ಪೆರುವದ ಮಾವಂಗೆ ಮೊನ್ನೆ ಹರಿಯೊಲ್ಮೆ ಮದುವೆ ಹೇಳಿಕೆ ಇದ್ದತ್ತು; ನವಗೂ ಇದ್ದತ್ತು.
ಹಾಂಗಾಗಿ ಬದಿಯೆಡ್ಕಂದ ಬೋವಿಕ್ಕಾನ ಒರೆಂಗೆ ಮಾವನ ಬೈಕ್ಕಿಲಿ ಒಟ್ಟಿಂಗೇ ಹೋಪಲೆ ಸುಲಾಬ ಆತಿದಾ. ಹೋದ್ಸೂ ಒಟ್ಟಿಂಗೇ, ಬೊಂಡ ಶರ್ಬತ್ತು ಕುಡುದ್ದೂ ಒಟ್ಟಿಂಗೇ, ಮದುವೆ ಊಟ ಉಂಡದೂ ಒಟ್ಟಿಂಗೇ, ಊಟಕ್ಷಿಣೆ ತೆಕ್ಕೊಂಡದೂ ಒಟ್ಟಿಂಗೇ.
ಬಪ್ಪಗ ಮಾಂತ್ರ– ನವಗೊಂದರಿ ಉಡುಪಮೂಲೆ ಕಷಾಯದ ರುಚಿ ನೋಡ್ಳಿದ್ದ ಕಾರಣ – ಬೇರೆಬೇರೆ ಬಂದ್ಸು.
ಅದಿರಳಿ.
ಉಂಬಲೆ ಕೂದ್ಸು ಪೆರುವದ ಮಾವನ ಹತ್ತರೆಯೇ – ಹೇದೆ ಅಲ್ಲದೋ; ಅಂಬಗ ತುಂಬ ಮಾತಾಡಿದವು. ಎಂತರ?
~
ಮದುವೆ ಊಟ ಉಂಡುಗೊಂಡು ಮದುವೆ ವಿಚಾರವೇ ಮಾತಾಡ್ಳೆ ಸೂಕ್ತ ಅಲ್ಲದೋ?
ನಮ್ಮೂರಿನ ಮಾಣಿಯಂಗಳ ಮದುವೆ ವಿಚಾರ, ಕೂಸುಗಳ ಮದುವೆ ಸಂಗತಿಗೊ – ಇತ್ಯಾದಿ ಹತ್ತೂ ಹಲವೂ ಶುದ್ದಿ ಬಂದು ತಿರುಗಿತ್ತು.
ಮಾತಾಡಿದ ಮುಖ್ಯ ಸಂಗತಿಗಳ ನಾವು ನೆಂಪು ಮಾಡುವೊ ಹೇದು ಗ್ರೇಶಿದೆ. ಅಕ್ಕನ್ನೇ?
~
ಮದುವೆ-ಸಂಸಾರ ಹೇದರೆ ಅದೊಂದು ಭಾವನಾತ್ಮಕ ಜೀವನ – ಹೇದು ಪೆರುವದ ಮಾವ° ಹೇಳಿದವು. ಎರಡು ವೆಗ್ತಿಗೊ ಒಂದಾಗಿ ಬದ್ಕುದು ಮಾಂತ್ರ ಅಲ್ಲ, ಎರಡು ಸಂಸ್ಕಾರಂಗೊ, ಎರಡು ಕುಟುಂಬಂಗೊ ಒಟ್ಟಿಂಗೇ ಬದ್ಕೇಕು.
ಮದುವೆ ಅಪ್ಪದು ಹೇದರೆ ಬರೇ ಆ ದಿನದ ಗೌಜಿ ಅಲ್ಲ, ಜೀವಮಾನದ ಪರ್ಯಂತ ಇಪ್ಪ ಮಂಗಳ ಕಾರ್ಯ ಅದು – ಹೇಳಿದವು.
ಮದುವೆಂದ ಮದಲು ಬೇರೇವದೋ ನಮುನೆ ಸಂಸ್ಕಾರಲ್ಲಿ ಬದ್ಕಿರ್ತ ಕೂಸು, ಮದುವೆ ಆದಪ್ಪದ್ದೇ ಗೆಂಡನ ಮನೆಯ ವಾತಾವರಣಕ್ಕೆ ಹೊಂದಿಗೊಳ್ತು. ಮದುವೆ ಅಪ್ಪನ್ನಾರ ಜೆಬಾದಾರಿಕೆ ಇಲ್ಲದ್ದೆ ಬೆಳದ ತುಂಡುಮಾಣಿ ಮದುವೆ ಆದ ಮತ್ತೆ ಎಲ್ಲವನ್ನೂ ನಿಭಾಯಿಸುವ ಗಾಂಭೀರ್ಯ ಪಡಕ್ಕೊಳ್ತ°. ಅಮ್ಮನ ಕೈ ರುಚಿ ಉಂಡ ಕೂಸಿಂಗೆ ಸ್ವಂತ ಕೈರುಚಿ ಉಂಬ ಪರಿಸ್ಥಿತಿ. ಅಮ್ಮನ ರುಚಿರುಚಿ ಊಟ ಉಂಡ ಮಾಣಿಗೆ ಹೆಂಡತ್ತಿಯ ಅಡಿಗೆ ಉಣ್ಣೇಕಾದ ಪರಿಸ್ಥಿತಿ. ಅಡಿಗೆ ಲಾಯ್ಕಿದ್ದು ಹೇಳಿಗೊಂಡು ಹೆಂಡತ್ತಿಯ ಕೊಶಿ ಪಡುಸೇಕಾದ ಸಂಗತಿ!
~
ಕಾಂಬು ಅಜ್ಜನ ಕಾಲಲ್ಲಿ ಕೂಸುಗೊ ಧಾರಾಳ ಆದರೂ, ಈಗ ಸಂಗತಿ ಹಾಂಗಿಲ್ಲೆ.
ನಮ್ಮೂರಿನ ಮಾಣಿಯಂಗೊಕ್ಕೆ ಕೂಸುಗೊ ಸಿಕ್ಕದ್ದೆ ಆದ ಸಂಗತಿ ನಿಜವಾಗಿಯೂ ಖೇದಕರ.
ನಮ್ಮೂರಿನ ಕೂಸುಗೊಕ್ಕೆ ಹೆರಾಣ ಮಾಣಿಯಂಗೊ ಸಿಕ್ಕುತ್ತದೂ ಖೇದಕರವೇ – ಹೇದು ವಿಮರ್ಶೆ ಇದ್ದು.
ಮದುವೆಪ್ರಾಯ ಕಂಡು ಊರೊಳ ಇಪ್ಪ ಹಲವು ಅಣ್ಣಂದ್ರು ಬಾಕಿಯೇ, ಇನ್ನೂ ಸಂಸಾರ ಕೂಡಿ ಬಯಿಂದಿಲ್ಲೆ.
ಕನ್ನಡ್ಕದ ಕರೆಲಿ ಬೆಳಿ ತಲೆಕಸವು ಕಾಣ್ತು – ನಲುವತ್ತರ ಐವತ್ತರ ಬುಡಲ್ಲಿದ್ದರೆ ಮತ್ತೆ ಪ್ರಾಯ ಕಾಯ್ತೋ?
ಈಗಾಣ ಹಳ್ಳಿ ಮನೆಗಳಲ್ಲಿ ಹೇಂಗಾಯಿದು?
ಮಗಂಗೆ ಪ್ರಾಯ ಬಂದು ಮೊಗಚ್ಚಿದ್ದು.
ಪ್ರಾಯದ ಅಜ್ಜ-ಅಜ್ಜಿಯಕ್ಕೊಗೂ ಒಂದು ಆಸರೆ ಆಯೇಕು.
ಬೆಗರರುಶಿ ತೋಟಲ್ಲಿ ದುಡಿವಾಗ ಮಜ್ಜಿಗೆ ನೀರು ಮಾಡಿ ಕೊಡ್ಳೆ ಪ್ರೀತಿಯ ಹೆಂಡತ್ತಿ ಆಯೇಕು.
ನಿತ್ಯಪೂಜೆಗೆ ಹೂಗು ಕೊಯಿದು ಮಡಗುಲೆ ಜೆನ ಆಯೇಕು.
ತೊಳಶಿಕಟ್ಟೆ ಆರೈಕೆ ಮಾಡ್ಳೆ ಸುಮಂಗಲಿ ಆಯೇಕು –
ಮುಖ್ಯವಾಗಿ ಮನೆಲಿ ತೊಟ್ಳು ತೂಗಿ ಮುಂದಾಣ ತಲೆಮಾರು ಮುಂದರಿಯಲೆ ಕುಂಞಿ ಬಾಬೆ ಆಯೇಕು.
ಹಲವೂ ಮನೆಗಳ ಬೇಜಾರಕ್ಕೆ ಇದೇ ಕಾರಣಂಗೊ ಮೂಲ.
ಅಬ್ಬೆಪ್ಪನತ್ರೆ ಮಗ ಈ ವಿಷಯ ತೆಗವಲಿಲ್ಲೆ, ಮಗನತ್ರೆ ಅಬ್ಬೆಪ್ಪ ಈ ಸಂಗತಿ ಮಾತಾಡ್ಳಿಲ್ಲೆ. ಏಕೇದರೆ ಅವೆಲ್ಲರಿಂಗೂ ಮನಸ್ಸಿನೊಳ ಕೊರೆತ್ತ ಒಂದು ಸಂಗತಿ ಅಲ್ಲದೋ?
ಪ್ರಾಕಿಂದ ಬಂದ ಸಂಸ್ಕಾರ, ಪರಂಪರೆ, ಕೃಷಿ, ಜಾನುವಾರು ಎಲ್ಲವನ್ನೂ ನಂಬಿಗೊಂಡು ಬಂದ ಅಬ್ಬೆಪ್ಪನ ಶ್ರಮಕ್ಕೆ ಬೆನ್ನು ಕೊಡ್ಲೆ ಮಗ ತರವಾಡು ಮನೆಗಳಲ್ಲಿ ನಿಂದದು ತಪ್ಪಾಗಿ ಹೋತೋ?
ಕಲಿಯುವಿಕೆಯ, ಪೇಟೆ ಕೆಲಸವ ಎಲ್ಲ ಮಾಡುಲೆ ಎಡಿಗಾದರೂ ಅದಕ್ಕೆ ಹೋಗದ್ದೆ ಹಳ್ಳಿ ಮನೆಲಿ ಕೂದರೆ ಅದು ನಮ್ಮ ಈಗಾಣ ಕಾಲಕ್ಕೆ ಘನಸ್ತಿಕೆ ಆಗದ್ದೆ ಹೋತೊ?
ಪೇಟೆಲಿ ಇಪ್ಪವಂಗೇ ಕೂಸು ಸಿಕ್ಕ್ಕುದು, ಪೇಟೆ ಜೀವನವೇ ಶೋಕು ಹೇಳಿ ಎಲ್ಲೋರೂ ಪೇಟೆ ಕಡೆಂಗೆ ಮೋರೆ ಮಾಡಿದರೆ ನಮ್ಮ ಮಣ್ಣಿನ ಒಳಿಶುದು ಆರು?
ಮಗನ ಪ್ರಾಯದ ಪೇಟೆಲಿಪ್ಪ ಮಾಣಿ ದುಡಿವದು, ಮದುವೆ ಆಗಿ ಮುಂದರಿವದು ಕಾಂಬಗ ಮನೆ-ತೋಟ ಹೇಳಿ ಗಟ್ಟಿಗೆ ಕೂದ ಘಟ್ಟಿಗ ಮಗನ ಕಾಂಬಗ ಅಬ್ಬೆಪ್ಪಂಗೆ ಹೇಂಗಕ್ಕು?
ಅಲ್ಲಿ ಕೂಸಿದ್ದಾಡ, ಇಲ್ಲಿ ಕೂಸಿದ್ದಾಡ ಹೇಳ್ತ ಬ್ರೋಕರುಗಳೇ ಈಗ ದೇವರುಗೊ. ಅವಕ್ಕೆಲ್ಲ ಹತ್ತೋ-ಐವತ್ತೋ ಮಣ್ಣ ಕೊಟ್ಟು ಕೂಸು ನೋಡುಸುದು. ಅವು ತೋರ್ಸಿದ್ದದೇ ಕೂಸು. ಅವು ಹೇಳಿದ್ದದೇ ಕಾರಣ.
ಮದುವೆ ಆದರೆ ಆತು, ಮುರುದರೆ ಮುರುತ್ತು. ಒಟ್ಟು ವಿಚಿತ್ರಾವಸ್ಥೆ – ಹೇದು ಪೆರುವದ ಮಾವ° ಮೋರೆ ಹುಳಿಮಾಡಿಗೊಂಡವು; ಪುಳಿಂಜಿ ತಿಂದಿಕ್ಕಿ.
~
ಪೆರ್ವದ ಮಾವನ ಪೈಕಿ ಒಬ್ಬ ಜವ್ವನಿಗಂಗೆ ಎರಡು ತಿಂಗಳ ಹಿಂದೆ ಮದುವೆ ಕಳಾತಡ.
ಕೂಸು ಎಲ್ಲಿಂದ? ದೂರದೂರಿಂದ. ತೆಂಕ್ಲಾಗಿಂದ.
ಅಷ್ಟು ತೆಂಕ್ಲಾಗಿ ಹೋದ ಮತ್ತೆ ಮಲೆಯಾಳ ಮಾಂತ್ರ ಇಕ್ಕಷ್ಟೆ. ಕೂಸಿಂಗೂ ಮಲೆಯಾಳ ಮಾಂತ್ರ ಬತ್ತಷ್ಟೆ.
ಬಾವಯ್ಯಂಗೆ ಮಲೆಯಾಳ ಬತ್ತ ಕಾರಣ ಈಗ ಸುಧಾರಣೆ ಆವುತ್ತು. ಆದರೆ ಮನೆಯ ಭಾಷೆ ಎಂತಕ್ಕು? ಆ ಮನೆಯ ಅಜ್ಜಜ್ಜಿ ಮಾತಾಡಿಗೊಂಡಿದ್ದ ಹವ್ಯಕ ಭಾಷೆ ಎಲ್ಲಿ ಹೋಕು?
ಅದಕ್ಕೇ, ಆ ಮಾಣಿ ಆಸಕ್ತಿಲಿ ಕೂಸಿಂಗೆ ನಮ್ಮ ಭಾಶೆ ಕಲುಶುತ್ತಾ ಇದ್ದನಾಡ.
ಆ ಕೂಸುದೇ ಹಾಂಗೇ, ನಮ್ಮ ಕ್ರಮಂಗೊ ಕಲಿತ್ತ ಆಸಕ್ತಿ ಇದ್ದು. ನಮ್ಮ ಭಾಷೆಯ ಕಲಿತ್ತ ಆಸಕ್ತಿ ಇದ್ದು. ನಮ್ಮೊಳ್ತಿ ಆಗಿ ಬೆಳವಲೆ ಖುಷಿ ಇದ್ದು. ಹಾಂಗಾಗಿ ಏನೂ ಸಮಸ್ಯೆ ಇಲ್ಲೆ.
ನಮ್ಮ ಹೆರಿಯೋರ ಕಾಲಲ್ಲಿ ಒಂದರಿ ಹೀಂಗೆ ಕೂಸುಗೊಕ್ಕೆ ತಾತ್ವಾರ ಆಗಿ ತೆಂಕ್ಲಾಗಿಂದ ಸಮ್ಮಂದ ಮಾಡುದು ಇತ್ತಡೊ.
ಬಾಶೆ ವೆತ್ಯಾಸ ಇಪ್ಪದು ಬಿಟ್ರೆ ಸಾಮಾನ್ಯ ಆಚರಣೆಗೊ, ಸಂಸ್ಕಾರಂಗೊ ಒಂದೇ ಆದ ಕಾರಣ ಅಲ್ಲಿಂದ ಬಂದ ಹೆಮ್ಮಕ್ಕೊ ನಮ್ಮೊಳ ಹೊಂದಿಗೊಂಡವು.
ವಂಶ ಬೆಳಗಿದವು, ಬೆಳೆಶಿದವು.
ಈಗ ಈ ಕೂಸುದೇ ಕ್ರಮೇಣ ನಮ್ಮ ಭಾಷೆಯ ಶಬ್ದಂಗೊ ಸೇರ್ಸಿ ಮಾತಾಡ್ತು. ನಮ್ಮೋರ ಹೆಮ್ಮಕ್ಕೊ ಆವುತ್ತಾ ಇದ್ದು – ಹೇಳಿ ಪೆರ್ವದ ಮಾವ° ಹೇಳಿದವು.
~
ಹೋ, ಈಗ ಅದು ಹವ್ಯಕ ಭಾಷೆ ಮಾತಾಡ್ತೋ ಅಂಬಗಾ? – ಕುಷೀಲಿ ಕೇಳಿದೆ.
ಹ್ಮ್, ಸರೀ ಹೇದು ಬತ್ತಿಲ್ಲೆ, ಕಲಿತ್ತಾ ಇದ್ದು. “ಸಂಸಾರ ಮಾಡುವ ಮದಲು ಮನಸಿಲಿ ಆಯೇಕು ಒಪ್ಪಣ್ಣಾ. ಸಂಸಾರ ಮಾಡ್ಳೆ ಆವುತ್ತಷ್ಟೆ, ಈಗ ಮನಸಿಲಿ ಆವುತ್ತು” – ಹೇದು ನೆಗೆಮಾಡಿದವು, ಬೆಳಿಗೆಡ್ಡವ ಎಡದ ಕೈಲಿ ಮುಟ್ಟಿಗೊಂಡು.
~
ವಾಹ್, ಎಂತಾ ಮಾತು!
ಒಂದೇ ವಾಕ್ಯಕ್ಕೆ ಎರಡೆರಡು ಅರ್ಥಂಗೊ. ಮೇಲ್ನೋಟಲ್ಲಿ ಒಂದರ್ಥ; ಇಳುದು ನೋಡಿರೆ ಇನ್ನೊಂದರ್ಥ.
ಕನ್ನಡಲ್ಲಿ ಒಂದರ್ಥ; ಮಲ್ಯಾಳಲ್ಲಿ ಇನ್ನೊಂದರ್ಥ.
ಒಂದು ಶಬ್ದಾರ್ಥ, ಇನ್ನೊಂದು ಧ್ವನ್ಯಾರ್ಥ – ಎರಡೂ ಇಪ್ಪ ವಿಶೇಷ ಮಾತಿನ ಕೇಳಿ ತುಂಬ ಕೊಶಿ ಆತು ಒಪ್ಪಣ್ಣಂಗೆ.
ಒಂದರ್ಥ:
ಎಲ್ಲವೂ ಹಾಂಗೇ ಅಲ್ಲದೋ?
ಮದುವೆ ಆದ ಕೂಸಿಂಗೆ ಸಂಸಾರ ಚೆಂದಲ್ಲಿ ನೆಡೇಕಾರೆ, ಅದರಿಂದ ಮದಲು ಆ ಗೆಂಡನ, ಗೆಂಡನ ಮನೆಯೋರ ಮನಸ್ಸಿಲಿ ಹಚ್ಚಿಗೊಳೇಕು. ವಧುವಿನ ಮನಸ್ಸಿಲಿ ವರನ ಬಗ್ಗೆ ಪ್ರೀತ್ಯಭಿಮಾನ ತುಂಬಿರೆ ಸಂಸಾರ ಚೆಂದಲ್ಲಿ ನೆಡೆಸ್ಸು ಸಂಶಯವೇ ಇಲ್ಲೆ!ಇನ್ನೊಂದರ್ಥ:
ಮಲ್ಯಾಳಲ್ಲಿ ಸಂಸಾರ ಹೇದರೆ ಮಾತಾಡುದು. ಮನಸಿಲ್ ಅಪ್ಪದು ಹೇದರೆ ಅರ್ಥ ಅಪ್ಪದು.
ಅರ್ಥ ಮಾಡಿಗೊಂಬದೇ ಕಲಿವ ಮೊದಲ ಹೆಜ್ಜೆ. ಯೇವದೇ ಭಾಷೆ ನವಗೆ ಮಾತಾಡ್ಳೆ ಅರಡಿಯೇಕಾರೆ, ಅದರಿಂದ ಮದಲು ಅರ್ಥ ಆಯೇಕು. ಮಾತಾಡ್ಳೆ ಕಲಿತ್ತ ಮದಲು ಅರ್ಥ ಆಗುಸಿಗೊಳೇಕು – ಹೇಳ್ತದು ಇನ್ನೊಂದರ್ಥ.
ಮಾತಾಡ್ತ ಮದಲು ಅದರ ಅರ್ಥ ಎಂತ್ಸರ ಹೇಳ್ತದನ್ನೂ ಗಮನುಸಿಗೊಳೇಕು ಇದಾ. ಅರ್ಥ ಇಲ್ಲದ್ದೆ, ತಲೆಬುಡ ಇಲ್ಲದ್ದೆ ಮಾತಾಡಿರೆ ಮತ್ತೆ ನಾವೇ ಸಮಸ್ಯೆಲಿ ಬೀಳ್ತು – ಹೇದೂ ಗೂಡಾರ್ಥ ಇದ್ದು.
ಬೋವಿಕ್ಕಾನದ ಹಾಂಗೆ ಮಲೆಯಾಳ ಒತ್ತಿದ ಊರಿಲಿ ಮದುವೆ ಊಟ ಉಂಡುಗೊಂಡು ಮಲೆಯಾಳ ಶಬ್ದಲ್ಲಿ ಆಟ ಆಡಿದ ಪೆರ್ವದ ಮಾವನ ಮೆಚ್ಚೇಕಪ್ಪೋ!
~
ಉಂಡು ಕೈತೊಳದು; ಮುಳಿಯದಕ್ಕ° ಕೊಟ್ಟದರ ಚೀಲಕ್ಕೆ ತುಂಬುಸಿಗೊಂಡು ಉಡುಪಮೂಲೆಗೆ ಹೋದ್ಸು.
ಉಡುಪಮೂಲೆ ಮಾವನ ಹತ್ತರೆ ಮಾತಾಡುವಾಗ ಬಂದ ಹಲವು ಶುದ್ದಿಗಳ ಈಗ ಬೈಲಿಂಗೆ ಹೇಳುಲೆ ಹೆರಟ್ರೆ ಕತೆ ಕೆಣಿಗು. ನಿಧಾನಕ್ಕೆ ಮಾತಾಡುವೊ°.
~
ಎಲ್ಲರೂ ಸಂಸಾರ ಮಾಡುವ ಮದಲು ಮನಸ್ಸಿಲಿ ಅಪ್ಪಹಾಂಗೆ ಆಗಲಿ.
ಎಲ್ಲರ ಮನಸಿನ ಸಂಸಾರವೂ ಚೆಂದಕೆ ನೆಡೆಯಲಿ – ಹೇದು ಒಪ್ಪಣ್ಣನ ಆಶಯ.
~
ಒಂದೊಪ್ಪ: ಬೈಲಿನ ಸಂಸಾರಂಗೊ ನಿಂಗೊಗೆ ಮನಸಿಲಿ ಆವುತ್ತಲ್ಲದೋ? 🙂
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಸಮಯೋಚಿತ ಶುದ್ದಿ.ನಮ್ಮ ಸಮಾಜ ಇ೦ದು ಎದುರುಸುತ್ತಾ ಇಪ್ಪ ಸಮಸ್ಯೆಗೆ ಉತ್ತರ ಹುಡುಕ್ಕುತ್ತ ದಾರಿಲಿ ನೆಡೆತ್ತಾ ಇಪ್ಪ ಯೋಚನೆ.ಅರ್ಥಪೂರ್ಣ ಶುದ್ದಿಗೆ ಅಭಿನ೦ದನೆ.
ಸಂಸಾರದ ಸಾರವ ಸಸಾರ ಮಾಡದ್ದೆ ಸರಸಮಯವಾಗಿ ಸಂಸಾರಿಚ್ಚ ಒಪ್ಪಣ್ಣಂಗೆ ನನ್ನಿಗೊ. ಜೀವನಲ್ಲಿ ಹೊಂದಾಣಿಕೆ ಹೇಳುವದು ಬೇಕೇ ಬೇಕು. ಹಾಂಗಾರೆ, ಎಷ್ಟೋ ಸಂಸಾರಂಗೊ ಸುಖಮಯವಾಗಿ ಏವದೇ ತೊಂದರೆ ಬಾರದ್ದೆ ಸಾಗುಗು. ಸಂಬಂಧ ಸರಿಯಾಗಿ ಮ್ಯಾಚ್ ಆಗದ್ದೆ ಜೀವನವೇ ಕ್ರಿಕೆಟ್ಟು ಮ್ಯಾಚು ಆಗದ್ದ ಹಾಂಗೆ ನೋಡ್ಯೊಳೆಕಾದ್ದು ಸಂಸಾರಸ್ಥನ ಕರ್ತ್ಯವ್ಯ.
layakka iddhu….
enage havvyaka bhashe kalive ashe!…
nimma blog thumba sahayakavagidhe…
thumba shulabhavagi artha madigombalu sadhya…
mathadalu raja samaya ayekku..
idu anu madida sanna prayathna..
thappidhare kshamisi!..
ಈ ಲೇಖನದ ಮೂಲೋದ್ದೇಶ ಆರಿಂಗಾದರೂ ಒಬ್ಬಂಗೆ ಮನಸ್ಸಿಲಾದರೆ ಸಾರ್ಥಕ ಆತು….
ಒಪ್ಪಂಗೊ 🙂
ಲಾಯಕ ಆಯಿದು ಒಪ್ಪಣ್ಣಾ….
ಎ೦ತ ಮಾಡುದು ಒಪ್ಪಣ್ಣಾ.. ಪೂರ್ಣವಾಗಿಯೂ ನಮ್ಮ ಭಾಷೆ, ಸ೦ಸ್ಕಾರ ಇಪ್ಪ ಹವಿಕರಿ೦ದಲೇ ಜೀವನ ಸ೦ಗಾತಿ ಸಿಕ್ಕೆಕು ಹೇಳಿ ೪-೫ ವರ್ಷ ಹುಡ್ಕಿರೂ ಸಿಕ್ಕೆಕ್ಕಾನೆ.. ಅಥವಾ ಅಥಮೀರಿ ಸಿಕ್ಕಿರೂ, ಅವಕ್ಕುದೆ ಮಾಣಿಯ ಒಪ್ಪಿಗೆ ಆಯೆಕ್ಕಾನೆ.. ಎಲ್ಲವೂ ಹೊ೦ದಿ ಬರೆಕ್ಕು..
ಮತ್ತೆ ನಮ್ಮ, ನಮ್ಮ ಜನ೦ಗಳ, ರೀತಿಗಳ, ಸ೦ಸ್ಕಾರ೦ಗಳ, ಆಹಾರ ಕ್ರಮ೦ಗಳ ಎಲ್ಲ ಒಪ್ಪಿಯೊ೦ಬಲೆ ಮನಸ್ಸಿಪ್ಪ ಕೂಸುಗಳ ತ೦ದೊ೦ಬದಷ್ಟೆ.. ಹಾ೦ಗೆ ಹೇಳಿ ಹಲವು ವ್ಯತ್ಯಾಸ೦ಗೊ ಇಪ್ಪ ಬೇರೆ ಭಾಷೆ, ರೀತಿ, ಸ೦ಸ್ಕಾರ೦ಗಳಲ್ಲಿ ಬೆಳೆದ ಒ೦ದು ಕೂಸಿನ ಮದುವೆ ಆದ ಕೂಡ್ಲೆ ಬದಲುಸುತ್ತೆ ಹೇಳಿ ಹೆರಟರೆ ಅದುದೆ ನೆಡೆಯ.. ನಿಧಾನವಾಗಿ ಆರ ಮನಸ್ಸಿ೦ಗುದೆ ಬೇನೆ ಆಗದ್ದ ಹಾ೦ಗೆ ಒಗ್ಗಟ್ಟಿಲ್ಲಿ, ಪರಸ್ಪರ ಪ್ರೀತಿಲಿ ಒಬ್ಬನ ಮತ್ತೊಬ್ಬ ಅರ್ತುಗೊ೦ಡು ಜೀವನ ಸುರುಮಾಡಿರೆ ಕಾಲಕ್ರಮೇಣ ಎಲ್ಲವೂ ಸರಿ ಅಕ್ಕು.. ಅವರಲ್ಲಿಪ್ಪ ಒಳ್ಳೇದರ ನಾವುದೆ ನಮ್ಮಲ್ಲಿಪ್ಪ ಒಳ್ಳೇದರ ಅವುದೆ ವಿನಿಮಯ ಮಾಡಿಗೊ೦ಬದು ಅಷ್ಟೆ..
ಸಂಸಾರದ ಸಾರ ಮನಸ್ಸಿಲಾದರೆ ಸಸಾರ ಆಗ.
ಹರೇ ರಾಮ.
ಮನಸ್ಸಿಲಾದ್ದದರ ಮನಸ್ಸಿಲಾತಿಲ್ಲೆ ಹೇದರೆ ಮನಸ್ಸಿಲಾದ್ದದೂ ಮನಸ್ಸಿಲಾಗದ್ದೆ ಹೋಕು. ಮನಸ್ಸಿಲಾತೋ?
ಲಾಯಿಕಾಯಿದು ಈ ಸರ್ತಿಯಾಣ ಶುದ್ಧಿ.
ಸಂಸ್ಕೃತಿ ಬೆಳಗಲಿ.ಹರೇ ರಾಮ.
ಮನಸಿಲಿ ಆತು. ಎಡಕ್ಕಿಲಿ ರಜಾ ಡಂಕಿತ್ತು. ಅಂತೂ ಅಕೇರಿಗೆ ಮನಿಸಿಲಾತಿದ. ಹರೇ ರಾಮ. ಹವ್ಯಕ ಉಳಿಯಲಿ ಹವ್ಯಕ ಬೆಳೆಯಲಿ. ಸಂಸ್ಕಾರ ಸಂಸ್ಕೃತಿ ಬೆಳಗಲಿ.