ಮಕ್ಕಳ ಅಮ್ಮಂದ್ರಿಂಗೆ
ರಜ್ಜ ಸಮಯ ಮದಲು,ಹೇಳಿರೆ ಈಗಾಣ ಅಜ್ಜಿಯಕ್ಕಳ ಕಾಲಲ್ಲಿ.ಅಂಬಗ ಮನೆಲಿ ನಾಲ್ಕೈದು ಮಕ್ಕೊ ಇಕ್ಕು.ಅವರ ಆಳುಸಿಗೊಂಬಲೆ ಅಮ್ಮಂದ್ರಿಂಗೆ ಕಷ್ಟ ಆಗಿಯೊಂಡಿತ್ತಿದ್ದಿಲ್ಲೆ. ಹಾಂಗೇಳಿ ಅವೆಂತ ಲೂಟಿ,ಜಗಳ ಮಾಡದ್ದೆ ಪುಚ್ಚೆಕುಂಞಿಗಳ ಹಾಂಗೆ ಇತ್ತಿದ್ದವು ಹೇಳಿ ಅಲ್ಲ. ಜಗಳ ಮಾಡುಗು. ಜಗಳ ಹೇಳಿರೆ,ಜೆಡೆ ಎಳದು,ಕಚ್ಚಿ,ಬಡುದು,ಹರುಂಕಿ ಎಲ್ಲ ಮಾಡುಗು. ಅಕೇರಿಗೆ ದೂರು ಹೇಳ್ಲೆ ಅಮ್ಮನ ಹತ್ರಂಗೆ ಬಕ್ಕು. ದೂರು ಬಂದರೆ ತೀರ್ಪು ಆಯೆಕ್ಕನ್ನೆ. ಆದರೆ,ಅಮ್ಮದ್ರಿಂಗೆ ಗೊಂತಿರ್ತು, ರಜ್ಜ ಕಳುದರೆ ಜಗಳ ಮಾಡಿದ್ದರ ಮರದಿಕ್ಕಿ ಈ ಮಕ್ಕೊ ವಾಪಾಸು ಒಟ್ಟಿಂಗೆ ಆಡ್ಲೆ ಸುರುಮಾಡುಗು ಹೇಳಿ. ಆದರೂ,ಅಮ್ಮ ಕಚ್ಚಿ ಬಡುದು ಮಾದಿದವರತ್ರೆ ಹೀಂಗೆ ಮಾಡಿರೆ ನಿನ್ನ “ಬೆಣಚ್ಚಿಲ್ಲಿ ಉಣುಸಿ ಕಸ್ತಲೆಲಿ ಮನುಶುವೆ” ಹೇಳುಗು. ವಾದಿಗೂ ಕುಶಿ ಪ್ರತಿವಾದಿಗೂ ಕುಶಿ. ಎಂತಕೆ ಹೇಳಿರೆ ದೂರು ಹೇಳಿದವಕ್ಕೆ ಅಮ್ಮ ಬೈದತ್ತು ಹೇಳಿ ತೋರಿ ಸಮಧಾನ. ದೂರು ಹೇಳ್ಸಿಗೊಂಡವಕ್ಕೆ ಅಮ್ಮ ಬಸ್ಕಿ ತೆಗವ ಶಿಕ್ಷೆಯೋ ಮತ್ತೊ ಕೊಟ್ಟಿದಿಲ್ಲನ್ನೇ ಹೇಳ್ತ ಸಮಧಾನ.ಇನ್ನೂ ಜೋರು ಜಗಳ ಆದರೆ ಹೇಳುಗು “ಹೊಸ್ತಿಲು ಹೆರಮಾಡಿ ನಿನ್ನ ಒಳಮಾಡಿ ಬಾಗಿಲು ಹಾಕುವೆ” ಹೇಳಿ. ಹೀಂಗಿರ್ತ ಬೈಗಳು ಬೈಯೆಕ್ಕಾರೆ ಅಮ್ಮಂದ್ರೇ ಆಯೆಕಷ್ಟೆ.
ಕೆಲವು ಸಣ್ಣ ಮಕ್ಕೊ ಜೋರು ತರ್ಕ ಮಾಡುಗು. ಗೆಂಟು ತರ್ಕ. ಎಂತ ಹೇಳಿರೂ ಕೇಳವು. ಆರ್ಬಾಯಿ ಹಿಡಿಗು.ಅಷ್ಟಪ್ಪಗ ಅಮ್ಮಂದ್ರು ತರ್ಕ ಮಾಡಿರೆ ನಿನ್ನ “ಕೋಮರೋಡಿಗೆ ಕೊಡುವೆ” ಹೇಳುಗು. ಈ ಕೋಮರೋಡಿಗೆಯ ಇಷ್ಟ್ರವರೆಗೆ ಆರೂ ಕಂಡಿದವಿಲ್ಲೆ. ಆದರೂ,ಅದ ಕೋಮರೋಡಿ ಬಂತದ ಅದು ತರ್ಕ ಮಾಡ್ತ ಮಕ್ಕಳ ಎಲ್ಲ ಚೀಲಲ್ಲಿ ಹಾಕಿ ತೆಕ್ಕೊಂಡು ಹೋಕು ಹೇಳಿರೆ ಹೇಂಗಿಪ್ಪ ಮಕ್ಕಳೂ ತರ್ಕ ನಿಲ್ಸುಗು.
ಇನ್ನು ಚೂರು ದೊಡ್ಡ ಮಕ್ಕೊಗೆ ಇರುಳು ಊಟವೇ ಬೇಡ. ಎಷ್ಟು ಒತ್ತಾಯ ಮಾಡಿರೂ ತಿನ್ನವು. ಅವಕ್ಕುದೇ ಈ ಅಮ್ಮಂದ್ರತ್ರೆ ಒಳ್ಳೆ ಮದ್ದು ಇರ್ತು.ಅವು ಹೇಳುಗು ನೀನು ಹಶು ಹೊಟ್ಟೆಲಿ ಮನುಗಿರೆ ಇರುಳಪ್ಪಗ “ಹೆಗ್ಳು ಕೆರಗು ಹೊಟ್ಟೆಯ” ಹೇಳಿ. ಊಟ ಬೇಡದ್ದ ಮಕ್ಕಳುದೇ ಈ ಹೆಗ್ಳುನ ಹೆದರಿಕೆಲಿ ಹೊಟ್ಟೆ ತುಂಬ ಉಂಗು.
ಈ ಮಕ್ಕಳ ಅಪ್ಪನೋ ಅಜ್ಜನೋ ಪೇಟಗೆ ಹೋದಿಕ್ಕಿ ಬಪ್ಪಗ ಕೊಂಗಾಟಲ್ಲಿ ಒಂದು ಗಿರಿಗಿಟಿಯೋ,ಪೀಪಿಯೋ ತಂದು ಕೊಡುಗು ಇವಕ್ಕೆ. ನಾಲ್ಕುದಿನ ಅದರಲ್ಲಿ ಆಡಿಕ್ಕಿ ಐದ್ನೇ ದಿನ ಎಲ್ಲಿಯಾರು ಬಲುಗಿಡ್ಕಿಕ್ಕಿ ಬಕ್ಕು ಮಕ್ಕೊ. ಮತ್ತೆ ವಾಪಾಸು ಬೇಕು ಹೇಳಿ ತೋರಿರೆ ಅಮ್ಮನ ಜೀವ ತಿಂಗು.ಎಲ್ಲಿದ್ದೆನ್ನ ಪೀಪಿ? ಗಿರಿಗಿಟಿ? ಹೇಳಿ. ಈ ಮಕ್ಕೊ ಇಡುಕ್ಕಿದ್ದದರ ಹುಡ್ಕಿಯೊಂಬಲೆ ಅಮ್ಮಂದ್ರಿಂಗೆ ಎಡಿಗಾ?? ಹಾಂಗಾಗಿ, ಕೂಡ್ಲೆ ಹೇಳುಗು “ನೀನು ಹೆರಎಲ್ಲಿಯಾದರು ಹಾಕಿಪ್ಪೆ.ಅದರ ಆ ಕಂಡು ಕಾಕೆ ಕಚ್ಚಿಂಡು ಹೋತಾದಿಕ್ಕು” ಹೇಳಿ. ಈ ಕಾಕಗೊ ಚೆಂದ ಚೆಂದದ ಆಟದ ಸಾಮಾನು ಕಂಡ್ರೆ ಅದರ ಕುಂಞ್ಞಿಗೊಕ್ಕೆ ಆಡ್ಲೆ ತೆಕ್ಕೊಂಡು ಹೋಕು,ಹಾಂಗಾಗಿ ಹೆರಮಡುಗೆಡ ಆತ ಹೇಳಿ ಬುದ್ಧಿವಾದ ಹೇಳುಗು.
ಇನ್ನು ಈ ಮಕ್ಕೊಗೆ ಆಟಂದ ರಜ್ಜ ಪುರುಸೊತ್ತು ಸಿಕ್ಕಿರೆ ಅಜ್ಜಿಯ ಹತ್ರಂಗೆ ಹೋಗಿ ಕತೆ ಕೇಳ್ಲೆ ಕೂರುಗು.ಅಜ್ಜಿ ಹತ್ರೆ ಕತೆ ಕೇಳೆಕ್ಕರೆ ಹೂಂಗುಟ್ಟಿಂಡು ಬೇಕು ಹೇಳಿ ಗೊಂತಿದ್ದನ್ನೆ.ಈ ಅಜ್ಜಿಯಕ್ಕೊ “ಕತೆ ಕತೆ ಕಾರಣ ಬಿಕ್ಕಲು ಬೀರಣ ಹಾನೇಲಿಕ್ಕಣ ಕುಡ್ತೆಲಿಕ್ಕಣ ಹಿಡಿಕುಂಟೆಲಟ್ಟುಂಡ ಬೊಡ್ಡಿ ನೀ ಕೇಳು ಕತೆಯ” ಹೇಳಿ ಸುರುಮಾಡಿರೆ ಕಾಕೆ-ಗುಬ್ಬಿ ಕತೆ,ಅಜ್ಜಿಯೂ ಪುಳ್ಳಿಯೂ ಸುಟ್ಟವು ತಿಂದ ಕತೆ,ಎಲ್ಲ ಹೇಳುಗು. ಕತೆ ಎಷ್ಟು ಕೇಳಿರೂ ಸಾಕಾಗ ಈ ಮಕ್ಕೊಗೆ. ಅದಕ್ಕುದೇ ಅಜ್ಜಿ ಒಂದು ಕೆಣಿ ಮಾಡುಗು .ಅಜ್ಜಿ ಹೊಲಿವಗ ಸೂಜಿ ಬಿದ್ದ ಕತೆ ಹೇಳುಗು.ಮತ್ತೆ ಎಷ್ಟು ಹೂಂಗುಟ್ಟಿರೂ… ಸಿಕ್ಕುಗು…..ಸಿಕ್ಕ… ಎಂತ ಹೇಳಿರೂ ಕತೆ ಮುಗಿಯ ಇದ,ಮಕ್ಕೊಗೆ ಬೊಡುದಪ್ಪಗ ಎದ್ದೊಂಡು ಹೋಕು.
ಇದು ಒಂದು ತಲೆಮಾರು ಮದಲಾಣ ಮಕ್ಕಳ ಕತೆ. ಆದರ ಈಗಾಣ ಮಕ್ಕಳ ಕತೆಯೇ ಬೇರೆ. ಈಗಾಣ ಅಮ್ಮಂದ್ರಿಂಗೆ ಒಬ್ಬೊಬ್ಬನೇ ಮಕ್ಕೊ ಇಪ್ಪ ಕಾರಣ ಅವರೊಟ್ಟಿಂಗೆ ಜಗಳ ಮಾಡ್ಲೆ ಆರುದೇ ಇರ್ತವಿಲ್ಲೆ. ಅಪರೂಪಕ್ಕೆ ಇಬ್ರು ಇದ್ದರುದೇ ಜಗಳ ಮಾಡಿರೆ ಎರಡಕ್ಕೂ ಒಂದೊಂದು ಬಿಗುದು ಕೂರ್ಸುಗು.ಇನ್ನು,ತರ್ಕ ಮಾಡ್ತ ಸಣ್ಣ ಮಕ್ಕೊಗೆ ಟಿ.ವಿ ಹಾಕಿ ರಿಮೋಟು ಕೊಟ್ರೆ,ಅವೇ ಅದೆಂತದೋ ಸ್ಪೈಡರ್ ಮ್ಯಾನ್,ಸೂಪರ್ ಮ್ಯಾನ್ ಹಾಕಿಂಡು ಕೂರ್ತವು. ಈ ಅಮ್ಮಂದ್ರು ಅಲ್ಲಿಗೇ ತಿಂಬಲೂ ಕೊಡುಗು.ಅದೇ ಲಕ್ಕೊಟೆಲಿ ಬತ್ತಿಲ್ಲೆಯ ಕುರೆಕುರೆ ಹಾಂಗಿರ್ತದು. ಅದು ಹೊಟ್ಟಗೆ ಹೋದಷ್ಟು ಹೋತು.ಇನ್ನು ಕತೆ ಹೇಳ್ತ ಕ್ರಮವೇ ಮರದು ಹೋಯಿದು.
ನಮ್ಮ ಈಗಾಣ ಅಮ್ಮಂದ್ರು ಅವು ಸಣ್ಣ ಇದ್ದಿಪ್ಪಗಾಣದ್ದರ ರಜ್ಜ ನೆಂಪು ಮಾಡಿಂಡಾದರೂ,ಅವರ ಮಕ್ಕೊಗೆ ನಾಲ್ಕು ಕಟ್ಟು ಕತೆಯೋ,ರಾಮಾಯಣ ಮಹಾಭಾರತದ ಕತೆಯೋ ಹೇಳಿ,ಅಶನಕ್ಕೆ ತುಪ್ಪ-ಉಪ್ಪು ಬೆರುಸಿ ಬಾಯಿಗೆ ಹಾಕಿ ತಿನುಸಿರೆ ಆ ಮಕ್ಕೊ ದೊಡ್ಡ ಆಗಿಯಪ್ಪಗ ನಿಂಗಳ ನೆಂಪು ಮಾಡುವಗ ನೆಂಪಿಂಗೆ ಎಂತಾರು ಒಳಿಗು.ಈ ಕುರೆಕುರೆ,ಕೋಲಾ,ಪಿಜ್ಜಾ-ಬೊಜ್ಜಾ ಎಲ್ಲ ನೆಂಪಿಲ್ಲಿ ಒಳಿವಲಿದ್ದೋ…??? ಸರಿ ಅಲ್ಲದೋ….??
~~~***~~~~
- ಮಕ್ಕಳ ಅಮ್ಮಂದ್ರಿಂಗೆ - July 15, 2014
ಲೇಖನ ಒಳ್ಳೆದಾಯ್ದು. ಆನು ಮಕ್ಕೊಗೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಿದ್ದೆ…… ನಾನೇ ಒಂದು ಆಲದ ಮರ ಸೃಷ್ಠಿಸಿ ಅದರ ಸುತ್ತ ನಡೆವ ಹಾಂಗೆ ಸುಮಾರು ಕತೆ ಕಟ್ಟಿ ಕಟ್ಟಿ – ಧಾರಾವಾಹಿ ತರ ಹೇಳಿಕೊಂಡಿತ್ತಿದ್ದೆ. ಬರೆದರೆ ಒಂದು ಪುಸ್ತಕ ಆವುತ್ತಿತ್ತು ಹೇಳಿ ಮಕ್ಕೊವುದೆ ಅವರ ಅಪ್ಪನುದೆ ತಮಾಷಿ ಮಾಡ್ತಿದ್ದವು. ಮಕ್ಕಳ ಕತೆ ಅಲ್ಲದಾ ? ಹೀಂಗೆ ಇರೆಕ್ಕು ಹೇಳಿ ಇಲ್ಲನ್ನೆ. …. ಎನ್ನ ಮಕ್ಕಳಿಗೆ ಹಿಂದಿನ ಪರಂಪರೆಯ ದಾಟಿಸಿದ ಖುಷಿ ಇದ್ದು. ಫುಲ್ ಟೈಂ ಅಮ್ಮ ಆಯೆಕ್ಕು ಹೇಳಿ, ಇದ್ದ ಕೆಲಸ ಬಿಟ್ಟದ್ದರ ಬಗ್ಗೆ ಬೇಜಾರಿಲ್ಲೆ ಎನಗೆ…..
ಹಳೆದಿನ೦ಗಳ ನೆಂಪು ಮಾಡಿ ಕೊಟ್ಟು ಈಗ ಅಬ್ಬೆ ಅಪ್ಪನ ಕರ್ತವ್ಯವ ಸೂಚ್ಯವಾಗಿ ತಿಳುಶಿದ್ದೆ ಶ್ರುತಿ .. ತುಂಬಾ ತೂಕದ ಶುದ್ದಿ .
ಧನ್ಯವಾದಂಗೋ ಭಾಗ್ಯಲಕ್ಷ್ಮಿ ಅಕ್ಕ,ಶೈಲಜಾ ಕೇಕಣಾಜೆ ಅಕ್ಕ….
ಬರದ್ದು ಒಳ್ಳೆದಾಯಿದು ಶ್ರುತಿ .ತುಪ್ಪ ಹಾಕಿ ಉಣ್ಣುಸಿದ ಅಮ್ಮಂದ್ರ ನೆನಪ್ಪು ಮಾಡ್ಲೆ ಮೂಗಿಂಗೆ ತುಪ್ಪ ಉದ್ದಿ ಪರಿಮ್ಮಳ ಬರುಸಿದ ಹಾಂಗಾತು .
ಶ್ರುತಿಯ ಲೇಖನ ಓದುಲೆ ಸುರುಮಾಡಿದರೆ ಸಾಕು ; ಅದುವೇ ಮತ್ತೆ ಓದಿಸಿ ಗೊಂಡು ಹೋವುತ್ತು . ಆನು ಶ್ರುತಿಯ ಎಲ್ಲಾ ಲೇಖನಕ್ಕೂ ”ಕ್ಲೀನ್ ಬೌಲ್ಡ್”. 🙂 ಇನ್ನೂ ಹೀಂಗಿಪ್ಪ ಲೇಖನಕ್ಕೆ ಕಾಯ್ತಾ ಇರ್ತೆ ….
olledaaydu koose
ಒಳ್ಳೆ ಬರಹ ಶ್ರುತಿ..
ಎನಗೆ ಎನ್ನಜ್ಜ
ಕತೆ ಹೇಳು ಕತೆ ಹೇಳು ಕುಂಡಿಭಟ್ಟ…
ಆನೆಂತ ಹೇಳಲಿ ಮಣ್ಣಾಂಗಟ್ಟಿ..
ನೀರಿಲ್ಲಿ ಬಿದ್ದರೆ ಕರಗ್ಯೋಪೆ..
ಬೆಶಿಲಿಲ್ಲಿ ಬಿದ್ದಾರೆ ಒಣಗ್ಯೋಪೆ..
ನೆರಳಡಿಲಿದ್ದರೆ ಹಾಂಗೇ ಇಪ್ಪೆ .. ಹೇಳ್ಯೋಂಡೆ ಕತೆ ಸುರುಮಾಡಿಗೊಂಡಿತ್ತದು ಕಣ್ಣಿಂಗೆ ಕಟ್ಟಿತ್ತೊಂದರಿ…