Oppanna.com

ಪ್ರಕೃತಿಂದ ಪಾಠ

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   21/09/2017    8 ಒಪ್ಪಂಗೊ

`ತೆಕ್ಕೋ….’ ಹೇಳಿ ರಾಶಿ ರಾಶಿ ಸೊರುಗಿ ಬಚ್ಚಿಹೋತು ಕಾಣ್ತು ನಮ್ಮ ಅಬ್ಬೆಗೆ, ರಾಜಾ ಕೂದು ಕೂದಲೆಲ್ಲ ಒಣಗುಸಿಯೋಂಬೋ ಹೇಳಿ ಗ್ರೇಶಿತ್ತೋ ಏನೋ….ಹರಗಿದ ಕೂದ್ಲಿಂದ ತೊಟ್ಟು ತೊಟ್ಟಾಗಿ ನೀರು ಭೂಮಿಗೆ ಬೀಳ್ತದು ಕಂಡಪ್ಪಗ ಇದೇ ತಕ್ಕ ಸಮಯ ಹೇಳಿ ಕೈಲಿ ತಟ್ಟೆ ಹಿಡ್ಕೊಂಡು ಪೂಜೆಗೆ ಹೂಗು ಕೊಯ್ವಲೆ ಜಾಲಿಂಗಿಳಿದೆ. ಇಡೀ ಜಾಲು ತಿರುಗಿಯಪ್ಪಗ ಸಿಕ್ಕಿದ್ದದು ಬರೇ ನಾಕು ದಾಸನ ಹೂಗು. ಅಮೃತಧಾರೆಯ ಎರದೂ…ಎರದೂ ಮಕ್ಕಳ ಕೊಬ್ಬುಸಿ ಮಡಿಗಿದ್ದು ಈ ಅಬ್ಬೆ ಹೇಳಿ ಗ್ರೇಸಿಯೋಂಡೆ. ಸೆಸಿಗೋ ಎಲ್ಲ ಅಂಗೈ ಅಗಲದ ಕಡುಪಚ್ಚೆ ಎಲೆಗಳ ಮೈತುಂಬ ಹೊದ್ದೊಂಡು ತಂಪು ಗಾಳಿಗೆ ಆರಾಮಲ್ಲಿ ಮೈತೂಗಿಯೊಂಡು ನೀಂದೋಂಡಿದ್ದವು. ಮುಕುಟು, ಹೂಗು ಇರೇಕಾದಲ್ಲಿ ಬರೀ ಮುಷ್ಟಿ ಮುಷ್ಟಿ ಚಿಗುರುಗಳೇ. ಬೆಶಿಲು ಬೀಳ್ಲೆ ಸುರುವಾದಪ್ಪಗ ಎಲ್ಲ ಸೆಸಿಗಳನ್ನೂ ಚೆಂದಕೆ ಕತ್ತರ್ಸೇಕು, ಅಂಬಗ ಚಿಗುರು ಬಪ್ಪಾಗಳೇ ಮುಕುಟನ್ನೂ ತೆಕ್ಕೋಂಡೇ ಬಕ್ಕು. ಬೆಶಿಲಿನ ಬೆಶಿ, ಕತ್ತರಿಯ ಬೇನೆ ಎರಡೂ ಹೊಸ ಹುಟ್ಟಿಂಗೆ ಕಾರಣ ಆವುತ್ತು. ಎಂತ ವಿಚಿತ್ರ ಅಲ್ದಾ? ಸುಖ ಸುರಿವ ಶರೀರಲ್ಲಿ ಕ್ರಿಯೇಟಿವಿಟಿಯೇ ಇಲ್ಲೆ. ಮೈಲಿ ಬೊಜ್ಜು ಬೆಳದ್ದಷ್ಟೇ ಲಾಭ(ಇಲ್ಲಿ ಬೊಜ್ಜು ಹೇಳಿರೆ ವೇಸ್ಟ್ ಹೇಳಿ ತೆಕ್ಕೋಳಿ).
ನಮ್ಮ ಜೀವನವೂ ಹೀಂಗೇ ಅಲ್ದೋ ಹೇಳಿ ಕಂಡತ್ತು. ನಾವು ಸುಖ ದುಃಖವ ಬೆಶಿಲು ನೆರಳು ಹೇಳುವ ಶಬ್ದಂಗಳೊಟ್ಟಿಂಗೆ ಸಮೀಕರ್ಸುತ್ತು. ಆದರೆ ನಿಜವಾಗಿಯೂ ನೆರಳ ತಂಪಿನ ಅನುಭವ ಸರಿಯಾಗಿ ಆಯೇಕೂ ಹೇಳಿಯಾದ್ರೆ ಬೆಶಿಲಿನ ಕಡ್ಪವ ಸರಿಯಾಗಿ ಅನುಭವಿಸೇಕು. ಹೆರಿಗೆಯ ವಿಷಯವನ್ನೇ ತೆಕ್ಕೋಂಬ, ಸುಖ ಪ್ರಸವ ಹೇಳ್ತವಷ್ಟೇ ಹೊರತಾಗಿ ಪ್ರಸವ ಸುಖ ಹೇಳಿ ಆರಾರು ಹೇಳ್ತವಾ? ಪ್ರಸವ ವೇದನೆ ತಿಂಬ ಆ ಹೊತ್ತಿಲ್ಲಿ, `ಸಾಕಪ್ಪಾ… ಸಾಕು…’ ಹೇಳಿ ನಾವು ಗ್ರೇಸುತ್ತಲ್ದಾ? ಆನುದೇ ಹಾಂಗೆ ಗ್ರೇಸಿದೋಳೇ. ಆದರೂ ಆ ಯಮಯಾತನೆಗೆ ಎನ್ನನ್ನೇ ಆನು ಮೂರು ಸರ್ತಿ ಒಡ್ಡಿಯೋಂಡಿದೆ. ಎಂತಕೆ? ಹೆರಿಗೆಯ ನಂತರ ಮಡಿಲು ತುಂಬುವ ಮೃದು ಮಲ್ಲಿಗೆ ರಾಶಿಯ ಹಾಂಗಿಪ್ಪ ಆ ಕುಂಞ ಹಿಳ್ಳೆಯ ಎದೆಗೊತ್ತುವಾಗ, ಅಮೃತ ಧಾರೆ ಎರೆದು ಲಾಲನೆ ಪಾಲನೆ ಮಾಡುವಾಗ….ಹೀಂಗೆ ಪ್ರತಿ ಹಂತಲ್ಲಿಯೂ ಜೀವನದ ಸಾರ್ಥಕತೆಯ ಅನುಭವಿಸುತ್ತು ನಾವು. ಜೀವನವೇ ಹಾಂಗೆ, ಕಷ್ಟದ ನಂತರವೇ ಸುಖ…,ಸುಖದ ಅರ್ಥ ಸರಿಯಾಗಿ ಗೊಂತಾಯೇಕಾರೆ ಕಷ್ಟ ಬಪ್ಪಲೇ ಬೇಕು. ಹದವಾದ ಬೆಶಿಲು, ನೀರು, ಗೊಬ್ಬರ ಬಿದ್ದ ಸೆಸಿಯ ಕಾಲ ಕಾಲಕ್ಕೆ ಕತ್ತರ್ಸಿಯೊಂಡಿದ್ದರೆ ಯಾವಾಗಲೂ ಮೈತುಂಬ ಹೂಗು, ಚಿಗುರು ಚಿಗುರಿಲ್ಲಿಯೂ ಮುಕುಟುಗಳ ಗೊಂಚಲು. ನೋಡುಗರ ಕಣ್ಣಿಂಗೂ ಹಬ್ಬ, ದೇವರ ಪಾದ ಸೋಕಿದ ಹೂಗಿನ ಜೀವವೂ ಸಾರ್ಥಕ. ಪ್ರಾರ್ಥನೆ ಮಾಡುವಾಗ `ಕಷ್ಟಂಗಳ ಕೊಡೇಡ ದೇವರೇ…’ ಹೇಳಿ ಕೇಳಿಯೋಂಬಲಾಗಾಡ. ಅದರ ಬದಲು `ಕಷ್ಟಂಗಳ ಎದುರ್ಸಿ ಮುನ್ನುಗ್ಗುವ ಧೈರ್ಯ ಕೊಟ್ಟು ಮುನ್ನಡೆಸು ದೇವಾ…’ ಹೇಳಿ ಬೇಡೇಕಾಡ. ಎಷ್ಟು ಅರ್ಥವತ್ತಾದ ಮಾತು!
ಪ್ರಕೃತಿಯ ಸೂಕ್ಷ್ಮವಾಗಿ ಗಮನಿಸಿಯೊಂಡಿದ್ದರೆ ಅದುವೇ ನವಗೆ ಜೀವನದ ಪಾಠ ಹೇಳಿಕೊಡ್ತು. ಕಾಂಕ್ರೀಟು ಕಾಡಿಲ್ಲಿ ಕಳದು ಹೋದ ನಮ್ಮ ಮಕ್ಕೋ ಎಲ್ಲಿಂದ ಪಾಠ ಕಲಿವದೋ ಏನೋ…?
ಈ ಉದಿಯಪ್ಪಗಾಣ ಹೊತ್ತಿಲ್ಲಿ ಹೀಂಗಿದ್ದೆಲ್ಲ ಮಂಡೆಲಿ ತುಂಬ್ಸಿಯೊಂಡು ಕೂದರೆ ದೇವರ ಪಾದಕ್ಕೆ ಹೂಗೂ ಇಲ್ಲೆ, ಮನುಷ್ಯರ ಹೊಟ್ಟೆಗೆ ತಿಂಡಿಯೂ ಇಲ್ಲೆ….ಹೇಳಿ ಅಕ್ಕನ್ನೇ…? ತಲೆ ಕುಡುಗಿ ಪುನಃ ಹೂಗು ಹುಡ್ಕಿದೆ. ಬೆಶಿಲು ಬಪ್ಪಲೆ ಸುರುವಾದಪ್ಪಗ ಮದಾಲು ಹೂಗಿನ ಸೆಸಿಗಳ ಕತ್ತರ್ಸಿ ಬಿಟ್ಟಿಕ್ಕೇಕು ಹೇಳಿ ಗ್ರೇಸಿಯೊಂಡು ಅರೆವಾಶಿಯೂ ತುಂಬದ್ದ ಹೂಗಿನ ತಟ್ಟೆಯ ಹಿಡ್ಕೊಂಡು ಒಳಾಂಗೆ ಹೋದೆ.

8 thoughts on “ಪ್ರಕೃತಿಂದ ಪಾಠ

  1. ವೈರುದ್ಧಂಗಳೊಟ್ಟಿಂಗೆ ಹೋರಾಟವೇ ಜೀವನ

  2. ಲಾಯಕ ಆಯಿದು. ಹಗಲೆಲ್ಲ ಕಷ್ಟ ಪಟ್ಟು ದುಡುದರೆ ಮಾತ್ರ ಇರುಳಪ್ಪಗ ಲಾಯಕ ಒರಕ್ಕು ಬಪ್ಪ ಹಾಂಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×