Oppanna.com

ಪ್ರಕೃತಿ ಪ್ರೀತಿಯ ಆಗರ – ನಾಗರನ ಆದರ..!

ಬರದೋರು :   ಒಪ್ಪಣ್ಣ    on   21/08/2015    2 ಒಪ್ಪಂಗೊ

ಎಲ್ಲೋರಿಂಗೂ ಒಂದೇ ದಿನ ಒಂದೇ ದಿಕ್ಕಂಗೆ ಬರೆಕ್ಕು ಹೇದರೆ ಎಡಿಗಪ್ಪ ಕಾಲ ಅಲ್ಲ ಇದು. ಒಬ್ಬಂಗೆ ಇಂದು ಪುರುಸೊತ್ತಾದರೆ ಇನ್ನೊಬ್ಬಂಗೆ ನಾಳೆ. ಒಬ್ಬನಲ್ಲಿಗೆ ಬಾಬು ಇಂದು ಮದ್ದುಬಿಡ್ಳೆ ಬತ್ತರೆ, ಮತ್ತೊಬ್ಬನಲ್ಲಿಗೆ ಬಟ್ಯ ನಾಳಂಗೆ ಬೇಲಿ ಹಾಕಲೆ ಬಪ್ಪದು.
ಬೈಲು ಹೇದ ಮತ್ತೆ ಈ ನಮುನೆ ಅಸೌಕರ್ಯಂಗೊ ನೆಡವದು ಇಪ್ಪದೇ.
ಆದರೆ, ಇಷ್ಟೆಲ್ಲ ಅಸೌಕರ್ಯ ಇದ್ದರೂ – ಬೈಲಿಲಿ ದಿನಕ್ಕೊಂದರಿ ಮೋರೆ ನೋಡದ್ದೆ ಇರ್ತವಿಲ್ಲೆ ಇದಾ; ಅದಕ್ಕೆ ನಮ್ಮ ಬೈಲ ನೆಂಟ್ರುಗಳ ಮೆಚ್ಚಲೇ ಬೇಕು.
ಅದಿರಳಿ.
~
ಹೇಳಿದಾಂಗೆ, ಕಳುದ ವಾರ ನಮ್ಮ ಬೈಲ ಭಾವಂದ್ರು ಬೆಂಗ್ಳೂರಿಲಿ ಸೇರಿ ಗುರುಗಳ ಕೈಂದ ಆಶೀರ್ವಾದ ತೆಕ್ಕೊಂಡದದು ಒಂದು ಶುದ್ದಿ. ಉದಿಯಪ್ಪಗಳೇ ಸೇರಿ, ಶ್ರೀ ಗುರು ಕರಾರ್ಚಿತ ಪೂಜೆ ನೋಡಿದ್ದು. ಅದಾಗಿ ಸುಭಗಣ್ಣ ದಂಪತಿಗಳ ನೇತೃತ್ವಲ್ಲಿ ಶ್ರೀ ಗುರುಪಾದುಕಾಪೂಜೆ ನೆಡದ್ಸು, ಅದಾಗಿ ಪಾದಪೂಜೆ ಲೆಕ್ಕಲ್ಲಿ ಗುರುಗೊಕ್ಕೆ ವಿಶೇಷ ಆರತಿ ಮಾಡಿದ್ದು. ಅದಾಗಿ ಧರ್ಮಸಭೆಲಿ ಚಕ್ಕನಕಟ್ಟಿ ಕೂದುಗೊಂಡದು – ಅಪ್ರೂಪದ ಭಾವಂದ್ರ ಎದುರಾ ಎದುರು ಕಂಡು ಮಾತಾಡಿದ್ದು ತುಂಬಾ ಕೊಶಿ ಆಯಿದು.
ಇದೆಲ್ಲ ನವಗೆಷ್ಟು ಸಂತೋಶ ಆಯಿದೋ, ಅಷ್ಟೇ ಸಂತೋಶ ಗುರುಗೊಕ್ಕೂ ಆಯಿದೋ ತೋರ್ತು – ಅವು ಆಶೀರ್ವಚನಲ್ಲೇ ಹೇಯಿದ್ದವು.
ಬೈಲು ಹೇದರೆ ಎಂಗೊಗೂ ಪ್ರತಿಷ್ಟೆ – ಹೇದು ಹೇಳುವಾಗ ಸೇರಿದ ಎಲ್ಲ ಬೈಲ ನೆಂಟ್ರುಗೊ ಕೊಶಿಲಿ ಚಪ್ಪಾಳೆ ತಟ್ಟಿದ್ದು ನೆಂಪಿಲ್ಲೆಯೋ?!
~
ಜೀಗುಜ್ಜೆ ಸಾಂಬಾರು ಅಂತುಗೊಂಡು ಊಟ ಮಾಡಿದ್ದು ಮದ್ಯಾನ್ನದ ಗೌಜಿ. ಆರು ಹೆಚ್ಚು ಬಾಗ ತಿಂಬದು – ಹೇದು ಬೋಚಬಾವಂಗೂ, ನೆಗೆಮಾಣಿಗೂ ಪಂತ ಆಯಿದಾಡ, ಮುಳಿಯಭಾವ° ಮೂಗುಮುಚ್ಚಿಗೊಂಡು ಹೇಳಿದ್ದವು.
~
ಹೊತ್ತೋಪಗ ಮಠದ ಗೋಪುರಲ್ಲಿ ಕಾಲುನೀಡಿ ಕೂದುಗೊಂಡು ಬೈಲಪಂಚಾತಿಗೆಯನ್ನೂ ಮಾಡಿತ್ತು.
ಹೊಸ ನೆಂಟ್ರುಗೊಕ್ಕೆ ಬೈಲ ಪರಿಚಯ. ಹಳಬ್ಬರಿಂಗೆ ಬೈಲಿನ ಇತ್ತೀಚಿನ ಸಾಧನೆಗಳ ಮೆಲುಕು.
ಕೆಲವು ಪಟಂಗೊ. ಕೆಲವು ಪಟ್ಟಾಂಗ.
ಕೆಲವು ಚರ್ಚೆ, ಕೆಲವು ಸಲಹೆ, ಕೆಲವು ವಿಮರ್ಶೆಗೊ.
ಬೈಲಿನ ನೆಂಟ್ರ ಉತ್ಸಾಹವ ಪುನರ್-ಪ್ರೇರೇಪಣೆ ಮಾಡ್ಳೆ ಈ ಮಾತುಕತೆ ತುಂಬ ಉಪಕಾರ ಆತು – ಹೇದು ಟೀಕೆಮಾವ° ಹೇಳಿಗೊಂಡು ಇತ್ತಿದ್ದವು.
ಅದಿರಳಿ.
~
ಇದೆಲ್ಲ ಕಳುದು ಒಂದು ವಾರ ಆತು ಹೇದಪ್ಪಗ – ಒಪ್ಪಣ್ಣನ ಶುದ್ದಿ ಹೇಳುವ ಸಮಯ ಬಂತು ಹೇದು ಲೆಕ್ಕ.
ಈ ವಾರದ ಗೌಜಿ ಎಂತರ ಹೇದು ಇಡೀ ದೇಶಕ್ಕೇ ಗೊಂತಿದ್ದು.
ಅದು – ನಾಗರ ಪಂಚಮಿ!!
~
ನಾಗರ ಪಂಚಮಿ ದಿನದ ಅಂಬೆರ್ಪು ಎಷ್ಟು – ಹೇದು ಅರಡಿಯೇಕಾರೆ ಬೈಲಕರೆಲಿಪ್ಪ ಬಟ್ಟಮಾವನ ದಿನಚರಿ ನೋಡೇಕು.
ಉದೆಕಾಲ ಸೂರ್ಯೋದಯ ಆಯೇಕಾರೇ ಕಕ್ಕೇರದ ಶಿವಪ್ಪುವಿನ ಮಗ° ಬಕ್ಕು, ಬಟ್ಟಮಾವನ ಜಾಲಿಂಗೆ.
ಬಟ್ಟಮಾವನ ಕರಕ್ಕೊಂಡು ಹೋಪಲೆ ಬಪ್ಪದು ಇದಾ, – ಸೂರ್ಯೋದಯ ಅಪ್ಪಗ ಅವರ ಮನೆಗೆ ಎತ್ತುಗು. ಒರಿಶವೂ ಅಲ್ಲಿಯಾಣ ನಾಗಬನಲ್ಲಿಪ್ಪ ನಾಗನ ಕಲ್ಲಿಂಗೆ ಬಟ್ಟಮಾವನೇ ಹಾಲೆರವದು.
ಬಟ್ಟಮಾವ° ಬೇಗ ಬಂದಷ್ಟೂ ಬಟ್ಟಮಾವಂಗೂ ಒಳ್ಳೆದು, ಶಿವಪ್ಪುವಿನ ಮನೆಯೋರಿಂಗೂ ಒಳ್ಳೆದು – ಬೇತೆ ಬೇಲೆಗೆ ಹೋಪಲೆ.
~

ಬಟ್ಟಮಾವ° ಬಂದ ಕೂಡ್ಳೇ – ಮನೆಯ ಜೆಗಿಲಿಲಿ ಕೂದುಗೊಂಡು – ನಾಗಾರಾಧನೆಗೆ ಇಪ್ಪ ಹತ್ಯಾರುಗಳ, ವಸ್ತುಗಳ ತಯಾರು ಮಾಡುಗು.
ಕಾಯಿ ಕೆರದು ಒಂದು ಅವಲಕ್ಕಿ ಪ್ರಸಾದ ಮಾಡಿ ಒಂದು ತಪಲೆಲಿ ತುಂಬುಸುಸ್ಸು, ಒಂದು ಬಾಳೆಲೆಲಿ ಅರುಶಿನ ಹೊಡಿ, ಇನ್ನೊಂದು ಬಾಳೆಕೀತಿಲಿ ರಜ ಹೊದಳು, ಬೊಂಡ, ಹರಿವಾಣಲ್ಲಿ ಹಣ್ಣುಕಾಯಿ, ಆರತಿ-ನೆಣೆ, ದೀಪ – ಹೀಂಗಿರ್ಸ ಸುವಸ್ತುಗಳ ಎಲ್ಲ ಒಂದು ಬೆತ್ತದ ಹೆಡಗೆಲಿ ಮಡಗ್ಗು.
ಕಕ್ಕೇರ ಶಿವಪ್ಪುಗೂ ಇದು ಪ್ರತಿಒರಿಶ ನೆಡೆತ್ತ ಸಂಗತಿ ಆದ ಕಾರಣ ಗೊಂತಿಪ್ಪದೇ. ಆ ಹೆಡಗೆಯ ಅದುವೇ ಹಿಡ್ಕೊಂಬದು ನಾಗನ ಕಲ್ಲಿನ ವರೆಗೆ.
ಬಟ್ಟಮಾವನ ಕೈಲಿ ನೀರಿನ ಕೊಡಪ್ಪಾನವೂ, ಹೂಗಿನ ಹರಿವಾಣ – ಕೌಳಿಗೆ ಸಕ್ಕಣವೂ ಇರ್ತಿದಾ!

ಅವರ ತೋಟದ ನೆಡುಕೆ ಇಪ್ಪ ದೊಡ್ಡಾ ಅತ್ತಿಯ ಮರದ ಬುಡಕ್ಕೆ- ಒರಿಶಕ್ಕೆ ಒಂದರಿ ಮಾಂತ್ರ ಜೆನಂಗೊ ಹೋವುಸ್ಸು. ಉಳುದ ದಿನ ನಾಗಂಗೊ ಮಾಂತ್ರ ಹೋಪದಾಡ.
ಆ ದಿನ ಬಟ್ಟಮಾವನೇ ಬಳ್ಳಿಗಳ, ಬಲ್ಲೆಗಳ ನೂಕಿ ಜಾಗೆ ಮಾಡಿಗೊಂಡು ನಾಗನ ಕಲ್ಲಿನ ಹತ್ತರೆ ಎತ್ತಿಗೊಂಗು.
ಮಳೆಗಾಲ ಆದ ಕಾರಣ ಹಸುರು ಹುಲ್ಲುದೇ, ಮಳೆ ಹನಿಯೂ ಇಕ್ಕು ಒಂದೊಂದರಿ. ಹೆಡಗೆಲಿ ಮಡಗಿದ ಮಣೆಯ ಮಡಿಕ್ಕೊಂಡು ಕೂರುಗು. ತಂದ ಹೆಡಗೆಲಿ ಇಪ್ಪ ಹತ್ಯಾರು ಒಂದೊಂದನ್ನೇ ಹರಡಿ ಮಡಗಿ, ನಾಗಾರಾಧನೆ ಸುರುಮಾಡುಗು.

ನಾಗನ ಕಲ್ಲಿಂಗೆ ಪ್ರೋಕ್ಷಣಾರ್ಚನೆ, ಹಾಲಭಿಶೇಕ, ಬೊಂಡದ ಅಭಿಶೇಕ, ಅರುಶಿನ ಹೊಡಿ ಅರ್ಚನೆ, ಅಡಕ್ಕೆ ಸಿಂಗಾರದ ಅಲಂಕಾರ – ಎಲ್ಲ ಮಾಡಿಕ್ಕಿ, ಚೆಂದಲ್ಲಿ ಒಂದು ಮಂಗಳಾರತಿ ಮಾಡುಗು.
ಒರಿಶವೂ ಆರಾಧನೆ ಮಾಡ್ತ ನಾಗದೇವರು ನಿಂಗಳ ಕೃಶಿಯ ಬೆಳೆಶಲಿ, ಜಾಗೆಗೆ ರಕ್ಷಣೆ ಕೊಡ್ಳಿ, ಸಂತಾನ ವೃದ್ಧಿ ಆಗಲಿ, ಎಲ್ಲೋರಿಂಗೂ ಉತ್ತರೋತ್ತರ ಶ್ರೇಯಸ್ಸು ಸಿಕ್ಕಲಿ – ಹೇಳ್ತ ಪ್ರಾರ್ಥನೆಯ ಮಾಡಿ, ನಾಗ ಸ್ವೀಕಾರ ಮಾಡಿದ ಅರುಶಿನ ಹೊಡಿ, ಸಿಂಗಾರ ಇತ್ಯಾದಿ ಪ್ರಸಾದವ ಮನೆಯೋರಿಂಗೊ ಕೊಟ್ಟು, ಒಂದು ಬೊಂಡ ಕುಡುದಿಕ್ಕಿ, ಅಲ್ಲಿಂದ ಹೆರಡುಗು.

ಕಕ್ಕೇರದ ತೋಟ ದಾಂಟಿರೆ – ಅಲ್ಲೇ ಇರ್ಸು ಬೈಲಾಡಿ. ಕಕ್ಕೇರಲ್ಲಿ ಕಾರ್ಯಕ್ರಮ ಮುಗುದಪ್ಪದ್ದೇ – ಬೈಲಾಡಿಯ ಗೌಡ ಅಲ್ಲಿ ಬಂದು ತಯಾರು ನಿಂಗು, ಬಟ್ಟಮಾವನ ಕರಕ್ಕೊಂಡು ಹೋಪಲೆ.
ಅವಕ್ಕೆ ಬೊಂಡ ಕುಡುದು ಅಪ್ಪದ್ದೇ, ಬಟ್ಟಮಾವನ ಕರಕ್ಕೊಂಡು ಅವರ ಜಾಗೆಗೆ ಹೋಕು.
ಅಲ್ಲಿಯೂ ಹಾಂಗೇ – ಜೆಗಿಲಿಲಿ ಕೂದುಗೊಂಡು ಬೇಕಾದ ಹತಿಯಾರುಗಳ ತಯಾರು ಮಾಡಿಕ್ಕಿ, ಬೈಲಾಡಿ ಜಾಗೆಯ ಕೊಡೀಲಿ – ಓ ಅಲ್ಲಿ ಗುಡ್ಡೆಲಿ ಇಪ್ಪ ನಾಗಬನಕ್ಕೆ ಹೋಕು.
ಕಕ್ಕೇರಲ್ಲಿ ಮಾಡಿದ ಹಾಂಗೇ ಇಲ್ಲಿಯೂ ನಾಗಾರಾಧನೆ.
ಅಲ್ಯಾಣ ನಾಗಾರಾಧನೆ ಆದಪ್ಪದ್ದೇ, ಬಳೆಜ್ಜದ ಬಂಟ ಅಲ್ಲಿ ಕಾದುಗೊಂಡು ಇಕ್ಕು. ಬಟ್ಟಮಾವನ ಕರಕ್ಕೊಂಡೂ ಹೋಪಲೆ.
ಒಂದಾದ ಮತ್ತೆ ಮತ್ತೊಂದು, ಅಲ್ಲಿ ಆದ ಮತ್ತೆ ಇನ್ನೊಂದು ದಿಕ್ಕೆ – ಹೀಂಗೇ, ಆ ಒಂದು ದಿನ ಅಂತೂ – ಹೊತ್ತೋಪಗ ಐದು ಗಂಟೆ ವರೆಗೂ ಆವುತ್ತು ಒಂದೊಂದರಿ – ಬರೀ ಬೊಂಡ ನೀರು ಮಾಂತ್ರ, ಆ ಬಟ್ಟಮಾವಂಗೆ.

ಇದು ಕಕ್ಕೇರದ ಕತೆ ಮಾಂತ್ರ ಅಲ್ಲ, ಬೈಲಾಡಿಯ ಕತೆ ಮಾಂತ್ರ ಅಲ್ಲ, ಇಡೀ ಊರಿನ ಕತೆ ಹಾಂಗೇ! ಎಲ್ಲೋರಿಂಗೂ  – ಅವರ ಮನೆಲಿಪ್ಪ ನಾಗ ಸೇವೆ ಮಾಡುವ ಹಂಬಲ, ಅಂಬೆರ್ಪು.
ಬಟ್ಟಮಾವಂಗೆ ’ನಮೋ ಅಸ್ತು ಸರ್ಪೇಭ್ಯೋ..’ – ಹೇಳಿ ಹೇಳಿ, ಆ ದಿನ ಒರಕ್ಕಿಲಿಯೂ ಅದೇ ಮಂತ್ರ ಬಕ್ಕೋ ಏನೊ!
ಕೈ ಉಗುರಿನ ಎಡಕ್ಕಿಲಿ ಪೂರ ಅರುಶಿನ ಹೊಡಿ ನಿಂದು, ಜೆನಿವಾರಕ್ಕೆ ಪುನಾ ಅರುಶಿನ ಮೆತ್ತಿದ ಹಾಂಗಾಗಿ, ಬೆಳಿ ಒಸ್ತ್ರ, ಕೆಂಪು ಶಾಲು, ಪಟ್ಟೆ – ಪೂರಾ ಅರುಶಿನಮಯ ಆಗಿ, ಬಟ್ಟಮಾವನ ಮನೆಲಿ ಆ ದಿನ ಒಸ್ತ್ರ ಒಗವಗ ಒಂದು ಪರೆಂಚಾಣ ಇದ್ದೇ ಇರ್ತು! ಹು!
~

ನಮ್ಮ ಊರು ಹೇದರೆ ಅದು ಪರಶುರಾಮ ದೇವರು ಸೃಷ್ಟಿ ಮಾಡಿದ್ದಾಡ. ಅಲ್ಲಿ ನಾಗಾರಾಧನೆ ಮಾಡಿಗೊಂಡು ಇರ್ತವು – ಹೇದು ಪರಶುರಾಮ ದೇವರೇ ನಾಗದೇವರಿಂಗೆ ಮಾತುಕೊಟ್ಟಿದವಾಡ.
ಹಾಂಗಾಗಿ, ಒರಿಶಕ್ಕೊಂದರಿ – ಶ್ರಾವಣ ಮಾಸ ಶುಕ್ಲಪಕ್ಷ ಪಂಚಮಿಯ ವಿಶೇಶ ದಿನ ನಾಗರ ಪಂಚಮಿ – ಹೇಳ್ತ ಗೌಜಿಲಿ ನಾಗ ದೇವರಿಂಗೆ ಇಷ್ಟದ ಹಾಲು, ಅರುಷಿನ ಹೊಡಿ, ಅಡಕ್ಕೆ ಸಿಂಗಾರವೇ ಇತ್ಯಾದಿ ಸುವಸ್ತುಗಳ ಕೊಟ್ಟು ನೆಂಪುಮಾಡಿಗೊಂಬದು.
ಆ ಭೂಮಿಲಿ ನಾಗನ ಅನುಮತಿ ಮೇರೆಗೆ ಬದ್ಕುತ್ತಾ ಇಪ್ಪ ಜೀವ ಸಂಕುಲಕ್ಕೆ ಅನುಗ್ರಹ ಮಾಡೇಕು – ಹೇದು ಕೇಳಿಗೊಂಬದಡ.

ಹಾಂಗಾಗಿ ನಮ್ಮ ಊರಿಲಿ ನಾಗಾರಾಧನೆ ಹೆಚ್ಚಾಗಿ ಕಾಂಬಲೆ ಸಿಕ್ಕುತ್ತು.
ಮನೆ ಮನೆಗಳಲ್ಲಿಪ್ಪ ನಾಗಬನ ಮಾಂತ್ರ ಅಲ್ಲದ್ದೆ, ಊರ ದೇವಸ್ಥಾನಂಗೊ, ಸೀಮೆ ದೇವಸ್ಥಾನಂಗಳಲ್ಲೂ ಈ ನಾಗಾರಾಧನೆ ಜೋರಾಗಿ ಕಾಣ್ತಾ ಇರ್ತು.
~
ಪುರಾಣ ಇತಿಹಾಸ ನಂಬಿಕೆಗೊ – ಒಂದೊಂದು ಊರಿಲಿ ಒಂದೊಂದು ಕತೆಗೊ ಆಗಿ ಪ್ರಕಟ ಆಗಿಕ್ಕು.
ಆದರೆ, ಇದೆಲ್ಲದರ ಹಿಂದೆ ಇಪ್ಪದು ಪ್ರಕೃತಿ ಆರಾಧನೆಯ ಹಿರಿಮೆ, ಅಲ್ದೋ?
ಆ ಕಿರಿಂಚಿಲಿ, ಆ ಮಳೆ ಹನಿಲಿ,  ಆ ತೋಟದ ಕೊಡಿಲಿಪ್ಪ ನಾಗನ ಕಲ್ಲು ಹುಡ್ಕಿಂಡು ಹೋಗಿ ಅದರ ಪೂಜೆ ಮಾಡಿ, ಜಾತ್ಯತೀತವಾಗಿ ಅಡ್ಡಬೀಳ್ತ ಒಂದು ಸಂಪ್ರದಾಯ – ಅದು ಅಲ್ಲದೋ ನಮ್ಮ ಹಿರಿಮೆ!
ಬನ – ಹೇದರೆ ಕಾಡು.
ಈ ನಾಗಾರಾಧನೆ ಲೆಕ್ಕಲ್ಲಿ ಆಗಿ ಸುಮಾರು ದಿಕ್ಕೆ ಈಗಳೂ ಕಾಡು ಒಳ್ಕೊಂಡಿದಿಲ್ಲೆಯೋ! ಅದುವೇ ಅಲ್ದೋ ನಮ್ಮ ಹಿರಿಮೆ.
ನಾಗಾರಾಧನೆ ಹೇಳ್ತ ಕಾರಣಂದಾಗಿ ಅಪುರೂಪ ಆಗಿ ಇಪ್ಪ ಕೃಷ್ಣ ಸರ್ಪ, ಕಾಳಿಂಗ ಸರ್ಪ, ನಾಗರ ಸರ್ಪ – ಇತ್ಯಾದಿ ಪ್ರಭೇದಂಗೊ ಅದರದ್ದೇ ಆದ ಗೌರವ ಪಡಕ್ಕೊಂಡು ಒಳುದ್ದು!?
ಹಾವು ಹೇದರೆ ಸೈತಾನ – ಕಂಡಲ್ಲಿ ಕೊಲ್ಲು – ಹೇದು ಒಂದು ಪ್ರವಾದಿ ಹೇಯಿದ್ದು ಹೇದು ಕಂಡಲ್ಲಿ ಕಲ್ಲಿಡ್ಕುದರಿಂದ, ನಮ್ಮ ಹಾಂಗೆ ಕಂಡಲ್ಲಿ ಅಡ್ಡಬೀಳ್ತದಲ್ಲದೋ ನಮ್ಮ ಹಿರಿಮೆ!?
~
ನಾಗಾರಾಧನೆ ಮಾಡುವೊ°.
ಪ್ರಕೃತಿಯ ಉಳುಶುವೊ°.
ನಾಗ ದೇವರು ನಮ್ಮ ಕೃಶಿಗೆ, ಆರೋಗ್ಯಕ್ಕೆ, ಸಂತಾನಕ್ಕೆ, ಅಭಿವೃದ್ದಿಗೆ ಸದಾಶೀರ್ವಾದ ಕೊಡಲಿ.
ಹರೇರಾಮ
~
ಒಂದೊಪ್ಪ: ತೋಟಲ್ಲಿಪ್ಪದರ ತೋಟಕ್ಕೇ ಹೋಗಿ ಪೂಜೆ ಮಾಡೆಕ್ಕು. ಅದುವೇ ಪ್ರಕೃತಿಯ ನಿಜವಾದ ರಕ್ಷಣೆ.

2 thoughts on “ಪ್ರಕೃತಿ ಪ್ರೀತಿಯ ಆಗರ – ನಾಗರನ ಆದರ..!

  1. ಒಪ್ಪಣ್ಣ,
    ವಾರವಾರ ಶುದ್ದಿ ಓದಿದರೂ ಅಂಬೇರ್ಪಿಲಿ ಒಪ್ಪ ಬರವಲೆ ಎಡಿತ್ತಿಲ್ಲೆ ಇದಾ… 🙁
    ಈ ವಾರದ ಶುದ್ದಿ ಒಪ್ಪ ಬಯಿಂದು. ನಮ್ಮ ಹೆರಿಯೋರ ನಾವು ಮರೆತ್ತಿಲ್ಲೆ, ಹಾಂಗೆ, ನವಗೆ ಜಾಗೆ ಬಿಟ್ಟು ಉಪಕಾರ ಮಾಡಿ ನಾವು ಇಷ್ಟು ಅಭಿವೃದ್ಧಿ ಅಪ್ಪಲೆ ಕಾರಣ ಆದೋರ ಮರವಲಿದ್ದಾ? ಎಲ್ಲ ನಮ್ಮ ಆಚರಣೆಗ ಅದನ್ನೇ ನವಗೆ ಹೇಳಿ ಕೊಡ್ತು, ಅಲ್ಲದಾ?

    ನವಗೆ ಸಿಕ್ಕಿದ ಜಾಗೆಯ ನವಗೆ ಸಿಕ್ಕಿದ ಹಾಂಗೆ ಮುಂದಾಣವಕ್ಕೆ ಮಡಿಗಿದರೆ ನಾಗಂಗಳ ಅನುಗ್ರಹ ಸಿಕ್ಕುಗು. ನಾಗಂಗೆ ಜಾಗೆ ಇಲ್ಲದ್ದೆ ಮಾಡಿ ಎಷ್ಟು ತಂಬಿಲ ಮಾಡಿದರೂ ನೆಮ್ಮದಿ ಸಿಕ್ಕ.

  2. ನಾಗಂಗೂ ಸುಬ್ರಹ್ಮಣ್ಯಂಗೂ ಸಂಬಂದ ಆದ್ದು ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×