ಓ ಮೊನ್ನೆ ಒಂದು ದಿನ ಎಲ್ಲಾ ಪೇಪರುಗಳೂ ಕೆಂಪುಕೆಂಪು!
ಐಪೀಯೆಲ್ ಕ್ರಿಗೇಟು ಮುಗುತ್ತು ಹೇಳ್ತ ಶುದ್ದಿ ಒಂದು ಕರೇಲಿ, ಸಚಿನ್ ಕ್ರಿಗೇಟು ಬಿಟ್ಟತ್ತು ಹೇಳ್ತದು ಇನ್ನೊಂದು ಕರೆಲಿ, ಶ್ರೀಶಾಂತು ಜೈಲಿನೊಳ ಹೋತು – ಹೇಳ್ತದು ಮತ್ತೊಂದು ಕರೆಲಿ.
ನೆಡುಕೆ ಮಾಂತ್ರ – ಇಷ್ಟು ದೊಡ್ಡಕೆ, ಕೆಂಪು ಕೆಂಪು ಶುದ್ದಿಗೊ!
ಧೈರ್ಯ ಗಾಂಭೀರ್ಯ ಸಂಸ್ಕಾರವ ಪ್ರತಿಬಿಂಬಿಸುವ ಕೇಸರಿ ಬಣ್ಣ ಅಲ್ಲ, ನಿತ್ಯ ಸಮೃದ್ಧಿಯ ಸೂಚಕ ಹಸಿರು ಬಣ್ಣವೂ ಅಲ್ಲ, ಕಣ್ಣಿಂಗೆ ಕುಕ್ಕುವ ಹಾಂಗಿರ್ತ ಕೆಂಪು!
ಆಪ್ಯಾಯಮಾನ ಅಲ್ಲ, ಅಪಾಯಸೂಚಕ ಬಂಣ!
ಭಾರತ ಮಾತೆಯ ಮಣ್ಣಿಂಗೇ ಕೈ ಹಾಕಿದ ಚೀನಾದ ಧ್ವಜದ ಬಂಣ!
ಮಧ್ಯಾಹ್ನ ಒರೆಂಗೆ ಕೂಲಿ ಕೆಲಸ ಮಾಡಿ,ಮಧ್ಯಾಂತಿರುಗಿ ದುಡುದ ಅಷ್ಟನ್ನೂ ಗಡಂಗಿಲಿ ಕಳದು ಪಡವ ಕಣ್ಣಿನ ಬಣ್ಣ!
ಕುಡುದ ಕಣ್ಣಿಲೇ ಮೀಟಿಂಗಿಂಗೆ ಹೋಪಗ ಸುರ್ಕೊಂಬ ಅಂಗಿಯ ಬಂಣ!
ಅಮಾಯಕ ಜೀವಿಗಳ ಎದೆಯೊಡದಪ್ಪಗ ಹಾರುವ ನೆತ್ತರಿನ ಬಂಣ!
ಶರ್ಮಪ್ಪಚ್ಚಿಯ ಮನೆಹತ್ತರಾಣ ಟ್ರಾನ್ಸುವರು ಪೆಟ್ಟಿಗೆಲಿ ಬರದ “ಅಪಾಯ” ಬಣ್ಣ!
ಅಪ್ಪು, ಪೇಪರುಗಳೂ ಅದೇ ಬಂಣ ಆಗಿದ್ದತ್ತು.
ಎಂತಗೆ?!
ದಾರಿ ಹೋಗಿಂಡಿದ್ದ ಹತ್ತುಮೂವತ್ತು ಜೆನಂಗೊ ಬೋಂಬು-ಗುಂಡಿಂಗೆ ಸಿಕ್ಕಿ ಸತ್ತಪ್ಪಗ ಬಿದ್ದ ನೆತ್ತರಿನ ಬಂಣವೋ?
ಅದಕ್ಕೆ ಕಾರಣ ಆದ “ದಾರಿ ತಪ್ಪಿದ ಮಕ್ಕಳ” ಧ್ವಜದ ಬಣ್ಣವೋ?
ಶುದ್ದಿ ಕೇಳಿ ಪಿಸುರಿಲಿ ಕಣ್ಣುಕೆಂಪಾಗಿ ಪೇಪರಿಲಿ ಕಂಡ ಬಣ್ಣವೋ?!
ಉಮ್ಮ – ಎಲ್ಲವೂ ಅಪ್ಪು!
ಮೊನ್ನೆ ಶುದ್ದಿ ಕೇಳಿದ ಎಲ್ಲೋರಿಂಗೂ ಹಾಂಗೇ ಅಕ್ಕು.
ಆ ಶುದ್ದಿ ಎಂತರ?!
~
ಓ ಅಲ್ಲಿ ಉತ್ತರ ಭಾರತಲ್ಲಿ ನೆಡದ ಕತೆ ಅಡ ಇದು.
ಎಲ್ಲಿಂದಲೋ ಎಲ್ಲಿಗೋ ಹೋಪ ಒಂದು ದೊಡಾ ಮಾರ್ಗ ಕಾಡುದಾರಿಲೆ ಆಗಿ ಹೋವುತ್ತಾಡ – ಕಣಿಯಾರುಕಾಡಿನ ನೆಡುಕೆ ಕೌಡಿಚ್ಚಾರು ಮಾರ್ಗ ಹೋವುತ್ತ ಹಾಂಗೆ.
ಮೊನ್ನೇಣ ದಿನ ಮಾರ್ಗದ ಒಂದು ಹೊಡೆಲಿ ಯೇವದೋ ದೊಡಾ ಸಭಾಕಾರ್ಯಕ್ರಮ.
ಅದರ ಮುಗುಶಿಕ್ಕಿ ಕೆಲವು ಜೆನಂಗೊ ಇನ್ನೊಂದು ಹೊಡೆಂಗೆ ಹೋಗಿಂಡು ಇತ್ತಿದ್ದವಾಡ, ಕಾಡಿಲೇ ಆಗಿ.
ಆರೆಲ್ಲ ಹೋಗಿಂಡಿತ್ತವು – ಸಭೆಯ ವಿಶೇಷ ಆಹ್ವಾನಿತರು, ಗಣ್ಯರು-ಅತಿಗಣ್ಯರು, ಅವರ ಮುಂದೆ-ಹಿಂದೆ ಬೆಡಿಹಿಡ್ಕೊಂಡು ನಿಲ್ಲುತ್ತ ಪೋಲೀಸಿನೋರು;
ಸಭೆಲಿ ಭಾಷಣ ಮಾಡ್ಳೆ ಬಂದ ಬೆಳಿಶಾಲಿನೋರು, ಮತ್ತಿತರರು. ಎಷ್ಟೋ – ಸುಮಾರು ಜೆನ ಇತ್ತಿದ್ದವು.
ಹೋಪಗಳೂ ಹಾಂಗೇ – ಹಿಂದೆ ಪೋಲೀಸು, ಮುಂದೆ ಪೋಲೀಸು – ಮಧ್ಯಲ್ಲಿ ಈ ಗಣ್ಯರುಗೊ ಇತ್ತವಾಡ. ಆಚೀಚ ಹೊಡೆಂದ ಎಂತದೂ ಆಗದ್ದೆ ಇರಳಿ – ಹೇಳ್ತ ಉದ್ದೇಶಂದ ಯೇವತ್ತೂ ಹಾಂಗೇ ಮಾಡುಸ್ಸು.
ನೆಡುಕಾಡಿನ ಅದೆಲ್ಲಿಗೋ ಎತ್ತಿತ್ತು, ಈ ದಿಬ್ಬಣ. ಯೇವತ್ರಾಣಂತೇ ಕಾಡಿನ ತಂಪಿಲಿ, ನೆರಳಿಲಿ ಹೋಪದೇ. ಗೊಂತಿಪ್ಪ ದಾರಿಯೇ.
ಆದರೆ, ಅದೆಲ್ಲಿ ಹುಗ್ಗಿದ್ದತ್ತೋ ಏನೋ – ಒಂದರಿಯೇ ಹೊಟ್ಟಿ – ಹೊಡಿ ಹೊಡಿ ಮಾಡಿತ್ತು ನೆಲಬೋಂಬು!
~
ಆ ಕಾಡು ದಾರಿಲೆ ಹೋಪಗ ಅಪಾಯ ಇಪ್ಪಲೂ ಸಾಕು – ಹೇಳ್ತ ಮುನ್ಸೂಚನೆ ಲೆಕ್ಕಲ್ಲಿ ರಜ ಹೊತ್ತು ಮದಲೇ ಪೋಲೀಸುಗೊ ಒಂದು ಸುತ್ತು ನೋಡಿಗೊಂಡು ಹೋಯಿದವಾಡ.
ಏನೂ ಸಮಸ್ಯೆ ಇಲ್ಲೇ ಹೇದೊಂಡು ಹೋದವು. ಪೋಲೀಸುಗೊ ನೋಡಿಂಡು ಹೋದ್ಸೇ, ಮಾರ್ಗಲ್ಲಿ ನೆಲಬೋಂಬು ಮಡಗಿಯೂ ಆಯಿದು ಕಾಟುಗೊಕ್ಕೆ.
ಗಣ್ಯರ ವಾಹನ ಬಪ್ಪಗ, ಅದರ್ಲಿಯೂ – ವಾಹನದ ಎದುರಾಣ ಪೋಲೀಸು ವಾಹನ ಎತ್ಯಪ್ಪದ್ದೇ – ಬೋಂಬು ಹೊಟ್ಟಿತ್ತು.
ನೆಲಬೋಂಬು ಇಪ್ಪ ಜಾಗೆಯ ಮೇಗೆ ವಾಹನ ಹೋ..ಪಗ- ದೂರಲ್ಲಿ ಕೂದು ಸುಚ್ಚು ಒತ್ತಿ ಹೊಟ್ಟುಸಿದ್ದಾಡ!
ಪ್ರಬಲ ಬೋಂಬಿಂಗೆ ಡಬ್ಬಿಯ ಕಾರುಗೊ ಸಿಕ್ಕಿರೆ ಎಂತಕ್ಕು?
ವಾಹನ ಚಿಂದಿ ಚಾಂದ್ರಾಣ! ಬಾಗಿಲು ಒಂದಿಕ್ಕೆ, ಕನ್ನಟಿ ಒಂದಿಕ್ಕೆ, ಚಕ್ರ ಒಂದಿಕ್ಕೆ.
ಒಳ ಇದ್ದ ಮನುಷ್ಯರ ಕೈಕ್ಕಾಲುಗೊ ಮತ್ತೊಂದಿಕ್ಕೆ! ಒಂದೇ ಪೆಟ್ಟಿಂಗೆ ಹೊಡಿ ಹೊಡಿ!!
ಎದುರಾಣ ವಾಹನಕ್ಕೆ ಹೀಂಗಾತನ್ನೇ – ಕೂಡ್ಳೇ ಹಿಂದಾಣ ವಾಹನಂಗೊ ನಿಲ್ಲೆಕ್ಕಾವುತ್ತು; ನಿಂದತ್ತು.
ಸಾಲು ಸಾಲು ವಾಹನಂಗಳೇ ನಿಂದತ್ತು. ವಾಹನ ನಿಂದಪ್ಪದ್ದೇ ಮಳೆ ಸುರು ಆತು.
~
ಎಂತ ಮಳೆ? ಗುಂಡು!
ಕಾಡುದಾರಿಲಿ ಕಾರುಗೊ ನಿಂದಲ್ಲಿಂಗೇ – ನಾಲ್ಕೂ ಹೊಡೆಂದ ಗುಂಡಿನ ಮಳೆ.
ಮಾರ್ಗದಕರೆ ಬಲ್ಲೆ-ಕಾಡಿನೊಳ ನೂರಾರು ಸಂಖೆಲಿ ಹುಗ್ಗಿ ಕೂದುಗೊಂಡ ಕಾಟುಗೊ ಬಳಬಳನೆ ಬೆಡಿಬಿಟ್ಟವಾಡ.
ಒಂದು ಕ್ಷಣಕ್ಕೆ ಒಂದು ಗುಂಡಿನ ಹಾಂಗೆ, ನಿಮಿಷಕ್ಕೆ ನೂರರ ಮೇಗೆ ಗುಂಡಿನ ಹಾಂಗೆ ಒಬ್ಬೊಬ್ಬನೂ ಆಗಿ – ನೂರಾರು ಜೆನ ಹಾಂಗೆ ಗುಂಡು ಬಿಟ್ರೆ!?
ಸಾವಿರಗಟ್ಳೆ ಗುಂಡುಗೊ ಹತ್ತೈವತ್ತು ಜೆನರ ಮೇಗೆ!
ಜೆನಂಗಳಲ್ಲಿ ಪೋಲೀಸುಗಳೂ ಇತ್ತಿದ್ದವು ಹೇಳಿದೆ ಅಲ್ಲದೋ – ಆ ಪೋಲೀಸರ ಹತ್ತರೆಯೂ ಗುಂಡು ಇದ್ದತ್ತು; ಹೇಂಗಿರ್ಸು?
ಒಂದು ಗುಂಡು ಹೊಡದು ಎರಡ್ಣೇ ಗುಂಡು ಹೊಡೇಕಾರೆ ಸುಮಾರು ಬಂಙ ಇದ್ದು.
ಪೋಲೀಸರಿಂಗೂ ಬೆಡಿ ಹಿಡುದು ಅನುಭವ ಸಾಲ; ಬೆಡಿಗೂ ಗುಂಡು ಬಿಟ್ಟು ಅನುಭವ ಸಾಲ – ಹಾಂಗಿರ್ತ ಬೆಡಿಗೊ ಅದು!
ಅಂತೂ ಇಂತೂ ಗುಂಡು ಮುಗಿವನ್ನಾರ ಹೊಟ್ಟುಸಿದವು – ಒಂದೊಂದು ಗುಂಡು ಒಳಿವನ್ನಾರ.
ಕೊನೆಯ ಗುಂಡುಗಳ ತನಗೇ ಬಡ್ಕೊಂಡು – ಇತಿಶ್ರೀ ಹೇಳಿಗೊಂಡವು, ಪಾಪ.
ಇತ್ಲಾಗಿಂದ ಗುಂಡುಗೊ ಪೂರಾ ಮುಗುದ ಮತ್ತೆ ನಿಶ್ಶಬ್ದ ಆತಲ್ಲದೋ – ಅಷ್ಟಪ್ಪಗ ಹುಗ್ಗಿ ಕೂದ ಕಾಟುಗೊ ಕೆಳ ಇಳುದವು.
ಬದ್ಕಿ ಒಳುದೋರು ನೋಡಿಂಡೇ ಬಾಕಿ!
~
ಓ ಅಲ್ಲಿ ಕಲ್ಕತ್ತಾಲ್ಲಿ ನಕ್ಸಲ್ ವಾರಿ ಹೇದು ಒಂದು ಊರು ಇದ್ದಾಡ.
ಆ ಊರಿಲಿ ಮದಲಿಂಗೆ ಪರಿಸ್ಥಿತಿ ಹೇಂಗಿತ್ತು ಹೇದರೆ – ಊರಿಂಗೆ ಒಬ್ಬನೋ – ಇಬ್ರೋ ಶ್ರೀಮಂತರು.
ಪಾಳೇಗಾರ್ರೂ ಅವ್ವೇ, ಪಟೇಲ್ರೂ ಅವ್ವೇ, ಪೋಲೀಸು ಷ್ಟೇಷನೂ ಅವ್ವೇ, ಎಲ್ಲವೂ ಅವ್ವೇ. ಅವು ಹೇಳಿದ ಹಾಂಗೇ ಊರು ಇದ್ದತ್ತು.
ಒಳುದ ಜೆನಂಗೊ? ತೀರಾ ತೀರಾ ಬಡವರು.
ಹೊತ್ತಿಂಗೆ ಉಂಬಲೂ ಅವಕಾಶ ಇಲ್ಲದ್ದ ಬಡತನ.
ಒಂದೋ ಅತ್ಯಾತಿ ಶ್ರೀಮಂತಿಗೆ; ಅಲ್ಲದ್ದರೆ ತೀರಾ ತೀರಾ ಬಡತನ! ಒಂದು ಕೂಲಿ ಕಾರ್ಮಿಕರ ವರ್ಗ, ಇನ್ನೊಂದು ಶ್ರೀಮಂತ ವರ್ಗ.
ನಮ್ಮ ಊರಿಲಿ ಇಪ್ಪ ಹಾಂಗೆ ಮಧ್ಯಮ ವರ್ಗ – ಹೇಳ್ತದು ಇದ್ದತ್ತಿಲ್ಲೆ.ಇದೇ ನಮುನೆಯ ಪರಿಸ್ಥಿತಿಗಳಲ್ಲಿ ಬೆಳದು “ಮಾವೋ ಸೆತುಂಗ್” ಹೇಳ್ತ ಜೆನ ಚೀನಾಲ್ಲಿ ಇತ್ತಾಡ.
ಅಲ್ಯಾಣ ಕಾರ್ಮಿಕರ ಒಗ್ಗೂಡುಸಿ, ಸೇರ್ಸಿ, ಎಲ್ಲ ಒಗ್ಗಟ್ಟು ಮಾಡ್ಸಿ ಶ್ರೀಮಂತರ ವಿರುದ್ಧ ಎದ್ದುನಿಂದು ಬಲಶಾಲಿ ಆದ್ಸಾಡ.
ಹಾಂಗಿರ್ತ ಉದಾಹರಣೆಯ ಇಲ್ಲಿಗೂ ಅಳವಡುಸಿರೆ ಹೇಂಗೆ – ಹೇದು ಕೆಲವು ಹುಳುಗೊಕ್ಕೆ ಮನಸ್ಸಿಲಿ ಬಂತಾಡ.
ಅದಕ್ಕೇ ಒಂದಿಷ್ಟು ರೂಪುರೇಷೆ ಕೊಟ್ಟು – ನಕ್ಸಲ್ ವಾರಿಯ ಹಳ್ಳಿಯ ಮನೆ ಮನೆಗೆ ಈ ವಿಷಯವ ಎತ್ತುಸಿದವಾಡ.ಆ ಪ್ರಕಾರ ಒಂದು ದಿನ ಶ್ರೀಮಂತ ಪಟೇಲಕ್ಕಳ ಎದುರು ಪ್ರತಿಭಟನೆ ಮಾಡುದು ಹೇದು ಹೆರಟವಾಡ.
ಹತ್ತು ಜೆನ ಒಟ್ಟು ಸೇರಿ ಅಪ್ಪಾಗ ನೆತ್ತರ ಬೆಶಿ ಎಳಗುದು ಗೊಂತಿದ್ದನ್ನೇ – ಹಾಂಗೇ ಆ ಬೆಶಿಲೇ ಶ್ರೀಮಂತರ ಕೊಂದವಾಡ.
ಬಳ್ಳಿ ಕಟ್ಟಿ ನೇಲ್ಸಿದವಾಡ.
ಅಂಬಗಾಣ ಶ್ರೀಮಂತರು ಸತ್ತವು; ಅಂಬಗಾಣ ಬಡವರು ಶ್ರೀಮಂತರಾದವು!!
ಬೈಗಳು ಮಾಂತ್ರ ಸತ್ತೋರಿಂಗೇ ಒಳುದತ್ತು. ಅದಿರಳಿ.
~
ಅಲ್ಲಿಂದ ಮತ್ತೆ ಆ ’ಹೊಸ ಪ್ರಯೋಗ’ವ ಬೇರೆ ದಿಕ್ಕೆಯೂ ಮಾಡಿ ಧಿಡೀರ್ ಶ್ರೀಮಂತಿಕೆ ಬೆಳೆಸುವ ಆಲೋಚನೆ ಆ ಕೆಲವು ಮಾಡಿದವಾಡ.
ಅದಕ್ಕೆ “ನಕ್ಸಲ್ ವಾರಿ” ಪದ್ಧತಿ, ಅಥವಾ “ನಕ್ಸಲ್” ವಿಧಾನ – ಹೇಳುಲೆ ಸುರುಮಾಡಿದವಾಡ.
ಶ್ರೀಮಂತರಿಂದ ಲಕ್ಷಗಟ್ಳೆ ದೋಚುದು; ಬಡವರಿಂಗೆ ಚಿಲ್ಲರೆ ಕಾಸು ಕೊಡುದು. ಎಡಕ್ಕಿಲಿ ಒಳುದ್ದದು? ಗೋ..ವಿಂದ!
ಆದರೆ ಈ ಪೈಶೆ ಒಯಿವಾಟಿನ ಮೇಲ್ನೋಟಕ್ಕೆ ಕಾಂಬ ಹಾಂಗೆ ತೋರ್ಸುಲಿಲ್ಲೆ. ಬದಲಾಗಿ – “ಬಡವರಿಂಗಾಗಿ ಹೋರಾಟ”, ಶ್ರೀಮಂತರ ತುಳಿತಕ್ಕೆ ವಿರೋಧ – ಹೀಂಗೇನಾರು ಮಾಡಿ ಹೇಳುಸ್ಸು! ಪಾಪದ ಕೆಲವು ಜೆನಂಗೊ ನಂಬಿಯೂ ಬಿಡ್ತವಿದರ!
ಅಪ್ಪೋ ಅಂಬಗ, ಶ್ರೀಮಂತರು ಮೆಟ್ಟಿದ್ದವಾಯಿಕ್ಕು ನಮ್ಮ – ಹೇದು ತಲೆ ಆಡ್ಸುತ್ತವಾಡ.
ರಜ ತಲೆ ಆಡ್ಸುತ್ತೋರು ಸಿಕ್ಕಿರೆ ಸಮ – ಕೂಡ್ಳೇ ಅಂತೋರ “ಎಂಗಳೊಟ್ಟಿಂಗೆ ಸೇರಿ” ಹೇದು ಕರಕ್ಕೊಂಡು ಹೋವುತ್ತವಾಡ.
ಸುರುಸುರುವಿಂಗೆ ತೀರಾ ಬಡವರು ಮಾಂತ್ರ ಈ ಸತ್ಯಕತೆಯ ನಂಬಿ ಅಂತವರ ಒಟ್ಟಿಂಗೆ ಸೇರಿದರೂ, ಈಗೀಗ ವಿದ್ಯಾವಂತ ಜೆನಂಗೊ ಅವರೊಟ್ಟಿಂಗೆ ಸೇರ್ಲೆ ಸುರು ಮಾಡಿದ್ದವಾಡ.
ಕಲಿಯುವಿಕೆ ಆಗಿ ಕೆಲಸ ಸಿಕ್ಕದ್ದೆ ಬಳಲಿ ಬಚ್ಚಿ ಹೋದ ನಿರುದ್ಯೋಗಿಗಳ ಸೀತ ಕರಕ್ಕೊಂಡು ಹೋಗಿ “ಎಂಗಳೊಟ್ಟಿಂಗೆ ಬನ್ನಿ” ಹೇಳ್ತವಾಡ.
ಹೋಪದೆಲ್ಲಿಗೆ – ಕಾಡಿಂಗೆ!
~
ಹೀಂಗೆ ಹೋದೋರಿಂಗೆ ಎಲ್ಲೋರಿಂಗೂ ಒಂದು ದೊಡಾ ತರಬೇತಿ.
ಅವರ ಧ್ಯೇಯಂಗಳ ಬಗ್ಗೆ – ಕಾರ್ಲು ಮಾರ್ಕ್ಸು ಎಂತ ಹೇಳಿತ್ತು, ರಷ್ಯಲ್ಲಿ ಲೆನಿನ್ ಎಂತ ಹೇಳಿತ್ತು, ಚೀನಾಲ್ಲಿ ಮಾವ ಎಂತ ಹೇಳಿತ್ತು, ನಕ್ಸಲ್ ಊರಿಲಿ ಎಂತ ತೊಂದರೆ ಆಗಿತ್ತು – ಹೀಂಗೆಲ್ಲ; ಹಳಸಿದ ಕಾಲದ ಹಳಸಲು ಕತೆಗೊ. ಅರೆವಾಷಿ ರಂಗು, ಅರೆವಾಶಿ ಲೊಟ್ಟೆಗಳೇ ತುಂಬಿದ ಪೇಪರುಗೊ; ಪತ್ರಿಕೆಗಳ ಓದುಸುದು.
ಇದರೊಟ್ಟಿಂಗೇ – ಅವರ ಯುದ್ಧ ಕೌಶಲದ ಬಗ್ಗೆ.
ಕಾಡಿಲಿ ಈಡು ಮಡಗಲೆ ಕಲಿಸ್ಸು, ಇನ್ನೊಬ್ಬನ ಕೊಲ್ಲಲೆ ಕಲಿಸ್ಸು, ಯೇವ ಹೊತ್ತಿಂಗೆ ಎಲ್ಲಿಗೆ ಗುಂಡು ಬಿಡೆಕ್ಕು, ಸಮಾಜದ ಮರ್ಯಾದಸ್ಥ ಜೆನಂಗಳ ಮನೆಗೆ ಹೋಗಿ ನೆತ್ತಿಗೆ ಬೆಡಿ ಹಿಡುದು ದೋಚುದು ಹೇಂಗೆ – ಇತ್ಯಾದಿ ಹೇಳಿ ಕೊಡುಸ್ಸು.
ಹೆಗಲಿಂಗೊಂದು ಬೆಡಿ, ಕೈತುಂಬಾ ಬೋಂಬುಗೊ!
ಹೀಂಗೆ ಊರು ಬಿಟ್ಟು ಹೋದ ಜೆನಂಗೊ ಪೂರ ಕಾಡಿನೊಳ. ಅವರ ತಲೆಲಿ ತಾನೊಂದು ಮಹಾ ಒಳ್ಳೆಕಾರ್ಯ ಮಾಡ್ತಾ ಇದ್ದೆ – ಹೇದು.
ಅವಕ್ಕೆ ಹೇಳಿಕೊಡ್ತೋರು ಹಾಂಗೇ ಹೇಳಿಕೊಡುದು, ಅವಕ್ಕೆ ಪೈಶೆ ಮಾಡ್ಳಿಪ್ಪ ದಾರಿ – ಹೇದು ಅವು ಹೇಳ್ತವೋ?
ಅವರ ಕಾಡಿನ ಹತ್ತರೆ ಇಪ್ಪ ಶ್ರೀಮಂತರ ಸೊಲಿವದು ಹೇಂಗೆ, ಅಲ್ಲೆ ಯೇವದಾರು ಪೋಲೀಸುಗೊ ಬತ್ತರೆ ಅವರ ಕೊಲ್ಲುಸ್ಸು ಹೇಂಗೆ- ಹೇದು ಅಂಬಗಂಗ ಮೀಟಿಂಗು ಮಾಡಿರೆ ಮುಗಾತು.
ಹೋದ ಜವ್ವನಿಗರು, ಜೆವ್ವನ್ತಿಗೊ – ಎಲ್ಲೋರುದೇ ಕಾಡಿಲೇ ಬಾಕಿ.
ನಿರುದ್ಯೋಗ ಇಪ್ಪಲ್ಲಿಗೆ ಕೆಲಸವೂ ಆತು; ಹೊತ್ತು ಕಳವಲೆ ಚಕ್ಕಂದವೂ ಆತು!
ಕಾಡಿಲೇ ಬೆಳೆತ್ತೋರಿಂಗೆ ಕಾಡು ಪ್ರಾಣಿಗಳ ಸಂಸ್ಕಾರವೇ ಇಪ್ಪದು!
~
ಮೊನ್ನೆಯೂ ಹಾಂಗೇ ಆತು.
ಕಾಡಿಲೆ ಆಗಿ ಹೋವುತ್ತ ವಾಹನವ ಅಡ್ಡ ತಡದ್ದು ಅದೇ ನಕ್ಸಲುಗೊ ಆಡ.
ಹೆಗಲಿಲಿದ್ದಿದ್ದ ಬೆಡಿಲಿ ತುಂಬಾ ಗುಂಡು ಇದ್ದತ್ತು. ಸ್ವಂತ ಕರ್ಚು ಮಾಡಿ ತಂದ ಗುಂಡುಗೊ ಅಲ್ಲ, ಚೀನಾಂದ ರಾಶಿ ರಾಶಿ ಬಂದದು, ಧರ್ಮಕ್ಕೇ.
ಪೋಲೀಸುಗಳ ಮೇಗೆಯೂ ಬಿಡುಗು, ಎಲಿಯ ಮೇಗೆಯೂ ಬಿಡುಗು! ಅದಿರಳಿ.
ಅಂತೂ ಬಿಟ್ಟೇ ಬಿಟ್ಟವು. ಸುಮಾರು ಜೆನ ಸತ್ತವು; ಒಳುದೋರು ಹೆದರಿ ನೋಡಿಗೊಂಡು ನಿಂದವು.
ನಕ್ಸಲುಗೊ ಬಂದವು, ಕಾರಿನ ಒಳ ಇದ್ದಿದ್ದ ಒಂದು ಜೆನರ ಹೆರ ದಿನಿಗೆಳಿದವಾಡ.
ಆ ಜೆನರ ಹೆಸರು ಎಂತದೋ “ಕರ್ಮಾ”, ಹೆಸರು ಸರಿ ನೆಂಪಾವುತ್ತಿಲ್ಲೆ! ಅದಿರಳಿ.
ಆ ಜೆನರ ಮೇಗೆ ಎಂತಕೆ ಅಷ್ಟು ಹಗೆ? ಅದೇ ಒಂದು ದೊಡ್ಡ ಕತೆ!
~
ಶುದ್ಧೀಕರಣ ಬೇಟೆ:
ಅನಾಚಾರದ ಕಾಟುಗೊ, ಈ ನಕ್ಸಲರಿಂಗೆ ನಮ್ಮ ದೇಶದ “ಬುದ್ಧಿಜೀವಿ”ಗಳ ಪೂರ್ತಿ ಬೆಂಬಲ ಇದ್ದು. ಗೊಂತಿಪ್ಪದೇ.
ಅನಂತಜ್ಜ, ಗಿರೀಶ ಮಾವ ಅಮಾಸೆಗೊಂದರಿ ಪೇಪರಿಂಗೆ ಹೇಳಿಕಳುಸುತ್ತವು “ಬಡ ಸ್ವಾತಂತ್ರ ಹೋರಾಟಗಾರರು” ಹೇದು!
ಆದರೆ, ಪಾಪದ ಜೆನಂಗಳ, ಪೋಲೀಸರ, ಸ್ವಂತ ದುಡಿಮೆಲಿ ಬದ್ಕುತ್ತೋರ ಕೊಲ್ಲುಸ್ಸು ಸರಿಯೋ?!
ಅಂಬಗ, ನಕ್ಸಲರ ಈ ನಮುನೆ ಸಶಸ್ತ್ರ ಹೋರಾಟಕ್ಕೆ ಉತ್ತರ ಹೇಂಗೆ ಕೊಡೆಕ್ಕಪ್ಪದು?
ಮುಳ್ಳಿನ ಮುಳ್ಳಿಲೇ ತೆಗೇಕು ಹೇದು ಮಾಷ್ಟ್ರುಮಾವ ಒಂದು ಗಾದೆ ಹೇಳ್ತವು. ಇಲ್ಲಿಗೂ ಹಾಂಗೇ ಆಯೇಕೋ?
ಸಮಾಜ ಬದ್ಕುತ್ತ ದಾರಿ ಬಿಟ್ಟು ಹೋವುತ್ತಾ ಇಪ್ಪ, ಸಮಾಜಲ್ಲಿ ಭಯವ ಉತ್ಪಾದನೆ ಮಾಡುವ ಭಯೋತ್ಪಾದಕರು ಅವು.
ಅವರ ಸರ್ವನಾಶ ಮಾಡೇಕಾದ ಕಾರ್ಯ ಅಪ್ಪಲೇಬೇಕು. ಹಾಂಗೇಳಿ, ನಕ್ಸಲರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಬೆಡಿ ಇಪ್ಪ ಪೋಲೀಸರೋ, ಸೈನಿಕರನ್ನೋ ಮಣ್ಣ ಕಳುಸಿರೆ “ಅವು ಒಳ್ಳೆವು”, “ಅವು ಬಡವರು” ಹೇದು ಎಲ್ಲಾ “ಮಾನವ ಹಕ್ಕು ಹೋರಾಟ”ದ ಅಜ್ಜ-ಮಾವಂದ್ರು ಮಾರ್ಗಕ್ಕೆ ಇಳಿತ್ತವಾಡ.
ಸಶಸ್ತ್ರ ಹೋರಾಟಕ್ಕೆ ಉತ್ತರವ ಸಶಸ್ತ್ರವಾಗಿಯೇ ಕೊಡೇಕು. ಅದು ಬಿಟ್ಟು ಪೋಚಕಾನ ಮಾಡುಸ್ಸು ಅಲ್ಲ.
ಇದೇ ಆಲೋಚನೆಲಿ, ಪೋಲೀಸ್, ಸೇನೆಗೆ ಪೂರಕವಾಗಿ “ಶುದ್ಧೀಕರಣದ ಬೇಟೆ” ಹೇದು ಒಂದು ಪಂಗಡ ಕಟ್ಟಿತ್ತಾಡ ಆ ಕರ್ಮ ಹೇಳ್ತ ಜೆನ.
ಒಳ್ಳೆ ಕರ್ಮವನ್ನೇ ಮಾಡಿದ್ದು ಅದು!
ನಕ್ಸಲರು ಆರಿಂಗೆಲ್ಲ ಪೀಡೆ ಕೊಡ್ತವೋ, ಆರ ಎಲ್ಲ ಸೊಲಿಯಲೆ ಹೆರಟಿದವೋ – ಅಂತವರ ಸೇರ್ಸಿಗೊಂಡು ನಕ್ಸಲರ ಸಿಕ್ಕಿಸಿಕ್ಕಿದಲ್ಲಿ ಗುಂಡುಬೇಟೆ ಮಾಡ್ಳೆ ತರಬೇತಿ ಕೊಟ್ಟತ್ತಾಡ.
ಉತ್ತರ ಭಾರತದ ಕೆಲವು ಊರುಗಳಲ್ಲಿ ಇದ್ದಿದ್ದ ನಕ್ಸಲರ ಏಕಾಧಿಪತ್ಯಕ್ಕೆ ಇದು ಸರಿಯಾದ ಉತ್ತರ ಆಗಿತ್ತಾಡ.
ಆದರೆ ಇಷ್ಟು ಅಪ್ಪಗಳೇ ಕೆಲವು ಮಾನವ ಹಕ್ಕಿನ ಮಾವಂದ್ರು ಕೋರ್ಟಿಂಗೆ ಹೋಗಿ ಈ ಕಾರ್ಯಕ್ಕೆ ನಿಷೇಧ ತಯಿಂದವಾಡ.
ನಕ್ಸಲರಿಂಗೆ ನಿಷೇಧ ಇಲ್ಲೆ, ಅವರ ವಿರುದ್ಧ ಹಾಂಗೇ ಮಾಡಿರೆ ನಿಷೇಧವೋ?
ಕಂತಿದ ಮುಳ್ಳಿಂಗೆ ನಿಷೇಧ ಇಲ್ಲೆ, ಅದರ ಒಕ್ಕಿ ಇಡ್ಕಲೆ ಹೆರಟ ಸೂಜಿಗೆ ನಿಷೇಧವೋ?!
ನಿಷೇಧ ಆದರೂ ನಕ್ಸಲರಿಂಗೆ ಚಳಿ ಕೂದ್ದು ಬಿಟ್ಟಿದಿಲ್ಲೆ. ಆದ ಕಾರಣ ಆ “ಕರ್ಮಾ” ಹೇಳ್ತ ಜೆನರ ಕೊಲ್ಲೇಕು ಹೇದು ಅಂದಿಂದ ನೋಕ ಹಾಕಿಂಡಿತ್ತವಾಡ.
ಮೊನ್ನೆ ಒದಗಿ ಬಂತು.
ಅವರ ಕೋಪದ ಕರ್ಮಾ ಮಾಂತ್ರ ಅಲ್ಲ, ಕರ್ಮಾ ನ ಒಟ್ಟಿಂಗೆ ಇದ್ದಿದ್ದ ಎಷ್ಟೋ ಜೆನರನ್ನೂ ಕೊಂದವು.
ಪಾಪಿಗೊ!
~
ಒಂದೊಂದರಿ ಭಾರತಮಾತೆಯ ಅವಸ್ಥೆ ಗ್ರೇಶುವಾಗ ಬೇಜಾರಾವುತ್ತು.
ಒಂದು ಹೊಡೆಲಿ ಪಾಕಿಸ್ತಾನ, ಬಾಂಗ್ಳಾ, ಆಚೊಡೆಲಿ ಚೀನಾ, ಇನ್ನೊಂದು ಹೊಡೆಲಿ ಅಲ್ಲಿಂದ ಪ್ರೇರೇಪಿತರಾದ ಕೆಂಪಣ್ಣಂಗೊ, ಮತ್ತೊಂದು ಹೊಡೆಲಿ ಗೋಭಕ್ಷ ರಾಷ್ಟ್ರದ್ರೋಹಿಗೊ – ಇದೇವದೂ ಬೇಡ ಹೇದು ಕಾಡಿಂಗೆ ಹೋದರೆ ಅಲ್ಲಿ ಈ ಕೆಂಪು ನಕ್ಸಲರು!
ಸುಭಿಕ್ಷವಾಗಿ, ಹುಲುಸಾಗಿ ಇಪ್ಪ ಭಾರತವ ಹೊಲಸು ಮಾಡ್ಳೆ ದೇಶಭಕ್ತಿಯ ಗಂಧವೇ ಇಲ್ಲದ್ದ ಈ ನಕ್ಸಲ್ ನ ಹಾಂಗಿಪ್ಪ ಸಂಘಟನೆ ಸಾಕು!
ಒಟ್ಟು ಭಾರತವ ಭಾರತ ಮಾತೆಯೇ ಕಾಪಾಡೇಕಟ್ಟೇ!
ಭಾರತದ ಅಶನ ಉಂಡುಗೊಂಡು ಭಾರತಕ್ಕೆ ಭಾರ ಆಗಿಪ್ಪವರ ದೇಶವೇ ಹೆರ ಹಾಕೆಕ್ಕು. ಅಲ್ಲದೋ?
~
ಒಂದೊಪ್ಪ: ಹುಲುಸಾಗಿ ಬೆಳವಲೆ ಭಾರತಾಂಬೆಗೆ ಲಕ್ಷಾಂತರ ಒರಿಶ ಬೇಕಾಯಿದು. ಅದರ ಹೊಲಸು ಮಾಡ್ಳೆ ಕೆಲವೇ ಒರಿಶ ಸಾಕು. ಅಲ್ದೋ?!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
oppannana vivraneya shaili yavatrana hange laikaidu. naksalara sadebadiyekku.bere dari elle. aadare sarakara gatti manassu madekku.
ಕೆಂಪು ಕೆಂಪಾದ ವಿಷಯದ ಪ್ರಸ್ತಾವನೆ ಲಾಯಕಾಯಿದು. ಅಂತೂ ಕೆಂಪು, ಪಚ್ಚೆ ಎಲ್ಲ ಒಟ್ಟು ಸೇರಿ ಇಡೀ ದೇಶವ ಹೊಡಿ ತೆಗೆತ್ತವಾನೆ, ವಿಷಯ ಕೇಳಿ ತುಂಬಾ ಬೇಜಾರು ಆತು. ಸಮಾವೇಶದ ಫೊಟೋ ತೆಗದವು ಆರು ಒಪ್ಪಣ್ಣ ?
ಲಾಯ್ಕ ಆಯಿದು. ಯಕ್ಷಪ್ರಶ್ನೆಲಿ ಹೇಳಿದ ವಿಧಾನವ ಅನುಸರಿಸೆಕ್ಕು ಇಂತಾ ಕಡೆ-ಆರಿಂಗೆ ಧರ್ಮ ಬೇಡದೊ,ಅಂತವರ ಧರ್ಮ ರಕ್ಷಿಸ; ರಕ್ಷಿಸಲೂ ಆಗ.ನಕ್ಸಲೀಯರು ಮಾಡುತ್ತರ ಎಲ್ಲಾ ಮಾಡಲಿ;ನಾವು ನಮ್ಮ ಕ್ರಮಲ್ಲಿ ಮಾನವ ಹಕ್ಕುಗಳ ಪಾಲಿಸುವೊ- ಹೇಳಿ ಮಾಡಿರೆ ಇಂತಾ ಕಡೆ ನಡೆಯ.
ಒಂದೊಪ್ಪ ಆಧಾರಿತ ಶುದ್ದಿಯ ವಿವರಣೆ ಲಾಯಕ ಆಯ್ದು. ಹೊಲಸು ಹೋಗಿ ಎಲ್ಲೋದಿಕ್ಕೆ ಹಸುರು ಕಂಗೊಳಿಸಲಿ ಹೇಳ್ತದು ನಮ್ಮ ಆಶಯ. ಹರೇ ರಾಮ.