Oppanna.com

“ಜೀರ್ಣ” ದೇವಸ್ಥಾನ “ಉದ್ಧಾರ” ಆಗದ್ದರೆ – ಊರೇ ಜೀರ್ಣ ಅಕ್ಕಡ!!

ಬರದೋರು :   ಒಪ್ಪಣ್ಣ    on   07/09/2012    12 ಒಪ್ಪಂಗೊ

ಹಾಂಗೆಲ್ಲ ಕತೆ…!
ಆಟಿ ಮುಗುದಪ್ಪದ್ದೇ, ಒಟ್ಟಾರೆ ಪುರ್ಸೊತ್ತೇ ಇಲ್ಲೆ ಇದಾ!

ಆಟಿಲಿ ಸಮಗಟ್ಟು ಮಳೆ ಬಾರದ್ದ ಪಾಲು ಸೋಣೆಲಿ ಬಂತದಾ -ಸೊರುಗಿ ಸೊರುಗಿ ಬೀಳ್ತಾ ಇದ್ದು!
ರಜೆ ಕಳುಶಿ ಶಾಲಗೆ ಹೋವುತ್ತ ಮಕ್ಕಳಿಂದ ಹಿಡುದು; ಪೂಜೆ-ಹೋಮ ಏರ್ಪಾಡು ಮಾಡಿದ ಊರೋರ ಒರೆಗೆ,
ಕಳ್ಳು ಕುಡಿತ್ತ ಸಂಕುವಿಂದ ತೊಡಗಿ, ಅದರ ನಾಯಿಯ ಒರೆಂಗೆ – ಎಲ್ಲೋರಿಂಗೂ ಈ ಸೋಣೆ ಮಳೆ ಉಪದ್ರವೇ! 😉
ಛೇ!!

ಮಳೆ ಹೇದು ಅಂತೇ ಕೂದರೆ ಆವುತ್ತೋ? ತೋಟಕ್ಕೆ ಸೊಪ್ಪು ಆಯೇಕು, ರೋಗ ಬಂದ ತೋಟಕ್ಕೆ ಮದ್ದು ಬಿಡೇಕು, ಉಜಿರುಕಣಿ ಬಿಡುಸಿ ಕೊಡೇಕು, ಇದರೆಡಕ್ಕಿಲಿ ಜೆಂಬ್ರಂಗೊಕ್ಕೆ ಹೋಗಿಳೇಕು. ಹತ್ತು ಹಲವು ಅಂಬೆರ್ಪುಗೊ.
ಎಡೆಲಿ ಓ ಮೊನ್ನೆ ಮಠಕ್ಕೆ ಹೋಗಿ ಬಂದ್ಸು ನಿಂಗೊಗೆ ಗೊಂತಿದ್ದು. ಅಲ್ಲಿ ಕೂದುಗೊಂಡು ಮಾತಾಡುವಗ ಅನುಷ್ಟುಪ್ಪಿನ ಶುದ್ದಿ ಬಂದ್ಸು, ವಿದ್ವಾನಣ್ಣ ಹೇಳಿಕೊಟ್ಟದು – ಎಲ್ಲವುದೇ ಅರಡಿಗು.
(https://oppanna.com/oppa/anushtup-chandassu-lakshana)
~

ಮಠಂದ ಬಂದು ಮನೆಗೆತ್ತಿಅಪ್ಪದ್ದೇ, “ತೋಟಕ್ಕೆ ಮದ್ದುಬಿಡ್ಳೆ ಬಾಬು ನಾಳೆ ಬತ್ತು” – ಹೇದು ಗೊಂತಾತು.
ಬತ್ತು ಹೇದರೆ ಬಾರ; ಅತವಾ ಬಪ್ಪಲೂ ಸಾಕು; ಬತ್ತೋ ಇಲ್ಲೆಯೋ – ಆದರೆ, ನಾವು ತೆಯಾರು ಇರೆಕ್ಕಿದಾ.
ಉದಿಯಪ್ಪಗ ತಿಂಡಿಕಾಪಿ, ತೋಟಕ್ಕಿಪ್ಪ ಸುಣ್ಣ, ಮೈಲುತುತ್ತು ಎಲ್ಲವನ್ನೂ ಏರ್ಪಾಡು ಮಾಡಿ ಮಡಗುತ್ಸು ನಮ್ಮ ಕೆಲಸ.
ಬಪ್ಪದು ಬಿಡುದು ಅದರ ಇಷ್ಟ!
ಮನೆಲಿ ಮೈಲುತೂತು ಮುಗುದಿತ್ತ ಕಾರಣ, ತಪ್ಪ ಲೆಕ್ಕಕ್ಕೆ ಪೇಟಗೆ ಹೆರಟತ್ತು ನಾವು.

ಕೆಮ್ಕಕ್ಕೆ ಹೋಪಲೆ ಪೇಟೆಕರೆಂಗೆ ಬಂದು ಬಸ್ಸಿಂಗೆ ಕಾವಗ ಸಿಕ್ಕಿದ್ದದು ನಮ್ಮ ಬಲ್ನಾಡು ಮಾಣಿ.
ಅಪುರೂಪದ ಮಾಣಿ ಅಪುರೂಪಲ್ಲಿ ಪುತ್ತೂರಿಂಗೆ ಹೆರಟೋನಡ.
ಈಗ ಬಯಂಕರ ಅಂಬೆರ್ಪಿಲಿ ಇದ್ದನಾಡ; ಸಂಸಾರ ತಾಪತ್ರೆ ಇರ್ತನ್ನೇ – ಮದುವೆ ಕಳುದ ಮೇಗೆ ಪುರ್ಸೊತ್ತೇ ಇಲ್ಲೆ!

ಅದಲ್ಲದ್ದೇ, ಮಳೆಂದಾಗಿ ಕರೆಂಟಿಲ್ಲೆ, ಕರೆಂಟಿಲ್ಲದ್ದರೆ ಮೊಬೈಲಿಲಿ ಬೆಟ್ರಿ ಇಲ್ಲೆ ಹೇದು – ತಲೆಬೆಶಿ ಮಾಡಿಂಡಿತ್ತಿದ್ದ.
ತಲೆಬೆಶಿ ಮಾಡ್ಳೆ ತಕ್ಕ ಪುರ್ಸೊತ್ತು ಇದ್ದತ್ತು, ಏಕೇದರೆ, ಬಸ್ಸು ಬಪ್ಪಲೆ ಹೊತ್ತಿತ್ತು – ಅದುದೇ ಮಳೆಂದಾಗಿಯೇ ತಡವಪ್ಪದಿದಾ!

ಹಾಂಗೇ – ಹೀಂಗೇ ಮಾತಾಡುವಾಗ ಪುತ್ತೂರು ದೇವಸ್ಥಾನದ ಸಂಗತಿಯೂ ಬಂತು.
ದೇವಸ್ಥಾನ, ಅಲ್ಲಿ ನೆಡೆತ್ತಾ ಇಪ್ಪ ಜೀರ್ಣೋದ್ಧಾರ ಕಾರ್ಯು, ಊರೂರಿಂದ ಜೆನಂಗೊ ಬಂದು ಮಾಡ್ತ ಶ್ರಮದಾನ, ಕೆಲಸ ಭರಂದ ಸಾಗುತ್ಸು, ಗೆದ್ದೆ-ಗವುಜಿ – ಎಲ್ಲವನ್ನುದೇ ವಿವರ್ಸೆಂಡು ಹೋದ°.
ಎಲ್ಲೋರಿಂಗೂ ಗೊಂತಿಪ್ಪ ಶುದ್ದಿಯೇ ಆದರೂ, ಬೈಲಿಲಿ ಒಂದರಿ ಮಾತಾಡಿಗೊಂಬೊ° – ಹೇದು ಈ ವಾರ ಆ ಶುದ್ದಿಯನ್ನೇ ಮಾತಾಡಿರೆ ಎಂತ?

~

ಇತಿಹಾಸ ಕಾಲದ “ಊರು” ಪುತ್ತೂರಿನ ಅಧಿಪತಿ, ಮಹಾಲಿಂಗೇಶ್ವರ ದೇವರ ಶುದ್ದಿ ನಮ್ಮ ಬೈಲಿಲಿ ಅದಾಗಲೇ ಮಾತಾಡಿದ್ದು.
ದೇವರ ಜಾತ್ರೆ, ಅದರ ಮಾಹಿತಿ, ಪೇಟೆ ಸವಾರಿ, ಅದರ ಚೆಂದ – ಎಲ್ಲವುದೇ ವಿವರ ಕೂಡಿ ಬಯಿಂದು ನಮ್ಮ ಬೈಲಿಲಿ. (https://oppanna.com/oppa/hattooru-kandava-puttur-bida)
ಅದಷ್ಟೇ ಅಲ್ಲದ್ದೆ, ದೇವಸ್ಯ ಮಾಣಿ ಒಂದರಿ ಪುತ್ತೂರುಜಾತ್ರೆಯ ಹಲವು ಪಟಂಗಳನ್ನುದೇ ತೋರ್ಸಿದ್ದ°,
(https://oppanna.com/photo-gallery/puttur-jatre-2012) ನೆಂಪಿದ್ದನ್ನೇ?
ಅದರ ಮೊನ್ನೆ ಬಲ್ನಾಡುಮಾಣಿಗೂ ನೆಂಪುಮಾಡಿದೆ.

ಆ ಪಟಂಗಳಲ್ಲಿ ಕಂಡ ಹಾಂಗೆ ಜಾತ್ರೆ ಸಮಯದ ಧಾಂ-ಧೂಂ ಇಲ್ಲೆ ಈಗ; ಅಂಬಗಾಣ ಚರುಂಬುರಿ, ಜೋಳಪ್ರಿ ಇಲ್ಲೆ, ರಾಟೆ ತೊಟ್ಳು ಇಲ್ಲೆ.
ಈಗ ಇಪ್ಪದು ಬರೇ ಮಣ್ಣ ನೀರು – ಕಿರಿಂಚಿ, ಕಲ್ಲು- ಮರ – ಇಷ್ಟೇ! ಅದರೊಟ್ಟಿಂಗೆ ನೂರಾರುಜೆನ ಕರಸೇವಕರು!! – ಹೇಳಿದ° ಬಲ್ನಾಡುಮಾಣಿ.

ಅಪ್ಪಡ, ಈಗ ಮಹಾಲಿಂಗೇಶ್ವರನ ಸ್ಥಾನದ ಪುನರ್ನಿರ್ಮಾಣ ಕಾರ್ಯ ಆವುತ್ತಾ ಇದ್ದಾಡ.
ಹಳೆ ಮಾಡು, ಕಟ್ಟೋಣ, ಗೋಪುರ ಅಂಗಣಂಗಳ ಗರ್ಪಿ ಹೊಸತ್ತಾದ ನೆಲೆಯ ರಚನೆ ಮಾಡುದು ಈಗಾಣ ಕಾರ್ಯ.
ಸ್ಮಶಾನ ವಾಸಿ ಶಿವಂಗೊಂದು ಹೊಸ ಮನೆ!

~

ಅಷ್ಟಮಂಗಳ ಮಡಗಿದ ಜೋಯಿಶರು ಹೇಳಿದ್ದವಾಡ – ಈ ಬದಲಾವಣೆ ಅಪ್ಪಲೇ ಬೇಕು- ಹೇದು.
ಆದರೆ ಸಾಲ, ಬೇಗ ಆಯೇಕು; ಅಂಬೆರ್ಪಿಲಿ ಆಯೇಕು ಹೇಳಿಯೂ ಹೇಳಿದ್ದವಾಡ.
ಕೆಲಸ ಬೇಗಬೇಗ ನೆಡದರೆ – ಒಂದೋ ಈ ಒರಿಶ ಮುಗಿತ್ತಾಡ, ಅಲ್ಲದ್ದರೆ ಇನ್ನು ನಾಕೊರಿಶ ಆದರೂ ಮುಗಿಯ ಆಡ- ಜೋಯಿಶರ ಪ್ರಶ್ನೆಲಿ ಹಾಂಗೆ ಕಂಡಿದಾಡ!
ಹಾಂಗಾಗಿ, ಈ ಒರಿಶವೇ ಮುಗಿಯೇಕು ಹೇಳ್ತ ಹಠಲ್ಲಿ ಎಲ್ಲೋರುದೇ ಸೇರಿ ಕೆಲಸ ಮಾಡ್ತವು – ಹೇಳಿದ ಬಲ್ನಾಡುಮಾಣಿ.

ಓ ಮೊನ್ನೆ ಒಂದು ಶುಭದಿನ ತಂತ್ರಿಗೊ ಬಂದು – ಕೊಬಳಿಲಿದ್ದ ಮುಗುಳಿ (ಕಲಶವ) ತೆಗೆತ್ತರ ಒಟ್ಟಿಂಗೆ ಜೀರ್ಣೋದ್ಧಾರ ಕಾರ್ಯ ಸುರು ಆಯಿದಾಡ. ಅಲ್ಲಿಂದ ಇನ್ನು ಎಲ್ಲವನ್ನೂ ಗರ್ಪಿ, ಮುದದಿಂದ ಹೊಸತ್ತರ ಕಟ್ಟಿ, ಪುನಾ ಕೊಬಳು ಏರ್ಸಿ – ಬ್ರಹ್ಮಕಲಶ ಒರೆಂಗೂ – ನಿತ್ಯವೂ ಎಡೆಬಿಡದ್ದೆ ಕೆಲಸ ಅಡ.
ಇಪ್ಪದರ ಗರ್ಪುದು, ಹೊಸತ್ತರ ಕಟ್ಟುದು, ಮನಾರ ಮಾಡುದು – ಎಲ್ಲವುದೇ ಆತು ಅದರ್ಲಿ.
ದೇವರ ಕೆಲಸವ ದೇವರೇ ಮಾಡೇಕು ಹೇಳುದು ಊರ್ಜಿತವೋ? ಅಲ್ಲ. ನಮ್ಮ ಕೆಲಸಂಗಳ ದೇವರು ಮಾಡಿಕೊಡ್ತ ಕಾರಣ ದೇವರ ಕೆಲಸಂಗಳ ನಾವೇ ಮಾಡೇಕು. ಸೇವೆ ಹೇಳುಸ್ಸು ಅದರ. ಸೀಮೆ ದೇವರಾದ ಮಹಾಲಿಂಗೇಶ್ವರಂಗೂ ಊರು-ಪರ ಊರಿನ ಜೆನಂಗೊ ಸೇವೆ ಮಾಡಿಯೇ ಅಪ್ಪದು. ಹಾಂಗಾಗಿ, ಅವನ ಭಕ್ತ ಜೆನಂಗೊ ಎಲ್ಲೋರುದೇ ಗುಂಪುಗುಂಪಾಗಿ ಬಂದು ಕರಸೇವೆ ಮಾಡುವ ಮೂಲಕ ಕೆಲಸ ಕಾರ್ಯಂಗೊ ಅಪ್ಪದಾಡ.

ಎಲ್ಲೋರುದೇ ಒಂದೇ ದಿನ ಬಂದು ವೆವಸ್ತೆಗೆ ಬಂಙ ಅಪ್ಪದಕ್ಕೆ ಹಾಂಗಾಗಿ ಒಂದು ರಿಜಿಸ್ತ್ರಿ ಮಡಿಕ್ಕೊಂಡಿದವಾಡ,
ಯೇವ ಜೆನ ಯೇವ ದಿನ ಬಂದು ಕರಸೇವೆ ಮಾಡುಸ್ಸು – ಹೇದು ಮದಲೇ ಹೆಸರು ಕೊಟ್ಟು ಬರೆಶಿಗೊಂಡು ಸೇವೆಗೆ ಹೋದರೆ ಅಲ್ಯಾಣ ಆಡಳ್ತೆಯೋರಿಂಗೆ ವಿಲೇವಾರಿ-ವೆವಸ್ತೆಗೊಕ್ಕೆ ಸುಲಾಬ ಇದಾ!
ಈಗಾಗಲೇ ಹಲವಾರು ಸಂಘ-ಸಂಸ್ಥೆಗೊ ಒಟ್ಟಾಗಿ ಬಂದು ಕೆಲಸ ಮಾಡಿದ್ದವಾಡ.
ಶಾಲೆ ಮಕ್ಕಳಿಂದ ಹಿಡುದು, ಎಪ್ಪತ್ತು-ಎಂಭತ್ತೊರಿಶದ ಅಜ್ಜಂದ್ರ ಒರೆಂಗೆ ಎಲ್ಲೋರುದೇ ಕೆಲಸ ಮಾಡುದೇ.
ಕೆಲಸ ಎಂತರ?
ಒಂದೋ ಕಲ್ಲು ಹೊರುದು, ಅಲ್ಲದ್ದರೆ ಮಣ್ಣು ಎಳವದು, ಅಲ್ಲದ್ದರೆ ಮರ ಸಾಗುಸುದು – ಎಂತ ಕಾರ್ಯ ಆಯೆಕ್ಕಾಯಿದೋ, ಯೇವದು ಕಾಣ್ತೋ – ಅದು.
ಎಲ್ಲವೂ ಸಮಾನ, ಎಲ್ಲವೂ ಸೇವೆಯೇ.
ಭರಂದ ಸಾಗುತ್ತ ಕಾರ್ಯ ಈಗ ಮಳೆಗೂ ಏನೂ ನಿಧಾನ ಆಯಿದಿಲ್ಲೇಡ.
ಚೋರು, ಕಿರಿಂಚಿ ಜೋರಿದ್ದರೂ ಜೆನಂಗಳ ಉತ್ಸಾಹ ಹಾಂಗೇ ಇದ್ದಾಡ.

~

ಪುತ್ತೂರು ದೇವಸ್ಥಾನದ ಎದುರು ಕರಸೇವಕರ ಸೇವೆ

ಇದರೆಡಕ್ಕಿಲಿ ಬ್ರಹ್ಮಕಲಶ ಅಪ್ಪನ್ನಾರ- ಆ ಕೆಲಸಂಗಳ ಎಡಕ್ಕಿಲಿ ಪೂಜೆ-ವಿನಿಯೋಗಂಗೊಕ್ಕೆ ಸಮಯ ವಿತ್ಯಾಸ ಮಾಡಿದ್ದವಾಡ ದೇವಸ್ಥಾನದೋರು.  ಉದೆಕಾಲ ಆರುಗಂಟೆಗೆ ನಿರ್ಮಾಲ್ಯ, ಏಳುಗಂಟೆಗೆ ಉದಿಯಪ್ಪಗಾಣ ಪೂಜೆ, ಎಂಟುಗಂಟೆಗೆ ಮಜ್ಜಾನದ ಪೂಜೆ! ಬೋಚಬಾವ ಏಳುಲಪ್ಪಗ ಪುತ್ತೂರಿಲಿ ಮಧ್ಯಾನ ಕಳುದಿರ್ತು!!

ಹೊತ್ತೋಪಗ ಬಂದು ಪುನಾ ಬಾಗಿಲುತೆಗೆತ್ಸು, ಇರುಳಿರುಳಪ್ಪದ್ದೇ ಇರುಳಾಣ ಪೂಜೆಯೂ ಕಳಿತ್ತು.
ಕೆಲಸ ಕಾರ್ಯಂಗಳ ಒಟ್ಟಿಂಗೇ ಕ್ರಮಾಗತ ಮೂರೊತ್ತು ಪೂಜೆಯನ್ನೂ ಜೋಡುಸಿಗೊಂಡು ಹೋಪದು ತುಂಬಾ ಮುಖ್ಯ ಇದಾ – ಹೇಳಿದ° ಬಲ್ನಾಡುಮಾಣಿ.
ಅದೂ ಅಲ್ಲದ್ದೆ ನಿತ್ಯ ಅಗವ ಕಾರ್ಯಲ್ಲಿ ಹಲವು ಅಪರೂಪದ ಸಂಗತಿಗಳೂ ಕಾಂಬಲೆ ಸಿಕ್ಕುತ್ತಡ್ಡ. ಹಳೆ ಶಾಸನಂಗ, ಪ್ರಭಾವಳಿಗ ಇನ್ನೆಂತದೋ ಎಲ್ಲ ಸಿಕ್ಕಿದ್ದು, ಅದರ ಜೋಪಾನ ಮಾಡಿ ಕರೆಂಗೆ ಮಡಗಿ, ಅದರ ಬಗ್ಗೆ ತಿಳುದೋರು ಅಧ್ಯಯನ ಮಾಡಿ ಅದರ ಪೂರ್ವಾಪರಂಗಳ ಹೇಳ್ತವು – ಹೇಳಿದ° ಬಲ್ನಾಡು ಮಾಣಿ. ಚೆಲ, ನಿನಗೆ ಹೇಂಗೆ ಇಷ್ಟೆಲ್ಲ ವಿವರ ಗೊಂತಿಪ್ಪದು – ಕೇಟೆ. ಮತ್ತೆ ನೋಡಿರೆ ನಮ್ಮ ಪುಂಡಿತ್ತೂರುಭಾವ° ಅಲ್ಯಾಣ ಯೇವದೋ ಜೆವಾಬ್ದಾರಿಲಿ ಇದ್ದವಾಡ!

ಆಗಲಿ, ಒಳ್ಳೆ ಕೆಲಸ. ದೇವರು ಮೆಚ್ಚುವ ಕೆಲಸ – ಹೇಳಿದೆ.
ಅಷ್ಟಪ್ಪಗಳೇ ಬಸ್ಸು ಬಂತು. ಬಸ್ಸಿಲಿ ಗೊಂತಿದ್ದನ್ನೇ – ಮಳೆಗಾಲದ ರಶ್ಶು. ಮತ್ತೆ ಮಾತಾಡ್ಳಾತಿಲ್ಲೆ; ಇಳಿವಲಪ್ಪಗ ಟಾಟ ಮಾಡಿದ್ದೇ ಸರಿ. ಅಲ್ಲದ್ದರೆ ಇನ್ನೂ ಹಲವು ವಿಷಯಂಗಳ ಹೇಳ್ತಿತನೋ ಏನೋ!

~

ಪುತ್ತೂರಿಲಿ ಆವುತ್ತ ಮಹಾ ಕಾರ್ಯ ನಮ್ಮ ಇತಿಹಾಸದ ದೃಷ್ಟಿಲಿ ನೋಡಿರೆ ಹೊಸತ್ತಲ್ಲ.
ಕಾಲಕಾಲಕ್ಕೆ ಯೇವಯೇವದು ಆಯೇಕಾದ್ಸೋ, ಅದರ ದೇವರೇ ಮಾಡುಸಿಗೊಳ್ತ ಹೇಳ್ತ ಉದಾಹರಣೆ ಅಷ್ಟೆ.
ಇತಿಹಾಸಲ್ಲಿ ಎಷ್ಟೋ ಸರ್ತಿ ಈ ದೇವಸ್ಥಾನ ಜೀರ್ಣೋದ್ಧಾರ ಆಗಿಕ್ಕು, ಈಗ ಮತ್ತೊಂದರಿ ಆವುತ್ತಾ ಇದ್ದು; ಇನ್ನುಮುಂದೆಯೂ ಅಕ್ಕು.
ಮನೆ ಹೊಸತ್ತಕ್ಕು, ಅಂಗಣಕ್ಕೆ ಹೊಸ ಕಲ್ಲುಗೊ ಹಾಸುಗು, ಕೊಬಳು ಹೊಸತ್ತಕ್ಕು, ಆದರೆ ಒಳ ಶೆಗ್ತಿ ಇಪ್ಪ ಆ ಲಿಂಗ ಅದುವೇ ಅಲ್ಲದೋ? ಎಷ್ಟೋ ಸಾವಿರ ಒರಿಶಂದ ಶಿವನ ಮಹಾತೇಜಸ್ಸು ಆ ಕಲ್ಲಿಲೇ ಪ್ರಾಣಪ್ರತಿಷ್ಠೆ ಆಗಿ ಇದ್ದಲ್ಲದೋ!
ಅಂಗಿ ಬದಲಿರೂ ದೇಹ ಅದುವೇ ಅಲ್ಲದೋ? ದೇಹ ಬದಲಿರೂ ಆತ್ಮ ಅದುವೇ ಅಲ್ಲದೋ?
ಹಾಂಗೇ, ಈ ಜೀರ್ಣೋದ್ಧಾರವೂ ಮತ್ತೊಂದು ಹಂತ.
ಈ ತಲೆಮಾರಿನೋರಿಂಗೆ ಸಿಕ್ಕಿದ ಮಹಾಪುಣ್ಯ ಕಾರ್ಯ ಹೇಳ್ತರಲ್ಲಿ ಸಂಶಯ ಇಲ್ಲೆ.

ಅಂದು ಶಂಬಜ್ಜ ಹೇಳಿಗೊಂಡಿದ್ದದು ನೆಂಪಾತು.
ಒಂದು ಊರಿನ ದೇವಸ್ಥಾನ ಹಡಿಲು ಬಿದ್ದತ್ತು ಹೇಳಿ ಆದರೆ, ಅದು ಜೀರ್ಣಾವಸ್ಥೆಲಿ ಇದ್ದು ಹೇಳಿ ಆದರೆ ಆ ಊರಿಲಿ ಇಪ್ಪೋರುದೇ ಜೀರ್ಣಾವಸ್ಥೆಲಿ ಇದ್ದವು ಹೇಳಿ ಅರ್ಥ ಆಡ.
ಒಂದು ಊರ ದೇವಸ್ಥಾನ ಆ ಊರಿನೋರ ಆಸ್ಥೆಯ, ಊರಿನೋರ ಆರ್ಥಿಕ ಸುಭದ್ರತೆಯ ತೋರುಸುತ್ತಾಡ. ಮದಲಿಂಗೆ ಹಲವಾರು ದೇವಸ್ಥಾನಂಗೊ ಕಾಲನ ಅಡಿಲಿ ಬಿದ್ದು, ವಿನಿಯೋಗ ಇಲ್ಲದ್ದೆ ಮಣ್ಣಾಗಿ ಹೋಯಿದಾಡ.
ಆ ದೇವಸ್ಥಾನ ಮಾಂತ್ರ ಮಣ್ಣಾದ್ದಲ್ಲ, ಆ ಊರುದೇ ಮಣ್ಣಾಗಿ ಹೋಯಿದು. ಕುರುಹೇ ಇಲ್ಲದ್ದಷ್ಟು ಹಡಿಲು ಬಿದ್ದು ಹೋಯಿದು.
ಕೆಲವು ಕಾಡುಗಳ ಗರ್ಪುವಗ, ಮರ ಕಡಿವಗ ಅಡಿಲಿ ಕೆಲವು ಮೂರ್ತಿಗೊ,ಪಾಯದ ಕಲ್ಲುಗೊ ಎಲ್ಲ ಸಿಕ್ಕುತ್ತು.
ನಾಡಿನ ಶ್ರದ್ಧಾಕೇಂದ್ರ ಆದ ದೇವಾಲಯ ಇತಿಶ್ರೀ ಆಯಿದು, ಅದರೊಟ್ಟಿಂಗೇ ಆ ನಾಡುದೇ ಮುಳುಗಿ ಕಾಡು ಬೆಳದ್ದು – ಹೇಳ್ತದರ ನಿದರ್ಶನ.

ದೇವಸ್ಥಾನಂಗೊ ಹೇದರೆ ಮದಲಿಂಗೆ ದೇವರ ಪೂಜೆ ಮಾಂತ್ರ ನೆಡಕ್ಕೊಂಡಿದ್ದ ಜಾಗೆ ಅಲ್ಲ.
ತಗಾದೆಗಳ ಇತ್ಯರ್ಥಮಾಡುವ ಧರ್ಮಕೇಂದ್ರಂಗೊ ಆಗಿದ್ದತ್ತು.  ಎಷ್ಟೋ ಜಗಳಂಗೊ ದೇವರ ಮುಂದೆ ಪರಿಹಾರ ಆಯಿದೋ ಏನೋ. ಅಶಕ್ತರಿಂಗೆ ಸಕಾಯ ಮಾಡ್ತ ಬೇಂಕು ಆಗಿದ್ದತ್ತು. ಯಾತ್ರಿಕರಿಂಗೆ ನೆಮ್ಮದಿಲಿ ಮನುಗಲೆಡಿವ ಛತ್ರ ಆಗಿದ್ದತ್ತು. ಹಶು ಆದೋನಿಂಗೆ ಪ್ರಸಾದ ಉಂಬ ಕಾಮಧೇನು ಆಗಿದ್ದತ್ತು. ಅದಕ್ಕೇ ಶಂಬಜ್ಜ ಹೇಳಿಗೊಂಡಿದ್ದದು – ಒಂದು ಊರ ದೇವಸ್ಥಾನ ಹೇದರೆ ಆ ಊರಿನೋರ ಪ್ರತಿಬಿಂಬ – ಹೇದು.

~
ಮೊನ್ನೆ ಇತ್ಲಾಗಿ ದೊಡ್ಡಜ್ಜನ ಮನೆ ನೆರೆಕರೆಲಿ ಒಂದು ದೇವಸ್ಥಾನದ ಜೀರ್ಣೋದ್ಧಾರ ಆತು.
ದೇವಸ್ಥಾನ ಸಣ್ಣದಾದರೂ – ದೇವರು ಒಂದೇ ನಮುನೆ ಇದಾ.
ಗರ್ಭಗುಡಿ, ಗೋಪುರ, ಬಲಿಕ್ಕಲ್ಲು, ಕಾಂಪೌಂಡು – ಎಲ್ಲ ಆಗಿ, ಹೊಸ ದೇವಸ್ಥಾನಲ್ಲಿ ಪೂಜೆ ಸುರುಅಪ್ಪನ್ನಾರವೂ ದೊಡ್ಡಜ್ಜಂಗೆ ಸಮಗಟ್ಟು ಒರಕ್ಕಿಲ್ಲೆ ಇದಾ! ಮನೆಯ ಜೆಂಬ್ರಂದಲೂ ಆಸ್ಥೆಲಿ ಮಾಡಿದ್ದವು; ಹೊತ್ತಿಂಗೆ ಸರಿಯಾಗಿ ಉಂಬಲೂ ಬಂದುಗೊಂಡಿತ್ತವಿಲ್ಲೆ- ಹೇದು ದೊಡ್ಡಜ್ಜಿ ಅಭಿಮಾನಲ್ಲಿ ಪರಂಚುಗು ಒಂದೊಂದರಿ.
ಬ್ರಮ್ಮಕಲಶಕ್ಕೆ ಹೋಪಲಾತಿಲ್ಲೆ, ಮತ್ತಾಣಸರ್ತಿ ಒಂದರಿ ಅಂತೇ – ಎಡೆಹೊತ್ತಿಲಿ ಹೋಗಿ ಪ್ರಸಾದ ತೆಕ್ಕೊಂಡು ಬಂದಿತ್ತಿದ್ದೆ.
ಅದಿರಳಿ,

~

ಈಗ ನೆಡೆತ್ತಾ ಇಪ್ಪ – ಪುತ್ತೂರಿನ ಸೀಮಾಧೀಶ್ವರನ ಕೆಲಸಕ್ಕೆ ಹಲವಾರು ನೆರೆಕರೆಯೋರು ಕೈಜೋಡುಸುತ್ತವಾಡ. ಧರ್ಮ, ಜಾತಿ, ನೀತಿ – ಎಲ್ಲದಕ್ಕೂ ಮೀರಿದ – ಊರಿಂಗೋಸ್ಕರ, ಲೋಕಕ್ಕೋಸ್ಕರ ಇಪ್ಪ ಪುಣ್ಯಕಾರ್ಯ ಅದು.
ಮಹಾಲಿಂಗೇಶ್ವರನ ಸೇವಾ ಕೈಂಕರ್ಯರ್ಯ ಅದು.
ಜೀವಮಾನಲ್ಲಿ, ಅಲ್ಲ, ಶತಮಾನಲ್ಲಿ ಒಂದರಿಯೂ ಸಿಕ್ಕದ್ದ ಅಭೂತಪೂರ್ವ ಅವಕಾಶ ಇದು.
ನಾವೆಲ್ಲೋರುದೇ ಎಡಿಗಾಷ್ಟು ಸೇವೆ ಮಾಡುವೊ. ಅಲ್ಲದೋ?
ಪೈಸೆ ದಾನ ಮಾಡ್ತದು ದೊಡ್ಡ ಸಂಗತಿ ಅಲ್ಲ, ನಮ್ಮ ಲೆಕ್ಕದ ಶ್ರಮವನ್ನೇ ಮಹಾಲಿಂಗೇಶ್ವರನ ಹೊಸಮನೆ ಕಟ್ಳೆ ದಾನ ಮಾಡಿರೆ ಅದರಷ್ಟು ದೊಡ್ಡ ಹೆಮ್ಮೆ ಬೇರೆ ಇಲ್ಲೆ!
ಎಂತ ಹೇಳ್ತಿ?

ಒಂದೊಪ್ಪ: ಮನಸ್ಸಿನ ನೆಮ್ಮದಿಗಾಗಿ ದೇವರಿಪ್ಪದು; ಊರ ನೆಮ್ಮದಿಗಾಗಿ ದೇವಸ್ಥಾನ ಇಪ್ಪದು.

ಸೂ:

  • ಪಟಂಗೊ ಮೋರೆಪುಟಲ್ಲಿ ಸಿಕ್ಕಿದ್ದು.
  • ದೇವಾಲಯದ ಬೈಲು: (ಸಂಕೊಲೆ)
  • ಮಹಾಲಿಂಗೇಶ್ವರನ ಕರಸೇವೆಗೆ ನಮ್ಮ ನೆರೆಕರೆಂದಲೂ ಹೋಪನೋ? ಆರಿಂಗೆಲ್ಲ ಪುರುಸೊತ್ತಕ್ಕು?
  • ನಾಳೆ ಶನಿವಾರ ಎಂಟನೇ ತಾರೀಕಿಂಗೆ ನಮ್ಮ ಮಾತೃಶಾಖೆ ಮತ್ತೆ ಕೆಲವು ಮಹಿಳಾ ಸಂಘಟನೆಗೊ ಸೇರಿಗೊಂಡು ಸವಿತತ್ತೆಯ ನೇತೃತ್ವಲ್ಲಿ ಕರಸೇವೆ ಮಾಡುತ್ತವಡ. ನಮ್ಮ ಬೈಲಿನ ಹೆಮ್ಮಕ್ಕಳೂ ಕೈಜೋಡ್ಸಿಗೊಂಬ ಅವಕಾಶ ಮಾಡಿಗೊಂಬಲಕ್ಕು.

12 thoughts on ““ಜೀರ್ಣ” ದೇವಸ್ಥಾನ “ಉದ್ಧಾರ” ಆಗದ್ದರೆ – ಊರೇ ಜೀರ್ಣ ಅಕ್ಕಡ!!

  1. ಒಂದು ಊರಿನ ದೇವಸ್ಥಾನ ಹಡಿಲು ಬಿದ್ದತ್ತು ಹೇಳಿ ಆದರೆ, ಅದು ಜೀರ್ಣಾವಸ್ಥೆಲಿ ಇದ್ದು ಹೇಳಿ ಆದರೆ ಆ ಊರಿಲಿ ಇಪ್ಪೋರುದೇ ಜೀರ್ಣಾವಸ್ಥೆಲಿ ಇದ್ದವು ಹೇಳಿ ಅರ್ಥ ಆಡ.

    ಅದಕ್ಕೇ ಶಂಬಜ್ಜ ಹೇಳಿಗೊಂಡಿದ್ದದು – ಒಂದು ಊರ ದೇವಸ್ಥಾನ ಹೇದರೆ ಆ ಊರಿನೋರ ಪ್ರತಿಬಿಂಬ – ಹೇದು.

    ಶಂಭಜ್ಜನ ಅನುಭವದ, ಅರಿವಿನ ಮಾತುಗಳ ಒಪ್ಪಲೇಬೇಕು.
    ಶುದ್ದಿ ಏವಗಾನ ಹಾಂಗೆ ಒಪ್ಪ ಆಯ್ದು. ನಮ್ಮ ದೇವಸ್ಥಾನಂಗೊ, ಊರುಗೊ,ಮನೆಗೊ, ಮನಸ್ಸುಗೊ, ಕ್ರಮಂಗೊ ಎಲ್ಲದರದ್ದೂ ಜೀರ್ಣೋದ್ಧಾರ ಆಯಕಾದ ಅಗತ್ಯ ಇದ್ದು 🙂

  2. ಶುದ್ಧಿ ಲಾಯಿಕ ಆಯಿದು.ಹತ್ತೂರು ತಿರುಗಿದರೂ ಪುತ್ತೂರು ಮರೆಯ ಹೇಳುವ ಗಾದೆ ಅಜ್ಜಂದ್ರು ಹೇಳಿದ್ದು ನೆಂಪು ಇದ್ದು.ಪುತ್ತೂರು ಬೆಡಿ ನೋಡ್ಲೆ ಎಷ್ಟೋ ದೂರಂದ ಜೆನಂಗ ಬಂದು ನೋಡಿಕ್ಕಿ ಹೋಕ್ಕು.ಅಂತಹಾ ದೇವರ ಸೇವೆ ಮಾಡಲೇ ನವಗೆ ಅವಕಾಶ ಇದ್ದು.ಎಲ್ಲಾರೂ ಕೈ ಜೋಡ್ಸುವ…ಹರೇರಾಮ….

  3. ಒಪ್ಪಣ್ಣಾ,
    ಶುದ್ದಿಯ ವಿಶಯ ಅಲೋಚನೆ ಮಾಡೆಕ್ಕಾದ್ದೇ.
    ಶ್ರದ್ಧಾಕೇಂದ್ರಂಗಳೇ ಸರಿ ಇಲ್ಲದ್ದ ಊರಿಲ್ಲಿ, ಜೆನಂಗೊ ಮಾಡ್ತ ಕೆಲಸಲ್ಲಿಯೂ ಶ್ರದ್ಧೆಯ ನಿರೀಕ್ಷೆ ಸಾದ್ಯ ಇದ್ದೋ?
    [ದೇವಸ್ಥಾನ ಮಾಂತ್ರ ಮಣ್ಣಾದ್ದಲ್ಲ, ಆ ಊರುದೇ ಮಣ್ಣಾಗಿ ಹೋಯಿದು]-ಇದು ಎಷ್ಟೋ ದಿಕೆ ಕಂಡ ಸತ್ಯ.

  4. ಲಾಯ್ಕಾಯ್ದು ಒಪ್ಪಣ್ಣಾ!! ಸೇವೆಗೆ ಕರೆ ಕೊಟ್ಟದು ಒಳ್ಲೆದಾತು…ನಾವುದೆ ಸೇವೆಲಿ ಕೈಜೋಡ್ಸುವ…

  5. ಜೀರ್ಣೋದ್ದಾರ ಕಾರ್ಯಲ್ಲಿ ಊರಿನವು ಕರ ಸೇವೆ ರೂಪಲ್ಲಿಯುದೆ ಸಹಕಾರ ಕೊಟ್ಟದು ಕೇಳಿ ಕೊಶಿ ಆತು. ಲೋಕಕ್ಕೆ ಇದೊಂದು ಮಾದರಿಯಾಗಲಿ. ಸ್ಮಶಾನ ವಾಸಿ ಶಿವಂಗೊಂದು ಹೊಸ ಮನೆ ಹೇಳುವ ಪ್ರಯೋಗ ಲಾಯಕಾಯಿದು.

  6. ಜೀರ್ಣೋದ್ಧಾರ ದೇವಸ್ಥಾನಕ್ಕೆ ಬೇಕು.ಜೀರ್ಣವಾದ ಶರೀರಕ್ಕೂ ಕಾಲಕಾಲಕ್ಕೆ ಅನುಪಾನ ಆರೈಕೆಗೊ ಬೇಕು. ಜೀರ್ಣವಾದ[ಕ್ಷೀಣವಾದ] ಮನಸ್ಸಿಂಗೂ ಭಕ್ತಿ ಭಾವದ ಆಸರೆ ಬೇಕು!ಮನೆಗೊಕ್ಕೂ ಹೀಂಗೆ ಕೆಲವು ವರ್ಷಕ್ಕೊಮ್ಮೆ ವಾಸ್ತು ಪೂಜೆ ಆಯೆಕ್ಕು ಹೇಳಿ ಕೇಳಿದ್ದೆ.ಇರಲಿ.
    ಲೇಖನ ಲಾಯ್ಕ ಆಯಿದು.
    ಪುತ್ತೂರಿಲಿ ಮಾಡಿದ್ದು ಉಳಿದ ಊರುಗೊಕ್ಕೂ ಮಾದರಿ ಆಗಲಿ.
    ಅಲ್ಲೇ ಹತ್ತರೆ ವಿಟ್ಲಲ್ಲೂ ದೇವಸ್ಥಾನದ ಜೀರ್ಣೋದ್ಧಾರ ಆಯೆಕ್ಕಡ.ಆ ಶಿವಂಗೂ ಸರಿಯಾದ ದೇಗುಲ ಆಗಲಿ.ಸೀಮೆಗೆ ಒಳ್ಳೆದಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×