- ಧಾನ್ಯಕ…. ನೀನೇ ಧನ್ಯ!!! - March 14, 2011
- "ಎಂಗೊ ಎಂತರ ತಿನ್ನೆಕ್ಕಪ್ಪದು?" -ಮಧುಮೇಹಿ - March 7, 2011
- ಅಭ್ಯಂಗಮಾಚರೇನ್ನಿತ್ಯಂ… - January 4, 2011
ಎಲ್ಲರಿಂಗೂ ಚಳಿಗಾಲದ ಗಾಳಿ ಬಪ್ಪಲೆ ಸುರು ಆಯಿದಾ?ಬೆಂಗಳೂರಿಲಂತೂ ತುಂಬಾ ಚಳಿ..೨-೩ರಗ್ಗು ಇದ್ದರೂ ಸಾಕಾವುತ್ತಿಲ್ಲೆ!! 🙁 ಇಷ್ಟು ಚಳಿ ಇಪ್ಪಗ ಚರ್ಮ ಒಣಗುದು,ಒಡವದು ಎಲ್ಲಾ ತೊಂದರೆಗಳೂ ಸರ್ವೇ ಸಾಮಾನ್ಯ..ಇದರ ತಡವಲೆ ಇಪ್ಪ ಒಂದೇ ಒಂದು ಉಪಾಯ ಹೇಳಿದರೆ ಅಭ್ಯಂಗ..
ಅಭ್ಯಂಗ ಹೇಳಿದರೆ ಎಂತರ?ಶಾಸ್ತ್ರಕ್ಕೆ ತಕ್ಕ ಮೈಗೆ ಅಲ್ಲಿ ಇಲ್ಲಿ ರಜಾ ರಜಾ ಎಣ್ಣೆ ಮುಟ್ಟುಸುದಾ ಅಲ್ಲ ಆಧುನಿಕ ಯುಗದ ಪೈಸೆ ಖರ್ಚು ಮಾಡಿ ಮಾಡುವ ಮಸಾಜ್?? ನಿಜವಾಗಿಯೂ ಅಭ್ಯಂಗ ಹೇಳಿದರೆ ಎಂತರ,ಹೇಂಗೆ ಮಾಡುದು,ಆರೆಲ್ಲಾ ಮಾಡ್ಲಕ್ಕು ಇದರ ಬಗ್ಗೆ ತಿಳ್ಕೊಂಬ ಆಗದಾ?
ನಮ್ಮ ದೇಹದ ರೋಮಂಗೊಕ್ಕೆ,ಅಂಗಾಂಗೊಕ್ಕೆ ಅಭಿಮುಖವಾಗಿ ಎಣ್ಣೆ ಕಿಟ್ಟುವ ಕ್ರಮಕ್ಕೆ ಅಭ್ಯಂಗ ಹೇಳುದು..ನಮ್ಮ ದಿನಚರ್ಯಂಗಳಲ್ಲಿ ಅಭ್ಯಂಗವುದೇ ಒಂದು.. ನಾವು ದಿನಾ ಹೇಂಗೆ ಹಲ್ಲು ತಿಕ್ಕಿ ಮಿಂದು ಮಾಡ್ತಾ ಹಾಂಗೇ ದಿನಾ ಎಣ್ಣೆ ಕಿಟ್ಟುದು ದಿನಚರ್ಯದ ಒಂದು ಭಾಗ..ದಿನಚರ್ಯವ ವಿವರ್ಸುವಗ ವಾಗ್ಭಟ ಆಚಾರ್ಯರು ಅಭ್ಯಂಗವ ಹೀಂಗೆ ವಿವರ್ಸುತ್ತವು :
अभ्यंगमाचरॆन्नित्यं, स जराश्रमवातहा ।
दृष्टिप्रसादपुष्ट्यायुःस्वप्नसुत्वक्त्वदाढर्यकृत् ॥ -अ.ह्र्.सू २/८
ಪ್ರತಿ ದಿನ ಅಭ್ಯಂಗ ಮಾಡುದರಂದ ವೃದ್ಧಾಪ್ಯ,ಶ್ರಮ,ವಾತ ದೋಷಂದ ಬಪ್ಪ ತೊಂದರೆಗೊ ನಿವಾರಣೆ ಆಗಿ,ಕಣ್ಣಿನ ದೃಷ್ಟಿ ಬಲ ಆವುತ್ತು,ದೇಹಕ್ಕೆ ಪುಷ್ಟಿ ತುಂಬುತ್ತು,ಆಯುಷ್ಯ ಹೆಚ್ಚಾವುತ್ತು,ಲಾಯಿಕ್ಕಲಿ ವರಕ್ಕು ಬತ್ತು,ಚರ್ಮದ ಚೆಂದ ಸ್ಥಿರವಾಗಿ ಇದ್ದುಗೊಂಡು ಮಾಂಸಂಗೊಕ್ಕೆ ಬಲ ಕೊಡ್ತು..
ವಿಶೇಷ ರೂಪಲ್ಲಿ ಶಿರ(ನೆತ್ತಿ),ಕರ್ಣ(ಕೆಮಿ),ಪಾದ(ಕಾಲು) ಅಭ್ಯಂಗ ಮಾಡೆಕ್ಕು..
ಚರ್ಮ ಹೇಳ್ತದು ಪಂಚೇಂದ್ರಿಯಂಗಳಲ್ಲಿ ಒಂದು.ಇದು ನಮ್ಮ ದೇಹದ ಅತೀ ದೊಡ್ಡ ಇಂದ್ರಿಯ..ನಮ್ಮ ದೇಹ ಬೇರೆ ಬೇರೆ ರೀತಿಯ ವಾತಾವರಣದ ವೈಪರಿತ್ಯಕ್ಕೆ ಸಿಕ್ಕಿ ಹಾಕಿಗೊಳ್ತು.ಅಷ್ಟಪ್ಪಗ ಹೆಚ್ಚಾಗಿ ತೊಂದರೆ ಅಪ್ಪದೇ ಚರ್ಮಕ್ಕೆ..ಇದಕ್ಕೆ ಸುಲಭ ಪರಿಹಾರ– ನಿತ್ಯ ಅಭ್ಯಂಗ.. ಅಭ್ಯಂಗ ಮಾಡುದರಂದ ದೇಹದ ರೋಗ ನಿರೋಧಕ ಶಕ್ತಿದೇ ಹೆಚ್ಚಾವುತ್ತು..
ಯಾವ ಎಣ್ಣೆ ಅಕ್ಕು?
ಅಭ್ಯಂಗ ಮಾಡ್ಲೆ ತುಂಬಾ ಸೂಕ್ತವಾದ ಎಣ್ಣೆ ಹೇಳಿದರೆ ಅದು ಎಳ್ಳೆಣ್ಣೆ..ಇದು ಚರ್ಮದ ಮೂಲಕ ಶರೀರಲ್ಲಿ ಬೇಗ ಹರಡುತ್ತು,ಚರ್ಮ ರೋಗಂಗಳ ನಾಶ ಮಾಡ್ತು,ಕೃಮಿನಾಶಕ,ಸ್ಥೂಲ ಶರೀರವ ಕೃಶ ಮಾಡ್ತು ಹಾಂಗೇ ಕೃಶ ಶರೀರದೋರ ಸಮಸ್ಥಿತಿಗೆ ತತ್ತು.ಇದಲ್ಲದ್ದೆ ದನದ ತುಪ್ಪ,ತೆಂಗಿನ ಎಣ್ಣೆಗಳನ್ನೂ ಉಪಯೋಗ ಮಾಡ್ಲಕ್ಕು..ವಿಶೇಷವಾದ ಖಾಯಿಲೆ ಇದ್ದರೆ ವೈದ್ಯರ ಸಲಹೆ ತೆಕ್ಕೊಂಡು ಮದ್ದಿನ ಗುಣ ಇಪ್ಪ ಎಣ್ಣೆ ಉಪಯೋಗ ಮಾಡ್ಲಕ್ಕು..
ಯಾವಗ ಮಾಡೆಕ್ಕು?
ಅಭ್ಯಂಗ ಮಾಡೆಕ್ಕರೆ ಹೊಟ್ಟೆ ಖಾಲಿ ಇರೆಕ್ಕು ಹೇಳಿದರೆ ಮೊದಲು ತಿಂದ ಆಹಾರ ಕರಗಿರೆಕ್ಕು ಎಂತಕೆ ಹೇಳಿದರೆ ಪಚನಕ್ರಿಯೆ ಅಪ್ಪಗ ಅಭ್ಯಂಗ ಮಾಡಿದರೆ ಅದು ಪಚನಕ್ರಿಯೆ ಸರಿಯಾಗಿ ಅಪ್ಪಲೆ ಬಿಡ್ತಿಲ್ಲೆ..ಇರುಳಾಣ ಹೊತ್ತಿಲಿ ಅಭ್ಯಂಗ ಮಾಡುದು ಒಳ್ಳೆದಲ್ಲ.ಸೂರ್ಯನ ಬೆಳಕು ಇಪ್ಪಗಳೇ ಅಭ್ಯಂಗ ಒಳ್ಳೇದು ಇದರಂದ ಚರ್ಮದ ರಂಧ್ರಂಗೊಕ್ಕೆ ಎಣ್ಣೆ ಎಳಕ್ಕೊಂಬಲೆ ಸುಲಭ ಆವುತ್ತು..
ಹೇಂಗೆ ಮಾಡೆಕ್ಕು?
ಎಣ್ಣೆ ಹಾಕುಲೆ ಸುರು ಮಾಡೆಕ್ಕಪ್ಪದು ನೆತ್ತಿಂದ.ನೆತ್ತಿಗೆ,ಕೆಮಿಗೆ,ಪಾದಕ್ಕೆ ಸುರುವಿಂಗೆ ಎಣ್ಣೆ ಕಿತ್ತಿ ಉದ್ದೆಕ್ಕು.ಮತ್ತೆ ಕೊರಳಿಂದ ಹಿಡುದು ಕಾಲಿಂಗೊರೆಗೆ ಕಿಟ್ಟೆಕ್ಕು.ಮೈಗೆ ಕಿಟ್ಟುವ ಎಣ್ಣೆ ಉಗುರು ಬೆಶಿ ಇರೆಕ್ಕು.ಎಣ್ಣೆ ಬೆಶಿ ಮಾಡುವಗ ಬೆಶಿ ನೀರಿನ ಮೇಲೆ ಎಣ್ಣೆ ಪಾತ್ರ ಮಡುಗಿ ಬೆಶಿ ಮಾಡೆಕ್ಕು..ದೇಹ ಸರೀ ಎಣ್ಣೆ ಹೀರಿಗೊಳ್ಳಲ್ಲಿ ಹೇಳಿ ಅತಿಯಾಗಿ ಎಣ್ಣೆ ಪಳಂಚುದು ಒಳ್ಳೆದಲ್ಲ..
ಎಷ್ಟು ಹೊತ್ತು ಮಾಡೆಕ್ಕು?
ನಿತ್ಯ ಅಭ್ಯಂಗ ಮಾಡಿದರೆ ಅದು ೯೦೦ಮಾತ್ರಾ ಕಾಲಲ್ಲಿ ಹೇಳಿದರೆ ಸುಮಾರು ೧೦ನಿಮಿಷಲ್ಲಿ ಅಸ್ಥಿ-ಮಜ್ಜೆಯ ಪ್ರವೇಶ ಮಾಡಿ ವಾತ,ಪಿತ್ತ,ಕಫ ದೋಷಂದ ಬಂದ ತೊಂದರೆಗಳ ಕಮ್ಮಿ ಮಾಡ್ತು.(೧ ಮಾತ್ರಾ ಕಾಲ ಹೇಳಿದರೆ ಹೃಸ್ವ ಸ್ವರಂಗಳಾದ ಅ,ಇ,ಉ ಇತ್ಯಾದಿಗಳ ಉಚ್ಛಾರಣೆ ಮಾಡ್ಲೆ ಬೇಕಪ್ಪಷ್ಟು ಸಮಯ). ಆಚಾರ್ಯ ಸುಶ್ರುತರು ವಿವರ್ಸುವ ಪ್ರಕಾರ ಅಭ್ಯಂಗದ ಪ್ರಭಾವ ೧೦ ನಿಮಿಷಲ್ಲಿ ದೇಹದ ಎಲ್ಲಾ ಧಾತುಗೊಕ್ಕೆ ಸಿಕ್ಕುತ್ತು..ಹಾಂಗಾಗಿ ಪ್ರತಿಯೊಂದು ಅಂಗಾಂಗೊಕ್ಕೆ ೧೦ ನಿಮಿಷ ಎಣ್ಣೆ ಕಿಟ್ಟಿ ಉದ್ದಿದರೆ ಒಳ್ಳೆದು..
ಎಣ್ಣೆ ತೆಗವದು ಹೇಂಗೆ?
ಎಣ್ಣೆ ಕಿಟ್ಟಿದ ಮತ್ತೆ ಮೀವಗ ಕಡ್ಲೆ ಹೊಡಿ ಹಾಕಿ ಮೀಯೆಕ್ಕು.ಇದರೊಟ್ಟಿಂಗೆ ಹಸರಿನ ಹೊಡಿ,ಅರಿಶಿನ ಹಾಕಿದರೆ ಒಳ್ಳೆದು.. ಸಾಬೂನು ಯಾವ ಕಾರಣಕ್ಕೂ ಬೇಡ..ಸಾಬೂನು ಎಣ್ಣೆಯ ಅಂಶವ ಪೂರ್ತಿ ತೆಗದು ಬಿಡುವ ಕಾರಣ ಮೈ ಪುನ ಒಣಗಿದ ಹಾಂಗೆ ಆವುತ್ತು..ಆದರೆ ಕಡ್ಲೆ ಹೊಡಿ ಎಣ್ಣೆ ತೆಗೆತ್ತು ಆದರೆ ಚರ್ಮಕ್ಕೆ ಯಾವ ತೊಂದರೆ ಮಾಡ್ತಿಲ್ಲೆ.ಚರ್ಮ ತುಂಬಾ ಮೃದು ಆವುತ್ತು.. ಕೆಮಿಯ ಎಣ್ಣೆ ತೆಗವಲೆ ಹತ್ತಿಯ ಸಪೂರಕ್ಕೆ ಬತ್ತಿಯ ಹಾಂಗೆ ಮಾಡಿ ಕೆಮಿಯ ಒಳ ಹಾಕಿ ಎಣ್ಣೆಯ ಪೂರ್ತಿಯಾಗಿ ತೆಗೆಯಕ್ಕು..
ಪ್ರಯೋಜನಂಗೊ—
ಅಭ್ಯಂಗಂದ ಅಪ್ಪ ಪ್ರಯೋಜನಂಗಳ ಚರಕಾಚಾರ್ಯರು ತುಂಬಾ ಲಾಯಿಕ್ಕಲಿ ವಿವರ್ಸಿದ್ದವು–ಯಾವ ರೀತಿಲಿ ಮಣ್ಣಿನ ಅಳಗೆ,ಚರ್ಮಂದ ಮಾಡಿದ ವಸ್ತುಗೊ,ಗಾಡಿಯ ಚಕ್ರಂಗೊ ಎಣ್ಣೆ ಹಾಕಿಯಪ್ಪಗ ದೃಢ ಆಗಿ ಯಾವುದೇ ರೀತಿಯ ಆಘಾತಂಗಳ ತಡವ ಶಕ್ತಿ ಪಡೆತ್ತೋ ಅದೇ ರೀತಿ ನಿತ್ಯ ಅಭ್ಯಂಗ ಶರೀರವ ಸದೃಢ ಮಾಡಿ,ಚರ್ಮವ ಕೋಮಲ ಮಾಡ್ತು.ಎಲ್ಲಾ ರೀತಿಯ ವಾತವ್ಯಾಧಿಗೊ ದೂರ ಆವುತ್ತು,ವ್ಯಾಯಾಮಂದ ಅಪ್ಪ ಬಚ್ಚೆಲು ಕಮ್ಮಿ ಮಾಡ್ತು.. ಕಾಲಿಂಗೆ ಎಣ್ಣೆ ಹಾಕುದರಂದ ಕಾಲಿನ ದೊರಗು ಕಮ್ಮಿ ಆಗಿ,ಕಾಲೊಡವದು,ಕಾಲು ಬಚ್ಚುದು,ಕಾಲು ಜುಮುಜುಮು ಅಪ್ಪದು ಕೂಡ್ಲೆ ಕಮ್ಮಿ ಆವುತ್ತು.ಹಾಂಗೇ ಪಾದ ಮೃದು ಆಗಿ ಶಕ್ತಿ ಬತ್ತು.ಕಣ್ಣಿಂಗೂ ಹಿತಕರ ಆವುತ್ತು,ಸಯಾಟಿಕಾ(ಸಯಾಟಿಕ್ ನರದ ತೊಂದರೆಂದ ಬಪ್ಪ ಬೇನೆ),ವೆರಿಕೋಸ್ ವೈನ್(ಮೊಳಪ್ಪಿನ ಕೆಳ ರಕ್ತನಾಳ ದಪ್ಪ ಅಪ್ಪದು),ಹಿಮ್ಮಡಿ ಒಡವದು ಈ ಎಲ್ಲಾ ತೊಂದರೆಗೊ ಬಾರದ್ದ ಹಾಂಗೆ ತಡೆತ್ತು ನಮ್ಮ ಅಭ್ಯಂಗ.. ಕೆಮಿಗೆ ಎಣ್ಣೆ ಹಾಕಿದರೆ ಕರ್ಣರೋಗ,ಕೆಮಿ ಕೇಳದ್ದೆ ಅಪ್ಪದು ಆವುತ್ತಿಲ್ಲೆ..
ನಿಷೇಧ—
ಅಜೀರ್ಣ ಇಪ್ಪವು,ಕಫ ದೋಷಂದ ಬಂದ ತೊಂದರೆಗೊ ಇದ್ದರೆ,ಪಂಚಕರ್ಮ(ವಮನ-ವಿರೇಚನಾದಿ) ಮಾಡ್ಸಿಗೊಂಡೋರು ಅಭ್ಯಂಗ ಮಾಡಿಗೊಂಬಲೆ ಅನರ್ಹರು..
ಇದು ದೇಹದ ಅಭ್ಯಂಗ ಆತು.ಹೀಂಗೇ ಬೇರೆ ಇಂದ್ರಿಯಂಗೊಕ್ಕೂ ಅಭ್ಯಂಗದ ಅಗತ್ಯ ಇದ್ದು.ಮೂಗಿಂಗೆ ಎಣ್ಣೆ ಹಾಕುದಕ್ಕೆ ನಸ್ಯ ಹೇಳ್ತವು,ಕೆಮಿಗೆ ಹಾಕುದಕ್ಕೆ ಕರ್ಣಪೂರಣ ಹೇಳಿದೇ,ಬಾಯಿಲಿ ಎಣ್ಣೆ ತುಂಬುಸಿ ಮುಕ್ಕುಳುಸುದಕ್ಕೆ ಗಂಡೂಷ ಹೇಳಿ ಹೇಳ್ತವು..ಇವೆಲ್ಲಾ ನಮ್ಮ ದಿನಚರ್ಯಲ್ಲಿ ನಿತ್ಯ ಮಾಡೆಕ್ಕಾದ ಕ್ರಮಂಗೊ..ಇವುಗಳ ಬಗ್ಗೆ ಇನ್ನಾಣ ಸರ್ತಿ ಬರೆತ್ತೆ..
🙂
ಮನೆಲಿ ಮೊದಲಾಣ ಕಾಲದವು ಎಣ್ಣೆ ಕಿಟ್ಟಿ ಹೇಳಿದರೆ ನಿರ್ಲಕ್ಷ ಬೇಡ..ಅಭ್ಯಂಗಂದ ತುಂಬಾ ಉಪಕಾರ ಇದ್ದು.ಹಳೇ ಕಾಲದ್ದು ನವಗೆ ಬೇಡ ಹೇಳಿ ಉಪೇಕ್ಷಿಸಿದರೆ ನವಗೇ ನಷ್ಟ..ಹಳೆ ಕ್ರಮಂಗೊಕ್ಕೂ ಅರ್ಥ ಇರ್ತು..ಅದಕ್ಕೇ ಕವಿ ಡಿ.ವಿ.ಜಿ ಹೇಳಿದ್ದಾದಿಕ್ಕು..
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನಕಳೆ ಮೇಳವಿಸೆ
ಜಸವು ಜನಜೀವನಕೆ-ಮಂಕುತಿಮ್ಮ||
~~~~~~~~~~~~~~~~~~~~~~~~~~~~
ಡಾ.ಸೌಮ್ಯ ಪ್ರಶಾಂತ
sowprash@gmail.com
ayurvedaparadise.com
ಇಲ್ಲಿ ಕೊಟ್ಟ ಶ್ಲೋಕ ಅಷ್ಟಾಂಗ ಹೃದಯದ್ದಿರೆಕು ಅಲ್ಲದಾ?
ಬಹಳ ಒಳ್ಳೆಯ ಮಾಹಿತಿ. ನಂದ ಕಿಶೋರ ಎನ್ನ ಬ್ಲಾಗಿಂಗೆ ಬರದ ಕಮೆಂಟಿಲಿ ಈ ಲೇಖನದ ಲಿಂಕು ಕೊಟ್ಟಕಾರಣ ಇಲ್ಲಿ ಬಪ್ಪಲಾತು. ಎನಗೂ ಆರಾರು ಲಾಯೆಕಕ್ಕೆ ಅಭ್ಯಂಗ ಮಾಡುವೋರಿದ್ದರೆ ಹೇಳಿ ಅನ್ನುಸಿತ್ತು 🙁 ನಮಗೆ ನಾವೇ ಎಣ್ಣೆ ಕಿಟ್ಟುದು(ಕಾಲು, ತಲೆ ಇತ್ಯಾದಿಗೆ) effective ಅಕ್ಕಾ?
ಅದಪ್ಪು… ಆದಿತ್ಯವಾರ ಮೀವಲಕ್ಕು…(ಎಣ್ಣೆ ಕಿಟ್ಟಿ)
ಡಾಗುಟ್ರು ಹೇಳಿದ್ದೆಲ್ಲ ಸರಿಯೆ… ಆದರೆ ದಿನಾಗಿಲೂ ಹೀಂಗೆ ಮೀವಲೆ ಎಡಿಗಾ?… ಆನು ದಿನಾಗಿಲು ಐದು ಗಂಟೆಗೆ ಎದ್ದು ಅಂಬೆರ್ಪಿಲಿ ಮಿಂದಿಕ್ಕಿ, ತಿಂದಿಕ್ಕಿ ಓಡುದು… ಇಲ್ಲದ್ರೆ ಬಸ್ಸು ಸಿಕ್ಕುತ್ತಿಲ್ಲೆ…ಆಫೀಸಿಂಗೆ ಲೇಟಾವ್ತು….
ನಿಂಗೊ ಹೇಳುದು ಸರಿಯೇ ಶ್ಯಾಮಣ್ಣ..ಈಗಾಣ ಅಂಬೆರ್ಪಿನ ಜೀವನ ಕ್ರಮಲ್ಲಿ ದಿನಾಗುಳೂ ಹೀಂಗೆ ಎಣ್ಣೆ ಕಿಟ್ಟಿ ಮೀವಲೆ ಕಷ್ಟ ಅಕ್ಕು.. ಆದರೆ ಪುರ್ಸೋತ್ತಿಪ್ಪ ದಿನ ಆದರೂ ಎಣ್ಣೆ ಕಿಟ್ಟಿ ಮೀವಲಕ್ಕಲ್ಲದಾ ಅದೂ ಅದರಂದ ಇಷ್ಟೆಲ್ಲಾ ಪ್ರಯೋಜನ ಇಪ್ಪಗ..ದಿನಾಗುಳೂ ಅಲ್ಲದ್ದರೂ ವಾರಕ್ಕೊಂದರಿ ಮಾಡಿದರೂ ಪ್ರಯೋಜನ ಸಿಕ್ಕುಗು.. 🙂
ಡಾಕ್ಟ್ರಕ್ಕೊ ಬಾರಿ ಒಳ್ಳೆದಾಗಿ ಬಯಿ೦ದು ಲೇಖನ.ಬಾರೀ ಉಪಯುಕ್ತ ಮಾಹಿತಿ.ಎನ್ನ ಮಗ೦ ಎಣ್ಣೆ ಕಿಟ್ಟಿ ಮೀವಲೆ ಕಳ್ಳಕಟ್ಟುವದು ಜಾಸ್ತಿ.ಹಾ೦ಗಾಗಿ ನಿ೦ಗೊ ಬರದ ಲೇಖನವ ಓದಲೆ ಹೇಳಿದ್ದೆ.ಒಪ್ಪ೦ಗಳೊಟ್ಟಿ೦ಗೆ
ನಿಂಗಳ ಒಪ್ಪಕ್ಕೆ ಧನ್ಯವಾದ ಮಾವ… 🙂
ಡಾಗುಟ್ರಕ್ಕಾ! ಒಳ್ಳೇ ಮಾಹಿತಿ ಕೊಟ್ಟಿದಿ… ಎಣ್ಣೆ ಕಿಟ್ಟಿ ಮೀ ಮಗಾ ಹೇಳಿ ಅಜ್ಜಿ ಹೇಳುವಾಗ ಆನು ಹೆಚ್ಚಾಗಿ ಜಾಗೆ ಖಾಲಿ ಮಾಡ್ಯೊಂಡಿತ್ತಿದ್ದೆ. (ಈಗಳೂ ರಜ ಹಾಂಗೆಯೆ).. ಆದರೆ ಬೌಷ ಇನ್ನು ರಜ ಅಲೋಚನೆ ಮಾಡೆಕ್ಕಾವುತ್ತೋ ಹೇಳಿ! ಧನ್ಯವಾದಂಗೊ! 🙂
ತು೦ಬಾ ಒಳ್ಳೆ ಮಾಹಿತಿ ಕೊಟ್ಟಿದಿ ಡಾಕ್ಟ್ರಕ್ಕ…..ನಿ೦ಗೊಗೆ ಎನ್ನ ತು೦ಬು ಹ್ರುದಯದ ಧನ್ಯವಾದ೦ಗೊ.. 🙂
ಒಳ್ಳೆ ಮಾಹಿತಿ ಡಾಕ್ಟ್ರಕ್ಕ. ನಾವೆಲ್ಲ ಹಬ್ಬದ ದಿನ ಒಂದು ಗೌಜಿಲಿ ಎಣ್ಣೆ ಕಿಟ್ಟಿ ಮೀತ್ತು. ಅದೂ ನಿಂಗ ಹೇಳಿದ ರೀತಿಲಿ ಕ್ರಮಾಗತವಾಗಿ ಏನೂ ಅಲ್ಲ. ಅದರ ಮಹತ್ವ ಎಂತರ ಹೇಳಿ ನಮ್ಮಲ್ಲಿ ಅನೇಕರಿಂಗೆ ಗೊಂತಿಲ್ಲೆ. ತಿಳಿಶಿಕೊಟ್ಟದಕ್ಕೆ ಧನ್ಯವಾದಂಗೊ.
ಒಳ್ಳೆ ಮಾಹಿತಿ ಕೊಟ್ಟಿದಿರಿ.ಹೀಂಗೆ ಬರೆತ್ತಾ ಇರಿ.
ಧನ್ಯವಾದ ಗೋಪಾಲಣ್ಣ…ನಿಂಗಳ ಎಲ್ಲೋರ ಪ್ರೋತ್ಸಾಹ ಇದ್ದರೆ ಸಾಕು… 🙂
ತೈಲ ಅಭ್ಯಂಗದ ಮಾಹಿತಿ ತುಂಬಾ ಪ್ರಯೋಜನಕಾರಿಯಾಗಿದ್ದು..ಧನ್ಯವಾದಂಗೋ ಡಾಕುಟ್ರಕ್ಕಾ..
Beautifully written and I think the essence of abhyanga has been delicately touched upon. thank you.
ಧನ್ಯವಾದ ಮಾಣಿ… 🙂
ತಲೆಬರಹ ನೋಡಿ, ಬೋಸಂಗೆ ದಿನಾಗಿಲು ಮೀಯೆಕು ಹೇಳಿ ಡಾಕ್ಟ್ರು ಹೇಳ್ತಾ ಇದ್ದವಾಯ್ಕು ಹೇಳಿಲ್ ಗ್ರೇಶಿದೆ ! ಇದು ಹಾಂಗಲ್ಲ. ದಿನಾಗಿಲು ಎಣ್ಣೆ ಕಿಟ್ಟಿ ಮೀಯೆಕು ಹೇಳಿ. ವರ್ಷಲ್ಲಿ ಒಂದರಿ ದೀಪಾವಳಿಗೆ ಮಾಂತ್ರ ಮಿಂದರೆ ಸಾಲ, ದಿನಾಗಿಲೂ ಮಾಡಿರೆ ಆರೋಗ್ಯಕ್ಕೆ ಒಳ್ಳೆದು ಹೇಳಿದ್ದವು ಡಾಕ್ಟ್ರಕ್ಕ. ಒಳ್ಳೆ ವಿಚಾರಯುಕ್ತ ಲೇಖನ. ಧನ್ಯವಾದಂಗೊ.
ಆನು ದಿನಾಗ್ಳು ಹೊಳೆಲ್ಲಿ ಮೀತೆ ಮಾವ.. !! 🙁
ಏ ಬೋಸ,ನಿನ್ನ ನೋಡಿದರೆ ದಿನಾ ಮೀವೋನ ಹಾಂಗೆ ಕಾಣ್ತಿಲ್ಲೆ.. 😉 ಮೀತ್ತರೂ ಇನ್ನು ಮುಂದೆ ಮೀವಗ ಎಣ್ಣೆ ಕಿಟ್ಟಿ,ಕಡ್ಲೆ ಹೊಡಿ ಹಾಕಿ ಮೀ… ಅಷ್ಟಪ್ಪಗ ನೀನೂ ನೆಗೆಗಾರನ ಹಾಂಗೆ ಬೆಳಿ ಬೆಳಿ ಆಗಿ ಫಳ ಫಳ ಹೊಳೆತ್ತೆ ನೋಡು ಬೇಕಾರೆ!!!! 🙂
ಬೋಸಭಾವಾ! ಹೊಳೆಲಿ ಮೀವದು ಸರಿಯೇ, ಮತ್ತೆ ಹೊಳೆದಂಡೆಲಿ ಹೊರಳುತ್ತೆಡಾ! ಅದೆಂತಕೆ!?? 😉