- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಯಾವುದೇ ವೃತ್ತಿಲಿಪ್ಪೋರು ನಿವೃತ್ತಿಗೆ ಹತ್ತರೆ ಬಪ್ಪಗ ಸಾಮಾನ್ಯವಾಗಿ ಮುಂದಾಣ ಯೋಚನೆ ಮಾಡೊದು ಹೇಂಗೆ ಹೇಳಿರೆ- ಎನ್ನ ಜೆವಾಬ್ದಾರಿ ಮುಗುತ್ತು ಇನ್ನು ಸಾಕು ಈ ತಲೆಬೆಶಿ, ಹೇಳಿ. ಮನೆಲಿ ಇದ್ದುಗೊಂಡು ಸಣ್ಣ ಪುಟ್ಟ ಕೆಲಸಂಗಳ(ಇದ್ದರೆ) ಮಾಡಿಗೊಂಡು ಕಾಲ ಕಳವದು, ವರ್ಷಲ್ಲಿ ಒಂದೊ ಎರಡೊ ಸರ್ತಿ ಮಕ್ಕ ಇಪ್ಪ ಜಾಗೆಗೆ ಹೋಗಿ ಅವರೊಟ್ಟಿಂಗೆ ಇದ್ದು ಬಪ್ಪದು,ಅಥವಾ ಕುಟುಂಬದೋರೆಲ್ಲ ಸೇರಿ ದೇಶ ಸುತ್ತಿ ಬಪ್ಪ ಆಲೋಚನೆಯೂ ಇರ್ತು ಹಲವರಿಂಗೆ. ಒಟ್ಟಾರೆ ಒತ್ತಡದ ಜೀವನ ಸಾಕು ಹೇಳಿ ಕಾಂಬದು ಸಾಮಾನ್ಯ. ಸುಮಾರು ಮೂವತ್ತೈದು ವರುಶಕ್ಕೂ ಹೆಚ್ಚಿನ ಸಮಯ ಕೆಲಸ ಮಾಡಿಗೊಂಡು,ಅದಕ್ಕೆ ಬೇಕಾಗಿ ಓಡಾಡಿ, ಒಟ್ಟಿಂಗೆ ಸಾಂಸಾರಿಕ ಜೆವಾಬ್ಧಾರಿಗಳ ನಿಭಾಯಿಸಿ ಒಂದು ಹಂತಕ್ಕೆ ತಪ್ಪಲ್ಲಿವರೆಗಾಣ ಹೊರೆ ಹೊತ್ತುಗೊಂಡಿತ್ತಿದ್ದ ದೇಹಕ್ಕೆ ರಜ್ಜ ವಿಶ್ರಾಂತಿ ಬೇಕು ಹೇಳಿ ಕಾಂಬದು ತಪ್ಪಲ್ಲ. ಇವೆಲ್ಲ ಜೆವಾಬ್ದಾರಿಗಳ ಪೂರೈಸಿಯೂ, ಜೀವನಲ್ಲಿ ಮತ್ತೂ ಸಾಧನೆ ಮಾಡ್ಲೆ ಆವುತ್ತು ಹೇಳಿ ತೋರ್ಸಿ ಕೊಟ್ಟವೂ ಇರ್ತವು. ಹಾಂಗಿರ್ತ ಅಪರೂಪದ ವೆಗ್ತಿತ್ವದೋರ ಪೈಕಿ ಒಬ್ಬ ಡಾ. ಸುನಂದ ಭಟ್.
ಮುಂಬಾಯಿ ಮಹಾನಗರದ ಮಲಾಡಿನ ಕೊಲೇಜಿಲಿ ಪ್ರಕೃತ ಪ್ರಾಂಶುಪಾಲೆಯಾಗಿ ಕೆಲಸ ಮಾಡ್ತ ಇದ್ದವು.
ಇದರಲ್ಲಿ ಎಂತ ವಿಶೇಷ ಹೇದು ನಿಂಗೊಗೆ ಕಾಂಗು. ಅದವೇ ಈ ಶುದ್ಧಿ.
ಸುನಂದಕ್ಕ ನಮ್ಮ ನೆರೆಕರೆಯವೇ. ಪುತ್ತೂರಿನ ಪಂಜಿಗುಡ್ಡೆ ಶ್ರೀ ಈಶ್ವರ ಭಟ್ -ಶ್ರೀಮತಿ ಲಲಿತ ಇವರ ಮಗಳು.. ವಿದ್ಯಾಭ್ಯಾಸ ಪುತ್ತೂರು,ಕೊಡೆಯಾಲಲ್ಲಿ ಪೂರೈಸಿದವು. ಅರ್ಥಶಾಸ್ತ್ರಲ್ಲಿ ಎಮ್.ಎ. ಮುಗುಶಿಯಪ್ಪದ್ದೆ ಕುಂಬ್ಲೆ ಹತ್ತರಾಣ ಕಬೆಕೋಡು ಮನೆಗೆ ಸೊಸೆಯಾಗಿ ಸೇರಿದವು. ಕಬೆಕೋಡು ನಾರಾಯಣಣ್ಣಂಗೆ ದೂ…ರ ಬೊಂಬಾಯಿಲಿ ಕೆಲಸ. ಹಾಂಗೆ ಸುನಂದಕ್ಕನೂ ಬೊಂಬಾಯಿಗೆ ಬಂದು ಸೇರಿಗೊಂಡವು. ಕಲಿವಲೆ ಹುಶಾರಿತ್ತಿದ್ದ ಅಕ್ಕಂಗೆ, ತಾನು ಕಲ್ತದರ ಮಕ್ಕೊಗೆ ಕಲುಶೆಕ್ಕು ಹೇಳ್ತ ಆಶೆ.ನಾರಾಯಣಣ್ಣ ತಡದ್ದವಿಲ್ಲೆ,ಪ್ರೋತ್ಸಾಹವನ್ನೇ ಕೊಟ್ಟವು. ಅಕ್ಕಂಗೆ ಅಂಧೇರಿ ಹೇಳ್ತಲ್ಲಿ ಚಿನಾಯಿ ಕೊಲೆಜಿಲಿ ಉಪನ್ಯಾಸಕಿ ಕೆಲಸ ಸಿಕ್ಕಿತ್ತು. ಅಲ್ಲಿ ಮಕ್ಕೊಗೆ ಚೆಂದಕ್ಕೆ ಪಾಠ ಹೇಳಿಕೊಟ್ಟು ಕೊಲೇಜಿಲಿ ಒಳ್ಳೆ ಹೆಸರು ತೆಕ್ಕೊಂಡವು.ಎರಡು ಮಾಣಿಯಂಗೊ ಹುಟ್ಟಿ ಇವರ ಸಂಸಾರವೂ ದೊಡ್ಡ ಆತು. ಕೊಲೇಜಿಲಿ ಮಕ್ಕೊಗೆ ಕಲುಶುತ್ತ ಎಡೆಲಿ ತಾನೂ ಕಲಿವದರ ಮುಂದುವರಿಸಿದವು. ಮುಂಬೈ ವಿಶ್ವವಿದ್ಯಾಲಯಂದ ಎಮ್.ಫಿಲ್ ಪದವಿಯನ್ನೂ ಪಡಕ್ಕೊಂಡವು. ಸುನಂದಕ್ಕಂಗೆ ಮದಲಿಂದಲೇ ಥೀಸಿಸ್ ಬರೆಯೆಕ್ಕು,ಸಂಶೊಧನೆ ನಡೆಸೆಕ್ಕು ಹೇಳ್ತ ಗುರಿ ಇದ್ದತ್ತು.ಅದಕ್ಕೆ ಪೂರಕವಾಗಿ ಮುಂಬಯಿ ವಿಶ್ವವಿದ್ಯಾಲಯಲ್ಲಿ ಇವಕ್ಕೆ ಅವಕಾಶವೂ, ಒಳ್ಳೆ ಮಾರ್ಗದರ್ಶಕರೂ ಸಿಕ್ಕಿದವು. ಸಿಕ್ಕಿದ ಅವಕಾಶವ ಘಟ್ಟಿ ಹಿಡ್ಕೊಂಡವು,ಸುನಂದಕ್ಕ. ಗುರಿ ಸ್ಪಷ್ಟ ಇದ್ದತ್ತು, ಮಾರ್ಗದರ್ಶನಕ್ಕೆ ಕೊರತೆ ಬಯಿಂದಿಲೆ. ಅರ್ಥಶಾಸ್ತ್ರಲ್ಲಿ ಸಂಶೋಧನೆಗೆ ತೊಡಗಿದವು. ತೆಕ್ಕೊಂಡ ವಿಷಯ – ” ARECANUT AND COCOA PRODUCERS: PROBLEMS AND PROSPECTS ” with special reference to Dakshina Kannada and Uttara Kannada districts of Karnataka.
ಆದರೆ, ಕೊಶಿಲಿ ಜೀವನ ನಡೆಶಿಗೊಂಡಿತ್ತಿದ್ದ ಇವರ ಸಂಸಾರಲ್ಲಿ ಒಂದು ಅಘಾತ ಬಂತು.ಆರೋಗ್ಯಲ್ಲಿತ್ತಿದ್ದ ನಾರಾಯಣಣ್ಣ ಅಕಸ್ಮಾತ್ತಾಗಿ ಕಣ್ಮುಚ್ಚಿದವು. ಪ್ರಶಾಂತವಾಗಿಪ್ಪ ನೀರಿಂಗೆ ಕಲ್ಲು ಇಡ್ಕಿದ ಹಾಂಗಾತು ಇವರ ಸಂಸಾರ ನೌಕೆ. ಇಬ್ರು ಮಕ್ಕಳ ದಡ್ದಕ್ಕೆ ಮುಟ್ಟುಸಿ ಒಂದು ಹಂತಕ್ಕೆ ಬಂದಪ್ಪಗ ಸಮಯವೂ ಮುಂದೆ ಮುಂದೆ ಹೋತು. ಚಿನಾಯಿ ಕೊಲೇಜಿಲಿ ಪ್ರಾಂಶಪಾಲೆ ಹುದ್ದೆಗೆ ಏರಿದವು. ಕೊಲೇಜಿಲಿ ಇವಕ್ಕೆ ನಿವೃತ್ತಿ ಅಪ್ಪಲೆ ಹತ್ತರೆ ಬಂತು. ಸಂಸಾರದ ಹೊಣೆ ಹೊತ್ತುಗೊಂಡು, ಮಕ್ಕೊಗೆ ಪಾಠವನ್ನೂ ಹೇಳಿಕೊಟ್ಟು, ಕೊಲೇಜು ನಡೆಶುತ್ತ ಜೆವಾಬ್ಧಾರಿಯನ್ನೂ ನಿಭಾಯಿಸಿಗೊಂಡು, ತಾನು ಮಾಡೆಕ್ಕಾದ ಸಂಶೋಧನಾ ಕಾರ್ಯವನ್ನೂ ಮುಂದುವರಿಸಿದವು. ಕಳುದ ದಶಂಬ್ರಲ್ಲಿ ಇವಕ್ಕೆ ನಿವೃತ್ತಿ ಆತು.
ಆದರೆಂತ..! ಮುಂಬಾಯಿ ವಿಶ್ವವಿದ್ಯಾಲಯಂದ ಸುನಂದಕ್ಕನ ಪ್ರಬಂಧಕ್ಕೆ ಪಿ.ಎಚ್ ಡಿ. ಸಿಕ್ಕಿತ್ತು. ಇವರ ಸಾಧನೆಯ ಗುರುತಿಸಿ ಮಲಾಡಿನ ಘನಶ್ಯಾಮದಾಸ್ ಜಾಲನ್ ಕೊಲೇಜಿನೋರು ಪ್ರಾಂಶುಪಾಲೆಯಾಗಿ ಬರೆಕ್ಕು ಹೇಳಿ ಕೇಳಿದವು. ನಿವೃತ್ತಿ ನಂತ್ರವೂ ಸುನಂದಕ್ಕ ಡಾ.ಸುನಂದ ಭಟ್ ಆಗಿ ಒಂದು ಹೊಸ ಜೆವಾಬ್ದಾರಿ ತೆಕ್ಕೊಂಡಿದವು. ಆ ಜೆವಾಬ್ಧಾರಿಯ ಯಶಸ್ವಿಯಾಗಿ ನಿಭಾಯಿಸಿಗೊಂಡು ಬತ್ತಾ ಇದ್ದವು.
ಇವರ ಸಾಧನೆಗೆ ಈ ನುಡಿ-ಪುಷ್ಪ ಅರ್ಪಣೆ.
ಸಾಧನೆ ಮಾಡ್ಲೆ ಪ್ರಾಯ,(ಸಂಸಾರಿಕ)ಪಾಶ ಅಡ್ಡಿ ಬತ್ತಿಲೆ ಹೇಳಿ ತೋರ್ಸಿ ಕೊಟ್ಟ ಸುನಂದಕ್ಕ ನವಗೆಲ್ಲ ಆದರ್ಶಪ್ರಾಯರಾಗಿ ಎತ್ತರಲ್ಲಿ ಎದ್ದು ಕಾಣುತ್ತವು. ಸುನಂದಕ್ಕಂಗೆ ಅಭಿನಂದನೆ,ಅಭಿವಾದನೆ.
~~~<>~~~
ಪರಿಚಯ ಲೇಖನ ಲಾಯಕಿತ್ತು. ಮಹಾ ನಗರಲ್ಲಿ ಮಹಾ ಸಾಧಕಿ. ನಿಜವಾಗಿಯೂ ಅಪ್ಪು.
ಸುನಂದಕ್ಕನ ಪರಿಚಯಿಸಿದ್ದಕ್ಕೆ ಧನ್ಯವಾದ. ಇವು ಎಂಗಳ ಊರಿನವೇ ಆದರೂ ಎನಗೆ ಪರಿಚಯ ಇಲ್ಲೇ.
ಹರೇ ರಾಮ . ದಾರಿ ದೀಪ
ಸುನಂದಕ್ಕನ ಸಾಧನೆಗೆ ನಮೋ ನಮಃ. ಮುಂಬಯಿಲಿ ಇದ್ದರೂ ಅವರ ಮನಸ್ಸಿನ ತುಡಿತ ದ.ಕ ಮತ್ತೆ ಉ.ಕನ್ನಡಕ್ಕೇ ಹೇಳಿ ಅವರ ಪ್ರಬಂಧದ ವಿಷಯ ಆಯ್ಕೆಲಿ ಗೊಂತಾವ್ತು
ನಮ್ಮ ಊರಿಲಿ ಹುಟ್ಟಿ ಬೆಳದು ಮೇಲೇರಿ ದೂ..ರದ ಬೊಂಬಾಯಿಲಿ ಕೋಲೇಜುಗಳ ಪ್ರಾಂಶುಪಾಲೆಯಾಗಿ ಯಶಸ್ವಿಯಾಗಿ ವೃತ್ತಿಜೀವನ ನೆಡೆಶಿದ, ಸಾಂಸಾರಿಕ ಜೀವನಲ್ಲಿ ಯಶಸ್ವಿಯಾಗಿ ಮನೆ ನಿರ್ವಹಿಸಿದ, ಸಂಶೋಧನೆ ನೆಡೆಶಿ ಡಾಕ್ಟ್ರಾದ, ಒಳ್ಳೆಯ ಹೆಸರು ಗಳುಸಿದ ಸುನಂದತ್ತೆಗೆ ನಮೋನಮಃ. ನಿಂಗಳ ಕಾರ್ಯಶ್ರದ್ಧೆ, ಸಾಧನೆ ಬೈಲಿನೋರಿಂಗೆ ಪ್ರೇರಣೆಯಾಗಲಿ.
ಇಂತಹ ಮಹಾನ್ ಸಾಧಕಿಯ ಬಗ್ಗೆ ಬೈಲಿಂಗೆ ತಿಳುಶಿದ್ದಕ್ಕೆ ತೆಕ್ಕುಂಜೆಮಾವಂಗೆ – ಹರೇರಾಮ. ಧನ್ಯವಾದಂಗೊ.
ಯಾ೦ತ್ರಿಕ ಜೀವನದ ಮುಂಬೈಯ ಹಾಂಗಿರ್ತ ಮಹಾನಗರಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ ಸುನಂದಕ್ಕನ ಪರಿಚಯ ಬೈಲಿನ ಬಂಧುಗೊಕ್ಕೆ ಆದ್ದದು ಸುಯೋಗವೇ ಸರಿ . ಮು೦ದಾಣ ಯುವ ಪೀಳಿಗೆಗೆ ಇವರ ಈ ಸಾಧನೆ ಆದರ್ಶವಾಗಲಿ . ಅಭಿನಂದನೆಗೋ .