Oppanna.com

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-8)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   23/08/2016    4 ಒಪ್ಪಂಗೊ

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ
ಭಾಗ 6 : ಸಂಕೊಲೆ
ಭಾಗ 7 : ಸಂಕೊಲೆ

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-8)

“ಶುಭಾಶಯಂಗೊ” ತಣ್ಣಂಗೆ ಹೇಳಿಕ್ಕಿ ಹರಿಣಿ ಸಂಪರ್ಕ ಕಡಿದತ್ತು.

ಪ್ರಿಯ ಬಂಧುಗಳೇ…, ಇದೆಂತಾ ಅಬ್ಬೆಯಪ್ಪಾ…, ಹೀಂಗೂದೆ ಒಂದು ಹೇಳ್ತ ಕ್ರಮ ಇದ್ದೋ…?ಲೋಕಲ್ಲಿಪ್ಪ ಯೇವ ಅಬ್ಬೆಕ್ಕಾರೂ ಮಕ್ಕಳ ಆ ನಮೂನೆಯ ಉದ್ದಟತನಕ್ಕೆ ಈ ನಮೂನೆಲಿ ಪ್ರತಿಕ್ರಿಯೆ ತೋರ್ಸುವ ಕ್ರಮವೂ ಇದ್ದೋ….ಹೇಳಿಯಲ್ಲ ಜಾನ್ಸಿದಿರೇನೋ? ಅಂದರೆ ಹರಿಣಿಯ ಮನೋವ್ಯಾಪಾರ ಯಾವ ರೀತಿಲಿ ಬದಲಾಯಿದು ಹೇಳ್ತದ್ರ ನಿಂಗೊ ಅರ್ಥ ಮಾಡಿಯೋಂಡ್ರೆ ಕಥೆಯ ಓಘಕ್ಕೆ ಸರಿಯಾಗಿ ನಿಂಗಳ ಮನೋವೇಗವನ್ನೂ ಹೊಂದುಸಿಯೋಂಬಲಕ್ಕು.

ಯೇವಾಗ ಗುರುಗಳ ನೋಟ, ಪ್ರವಚನ, ಆಶೀರ್ವಚನ ಇತ್ಯಾದಿಗಳ ಮೂಲಕ ಸಿಕ್ಕುವ ಪ್ರತ್ಯಕ್ಷ , ಪರೋಕ್ಷ ಸಂದೇಶಂಗಳ ಬಗ್ಗೆ ಹರಿಣಿ ಆಳವಾಗಿ ಆಲೋಚಿಸಲೆ ಸುರು ಮಾಡಿತ್ತೋ ಅಂದಿಂದ ಅದಕ್ಕೊಂದು ಸತ್ಯ ಕಾಂಬಲೆ ಸುರುವಾತು. `ಯೇವಾಗಳೂ ಆನೆಂತಕೆ ಎನ್ನ ಬಗ್ಗೆ ಮಾಂತ್ರ ಯೋಚಿಸೇಕು….?ಚಿಂತಿಸೇಕು…? ಸುರಭಿ ಎನ್ನ ಮಗಳು ಆದ ಕಾರಣಕ್ಕೆ ಅದು ಆನು ಹೇದ ಹಾಂಗೇ ಇರೇಕು…,ಎನ್ನ ಇಷ್ಟವೇ ಅದರ ಇಷ್ಟವೂ ಆಯೇಕು…,ಎನ್ನ ಮನಸ್ಸೇ ಅದರ ಮಾತಾಯೇಕು….,ಹೀಂಗಿದ್ದ ನಿರೀಕ್ಷೆಗೊ ಎಷ್ಟ್ರಮಟ್ಟಿಂಗೆ ಸರಿ? ಯಾವ ರೀತಿ ಎನಗೆ ಆನು ಹೇಳಿದ್ದೇ ಆಯೆಕು ಹೇಳ್ತ ಸ್ವಕೇಂದ್ರಿತ ಮನೋಭಾವ ಇದ್ದೋ ಅದೇ ರೀತಿ ಅದಕ್ಕೂ ಇಪ್ಪಲಾಗ ಹೇದು ಇಲ್ಲೇನ್ನೇ? ಒಂದಾರಿಯಾದ್ರೂ ಈ ವಿಷಯವ ಆನು ಅದರ ಜಾಗೇಲಿ ನಿಂದು ಆಲೋಚನೆ ಮಾಡಿದ್ದಿದ್ದೋ? ಮಕ್ಕೊ ನಾವು ಮಾಡಿದ್ದರ ಅನುಕರಣೆ ಮಾಡುಗಷ್ಟೆ ಹೊರತಾಗಿ ನಾವು ಹೇಳಿದ್ದರ ಅನುಸರಣೆ ಮಾಡವು ಹೇಳ್ತದ್ರ ಸುರುವಿಂದಲೇ ತಿಳ್ಕೊಂಡ್ರೆ ಜೀವನ ಎಷ್ಟು ಹಗುರ…? ಗೆಂಡ ಇಪ್ಪಲ್ಲಿಗೆ ಹೋಗದ್ದೆ ಮಗಳೊಟ್ಟಿಂಗೆ ಒಬ್ಬನೇ ಇತ್ತಿದ್ದೆ ಹೇಳುವಾಗ `ಮಗಳ ಉಜ್ವಲ ಭವಿಷ್ಯಕ್ಕೆ ಬೇಕಾಗಿ ಆನು ಮಾಡಿದ ತ್ಯಾಗ ಅದು’ ಹೇಳ್ತ ಪೊಳ್ಳು ಮುಖವಾಡವ ತೆಗದು ನೋಡೀರೆ ಅಲ್ಲಿ ಕಾಣ್ತದು ಎಂತರ? ಎನಗೆ ಬೇಕಾದ ಹಾಂಗೆ ಮಗಳ ಬೆಳಶೇಕು ಹೇಳ್ತ ಸ್ವಾರ್ಥದ ವಿಜೃಂಭಣೆ ಹೊರತಾಗಿ ಅಲ್ಲಿ ಬೇರೆಂತಾರೂ ಇತ್ತಿದ್ದೋ? ಮೂರೂ ಜೆನವೂ ಒಟ್ಟಿಂಗೇ ಇದ್ದು ಸಂಸಾರದ ಕಷ್ಟ ಸುಖಂಗಳ ಒಟ್ಟಿಂಗೆ ಅನುಭವಿಸಿ, ಹಂಚಿಯೊಂಡು ಹಗುರ ಆಯೇಕಾದಲ್ಲಿ ಆನು ಮಾಡಿದ್ದು ಎಂತರ? ಸುರಭಿ ರಾಜಕುಮಾರಿಯ ಹಾಂಗೆ ಬೆಳೇಕು, ಅದರ ಥಳಕು ಬಳಕುಗಳ ಊರವು ನೋಡಿ ಮೂಗಿಂಗೆ ಬೆರಳು ಮಡುಗೇಕು….,ಆ ಮೂಲಕ ಆನು ದೊಡ್ಡ ಜೆನ ಆಯೇಕು ಹೇಳ್ತದೇ ಆಗಿತ್ತಿದ್ದಲ್ಲ್ಯೋ ಎನ್ನ ಮನದಿಂಗಿತ? ಹೀಂಗಿಪ್ಪ ಹುರುಳಿಲ್ಲದ್ದ ಢಂಬಾಚಾರದ ಭಾವನೆಗಳೇ ಅದರ ಮನಸ್ಸಿಲ್ಲಿಯೂ ಮೊಳಕೆಯೊಡೆಯುವ ಹಾಂಗೇ ಇತ್ತಿದ್ದದಲ್ದೋ ಎನ್ನ ನಡವಳಿಕೆ? ಅದು ಬೆಳದ ರೀತಿ, ಅದರ ಜೀವನದ ಶೈಲಿಗೆ ಸರಿಯಾಗಿಯೇ ಅದರ ಆಲೋಚನೆಗೊ, ನಡವಳಿಕೆಗೊ ರೂಪುಗೊಂಡತ್ತು. ಆನು ಸಾಂಪ್ರದಾಯಿಕ ಕೂಡು ಕುಟುಂಬಲ್ಲಿ ಬೆಳೆದ ಕಾರಣ ಹಿರಿಯರ ಧಿಕ್ಕರ್ಸುತ್ತದ್ರ ಕನಸಿಲ್ಲಿಯೂ ಜಾನ್ಸಲೆ ಎಡಿಗಾತಿಲ್ಲೆ. ಸುರಭಿಗೆ ಹಾಂಗಿರ್ತ ಕಟ್ಟುಪಾಡುಗೊ ಒಂದೇ ಒಂದಾದ್ರೂ ಇತ್ತಿದ್ದೋ? ಎನ್ನ ಹದಿಹರೆಯದ ಆಶೆಗೊ ಯಾವುದೂ ಪೂರೈಸಿದ್ದಿಲ್ಲೆ ಹೇದೊಂಡು ಎನ್ನ ಮಗಳ `ಬಸವ ಎದ್ದ ಬಾಲ ಬೀಸಿದ’ ಹೇಳ್ತಾಂಗಿದ್ದ ವಾತಾವರಣಲ್ಲಿ ಬೆಳಶಿದ್ದು ಆನೇ ಅಲ್ದೋ? ಹತ್ತಿ ಇಪ್ಪ ಹಾಂಗೇ ಅದರಿಂದ ತೆಗೆದ ನೂಲಿನ ಗುಣಮಟ್ಟವೂ ಇಕ್ಕಷ್ಟೆ ಅಲ್ದೋ? ಎನ್ನ ಅರೆಬೆಂದ ಕನಸುಗಳ ಅತೃಪ್ತ ಮನಸ್ಸಿನ ವಿಕೃತ ರೂಪವೇ ಸುರಭಿ….!?? ಹಾಲು ಕೊದಿವಲೆ ಮಡುಗುವಾಗಳೇ ಕಿಚ್ಚು ಯೇವ ರೀತಿಲಿ ಹೊತ್ತುತ್ತಾ ಇದ್ದು ಹೇದೂ ಯೇವಾಗ ಅದಕ್ಕೆ ಕೈಲು ಹಾಕಿ ತೊಳಸೇಕು ಹೇದೂ ಸರಿಯಾಗಿ ನೋಡಿಯೋಂಡ್ರೆ ಹಾಲು ಒಲೆಗೆ ಚೆಲ್ಲ. ಕಿಚ್ಚಿನ ದೊಂದಿಯ ಹಾಂಗೆ ಹೊತ್ತುಸಿ ಮಡುಗಿಕ್ಕಿ ಹೆರಾಂಗೆ ಎದ್ದಿಕ್ಕಿ ಹೋಗಿ ಒಳ ಬಪ್ಪಾಗ ಹಾಲು ಪೂರಾ ಚೆಲ್ಲಿತ್ತು ಹೇದು ತಲೆಗೆ ಕೈ ಮಡುಗೀರೆ ಅಕ್ಕೋ?

ಸುರಭಿ ಹುಟ್ಟಿದ ಲಾಗಾಯ್ತಿಂದ ಅದರ ಬೆಳವಣಿಗೆಯ ಒಂದೊಂದು ಹಂತವನ್ನೂ ಆನು ಎಷ್ಟು ಸಂತೋಷಂದ ಅನುಭವಿಸಿದೆ…,ಆ ಮೋಹದ ಅಲೆಯ ಮೇಗೆ ತೇಲುವ ಆಕರ್ಷಣೆ ಎಷ್ಟು ಬಲವಾಗಿ ಇತ್ತಿದ್ದು ಹೇಳಿದ್ರೆ ದಡಲ್ಲಿ ನಿಂದು ನಿರೀಕ್ಷೆಂದ ಎನ್ನ ಹೊಡೆಂಗೆ ನೋಡಿಯೊಂಡಿತ್ತಿದ್ದ ಮೋಹನನ ಕಡೆಗಣಿಸಿದೆ. ಗೆಂಡನ ಕಡೆಗಣಿಸಿದೆ ಹೇಳಿ ಅಂತರಂಗಲ್ಲಿ ಮೂಡ್ಲೆ ಸುರುವಾದ ಆ ಪಾಪಪ್ರಜ್ಙೆಂದಾಗಿಯೇ ಅಂದು ಆನು ಮಗಳೊಟ್ಟಿಂಗೆ ಮೈಸೂರಿನ ಕಾರ್ಯಕ್ರಮಕ್ಕೆ ಹೋಗದ್ದದು….ಮೊದಲಾಣ ಮನಃಸ್ಥಿತಿಲೇ ಇರುತ್ತಿದ್ರೆ `ಮಗಳು ಅಷ್ಟು ದೊಡ್ಡ ಕಾರ್ಯಕ್ರಮ ಕೊಡ್ತಾ ಇಪ್ಪಾಗ ಹೋಗದ್ರೆ ಹೇಂಗೆ…? ನಿಂಗೊ ಮದ್ದು ಮಾತ್ರೆ ಎಲ್ಲ ಸರಿಯಾಗಿ ತೆಕ್ಕೋಳಿ…’ ಹೇಳಿ ಮೋಹನನ ಹತ್ರೆ ಹೇಳಿಕ್ಕಿ ಸುರಭಿಯೊಟ್ಟಿಂಗೆ ಹೋವ್ತಿತೆ. ಅಂದರೆ ಈಗ ಹಾಂಗಲ್ಲ. ವಸ್ತು ಸ್ಥಿತಿಯ ತುಲನಾತ್ಮಕವಾಗಿ ನೋಡುವಷ್ಟು ಬುದ್ಧಿ ಪಕ್ವವಾಯಿದು. ಇಂದು ಸುರಭಿಗೆ ಅದರ ಜೀವನ ಸಂಗಾತಿ ಸಿಕ್ಕಿದ. ಎನಗೆ? ಜೀವನ ಸಂಗಾತಿ ಕೈ ತಪ್ಪಿ ಹೋಪ ಮೊದಲು ಎನಗೆ ಪರೋಕ್ಷವಾಗಿ ಅರಿವು ಮೂಡ್ಸಿದ್ದು ಆರು? ಸುರಭಿಯ ಕಠೋರ ಮಾತುಗಳೋ ಅಥವಾ ಗುರುಗಳ ಮೃದು ಮಧುರ ನುಡಿಗಳೋ…? ಎರಡೂದೆ. ಮಗಳು ಎನ್ನ ಕರಳಿಂಗೆ ಕೊಳ್ಳಿ ಮಡುಗಿತ್ತು ಹೇಳ್ತ ಬೇನೇಂದಲೇ ಅಲ್ದೋ ಆನು ಗುರುಗಳ ಕಡೇಂಗೆ ನೋಡಿದ್ದದು…? ಅಲ್ಲಿಂದ ಬಂದೇ ಬಂತನ್ನೇ ಅಭಯ ಹಸ್ತ? ಹಾಂಗಾಗಿ ಸುರಭಿ ಎನಗೆ ಜೀವನದ ಪಾಠ ಕಲಿಶಿದ ಗುರುವಾದ್ರೆ ಗುರುಗಳು ಜೀವಕ್ಕೆ ಪಾಠ ಕಲ್ಶಿದವು. ಅಂದ್ರಾಣ ಅದೇ ಹಳೆ ಹರಿಣಿಯೇ ಇಂದೂ ಆನಾಗಿರುತ್ತಿದ್ರೆ ಮಗಳ ಮಾತು ಕೇಳಿ ಆತ್ಮಹತ್ಯೆ ಮಾಡಿಯೋಳ್ತಿತೆ. ಆದರೆ ಇಂದು ಎನಗೆ ಹಾಂಗಿದ್ದ ಬಾಲಿಶ ಭಾವನೆಗೊ ಬಪ್ಪಲೆ ಆಸ್ಪದವೇ ಇಲ್ಲೆ. ಎಂತಕೆ ಹೇಳಿದ್ರೆ ಸುರಭಿ ಎನ್ನ ಮೂಲಕ ಭೂಮಿಗೆ ಬಂದದಷ್ಟೇ ಹೊರತಾಗಿ ಅದು ಎನ್ನದಲ್ಲ ಹೇಳ್ತದ್ರ ಇಂದು ಅದುವೇ ಅದರ ಮಾತಿಂದ, ನಡವಳಿಕೆಂದ ತೋರುಸಿ ಕೊಟ್ಟತ್ತಲ್ದೋ? ಆ ಸತ್ಯವ ಪೂರ್ಣ ಮನಸ್ಸಿಂದ ಸ್ವೀಕರಿಸುವಷ್ಟು ಮನಸ್ಸೂ ಗಟ್ಟಿಯಾಯಿದು. ಇಷ್ಟ್ರರವರೆಗೆ ಮಗಳಿಂದಾಗಿ ಎಂಗೊ ಅನುಭವಿಸಿದ ಸಂತೋಷ, ಸಮಾಜಲ್ಲಿ ಎಂಗೋಗೆ ಸಿಕ್ಕಿದ ಮಾನ್ಯತೆ…,ಇದೆಲ್ಲವೂ ಲೊಟ್ಟೆ ಅಲ್ಲನ್ನೇ…? ಹಲವೂ ವರ್ಷಗಳ ಕಾಲ ಆ ಸುಖದ ಸುಪ್ಪತ್ತಿಗೆಯ ದಯಪಾಲ್ಸಿದ ಆ ಮಹಾನ್ ಶಕ್ತಿಗೆ ಸಾವಿರ ಸಾವಿರ ಕೃತಜ್ಙತೆಗೊ. ಹಾಂಗೆ ಹೇಳಿ ಎಂದೆಂದಿಂಗೂ ಅದು ಸಿಕ್ಕುತ್ತಲೇ ಇರೇಕು ಹೇಳಿ ನೀರೀಕ್ಷೆ ಮಾಡಿದ್ರೆ ಅದು ಅತಿಯಾಶೆ ಆಗಿ ಹೋಕು ಮತ್ತೆ ಅದುವೇ ನಿಜವಾದ ಸುಖವೂ ಅಲ್ಲ ಹೇಳ್ತ ಜ್ಙಾನವೂ ಈಗ ಬಯಿಂದನ್ನೇ?

ಮೋಹನ ಎನ್ನ ಜೀವನ ಸಂಗಾತಿಯೂ ಅಪ್ಪು, ಆತ್ಮ ಸಖನೂ ಅಪ್ಪು. ಅಮೃತದ ಹಾಂಗಿಪ್ಪ ದನದ ಹಾಲು ಮನೆಲೇ ಇಪ್ಪಾಗ ಎಲ್ಲಿಯೋ ಇಪ್ಪ ಪ್ಯಾಕೆಟ್ ಹಾಲಿಲ್ಲಿಯೂ ಅದರ ಅಂಶವೇ ಇಪ್ಪದು ಹೇದೊಂಡು ಇದರ ಬಿಟ್ಟಿಕ್ಕಿ ಅದರ ತಪ್ಪಲೆ ಓಡ್ತದು ಹೆಡ್ಡುತನ ಅಲ್ಲದ್ದೆ ಬೇರೆಂತೂ ಅಲ್ಲ. ಇದುವರೆಂಗೂ ಮೋಹನನ ಕಡೆಗಣಿಸಿದ್ದದಾತನ್ನೇ? ಇನ್ನು ಮುಂದೆ ಹಾಂಗೆ ಅಪ್ಪಲೆಡಿಯ. ಉಸಿರಿನ ಕಡೆಯ ತಿದಿಯವರೆಂಗೂ ಮೋಹನನ ಕ್ಷೇಮವೇ ಎನ್ನ ಕ್ಷೇಮ. ಅದರಲ್ಲಿಯೇ ಎನ್ನ ಸಂತೋಷ. ಅವಂಗೆ ಬೇಡದ್ದದು ಎನಗೂ ಬೇಡ. ಸುರಭಿಯ ಮದುವೆ ಬಗ್ಗೆ ಅಂವ ಕಟ್ಟಿದ ಕನಸೆಷ್ಟು…? ಅಳಿಯ ಹೇಂಗಿರೇಕು ಹೇಳ್ತದ್ರ ಎಷ್ಟೋ ಸತರ್ಿ ರಂಗು ರಂಗಾಗಿ ಹೇಳಿದ್ದದಿಕ್ಕು. ಅಂದರೆ ಇಂದು ಸುರಭಿ ಹೀಂಗೆ ಮಾಡಿದ್ದದು ಗೋಂತಾಗಿಯಪ್ಪಗ ಅವಂಗಾವುತ್ತ ಬೇನೆಯ ಯೇವ ಮದ್ದು ಕೊಟ್ಟು ಕಡಮ್ಮೆ ಮಾಡ್ಲಿ? ಅವನ ದೈಹಿಕ ಖಾಯಿಲೆಗೊಕ್ಕೆ ಈಗಾಗಳೇ ರಾಶಿ ಮದ್ದುಗೊ ಇದ್ದು. ಆದರೆ ಇನ್ನು ಮುಂದಾಣ ಮಾನಸಿಕ ಬೇನೆಗೆ? ಮದ್ದು, ಮುಲಾಮು ಎರಡೂ ಆನೇ ಆಯೇಕು. ಹಾಂಗಿಪ್ಪಾಗ ಸುರಭಿ ಅದರಷ್ಟಕೇ ತೆಕ್ಕೋಂಡ ನಿಧರ್ಾರದ ಬಗ್ಗೆ ಮತ್ತೆ ಆನೆಂತಕೆ ಆಸಕ್ತಿ ವಹಿಸೇಕು? ಪ್ರಾಯಕ್ಕೆ ಬಂದ ಕೂಸು, ಲೋಕ ಸುತ್ತಿ ಒಳ್ಳೆತ ಅನುಭವ ಇಪ್ಪೋಳು, ಬೂನರ್ಾಸು ಮನುಷ್ಯನ ಆಯ್ಕೆ ಮಾಡಿರ ಹೇಳ್ತ ಆಶ್ವಾಸನೆ ಎನಗಿದ್ದು. ಹಾಂಗೆ ಹೇಳಿ ಮೋಹನಂಗೆ ಅದರ ಮನದಟ್ಟು ಮಾಡ್ಸುವ ಕೆಲಸ ಅಷ್ಟು ಸುಲಭದ್ದಲ್ಲ. ಆನು ಮಾಡಿದ ತಪ್ಪಿನ ಆನೇ ಸರಿಪಡ್ಸಿಯೋಂಬಲೆ ಪ್ರಯತ್ನ ಮಾಡೇಕಷ್ಟೆ ಹೊರತಾಗಿ ಈ ವಿಷಯಲ್ಲಿ ಸುರಭಿಯನ್ನಾಗಲೀ ಮೋಹನನಾಗಲೀ ದೂರ್ತದು ಸರಿಯಲ್ಲ…….’

ಓದುಗರೇ…, ಸುರಭಿಯ ನಡವಳಿಕೆ ಒರಟಪ್ಪಲೆ ಸುರುವಾದ ಲಾಗಾಯ್ತಿಂದ ಹರಿಣಿಯ ಯೋಚನಾಲಹರಿ ಆತ್ಮ ವಿಮಷರ್ೆಯ ಹೊಡೆಂಗೆ ಜಾರಿದ ಕಾರಣ ಮಗಳ ಮದುವೆ ಹೇಳ್ತ ಅನಿರೀಕ್ಷಿತ ಆಘಾತದ ಶುದ್ಧಿ ಕೇಳಿಯಪ್ಪಗಳೂ ಅದು ಮನಸ್ಸಿನ ಸಮತೋಲನ ಕಳಕ್ಕೋಳದ್ದೆ ಮೂರನೆಯ ವ್ಯಕ್ತಿಯ ಹಾಂಗೆ ಶುಭಾಶಯಂಗಳ ಹೇಳಿಕ್ಕಿ ಫೋನು ಮಡುಗೇಕಾರೆ ಹೆತ್ತಬ್ಬೆ ಆಗಿಯೊಂಡೂ ಹರಿಣಿಯ ಮಾನಸಿಕ ಧೃಢತೆ ಎಷ್ಟರ ಮಟ್ಟಿಂಗೆ ಇದ್ದಿಕ್ಕು ಹೇಳ್ತದ್ರ ನಿಂಗೋಗೆ ಅಂದಾಜು ಮಾಡ್ಲೆ ಎಡಿಗಲ್ದೋ?

ಯೇವತ್ರಾಣ ಹಾಂಗೆ ಇಂದು ಮೋಹನ ಕಸ್ತಲಪ್ಪಗ ಮನೆಯೊಳಾಂಗೆ ಹೊಗ್ಗುವಾಗಳೇ ಸುರಭಿಯ ವಿಷಯ ಎತ್ತಿದ್ದಾಂಯಿಲ್ಲೆ. ಹರಿಣಿಯೂ ಹೇಳ್ಲೆ ಹೋಯಿದಿಲ್ಲೆ. ಅವಂಗೆ ತಿಂಡಿ ಕಾಪಿ ಕೊಟ್ಟಿಕ್ಕಿ ಅವನೆದುರು ಕೂದತ್ತು.

“ಹರಿಣೀ…,ಈಗಾಣ ಕಾಲಲ್ಲಿ ಮನುಷ್ಯ ಸಂಬಂಧ ಹೇಳ್ತದು ಎಷ್ಟು ಗೋಳೆ ಹೇಳ್ತದ್ರ ಪ್ರತ್ಯಕ್ಷ ಅನುಭವ ಇಂದು ಎನಗಾತು….”

“ಹೂಂ….ಅಪ್ಪು ಎನಗೂ ಇಂದು ಅದರ ಅನುಭವ ಆತು…”

“ಹೇಂ..? ನಿನಗೋ? ಅದ್ಹೇಂಗೆ…?”

“ನಿಂಗಳ ಅನುಭವ ಮೊದಲು ಹೇಳಿ, ಮತ್ತೆ ನಮಗಿಬ್ರಿಂಗೂ ಇಪ್ಪ `ಅದರ’ ಹೇಳ್ತೆ…”

ಮೋಹನನ ತಲೆ ತುಂಬ `ಆ ಅನುಭವ’ದ ಕಹಿಯೇ ತುಂಬಿಯೊಂಡಿತ್ತಿದ್ದ ಕಾರಣ ಹರಿಣಿಯ ಗೂಢಾರ್ಥದ ಮಾತಿನ ಬಗ್ಗೆ ಯೋಚಿಸದ್ದೆ ತನ್ನ ಮನಸ್ಸಿಲ್ಲಿಪ್ಪ ಭಾರವ ಹಗುರ ಮಾಡಿಯೋಂಬಲೆ ಹೆರಟ.

“ಇಂದು ಬೇಂಕಿಂಗೆ ಎಂಗಳ ಒಬ್ಬ ಖಾಯಾಂ ಗಿರಾಕಿ ಬಂದಿತ್ತಿದ್ದಂ…, ನಮ್ಮವನೇ…,ಹೋದ ವರ್ಷ ಅವಂಗೆ ಕೃಷಿ ಸಾಲ ಮಂಜೂರು ಮಾಡಿದ್ದದು ಆನೇ…,ಅದರಿಂದ ಮತ್ತೆ ಬೇಂಕಿಂಗೆ ಬಂದಿಪ್ಪಾಗೆಲ್ಲ ಎನ್ನ ಕಂಡು ಮಾತಾಡ್ಸಿಕ್ಕಿಯೇ ಹೋಕು. ಎರಡು ಮೂರು ವಾರ ಹಿಂದೆ ಅಂವ ಬಂದಿಪ್ಪಾಗ ಎಂತ ಹೇಳಿದಂ ಹೇಳಿರೆ ಪೇಟೆಂದ ಹಿಂಡಿ, ಜೀನಸು ಇತ್ಯಾದಿ ಸಾಮಾನುಗೊ ತೆಗದಪ್ಪಗ ಪೈಸೆ ಸಾಲದ್ದೆ ಬಂತು ಹೇದೂ ಒಂದೈದು ಸಾವಿರ ಕೊಟ್ರೆ ಉಪಕಾರ ಅಕ್ಕು ಹೇದೂ ಹೇಳಿದ. ಸರಿಯಾಗಿ ಗುರ್ತ ಇಪ್ಪ ಒಳ್ಳೆ ಜೆನ ಅಲ್ದೋ ಹೇದು ಕಂಡತ್ತೆನಗೆ. ಅಂಬಗಳೇ ಪೈಸೆ ತೆಗದು ಕೊಟ್ಟೆ….,ನಾಕೇ ದಿನಲ್ಲಿ ವಾಪಾಸು ತಂದು ಕೊಡುವೆ ಹೇದೂ ಹೇಳಿದಂ….,ಇಂದಿಂಗೆವರೆಂಗೆ ಗ್ರಾಯಕಿಯ ಕಾಂಬಲೇ ಇಲ್ಲೆ. ಇಂದು ಉದಿಯಪ್ಪಗ ಅಂವ ಬೇಂಕಿಂಗೆ ಬಂದದು ಎನಗೆ ಗೊಂತಾತು. ಅಂವನ ವೈವಾಟು ನೋಡಿಯೋಳ್ತ ಆಪೀಸರನ ಹತ್ರೆ ಇಂವನ ಎನ್ನ ಆಪೀಸಿಂಗೆ ಕಳ್ಸಲೆ ಹೇಳಿದೆ. ಅಂವ ಎಲ್ಲಿ ಬಯಿಂದಂ? ಅಲ್ಲಿಂದಲೇ ಪದ್ರಾಡು ಹೆಟ್ಲೆ ನೋಡಿದಂ. ಆನೂ ಬಿಟ್ಟಿದಿಲ್ಲೆ, ಅಂದರೆ ಆ ಸಮಯಲ್ಲಿ ಎನ್ನ ಆಪೀಸಿನೊಳ ಹೆಡ್ಡಾಪೀಸಿಂದ ಬಂದ ಆಪೀಸರಕ್ಕೊ ಇತ್ತಿದ್ದ ಕಾರಣಂದ ಎದ್ದಿಕ್ಕಿ ಹೋಪಲೆ ಎಡಿಗಾತಿಲ್ಲೆ. ಆ ಮನುಷ್ಯನ ವೈವಾಟು ನೋಡಿಯೋಳ್ತ  ಆಪೀಸರನತ್ರೆ ವಿಷಯ ಹೇಳಿ ಅವನತ್ರಂದ ಪೈಸೆ ವಸೂಲು ಮಾಡಿಯೋಂಬಲೆ ಹೇಳಿದೆ. ವಿಷಯ ಹೇಳಿಯಪ್ಪಗ ಅಂವ ಹೇಳಿದ್ದು ಎಂತರಾಡ ಗೊಂತಿದ್ದೋ…? `ಬ್ಯಾಂಕು ಮೆನೇಜರಿಗೆ ಆ ಐದು ಸಾವಿರ ಎಲ್ಲ ಒಂದು ಲೆಕ್ಕವಾ…? ನನ್ಗೆ ಕೃಷಿ ಸಾಲ ಮಂಜೂರು ಮಾಡಿದಾಗ ಅವರಿಗೆ ಕಮಿಷನ್ ದುಡ್ಡು ಸುಮಾರು ಸಿಕ್ಕಿರಬಹುದಲ್ಲ? ಇಂತಹ ಕಮಿಷನು ಅವರಿಗೆ ಎಷ್ಟು ಕೋಟಿ ಬರ್ತದೋ ಏನೋ? ನನ್ನಂತಹ ಪಾಪದವನ ದುಡ್ಡಿನ ಮೇಲೆ ಯಾಕೆ ಅವರು ಕಣ್ಣು ಹಾಕುವುದು?‘ ಹೇಳಿಕ್ಕಿ ಹೋದ್ದದೇ ಆಡ….ಛೇ…ಹೀಂಗಿರ್ತ ಅನುಭವ ಆದ ಮತ್ತೆ ನಿಜವಾಗಿಯೂ ಕಷ್ಟಲ್ಲಿಪ್ಪವು ಬಂದು ಸಕಾಯ ಕೇಳಿರೂ ಕೋಡೇಕು ಹೇಳಿ ಕಾಂಗೋ….ನೀನೇ ಹೇಳು….? ಎಂತಾ ಕೃತಘ್ನತೆ ನೋಡು….? ಆ ಮಾತಗಳ ಕೇಳಿದ ಮತ್ತೆ ಎನಗೆ ಕೆಲಸ ಮಾಡ್ಲೇ ಮನಸ್ಸು ಬಂತಿಲ್ಲೆ….”

“ನಿಂಗೊ ಹೇಳಿದ್ದದು ಸತ್ಯ…,ನಿಂಗಳ ಜಾಗೆಲಿ ಬೇರೆಯವು ಇತರ್ಿದ್ರೆ ದೊಡ್ಡ ಗಲಾಟೆಯೇ ಆಗಿ ಹೋವ್ತಿತು….,ನಮ್ಮ ತೀರಾ ಹತ್ರಾಣವರ ನಡವಳಿಕೆಗಳನ್ನೇ ನವಗೆ ಅಂದಾಜು ಮಾಡ್ಲೆ ಎಡಿಯದ್ದಿಪ್ಪಾಗ ಮೂರನೇ ವ್ಯಕ್ತಿಯೊಬ್ಬಂ ಹೀಂಗೆ ಮಾಡಿದ್ದದ್ರಲ್ಲಿ ಚೋದ್ಯ ಇಲ್ಲೆ….”

“ಅದೆಂತಕೆ ಹರಿಣಿ ನೀನು ಹಾಂಗೆ ಹೇಳಿದ್ದು…?”

“ವಿಶೇಷ ಎಂತ ಇಲ್ಲೆ. ನಿಂಗೋ ಕಾಪಿ ಕುಡುದು ಮುಗಿಶಿ. ಮತ್ತೆ ಒಂದು ವಾಕಿಂಗು ಹೋಗಿ ಬಪ್ಪೋ ಆಗದೋ?”

“ಅಪ್ಪು…ಎನಗೂ ತಂಪು ಗಾಳಿಗೆ ಮೈಯೊಡ್ಡಿ ನೆಡಕ್ಕೋಂಡು ನಿನ್ನತ್ರೆ ಮಾತಾಡಿರೆ ಮನಸ್ಸು ಸರಿಯಕ್ಕಷ್ಟೆ…”

(ಇನ್ನೂ ಇದ್ದು)

4 thoughts on “ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-8)

  1. ಅಪ್ಪು ಗೋಪಾಲಣ್ಣ , ಬೇನೆ ಆಗದ್ದೆ ಹೆತ್ತಬ್ಬೆ ಅಲ್ದೊ…

  2. ಹರಿಣಿ ಎಷ್ಟೇ ಆತ್ಮ ವಿಮರ್ಶೆ ಮಾಡಿ ಮಗಳು ಮಾಡಿದ್ದು ಸರಿ ಹೇಳಿ ಹೇಳಿದರೂ, “ಶುಭಾಶಯಂಗೊ” ಹೇಳಿ ಮಗಳಿಂಗೆ ಹೇಳುವಗ ಮನಸ್ಸಿನ ಮೂಲೆಲಿ ಅದಕ್ಕೆ ಬೇನೆ ಖಂಡಿತಾ ಇಲ್ಲದ್ದೆ ಇರ. ಗೋಣ ಹೋದ ಹಾಂಗೇ ಎಬ್ಬೆಕಷ್ಟೆ.
    ಮೋಹನಂಗೆ ಆದ ಅನುಭವ ಈಗಾಣ ಕಾಲಲ್ಲಿ ತುಂಬಾ ಕಾಂಬಲೆ ಸಿಕ್ಕುಗು. ಕತೆ ಮುಂದುವರಿಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×