ಭದ್ರಾವತಿ ಅಪ್ಪಚ್ಚಿಯ ಮಗಳ ಮನೆ ಓ ಅಲ್ಲಿ ಪೆರ್ಲದತ್ತರೆ ಇದಾ..
ಮೊನ್ನೆ ಅಲ್ಲಿ ಪೂಜೆ ಇದ್ದತ್ತು ಹೇದು ಅವರ ಸಂಸಾರ ಊರಿಂಗೆ ಬಂದಿದ್ದತ್ತು. ಬಳ್ಳಮೂಲೆ ಮಾವನ ಕಾಂಬಲೆ ಹೋಪಲೆ ಹೇದು ನಾವು ಬದಿಯೆಡ್ಕಲ್ಲಿ ಬಸ್ಸಿಂಗೆ ಕಾದುಗೊಂಡು ಇಪ್ಪಾಗ ಭದ್ರಾವತಿ ಅಪ್ಪಚ್ಚಿ ಸಂಸಾರ ಬಸ್ಸುಪಗರುಸುಲೆ ಹೇದು ಬದಿಯೆಡ್ಕಲ್ಲಿ ನಿಂದಿದ್ದೋರು ಸಿಕ್ಕಿದವು. ತುಂಬ ಮಾತಾಡಿದವು, ಅವರ ಬಸ್ಸು ಬಪ್ಪನ್ನಾರ. ಬದಿಯೆಡ್ಕಕ್ಕೆ ಪೆರ್ಲಕ್ಕೆ ಹೋಪಲೆ ಬರೆಕ್ಕಾದ ಒಂದು ಬಸ್ಸು ಎಂತದೋ ಹಾಳಾಯಿದಾಡ. ಹಾಂಗಾಗಿ ಮತ್ತೂ ಅರ್ಧಗಂಟೆ ಕಾಯೇಕು – ಹೇಳಿತ್ತು ಬೀಡದ ಬ್ಯಾರಿ. ಹಾಂಗಾಗಿ ಸಮಯ ರಜಾ ಹೆಚ್ಚು ಸಿಕ್ಕಿತ್ತು, ಸುಕದುಕ್ಕ ಮಾತಾಡ್ಳೆ.
~
ಕಷ್ಟದ ಬಾಲ್ಯಂದ ಮೇಗೆ ಬಂದು, ಶ್ರಮಪಟ್ಟು ಉದ್ಯೋಗಿಯಾಗಿ ಸ್ವಾಭಿಮಾನದ ಸಂಸಾರವ ಚೆಂದಕೆ ಕಟ್ಟಿ ಬೆಳಗಿದ ಶ್ರಮಜೀವಿಗಳಲ್ಲಿ ಅವುದೇ ಒಬ್ಬರು. ಸದರಿ ಭದ್ರಾವತಿ ಹತ್ತರೆ ಯೇವದೋ ದೊಡ್ಡ ಆಪೀಸಿಲಿ ದೊಡ್ಡ ಕುರ್ಶಿಲಿ ಕೂಪದಾಡ. ಮಕ್ಕೊಗೆ ಬೇಕಾದ ವೆವಸ್ಥೆಗಳೂ, ಮನೆಯೋರಿಂಗೆ ಬೇಕಾದ ಚಿನ್ನವೂ ಮಾಡಿ ಪುಳ್ಳಿ ಬಪ್ಪದರ ಎದುರುನೋಡಿಗೊಂಡು ಆರಾಮಲ್ಲಿ ಇದ್ದವು. ಸಂಸಾರದ ತಲೆಬೆಶಿಗೊ ಪೂರಾ ಸಣ್ಣಾಗಿಪ್ಪಗಳೇ ಮುಗುದ ಕಾರಣ ಈಗ ಆಪೀಸು ತಲೆಬೆಶಿ ಮಾಂತ್ರ ಅವಕ್ಕೆ.
ಅವರ ಮಗಳ ಮದುವೆ ಅದಾ- ಕಳುದೊರಿಶ ಕಳುದ್ದು. ಬೆಟ್ಟುಕಜೆ ಮಾಣಿಯ ಮದುವೆಯ ಮುನ್ನಾಣದಿನ. ಮೂಲತಃ ಇದೇ ಊರಿನೋರು ಆಗಿದ್ದು, ಈಗ ಪುನಾ ಅವರ ಹಳೇ ನೆರೆಕರೆಗೇ ಮಗಳ ಕೊಟ್ಟವು. ಸಣ್ಣಾಗಿಪ್ಪಗ ’ಮಾಣಿ’ ಆಗಿ ಆಡಿಬೆಳದ ಊರಿನ ಈಗ ’ಮಾವ°’ ಆಗಿ ನೋಡುದು!
ಅದಿರಳಿ.
~
ಅದು-ಇದು ಮಾತಾಡಿ ಅಪ್ಪಗಳೇ – “ಹೇಂಗೆ ಅಪ್ಪಚ್ಚಿ, ಒಂದು ವಾರ ಇದ್ದಿರೋ ಮಗಳ ಮನೆಲಿ” – ಕೇಳಿದೆ. ಸ್ವಾಭಾವಿಕವಾಗಿಯೇ ಕೇಳಿದ್ದು. ಅಷ್ಟಪ್ಪಗ “ಇಲ್ಲೆಪ್ಪ, ನಾಳೆ ಉದಿಯಪ್ಪಗಳೇ ಹೆರಡುಸ್ಸು; ನಾಳ್ತಿಂಗೆ ಆಪೀಸು. ಕೆಲಸ ಇದ್ದು ತುಂಬ” – ಹೇದವು. ಹೋ, ಅದು ಸರಿ. ಹೇದೆ.
ಒಪ್ಪಣ್ಣನತ್ರೆ ಅವಕ್ಕೆ ಸರೀ ಗುರ್ತ, ತುಂಬ ಸಸಾರ – ಹಾಂಗಾಗಿ ಯೇವ ವಿಷಯವನ್ನೂ ಧಾರಾಳವಾಗಿ ಹೇಳುಗು. ಅವಕ್ಕೆ ಆಪೀಸಿನ ಒತ್ತಡ ಇಪ್ಪದು ನಿಜವಾದ ಸಂಗತಿಯೇ. ಆದರೆ ಕುಶಾಲಿಂಗೆ ಒಂದು ಗಾದೆಯನ್ನೂ ಸೇರ್ಸಿಗೊಂಡವು “ಅಪುರೂಪ ಆಂಟನೇ ಎಡ್ಡೆ ಅತ್ತೋ”- ಹೇದು.
ಮತ್ತಾಣ ಬಸ್ಸು ಬಂತು, ಅವು ಅತ್ಲಾಗಿ ಹೋದವು. ಅದರಿಂದ ಮತ್ತೆ ಬಂದ ಮುಳ್ಳೇರಿಯ ಬಸ್ಸಿಲಿ ನಾವುದೇ ಹೆರಟತ್ತು.
~
ದಾನೆ ಬಟ್ಯಾ ಬಾರೀ ಅಪುರೂಪೊ – ಹೇದು ನಾವು ಕೇಳಿರೆ, “ಅಪುರೂಪೊ ಆಂಟ ಎಡ್ಡೆ ಅತ್ತೋ ಅಣ್ಣೇರೇ? – ಹೇದು ನೆಗೆಮಾಡುಗು. ಆರೇ ಆಗಲಿ, ಅಪುರೂಪೊ ದಾನೆ – ಹೇದು ಕೇಳಿರೆ ಅದೇ ಉತ್ತರ ಅದರದ್ದು; ಎಷ್ಟೋ ಒರಿಶಂದ..!
ಅಪುರೂಪ ಆದರೆ ಒಳ್ಳೆದಡ, ಯೇವದಕ್ಕೆ ಒಳ್ಳೆದು? ಸಂಬಂಧ ಚೆಂದಕೆ ಒಳಿಯಲೆ ಒಳ್ಳೆದು – ಹೇದು ಅದರ ತಾತ್ಪರ್ಯ.
ದಿನಾ ಮೋರೆನೋಡಿ ಅತಿಯಾಗಿ ಮನಸ್ಸಿಂಗೆ ಹಚ್ಚಿಗೊಂಡು ಸಂಬಂಧ ಹಾಳಪ್ಪದರಿಂದ ಹದಾಕೆ ದೂರವೇ ಇದ್ದುಗೊಂಡು ಚೆಂದಕೆ ಸಂಪರ್ಕ ಒಳಿಶಿಗೊಂಬದು ಒಳ್ಳೆದಲ್ಲದೋ – ಹೇದು ಅದರ ಅನುಭವ. ಆಯಿಪ್ಪಲೂ ಸಾಕು, ನವಗರಡಿಯ.
~
ಭದ್ರಾವತಿ ಹೊಡೆಲಿ ಇನ್ನೊಂದು ಗಾದೆ ಇದ್ದಾಡ, ಅಪ್ಪಚ್ಚಿ ಇದರಿಂದ ಮೊದಲೊಂದರಿ ಸಿಕ್ಕಿಪ್ಪಾಗ ಹೇಳಿತ್ತಿದ್ದವು.
ಅದು, ಮಾವನ ಮನೆಗೆ ಬಂದ ಅಳಿಯನ ಆರೈಕೆ ಮಾಡುವ ಬೇರೆಬೇರೆ ವಿಧಾನಂಗಳ ಬಗ್ಗೆ ಇಪ್ಪದಾಡ.
ಮದುವೆ ಆದ ಸುರೂವಿಲಿ ಅಳಿಯ° ಮಾವನ ಮನೆಗೆ ಬಂದಿಪ್ಪಾಗ – ಹೋ, ಅಳಿಯಂದ್ರು ಬಂದವು; ಮಣೆ ಹಾಕು, ಮಣೆ ಹಾಕು – ಹೇದು ಉಪಚಾರ. ಅಲ್ಲೆಲ್ಲಿಯೋ ಮೂಲೆಲಿ ಧೂಳು ಹಿಡ್ಕೊಂಡಿದ್ದಿದ್ದ ಮಣೆಯ ಪಕ್ಕನೆ ಉದ್ದಿ ಒಪ್ಪ ಮಾಡಿ ಎದುರು ಜೆಗಿಲಿಲಿ ಮಡಗ್ಗು ಮನೆಯೋರು. ಮದಲಿಂಗೆ ಮಣೆಲೇ ಅಲ್ಲದೋ ಕೂರ್ಸು; ಈಗ ಮಣೆಲಿ ಕೂದರೆ ಏಳುಲೆ ಪುನಾ ಕೈಹಿಡಿದು ನಡೆಸೆನ್ನನು – ಹೇಳೇಕಟ್ಟೆ, ಅದಿರಳಿ.
ಅಂತೂ, ಮನೆಗೆ ಬಂದ ಅಳಿಯ° ಕೈಕ್ಕಾಲು ತೊಳದು ಕೂಪಲೆ ಜಾಗೆ ನೋಡುವ ಮೊದಲೇ ಮಣೆ ಉದ್ದಿ ಮಡಗ್ಗು. ಅಳಿಯ° ಕೂದಪ್ಪದ್ದೇ ಕೈಗೊಂದು ಗ್ಳಾಸು ಆಸರಿಂಗೆ. ಬಚ್ಚಿತ್ತೋ, ಹಶು ಆತೋ, ಬೆಗರಿತ್ತೋ, ಬಸ್ಸು ಸಿಕ್ಕಿತ್ತೋ – ಕೇಳುದೇ ಕೇಳುದು. ಮಾತುಲೆ ಒಸ್ತ್ರವೂ, ಎರಗಿ ಕೂಪಲೆ ತಲೆಕೊಂಬೂ – ಇನ್ನೂ ಬೇಕಾದ್ಸೆಲ್ಲ ಕೈಗೆ ಬಕ್ಕು.
ಮದುವೆ ಆದ ಸುರುವಿಲಿ ಮಾಂತ್ರ ಅಲ್ಲ, ಅಳಿಯ° ಮನೆಗೆ ಬಪ್ಪದು ಅಪುರೂಪ ಹೇದು ಇಪ್ಪನ್ನಾರವೂ – ಈ ಉಪಚಾರ ಹೀಂಗೇ ಇರ್ತು.
~
ಈ ಅಪರೂಪತೆ ಕಡಮ್ಮೆ ಆಗಿ, ಅಳಿಯನ ಆಗಮನ ತುಂಬಾ ಸಹಜ ಆದ ಕೂಡ್ಳೇ ಉಪಚಾರದ ರೀತಿ ಬದಲ್ತಾಡ. ಮದಲು ಮಣೆ ಹುಡ್ಕಿ ಉದ್ದಿ ಹಾಕಿಂಡು ಇದ್ದದು ಕ್ರಮೇಣ – ಅಲ್ಲೇ ಇದ್ದ ಮಣೆಯ ನೂ..ಕಿ – ಕೂಪಲೆ ಕೊಡ್ಳೆ ಸುರು ಆವುತ್ತು.
ಹಾ°, ಅಳಿಯನೋ, ಬಾ ಬಾ – ಇದಾ ಕೂ….ರು – ಹೇದು ಕೂದುಗೊಂಡಿದ್ದ ಮಾವನ ಹತ್ತರಾಣ ಮಣೆಯ ನೂಕಿ ಕೊಡುಗು. ಧೂಳು ಇರ, ಇದ್ದರೆ ಉದ್ದಿಗೊಂಡ್ರಾತು. ಉದ್ದದ್ರೆ ಒಸ್ತ್ರಕ್ಕೆ ಹಿಡಿಗಷ್ಟೆ.
ಮಾತುಲೆ ಒಸ್ತ್ರ ತೆಕ್ಕೊಂಡು ಹೋಗಿದ್ದರೆ ಕೇಳೇಕಾಗಿ ಬಾರ; ಅಲ್ಲದ್ದರೆ ಕೇಳಿರೆ ಸಿಕ್ಕುಗು.
~
ಅಳಿಯನ ಸರ್ಕೀಟು ಇನ್ನೂ ಹೆಚ್ಚಾದರೆ?
ಮತ್ತೆ ಮತ್ತೆ ಅವ° ಹೆರಾಣೋನು ಹೇದು ಅನುಸ; ಆರೈಕೆ ಸಲ್ಲುವಷ್ಟು ಅಪೂರ್ವತೆ ಇರ.
ಹಾ, ಬಂದೆಯೋ.. ಓ ಅದಾ ಅಲ್ಲಿ ಮಣೆ ಇದ್ದು, ತೆಕ್ಕೊ; ಕೂರು. ಹೇಳುಗು. ಬಾಯಿಮಾತಿನ ಉಪಚಾರ ಅಷ್ಟೆ!
ಮೂಲೆಲಿದ್ದ ತೋರ್ಸಿದ ಮಣೆಯ ಹಿಡುದು ತೆಕ್ಕೊಂಡು ಬಂದು, ಬೇಕಾರೆ ಉದ್ದಿಗೊಂಡು, ಬೇಕಾದಲ್ಲಿ ಮಡಿಕ್ಕೊಂಡು ಕೂರೇಕು..
ಧೂಳಿದ್ದರೆ ಉದ್ದಿಗೊಂಬದು ಅಳಿಯನ ಕೆಲಸವೇ.. ಮನೆಯೋರೆಲ್ಲ ಬೇರೆಬೇರೆ ಕೆಲಸಲ್ಲಿ ಅಂಬೆರ್ಪಿಲಿ ಇರ್ತವಿದಾ!
ಬಚ್ಚಲು ಬಿರುದ ಕೂಡ್ಳೇ ಎದ್ದು – ಮಾತುವ ಒಸ್ತ್ರ ಎಲ್ಲಿದ್ದು ನೋಡಿ ತೆಕ್ಕೊಂಡ್ರಾತು. ಅಲ್ಲದ್ದರೆ, ಅವನ ಬೇಗಿಲಿಯೇ ಇದ್ದರೆ ಅದನ್ನೇ ಸುತ್ತುದು ಸುಖ.
~
ಈ ಮೂರು ಹಂತಂಗಳನ್ನೇ ಗಟ್ಟದ ಮೇಗೆ ಹಾಕು ಮಣೆ ಅಳಿಯ, ನೂಕು ಮಣೆ ಅಳಿಯ, ತೆಕ್ಕೊ ಮಣೆ ಅಳಿಯ – ಹೇದು ಸೂಕ್ಷ್ಮಲ್ಲಿ ನೆಗೆ ಮಾಡ್ತವಾಡ; ಭದ್ರಾವತಿ ಅಪ್ಪಚ್ಚಿ ಅಂದೊಂದರಿ ಹೇಳಿತ್ತಿದ್ದವು.
ಅವಕ್ಕೆ ಈಗ ಅಳಿಯ° ಆಗಿಯೂ, ಮಾವ° ಆಗಿಯೂ ಅನುಭವ ಇದ್ದಿದಾ! ಸಂಬಂಧಂಗಳ ಸೂಕ್ಷ್ಮ ತುಂಬಾ ಚೆಂದಕೆ ಅರಡಿಗು.. ಹಾಂಗಾಗಿ ಅವು ಹೇಳಿರೆ ರಜ ಬೆಲೆ ಜಾಸ್ತಿಯೇ!
~
ಪರಸ್ಪರ ಸೌಹಾರ್ದ ಸಂಪರ್ಕವ ಹೇಂಗೆ ತುಂಬ ಕಾಲ ಹಾಳಾಗದ್ದ ಹಾಂಗೆ ಮಡಗುಸ್ಸು – ಹೇಳ್ತದಕ್ಕೆ ಸೂಚ್ಯವಾಗಿ ನಮ್ಮ ಹೆರಿಯೋರು ಮಾಡಿದ ಗಾದೆ ಅದು.
ಮಣೆ ಹಾಕಿ ಕೂರ್ಸೆಕ್ಕಾದ ಅಳಿಯ° ಮನೆಅಳಿಯ° ಆದಪ್ಪಗ ಅವನ ಸ್ವಂತಿಕೆ ಕಳದು ಹೋವುತ್ತು ಹೇಳಿಯೂ ಇದರ ಇನ್ನೊಂದು ಅರ್ಥ ಕಾಣುತ್ತು ನವಗೆ.
ಈ “ಅಪರೂಪತೆ” ಇರೆಕ್ಕಾದಲ್ಲಿ ಇಪ್ಪಲೇ ಬೇಕು. ಆದರೆ ಎಲ್ಲ ದಿಕ್ಕೆ ಮಡಿಕ್ಕೊಂಬಲಾಗ ಇದಾ!
ಆತ್ಮೀಯರ ಒಳ, ಚೆಂಙಾಯಿಗಳ ಒಳ ಹಾಂಗೆಂತೂ ಇಪ್ಪಲಾಗ, ಎಲ್ಲವೂ ನೇರಾನೇರ ಸರಳ ಸಂಬಂಧ ಇರೇಕು – ಹೇದು ನೆಂಪುಮಾಡಿಗೊಳ್ತವು ಭದ್ರಾವತಿ ಅಪ್ಪಚ್ಚಿ.
ನೆಂಟ್ರೊಳ ಗಾಂಭೀರ್ಯತೆ, ಅಪರೂಪತೆ ಇರೆಕ್ಕಾದಲ್ಲಿ ಮಡಿಕ್ಕೊಂಬೊ°. ಬೈಲ ಚೆಂಙಾಯಿಗಳ ಒಳಾಣ ಸಂಬಂಧಲ್ಲಿ ಪರಸ್ಪರ ಪ್ರೀತಿವಿಶ್ವಾಸ ಮಡಿಕ್ಕೊಂಬೊ°.
ಆಗದೋ?
~
ಎಲ್ಲಿಂದಲೋ ಎಲ್ಲಿಗೋ ಹೋಗಿ ಎಂತೆಂತದೋ ನೆಂಪಾವುತ್ತು ಒಪ್ಪಣ್ಣಂಗೆ. ನೆಂಪಾದ್ಸರ ಹಾಂಗೇ ಹೇಳುಸ್ಸು ಒಪ್ಪಣ್ಣನ ಕ್ರಮ! ಅಲ್ದೋ?
~
ಒಂದೊಪ್ಪ: ನೆಂಟ್ರ ಒಳಾಣ “ತೆಕ್ಕೊ ಮಣೆ” ಉಪಚಾರಂದಲೂ, ಆತ್ಮೀಯ ಚೆಂಙಾಯಿಯ “ಹಾಕು ಮಣೆ” ಉಪಚಾರ ಮನಸ್ಸಿಂಗೆ ಹಿತ ಆಗದ್ದದು.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಅಲ್ಲಾ… ಈಗ ಒಪ್ಪಣ್ಣ ಏವ ನಮುನೆ ಅಳಿಯ? ಹಾಕು ಮಣೆಯೋ? ನೂಕು ಮಣೆಯೋ? ತೆಕ್ಕೊ ಮಣೆಯೋ? 🙂 🙂 🙂
ಒಳ್ಳೆ ಶುದ್ದಿ ಒಪ್ಪಣ್ಣ. ಅಕೇರಿಗೆ ತೆಕ್ಕೊಮಣೆ ಅಳಿಯ ಆದ ಮತ್ತೆ ’ ಅವ ಮನೆ ಅಳಿಯ’ ಆವುತ್ತು ಅಲ್ಲೊ?