರಜ್ಜವೇ ಹೊಳೆ ಪಾಲಪ್ಪದಿದ್ದು.

    ಒಪ್ಪಣ್ಣ,
    ಬಹಳ ಹಿಂದಿಂದಲೂ ಕ್ಷಯ ಸಂವತ್ಸರಕ್ಕೇ ಕಟ್ಟೆ ಹೋಯ್ಕೊಂಡಿದ್ದ ಬೆದುರು ಈಗ ನಂದನವನದ ಹಾಂಗೆ ಇರೆಕ್ಕಾದ ನಂದನ ಸಂವತ್ಸರಲ್ಲಿಯೇ ಕಟ್ಟೆ ಹೋಯಿದು ಹೇಳಿದರೆ ನಮ್ಮ ಜೀವನದ ಹಾಂಗೆ ಪ್ರಕೃತಿಲಿಯೂ ಅಂಬೇರ್ಪು ಬಂತೋ ಹೇಳಿ ಆವುತ್ತಿಲ್ಲೆಯಾ? ಅಥವಾ, ನಾವು ಕಾಲಂದ ಮುಂದೆ ಓಡುತ್ತಾ ಇದ್ದು ಹೇಳುದರ ಸೂಚನೆಯೋ? ಪ್ರಕೃತಿಯ ಎಚ್ಚರಿಗೆಯ ಗಂಟೆ ಇದಾದರೆ ನಾವು ಒಂದರಿ ಆಲೋಚನೆ ಮಾಡೆಕ್ಕು ಅಲ್ಲದಾ?

    ಮೂಡಬಿದರೆಗೆ ಹೋದ ನಮ್ಮ ಬೈಲಿನ ಜಾಣ ಮಾಣಿ ಶಾಲೆಲಿ ಕಲ್ತು ಇನ್ನೂ ಉಶಾರಾಗಿ ಬರಲಿ..
    ಅವನ ಇನ್ನುದೇ ಭಾಮಿನಿಗಳ ರಚನೆ ಮಾಡಲಿ..
    ಬೆದುರಿನ ಇನ್ನಾಣ ಸಂತತಿ ಚಿಗುರಿ ಭೂಮಿಯ ಹಸುರು ಮಾಡಿ, ಜನಂಗಳ ಬದುಕ್ಕಿಂಗೆ ಉಸಿರು ಕೊಟ್ಟು ಇನ್ನೊಂದು ಸಂವತ್ಸರ ಚಕ್ರ ತಿರುಗುವಾಗ ಲೋಕದ ಎಲ್ಲ ಕಾರ್ಯಂಗೋಕ್ಕೆ ಸಾಕ್ಷಿ ಆಗಲಿ ಹೇಳ್ತ ಹಾರಯಿಕೆ.

    1. ಶ್ರೀಅಕ್ಕಾ,
      ಚೆಂದದ ಒಪ್ಪಕ್ಕೆ ಒಪ್ಪಂಗೊ.

      ಕ್ಷಯಕ್ಕೆ ಬರೆಕ್ಕಾದ ಸಂದರ್ಭ ನಂದನಕ್ಕೇ ಎತ್ತಿದ್ದಕ್ಕೆ ನಿಂಗೊ ಬರದ ಕಾಳಜಿ ಕೊಶೀ ಆತು.

      ಸಾರಡಿತೋಡಕರೆಲಿ ಬೆದುರು ಇಲ್ಲದ್ದರೆ ತೋಡನೀರು ಮನೆಜಾಲಿಂಗೇ ಬತ್ತಿತು – ಹೇದು ರಂಗಮಾವ ಗಾಬೆರಿ ಮಾಡ್ತವು 🙂

  3. ಸದರಿ ತೀರಿತ್ತಾಯುವೆಂಬುತ
    ಮುದುರಿ ರೋದನದೆಡೆಗೆ ಜಾರದೆ
    ಮುದದ ಹೂಂಗಳ ಬಿರಿದು ನಗೆಯಾ ಹೊನಲ ಹರಡಿತ್ತು |
    ಕದಿರ ಬೆಡಗಲೆ ತಾಯ ಸೇರಿದ
    ಮಧುರ ಸಾರ್ಥಕ ಬಾಳ ಸಾರುತ
    ಬಿದರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ||

    1. ತೂಕದ ಮಾತುಗೊ.ಪ್ರಬುದ್ಧ ಸಾಹಿತ್ಯ.ಅಭಿನ೦ದನೆಗೊ ಕೆಕ್ಕಾರು ಭಾವ.
      ಧನಾತ್ಮಕ ಚಿ೦ತನೆಯ ಬೆಳೆಶಿಗೊ೦ಬಲೆ ಬೆದುರಿ೦ದ ಒಳ್ಳೆ ಉದಾಹರಣೆ ಇಲ್ಲೆ..

    2. ನಮಸ್ಕಾರ ಕೆಕ್ಕಾರು ಭಾವಂಗೆ,

      ನಿಮ್ಮ ಪ್ರಯತ್ನದ ಎದುರು ನಮ್ಮದೆಲ್ಲ ಬಾಲಿಶ. ನಿಂಗಳ ಕೈಂದ ಕಲ್ತದರ ಇಲ್ಲಿ ಪ್ರಯೊಗ ಮಾಡುದು.
      ಧನ್ಯವಾದ.

      1. ಕೆಕ್ಕಾರು ರಾಮಚಂದ್ರಣ್ಣಂಗೆ ಬೈಲಿಂಗೆ “ಅಧಿಕೃತ” ಸ್ವಾಗತಮ್ 🙂

        “ಪದ್ಯಪಾನ”ಲ್ಲಿ ನಿಂಗೊ ಮಾಡ್ತಾ ಇಪ್ಪ ಸಾಹಿತ್ಯಸೇವೆಯ ಎಂಗೊ ಎಲ್ಲೋರುದೇ ಗುರುತಿಸಿದ್ದೆಯೊ°, ಗೌರವಿಸುತ್ತೆಯೊ°.
        ಬೈಲಿಂಗೆ ಬಂದು ಇಲ್ಲಿಯೂ ಭಾಮಿನಿಯ ಕಂಪು ಕೊಟ್ಟದು ಕುಶೀ ಆತು.

        ಒಳ್ಳೆ ಭಾಶಾ ಶೈಲಿ. ನಮ್ಮ ಭಾಶೆಲೇ ಬರದರೆ ಇನ್ನೂ ಸಂತೋಷ 🙂
        ನಮಸ್ಕಾರ.

  4. {ಮುದುರಿ ಬಿದ್ದಾ ಹೊದಳ ತೆರದೀ
    ಬಿದರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು }
    ಒಳ್ಳೆ ಪರಿಹಾರ.

    1. ಮುಳಿಯ ಭಾವ, ಪ್ರೀತಿ ಮಡಗಿ ಆನು ಬರದ ಪದ್ಯವ ರಜಾ ಚೆಂದ ಮಾಡಿದ್ದ. ಧನ್ಯವಾದಂಗೊ. ಅದು ಹೀಂಗಿದ್ದು.

      ಮದುವೆ ದಿಬ್ಬಣ ಎದುರುಗೊಂಬಗ
      ಎದುರು ನಿಂದಾ ಮನೆಯವೆಲ್ಲವು
      ಹೊದಳ ಕೈಯಲಿ ಹಿಡುದು ರಭಸಕೆ ಮೇಲೆ ಹಾರುಸುಗು ।
      ಮದಲೆ ಸಗಣವ ಬಳುದ ಜಾಲಿಲಿ
      ಮುದುರಿ ಬಿದ್ದಾ ಹೊದಳ ಹಾ೦ಗೆಯೆ
      ಬಿದರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ॥

      1. ಅದಾ,
        ಮಕ್ಕೊ ಹಾರುದು ಕಂಡು ಬೊಳುಂಬು ಮಾವಂಗೂ ಊಕು ಬಂದದೂ… 🙂

        ಲಾಯಿಕಾಯಿದು ಪೂರಣ.
        ಮದುಮ್ಮಾಯ ದಿಬ್ಬಣ ಎದುರುಗೊಂಬ ಸನ್ನಿವೇಶವ ಉಪಮೆ ತೆಕ್ಕೊಂಡದು ಗಮ್ಮತ್ತಾಯಿದು.

        ಮುಳಿಯ ಭಾವನ ಸಲಹೆಯೂ ಸೇರಿ ಅಪ್ಪಗ ಸರೀ ಆತಿದಾ 🙂

  5. ಮದುವೆ ದಿಬ್ಬಣ ಎದುರುಗೊಂಬಗ
    ಎದುರು ನಿಂದಾ ಮಕ್ಕೊ ಎಲ್ಲೊರು
    ಹೊದಳ ಕೈಲಿಯೆ ಹಿಡುದು ರಭಸಕೆ ಮೇಲೆ ಹಾರುಸುಗು ।
    ಮದಲೆ ಸಗಣವ ಬಳುದ ನೆಲದೀ
    ಮುದುರಿ ಬಿದ್ದಾ ಹೊದಳ ತೆರದೀ
    ಬಿದರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ॥

  6. ಪದವಿಪೂರ್ವದ ಶಾಲೆ ಸೇರಲೆ
    ಪದವುಗಳ ಹತ್ತಿಳಿದು ಜಾಣನು
    ಪದವ ಗುಣುಗುಣಿಸುತ್ತ ಚೀಲವ ಹಿಡುದು ನೆಡವಗಳೇ |
    ಎದುರು ದಾರಿಯ ಕರೆಲಿ ಗಾಳಿಗೆ
    ಅದುರಿ ಹೋತಡ ಮರದ ಗೆಲ್ಲುಗೊ
    ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು||

      1. ಸುರುವಾಣದ್ದೇ ಪಷ್ಟಾಯಿದು.
        ಇದು ಅದರಿಂದಲೂ ಚೆಂದ ಆಯಿದು ಮುಳಿಯಭಾವಾ.

        ಜಾಣ ಯೇವ ಪದವ ಗುಣುಗುಣುಸಿಕ್ಕಪ್ಪಾ?
        “ಹೇ ಭಗವಾನ್…” ಹೇದು ಎಂತದೋ ಒಂದು ಪದ್ಯ ಇದ್ದು, ಅದರನ್ನೋ? 🙂

    1. ಪುಟ್ಟಕ್ಕಾ,
      ಪಟ ಕಪ್ಪು ಕಪ್ಪು ಇದ್ದನ್ನೇ? ಎಂತಾತು?
      ಇದಿನ್ನು ಬೆಳಿ ಆಯೇಕಾರೆ – ಕಾನಾವಿನ ದೊಡ್ಡ ಕೆರೆಯ ತುಂಬ ನೀರೇ ಬೇಕಕ್ಕೋ – ಹೇದು!! ಅಲ್ದೋ?
      ಅದಿರಳಿ,
      ಒಪ್ಪ ಒಪ್ಪಕ್ಕೆ ಒಪ್ಪಂಗೊ.!

  7. ಉದಯಕಾಲಲ್ಲೆದ್ದು ನಿತ್ಯದ
    ವಿಧಿಯ ತೀರಿಸಿ ಚದುರ ಜಾಣನು
    ಮುದದಿ ಅಬ್ಬೆಗೆ ನಮಿಸಿ ಏರಿದ ಉದ್ದವಾಹನವ |
    ಎದುರುಗಾಳಿಯು ತೊಟ್ಲು ತೂಗಲು
    ನಿದಿರೆಯರೆಗಣ್ಣಿಂದ ನೋಡಿರೆ
    ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು ||

    ಪಾಪ,ಕೊಲೇಜಿಂಗೆ ಹೋಪ ಉತ್ಸಾಹಲ್ಲಿ ಜಾಣಂಗೆ ಮುನ್ನಾಣ ದಿನ ಒರಕ್ಕೇ ಇಲ್ಲೆ;ಮತ್ತೆ ಬಸ್ಸಿಲಿ[ಉದ್ದವಾಹನ]ಒರಕ್ಕು ಬಾರದ್ದಿಕ್ಕೊ?

    1. ಜಾಣ ಬಸ್ಸಿಗೆ ಹತ್ತುಲೆ ಪುರುಸೊತ್ತಿಲ್ಲೆ ಸೀಟು ಇದ್ದರು ಇಲ್ಲದ್ರು ಕೂದರೂ ಅಕ್ಕು ನಿಂತರೂ ಅಕ್ಕು ಅವ ಒರಗುದೇ..ಒರಕ್ಕು ಕೆಡೆಕ್ಕೆ ಹೇಳಿ ಎಂತೂ ಇಲ್ಲೆ ಅಪ್ಪಚ್ಚಿ..

      1. ಗೋಪಾಲಣ್ಣಾ,
        ಬೈಲಿಲಿ ಭಾಮಿನಿ ರೈಸುಲೆ ಸುರು ಅಪ್ಪಗ ಬಂದು ಸೇರಿಗೊಂಡು, ಚೆಂದದ ಕಲ್ಪನೆಯ ಸುಂದರ ಭಾಮಿನಿ ಕೊಟ್ಟದು ತುಂಬಾ ತುಂಬಾ ಕೊಶಿ ಆತು.

        ಶಾಲಗೆ ಉದಿಯಪ್ಪಗ ಹೆರಟು, ಬಸ್ಸಿಲಿ ಒರಗಿದ್ದು – ಪಷ್ಟಾಯಿದು.
        ಇನ್ನೂ ಹೀಂಗೇ ಬರೆತ್ತಾ ಇರಿ, ಆತೋ?

  8. ಬೆದುರು ಅಕ್ಕಿ ಆಗಿ ಬೆದುರೆಲ್ಲ ಸಾಯ್ತು ಹೇಳಿ ಓದಿ ಬೇಜಾರ ಆತು.
    ಸಣ್ಣ ಇಪ್ಪಗಿಂದ ನೋಡಿದ ಬೆದುರು ಪುಂಡೆಲು ಎಲ್ಲ ಸಾಯ್ತನ್ನೆ ಹೇಳಿ.
    ಲಾಯಿಕ ಶುಧ್ಧಿ ಯಾವತ್ತಿನಂತೆ ಒಪ್ಪಣ್ಣ…

    ~ಸುಮನಕ್ಕ…

    1. ಸುಮನಕ್ಕಾ,
      ಚೆಂದದ ಒಪ್ಪಕ್ಕೆ ಒಪ್ಪಂಗೊ..
      ಬೆದುರಕ್ಕಿಯ ಎಂತಾರು ಪಾಕ ಮಾಡಿ, ಆತೋ? 🙂

    1. ಮಂಗ್ಳೂರುಮಾಣೀ..
      ಒಪ್ಪಕ್ಕೆ ಒಂದೊಪ್ಪ.
      ಕೊಡೆಯಾಲ, ಉಪ್ರಂಗಡಿ, ಆಲಂಗಾರು, ಕಡಬ ಹೇದು ಕಂಡಿಪ್ಪಗ ಹಲವು ಜೀವನಾನುಭವ ಇಕ್ಕಿದಾ ಅಪ್ಪನ ಹತ್ತರೆ. ಅಲ್ಲದೋ? ಬೇರೆಂತಾರು ಅಪುರೂಪದ್ದಿದ್ದರೆ ಕೇಳುವೆಯಾ..

  9. ನಮಸ್ಕಾರ.
    ಎನಗೆ ಇಷ್ಟು ವರ್ಷ ಈ ಬೆದುರಿನ ಅರುವತ್ತು ವರ್ಷದ ಆಯುಷ್ಯದ ವಿಷಯವೇ ಗೊಂತಿತ್ತಿಲ್ಲೇ !
    ಒಪ್ಪಣ್ಣನಗೆ ಧನ್ಯವಾದಂಗೋ

    1. ಕಡೆಂಗೋಡ್ಳು ಶಂಕರಮಾವನ ಒಪ್ಪ ಕಂಡು ಕೊಶೀ ಆತು.
      ಗೊಂತಿಲ್ಲದ್ದರ ಕಲ್ತು, ಗೊಂತಿಪ್ಪದರ ಕಲಿಶಲೇ ಬೈಲು ಇಪ್ಪದಿದಾ.

      ನಿಂಗೊಗೆ ಗೊಂತಿಪ್ಪದರ ಶುದ್ದಿ ಮಾಡಿ ಹೇಳಿ, ಎಂಗೊ ಎಲ್ಲೋರುದೇ ಕಲ್ತುಗೊಳ್ತೆಯೊ°..

  10. ಚೆ…ಇನ್ನು ನಾಲ್ಕು ವರ್ಷಕ್ಕೆ ಕಣಿಲೆ ಇಲ್ಲೆನ್ನೆ ಹೇಳಿ ಎನ್ನ ಹೆಂಡತ್ತಿಗೆ ಬೇಜಾರು…

      1. ಈ ಸರ್ತಿ ಮೂಡ್ಳಾಗಿ ಕಟ್ಟೆ ಹೋಪಗ ಪಡುವಲಾಗಿ ಹೋಯಿದಿಲ್ಲೆ,

        ಹಾಂಗಾಗಿ, ವಿಟ್ಳಸೀಮೆಲಿ ಕಣಿಲೆ ಇಲ್ಲದ್ದಿಪ್ಪಗ ಪಂಜ ಸೀಮೆಲಿಕ್ಕು.
        ಪಂಜ ಸೀಮೆಲಿ ಇಲ್ಲದ್ದೆ ಅಪ್ಪಗ ವಿಟ್ಳ ಸೀಮೆಲಿಕ್ಕು! 😉

        ಅಲ್ಲದೋ??

  11. ಒಪ್ಪಣ್ಣಂಗೆ ಮರದರೂ ಎನಗೆ ಸರೀ ನೆಂಪಿದ್ದು. ಜಾಣನ ಭಾಮಿನಿಯ ಪೂರ್ಣಪಾಠ ಇಲ್ಲಿದ್ದಿದಾ..

    ಕದುರು ತುಂಬಿದ ಬೆದುರ ಪೊದರುಗೊ
    ಕೆದರುಶಿಖೆಯಾಸುರರ ಹಾಂಗೆಯೆ
    ಎದುರೆ ಕಾಂಬಗಳೆನ್ನ ತಲೆಯೊಳ ಚೋದ್ಯವೆದ್ದತ್ತು ।
    ಸದರ ಸರಸಲಿ ಸಾಗಿ ನೋಡಿರೆ-
    ಚದರವೊಂದಡಿಗೊಂದು ಮುಡಿಯೋ!
    ಬಿದಿರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು ॥

    ಬೆದುರ ಪುಂಡೆಲುಗೊ ರಾಕ್ಷಸರ ತಲೆಕಸವಿನಾಂಗೆ ಕಂಡತ್ತಡ! ಒಂದು ಚದರಡಿ ಜಾಗೆಲಿ ಒಂದು ಮುಡಿ ಬೆದುರಕ್ಕಿ ಇತ್ತಡ!

    ಅದಪ್ಪು ಒಪ್ಪಣ್ಣಾ, ಎನಗೆ ಆಶ್ಚರ್ಯ ಆದ್ದದು ಇವನ ಅಮ್ಮ ಪರಂಚಿರೂ ಗಣ್ಯ ಮಾಡದ್ದಕ್ಕೆ ಮಾಂತ್ರ ಅಲ್ಲ; ಈ ನಮೂನೆ ಲಾಟು ಬಿಡ್ಲೆ ಇವ° ಯೇವಗ ಕಲ್ತ ಹೇದು!
    ಬೌಶ್ಶ ಒಂದುವಾರ ಬೆಂಗ್ಳೂರಿಲ್ಲಿ ಕೂದು ಬೋಚಭಾವನ ಸಹವಾಸ ಮಾಡಿದ ಕಾರಣ ಅವನ ಬುಧ್ಧಿಯೇ ಇವಂಗೂ ಬಂದದಾಯ್ಕು.
    ಹ್ಹು! ಲೊಟ್ಟೆ ಹೇಳ್ತರೂ ನಂಬುವಾಂಗಿಪ್ಪ ಲೊಟ್ಟೆ ಹೇಳೆಕ್ಕು ಅಲ್ಲದೋ?

    1. ಭಾರೀ ಲಾಯ್ಕ ಆಯಿದು

    2. ಸುಭಗ ಭಾವ,
      ಇಷ್ಟು ಚೆ೦ದದ ಸಾಹಿತ್ಯವ ಲಾಟು ಹೇಳೊದೋ ? ರೈಸಿದ್ದು.

    3. ವರ್ಣನೆ ಮಾಡುವಗ ಹೀಂಗೆಲ್ಲ ಬರೆಕು ಭಾವಯ್ಯ. ಇದ್ದದರ ಇದ್ದ ಹಾಂಗೇ ಹೇಳಿರೆ ಪದ್ಯ ಆವ್ತೊ ?!
      ರಜಾ ಕಲ್ಪನೆಯುದೆ ಸೇರೆಕದ. ಜಾಣ ಸರಿಯಾಗಿಯೇ ಹೇಳಿದ್ದ. ಒರಿಜಿನಲ್ ಪದ್ಯವುದೆ ಲಾಯಕಾಯಿದು.

    4. ಈ ಜಾಣ ಸುಭಾವಂಗೆ ಹಾಂಗೆ ಹೇಳಿದನೊ.? ಎನ್ನತ್ತೆರೆ ಇಂದು ಗುಟ್ಟಿಲಿ ಹೇಳಿದ ಸಂಗತಿ ಬೇರೆಯೇ ಇದ್ದು. ಶಾಲೆಗೆ ಹೆರಡ್ತ ಗೌಜಿಲಿ ಮುನ್ನಾಣ ದಿನ ಇರುಳು ಹೊಟ್ಟೆ ಬಿರಿವಷ್ಟು ಉಂಡು ಒರಗಿದವಂಗೆ ಕನಸು ಕಂಡಿದಡ.
      ಬೇಕಾರೆ ನಿಂಗಳೆ ವಿಚಾರ್ಸಿ :

      ಬಿದರೆ ಶಾಲೆಗೆ ಹೆರಟ ಜಾಣಗೆ
      ಉದರ ಪೂಜೆಯ ಮುಗುಶಿ ಒರಗಿರೆ
      ಉದಯ ಕಾಲಕ್ಕೊಂದು ತಣ್ಣನೆ ಕನಸು ಕಂಡತ್ತು।
      ಮದಿರೆ ಕುಡುದಾ ಬೆಗುಡು ಸುಂದರ
      ಬೆದುರು ಪುಂಡೆಲು ಹೊಕ್ಕಿ ಕೊಣಿವಗ
      ಬಿದರೆ ದಾರಿಲಿ ಬೆದುರು ಹೂಗುಗೊ ಚೆದುರಿ ಬಿದ್ದಿತ್ತು॥

      1. ಏ ಮಾವ,
        ಉದೆಗಾಲಕ್ಕೆ ಕ೦ಡ ಕನಸು ನಿಜ ಆವ್ತಡ.ಹಾ೦ಗಾರೆ ಸು೦ದರನ ಹುಡುಕ್ಕುಲೆ ಬೆದುರು ಪು೦ಡೆಲಿ೦ಗೆ ಹೋಪದೋ?

        1. ಟೀಕೆಮಾವ°,
          ಜಾಣನ ಸಂಗತಿ ಗೊಂತಿಲ್ಲೆ; ಸುಂದರನ ಸದ್ಯ ಕಂಡಿದಿಲ್ಲೆ.
          ಆದರೆ ನಮ್ಮ ಮುದರ° ಮೊನ್ನೆ ಮನಗೆ ಬಂದಿಪ್ಪಗ ಒಂದು ಕತೆ ಹೇಳಿತ್ತಿದ್ದು.

          ಮುದರ° ಬಂತದು ಪುಗೆರೆ ತಿಂಬಲೆ
          ಪೊದರು ಗೆಡ್ಡದ ಎಡೆಲಿ ಮಾತಾ-
          ಡುದರ ಕಂಡರೆ ಕುಂಞಿ ಮಾಣಿಗೊ ಹೆದರಿ ಓಡುಗೊಳ |
          ಹೆದರಿಕಿಲ್ಲದೆ ಕತೆಯ ಹೇಳುಗು
          ಅದರ ಹೆಂಡತಿಯಪ್ಪನಾಮನೆ
          ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು ||

          ಅಪ್ಪಡಾಳಿ! ಇದು ಮೊನ್ನೆ ಹೋಗಿಪ್ಪಾಗ ಕಂಡದಡೋ!!

          1. ಯೇ ಸುಭಗಣ್ಣಾ,
            ಎಷ್ಟು ಚೆಂದದ ಪೂರಣ. ಪಷ್ಟಾಯಿದು.
            ಜಾಣಂಗೆ ಲೊಟ್ಟೆ ಸುರು ಆದ್ಸು ಬೆಂಗುಳೂರಿಂಗೆ ಬಪ್ಪ ಮದಲೇ.
            ಬೌಶ್ಷ ಕೊಡೆಯಾಲಲ್ಲಿ ಕುಂಟಾಂಗಿಲ ಭಾವನೇ ಕಾರಣವೋ ಹೇದು!? ಉಮ್ಮಪ್ಪ.

            @ ತೆಕ್ಕುಂಜೆ ಮಾವಾ,
            ಜಾಣನ ಕನಸಿನ ಭಾಮಿನಿಲಿ ಬರದು, ಕೊನೆ ಸಾಲಿನ ಚೆಂದಕೆ ಸೇರ್ಸಿ ಹೊಲುದ್ದು ಮನಾರ ಆಯಿದು.
            ನಮ್ಮ ಬೈಲಿಲಿ ಹೀಂಗಿಪ್ಪ ಕಂಪು ಕಾಂಬಲೂ, ಕೇಳುಲೂ ಚೆಂದ!

            @ ನೆಗೆಮಾಣಿ,
            ಎಡಕ್ಕಿಲಿ ನಿನ್ನದೊಂದು ಬೇರೆಯೇ!
            ಜಾಣನ ಸುದ್ದಿಯೇ ಇಲ್ಲೆ ಅದರ್ಲಿ, ಮುದರ ಹೇಳಿದ ಸಂಗತಿ ನವಗೆಂತಕೆ, ಅಲ್ಲದೊ?

    5. ಸುಭಗ ಭಾವಾ.. ಸೂಪರ್ ಆಯಿದು…

  12. ಬೆದುರು ಕಟ್ಟೆ ಒಡದು ಅಕ್ಕಿ ಆದ ಶುದ್ದಿ ಒಪ್ಪ ಆಯಿದು. ಒಟ್ಟಿಂಗೆ, ಅಷ್ಟಾವಧಾನಲ್ಲಿ ಇಪ್ಪ ಹಾಂಗೆ ” ಸಮಸ್ಯೆ” ಯ ಕೊಟ್ಟು ಪದ ಬರವಲೆ ಹೇಳಿದ್ದು ಹೊಸ ಪ್ರಯೋಗ ಬೈಲಿಲಿ. ನಾವು ಗ್ರೇಶಿದ ಹಾಂಗೆ, ಭಾಮಿನಿಯ ರಘು ಭಾವ ಇದರ ಬಿಡುಸಿದ್ದು ಒಳ್ಳೆದಾಯ್ದು.

  13. ಈ ಸರ್ತಿ ಊರಿಲಿ ತಿರುಗೊಗ ಈ ಸ೦ಶಯ ಬ೦ದಿತ್ತಿದ್ದು.ಸುಮಾರು ದಿಕ್ಕಿಲಿ ಬೆದುರಿನ ಹೂಗು ಹೋದ್ದು,ಅಕ್ಕಿ ಆದ್ದು ಕ೦ಡಿತ್ತಿದ್ದೆ.ಕೆಲವು ಜಾಗೆಲಿ ಟರ್ಪಾಲು ಹಾಕಿ ಅಕ್ಕಿಯ ಸ೦ಗ್ರಹದ ಪ್ರಯತ್ನವೂ ಆಗಿತ್ತು.ಮದ್ದಿ೦ಗಾವುತ್ತೋ ಏನೋ ಹೇಳಿ ಗೋಶ್ಪಾರಿ ಮಾಡಿತ್ತಿದ್ದೆ.
    ಈಗ ವಿಷಯ ಸರಿಯಾಗಿ ಗೊ೦ತಾತು.
    ಇನ್ನು ಜಾಣ ಶಾಲೆಗೆ ಸೇರ್ಲೆ ಹೆರಟ ಶುದ್ದಿ ಎನಗೂ ಕೆಮಿಗೆ ಬಿದ್ದಿತ್ತು,ಹೇ೦ಗೆ ಗೊ೦ತಿದ್ದೊ?

    ಕದಿರೆ ದೇವಸ್ಥಾನದತ್ತರೆ
    ಕುದುರೆ ಕ೦ಡತ್ತ೦ದು ಜಾಣ೦
    ಗದರ ಬೆನ್ನಿಲಿ ಕೂದು ಶಾಲೆಗೆ ಹೋಪ ಮನಸಾತು |
    ಅದಿರು ವಾಹನವಿಲ್ಲೆ ದಾರಿಲಿ
    ಚದುರೆಯರ ಸುಳಿವಿಲ್ಲೆ ಮೂಡದ
    ಬಿದಿರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ||

    1. ಮುಳಿಯಭಾವನ ಒಪ್ಪ ಏವಗ ಬತ್ತೂ ಹೇಳಿ ಕಾದು ಕೂದೊಂಡಿದ್ದಿದ್ದೆ. ಒಪ್ಪಣ್ಣನ ಆಹ್ವಾನಕ್ಕೆ, ಮುಳಿಯದ ಭಾವನ ಉತ್ತರ ಲಾಯಕಾತು.
      ಭೋಜರಾಜ-ಕಾಳಿದಾಸರ ನೆಂಪಾವ್ತಾ ಇದ್ದಾನೇ.

      1. ಮುಳಿಯಭಾವಾ,
        ಯೇವತ್ರಾಣಂತೆ ಭಾಮಿನಿ ಪಷ್ಟಾಯಿದು.

        ಮೂಡ ಬಿದ್ರೆಯ “ಮೂಡದ ಬಿದ್ರೆ” ಹೇದು ತೆಕ್ಕೊಂಡು ಚೆಂದದ ರೂಪ ಕೊಟ್ಟದು ಕೊಶೀ ಆತಿದಾ.

        ಹೇಂಗೆ? ಬೈಲಿಲಿ ಈ ನಮುನೆ “ಷಟ್ಪದಿ ಸಮಸ್ಯೆ”ಗಳ ಬಿಡುಸುತ್ತ ಏರ್ಪಾಡು ಸುರುಮಾಡುವನೋ?

        @ ಬೊಳುಂಬು ಮಾವಾ,
        ಬೋಜರಾಜ ಬಿಡಿ, ನಮ್ಮ ಬೈಲಿಲಿ “ಬೋಚ”ರಾಜ ಇದ್ದಾನ್ನೇ, ಎಷ್ಟಕ್ಕೂ ಸಾಕು 🙂

    2. ಅಬ್ಬಾ…ಆಹಾ…..

  14. ಒಪ್ಪಣ್ಣ ಬರದ ಶುದ್ದಿಗೊಕ್ಕೆ “ಒಪ್ಪಣ್ಣ ಬರದ್ದು” ಹೇಳಿ ಬರವ ಅಗತ್ಯ ಇಲ್ಲೆ! ವಿಷಯ ಯೇವದೇ ಇರಲಿ, ಒಂದೆರಡು ವಾಕ್ಯ ಓದಿಯಪ್ಪಗಳೇ ಇದು ಒಪ್ಪಣ್ಣಂದೇ ಹೇಳಿ ಗೊಂತಾವುತ್ತು! ಒಪ್ಪಣ್ಣನ ವಿಶಿಷ್ಟ ಶೈಲಿಯ ಅನುಕರಣೆ ಮಾಡ್ಳೆ ಕಷ್ಟ. ಭೈರಪ್ಪ ಅಥವಾ ಕಾರಂತನ ಪುಸ್ತಕಲ್ಲಿ ಅವರ ಹೆಸರಿಲ್ಲದ್ದರೂ ಓದುಗಂಗೆ ಗೊಂತಾಗದ್ದಿಕ್ಕೋ?

    ಸಾಮಾಜಿಕ ಸ್ಥಿತಿ ಅರುವತ್ತೊರಿಷಲ್ಲಿ ಬದಲಾದ್ದರ ಹೇಳಿದ್ದು ಲಾಯಿಕಾಯಿದು; ಈಗ ಹೀಂಗಿಪ್ಪ ಬದಲಾವಣೆ ಅಪ್ಪಲೆ ಅರುವತ್ತೊರಿಶ ಬೇಡ! ಹತ್ತೊರಿಶ ಹಿಂದೆ ಇದ್ದ ಸ್ಥಿತಿ ಇಂದಿದ್ದೋ?

    ಓದಿ ಕೊಶಿಯಾತು; ಅಭಿಮನಂದನೆಗೊ ಒಪ್ಪಣ್ಣಂಗೆ!!

    1. ಸರ್ಪಮಲೆಮಾವಾ, ಚೆಂದದ ಒಪ್ಪ ಕಂಡು ಕೊಶೀ ಆತು.

      ಸಾಮಾಜಿಕ ಸ್ಥಿತಿ ಬದಲಪ್ಪಲೆ ಪೈಸೆ ಬೆಲೆ ಹೆಚ್ಚು ಕಮ್ಮಿ ಅಪ್ಪದೂ ಒಂದು ಕಾರಣ ಅಡ, ಅಪ್ಪೋ?
      ಎನಗರಡಿಯ ಅದೆಲ್ಲ 🙂

  15. ಎನ್ನ ಅಪ್ಪ ಇಂದು ಬೆದುರಕ್ಕಿಯ ಕತೆ ಹೇಳಿದವು. ಅವು ಸಣ್ಣಾದಿಪ್ಪಗ (ಅಂದರೆ ಸರೀ ೫೦-೫೨ ವರ್ಶ ಹಿಂದೆ) ಒಂದರಿ ಕಟ್ಟೆ ಹೋಯಿದಡ ಬೆದುರು. ಅವಗ ಸರ್ವತ್ರ ಹೂಗು ಹೋಯಿದು. ಆದರೆ ಈಗ ಅಲ್ಲಲ್ಲಿ ಮಾತ್ರ ಕಟ್ಟೆ ಹೋದ್ದು ಹೇಳಿದವು. ಅಲ್ಲದ್ರೂ… ಈಗ ನಾವು ನೋಡ್ತ ಹಾಂಗೆ ಅಲ್ಲಲ್ಲಿ ಅರ್ಧಂಬರ್ಧ ಬೆದುರುಗೋ ಮಾಂತ್ರ ಕಟ್ಟೆ ಹೋದ್ಸು. ಒಪ್ಪಣ್ಣ ಹೇಳಿದಾಂಗೇ… ತಾಪಮಾನ ವೆತ್ಯಾಸಂದಲೇ ಆಯಿಕ್ಕು…. ಉಮ್ಮಪ್ಪಾ… ನವಗರಡಿಯಾ….
    ಅಪ್ಪ ಮತ್ತೂ ಹೇದವು- ಆ ಸಮೆಯಲ್ಲಿ ಎರಡು ತಿಂಗಳು ಕೆಲಸಕ್ಕೆ ಒಂದು ಜೆನವೂ ಸಿಕ್ಕವು. ಪ್ರತಿಯೊಬ್ಬನೂ ಗುಡ್ಡಗೆ ಹೋಗಿ, ಬೆದುರ ಹಿಂಡ್ಳಿನ ಅಡಿ ಕೆತ್ತಿ, ಸಗಣ ಬಳುಗಿ, ಕಿಲೀನು ಮಾಡಿಕ್ಕಿ ಬಕ್ಕು, ಹಾಂಗೇ ಪ್ರತಿ ದಿನವೂ ದಿನಕ್ಕೆರಡು ಸರ್ತಿ ಹಿಡಿಸೂಡಿ ಹಿಡ್ಕೊಂಡು ಹೋಗಿ ಉಡುಗಿ ರಾಶಿ ಮಾಡಿಂಡು ಬಕ್ಕು. ಹಾಂಗೇ ಕೆಲವು ಸರ್ತಿ ಗಲಾಟೆಗಳುದೇ ಅಕ್ಕು, ಅವ ಎನ್ನ ಬೆದುರಿಂಡ್ಳು ಉಡುಗಿದಾ ಹೇಳಿ.
    ಎಂಗಳಲ್ಲೂ ಎರಡು ಮುಡಿ ಬೆದುರಕ್ಕಿ ತೆಕ್ಕೊಂಡಿತ್ತಿದ್ದವಡಾ ಆ ಕಾಲಲ್ಲಿ. ಎರಡು ಮುಡಿ ಈಚಕ್ಕಿಗೆ ಎಕ್ಷ್ ಚೇಂಜ್ ಮೇಳ… 🙂 ದೋಸಗೆ ಭಾರೀ ರುಚಿ ಅಡ ಈ ಬೆದುರಕ್ಕಿ.

    1. { ಅವ ಎನ್ನ ಬೆದುರಿಂಡ್ಳು ಉಡುಗಿದಾ }
      ಹ ಹ! ಇದು ಗಮ್ಮತ್ತಿದ್ದು.

      ಆಚಕರೆ ಮಾವನ ಸ್ಮೃತಿಲಿ ಹೀಂಗಿರ್ಸ ಹಲವು ಕತೆ ಇಕ್ಕಾನೆ? ಬೈಲಿಂಗೆ ಬಕ್ಕೋ?

  16. ಬೆದುರು ಹೂಗು ಬಿಡುವ ಬಗೆಲಿ ಒಪ್ಪಣ್ಣನ ವಿಶೇಷ ಲೇಖನ ಉತ್ತಮ ಮಾಹಿತಿ ಕೊಟ್ಟತ್ತು. ಕಾನಾವು ನಾಂದಿ ಮುಗುಶಿಕ್ಕಿ ಶರ್ಮಪ್ಪಚ್ಚಿ ಒಟ್ಟಿಂಗೆ ಬಪ್ಪಗ ಮಾರ್ಗದ ಕರೆಲಿ ಬೆದುರಿನ ಹೂಗು, ಬತ್ತವುದೆ ಕಾಂಬಲೆ ಸಿಕ್ಕಿತ್ತು. ಬೆದುರಿನ ಅಕ್ಕಿ ಹೇಂಗಿದ್ದು, ಅದರ ರುಚಿ ಹೇಂಗೆ ಹೇಳಿ ಪರೀಕ್ಷೆ ಮಾಡೆಕು ಹೇಳಿ ನಾವುದೆ ಅಲ್ಲಿಂದ ಒಂದು ಮುಷ್ಟಿ ಬೆದುರಿನ ಬತ್ತ ಬಾಚೆಂಡತ್ತು. ಮನಗೆ ಬಂದು ಟೆಸ್ಟು ಮಾಡಿರೆ, ಬರೇ ಹೊಟ್ಟು. ಒಂದೇ ಒಂದು ಅಕ್ಕಿ ನವಗೆ ಸಿಕ್ಕಿತ್ತಿಲ್ಲೆ. ಬತ್ತ ಸರೀ ಬೆಳದ್ದಿಲ್ಲೆಯೊ ಎಂತೊ ?! ಎಂತೇ ಇರಳಿ. ಬೆದುರಕ್ಕಿಯ ತಿಂತ ಅವಸ್ಥೆ ಆರಿಂಗು ಬೇಡಪ್ಪ.

    ದೂರದೂರಿಲ್ಲಿ ಕಲಿತ್ತಾ ಇಪ್ಪ ಜಾಣ ಮಾಣಿಯ ವಿದ್ಯಾಭ್ಯಾಸ ಒಳ್ಳೆದಾಗಲಿ. ಒಳ್ಳೆ ಯಶಸ್ಸು ಸಿಕ್ಕಲಿ. ಒಟ್ಟಿಂಗೆ ಭಾಮಿನಿಯುದೆ ರೈಸುತ್ತಾ ಇರಳಿ.

    1. ಬೊಳುಂಬು ಮಾವಾ,
      ಕಾನಾವು ನಾಂದಿ ಮುಗುಶಿ ಬಪ್ಪಗಳೇ ಅಡ, ಹಳೆಮನೆ ಅಣ್ಣಂಗೆ ಈ ಪಟಲ್ಲಿಪ್ಪ ಬೆದುರು ಕಾಂಬಲೆ ಸಿಕ್ಕಿದ್ದು.

      ನಿಂಗಳೂ ಅವರೊಟ್ಟಿಂಗೆ ಹೋಗಿದ್ದಿದ್ದರೆ ಅಕ್ಕಿ ಸಿಕ್ಕುತಿತು, ಅವರ ಬಿಟ್ಟು ಹೋದ್ಸಕ್ಕೆ ಬರೇ ಹೊಟ್ಟು ಮಾಂತ್ರ ಸಿಕ್ಕಿದ್ದು.
      ಬೌಶ್ಷ ಅವರಿಂದ ಮತ್ತೆಹೋದ್ಸೋ ಹೇದು! 🙂

      1. ಎಂಗೊ ಎಲ್ಲೋರು ಶರ್ಮಪ್ಪಚ್ಚಿಯ ಕಾರಿಲ್ಲಿ ಒಟ್ಟಿಂಗೆ ಇತ್ತಿದ್ದೆಯೊ. ಅಳಿಯ ಬತ್ತದ ಫೊಟೊ ತೆಗಕ್ಕೊಂಡಿಪ್ಪಗ, ಮಾವ ಬತ್ತವ ಬಾಚಿದ.

  17. ಎನ್ನದೊಂದು ಒಪ್ಪ ಶುದ್ಧಿಗೆ..
    ಈ ಬೆದುರಿನ ಅಕ್ಕಿಯ ಬಗ್ಗೆ ಹೂ ಹೋಪದರ ವಿಷಯ ಅಜ್ಜಿ ಹೇಳುಗು ಮನೆಲಿ..
    ಈಗ ಮತ್ತೆ ನೆಂಪಾದಾಂಗೆ ಆತು..

    1. ಹು ಹು!!
      ಎಷ್ಟೋ ಜೆನಕ್ಕೆ ಬೆದುರ ನೆಂಪುಮಾಡುವಗ “ಬೆಟ್ಟುಕಜೆ ಮಾಣಿಯನ್ನೂ” ನೆಂಪಾವುತ್ತಡ – ಹೇದು ಸುಭಗಣ್ಣ ಮೊನ್ನೆ ಕೋಂಗಿ ಮಾಡಿಂಡು ಇತ್ತವು.
      ಅಂಬಗ ಬೆದುರು ಅಷ್ಟೂ ಉದ್ದ ಇರ್ತೋ? 😉

      1. ಉದ್ದ ಇಕ್ಕು ಆದರೆ ಕಂತ…

  18. ಒಪ್ಪಣ್ಣಾ…
    ಈ ಸರ್ತಿ ಒಪ್ಪ ಸುದ್ದಿ ಕೇಳಿ ಕೊಶಿ ಆತು,
    ಬೆದುರಿನ ಉಪಯೋಗದ ಬಗ್ಗೆ ನೀನು ತುಂಬಾ ಬರದ್ದೆ,
    ಎನಗೂ ನೆಂಪಾತು,
    ನಮ್ಮ ಎಡಕಲ್ಲು ಗುಡ್ಡದ ಕೆಳಾಣ ಹೊಡೇಲಿ ವಯನಾಡು ಇದ್ದಲ್ಲದೋ,
    ಅಲ್ಲಿ ‘ಉರವು’ ಹೇಳ್ತ ಒಂದು ಸಂಸ್ಥೆ ಇದ್ದು.
    ಬೆದುರಿನ ಮೌಲ್ಯವರ್ಧನೆ ಮಾಡ್ತ ಬಗ್ಗೆ ತುಂಬಾ ಪ್ರಯತ್ನ ಮಾಡಿದ್ದವು.
    http://www.uravu.net/

    1. “ಉರವು” ಸಂಸ್ಥೆಯ ಬಗ್ಗೆ ಒಳ್ಳೆ ಮಾಹಿತಿ.
      ಅವರ ಬೈಲಿಂಗೆ ಇಳುದೆ, ಕೆಲವೆಲ್ಲ ತೆಮುಳು ಬಾಶೆಲಿ ಇದ್ದತ್ತು. ಅಯ್ಯರಿಗೆ ಪುರ್ಸೊತ್ತು ನೋಡಿಗೊಂಡು ಕೇಳ್ತೆ; ಅರ್ತ ವಿವರ್ಸುಗು.

  19. ಈ ಬೆದುರು ಕಟ್ಟೆ ಹೋದರೆ ಬರಗಾಲ, ಕ್ಷಾಮ, ಪ್ಲೇಗು, ಇತ್ಯಾದಿ ಕಷ್ಟಂಗೊ ಬತ್ತು ಹೇಳಿ ಹೆರಿಯೋರ ನಂಬಿಕೆ. ಇದರ ವೈಜ್ನಾನಿಕ ವಿಷ್ಲೇಶಣೆಯನ್ನೂ ನಾವು ಕೇಳಿಕ್ಕು ಹೈ ಸ್ಕೂಲಿನ ಪಾಠಂಗಳಲ್ಲಿ. ಅಂತೂ ಬೆದುರಿಂಗೆ ಸಾವ ಕಾಲ.

    @”(ವಾತಾವರಣದ ಬೆಶಿ ಏರಿ ಸಮತೋಲನ ಕೆಟ್ಟು ಹೋತು; ಬೆದುರು ಬೇಗ ಕಟ್ಟೆ ಹೋತು)” ಬೆದುರಿನ ಅಬಾರ್ಷನಿಂಗೆ ಕಾರಣವಾದ ಮನುಶ್ಯರಿಂಗೆ ಇನ್ನು ಎಂತೆಲ್ಲಾ ಇದ್ದೋ ದೇವರಿಂಗೇ ಗೊಂತು.

      1. ಇಲ್ಲೆ ಪೆಂಗೋ…. ಇದು ತುಂಬಾ ಬೇಜಾರಲ್ಲಿ ಹೇಳಿದ ಸಂಗತಿ…. ಆರ ಮೇಗೆ ಕೇಸು ಹಾಕಿ ಎಂತ ಪ್ರಯೋಜನ….??? ಮನುಶ್ಯರಿಂಗೂ ವಿನಾಶಕಾಲಲ್ಲಿ ವಿಪರೀತ ಬುದ್ಧಿ…..

        1. ಅದ್ವೈತಕೀಟಭಾವಾ,
          ಎರಡೂ ಹೊಡೆ ಮೊದಾಲು ನಿಗಂಟು ಮಾಡಿಕ್ಕಿ, ಪೈಶೆ ಬತ್ತ ಕುಳವಾರಾದರೆ ಮಾಂತ್ರ ಕೇಸು ಒಪ್ಪಿಂಬದು ಕ್ರಮವೋ?
          ಬೆದುರಿನ ಹೊಡೆಂದ ಕೇಸು ಹಾಕಿ ಬಾವಾ, ಪೈಸೆ ಬಾರದ್ರೆ ಬೆದುರು ಕಡುದು ಮಾರ್ಲಕ್ಕು! 😉

  20. ಎಂಗಳಲ್ಲಿ ಬಾಳೆ ಮರ ಕೂಡ ಹೀಂಗೆಯೆ…. ಒಂದಾರಿ ಹೂಗು ಬಿಟ್ಟ ಮತ್ತೆ ಹಣ್ಣು ಬಿಟ್ಟ ಮತ್ತೆ ಸಾವದೇ…. 🙁

    1. ಆರದು ನಿನ್ನ ಬೋದಾಳ ಹೇಳುಸ್ಸು? ನೀ ಬೋದಾಳಂಗಳ ರಾಜ್ಯಲ್ಲೇ ಗಟ್ಟಿಗ°. ಆತೋ?
      ಹೇಳಿದಾಂಗೆ,
      ನಿನ್ನ ಊರಿನ ದೇವಸ್ಥಾನಲ್ಲಿಪ್ಪ “ಕೊಡಿಮರಲ್ಲಿ” ಒರಿಶವೂ ಜಾತ್ರೆಗಪ್ಪಗ ಹೂಗು ಹೋವುತ್ತಡ, ಕಂಡಿದೆಯೋ?

  21. ನಾನಾ ನಮೂನೆಯ ಉಪಯೋಗ ಇಪ್ಪ ಬೆದುರು, ಅಂತ್ಯ ಅಪ್ಪದು ಹೂಗು ಬಿಟ್ಟು, ಹೊಸ ತಲೆಮಾರು ಬಪ್ಪಲೆ ಆರಂಭ ಮಾಡುವದು.
    ಇದೇ ರೀತಿ “ಪನೆ” ಮರ ಕೂಡಾ ಒಂದೇ ಸರ್ತಿ ಹೂಗು ಬಿಡುವದು ಹೇಳಿ ಕೇಳಿತ್ತಿದ್ದೆ.
    ವರ್ಷ ವರ್ಷ ಫಲ ಕೊಡುವ ಮರಕ್ಕಾದರೆ, ಹೂಗು ಹೋಪದು ಹೇಳ್ತರೆ,ಬೆದುರು “ಕಟ್ಟೆ ಹೋಪದು” ಹೇಳ್ತ ಶಬ್ದ ಎನಗೆ ಹೊಸತು. ಈ ಮೊದಲು ಕೇಳಿತ್ತಿದ್ದಿಲ್ಲೆ.
    ಬೆದುರಿನ ಜೀವನ ಚಕ್ರ ಬಗ್ಗೆ ಮಾಹಿತಿ ಕೊಟ್ಟ ಒಳ್ಳೆ ಲೇಖನ.

    1. ಚೆಂದದ ಒಪ್ಪಕ್ಕೆ ಒಪ್ಪಂಗೊ ಅಪ್ಪಚ್ಚೀ.
      ಪನೆ ಮರದ ಸಂಗತಿ ಗೊಂತಿಲ್ಲೆನ್ನೇಪ್ಪಾ!
      ನೋಡೊ – ನಾಳಂಗೆ ಮಾಷ್ಟ್ರುಮಾವ ಸಿಕ್ಕುಗು, ಕೇಳಿಕ್ಕುತ್ತೆ.

  22. ಬಿದಿರೆ ಅಂದಣವಕ್ಕು ಬಿದಿರೆ ಸತ್ತಿಗೆಯಕ್ಕು-ಹೇಳುವ ಹಾಂಗೆ ಬಿದಿರಿನ ಪ್ರಾಮುಖ್ಯ ಇದ್ದು.[ಈ ಪದ್ಯಕ್ಕೆ ಬಿದಿ+ಇರೆ =ಅದೃಷ್ಟ ಇದ್ದರೆ,ರಾಜತ್ವ ಸಿಕ್ಕುಗು ಹೇಳುವ ವಿಶೇಷಾರ್ಥವೂ ಇದ್ದು,ನಾವು ಸಾಮಾನ್ಯಾರ್ಥಲ್ಲಿ ತೆಕ್ಕೊಂಬೊ].ಬಿದಿರಿನ ಅಕ್ಕಿ ೫೦ರ ದಶಕಲ್ಲಿ ಆದಪ್ಪಗ ಮಿಜೋರಾಂ ರಾಜ್ಯಲ್ಲಿ ಎಲಿಗಳ ಸಂಖ್ಯೆ ಹೆಚ್ಚಾಗಿ ಕ್ಷಾಮ ಬಂತಡ.ಕೇಂದ್ರ ಸರಕಾರ ಗಮನ ಕೊಟ್ಟಿದಿಲ್ಲೆ ಹೇಳಿ ಅಲ್ಲಿ ಸ್ಥಳೀಯರಿಂದ ಕ್ರಾಂತಿ ಜೋರಾದ್ದು.ಹೀಂಗೆ,ಬೆದುರಕ್ಕಿ ಅಪ್ಪದು ಮುಖ್ಯ ಘಟನೆ.ಬೆದುರಕ್ಕಿ ಆಗಿ ಹೊಸ ಜೀವ ಬೆದುರಿಂಗೆ ಬರಲಿ.ಲೋಕಕ್ಕೆ ನವೋತ್ಸಾಹ ಬರಲಿ.

    1. ಮಾಹಿತಿಪೂರ್ಣ ಒಪ್ಪಕ್ಕೆ ಧನ್ಯವಾದಂಗೊ.
      ಬಿದಿ + ಇರೆ ಯ ಸಂಗತಿ ನೆಂಪುಮಾಡಿದ್ದು ಕೊಶೀ ಆತು ಗೋಪಾಲಣ್ಣ.
      🙂

  23. ವಿಸ್ಮಯಕಾರಿ ರೋಚಕ ಶುದ್ದಿ ಲಾಯ್ಕ ಅಂತ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×