Oppanna.com

Euthanasia-ದಯಾಮರಣ : ಬೇಕಾ? ಬೇಡದಾ?

ಬರದೋರು :   ಸುವರ್ಣಿನೀ ಕೊಣಲೆ    on   07/03/2011    24 ಒಪ್ಪಂಗೊ

ಸುವರ್ಣಿನೀ ಕೊಣಲೆ

ಮನುಷ್ಯನ ಜೀವನಲ್ಲಿ ಎಲ್ಲಕ್ಕಿಂತ ಮುಖ್ಯವಾದ್ದು ಯಾವುದು? ಹೀಂಗಿದ್ದ ಒಂದು ಪ್ರಶ್ನೆ ಕೇಳೀರೆ ಒಬ್ಬೊಬ್ಬಂದು ಒಂದೊಂದು ಉತ್ತರ ಬಕ್ಕು. ಕೆಲವು ಜೆನ ಮೌಲ್ಯಂಗೊಕ್ಕೆ ಹೆಚ್ಚು ಬೆಲೆ ಕೊಟ್ಟರೆ ಇನ್ನು ಕೆಲವು ಜೆನ ಪೈಸೆಗೆ ಆದ್ಯತೆ ಕೊಡುಗು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದು ಸುಮ್ಮನಿಪ್ಪಲಕ್ಕು, ಎಲ್ಲಿಯವರೆಗೆ ಅದು ಸಮಾಜಕ್ಕೆ ತೊಂದರೆ ಉಂಟುಮಾಡ್ತಿಲ್ಲೆಯೋ ಅಲ್ಲಿಯವರೆಗೆ. ಒಬ್ಬ ತನ್ನ ಸಂತೋಷಕ್ಕೆ ಇನ್ನೊಬ್ಬನ ಕೊಲೆ ಮಾಡ್ತರೆ ’ಅವರವರ ಭಾವ…’ ಹೇಳಿ ಕೂದರೆ ಸರಿಯಾ? ಎನಗೆ ಸರಿ ಕಂಡದು ನಿಂಗೊಗೆ ತಪ್ಪು ಅನ್ಸುಗು, ನಿಂಗೊ ಸರಿ ಹೇಳ್ತ ಕೆಲವು ಎನ್ನ ಪ್ರಕಾರ ಸರಿ ಅಲ್ಲದ್ದೆ ಇಕ್ಕು. ಹೀಂಗಿಪ್ಪಗ ಇಂದು ಕೋರ್ಟು ಕೊಟ್ಟ ಒಂದು ತೀರ್ಪಿನ ಬಗ್ಗೆ ಚರ್ಚೆ ನಡದರೆ ಹೇಂಗೆ ಹೇಳ್ತ ಆಲೋಚನೆ ಬಂತು.

‘ಅರುಣಾ ಶಾನುಭಾಗ್’ ಹೇಳ್ತ ನರ್ಸ್ ಒಂದರ ಜೀವನದ ಬಗ್ಗೆ…..ಸುಮಾರು 37 ವರ್ಷದ ಹಿಂದೆ ಆದ ಘಟನೆ, ಮುಂಬೈಯ ಒಂದು ಆಸ್ಪತ್ರೆಲಿ ನರ್ಸ್ ಆಗಿ ಕೆಲಸ ಮಾಡ್ತಾ ಇತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕೂಸು. ನಿಷ್ಠೆಲಿ ರೋಗಿಗಳ ಸೇವೆ ಮಾಡಿಗೊಂಡು ಇತ್ತಿದ್ದು. ಒಬ್ಬ ಡಾಕ್ಟ್ರನ ಒಟ್ಟಿಂಗೆ ಮದುವೆಯೂ ನಿಶ್ಚಯ ಆಗಿತ್ತಿದ್ದು. ಯಾವುದೋ ದ್ವೇಷಲ್ಲಿ ಅದೇ ಆಸ್ಪತ್ರೆಯ ಒಬ್ಬ ವಾರ್ಡ್ ಬಾಯ್ ಒಂದು ದಿನ ಇರುಳು ಅದರಮೇಲೆ ಅತ್ಯಾಚಾರ ಮತ್ತೆ ಕೊಲೆಯ ಪ್ರಯತ್ನ ಮಾಡಿದ. ತಪ್ಪು ಮಾಡಿದ ಪಾಪಿಗೆ ಏಳು ವರ್ಷದ ಜೈಲು ಶಿಕ್ಷೆ ಆತಡ… ಆದರೆ ಉಸಿರುಗಟ್ಟುಸುಲೆ ಪ್ರಯತ್ನ ಮಾಡಿ ಸಂಕೋಲೆಂದ ಕೊರಳು ಒತ್ತುವಗ ಉಂಟಾದ ಪೆಟ್ಟಿಂದಾಗಿ ಆ ಕೂಸಿನ ಇಡೀ ಜೀವನ ಇದ್ದೂ ಇಲ್ಲದ್ದ ಹಾಂಗೆ ಆತು. ಇಂದಿಂಗೂ ಅದು ಆ ಆಸ್ಪತ್ರೆಯ ಒಂದು ಕೋಣೆಲಿ ಇದ್ದು..ಆದರೂ ಇಲ್ಲೆ 🙁 ಅಲ್ಲಿಯಾಣ ಜೆನಂಗೊ ಅದರ ಲಾಯ್ಕಲ್ಲಿ ನೋಡಿಗೊಳ್ತಾ ಇದ್ದವಡ ಹೇಳುದೇ ಸಮಾಧಾನದ ವಿಷಯ. ಎಷ್ಟು ಪ್ರೀತಿಕೊಟ್ಟರೂ ಆರೈಕೆ ಮಾಡಿರೂ ಅದು ಮೊದಲಾಣ ಹಾಂಗೆ ಆಗ ಹೇಳುದು ವಾಸ್ತವ 🙁

ಮೂವತ್ತೇಳು ವರ್ಷಂದ ಹಾಸಿಗೆಲಿಯೇ ಇಪ್ಪ ಆ ಜೀವ…ತನ್ನ ಕೆಲಸ ಮಾಡಿಗೊಂಬಲೆ ಎಡಿಯದ್ದೆ, ಮಾತು ಇಲ್ಲದ್ದೆ, ಎದ್ದು ಓಡಾಡುಲೆ ಎಡಿಯದ್ದೆ ಬದುಕಿ(?)ದ್ದು. ಇದು ಜೀವನವಾ? ಹೇಳ್ತ ಪ್ರಶ್ನೆ ಸುಮಾರು ಜೆನಕ್ಕೆ ಕಾಡುಗು…ಅದರ ಒಂದು ಸ್ನೇಹಿತೆಗೂ ಹಾಂಗೇ ಅನ್ಸಿತ್ತು. ಹೀಂಗಿದ್ದ ಜೀವನಂದ ಸಾವೇ ಒಳ್ಳೆದು ಹೇಳಿ ಅನ್ಸಿತ್ತು ಅದಕ್ಕೆ. ಆದರೆ ಹಾಂಗೆ ಒಬ್ಬ ವ್ಯಕ್ತಿಯ ಕೊಲ್ಲುಲೆ ಎಡಿಯನ್ನೇ. ಹಾಂಗಾಗಿ ಕಾನೂನು ರೀತ್ಯಾ ದಯಾಮರಣ (euthanasia) ಸಿಕ್ಕುಗಾ ಆ ಜೀವಕ್ಕೆ ಹೇಳಿ ನ್ಯಾಯಾಲಯಲ್ಲಿ ಕೇಳಿದವ್ವು. ದಯೆ ಇದ್ದರೂ ಕೂಡ ಮರಣ ’ಮರಣ’ವೇ ಅಲ್ಲದಾ? ಒಂದು ರೀತಿಲಿ ಕೊಲೆ. ಅದು ತಪ್ಪಲ್ಲದಾ? ಆದರೆ ಜೀವ ಮಾಂತ್ರ ಇಪ್ಪ ಜೀವನಂದ ಮರಣವೇ ಸುಖ ಅಲ್ಲದಾ? ಹೀಂಗೆಲ್ಲ ಜಿಜ್ಞಾಸೆಗೊ..ವಾದ ವಿವಾದಂಗೊ. ಎಲ್ಲರಿಂಗೂ ಅದು ತಪ್ಪು ಅನ್ಸುತ್ತು ಆದರೆ ಕೆಲವು ಸಂದರ್ಭಲ್ಲಿ ಸರಿ ಹೇಳಿ ಅನ್ಸುತ್ತು. ಆಲೋಚನೆ ಮಾಡ್ತಾ ಹೋದಹಾಂಗೆ ನಾವೇ ಗೊಂದಲಲ್ಲಿ ಸಿಕ್ಕಿಹಾಕಿಗೊಳ್ತು.

ಇದೇ ವಿಷಯದ ಬಗ್ಗೆ ಒಂದು ಸಿನೆಮಾ ಮಾಡಿದ್ದವು ಹಿಂದಿ ಭಾಷೆಲಿ. ಥಿಯೇಟರಿಲ್ಲಿ ಹೆಚ್ಚು ಓಡಿದ್ದಿಲ್ಲೆ, ನಿರೀಕ್ಷೆಯಷ್ಟು ಯಶಸ್ಸು ಸಿಕ್ಕಿದ್ದಿಲ್ಲೆ. ಆದರೆ ಆ ಸಿನೆಮಾ ನೋಡಿದ ವ್ಯಕ್ತಿ ಒಂದರಿ ಆಲೋಚನೆ ಮಾಡೆಕಾದ ಸಾಮಾಜಿಕ ಕಳಕಳಿಯ ಒಂದು ವಿಚಾರ ಇಪ್ಪದಪ್ಪು. ಎನಗೆ ಇಷ್ಟ ಆತು ಈ ಸಿನೆಮಾ. ’ಗುಜಾರಿಶ್’ ಹೇಳ್ತ ಸಿನೆಮಾ ಸಾಧ್ಯ ಆದರೆ ನೋಡಿ. ಇದರಲ್ಲಿ ಒಬ್ಬ ವ್ಯಕ್ತಿ ಕೊರಳಿಂದ ಕೆಳ ಶಕ್ತಿ ಇಲ್ಲದ್ದೆ (paralysis) ಇರ್ತ. ಅವನೂ ದಯಾಮರಣಕ್ಕೆ ಅನುಮತಿ ಬೇಕು ಹೇಳಿ ಕೇಳ್ತ. ಆದರೆ ಕೋರ್ಟು ಅನುಮತಿ ಕೊಡ್ತಿಲ್ಲೆ. ಆದರೆ ಅವನ ತುಂಬಾ ಲಾಯ್ಕಕ್ಕೆ ಅಷ್ಟೂ ವರ್ಷ ನೋಡಿಗೊಂಡ ಅವನ ನರ್ಸ್ ಅವಂಗೆ ದಯಾಮರಣವ ದಯಪಾಲಿಸುತ್ತು…. ಮನಸ್ಸಿಂಗೆ ತಟ್ಟುತ್ತು ಈ ಕಥೆ  ‘ಅರುಣಾ ಶಾನುಭಾಗ್’ ನ ಜೀವನದ ಕಥೆಯ ಹಾಂಗೆ.

ಸುಮಾರು ಸಮಯಂದ ಬಾಕಿ ಇದ್ದ ಅರುಣಾ ಶಾನುಭಾಗ್ ನ ಕೇಸಿಂಗೆ ಇಂದು ಕೋರ್ಟು ಮುಕ್ತಿ ಕೊಟ್ಟತ್ತು. ಕೋರ್ಟು ಇಂದು ಕೊಟ್ಟ ತೀರ್ಪು ಹೀಂಗಿತ್ತು… ದಯಾಮರಣಕ್ಕೆ ನಮ್ಮ ದೇಶಲ್ಲಿ ಅನುಮತಿ ಇಲ್ಲೆ. ಆದರೆ ಅರುಣಂಗೆ passive euthanasia ಕೊಡ್ಲಕ್ಕು ಹೇಳಿ ಕೋರ್ಟು ಅನುಮತಿ ಕೊಟ್ಟಿದು. ಆದರೆ active euthanasia ಕೊಡ್ಲೆ ಅನುಮತಿ ಇಲ್ಲೆ. ಈಗ ಇಲ್ಲಿ passive euthanasia ಮತ್ತೆ  active euthanasia ಕ್ಕೆ ಇಪ್ಪ ವ್ಯತ್ಯಾಸ ಎಂತರ?

  • Active euthanasia ಹೇಳಿರೆ ದಯಾಮರಣಕ್ಕೆ ಒಳಪಡುವ ವ್ಯಕ್ತಿಯ ಚುಚ್ಚುಮದ್ದು ಕೊಟ್ಟು ಅಥವಾ ಇನ್ನು ಯಾವುದೇ ವಿಧಾನಂದ ಕೊಲ್ಲುದು.
  • Passive euthanasia ಹೇಳಿರೆ ಆ ವ್ಯಕ್ತಿಗೆ ಬದುಕ್ಕುಲೆ ಅವಶ್ಯಕವಾದ ವಸ್ತುಗಳ ಪೂರೈಕೆ ನಿಲ್ಸುದು. ಉದಾಹರಣೆಗೆ ಕೆಲವು ಅಗತ್ಯ ಇಪ್ಪ ಮದ್ದುಗಳ ಕೊಡದ್ದೆ ಇಪ್ಪದು, ಅಥವಾ ಉಸಿರಾಟಕ್ಕೆ ಹಾಕಿಪ್ಪ ಆಮ್ಲಜನಕವ ನಿಲ್ಲುಸುದು ಇತ್ಯಾದಿ.

ಹೀಂಗಿದ್ದ ಒಂದು ತೀರ್ಪು ಬಂದಪ್ಪಗ ಈಗ ಮತ್ತೆ ಚರ್ಚೆಗೊ ಗೊಂದಲಂಗೊ ವಿರೋಧಂಗೊ ಶುರು ಆಯ್ದು. ಒಂದೋ ಎರಡೋ ದೇಶಂಗಳಲ್ಲಿ ಅದರ ಕಾನೂನು ಸಮ್ಮತ ಹೇಳಿ ಮಾಡಿದರೂ ಕೂಡ ಪ್ರಪಂಚದ ಹೆಚ್ಚಿನ ಜೆನ ಇದರ ವಿರೋಧಿಸುತ್ತವು. ಒಂದು ವಾದ ಎಂತರ ಹೇಳಿರೆ ಜೀವಚ್ಛವ ಆಗಿ ಇಪ್ಪದಕ್ಕಿಂತ ಸಾವದೇ ಒಳ್ಳೆದು. ಆದರೆ ಸಾವು ಮನುಷ್ಯನ ಕೈಲಿದ್ದ? ಅದು ದೇವರ ಇಚ್ಛೆ, ಹಾಂಗಾಗಿ ಸಾವು ಬಂದಪ್ಪಗಳೇ ಸಾಯಕು ಹೇಳ್ತದು ಇನ್ನೊಂದು ವಾದ. ಇದರಲ್ಲಿ ಯಾವುದು ಸರಿ? ಒಂದುವೇಳೆ ಅಂತಹ ಅನಿವಾರ್ಯ ಸಂದರ್ಭಲ್ಲಿ, ವ್ಯಕ್ತಿ ಬದುಕ್ಕುದಕ್ಕಿಂತ ಸಾವದೇ ಮೇಲು ಹೇಳ್ತ ಸ್ಥಿತಿಲಿ ಇಪ್ಪಗ ದಯಾಮರಣ ಕೊಡ್ಲಕ್ಕು ಹೇಳಿ ಕಾನೂನು ಮಾಡಿರೆ ಅದು ದುರ್ಬಳಕೆ ಆಗದಾ? ಎಲ್ಲಾ ಕಾನೂನುಗಳನ್ನೂ ದುರ್ಬಳಕೆ ಮಾಡ್ತ ಜೆನಂಗೊ ಇಪ್ಪಗ ಒಬ್ಬ ವ್ಯಕ್ತಿಯ ಕೊಲ್ಲುಲೆ ಕಾನೂನು ಒಪ್ಪಿಗೆ ಕೊಡ್ತು ಹೇಳಿ ಆದರೆ ಸಂದರ್ಭವ ಅದಕ್ಕೆ ಬೇಕಾದ ಹಾಂಗೆ ಬದಲಾವಣೆ ಮಾಡುದು, ಅದರಿಂದಾಗಿ ಲಾಭ ಪಡಕ್ಕೊಂಬಂತಹ ಅಪರಾಧಂಗೊ ಆಗ ಹೇಳಿ ಯಾವ ಧೈರ್ಯ? ಹಾಂಗಾಗಿ ಅದು ದುರ್ಬಳಕೆ ಅಪ್ಪ ಸಾಧ್ಯತೆಗಳೇ ಹೆಚ್ಚು. ಆದರೆ ದಯಾಮರಣ ಸಾಧ್ಯವೇ ಇಲ್ಲೆ ಹೇಳಿ ಆದರೆ ಕೆಲವು ಸಂದರ್ಭಂಗಳಲ್ಲಿ, ಕೆಲವು ಸರ್ತಿ ಒಬ್ಬ ವ್ಯಕ್ತಿಯ ಕರುಣಾಜನಕ ಸ್ಥಿತಿ ನೋಡುವಗ…ಆ ಸ್ಥಿತಿಲಿ ಜೀವಂತ ಇಪ್ಪದರ ನೋಡುವ ಕಷ್ಟ ಬೇಕಾ? ಆ ಬದುಕೂ ಒಂದು ಬದುಕಾ? ಬದಲಿಂಗೆ ಮುಕ್ತಿ ಸಿಕ್ಕಿರೆ ಆ ಜೀವಕ್ಕೆ..? ಈ ಒಂದು ಆಲೋಚನೆಯೂ ಬತ್ತು ಮನಸ್ಸಿಂಗೆ. ಆದರೆ…ಒಬ್ಬ ವ್ಯಕ್ತಿಯ ಸಾವು ಬಾರದ್ದೆ ಕೊಲ್ಲುದು ಸರಿಯಾ?ಕಾರಣ ಏನೇ ಇದ್ದರೂ ಕೂಡ ಅವರವರ ಕರ್ಮಫಲಕ್ಕೆ ಅನುಸಾರ ಬದುಕು-ಬವಣೆ-ಸಾವು….

ಯಾವುದು ಸರಿ ಯಾವುದು ತಪ್ಪು ಹೇಳ್ತ ಗೊಂದಲಂಗಳೊಟ್ಟಿಂಗೆ ಬೈಲಿಲ್ಲಿ ಈ ಬಗ್ಗೆ ಒಂದು ಆರೋಗ್ಯಕರ ಚರ್ಚೆ ಆಗಲಿ ಹೇಳ್ತ ಉದ್ದೇಶದೊಟ್ಟಿಂಗೆ ನಿಂಗಳ ಮುಂದೆ ಈ ವಿಷಯವ ಮಡುಗಿದ್ದೆ.

Euthanasia = good death , eu=good, thanatos=death.  ಇದು ಗ್ರೀಕ್ ಭಾಷೆಂದ ಬಂದ ಶಬ್ದ.

-ನಿಂಗಳ

ಸುವರ್ಣಿನೀ ಕೊಣಲೆ

24 thoughts on “Euthanasia-ದಯಾಮರಣ : ಬೇಕಾ? ಬೇಡದಾ?

  1. ಎಲಿಪಾಷಾಣ ಇದ್ದು , ಸಿಕ್ಕುತ್ತು ಹೇಳಿ ನೆರೆಕರೆ ಖಂಡು ನಾಯಿ ಬತ್ತು ಹೇಳಿ ಕಂಡ ಕಂಡಲ್ಲಿ ನಾವು ಮಡುಗುತ್ತೋ ಎಂತ?!

  2. ದಯಾ ಮರಣ … ಇದು ಬೇಡ ಹೇಳಿ ಎನ್ನ ಆಭಿಪ್ರಾಯ. ಎಂತ ಹೇಳಿರೆ ಈಗಾಣ ಯುವ ಜನಾಂಗ ಉಪಯೋಗಕ್ಕೆ ಬಾರದ್ದವರ ಎಲ್ಲರ ಕೊಲ್ಳುಗು. ಈ ಕಾನೂನಿನ ಉಪಯೋಗ ದಿಂದ ದುರುಪಯೋಗವೇ ಜಾಸ್ತಿ ಅಕ್ಕೂ

  3. ಬಾಲಣ್ಣ ಹೇಳಿದ್ದು ಕೂಡ ಖಂಡಿತ ಗಮನುಸೆಕ್ಕದ ಅಂಶವೇ.
    ನಮ್ಮ ಭಾರತೀಯ ಪುರಾಣಂಗಳಲ್ಲಿ ತತ್ತ್ವಗ್ರಂಥಂಗಳಲ್ಲಿ ಹುಟ್ಟು ಸಾವಿನ ಬಗ್ಗೆ ಪ್ರಪಂಚದ ಬೇರೆ ಏವದೇ ಭಾಗಲ್ಲಿಯೂ ಮಾಡದ್ದಷ್ಟು ಆಳವಾಗಿ ವಿಸ್ತಾರವಾಗಿ ವಿಶ್ಲೇಷಣೆ ಮಾಡಿದ್ದವು.
    ಒಂದು ದೃಷ್ಟಿಲಿ ನೋಡಿರೆ ಶ್ರೀಕೃಷ್ಣ ಭೀಷ್ಮಂಗೆ ಕರುಣಿಸಿದ್ದೂ ದಯಾಮರಣವೇ ಅಲ್ಲದೊ?
    ಅರುಣಾ ಶ್ಯಾನುಭಾಗ್ ನ ಪರಿಸ್ಥಿತಿ ನೋಡುವಗ ಅದಕ್ಕೆ ಇಹಬಂಧನಂದ ಮೋಕ್ಷ ಸಿಕ್ಕಲಿ ಹೇಳಿ ತೋರ್ತು.

    ಡಾಕ್ಟ್ರಕ್ಕಾ, Euthanasia- ಇದರ ಹೇಂಗೆ ಓದೆಕ್ಕಾದ್ದು? ‘ಯುತನೇಶಿಯಾ’ ಹೇಳಿಯೇ ಆಗಿಕ್ಕು ಅಲ್ಲದೊ?

    ಒಳ್ಳೆಯ ವಿಷಯವ ಸಕಾಲಿಕವಾಗಿ ಬೈಲಿಲ್ಲಿ ಚಿಂತನೆಗೆ ಮಡುಗಿದ್ದಕ್ಕೆ ಧನ್ಯವಾದಂಗೊ

  4. ದಯೆ ಇದ್ದವಕ್ಕಷ್ಟೇ ದಯಾಮರಣದ ಬಗ್ಗೆ ಯೋಚನೆ ಮಾದ್ಲೆ ಎಡಿಗಕ್ಕು ! Brain death is death OR heart beat stoppage is death ? ಕೋರ್ಟುಗೊ ಇನ್ನೂ ಇದರ ಇತ್ಯರ್ಥ ಮಾದಡಿದ್ದವಿಲ್ಲೆಯೋ ಹೇಳಿ ಸಂಶ್ಯ.
    ಇಂದಿನ ಎಲ್ಲಾ ಕಾನೂನು, ಜೀವನದ ಇಂದ್ರಾಣ ಎಲ್ಲ ನಾಗರೀಕತೆ ಹೇಳುವದೂ ಕೂಡಾ ಕ್ರಿಶ್ಚಿಯಾನಿಟಿಯಿಂದ ಪ್ರಭಾವಿತ್ ಆದ್ದದು ಹೇಳಿ ವಎನ್ನ ನಂಬಿಕೆ . { ಓದಿಃ ವಿಜಯದ್ಕ…ವಿಜಯಕರ್ನಾಟ್ಕ…}
    ಮಿತಾಕ್ಶರನ ಮಿತಿಗೊಳಿಸಿ, ಪಾಸ್ಚಾತ್ಯ ವಿಕ್ರುತಿಗಳ ಸ್ವೀಕಾರ ಮಾಡಿದ ನಾವು, ನಮ್ಮ “ಕಾಯುವ ಕುರುಬರ ಮೂಲಕ”
    ಎಂ ಪಿ ಗೊಕ್ಕೆ ” ಗೇ ರೈಟ್ಸ್” ಬಗ್ಗೆ ಇಪ್ಪ ಆಸಕ್ತಿ, ಗೋ ರೈಟ್ಸ್’ ಬಗ್ಗೆ ಇದ್ದೋ ?
    ಸಾತ್ವಿಕ ಕ್ರೋಧ ರಜಾ ರಾಜಸ ಆಯೆಕು, ನಾವು ಕದೇ ಪಕ್ಷ ಈ ಸರ್ತಿ ಕೇರಳ ದ ಚುನಾವಣೇ ಯ ಸಮಯಲ್ಲಿ, ಗೋ ರೈಟ್ಸ್ ಬಗ್ಗೆ ನಮ್ಮ ಓಟು ಹೇಳುವೋ !

    ನಮ್ಮ ಸನಾತನ ನಂಬಿಕೆಗಳಲ್ಲಿ ಒಪ್ಪಿಗೊಂಡ ಸಂಗತಿಗಳಲ್ಲಿ, ಸಮಾಧಿಯೂ ಇದ್ದಲ್ಲದೋ ? ಜೈನ ನಂಬಿಕೆಗಳಲ್ಲಿ ಸಲ್ಲೇಖನ ಹೇಳಿ ಒಂದು ವ್ರತ.. ಶಾರೀರಿಕ ಜೀವನದ ಅಂತ್ಯ.. ಇದ್ದು !

    ನಾವೂ ಪುನರ್ಜನ್ಮ …’ವಾಸಾಂಸಿ ಜೀರ್ಣಾನಿ ಯಥಾ ವಿಹಾಯ….’ ಎಲ್ಲ ಒಪ್ಪಿದವು. ಈ ರೀತಿ ಯೋಚನೆ ಮಾಡಿಯಪ್ಪಗ, ವೈದ್ಯಕೀಯವಾಗಿಯೂ, ಪಾರಮಾರ್ಥಿಕವಾಗಿಯೂ ,ಮುಗುದವಕ್ಕೆ ಹೋಪ ದಾರಿ ಕಟ್ಟಲಾಗ. ಇದು ಎನ್ನ ಅಭಿಪ್ರಾಯ.

  5. ದಯಾಮರಣದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದು ಸುವರ್ಣಿನಿ ಅಕ್ಕ. ಗೋಪಾಲಣ್ಣ ಹೇಳಿದ ಹಾಂಗೆ ದಯಾಮರಣಕ್ಕೆ, ವಿಶೇಷ ಸಂದರ್ಭಲ್ಲಿ ಅವಕಾಶ ಬೇಕೇ ಬೇಕು. ಅದು ದುರ್ವಿನಿಯೋಗ ಆಗದ್ದ ಹಾಂಗೆ ಕಾನೂನಿನ ವ್ಯವಸ್ಥೆ ಇಪ್ಪಲೇ ಬೇಕು.
    Passive euthanasia ದ ಬಗ್ಗೆ ಲೇಖನ ಓದಿದ ಮತ್ತೆ ಸರೀ ಗೊಂತಾತು. ಆದರೆ ಹಾಂಗೆ ಮಾಡುತ್ತು ಹೇಳಿರೆ, ಆ ರೋಗಿಗೆ ಬೇಕಾದ ಮದ್ದು, ಆಮ್ಲಜನಕ ಎಲ್ಲ ಕೊಡದ್ದೆ, ಮತ್ತೂ ಹೆಚ್ಚಿನ ಕಷ್ಟ ಬರುಸಿ, ನರಳುಸಿ ಕೊಲ್ಲುತ್ತದು ಹೇಳಿ ಆವುತ್ತಿಲ್ಲೆಯೊ ? ಅದರಿಂದ Active euthanasia ವೇ ಒಳ್ಳೆದಲ್ಲದೊ ? ಆರಿಂಗೂ ದಯಾಮರಣ ಕೊಡೆಕಾಗಿ ಬತ್ತ ಗತಿ ಬಾರದ್ದೆ ಇರಳಿ ಹೇಳಿ ಪ್ರಾರ್ಥಿಸುವೊ.

    1. ಮದ್ದು ನಿಲ್ಸುದು ಅಥವಾ ಆಮ್ಲಜನಕ ನಿಲ್ಸುದು ಹೇಳಿ ಆನು ಉದಾಹರಣೆ ಕೊಟ್ಟದು, ಸುಲಭಕ್ಕೆ ಅರ್ಥ ಅಪ್ಪಲೆ. ಆ ವ್ಯಕ್ತಿಯ ಬದುಕ್ಕುಸುಲೆ ಹೆಚ್ಚಿನ ಪ್ರಯತ್ನ ಮಾಡದ್ದೆ ಇಪ್ಪದು ಹೇಳಿ ಒಂದು ಅರ್ಥಲ್ಲಿ ಹೇಳುಲಕ್ಕು ಕಾಣ್ತು. ಇದ್ದ ಹಾಂಗೇ ಬಿಟ್ಟು ಬಿಡುದು. ಆದರೆ ನಿಂಗೊ ಹೇಳಿದ ಹಾಂಗೆ ಮನುಷ್ಯ ಸಾವನ್ನಾರ ಹೆಚ್ಚು ನರಳುವ ಹಾಂಗೆ ಮಾಡುವ ಸಾಧ್ಯತೆ ಇಪ್ಪದಪ್ಪು.
      ‘ಆರಿಂಗೂ ದಯಾಮರಣ ಕೊಡೆಕಾಗಿ ಬತ್ತ ಗತಿ ಬಾರದ್ದೆ ಇರಳಿ ಹೇಳಿ ಪ್ರಾರ್ಥಿಸುವೊ’ – ಖಂಡಿ..ತಾ ದೇವರ ದಯೆಂದ ಅಂತಹ ಜೀವನ ಆರಿಂಗೂ ಇಲ್ಲದ್ದ ಹಾಂಗೆ ಆಗಲಿ….

  6. ಡಾಗುಟ್ರಕ್ಕಾ,
    ಸರಿಯಾದ ಸಮಯಕ್ಕೆ ನಿ೦ಗಳ ಈ ಚಿ೦ತನೆ ಬೈಲಿ೦ಗೆ ಬ೦ತು.
    ನ್ಯಾಯಾಲಯದ ತೀರ್ಪು ಕೇಳಿ ನರ್ಸುಗೊ ಸಿಹಿತಿ೦ಡಿ ಹ೦ಚುವ ಪಟ ಕ೦ಡತ್ತು.ಹಾ೦ಗಾರೆ ಅರುಣಾನ ಶುಶ್ರೂಷೆ ಮಾಡಿ ಅದು ಬದುಕ್ಕಿರಳಿ ಹೇಳಿ ಬಯಸುವವು ಸುಮಾರು ಜೆನ೦ಗೊ ಇದ್ದವು ಹೇಳಿ ಆತು ಹೇಳಿ ಆನು ಅ೦ದಾಜಿ ಮಾಡಿದ್ದು.
    ಗೋಪಾಲಣ್ನನ ಮಾತು ಸರಿಯಾಗಿದ್ದು.ಆದರೆ ಈಗ ಮನುಷ್ಯರಲ್ಲಿ ಸ್ವಾರ್ಥ ಮನೋಭಾವ ಎಲ್ಲಾ ಹೊಡೆ ತು೦ಬಿದ್ದು.ದಯಾಮರಣದ ಕಾನೂನು ಬ೦ದರೆ ೈಲ್ಲಿಯೂ ಜೆನ ಸಾಲುಗಟ್ಟಿ ನಿಲ್ಲಉಗು ಹೇಳುವ ಹೆದರಿಕೆ ನ್ಯಾಯಾಲಯಕ್ಕೆ ಇಪ್ಪ ಕಾರಣ ಈ ತೀರ್ಪು ಬ೦ದದಾಯಿಕ್ಕು.
    ನಿಜ ನೋಡ್ತರೆ ಜೀವನಲ್ಲಿ ಕೃತಕ ಬದುಕು, ಕೃತಕ ಸಾವು ಈ ಎರಡೂ ಬಾರದ್ದೇ ಇದ್ದರೆ ಸ೦ತೋಷ ಅಲ್ಲದೋ?
    ಈ ಲೇಖನ ಓದಿ passive euthanasia ಸುಲಾಭಲ್ಲಿ ಅರ್ಥ ಆತು.ಧನ್ಯವಾದ.

    1. ಅದು ಬದುಕ್ಕಿರೆಕು ಹೇಳಿ ಅವ್ವು ಗ್ರೆಷುದು ಒಳ್ಳೆದೇ..ಆದರೆ ಆ ಸ್ಥಿತಿಲಿ ಇನ್ನೂ ಸುಮಾರು ವರ್ಷ ಇರಲಿ ಹೇಳಿ ಹೇಂಗೆ ಹೇಳುದು? ಆದಎ ಅಶ್ಟು ಪ್ರೀತಿಲಿ ಇಪ್ಪಗ ಕೊಲ್ಲುದಾದರೂ ಹೇಂಗೆ? ಮಹೇಶಣ್ಣ ಹೇಳಿದ ಹಾಂಗೆ ಧರ್ಮಸಂಕಟ… ಅರ್ಜುನ ಧರ್ಮಸಂಕಟಲ್ಲಿ ಸಿಕ್ಕಿಹಾಕಿಪ್ಪಗ ಶ್ರೀಕೃಷ್ಣ ಉತ್ತರ ಹೇಳಿದ… ಈಗಲೂ ಅಷ್ಟೇ..ಎಲ್ಲವನ್ನೂ ದೇವರಿಂಗೇ ಬಿಡೆಕಷ್ಟೆ………………………………..

  7. ದಯಾಮರಣ ಹೆಳೂದು ಬೇಕೆ ಬೀಕು ಹೆಳೂದು ಎನ್ನ ಅನಿಸಿಕೆ.

  8. ದಯಾಮರಣ ಅಗತ್ಯ ಇದ್ದು-ಈ ರೀತಿಯ ದೀರ್ಘಾವಧಿಯ ಪ್ರಯೋಜನದ ಆಶೆಯೇ ಇಲ್ಲದ್ದ ಪ್ರಕರಣಲ್ಲಿ.
    ಆದರೆ,ಅದರ ಜಾರಿ ಮಾಡಲೆ-ಐದು ವೈದ್ಯರ [ಜಿಲ್ಲಾ ಶಸ್ಸ್ತ್ರ ವೈದ್ಯರ ಯಾ ವಿಶೇಷ ವೈದ್ಯರ]ತಂಡ ತೀರ್ಮಾನ ತೆಕ್ಕೊೞೆಕ್ಕು-ಮತ್ತೆ ಕೋರ್ಟಿನ ಒಪ್ಪಿಗೆ ತೆಕ್ಕೊೞೆಕ್ಕು.ಸಂಬಂಧಿಕರ ಒಪ್ಪಿಗೆ ಬೇಕೇ ಬೇಕು.-ಹೇಳಿ ನಿಯಮ ಮಾಡೆಕ್ಕು.
    ಈ ಹೆಳೆಲಿ ಆರನ್ನೂ ಕಾರಣ ಇಲ್ಲದ್ದೆ ಕೊಂದತ್ತು ಹೇಳಿ ಅಪ್ಪಲಾಗ ಹೇಳಿ ಎನ್ನ ಅನಿಸಿಕೆ.
    [ಮರಣದಂಡನೆ ಇನ್ನೊಂದು ವಿಷಯ-ಅದು ಒಂದು ಶಿಕ್ಷೆ-ಅದು ಬೇಕೇ ಬೇಕು-ಇಲ್ಲದ್ದರೆ ದುಷ್ಟರಿಂಗೆ ಭಯ ಹುಟ್ಟ.]
    ದಯಾಮರಣ ಬಲು ಅಪರೂಪಲ್ಲಿ,ಹತ್ತು ವರ್ಷಂದಲೂ ಹೆಚ್ಚು ಸಮಯ ಜೀವಚ್ಛವ ಆಗಿಪ್ಪವಕ್ಕೆ ಮಾತ್ರಪರಿಶೀಲಿಸಲೆ ಅಕ್ಕು ಹೇಳಿ ಕಾನೂನು ಮಾಡೆಕ್ಕು.

    1. ಅಪ್ಪು, ಕೆಲವೊಂದು ಸಂದರ್ಭಂಗಳಲ್ಲಿ ದಯಾಮರಣ ಕೊಡ್ಲಕ್ಕು ಹೇಳಿ ಕೆಲವು ಸಂದರ್ಭಂಗಳ ಪಟ್ಟಿ ಮಾಡ್ಲಕ್ಕು, ಅದರೊಟ್ಟಿಂಗೆ ನಿಂಗೊ ಹೇಳಿದ ಹಾಂಗೆ ಎಲ್ಲದಕ್ಕೂ ಐದೋ ಹತ್ತೋ ಜೆನರ ತಂಡ ಮಾಡೆಕ್ಕು. ಅಂಬಗ ಕಾನ್ನೂನಿನ ದುರ್ಬಳಕೆಯ ರಜ್ಜ ಮಟ್ಟಿಂಗೆ ತಪ್ಸುಲೆ ಎಡಿಗು

  9. ಏ ಅಕ್ಕಾ,- ನಿಂಗೊ ಏವುದರಲ್ಲಿ ಎಲ್ಲಾ ಡಾ. ಮಾಡಿದಿರೋ, ಮಾಡ್ತಾ ಇದ್ದಿರೋ, ಮಾಡ್ಲೆ ಇದ್ದಿರೋ ಹೀಂಗೇ ಒಂದು ಚರ್ಚೆ ಸುರುಮಾಡುತ್ತವಡ ಬೈಲಿಲ್ಲಿ. ಹೀನ್ಗೊಂದು ಡಾ ಶುದ್ದಿ.

    ದೀಪಾವಳಿ ದೀಪ ಬೆಳಗಿಸಿ ಪಟಾಕಿ ಹೊಟ್ಟಿಸಿ ಪಟಕಲ ಪಾಯಸ ಮಾಡಿದಿ. ಅಡಿಬೇನೆ ಸುರುಮಾಡಿ ತಲೆಬೇನೆ ವರೇಗೆ ತಂದಿ.

    ಆಹಾರಲ್ಲೂ ಶುಚಿ, ಬರೆತ್ತದರಲ್ಲೂ ಶುಚಿ. ಹೇಳಿದ್ದದಷ್ಟು ಬರದ್ದದಷ್ಟು – ಟ ಠ ಡ ಢ , ಪೆಟ್ಟೊಂದು ತುಂಡೆರಡು. ವಿಷಯ ಮಂಡನೆ , ವಾಕ್ಯಜೋಡಣೆ ಅಷ್ಟೂ ಚೊಕ್ಕ ನಿರರ್ಗಳ , ಗೊಂಕ್ರು ಕೆಪ್ಪೆಯಾಂಗೆ ತಪುಕ್ಕನೆ ಹಾರದ್ದೆ.

    ಕಾನೂನು ತಪ್ಪು ಅಂತ ಹೇಳ್ಕೊಂಬ್ಲೇ ನಮ್ಗೆ ಎಡಿಯ. ಅಂತೂ ನಮ್ ಬೈಲಿಲಿ ವಿಚಾರ ಚರ್ಚೆ ಅಂತ ಮಡ್ಕ್ಯೊಂಡ್ರೆ –

    ಮರಣದಂಡನೆ ನಮ್ಮ ಕಾನೂನಿಲ್ಲಿ ಇಪ್ಪಗ, ದಯಾಮರಣ ಕೊಡ್ಳಕ್ಕು ಎನ್ನತ್ರೆ ಕೇಳಿರೆ (ಆರೂ ಕೇಳಿದ್ದವಿಲ್ಲೆ) . ಏವಾಗ ಜೀವ ಇದ್ದೂ ಅವಂಗೂ ಪ್ರಯೋಜನಕ್ಕಿಲ್ಲದ್ದೆ, ಇತರರಿಂಗೂ ಏನೂ ಮಾಡ್ಲೆ ಎಡಿತ್ತಿಲ್ಲ್ಯೋ, ಕೊನೆಘಳಿಗೆ ಮಾತ್ರ ಕಾಯ್ತನೊ ಆಶಕ್ತನಾಗಿ, ಅವರ ಶೀಘ್ರ ವಿಮೋಚನೆ ಮಾಡೆಕು . ಕಾನೂನಿನ ಬೇಕಪ್ಪಗ ಬೇಕಾದ ಹಾಂಗೆ ತಿದ್ದುಪಡಿ ಮಾಡುತ್ತ ಆ ‘ನಮ್ಮ ಜೆನಂಗೊಕ್ಕೆ’ ಇದರನ್ನೂ ರಜಾ ತಿದ್ದಿ ನಿಭಂದನಾ ವಿಧಿ ಹೇಳಿ ಮಾಡ್ಕ್ಯೊಂಡು ಈ ಜೀವಚ್ಚವ ನರಕಯಾತನೆಂದ ಮುಕ್ತಿ ಮಾಡೆಕು ಹೇಳಿ ಎನ್ನ ಒಪ್ಪ.

    1. ಚೆನ್ನೈ ಭಾವಂಗೆ ನಮಸ್ಕಾರಂಗೊ ..ಮತ್ತೆ ಧನ್ಯವಾದಂಗೊ 🙂 ’ಹೇಳಿದ್ದಷ್ಟೂ ಟ ಠ ಡ ಢ ’ – ಇದರ ಅರ್ಥ ಗೊಂತಾಯ್ದಿಲ್ಲೆ !
      ಎಲ್ಲ ವಿಷಯಲ್ಲೂ ಆಸಕ್ತಿ ಇಪ್ಪಗ ಎಲ್ಲವನ್ನೂ ಬರವ ಮನಸ್ಸಾವ್ತು!
      ಯೋಗ, ಪ್ರಕೃತಿ ಚಿಕಿತ್ಸೆ, ಮನೋ ವಿಜ್ಞಾನ, ವೈದ್ಯಕೀಯ ವಿಚಾರಂಗೊ – ಇದಿಷ್ಟು ಎನ್ನ ವೃತ್ತಿ.
      ಅಡಿಗೆ,ಕಲೆ,ಸಾಹಿತ್ಯ ಇತ್ಯಾದಿ- ಇದೆಲ್ಲ ಆಸಕ್ತಿಗೊ ! ಇನ್ನು….ಬರವಣಿಗೆ ರಕ್ತಗತವಾಗಿ ಬಂದದು (ಬಹುಶಃ)!! ನಿಂಗಳೇ ಹೇಳಿ ಯಾವುದರ ಬಿಡುದು?

      ದಯಾಮರಣದ ಬಗ್ಗೆ ಕಾನೂನು ಮಾಡಿತ್ತು ಹೇಳಿ ಆದರೆ..ಅದರ ದುರ್ಬಳಕೆ ಅಪ್ಪ ಸಾಧ್ಯತೆ ಹೆಚ್ಚಿದ್ದು ಅಲ್ಲದಾ? ವರದಕ್ಷಿಣೆ ಕಾನೂನಿನ ಹಾಂಗೆ !!

      1. ’ಹೇಳಿದ್ದಷ್ಟೂ ಟ ಠ ಡ ಢ ’ – ಇದು ಆನು ಹೇಳಿದ್ದದು ಅಲ್ಲ ಅಕ್ಕಾ., ಉಡುವೆಕ್ಕೋಡಿ ಮಾವ ಒಂದಿಕ್ಕೆ ಹೇಳಿದ್ದು ಇಲ್ಲಿ ನೆಂಪಾದ್ದು. ಯಾವ ಬಿರುಕು (ಸಂಶಯ) ಇಲ್ಲದ್ದೆ – ಪೆಟ್ಟೊಂದು ತುಂಡೆರಡು. – ಅಷ್ಟೂ ಕೃಷ್ಟಲ್ ಕ್ಲಿಯರ್. ಬಹು ವಿಷಯ ಬರದರೂ ಎಲ್ಲವೂ ಚೊಕ್ಕಕೆ ಬರದ್ದಿ ಹೇಳಿ ಬೈಲಿನ ಈ ಹೊಡೆಂದ ನಮ್ಮದು ಒಪ್ಪ .

          1. ಚೆನ್ನೈ ಭಾವನ ಒಪ್ಪ ಸುವರ್ಣಿನಿಯಕ್ಕಂಗೆ ಇನ್ನೂ ಸ್ಪಷ್ಟ ಆಗಲಿ ಹೇಳಿ ಎಡೇಲಿ ಬಾಯಿಹಾಕಿದ್ದು- ‘ಉಡುವೆಕ್ಕೋಡಿ ಮಾವ’ ಹೇಳಿರೆ ಚೊಕ್ಕಾಡಿ ಹತ್ತರೆ ಇಪ್ಪ ಉಡುವೆಕ್ಕೋಡಿ ಸುಬ್ಬಪ್ಪಯ್ಯ ಹೇಳುವ ಪ್ರಸಿದ್ಧ ವಾಗ್ಮಿ, ಯಕ್ಷಗಾನ ಅರ್ಥಧಾರಿ

          2. ಧನ್ಯವಾದ ಈಗ ಸರಿಯಾಗಿ ಗೊಂತಾತು 🙂

  10. ಸಾವು ಕೃತಕವಾಗಿ ಬಪ್ಪಲಾಗ.
    ಆದರೆ ಇಲ್ಲಿ – ಆ ಜೀವ ದೇಹ೦ದ ಬೇರೆ ಅಪ್ಪಲೆ ಯಾವತ್ತೇ ಸಿದ್ಧವಾಗಿದ್ದಿಕ್ಕು. ಜೀವನವನ್ನೇ ಕೃತಕವಾಗಿ ಉಳುಸಿದ್ದದಲ್ಲದೊ?
    ಕೃತ್ರಿಮ ಬದುಕಿನ ಕೊಟ್ರೆ “ಅನಾಯಾಸೇನ ಮರಣಂ , ವಿನಾ ದೈನ್ಯೇನ ಜೀವನಂ” ಇದೆರಡನ್ನುದೆ ಇಲ್ಲದ್ದ ಹಾ೦ಗೆ ಮಾಡಿದ ಹಾಂಗಾಗದೋ?
    ದಯಾಮರಣ ಕೊಟ್ಟು ಕೊಲೆಯ ಆರೋಪ ಆ ಸ್ಥಿತಿಯ ತ೦ದ ಪಾಪಿಗೆ ಬತ್ತ ಹಾ೦ಗೆ ಕಾನೂನು ಇರೆಕಾತು.

    ಕೆಲವು ವಿಷಯ೦ಗಳ ಕಾನೂನುಬದ್ಧಗೊಳಿಸಲೆ ಎಡಿಯ. ಧರ್ಮಸ೦ಕಟದ ವಿಚಾರ ಬಪ್ಪಗ ಕಾಲ, ಪರಿಸ್ಥಿತಿಯ ಅವಲೋಕಿಸಿ ನಿರ್ಣಯ ತೆಕ್ಕೊಳ್ಳೆಕಷ್ಟೆ..

    ವಾರ್ತೆ ನೋಡಿ ಆ ತೀರ್ಪು ಎ೦ತದು ಹೇಳಿಯೇ ಅರ್ಥ ಆಗಿತ್ತಿಲ್ಲೆ. ಸುವರ್ಣಿನಿ ಅಕ್ಕ ಮಾಹಿತಿಯ ಸ೦ಶಯ ಇಲ್ಲದ್ದ ಹಾ೦ಗೆ ಸರಿಯಾಗಿ ಒದಗುಸಿದ್ದಿ.

    1. ಸರಿಯಾದ ಪದಪ್ರಯೋಗ ಮಾಡಿದ್ದಿ ಅಣ್ಣ, ’ಧರ್ಮಸಂಕಟ’ !
      ಅಂತಹ ಪರಿಸ್ಥಿತಿಲಿ ಬದುಕ್ಕುದು ಎಷ್ಟು ಕಷ್ಟ ಹೇಳಿ ಅನುಭವಿಸುವವಕ್ಕೇ ಗೊಂತು…
      ವಿಮರ್ಶೆ ಮಾಡಿದಷ್ಟೂ ಗೊಂದಲಂಗಳೇ ಹೆಚ್ಚಾವ್ತಾ ಹೋವ್ತು ಈ ವಿಚಾರಲ್ಲಿ.

    2. “ಅನಾಯಾಸೇನ ಮರಣಂ , ವಿನಾ ದೈನ್ಯೇನ ಜೀವನಂ” ಹೇಳ್ತದು ತುಂಬಾ ಅರ್ಥವತ್ತಾದ ಮಾತು. ಒಂದು ಸಣ್ಣ ವಾಕ್ಯ..ಆದರೆ ಅರ್ಥ ವಿಸ್ತಾರ ತುಂಬಾ ಇದ್ದು….

  11. ಈ ವಿಚಾರದಲ್ಲಿ ಕುತೂಹಲಕ್ಕೆ ಮಾತ್ರ ಚರ್ಚೆ ಮಾಡಳಕ್ಕು. ಸರಿತಪ್ಪು ಹೇಳುವ ಕಾನೂನು ಇದಕ್ಕೆ ಸಮ ಆಗತಿಲ್ಲೇ!
    ಕಾನೂನು ಎಂಬದೆ ಓಂದು ಕೃತಕವಾದ್ದು. ಅದರ್ ವಿಚಾರದಾಗೆ ಚರ್ಚೆ ಶುರು ಆದ್ರೆ ಅಸ್ಟೆಯ ಮತ್ತೆ !

    1. ಒಬ್ಬ ವ್ಯಕ್ತಿಯ ಸಾವು ಅಥವಾ ಬದುಕು ಅನ್ನೋದು ಆಲೋಚನೆ ಮಾಡಬೇಕಾದ ವಿಚಾರ. ಇದು ಹೀಗೇ ಆಗ್ಬೇಕು ಅಂತ ಹೇಳಕಾಗ್ತಲ್ಲೆ, ಯಾವ್ದೇ ವಿಷ್ಯದ್ ಮೇಲೆ ಚರ್ಚೆ ವಿಮರ್ಶೆಗಳು ನಡೆದ್ರೆ ಮಾತ್ರ ಅದರ ಎಲ್ಲಾ ಆಯಾಮಗಳನ್ನೂ ನೋಡಿದ ಹಾಗಾಗತ್ತೆ, ಅಲ್ದಾ? ಮಂಥನ ನಡೀಬೇಕು. ಕಾನೂನು ಏನು ಹೇಳ್ತು..ಏನು ಮಾಡ್ತು ಅನ್ನೋದು ನಮ್ಮ ಕೈಲಿ ಇಲ್ಲೆ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×