Oppanna.com

ಅವ°-ಇವ° : ಒಂದೇ ಊರಿಂದ ಬಂದ ಇಬ್ರ ಶುದ್ದಿ

ಬರದೋರು :   ಒಪ್ಪಣ್ಣ    on   30/03/2009    8 ಒಪ್ಪಂಗೊ

ಒಪ್ಪಣ್ಣನ ಮಿತ್ರವರ್ಗ ರಜ್ಜ ವಿಸ್ತಾರ ಇದ್ದ ಕಾರಣ ತುಂಬಾ ನಮೂನೆಯ ಜೆನಂಗಳ ಹತ್ತರಂದ ನೋಡ್ಲೆ ಎಡಿತ್ತು.
ಇದು ಒಂದೇ ಊರಿಂದ ಬಂದ ಇಬ್ರ ಕಥೆ. ದೂರದ ಬೆಂಗ್ಳೂರಿಲಿ ಇಪ್ಪೋರ ಕಥೆ.ಕಾಸರಗೊಡಿಂದ ಬೆಂಗ್ಳೂರಿಂಗೆ ನಮ್ಮೋರ ಕಥೆ.
ಕಥೆ ಹೇಳಿರೆ ಕಥೆ ಅಲ್ಲ, ವಿಮರ್ಶೆಯ ಹಾಂಗೆ. ಓದಿ ನೋಡಿ. ಹೇಂಗಿದ್ದು ಹೇಳಿ…

ಅವ°-ಇವ° ಇಬ್ರೂ ಕಲಿವಗ ಒಂದೇ ಕ್ಲಾಸುಗೊ. ಅವ° ಓದಿ ಓದಿ ದೂರ ಹೋದ°, ಇವ° ನಿಧಾನಕ್ಕೆ ಮೇಲೆ ಬಂದ°.
ಅವ°:
ಸಣ್ಣ ಇಪ್ಪಗಳೇ ಓದುದರ್ಲಿ ಭಾರೀ ಉಷಾರು ಮಾಣಿ ಹೇಳಿ ಲೆಕ್ಕ. ಮಹಾಜನ ಸಂಸ್ಕೃತ ಕೊಲೇಜಿಲಿ ಕ್ಲಾಸಿಂಗೆ ಪಷ್ಟು ಬಂದೊಂಡು ಇದ್ದ ಮಾಣಿ. ಮಾಷ್ಟ್ರಂಗೊಕ್ಕೆ ಕಂಡಾಬಟ್ಟೆ ಹತ್ತರಾಣ ಮಾಣಿ. ಒಂದೇ ಸರ್ತಿ ಹೇಳುವಾಗ ಅರ್ಥ ಆವುತ್ತು ಹೇಳ್ತ ಕಾರಣಕ್ಕೆ ಎಲ್ಲೊರು ಇವನ ಹೊಡೆಂಗೆ ನೋಡಿ ಪಾಠ ಮಾಡಿಗೊಂಡಿದ್ದದು. ಮನೆಲಿಯುದೇ ಹಾಂಗೆ, ಆಳುಗೊ ಹರಟೆ ಮಾಡದ್ದೆ ಓದುಲೆ ಉಪ್ಪರಿಗೆಯ ಕೋಣೆ. ಓದಿ ಓದಿ ಬಚ್ಚಿರೆ ನೋಡ್ಲೆ ಟೀವಿ. ಏಂಟೆನಲ್ಲಿ ಕಾಸರಗೋಡು ಕಾಂಗು. ಇರುಳು ವಾರ್ತೆ ಎಲ್ಲ ನೋಡುಗು. ಕೊಂಗಾಟದ ಮಾಣಿ, ಜರ್ಸಿ ಹಾಲು ಕುಡುದು ಹಾಂಗೆ ಕಂಡೊಂಡಿತ್ತಿದ್ದ°. ದೊಡ್ಡ ಕ್ಲಾಸಿಂಗೆ ಹೋದ, ಅಲ್ಲಿಯೂ ಪಸ್ಟು ಬಂದ. ಎಲ್ಲೋರಿಂಗೂ ಹೆಸರು ತಂದ. ಇಂಗ್ಲೆಂಡಿಂಗೆ ದೊಡ್ಡ ಕೆಲಸ ಹುಡುಕ್ಕಿಗೊಂಡು ಹೋದ. ಸಣ್ಣ ಹೆಂಡತ್ತಿ ಅವನ ಹುಡುಕ್ಕಿಗೊಂಡು ಬಂತು. 🙂

ಇವ°:
ಕಲಿವಲೆ ಅಷ್ಟೊಂದು ಉಶಾರಿಲ್ಲದ್ರೂ ಪೈಲು ಆಗ°. ಕ್ಲಾಸಿಲಿ ಎಲ್ಲೊರು ಬೇಕು ಅವಂಗೆ. ಮಾಪ್ಲೆ ಚೆಕ್ಕಂಗಳಿಂದ ಹಿಡುದು ರೋಸಮ್ಮನ ಮಗ°ನ ವರೆಗೆ ಎಲ್ಲೂರು ಅವಂಗೆ ಚೆಙಾಯಿಗಳೇ. ಪಾಪ, ಮನೇಲಿ ಟೀವಿ ಇಲ್ಲದ್ದ ಕಾರಣ ಹೊತ್ತು ಹೋಪಲೆ ಮನೆ ಜಾಲೇ ಗತಿ. ಎಂತಾರು ಗುರುಟುಗು. ಅಮ್ಮನ ಅಳತ್ತಂಡೆ ಸಾಲಿಂಗೆ ನೀರು ಹಾಕುಗು. ಕೆಳಾಣ ಬೈಲಿಂಗೆ ಇಳಿತ್ತವರತ್ರೆ ಗುರ್ತ ಮಾಡಿ ಮಾತಾಡ್ಸುಗು. ಇರುಳು ನೆಡಕ್ಕೊಂಡು ಹೊವುತ್ತವಕ್ಕೆ ಸೂಟೆ ಕಟ್ಟಿ ಕೊಡುಗು. ಹೊಸಗೆದ್ದೆ ಮಾಣಿ ಹೇಳಿರೆ ಸೂರಂಬೈಲು-ನೀರ್ಚಾಲಿಲಿ ಎಲ್ಲೋರಿಂಗೂ ಗುರ್ತವೇ. ಇವ° ಮುಂದೆ ಓಟಿಂಗೆ ನಿಂಬಲೇ ಅಕ್ಕಷ್ಟೆ- ಹೇಳಿ ಅವನ ಅಜ್ಜನ ಮನೇಲಿ ಬೈಗು :-). ಅಜ್ಜನ ಮನೆಗೆ ಹೋಗಿಪ್ಪಗ ನಿಡ್ಳೆ ಅಜ್ಜನ ಕಂಡಿಕ್ಕಿ ಬಕ್ಕು. ರಜ್ಜ ಯಕ್ಷಗಾನದ ಮರುಳುದೇ ಇದ್ದಿದಾ! ಹಾಂಗೆ ಕನ್ನಡರಾಜ್ಯ ಹೇಳಿ ರಜ್ಜ ಅಭಿಮಾನವೂ ಇದ್ದು. ನವೆಂಬ್ರ ಒಂದಕ್ಕೆ ಕನ್ನಡ ಕೊಡಿ ಹಿಡಿಗು.

ಅವ°:
ಚಳಿ ಊರಿಲಿ ಇಪ್ಪ ಮಾಣಿ ಚಳಿ ಕಮ್ಮಿ ಅಪ್ಪಲೆ ಹೇಳಿ ರಜಾ ತೀರ್ಥ ತೆಕ್ಕೊಂಬಲೆ ಸುರು ಮಾಡಿದ°. ಮೈಗೆ ಕರಿ ಕೋಟು (ಕರಿಗ್ಗೋಟು ಅಲ್ಲ!) ಬಂತು, ಕೊರಳಿಂಗೆ ಬೆಳಿ ಪಟ್ಟಿ ಬಂತು. ಶೇಲೆ ಜಾಸ್ತಿ ಆಗಿ ತಲೆ ಬೋಳು ಆತು. :-). ಗೆಂಡನ ಮನೆಗೆ ಹೋದಮತ್ತೆಯೇ ಅಪ್ಪನ ಮನೆ ರುಚಿ ಗೊಂತಪ್ಪದಡ, ಹಾಂಗೆ ಅಲ್ಲಿಗೆ ಹೋಗಿಯಪ್ಪಗ ಜನಕ್ಕೆ ಇಲ್ಲಿಪ್ಪಗ ಬೇಡದ್ದ ಸಂಸ್ಕೃತಿ ಎಲ್ಲ ಹತ್ತರೆ ಅಪ್ಪಲೆ ಸುರು ಆತು. ಯಕ್ಷಗಾನ ಎಲ್ಲ ರಜ್ಜ ರಜ್ಜ ನೋಡಿ ನೋಡಿ ಕಲಿವಲೆ ಸುರು ಮಾಡಿದ°. ತಿರುಗಾಟಲ್ಲಿ ಇಲ್ಲಿಂದ ಹೋದ ಮೇಳದವರೊಟ್ಟಿಂಗೆ ಸೇರಿ ಒಂದು ಸಣ್ಣ ವೇಷ ಹಾಕಿದ°. ಮನೆಗೆ ದೊಡ್ಡ ಪಟ ಕಳುಸಿ ಜೆನ ಆದ. ಅಲ್ಲೇ ಇದ್ದುಗೊಂಡು ಊರಿಲಿ ಒಂದು ಓಟಿಂಗೆ ನಿಂದ, ಹೆಂಡತ್ತಿಯೊ ಓಟಿಂಗೆ ಬಾರದ್ದ ಕಾರಣ ಅದರ ಓಟುದೇ ಸಿಕ್ಕಿದ್ದಿಲ್ಲೆ. ಠೇವಣಿಯೂ, ಮರ್ಯಾದಿಯೂ – ಎರಡುದೇ ನಾಮ. ಕಾಲ ಹೋತು, ತಿಂಗಳಕೇರಿಗೆ ಸಿಕ್ಕುತ್ತ ಸಂಬಳ ಹೆಂಡತ್ತಿಯೊಟ್ಟಿಂಗೆ ತಿರುಗಿ, ಅಮಲು ಕುಡಿವಲೆ ಸಾಕಾಗ! ಎಂತರ ಮಾಡುದು. ಪೈಸೆ ಮಾಡ್ತ ಬೇರೆ ದಾರಿ ಕಾಣ್ತಿಲ್ಲೆ! ಅವು ಆದರೆ ಮೀನು ಮಾರಿ ಆದರೂ ಬದುಕ್ಕುಗು. ಬ್ರಾಮ್ಮರಿಂಗಾಗಪ್ಪ ಅದೆಲ್ಲ. ಇಲ್ಲಿ ಇದ್ದರೆ ಸುಮ್ಮನೆ ಕರ್ಚು, ಬೆಂಗ್ಳೂರಿಂಗೆ ಹೋಪ° ನಾವು – ಹೇಳಿ ಹೆಂಡತ್ತಿ ಕರಕ್ಕೊಂಡು ಬಂದ. ಬಪ್ಪಲೆ ತಕ್ಕ ಪೈಸೆ ಒಳುಶಿತ್ತಿದ್ದ ಕೈಲಿ.

ಇವ°:
ಮನೆಲಿ ಕಾಲುನೀಡಿ ಕೂದರೆ ಹೊಟ್ಟೆ ತುಂಬುತ್ತೋ? ೧೨ ಕ್ಲಾಸು ಕಲ್ತಾದ ಕೂಡ್ಳೆ ಪರಿಕರ್ಮಕ್ಕೆ ಹೋಪಲೆ ಸುರು ಮಾಡಿದ. ಪಳ್ಳತಡ್ಕ ಬಟ್ಟಜ್ಜನೊಟ್ಟಿಂಗೆ ಹೋಪಷ್ಟು ಅಭ್ಯಾಸ ಆತು. ರಜ್ಜ ಮಂತ್ರವೂ ಗೊಂತಿದ್ದ ಕಾರಣ ರುದ್ರವೋ, ಸಂಧಿ ಶಾಂತಿಯೋ ಮಣ್ಣ ಇದ್ದರೆ ಹೋಕು, ಅಮ್ಮ ಮಾಂತ್ರ ಇದ್ದದು ಮನೆಲಿ, ಒಟ್ಟಿಂಗೆ ನಾಲ್ಕು ದನಗಳುದೇ. ಎಷ್ಟು ಬೇಕು ಹಾಂಗೆ? ಬಟ್ಟಜ್ಜ° ಒಂದು ದಿನ ಕೇಳಿದವು, ’ಎನ್ನ ಬಾವನ ಮಗ° ಬೆಂಗ್ಳೂರಿಲ್ಲಿ ದೇವಸ್ತಾನಲ್ಲಿ ಇದ್ದ°, ಅವಂಗೆ ಕೀಶಾಂತಿ ಬೇಕಡ, ಹೋವ್ತೆಯೋ ಕುಂಞೀ..!’ ಇಲ್ಲೆ ಹೇಳಿದ್ದ°ಯಿಲ್ಲೆ. ಅದಾಗಿ ಬಪ್ಪ ಐಶ್ವರ್ಯ ಬೇಡ ಹೇಳುದು ಎಂತಕೆ, ನೋಡೊ°. ಒಂದು ಹೊತ್ತಪ್ಪಗ ಅಮ್ಮನ ಆಶೀರ್ವಾದ ತೆಕ್ಕೊಂಡು, ಕರ್ನಾಟಕ ರಾಜಹಂಸಲ್ಲಿ ಸೀದಾ ಬೆಂಗ್ಳೂರಿಂಗೆ ಬಂದ°. ಬಪ್ಪಲೆ ತಕ್ಕ ಪೈಸೆ ಇತ್ತಷ್ಟೆ ಅವನತ್ರೆ.

ಅವ°:
ಬೆಂಗ್ಳೂರಿಂಗೆ ಬಂದರೆ ಕೆಲಸ ಆರು ಮಾವ° ಕೊಡ್ತವೋ? ಹುಡ್ಕೆಕ್ಕು. ಹೆಂಡತ್ತಿ ತಮ್ಮನ ಗುರ್ತಲ್ಲಿ ಒಂದು ಕೆಲಸ ಸಿಕ್ಕಿತ್ತು. ಸಂಬಳ ರಜ್ಜ ಕಮ್ಮಿ. ಹೆಂಡತ್ತಿಯೂ ಕೆಲಸಕ್ಕೆ ಹೋವುತ್ತು ಈಗ. ಆಪೀಸು ಕೆಲಸ ಜೋರು ಸುರು ಆತು. ಎಲ್ಲಿಗೋಪಲೂ ಪುರುಸೊತ್ತಿಲ್ಲೆ. ಸೋಮವಾರಂದ ಶುಕ್ರವಾರದ ವರೆಗೆ ಕತ್ತೆ ಜನ್ಮ, ಶನಿವಾರ ಆದಿತ್ಯವಾರ ಹೆಬ್ಬಾವು ಜನ್ಮ, ಹರೋಹರ…! ಒಂದೊಂದರಿ ಊರಿನ ಅಡಕ್ಕೆ ತೋಟ ಇದರಿಂದ ಒಳ್ಳೆದು ಹೇಳಿ ಕಾಣ್ತು. ಆದರೆ ಅಲ್ಲಿ ಅಮಲು ತೆಕ್ಕೊಂಬ ವೈವಾಟು ಎಲ್ಲ ಕಷ್ಟ ಹೇಳಿ ಅಂದಾಜಿ ಆದ ಕೂಡ್ಳೆ ಆ ಆಲೋಚನೆಯೇ ಹೋವುತ್ತು. ಸುಮಾರು ಸಮಯ ಅಪ್ಪಗ ಒಂದು ಕಾರು ತೆಕ್ಕೊಂಬಷ್ಟು ಒಳುದತ್ತು. ಇಂಗ್ಲೆಂಡಿಲಿದ್ದಷ್ಟು ಗಮ್ಮತ್ತಿಂದಲ್ಲದ್ರೂ, ರಿಕ್ಷಲ್ಲಿ ಹೋಪದರಿಂದ ಅಕ್ಕೂಳಿ ಕಾರು ಬಂತು.

ಇವ°:
ಮೇಶಾಂತಿಗೆ ಇವ°ನ ಬಾರೀ ಕುಷಿ ಆತು. ಈ ದೇವಸ್ತಾನದ ಓನರಿಂಗೆ ಕೈಲಿ ರಜ್ಜ ಪೈಸೆಯೂ ಆತು. ಸಿನೆಮ ಟಾಕೀಸು ಕಟ್ಸುದೋ, ಅಲ್ಲ ದೇವಸ್ಥಾನ ಕಟ್ಸುದೋ ಹೇಳಿ ಆಲೋಚನೆ ಮಾಡಿಕ್ಕಿ, ಟಾಕೀಸಿನ ತೆರಿಗೆ ಹೆದರಿಕೆ ಇದರ್ಲಿಲ್ಲೆ ಆದ ಕಾರಣ ಇನ್ನೊಂದು ದೇವಸ್ಥಾನ ಕಟ್ಸಿತ್ತು. ಇವನನ್ನೇ ಅದಕ್ಕೆ ಪೂಜಗೆ ಮಾಡಿದವು. ಒಳ್ಳೆ ಕೆಲಸ ಮಾಡಿದ°, ಆ ಬೈಲಿಲಿ (ಪರಿಸರಲ್ಲಿ) ಒಳ್ಳೆ ಹೆಸರು ಮಾಡಿದ°. ಜ್ಯೋತಿಷ್ಯ, ಮಂತ್ರವಾದ, ಪೂಜೆ, ಕುಟ್ಟಿ ಬಡಿವದು – ಹೀಂಗೆ ಎಲ್ಲದಕ್ಕೂ ಇವ°ನೇ. ತಿಂಗಳಿಂಗೆ ಸಾವಿರಗಟ್ಳೆ ದುಡುದ°. ಅಡಿ ಮರದ್ದ°ಯಿಲ್ಲೆ. ಊರಿಂಗೆ ಹೋಗಿ ಅಮ್ಮನ ಕರಕ್ಕೊಂಡು ಬಂದ°. ಕಾಲಕ್ರಮೇಣ ಒಂದು ಮಾಳಿಗೆ ಮನೆ ಕಟ್ಟುಸಿದ°. ಕೈ ಕೆಳ ಊರಿಂದ ಇಬ್ರ ಕರಕ್ಕೊಂಡು ಬಂದ°, ಈಗ ಅವಂಗೆ ಮದ್ಯಾನ್ನದ ವರೇಂಗೆ ರಜ್ಜ ಕೆಲಸ, ಮತ್ತೆ ಪೂರ್ತಿ ಪುರುಸೊತ್ತು.

ಅವ°:
ದುಡುದ್ದು ಒಳುಶಿದರೂ ಮನಸ್ಸು ಮತ್ತೆ ಇಂಗ್ಲೆಂಡಿನ ಮೇಲೆಯೇ ಇದ್ದು. ಇಲ್ಲಿ ಇದ್ದೊಂಡು ಕೆಲಸ ಮಾಡ್ಳೆ ಎಂತದೋ ಮುಜುಗರ. ಬದುಕ್ಕುದುದೇ ಹಾಂಗೆ, ಆಪೀಸಿಲಿ ಏಸಿ ಅಬ್ಯಾಸ ಆಗಿ, ಮನೆಲಿಯೂ ಅದಿಲ್ಲದ್ದೆ ಆಗ! ಉಂಬಲುದೇ ಬರೇ ಹೆಜ್ಜೆ ಮೆಚ್ಚ. ತಿಂಗಳಿಂಗೆ ಒಂದರಿ ಆದರೂ ಸಿನೆಮ ನೋಡದ್ರೆ ಪುಸ್ಕ. ಬಪ್ಪ ಸಂಬಳಲ್ಲಿ ಮೂರರಲ್ಲಿ ಒಂದು ತುಂಡು ತೆರಿಗೆ. ಇನ್ನೊಂದು ತುಂಡು ಬದುಕ್ಕುಲೆ, ಎಲ್ ಕೇಜಿಗೆ ಹೋಪ ಮಗಳಿಂಗೆ ಡೊನೇಷನ್ ಕೊಡುವಗ ಮೂರ್ನೇ ತುಂಡುದೇ ಕಾಲಿ.

ಇವ°:
ಸಮಾಜಲ್ಲಿ ತುಂಬ ಮೇಲೆ ಹೋದ, ರಜ್ಜ ಗುರ್ತವೂ ಅಪ್ಪಲೆ ಸುರು ಆತು. ಪೂಜೆಬಟ್ಟಂಗೆ ಎನ್ನ ಮಗಳ ಕೊಡೆ ಹೇಳಿಗೋಂಡಿದ್ದ ಕೆಲವೆಲ್ಲ ಗೋತ್ರ ಎಂತದಾ° ನಿನ್ನದೂ ಹೇಳಿ ಕೇಳ್ಳೆ ಸುರು ಮಾಡಿದವು.

ಹೀಂಗೇ ಒಂದು ದಿನದ ಶುದ್ದಿ:
ವಲಯ ಮಟ್ಟದ ಟೂರು-ಗೋಕರ್ಣಕ್ಕೆ. ಎಲ್ಲೊರೂ ಬಂದಿತ್ತಿದ್ದವು. ಅವಂದೆ, ಇವಂದೆ ಎಷ್ಟೋ ವರ್ಷ ಕಳುದು ಪರಸ್ಪರ ಸಿಕ್ಕಿದವು. ಅವ° ಬೆಶಿಲು ತಾಗಿ ಕಣ್ಣು ಬಚ್ಚಿರೆ ಹೇಳಿ ಒಂದು ಕಪ್ಪು ಕನ್ನಡ್ಕ ಹಾಕಿತ್ತಿದ್ದ.ಹಾಂಗಾಗಿ ಇವಂಗೆ ಅವನ ಗುರ್ತ ಪಕ್ಕನೆ ಸಿಕ್ಕಿದ್ದಿಲ್ಲೆ. ಅವಂಗೆ ಇವನ ಗುರ್ತ ಸಿಕ್ಕಿದರೂ ಮಾತಾಡ್ಸುಲೆ ಸರಿ ಆಯಿದಿಲ್ಲೆ.ಅಂತೂ ಪರಿಚಯ ಕಾರ್ಯಕ್ರಮಲ್ಲಿ ಪರಸ್ಪರ ಮಾತಾಡಿದವು – ಎಂತ ಶುದ್ದಿ ಮಾರಾಯ°, ಹೇಂಗಿದ್ದೆ? ಶಂಕರ° ಎಂತ ಮಾಡ್ತ, ಕುಮಾರ° ಎಲ್ಲಿದ್ದ° ಈಗ, ಇಬ್ರಾಯಿ ಮರದ ಕಂಟ್ರಾಕ್ಟು ಅಲ್ದೋ?, ಹೇಳಿ ಕ್ಲಾಸುಗಳ ಶುದ್ದಿ ಎಲ್ಲ ಮಾತಾಡಿಗೊಂಡವು.
ಗೋಕರ್ಣ ಸಮುದ್ರತೀರಲ್ಲಿ ಇಳುದವು. ಇವ ಸೀದ ತೆರೆಗಳೊಟ್ಟಿಂಗೆ ಮೈ ಒಡ್ಡಿ, ತಲೆಗೆ ನೀರು ಆಪೋಹಿಷ್ಠಾ ಮಾಡಿ ಆನಂದ ಅನುಭವಿಸಿದ°. ಅವ° ಕನ್ನಡ್ಕದ ಎಡಕ್ಕಿಲಿ ಸೂರ್ಯನ ನೋಡಿಗೊಂಡು, ಇಂಗ್ಲೆಂಡಿಲಿ ತೆಗದ ಕೆಮರ ನೇಲ್ಸಿಗೊಂಡು, ಹಾಕಿದ ಬೂಡ್ಸಿಂಗೆ ಆದ ಹೊಯಿಗೆ ಕುಡುಗಿಯೊಂಡು ದೂರಲ್ಲಿ ನಿಂದ°.ಇವ° ರಥೋತ್ಸವದ ರಥ ಎಳವಲೆ ಸೇರಿ ಕುಶಿ ಆದ°.ಅವ° ಕರೆಲಿ ಇಸ್ತ್ರಿ ಹಾಳಾಗದ್ದ ಹಾಂಗೆ ಕೈ ಕಟ್ಟಿ ನಿಂದ°. ಇವ° ಶಿವರಾತ್ರಿ ಲೆಕ್ಕದ ಗಂಗಾಜಲ ಅಭಿಶೇಕ ಮಾಡಿದ°, ಅವಂಗೆ ರಶ್ಶಿಲಿ ತಲೆ ಸೆಳಿವಲೆ ಸುರು ಆಗಿ ಕರೆಲಿ ನಿಂದ°. ಮೊಬೈಲು ರೇಂಜು ಇಲ್ಲದ್ದು ಮಾಂತ್ರ ಅವಂಗೆ ಬಾರೀ ಬೇಜಾರು ಆತು. ಕೂದುಗೊಂಡು ಉಂಬಲೆ ಕಷ್ಟ ಆತು, ಬಳುಸುವಗ ರಟ್ಟಿದ ಸಾರಿನ ಕಲೆ ನೋಡಿ ಪಿಸುರು ರಟ್ಟಿ ರಟ್ಟಿ ಬಂತು. ಇವ° ಪೂರ್ತಿ ಆನಂದಿಸಿದ. ಅವ° ಹೋದಲ್ಲೆಲ್ಲ ಬೇರೆಯೇ ಇತ್ತಿದ್ದ°. ಗುರುಗಳೊಟ್ಟಿಂಗೆ ಇವ° ಮಾತಾಡಿ ಮಂತ್ರಾಕ್ಷತೆ ತೆಕ್ಕೊಂಡ°, ಅವನ ಪ್ಯಾಂಟಂಗಿ ಹಾಂಗೆ ಮಾಡ್ಳೆ ಬಿಟ್ಟಿದೇ ಇಲ್ಲೆ..!

ಬದುಕಿನ ಸರಳ ಆನಂದಂಗೊ ಇವಂಗೆ ಅನುಭವಿಸುಲೆ ಸಿಕ್ಕಿದಷ್ಟು ಅವನ ಜೀವನ ಪದ್ಧತಿ ಬಿಡ್ತಿಲ್ಲೆ. ಇವ° ತಿಂಗಳಿಂಗೆ ೨ ಸರ್ತಿ ಊರಿಂಗೆ ಹೋವುತ್ತ, ಜಾಗೆ ನೋಡಿ ಬತ್ತ°, ಮದೂರು, ಕಣ್ಯಾರ ಎಲ್ಲ ಹೋವುತ್ತ°, ಗಟ್ಟದ ಮೇಲೆಯುದೇ ಸುತ್ತುಲೆ ಹೋವುತ್ತ°, ಅಮ್ಮನ ಕರಕ್ಕೊಂಡು ಮಠ, ದೇವಸ್ಥಾನ ಎಲ್ಲ ಹೋಗಿ ಬತ್ತ°, ಊರಿಂದ ಬಂದವರ ಮನೆಗೆ ದಿನಿಗೆಳ್ತ.
ಅವಂಗೆ ಮಾಂತ್ರ ಪರಿಸರವ ಅರ್ಥ ಮಾಡ್ಳೆ ಪುರುಸೊತ್ತೇ ಇರ್ತಿಲ್ಲೆ. ಅಪ್ಪಮ್ಮ, ನೆಂಟ್ರತ್ತ್ರೆ ಮಾತಾಡ್ಳೆ ಮೂಡೇ ಇರ್ತಿಲ್ಲೆ. ಊರಿಂದ ಬಂದವರ ಮನೆಗೆ ದಿನಿಗೆಳುಲೆ ಜಾಗೆಯೇ ಇರ್ತಿಲ್ಲೆ. ಬೇಕೊ ಹೀಂಗಿಪ್ಪ ಬಂಧನಂಗೊ?

ಒಂದೊಪ್ಪ: ನಿಂಗೊಗೆಷ್ಟು ಪುರುಸೊತ್ತು ಸಿಕ್ಕುತ್ತು ಭಾವಾ?

8 thoughts on “ಅವ°-ಇವ° : ಒಂದೇ ಊರಿಂದ ಬಂದ ಇಬ್ರ ಶುದ್ದಿ

  1. ಇದೆಲ್ಲ ಬರವಲೆ ಮಾಂತ್ರ ಚೆಂದ.ಹಾಂಗೆ ಹೇಳಿ ಎಲ್ಲೋರೂ ಪಿಯುಸಿಲಿ ಕಲಿವದು ನಿಲ್ಲುಸೆಕ್ಕು ಹೇಳಿಯೋ,ಅಥವಾ ಹೆರ ಹೋಗಿ ಹಾಳಯೇಕ್ಕುಹೇಳಿ ಏನೂ ನಿರ್ದಿಷ್ಟ ಹೇಳುದು ಸುಮ್ಮನೆ.ಬೈಲಿಲ್ಲಿ ಹಾಳಾದವೂ ಹೆರ ಹೋಗಿ ಒಳ್ಳೆದಾದವೂ ಎಷ್ಟೋ ಜೆನ ಇಪ್ಪಗ ಹೀಂಗೆ ಆಲೋಚನೆ ಮಾಡೆಕಾದ್ದಿಲ್ಲೇ.ನಾಲ್ಕು ಅಣ್ಣ ತಮ್ಮಂದ್ರಿಪ್ಪ ಮನೇಲಿ ಮೂರೂ ಜೆನ ಆದರೂ ಹೆರ ಹೋಗದ್ದೆ ಈ ಕಾಲಲ್ಲಿ ಉಮ್ಬಲೆ ಕಷ್ಟ.

  2. ಅದ್ಯಾರು ಒಪ್ಪಿ? ಒಪ್ಪಣ್ಣನ ತಂಗೆಯೋ?

  3. ಭಾರೀ ಚೆಂದ ಆಯಿದು ಬರದ್ದದು….
    ಅಜ್ಜ ಎದುರು ಕೂದೊಂಡು ಕಥೆ ಹೇಳಿಗೊಂಡಿಪ್ಪ ಹಾಂಗೆ ಆವುತ್ತು ಓದುವಾಗ…. 🙂

  4. iddudara idda haange baredde. bareetha iru maaraya. aanu innu mundhe ninna articles vodutte.

  5. super aidu maraya. ninna talage kodekku !
    ippadara ippa hange ara hesaroo heladde baradde ! adbhuta 😀

  6. ಭಾರೀ ಚೆಂದ ಆಯಿದು ಭಾವಾ…

  7. ಎನಗೂ ಪುರ್ಸೋತ್ತೆ ಇಲ್ಲೇ ಭಾವಾ ….. ಎಂತ ಮಾಡುದು ಹೇಳಿಯೇ ಅಂದಾಜಾವ್ತಿಲ್ಲೆ……… ಹಾಂಗೆ ಹೇಳಿ ಸಂಸ್ಕ್ರತಿ ಬಿಡಲೂ ಮನಸಾವ್ತಿಲ್ಲೇ ……..:-(

  8. Eshtu chenddali baretteyo anna…Laika barette miniya…
    Ishtu laika barette heali modale gontagittiddare noopura bhramarige ankanve barevale heltittidde…egaloo time minchiddille…oncuru manasu madu ata?
    ella lekhana, abipraya enage chendalli kantu..olle artha madigomba shkati ninagiddu…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×