Oppanna.com

ಶರ ಕುಸುಮ ಭೋಗ – ಷಟ್ಪದಿಗಳ ಮರದರೆ ಆಗ!!

ಬರದೋರು :   ಒಪ್ಪಣ್ಣ    on   01/04/2011    86 ಒಪ್ಪಂಗೊ

ಗೋಕರ್ಣಂದ ಎತ್ತಿದ ಬಚ್ಚಲು ಇನ್ನುದೇ ಸಮಗಟ್ಟು ಹೋಯಿದಿಲ್ಲೆ, ಒರಕ್ಕುದೇ ಸರಿ ಬಿಟ್ಟಿದಿಲ್ಲೆ.
ಬಸ್ಸಿಲಿ ಕೂದು ಕೊಚ್ಚೆಗಟ್ಟಿದ ಕಾಲು ಸರಿ ಆಗಲಿ – ಹೇಳಿಗೊಂಡು ಮೊನ್ನೆ ಬೈಲಿಲೇ ನೆಡಕ್ಕೊಂಡು ಎತ್ತಿದ್ದು ಚೌಕ್ಕಾರು ಮಾವನಲ್ಲಿಗೆ.

ಅಂತೇ ಹೋದ್ದಲ್ಲ, ಅಲ್ಲಿಯಾಣ ಅಜ್ಜಿತಿತಿ ಹೇಳಿಕೆ ಇತ್ತು ಒಪ್ಪಣ್ಣಂಗೆ 🙂
ಒಪ್ಪಣ್ಣಂಗೆ ಮಾಂತ್ರ ಅಲ್ಲ ಇದಾ, ಮಾಷ್ಟ್ರುಮಾವಂಗೂ ಇತ್ತು, ಗಣೇಶಮಾವಂಗೂ ಇತ್ತು..
ಅವರಲ್ಲಿ ತಿತಿ, ಪೂಜೆಯಷ್ಟು ಗೌಜಿ ಅಲ್ಲದ್ದರೂ – ಬೈಲಿನ ಆಪ್ತೇಷ್ಟರಿಂಗೆ ಹೇಳಿಕೆ ಇರ್ತು!
ಗಣೇಶಮಾವನ ಬೈಕ್ಕಿಲಿ ಮಾಷ್ಟ್ರುಮಾವ° ಕೂದಂಡ ಬಯಿಂದವು, ಅಜ್ಜಕಾನಬಾವನ ಬೈಕ್ಕಿಲಿ ನಾವು ಕೂದೊಂಡು ಹೋಗಿತ್ತು!
~
ಚೌಕಾರುಮಾವನೇ ತುಂಬ ಹೆರಿಯೋರು; ಅವರ ಹೆರಿಯೋರ ತಿತಿ ಇದು! – ಅವರ ಅಬ್ಬೆ ಚೌಕ್ಕಾರು ಅಜ್ಜಿ – ಆಚೊರಿಶ ತೀರಿಗೊಂಡದಷ್ಟೇ!
ತೊಂಬತ್ತೊರಿಶಂದಲೂ ಮೇಗೆ ಬದ್ಕಿದ ಪುಣ್ಯವಂತೆ ಅವು! ಆಗಲಿ, ಆಯುಷ್ಯ ಮುಗುದ ಮತ್ತೆ ದೇವರ ಹತ್ತರಂಗೆ ಹೋಪಲೇ ಬೇಕನ್ನೇ!
ಅದೇನೇ ಇರಳಿ,ಯೇವತ್ರಾಣಂತೇ ತಿತಿ ಚೆಂದಕೆ ಕಳಾತು. ಪ್ರಾಚೀನಾವೀತಿ, ಪಿಂಡ ಪ್ರದಾನ – ಇತ್ಯಾದಿಗಳ ಶ್ರದ್ಧಾಭಗ್ತಿಲೇ ಮಾಡಿಗೊಂಡವು ಚೌಕ್ಕಾರುಮಾವ. ಪಿತೃಕಾರ್ಯಕ್ಕಪ್ಪಗ ಅವಕ್ಕೆ ಪ್ರಾಯ ಆತು ಹೇಳಿ ಅನುಸುತ್ತೇ ಇಲ್ಲೆ!
~
ತಿತಿ ಕಳುದು, ಪರಾದೀನದವರ ಊಟ ಆತು ಹೇಳಿತ್ತುಕಂಡ್ರೆ ಮತ್ತೆ ಸೇರಿದೋರಿಂಗೆ ಊಟ.
ಪ್ರಸ್ತುತ ಕಾಲಮಾನದ, ಜಾಯಮಾನದ ಸುಮಾರು ವಿಶಯಂಗಳ ಮಾತಾಡಿಗೊಂಡು ಉಂಡೆಯೊ°.
ಉಂಡಾದ ಮತ್ತೆ `ಬೆಶಿಲಿಂಗೆ ರಜ ಮನುಗುವೊ°’ ಹೇಳಿದ° ಅಜ್ಜಕಾನಬಾವ°.
ಹಾಂಗೆ ಜೆಗಿಲಿಮೂಲೆಲಿ ಸುರುಟಿ ಮಡಗಿದ ಹುಲ್ಲಹಸೆಯ ಒಂದೊಂದೇ ಬಿಡುಸಿಗೊಂಡು ಹಸೆಮಾಡಿದೆಯೊ°.ಬೆಶಿಲಿಂಗೆ ಒರಕ್ಕು ಬಪ್ಪದು ಬೇಗ; ಹೊಟ್ಟೆ ತುಂಬ ಜೆಂಬ್ರದೂಟ ಇದ್ದರೆ ಮತ್ತೂ ಬೇಗ ಇದಾ!! 😉
ಗಟ್ಟಿ ಒಡೆ, ಚೀಪೆ ಶುಕ್ರುಂಡೆ, ಎಣ್ಣೆಪಸೆಯ ಸುಟ್ಟವು – ಇದೆಲ್ಲವನ್ನೂ ಮನುಗಿದಲ್ಲೇ ಕರಗುಸೇಕು! ಸುಲಬದ ಕೆಲಸ ಅಲ್ಲ.
ತುಂಬ ಹೊತ್ತು ಬೇಕಾವುತ್ತು, ನಿಧಾನಕ್ಕೆ ಕರಗಲೆ! 😉
ನಾವುದೇ ಏನೂ ಅಂಬೆರ್ಪು ಮಾಡಿದ್ದಿಲ್ಲೆ, ನಿಧಾನಕ್ಕೆ ಕರಗಲೆ ಅವಕಾಶ ಕೊಟ್ಟು ಒರಗಿದೆ!
ಒಪ್ಪಣ್ಣ ಹೆರಡುವನ್ನಾರ ಅಜ್ಜಕಾನಬಾವಂಗೆ ಹೆರಡ್ಳೆ ಗೊಂತಿಲ್ಲೆ. ಗಣೇಶಮಾವನೂ ಒರಗಲೆ ಜಾರಿದಕಾರಣ ಮಾಷ್ಟ್ರುಮಾವನೂ ಬಾಕಿ ಆದವು!

ಒಂದೊರಕ್ಕು ಆಗಿ ಏಳುಲಪ್ಪಗ ಬೆಶಿಲೂ ತಣುದತ್ತು, ಹೊಟ್ಟೆಯೂ ತಣುದಿತ್ತು.
ಮೆಲ್ಲಂಗೆ ಎದ್ದು – ಎಲ್ಲಿ ಮನುಗಿದ್ದು ಹೇಳಿ ಅತ್ತಿತ್ತೆ ನೋಡಿಗೊಂಡು – ಎದ್ದಲ್ಲಿಯೇ ಮನುಗಿದ್ದಪ್ಪನ್ನೇ – ಹೇಳಿ ಧೃಢಮಾಡಿಗೊಂಡು ಹಸೆಮಡುಸಿ ಕೂದೆ.
ಹೆಚ್ಚಿನೋರು ಎಲ್ಲ ಹೆರಟಾಯಿದು. ಇನ್ನು ಬೈಲಿನ ಕೆಲವೇ ಜೆನ ಬಾಕಿ – ಅಷ್ಟೆ.
~
ಒಪ್ಪಣ್ಣ ಒರಗಿಪ್ಪನ್ನಾರ ನಿಶ್ಶಬ್ದ ಮವುನ ಇದ್ದ ನೆಂಪು! ಈಗ ನೋಡಿರೆ ಚೌಕ್ಕಾರುಪುಳ್ಳಿದು ಜೋರು ಗಲಾಟೆ.
ಮನೆಗೆ ಹೋಪಾ – ಹೇಳಿ ಅಮ್ಮನ ಹತ್ರೆ – ಚೌಕ್ಕಾರು ಮಾವನ ಮಗಳು ಚೌಕ್ಕಾರತ್ತಿಗೆಯ ಹತ್ತರೆ – ರಚ್ಚೆ ಹಿಡಿತ್ತಾ ಇದ್ದ°!
ಆದರೆ ಅತ್ತಿಗೆ ಅಪುರೂಪಲ್ಲಿ ಅಪ್ಪನ ಮನೆಗೆ ಬಪ್ಪದಿದಾ, ಒಂದೆರಡು ದಿನ ಕೂಪದು ಕ್ರಮ,
ಕಡಮ್ಮೆಲಿ ಮರದಿನ ಹೋಕಷ್ಟೆ – ಈಗಾಣೋರ ಹಾಂಗೆ ಅದೇ ದಿನ ಹೋಪ ಮರಿಯಾದಿ ಅಂತೂ ಇಲ್ಲಲೇ ಇಲ್ಲೆ!
ಹಾಂಗೆ, ಮಗ ಹಟಮಾಡಿಗೊಂಡು ಇದ್ದ ಹಾಂಗೇ, ಅತ್ತಿಗೆ ಒಳ ಹೊತ್ತಪ್ಪಗಾಣ ಚಾಯಕ್ಕೆ ತೆಯಾರು ಮಾಡಿಗೊಂಡು ಇತ್ತು!

ಒರಕ್ಕಿನ ಕಣ್ಣಿಲೇ ಮೋರೆತೊಳದು ಬಂದು ಬೆಂಚಿಲಿ ಕೂದೊಂಡೆಯೊ°.
ಚೌಕ್ಕಾರುಮಾವ° ಮಾಷ್ಟ್ರುಮಾವನ ಹತ್ರೆ ಎಲೆತಿಂಬಲೆ ಕೇಳಿದವು.
ಮಾಷ್ಟ್ರುಮಾವ° ಎಲ್ಲಿಗೆ ಹೋವುತ್ತರೂ ಎಲೆತೊಟ್ಟೆ ತೆಕ್ಕೊಂಗಿದಾ – ಅದು ಚೌಕ್ಕಾರುಮಾವಂಗೂ ಅರಡಿಗು!
ಅವು ನಿತ್ಯಕ್ಕೆ ತಿನ್ನವು, ಆದರೆ ಸಂಗಾತಕ್ಕೆ ಆರಾರು ಸಿಕ್ಕಿಪ್ಪಗ ತಿನ್ನದ್ದೆ ಬಿಡವು!
ಚೌಕ್ಕಾರುಮಾವ° ಎಲೆತಿಂಬಲೆ ಕೇಳಿಅಪ್ಪದ್ದೇ, ಒಳಂದ ಅವರ ಮಗಳು ಈಗ ಚಾಯ ತತ್ತೆ – ಹೇಳಿತ್ತು.
ಹಾಂಗೆ ಎಲ್ಲೋರುದೇ ಮಾತಾಡಿಗೊಂಡು ಚಾಯಕ್ಕೆ ಕಾದುಗೊಂಡು ಕೂದಂಡವು.
~
ಈ ಶೂನ್ಯವೇಳೆಲಿ ಗಣೇಶಮಾವ° ಒಂದೊಳ್ಳೆ ಶುದ್ದಿ ತೆಗದವು.
ಮುಳಿಯಭಾವ ಬೈಲಿಲಿ ಬಾಮಿನಿಲಿ ಶುದ್ದಿ ಹೇಳ್ತವು, ಇದಾ- ಒಂದು ಪ್ರತಿ ಇಲ್ಲಿದ್ದು – ಹೇಳಿಗೊಂಡು,
ಮುಳಿಯಬಾವನ ಭಾಮಿನಿಯ ಒಂದು ಪ್ರತಿ ಕಾಗತಲ್ಲಿ ಬರದ್ದರ ಚೌಕ್ಕಾರುಮಾವಂಗೆ ಕೊಟ್ಟವು.
~
ಚೌಕ್ಕಾರುಮಾವ ಮೂಲತಃ ಕನ್ನಡ ವಿದ್ವಾಂಸರು!
ಮಹಾಜನ ಕೋಲೇಜಿಲಿ ಸಂಸ್ಕೃತ ವಿದ್ವತ್ತು ಆದ ಮೇಗೆ ಮೆಡ್ರಾಸಿಲಿ ಕನ್ನಡ ವಿದ್ವತ್ತು ಪಡಕ್ಕೊಂಡಿದವು.
ಕೇವಲ ನಮ್ಮ ಭಾಶೆಯಷ್ಟೇ ಅಲ್ಲದ್ದೆ  ಸಂಸ್ಕೃತ – ಕನ್ನಡಲ್ಲಿಯೂ ಸಮಾನವಾಗಿ ಸಾಹಿತ್ಯಶೆಗ್ತಿ ಇಪ್ಪ ಚೌಕ್ಕಾರುಮಾವನ ಹತ್ತರೆ – ನಮ್ಮ ಗಣೇಶಮಾವ ಒಂದೊಂದರಿ ಸಾಹಿತ್ಯಿಕ ವಿಮರ್ಶೆ ಮಾಡ್ತದು ಇದ್ದು..!
ಇಂದುದೇ ಹಾಂಗೆ, ಇಲ್ಲಿಗೆ ಬಪ್ಪ ಮದಲೇ ಮುಳಿಯಭಾಮಿನಿಯ ಕಾಗತಲ್ಲಿ ಮಾಡಿ ಒಸ್ತ್ರಚೀಲಲ್ಲಿ ಮಡಿಕ್ಕೊಂಡಿದವು.
ಈಗ ಸಂದರ್ಭನೋಡಿ ನೋಡ್ಳೆ ಕೊಟ್ಟವು.
~
ಚೌಕ್ಕಾರುಮಾವ° ಒಂದೇ ಉಸುಲಿಂಗೆ ಈ ಭಾಮಿನಿಯ ಓದಿ ಮುಗೂಳುನೆಗೆಮಾಡಿಗೊಂಡವು!
ತರವಾಡುಮನೆ ಶುದ್ದಿಲಿ ಬೋಸಬಾವನ ನೆಂಪಾತೋ – ಏನೋ!
ಅದೇನೇ ಇರಳಿ, ಭಾಮಿನಿಯ ನೋಡಿ ತುಂಬಾ ಒಳ್ಳೆ ಮಾತುಗಳ ಹೇಳಿದವು.
ಒಂದು ಪದ್ಯ ಅಂತೂ ಜೋರು ಓದಿಹೇಳಿದವು – ಪೀಶಕತ್ತಿಲಿ ಕುರ್ಶಿಕೈಗೆ ತಾಳ ಹಾಕಿಂಡು; ಹತ್ತರೆ ಕೂದ ಮಾಷ್ಟ್ರುಮಾವಂಗೂ, ಎಲ್ಲೋರಿಂಗೂ ಕೇಳ್ತ ನಮುನೆಲಿ.
ಓದಿ ಮುಗುದಾದ ಮೇಗೆ ಒಂದು ಸಣ್ಣ ವಿಮರ್ಶೆ ಮಾಡಿಗೊಂಡವು, ದೊಡ್ಡೋರು.
ತಾಳ, ಮಾತ್ರೆ, ಲಘು, ಗುರು- ಎಲ್ಲವೂ ಅಚ್ಚುಕಟ್ಟಾಗಿ ಜೋಡಣೆ ಆಯಿದು – ಹೇಳ್ತದರ ಮಾಷ್ಟ್ರುಮಾವಂದೇ ಒಪ್ಪಿಗೊಂಡವು.
ಭಾಮಿನಿಯ ಬೈಲಿಂಗೆ ಪರಿಚಯ ಮಾಡುಸಿ, ಅದರ ಇಂಪಿನ ಒಳಿಶಿ ಬೆಳೆಶಿದ ಮುಳಿಯಭಾವನ ಬಗ್ಗೆ ಕೊಶಿ ಪಟ್ಟುಗೊಂಡವು.
~
ಉರುಟು ಬಟ್ಳಿಲಿ ಐದಾರು ಗ್ಳಾಸು ಚಾಯ ಮಡಿಕ್ಕೊಂಡು, ಅಳಂಚದ್ದ ಹಾಂಗೆ ತಂದುಕೊಟ್ಟವು ಚೌಕ್ಕಾರತ್ತಿಗೆ.
ಮಾಣಿ ಅರ್ಗೆಂಟುಮಾಡ್ತರ ಎಡೆಲಿ ಅಳಂಚದ್ದ ಹಾಂಗೆ ತಪ್ಪದೂ ಒಂದು ದೊಡ್ಡ ಪಂಚಾತಿಗೆಯೇ!
ಅತ್ತಿಗೆ ಅಪ್ಪನಮನೆಗೆ ಬಂದಿಪ್ಪಾಗ ಅತ್ತೆಗೆ ರಜ ಪುರುಸೊತ್ತೇ ಇದಾ!
ಎಲ್ಲೋರುದೇ ಆಸರಿಂಗೆ ತೆಕ್ಕೊಂಡೆಯೊ°.
ಮದ್ಯಾನದ ಒಡೆಶುಕ್ರುಂಡೆ ಅಲ್ಲದ್ದೆ, ಹಲಸಿನ ಹಪ್ಪಳವ ಹೊರುದು ತಟ್ಟೆಲಿ ಮಡಗಿ ತಂದವು ಅತ್ತಿಗೆ!
ಅಜ್ಜಕಾನಬಾವ ಬೆಂಚಿಲೇ ಒಂದಿಂಚು ಮುಂದೆ ಕೂದುಗೊಂಡ, ತಿಂಡಿ ಬಟ್ಳು ಸರೀ ಕೈಗೆ ಸಿಕ್ಕುತ್ತನಮುನೆಗೆ! 😉
~
ಮಾಷ್ಟ್ರುಮಾವ° ಒಂದು ವಿಶಯ ಹೇಳಿದವು. ತುಂಬ ಆಲೋಚನೆ ಮಾಡಿಗೊಂಡು!
“ಮುಳಿಯಭಾವ ಭಾಮಿನಿಯ ಬಳಕೆ ಮಾಡಿ, ಬೈಲಿನೋರಿಂಗೆ ಗುರ್ತ ಮಾಡಿದ – ತುಂಬಾ ಒಳ್ಳೆದು.
– ಆದರೆ ಭಾಮಿನಿ ಅಲ್ಲದ್ದೇ ಇನ್ನೂ ಸುಮಾರು ಷಟ್ಪದಿಗೊ ಇದ್ದು ಕನ್ನಡಲ್ಲಿ. ಅದರನ್ನೂ ಆರಾರು ಗುರ್ತ ಮಾಡಿಕ್ಕುಗೋ – ಆರಾರು ಅದನ್ನೂ ಪರಿಚಯ ಮಾಡುಗೋ – ಅದರ್ಲಿಯೂ ಶುದ್ದಿ ಹೇಳುಗೋ?” – ಕೇಳಿಗೊಂಡವು.
ಒಪ್ಪಣ್ಣಂಗೆ ಒಂದರಿಯೇ ಕುತೂಹಲ ಬಂತು! ಭಾಮಿನಿ ಅಲ್ಲದ್ದೆ ಬೇರೇವದು ಇದ್ದು? ಕೇಳಿದೆ.
~

ಚೌಕ್ಕಾರುಮಾವ° ಹಪ್ಪಳದ ಅಟ್ಟಿಂದ ಕಮ್ಮಿ ಎಣ್ಣೆಇಪ್ಪ ಒಂದರ ಹುಡ್ಕಿಗೊಂಡು ಹೇಳಿದವು: ಶರ ಕುಸುಮ ಭೋಗ ಭಾಮಿನೀ ಪರಿವರ್ಧಿನೀ ವಾರ್ಧಕ – ಇದು ಆರು ಬಗೆಯ ಷಟ್ಪದಿಗೊ!
ಕನ್ನಡಲ್ಲಿ ಸಾವಿರಾರು ಕೃತಿಗೊ ರಚಿತ ಆಯಿದು, ಈ ಷಟ್ಪದಿಗಳ ಬಳಸಿಗೊಂಡು.
ಈಗ ಇದರ ಹತ್ತುಬಳಕ್ಕೆ ಕಮ್ಮಿ ಆಗಿ ಕರೆಂಗೆ ಹೋಗಿ ಮಾಸಲೆ ಸುರು ಆಯಿದು – ಹೇಳಿದವು!
ಹೋ! ಅದರ ಲಕ್ಷಣಂಗೊ ಎಂತರ ಅಂಬಗ? ಕೇಳಿದೆ.

ಷಟ್ಪದಿ:

ಷಟ್ಪದಿ ಹೇಳಿತ್ತುಕಂಡ್ರೆ ಆರು ಗೆರೆದು – ಇದು ನಮ್ಮ ಬೋಸಬಾವಂಗೂ ಅರಡಿಗು!
ಆದರೆ ಆ ಆರು ಗೆರೆ ಹೇಂಗೆ ಹಂಚುತ್ತದು? ಎಷ್ಟು ಅಕ್ಷರ ಇರೇಕು, ಎಷ್ಟು ಮಾತ್ರೆ ಇರೇಕು, ಪ್ರಾಸ ಹೇಂಗೆ ಇರೇಕು – ಇದೆಲ್ಲವನ್ನೂ ನಿರ್ಧಾರ ಮಾಡ್ತದೇ ಷಟ್ಪದಿಯ ಲಕ್ಷಣಂಗೊ ಅಡ! 🙂
ಮುಖ್ಯವಾಗಿ ಷಟ್ಪದಿಲಿ ಆರು ಗೆರೆ.

  • ಮೂರುಮೂರು ಗೆರೆಯ ಎರಡು ಹಂತ.
  • ಮೂರುಗೆರೆಲಿ ಮೊದಲ ಎರಡುಗೆರೆಗೊ ಒಂದು ನಮುನೆ,
    ಮೂರ್ನೇ ಗೆರೆ ಮೊದಲೆರಡು ಗೆರೆಯ ಒಂದೂವರೆ ಪಾಲು.
  • ಮೂರ್ನೇ ಗೆರೆಯ ಅಕೇರಿಗೆ ಒಂದು ಗುರು! ಎಂತದೇ ಮಾಡಲಿ, ಅಕೇರಿಗೆ ಒಂದು ಗುರುಗಳ ಆಶೀರ್ವಾದ ಇಲ್ಲದ್ದರೆ ಅಕ್ಕೋ? ಹೇಳಿದಾಂಗೆ – ಅಲ್ಲಿ, ಲಘು ಇದ್ದರೂ ಗುರು ಹೇಳಿಯೇ ಲೆಕ್ಕ ಅಡ!
    ಗುರು ಸಣ್ಣವೇ ಇರಳಿ, ದೊಡ್ಡವೇ ಇರಳಿ, ಸ್ಥಾನಬೆಲೆ ಗುರುವೇ ಅಲ್ಲದೋ? 🙂

ಲಘು – ಹೇಳಿರೆ ಒಂದು ಮಾತ್ರಾಕಾಲವೂ, ಗುರು- ಹೇಳಿರೆ ಎರಡು ಮಾತ್ರಾಕಾಲವೂ ಲೆಕ್ಕ ತೆಕ್ಕೊಳೇಕು! – ಹೇಳಿ ನೆಂಪು ಹೇಳಿದವು.
ನೆಗೆಗಾರನ ಚತುಷ್ಪದಿ ಓದಿ ಬೈಲಿನೋರಿಂಗೆ ಮಾತ್ರೆ ಹೆಚ್ಚಾಗಿ ಉಷ್ಣ ಜಾಸ್ತಿ ಆದ್ದು ಒಂದರಿ ನೆಂಪಾತು! 😉

  • ಇದಿಷ್ಟೇ ಅಲ್ಲ, ಆರೂ ಗೆರೆಯ ಸುರುವಿಂದ – ಎರಡ್ಣೇ ಅಕ್ಷರ ಒಂದೇ (ದ್ವಿತೀಯಾಕ್ಷರ ಪ್ರಾಸ) ಇರೆಕ್ಕಾಡ!!

ಗ್ರೇಶುವಗ ಸುಲಾಬ ಹೇಳಿ ಕಾಣ್ತು, ಆದರೆ ಕೂದಂಡು ಬರವಲೆ ಹೆರಟಪ್ಪಗ ಅದರ ಬಂಙ ಅರಡಿವದು – ಹೇಳಿದವು ನೆಗೆ ಮಾಡಿಗೊಂಡು!
~
ಇದಿಷ್ಟು ಎಲ್ಲಾ ಷಟ್ಪದಿಯ ಸಾಮಾನ್ಯ ನಿಯಮ. ಇನ್ನು ಪ್ರತ್ಯೇಕಪ್ರತ್ಯೇಕವಾಗಿ ನೋಡ್ತರೆ ಒಂದೊಂದು ಷಟ್ಪದಿಗೆ ಒಂದೊಂದು ಸ್ವಂತದ ನಿಯಮಂಗೊ ಇದ್ದು – ಹೇಳಿದವು.
ಶರ ಷಟ್ಪದಿಂದಲೇ ತೊಡಗಿ ಒಂದೊಂದೇ ವಿವರಣೆ ಕೊಡ್ಳೆ ಸುರುಮಾಡಿದವು ಚೌಕ್ಕಾರುಮಾವ.
~
ಶರ ಷಟ್ಪದಿ:
ಷಟ್ಪದಿಯ ಪೈಕಿಲೇ ಅತ್ಯಂತ ಸಣ್ಣದು, ಓದಲೆ ಸುರು ಮಾಡೀರೆ ಅಷ್ಟೇ ಬೇಗ ಮುಗಿತ್ತದು – ಶರ ಷಟ್ಪದಿ ಅಡ.
ತಾಳ ಹಾಕಿಂಡು ಓದಲೆ ಸುರು ಮಾಡಿರೆ ಬಾಣದ ಹಾಂಗೆ ಮುಂದೆ ಹೋವುತ್ತು – ಹೇಳ್ತ ಕಾರಣಲ್ಲಿಯೋ – ಏನೋ, ಇದರ ಶರ ಹೇಳ್ತದು- ಹೇಳಿ ಮಾಷ್ಟ್ರುಮಾವ° ಅಂದಾಜು ಮಾಡಿದವು.baratos mujer relojes

ಚೌಕ್ಕಾರುಮಾವಂಗೆ ಷಟ್ಪದಿಗಳ ಸೂತ್ರಂಗೊ ಕಂಠಸ್ಥ.
ಈ ಷಟ್ಪದಿಯ ಸೂತ್ರ ಹೀಂಗಡ:

  • ಸುರುವಾಣ ಎರಡು ಗೆರೆಗಳಲ್ಲಿ ಎಂಟು ಮಾತ್ರೆಗೊ –
    • ನಾಕ್ನಾಕು ಮಾತ್ರೆಯ ಎರಡು ಗುಂಪುಗೊ,
  • ಮೂರ್ನೇ ಗೆರೆಲಿ ಇದರ ಒಂದೂವರೆ ಪಾಲು, ಹೇಳಿತ್ತುಕಂಡ್ರೆ ಹನ್ನೆರಡು ಮಾತ್ರೆ,
  • ಮೂರ್ನೇಗೆರೆ ಕೊಡಿಯಂಗೆ ಒಂದು ಗುರು!
  • ಇದೇ ನಮುನೆ ಮತ್ತೆ ಮೂರುಗೆರೆ – ಷಟ್ಪದಿಯ ಉತ್ತರಾರ್ಧ
  • ದ್ವಿತೀಯಾಕ್ಷರ ಪ್ರಾಸ ಹೇಂಗೂ ಇದ್ದನ್ನೆ!

ಹ್ಮ್ ಹ್ಮ್, ಹೇಳಿ ತಲೆ ಆಡುಸಿದ ಒಪ್ಪಣ್ಣಂಗೆ ಏನೂ ಅರ್ತ ಆಯಿದಿಲ್ಲೆ ಹೇಳಿ ಅರ್ತ ಆದ ಅವು – ಅವರ ಮೇಜಿಲಿರ್ತ ಬೆಳಿ ತಾವುಕಾಗತ ಕಟ್ಟಂದ ಒಂದರ ತೆಗದು ಚೆಂದಮಾಡಿ ಬರವಲೆ ಸುರುಮಾಡಿದವು.
ನೋಡಿಗೊಂಡು ಇದ್ದ ಹಾಂಗೇ – ಕಾಗತಲ್ಲಿ ಹೀಂಗೆ ಬರದು ತೋರುಸಿದವು:

4 | 4
4 | 4
4 | 4 | 4 | 2 ||
4 | 4
4 | 4
4 | 4 | 4 | 2 ||

ಬೆಶಿಬೆಶಿ ಹಪ್ಪಳ ತಿಂದೊಂಡು ಕೂಪಗ ಮಗಳು ಹೊರುದ ಭಾವನೆ ನೆಂಪಾತೋ ಏನೋ – ಹೀಂಗೊಂದು ಷಟ್ಪದಿ ಕಟ್ಟಿ ಹೇಳಿದವು:
ಅಪ್ಪನ ಮನೆಯೊಳ
ಇಪ್ಪಗ ಒಂದಿನ
ಹಪ್ಪಳ ಹೊರಿವಲೆ ಮನಸಾತು!
ಕಪ್ಪಿನ ಬಾಣಲೆ
ಕುಪ್ಪಿಯ ಎಣ್ಣೆಯು
ರಪ್ಪನೆ ಕಾವಗ ಹೊರುದಾತು!!

ಚೆಲ! ಸಣ್ಣ ಸಣ್ಣ ಆರು ಗೆರೆಗಳಲ್ಲಿ ಇಡೀ ಒಂದು ಘಟನೆಯನ್ನೇ ಹೇಂಗೆ ಚಿತ್ರಣ ಮಾಡಿದವು – ಹೇಳಿ ಅನುಸಿ ಹೋತು ಒಂದರಿ.
ಅಷ್ಟು ಪಕ್ಕ ಷಟ್ಪದಿ ಮಾಡಿ ಹೇಳಿದ್ದರ ಮರದಿಕ್ಕುದು ಬೇಡ ಹೇಳಿಗೊಂಡು ಅದೇ ಕಾಗತಲ್ಲಿ ಬರಕ್ಕೊಂಬಲೆ ಸುರು ಮಾಡಿದೆ, ಅವು ಬರದ ಮಾತ್ರೆ ಗುಣಲಕ್ಷಣಂದಲೇ ಕೆಳ.
ಶರಷಟ್ಪದಿಯ ಇನ್ನೂ ಗುಣಲಕ್ಷಣಂಗಳ ಮಾಷ್ಟ್ರುಮಾವ ವಿವರವಾಗಿ ವಿವರುಸುವಗ ಒಪ್ಪಣ್ಣಂಗೆ ಪದ ಬರದಾಗಿತ್ತು.

ಒಪ್ಪಣ್ಣಂಗೆ ಬರದಾದ ಕೂಡ್ಳೆ ಕಾಗತ ಪುನಾ ತೆಕ್ಕೊಂಡು ಈ ನಮುನೆ ಮಾತ್ರೆ ಬರದು ತೋರುಸಿದವು:

–∪∪| ∪∪∪∪ |
ಪ್ಪನ | ಮನೆಯೊಳ |
–∪∪|  – ∪∪   |
ಪ್ಪಗ | ಒಂದಿನ     |
–∪∪| ∪∪∪∪| ∪∪–   |  – ||
ಪ್ಪಳ | ಹೊರಿವಲೆ  | ಮನಸಾ | ತು! ||
–∪∪|  – ∪∪   |
ಪ್ಪಿನ | ಬಾಣಲೆ     |
–∪∪|  – ∪∪   |
ಕುಪ್ಪಿಯ | ಎಣ್ಣೆಯು  |
–∪∪|  – ∪∪   |  ∪∪–   |  – ||
ಪ್ಪನೆ |  ಕಾವಗ    | ಹೊರುದಾ | ತು!!

ಸರ್ಪಮಲೆ ಮಾವ ಅಂದೊಂದು ಶುದ್ದಿಲಿ ಹೇಳಿದ ನೆಗೆಷಟ್ಪದಿಯ ಅಜ್ಜಕಾನಬಾವ ನೆಂಪು ಮಾಡಿದ°! ಯಬ್ಬಾ – ಅವನ ನೆಂಪೇ!!

ಕುಸುಮ ಷಟ್ಪದಿ:
ಶರ ಷಟ್ಪದಿಂದ ರಜಾ ದೊಡ್ಡ, ಅದರಿಂದಲೇ ಮತ್ತಾಣದ್ದು ಕುಸುಮ ಷಟ್ಪದಿ.
ಶರ ಷಟ್ಪದಿಲಿ ಒಂದು ಗೆರೆಲಿ ಎಂಟು ಮಾತ್ರೆ ಇತ್ತಲ್ಲದೋ – ಕುಸುಮಲ್ಲಿ ಹತ್ತು ಮಾತ್ರೆಗೊ!

  • ಮೊದಲೆರಡು ಗೆರೆಲಿ ಹತ್ತತ್ತು ಮಾತ್ರೆ –
    • ಐದೈದರ ಎರಡು ಗುಂಪು,
  • ಮೂರ್ನೇ ಗೆರೆಲಿ ಒಂದೂವರೆ ಪಾಲು – ಹೇಳಿತ್ತುಕಂಡ್ರೆ ಹದ್ನೈದು ಮಾತ್ರೆಗೊ.
  • ಕೊನೆಗೊಂದು ಗುರು!
  • ಇದೇ ನಮುನೆ ಮತ್ತೆ ಮೂರು ಗೆರೆ.
  • ದ್ವಿತೀಯಾಕ್ಷರ ಪ್ರಾಸ ಇದ್ದೇ ಇದ್ದನ್ನೆ.

ಮಾತ್ರೆ ಗುಣಲಕ್ಷಣಂಗೊ ಈ ನಮುನೆ ಬತ್ತಾಡ, ಕಾಗತಲ್ಲಿ ಬರದು ತೋರುಸಿದವು, ಶರ ಷಟ್ಪದಿಯ ಕೆಳಾಂತಾಗಿ ಇದ್ದ ಬೆಳಿಜಾಗೆಲಿ:

5 | 5
5 | 5
5 | 5 | 5 | 2 ||
5 | 5
5 | 5
5 | 5 | 5 | 2 ||

ಮೇಗಾಣ ಅದೇ ಷಟ್ಪದಿಯ – ಅದೇ ಭಾವಲ್ಲಿ ಕುಸುಮ ಷಟ್ಪದಿಲಿ ಈ ನಮುನೆ ಕಟ್ಟಿ ಹೇಳಿದವು.

ಅಪ್ಪನಾ ಮನೆಯೊಳವೆ
ಇಪ್ಪಗಾ ಒಂದುದಿನ

ಹಪ್ಪಳವ ಹೊರಿವಂತ ಮನಸುಬಂತು!
ಕಪ್ಪಿನಾ ಬಾಣಲೆಯು
ಕುಪ್ಪಿಯಾ ಎಣ್ಣೆಯುದೆ

ರಪ್ಪನೇ ಕಾದಲ್ಲಿ ಹೊರಿವಲಾತು!!

ಮಾಷ್ಟ್ರುಮಾವನೂ ಚೌಕ್ಕಾರುಮಾವನನೂ ಎಂತದೋ ಇದೇ ಬಗ್ಗೆ ಮಾತಾಡಿಗೊಂಡು ಇತ್ತಿದ್ದವು.
ಅವು ಮುಗುಶುದರ ಒಳ ಇದನ್ನುದೇ ಬರಕ್ಕೊಂಡಾತು. ಬರವಗ ಕೇಳುಲೆಡಿತ್ತಿಲ್ಲೆ, ಕೇಳುವಗ ಬರವಲೆಡಿತ್ತಿಲ್ಲೆ, ಚೆ ಚೆ!

ಬರದಾದ ಕೂಡ್ಳೇ ಚೌಕ್ಕಾರುಮಾವ ಈ ನಮುನೆ ಮಾತ್ರೆ ಹಾಕಿ ತೋರುಸಿದವು.

– ∪– | ∪∪∪∪∪|
ಪ್ಪನಾ | ಮನೆಯೊಳವೆ |
– ∪– |  –∪∪∪|
ಪ್ಪಗಾ | ಒಂದುದಿನ |
–∪∪∪| ∪∪– ∪ | ∪∪∪–  | –   ||
ಪ್ಪಳವ | ಹೊರಿವಂತ | ಮನಸುಬಂ | ತು! ||
– ∪– |  –∪∪∪|
ಪ್ಪಿನಾ | ಬಾಣಲೆಯು |
– ∪– |  –∪∪∪|
ಕುಪ್ಪಿಯಾ | ಎಣ್ಣೆಯುದೆ |
– ∪– |  – –∪|  ∪∪∪– |  –   ||
ಪ್ಪನೇ | ಕಾದಲ್ಲಿ | ಹೊರಿವಲಾ | ತು !!


ಎರಡು ಷಟ್ಪದಿಲಿ ಕಾಗತದ ಒಂದು ಹೊಡೆ ಮುಗಾತು. 🙂


ಭೋಗ ಷಟ್ಪದಿ:
ಇನ್ನಾಣದ್ದು ಭೋಗ ಷಟ್ಪದಿ ಆಡ.
ಮೊದಲೆರಡರಿಂದಲೂ ದೊಡ್ಡ ಇದು!.

  • ಒಂದು ಗೆರೆಗೆ ಹನ್ನೆರಡು ಮಾತ್ರೆ –
    • ಮೂರುಮೂರರ ನಾಕು ಗುಂಪು ಅಡ.
  • ಯೇವತ್ತಿನಂತೇ, ಮೂರ್ನೇ ಗೆರೆಲಿ ಒಂದೂವರೆ ಪಟ್ಟು
    • – ಹದ್ನೆಂಟು ಮಾತ್ರೆಗೊ,
  • ಕಡೆಂಗೊಂದು ಗುರು!
  • ಇದೇ ನಮುನೆ ಮತ್ತೆ ಮೂರು ಗೆರೆಗೊ.
  • ದ್ವಿತೀಯಾಕ್ಷರ ಪ್ರಾಸ ಮರವಲಿಲ್ಲೆ – ಹೇಳಿದವು.

ಅದೇ ಕಾಗತದ ಇನ್ನೊಂದು ಪುಟಲ್ಲಿ ಈ ನಮುನೆ ಬರದು ತೋರುಸಿದವು:
3  | 3  | 3  | 3
3  | 3  | 3  | 3
3  | 3  | 3  | 3  | 3  | 3  | 2 ||
3  | 3  | 3  | 3
3  | 3  | 3  | 3
3  | 3  | 3  | 3  | 3  | 3  | 2 |
|

ಮಾಷ್ಟ್ರುಮಾವಂಗೆ ಅರಡಿವ ಒಂದು ಷಟ್ಪದಿ ಹೇಳಿದವು: ತಿರುಕನೋರ್ವ ಕನಸಿನಲ್ಲಿ … ಹೇಳಿಗೊಂಡು.
ಅದರ ಬರವಲೆ ಹೆರಡ್ಳಪ್ಪಗ ಚೌಕ್ಕಾರುಮಾವ ಮೊದಲಾಣ ಷಟ್ಪದಿಯ ಹೀಂಗೆ ಮಾಡಿ ಹೇಳಿದವು:

ಅಪ್ಪನಲ್ಲಿ ಒಂದು ಸರ್ತಿ
ಇಪ್ಪ ಹೊತ್ತಿನೆಡೆಲಿ ಹೀಂಗೆ

ಹಪ್ಪಳವನೆ ಹೊರುದು ತಿಂಬ ಮನಸು ಮಾಡಿದೆ!
ಕಪ್ಪು ಬಣಲೆ ಒಲೆಲಿ ಮಡಗಿ
ಕುಪ್ಪಿಲಿಪ್ಪ ಎಣ್ಣೆ ಎರದು

ರಪ್ಪ ಕಾದ ಹಪ್ಪಳಕ್ಕೆ ಭಾರಿ ಬೇಡಿಕೆ!!

ಒಂದೇ ಭಾವ, ಒಂದೇ ಮನಸ್ಸು – ಬೇರೆಬೇರೆ ಮಾತ್ರಾನುಸಾರ ಬೇರೆಬೇರೆ ಷಟ್ಪದಿಯ ರೂಪ ಪಡಕ್ಕೊಂಬದು ಕಂಡು ಒಪ್ಪಣ್ಣಂಗೆ ಕೊಶಿಯೋ ಕೊಶಿ ಆತು!
ಚೆಲ ನಮ್ಮ ಹಳಬ್ಬರ ಶೆಗ್ತಿಯೇ!
ಒಪ್ಪಣ್ಣಂಗೆ ಬರದಾದ ಕೂಡ್ಳೆ ಮಾತ್ರೆ ಹಾಕಿ ಕೊಟ್ಟವು:

– ∪|  –∪ |  – ∪ |   – ∪ |
ಪ್ಪ | ನಲ್ಲಿ  | ಒಂದು |  ಸರ್ತಿ  |
– ∪ | – ∪| ∪∪∪|  – ∪ |
ಪ್ಪ | ಹೊತ್ತಿ| ನೆಡೆಲಿ  | ಹೀಂಗೆ |
– ∪ |∪∪∪| ∪∪∪|  – ∪| ∪∪∪|  – ∪ | – |
ಪ್ಪ |ಳ ವ ನೆ|ಹೊರುದು| ತಿಂಬ | ಮನಸು | ಮಾಡಿ | ದೆ! |
– ∪ |∪∪∪| ∪∪∪|∪∪∪|
ಪ್ಪು |ಬ ಣ ಲೆ | ಒ ಲೆ ಲಿ |ಮಡಗಿ  |
– ∪ | –∪ | – ∪ | ∪∪∪|
ಕುಪ್ಪಿ | ಲಿಪ್ಪ | ಎಣ್ಣೆ  | ಎ ರ ದು |
– ∪ | –∪ | – ∪ |  – ∪|  – ∪|  – ∪|  –  |
ಪ್ಪ | ಕಾದ |  ಹಪ್ಪ |  ಳಕ್ಕೆ | ಭಾರಿ | ಬೇಡಿ| ಕೆ !! |

ಮೊದಲೆರಡು ಸರ್ತಿ ಅಂದಾಜಿ ಆಯಿದಿಲ್ಲೆ ಒಪ್ಪಣ್ಣಂಗೆ: ಪೆನ್ನಿಂಗೆ ಪೂರ ಹಪ್ಪಳದ ಎಣ್ಣೆಪಸೆ ಅವರ ಕೈಂದ ಹಿಡುದ್ದು!
ಎಷ್ಟು ಕಮ್ಮಿ ಎಣ್ಣೆ ಪಸೆ ಹೇದರೂ ರಜ ಇದ್ದೇ ಇದ್ದು,
ಅದಿರಳಿ!

ಭಾಮಿನಿ ಷಟ್ಪದಿ:
ಇನ್ನಾಣದ್ದು ಭಾಮಿನಿ ಷಟ್ಪದಿ. ಬೈಲಿಂಗೆ ಹೇಂಗೂ ಇದರ ಸರೀ ಗುರ್ತ ಇಕ್ಕು, ಅಲ್ಲದೋ? 🙂
ಮುಳಿಯಭಾವ ಇದರ ನವಗೆಲ್ಲ ಗುರ್ತ ಮಾಡುಸಿ ಮಡಗಿದ್ದ. ಅವನಿಂದಾಗಿಯೇ ಈ ಶುದ್ದಿ ಬಂದದು ಇಂದು.

ಭೋಗ ಷಟ್ಪದಿಂದಲೂ ದೊಡ್ಡದು ಈ ಭಾಮಿನಿ. ಭೋಗಲ್ಲಿ ಹನ್ನೆರಡು ಮಾತ್ರೆ, ಅಲ್ಲದೋ?

  • ಭಾಮಿನಿಲಿ ಹದಿನಾಕು ಮಾತ್ರೆ –
    • ಮೂರು-ನಾಕರ ಎರಡು ಗುಂಪು
  • ಮೂರ್ನೇ ಗೆರೆಲಿ ಹದಿನಾಕರ ಒಂದೂವರೆ ಪಾಲು – ಇಪ್ಪತ್ತೊಂದು ಮಾತ್ರೆ,
  • ಮತ್ತೊಂದು ಗುರು.
  • ಇದೇ ನಮುನೆ ಮತ್ತೆ ಮೂರು ಗೆರೆಗೊ.
  • ದ್ವಿತೀಯಾಕ್ಷರ ಪ್ರಾಸ ಇದರ್ಲಿಯೂ ಮರವಲಾಗ ಇದಾ…!!

ಎರಡ್ಣೇ ಪುಟದ ಕೇಳಾ ಹೀಂಗೇ ಬರದು ತೋರುಸಿದವು:

3  | 4  | 3  | 4
3  | 4  | 3  | 4
3  | 4  | 3  | 4  | 3  | 4  | 2 ||
3  | 4  | 3  | 4
3  | 4  | 3  | 4
3  | 4  | 3  | 4  | 3  | 4  | 2 ||

ನಾರಣಪ್ಪನ ಗದುಗಿನ ಭಾರತ – ಕರ್ನಾಟ ಭಾರತ ಕತಾಮಂಜರಿ, ಇತ್ಯಾದಿ ಎಷ್ಟೋ ಲಕ್ಷಾಂತರ ಷಟ್ಪದಿಗೊ ಭಾಮಿನಿಲಿ ಆಯಿದಾಡ.
ಯಕ್ಷಗಾನಲ್ಲಿಯೂ ಯಥೇಷ್ಟವಾಗಿ ಬಳಕೆ ಅಪ್ಪದು ಭಾಮಿನಿಯೇ ಅಡ. ಹಾಂಗಾಗಿ ಒಳುದ ಎಲ್ಲಾ ಷಟ್ಪದಿಂದ ಭಾಮಿನಿಯೇ ಹೆಚ್ಚು ಪ್ರಸಿದ್ಧಿ ಅಡ. ಇದರ ಕಾನಾವಣ್ಣನೂ ಒಪ್ಪುಗು! 😉
ಅದೇನೇ ಇರಳೀ,
ಚೌಕ್ಕಾರುಮಾವ ಅವರ ಷಟ್ಪದಿಯ ಈ ನಮುನೆ ಹೇಳಿ ತೋರುಸಿದವು:

ಅಪ್ಪನಾ ಮನೆಯೊಳವೆ ಒಂದಿನ
ಇಪ್ಪಗಳೆ ಬಂತೊಂದು ಯೋಚನೆ
ಹಪ್ಪಳವ ಹೊರುದಿಂದು ತಿಂದರೆ ಎಷ್ಟು ಚೆಂದಕ್ಕು!!

ಕಪ್ಪು ಬಾಣಲೆ ಒಲೆಲಿ ಮಡಗಿರೆ
ಕುಪ್ಪಿ ಎಣ್ಣೆಯ ತಂದು ಎರದರೆ

ರಪ್ಪನೆಯೆ ಕಾದತ್ತು ಹಪ್ಪಳ, ತಿಂದು ಮುಗುದತ್ತು!!

ಒಪ್ಪಣ್ಣಂಗೆ ಬರದಪ್ಪದ್ದೇ, ಈ ನಮುನೆ ಮಾತ್ರೆ ಹಾಕಿ ತೋರುಸಿದವು:

– ∪ | – ∪∪ | ∪∪∪ | – ∪∪|
ಪ್ಪ | ನಾ ಮನೆ| ಯೊಳವೆ | ಒಂದಿನ |
– ∪ | ∪∪–  |  –  ∪  |  – ∪∪ |
ಪ್ಪ | ಗಳೆ ಬಂ | ತೊಂದು | ಯೋಚನೆ|
– ∪ | ∪∪∪∪|  – ∪ |  – ∪∪| – ∪ | – –  | – |
ಪ್ಪ | ಳವ ಹೊರು| ದಿಂದು | ತಿಂದರೆ  | ಎಷ್ಟು | ಚೆಂದ| ಕ್ಕು!|
– ∪ | – ∪∪ | ∪∪∪| ∪∪∪∪|
ಪ್ಪು | ಬಾಣಲೆ  | ಒಲೆಲಿ   | ಮಡಗಿರೆ  |
– ∪ | –∪∪|  – ∪ | ∪∪∪∪|
ಕುಪ್ಪಿ |ಎಣ್ಣೆಯ | ತಂದು | ಎ ರ ದ ರೆ |
– ∪| ∪∪ – | – ∪ | –∪∪|   –  ∪ | ∪∪∪ |  –  ||
ಪ್ಪ | ನೆಯೆ ಕಾ| ದತ್ತು | ಹಪ್ಪಳ | , ತಿಂದು | ಮುಗುದ | ತ್ತು!!

ಚೆಲ, ಹಪ್ಪಳ ಲಾಯ್ಕಿಪ್ಪದಪ್ಪು, ಆದರೆ ಈ ಷಟ್ಪದಿಗೊ ಅದರಿಂದಲೂ ಲಾಯಿಕಿದ್ದನ್ನೆ.. ಹೇಳಿ ಕಂಡತ್ತು ಒಪ್ಪಣ್ಣಂಗೆ! 🙂
ಈ ಷಟ್ಪದಿಯ ಹೇಳುವಗ ನಮ್ಮ ಬೈಲಿನ ಮುಳಿಯಭಾವನ ಬಗ್ಗೆ ಅಭಿಮಾನ ಬಂತು!

ಪರಿವರ್ಧಿನಿ ಷಟ್ಪದಿ:
ಇನ್ನಾಣದ್ದು ಪರಿವರ್ಧಿನಿ ಷಟ್ಪದಿ.
ಭಾಮಿನಿಲಿ ಹದಿನಾಕು ಮಾತ್ರೆ ಒಂದು ಗೆರೆಲಿ ಬಂದದರ ನಾವು ಕಂಡಿದು. ಈ ಷಟ್ಪದಿ ಅದರಿಂದಲೂ ರಜ ದೊಡ್ಡದು.
ಅಪ್ಪು.

  • ಪರಿವರ್ಧಿನೀಲಿ ಹದಿನಾರು ಮಾತ್ರೆಗೊ.
    • ಒಂದೊಂದು ಗೆರೆಲಿ ನಾಕುನಾಕರ ನಾಕು ಗುಂಪು ಬಪ್ಪ ಹಾಂಗೆ.
  • ಮೂರ್ನೇ ಗೆರೆಗಪ್ಪಗ ಹದ್ನಾರು+ಎಂಟು ಇಪ್ಪತ್ನಾಕು ಮಾತ್ರೆಗೊ,
  • ಮತ್ತೆ ಒಂದು ಗುರು!
  • ಇದೇ ನಮುನೆ ಮತ್ತೆ ಮೂರುಗೆರೆಗೊ
  • ದ್ವಿತೀಯಾಕ್ಷರ ಪ್ರಾಸ ಇದ್ದೇ ಇದ್ದನ್ನೇ!

ಇನ್ನೊಂದು ಹೊಸ ತಾವು ಕಾಗತ ತೆಗದು ಈ ನಮುನೆ ಬರದು ತೋರುಸಿದವು ಚೌಕ್ಕಾರುಮಾವ:

4  | 4  | 4  | 4
4  | 4  | 4  | 4
4  | 4  | 4  | 4  | 4  | 4  | 2 ||
4  | 4  | 4  | 4
4  | 4  | 4  | 4
4  | 4  | 4  | 4  | 4  | 4  | 2 ||

ಇದರ ಬಳಕ್ಕೆ ಕಮ್ಮಿಯೇ ಅಡ, ನಮ್ಮ ಗ್ರಂಥಂಗಳಲ್ಲಿ – ಹೇಳಿದವು ಮಾಷ್ಟ್ರುಮಾವ…
ಚೌಕ್ಕಾರುಮಾವ ಅವರ ಷಟ್ಪದಿಯ ಹೀಂಗೆ ಬದಲುಸಿ ಹೇಳಿದವು:

ಅಪ್ಪನ ಮನೆಯೊಳ ಅಂತೇ ಒಂದಿನ
ಇಪ್ಪಗ ಮನಸಿಲಿ ಬಂದಾ ಯೋಚನೆ
ಹಪ್ಪಳವನ್ನೇ ಹೊರುದರೆ ಚೆಂದಕೆ ತಿಂಬಲೆ ಕೊದಿಯಕ್ಕು!
ಕಪ್ಪಿನ ಬಾಣಲೆ ಒಲೆಯೊಳ ಮಡಗಿರೆ
ಕುಪ್ಪಿಲಿ ಇಪ್ಪಾ ಎಣ್ಣೆಯ ಎರದರೆ
ರಪ್ಪನೆ ಕಾಯಿಗು ಹಪ್ಪಳ ಬಲುರುಚಿ, ತಿಂಬಗ ಮುಗುದತ್ತು!

ಎಣ್ಣೆಪಸೆ ಕೈಲಿ ಪುನಾ ಪೆನ್ನುಕಾಗತ ತೆಕ್ಕೊಂಡು ಈ ನಮುನೆ ಮಾತ್ರೆ ಹಾಕಿ ಕೊಟ್ಟವು:

– ∪∪| ∪∪∪∪|  – –  | – ∪∪ |
ಪ್ಪನ | ಮನೆಯೊಳ |ಅಂತೇ | ಒಂದಿನ |
– ∪∪| ∪∪∪∪| – –  | – ∪∪  |
ಪ್ಪಗ  |ಮ ನ ಸಿ ಲಿ |ಬಂದಾ|ಯೋಚನೆ |
– ∪∪| – –  | ∪∪∪∪|  – ∪∪| – ∪∪| ∪∪– | – |
ಪ್ಪಳ | ವನ್ನೇ | ಹೊರುದರೆ | ಚೆಂದಕೆ | ತಿಂಬಲೆ |ಕೊದಿಯ|ಕ್ಕು! |
– ∪∪| – ∪∪| ∪∪∪∪| ∪∪∪∪|
ಪ್ಪಿ ನ | ಬಾಣಲೆ | ಒಲೆಯೊಳ | ಮ ಡ ಗಿ ರೆ|
– ∪∪| – –   | – ∪∪| ∪∪∪∪|
ಕುಪ್ಪಿಲಿ | ಇಪ್ಪಾ | ಎಣ್ಣೆಯ | ಎ ರ ದ ರೆ |
– ∪∪|  – ∪∪| – ∪∪ | ∪∪∪∪| – ∪∪ |∪∪ – | –  ||
ಪ್ಪನೆ | ಕಾಯಿಗು | ಹ ಪ್ಪ ಳ |ಬ ಲು ರು ಚಿ|, ತಿಂಬಗ |ಮುಗುದ |ತ್ತು! ||

ವಾಹ್! ಹಪ್ಪಳ ರುಚಿ ಏರ್ತಾ ಇದ್ದಿದಾ..!! 🙂

ವಾರ್ಧಕ ಷಟ್ಪದಿ:
ಷಟ್ಪದಿಗಳಲ್ಲಿ ಅಕೇರಿಯಾಣದ್ದು ವಾರ್ಧಕ ಅಡ. ಇದರ ವಾರ್ಧಕ್ಯ ಷಟ್ಪದಿ – ಹೇಳಿಯೂ ಹೇಳ್ತವಡ.

  • ಷಟ್ಪದಿಲೇ ಅತ್ಯಂತ ದೊಡ್ಡದಡ ಇದು.
    • ಐದೈದರ ನಾಕು ಗುಂಪು- ಒಟ್ಟು ಇಪ್ಪತ್ತು ಮಾತ್ರೆ!
  • ಮೂರ್ನೇ ಗೆರೆಲಿ ಇಪ್ಪತ್ತರ ಒಂದೂವರೆ ಪಾಲು- ಮೂವತ್ತು ಮಾತ್ರೆ ಅಡ,
  • ಅಕೇರಿಗೆ ಒಂದು ಗುರು ಇದ್ದೇ ಇದ್ದನ್ನೆ!
  • ಎಲ್ಲಾ ಷಟ್ಪದಿಗಳ ಹಾಂಗೆ ಇದರ್ಲಿಯೂ ದ್ವಿತೀಯಾಕ್ಷರ ಪ್ರಾಸ ಇದ್ದೇ ಇದ್ದಾಡ.

ಚೌಕ್ಕಾರುಮಾವ ಕಾಗತಲ್ಲಿ ಈ ನಮುನೆ ಮಾತ್ರಾವಿಂಗಡಣೆ ಬರದು ತೋರುಸಿದವು:

5  | 5  | 5  | 5
5  | 5  | 5  | 5
5  | 5  | 5  | 5  | 5  | 5  | 2  ||
5  | 5  | 5  | 5
5  | 5  | 5  | 5
5  | 5  | 5  | 5  | 5  | 5  | 2  ||

ರಾಘವಾಂಕನ ಹರಿಶ್ಚಂದ್ರ ಕಾವ್ಯ – ಪುರದಪುಣ್ಯಂ ಪುರುಷ ರೂಪಿಂದೆ ಪೋಗುತಿದೆ –ವಾರ್ಧಕಲ್ಲೇ ಇಪ್ಪದಾಡ.
ಮಾಷ್ಟ್ರುಮಾವ ಹೇಳಿಗೊಂಡಿದ್ದ ಹಾಂಗೇ, ಚೌಕ್ಕಾರುಮಾವ ಈ ಷಟ್ಪದಿಯ ಕಟ್ಟಿ ಹೇಳಿದವು:

ಅಪ್ಪನಾ ಮನೆಯೊಳವೆ ಕೂದಂಡು ಒಂದುದಿನ
ಇಪ್ಪಗಾ ಮನಸಿಲ್ಲಿ ಬಂತೊಂದು ಯೋಚನೆಯೆ
ಹಪ್ಪಳವ ಎಣ್ಣೆಲೀ ಹೊರುದೊರುದು ತಿಂಬಲೆಯೆ ಭಾರಿಕೊಶಿ ಅಕ್ಕಲ್ಲದಾ!

ಕಪ್ಪಿನಾ ಬಾಣಲೆಯ ಒಲೆಯೊಳವೆ ಮಡಗಿದ್ದು
ಕುಪ್ಪಿಯೊಳ ಇಪ್ಪಂತ ಎಣ್ಣೆಯಾ ಎರದತ್ತು

ರಪ್ಪನೇ ಹೊರುದತ್ತು ಕೆಂಪಾದ ಹಪ್ಪಳವು ಬೆಶಿಬೆಶಿಯೆ ಮುಗುದತ್ತುದೇ!

ದೊಡ್ಡ ವಾರ್ಧಕಲ್ಲಿ ಮಾತ್ರೆ ತುಂಬುಸಲೆ ಹಪ್ಪಳ ಹೊರಿತ್ತ ಕಾರ್ಯವ ತುಂಬ ವಿವರವಾಗಿ ಹೇಳಿದ್ದವು!
ಕೊಶೀ ಆತು ಅದರ ಕೇಳಿ!!
ಒಪ್ಪಣ್ಣಂಗೆ ಬರದಪ್ಪದ್ದೇ ಮಾತ್ರೆ ಹಾಕಿ ಕೊಟ್ಟವು:

– ∪– |∪∪∪∪∪|  – – ∪ | – ∪∪∪|
ಪ್ಪನಾ|ಮನೆಯೊಳವೆ |ಕೂದಂಡು| ಒಂದುದಿನ |
– ∪–  | ∪∪– ∪|  –  –  ∪ |   – ∪∪∪ |
ಪ್ಪಗಾ | ಮನಸಿಲ್ಲಿ  | ಬಂತೊಂದು| ಯೋಚನೆಯೆ |
– ∪∪∪| – ∪– | ∪∪∪∪ ∪ | – ∪∪∪| – ∪∪∪ | – – ∪| – |
ಪ್ಪ ಳ ವ| ಎಣ್ಣೆಲೀ | ಹೊರುದೊರುದು| ತಿಂಬಲೆಯೆ | ಭಾರಿಕೊಶಿ | ಅಕ್ಕಲ್ಲ | ದಾ! |
– ∪– | – ∪∪∪| ∪∪– ∪ | ∪∪ – ∪|
ಪ್ಪಿನಾ| ಬಾಣಲೆಯ | ಒಲೆಮೇಲೆ | ಮ ಡ ಗಿ ದ್ದು|
– ∪∪∪|  – – ∪| – ∪–  | ∪∪ – ∪|
ಕುಪ್ಪಿಯೊಳ| ಇಪ್ಪಂತ| ಎಣ್ಣೆಯಾ| ಎ ರ ದ ತ್ತು |
– ∪– | ∪∪– ∪|  – – ∪ | – ∪∪∪| ∪∪∪∪∪|∪∪– ∪ | –  |
ಪ್ಪನೇ| ಹೊರುದತ್ತು| ಕೆಂಪಾದ| ಹ ಪ್ಪಳ ವು |ಬೆ ಶಿ ಬೆ ಶಿ ಯೆ| ಮುಗುದತ್ತು| ದೇ!! |

ಇಷ್ಟು ವಿವರುಸಿ ಅಪ್ಪದ್ದೇ ಚಾಯ ತಣುದಿತ್ತು. ಒಂದೇ ಗುಕ್ಕಿಂಗೆ ಒಂದು ಗ್ಳಾಸು ಬಗ್ಗುಸಿದವು ಚೌಕ್ಕಾರುಮಾವ.
~

ನಮ್ಮದರ್ಲಿ ಎಷ್ಟು ಚೆಂದದ ರಚನಾ ಶಾಸ್ತ್ರಂಗೋ, ಛಂದಸ್ಸುಗೊ, ಕಂದಪದ್ಯಂಗೊ ಎಲ್ಲ ಇದ್ದು. ಚೆ, ನಾವು ಇದರ ಕ್ರಮೇಣ ಮರದೇ ಬಿಡ್ತನ್ನೇ – ಹೇಳಿ ಅನುಸಿತ್ತು ಒಂದರಿ!
“ಈಗಾಣೋರಿಂಗೆ ಇದರ ಬೇಶಿಗೊಂಬಲೆ ಹರಿತ್ತಿಲ್ಲೆ, ಅದಕ್ಕೆ ’ನವೋದಯ ಕಾವ್ಯ’ ಹೇಳಿಗೊಂಡು ಬರೆತ್ತದು.
– ಅದಕ್ಕೆ ಕೊಡಿಯೂ ಇಲ್ಲೆ,  ಕಡೆಯೂ ಇಲ್ಲೆ!” ಹೇಳಿದವು ಗಣೇಶಮಾವ.

ಪ್ರಬಂಧ ಬರಕ್ಕೊಂಡು ಹೋದರೆ ಈಗಾಣ ಕಾವ್ಯಂಗೊ ಆವುತ್ತಡ, ಚೌಕ್ಕಾರುಮಾವ ನೆಗೆಮಾಡಿದವು.
“ಪ್ರಬಂಧಕ್ಕೆ ಒಂದೇ ಹೊಡೆ ಮಾರ್ಜಿನು, ನವ್ಯ ಕವಿತೆಗೊಕ್ಕೆ ಎರಡೂ ಹೋಡೆ ಮಾರ್ಜಿನು ಇರ್ತು. ಅದೊಂದೇ ವಿತ್ಯಾಸ!!” ಹೇಳಿ ಮಾಷ್ಟ್ರುಮಾವ ಅಪುರೂಪಲ್ಲಿ ನೆಗೆ ಬರುಸಿದವು!
ಅದಪ್ಪುದೇ! ಒಳುದ– ಪ್ರಾಸ, ಅರ್ಥ, ಮಾತ್ರೆ, ಗಣ – ಎಲ್ಲವುದೇ ಪ್ರಬಂಧದ ಹಾಂಗೇ ಇದಾ!

ಪ್ರಬಂದವುದೇ ಪೂರ್ತಿ ಕನ್ನಡ ಶಬ್ದಂಗೊ ಸರಿ ಸಿಕ್ಕದ್ದರೆ ಇಂಗ್ಳೀಶು ಶಬ್ದಂಗೊ ಸೇರುಸಿ ಬರವಲಕ್ಕಡ.
ಆ ಅರೆಬೆಂದ ಹಿಟ್ಟಿನ ಕಂಗ್ಳೀಶು ಗೆರೆಗೊ ಸಿನೆಮಪದ್ಯ ಆಗಿ ಹಿಟ್ಟುತ್ತಡ!! – ಅಜ್ಜಕಾನಬಾವ ಹೇಳಿ ನೆಗೆಮಾಡಿದ.
~

ನಮ್ಮದೇ ಆದ ಇಷ್ಟೊಳ್ಳೆ ಷಟ್ಪದಿಗೊ ಇಪ್ಪದರ ನಾವೆಲ್ಲರೂ ಪುನಃ ನೆಂಪುಮಾಡಿಗೊಂಬ.
ಮುಳಿಯಭಾವ ಭಾಮಿನಿಯ ಒಲುಸಿಗೊಂಡ ಹಾಂಗೆ,  ಬೈಲಿನ ಎಲ್ಲೋರುದೇ ಒಂದೊಂದರ ಹಿಡುದರೆ ಎಡಿಯದ್ದ ಕೆಲಸ ಅಲ್ಲ!
ಇದೆಲ್ಲದರನ್ನೂ ಒಳಿಶಿ ಮುಂದಾಣೋರಿಂಗೂ ಸಿಕ್ಕುತ್ತ ನಮುನೆ ಕೃತಿರಚನೆಗಳ ಮಾಡುವೊ –ಹೇಳ್ತದು ಒಪ್ಪಣ್ಣನ ಆಶಯ.
ಹಪ್ಪಳ ತಿಂದಿಕ್ಕಿ, ಒಡೆಸುಟ್ಟವು ಕಟ್ಟಿಗೋಂಡು ಚೌಕ್ಕಾರುಮಾವನಲ್ಲಿಂದ ಹೆರಟೆಯೊ.

~
ಅಜ್ಜಕಾನಬಾವನೊಟ್ಟಿಂಗೆ ಬೈಕ್ಕಿಲಿ ಬಪ್ಪಗ ಪುನಾ ಇದೇ ವಿಷಯ.
ಎಡಕ್ಕಿಲಿ “ನಮ್ಮದೇ ಷಟ್ಪದಿ ನಾವೇ ಒಳಿಶದ್ರೆ ಮಮ್ಮದೆ ಒಳಿಶುತ್ತೋ?” – ಕೇಳಿದ ಅಜ್ಜಕಾನಬಾವ. ಅವಂದೇ ಪ್ರಾಸ ಹುಡ್ಕಿ ಷಟ್ಪದಿ ಬರವಲೆ ಹೆರಟದು ಒಪ್ಪಣ್ಣಂಗೆ ಅಂದಾಜಿ ಆತು! 😉
~
ಒಂದೊಪ್ಪ:
ಭಾಮಿನಿ ಬರದರೆ ಜ್ಞಾನ ಸಿಕ್ಕುಗು, ಮಿನಿ ಬರದರೆ ಸಮ್ಮೇಳನಲ್ಲಿ ಹೆಸರು ಸಿಕ್ಕುಗು!

ಸೂ:

  • ಚೌಕ್ಕಾರುಮಾವ ಮಾತ್ರೆ ಹಾಕಿ ಕೊಟ್ಟ ಷಟ್ಪದಿಗಳ ಪಟ ಇಲ್ಲಿ ಅಂಟುಸಿದ್ದೆ. ತೆಗದು ಮಡಿಕ್ಕೊಳಿ.
    ಯೇವತ್ತಾರೊಂದಿನ ನಿಂಗೊಗೆ ಅಂಬೆರ್ಪಿಲಿ ನೋಡ್ಳೆ ಸೂತ್ರಂಗೊ ಆಗಿ ಉಪಕಾರ ಅಪ್ಪಲೂ ಸಾಕು.

86 thoughts on “ಶರ ಕುಸುಮ ಭೋಗ – ಷಟ್ಪದಿಗಳ ಮರದರೆ ಆಗ!!

  1. ಹಪ್ಪಳದ ಪದ್ಯ ಓದುಗ ಏವದೋ ಪುಸ್ತಕಲ್ಲಿ ಪ್ರಾಕಿಂಗೆ ಅದ್ದಿಟ್ಟು ಹೇಳುತ್ತ ಕಥೆ ಯ ನೆಂಪಾತು.

  2. ಇತ್ತೀಚೆಗೆ ಮೀಟರ್ ಇಲ್ಲದ್ದ ಪದ್ಯಂಗಳನ್ನೇ ಬರವ ಕವಿಗಳ ಎಡೆಲ್ಲಿ, ಹಾಡುಗಬ್ಬವ ಬರೆದ್ದರೆ ಓದಿಯಪ್ಪಗಖುಶಿ ಆತು….. ಪರೀಕ್ಷೆ ಬಿಸಿ ಇಪ್ಪದಲ್ಲದ್ದರೆ, ರಾಗ ಸಂಯೋಜನೆ ಮಾಡ್ಲಾವ್ತಿತ್ತು… ಪರೀಕ್ಷೆ ಎಲ್ಲ ಮುಗುದ ಮೇಲೆ, ಒಂದು ಪ್ರಯತ್ನ ಮಾಡ್ತೆ….

    ಎಲ್ಲಾ ಕವಿಗಳೂ ಹೀಂಗೆಯೇ ಪದ್ಯ ಬರದರೆ, ಸಂಗೀತ ಸಂಯೋಜನೆ ಮಾಡುವವ್ವು ಇನ್ನೂ ಒೞೆಯ ಪದ್ಯಂಗಳ ಕೊಡುಲೆ ಸಾಧ್ಯ ಇದ್ದು……..

    1. ಅಕ್ಷರಾ..
      ಎಂಗೊಗೆ ಯೇವತ್ತೂ ಪುರುಸೊತ್ತು ಹೇಳಿ ಕಲಿತ್ತ ಮಕ್ಕೊಗೆ ಪುರುಸೊತ್ತಿದ್ದೋ?
      ತೊಂದರಿಲ್ಲೆ, ಪರೀಕ್ಷೆ ಎಲ್ಲ ಮುಗಿಯಲಿ, ಮತ್ತೆ ಒಂದು ನಿನ್ನದೂ ರೈಸಲಿ- ಆತೋ?

      ಕಾದೊಂಡಿರ್ತೆ.

    2. ಅಕ್ಷರ,

      {ಪರೀಕ್ಷೆ ಎಲ್ಲ ಮುಗುದ ಮೇಲೆ, ಒಂದು ಪ್ರಯತ್ನ ಮಾಡ್ತೆ…. }. ಬೇಗ ಶುರು ಮಾಡು. ಒಪ್ಪ ಕೊಡ್ಳೆ ಎಂಗ ಎಲ್ಲೋರೂ ಇದ್ದೆಯ.
      ನಿನ್ನ ಲೇಖನ (ಉದಯವಾಣಿಲಿ ಬರದ್ದದು) ಓದಿದೆ. ನಿನ್ನ ಬಾಲ ಮಾವ( ಬೊಂಬಾಯಿಂದ) ಕಳಿಸಿತ್ತಿದ್ದ. ಅಭಿನಂದನೆಗೊ…

      1. ತುಂಬಾ ಧನ್ಯವಾದಂಗೊ…………. ಃ) ಓಹ್!! ಬಾಲ ಮಾವ ಕಳ್ಸಿತ್ತವಾ?!! ಆನು ಇನ್ನು ಅವಕ್ಕೆ ಒಂದು ಕಾಪಿ ಕಳ್ಸೆಕ್ಕು ಹೇಳಿ ಗ್ರೇಶಿಕೊಂಡು ಇತ್ತಿದೆ.. ಅಷ್ಟರಲ್ಲಿ ಅವು ನಿಂಗೊಗೆ ಕಳ್ಸಿ ಆಯ್ದು!!!!

  3. ಪರಿವರ್ಧಿನಿ ಸೂತ್ರ ಕಲಿತ್ತೆ ಗಣೇಶ ಭಾವಾ,ನಿ೦ಗಳ ಹೆಸರು ಹೇಳಿ.

    ಅರಬೀ ಕಡಲಿನ ಆಗಸ ಮಾರ್ಗದಿ
    ಹರುಷದ ಮನಸಿಲಿ ದಾ೦ಟಿದ ಕೂಡಲೆ
    ಪೆರುವದ ಭಾವನು ಅರಬಿಗಳೂರಿಲಿ ಇಳಿದವು ಒ೦ದುದಿನ
    ಅರಳಿದ ಮಲ್ಲಿಗೆಯ೦ಥಾ ನೆಗೆಯಲಿ
    ಹೆರಬ೦ದಪ್ಪಗ ಹುಡುಕಿದವಲ್ಲಿಯೆ
    ಹೊರುಲಾರಿದ್ದವು ಹಲಸಿನ ಹಣ್ಣಿನ ಕಾರಿನ ಹತ್ತರಕೆ.

    1. ಹ್ಹಹ್ಹಹ್ಹಾ….
      ಹಲಸಿನ ಹಣ್ಣಾದರೆ ಹೊರುಲೆ ಆರುದೆ ಬೇಕು ಹೇಳಿ ಇಲ್ಲೆ ಭಾವಾ… ಸಾಮಾನ್ಯ ಹಲಸಿನ ಹಣ್ಣೆಲ್ಲ ಹೊತ್ತ ಅಭ್ಯಾಸ ಇನ್ನುದೆ ಮರದ್ದಿಲ್ಲೆ… 🙂

      1. {ಸಾಮಾನ್ಯ ಹಲಸಿನ ಹಣ್ಣೆಲ್ಲ ಹೊತ್ತ ಅಭ್ಯಾಸ }
        ನಮ್ಮ ಚೆನ್ನೈಭಾವ ಶಿವರಾತ್ರಿ ದಿನ ಹೊತ್ತಿದವಡ. ಆ ನಮುನೆ ಅಭ್ಯಾಸ ಇದ್ದೋ ನಿಂಗೊಗೆ? 😉

        1. ಓಯಿ., ಅದು ಕುಂಬ್ಳಕ್ಕಾಯಿ ಮಾರಾಯರೆ ಆನು ಹೊತ್ತದು ಅಂದು.

  4. ಒಪ್ಪಣ್ಣ, ಷಟ್ಪದಿಗಳ ಬಗ್ಗೆ ಶುದ್ದಿ ತುಂಬಾ ಲಾಯ್ಕಲ್ಲಿ, ಸ್ಪಷ್ಟವಾಗಿ ಬಯಿಂದು.
    ಚೌಕ್ಕಾರು ಮಾವನ ಹಿರಿಯೋರ ದಿನದ ಕಾರ್ಯದ ಊಟದ ಒಟ್ಟಿಂಗೆ, ಚೌಕ್ಕಾರು ಮಾವನ ಹತ್ತರಂದ ಬೈಲಿಂಗೆದೆ ವಿಷಯ ಪೂರ್ತಿ ಸಿಕ್ಕುವ ಹಾಂಗೆ ಮಾಡಿದೆ. ಚೌಕ್ಕಾರು ಅತ್ತಿಗೆ ಅಪ್ಪನ ಮನೆಲಿ ನಿಂದ ಕಾರಣ ಹಲಸಿನ ಹಪ್ಪಳ ಹೊರುದು ತಂದು ಮಡಗಿ ಅಪ್ಪಗ ಅದರ ಷಟ್ಪದಿ ರೂಪಲ್ಲಿ ವಿವರಿಸಿ ಹೇಳುಲೆ ಆತು ಉದಾಹರಣೆಗೆ ಮಾವಂಗೆ ಅಲ್ಲದಾ? ಅದಪ್ಪು, ಅತ್ತಿಗೆಯ ಮಗ° ಗೆಂಟು ಮಾಡಿದ್ದದು ಬಯಿಂದಿಲ್ಲೆ.. ಮಾತ್ರೆ ಹೊಂದಿದ್ದಿಲ್ಲೆ ಆದಿಕ್ಕು ಚೌಕ್ಕಾರು ಮಾವಂಗೆ ಅಲ್ಲದಾ? 😉 ಶುದ್ದಿ ಹೇಳಿದ ರೀತಿಲಿ ಚೌಕ್ಕಾರು ಮಾವನ ಹತ್ತರೆ ಒಂದರಿ ಮಾತಾಡಿದ ಹಾಂಗೇ ಆತು. ಲಾಯ್ಕಾಯಿದು.

    ಮಾವ° ಹೇಳಿದ ಹಾಂಗೆ {ಕನ್ನಡಲ್ಲಿ ಸಾವಿರಾರು ಕೃತಿಗೊ ರಚಿತ ಆಯಿದು, ಈ ಷಟ್ಪದಿಗಳ ಬಳಸಿಗೊಂಡು.
    ಈಗ ಇದರ ಹತ್ತುಬಳಕ್ಕೆ ಕಮ್ಮಿ ಆಗಿ ಕರೆಂಗೆ ಹೋಗಿ ಮಾಸಲೆ ಸುರು ಆಯಿದು – ಹೇಳಿದವು!}
    ನಮ್ಮ ಹಿರಿಯರು ಕ್ರಮಬದ್ಧರೀತಿಲಿ ಚೆಂದದ ಕೃತಿ ರಚನೆಗೆ ಅನುಕೂಲ ಅಪ್ಪ ಹಾಂಗೆ ಸಾಹಿತ್ಯ ಬರವಲೆ ಎಷ್ಟು ಲಾಯ್ಕದ ಸೂತ್ರಂಗಳ ಮಡಿಗಿದ್ದವು. ಈಗ ಎಲ್ಲೋರಿಂಗೂ ಅಂಬೇರ್ಪು ಅಲ್ಲದಾ? ಸಾಹಿತ್ಯದ ಮಾತ್ರೆಗಳ ಲೆಕ್ಕ ಹಾಕಿ ಬರವ ತಾಳ್ಮೆ ಇಲ್ಲೆ ಆದಿಕ್ಕು.. ಹಾಂಗೆ ನೀನು ಹೇಳಿದ ಹಾಂಗೆ ಮಿನಿಗಳ ಬರೆತ್ತವು. ನಮ್ಮ ಮುಳಿಯ ಭಾವ ಯೇವ ಅಂಬೇರ್ಪಿಲಿಯೂ ಮಾತ್ರೆ ತಪ್ಪುಸದ್ದೆ ಬರೆತ್ತವಿಲ್ಲೆಯಾ? ಮನಸ್ಸಿದ್ದಲ್ಲಿ ಎಲ್ಲವೂ ಆವುತ್ತು ಅಲ್ಲದಾ?

    ಮುಳಿಯ ಭಾವಂಗೆ ಭಾಮಿನಿ ಒಲುದ್ದದು ನವಗೆ ಎಲ್ಲೋರಿಂಗೂ ಗೊಂತಿದ್ದನ್ನೆ.. ಈಗ ಬಾಕಿ ಒಳುದ್ದದರ ಒಲಿಶುಲೂ ಸಾಕು. ಕಾನಾವಣ್ಣಂಗೆ ಈಗ ಭಾಮಿನಿ ಹತ್ತರೆ.. ಇನ್ನು ಅದರ ಹಾಂಗೆ ಇಪ್ಪದು ಬಾಕಿ ಒಳುದ್ದದೂ ಒಲುದರೆ ಹೇಂಗಪ್ಪಾ ಹೇಳಿ ಒಂದು ಯೋಚನೆ!! 😉 😉 ಕಾಲವೇ ಹೇಳೆಕ್ಕಟ್ಟೆ!!!

    ಅಜ್ಜಕಾನ ಭಾವ ಹೇಳಿದ ಹಾಂಗೆ ನಮ್ಮದೇ ಷಟ್ಪದಿಯ ನಾವೇ ಒಳಿಶದ್ದರೆ ಮಮ್ಮದೆ ಒಳಿಶುಗಾ ಹೇಳಿ ಸತ್ಯವೇ ಅಲ್ಲದಾ? ಒಂದೊಪ್ಪ ಲಾಯ್ಕಾಯಿದು.

    1. ಶ್ರೀಅಕ್ಕಾ..
      ಷಟ್ಪದಿ ಶುದ್ದಿ ಓದಿ, ಅಕ್ಷರಕ್ಷರವ ಮನನ ಮಾಡಿಂಡು ಒಪ್ಪ ಕೊಟ್ಟದು ಅತ್ಯಂತ ಸಂತೋಷ ಆತು.
      ಕಾನಾವಣ್ಣಂಗೆ ಬಾಮಿನಿ ಇಪ್ಪಗ ಬೇರೆದರೆ ರುಚಿ ಸಿಕ್ಕ, ಮುಳಿಯಭಾವಂಗೇ ಅಷ್ಟು ಸಮೆಯ ಬೇಕಾತಿದಾ! 😉

      { ಮಾತ್ರೆ ಹೊಂದಿದ್ದಿಲ್ಲೆ ಆದಿಕ್ಕು ಚೌಕ್ಕಾರು ಮಾವಂಗೆ ಅಲ್ಲದಾ? }
      ಅವರ ಹತ್ರೆ ಮಾತ್ರೆಗೊ ಕಮ್ಮಿ.
      ಕಷಾಯ, ಅರಿಷ್ಟ – ಇತ್ಯಾದಿ ಮಾಂತ್ರ.
      ಅದರ ಮಾಣಿಗೆ ಕೊಟ್ರೆ ಒಂದು ವಾರ ಅಜ್ಜನ ಮನೆಂದ ಹೆರಡ° ಮತ್ತ! 😉

  5. ಅರ್ರೇ ವ್ಹಾ.. ಹೀ೦ಗಿರ್ತ ಒಪ್ಪ೦ಗಳ ಓದಲೇ ಒ೦ದು ಖೊಶಿ ಬೇರೆ.

    ಒಪ್ಪಣ್ಣನ ಶ್ರಮ ಸಾರ್ಥಕ.

    ಸುಮ್ಮನೆ ಕಾಟ೦ಕೋಟಿ ಬ್ಲೋಗುಗಳ ಓದುವದಕ್ಕಿ೦ತ ಒಪ್ಪಣ್ಣನ ಬೈಲಿಲಿ ಬರವಲೆಡಿಯದ್ರುದೆ ಓದುವದು ಎಷ್ಟೋ ಗುಣದಾಯಕ ಅಲ್ದೋ..

  6. ಏ ಸುಭಗ ಭಾವಾ,ರೈಸಿದ್ದು ನಿ೦ಗಳ ಕವಿತೆ.

    ಕಬ್ಬಿನಾ ಹಾಲಿ೦ದ ಹೆಚ್ಚು ಸೀವಿದ್ದನ್ನೆ
    ಗಬ್ಬಲಡ್ಕದ ಭಾವ° ಬರದ ಕವಿತೆಯ ಸಾಲು
    ಅಬ್ಬಲಿಗೆ ಹೂಗಿನಾ ಮಾಲೆಕಟ್ಟಿದ ಹಾ೦ಗೆ ಕ೦ಡತ್ತು ಒ೦ದು ಸರ್ತಿ
    ಹಬ್ಬ ವಾತಾವರಣವಾತೀಗ ಬೈಲಿನೊಳ
    ಬೊಬ್ಬೆ ಹೊಡೆಯದೆ ಚೆ೦ದಕೊಪ್ಪಣ್ಣ ವಿವರಿಸಿದ°
    ಉಬ್ಬರದ ವಾರ್ಧಕದ ಶರಧಿ ಮೇಲಿ೦ದೆನ್ನ ತನುಮನವು ತೇಲಿತ್ತದಾ

  7. ಅಪ್ಪೋ ರಘುಭಾವಾ.. ಚೆಪ್ಪೆ ಕಾಪಿ ಎ೦ತಕೆ? ಡಯಾಬಿಟಿಸ್ ಎ೦ತೂ ಇಲ್ಲೆನ್ನೇ?! 😉

    ಎರಡ್ನೇ ಸಾಲು ಓದುವಗ ಎ೦ತೋ ವ್ಯತ್ಯಾಸ ಆಯೆಕೋ ಹೇಳಿ ಸ೦ಶಯ..

    ‘ಕುಪ್ಪಿ ಗ್ಲಾಸಿಲಿ’ ಹೇಳುವದು ಸರಿಯೋ ಅಥವಾ ‘ಕುಪ್ಪಿಯ ಗ್ಲಾಸಿಲಿ’ ಹೇಳುವದು ಸರಿಯೋ?

  8. ಓ, ಶರಷಟ್ಪದಿ ಹೇಳಿರೆ ಹೀ೦ಗೆ ಅಲ್ಲದೋ?

    ಚಪ್ಪೆಯ ಕಾಪಿಯ
    ಕುಪ್ಪಿ ಗ್ಲಾಸಿಲಿ
    ಚೆಪ್ಪರದಡಿ ಚಪ್ಪರಿಸುವಗ !
    ಹಪ್ಪಳ ಹೊರಿವಾ
    ಒಪ್ಪದ ಕವಿತೆಯ
    ತಪ್ಪದೆ ಹೇಳಿದ° ಒಪ್ಪಣ್ಣ ..!

    1. ಎರಡ್ನೇ ಸಾಲಿನ ಓದುವಗ ಎ೦ತೋ ಒ೦ಚೂರು ವ್ಯತ್ಯಾಸ ಇದ್ದ ಹಾ೦ಗೆ ಕಾಣ್ತನ್ನೇ ರಘು ಭಾವಾ..

      ‘ಕುಪ್ಪಿ ಗ್ಲಾಸಿಲಿ’ ಹೇಳಿಯೋ ಅಥವಾ ‘ಕುಪ್ಪಿಯ ಗ್ಲಾಸಿಲಿ’ ಹೇಳಿಯೋ..?

    2. ಚೆಪ್ಪೆ ಕಾಪಿ ಎ೦ತಕೆ ರಘು ಭಾವಾ? ಡಯಬೆಟೀಸ್ ಎ೦ತೂ ಇಲ್ಲೆನ್ನೆ? 😉

      ಎರಡ್ನೇ ಸಾಲಿನ ಓದುವಗ ಎ೦ತೋ ಒ೦ಚೂರು ವ್ಯತ್ಯಾಸ ಇದ್ದ ಹಾ೦ಗೆ ಕಾಣ್ತನ್ನೇ ರಘು ಭಾವಾ..

      ‘ಕುಪ್ಪಿ ಗ್ಲಾಸಿಲಿ’ ಹೇಳಿಯೋ ಅಥವಾ ‘ಕುಪ್ಪಿಯ ಗ್ಲಾಸಿಲಿ’ ಹೇಳಿಯೋ..?

      1. ಗಣೇಶ ಭಾವ,
        ಒತ್ತಕ್ಷರದ ಮಾತ್ರೆ ಹಿ೦ದಾಣ ಶಬ್ದಕ್ಕೆ ಬಪ್ಪ ಕಾರಣ ಕಾ೦ಬಗ ರಜಾ ಸ೦ಶಯ ಬಕ್ಕು.ಕುಪ್ಪಿಯ ರಜಾ ಒತ್ತಿದರೆ ಆತು,ಹೆಚ್ಚು ಒತ್ತಿರೆ ಒಡಗು,ಜಾಗ್ರತೇ..

        ಕುಪ್ಪಿ ಗ್ಲಾಸಿಲಿ
        (2+2) (2+1+1)

        1. ಸರಿ ಸರಿ, ಎನ್ನ ಕ೦ಪ್ಲೀಟರಿನ ತೊ೦ದರೆಯೋ ಎನ್ನದೇ ತೊ೦ದರೆಯೋ ಗೊ೦ತಿಲ್ಲೆ, ಒ೦ದು ಒಪ್ಪ ಕೊಡ್ಲೆ ಹೋಗಿ ೩ ಒಪ್ಪ ಆತಿದಾ.. ಬೈಲಿನ ಎಲ್ಲರುದೆ ಕ್ಷಮಿಸಿಕ್ಕಿ ಆತೋ..

          1. ಏ ಗಣೇಶ ಭಾವಾ,
            ಇನ್ನು ಮೂರು ಸರ್ತಿ ಒತ್ತಿರೆ ಒಪ್ಪಷಟ್ಪದಿ ಆತಿಲ್ಲೆಯೋ?!!
            {ಕ್ಷಮಿಸಿಕ್ಕಿ}ಒ೦ದರಿ ಊರಿಲಿ ಸಿಕ್ಕಿ..

          2. ಹ್ಹಹ್ಹಹ್ಹಾ… ಸದ್ಯಕ್ಕೆ ಒಪ್ಪ ತ್ರಿಪದಿ ಸಾಕೋ ಹೇಳಿ…

            ಇನ್ನು ಊರಿಲ್ಲಿ ಸಿಕ್ಕಲೆ ಸುಲಭಲ್ಲಿ ಎಡಿಯ ಭಾವಾ.. ಪುನಃ ಅರಬ್ಬಿಗಳ ಊರಿ೦ಗೆ ಬ೦ದಾತು, ಇನ್ನು ಇನ್ನಾಣ ಸರ್ತಿ ನೋಡುವೊ°..

          3. ಅಪ್ಪಪ್ಪು ಭಾವಯ್ಯ ಒಪ್ಪುತ್ತೆ ಸಂಗತಿಯ
            ಚೆಪ್ಪೆ ಕಾಪಿಯ ಉರ್ಪ್ಪಿ ಚಪ್ಪರುಸಿ ಸೇವಿಸಲೆ
            ಕಪ್ಪು ಸಾಸರು ಬೇಡ ನವಗೆಲ್ಲ ಖಂಡಿತಕು ಸಾಕು ಕುಪ್ಪಿದೇ ಗ್ಲಾಸು

            ಒಪ್ಪಣ್ಣ ಕಲುಶಿದಾ ವಾರ್ಧಕದ ಸೂತ್ರಲ್ಲಿ
            ಒಪ್ಪ ಕೊಡುವ ಮನಸಾತು ಎನಗೀಗ- ಬಪ್ಪಷ್ಟು ಬರದ್ದೆ-
            ತಪ್ಪಿಲ್ಲದೆ ಬರದನೊ? ರಘುಭಾವ ಒಂದಾರಿ ನೋಡಿ ಹೇಳುದೇ ಲೇಸು 😀

          4. ಮುಳಿಯಭಾವಾ, ಸುಭಗಣ್ಣ
            ಒಳ್ಳೆ ಷಟ್ಪದಿಗಳ ಪ್ರಯತ್ನಂಗೊ. ಕೊಶೀ ಆತು.

            ಪೆರುವದಣ್ಣಾ..
            ಷಟ್ಪದಿಗಳ ಮಾತ್ರೆ, ಅಕ್ಷರಂಗಳ ವಿಮರ್ಶೆ ಕಾಂಬಗ ನಿಂಗಳೂ ಯೇವದಾರು ಒಂದರ ಹಿಡಿತ್ತಿರೋ ಹೇಳಿ ಕನುಪ್ಯೂಸು ಬಯಿಂದು.

            ಬರೆತ್ತಿರೋ? ಏ°? 🙂

          5. (ಮುಳಿಯಭಾವಾ, ಸುಭಗಣ್ಣ
            ಒಳ್ಳೆ ಷಟ್ಪದಿಗಳ ಪ್ರಯತ್ನಂಗೊ. ಕೊಶೀ ಆತು.}

            ಈ ಕುಂಟಿಕಾನದ ಭಾವ ಎತ್ತ ಹೋಯಿದಾ…ಶುದ್ದಿಯೇ ಇಲ್ಲೆ. ಓಂದೆರಡು ಷಡ್ಪದಿಗೊ ಅವಂದೂ ಬರೆಕ್ಕಾತು..

  9. ಇದಾ, ಒಂದು ಒಪ್ಪ ಹೀಂಗೆ ಕೊಡುವನೋ ತೋರಿತ್ತು ಒಪ್ಪಣ್ಣ..

    ಆರು ಗೆರೆಯ ಪದ್ಯ ಬರವ
    ದಾರಿ ತೋರಿ ಬೈಲ ಜೆನಕೆ
    ಭಾರಿ ಒಪ್ಪ ಕೆಲಸ ನಮ್ಮ ಭಾವ ಮಾಡಿದ

    ಖಾರ ಹಪ್ಪಳಕ್ಕೆ ಜೆತೆಗೆ
    ಚೂರು ಕಾಯಿ ಬೆಲ್ಲ ಸೇರ್ಸಿ
    ಜೋರು ಗೌಜಿಲದರ ಭಾವ ನವಗೆ ಹಂಚಿದ..! 😉

    1. ಪುಚ್ಚಪ್ಪಾಡಿ ಅಣ್ಣಂಗೆ ನಮಸ್ಕಾರಂಗೊ.
      ಒಪ್ಪವ ಒಪ್ಪಿ ಒಪ್ಪ ಕೊಟ್ಟದು ಒಪ್ಪ ಆತು. 🙂

  10. ಶರ ಕುಸುಮ ಭೋಗ ಭಾಮಿನಿ
    ಪರಿವರ್ಧಿನೀ ವಾರ್ಧಕಂಗಳೆಂದಾರು ತೆರಂ
    ಕರಿ,ದಶ,ರವಿ,ಮನು,ರಾಜರ್
    ಬರೆ ವಿಂಶತಿ ಮಾತ್ರೆಯಿಂದೆ ಷಟ್ಪದಿ ನಡೆಗುಂ
    [ಕೆ.ಕಾಂತ ರೈಗಳ ವ್ಯಾಕರಣ ಪುಸ್ತಕ ಪ್ರೌಢಶಾಲಾ ವ್ಯಾಕರಣ ಮತ್ತು ಛಂದೋಲಂಕಾರಸಾರ-ಇದರಲ್ಲಿಪ್ಪದು.]
    ಇದರಲ್ಲಿ ಈ ಷಟ್ಪದಿಗಳ ಮೊದಲ ಸಾಲಿಲಿ ಇಪ್ಪ ಮಾತ್ರೆಗಳ ಸೂಚಿಸಿದ್ದವು-ಶರ -೮,ಕುಸುಮ-೧೦,ಭೋಗ-೧೨ ಹೀಂಗೆ!
    ಆನು ಸಣ್ಣ ಇಪ್ಪಾಗ ಈ ಪುಸ್ತಕ ಉರು ಹೊಡಕ್ಕೊಂಡಿತ್ತಿದ್ದೆ.ಈಗ ಅದು ಮನೆಲಿ ಇಲ್ಲೆ.
    ಈ ಪುಸ್ತಕ ಈಗ ಎಲ್ಲಾದರೂ ಸಿಕ್ಕುತ್ತೊ?ಗೊಂತಿದ್ದರೆ ತಿಳಿಸಿ.
    ಅತ್ಯುತ್ತಮ ಪುಸ್ತಕ ಅದು.

    1. ನಮ್ಮವೇ ಆದ ಶ್ರೀ ತಾಳ್ತಜೆ ಕೇಶವ ಭಟ್ಟರು ಬರದ ‘ಭಾಷಾದೀಪಿಕೆ” ಹೇಳ್ತ ಒಂದು ಪುಸ್ತಕ ಇದ್ದು ಗೋಪಾಲಣ್ಣ..
      ವ್ಯಾಕರಣ ಛಂದಸ್ಸು ಅಲಂಕಾರಂಗಳ ಅಭ್ಯಾಸ ಮಾಡುವವಕ್ಕೆ ಅದೊಂದು ಉತ್ತಮ ಕೈಪಿಡಿ.

      ನಿಂಗೊ ಹೇಳಿದ ಸೂತ್ರ/ಶ್ಲೋಕ ಅದರಲ್ಲಿಯೂ ಇದ್ದು.

    1. ರಾಗು ಅಣ್ಣೋ..
      ಒಪ್ಪಕ್ಕೆ ಧನ್ಯವಾದಂಗೊ.

      ನಿಂಗಳ ಪರಿಚಯ ಆತಿಲ್ಲೆನ್ನೇ?
      ಮನೆ ಎಲ್ಲಿ? ಎಂತ ಮಾಡ್ತಾ ಇದ್ದಿ?
      ಬೈಲಿಂಗೆ ಶುದ್ದಿ ಹೇಳ್ತಿರೋ?

      1. ನಾನು ರಾಗು ಹೇಳಿ. ಹಿ೦ಗೆ ಸಾಪ್ಟ್ವೇರ್ ಬರಿತಿ.
        ಊರು ಕಟ್ಟಿನಕೆರೆ ಹೇಳಿ – ಸಾಗರದ ಹತ್ರ

        1. ನಿ೦ಗಳ BLOG Thought Slot ಓದಿತಿದ್ದೆ..+ ಕೆಳ್ತೀದ್ದೆ. Cookwell ಸಾ ಓದಿದ್ದೆ.. ಲಾಯಿಕಿದ್ದು…

          1. ಬಾಳ ಕುಶಿ ಆತು ವಿನಯ ನಿ೦ಗ ಓದದು. ಹವ್ಯಾಸ ಅಷ್ಟೇ. ನಿಮ್ಮ ಪರಿಚಯ?

        1. ಹೋ! ಇದೊಳ್ಳೆ ಕತೆ.
          ಅದಪ್ಪು, ಪರಿಚಯ ನಿಂಗಳದ್ದು ಮಾಂತ್ರ ಕೇಳಿರೆ ಆವುತ್ತೋ? 🙂
          ನಮ್ಮ ಪರಿಚಯವೂ ಹೇಳೆಡದೋ, ಅಲ್ಲದೋ?

          ನಿಂಗಳ ಊರಿಲಿ ’ಅಪ್ಪಿ’ ಹೇಳಿದ ಹಾಂಗೆ ಕೊಡೆಯಾಲ ಹೋಬಳಿ ಹೊಡೆಲಿ ’ಒಪ್ಪಣ್ಣ’ ಹೇಳ್ತವು. ಹಾಂಗೆ, ಈ ಬೈಲು (website) ಒಪ್ಪಣ್ಣ-ಒಪ್ಪಕ್ಕಂದ್ರ ಬ್ಲೋಗುಚ್ಛ!
          ಒಪ್ಪಣ್ಣನಿಂದ ತೊಡಗಿ ಸುಮಾರು ಜೆನ ಇಲ್ಲಿ ’ಶುದ್ದಿ’ (article) ಹೇಳ್ತವು.
          ಶುದ್ದಿ ಓದಿ ಕೊಶಿ ಆದೋರು ಒಪ್ಪ(comment) ಕೊಡ್ತವು.

          ಇದಾ, ಒಪ್ಪಣ್ಣನ ಜಾತಕಪುಟಂಗಳ ಸಂಕೊಲೆ ಇಲ್ಲಿದ್ದು:
          https://oppanna.com/nerekare/oppanna/
          http://www.nerekare.com/members/oppanna/profile

          ನಿಂಗೊ ಶುದ್ದಿ ಹೇಳ್ತಿರೋ?

          1. ಸುದ್ದಿ ಹೇಳವು ಹೇಳಿ ಕಾಣ್ತು ಪುರುಷೊತ್ತು ಆಪ್ದಿಲ್ಯೋ ಒಪ್ಪಣ್ಣ. ಹೇಳ್ತಿ ಸಮಯ ಮಾಡ್ಕ್ಯ೦ಡು.

  11. Aadu muttada soppille ade reeti oppanna kai haaakadda vishaya ille, Uttama lekhana/Bhamini shatpadi oppanna.

    1. ಕೇವಳದಣ್ಣಂಗೆ ನಮಸ್ಕಾರ ಇದ್ದು.
      ಬೈಲಿಂಗೆ ಬಂದದು ಕೊಶಿ ಆತು.

      ಈ ಶುದ್ದಿ ಓದಿ ನಿಂಗೊಗೆ ಕೊಶಿ ಆದ್ದದು ಒಪ್ಪಣ್ಣನ “ಯೋಗ” ಹೇಳಿ ಗ್ರೇಶಿದ್ದೆ ಆತೋ.. 🙂

      ಬಂದೊಂಡಿರಿ.

  12. ಒಪ್ಪಣ್ಣಾ… ಅಮೋಘ ಆಯಿದು ಲೇಖನ.. ನಿ೦ಗೊಗೆ ನಿ೦ಗಳೇ ಸಾಟಿ..

    1. ಪೆರುವದಣ್ಣೋ..
      ನಿಂಗಳೂ ಶುದ್ದಿ ಹೇಳುಲೆ ಸುರುಮಾಡಿ, ನಿಂಗೊಗೆ ನಿಂಗಳೇ ಸಾಟಿ ಆಗಿಬಿಡ್ತಿ.

      ಕಾದೊಂಡಿರ್ತೆಯೊ°…

  13. {..ಎದ್ದಲ್ಲಿಯೇ ಮನುಗಿದ್ದಪ್ಪನ್ನೇ}
    ಯೋ.. ಆನು ಒ೦ದರಿ ಪುತ್ತೂರುಲಿ ಮನುಗಿದವ ಏಳುವಾಗ ಮ೦ಗ್ಳೂರಿ೦ಗೆ ಎತ್ತಿದ್ದೆ ಭಾವ.. ಕಥೆ ಕೇಳೆಡ..!! 😀

    {..ಮಾತ್ರೆಯ}
    ಭಾವ ಈ ಒ೦ದೊ೦ದು ಪದ್ಯ ಓದೆ೦ಡು ಅಷ್ಟು ಮಾತ್ರೆ ತಿ೦ದರೆ ಅಕ್ಕೊ??? 😉

    {..ಇದೆಲ್ಲವನ್ನೂ ಮನುಗಿದಲ್ಲೇ ಕರಗುಸೇಕು! }
    ನಿ೦ಗೊ ಹೆಬ್ಬವಿನಾ೦ಗೊ… ಏ?? 😉

    {.. `ಬೆಶಿಲಿಂಗೆ ರಜ ಮನುಗುವೊ°’}
    ಬೆಚಿಲಿ೦ಗೆ ಮನುಗಿತ್ತೆ ಹೇಳಿ ಅಜ್ಜಕಾನಬಾವ° ಚಾವಡಿಲಿ ಸುರುಟಿ ಮನುಗಿಕ್ಕು..

    1. ನೋಡು, ಸರ್ಪಮಲೆ ಮಾವ ಈಗ ಹೇಳಿದ್ದಷ್ಟೆ, ’ಎಂತ ಬೋಸಂಗೂ ಅರ್ತ ಅಕ್ಕು’ – ಹೇಳಿಗೊಂಡು.
      ನೀ ಹೀಂಗೆಲ್ಲ ಕೇಳಿರೆ ’ನಿನಗೆ ಇನ್ನೂ ಅರ್ತ ಆಯಿದಿಲ್ಲೆ’ ಹೇಳಿ ಎಲ್ಲೋರಿಂಗೂ ಗೊಂತಕ್ಕು.

      ನಿನ್ನ ಮರಿಯಾದಿ ಹೇಂಗೂ ಹೋಗ, ಒಪ್ಪಣ್ಣಂದು ಹೋತಿಕ್ಕುಗೋ -ಹೇಳಿ ಕನುಪ್ಯೂಸು ಬಪ್ಪದಿದಾ! 😉

  14. ಒಪ್ಪಣ್ಣ ಮಾಷ್ಟ್ರನ ಷಟ್ಪದಿ ಪಾಟ ಹೇಂಗಿಪ್ಪ ಬೋಸಂಗೂ ಅರ್ಥ ಅಕ್ಕು! ಮಾಷ್ಟ್ರು ಮಾವನ ಮಗ ಮಾಷ್ಟ್ರನೇ ಆಗಿದ್ದರೆ ಮಕ್ಕೊಗೆಲ್ಲ ಕಲಿವಲೆ ಸುಲಭ ಆವುತಿತ್ತು!! ಒಪ್ಪಣ್ಣ ಷಟ್ಪದಿಗಳ ಒಂದೊಂದಾಗಿ ವಿವರಿಸಿದ್ದು ಹಲಸಿನ ಹಣ್ಣಿನ ಕೊರದು, ಗಡಿ ಮಾಡಿ, ಸೊಳೆ ಎಳಕ್ಕಿ, ಸಜ್ಜಿ ಮಾಡಿ ಒಂದೊಂದೇ ಸೊಳೆಯ ಮಕ್ಕಳ ಬಾಯಿಗೆ ಹಾಕಿದ ಹಾಂಗಾತು! ಅಷ್ಟು ಸುಲಬ ಆತು, ಅರ್ತಮಾಡ್ಯೊಂಬಲೆ!!
    ಷಟ್ಪದಿಗಳ ಪಾಟ ಕೇಳ್ಳೆ ಕೂದವಕ್ಕೆ ತಟ್ಟೆ ತುಂಬ ಹೊಸ ಹಲಸಿನ ಹಪ್ಪಳ ಹೊರುದು ತಂದು ಮಡಗಿದ್ದ°, ಪಾಟ ಕೇಳ್ಯೊಂಡು ತಿಂಬಲೆ! ರಜ ಹೊತ್ತಿಲ್ಲಿ ಚಾಯವೂ ಬಕ್ಕು!
    ಹೈಸ್ಕೂಲ್ಲಿ ಬಾಕಿಲ ಪದವು ಮಾಷ್ಟ್ರ° (ಕನ್ನಡ ಪಂಡಿತ) ಮಾಡಿದ ಪಾಟ ರಜರಜ ನೆಂಪಪ್ಪಲೆ ಸುರುವಾತು. ’ಯಮಾತಾರಾಜಭಾನಸಲಗಂ’, ’ಮಲ್ಲಿಕಾಯತಮಾಲೆಯಪ್ಪುದು…..’ ಇತ್ಯಾದಿ ಒಂದೊಂದು ಶಬ್ದ ನೆಂಪಾವುತ್ತಷ್ಟೆ!
    ಒಪ್ಪಣ್ಣನ ಪಾಟ ಇನ್ನೂ ಕೇಳುವಾ° ಹೇಳಿ ಆವುತ್ತಾ ಇದ್ದು. ಕೇಳಿದ ಪಾಟ ಮರದು ಹೋಗ! ಮರದರೆ ಆಗನ್ನೆ!!
    ಚೆಂದ ಚೆಂದ ಇಪ್ಪ ಷಟ್ಪದಿಗಳ ಛಂದಸ್ಸಿನ ಚೆಂದಲ್ಲಿ ವಿವರಿಸಿದ ಹಾಂಗೆ ತ್ರಿಪದಿ, ಚೌಪದಿ, ರಗಳೆ, ಸಾಂಗತ್ಯ, ವಚನ, ವೃತ್ತಂಗಳ ಪಾಟ ಬರಳಿ! ಶಾಸ್ತ್ರೀಯ ಕನ್ನಡ ಒಳಿಯಲಿ!

    1. ಸರ್ಪಮಲೆ ಮಾವಾ..
      ನಿಂಗೊ ಶುದ್ದಿಗಳ ಮೇಗೆ ಮಡಗಿದ ಪ್ರೀತಿಗೆ ಒಪ್ಪಣ್ಣ ಚಿರಋಣಿ.

      ಎಲ್ಲ ಚೌಕ್ಕಾರುಮಾವ, ಮಾಷ್ಟ್ರುಮಾವನಿಂದಾಗಿ ಆದ್ದು.
      ಲಾಯಿಕಂಗೆ ಬರದು ತೋರುಸಿದವು. ಬೈಲಿಂಗೆ ಹೇಳಿದ್ದಷ್ಟೇ ಒಪ್ಪಣ್ಣನ ಕೆಲಸ!

      { ಶಾಸ್ತ್ರೀಯ ಕನ್ನಡ ಒಳಿಯಲಿ! }
      ನಿಜವಾಗಿಯೂ ಇದೊಂದು ದೊಡ್ಡ ಮನಸ್ಸು.
      ಎಲ್ಲೋರುದೇ ಪ್ರಯತ್ನ ಮಾಡಿರೆ ಖಂಡಿತವಾಗಿಯೂ ಎಡಿಗು.

      ಎಂತ ಹೇಳ್ತಿ ಮಾವಾ°?

  15. ಆನು ಶಾಲೆಗೆ ಹೋಯ್ಕೊಂಡಿಪ್ಪಗ, ರತ್ನಾವತಿ ಟೀಚರ್ ಹೇಳಿ ಇತ್ತಿದ್ದವು.
    ಭಾರೀ ಚೆಂದಕೆ ಇದರೆಲ್ಲ ಹೇಳಿ ಕೊಟ್ಟೊಂಡಿತ್ತಿದ್ದವು. ಅದೆಲ್ಲ ಮತ್ತೆ ನೆಂಪಾತು ಒಪ್ಪಣ್ಣೋ.
    ಧನ್ಯವಾದ.

    ಒಂದೇ ವಿಷ್ಯದ ಮೇಲೆ ೬ ಷಟ್ಪದಿಗೊ????
    ವಹ್!!!!

    {ಮೆಲ್ಲಂಗೆ ಎದ್ದು – ಎಲ್ಲಿ ಮನುಗಿದ್ದು ಹೇಳಿ ಅತ್ತಿತ್ತೆ ನೋಡಿಗೊಂಡು – ಎದ್ದಲ್ಲಿಯೇ ಮನುಗಿದ್ದಪ್ಪನ್ನೇ – ಹೇಳಿ ಧೃಢಮಾಡಿಗೊಂಡು ಹಸೆಮಡುಸಿ ಕೂದೆ.} – ಇದಿದಾ ಚೆಂದ ಆದ್ದದು…

    1. ‘ಅವ್ವು’ ಈಗ ಎಲ್ಲಿದ್ದವು ಮಾಣಿ??!!!!

      1. ಆನು ಶಾಲೆ ಬಿಟ್ಟ ಮತ್ತಾಣ ವರ್ಷವೇ ರಿಟೇರು ಆದವಡ..
        ಈಗ ಆಶಾಲೆ ಮಕ್ಕೊಗೆ ಕನ್ನಡ ಹೇಳಿಕೊಡ್ಳೆ ಲಾಯಕದ ಟೀಚರುಗೊ ಇಲ್ಲೆ.:(

        1. ಮಾಣೀ..
          ನೀನು ಶಾಲೆ ಬಿಟ್ಟದೇ ಬಿಟ್ಟದು, ಅಷ್ಟೊಳ್ಳೆ ಟೀಚರು ರಿಠೇರ್ಡು! ಪಾಪ.
          ಸಾರ ಇಲ್ಲೆ, ನೀ ಕಲಿತ್ತರ ಬಿಡೆಡ, ಇನ್ನೊಂದು ಟೀಚರು ಸೇರುಗು. ಆತೋ?

          🙂

  16. ಕವನಲ್ಲಿ ಒಂದು ಗಣಿತ.
    ವಾಹ್ ಅದ್ಭುತ-ಮೊದಲಾಣವು ಮಾಡಿ ಕೊಟ್ಟ ಕವನದ ಲಕ್ಷಣ ಸೂತ್ರಕ್ಕೆ.
    ಒಪ್ಪಣ್ಣ ಷಟ್ಪದಿಲಿ ಹಪ್ಪಳವ ಹೊರುದು ಕೊಟ್ಟದು ಲಾಯಿಕ ಆಯಿದು. ಕಾಯಿ ಹೋಳು ಸೇರಿಸಿ ತಿಂದಷ್ಟು ಕೊಶಿ ಆತು.
    ಮುಳಿಯ ರಘುವಿನ ಭಾಮಿನಿ ಕವನಂಗೊ ಓದುವಾಗ ಇದರ ಬಗ್ಗೆ ತಿಳಿಯೆಕ್ಕು ಹೇಳ್ತ ಕುತೂಹಲ ಇತ್ತಿದ್ದು.
    ಭಾಮಿನಿ ಒಟ್ಟಿಂಗೆ ಎಲ್ಲಾ ಷಟ್ಪದಿಯ ಲಕ್ಷಣಂಗೊ ಬೋನಸ್ ಆಗಿ ಬಂತು.
    ಹೈಸ್ಕೂಲಿಲ್ಲಿ ಇಪ್ಪಗ ಕಲ್ತಿದೆ ಹೇಳ್ತ ನೆಂಪು ಮಾತ್ರ ಇತ್ತಿದ್ದು. ಲಕ್ಷಣಂಗೊ ಎಲ್ಲಾ ಮರದಿತ್ತಿದ್ದು. ಮತ್ತೆ ಚೌಕ್ಕಾರು ಮಾವ ಹೇಳಿದ್ದರ ಒಪ್ಪಣ್ಣ ಇಲ್ಲಿ ವಿವರಿಸಿದ್ದು ತುಂಬಾ ಕೊಶೀ ಆತು. ಕವನ ಬರದು ಅದಕ್ಕೆ ಲಘ್ಹು ಗುರು ಹಾಕುವದು ಹೇಂಗೆ ಹೇಳುವದರ ತಿಳಿಸಿದ್ದು ಭಾರೀ ಲಾಯಿಕ ಆಯಿದು. ಒಟ್ಟಾರೆ ಹೇಳುವದಾದರೆ, ಷಟ್ಪದಿ ಬಗ್ಗೆ ಮಾಹಿತಿ ಕೊಟ್ಟ ಪರಿಪೂರ್ಣ ಲೇಖನ. ಮುಂದಾಣ ಅಕ್ಷರ ಒತ್ತಕ್ಷರ ಆಗಿದ್ದಲ್ಲಿ, ಹಿಂದಾಣದ್ದಕ್ಕೆ ಗುರು ಹೇಳಿ ಲೆಕ್ಕ ಹೇಳ್ತ ಮಾಹಿತಿಯನ್ನು ಸೇರ್ಸಲೆ ಆವ್ತಿತ್ತು.
    ಧನ್ಯವಾದಂಗೊ ಒಪ್ಪಣ್ಣ.

    1. ಗೋಕರ್ಣದ ಬಚ್ಚಲು, ಒರಕ್ಕು – ಎರಡೂ ಹೋಯಿದಿಲ್ಲೆನ್ನೆ! ಪಾಟಕ್ಕೆ ಸಮಯ ಆತು, ಕ್ಲಾಸಿನ ಬೆಲ್ಲಾತು! ಒರಕ್ಕು ತೂಗಿಯೊಂಡೇ ಬಂದು ಪಾಟ ಮಾಡಿದರೂ ಪಾಟ ಲಾಯಿಕಾಯಿದು! ಮುಂದಾಣ ಒತ್ತಕ್ಷರದ ಹಿಂದಾಣ ಅಕ್ಷರಕ್ಕೆ ಎರಡು ಮಾತ್ರೆ ಹೇಳ್ಕ್ಷ್ಳೆ ಬಿಟ್ಟು ಹೋತು ಅಷ್ಟೆ; ಅದು ಸಾರ ಇಲ್ಲೆ. ಅದಕ್ಕೆ ಕ್ಷಮೆ ಇದ್ದು. ಅದೇ ರೀತಿ ಮೂರನೇ, ಆರನೇ ಗೆರೆಗಳ ಕೊಡೀಯಾಣ ಅಕ್ಷರ ಲಘು ಆದರೂ ಗುರು ಹೇಳಿಯೇ ಲೆಕ್ಕ ಅಲ್ಲದೋ?

    2. ಶರ್ಮಪ್ಪಚ್ಚೀ..
      ಶುದ್ದಿಗೆ ಪ್ರೀತಿಲಿ ಕೊಟ್ಟ ಒಪ್ಪಕ್ಕೆ ಒಪ್ಪಂಗೊ.
      ತುಂಬಾ ತುಂಬಾ ಕೊಶಿ ಆತು ನಿಂಗೊ ಹೇಳಿದ್ದರ ಕಂಡು.

      ಅಪ್ಪು, ಚೌಕ್ಕಾರುಮಾವ ಹೇಳಿತ್ತಿದ್ದವು – ಒತ್ತಕ್ಷರದ ಮದಲಾಣದ್ದು ಗುರು- ಹೇಳಿ.
      ಈ ಷಟ್ಪದಿಗಳ ಬರಕ್ಕೊಳ್ತ ಗವುಜಿಲಿ ಒಪ್ಪಣ್ಣಂಗೆ ಅದು ತಲಗೇ ಹೋಯಿದಿಲ್ಲೆ.
      ನಿಂಗೊ ತಿಳಿಶಿ ಕೊಟ್ಟದು ತುಂಬಾ ಕೊಶಿ ಆತು! 🙂

      ಶರ್ಮಪ್ಪಚ್ಚಿ ಬೊಂಬಾಯಿಗೆ ಹೋದಿರಡಾ?
      ಅಲ್ಯಾಣ ವಿವರಣೆ ಹೇಳ್ತಿರೋ – ಷಟ್ಪದಿಲಿ 😉
      ಕಾದೊಂಡಿರ್ತೆಯೊ°…

  17. ಆನು ಮೇಥ್ಸಿಲ್ಲಿ ರಜಾ ವೀಕು ! ಹಾಂಗಾಗಿ, ಲೆಕ್ಕ ಗೊತ್ತಿಲ್ಲ ! ಓದ್ಲೆ ಭಾರೀ ಲಾಯಕ. ಹೀಂಗಿಪ್ಪ ಬರಹ ಇಪ್ಪವು ಮಾಸ್ತ್ರಕ್ಕೊ ಆಗಿದ್ದರೆ, ಕನ್ನಡ ತುಂಬಾ ಆಸಕ್ತಿ ಹುಟ್ಟುಸುವ ವಿಷಯ ಆವುತ್ತಿತು !
    ಒಪ್ಪಣ್ಣಂಗೆ ತುಂಬಾ ಥ್ಯಾಂಕ್ಸು !

    1. {ಹೀಂಗಿಪ್ಪ ಬರಹ ಇಪ್ಪವು ಮಾಸ್ತ್ರಕ್ಕೊ ಆಗಿದ್ದರೆ}
      ಮಾಷ್ಟ್ರಕ್ಕೊ ಆಯೇಕಾರೆ ತುಂಬಾ ಕಲಿವಿಕೆ ಆಗಿರೇಕಡ.
      ಮತ್ತೆ, ತಲೆಯುದೇ ಚುರ್ಕು ಇರೇಕಡ.
      ನಮ್ಮಾಂಗಿರ್ತೋರಿಂಗೆ ಆವುತ್ತ ಜೆಂಬಾರ ಅಲ್ಲ ಅದು.
      😉
      ಅಡಕ್ಕೆಗೆ ಕ್ರಯ ಏರಿದ್ದಡ, ಅಪ್ಪೋ?

  18. “ಯಮಾತಾರಾಜಬಾನಸಲಗಂ” , ಏವ ಏವ ರೀತಿಲಿ ಲಘು ಗುರು ಸೇರಿ ಅಪ್ಪಗ, ಏವ ಗಣಂಗೊ ಬತ್ತು ಹೇಳ್ತ ಸೂತ್ರ ನೆಂಪಾತು, ಒಪ್ಪಣ್ಣನ ಷಟ್ಪದಿಯ ವಿವರಣೆ ಕೇಳಿ ಅಪ್ಪಗ. ಎಲ್ಲೋರಿಂಗು ಅರ್ಥ ಆವ್ತ ಹಾಂಗೆ, ಎಲ್ಲ ಷಟ್ಪದಿಯ ಸೂತ್ರಂಗಳನ್ನು ಲಘು ಗುರು ಹಾಕಿ ವಿವರುಸಿ ಕೊಟ್ಟು, ಜವ್ವನಿಗರಲ್ಲಿ ಉತ್ಸಾಹ ತುಂಬಿದ್ದ. ಹಪ್ಪಳ ಹೊರುದ್ದರನ್ನೇ ಆಕರ್ಷಕವಾಗಿ ಉದಾಹರಣೆ ಕೊಟ್ಟದು ಇನ್ನೂ ಲಾಯಕಾಯಿದು. ಮುಳಿಯ ಭಾವಯ್ಯನ ಭಾಮಿನಿಂದಲೇ ಸ್ಪೂರ್ತಿ ಪಡದು, ಹೆರ ಬಂದ ಈ ಲೇಖನ ಸಂಗ್ರಹ ಯೋಗ್ಯ ಮಾಂತ್ರ ಅಲ್ಲ, ಉಪಯೋಗಕ್ಕೆ ಬರೆಕುದೆ. ನಮ್ಮ ಬೈಲಿನವೆಲ್ಲ ಷಟ್ಪದಿಯ ಒಂದೊಂದು ಕಾಲು ಹಿಡಿಯೆಕು, ಪದ್ಯ ಬರೆಕು. ಕೊಡಿ ಕಡೆ ಇಲ್ಲದ್ದ ನವೋದಯ ಕಾವ್ಯದ ಬಗ್ಗೆ ಒಪ್ಪಣ್ಣ ಚೆಂದಕೆ ಹೇಳಿದ್ದ. ಆನು ಮುಳಿಯ ಭಾವನ ಹತ್ರೆ, ಇದನ್ನೇ ಏವತ್ತೂ ಹೇಳ್ತಾ ಇರ್ತೆ. ಆಧುನಿಕ ಕವಿಗೊ, ತನಗೆ ಬರವಲೆಡಿತ್ತಿಲ್ಲೆ ಹೇಳಿ, ಹಳೆಯ ಶೈಲಿಯ ತೆಗಳಿರೆ ಹೇಂಗಕ್ಕು ? ಹಳತ್ತಿಂಗೆ ಏವತ್ತುದೆ ಬೆಲೆ ಇದ್ದು. ಶ್ರೀವತ್ಸ ಜೋಶಿಯವರನ್ನುದೆ ಬೈಲಿಲ್ಲಿ ಕಂಡು ಬಂದು ಕೊಶಿ ಆತು. ಮುಳಿಯದ ಭಾವ, ಅವರ ಬಗ್ಗೆ ಬರದ ಪದ್ಯ ಚೆಂದ ಆಯಿದು. ಬರೆತ್ತ ಮುಳಿಯ ರಘುವಿಂಗೆ, ಇನ್ನೂ ಅನೇಕರಿಂಗೆ, ಬರವಲೆ ಸ್ಪೂರ್ತಿ ಕೊಡ್ತ ಒಪ್ಪಣ್ಣಂಗೆ, ಸ್ಪೂರ್ತಿಲಿ ಬರದ್ದರ ಓದಿ ಒಪ್ಪ ಕೊಡುತ್ತ ಎಲ್ಲೋರಿಂಗು ಅಭಿನಂದನೆಗೊ.

    1. ಬೊಳುಂಬುಮಾವಾ°..
      ಆತ್ಮೀಯ ಒಪ್ಪಕ್ಕೆ ಒಪ್ಪಂಗೊ.

      ಬೈಲಿನೋರೆಲ್ಲ ಷಟ್ಪದಿಯ ಬರದರೆ ಎಷ್ಟು ಚೆಂದ ಅಕ್ಕಲ್ಲದೋ?
      ಬರವೊ°, ಆನುದೇ ಪ್ರಯತ್ನ ಮಾಡ್ತೆ.
      ತಪ್ಪಿರೆ ಮುಳಿಯಭಾವ° ಇದ್ದವನ್ನೇ ತಿದ್ದಲೆ!

      ಎಲ್ಲೋರುದೇ ಕಲಿವೊ°…

  19. ಅಪ್ಪಪ್ಪು. ಪ್ರದೀಪಣ್ಣ ನಿಂಗೊ ಬರವಲೆ ಶುರು ಮಾಡಿ..ಬೇಕಾರೆ ಕುಸುಮವೋ ಇನ್ನೆಂತದೊ ಒಂದರ ಹಿಡ್ಕೊಳ್ಳಿ. ( ಭಾಮಿನಿಯ ರಘುದೇ ಕುಂಟಿಕಾನ ಭಾವಂದೆ ಹಿಡ್ಕೊಂಡಿದವನ್ನೆ.) ಎಂಗೊ ಎಲ್ಲೋರು ಲಾಯಿಕಕ್ಕೆ ಒಪ್ಪ ಕೊಡುವೆಯ..
    ಪ್ರದೀಪಣ್ಣನ ಹಾಂಗೆ ಒಬ್ಬನಾದರೂ ಷಡ್ಪದಿಲಿ ಬರವಲೆ ಶುರು ಮಾದಿದರೆ ‘ಒಪ್ಪಣ್ಣ” ನ ಈ ಪ್ರಯತ್ನಕ್ಕೆ ಒಳ್ಳೆ ಅರ್ಥ ಬಕ್ಕು. ಹಾಂಗೆ ಬರಲಿ ಹೇಳಿ ಎನ್ನ ಒಪ್ಪಂಗ.
    ಲೇಖನ ಓದಿಯಪ್ಪಗ, ಶಾಲೆಲಿ ಕನ್ನಡ ವ್ಯಾಕರಣ ಕಲಿಸಿದ ಮಾಷ್ಟ್ರ ನೆಂಪಾತು.

    1. ತೆಕ್ಕುಂಜೆ ಕುಮಾರಣ್ಣಾ..
      ಒಪ್ಪ ಕಂಡು ಕೊಶಿಯಾತು.
      {ಶಾಲೆಲಿ ಕನ್ನಡ ವ್ಯಾಕರಣ ಕಲಿಸಿದ ಮಾಷ್ಟ್ರ ನೆಂಪಾತು }
      ವ್ಯಾಕರಣವೂ ನೆಂಪಾತೋ? 😉

  20. ಎನಗೆ ಷಟ್ಪದಿಗಳ ಓದುಲೆ ತುಂಬಾ ಒಪ್ಪ ಆವುತ್ತು. ಆದರೆ ಇಷ್ಟರವರೆಗೆ ಅದರ ಬರವ ಸೂತ್ರಂಗೊ ಗೊಂತಿದ್ದಿತಿಲ್ಲೆ. ಈಗ ಸರಿಯಾಗಿ ಅರ್ಥ ಆತು. ಒಪ್ಪಕ್ಕೆ ವಿವರಿಸಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ…
    ಹಾಂಗೆ ಚೌಕ್ಕಾರು ಮಾವಂಗುದೇ ಧನ್ಯವಾದಂಗೊ…
    ಲೇಖನ ತುಂಬಾ ಒಪ್ಪ ಆಯಿದು…

    1. ಅಂಬಗ ಬೇಗ ಒಂದು ಷಟ್ಪದಿ ಬರುದು ಕಳಿಸಿಕ್ಕಿ. ಎಷ್ಟು ಅರ್ಥ ಆಯ್ದು ಪರೀಕ್ಷೆ ಮಾಡ್ಳಾವ್ತು. ಪಾಸಾದರೆ ಸರ್ಟುಪಿಕೆಟು ಇದ್ದಡ.

      1. ಪ್ರದೀಪಣ್ಣೋ..
        ಚೌಕ್ಕಾರುಮಾವಂಗೆ ನಿಂಗಳದ್ದು ಮಾಂತ್ರ ಅಲ್ಲ, ಎಲ್ಲೋರದ್ದುದೇ ಅಭಿವಂದನೆಗೊ ಇದ್ದು.
        🙂

  21. ಷಟ್ಪದಿಗೊಕ್ಕೆ ಕೊಟ್ಟ ಉದಾಹರಣೆ ಲಾಯ್ಕ ಆಯಿದು.ಒೞೆ ಲೇಖನ.

  22. ಜಿರಲೇರಾಯ
    ========
    ಷಟ್ಪದಿಯೊಂದ
    ಭಾಮಿನಿಯೆಂದ
    ಕುಸುಮಶರಗಣ
    ಪ್ರಭಾವದಿಂದ
    ಭೋಗಸುಖ ಪರಿ-
    ವರ್ಧಿನಿಯೆಂದ
    ನಾ ವಾರ್ಧಕ ಮುಂ-
    ದೂಡುವೆನೆಂದ!

    “ಜಿರಲೇರಾಯ” ಎಂಬ ತಲೆಬರಹದ ಈಪದ್ಯವು, ಆರು ಷಟ್ಪದಿಗಳ ಬಗ್ಗೆ ಒಂದು ಅಷ್ಟಪದಿ. ಪ್ರತಿಸಾಲಿನಲ್ಲಿ ಏಳು ಮಾತ್ರೆಗಳು.ಒಟ್ಟು 56 ಮಾತ್ರೆಗಳ ಈ ಪದ್ಯವನ್ನು ’ಛಪ್ಪನ್ನೈವತ್ತಾರು’ ಮಾತ್ರೆಗಳ ಪದ್ಯ ಎನ್ನಬಹುದು!

    ——

    ಇತಿ,

    ನಾನ್-ಹವ್ಯಕ (ನಾನು ಹವ್ಯಕ ಅಲ್ಲ) ಶ್ರೀವತ್ಸ ಜೋಶಿ.

    1. ಛಪ್ಪನ್ನೈವತ್ತಾರು’ – ವಾಡಿಕೆಲಿ ಹೀಂಗೇ ಹೇಳ್ತದು ಕಾಣುತ್ತು . ಛಪ್ಪನ್ನ ಹೇಳಿರೆ ಐವತ್ತು ಆತಿಲ್ಯೋ ಮತ್ತೆ ಆರು ಸೇರ್ಸಿದರೆ ಸಾಲದೋ.

      1. [ಛಪ್ಪನ್ನ ಹೇಳಿರೆ ಐವತ್ತು] ಭಾವಯ್ಯ, ಛಪ್ಪನ್ ಹೇಳಿರೆ ಐವತ್ತಾರು. ಚೆನ್ನೈಲಿ ಇದು ವಾಡಿಕೆಲಿ ಇರ ಅಲ್ಲದಾ?

        1. ಓಹ್ ಅಪ್ಪನ್ನೇ. ಎನಗೇ ಲೆಕ್ಕ ತಪ್ಪಿತ್ತಿಲ್ಲಿ. ಪಚ್ಚಾಸ್ ಐವತ್ತಪ್ಪೋ. ಚಪ್ಪನ್ನ್ ಹೇಳಿಯಪ್ಪಗ ಐವಾತ್ತರಕ್ಕೆ ಏರಿತ್ತು. ಅಂತೂ ಫಾರೆಸ್ಟು ಕಾಡು, ಡೇಂಜರ್ ಅಪಾಯ, ಫಾಸ್ಟ್ ಸ್ಪೀಡು, ಡೌಟ್ ಸಂಶಯ ಹೇಳುತ್ತಾಂಗೆ ಆಯ್ಕಿದು ಛಪ್ಪನ್ನೈವತ್ತಾರು!

          1. ಮತ್ತೆ ಬಾರ್ ಸೋಪ್ ಸಾಬೂನು, ನಡೂ ಮಧ್ಯ ಸೆಂಟರ್ ಎಲ್ಲ ಬಿಟ್ಟದೆಂತಕೆ?

          2. ಅದೆಲ್ಲ ನಿಂಗೊಗೆ ಬಾಕಿ ಮಡುಗಿದ್ದು ಗುರುಗಳೇ.

          3. ಅಯ್ಯೋ ಪುಣ್ಯಾತ್ಮಾ…. ಆನೊಬ್ಬ ಸಾಮಾನ್ಯ ಒಕೀಲ…. ಗುರುಗೊ ಅಲ್ಲಾ….. ಹೆದರುಸೆಡಿ ಎನ್ನ…:(

      2. ಚೆನ್ನೈಭಾವಾ,
        {“ಛಪ್ಪನ್ನೈವತ್ತಾರು”} ಆಟಲ್ಲಿ ಅಶ್ವಮೇಧದ ಪ್ರಸ೦ಗ ಪೀಟಿಕೆಲಿ ಅರ್ಜುನ ಅಥವಾ ಶತ್ರುಘ್ನ ತಪ್ಪದ್ದೆ ಹೇಳುವ ಮಾತಿದು.
        ಛಪ್ಪನ್ನೈವತ್ತಾರು ದೇಶದ ರಾಜರಿ೦ದ ಕಪ್ಪಕಾಣಿಕೆ ಸ೦ಗ್ರಹಿಸಿ ಮು೦ದೊತ್ತಿ ಬರುವಾಗಾ…ಹೇಳಿಯಪ್ಪಗ ರೈಸುಗದಾ.

        1. “ಛಪ್ಪನ್ನೈವತ್ತಾರು ದೇಶಗಳಂ ಒಪ್ಪಗೊಂಡಿಪ್ಪ ರಾಯರ ತಲೆಚಿಪ್ಪುಗಳು ಗಪ್ಪನೆ ಉದುರುವಂತೆ ಛಪ್ಪಳಿಸಿ ಕೆಡಹಿದ ಕಡು ಶೌರ್ಯ ಧೀರನಲ್ಲದೆ ಕದನಕ್ಕೆ ಬಂದ ಬಕ ಹಿಡಿಂಬ ರಕ್ಕಸರ ಒಕ್ಕಲಿಕ್ಕೆ ದಿಕ್ಕುಪಾಲು ಮಾಡಿದ ಪ್ರಚಂಡ ಬಂಡನೋಧಾಮ ಹರಿಹರ ವಿರಾಮ ಭೀಮಸೇನನೆಂದು ಜಯಭೇರಿಯಂ ಭಡಿಸಲೈ ದೂತಾ ಸೌಖ್ಯಪ್ರಧಾತಾ….”

          ಶಾಲೆಲಿ ಭೀಮನಾಗಿ ಹೀಂಗಿಪ್ಪ ಡಯಲಾಗು ಹೇಳಿದ ನೆಂಪಿದ್ದು ಮಾಣಿಗೆ…

    2. ಒಪ್ಪಣ್ಣನ ಬೈಲಿ೦ಗೆ ಬ೦ದು ಒಪ್ಪ ಕೊಟ್ಟ ಅತಿಥಿಗಳ ಕ೦ಡು ಆನು ಕನಸು ಕಾ೦ಬದೋ ಹೇಳಿ ತೋರಿತ್ತು.ವೈಯಕ್ತಿಕವಾಗಿ ಎನಗೆ ಷಟ್ಪದಿಲಿ ಆಸಕ್ತಿ ಹುಟ್ಟುಲೆ ಕಾರಣ ಇವರ ಒ೦ದು ಲೇಖನ.

      ಚೆ೦ದವಾಯಿದು ಶುದ್ದಿ ಮನಕಾ
      ನ೦ದವಾತೀ ದಿನವು ಗೆನ ಮಕ
      ರ೦ದ ಕುಡುದಾ೦ಗಾತು ಕ೦ಡಪರೂಪದತಿಥಿಗಳಾ
      ಗ೦ಧಗಾಳಿಯೆ ಇರದ ಷಟ್ಪದಿ
      ಛ೦ದಬ೦ಧದ ಸಾರವನು ಮುದ
      ದಿ೦ದ ಬಳುಸಿದ ಹಿರಿಯರೀ ಶ್ರೀವತ್ಸಜೋಶಿಗಳು

      ದೂರದಮೆರಿಕ ದೇಶವಾದರು
      ವಾರವಾರವು ಬರದು ಲೇಖನ
      ನೇರವಾಗಿಯೆ ಸಕಲ ಪುಷ್ಪ ಪರಾಗ ಹ೦ಚುಗಿವು
      ಸಾರಸತ್ವದ ವಿವಿಧ ವಿಷಯವ
      ಚಾರುನುಡಿಯಲಿ ಬರವ ಗಾರುಡಿ
      ಗಾರರಿ೦ದೀ ಬೈಲ ಚಾವಡಿಗೇರಿ ನಿ೦ದಿದವು.

      ಒಪ್ಪಣ್ಣನ ಒಪ್ಪ ಲೇಖನಕ್ಕೆ ಮುಕುಟ ಮಡುಗಿದ ಹಾ೦ಗಾತದಾ ಜೋಶಿಗೊ ಬ೦ದಪ್ಪಗ.

      1. ವಾಹ್.. ಭಾರೀ ಚೆಂದ- ಭಾರೀ ಚೆಂದ ಆತು ಬೈಲು!

        ಒಪ್ಪಣ್ಣ ಭಾವನ ಷಟ್ಪದಿ ಪಾಠ; ಅದಕ್ಕೆ ಅತಿ ಗಣ್ಯ ಅತಿಥಿ ಶ್ರೀವತ್ಸ ಜೋಶಿಯಣ್ಣನ ಒಪ್ಪ; ಎರಡಕ್ಕೂ ಸೇರ್ಸಿ ನಮ್ಮ ‘ಬೈಲ ಭಾಮಿನಿ ಭೂಪ’ ಮುಳಿಯದಣ್ಣ ಬರದ ಭಾಮಿನಿ ಕಾವ್ಯದ ಮೆಚ್ಚುಗೆಗೊ-

        ಅದ್ಭುತ!

        ರಸಿಕರಿಂಗೆ ಇದರಿಂದ ಹೆಚ್ಚಿಗೆ ಇನ್ನೆಂತ ಬೇಕು..?!

    3. ದೂರದ ಅಮೇರಿಕಂದಲೇ ಬೈಲಿಂಗೆ ಬಂದ (ಶ್ರೀವತ್ಸ) ಜೋಶಿಯಣ್ಣಂಗೆ ಆತ್ಮೀಯ ಸ್ವಾಗತ.
      ಷಟ್ಪದಿಯ ಶುದ್ದಿಗೆ ವಿಶೇಷ – ಒಪ್ಪುವ ಅಯಿವತ್ತಾರು ಮಾತ್ರೆಯ ಪದ್ಯಲ್ಲಿ ಒಪ್ಪ ಕೊಟ್ಟು ಪ್ರೋತ್ಸಾಹ ಕೊಟ್ಟದು ತುಂಬಾ ಕೊಶಿ ಆತು.

      ಬೈಲಿಂಗೆ ಬತ್ತಾ ಇರಿ. ಬೇರೆಬೇರೆ ಶುದ್ದಿಗಳ ಓದಿ, ಪ್ರೋತ್ಸಾಹಿಸಿಗೊಂಡು ಇರಿ.
      {ನಾನ್-ಹವ್ಯಕ }
      ಈ ಬೈಲು ಮುಖ್ಯವಾಗಿ ಹವ್ಯಕ ಭಾಶೆಗಾಗಿ ಇಪ್ಪದು.
      ಈ ಭಾಶೆ ಅರ್ತ ಆವುತ್ತರೆ ಖಂಡಿತವಾಗಿಯೂ ಬಪ್ಪಲಕ್ಕು.

      ಆತ್ಮೀಯ ಸ್ವಾಗತಮ್.
      ಜೋಶಿಯಣ್ಣ, ಶುದ್ದಿ ಹೇಳ್ತಿರೋ?

  23. ಒಂದೇ ಹಪ್ಪಳವ ಹಲವು ಸರ್ತಿ ಹೊರುದು ತೆಗದ ಒಪ್ಪಣ್ಣ, ಅಂದರೂ ಅಂದ ಕೆಟ್ಟಿದಿಲ್ಲೆ ಕಂಡತ್ತೋ. ಒಪ್ಪಣ್ಣನ ಎಣ್ಣೆ ಬಾಣಾಲೆಯೂ ಕರಂಚಿದಿಲ್ಲೆ (ಕುಪ್ಪಿಲಿದ್ದದು ಕೆಟ್ಟೆಣ್ಣೆಯೋ ಹೇದು ಗೊಂತಾಯ್ದಿಲ್ಲೆ) ಹೇಳಿ ಒಪ್ಪಿಗೊಂಡು ಒಪ್ಪ.

    1. ಚೆನ್ನೈಭಾವಾ..
      ಶುದ್ದಿಯ ಮದಾಲು ಕೇಳಿ ಒಪ್ಪ ಕೊಟ್ಟದು ತುಂಬಾ ಕೊಶಿ ಆತು.
      ಕೆಟ್ಟೆಣ್ಣೆಲಿ ಹೊರುದ ನಮುನೆ ಆವುತ್ತೋ ಹೇಳಿ ಒಪ್ಪಣ್ಣಂಗೆ ಹೆದರಿಕೆ ಇತ್ತು.
      ಹೇಂಗಿದ್ದು ಹೇದು ನಿಂಗಳೇ ಹೇಳೆಕ್ಕಟ್ಟೆ!! 🙂

      1. ಕೆಟ್ಟೆಣ್ಣೆ ಪರಿಮ್ಮಳ ಬಯಿಂದಿಲ್ಲೆ. ಮತ್ತೆ ನಿಂಗಳ ಕೈಗುಣವೂ ಆತು ನೋಡಿ.

      2. ಶುದ್ದಿಯ ಮದಾಲು ನೋಡಿದವಂಗೆ ಇನಾಮು ಎಂತ್ಸೂ ಇಲ್ಲ್ಯೋ ಅಂಬಗ?!

        ಕೆಟ್ಟೆಣ್ಣೆಲಿ ಹೊರುದ ಪರಿಮ್ಮಳ ಬಯಿಂದಿಲ್ಲೆ. ಮತ್ತೆ ನಿಂಗಳ ಕೈಗುಣವೂ ಇತ್ತು ನೋಡಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×