ಬೈಲಿಲಿ ಇಡೀ ಹಬ್ಬದ ಗವುಜಿ.
ಮೊನ್ನೆಂದ ಕೇಳ್ತು ಪಟಾಕಿ ಶಬ್ದಂಗೊ, ಪುರುಸೊತ್ತಿಲ್ಲದ್ದೆ. ಹಬ್ಬ ಹೇದರೆ ಗೌಜಿ, ಗೌಜಿ ಹೇದರೆ ಪಟಾಕಿ, ಪಟಾಕಿ ಹೇದರೆ ಹಬ್ಬ – ಹೇಳಿ ಆಗಿ ಹೋಯಿದು ನಮ್ಮ ಬೈಲಿಲಿ.
ಬೈಲಿನ ಮಕ್ಕೊಗೆ ತಿಂಗಳ ಮದಲೇ ಪಟಾಕಿ ಯೇವುದು ತಪ್ಪದು ಹೇದು ಪಟ್ಟಿ ಮಾಡಿ ಆಗಿರ್ತು.
ಅಪ್ಪಮ್ಮನ ಮಂಕಾಡ್ಸಿ ದೀಪಾವಳಿಗೆ ಅಪ್ಪಗ ಪಟಾಕಿ ತಪ್ಪದೂ ಒಂದು ಗೌಜಿಯೇ!
ಹಾಂಗಾಗಿ ಕೆಲವು ದಿಕ್ಕೆ ದೀಪಾವಳಿ ಬಪ್ಪಂದ ಕೆಲವು ದಿನ ಮದಲೇ ಪಟಾಕಿ ಹೊಟ್ಟುಸುಲೆ ಸುರು ಆವುತ್ತು!!
ಮಕ್ಕಳ ಉತ್ಸಾಹವೇ ಹಾಂಗೆ ಅಲ್ಲದೊ? ಒಪ್ಪಕ್ಕನೂ ಅದನ್ನೇ ಮಾಡಿದ್ದು ಸಣ್ಣಾದಿಪ್ಪಗ! 😉
ನಮ್ಮ ಊರಿಲಿ ದೇವಿ ಸತ್ಯಭಾಮೆಯ ಒಟ್ಟಿಂಗೆ ಸೇರಿ ಕೃಷ್ಣ ನರಕಾಸುರನ ಕೊಂದ ಕೊಶಿ ಹೇಳಿಯೂ, ಉತ್ತರ ಭಾರತಲ್ಲಿ ರಾಮ ರಾವಣನ ಕೊಂದ ಗೌಜಿ ಹೇಳಿಯೂ – ಇದೇ ದಿನವ ಆಚರಣೆ ಮಾಡ್ತವು. ಕಾರಣ ಎಂತದೇ ಇರಳಿ – ಹಬ್ಬ ಹಬ್ಬವೇ.
~
ಮಗುಮಾವನ ಒಬ್ಬನೇ ಮಗಂಗೆ ಬೆಂಗುಳೂರಿಲಿ ಉದ್ಯೋಗ, ಗೊಂತಿದ್ದನ್ಣೇ ನಿಂಗೊಗೆ?
ಅಂದೇ ಹೋಗಿ ಬೆಂಗ್ಳೂರು ಸೇರಿರೂ, ಹಬ್ಬಕ್ಕೊಂದು ರಜೆ ಸಿಕ್ಕದ್ದೆ ಆಗಿ ಹೋತು ಅವಂಗೆ! ಅಪ್ಪಡ – ಈ ಸರ್ತಿ ಹಬ್ಬಕ್ಕೆ ಅವರ ಆಪೀಸಿಲಿ ರಜೆ ಕಾಲಿ ಆಯಿದಾಡ.
ಹಾಂಗಾಗಿ, ಮಗುಮಾವನ ಮಗ° ಈ ಸರ್ತಿ ಹಬ್ಬಕ್ಕೆ ಊರಿಂಗೆ ಬಯಿಂದನಿಲ್ಲೆ.
ಅವ° ಬಾರದ್ದರೆ ಅವರ ಮನೆಲಿ ಪಟಾಕಿ ತಪ್ಪದು ಆರು?
ಪಟಾಕಿ ತಂದರೂ – ಅದರ ಹೊಟ್ಟುಸುದು ಆರು?
ಹಗಲೊತ್ತು ಮಂಗ ಬಂದಿಪ್ಪಾಗ ಮಗುಮಾವ° ಬತ್ತಿಗೆ ಪೇಪರು ಕಟ್ಟಿ ಹೊಟ್ಟುಸುಗು, ಆದರೆ ಇರುಳು ಈ ಗರ್ನಲುಗಳ ಒಯಿವಾಟು ಆಗ ಹೇದು ಅಂದೇ ಬಿಟ್ಟಿದವು. ಹಾಂಗಾಗಿ, ಈ ಒರಿಶ ಅವರಲ್ಲಿ ಪಟಾಕಿ ಶಬ್ದ ಇಲ್ಲೆ.
ಬರೇ ದೀಪ ಹೊತ್ತುಸಿ, ಗೋವಿಂಗೂ, ತೊಳಶಿಗೂ ತೂಷ್ಣಿಲಿ ಪೂಜೆ ಮಾಡಿರೆ ಮುಗಾತು – ಹೇದು ಮಗುಮಾವ° ಸಮಾದಾನ ಮಾಡಿಗೊಂಡವು. ಉತ್ಥಾನದ ಕೊಡಿಪರ್ಬೊ ಕ್ಕೆ ಅಪ್ಪಗ ಆದರೂ ಪುರುಸೊತ್ತು ಅಕ್ಕೋ ಏನೋ – ಹೇದು ಮಗುಅತ್ತೆ ಕಾದು ಕೂಯಿದವು. ಅದಿರಳಿ.
ಮಗುಮಾವನಲ್ಲಿ ಗೋಪೂಜೆ ಹೇದರೆ – ಮುಳ್ಳುಸೌತ್ತೆ ಹಾಕಿ ಬೆಶಿನೀರ ಕೊಟ್ಟಿಗೆ ಮಾಡಿಯೇ ಮಾಡುಗು.
ಒಟ್ಟಿಂಗೆ ಶೆಕ್ಕರೆ ಹಾಕಿ ಉಪಾಯದ ಹಾಲು ಪರಮಾನ್ನವೂ ಮಾಡುಗು. ದೇವರಿಂಗೆ ನೈವೇದ್ಯಕ್ಕೆ.
ಆದರೆ, ಮಗುಮಾವಂಗೆ ಆಚೊರಿಶಂದ ಶುಗರು ಜಾಸ್ತಿ ಆದ್ದೂ ನಿಂಗೊಗೆ ಅರಡಿಗು. ಪರಮಾನ್ನ ಮಾಡಿರೆ ಅದರ ಸ್ವೀಕರುಸೆಡದೋ?
ಹಾಂಗಾಗಿ, ಈ ಸರ್ತಿ ಚೆಪ್ಪೆ ಪಾಚ ಮಾಡುದಾಡ.
ಮೊನ್ನೆ ಒಪ್ಪಣ್ಣಂಗೆ ಸಿಕ್ಕಿಪ್ಪಾಗ ಹೇಳಿದವು – ಈ ಸರ್ತಿ ಪಟಾಕಿ ಇಲ್ಲದ್ದ ದೀಪಾವಳಿಯೂ, ಚೀಪೆ ಇಲ್ಲದ್ದ ಪಾಚವೂ ಸಲ್ಲುತ್ತು ನಮ್ಮ ಮನೆಲಿ – ಹೇದು.
ಅನಿವಾರ್ಯ ಆದರೆ ಹಾಂಗೆ ಮಾಡ್ಳಾವುತ್ತು. ನಮ್ಮ ದೇವರಿಂಗೆ ಅರ್ಥ ಆವುತ್ತು.
~
ಆದರೆ, ಈಗ ಒಂದು ನಮುನೆ ಹೊಸ ಕ್ರಮ ಸುರು ಆಯಿದಾಡ – ಪಟಾಕಿ ಇಲ್ಲದ್ದೆ ದೀಪಾವಳಿ ಮಾಡಿ – ಹೇದು.
ಅದೆಂತರ ಮರುಳು?
ನಮ್ಮ ಆಚರಣೆಯ ಒಂದು ಅಂಗ ಆಗಿ ಬಂದ ಪದ್ಧತಿ ಅದು – ಪಟಾಕಿ. ಅದರ ಬಿಟ್ಟು ಆಚರಣೆ ಮಾಡೇಕು ಹೇದರೆ? ಅದು ಹೇಂಗಪ್ಪದು? – ಹೇದು ಮಗುಮಾವ° ಅಂದೇ ಪರಂಚುಗು.
ಪಟಾಕಿ ಇಲ್ಲದ್ದ ದೀಪಾವಳಿ ಹೇದರೆ ಅದು ಚೀಪೆ ಇಲ್ಲದ್ದ ಪಾಚದ ಹಾಂಗೇ ಆತಿಲ್ಯೋ – ಹೇದು ಅಂದು ಅವ್ವೇ ಕೇಳಿಗೊಂಡು ಇತ್ತವು.
ಪ್ರಾಕಿನ ನಮ್ಮೋರ ಆಲೋಚನೆಗೊ ಹೇದರೆ ಅಂತೇ ಈಗಾಣವರ ಹಾಂಗೆ ಒಂದು ದಿನ ಆಲೋಚನೆ ಮಾಡಿ ಬಂದಂತದ್ದಲ್ಲ.
ಅದು ತಪ್ಪಸ್ಸಿನ ಹಾಂಗೆ ಹೆರಿಯೋರು ಆಲೋಚನೆ ಮಾಡಿ ನಮ್ಮ ಕ್ರಮಂಗಳ ಚಾಲ್ತಿಗೆ ತಂದದು.
ಈಗಾಣವಕ್ಕೆ ಅದು ಮೌಡ್ಯ!! ಹ್ಮ್! ಹೇದವು ಮಗುಮಾವ° ಬೇಜಾರಲ್ಲಿ.
ದೀಪ ಹೊತ್ತುಸುದು ಇವಕ್ಕೆಲ್ಲ ಹೇಂಗೆ ಗೊಂತಕ್ಕು? ಹೊತ್ತುಸಿ ಗೊಂತಿದ್ದರಲ್ಲದೋ?
ಹೊತ್ತಿಸಿದ್ದದರ ನಂದುಸುಲೆ ಎಡಿಗು.
ಕ್ರಮ ಇಪ್ಪದರ ಅಕ್ರಮ ಹೇಳಿ ನಮ್ಮ ಮೇಲೆ ಅತಿಕ್ರಮಣ ಮಾಡ್ಲೆ ಎಡಿಗು ವಿನಾ ಒಳ್ಳೆ ಕ್ರಮವ ಒಳುಶಿಗೊಂಡು ಹೋಪ ಮನಸ್ಸೇಕೆ ಬತ್ತಿಲ್ಲೆ ಹೇದವು ಪಿಸುರಿಲಿ ಒಂದು ಉಸುಲು ಬಿಟ್ಟು!
ಮನೆಯೊಳ ಒಂದು ದೀಪ ಹೊತ್ತುಸಿದರೆ ಮನೆಗೆ ಐಶ್ವರ್ಯ ತುಂಬುತ್ತು.
ಮನೆ ಸುತ್ತ ದೀಪ ಬೆಳಗಿದರೆ…?
ಆ ಮನೆ ಮಾಂತ್ರ ಅಲ್ಲ; ಸುತ್ತಲಿನ ಪರಿಸರಲ್ಲಿಯೂ ಸೌಭಾಗ್ಯ ತುಂಬುತ್ತು ಹೇದು ಯೇವುದೇ ದೊಡ್ಡ ದೊಡ್ಡ ದಿಗ್ರಿ ಇಲ್ಲದ್ದ ನಮ್ಮ ಹೆರಿಯೋರು ಕಂಡಿತ್ತಿದ್ದವು.
ಮತ್ತಾಣೊರಿಂಗೆ ಅದರ ಮುಂದುವರಿಶುಲೂ ಹೇಳಿದವು.
ಸಮಯ ಕಳುದ ಹಾಂಗೆ ದೀಪಾವಳಿಯ ದಿನಂಗಳಲ್ಲಿ ಮಾಂತ್ರ ದೀಪ ಹೊತ್ತುಸುತ್ತ ಕ್ರಮ ಬಂತು.
ಈಗ ಎಣ್ಣೆದೀಪದ ಬದಲಿಂಗೆ ಇನ್ನು ಮುಂದೆ ಯೇವುದೆಲ್ಲ ದೀಪ ಬತ್ತೋ ಹೇದು ಅವಕ್ಕೆ ಚಿಂತೆ.
~
ಪಟಾಕಿಂದ ಶಬ್ದ ಮಾಲಿನ್ಯ ಆವುತ್ತು. ಅದರಿಂದ ಪರಿಸರಕ್ಕೆ ಹಾನಿ ಇದ್ದು, ಹಾಂಗಾಗಿ ಅದರ ಬಿಡೇಕು – ಹೇದು ಒಂದು ನಮೂನೆ ಕಮುನಿಷ್ಟು ಹಿಡುದೋರ ವಾದ ಅಡ.
ಅವು ಹೇಯಿದ್ದರ ಕೇಳಿರೆ, ಈ ಸರ್ತಿ ಪಟಾಕಿ ನಿಲ್ಲುಸಿ ಹೇಳುಗು – ಬಪ್ಪೊರಿಶ ದೀಪವೂ ನಿಲ್ಲುಸಿ – ಅಂತೇ ಎಣ್ಣೆ ಮುಗಿತ್ತು – ಹೇಳುಗು.
ಈ ನಮುನೆ ಮಾಲಿನ್ಯ ಚಿಂತನೆಗೊ ಹಿಂದೂ ಹಬ್ಬಂಗೊಕ್ಕೆ ಮಾಂತ್ರ ಬಪ್ಪದೋ?
ಬ್ಯಾರಿಗೊ ಬಕ್ರೀದು ಹೇದು ಸಾವಿರ ಸಾವಿರ ದನ ಎಮ್ಮೆ ಗೋಣ ಏಡುಗಳ ಕೊಲ್ಲುವಾಗ ಅದರ ನೆತ್ತರಿಲಿ ಪರಿಸರ ಮಾಲಿನ್ಯ ಆವುತ್ತಿಲ್ಲೆಯೋ?
ಪೊರ್ಬುಗೊ ಕ್ರಿಸ್ಮಸ್ಸು ಹೇದು ಗೌಜಿ ಮಾಡಿ ಬೆಡಿಬಿಡುವಾಗ ಪರಿಸರ ಮಾಲಿನ್ಯ ಆವುತ್ತಿಲ್ಲೆಯೋ?
ಓಟಿನ ಲೀಡ್ರುಗೊ ಗೆದ್ದಪ್ಪಗ ಹೊಟ್ಟುಸುತ್ತ ಪಟಾಕಿಲಿ ಪರಿಸರ ಮಾಲಿನ್ಯ ಆವುತ್ತಿಲ್ಲೆಯೋ?
ನಾಲ್ಕು ದಿನ ಪಟಾಕಿ ಹೊಟ್ಟಿಸಿ ಪರಿಸರ ಹಾಳಾವುತ್ತಾದರೆ ನಮ್ಮ ವಾಹನಂಗಳ ಹೊಗೆ ರಜೆ ಇಲ್ಲದ್ದೆ ಪರಿಸರಕ್ಕೆ ಸೇರ್ಪಡೆ ಆವುತ್ತಿಲ್ಲೆಯೋ?
ಆವುತ್ತು. ಮಾಲಿನ್ಯ ಎಲ್ಲ ರೀತಿಲಿಯೂ ಆವುತ್ತು.
ಪಟಾಕಿಯ ಆರ್ವಾಡು ತಗ್ಗುಸಿ ಹೇಳುಲಕ್ಕು. ಸಂಪೂರ್ಣ ನಿಲ್ಲುಸಿ – ಹೇದರೆ ಅದು ನಮ್ಮ ಆಚರಣೆಗೆ ವಿರುದ್ಧ ಆತಿಲ್ಯೋ?
~
ಅಂಬಗ ಮದಲಿಂಗೇ ಪಟಾಕಿ ಹೊಟ್ಟುಸುತ್ತ ಕ್ರಮ ಇತ್ತೋ – ಕೇಳುಗು ಕೆಲವು ಜೆನಂಗೊ.
ಪಟಾಕಿ ಹೊಟ್ಟುಸುತ್ತದು ನಮ್ಮಲ್ಲಿ ಹೊಸತ್ತಲ್ಲ. ದೇವಸ್ಥಾನಂಗಳಲ್ಲಿ ಜಾತ್ರೆಲಿ ಪಂಡೇ ಇತ್ತನ್ನೆ?
ಯುದ್ಧ ವಿಜಯ ಆದ ಲೆಕ್ಕಲ್ಲಿ ಸಿಡಿಮದ್ದುಗಳ ಹೊಟ್ಟುಸಿ ವಿಜಯೋತ್ಸವ ಆಚರಣೆ ಮಾಡ್ತ ಸನ್ನಿವೇಶ ಅಡ ಮದಲಿಂಗೆ. ಪಿರೆಂಗಿ ಮದ್ದುಗುಂಡುಗೊ ಪೂರ್ವಕಾಲಲ್ಲಿ ಇದ್ದತ್ತು, ಅದರ ಹೊಟ್ಟುಸಿಗೊಂಡು ಇತ್ತಿದ್ದವು.
ಈಗ ಪಿರೆಂಗಿಯೂ ಕಾಂಬಲೆ ಸಿಕ್ಕ, ಪರೆಂಗಿಯೂ ಕಾಂಬಲೆ ಸಿಕ್ಕ ಇದಾ! ಹಾಂಗಾಗಿ, ಅದೇ ನಮುನೆ ಗೌಜಿ ಹೆರಡುಸುವ ಬೆಡಿ – ಪಟಾಕಿಗೊ ನಮ್ಮ ಆಚರಣೆಲಿ ಸೇರಿತ್ತು.
ಆಚರಣೆಲಿ ಸೇರಿದ್ಸರ ಬಿಡ್ಸು ಬೇಡ.
ಪಟಾಕಿ ಹೊಟ್ಟೂಸುವೊ°, ಹಬ್ಬದ ಆಚರಣೆ ಮಾಡುವೊ°.
ಆದರೆ, ತೀರಾ ಅತಿರೇಕಕ್ಕೆ ಹೋವುಸ್ಸು ಬೇಡ. ಜಾಗ್ರತೆಲಿ – ರಜಾ ಪಟಾಕಿ ಸಾಕು.
ಕುಟುಂಬದ ಎಲ್ಲೋರುದೇ ಒಟ್ಟು ಸೇರಿಗೊಂಡು, ಕೊಶಿ ಮಾಡ್ತ ಅವಕಾಶ ಆಗಿರಳಿ ಇದು. ಪರಿಸರದ ಮಾತೆಯ ಒಳಿಶಿಗೊಂಡು ಮುಂದಾಣ ಕಾಲಕ್ಕೂ ಎತ್ತುಸುವ ಜೆಬಾದಾರಿಕೆ ನಮ್ಮ ತಲೆಮೇಲೆ ಇದ್ದಲ್ಲದೋ? – ಹಾಂಗಾಗಿ!
ಎಲ್ಲ ಸಂಭ್ರಮವೂ ಅದರ ಕ್ರಮಲ್ಲೇ ನೆಡೆಯಲಿ. ಆದರೆ ಜೆಬಾದಾರಿಕೆಯ ಚಿಂತನೆ ನಮ್ಮ ಮೇಲಿರಳಿ.
~
ಒಂದೊಪ್ಪ: ಆಚರಣೆ ಸ್ವಾತಂತ್ರ್ಯದ ಪ್ರತೀಕ. ಸ್ವಾತಂತ್ರ್ಯ ಜವಾಬ್ದಾರಿಯ ಒಟ್ಟಿಂಗೇ ಬಪ್ಪದು. ಅಲ್ಲದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಮಕ್ಕೊ ಈ ಸರ್ತಿಯೂ ಪಟಾಕಿ ಹೊಟ್ಟುಸಿದ್ದವು , ಕಡೆ೦ಗೆ ಕಸವು ಉಡುಗಿ ಕಿಚ್ಚು ಕೊಟ್ಟು ಸ್ವಚ್ಚತಾ ಅಭಿಯಾನ ಮಾಡಿದ್ದು ಮಾಂತ್ರ ಈ ವರುಷದ ವಿಶೇಷ .
ಒಪ್ಪಣ್ಣ ಹೇಳುಸ್ಸು ಸರಿ . ಎಲ್ಲವೂ ಹದಿನಾರುಕಟ್ಳೆ ಬೇಕಲ್ಲೋ? ಆದರೆ ಈಸರ್ತಿ ಏಕೋ ಉತ್ಸಾಹವೇ ಇಲ್ಲೆಪ್ಪ! ಗೊಂತಿದ್ದನ್ನೆ?
“ಸುರು ಸುರು (ನಕ್ಷತ್ರ) ಕಡ್ಡಿ -ಕೇಪು – ದುರುಸು – ಮೆಣಸು ಪಟಾಕಿ -ನೆಲಚಕ್ರ-ರೋಕೆಟ್ಟು – ಓಲೆ ಬೆಡಿ -ಲಕ್ಷ್ಮೀ ಪಟಾಕಿ- ಗರ್ನಾಲು…” ಇತ್ಯಾದಿ ಕ್ರಮವಾಗಿ ಹೆದರಿಕೆ ದೂರ ಮಾಡಿ ಧೈರ್ಯ ತುಂಬುಸುವ ಆಟಂಗ ಅಲ್ಲದ!. ಇದೆಲ್ಲ ಬಾಲ್ಯಲ್ಲಿ ಸಿಕ್ಕೆಕು (ಹಿತವಾಗಿ ಮಿತವಾಗಿ). ಇಲ್ಲದ್ರೆ ಕಿಚ್ಚು ಕಂಡಪ್ಪಗಳೇ ಹೆದರುವ ಸ್ವಭಾವ ಹಾಂಗೇ ಉಳಿಗು.