(ಇಲ್ಲಿಯವರೆಗೆ)
ಕುಂಭಕರ್ಣ ಸತ್ತ ಶುದ್ಧಿ ಕೇಳಿದ ರಾವಣಂಗೆ ಸೆಡಿಲು ಬಡುದ ಹಾಂಗಾತು. ಅವ° ಅವನ ಮಗಂದ್ರಾದ ದೇವಾಂತಕ, ನರಾಂತಕ, ತ್ರಿಶಿಲಾಂತಕ ಮತ್ತೆ ಅತಿಕಾಯ ಕೂಡಾ ನಾಲ್ಕು ಮಕ್ಕಳ ಯುದ್ಧಭೂಮಿಗೆ ಕಳ್ಸಿಕೊಟ್ಟ°. ಅವು ವಾನರಂಗಳಷ್ಟು ಉಶಾರಿತ್ತಿದ್ದವಿಲ್ಲೆ. ಅವುದೆ ಬೇಗನೆ ಯುದ್ಧಲ್ಲಿ ಸತ್ತ ಶುದ್ಧಿ ರಾವಣಂಗೆ ಮುಟ್ಟಿತ್ತು. ಅವಂಗಾದ ವಿಪರೀತ ನಷ್ಟಂಗೊ, ಮಕ್ಕಳ ಸಾವು ರಾವಣನ ದುಃಖಸಾಗರಲ್ಲಿ ಮುಳುಗಿಸಿತ್ತು. ರಾವಣ ದುಃಖ ತಡೆಯದ್ದೆ ಸಂಕಟಲ್ಲಿ ನೆಲದ ಮೇಲೆ ಹೊಡೆಚ್ಚಿದ°. ಇಂದ್ರಜಿತು ಅಪ್ಪನ ದುಃಖವ ನೋಡಿದ- ಅಪ್ಪಂಗೆ ಧೈರ್ಯತುಂಬುವ ಪ್ರಯತ್ನಮಾಡಿದ°. ” ಅಪ್ಪ ಆನು ಬದುಕಿಪ್ಪಷ್ಟು ಸಮಯ ನೀನು ಸೋಲಿನ ವಿಚಾರವ ಯೋಚನೆಮಾಡೆಡ. ಈ ಸರ್ತಿ ಎನ್ನ ಬಾಣದ ಪೆಟ್ಟು ರಾಮ ಲಕ್ಷ್ಮಣರ ಜೀವಲ್ಲಿ ಒಳಿಶ. ಆನವರ ಕೊಂದು, ಯುದ್ಧಲ್ಲಿ ಗೆದ್ದು, ವಿಜಯ ಸಾಧಿಸಿಕ್ಕಿ ಬತ್ತೆ” ಹೇಳಿ ಇಂದ್ರಜಿತು ರಾವಣನತ್ತರೆ ಹೇಳಿದ°.
ಇಂದ್ರಜಿತು ಮಹಾಪರಾಕ್ರಮಿಯೂ ಯುದ್ಧವಿದ್ಯೆಲಿ ನಿಪುಣನೂ ಆಗಿತ್ತಿದ್ದ.ಸುಮಾರು ನಮುನೆಯ ಮಾಯಾಜಾಲಂಗಳ ತಿಳುದೋನು ಹೇಳಿ ಹೆಸರು ಪಡದಿತ್ತಿದ್ದ°. ಅವ° ಯುದ್ಧಭೂಮಿಲಿ ರಾಮ ಲಕ್ಷ್ಮಣರ ಮೇಲೆ ಬಾಣ ಬಿಟ್ಟ°. ರಾಮ ಲಕ್ಷ್ಮಣರಿಂಗೆ ರಜರಜ ಗಾಯ ಆತು. ಬರೀ ಬಾಣಪ್ರಯೋಗಂದ ಅವು ಸಾಯವು ಹೇಳಿ ಕಂಡು ಇಂದ್ರಜಿತು ಅವನ ಮಾಯಾಶಕ್ತಿಯ ಪ್ರಯೋಗಿಸಿದ°. ಇಡೀ ವಾನರಸೇನೆಯ ಮೇಲೆ ವಿಷದ ಗಾಳಿಯ ಹರಡಿದ°. ವಿಷದ ಗಾಳಿಂದಾಗಿ ವಾನರಂಗೊ ಎಲ್ಲ ನೆಲಕ್ಕೆ ಉರುಳಿದವು. ರಾಮ ಲಕ್ಷ್ಮಣರುದೆ ಬಚ್ಚಿ ತಲೆತಿರುಗಿದಾಂಗೆ ಆಗಿ ನೆಲಕ್ಕೆ ಬಿದ್ದವು. ಇದು ಇನ್ನೊಂದು ಹೊಡೆಲಿ ಯುದ್ಧಮಾಡಿಗೊಂಡಿದ್ದ ಜಾಂಬವಂತಂಗೆ ಕಂಡತ್ತು, ಮತ್ತೊಂದು ಕೊಡಿಲಿದ್ದ ಹನುಮಂತನ ಕೂಡ್ಳೇ ಬರಿಸಿದ°. “ಮಾರುತೀ, ನೀನು ಬೇಗನೆ ಸಮುದ್ರವ ದಾಂಟಿ ಕೈಲಾಸಪರ್ವತದ ಹೊಡೆಂಗೆ ಹೋಗು. ಅಲ್ಲಿ ಸಂಜೀವಿನಿ ಹೇಳ್ತ ಮೂಲಿಕೆಸೊಪ್ಪು ಇದ್ದು. ಅದರ ಬೇಗ ತೆಕ್ಕೊಂಡು ಬಾ. ಆ ಮೂಲಿಕೆಮದ್ದಿಲಿ ಸತ್ತುಹೋದೋರ ಬದುಕ್ಕುಸುಲೆ ಎಡಿಗು” ಹೇಳಿದ°. ಅಷ್ಟು ಜಾಂಬವಂತ ಹೇಳಿ ಮುಗುಶುವ ಮೊದಲೇ ಹನುಮಂತ ಭಾರೀ ಜೋರಾಗಿ ಗಾಳಿಯಾಂಗೆ ಕೈಲಾಸಪರ್ವತದ ಕೊಡಿಯಂಗೆ ಎತ್ತಿದ°. ಅಲ್ಲಿ ಅವಂಗೆ ಸಂಜೀವಿನಿ ಮೂಲಿಕೆಸೊಪ್ಪು ಯಾವದು ಹೇಳಿಯೇ ಗೊಂತಾಯಿದಿಲ್ಲೆ. ಅವ ಇಡೀ ಕೈಲಾಸಪರ್ವತವನ್ನೇ ಕೈಲಿ ತೆಕ್ಕೊಂಡು ಲಂಕೆಗೆ ಹಾರಿಬಂದ°. ಹನುಮಂತ° ತಂದ ಪರ್ವತಲ್ಲಿತ್ತಿದ್ದ ಸಂಜೀವಿನಿ ಮೂಲಿಕೆಸೊಪ್ಪಿನ ಪರಿಮ್ಮಳ ಸುತ್ತುಮುತ್ತು ಎಲ್ಲಾ ಹರಡಿತ್ತು. ಕೂಡ್ಳೇ ಎಚ್ಚರತಪ್ಪಿ ಬಿದ್ದ ರಾಮ ಲಕ್ಷ್ಮಣರು, ವಾನರಂಗೊ ಎಲ್ಲ ಎದ್ದು ಕೂದವು. ಪುನಃ ಅವೆಲ್ಲ ಯುದ್ಧಮಾಡುಲೆ ತಯಾರಾದವು. ಅಶೋಕವನಲ್ಲಿ ಈ ಎಲ್ಲಾ ಶುದ್ಧಿಗಳ ತ್ರಿಜಟೆ ಹೇಳ್ತ ರಾಕ್ಷಸಿ ಸೀತೆಗೆ ಹೇಳಿಗೊಂಡಿತ್ತು. ಅದು ಸೀತೆಗೆ ಧೈರ್ಯಹೇಳಿ ಸಮಾಧಾನ ಮಾಡಿಗೊಂಡಿತ್ತು.
ಇಂದ್ರಜಿತು ತಿರುಗ ಅವನ ಮಾಯಾವಿದ್ಯೆಯ ಪ್ರಯೋಗ ಮಾಡುಲೆ ಹೆರಟ°. ಅವ° ಒಂದು ರಾಕ್ಷಸಿಯ ಅವನ ಮಾಯಾವಿದ್ಯೆಯ ಬಲಲ್ಲಿ ಸೀತೆಯಾಂಗೆ ಮಾಡಿ, ಅದರ ಯುದ್ಧಭೂಮಿಗೆ ಕರಕ್ಕೊಂಡೋದ°. ರಾಕ್ಷಸಿ ನಿಜವಾದ ಸೀತೆಯಾಂಗೆ ಕಂಡುಗೊಂಡಿತ್ತು. ಅದರ ಇಂದ್ರಜಿತು ರಾಮ, ಲಕ್ಷ್ಮಣ, ಸುಗ್ರೀವ, ಹನುಮಂತ ಎಲ್ಲ ಇಪ್ಪಲ್ಲಿಯಂಗೆ ತಂದು ನಿಲ್ಸಿ, ಅವರ ಎದುರೇ ಆ ಮಾಯಾಸೀತೆಯ ತಲೆಕಡುದ°.
ವಾನರಂಗೊಕ್ಕೆಲ್ಲ ದಿಕ್ಕೇ ಕಾಣದ್ದಾಂಗಾತು. ಅವೆಲ್ಲಾ ಮೂಕರಾಂಗೆ ನಿಂದವು. ಅವಕ್ಕೆಲ್ಲ ಇನ್ನೆಂತ ಮಾಡುದು ಹೇಳಿ ಅರಡಿಯದ್ದ ಹಾಂಗಾತು. ರಾಮ ಆಘಾತಲ್ಲಿ ತತ್ತರಿಸಿದ°, ಲಕ್ಷ್ಮಣ ಆನೀಗಳೇ ಹೋಗಿ ಇಂದ್ರಜಿತುವಿನ ಕೊಂದುಬಿಡ್ತೇಳಿ ಶಪಥಮಾಡಿದ°. ಮಾಯಾಶಕ್ತಿಯ ಇನ್ನೂ ಹೆಚ್ಚು ಪಡವಲೆ ಮಾಯಾಶಕ್ತಿ ಇಪ್ಪ ದೇವಸ್ಥಾನಕ್ಕೆ ಇಂದ್ರಜಿತು ಹೋಯ್ಕೊಂಡಿತ್ತಿದ್ದ°. ಲಕ್ಷ್ಮಣ ಇಂದ್ರಜಿತುವಿನ ಹಿಂದೆಯೇ ಅಟ್ಟಿಗೊಂಡು ದೇವಸ್ಥಾನದವರೆಗೂ ಹೋದ°. ಅವನ ಮಾಯಾಶಕ್ತಿಯನ್ನೇ ತಡವಂಥಾ ಬಾಣವ ಬತ್ತಳಿಕೆಂದ ತೆಗದು ಗುರಿಮಡುಗಿ ಇಂದ್ರಜಿತುವಿನ ತಲೆಯ ತುಂಡುಮಾಡಿದ°. ಇದರ ನೋಡಿ ವಾನರಂಗೊ ಸಂತೋಷಲ್ಲಿ ಕೊಣುದವು, ಹಾರಿ ಸಂತೋಷಪಟ್ಟವು. ಲಕ್ಷ್ಮಣಂಗೆ ಏನೂ ಪೆಟ್ಟಾಯಿದಿಲ್ಲೆ. ಇಂದ್ರಜಿತು ಕೊಂದದು ಸೀತೆಯ ಅಲ್ಲಾಳಿ ಗೊಂತಾಗಿ ರಾಮಂಗೆಲ್ಲಾ ಸಮಾಧಾನ ಆತು.
ಇಂದ್ರಜಿತುವಿನ ಸಾವು ರಾವಣಂಗೆ ಭಾರೀ ಪೆಟ್ಟುಕೊಟ್ಟಹಾಂಗಾತು. ಅವ° ಈ ಯುದ್ಧಲ್ಲಿ ಅವನ ಎಲ್ಲಾ ಮಕ್ಕಳ ಕಳಕ್ಕೊಂಡಿತ್ತಿದ್ದ°. ಲಂಕೆಯ ಜೆನಂಗೊ ಎಲ್ಲ ದುಃಖಲ್ಲಿ ಮುಳುಗಿದವು. ಸೀತೆಯ ಅಪಹಾರ ಮಾಡುಲೆ ರಾವಣಂಗೆ ಹೇಳಿದ ಶೂರ್ಪನಖಿಯ ಎಲ್ಲರೂ ದೂರಿದವು. ಇಷ್ಟೆಲ್ಲಾ ಆದ್ದದು ಆ ಶೂರ್ಪನಖಿಂದಾಗಿಯೇ ಹೇಳಿ ಬೈದವು. ” ರಾವಣನ ಕೆಟ್ಟಬುದ್ಧಿಯೂ ಹೆಣ್ಣುಮರುಳೂ ಅವನ ತಮ್ಮನ, ಮಕ್ಕಳ, ಅಲ್ಲದ್ದೆ ಸಾವಿರಾರು ರಾಕ್ಷಸರ ಕಳಕ್ಕೊಂಬಲೆ ಕಾರಣ ಆತು” ಹೇಳಿ ಪ್ರಜೆಗೊ ಮಾತಾಡಿಗೊಂಡವು. ಲಂಕೆಲಿ ಸಾವು ನೋವು ಆಗದ್ದ ಮನೆಯೇ ಇತ್ತಿಲ್ಲೆ. ಲಂಕೆಲಿ ಎಲ್ಲಾ ಕಡೆ ಕೂಗುವ ಸ್ವರವೇ ಕೇಳಿಗೊಂಡು, ದುಃಖದ ಮೋರೆಯೇ ಕಂಡುಗೊಂಡು ಇತ್ತು.
ರಾವಣ ಅವನ ರಥವ ಹತ್ತಿ ರಣರಂಗಕ್ಕೆ ಬಂದ°. ಅವಂಗೀಗ ರಾಮನ ಕೊಲ್ಲುದೇ ಮುಖ್ಯಗುರಿಯಾಗಿತ್ತು. ಅದಕ್ಕೂ ಮೊದಲು ಅವ ಲಕ್ಷ್ಮಣನ ಎದುರುಸೆಕ್ಕಾತು. ಲಕ್ಷ್ಮಣ ಬಿಟ್ಟ ಬಾಣವ ರಾವಣ ಆಕಾಶದ ನೆಡುಗೆಯೇ ತಡದ°. ಮತ್ತೆ ರಾವಣ ಯುದ್ಧಕ್ಕೆ ರಾಮಂಗೆ ಎದುರಾದ. ರಾಮ ರಾವಣರ ನೆಡುಗೆ ಘೋರ ಯುದ್ಧ ನಡದತ್ತು. ರಾವಣ ತುಂಬಾ ಶಕ್ತಿ ಇಪ್ಪ ಬಾಣಂಗಳ ರಾಮನ ಮೇಲೆ ಪ್ರಯೋಗಮಾಡಿದ°. ರಾಮ ಅದರ ಆಕಾಶದ ನೆಡುಗೆಯೇ ತುಂಡುಮಾಡಿಗೊಂಡಿತ್ತಿದ್ದ°. ಅದರಂದಾಗಿ ಬಾಣಂಗೊ ಗುರಿಮುಟ್ಟದ್ದೆ ತುಂಡಾಗಿ ಕೆಳಂಗೆ ಬಿದ್ದುಗೊಂಡಿತ್ತು. ರಾವಣಂಗೆ ಬ್ರಹ್ಮ ವರವಾಗಿ ಕೊಟ್ಟ ಕವಚ ಇತ್ತು. ಅವ° ಅದರ ಹಾಕಿಗೊಂಡು ಯುದ್ಧಭೂಮಿಗೆ ಬಂದ ಕಾರಣ ರಾಮ ಬಿಟ್ಟ ಬಾಣಂಗೊ ಕೆಲವು ದಂಡ ಆತು. ಕವಚದ ಒಳಂಗೆ ಬಾಣ ಹೋಯ್ಕೊಂಡೇ ಇತ್ತಿಲ್ಲೆ.
ರಾಮ ರಾವಣರು ಇಬ್ರುದೆ ತುಂಬ ಬಲಶಾಲಿಗೊ ಆಗಿತ್ತಿದ್ದವು. ಹಾಂಗಾಗಿ ಭೀಕರ ಯುದ್ಧ ತುಂಬಾ ದಿನ ನಡದತ್ತು. ದೇವತೆಗೊ ಮೇಲೆ ಆಕಾಶಂದ ಈ ರಾಮ ರಾವಣರ ಯುದ್ಧವ ಆಸಕ್ತಿಲಿ ನೋಡಿದವು. ಎಷ್ಟು ದಿನ ಕಳುದರೂ ಯುದ್ಧ ಮುಗಿವ ಲಕ್ಷಣವೇ ಕಂಡತ್ತಿಲ್ಲೆ. ಆದರೆ ನಿಧಾನಲ್ಲಿ ರಾವಣನ ಶಕ್ತಿ ಕುಂದಿತ್ತು. ಅವಂಗೆ ತಾನು ಸಾವ ಕಾಲ ಹತ್ತರೆ ಬತ್ತಾ ಇದ್ದು ಹೇಳಿ ಅಂದಾಜಿ ಆತು. ಆದರೂ ಅವ° ಯುದ್ಧ ಮಾಡಿಗೊಂಡೇ ಇತ್ತಿದ್ದ. ಅಖೇರಿಗೆ ರಾಮ ಇದ್ದದರಲ್ಲಿ ಅತಿಹೆಚ್ಚು ಶಕ್ತಿಯ, ಪ್ರಬಲ ಬಾಣವಾದ ಬ್ರಹ್ಮಾಸ್ತ್ರವ ರಾವಣನ ಮೇಲಂಗೆ ಬಿಟ್ಟ°. ಆ ಬಾಣ ರಾವಣನ ಎದೆಯ ಕವಚವನ್ನೂ ನುಚ್ಚುನೂರುಮಾಡಿ ಎದೆಯ ಒಳಂಗೆ ಹೊಕ್ಕತ್ತು. ಬಲಶಾಲಿಯೂ ಶಕ್ತಿಶಾಲಿಯೂ ಆದ ರಾವಣ ಸತ್ತು ನೆಲಕ್ಕಂಗೆ ಬಿದ್ದ°. ಈ ರೀತಿ ದುಷ್ಟಶಕ್ತಿಯ ನಾಶ ಆತು.
ದುಷ್ಟ ರಾವಣ ಸತ್ತದು ನೋಡಿ ದೇವತೆಗೊ ಎಲ್ಲೋರೂ ಖುಶಿಪಟ್ಟವು. ವಾನರಂಗೊ ಎಲ್ಲ ಸಂತೋಷಲ್ಲಿ ಕೊಣುದು ಕುಪ್ಪಳಿಸಿದವು. ವಿಭೀಷಣ ಮತ್ತೆ ಮಂಡೋದರಿಯೂ ಸೇರಿ ರಾವಣನ ಹೆಂಡತಿಯರೆಲ್ಲ ದುಃಖಸಾಗರಲ್ಲಿ ಮುಳುಗಿದವು.
ರಾಮ ಹೇಳಿದ ಹಾಂಗೇ ವಿಭೀಷಣ ರಾವಣನ ಅಂತ್ಯಕ್ರಿಯೆಗಳ ಮಾಡಿದ°. ಮಹಾವಿಷ್ಣುವಿನ ಅವತಾರವಾದ ಶ್ರೀರಾಮ ಭೂಮಿಯ ಮೇಲೆ ಸುಖ ಶಾಂತಿ ನೆಲೆಯಪ್ಪಾಂಗೆ ಮಾಡಿದ. ದುಷ್ಟ ರಾಕ್ಷಸರ ಎಲ್ಲ ಅಳಿಶಿ, ನಿರ್ಮೂಲಮಾಡಿಯಾತು ಹೇಳಿ ಋಷಿಗೊ, ದೇವತೆಗೊ ಸಂತೋಷಲ್ಲಿ ಉಬ್ಬಿದವು. ರಾಮ ವಿಭೀಷಣಂಗೆ ಕೊಟ್ಟ ಮಾತಿನ ನೆನಪುಮಾಡಿಗೊಂಡ°. ವಿಭೀಷಣನ ಲಂಕೆಯ ರಾಜನನ್ನಾಗಿಮಾಡಿ ಪಟ್ಟ ಕಟ್ಟಿದ°.
(ಸಶೇಷ)
ಸೂ.ಃ
- ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
- ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
– ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.
- ಮಕ್ಕೊಗೆ ರಾಮಾಯಣ ಅಧ್ಯಾಯಃ 10 ಭಾಗಃ 3 - January 15, 2014
- ಮಕ್ಕೊಗೆ ರಾಮಾಯಣ – ಅಧ್ಯಾಯ ಃ10 ಭಾಗ ಃ 2 - January 8, 2014
- ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧ - January 1, 2014
ಕೈಲಾರು ಚಿಕ್ಕಮ್ಮನ ಕಥೆಯೊಟ್ಟಿಂಗೆ ಬಾಲಣ್ಣನ ಬಣ್ಣದ ಚಿತ್ರವೂ ಮೇಳೈಸಿ ಹೊನ್ನ ಕಾಂತಿಯ ತಂದು ಕೊಟ್ಟತ್ತು.
ಜೈ ಶ್ರೀ ರಾಮ್, ಜೈ ಹನುಮಾನ್.