Oppanna.com

ಅಡ್ಡ, ಪಕ್ಕಾಸು, ಬಾಜಿರ, ಬೆರ್ತೋಳು…

ಬರದೋರು :   ಒಪ್ಪಣ್ಣ    on   14/09/2012    36 ಒಪ್ಪಂಗೊ

ಅಬ್ಬಾ! ಜೀವನವೇ ಒಂದು ರಾಮಕಥೆ.
ಮುಗಿವಲೇ ಇಲ್ಲೆಪ್ಪೋ – ಒಂದರಿ ಮುಗಾತು ಹೇದು ಕಂಡ್ರೂ – ಮತ್ತೊಂದರಿ ಸುರು ಆವುತ್ತು; ಹೊಸ ಅಧ್ಯಾಯ.
ಮಾತಾಡಿಗೊಂಡಿದ್ದ ಹಾಂಗೇ ಒಂದರಿಯಾಣ ರಾಮಕಥೆ ಮುಗಾತಡ; ಎಡಪ್ಪಾಡಿಬಾವ° ಸ್ವಸ್ಥಕ್ಕೆ ಕೂದುಗೊಂಡು ಹೇಳಿದ°.
ಸಾವಿರಾರು ಜೆನಂಗೊ ಅದರ ನೋಡಿ ಪಾವನರಾಯಿದವಾಡ. ಡೈಮಂಡುಬಾವ ಹೋಗಿತ್ತಿದ್ದನಾಡ; ಮನಗೆ ಬಂದಕೂಡ್ಳೇ ಇರುಳಿಂದಿರುಳೇ ಬೈಲಿಂಗೆ ಶುದ್ದಿ ಹೇಳಿದ್ದನಾಡ. (ಸಂಕೊಲೆ)
ಅದಿರಳಿ.
~

ಸೋಣೆಮಳೆ ಎಡಕ್ಕಿಲಿ ಬೇರೆಂತೂ ಮಾಡ್ಳೆಡಿಯದ್ರೂ – ಜೆಗಿಲಿಲಿ ಕೂದು ಮಾತಾಡಿ ಹೊತ್ತುಕಳವಲೆ ಎಂತಾಯೇಕು; ಅಲ್ಲದೋ?
ಆರಾರಲ್ಲಿ ಮದ್ದು ಬಿಟ್ಟಾಯಿದು? ಆರಾರಲ್ಲಿ ಕೊಳೆರೋಗ ಹೇಂಗಿದ್ದು – ಹೇಳ್ತದೇ ಈಗಾಣ ಪ್ರಸಕ್ತ ಒರ್ತಮಾನ.
ಮನ್ನೆ ಹೀಂಗೇ ಮಾತಾಡ್ತ ಏರ್ಪಾಡಿಲಿ ಮಜ್ಜಾನ ಉಂಡಿಕ್ಕಿ – ಮಾಷ್ಟ್ರುಮಾವನ ಮನೆಗೆ ಹೋಗಿಪ್ಪಾಗ – ಆಚಮನೆ ದೊಡ್ಡಣ್ಣ ಅಲ್ಲಿತ್ತಿದ್ದ°. ಬೈಲಕರೆ ಅಂಗುಡಿಂದ ಪೋಷ್ಟು ಕಾಗತ ತಂದುಕೊಡ್ಳೆ ಬಂದೋನು.
ಹೀಂಗೇ ಹೊತ್ತು ಕಳೆತ್ತ ಮಾತುಕತೆ ಆತು; ಯೇವತ್ರಾಣಂತೆ. ರಜ ಹೊತ್ತು ಮಾತಾಡಿ ಅಪ್ಪಗ ಮಾಷ್ಟ್ರುಮಾವಂಗೆ ಅಲ್ಲಿಗೇ ಒರಕ್ಕು ಬಯಿಂದೋ ಸಂಶಯ. ಕಳಲ್ಲಿ ಎಂಗಳೇ ಬಾಕಿ.

ಮಾಷ್ಟ್ರುಮಾವನ ಮನಗೆ ಈಗ ಆಚಾರಿ ಬಯಿಂದು; ಸಣ್ಣ ಒಂದು ಕಪಾಟು ಮಾಡ್ಳೆಡ.
ಚಿನ್ನ, ಪೈಶೆ ತುಂಬುಸಿ ಮಡಗುತ್ತ ಹಾಂಗಿರ್ಸ ದೊಡ್ಡ ಕವಾಟಲ್ಲ ಅಲ್ಲ; ಗೊಂಡೆ ಹಾಕಿದ ಸೀರೆ, ಇಸ್ತ್ರಿಹಾಕಿದ ಒಸ್ತ್ರ ತುಂಬುಸುತ್ತ ನಮುನೆದು. ಆಚಾರಿಗೆ ಉಂಡಿಕ್ಕಿ ಮನುಗುವ ಹೊತ್ತು; ಎಂಗೊಗೆ ಉಂಡಿಕ್ಕಿ ಪಟ್ಟಾಂಗ ಹಾಕುವ ಹೊತ್ತು.
ಒಪ್ಪಣ್ಣ ಬೈರಾಸು ಸುತ್ತುವ ಕಾಲಲ್ಲೇ ಆ ಆಚಾರಿ ನಮ್ಮ ಗುರ್ತದ್ದೇ; ಮತ್ತೆ ಈಗ ಮಾತಾಡ್ಸುತ್ತರಲ್ಲಿ ಎಂತ ಗುರ್ತ ನೋಡ್ಳಿದ್ದು – ಅಲ್ಲದೋ? ಒರಕ್ಕಿಂದ ಏಳುಸಿ ಮಾತಾಡ್ತದು ನಮ್ಮ ಕ್ರಮ ಇದಾ; ಆಚಾರಿಗೂ ಅದನ್ನೇ ಅನ್ವಯ ಮಾಡಿತ್ತು. ದೊಡ್ಡಣ್ಣಂಗೂ ಮಾತಾಡ್ಸುಸ್ಸು ಹೇದರೆ ಕೊಶಿಯೇ.
ಮಾತು ಸುರು.

ಆಚಾರಿಯ ಹತ್ತರೆ ಮಾತಾಡುವಗ ಬೇರೆಂತ ವಿಷಯ ಬಕ್ಕು? ಮರಮಟ್ಟುಗಳದ್ದೇ ಬಕ್ಕಷ್ಟೆ. ಅದನ್ನೇ ಮಾತಾಡಿದ್ದು.
ಮಾತು ಮುಗುದು, ಆಚಾರಿ ಪುನಾ ಉಳಿ ಹಿಡಿವ ಮದಲು ನಮ್ಮ ಹಳೆಕಾಲದ ಮನೆಗಳ ಸುಮಾರು “ಮರಮಟ್ಟುಗಳ” ಪಟ್ಟಿ ಆಗಿದ್ದತ್ತು.
ಆಚಾರಿ ನೆಂಪುಮಾಡಿದ್ದರ ದೊಡ್ಡಣ್ಣ ವಿವರುಸಿದ°; ದೊಡ್ಡಣ್ಣ ಹೇಳಿದ್ದರ ಅಚಾರಿ ವಿವರುಸಿತ್ತು – ಇಬ್ರಿಂಗೂ ಗೊಂತಿಪ್ಪದು ಒಪ್ಪಣ್ಣಂಗೂ ಗೊಂತಿತ್ತು. ಒಟ್ಟಾಗಿ ಬೈಲಿಂಗೆ ಈವಾರ ಅದನ್ನೇ ಶುದ್ದಿಯಾಗಿ ಹೇಳಿರೆಂತ?!

~

ಆಚಕರೆ ತರವಾಡುಮನೆ ಹೇದರೆ ಎರಡು ಅಂತಸ್ತಿನ ಮನೆ ಇದಾ – ಹಲವಾರು ನಮುನೆ ಮರಂಗೊ ಆ ಮನೆಲಿದ್ದು!
ಮನೆಯೊಳ ಎಷ್ಟೆಷ್ಟು ರಚನೆಗೊ – ಎಷ್ಟೆಷ್ಟು ವೈವಿಧ್ಯಂಗೊ!
ನಮ್ಮೂರಿನ ಹಳೆಕಾಲದ ಮನೆಗಳ ರಚನೆ ಹೇಂಗಿರ್ತೋ – ಹಾಂಗಿಪ್ಪ ಮನೆ ಅದು.
ಆ ಮನೆಯ ಉದಾಹರಣೆಯಾಗಿ ತೆಕ್ಕೊಂಡ್ರೆ ಒಪ್ಪಣ್ಣಂಗೆ ಶುದ್ದಿ ವಿವರುಸಲೆ ಎಳ್ಪ ಅಕ್ಕು ಇದಾ!
ತರವಾಡು ಮನೆಲಿ ಮರಂಗೊ ಎಂತೆಲ್ಲ, ಎಲ್ಲೆಲ್ಲ ಆಗಿದ್ದು – ಹೇಳ್ತರ ಮಾತಾಡಿದ್ದು ದೊಡ್ಡಣ್ಣಂದೇ ಆಚಾರಿದೇ.
ಒಪ್ಪಣ್ಣ ಕೇಳಿಗೊಂಡದು! ನಮ್ಮೂರಿನ ಮನೆಗಳಲ್ಲಿಪ್ಪ ಮರಮಟ್ಟಿನ ಪಟ್ಟಿ ಇದು.
ಪಟ್ಟಿಲಿ ಬಿಟ್ಟು ಹೋದ್ಸು ತುಂಬ ಇಕ್ಕು, ನಿಂಗೊಗೆ ಬೇರೆ ಯೇವದಾರು ಕಂಡಿದ್ದಿದ್ದರೆ ನೆಂಪುಮಾಡಿ, ಆತೋ?!
~

ಹಳೆಕಾಲದ ಅಂತಸ್ತು ಮನೆಗಳಲ್ಲಿ ಸಾಮಾನ್ಯವಾಗಿ ಮೂರು ಹಂತಂಗೊ ಇರ್ತು.
ಆಯದ ಪಾಯದ ಮೇಗೆ ನಿಂದ ಆವರಣವೇ ಗೋಡೆ.
ಗೋಡೆಯನ್ನೂ ಒಳಗೊಂಡು, ಅದರೊಳದಿಕೆ ಹಲವು ಕೋಣೆಗೊ, ಜೆಗಿಲಿಗೊ, ಚಾವಡಿಗೊ – ಎಲ್ಲವೂ ಒಟ್ಟಾಗಿ ಉಂಟಪ್ಪದೇ ಮನೆ – ಇಲ್ಲಿಗೆ ಬೇಕಾದ ಮರಮಟ್ಟುಗೊ ಸುರೂವಾಣ ವರ್ಗದ್ದು.

ಮನೆ ಮೇಗೆ ಮುಚ್ಚಿಗೆ; ಅದರಿಂದ ಮೇಗೆ ಉಪ್ಪರಿಗೆ– ಎರಡ್ಣೇ ಸಂಗತಿ.
ಮನೆಯ ಒಳ ಇರ್ತ ಹಾಂಗೇ ಕೆಲವು ಕೋಣೆಗೊ, ಉಗ್ರಾಣಂಗೊ, ಮೆಟ್ಳುಗೊ – ಇತ್ಯಾದಿ ಇಕ್ಕು ಉಪ್ಪರಿಗೆ ಮೇಲೆ.

ಉಪ್ಪರಿಗೆಂದಲೂ ಮೇಗೆ ಇಪ್ಪದು ಅಟ್ಟ.
ಮನೆ / ಉಪ್ಪರಿಗೆಗಳಲ್ಲಿ ಬೇಡದ್ದ ಹರಗಾಣಂಗಳ, ಬೆಶಿ ಒಳಿಯೇಕಾದ ವಸ್ತುಗಳ ತೆಗದು ಮಡಗಲೆ ಇಪ್ಪ ಜಾಗೆಯೇ ಈ ಅಟ್ಟ.
ಅಟ್ಟಂದ ಮೇಗೆ ಮನೆ ಮಾಡು ಇಕ್ಕಷ್ಟೆ. ಉಪ್ಪರಿಗೆ ಮೇಗೆ ಇರ್ತ ಅಟ್ಟಕ್ಕೆ ಹತ್ತಿರೆ ಮಾಡು ಕಾಂಗು; ಮಸಿಯೂ ಹಿಡಿಗು!
ಎಲ್ಲಾ ಮನೆಗಳಲ್ಲಿ ಉಪ್ಪರಿಗೆ ಇರೇಕು ಹೇದು ಏನಿಲ್ಲೆ; ಅನುಕೂಲದ ತರವಾಡುಮನೆಗಳಲ್ಲಿ ಮಾಂತ್ರ ಇಕ್ಕಷ್ಟೆ.
~
ಮರಮಟ್ಟುಗಳ ಪ್ರಕಾರ ನೋಡ್ತರೆ, ಮನೆಯ ಒಳ ಎಂತೆಲ್ಲ ಇರ್ತು?
ಗೋಡೆ ಮಡುಗುವಗಳೇ ವಾಸ್ತು ಪ್ರಕಾರವಾಗಿ ದ್ವಾರಂಗಳನ್ನೂ ಮಡಗ್ಗು; ಮನೆಯೊಳದಿಕೆ ಬಪ್ಪಲೆ ಇಪ್ಪ ದಾರಿಗೊ.
ಒಂದೊಂದು ದ್ವಾರಲ್ಲಿಯೂ ಚೆಂದದ ದಾರಂದ ಗೋಡಗೆ ಸಿಕ್ಕುಸುಗು.

ನಾಲ್ಕು ಮರದ ತುಂಡುಗಳ ಆಯತಾಕಾರಲ್ಲಿ ಸಿಕ್ಕುಸಿ ದಾರಂದ ರಚನೆ ಮಾಡುಗು.
(ಮನೆ ದಾರಂದಲ್ಲಿ ಎರಡು ನಮುನೆ ಇದ್ದಾಡ; ಆಚಾರಿ ವಿವರ್ಸಿತ್ತು.
ನಾಲ್ಕೂ ಮೂಲೆಗೊ ಕೋನಲ್ಲಿ ಒಂದಕ್ಕೊಂದು ಸೇರಿಗೊಂಡ್ರೆ ಅದಕ್ಕೆ “ಮೂಲೆಮುರಿ” ಹೇಳ್ತದಡ; ಬದಲಾಗಿ ಲಂಬಲ್ಲಿ ಒಂದಕ್ಕೊಂದು ಸಿಕ್ಕಿಗೊಂಡ್ರೆ ಅದರ “ದಾರಂದ” ಹೇಳುಸ್ಸು.
ಒಪ್ಪಣ್ಣಂಗೆ ಅದೆಲ್ಲ ಅರಡಿಯ; ಎಲ್ಲವೂ ದಾರಂದಂಗಳೇ)
ಒಟ್ಟಿಲಿ, ಇದೊಂದು ಬಾಗಿಲಿನ ಹಿಡುದು ನಿಂಬಲೆ ಇಪ್ಪ ಚೌಕಟ್ಟು.
ಈ ದಾರಂದಕ್ಕೆ ತಿರುಗಣೆ ಇಪ್ಪ ಬಿಜಾಗ್ರಿ ಸಿಕ್ಕುಸಿ, ಆ ಬಿಜಾಗ್ರಲ್ಲಿ ಬಾಗಿಲಿನ ಸಿಕ್ಕುಸುದು. ಈಗೀಗ ಇಷ್ಟು ಸಣ್ಣ ಬಿಜಾಗ್ರ ಸಿಕ್ಕುಗು ಪೇಟೆಲಿ, ಮದಲಿಂಗೆ ಹಾಂಗಲ್ಲ, ಹೆಬ್ಬೆರಳಿನಷ್ಟು ತೋರದ ಒಂದು ಸರಳೇ ಬಿಜಾಗ್ರಿ.
ಅದಕ್ಕೆ ಸರಿಯಾದ ದೊಡ್ಡ ಕೊಳಿಕ್ಕೆ ಬಾಗಿಲಿಂಗೆ. ಬಾಗಿಲು ಒಂದರಿ ತೆಗದು ಹಾಕುದು ಹೇದರೆ ಒಬ್ಬ ಇಡೀ ಆಳಿನ ಕೆಲಸ; ಹೊಡಿ ಮಕ್ಕಳ ಕೈಂದ ಅಪ್ಪಹೋಪದಲ್ಲ ಅದು! ಈಗಳೂ ಹಳೇಕಾಲದ ದೇವಸ್ಥಾನದ ಗೋಪುರಂಗಳಲ್ಲಿ ಹೀಂಗಿರ್ಸರ ಕಾಂಬಲಕ್ಕು.

ದಾರಂದಲ್ಲಿ ಬಾಗಿಲು ನಿಂಬದಲ್ಲದ್ದೇ, ಮೇಗೆ ರಜ್ಜ ಜಾಗೆ ಇಕ್ಕು – ಮದ್ದಿನ ಕುಪ್ಪಿಯೋ, ತಾಳೆಗರಿಯೋ ಎಂತಾರು ಮಡಗಲೆ ತಕ್ಕ. ಅದಕ್ಕೆ “ಪಕ್ಕಿಪಲಾಯಿ” ಹೇಳುಸ್ಸು.
ಆಚಾರಿ ಮನೆಲಿ ತುಳು ಮಾತಾಡ್ತ ಕಾರಣ ಎಲ್ಲ ತುಳು ಹೆಸರುಗಳೇ ಕೇಳಿಗೊಂಡಿದ್ದತ್ತು’ ತೆಂಕ್ಲಾಗಿ ಹೋದರೆ ಇದಕ್ಕೇ ಮಲೆಯಾಳಲ್ಲಿ ಬೇರೆ ಹೆಸರೆಂತಾರು ಇಕ್ಕೋ ಏನೋ!
~
ಬಾಗಿಲಿಂದಲೇ ಒಳಾಣ ಅಂಗಣಕ್ಕೆ “ಜೆಗಿಲಿ” ಹೇಳ್ತವಲ್ಲದೋ?
ಜಾಲಿಂದಲೇ ಒಳಾಣ ಜಾಗೆ ಜೆಗಿಲಿ. ಅಲ್ಲಿಗೆ ರಜ ಗಾಳಿ- ಬೆಣಚ್ಚು ಬರೆಕ್ಕು ಹೇದು ಗೋಡೆಲಿ ಕಿಟುಕಿ ಮಡಗ್ಗು.
ಮರದ ಕೋಲುಗೊ ಅಡ್ಡಡ್ಡ ಇದ್ದೊಂಡು – ಕಿಟುಕಿಂದಲೂ ದೊಡ್ಡ ಕಿಟುಕಿಗೆ ದಳಿ ಹೇಳ್ತವು.

ಜೆಗಿಲಿಂದ ಮತ್ತೆ ಒಳಾಣ ಬಿಡುಸಾಡಿ ಜಾಗೆ ತರವಾಡು ಮನೆಲಿದ್ದು.
ಅಲ್ಲಿ ಬಿಡುಸಾಡಿ ಅಪ್ಪಲೆ ಬೇಕಾಗಿ ಎರಡು ಕೋಣೆಗಳ ಮಧ್ಯೆ ಗೋಡೆ ಇಲ್ಲೆ; ಬರೇ ಎರಡು ಕಂಬ ಇದ್ದು. ಅದಕ್ಕೆ “ಬಾಜಿರ”ದ ಕಂಬ ಹೇಳುಸ್ಸು.ಎರಡು ಬಲವಾದ ಕಂಬಂಗೊ ತೂಕದ ಅಡ್ಡ-ಮರವ ಹೊತ್ತುಗೊಂಡು ನಿಂದಿದು.

ಬಾಚಿರ ಕಂಬದ ಹತ್ತರೆಯೇ ಕುರ್ಶಿ, ಮೇಜು, ಮಂಚ – ಎಲ್ಲವೂ ಮಡಿಕ್ಕೊಂಡಿಕ್ಕು.
ಅತಿಥಿಗೊ ಬಂದಕೂಡ್ಳೇ ವಿಶ್ರಾಂತಿ ತೆಕ್ಕೊಂಡು ಸಾವ್ಕಾಶ ಮಾಡ್ತದು ಇಲ್ಲಿಯೇ!
ಅಲ್ಲೇ ಕರೆಲಿ ಗೋಡೆಲಿ ಒಂದು ಹಲಗೆ ಬಡುದ್ದವು; ಅದಕ್ಕೆ ಹಲವು ಕೊಕ್ಕುಗಳ ನಮುನೆ ರಚನೆಗೊ.
ಅದಕ್ಕೆ “ಗಿಳಿಕೊಕ್ಕು” ಹೇಳುಸ್ಸು. ಚೀಲವೋ, ಅಂಗಿಯೋ, ಬೇಗೋ – ಎಂತಾರು ನೇಲುಸಲೆ!
~
ಗಿಳಿಕೊಕ್ಕು ಗೋಡೆ ಮಧ್ಯಲ್ಲಿದ್ದರೆ, ಅಲ್ಲೇ ಗೋಡೆಯ ಮೂಲೆ ಸಂದು ಸೇರ್ತಲ್ಲಿ ಒಂದು ಹಲಗೆಯ ಬಡುದ್ದು.
ಎರಡೂ ಗೋಡೆಗೆ ಅಂಟಿ ನಿಂದ ಕಾರಣ ಮದ್ದಿನ ಕುಪ್ಪಿ, ಲೆಕ್ಕ ಪುಸ್ತಕ – ಹೀಂಗಿರ್ಸು ಎಂತಾರು ಮಡುಗಲೆ ಉಪಕಾರ ಆವುತ್ತು. ರಂಗಮಾವನ ಮೊಬೈಲುದೇ ಅಲ್ಲೇ ಇಪ್ಪದು ಈಗ.
ಅದಕ್ಕೆ “ಮೂಲೆಹಲಗೆ” ಹೇಳುಸ್ಸಡ.
~
ಆ ಬಾಜಿರದ ಕಂಬ ಹೇಳಿದ್ದಲ್ಲದೊ – ಅದು ಒಂದು ಅಗಾಲದ ಮರದ ತುಂಡಿನ ಹೊತ್ತು ನಿಂದಿದು. ಅದಕ್ಕೆ “ಉತ್ತರ” ಹೇಳುಸ್ಸು.ಆ ಮರದ ಮೇಗೆಯೇ ಗೋಡೆಇಪ್ಪದಿದಾ. ಆಯದ ಮುಖ್ಯದ್ವಾರ ಪೂರ್ವಪಶ್ಚಿಮ ಇದ್ದರೆ ಈ ಮರದ ತುಂಡು ಉತ್ತರ-ದಕ್ಷಿಣ ಇಪ್ಪ ಕಾರಣವೊ ಏನೋ ಆ ಹೆಸರು – ಆಚಾರಿ ಆಯಿಪ್ಪಲೂ ಸಾಕು – ಹೇಳಿತ್ತು.
ಆ ಉತ್ತರಕ್ಕೆ ಅಡ್ಡಡ್ಡವಾಗಿ ಹಲವು ಮರದ ತುಂಡುಗೊ ಇರ್ತು; ಅದಕ್ಕೆ ಸುಲಾಬಲ್ಲಿ “ಅಡ್ಡ” ಹೇಳುದು.
~
ಅಡ್ಡಂದ ಅಡ್ಡಕ್ಕೆ ಸಣ್ಣ ಸಣ್ಣ ಹಲಗೆಗಳ ಮಣೆ ಮಡಗಿದ ಹಾಂಗೆ ಜೋಡುಸಿ ಕೆಳಾಂದ ನೋಡಿರೆ ಇಡೀ ಮನೆಯೇ ಮರಮಯ ಆಗಿ ಕಾಂಬದಿದಾ. ಅದಕ್ಕೆ “ಮುಚ್ಚಿಗೆ” ಹೇಳುದು. ಮುಚ್ಚಿಗೆಂದ ಮೇಗೆಯೇ ಉಪ್ಪರಿಗೆ ಅತವಾ ಅಟ್ಟ.
ಮನೆ ಒಳ ನಿಂದರೆ ಕೊಬಳು ಕಾಂಬಲಾಗಡ್ಡ; ಮಾಷ್ಟ್ರಮನೆ ಅತ್ತೆ ಹೇಳುಗು – ಹಾಂಗಾಗಿ ಉಪ್ಪರಿಗೆ ಮಾಡದ್ದರೂ – ಮುಚ್ಚಿಗೆ ಮಾಡಿಗೊಂಗು ಹಲವು ಜೆನ.
ದೊಡ್ಡ ಆಯದ ಮನೆಗಳಲ್ಲಿ ಈ ಮುಚ್ಚಿಗೆಯ ಮೇಗೆ ಮಾಳಿಗೆಸೊಪ್ಪು, ಮಣ್ಣು – ಹಾಕಿ, ಲಾಯ್ಕಲ್ಲಿ ನೆಲಕ್ಕ ಮಾಡಿ “ಉಪ್ಪರಿಗೆ” ಮಾಡುಗು. ಉಪ್ಪರಿಗೆಗೆ ಹತ್ತಿಂಡು ಹೋಪಲೆ ಮೆಟ್ಳು ಇರ್ತನ್ನೇ? ಮೆಟ್ಳು ಮಾಂತ್ರ ಅಲ್ಲದ್ದೆ ಮರದ ಏಣಿಯೂ ಇಕ್ಕು. ಮಣ್ಣಿನ ಮೆಟ್ಳಿನ ಹಾಂಗೆ ಕಟ್ಟಿದ್ದಲ್ಲ, ಇದರ ಮಡಗಿದ್ದಾದ ಕಾರಣ “ಇಟ್ಟೇಣಿ” ಹೇಳಿಯೂ ಹೇಳ್ತವಾಡ.

ಇಟ್ಟೇಣಿ ಮಡುಗಿದಲ್ಲೇ ಹತ್ತರೆ ಅಡ್ಡಕ್ಕೆ ಒಂದು ಹಲಗೆ ಸಿಕ್ಕುಸಿ ನೇಲುಸಿಗೊಂಡಿರ್ತು. ಅದಕ್ಕೆ ಜೆಂಗ ಹೇಳುಸ್ಸು.
ಈ ಜಂಗ ಮನೆಇಡೀಕ ಕಾಂಬಲೂ ಸಾಕು. ಅಡಿಗೆ ಒಳ ಇದ್ದರೆ ಹಪ್ಪಳ ಕಟ್ಟ ಮಡಗಲೆ, ಕೈಸಾಲೆಲಿ ಇದ್ದರೆ ತಾಳೆಗರಿ ಪುಸ್ತಕ ಮಡಗಲೆ – ಎಲ್ಲ ಅನುಕೂಲ.

ಉಪ್ಪರಿಗೆ ಮೆಟ್ಳು ಹತ್ತಿರೆ ಪುನಾ ಅಲ್ಲಿ ಮಂಚವೋ, ಕುರ್ಶಿಯೋ, ಮೇಜೋ –ಎಂತಾರು ಕಾಂಬಲೂ ಸಾಕು.
ತುಂಬು ಸಂಸಾರಲ್ಲಿ ಉಪ್ಪರಿಗೆಯೂ ಉಪಯೋಗ ಇರ್ತು.
ಅದು ಆರಾರೊಬ್ಬನ ಕೋಣೆ ಆಗಿರ್ತು ಇದಾ.

ತೀರಾ ಅಂಬೆರ್ಪಿನ ಉಪಯೋಗಕ್ಕೆ ಇಲ್ಲದ್ದ ಒಸ್ತ್ರಂಗಳ ಎಲ್ಲ ಹಾಕಿ ಮಡಗಲೆ ದೊಡ್ಡದೊಡ್ಡ ಅಳಗೆಗಳೋ – ಮರದ ಪೆಟ್ಟಿಗೆಗಳೋ ಈ ಉಪ್ಪರಿಗೆಮೇಲೆ ಕಾಂಬಲೆ ಸಿಕ್ಕುಗು.
ಕೆಲವು ಒಸ್ತ್ರಂಗಳ ಆರುಸಲೆ ಮರದ ಕೋಲುಗಳೂ ಇಕ್ಕು.
ಉಪ್ಪರಿಗೆಲೇ – ಸರೀ ಅಟ್ಟುಂಬೊಳಾಣ ಮೇಗಾಣ ಕೋಣೆ ಇದ್ದಲ್ಲದೋ? ಹೊಗೆ, ಬೆಶಿ ಎಲ್ಲ ಬತ್ತ ನಮುನೆದು – ಅದರ ನಾಕೂ ಹೊಡೆಂದ ಮುಚ್ಚಿ – “ಪತ್ತಾಯ” ಮಾಡುಗು. ಕೆಲಾವು ದಿಕ್ಕೆ ಗಟ್ಟಿ ಮರದ ಪತ್ತಾಯ ಪ್ರತ್ಯೇಕವಾಗಿಯೇ ಮಾಡ್ಸಿ ಮಡುಗ್ಗು ಬಂದೋಬಸ್ತಿನ ಬಾಬ್ತು.
ಹಳೆಡಕ್ಕೆಯೋ, ಗೆಣಮೆಣಸೋ – ಹೀಂಗೆಂತಾರು ಅಲ್ಲಿ ಮಡಗುತ್ತದು ಕ್ರಮ.
~
ಉಪ್ಪರಿಗೆಂದ ನೋಡಿರೆ ಪುನಾ ಕೊಬಳು ಕಾಂಬಲಾಗ ಇದಾ – ಹಾಂಗೆ ಉಪ್ಪರಿಗೆಯ ಮೇಗೆ ಪುನಾ ಒಂದು ಮುಚ್ಚಿಗೆ ಇಕ್ಕು. ಸಣ್ಣದಾದ ಇಟ್ಟೇಣಿ ಇಕ್ಕು. ಅಲ್ಲಿಂದ ಮೇಗೆ ಹೋದರೆ ’ಹೊಗೆಅಟ್ಟ”.
ಅಟ್ಟಲ್ಲಿ ಮರದ ಮುಚ್ಚಿಗೆಯೇ ನೆಲಕ್ಕ; ಮೇಗಂಗೆ ಮನೆಯ ಮಾಡು.
ಮಾಡು ಬಂದು ಕೂಪದು ಮನೆಯ ಗೋಡೆಯ ಮೇಗೆ ಮಡಗಿದ ಮರದ ಮೇಲೆ – ಅದರ ವಾಲುಪ್ಲೇಟು ಹೇಳುಸ್ಸು ಈಗಾಣ ಭಾಷೆಲಿ. ಅಜ್ಜಂದ್ರು ಎಂತ ಹೇಳ್ತವೋ – ಉಮ್ಮಪ್ಪ.

ಕಪ್ಪು ಅಟ್ಟಕ್ಕೆ ಬೆಣಚ್ಚು ಬಪ್ಪಲೆ ಒಂದೋ- ಎರಡೋ ಹಂಚು ತೆಗದು ಅಲ್ಲಿಗೆ ಕನ್ನಾಟಿ ಹಾಕುಗು; ಅಷ್ಟೇ.
ತರವಾಡುಮನೆಲಿ ಈ ಜಾಗೆಲಿ ಹಳೆಕಾಲದ ಪಾತ್ರ ಸಾಮಾನುಗೊ, ಅಗತ್ಯಕ್ಕಿಲ್ಲದ್ದ ಟ್ರಂಕುಪೆಟ್ಟಿಗೆಗೊ – ಮತ್ತೆಂತದೋ ಕೆಲವು ಹರಗಾಣಂಗೊ ಇದ್ದು.
ಅಪುರೂಪಲ್ಲಿ ರಂಗಮಾವ° ಆ ಅಟ್ಟಕ್ಕೆ ಹತ್ತಿಳುದು ಬಂದರೆ ಪಾತಿಅತ್ತೆಗೆ ಒಳ್ಳೆತ ನೆಗೆ ಬಕ್ಕು – ತೊಳದು ಮಡಗಿದ ಕೆಂಡದ ಬಣ್ಣವೇ ಆವುತ್ತವಾಡ ಅವು!
ಪುಳ್ಳಿಮಾಣಿ ವಿನುವಿಂಗೆ ಈ ಅಟ್ಟ ಹೇದರೆ ಹೆದರಿಕೆ. ಜೋರು ಹಠಮಾಡಿರೆ “ಕರಿ ಅಟ್ಟಲ್ಲಿ ಕಟ್ಟಿಹಾಕುತ್ತೆ” – ರಂಗಮಾವ° ಹೇಳಿರೆ ಕೂಗಾಣಕ್ಕೆ ಗಿಡ್ಕು ಹಾಕಿದಾಂಗೆ! 😉
~
ಅಟ್ಟಂದಲೂ ಮೇಗೆ ಎಂತರ? ಮನೆ ಮಾಡು.
ಮಾಡು ಅದರಷ್ಟಕೇ ನಿಲ್ಲುತ್ತೋ? ಇಲ್ಲೆ. ಅದಕ್ಕೆ ಆಧಾರ ಬೇಕಪ್ಪೋ.
ಮನೆ ಜೆಗಿಲಿಲಿ ಎರಡು ಬಾಜಿರದ ಕಂಬ ಇಪ್ಪ ಹಾಂಗೇ – ಅಟ್ಟಲ್ಲಿ ಎರಡು ತ್ರಾಣಿ ಕಂಬಂಗೊ ಇದ್ದು.
ಕುತ್ತಿಕೋಲು ಹೇಳಿ ಹೆಸರದಕ್ಕೆ. (ಸಣ್ಣ ಮಕ್ಕಳ ಮನೆಲಿ ಕುತ್ತಂಕನ ಕೋಲು ಹೇದು ಒಂದಿರ್ತು ಅಪ್ಪೋ – ಇಂಗ್ಳೀಶು ವೈ Y ಬರದ ಹಾಂಗೆ – ಅದೇ ನಮುನೆ). ಮನೆಯ ಅಡ್ಡದ ಮೇಗೆ / ಗೋಡೆಯ ಮೇಗೆ ನಿಂದುಗೊಂಡು – ಮಾಡಿನ ಹೊರ್ತದು ಈ ಕೋಲಿನ ಕಾರ್ಯ.
ಬಾಜಿರದಕಂಬ ಉತ್ತರವ ಹೊತ್ತು ನಿಂದ ಹಾಂಗೇ, ಈ ಕಂಬಂಗೊ ಒಂದು ಅಡ್ಡವ ಹೊತ್ತು ನಿಲ್ಲುತ್ತು –
“ಬೆರ್ತೋಳು” ಹೇಳುದು ಅದಕ್ಕೆ. (ಕೆಲವು ದಿಕ್ಕೆ ಮೊಗಂದಾಯ / ಮಗಂದಾಯ / ಮಾಂದಾಯ – ಹೇಳಿಯೂ ಹೇಳ್ತವಾಡ.)
ಬೆರಿ-ತೋಳು ಹೇಳುದು ತುಳು ಮೂಲದ ಹೆಸರು; ಬೆನ್ನುಹುರಿ ಹೇಳಿ ಅರ್ತ.
ಇಡೀ ಮಾಡು ಮನೆಯ ಮೇಗೆ ಕವುಂಚಿ ಮನುಗಿದ್ದು ಹೇದು ಆದರೆ, ಆ ಮಾಡಿನ ಬೆನ್ನುಹುರಿಯೇ ಈ ಬೆರ್ತೋಳು.

ಹಳೆಕಾಲದ ಮನೆಯೊಟ್ಟಿಂಗೇ ಹಳೆಕಾಲದ ಮರಮಟ್ಟುಗಳೂ ಕಾಣೆಅಕ್ಕೋ?!

~
ಬೆರ್ತೋಳಿಂದ ನಾಲ್ಕೂ ಹೊಡೆಂಗೆ ಮಾಡು ಸುರು; ಹಾಂಗಾಗಿ, ಬೆರ್ತೋಳು ಕೊಬಳಾಗಿರ್ತು.
ಕೊಬಳಿಂದ ನಾಲ್ಕೂ ಮೂಲೆಗೆ ಗಟ್ಟಿಯ ಮರಂಗೊ ಇಳುಸುಗು – ಅದಕ್ಕೆ ಮೂಲೆಪಕ್ಕಾಸು ಹೇದು ಹೆಸರು.
ಈ ಪಕ್ಕಾಸಿನ ಒಂದು ಕೊಡಿ ಬೆರ್ತೋಳಿಂಗೆ ಕಚ್ಚಿರೆ, ಅಲ್ಲಿಂದ ಸೀತ ಇಳುದು, ಆಯದ ಗೋಡೆಯ ಮೇಗೆ ಮಡಗಿದ ವಾಲ್-ಪ್ಲೇಟಿಂಗೆ ಕಚ್ಚಿಂಡು, ಅಲ್ಲಿಂದಲೂ ಮುಂದೆ ಬಂದು, ಪಂಚಾಂಗಂದಲೂ ಒಂದು ಕೋಲು ಹೆರ ಒರೆಂಗೆ ಬಂದು ನಿಲ್ಲುತ್ತು.
ಬೆರ್ತೋಳು ಬೆನ್ನುಹುರಿ ಆಗಿಪ್ಪ ಮನೆಮಾಡಿಂಗೆ ಈ ಮೂಲೆಪಕ್ಕಾಸುಗೊ ಎರಡು ಕೈ, ಎರಡು ಕಾಲುಗೊ.

ಕೈಕ್ಕಾಲು ಆದ ಮತ್ತೆ ಇನ್ನು ಅಸ್ತಿಪಂಜರಂಗೊ ಬೇಕಲ್ಲದೋ?
ಮೂಲೆ ಪಕ್ಕಾಸಿನ ಕೊಡಿಂದ ಸುಮಾರು ಒಂದು ಕೋಲಿನ ಪ್ರತಿ ಅಂತರಕ್ಕೆ ಒಂದು ಪಕ್ಕಾಸು ವಾಲುಪ್ಲೇಟಿಂಗೆ ಕಚ್ಚುಸೆಂಡು ಬಪ್ಪದು ಮತ್ತಾಣ ಕೆಲಸ. ಬೆರ್ತೋಳು ಇಪ್ಪಷ್ಟು ಜಾಗೆಲಿ ಬೆರ್ತೋಳಿಂಗೇ ಕಚ್ಚುಸುದು. ಇಲ್ಲದ್ದ ಜಾಗೆಲಿ ಮೂಲೆಪಕ್ಕಾಸಿಂಗೆ ಕಚ್ಚುಸುತ್ತದು.
ಮಧ್ಯಲ್ಲಿ ಉದ್ದ ಉದ್ದದ ಪಕ್ಕಾಸು ಬಂದು, ಕೊಡಿಯಂಗಪ್ಪಗ ತೀರಾ ಸಣ್ಣದಾಗಿರ್ತು ಈ ಪಕ್ಕಾಸುಗೊ.
ಆಚದರ ಮೂಲೆಪಕ್ಕಾಸು ಹೇಳಿರೆ, ಇದರ ಸರಿಪಕ್ಕಾಸು ಹೇಳ್ತವಾಡ – ದೊಡ್ಡಣ್ಣ ನೆಂಪು ಹೇಳಿದ°.
~
ಬೆರ್ತೋಳು ಆತು, ಮೂಲೆಪಕ್ಕಾಸು ಆತು, ಸರಿಪಕ್ಕಾಸು ಆತು.
ಎಲ್ಲಾ ಪಕ್ಕಾಸುಗಳೂ ಈಗ ಮನೆಂದ ಹೆರ – ಪಂಚಾಂಗಂದಲೂ ಹೆರಂಗೆ ಮೋರೆ ಮಾಡಿ ನಿಂದಿದು. ಇನ್ನೆಂತರ?
ಈ ಪಕ್ಕಾಸುಗಳ ಕೊಡಿಂಗೆ ಉರುವೆಲು ಹಾಕಿದ ಹಾಂಗೆ ಒಂದು ಕೋಲಿನ ಸುರುಕ್ಕೊಂಡು ಬಕ್ಕು. ಇದಕ್ಕೆ ಬನ್ನಟಿಗೆ ಹೇಳ್ತವು. ಮುಂದಕ್ಕೆ “ಇಳುಶಿಕಟ್ಟುತ್ತರೆ” ಈ ಬನ್ನಟಿಗೆ ಭಾರೀ ಪ್ರಯೋಜನಕ್ಕೆ ಬತ್ತಾಡ. ಎಲ್ಲ ಮನೆಗಳಲ್ಲಿ ಇದು ಇಲ್ಲೆ; ಕೆಲವು ಹಳೇ ಕ್ರಮದ ಮನೆಗಳಲ್ಲಿ ಮಾಂತ್ರ.

ಅದಾದ ಮತ್ತೆ, ಪಕ್ಕಾಸುಗಳ ಮೇಗೆ ಸಣ್ಣಸಣ್ಣ ಕೋಲುಗಳ ಬಡಿತ್ಸು; ಇದಕ್ಕೆ ಇಂಗ್ಳೀಶಿಲಿ ರೀಪು ಹೇಳ್ತವು.
ಈ ರೀಪುಗೊ ಒಂದರಿಂದ ಇನ್ನೊಂದಕ್ಕೆ ಎಷ್ಟು ದೂರ ಇರೇಕು ಹೇದರೆ – ಸರಿಯಾಗಿ ಒಂದು ಹಂಚಿನ ಉದ್ದ!
ಇಡೀ ಮಾಡಿಂಗೆ ರೀಪು ಬಡುದಾದ ಮೇಗೆ ಸೀತ ಹಂಚು ಮಡಗುದೇ. ಅಲ್ಲಿಗೆ ಮಾಡಿನ ರಚನೆ ಮುಗಾತು.

ಲೆಕ್ಕ ಹೇಳಿಗೊಂಡು ಹೋವುತ್ತರೆ ಇನ್ನೂ ಹಲವಿದ್ದು.
ಆದರೆ, ಮನೆ-ಮಾಡಿಂಗೆ ಸಮ್ಮಂದಪಟ್ಟ ಮುಖ್ಯವಾದ್ಸು ಕೆಲವು ಇಲ್ಲಿಪ್ಪದು.
~

ಹಳೆಕಾಲದ ಮನೆಲಿ ಎಲ್ಲವೂ ಮರಂದಲೇ ಆಯೇಕಾದ್ಸು ಹೇಳಿ ಇಪ್ಪಾಗ – ಎಷ್ಟೆಲ್ಲ ಲೆಕ್ಕಾಚಾರಂಗೊ; ಎಷ್ಟೆಲ್ಲ ಹೆಸರುಗೊ.
ಅದೇ ಮರ ಆದರೂ – ಒಂದೊಂದಕ್ಕೆ ಒಂದೊಂದು ಹೆಸರುಗೊ; ಒಂದೊಂದು ಕೆಲಸಂಗೊ.
ಎಲ್ಲವೂ ಸಮಷ್ಟಿಲಿ ಆ ಮನೆಯ ವಾಸ್ತುಪುರುಷ° ಹೇಳಿದ ಹಾಂಗೆ ಕೇಳಿಗೊಂಡು ನಿಲ್ಲುತ್ತಿಲ್ಲೆಯೋ?
ನಿಂದು ನಮ್ಮ ಬದ್ಕಲೆ ಬಿಡ್ತಿಲ್ಲೆಯೋ – ಅದುವೇ ಆಶ್ಚರ್ಯ.
ಹಂಚಿನ ಮಾಡಿನ ವಿಶೇಷ ಹೇದರೆ; ಬೆರ್ತೋಳು, ಮೂಲೆಪಕ್ಕಾಸು, ಉತ್ತರ – ಮೂರುದೇ ಗಟ್ಟಿ ಇದ್ದರೆ – ಒಳುದ ಮರಮಟ್ಟುಗೊ ರಜರಜ – ಪೂರ್ತಿ ಅಲ್ಲ – ರಜ್ಜ ಕುಂಬಾಗಿ ಕುಟ್ಟೆ ಉದುರಿರೂ ಮಾಡು ಎಂತ್ಸೂ ಆವುತ್ತಿಲ್ಲೆ.
ಬೆನ್ನುಹುರಿ-ಕೈಕ್ಕಾಲು ಗಟ್ಟಿ ಇಪ್ಪ ಕಾರಣ ಹೇಂಗೋ ಸುಧಾರಣೆ ಆವುತ್ತು ಹೇಳಿತ್ತು ಆಚಾರಿ.

~

ಸಿಮೆಂಟು ಮನೆ ಬಂದ ಮೇಗೆ ಹೀಂಗಿರ್ತ ಹೆಸರುಗಳ ಕೇಳುಲೇ ಇಲ್ಲೆ ಅಲ್ಲದೋ?
ಬನ್ನಟಿಗೆ, ಪಕ್ಕಾಸು, ಬೆರ್ತೋಳು – ಹೇಳ್ತ ಹೆಸರುಗೊ ನಮ್ಮ ಅಜ್ಜಂದ್ರ ತಲೆಮಾರಿನ ಒಟ್ಟಿಂಗೇ ಕಾಣೆ ಅಕ್ಕೋದು?
ಊರೋರಿಂಗೆ ಬೇಡದ್ದ ಸಂಗತಿ ಆಚಾರಿಗೊಕ್ಕೂ ಗೊಂತಿರ; ಅಪ್ಪೋ?
~

ಗಂಟೆ ಸುಮಾರಾತಡ; ಆಚಾರಿಗೆ ಕೆಲಸಕ್ಕೆ ಅಂಬೆರ್ಪು ಆತು.
ಆಚಾರಿಯ ಟಕಟಕ ಸುರು ಆದ ಮತ್ತೆ ಮಾಷ್ಟ್ರುಮಾವಂಗೆ ಒರಕ್ಕಿದ್ದೋ? ಅವುದೇ ಎದ್ದವು.
ಮಾಷ್ಟ್ರಕ್ಕೊ ಎದ್ದು ಕೂದರೆ ಮಕ್ಕೊ ಕೂಪಲಿದ್ದೋ? ನಾವುದೇ ಹೆರಟತ್ತು.
ದೊಡ್ಡಣ್ಣ ಪೋಷ್ಟು ಕೊಟ್ಟಾದ್ದು ನೆಂಪಾಗಿ ಮೆಲ್ಲಂಗೆ ಎದ್ದ°.

ಆಗಲಿ, ಉಪಾಯಲ್ಲಿ ಹಲವು ಹೆಸರುಗಳ ನೆಂಪುಮಾಡಿದ ಹಾಂಗಾತಿಲ್ಲೆಯೋ ನವಗೆ.
ಕೆಲಸ ಬೇಗ ಮುಗಿಯ; ಇನ್ನೂ ಒಂದುವಾರ ಇಕ್ಕು. ಹಾಂಗಾಗಿ ಎಡಕ್ಕಿಲಿ ಇನ್ನೊಂದರಿ ಪುರುಸೋತಿಲಿ ಮತಾಡಿರೆ ಬೇರೆಂತಾರು ಶುದ್ದಿ ನೆಂಪಾದರೆ- ನಿಂಗೊಗೂ ಹೇಳ್ತೆ. ಆತೋ?

ಈಗ ಪಟ್ಟಿಮಾಡಿದ ಎಲ್ಲಾ ವಸ್ತುಗೊ ಎಲ್ಲಾಮನೆಲಿ ಇದ್ದು ಹೇಳಿ ಏನಲ್ಲ;
ಮನೆ-ಉಪ್ಪರಿಗೆ-ಅಟ್ಟ – ಎಲ್ಲ ಮನೆಲಿ ಎಲ್ಲವೂ ಇದ್ದು ಹೇದು ಏನಲ್ಲ;
ಆದರೆ ಹೆಚ್ಚಾಗಿ ಇಂತಾದ್ದು ನಮ್ಮ ಊರಿಲಿ ಕಾಂಬಲೆ ಸಿಕ್ಕುಗು; ಹಾಂಗಾಗಿ ಎಲ್ಲವೂ ನವಗೆ ಗೊಂತಿರೇಕು. ಅಲ್ಲದೋ?

~

ಒಂದೊಪ್ಪ: ಹಳೆವಸ್ತುಗೊ ಮನೆಲಿಲ್ಲದ್ದರೂ ಮನಸ್ಸಿಲಿರಳಿ.

36 thoughts on “ಅಡ್ಡ, ಪಕ್ಕಾಸು, ಬಾಜಿರ, ಬೆರ್ತೋಳು…

  1. ,ತೆಗವ ಕೆಣಿ ಗೊಂತಿಲ್ಲದ್ದರೆ ದೊಡ್ದ ಬಾವ ಹೇಳಿದ ಹಾಂಗೆ ಕೆಟ್ತತ್ತೆ——— ಕಾಕತಾಳೀಯವೋ ಹೇಳುವಾ೦ಗೆ ,ಇ೦ದ್ರಾಣ ಕನ್ನಡ ಪ್ರಭ ಲ್ಲಿಯೂ,ವಿಜಯನಾಥ ಶಣ್ಯಿಯವರ ಮನೆಲಿ ನಡೆದ ಘಟನೆ ಬಗ್ಗೆ ಬಯಿ೦ದು ನೋಡಿ.

  2. ಇನ್ನು ಮು೦ದ೦ಗೆ ಕರೇಲಿ ಪಟ/ಚಿತ್ರ೦ಗಳೂ ಬೇಕಕ್ಕು ಈ ಅ೦ಗ೦ಗಳ ಪರಿಚಯ ಮಾಡೆಕ್ಕಾರೆ ! ಶುದ್ದಿ ಭಾರೀ ಲಾಯ್ಕ ಆಯಿದು.ತರವಾಡು ಮನೆಗೊ ಮಾಯ ಅಪ್ಪಗ ಈ ಶಬ್ದ೦ಗಳೂ ಮರೆಯಪ್ಪದು ಸಹಜ.ಆದರೆ ಮನಸ್ಸಿಲಿ ಗಟ್ಟಿಯಾಗಿರೇಕು ಹೇಳುವ ಒಪ್ಪ ಕೊಶಿ ಕೊಟ್ಟತ್ತು.

  3. ಸಕಾರಣವಾಗಿ ಒಪ್ಪಿತ್ತು. ಪಡಿ,ಹಾಕಿ ನೆ೦ಪು ಮಡಗಲೆ ಮಾಡಿತ್ತು.

  4. ಸಾಂಪ್ರದಾಯಿಕ ಮನೆಯ ಅಂಗ-ಉಪಾಂಗಂಗಳ ವರ್ಣನೆ- ವಿವರಣೆಯ ಶುದ್ದಿ ಪಷ್ಟಾಯಿದು ಒಪ್ಪಣ್ಣೋ.
    ಸುಮಾರು ಹೊಸ ಶಬ್ದಂಗಳ ಪರಿಚಯ ಆತು. ಮತ್ತೊಂದಷ್ಟು ಮರದುಹೋಗಿದ್ದ ಶಬ್ದಂಗಳ ಪುನಃ ನೆಂಪು ಮಾಡಿದಾಂಗಾತು.

    ಬಾಗಿಲಿನ ವಿಚಾರಲ್ಲಿ ಒಂದೆರಡು ಮಾತು.
    ಮನೆ ಬಗ್ಗೆ ಹೇಳುವಗ ನಾವು ಮರವಲೆ ಸಾಧ್ಯವೇ ಇಲ್ಲೆ ಹೇಳುವಷ್ಟು ಪ್ರಾಧಾನ್ಯತೆ ಇಪ್ಪಂಥಾ ಭಾಗ ಮನೆಬಾಗಿಲಿನ ‘ಹೊಸ್ತಿಲು’. ಅಲ್ಲದೋ? ಸದ್ಗೃಹದ ಸಕಲ ಸೌಭಾಗ್ಯಂಗಳ ಸಂಕೇತವಾಗಿ ನಾವು ಹೊಸ್ತಿಲಿನ ಕಾಣ್ತು.
    ಬಾಗಿಲು ಚೌಕಟ್ಟಿನ ಒಟ್ಟಾರೆಯಾಗಿ ‘ದಾರಂದ’ ಹೇಳ್ತ ಹೆಸರಿಲ್ಲಿ ದೆನಿಗೇಳುದು. ಅದರ ನಾಕು ತುಂಡುಗಳಲ್ಲಿ ಕೆಳಾಣ ಭಾಗ ಹೊಸ್ತಿಲು; ಮೇಗಾಣದ್ದು ದಾರಂದ. ಹಾಂಗೇ ಆಚೀಚ ಹೊಡೆಲಿಪ್ಪ ತುಂಡುಗಳ ‘ಹೊಡೆಮರ’ ಹೇಳ್ತ ಹೆಸರಿಲ್ಲಿ ನಿರ್ದೇಶಿಸುವ ಕ್ರಮವೂ ಇದ್ದು.
    ಆನು ಸಣ್ಣಾಗಿಪ್ಪಗ ಮನೆಲಿದ್ದಿದ್ದ ಅಜ್ಜಿಯಕ್ಕೊ ಬಾಗಿಲಿನ ಹಲಗೆಗಳ ಬಾಗಿಲ’ಕೀತು’ ಹೇಳಿ ಹೇಳಿಂಡಿದ್ದಿದ್ದರ ಕೇಳಿದ್ದೆ.
    ಆಶ್ಚರ್ಯ ಹೇಳಿರೆ- ಬಾಗಿಲು ಮುಚ್ಚುವ ರೀತಿಗಳನ್ನೂ ಹಳಬ್ಬರು ಪ್ರತ್ಯೇಕವಾಗಿ ಗುರುತಿಸಿದ್ದವು! ಚೀಪು ಹಾಕದ್ದೆ ಬಾಗಿಲ ಹಲಗೆಗಳ ಅಂತೇ ಒಂದಕ್ಕೊಂದು ಸೇರ್ಸುದು ಹೇಳಿ ಆದರೆ ಬಾಗಿಲು ‘ಎರಶುದು’. (ಅಟ್ಟುಂಬೊಳಕ್ಕೆ ನಾಯಿ ಬಾರದ್ದಾಂಗೆ ಬಾಗಿಲು ಎರಶುದು.) ಚೀಪು ಹಾಕಿ ಭದ್ರ ಮಾಡುದಕ್ಕೆ ಬಾಗಿಲು ‘ಹೆಟ್ಟುದು’ ಹೇಳುಗು!

    ಆಹಾ.. ಹಳೇಕಾಲದ ಮನೆ ಬಾಗಿಲುಗಳೂ ಆ ಬಾಗಿಲುಗೊಕ್ಕೆ ಭೂಷಣವಾಗಿ ಇದ್ದಿದ್ದ ಕಬ್ಬಿಣದ ಸಂಕೋಲೆಗಳೂ.. ನೋಡುದೇ ಒಂದು ಚೆಂದ; ಅಪ್ಪೊ?

  5. ನಿನ್ನೆ ಇರುಳು ಎಂಟುವರೆ ಅಂದಾಜಿಂಗೆ ಮಾಷ್ಟ್ರುಮಾವನ ಸಣ್ಣ ಮಗನತ್ರೆ ಒಂದಾರಿ ಲೋಕಾಭಿರಾಮ ಮಾತಾಡಿಕ್ಕುವೋ° ಹೇದು ಅವನ ಮೊಬೈಲಿಂಗೆ ಫೋನು ಮಾಡಿದೆ.
    ಸುಮಾರು ಹೊತ್ತು ಟ್ರು°..ಟ್ರು°… ಆದಮತ್ತೆ ಫೋನು ತೆಗದ್ದದು ಮಾಷ್ಟ್ರುಮಾವನ ಮಗಳು! “ಅಣ್ಣ ಆಚಾರಿಯೊಟ್ಟಿಂಗೆ ಎಂತದೋ ಸಮಾಲೋಚನೆಯ ಬೆಶಿಲಿ ಇದ್ದ°; ಮತ್ತೆ ನಿಂಗೊಗೆ ಅವನೇ ಮಾಡುಗಡ” ಹೇಳಿತ್ತು ಕೂಸು.

    ಶ್ಶೆಲ! ಅಂಬಗ ಮಾಷ್ಟ್ರುಮಾವನಲ್ಲಿಗೆ ಕವಾಟು ಮಾಡ್ಲೆ ಆಚಾರಿ ಬಂದದು ಸಂಗತಿ ನಿಜಾವೇ; ಈ ಒಪ್ಪಣ್ಣ ಅಂತೇ ಲಾಟು ಬಿಟ್ಟದಲ್ಲ- ಹೇಳಿ ಗೊಂತಾತು ಎನಗೆ.

    ಇರಲಿ; ಒಳ್ಳೆದಾತು.ಇನ್ನಾಣ ಸರ್ತಿ ಆ ಹೊಡೆಂಗೆ ಹೋದಿಪ್ಪಗ ಹೊಸ ಕವಾಟು ನೋಡ್ತ ಲೆಕ್ಕಲ್ಲಿ ಒಂದಾರಿ ಹೊಕ್ಕು ಮಾಷ್ಟ್ರತ್ತೆ ಕೈಂದ ಒಂದು ಗ್ಲಾಸು ಚಾಯ ಕುಡುದಿಕ್ಕಿ ಬಪ್ಪಲಕ್ಕನ್ನೆ!

  6. “ಕಳ್ಲ ಚೀಪು’ ಎಂಗಳ ತರವಾಡು ಮನೆಲಿ ಈಗಳು ಇದ್ದು ,ತೆಗವ ಕೆಣಿ ಗೊಂತಿಲ್ಲದ್ದರೆ ದೊಡ್ದ ಬಾವ ಹೇಳಿದ ಹಾಂಗೆ ಕೆಟ್ತತ್ತೆ!

  7. .ಯಾವಾಗಲೂ ಇಪ್ಪಂಗೆ ರಾಶಿ ಚೊಲೋ ಆಜು ಲೇಖನ..ನಮ್ಮ ಸುತ್ತ ಮುತ್ಲೇ ಇರುವ ಆದ್ರೆ ಹೆಸರೇ ಗೊತ್ತಿಲ್ಲದ ವಿಷಯಗಳ ಬಗ್ಗೆ ವಿವರವಾಗಿ ಓದಿ ಖುಷಿ ಆತು.

  8. ಒಪ್ಪಣ್ಣಂದು ಯಾವಾಗಿನ ಹಾಂಗೆ ಒಪ್ಪದ ಲೇಖನ.

  9. ಈ ಕಳ್ಳ ಕೀಲಿನ ಬಗ್ಗೆ ಗೊಂತಿದ್ದೋ. ಎಂಗಳ ಸೇಸಪ್ಪ ಆಚಾರಿ ಮಾಡ್ತು. ಆ ಕೀಲು ಹಾಕಿತ್ತು ಹೇಳಿ ಆದರೆ ಅದರ ಗುಟ್ಟು ಗೊಂತಿದ್ದೋನಿಂಗೆ ಮಾತ್ರ ಕಪಾಟಿನ ಬಾಗಿಲು ತೆಗವಲಕ್ಕಷ್ಟೆ. ಒಪ್ಪಣ್ಣನ ಮಾಹಿತಿಗೊಕ್ಕೆ ಧನ್ಯವಾದಂಗ.

    1. ಯೇ ಭಾವಾ,
      ನೆಂಟ್ರ ಮನೆಗೆ ಹೋಗಿ ಇರುಳು ಉಚ್ಚು ಹೊಯ್ವಲೆ ಎದ್ದು ಹೆರ ಹೋಪಲೆ ಎಡಿಯದ್ದೆ ನಾವು ಬಂದ ಬಂಙ ಮರದ್ದಿಲ್ಲೆ, ಮಿನಿಯಾ…

  10. ಒಳ್ಳೆ ಬರಹ. ಬೆರ್ತೋಳು ಎನಗೆ ಹೊಸತಾಗಿ ಗೊಂತಾತು. ಮೊಗಂದಾಯ ಹೇಳುದು ನಮ್ಮ ಹೊಡೇಲಿ ಇಪ್ಪ ಶಬ್ದ. ಮತ್ತೆ ವಾಲ್‌ಪ್ಲೇಟಿಂಗೆ ‘ಉತ್ತರ’ ಹೇಳಿ ಹೇಳ್ತವು, ಕಿಟಿಕಿಗೆ ‘ಗಿಳಿಬಾಗಿಲು’ ಹೇಳ್ತ ಶಬ್ದವೂ ಬಳಕೆಲಿ ಇತ್ತು, ಈಗ ಆ ಶಬ್ದ ಉಪಯೋಗಿಸುತ್ತದು ಕಮ್ಮಿ ಆಯಿದು.

  11. ಒಂದಾರಿ ಸಣ್ಣಾಗಿಪ್ಪಗಾಣ ಚಿತ್ರ ಕಣ್ಮುಂದೆ ಬಂತು. ತೆಕ್ಕುಂಜ ಮನೆಯ ಬಾಜಿರ ಕಂಬ, ಬಾಜಿರ ಹಲಗೆ, ಮಣ್ ಚಿಟ್ಟೆ ಎಲ್ಲ ನೆಂಪಾತು. ಈಗ ಬರೇ ನೆಂಪು ಮಾಂತ್ರ. ಮನೆ ಒಳಾಣ ವಸ್ತು ಅಲ್ಲದ್ದರೂ ಎನಗೆ ಇನ್ನೂ ನೆಂಪಿಲಿಪ್ಪದು – ಪಡಿಪ್ಪಿರೆ ( ಮಹಾದ್ವಾರ), ಪಡಿಮಂಚ ಈಗಳೂ ಕಣ್ಮುಂದೆ ಇಪ್ಪ ಹಾಂಗಿದ್ದು.
    ಲಾಯಕ ಸಂಗ್ರಹ.

  12. ಒಪ್ಪಣ್ಣಾ,
    ತರವಾಡು ಮನೆಗಳಲ್ಲಿ ಮಾತ್ರ ಕಾಂಬಲೆ ಸಿಕ್ಕುವ ಸುಮಾರು ಶಬ್ದಂಗಳ ಪರಿಚಯ ಆತು.
    ಇನ್ನೊಂದರಿ ತರವಾಡು ಮನೆಗೆ ಹೋಗಿಪ್ಪಗ ಇದರ ನೋಡಿ ತಿಳಿತ್ತ ಕುತೂಹಲ ಆಯಿದು.

  13. ಹಳೆ ಮನೆಗಳ ಚಿತ್ರಣ ಕಣ್ಣಿಂಗೆ ಕಟ್ಟಿತ್ತು.
    ಎಲ್ಲಾ ಮರತ್ತು ಹೋಪಂತ ಶಬ್ದಂಗಳ ನೆಂಪು ಮಾಡಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ.
    ಇನ್ನಾಣ ವಾರ ಇನ್ನು ಎಂತರ ಉತ್ತಮ ಶುಧ್ಧಿ ಒಪ್ಪಣ್ಣ?
    ~ಸುಮನಕ್ಕಾ…

  14. ಒಂದರಿ ಮನೆ ಬಿಚ್ಚಿದ ಹಾಂಗೆ ಆತು..ಎಂಗಳ ಹಳೆ ಮನೆಯ ಬಿಚ್ಚಿಪ್ಪಗ ಆಚಾರಿ ಹೇಳಿದ ಮಾತುಗಳ ಶಬ್ಧಂಗಳಾ ಮತ್ತೊಂದರಿ ನೆಂಪು ಮಾಡಿದ್ದಕ್ಕೆ ಒಂದು ಒಪ್ಪ..

  15. ಹಳೆವಸ್ತುಗೊ ಮನೆಲಿಲ್ಲದ್ದರೂ ಮನಸ್ಸಿಲಿರಳಿ ಹೇಳುವದು ಒಪ್ಪುವಂತಾ ಮಾತು. ಮರದು ಹೋವ್ತಾ ಇಪ್ಪ ತುಂಬಾ ಶಬ್ದಂಗಳ ನೆಂಪು ಮಾಡೆಂಡು, ಅದರ ಬೈಲಿನವಕ್ಕೆ ತಿಳುಸಿ ಕೊಟ್ಟು ಬೈಲಿನವಕ್ಕೂ ನೆಂಪಾದ ಕೆಲಾವು ಹವ್ಯಕ ಶಬ್ದಂಗಳ ಸೇರುಸಿ ಒಂದು ಸಂಗ್ರಹಣೆ ಕಾರ್ಯ ಮಾಡ್ತಾ ಇಪ್ಪ ಒಪ್ಪಣ್ಣಂಗೆ ಅಭಿನಂದನೆಗೊ. ಈ ಶಬ್ದಂಗೊ ಎಲ್ಲ ಇನ್ನು ಕಾಂಬಲೆ ಬಿಟ್ಟು ಕೇಳ್ಲೇ ಸಿಕ್ಕ ಹೇಳುವದು ಅಪ್ರಿಯ ಸತ್ಯ. ಒಪ್ಪಣ್ಣನ ಸಂಗ್ರಹಲ್ಲಿ ಕೊಟ್ಟ ಒಂದೆರಡು ಶಬ್ದಂಗೊ ಬಿಟ್ಟು ಬಾಕಿ ಎಲ್ಲವನ್ನೂ ಕಂಡು ಗೊಂತಿದ್ದು. ಎಂ.ಕೆ ಯವು ಹೇಳಿದ ಮಧೂರು , ಸುಬ್ರಹ್ಮಣ್ಯ ಕೋಲುಗೊ, ಮರಿಗೆ ಇಶುಮುಚ್ಚಲುಗಳ ಬಗ್ಗೆ ಒಪ್ಪಣ್ಣ ಈಗಾಗಲೇ ಹೇಳಿದ್ದ. ಏವಗ ಹೇಳಿ ಕೇಳಿರೆ ಎನಗೆ ನೆಂಪಿಂಗೆ ಬಾರ, ಹಳತ್ತಿಂಗೆ ಮಡಗಿದ್ದರ ಬಗದರೆ ಖಂಡಿತಾ ಸಿಕ್ಕುಗದು.
    ಹೊಗೆ ಅಟ್ಟ, ಮಳೆಗಾಲಲ್ಲಿ ಬಿದ್ದ ಎಳತ್ತಡಕ್ಕೆಯ ಕೊರದು ಒಣಗುಸಲೆ, ಉಪ್ಪಿನಕಾಯಿ, ಬೆಲ್ಲ, ಹಪ್ಪಳ ಎಲ್ಲವನ್ನೂ ಬೆಚ್ಚಂಗೆ ಮಡಗಲೆ ಈ ಅಟ್ಟ ಬೇಕೇ ಬೇಕು. ಹಳತ್ತರ ಎಲ್ಲ ನೆಂಪು ಮಾಡಿದ ಒಪ್ಪಣ್ನಂಗೆ ಧನ್ಯವಾದಂಗೊ.

    1. ಎಡು ಮುಟ್ಟದಿಲ್ಲೆ,ಒಪ್ಪ ಣ್ಣ ಬರೆಯದ್ದಿ ಲ್ಲೆ , ಬೈಲಿಲಿ ಹೇಳುವುದು ಕೇಳಿದ್ದೆ. ಬೈಲಿಲಿ ಇಪ್ಪ ಹಳೆ ಪಕ್ಕಾಸಿನ ಗಟ್ಟಿಯ ನೋಡಿ ಹೇಳಿದ್ದಿಲ್ಲ. ಅಚಾರಿಯ ಇರೆಉಳೀ ನೆ೦ಪಾಗಿ,ಎನೇ ಆದರೂ ,ಅದರ ಕಡ್ಡಿ ಗುರುತ ಬಗ್ಗೆ ಮಾತಡದ್ದು ನೆ೦ಪಾತು ಅಶ್ಟೇ.

      1. ಯೇ ಎಂಕಣ್ಣೋ
        ಒಪ್ಪಣ್ಣ ಹೇಳಿದ್ದು ತರವಾಡು ಮನೆಲಿಪ್ಪದರ ಅಲ್ಲದೋ? ಕೋಲು ಉಳಿ ಆಚಾರಿ ಬಪ್ಪಗ ತಂದ್ಸನ್ನೇ…

    2. ಬೊಳುಂಬು ಗೋಪಾಲ ಅಣ್ಣಾ, ಒಪ್ಪಣ್ಣ ಸೇರು, ಕುಡ್ತೆ, ಇಸಿಮಿಂಚಲು ಬಗ್ಗೆ ಹೇಳಿದ್ದು ಶುಧ್ಧಿಯ ತಲೆಬರಹ ನೆಂಪಿಂಗೆ ಬತ್ತಿಲ್ಲೆ, ಅದರೆ ಅವ ಹೇಳಿದ್ದು “ರಂಗಮಾವ ಅಟ್ಟಂದ ಎಲ್ಲಾ ಮರದ ಸಾಮಾನು ತಂದು ಮಡಿಗಿ, ಚಂದಕ್ಕೆ ಉದ್ದಿ ಮಡಿಗಿ, ಎಲ್ಲ ಕೆಳ ಹರಗಿದ ದಿನ ಒಪ್ಪಣ್ಣ ಹೋಗಿಪ್ಪಗ ಆ ಬಗ್ಗೆ ಎಲ್ಲ ಮಾತಾಡಿದ ದಿನದ ಸುದ್ದಿಲಿ.”

      ಹೇಳಿದ ಹಾಂಗೆ ಎಮ್.ಕೆ. ಅಣ್ಣ(ಅಕ್ಕ) ಆರು ಇದು? ಅವು ಬರವದು ಯಾವ ಊರಿನ ಹವ್ಯಕ ಭಾಷೆ? ರಜ್ಜ ಬೇರೆ ನಮುನೆ ಇದ್ದನ್ನೆ???

      1. ರಜ್ಜ ಬೇರೆ ನಮುನೆ ಆದಿಕ್ಕು,ಸುಮನ ಪುರುಸೊತ್ತಿ ಇಪ್ಪಗ ಒ೦ದರಿ, ನಿನ್ನ ಎಲ್ಲಾ ಅಪ್ಚಚಿಗಳ ಸಾಲು ನಿಲ್ಸಿ ನೆ೦ಪು ಮಾಡಿಕೊ.ಯಾವ ತಲೆಯೆ ಮೇಲೆ, ಬ್ಲಾಕ್ ಅ೦ಡ್ ವೈಟ್ ಬಣ್ಣ ಕ೦ಡತ್ತೋ ಅಲ್ಲಿ ನಿಲ್ಸು.ಸದ್ಯಕ್ಕೆ ಸಾಕಲ್ಲದ.

        1. ಯಬ್ಬೋ ! ಎಮ್.ಕೆ. ಅಪ್ಪಚ್ಚಿ (ನಿಂಗಳೆ ಹಾಂಗೆ ಬರದ ಕಾರಣ ಅದೆ ಸಂಬಂಧಲ್ಲಿ ದಿನಿಗೇಳ್ತೆ) ನಿಂಗೋ ಹಾಂಗೆಲ್ಲ ಭಯಂಕರ ಕಷ್ಟದ ಕ್ಲೂ ಕೊಟ್ರೆ ಹೇಂಗಪ್ಪ ಎನ್ನ ಹಾಂಗಿಪ್ಪ ಬೋಸಿಗೊಕ್ಕೆ ಗೊಂತಪ್ಪದು? ರಜ್ಜ ಸುಲಭಲ್ಲಿ ಹೇಳ್ತಿರಾ? ಸುಮಾರೆಲ್ಲ ಅಪ್ಪಚ್ಚಿಯಕ್ಕಳ ನೆಂಪು ಮಾಡಿಗೊಂಡೆ, ಸದ್ಯಕ್ಕೆ ಇನ್ನೂ ಗೊಂತೇ ಆಯಿದಿಲ್ಲೆ ….

          1. ನಿಂಗೋ ‘ಹರಿಯೊಲ್ಮೆ’ ಹತ್ರೆ ಇಪ್ಪ ವಕೀಲ ಅಪ್ಪಚ್ಚಿಯಾ? ….

  16. ಆಚಾರಿ ಬಾರಿ ಉಸ್ಸಾರು ಇದ್ದು.ಒಪ್ಪಣ್ಣ೦ಗೆ ಅದರ ಶಿಲ್ಪಿ ಕೋಲು,ಮನೆಯವರ ಮಧೂರು,ಸುಬ್ರಹ್ಮಣ್ಯ ಮೊದಲಾದ ಕೋಲು ವಿಶಯ೦ಗಳೆ ಬಗ್ಗೆ ತಳಿಯದ್ದೆ ಕೂಯಿದು. ಸಾಮಾನ್ಯ ಪಕ್ಕಾಸು ಉದ್ದ ಲೆಕ್ಕ ಹಾಕಲೆ, ನೀಟದ ಅಳತೆ ಕೋಲಿ೦ಗೆ,ಒ೦ದು ಅ೦ಗುಲ ತೆಗೆದು ಮಡಗೆಕ್ಕು ಹೇಳಿದಿಲ್ಲೆಯಾ. ಗೀಸುಳಿ ಹಾಕಿ ,ರೀಪು ಈಗಲೂ ಬಡಿತ್ತಡವಾ?ಕಳ್ ಚೀಪಿನ ಬಗ್ಗೆ ಸುಮ್ಮನೆ ಕೂದತ್ತಾ?.ಅಟ್ಟಲ್ಲಿ ,ಹಳೆ ಕಳಸೆ,ಸೇರು ,ಕುಡ್ತೇ ಇತ್ತಿಲ್ಲೆಯಾ?ಅಶನ ಇಳಿಶಲೆ ,ಮರಾಯಿ ,ಇಸಿ೦ಚಲು,ಮಾಡಿಕೊಡುತ್ತಡವಾ?ಉಪ್ಪ ಹಾಕಿ ಮಡಗಲೆ ಪೆಟ್ಟಿಗೆ ಯಾವಮರದ ಹಲಗೆ ಆಯೆಕ್ಕಡಾ?ಕಾಸರಕಾನ ಮರದ ಗ್೦ಟಿನ ಬಗ್ಗೆ ಎ೦ತ ಹೇಳಿತ್ತು? ಉಳಿ ತಾಗುತ್ತಡವಾ? ಕೂಪಲೆ ಉಳಿದ ಮರ೦ಗಳ ಹಲಗೆಲಿ ,ದೊಡ್ಡ ಮಣೆ,ಸಣ್ಣ ಮಣೆ ಹಾಕಿತ್ತಾ?

  17. ಸಮ್ಮಂದಪಟ್ಟ ಕೆಲವು ಶಬ್ದಂಗೊ — ಗಿಳಿಬಾಗಿಲು, ಕುರುಬಾಗಿಲು, ಚೀಪು (ವಿಟ್ಳ ಹೊಡೆಲಿ ‘ಮೀಡು’ ಹೇಳೊದು ಕೇಳಿದ್ದೆ), ಅಂತರಮಾಡು, ಮದನಕೈ, ಅದೆ, ದಾರಂದಗೂಡು….

    ಈಗ ನೆಂಪಪ್ಪದು ಇಷ್ಟೆ.

  18. ಒಳುದ ನಾಕು ಮರ೦ಗಳನ್ನೂ ಕಡುದು ಮೋಪು ಮಾಡಿರೆ ನಾಳೆ ನಮ್ಮ ಮಕ್ಕೊ ಮರ೦ಗಳನ್ನೇ ನೋಡವು ಹೇಳಿ ಕಾಣುತ್ತು!ಹ೦ಚು ಮಾಡ್ಲೂ ಮರ (ಹೊತ್ತುಸುಲೆ) ಬೇಕಾವುತ್ತು. ಹಾ೦ಗಾಗಿ ಪರಿಸರ ದ್ರಿಷ್ತಿ೦ದಾಗಿ ನಮ್ಮ ಹಳೆ ಹ೦ಚಿನ ಮನಗೊ ಒೞೆದಲ್ಲ.

  19. ಎಷ್ಟು ಶಬ್ದ ಸಂಗ್ರಹ ಮಾಡಿದ್ದ ಒಪ್ಪಣ್ಣ! ಅಭಿನಂದನೆಗೊ.ಇನ್ನೂ ಕೆಲವು ಶಬ್ದ ನೆಂಪಾವುತ್ತು-ಮೇಲುಚ್ಚಲು[ಉಪ್ಪರಿಗೆ],ಮೋಂದಾಯ,ಪೇನುಗೋಡೆ,ಉತ್ತರಕಲ್ಲು,ಗಿಳಿಬಾಗಿಲು,ಮೊಳಕುತ್ತಿ[ಬೀಜಾಗರಿ ಇಲ್ಲದ ಬಾಗಿಲು ಇರುತ್ತು-ಹೊಸ್ತಿಲ ಹತ್ರೆ ನೆಲಲ್ಲಿ ಬುಡಲ್ಲಿ ಇಪ್ಪ ಮರದ ಕುತ್ತಿಲಿ ಬಾಗಿಲಿನ ಕೂರಿಸುತ್ತವು; ಅದಕ್ಕೆ ಈ ಹೆಸರು],ದಳಿಪ್ಪಡಿ[ದಳಿಯ ಕೆಳ ಭಾಗದ ಹಲಗೆ-ಅಗಲ ಇಪ್ಪ ಕಾರಣ ಅದರಲ್ಲಿ ಸಾಮಾನು ಮಡುಗಲಕ್ಕು-ಅಂಬ್ರೆಪ್ಪಿಲಿ ಕೂಪಲೂ ಅಕ್ಕು.],ಬಾಜಿರಹಲಗೆ[ಕೂಪಲೆ ಇಪ್ಪದು],ಮಣ್ಣಾಂಚಿಟ್ಟೆ-ಇತ್ಯಾದಿ.

  20. ಗೊಂತಿಲ್ಲದ್ ಹಲವು ವಿಷಯ ತಿಳಿವಲೆ ಸಿಕ್ಕಿತ್ತು..
    ಸಣ್ಣಾದಿಪ್ಪಗ ನೋಡಿದ ಹಳೇ ಅಜ್ಜನ ಮನೆ ನೆಂಪಾತು…ಇಲ್ಲಿ ಹೇಳಿದ ಎಲ್ಲವೂ ಇದ್ದತ್ತು ಆ ಮನೆಲಿ..ಹತ್ತು ಹಲವು ನೆಂಪುಗಳೊಟ್ಟಿಂಗೆ. ಈಗ ಮನೆಯೇ ಒಂದು ನೆಂಪಾಯಿದು.
    ಒಪ್ಪಣ್ಣನ ಒಪ್ಪ ಶುದ್ದಿಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×