Oppanna.com

ಹೇಳಿಕೆಗೆ ಹೋದ ಮದ್ಮಾಯ° ಹಶು ಹೊಟ್ಟೆಲಿ ಹೆರಟನಾಡ..!!

ಬರದೋರು :   ಒಪ್ಪಣ್ಣ    on   01/03/2013    16 ಒಪ್ಪಂಗೊ

ಗೇಣಿ – ಗೆಯ್ಮೆ- ಆರ್ವಾರ ಹೇದು ಹಲವು ವಿಶಯಂಗಳ ನಾವು ಆಚಮನೆ ದೊಡ್ಡಪ್ಪನ ಕೈಂದ ತಿಳ್ಕೊಂಡಿದು.
ಸಮಾಜದ ದೊಡ್ಡೋರು-ಪಾಪದೋರು ಹೇಳ್ತ ವಿತ್ಯಾಸ ಇಲ್ಲದ್ದೆ ಎಲ್ಲೋರುದೇ ಹೇಂಗೆ ಚೆಂದಲ್ಲೇ ಬದ್ಕಲೆ ಅನುಕೂಲ ಮಾಡಿ ಕೊಟ್ಟಿದು ಹೇಳ್ತದೂ ನವಗೆ ಅರಡಿಗಾಯಿದು.
ಮುಂದೆ ಅದೇವದೋ ಕಾನೂನು ಬಂದ ಮತ್ತೆ ಈ ಗೇಣಿಪದ್ಧತಿ ಸಂಪೂರ್ಣ ನಿಂದು, ಈಗ ಎಲ್ಲೋರುದೇ ಅವರವರ ಸ್ವಂತ ಭೂಮಿಲಿ ಬದ್ಕುತ್ತ ನಮುನೆ ಅವಕಾಶ ಆಯಿದು ಹೇಳ್ತದನ್ನೂ ನಾವು ಅರ್ತುಗೊಂಡಿದು.

ಎಲ್ಲಿ ದೊಡ್ಡೋರು – ಪಾಪದೋರು ಹೇಳ್ತ ವಿತ್ಯಾಸ ಬತ್ತೋ, ಅಲ್ಲಿ ಅಸಮಾನತೆ ಬತ್ತು. ಅಸಮಾನತೆ ಸಮಾಜದ ಮನಸ್ಸಿಂಗೆ ಸಮ್ಮಂದ ಪಟ್ಟದು. ಇದು ಎಲ್ಲಾ ಊರಿಲಿಯೂ ಎಲ್ಲಾ ಸಮಾಜಲ್ಲಿಯೂ ಇಪ್ಪ ಸಂಗತಿಯೇ.
ಒಬ್ಬ° – ತಾನು ಕೆಳ ಇದ್ದೆ ಹೇದು ತಿಳ್ಕೊಂಡ್ರೆ, ಇನ್ನೊಬ್ಬ° ಮೇಗೆ ಹೋವುಸ್ಸು ಸಹಜವೇ ಇದಾ! ಹಳೆಕಾಲದ ಗೇಣಿ ಪದ್ಧತಿಗೂ, ಈ ಅಸಮಾನತೆಗೂ ಏನೇನೂ ಸಮ್ಮಂದ ಇಲ್ಲ. ಉದಾಹರಣೆಗೆ, ಈ ಗೇಣಿಪದ್ಧತಿ ಹೋದ ಕೂಡ್ಳೇ ಈ ಅಸಮಾನತೆ ಹೋತು ಹೇದು ಗ್ರೇಶುಸ್ಸು ಬೇಡ!
ಹಳೆ ಕಾಲದ ಪದ್ಧತಿಗೊ ಈಗ ತೊಳದು ಹೋಯಿದು, ಬೇರೆಂತದೋ ಹೊಸತ್ತು ಸುರು ಆಯಿದು. ಆದರೆ ಸಾಮಾಜಿಕ ಅಸಮಾನತೆ ಇಪ್ಪಲ್ಲಿ ಮದಲೂ ಇದ್ದತ್ತು, ಈಗಳೂ ಇದ್ದು. ಇಲ್ಲದ್ದಲ್ಲಿ – ಮದಲೂ ಇದ್ದತ್ತಿಲ್ಲೆ, ಈಗಳೂ ಇಲ್ಲೆ – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
~
ಇದೆಲ್ಲ ಎಂತಗೆ ನೆಂಪಾತು ಹೇದರೆ, ಓ ಮೊನ್ನೆ ಕಜೆಮೂಲೆ ಭಾವಯ್ಯ° ಸಿಕ್ಕಿಪ್ಪಾಗ ಒಂದು ಶುದ್ದಿ ಹೇಳಿದ°.
ಪೇಟೆಕೆಲಸ ಅಪ್ಪಗ ಹಶು ತಡೆಯದ್ದೆ ಕಾನಾವು ಡಾಗುಟ್ರ ಕೆಳಾಚಿಕೆ ಇಪ್ಪ ಹೋಟ್ಳಿಲಿ ಉಂಬಲೆ ಹೋದೆ.
ಅಷ್ಟಪ್ಪಗಳೇ ಕಜೆಮೂಲೆ ಭಾವ° ಸಿಕ್ಕಿದ್ದು. ಒಟ್ಟಿಂಗೆ ಉಂಡ ಕಾರಣ ಬಿಲ್ಲುಚೀಟು ಒಂದೇ ಹರುದರೆ ಸಾಕನ್ನೇ! 🙂
ಹಾಂಗೆ, ಉಂಡುಗೊಂಡಿಪ್ಪಾಗ ಮಾತಾಡಿದ ಸಂಗತಿ ಇದು. ಪೇಟೆ ಹೇದರೆ ಅಂಬೆರ್ಪೇ. ಅವ° ಸಿಕ್ಕಿದ್ದೂ ಅಂಬೆರ್ಪಿಲೇ, ಉಂಡದೂ ಅಂಬೆರ್ಪಿಲೇ, ಶುದ್ದಿ ಹೇಳಿದ್ದೂ ಅಂಬೆರ್ಪಿಲೇ. ಆನುದೇ ಅಂಬೆರ್ಪಿಲೇ ಹೇಳಿಕ್ಕುತ್ತೆ,
ಆಗದೋ?
~
ನಮ್ಮೂರ ನೂರಾರು ಮಾಣಿಯಂಗಳ ಹಾಂಗೆ, ಕಜೆಮೂಲೆ ಭಾವಯ್ಯನೂ – ಬೆಂಗುಳೂರು. ಬೆಂಗುಳೂರಿಲಿ ಕೆಲಸ ಎಂತ ಕೇಳಿರೆ ನಾವು ಟ್ಟೆಟ್ಟೆಟ್ಟೆ; ನವಗರಡಿಯ.
ಕಜೆಮೂಲೆ ಮಾವಂಗೆ ಒಂದು ಅಂಗುಡಿ ಇದ್ದು – ಓ ಅಲ್ಲಿ, ಪಳ್ಳತ್ತಡ್ಕ ತಿರ್ಗಾಸಿಂದ ಮುಂದೆ.
ಆ ಅಂಗುಡಿಲಿ ಬಂದ ವ್ಯಾಪಾರಲ್ಲಿ ಹೇಂಗೋ ಉಂಡುಗೊಂಡು ಈ ಒಬ್ಬನೇ ಮಗನ ಓದುಸಿ ಬೆಂಗುಳೂರಿಲಿ ಕೆಲಸ ಹೊಂದುಸುವಲ್ಲಿಗೆ ಮಾವನ ಶ್ರಮ ಸಾರ್ಥಕ ಆತು ಹೇದು ಗ್ರೇಶಿಗೊಂಡಿದವು.
ಹಾಂಗೆ, ಈಗ ಸದ್ಯಲ್ಲೇ ಅವುದೇ ಅಂಗುಡಿಯ ಬಾಗಿಲೆಟ್ಟಿ ಬೆಂಗುಳೂರಿಂಗೇ ಹೋವುತ್ತವಾಡ. ಇಲ್ಲಿ ಅಂಗುಡಿ ಮಡಗಲೆ ಅಲ್ಲ, ಇಲ್ಲಿ ಮಗನೊಟ್ಟಿಂಗೆ ಚೆಂದಕೆ ಬದ್ಕಲೆ.

ಈ ಕಜೆಮೂಲೆ ಭಾವಂಗೆ ಓದಲೆಯೂ ಭಾರೀ ಕಷ್ಟ ಆಗಿತ್ತು. ಬೈಲ ನೆರೆಕರೆಯ ಕೆಲವು ಜೆನ ಕೈ ಉದ್ದ ಮಾಡಿದ ಕಾರಣ ಈಗ ಕೆಲಸ ಸಿಕ್ಕಿ ನೆಮ್ಮದಿಯ ಬದ್ಕು ಸುರು ಆಯಿದು.
ಕಜೆಮೂಲೆ ಭಾವಯ್ಯಂಗೆ ಕಳುದೊರಿಶ ಮದುವೆ ಆದ್ದು. ಕೂಸು ಓ ಅಲ್ಲಿ – ವಿಟ್ಳ ಹೊಡೇಣದ್ದು. ಮಾಣಿಗೆ ಅನುರೂಪ ಆದ್ಸು ಹೇದು ಬೇರೆ ಹೇಳೇಕೋ.
ಪರಸ್ಪರ ಹೊಂದಾಣಿಕೆ ಇರೇಕಾದ್ಸು ಮುಖ್ಯ. ಇದ್ದು,
ಅದಿರಳಿ.
~

ನಾವು ಹೋಟ್ಳಿಲಿ ಉಂಬದೇ ಕಮ್ಮಿ. ಹಾಂಗೆ ಅವನನ್ನೂ ಕೆಣಕ್ಕಿತ್ತು – ಯೇ ಭಾವಾ, ಎಲ್ಯಾರು ನೆಂಟ್ರ ಮನೆಯೋ ಮತ್ತೊ° ಇತ್ತಿಲ್ಯೋ –ಹೋಪಲಾವುತಿತನ್ನೇ? – ಹಾಂಗೆ ಹೀಂಗೆ ಸುಮಾರು ನೆಗೆಮಾಡಿಗೊಂಡೆಯೊ°.
ಅಷ್ಟಪ್ಪಗಳೇ ಅವ ಈ ಶುದ್ದಿ ಹೇಳಿದ್ದು. ಶುದ್ದಿ ಹೇಳುವಗ ಒಪ್ಪಣ್ಣಂಗೆ ಪೂರ್ತಿ ಕೇಳಿದ್ದೂ ಇಲ್ಲೆ; ಹೋಟ್ಳಿಂಗೆ ಬಂದೋರು ಉಂಬ ಹರಟೆಲಿ!
ಅದುಸರಿ, ಶುದ್ದಿ ಎಂತರ? ಅವನ ಮದುವೆ ಸಮೆಯಲ್ಲಿ ಆದ ಒಂದು ಸಂಗತಿಯ.

~

ಮಾಷ್ಟ್ರುಮಾವನ ಕೆಲಸದ ಆಣು “ಮದಿಮ್ಮೆ ಉಂಡು” ಹೇದು ತಿಂಗಳುಗಟ್ಳೆ ರಜೆ ಮಾಡುಗು; ಆದರೆ ಬೆಂಗುಳೂರಿಲಿ ಹಾಂಗೆಲ್ಲ ರಜೆ ಸಿಕ್ಕುತ್ತೋ? ಇಲ್ಲೆ.
ಮದುವೆ ಸಮ್ಮಂದಿ ಎಲ್ಲ ಒಯಿವಾಟುಗಳೂ ಓಪೀಸು ಕೆಲಸಂಗಳ ಎಡಕ್ಕಿಲಿಯೇ ಆಯೇಕು.
ಹೇಳಿಕೆ, ಧಾರೆ ಸೀರೆ, ಇನ್ನೊಂದು, ಮತ್ತೊಂದು – ಹೇದು. ಕೆಲಸದ ಬೆಶಿಯ ಎಡಕ್ಕಿಲಿ ಹೀಂಗಿರ್ಸರ ಜೋಡುಸಿಗೊಂಡು ಮುಂದುವರಿತ್ತೇ ದೊಡ್ಡ ಸಂಗತಿ.
ಶೆನಿವಾರ – ಆಯಿತ್ಯವಾರ ಎರಡು ದಿನ ರಜೆ ಇದ್ದ ಕಾರಣ ಉದಿಯಾಂದ ಸುರುಮಾಡಿರೆ ಹೊತ್ತು ಕಂತುವನ್ನಾರವೂ ನೆಂಟ್ರುಗಳ ಪೈಕಿ ಮನೆಗೊಕ್ಕೆ ಹೋಗಿ ಹೇಳಿಕೆ ಹೇಳುಸ್ಸೇ ಕೆಲಸ ಆಗಿತ್ತಾಡ.
ಮನಗೆ ಬೇಗ ಬಂದೇ ಕಳಿಯೇಕು ಹೇದು ಏನಿಲ್ಲೆ, ಒಂಟಿ ಬಿಡಾರ ಅಲ್ಲದೋ ಇದ್ದದು. ಹಾಂಗಾಗಿ ಇರುಳೊರೆಗೂ ಮುಂದುವರಿಗು ಒಂದೊಂದರಿ. ಹಾಂಗೆ, ಆ ಸಮೆಯದ ಪ್ರತಿ ವಾರದ ಹಾಂಗೆ – ಒಂದು ಕೆಂಪು ಶೆನಿವಾರ ಹೇಳಿಕೆ ಹೇಳುಲೆ ಹೆರಟನಾಡ.
~

ಉದಿಯಪ್ಪಾಗ – ಹೊದಕ್ಕೆ ಒಳದಿಕಂಗೆ ಬೆಣ್ಚಿ ಬಡುದು, ಇನ್ನು ಒರಕ್ಕೇಬಾರ ಹೇಳಿ ಆದ ಮತ್ತೆ – ಎದ್ದತ್ತು; ಮಿಂದಿಕ್ಕಿ ಹೆರಟತ್ತು.
ದಾರಿಲಿ ಹೋಟ್ಳುಗೊಕ್ಕೆ ಬರವೋ? ಅಡಿಗಭಾವನ ಹೋಟ್ಳಿಲಿ ಇಡ್ಳಿಯೋ, ದೋಸೆಯೋ – ಎಂತಾರು ತಿಂದುಗೊಂಡತ್ತು.
ಇಡ್ಳಿ ಮಾಂತ್ರವೋ, ಕಾಪಿ? ಹೇಳಿಕೆಗೆ ಹೋದಲ್ಲಿ ಕೊಡ್ತವನ್ನೇ! 🙂
ಸರಿ, ಹೇಳಿಕೆ ಕೆಲಸ ಸುರು.

ಸುರೂವಾಣ ಮನೆಲಿ ಹೇಳಿಕೆ. ಹೀಂಗೀಂಗೆ, ಇಂತಾ ದಿನ ಮದುವೆ, ಬರೆಕ್ಕು, ಕಳಿಶಿಕೊಡೆಕ್ಕು.
ಅಷ್ಟಪ್ಪಗ – ಕೂಸೆಲ್ಲಿಂದ, ಎಂತ ಮಾಡ್ತು, ಅದರ ಅಜ್ಜನ ಮನೆ ಎಲ್ಲಿ, ಮನೆ ಎಲ್ಲಿ ಮಾಡಿದ್ದೆ, ಬಾಡಿಗೆ ಎಷ್ಟು – ಅವರವರ ಮನೋದೃಷ್ಟಿಗೆ ಅನುಗುಣವಾದ ಸ್ವಾಭಾವಿಕ ಮಾತುಕತೆಗ ಎಲ್ಲ ಮನೆಲಿಯೂ ಆವುತ್ತು.
ಎರಡ್ಣೇ ಮನೆಲಿಯೂ ಅದೇ ಸಂಗತಿ, ಮೂರ್ನೇ ಮನೆಲಿಯೂ ಅದೇ ಕತೆ, ಮತ್ತಾಣ ಮನೆಲಿಯೂ ಅದನ್ನೇ – ಹೇಳಿ ಹೇಳಿ ಹೇಳಿ, ಒರಕ್ಕಿಲಿಯೂ ಅದೇ ಹೇಳಿಕೆಗಳೇ ತಲಗೆ ಬತ್ತ ಹಾಂಗಾಗಿತ್ತಾಡ ಅವಂಗೆ!
ಹೆಚ್ಚುಕಮ್ಮಿ ಎಲ್ಲಾ ಮನೆಲಿಯೂ ಒಳ್ಳೆ ರೀತಿಲಿ ಹೇಳಿಕೆಗೊ ಮುಗುದ್ದು. ಅದೇವದೂ ಈಗ ಸಮಗಟ್ಟು ನೆಂಪಿಂಗೆ ಬತ್ತಿಲ್ಲೆ. ಆದರೆ, ಅದೊಂದು ಮನೆ ಮಾಂತ್ರ – ಒಳ್ಳೆತ ನೆಂಪಿಲಿದ್ದು ಭಾವಂಗೆ.
ಎಂತಗೆ? ನಿಂಗಳೇ ಕೇಳಿ –
~
ಆ ಮನೆಯೂ ನೆಂಟ್ರ ಮನೆಯೇ. ನೆಂಟ್ರಲ್ಲದ್ದರೆ ಕಾಗತ ಕೊಡ್ಳೆ ಹೋವುತ್ತೋ? ಇಲ್ಲೆ!
ಆ ನೆಂಟ್ರುಗೊ ಕಜೆಮೂಲೆಯ ನೆರೆಕರೆಯೋರಡ. ರಜ ದೊಡ್ಡೋರು ಹೇದು ಲೆಖ್ಖ. ಹೇದರೆ, ದೊಡ್ಡೋರು, ಶ್ರೀಮಂತಿಗೆ ಇರ್ತೋರು ಬಾಕಿ ಹಲವು ಜೆನಂಗೊ ಇದ್ದರೂ – ಇವು ರಜ ದೊಡ್ಡಸ್ತಿಕೆ ತೋರ್ಸುತ್ತರಲ್ಲೇ ಎತ್ತಿದ ಕೈ – ಹೇಳ್ತದು ಕಜೆಮೂಲೆ ಆಸುಪಾಸಿಲಿ ಪ್ರಸಿದ್ಧ.
ಆದರೂ, ನೆರೆಕರೆಯೂ ಅಪ್ಪು, ದೂರಂದ ನೆಂಟ್ರೂ ಅಪ್ಪು – ಮದುವೆ ಕಾಗತ ಕೊಡದ್ದೆ ಇಪ್ಪಾಂಗಿದ್ದ ಕಾರಣವೂ ಯೇವದೂ ಇಲ್ಲೆ – ಹೇದು ಸೀತ ಹೋದ್ಸೇ.
ಹೋಪ ಮದಲು – ಪೇಟೆ ಕ್ರಮದಂತೆ ಪೋನು ಮಾಡಿ ಇಂದು ಬತ್ತೆ – ಹೇಳಿಕ್ಕಿಯೇ ಹೋದ್ಸು.

ರಜ ಕೆಲಸಂಗೊ ಇತ್ಯಾದಿಗಳ ಮುಗುಶಿಗೊಂಡು ಹದಾಕೆ ಹೋದ್ಸು ಮಾಂತ್ರ.
ಆ ಮನೆಗೆ ಎತ್ತುವಗಳೇ ಗಂಟೆ ಹನ್ನೆರಡೂವರೆ, ಹೊತ್ತು ನೆತ್ತಿಗೇರಿದ್ದಾಡ. ಎಡಕ್ಕಿಲಿ ಆಸರಿಂಗೆಯೂ ಸಿಕ್ಕದ್ದ ಕಾರಣ ಹಶುದೇ ನೆತ್ತಿಗೇರಿತ್ತೋ ಏನೋ ಈ ಬಾವಂಗೆ. ಅಂತೂ ಮನೆ ಒಳಾಂಗೆ ಎತ್ತಿದ°.
ಎಜಮಾನ್ತಿ ಬಾಗಿಲು ತೆಗದತ್ತು, ಈ ಜೆನರ ಕಂಡಪ್ಪದ್ದೇ ಗೆಂಡನ ದಿನಿಗೆಳಿತ್ತು.
ಊರಿಲಿ ನೆರೆಕರೆ ಆದರೂ – ಇವಕ್ಕೆ ಪರಿಚಯ ಕಡಮ್ಮೆಯೇ. ಇಬ್ರುದೇ ಸುಮಾರು ಮದಲೇ ಊರು ಬಿಟ್ಟ ಕಾರಣ.
ಎಜಮಾನ ಬಂದು ಮಾತಾಡಿದ°, ಎಂತದೋ ತಿಂದು ಪೂರ್ತಿ ಅಗುದೂ ಆಯಿದಿಲ್ಲೆ: “ಹ್ಮ್, ಎಂತಾ? ಮದುವೆ ಆವುತ್ತೆಯೋ? ಎಷ್ಟು ನಿನಗೆ ಸಂಬಳ? ಹೆಂಡತ್ತಿ ಸಾಂಕಲೆ ಖರ್ಚಿದ್ದು, ಗೊಂತಿದ್ದನ್ನೇ” – ಹೇಳಿ ಒಬ್ಬನೇ ನೆಗೆಮಾಡಿಗೊಂಡನಾಡ.
ಚೆಲ, ಅಪುರೂಪಕ್ಕೆ ಕಾಂಬದಾರೂ ಇದೆಂತ ಈ ನಮುನೆಲಿ ಮಾತಾಡ್ತ° ಈ ಜೆನ? ಕಜೆಮೂಲೆ ಭಾವಂಗೆ ಆಶ್ಚರ್ಯ ಆತು. ಆದರೂ – ಸುಮ್ಮನೆ ಕೇಳಿಗೊಂಡು ಕೂದ° .

ಇವ° ಕಾಗತ ಕೊಟ್ಟ°. ಅವ° ತೆಕ್ಕೊಂಡ°.
ನೀಟಕ್ಕೆ ಬಿಡುಸಿ, ಮನಾರಕ್ಕೆ ಓದಿದ°. ಅಪ್ಪನ ಅಮ್ಮನ ಹೆಸರು ಅದುವೇ ಅಲ್ಲದೋ – ಹೇದು ಧೃಡಮಾಡಿಗೊಂಡ°.
ಎಂತದೋ ಮಾತಾಡೇಕು – ಅಷ್ಟಪ್ಪಗ ಒಳಂದ ಮೊಬೈಲು ಕಿಣಿಕಿಣಿ ಹೇಳಿತ್ತು. ಅದಾ – ಈಗ ಬತ್ತೆ, ನಿಲ್ಲು – ಹೇಳಿಕ್ಕಿ ಎಜಮಾನ ಪೋನು ಹಿಡ್ಕೊಂಡು ಉಪ್ಪರಿಗ್ಗೆ ಹೋದನಾಡ.
ಅವ° ಬಾರದ್ದೆ ಇವಂಗೆ ಹೆರಡ್ಳೆ ಗೊಂತಿಲ್ಲೆ, ಇವ ಇಲ್ಲಿ ಕೂದ್ಸು ಅವಂಗೆ ನೆಂಪಿಲ್ಲೆ –
ಪೋನೇ ಪೋನು. ಎಷ್ಟು ಹೊತ್ತಾದರೂ ಮುಗಿತ್ತಿಲ್ಲೆ, ಇಂಗ್ಳೀಶಿಲಿ ಇವಂಗರಡಿವ ಎಲ್ಲಾ ನಮುನೆ ಗೆರೆಗಳನ್ನೂ ಹೇಳಿ ಆದ ಮೇಗೆ ಪೋನು ಮುಗಾತು. ಅಷ್ಟಪ್ಪಗ ಗಂಟೆ, ಒಂದೂವರೆ ಕಳುತ್ತು!

ಪೋನು ಮುಗುದ ಮತ್ತೆ ಬಾಯಿ ಉದ್ದಿಗೊಂಡು – ಎಂತದೋ ಚಿಪ್ಸೋ, ಲೇಸೋ – ತಿಂದದು ಕಾಣ್ತು; ಬಾಯಿ ಉದ್ದಿಗೊಂಡು ಕೆಳ ಬಂದ°. ಆಗ ಅರ್ಧಲ್ಲಿ ನಿಲ್ಲುಸಿದ ಕಾಗತವ ಪೂರ್ತಿ ಓದಲೆ ಸುರು ಮಾಡಿದ°.
ಎಷ್ಟೊತ್ತಾದರೂ ಇವಂಗೆ ಕಾಗತ ಓದಿಯೇ ಆವುತ್ತಿಲ್ಲೆ.
ಕಜೆಮೂಲೆ ಭಾವಂಗೆ ಅಂತೂ ಇನ್ನು ತಡವಲೇ ಎಡಿಯ. ಹೊತ್ತು ಆಗಳೇ ನೆತ್ತಿಗೇರಿದ್ದು; ಅದರ ಬೆನ್ನಾರೆ ಹಶುದೇ ನೆತ್ತಿಗೇರಿದ್ದು. ಇವರ ಕ್ರಮ ಕಾಂಬಗ ಈಗ ಪಿತ್ಥವೂ ನೆತ್ತಿಗೇರಿತ್ತು! ಹು ಹು!!
ಕಾಗತವ ಪುರುಸೋತಿಲಿ ಓದಿಗೊಂಬಲಕ್ಕನ್ನೇ ಈ ಭಾವಯ್ಯಂಗೆ.
ರಪಕ್ಕನೆ ಎದ್ದು – “ಸರಿ ಅಣ್ಣ ಹಾಂಗಾರೆ, ಮದುವೆಗೆ ಬನ್ನಿ, ಅಲ್ಲಿ ಕಾಂಬ°” ಹೇಳಿದನಾಡ ಕಜೆಮೂಲೆ ಭಾವ°.
ಇದಾ, ಇವಂಗೆ ಆಸರಿಂಗೆ ಕೊಡು. ಹೆರಡ್ತಾ ಇದ್ದ°” ಮೆಲ್ಲಂಗೆ ಹೇಳಿದನಾಡ ಮನೆ ಎಜಮಾನ. ಅಷ್ಟು ಸಣ್ಣಕೆ ಹೇಳಿರೆ ಆ ಎಜಮಾನ್ತಿಗೆ ಕೇಳುಗೋ – ಅದು ಉಪ್ಪರಿಗೆಲಿ ಮಕ್ಕಳೊಟ್ಟಿಂಗೆ ಇಲ್ಲೆಯೋ?
ಕೇಳುಲೆ ಬೇಕಾಗಿ ಹೇಳಿದ್ದೂ ಅಲ್ಲ ಇದಾ! ಅದಿರಳಿ.
“ಆಸರಿಂಗೆ ಎಂತೂ ಬೇಡಪ್ಪಾ, ಇನ್ನೊಂದರಿ ಬತ್ತೆ” ಹೇಳಿಕ್ಕಿ ಕಜೆಮೂಲೆ ಬಾವ ಪೀಂಕಿದನಾಡ.
ಆ ದಿನ ಹೊತ್ತೋಪಗ ಅವನ ಅಪ್ಪನ ಹತ್ತರೆ ಮಾತಾಡುವಾಗ ಕಜೆಮೂಲೆಭಾವಂಗೆ ವಿಷಯ ಗೊಂತಾತಾಡ, ಆ ಎಜಮಾನನ ಅಪ್ಪನ ಕೈಂದ ಈ ಕಜೆಮೂಲೆ ಭಾವನ ಅಪ್ಪ° – ಒಂದಾನೊಂದು ಕಾಲಲ್ಲಿ ರಜ ಸಾಲ ತೆಕ್ಕೊಂಡಿದವಾಡ.
ಸಾಲ ಎಂದೋ ಸಂದಿದ್ದು; ಆದರೆ ಅವರ ದರ್ಪ ಈಗಳೂ ಸಂದುತ್ತಾ ಇದ್ದು!
~

ಕಜೆಮೂಲೆ ಭಾವ° ಹೇಳಿದ ಆ ಸಂಗತಿಯ ಕೇಳಿ ಒಪ್ಪಣ್ಣಂಗೆ ಮೊಸರು ಆಂತುಗೊಂಡದೂ ನೆಂಪಿಲ್ಲೆ, ಉಪ್ಪಿನಾಯಿ ಬೆರ್ಸಿ ಉಂಡದೂ ನೆಂಪಿಲ್ಲೆ! ಮೊಸರು ಉಂಡದೂ ಹೊಟ್ಟೆ ತಂಪಿದ್ದು ಗೊಂತಾಯಿದಿಲ್ಲೆ!
ಛೆಲಾ, ಜೆನಂಗೊ ಹೀಂಗೂ ಇರ್ತವೋ ಲೋಕಲ್ಲಿ?

ತರವಾಡುಮನೆ ಕಾಂಬು ಅಜ್ಜಿಯ ನೆಂಪಾತೊಂದರಿ.
ಆರೇ ಹೋಗಲಿ, ಎಷ್ಟೊತ್ತಿಂಗೇ ಹೋಗಲಿ, ಮದಾಲು ಕೇಳುದು “ನಿನಗೆ ಉಂಡಾಯಿದೋ?” ಹೇದು.
ಹೋದೋನಿಂಗೆ ಉಣುಸದ್ದರೆ ಕಾಂಬುಅಜ್ಜಿಯ ಹಶು ತಣಿಯ!
ಹೊಟ್ಟೆತುಂಬ ಉಂಡು ಇನ್ನು ಮನುಗೇಕಷ್ಟೇ – ಹೇದು ಅಪ್ಪನ್ನಾರವೂ ಉಣುಶುದೇ. ಮನುಗಿ ಏಳುವಗ ರಜ ಹೊತ್ತಾತೋ – ಇಂದು ನಿಲ್ಲು, ನಾಳೆ ಹೋಪಲಕ್ಕು – ಹೇದು ಒತ್ತಾಯ ಮಾಡುಗು.
ಒಂದರಿ ಹೋದೋನಿಂಗೆ ಮತ್ತೆ ಆ ಮನೆ ಎಷ್ಟು ಆತ್ಮೀಯ ಆವುತ್ತು ಹೇದರೆ ಇದು ಅವನದ್ದೇ ಮನೆ, ಆ ಮನೆಲಿ ತಾನುದೇ ಭಾಗಿ – ಹೇಳ್ತ ಭಾವನೆ ಬರುಸಿ ಬಿಟ್ಟುಗೊಂಡಿದ್ದಿದ್ದವು ಕಾಂಬು ಅಜ್ಜಿ.
ಕಾಂಬುಅಜ್ಜಿ ಈಗ ಇಲ್ಲದ್ದರೂ, ಅವರ ಮಕ್ಕೊ-ಪುಳ್ಯಕ್ಕೊ ಹಲವಾರು ಜೆನಂಗೊ ಇದ್ದವು ಬೈಲಿಲಿ. ಪಳ್ಳತ್ತಡ್ಕ ದೊಡ್ಡಬ್ಬೆಯ ಹಾಂಗಿರ್ತ ಹೆರಿ ಮನೆಗಳಲ್ಲೂ ಇದ್ದವು, ಬೈಂಕ್ರೋಡು ಚಿಕ್ಕಮ್ಮನ ಬೆಂಗುಳೂರಿನ ಹಾಂಗಿರ್ತ ಮನೆಗಳಲ್ಲಿಯೂ ಇದ್ದವು.
ಆದರೆ, ಎಲ್ಲಿಯೋ – ಸಾವಿರಕ್ಕೊಬ್ಬ ಈ ವಿಚಿತ್ರ ವೆಗ್ತಿತ್ವ ಕಾಂಬಗ, ನವಗೆ ಒಳುದ ಸಾವಿರಂದಲೂ ಇದೊಂದು ವಿಶೇಷ ಕಾಣ್ತು. ಅಲ್ಲದೋ?

~
ಪೈಶೆ ಸಂಗ್ರಹಕ್ಕೋ, ಕಲೆಕ್ಷನಿಂಗೋ ಮಣ್ಣ ಹೋವುತ್ತರೆ ಒಂದು ನಮುನೆ ಬೇರೆ! ಹೇಳಿಕೆ ಹೇಳುಲೆ ಹೋಯೇಕಾರೆ ಆತ್ಮೀಯ ವರ್ಗವೇ ಆಗಿರೇಕು. ಅಲ್ಲದೋ?
ಅಷ್ಟು ಆತ್ಮೀಯಂಗೇ ಹೊಟ್ಟೆ ತುಂಬುಸಿ ಕಳುಸುವಷ್ಟು ವೆವಧಾನ ಇಲ್ಲದ್ದರೆ, ಆ ಮನೆಲಿ ಲಕ್ಷ್ಮಿ, ಸರಸ್ವತಿ, ಶಾರದೆಗೊ ಇಪ್ಪದು ಎಂತಗೆ ಬೇಕಾಗಿ?
ಬಂದೋರಿಂಗೆಲ್ಲ ಊಟಕೊಡೇಕು ಹೇದು ಹೇಳ್ತದಲ್ಲ, ಆದರೆ ಮದುವೆ ಹೇಳಿಕೆ ಹಿಡ್ಕೊಂಡು ಬಂದೋನಿಂಗೆ ಕೊಶಿ ಕೊಟ್ರೆ ಮುಂದೆ ಎರಡು ಮನೆಯ ಬಾಂಧವ್ಯ ಬೆಳದ ಹಾಂಗೇ ಅಲ್ಲದೋ?
ಅಷ್ಟೂ ಅರ್ತ ಮಾಡಿಗೊಳ್ಳದ್ದ ನೆಂಟನ ಗ್ರೇಶಿಂಡು ಕಜೆಮೂಲೆ ಭಾವನ ಊಟ ಮುಗುಶಿದ°.
ಹಾಂಗಿರ್ತ ಮನೆಗೆ ಹೋಗಿ ಹಶು ಹೊಟ್ಟೆಲಿ ಬಂದು ಪುನಾ ಹೋಟ್ಳಿಲಿ ಉಣ್ತ ಜೆಂಬಾರ ಆಗಪ್ಪಾ – ಹೇದು ನೆಗೆ ಮಾಡಿಗೊಂಡ°.
~
ನೆರೆಕರೆಲಿ ಕಾಂಬುಅಜ್ಜಿಯ ನಮುನೆ ಆತ್ಮೀಯ ಮನೆಗೊ ಧಾರಾಳ ಇದ್ದು.
ಇನ್ನೂ ಹೆಚ್ಚಾಗಲಿ ಹೇಳ್ತ ಆಶಯಲ್ಲಿ ಒಪ್ಪಣ್ಣ ಈ ಸಂಗತಿಯನ್ನೇ ಈ ವಾರ ಶುದ್ದಿ ಹೇಳಿದ್ದು.

~
ಒಂದೊಪ್ಪ: ಬಂದೋನಿಂಗೆ ಆತಿಥ್ಯದ ಸಾಲ ಕೊಟ್ರೆ ತೆಕ್ಕೊಂಡೋನೂ ಅದರ ತೀರ್ಸಲೆ ಪ್ರಯತ್ನ ಪಡ್ತ°. 🙂

16 thoughts on “ಹೇಳಿಕೆಗೆ ಹೋದ ಮದ್ಮಾಯ° ಹಶು ಹೊಟ್ಟೆಲಿ ಹೆರಟನಾಡ..!!

  1. ಹೇಳಿಕೆ ಹೇಳುಲೆ ಹೋದ ಮದಿಮ್ಮಾಯಂಗೆ ಹಾಂಗೆ ಆದ್ದು ಓದಿ ಪಾಪ ಕಂಡತ್ತು.
    ಊಟದ ಸಮಯಕ್ಕೆ ಮನೆಗೆ ಬಂದವಕ್ಕೆ ಬರೀ ಆಸರಿಂಗೆ ಅಲ್ಲ ಊಟ ಮಾಡ್ಲೆ ಹೇಳುದು ನಮ್ಮ ಕ್ರಮ ಅನ್ನೆ?
    ಅವು ಎಂತದೋ ಹಳೆ ಕಾರಣಕ್ಕೆ ಹಾಂಗೆ ಮಾಡಿದ್ದು ತಪ್ಪಲ್ಲದಾ?
    ಬರದ ನಮೂನೆ ಯಾವತ್ತಿನಂತೆ ಲಾಯಿಕ ಆಯಿದು.

  2. ಮನಗೆ ಬಂದ ಮನುಷ್ಯ೦ಗೆ ಊಟದ ಹೊತ್ತಿಂಗೆ ಊಟ ಕೊಟ್ರೆ ಕೋಟಿ ಪುಣ್ಯ ಹೇಳುಗು ಮದಲಾಣವು .ಅಥಿತಿದೇವೋಭವ. ಹೇಳುಸ್ಸು ನಮ್ಮ ಪದ್ದತಿ. ಊಟ ಕೊಟ್ರೆ ಒಂದಾರಿಯಂಗೆ ಸಾಕು ಹೇಳುಗಾಡ. ಬೇರೆಂತ ಕೊಟ್ರೂ ಅಸ್ಟ್ಟು ತೃಪ್ತಿ ಆಗಡ
    ಈಸುದ್ದಿಗೊಂದು ಒಪ್ಪ

  3. ಕಜೆಮೂಲೆ ಭಾವ೦ಗೆ ಕೆಳಾಣತೋಟದ ೨ ಜೂ೦ಗ ಮಾವಿನ ಹಣ್ಣನ್ನಾದರೂ ಬೇಗಿಲಿ ಹಾಕಿ ,ಹೇಳಿಕೆಗೆ ಹೋಪಲೆ ಆವುತ್ತಿತ್ತು.ಗೊ೦ತಪ್ಪಗ ಉ೦ಬ ಹೊತ್ತು ಮೀರಿತ್ತಲ್ಲದೊ ?

  4. ಶುದ್ದಿಯನ್ನೂ,’ಒಂದೊಪ್ಪ’ವನ್ನೂ ಓದಿ ಬುರೂ ಬುರುನೆ ಪೂಜಿ ಉಂಡಷ್ಟು ಕುಶಿ ಆತು.

  5. ಹಿ೦ದಿಲಿ ಹೀ೦ಗೊ೦ದು ಲೊಕೊಕ್ತಿ ಇದ್ದಡ– ” ದಾನೆ ದಾನೆ ಪೆ ಲಿಖಾ ಹೆ ಖಾನೆವಾಲೆ ಕಾ ನಾಮ್ “. ಹವಿಕನ್ನಡಲ್ಲಿ ಇದರ ಈ ರೀತಿ ಹೇಳುಲಕ್ಕಾಯಿಕು-“ಅಗುಳು ಅಗುಳು ಅಶನದಕ್ಕಿಲಿಯೂ ಉ೦ಬವನ ಹೆಸರು ಬರಕೊ೦ಡಿರುತ್ತು “.
    ಬಯಸಿದ್ದು ಸಿಕ್ಕ, ಬಗದ್ದು ತಪ್ಪ ಹೇಳಿ ನಮ್ಮಲ್ಲಿ ಒನ್ದು ಗಾದೆ ಮಾತಿದ್ದು.

  6. ಶುದ್ದಿಯ ತಲೆಬರಹದ ಹಾಂಗೆ ಶುದ್ದಿಯೂ ತುಂಬಾ…. ಲಾಯಕಿತ್ತು. ಅಪ್ಪು, ಹೀಂಗಿಪ್ಪ ಆಸರಿಂಗೆ ಕೊಡದ್ದ ಮನೆಗಳು ಇದ್ದು. ಶುದ್ದಿ ಮನಸ್ಸಿಂಗೆ ತುಂಬಾ ತಟ್ಟಿತ್ತು. ಏಕೆ ಹೇಳಿರೆ, ಎನಗೂ ಹೀಂಗಿಪ್ಪ ಅನುಭವ ಆಗಿತ್ತು. ಮದುವೆ ಹೇಳಿಕೆ ಅಲ್ಲದ್ರೂ, ಬೇರೆಂತಕ್ಕೊ ಹೋಗಿಪ್ಪಗ. ಇರಳಿ, ಒಪ್ಪಣ್ಣ, ಶುದ್ದಿ ಸೂಪರ್ ಆಯಿದು. ಹಾಂಗಿಪ್ಪ ಮನೆ ಎಜಮಾನಂಗೆ ಎಂತಾರೂ ಪಿರಿ ಕಾಸೆಕಾಗಿತ್ತು.

  7. nija chennai bhava idu bisi bisi oggaraneye..adirali anta maneli sharade saraswati lakshmi ikko? iddaru hechu samaya kandita ira…samajada naija sangatiya sandharbikavagi marmikavagi niroopisida shuddige ondoppa..

  8. ಲಾಯಕ ಆಯಿದು ಒಪ್ಪಣ್ಣ….ಧನ್ಯವಾದ೦ಗೊ..ಒ೦ದು ಒಪ್ಪ.

  9. [ ಹೆಂಡತ್ತಿ ಸಾಂಕಲೆ ಖರ್ಚಿದ್ದು, ಗೊಂತಿದ್ದನ್ನೇ ]- ಅಯ್ಯೋ ಪಾಪ. ಆ ಜೆನ್ರ ಹೆಂಡತಿ ಸಾಂಕುವ ಕತೆಯೇ!

    [ನೀಟಕ್ಕೆ ಬಿಡುಸಿ, ಮನಾರಕ್ಕೆ ಓದಿದ°. ಅಪ್ಪನ ಅಮ್ಮನ ಹೆಸರು ಅದುವೇ ಅಲ್ಲದೋ – ಹೇದು ಧೃಡಮಾಡಿಗೊಂಡ°] [ಬಾಯಿ ಉದ್ದಿಗೊಂಡು ಕೆಳ ಬಂದ°] [ಕೇಳುಲೆ ಬೇಕಾಗಿ ಹೇಳಿದ್ದೂ ಅಲ್ಲ ಇದಾ! ಅದಿರಳಿ.]- ಆ ವ್ಯಕ್ತಿಯ ಅಭಿವ್ಯಕ್ತಿ ಹೇಂಗಿಕ್ಕು ಹೇದು ಮನಸ್ಸಿಲ್ಲಿಯೇ ಗ್ರೇಶಿಗೊಂಡು ಪುಸಕ್ಕನೆ ನೆಗೆ ಬಂತಿದ 😀

    [ಆ ಮನೆಲಿ ಲಕ್ಷ್ಮಿ, ಸರಸ್ವತಿ, ಶಾರದೆಗೊ ಇಪ್ಪದು ಎಂತಗೆ ಬೇಕಾಗಿ?] – ಇದರಿಂದ ಹೆಚ್ಚಿನ ಒಗ್ಗರಣೆ ಬೇಕೋ!

    ಭಾವಯ್ಯ .., ಪ್ರೀತಿ ಆತಿಥ್ಯಕ್ಕಿಂತ ದೊಡ್ಡದು ಇನ್ನೇವುದು ಇಲ್ಲೆ ಹೇಳ್ವ ಆಶಯ ಚೊಕ್ಕವಾಗಿ ಶುದ್ದಿರೂಪಲ್ಲಿ ಬೈಂದು ಹೇದು ಹೇಳಿತ್ತಿದಾ -‘ಚೆನ್ನೈವಾಣಿ’.

  10. ಇಡೀ ಬೈಲಿನ ಹೆಸರು ಹಾಳು ಮಾಡುಲೆ ಆ ನೆರೆಕರೆ ಭಾವನ ಹಾಂಗಿಪ್ಪವು ಒಬ್ಬ ಇದ್ದರೆ ಸಾಕು ಅಲ್ಲದಾ..?
    {ಬಂದೋನಿಂಗೆ ಆತಿಥ್ಯದ ಸಾಲ ಕೊಟ್ರೆ ತೆಕ್ಕೊಂಡೋನೂ ಅದರ ತೀರ್ಸಲೆ ಪ್ರಯತ್ನ ಪಡ್ತ°} – “Give respect and take respect” ಹೇಳಿ ಇಂಗ್ಳೀಷು ಭಾಶೆಲೆ ಹೇಳ್ತವಲ್ಲದಾ… ಹಾಂಗೆ
    ಲೇಖನ ತುಂಬಾ ಒಪ್ಪ ಆಯಿದು ಒಪ್ಪಣ್ಣ… 🙂

  11. “ಆಸರಿ೦ಗೆ ಕುಡಿಯದ್ದೆ ಹೆರಡೊದೆಲ್ಲಿಗೊ°” ಹೇಳಿ ಪ್ರೀತಿಲಿ ಬೈವ ಮನಸ್ಸು ನಮ್ಮ ಹಿರಿಯರದ್ದು.ಇನ್ನು ಪೈಸೆಲಿಯೇ ಮನುಷ್ಯರ ಅಳವ ಮೂರ್ಖತನಕ್ಕೆ ಏವ ಮದ್ದೂ ನಾಟ.
    ಒಳ್ಳೆ ಶುದ್ದಿ ಒಪ್ಪಣ್ಣಾ.

  12. ಇಂದೇಕೆ ಚೆನ್ನೈ ಭಾವನ ಕಂಡತ್ತಿಲ್ಲೆ? aane first…

    1. ನಿನ್ನೇ ನೆಡು ಇರುಳು ಹನ್ನೆರಡುವರಗೇ ಓದಿ ಒಪ್ಪ ಬರದು ಹಾಕಿದ್ದೆಪ್ಪ… ಅಷ್ಟಪ್ಪಗ ನೆಟ್ಟ° ಕಟ್ ಆತು ಖರ್ಮ. ಇಲ್ಲೆ ಪ್ರಕಟ ಆತಿಲ್ಲೆ 🙁 ಸುಮಾರು ಹೊತ್ತು ಮತ್ತೆ ಹಂದಿತ್ತಿಲ್ಲೆ ಅದು. ಬರದು ಮಡಿಗಿದ್ದದು ಮನೇಲಿ ಇದ್ದು ಗೋಪಾಲಣ್ಣ ಪ್ರತ್ಯೇಕ ತೆಗದು ಮಡಿಗಿದ್ದು. ಮತ್ತೆ ಕಸ್ತಲಪ್ಪಗಾತಷ್ಟೆ ಇನ್ನು. ಹಾಂಗಾಗಿ… ಆನೇ ಪಷ್ಟು ! 😀

  13. ಮಧ್ಯಾಹ್ನ ಊಟಕ್ಕೆ ಆರೂ ಬಾರದ್ದರೆ ಇಂದೇಕೆ ಆರೂ ಬೈಂದವಿಲ್ಲೆ ಹೇಳಿ ಕೇಳುವ ಹಿರಿಯತಲೆಮಾರಿನ ಜೆನಂಗೊ ಇದ್ದಿದ್ದವು.
    ಒಪ್ಪಣ್ಣ ವಿವರಿಸಿದ್ದು ಈಗಾಣ ಮಟ್ಟು!
    ಅದಕ್ಕೇ ಅಲ್ಲದೊ-ಸಿರಿವಂತರ ಮನೆಯ ನೋಟ ಚಂದ,ಬಡವರ ಮನೆಯ ಊಟ ಚಂದ -ಹೇಳುವ ಗಾದೆ ಬಂದದು?

    1. gopalamava shuddige arthapurna gadeya kotidi..adbutha..sathyavada matu..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×