ಕಥೆ
ಮರಳಿ ಗೂಡಿಗೆ
-ರೂಪಾಪ್ರಸಾದ ಕೋಡಿಂಬಳ
ಮಾವಾ…..”ಕಾಪಿ ಕುಡುದ ಗ್ಲಾಸಿನ ಒಳಮಡುಗುಲೂ ಆವುತ್ತಿಲ್ಲೆಯಾ ನಿಂಗಗೆ ; ಇಲ್ಲಿ ಎಂತ ಕೆಲಸ ಇದ್ದು..ಚೂರು ಒಳ ಹೆರ ಹೋದರೆ ಮೈಗೆ ವ್ಯಾಯಾಮ ಸಿಕ್ಕುಗು ಉಂಡ ಅಶನ ಜೀರ್ಣ ಅಕ್ಕು”….ಸೊಸೆಯ ಮಾತುಗೊ ಎದೆಗೆ ಈಟಿಲಿ ಕುತ್ತಿದ ಹಾಂಗಾತು ರಾಮಣ್ಣಂಗೆ…
ಗ್ಲಾಸ್ ತೆಕ್ಕೊಂಡು ಹೋಗಿ ತೊಳದುಮಡುಗಿ ಸೀದಾ ರೂಮಿಂಗೆ ಹೋಗಿ ಹಾಸಿಗೆಲಿ ಬಿದ್ದುಕೊಂಡವು…ಪಾರುವ ನೆಂಪಾತು. ಒಂದು ದಿನವೂ ಹೀಂಗೆ ಹೇಳಿದ್ದಿಲ್ಲೆ ಎನ್ನ ಪಾರು..ಪಾರ್ವತಿಯ ಪ್ರೀತಿಲಿ ಪಾರು ಹೇಳುದು ರಾಮಣ್ಣ….ಎಷ್ಟು ಕೆಲಸ ಇದ್ದತ್ತು ಹಳ್ಳಿಲಿ ಅದಕ್ಕೆ. ಆಳುಗಕ್ಕೆ ಬೇಶಿಹಾಕುದು, ಹೂಗಿನಸೆಸಿಗಕ್ಕೆ ನೀರು ಹಾಕುದು, ನಮೂನೆವಾರು ತಿಂಡಿಗ..ನೆಂಟ್ರುಗಳ ಉಪಚಾರ…ಆದರೂ ಒಂದು ಪಿರಿಪಿರಿ ಹೇಳಿದ್ದದಿಲ್ಲೆ…ಆಲೋಚನೆ ಹಿಂದಂಗೆ ಹೋತು…
ರಾಮಣ್ಣ ಊರಿಲಿ ದೊಡ್ಡ ಕುಳ. ಐವತ್ತು ಎಕ್ರೆ ಜಾಗೆ ನೂರು ಖಂಡಿಂದ ಮೇಲೆ ಅಡಕ್ಕೆ ಅಕ್ಕು..ಎರಡನೇ ಕೊಯ್ಲಿನ ಅಡಕ್ಕೆ ಇಡೀ ಜಾಲಿಲಿ ತುಂಬುಗು..ಜಾಲು ಹೇಳಿರೆ ಅಂತಿಂತ ಜಾಲಲ್ಲ…ಒಂದೆಕ್ರೆಯ ಹತ್ರೆ ವಿಶಾಲ ಜಾಲು..ಸುತ್ತಲೂ ಕಲ್ಲಿನ ಕಟ್ಟಿ ಚೆಂದ ಮಾಡಿದ್ದ..ಜಾಲಿನ ಮಧ್ಯಲ್ಲಿ ಒಂದು ಅಶ್ವಥಮರವೂ,ನೆಲ್ಲಿ ಮರವೂ…ಅದಕ್ಕೆ ಕಲ್ಲು ಕಟ್ಟಿ ಕೂಪ ಹಾಂಗೆಯೂ ಸೌಕರ್ಯ..ಅಡಕ್ಕೆ ಕೊಯ್ಲಿನ ಸಮಯಲ್ಲಿ ಇವನ ಜಾಲಿಲಿಪ್ಪ ಹಣ್ಣಡಕ್ಕೆಹರಗಿದ್ದರ ನೋಡ್ಲೆ ಹೇಳಿಯೇ ನೆರೆಕರೆಯವು ಬಕ್ಕದ..ಕಣ್ಣಳತೆಲಿಯೇ ಈ ವರ್ಷ ರಾಮಣ್ಣಂಗೆ ಇಂತಿಷ್ಟು ಖಂಡಿ ಅಡಕ್ಕೆ ಅಕ್ಕುಳಿ ಅಂದಾಜು ಮಾಡುಗು…ರಾಮಣ್ಣಂಗಂತೂ ಭಾರೀ ಹೆಮ್ಮೆ ಅವನ ಜಾಲಿನ ಬಗ್ಗೆ.
ಇದ್ದ ಒಬ್ಬನೇ ಒಬ್ಬ ಮಗನ ಉಪನಯನವನ್ನೂ ಮನೆಲಿಯೇ ಗಡ್ದಿಲಿ ಮಾಡಿತ್ತಿದ್ದ. ಬಂದವರ ಬಾಯಿಲಿ ಇವನ ಜಾಲಿನ ಗುಣಗಾನವೇ..ಊಟಂದಲೂ ಮುಖ್ಯ ಜಾಲಿನ ಹೊಗಳುವವೇ…
ರಾಮಣ್ಣನೂ ಹಾಂಗೆ ,ಜಾಲಿನ ಚೆಂದಕೆ ಮಡುಗಿತ್ತಿದ್ದ.ಮಳೆ ಹೋದ ಕೂಡ್ಲೆ ಜಾಲು ಕೆತ್ತಿ ,ಅಡಕ್ಕೆ ಕೊಯಿಲಿಂಗಪ್ಪಗ ಸಗಣವೂ ಉಡುಗುಸುಗು ಇಡೀ ಜಾಲಿಂಗೆ. ಜಾಲಿನ ಸುತ್ತ ಕಲ್ಲು ಕಟ್ಟಿ ಒಂದೆರಡು ಕಲ್ಲು ಬೆಂಚೂ ಹಾಕಿತ್ತಿದ್ದ. ಹೊತ್ತೋಪಗ ‘ಪಾರೂ ಬಾ ಇತ್ತೆ..ಚೂರು ಕೂಪ ಇಲ್ಲಿ ಪಟ್ಟಾಂಗ ಹೊಡಕ್ಕೊಂಡು’ ಹೇಳಿ ಕೂರ್ಸುಗು.
ಕೆಲಸದವರ ಸಮಸ್ಯೆ ಇಲ್ಲದ್ದ ಕಾರಣ ಎಲ್ಲಾ ಸುಸೂತ್ರವಾಗಿ ನಡಕ್ಕೊಂಡಿತ್ತು..ಏಳೆಂಟು ದನಗೊ, ಹತ್ತು-ಹದಿನೈದು ಆಳುಗೊ ಖಾಯಂ.
ಅಡಕ್ಕೆ ರಾಶಿ ಹರಗಿಯಪ್ಪಗ ಜಾಲು ಜಗಜಗ ಹೇಳುಗು..ರಾಮಣ್ಣ ದಪ್ಪ ಮೀಸೆ ತಿರ್ಪುಗು ಜಂಭಲ್ಲಿ..
ಸೀನ ಆಳುಗಳ ಮೇಸ್ತ್ರಿ.. ‘ಅಣ್ಣೆರೇ… ಇನಿ ದಾದ ಬೇಲೆ'( ಅಣ್ಣಾ..ಇಂದು ಎಂತ ಕೆಲಸ) ಹೇಳಿ ಉದಿಯಪ್ಪಗ ಬೇಗ ಬಕ್ಕು..ರಾಮಣ್ಣ ಹೇಳಿದ ಹಾಂಗೆ ಕೆಲಸ ಮಾಡ್ಸುಗು..
ಆದರೆ…ಎಷ್ಟು ದಿನ ಹೀಂಗೆ ಇಕ್ಕು ಹೇಳಿ! *ಊರಿಂಗೆ ಬಂದದು ಮನೆಗೆ ಬಾರದ್ದಿಕ್ಕಾ*?
ಕೆಲಸದವರ ಸಮಸ್ಯೆ ಇಲ್ಲಿಯೂ ಸುರು ಆತು. ‘ಅಣ್ಣೆರೇ ..ಇನಿ ಬೇಲೆದಕುಲು ಪೂರಾ ರಜೆ..(ಕೆಲಸದವು ಎಲ್ಲರೂ ರಜೆ)..ಉದಿಯಪ್ಪಗಳೇ ಸೀನಾ ಮನೆಯೆದುರು ನಿಂದಪ್ಪಗ ರಾಮಣ್ಣನ ಪಿತ್ತ ನೆತ್ತಿಗೇರಿತ್ತು..
“ದುಂಬೇ ಪಣಿಯರ ದಾನೆ…ಪಂತಿ,ತಪ್ಪು ಏರ್ ಮಲ್ಪೆರು..ಕೈಕಂಜಿಲೆನ ಬಂಜಿ ಜಿಂಜೊಡ್ಚಿಯಾ” ( ಮೊದಲೇ ಹೇಳ್ಳೆಂತ…ಹುಲ್ಲು,ಸೊಪ್ಪು ಆರು ಮಾಡುದು..ದನಗಳ ಹೊಟ್ಟೆ ತುಂಬೆಡದಾ).. ಬೊಬ್ಬೆ ಹಾಕಿದ..
ಸೀನಾ ಹೇಂಗೋ ನಾಲ್ಕೈದು ಕಟ್ಟ ಹುಲ್ಲು ತಂತು. *ಭೀಮನಹೊಟ್ಟೆಗೆ ಕಾಸಿನ ಮದ್ದು*.. ಹೇಳುವ ಹಾಂಗೆ ಅದೆಲ್ಲಿಗೆ ಸಾಕಾವುತ್ತು..
ರಾಮಣ್ಣಂಗೆ ತಲೆ ಬೆಶಿ ಆತು. ಅಂತೂ ಆ ದಿನ ಹೇಂಗೋ ಸುಧಾರಣೆ ಆತು..
ಹೀಂಗೆ ಕೆಲವು ಸರ್ತಿ ಆದಪ್ಪಗ ರಾಮಣ್ಣ ದನಗಳ ಮಾರುವ ಆಲೋಚನೆ ಮಾಡಿದ..ಚುಬ್ಬನ ಬಪ್ಪಲೆ ಹೇಳಿ ಒಂದು ದನವ ಮಡಿಕ್ಕೊಂಡು ಎಲ್ಲಾ ದನಗಳ ಕೊಟ್ಟ .
ಅಡಕ್ಕೆ ಕೊಯಿಲು ಜಾಲಿಂಗೆ ಬರೆಕ್ಕಾರೆ ಉಂಡದು ಬಾಯಿಗೆ ಬಪ್ಪಲೆ ಸುರು ಆತು.ಆಳುಗ ಕೈ ಕೊಡುದು,ಸಂಬಳ ಹೆಚ್ಚು ಮಾಡೆಕ್ಕೂಳಿ ಜಗಳ..ಹಿಂಗೇ ಏಗಿ ಏಗಿ ಹೇಂಗೋ ದಿನದೂಡಿದ.
ಇದರೆಡೆಲಿ ಮಗ ಇಂಜಿನಿಯರ್ ಕಲ್ತು ದೊಡ್ಡ ಕೆಲಸ ಸಿಕ್ಕಿತ್ತು. ಮದುವೆಯೂ ಆತು….ಸಟ್ಟುಮುಡಿಯೂ ಮನೇಲಿಯೇ ಮಾಡಿದ..ಜಾಲು ಮತ್ತೂ ಸಿಂಗಾರಗೊಂಡತ್ತು..ಬೀಗರ ಬಾಯಿಲಿಯೂ ಈಗ ಜಾಲಿನ ಗುನಗಾಣವೇ..
ಮಗ,ಸೊಸೆ ಬೆಂಗ್ಳೂರಿಂಗೆ ಹೋದವು. ಸೊಸೆಯ ಕಷ್ಟಸುಖ ವಿಚಾರಣೆ ಅಂಬಗಂಬಗ…ಸೊಸೆಗೆ ಅಡಕ್ಕೆ ಹರಗಿದ ಪಟ ಬೆಂಗ್ಳೂರಿಂಗೆ ರವಾನಿಸಿ ಖುಷಿ ಪಟ್ಟ ರಾಮಣ್ಣ..
ಕಾಲಕ್ರಮೇಣ ಆಳುಗಳ ಸಮಸ್ಯೆ ಜೋರಾತು..ಬೊಡುದತ್ತು ರಾಮಣ್ಣಂಗೆ . ಪ್ರಾಯವೂ ಅರವತ್ತು ದಾಂಟಿತ್ತು. ಮಗ ಸೊಸೆ ಬೆಂಗ್ಳೂರಿಂಗೆ ಬಪ್ಪಲೆ ಆಹ್ವಾನಿಸಿದವು..ಆದರೆ.. ರಾಮಣ್ಣಂಗೆ ಅವನಪ್ರೀತಿಯ ತೋಟ,ಜಾಲಿನಬಿಟ್ಟಿಕ್ಕಿ ಹೋಪಲೆ ಮನಸ್ಸಿಲ್ಲೆ…
ಒಂದು ದಿನ ಉದಿಯಪ್ಪಗ ಅಡುಗೆ ಮನೆಂದ..ಓಯ್!…. ಹೇಳಿ ಬೊಬ್ಬೆ ಕೇಳ್ತು.. ಪೇಪರು ಓದಿಕೊಂಡಿದ್ದ ರಾಮಣ್ಣ ಒಳ ಹೋಗಿ ನೋಡಿರೆ..! ಪಾರು ನೆಲಲ್ಲಿ ಬಿದ್ದಿದು…ಕೈಕಾಲು ಹಂದುತ್ತಿಲ್ಲೆ..ತಲೆ ಓರೆ ಆಯಿದು..ಉಸಿಲು ನಿಂದಿದು..! ತಲೆಗೆ ಕೈ ಮಡುಗಿದ ರಾಮಣ್ಣ…ವಿಧಿವಿಧಾನದ ಮೂಲಕ ಅಂತ್ಯಸಂಸ್ಕಾರ ಮಾಡಿ ಆತು.
ಸೊಸೆ ಮಾವನತ್ರೆ ಬಂದು’ ಮಾವಾ..ನಿಂಗ ಬೆಂಗ್ಳೂರಿಂಗೆ ಬನ್ನಿ..ಒಬ್ಬನೇ ಇಪ್ಪದು ಬೇಡ..ಸೀನ ಎಲ್ಲಾ ನೋಡಿಕೊಂಗು ‘ ಹೇಳ್ತು..ಮಗನೂ ‘ಎನಗೆ ಕೆಲಸ ಬಿಟ್ಟು ಹಳ್ಳಿಲಿ ಕೂಪಲೆಡಿಯ..ಹಳ್ಳಿ ಕೃಷಿ ಕೆಲಸ ಎನಗೆ ಅರಡಿಯಲೂ ಅರಡಿಯ…ನಿಂಗ ಎಂಗಳೊಟ್ಟಿಂಗೆ ಬನ್ನಿ’ ಹೇಳಿ ಹೇಳಿಯಪ್ಪಗ ರಾಮಣ್ಣಂಗೂ ಸರಿ ಕಂಡತ್ತು…
ಸೀನನತ್ರೆ ಎಲ್ಲಾ ಜವಾಬ್ದಾರಿ ಕೊಟ್ಟು ಬೆಂಗ್ಳೂರಿಂಗೆ ಹೆರಟವು…ಸೀನನೂ ಹೋಪಗ ಕಾರಿನ ಹತ್ರೆ ಬಂದು ‘ಈರ್ ದಾಲ ಮಂಡೆಬೆಚ್ಚ ಮಲ್ಪೊಡ್ಚ್ಚಿ ಅಣ್ಣೆರೇ…ಯಾನ್ ಪೂರಾ ತೂವೊಣ್ಪೆ..(ಮಂಡೆ ಬೆಶಿ ಮಾಡೆಡಿ..ಆನು ಪೂರಾ ನೋಡಿಕೊಳ್ತೆ) ಹೇಳಿ ಕಳುಹಿಸಿ ಕೊಟ್ಟತ್ತು..
ದಿನಾ ರಾಮಣ್ಣ ಸೀನನತ್ರೆ ಫೋನಿಲಿ ಮಾತಾಡುಗು.. ಸುರುಸುರುವಿಂಗೆ ಕೆಲಸ ಲಾಯ್ಕ ಮಾಡ್ಸಿಕೊಂಡಿತ್ತಿದ್ದ ಸೀನ, ಮತ್ತೆ ಮತ್ತೆ ತಿರುಗುದು,ಕುಡಿವ ಚಟಕ್ಕೆ ಬಿದ್ದು ತೋಟ ಹರೂಪಪ್ಪಲೆ ಸುರು ಆತು.. ಎಷ್ಟಾದರೂ *ಆಳು ಮಾಡಿದ್ದು ಹಾಳು*…ಅಲ್ಲದಾ… ಪಾಪ! ರಾಮಣ್ಣ ಸೀನನ ನಂಬಿತ್ತಿದ್ದ.. ಇಲ್ಲಿಯಾಣ ವಾಸ್ತವ ಸಂಗತಿ ಅವನ ಗಮನಕ್ಕೆ ಬಾರದ್ದೆ ಹೋತು..ಮಗಂಗೂ ಊರಿಂಗೆ ಕರಕ್ಕೊಂಡು ಬಪ್ಪಲೆ ಸಮಯದ ಅಭಾವ…ಸೊಸೆಗೂ ರಜೆ ಸಿಕ್ಕುತ್ತಿಲ್ಲೆ…
ಹೀಂಗೆ ಎರಡು ವರ್ಷ ಕಳುತ್ತು.. ಪೇಟೆ ಜೀವನ ಬೊಡುತ್ತು ರಾಮಣ್ಣಂಗೆ..ಸೊಸೆಯ ಬೇಜಾವಬ್ದಾರಿತನ…ಹಂಗುಸುವ ಮಾತುಗೊ..ಕೇಳಿ ಕುಗ್ಗಿ ಹೋದ.ಜಾಗೆ ಮಾರಿ ದೊಡ್ಡ ಸೈಟ್ ತೆಕ್ಕೊಂಡು ಮನೆ ಕಟ್ಟುವ ಆಲೋಚನೆ ಹೇಳಿಯಪ್ಪಗ ರಾಮಣ್ಣನ ಎದೆಗೆ ಚೂರಿ ಹಾಕಿದ ಹಾಂಗಾತು..
ಆಲೋಚನಾ ಲಹರಿಲಿ ಮುಳುಗಿಕೊಂಡಿದ್ದಪ್ಪಗ…ಮಾವಾ… ಎಂತ ಬಯಿಂದಿಲ್ಲಿ…ಎನಗೆ ಉಂಡಿಕ್ಕಿ ವರಗೆಕ್ಕು ..ಹೊತ್ತಿಂಗೆ ಬಂದು ಉಂಬಲಾಗದಾ”… ಸೊಸೆ ಮಾತು ಕೇಳಿ ಲಗುಬಗೆಂದ ತಟ್ಟೆ ಎದುರು ಕೂದ …ಉಂಡಿಕ್ಕಿ ಏಳುವಾಗ..”ನಾಳೆ ಆನು ಊರಿಂಗೆ ಹೋವುತ್ತೆ..ಎನ್ನ ಅಲ್ಲಿ ಒಂದಾರಿ ಬಿಟ್ಟಿಕ್ಕಿ” …ಹೇಳಿ ಕೈತೊಳವಲೆ ಹೋದ..ಮಗ,ಸೊಸೆ ಎಷ್ಟು ಹೇಳಿರೂ ಕೇಳುಲೆ ಈಗ ತಯಾರಿಲ್ಲೆ ಅವ…
ಮರುದಿನ ಮಗ ಅಪ್ಪನ ಕರಕ್ಕೊಂಡು ಹೆರಟ…ದಾರಿಲಿಡೀ ರಾಮಣ್ಣಂಗೆ ಮನೆದೇ ಆಲೋಚನೆ…ಜಾಲು ಕೆತ್ತಿ ಆದಿಕ್ಕು…ಎರಡನೇ ಕೊಯ್ಲು ಕೊಯ್ದು ಆತು ಹೇಳಿದ್ದು ಸೀನಾ..ಆಹಾ…ಕೆಂಪಡಕ್ಕೆ ಹರಗಿದ್ದರ ನೋಡದ್ದೆ ಎರಡು ವರ್ಷ ಆತು. ಕಣ್ಣು ತುಂಬ ನೋಡೆಕ್ಕು.. ಕಲ್ಲು ಬೆಂಚಿಲಿ ಕೂರೆಕ್ಕು ಹೊತ್ತೋಪಗ…ಎಲ್ಲಾ ಗ್ರೇಶಿಕೊಂಡು ಉಮೇದಿಲಿಯೇ ಇತ್ತಿದ್ದವಂಗೆ ..ಜರ್……ಬ್ರೇಕ್ ಹಾಕಿಯಪ್ಪಗಳೇ ವಾಸ್ತವದ ಅರಿವಾತು…ನೋಡಿರೆ!… ಮನೆ ಜಾಲಿಲಿ ನಿಂದಿದು ಕಾರು!… ಕಾರಿಂದ ಇಳುದವಂಗೆ ಆಘಾತ!.. *ಜಾಲು ಭಣ ಭಣ… ಹೇಳುತ್ತು*.. ಮೊದಲಾಣ ಜಾಲೇ ಅಲ್ಲ…
ಅನಿರಿಕ್ಷಿತ ಆಗಮನವ ನಿರೀಕ್ಷಿಸಿತ್ತಿದ್ದಿಲ್ಲೆ ಸೀನನೂ…ಮೋರೆ ತಗ್ಗಿಸಿತ್ತು…ಎರಡನೇ ಕೊಯ್ಲು ಬಿಟ್ಟು ಜಾಲು ಕೆತ್ತಿಯೇ ಆಗಿತ್ತಿಲ್ಲೆ….ರಾಮಣ್ಣನ ಎದೆ ದಸಕ್ಕ ಹೇಳಿತ್ತು… ಅಡಕ್ಕೆ ಫಸಲು ಏನಿಲ್ಲೆ..ರೋಗಲ್ಲಿ ಎಲ್ಲಾ ಉದುರಿದ್ದು ಹೇಳಿ ತಪ್ಪುಸಿತ್ತು ಬೀಸುವ ದೊಣ್ಣೆಂದ ಸೀನಾ…
ಮನೆ ಒಳ ಹೋಪಲೆಡಿಯ…ಆಳುಗಳದ್ದೇ ಕಾರುಭಾರಿನ ಹಾಂಗೆ ಕಂಡತ್ತು ಮೇಲ್ನೋಟಕ್ಕೆಯೇ..ಮಗ ಪರಂಚಿಕೊಂಡು ಎಂತ ಬೇಕಾರು ಮಾಡಿಕೊಳ್ಳಿ…ಎನಗೆ ನಾಳೆಯೇ ಕೆಲಸಕ್ಕೆ ಹೋಯೆಕ್ಕಷ್ಟೆ ಹೇಳಿ ನಡದ್ದದೇ..ಅವಂಗೆ ಅಪ್ಪ ಜಾಗೆ ಮಾರ್ಲೆ ಒಪ್ಪದ್ದ ಬೆಶಿಯೂ..
ಪಾರು ಇಲ್ಲದ್ದ ಮನೆ…..!
ರಾಮಣ್ಣಂಗೆ ಪಾರುದೇ ನೆಂಪಾಗಿಕೊಂಡಿತ್ತು..ಮೂರುಸಂಧ್ಯಪ್ಪಗ ಕೂಪ ಜಾಗೆ ನೋಡಿದ..ಭಣಭಣ!!…
ಜಗಜಗ ಅಡಕ್ಕೆಲಿ ಜಗಮಗಿಸುವ ಜಾಲೀಗ ಭಣಭಣ ಹೇಳ್ತು.!!…..
ಅಡಕ್ಕೆಸೆಸಿಗೆ ಈಟು ಹಾಕುದು ಬಿಡಿ, ಸೀನ ಸರಿಕಟ್ಟು ನೀರು ಕೂಡಾ ಹಾಕಿಕೊಂಡಿತ್ತಿಲ್ಲೆ ಕಾಣೆಕ್ಕು…
ಪಾರು ಇಪ್ಪಗ ಜಾಲಿಲಿ ಓಡಾಡಿಕೊಂಡು…ಹಪ್ಪಳ,ಸೆಂಡಗೆ ಹೇಳಿ ಹಾಕಿಕೊಂಡಿದ್ದದು… ಎಲ್ಲಾ ಅಶ್ವತ್ಥ ಕಟ್ಟೆಲಿ ಕೂದು ಆಲೋಚನೆ ಮಾಡಿಕೊಂಡು ಜಾಲಿಂಗೆ ದೃಷ್ಟಿಸಿದರೆ….ಈಗ..ಭಣಭಣ..
ಕ್ವಿಂಟಾಲುಗಟ್ಲೆ ಒಳ್ಳೆಮೆಣಸು ಅಕ್ಕು…ಈ ಸಮಯಲ್ಲಿ ಜಾಲಿಲಿ ಒಂದು ಕರೆಲಿ ಅದುದೆ ಹರಗಿಕೊಂಡಿಕ್ಕು…ಈಗ!!! ಭಣಭಣ!!!… ಒಳ್ಳೆಮೆಣಸಿನ ಬಳ್ಳಿಗಳೇ ಇಲ್ಲೆ..ಆರೈಕೆ ಇಲ್ಲದ್ದೆ ಎಲ್ಲಾ ಕೊಂಗಚ್ಚ….
ಕಳುದ್ದು ಕಳುದತ್ತು…ಪೇಟೆಯ ಸಹವಾಸ ಸಾಕಾಯಿದು..ಇನ್ನಾದರೂ ಎಡಿಗಾದ ಹಾಂಗೆ ಕೃಷಿ ಮಾಡ್ಸಿ ಮೊದಲಾಣ ಹಾಂಗಲ್ಲದ್ರೂ ಎಡಿಗಾದ ಹಾಂಗೆ ಇಲ್ಲಿಯೇ ಕೂದು ನೋಡಿಕೊಳ್ಳೆಕ್ಕು ಹೇಳಿಕೊಂಡು ಜಾಲಿಂದ ಒಳ ಹೋಪಲೆ ಹೆರಟ…ಚಾವಡಿ ಬಾಗಿಲಿಲಿ ಪಾರು ನಿಂದು ಸಣ್ಣಕೆ ಮುಗುಳುನಗೆ ಮಾಡಿ ಒಳಬಪ್ಪಲೆ ಸನ್ನೆ ಮಾಡಿದ ಹಾಂಗಾತು ರಾಮಣ್ಣಂಗೆ…..
ರೂಪಾಪ್ರಸಾದ ಕೋಡಿಂಬಳ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಲಾ…..ಯ್ಕದ ಕಥೆ
ಕಣ್ಣಿಂಗೆ ಕಟ್ಟಿತ್ತು ! ಅಪ್ಪ ಕಥೆ ಹೇಳುವಗ ಆನು ಅದರ ಎನ್ನ ಕಲ್ಪನೆಗೆ ಬೇಕಾದಾಂಗೇ ಕಲ್ಪಿಸುವಾಂಗೆ ಕಲ್ಪಿಸಿಗೊಂಡು ಓದಿದೆ.
ಎಂಗಳ ಕುಟುಂಬಲ್ಲೇ ಒಬ್ಬರ ಮನೆಯನ್ನೂ ಅವರ ಜಾಲು ಕಣ್ಣಿಂಗೆ ಕಟ್ಟಿಗೊಂಡಿತ್ತು.
ಎಂಗಳ ಜಾಲಂತೂ ಇಷ್ಟು ದೊಡ್ಡ ಇಲ್ಲೆ…