Oppanna.com

ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ

ಬರದೋರು :   ಮುಳಿಯ ಭಾವ    on   13/08/2012    18 ಒಪ್ಪಂಗೊ

ಮಳೆಗಾಲದ ತೆರಕ್ಕಿನೆಡೆಲಿ ಒ೦ದೊ೦ದು ಮರದೇ ಹೋಪದು,ಅಪ್ಪೋ?

ತೋಟ ಬುಡ ಬಿಡುಸಿಕ್ಕಿ ಸುತ್ತಲು
ಕಾಟುಹುಲ್ಲಿನ ಕೆರಸಿಯಪ್ಪಗ
ನೋಟ ಹಸುರಾಗಿಕ್ಕು ಕಿಸೆಯೊಳ ಹಸುರು ನೋಟಕ್ಕು|
ಸೂಟುಮಣ್ಣಿನ ಹಾಕಿದರೆ ಸರಿ
ನಾಟುಗದ ಮಳೆನೀರು ಕ೦ತೊಗ
ಈಟು ಹಿಡುಶಿರೆ ಫಸಲು ಹೆಚ್ಚುಗು ಕೇಳು ಭಾವಯ್ಯ॥

ಉಪ್ಪಳಿಗ ಮರಹತ್ತಿ ಗೆಲ್ಲುಗ
ಳಿಪ್ಪ ಹೊಡೆ ಕಡುಶಿಕ್ಕಿ ಕೆಳ ಬೇ
ಕಪ್ಪ ಬಾಳೆಯ ನೆಟ್ಟುಬಿಟ್ಟರೆ ಬೇಗ ಫಲ ಬಕ್ಕು|
ಸೊಪ್ಪು ಕಡಿಯುವವಕ್ಕೆರಡು ಹೊಗೆ
ಸೊಪ್ಪು ಕುಣಿಯದ್ದಕ್ಕು ತಪ್ಪಿರೆ
ಚಪ್ಪೆ ಆಪು೦ಡುಳ್ಳಯಾ ಹೇಳುಗವು ಭಾವಯ್ಯ॥

ಬೆ೦ಡೆ ಬಿತ್ತಿದರಕ್ಕು ಸೆಸಿ ಅಲ
ತೊ೦ಡೆ ಕಳ ಮಾಡೆಕ್ಕು ಜಾಲಿಲಿ
ತೊ೦ಡೆ ಚೆಪ್ಪರ ಬಗ್ಗಿ ನಿ೦ದಿದು ಗು೦ಟ ಹಾಕೆಕ್ಕು|
ಮ೦ಡಗೆಯ ಕಿಚ್ಚಿ೦ಗೆ ಸೌದಿಯ
ತು೦ಡು ಮಾಡಿಯೆ ಒಯಿಶುಲಿ೦ದೀ
ತೊ೦ಡ° ದೂಮನ ನ೦ಬಿದರೆ ಕೆಟ್ಟತ್ತು ಭಾವಯ್ಯ॥

ಬಲ್ಲೆ ಕಡುಶೆಕ್ಕಾತು ತೋಟದ
ಹುಲ್ಲು ತೆಗೆಶೆಕ್ಕಾತು ಹಟ್ಟಿಲಿ
ಕಲ್ಲು ಕಟ್ಟುಸಿ ಬೈಪ್ಪಣೆಯ ಸರಿ ಮಾಡುಸೆಕ್ಕಾತು|
ಎಲ್ಲಿ ಮಾಯಕವಾಗಿ ಹೋದವೊ
ಇಲ್ಲೆ ಆಳುಗೊ ಪೈಸೆ ಸೊರುಗಿರು
ಮೆಲ್ಲ ಜಾರಿದವೆಲ್ಲ ಊರಿನ ಬೂತ ಕೋಲಕ್ಕೆ॥

ಕೋಲ ಮುಗುದರೆ ಬಕ್ಕೊ ಮದಲಾ
ಸಾಲ ಸಲ್ಲುಸುಲಿಕ್ಕೊ ಈ ಮಳೆ
ಗಾಲ ತೋಟದ ಕೆಲಸ ಮಾಡುಸುಲೆಡಿಗೊ ನೇರ್ಪಲ್ಲಿ|
ಜಾಲಿನುದ್ದಕ್ಕೇ ಕಿಡಿ೦ಜೆಲು
ಸಾಲು ಕಾ೦ಬಲೆ ಆಸೆಯಾಯಿದು
ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ ಭಾವಯ್ಯ॥

ಶ್ರೀಶಣ್ಣನ ಸ್ವರಲ್ಲಿ ಕೇಳುಲೆಃ

ಮುಳಿಯ ಭಾವ

18 thoughts on “ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ

  1. ಓದಿದ,ಶ್ರೀಶಣ್ಣನ ಸ್ವರ ಕೇಳಿ ಆಸ್ವಾದಿಸಿದ,ಒಪ್ಪ ಕೊಟ್ಟು ಪ್ರೋತ್ಸಾಹಿದ ಎಲ್ಲಾ ನೆ೦ಟ್ರಿ೦ಗೆ ಧನ್ಯವಾದ೦ಗೊ.

  2. ಮುಳಿಯಬಾವನ ಭಾಮಿನಿಯ ಓದಿದೆ,ಬಾರೀ ಲಾಯಕ ಆಯಿದು. ನಿಂಗೊ ಬರದ ಎಲ್ಲ ಭಾಮಿನಿಗಳ ಸೇರುಸಿ ಒನ್ದು ಹವ್ಯಕ ಪದ್ಯ. ಪುಸ್ತಕ ಮಾಡಲಕ್ಕನ್ನೆ ಹೇಳಿ ತೋರುತ್ತು ಎನಗೆ.ಈಗ ಆರೂ ಜೆನ ಸಿಕ್ಕದ್ದೆ ಆನೇ ನೆಟ್ಟಿ ಚೆಪ್ಪರ ಹಾಕಿಕ್ಕಿ ಬಂದು ಕೂದ್ದಸ್ತೆ ನಿಂಗಳಪದ್ಯ ಕಂಡತ್ತು ಸರೀ ಅಯಿದು ಕಾಕತಾಳೀಯ ಹೇದರೆ ಇದುವೆಯೊ?ಧನ್ಯವಾದಂಗೊ.

  3. ಅದ್ಭುತ ಪದ್ಯಂಗೊ!!! ಭಾರಿ ಕುಶಿ ಆತು.

  4. ಒಬ್ಬ ಹವ್ಯಕ ಕೃಷಿಕ ಮಳೆಗಾಲದ ಕೆಲಸಂಗಳ ತಯಾರಿಲಿ ಎಂತೆಲ್ಲಾ ಅನುಭವಿಸುತ್ತ ಹೇಳ್ತದು ತುಂಬಾ ಚೆಂದಕೆ ಬಯಿಂದು.
    ಕಾಲ ಚಕ್ರವ ಹಿಂದೆ ಹಾಕಲೆಡಿಯ. ಆದರೆ ನೆನಪುಗಳ ಹಿಂದಂಗೆ ಕೊಂಡೋಪಲೆ ಎಡಿಗು.
    ಧ್ವನಿಯೊಟ್ಟಿಂಗೆ, ಭಾಮಿನಿ ಪದವ ಕೇಳಿ ಅನುಭವಿಸಲೆ ಲಾಯಿಕ ಆವ್ತು.

  5. ಒಟ್ತಿಗಿ೦ದ್ದ ,ಮೇವಲೆ ಹೋದ ದನ, ಬಪ್ಪಗ ತಪ್ಪಿಸ್ಕೊ೦ಡು ತಡವಾಗಿ ಬ೦ದು, ಉರ್ವೆಲುನ ಹತ್ತರೆ ,ಸೊಯ್ಯ್ಪಪ್ಪುವ ಮಳ್ಗೆ ಗಡ ಗಡ ದರಿಸಿಕೊ೦ಡು ನಿ೦ದದು ನೆ೦ಪಾತು.ಬೆಶಿ ಬೆಶಿ ಮಡ್ದಿ ಕೊಟ್ಟರೆ ಕುಷಿ ಅಕ್ಕೋ ಏನೊ?ಗ೦ಗೆ ಬಾರೆ,ಮ೦ಗಳೆ ಬಾರೆ.

    1. “ಗ೦ಗೆ ಬಾರೆ,ಮ೦ಗಳೆ ಬಾರೆ….” ಕೇಳಿ ಖುಷಿ ಆಗಿ ಆ ಭಾಮಿನಿ ನೆನಪಾತು…

      ಮಕ್ಕೊಗೆಲ್ಲಾಮೃತ ತುಂಬಾ
      ಸಿಕ್ಕಲೆಯೆ ಮದ್ದುಗಳ ಸೊಪ್ಪು ಹು-
      ಡುಕ್ಕಿ ಗುಡ್ಡೆಗೆ ಗಂಗೆ ಮೇವಲೆ ಹೋತು ಭಾವಯ್ಯ|
      ಹಿಕ್ಕೆ ಹಾಕಿಕಿ ಗುಡ್ಡೆ ನಿಂಗೊಳಿ-
      ಶೆಕ್ಕು ಹೇಳಿಯೆ ಕರೆಯ ಕೊಟ್ಟಿಕಿ
      ತಕ್ಕ ತಕನೆಯೆ ಬಂದು ನಿಂದಿದು ಗಂಗೆ ಭಾವಯ್ಯ|

  6. ಮುಳಿಯ ಭಾವನ ಭಾಮಿನಿ ತುಂಬಾ ಇಷ್ಟ ಆತು. ಆ ನೆಟ್ಟಿಕಾಯಿ,ತೋಟ,ಪ್ರಕೃತಿಯ ಜೊತೆಗೆ ಜೀವನ ಕಲ್ಪಿಸಿ ಅದರ ಶ್ರೀಶಣ್ಣನ ಧ್ವನಿಲಿ ಆಸ್ವಾದಿಸಿ ತುಂಬಾ ಖುಷಿ ಆತು.

    ಕಲಿಯುಗ ಚಕ್ರಲ್ಲಿ ಹಿಂತುರಿಗಿ ನೋಡಿರೆ ಎಲ್ಲಿಯೂ “ಎಲ್ಲರೂ ಒಂದಾಗಿ ಪ್ರಕೃತಿಯ ಜೊತೆ ಆನಂದಲ್ಲಿ ಜೀವನ ನಡೆಸಿದ ಉದಾಹರಣೆ ಇಲ್ಲೆ”. ಎಲ್ಲ ಕಾಲಲ್ಲಿಯೂ ಸ್ತ್ರೀ ಶೋಷಣೆ, ಬ್ರಾಹ್ಮಣರಿಂದ ದಲಿತ ಶೋಷಣೆ,ಅತ್ತೆ ಸೊಸೆಯಕ್ಕಳ ಜಗಳ ಹೀಂಗೆ ನಿರಂತರ ಒಂದಲ್ಲ ಒಂದು ಸಮಸ್ಯೆ ಇತ್ತು. ಹಾಂಗಾಗಿ “ಕಾಲಚಕ್ರ ಹಿಂತಿರುಗುದು ಬೇಡವೇ ಬೇಡ… ಮುಂದೆ ಹೋವುತ್ತಾ ಇಪ್ಪ ಕಾಲಚಕ್ರಲ್ಲಿ ಎಲ್ಲರೂ ಒಂದಾಗಿ ಆನಂದಲ್ಲಿ ನಲಿದಾಡುವ” ಹೇಳುವ ಭಾವಂದ ಮುಳಿಯ ಭಾವನ ಭಾಮಿನಿ ಇನ್ನೊಂದು ಭಾಮಿನಿಗೆ ಪ್ರೇರಣೆ ನೀಡಿತ್ತು.

    ಆಟಿ ತಿಂಗಳ ಬೆಶಿಲ ನೋಡಿಯೆ
    ಕೋಟಿಗಟ್ಟಲೆ ಖರ್ಚು ಮಾಡಿಯೆ
    ತೋಟ ತಂಪಾಯಿದಿಲ್ಲೆಯ ಮಳೆಂದ ಭಾವಯ್ಯ?
    ಊಟ ದಕ್ಷಿಣೆ ಕಾವ ಬಟ್ರುಗೊ
    ನೋಟು ತುಂಬುಸಿ ಕಿಸೆಲಿ ಹೆಮ್ಮೆಲಿ
    ಗೂಟ ಕಾರಿಲಿ ಹೋಪ ಹಾಂಗಾತನ್ನೆ ಭಾವಯ್ಯ||

    ಮುಗ್ಗರಿಸುತಲಿ ಕಾಲ ಕಳೆವರ
    ನೆಗ್ಗಿ ತಂದೊಂದೆಡೆಲಿ ಕೂರಿಸಿ
    ಹಿಗ್ಗಿ ನಲಿವಲೆ ಕಾಲ ಸಹಕರಿಸಿದ್ದು ಭಾವಯ್ಯ|
    ಕೊಗ್ಗು, ತನಿಯನು ಭಟ್ರ ದರ್ಪಕೆ
    ಕುಗ್ಗಿ ಸೊರಗುತ ಬೇಡಿ ದೇವರ
    ಹಿಗ್ಗಿ ನಲಿವಲೆ ಕಾಲ ಸಹಕರಿಸಿದ್ದು ಭಾವಯ್ಯ||

    ನಾಕು ಗೋಡೆಯ ಮಧ್ಯೆ ನೋಯುತ
    ನೂಕಿ ಕಾಲವ ತಪಲಿ ಕಳೆಯುತ
    ಹಾಕಿದವು ವಿಶ್ವವಿಡಿ ಹೆಜ್ಜೆಯ ಖುಷಿಲಿ ಭಾವಯ್ಯ|
    ಸಾಕು ಕಾಲವ ದೂರುದಿನ್ನುದೆ
    ಬೇಕು ಸನ್ಮತಿ ನಮಗೆ ನೋಡುಲೆ
    ಲೋಕ ಹಿತವೆಂದೆಂದು ಸಜ್ಜನರಿಂಗೆ ಭಾವಯ್ಯ||

    ಕಲಿಯ ಚಕ್ರವು ಮುಂದೆ ಹೋಗಲಿ
    ತಲೆಯ ತಿರುಗಿಸಿ ನಾವು ನೋಡುವ
    ಹೊಲವ ತೋಟವ ಒಳಿಶಿಗೊಳ್ಳುತ ಮೆರವ ಭಾವಯ್ಯ|
    ಹಲವು ತಡೆಗಳ ಜೊತೆಗೆ ಜೀವನ
    ನಲಿವು ಕಾಣುಗು ನೊಂದ ಹೃದಯ
    ಗೆಲುವು ಸಿಕ್ಕುಲೆ ಗುರುವು ತೋರಿದ ಹಾದಿ ಭಾವಯ್ಯ||

    1. “ತೋಟ ತಂಪಾತನ್ನೆ ಜೋರಿನ ಮಳೆಲಿ ಭಾವಯ್ಯ|” ಹೇಳಿ ತಿದ್ದಿದ್ದೆ.

    2. ಅಕ್ಕನ ಪ್ರತಿಕ್ರಿಯೆ ತು೦ಬಾ ಅರ್ಥಪೂರ್ಣ.
      ಕಾಲಚಕ್ರ ಅದರಷ್ಟಕೇ ತಿರುಗಲಿ,ಸದಾ ಚಲನೆಲಿ ಇಪ್ಪ ನಮ್ಮ ಜೀವನಲ್ಲಿ ಹಳೆಯ ಮೌಲ್ಯ೦ಗಳ ಒಳುಶುವ ಪ್ರಯತ್ನ ಮು೦ದುವರಿಸುವ°,ಹೇಳ್ತದು ಆಶಯ.

  7. ‘ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ’

    ಭಾಮಿನಿಲಿಯೂ ಎಡಿಯ… ಯೇವದರ್ಲೂ ಎಡಿಯ…. ಆರಿಂದಲೂ ಎಡಿಯ ಭಾವಾ….

    1. ಅಪ್ಪಪ್ಪು,ಕಾಲಚಕ್ರ ಹೇಳಿರೆ ನೇತ್ರಾವತಿ ನದಿಯೊ? ಅಲ್ಲನ್ನೇ.

  8. ಸೂಪರ್ ಆಯಿದು ಮಾವ..ಶ್ರೀಶಣ್ಣ ಹಾಡಿದ್ದು ಭಾರಿ ಚೆ೦ದ ಆಯಿದು.

  9. ಪಷ್ಟಾಯ್ದು ಬಾವ!!
    (ಕಿಸೆಯೊಳ ಹಸುರು ನೋಟಕ್ಕು )- ಹಳೆ ಅಡಕ್ಕೆ ಸೊಲಿಯಕ್ಕಷ್ಟೆ ಬಾವ…ಅಟ್ಟಲ್ಲಿಯೇ ಇದ್ದು ಃ)
    (ಹೊಗೆ ಸೊಪ್ಪು ಕುಣಿಯದ್ದಕ್ಕು) ಅಪ್ಪು ಬಾವ! ಬೆಜವಡ ಆಳುಗೊಕ್ಕೆ ತಂದದು ಕುಂಬಾತು!!
    ಜಾಲಿಲಿ ಅಳತ್ತಂಡೆ ಹಾಕಿದ್ದು ಬಾವ! ಬಂಬುಚ್ಚಿಯ ಉಪದ್ರಲ್ಲಿ ಎಡಿಯ!! ಃ)

  10. ಮಳೆಗಾಲದ ತೆರಕ್ಕಿನ ಚಿತ್ರಣ ಭಾರೀ ಲಾಯಕಿಲ್ಲಿ ಬಯಿಂದು. ಪದ್ಯ ಕೇಳಿ ಪೇಟೆಲಿದ್ದ ಆನು ಮನಸ್ಸಿಲ್ಲೇ ನೆಟ್ಟಿಕಾಯಿ ಬಿತ್ತು ಹಾಕಿದೆ ! ಆಳುಗೊ ಸಿಕ್ಕದ್ದ ತೊಂದರೆ ಎದ್ದು ಕಾಣುತ್ತು ಪದ್ಯಲ್ಲಿ. “ತೊ೦ಡ° ದೂಮನ ನ೦ಬಿದರೆ ಕೆಟ್ಟತ್ತು ಭಾವಯ್ಯ” ಕೇಳಿ ನೆಗೆ ಬಂತು.
    ಜಾಲಿನುದ್ದಕ್ಕೇ ಕಿಡಿ೦ಜೆಲು, ಸಾಲು ಕಾ೦ಬಲೆ ಆಸೆಯಾಯಿದು – ಆಶಯ ನಿಜವೇ. ಸೈಕಲು ಚಕ್ರದ ಹಾಂಗೆ, ಕಾಲನ ಚಕ್ರವ ಹಿಂದೆ ತಿರುಗಸಲೆ ಎಡಿಯನ್ನೆ. ಮುಳಿಯ ಭಾವನ ಸಾಹಿತ್ಯ ಬೆಸ್ಟ್ ಆಯಿದು. ಶ್ರೀಶಣ್ಣನ ಸ್ವರ ಕೇಳೆಕಷ್ಟೆ. ಅದು ಪುರುಸೊತ್ತಿಲ್ಲಿ. ಸಂಗೀತಾ ಕೇಸೆಟ್ಟಿನ ಚೆನ್ನೈ ಭಾವ ಲಾಯಕಿದ್ದು ಹೇಳಿದ ಮೇಲೆ ಅದರಲ್ಲಿ ಎರಡು ಮಾತಿಲ್ಲೆ.

  11. ಭೇಶ್ ಭೇಶ್ . ಭಾರೀ ಲಾಯಕ ಆಯ್ದಿದು. ಒಳ್ಳೆ ಭಾವನೆ, ಕಲ್ಪನೆ. ಶ್ರೀಶಣ್ಣನ ಧ್ವನಿಯೊಟ್ಟಿಂಗೆ ನಮ್ಮ ತಾಳ ಸೇರಿಸಿ ಓದುವಾಗ ಕಣ್ಮುಂದೆ ದೃಶ್ಯಾವಳಿ ಹಾದುಹೋವ್ತು ಹೇಳೀಗ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×