Oppanna.com

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,            (ಭಾಗ-15)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   11/10/2016    8 ಒಪ್ಪಂಗೊ

 

 

ಮೋಹನ ಅಷ್ಟೊತ್ತಿಂಗೇ ಒರಗುವ ತಯಾರಿಲಿ ಇಪ್ಪದು ಕಂಡು ಹರಿಣಿಗೆ ರಜ್ಜ ಸಮಾಧಾನ ಆತು. ಕೆಲವು ಸತರ್ಿ ಅಂವ ಒರಗುವ ಮೊದಲು ಹರಿಣಿಯತ್ರೆ ರಾಮಾಯಣವನ್ನೋ ಮಹಾಭಾರತವನ್ನೋ ಓದ್ಲೆ ಹೇಳ್ತಂ. ಹಾಂಗಾರೆ ಇಂದು ಸುರಭಿಯ ಮಾತುಗೊಕ್ಕೆ ಕೆಮಿ ಕೊಡ್ಲೆ ಎಡಿಯ ಹೇದು ಜಾನ್ಸಿಯೊಂಡೇ ಅದು ಆ ಕೋಣೆಗೆ ಬಂದದು. ಅಂವ ಇಂದು ಉದಿಯಪ್ಪಾಗಂದ ಟಿ.ವಿ.ಲಿ ಕ್ರಿಕೆಟು ನೋಡಿಯೊಂಡೇ ಇತ್ತಿದ್ದ ಕಾರಣಂದ ಬಚ್ಚಿದ್ದಾಯಿಕ್ಕು. ಹಾಂಗಾಗಿ ಹೆಚ್ಚೆಂತ ಮಾತಾಡದ್ದೆ ಹರಿಣಿ ಕೊಟ್ಟ ಮಾತ್ರೆಯ ಬಾಯಿಗೆ ಹಾಕಿ ನೀರು ಕುಡಿದು ಮನುಗಲೆ ಹೆರಟಂ. ಅಂವಂಗೆ ಅನುಕೂಲ ಅಪ್ಪ ಹಾಂಗೆ ಹಾಸಿಗೆ, ತಲೆದಿಂಬು ಎಲ್ಲ ಸರಿ ಮಾಡಿಕೊಟ್ಟು ಲೈಟು ನಂದ್ಸಿ ಕೋಣೆಯ ಬಾಗಿಲು ಎರಶಿಕ್ಕಿ ಹರಿಣಿ ಸುರಭಿಯೊಟ್ಟಿಂಗೆ ಟೆರೇಸಿಂಗೆ ಹೋಪಲೆ ಹೇದು ಮೆಟ್ಲು ಹತ್ತುವಾಗಳೇ ಹರಿಣಿಯ ಮೊಬೈಲು ಸಂಗೀತ ಹೇಳ್ಲೆ ಸುರು ಮಾಡಿತ್ತದ. `ಇಷ್ಟೊತ್ತಿಂಗೆ ಆರಪ್ಪಾ ದಿನುಗೋಂಬದು…?’ ಹೇಳಿ ಜಾನ್ಸಿಯೊಂಡೇ ಫೋನು ತೆಗದತ್ತು. ಆದಿತ್ಯ! ಸುರಭಿ ಬಂದ ಲಾಗಾಯ್ತಿಂದ ಅಂವ ಅತ್ತೆಯತ್ರೆ ಮಾತಾಡಿತ್ತಿದ್ದಾಂಯಿಲ್ಲೆ. `ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಹೇಳ್ತಾಂಗಾತು ಹರಿಣಿಯ ಸ್ಥಿತಿ. ಎಂತಕೆ ಹೇಳಿರೆ ಸುರಭಿ ಬಂದ ದಿನ, `ಎಂತ ಬೇಕಾರೂ ಮಾಡಿಯೋಳಲಿ…ಅದು ಹೇಳದ್ದೆ ವಿನಾ ಆನು ಅದರ ಜೀವನಲ್ಲಿ ತಲೆ ಹಾಕೆ…’ ಹೇಳಿ ಹರಿಣಿ ಜಾನ್ಸಿಯೋಂಡದು ಅಪ್ಪಾದ್ರೂ ಹೆತ್ತ ಕರಳಲ್ದೋ ಹೇಳಿ…? ಸುರಭಿ ಇಡೀ ದಿನ ಮೂಕ ಮುನಿಯ ಹಾಂಗೆ ಕೋಣೆಯೊಳ ಕೂದೊಂಡಿಪ್ಪದು, ಊಟಕ್ಕೋ ಕಾಪಿಗೋ ಹೆರ ಬಪ್ಪಾಗೆಲ್ಲಾ ಕಣ್ಣು ಕೆಂಪಾಗಿಯೊಂಡಿಪ್ಪದು, ಮಾತಾಡ್ಸಿರೂ ಯೇವದೋ ಲೋಕಲ್ಲಿಪ್ಪ ಹಾಂಗೆ ಬೇಕೋ ಬೇಡದೋ ಹೇಳ್ತಾಂಗಿದ್ದ ಉತ್ತರಂಗೋ…..ಇದ್ರೆಲ್ಲಾ ನೋಡಿ ಹರಿಣಿಗೆ ಎದೆಯೊಳ ರಜ ರಜವೇ ಅವಲಕ್ಕಿ ಕುಟ್ಲೆ ಸುರುವಾತು. ಬಲದ ಕಣ್ಣೂ ಅದುರಲೆ ಸುರುವಾತದ. ಒಂದಾರಿ ಆದಿತ್ಯಂಗೆ ಫೋನು ಮಾಡಿ ವಿಷಯ ಎಂತರ ಹೇಳಿ ಕೇಳಿದ್ರಕ್ಕೋ ಹೇಳ್ತ ಆಲೋಚನೆಯೂ ಹರಿಣಿಗೆ ಬಂದಿತ್ತಿದ್ದು. ಇನ್ನೂ ಒಂದು ದಿನ ಕಾದು ನೋಡುವೋಂ….ಅಂಬಾಗಳೂ ಸುರಭಿಯ ಬಾಯಿಂದ ಎಂತ ಶುದ್ದಿಯೂ ಬಯಿಂದಿಲ್ಲೆ ಹೇಳಿಯಾದ್ರೆ ಮತ್ತೆ ಅಂವನತ್ರೆ ಮಾತಾಡುವೋಂ ಹೇಳಿ ಅದರಷ್ಟಕೇ ಸಮಾಧಾನ ಮಾಡಿಯೊಂಡಿತ್ತಿದ್ದು. ಆದಿತ್ಯನತ್ರೆ ಅವರಿಬ್ರ ವೈಯ್ಯಕ್ತಿಕ ವಿಷಯ ಮಾತಾಡ್ಲೆ ಯೇವ ಅಂಜಿಕೆಯೂ ತೋರ್ಸೇಕಾದ ಅಗತ್ಯ ಇಲ್ಲೆ ಹೇದು ಇಷ್ಟು ದಿನದ ಅಂವನ ಪರಿಚಯಲ್ಲಿ ಅದಕ್ಕೆ ಅಂದಾಜಾಗಿತ್ತಿದ್ದು. ಅಷ್ಟು ಮಾಂತ್ರ ಅಲ್ಲ, ಅದೀಗ ಅತಿ ಅಗತ್ಯವೂ ಆಗಿತ್ತಿದ್ದನ್ನೇ? `ಹುಡುಕುವ ಬಳ್ಳಿ ಕಾಲಿಗೆ ತೊಡರಿದಂತೆ’ ಹೇಳ್ತಾಂಗೆ ಅಂವನೇ ಹರಿಣಿಗೆ ಫೋನು ಮಾಡಿದಂ.

 

ಅಬ್ಬೆ ಆದಿತ್ಯನತ್ರೆ ಮಾತಾಡ್ತಾ ಇಪ್ಪದು ಹೇಳಿ ಗೊಂತಾದ್ದೇ ಸೈ…ಸುರಭಿಯ ಮೋರೆ ಕಡಂದೆಲು ಕುಟ್ಟಿದ ಹಾಂಗಾತದ. ಧಡಧಡನೆ ಮೆಟ್ಲು ಹತ್ತಿ ಟೇರೇಸಿಂಗೆ ಹೋತು. ಹರಿಣಿ ಓರೆ ಕಣ್ಣಿಲ್ಲಿ ಇದೆಲ್ಲವನ್ನೂ ಗಮನಿಸಿಯರೂ ಅದಕ್ಕೆ ವಿಷೇಶ ಪ್ರಾಮುಖ್ಯತೆ ಕೊಡದ್ದೆ ಹೆರ ವೆರಾಂಡಕ್ಕೆ ಹೋಗಿ ಕೂದು ಮೆಲುಧ್ವನಿಲಿ ಅಳಿಯನತ್ರೆ ಮಾತಾಡ್ಲೆ ಸುರು ಮಾಡಿತ್ತು. ಸುಮಾರು ಒಂದು ಗಂಟೆ ಹೊತ್ತು ಮಾತಾಡಿಕ್ಕಿ ಒಳ ಬಂತು. ಈ ಮೂರು ನಾಕು ದಿನ ಹರಿಣಿಯ ಎದೆಯ ಮೇಗಂಗೆ ಅಕ್ಕಿ ಮುಡಿಯ ಹೊತ್ತು ಹಾಕಿದ ಹಾಂಗಿತ್ತಿದ್ದ ಭಾರವ ಆದಿತ್ಯ ಇಳಿಶಿ ಬಿಟ್ಟಂ. ಸಮಾಧಾನಲ್ಲಿ ಒಂದು ಗ್ಲಾಸು ನೀರು ಕುಡುದಿಕ್ಕಿ ಮಗಳ ಹುಡ್ಕಿಯೊಂಡು ಟೇರೇಸಿಂಗೆ ಹೋತು. ಕಸ್ತಲೆಲಿ ಮಗಳು ಒಬ್ಬನೇ ಕೂಯಿದನ್ನೇ ಹೇದು ಜಾನ್ಸಿಯೊಂಡು ಲೈಟಿನ ಸುಚ್ಚು ಹಾಕಿತ್ತು.

 

“ಅಬ್ಬೇ…,ಲೈಟು ಬೇಡ…ಕಸ್ತಲೆಯೇ ಇರಳಿ…” ಸುರಭಿ ಹೇಳಿಯಪ್ಪಗ ಹರಿಣಿ ಲೈಟಿನ ನಂದ್ಸಿತ್ತು. ಇಷ್ಟು ವರ್ಷಲ್ಲಿ ಒಂದೇ ಒಂದಾರಿಯಾದ್ರೂ ಮಗಳ ಮಾತಿಂಗೆ `ಹಾಂಗಲ್ಲ…,ಹೀಂಗೆ…’ ಹೇಳಿ ಹೇಳಿದೋಳು ಅದಲ್ಲನ್ನೇ? ಅಂದರೆ ಈಗ ಆ ಕಾಲ ಬಯಿಂದು…ತಾನು ಮನಸ್ಸು ಕಲ್ಲು ಮಾಡಿಯೋಂಬಲೇ ಬೇಕು…ಹೇಳೇಕಾದ್ದರ ಹೇಳಲೇ ಬೇಕು ಹೇಳಿ ಹರಿಣಿ ಜಾನ್ಸಿಯೋಂಡತ್ತು.

 

ಮಳೆಕಾಲ ಸುರುವಪ್ಪ ಮೊದ್ಲಾಣ ಧಗೆ ಇಡೀ ವಾತಾವರಣವ ಬೆಶಿ ಕಾವಲಿಗೆಯ ಹಾಂಗೆ ಮಾಡಿತ್ತಿದ್ದು. ಭೀಮ ಗಾತ್ರದ ಮೋಡಂಗೊ ಮದೋನ್ಮತ್ತ ಆನೆಗಳ ಹಾಂಗೆ ಚಂದ್ರನ ಬೆಣಚ್ಚಿಂಗೆ ಪರದೆ ಎಳಕ್ಕೋಂಡು ಮುಂದೆ ಮುಂದೆ ಓಡಿಯೋಂಡಿತ್ತಿದ್ದು. ಹಿತ್ಲಿಲ್ಲಿಪ್ಪ ಮರಂಗಳ ಒಂದೇ ಒಂದು ಎಲೆಯೂ ಹಂದಿಯೊಂಡಿತ್ತಿದ್ದಿಲ್ಲೆ. ಸುಪ್ತ ಗಾಳಿ, ಸ್ತಬ್ಧ ವಾತಾವರಣ ಹರಿಣಿಯ ಮನಸ್ಸಿನ ಪ್ರತಿಬಿಂಬವೋ ಹೇಳ್ತ ಹಾಂಗೆ ಕಂಡೊಂಡಿತ್ತಿದ್ದು. ಹರಿಣಿ ಮೌನವಾಗಿ ಆ ಕಸ್ತಲೆಲೇ ಪರಡಿಯೊಂಡು ಹೋಗಿ ಅಲ್ಲೇ ಕರೇಲಿಪ್ಪ ಬೆಂಚಿನ ಮೇಗೆ ಕೂದತ್ತು. ಸುಮಾರು ಹೊತ್ತು ಅಲ್ಲಿ ಬರೇ ಮೌನದ್ದೇ ಸಾಮ್ರಾಜ್ಯ ಆಗಿ ಹೋತು. ಬಹುಷಃ ಇನ್ನು ಸುರಭಿಗೆ ತಡಕ್ಕೋಂಬಲೆ ಎಡಿಯ ಹೇದು ಕಂಡತ್ತೇನೋ….? ಸರ್ರನೆ ಎದ್ದು ಬಂದು ಅಬ್ಬೆಯ ಕಾಲಬುಡಲ್ಲಿ ಕೂದು ಅದರ ತೊಡೆಲಿ ತಲೆ ಮಡುಗಿ ಮೋರೆ ಮುಚ್ಚಿಯೋಂಡತ್ತು. ಅಪ್ರಯತ್ನವಾಗಿ ಹರಿಣಿಯ ಕೈ ಸುರಭಿಯ ತಲೆ, ಬೆನ್ನುಗಳ ಮೃದುವಾಗಿ ಉದ್ದಲೆ ಸುರು ಮಾಡಿತ್ತು. ಸುರಭಿಯ ಆ ಕ್ರಿಯೆಗೆ ಹರಿಣಿಯ ಆ ಪ್ರತಿಕ್ರಿಯೆ ಒಂದು ಅದ್ಭುತ ಸಂಚಲನೆಗೆ ಕಾರಣ ಆತು. ಅವರಿಬ್ರೊಳ ಬೆಟ್ಟದ ಹಾಂಗೆ ತಲೆ ಎತ್ತಿ ನಿಂದೊಂಡಿತ್ತಿದ್ದ ಅಹಂ ಹೇಳ್ತ ಅದೃಶ್ಯ ಗೋಡೆ ನುಚ್ಚುನೂರು ಆಗಿ ಬಿದ್ದು ಹೋತು. ಇಷ್ಟೂ ದಿನ ಸುರಭಿಯೊಳ ಕಟ್ಟಿ ನಿಂದೊಂಡಿತ್ತಿದ್ದ ಋಣಾತ್ಮಕ ಭಾವನೆಗೊಕ್ಕೆ ತೂಂಬು ಕೊರದು ಬಿಟ್ಟ ಹಾಂಗಾತು. ಕಣ್ಣೀರು ಧಾರೆಯಾಗಿ ಹರಿವಲೆ ಸುರುವಾತು. ಕೆಸರಿನ ಹೊಂಡಕ್ಕೆ ತೂಂಬು ಕೊರದು ಬಿಟ್ರೆ ಸಾಕೋ…? ಕೊಳಕ್ಕು ನೀರೆಲ್ಲವೂ ಹೆರ ಹರಿದು ಹೋಪನ್ನಾರ ಕಾಯ್ತ ತಾಳ್ಮೆ ಬೇಕು. ಅದಾದ ಮತ್ತೆಯೂ ಕೆಲಸ ಮುಗುದ್ದಿಲ್ಲೆ, ಹೊಂಡದ ಅಡೀಲಿಪ್ಪ ಕೆಸರಿನ ಬರಗಿ ತೆಗೇಕು. ಸ್ವಚ್ಛ ಮಾಡೇಕು…,ಮತ್ತೆಯೇ ಒಳ್ಳೆ ನೀರು ತುಂಬ್ಸಲೆ ಎಡಿಗಷ್ಟೆ ಅಲ್ದೋ…?

 

`….ತುಂಬಿ ನಿಂತ ಪಾತ್ರೆಗೆ ಏನು ಸುರಿದರೂ ಎಷ್ಟು ಸುರಿದರೂ ಚೆಲ್ಲಿ ವ್ಯರ್ಥವಾಗಿ ಹೋದೀತು…ಅದನ್ನೇ ಖಾಲಿ ಪಾತ್ರೆಗೆ ಸುರುವಿದಾಗ…? ಹಾಗೆಯೇ ಮನದಲ್ಲಿ ಅಹಂ ಎಂಬ ಕೊಳಚೆ ತುಂಬಿಕೊಂಡಿದ್ದಾಗ ಏನು ಹೇಳುವುದೂ ವ್ಯರ್ಥ…,ಮನಸ್ಸಿನಲ್ಲಿ ಶೂನ್ಯತೆ ಆವರಿಸಬೇಕು…ನಾನೇಕೆ ಹೀಗೆ ಎಂಬ ಚಿಂತನೆ ಶುರುವಾಗಬೇಕು….ಆಗ ಹೊರಗಿನಿಂದ ಬಂದ ಒಳ್ಳೆಯ ಮಾತುಗಳನ್ನು ಮನಸ್ಸು ಹೀರಿಕೊಳ್ಳುತ್ತದೆ….ಶೂನ್ಯತೆ ಇದ್ದಾಗ ಪೂರ್ಣತೆಗೆ ಅವಕಾಶ ಇದೆ….’ ಗುರುಗಳ ಮಾತುಗಳ ಹರಿಣಿ ಪುನಃ ಪುನಃ ನೆಂಪು ಮಾಡಿಯೋಂಡತ್ತು. ಆ ಕ್ಷಣಲ್ಲಿ ಹರಿಣಿಗೆ ಮನಸ್ಸಿನೊಳಾದಿಕೆ ಫಳ್ಳನೆ ಮಿಂಚೊಂದು ಹೊಡದ ಹಾಂಗಾತು. ಅಂದು ಆಸ್ಪತ್ರೆಲಿ ಮೋಹನ ಐ.ಸಿ.ಯು. ವಿಭಾಗಲ್ಲಿಪ್ಪಾಗ ಹರಿಣಿ ಬಹು ಬೇಜಾರಿಂದ ಯೇಚನೆಲಿ ಕೂದೊಂಡಿತ್ತಿದ್ದ ಹೊತ್ತಿಲ್ಲಿ ಅದರ ಫೋನಿಂಗೆ ಒಂದು ಕರೆ ಬಂದಿತ್ತಿದ್ದಲ್ದೋ…? `ಹರಿಣೀ…,ಶ್ರೀರಾಮ ಇದ್ದಂ….ಎಲ್ಲ ಸರಿ ಅಕ್ಕು…ನೀನು ಹಾಯಾಗಿರು…’ ಹೇಳ್ತ ಒಂದು ಸ್ವರ ಅದರಲ್ಲಿ ತೇಲಿ ಬಂದಿತ್ತಿದ್ದಲ್ದೋ? ಅಂಬಗ ಹರಿಣಿಗೆ ಆ ಸ್ವರವ ಎಲ್ಲೋ ಕೇಳಿದ್ದೆ ಹೇಳಿ ಆದ್ದದಷ್ಟೆ ಹೊರತಾಗಿ ನಿಖರವಾಗಿ ಗುರುತುಸಲೆ ಎಡಿಗಾಗಿತ್ತಿದ್ದಿಲ್ಲೆ. ಈಗ ಗುರುಗಳ ಪ್ರವಚನದ ಮಾತುಗಳ ನೆಂಪು ಮಾಡ್ತಾ ಇದ್ದ ಹಾಂಗೆ ಇದೇ ಸ್ವರವೇ ಅದೂದೇ…ಹೇಳ್ತದು ಅದರ ಅರಿವಿಂಗೆ ಬಂತು. ಹರಿಣಿಗೆ ಮೈ ಝುಂ ಹೇಳಿತ್ತು. ಶರೀರದ ಅಣು ಅಣುವೂ ನವಿರಾಗಿ ಕಂಪಿಸಿತ್ತು. ಮೈಯೊಳಾಣ ನೆತ್ತರಿನ ಪ್ರವಾಹ ರಭಸಂದ ಹೃದಯದೊಳಾಂಗೆ ಹರಿತ್ತ ಅನುಭವ ಆತು. ಬೆಶಿಲಿಂಗೆ ಮೈಯೊಡ್ಡದ್ದೇ ಕಿಚ್ಚಿನೆದುರು ನಿಲ್ಲದ್ದೇ ಮೈಯಿಡೀ ಬೆಚ್ಚಂಗೆ….ಬೆಚ್ಚಂಗೆ ಆತದ. ರೋಮಾಂಚನ ಹೇಳ್ತದು ಇದಕ್ಕೇಯೋ…? ಹರಿಣಿ ತನ್ನೊಳವೇ ಪ್ರಶ್ನಿಸಿಯೋಂಡತ್ತು. ಓ…ಹ್…,ಹಾಂಗಾರೆ ಅಂದು ಗುರುಗಳು ಎನಗೆ ಫೋನು ಮಾಡಿತ್ತಿದ್ದವಾ…? ಅದು ಹೇಂಗೆ ಸಾಧ್ಯ…? ಅಥವಾ ಅದು ಎನ್ನ ಭ್ರಮೆ ಆದಿಕ್ಕಾ…? ಆದರೆ ಅಂದು ಫೋನಿನ ಗಂಟೆ ಹೊಡದ್ದದು…ಅದರಲ್ಲಿ ಕೇಳಿದ ಆ ಮಾತುಗೊ ಅಷ್ಟು ಸ್ಪಷ್ಟವಾಗಿ ಎನ್ನ ಪ್ರಜ್ಞೆಯೊಳಾಂಗೆ ಇಳಿದಿತ್ತಿದ್ದನ್ನೇ…?? ಹಾಂಗಾರೆ ಮೊಬೈಲಿಂಗೆ ಬಂದ ಹಳೆ ಕರೆಗಳ ನೋಡಿರೆ ಗೊಂತಕ್ಕಲ್ದೊ..? ಛೆ..ಛೆ…,ಅದೂ ಕಷ್ಟವೇ…ಹೆಸರಿನ ಪಟ್ಟಿಲಿ ಇಲ್ಲದ್ದ ಎಷ್ಟೋ ನಂಬರಿಂದ ಫೋನುಗೋ ಬತ್ತಾ ಇರ್ತಲ್ದೋ….? ಇರಳಿ…ಅದರ ಈಗ ತನಿಖೆ ಮಾಡಿ ಸತ್ಯವೋ ಮಿಥ್ಯೆಯೋ ಹೇದು ಗೊಂತು ಮಾಡಿ ಎಂತ ಅಪ್ಪಲಿದ್ದು…? ಸ್ವತಃ ಗುರುಗಳೇ ಎನಗೆ ಸಾಂತ್ವನ ಮಾಡಿದ್ದವು ಹೇಳ್ತ ಭಾವನೆಯೇ ಎಷ್ಟು ಆನಂದ ಕೊಡ್ತಾ ಇದ್ದು….ಅದೇ ಸಾಕೆನಗೆ….ಎನ್ನ ಮನಸ್ಸಿನ ಒಳಾಣ ಕೋಣೆಲಿ ಆ ಅನುಭವದ ನೆನಪು ಶಾಶ್ವತವಾಗಿ ಹಾಂಗೇ ಇರಳಿ….’ ಹೀಂಗಿದ್ದ ಆಲೋಚನೆ ಮಾತ್ರಂದಲೇ ಹರಿಣಿಗೆ ನೂರಾನೆ ಬಲ ಬಂದ ಹಾಂಗಾತು. ಸಮಾಧಾನಂದಲೇ ಮಗಳತ್ರೆ ಹೇಳಿತ್ತು,

 

“ಒಪ್ಪಕ್ಕೋ…,ಎಷ್ಟು ಕೂಗೇಕು ಹೇಳಿ ಕಾಣ್ತೋ ಅಷ್ಟೂ ಕೂಗಿಕ್ಕು ಮಗಳೇ….ಮನಸ್ಸಿಲ್ಲಿಪ್ಪ ಕೆಸರೆಲ್ಲ ಹರಿದು ಹೋಗಲಿ….ಮತ್ತೇ ಮಾತಾಡುವೋಂ…”

 

ಹರಿಣಿ ಎಷ್ಟೋ ವರ್ಷಂಗಳ ಮೊದಲು ಮಾಡಿಯೊಂಡಿತ್ತಿದ್ದ ಹಾಂಗೆ ಮಗಳ ಬೆನ್ನುದ್ದಿ ತಲೆಯ ನೇವರಿಸಿಯೊಂಡು ಹೇಳಿದ್ದದು ಒಂದೇ ವಾಕ್ಯವಾದರೂ ಅದು ಹೇಳದ್ದ ಹಲವು ವಿಷಯಂಗಳ ಆ ಒಂದು ಸ್ಪರ್ಷ ಸುರಭಿಗೆ ಹೇಳಿತ್ತು, `ನೂರಕ್ಕೆ ನೂರರಷ್ಟೂ ಅಬ್ಬೆ ಎನ್ನ ಕ್ಷಮಿಸಿ ಬಿಟ್ಟಿದು ಹೇಳ್ತ ಸಂದೇಶವೂ ಆ ಮೃದು ಸ್ಪರ್ಷಲ್ಲಿ, `ಒಪ್ಪಕ್ಕೋ…’ ಹೇಳ್ತ ಆ ಒಂದು ಶಬ್ದಲ್ಲಿ ಇತ್ತಿದ್ದಲ್ದೋ…? ಹಾಂಗಾರೆ ಅಪ್ಪಂ…? ಅಯ್ಯೋ…ಆ ವಿಷಯವ ಆರತ್ರೆ ಕೇಳಲಿ….? ಕೇಳುವ ಹಕ್ಕಾದ್ರೂ ಎನಗಿದ್ದೋ…? ಈಗಂತೂ ಅಪ್ಪಂಗೆ ಎನ್ನ ತಲೆ ಕೊಡಿ ಕಂಡ್ರೆ ಆವುತ್ತಿಲ್ಲೆ….ಇದು ಆನೇ ಮಾಡಿಯೋಂಡದಲ್ಲದ್ದೆ ಬೇರೆಂತ್ಸೂ ಅಲ್ಲ….,ಇಷ್ಟೊಳ್ಳೇ ಅಬ್ಬೆ ಅಪ್ಪನ ಧಿಕ್ಕರಿಸಿ ಆ ಬೂನರ್ಾಸು ಆದಿತ್ಯನ ಮದುವೆಯಾದೆನ್ನೇ….? ಯಬ್ಬಾ….ಅಂವ ಓಂತಿಯ ಜಾತಿಯಂವ….ಮದುವೆ ಅಪ್ಪ ಮೊದಲು `…ನೀನೇ ಎನ್ನ ರಾಣಿ…., ನೀನೆ ಎನ್ನ ದೇವತೆ…’ಹೇಳಿಯೆಲ್ಲ ಹೇಳಿಯೊಂಡಿತ್ತಿದ್ದಂವ ಮದುವೆ ಆದ ಮತ್ತೆ ತನ್ನ ನಿಜ ಬಣ್ಣವ ತೋಸರ್ಿಯೇ ಬಿಟ್ಟಂ ಅಲ್ದೋ….? ಆನೆಂತ ಅಂವನ ಕೆಲಸದ ಹೆಣ್ಣೋ ಅಂವ ಹೇಳಿದ್ದರ ಪೂರಾ ಮಾಡಿಯೊಂಡು ಮನೆಯೊಳಾವೇ ಬಿದ್ದೊಂಡಿಪ್ಪಲೆ….? ಎನ್ನ ಮೇಗೆ ನಿಜವಾಗಿಯೂ ಅಂವಗೆ ಅಷ್ಟು ಕಾಳಜಿ ಇದ್ದು ಹೇಳಿಯಾಗಿರುತ್ತಿದ್ರೆ ಆನು ಇಲ್ಲಿಗೆ ಬಂದು ಇಷ್ಟು ದಿನ ಆತು….ಒಂದ್ಸತರ್ಿಯಾದ್ರೂ ಎನಗೆ ಫೋನು ಮಾಡೇಕು ಹೇದು ಕಂಡತ್ತೊ ಅವಂಗೆ….? ಎನ್ನತ್ರೆ ಮಾತಾಡ್ಲೆ ಎಡಿಯದ್ದವಂಗೆ ಅಬ್ಬೆಯತ್ರೆ ಗಂಟೆಕಟ್ಲೆ ಮಾತಾಡ್ಲೆ ಎಡಿತ್ತು…? ವತ್ಸಲಾ ಮೇಡಮ್ಮೂದೆ ಅಷ್ಟೇ…ಸ್ವಂತ ಲಾಭಕ್ಕೆ ಎನ್ನ ಉಪಯೋಗ್ಸಿಯೊಂಡತ್ತು….ಎನ್ನ ಸ್ವಂತ ಸಮಸ್ಯೆಗಳ ಹೇಳಿಯೋಂಡಪ್ಪಗ ಮೋರೆ ಪೀಂಟ್ಸಿ ಬೈದು ಅಟ್ಟಿತ್ತನ್ನೇ….? ಛೇ…..ಒಟ್ಟಿಲ್ಲಿ ಆರಿಂಗೂ ಎನ್ನ ಕಂಡ್ರೆ ಇಷ್ಟವೇ ಇಲ್ಲೆ…ಎನಗೆ ಸಾವೇ ಒಳ್ಳೇದು ಹೇಳಿ ಕಾಣ್ತು….’ ಹೀಂಗಿದ್ದ ಸ್ವಗತ ಸಂಭಾಷಣೆಗಳೊಟ್ಟಿಂಗೆ ಹರಿದ  ಸುರಭಿಯ ಕಣ್ಣೀರು ಹರಿಣಿಯ ವಸ್ತ್ರವ ಬೊದುಲಿಸಿತ್ತು. ಹರಿಣಿ ಮೌನವಾಗಿಯೇ ಕೂದು ಮಗಳ ಮಾತಿಂಗಾಗಿ ಕಾದತ್ತು. ಎಷ್ಟೋ ಹೊತ್ತಿನ ನಂತ್ರ ಸುರಭಿಯ ದುಃಖ ಹತೋಟಿಗೆ ಬಂತು. ಬಿಕ್ಕಳಿಕೆ ಕಡಮ್ಮೆ ಆತು. ಮಾತು ಹೆರ ಬಂತು,

 

“ಅಬ್ಬೇ, ಕಡೇಂಗೂ ಆನು ನಿನ್ನ ಒಪ್ಪಕ್ಕನೇ ಅಪ್ಪು ಹೇಳಿ ಒಪ್ಪಿಗೋಂಡೆ ಅಲ್ದಾ….? ಅಷ್ಟು ಸಾಕೆನೆಗೆ…ಅಷ್ಟೇ ಸಾಕೆನಗೆ….ಆದಿತ್ಯನೂ ಬೇಡ….,ಡೇನ್ಸೂ ಬೇಡ…,ಅಬ್ಬೇ ಆನು ದೊಡ್ಡ ಪಾಪಿಷ್ಟೆ…ದೊಡ್ಡ ಪಾಪಿಷ್ಟೆ….” ಒಣಗಿದ ಸ್ವರಲ್ಲಿ ಸುರಭಿಯ ಬಾಯಿಂದ ಬಂದ ಮಾತುಗಳ ಕೇಳಿ ಹರಿಣಿಯ ಕಣ್ಣೂ ತುಂಬಿ ಬಂತು. ಅಂದರೆ ಈಗ ಯಾವುದೇ ಕಾರಣಕ್ಕೂ ತಾನು ಮೆಸ್ತಂಗೆ ಅಪ್ಪಲೆಡಿಯ ಹೇದು ಹರಿಣಿ ಆದಿತ್ಯನತ್ರೆ ಮಾತಾಡಿದ ನಂತ್ರ ಮನಸ್ಸು ಗಟ್ಟಿ ಮಾಡಿಯೋಂಡಿತ್ತಿದ್ದನ್ನೇ?

 

“ಅಬ್ಬೇ…,ಎನ್ನ ಜೀವನ ಹಾಳಾಗಿ ಹೋತು….,ಆದಿತ್ಯನ ನಂಬಿ ಕೆಟ್ಟೆ….,ನಿಂಗಳ ಬೇನೆ ಮಾಡಿ ಅಂವನ ಮದುವೆ ಆದ್ದದಕ್ಕೆ ದೇವರು ಎನಗೆ ಸರಿಯಾದ ಶಿಕ್ಷೆಯನ್ನೇ ಕೊಟ್ಟಂ….ಎನಗೆ ಇನ್ನು ಅಂವನೊಟ್ಟಿಂಗೆ ಇಪ್ಪಲೆ ಎಡಿಯಲೇ ಎಡಿಯ….ನಿಂಗಳೊಟ್ಟಿಂಗಾರೂ ಇಪ್ಪೋಂ ಹೇಳಿರೆ ಅದಕ್ಕೂ ಎನಗೆ ಯಾವುದೇ ಅರ್ಹತೆ ಇಲ್ಲೆ….,ಆನು ಮಾಡಿದ ತಪ್ಪಿಂಗೆ ಕ್ಷಮೆಯೇ ಇಲ್ಲೆಬ್ಬೇ….,ಇನ್ನು ಆನು ಆತ್ಮಹತ್ಯೆ ಮಾಡಿ ಸಾವದೇ ಸೈ….ಅದರ ಮೊದಲು ನಿಂಗಳ ಒಂದಾರಿ ಕಂಡಿಕ್ಕಿ ಹೋಪೋಂ ಹೇಳಿ ಇಲ್ಲಿಗೆ ಬಂದದು….,ಅಬ್ಬೇ ಆನು ಸಾಯುವ ಮೊದಲು ನಿನ್ನತ್ರೆ ಒಂದೇ ಒಂದು ಪ್ರಶ್ನೆ…., ಪಾಪಿಗೊಕ್ಕೆ ಅರುಂಧತಿ ನಕ್ಷತ್ರ ಕಾಣ್ತಿಲ್ಲೆಯಾಡ ಅಪ್ಪೋ…? ಅದು ಸತ್ಯವೇ ಆದಿಕ್ಕು ಹೇಳಿ ಎನಗೆ ಈಗ ಕಾಣ್ತು…ಎಂತಕೆ ಹೇಳಿರೆ ಆನು ಸಣ್ಣಾಗಿಪ್ಪಾಗ ಯೇವಾಗಳೂ ನಿನ್ನೊಟ್ಟಿಂಗೆ ಇಲ್ಲೇ ಕೂದೊಂಡು ಇತ್ತಿದ್ದಿಲ್ಲ್ಯೋ…? ನೀನು ಎಷ್ಟೆಷ್ಟೊಳ್ಳೆ ಕತೆ ಹೇಳಿಯೊಂಡಿತ್ತಿದ್ದೆ…, ಅರುಂಧತಿಯ ಕತೆ ಹೇಳುವಾಗೆಲ್ಲಾ ಆಕಾಶಲ್ಲಿ ಸಪ್ತಷರ್ಿ ಮಂಡಲ, ಅರುಂಧತಿ ನಕ್ಷತ್ರವೂ ಕಂಡೊಡಿತ್ತಿದ್ದಲ್ದೋ….? ಇಂದು ನೋಡು ನಾವಿಲ್ಲಿಗೆ ಬಂದು ಎಷ್ಟು ಹೊತ್ತಾತು….ಆಕಾಶ ಇಡೀ ಮೋಡವೇ….ಅರುಂಧತಿಯ ಸುಳಿವೇ ಇಲ್ಲೆ….,ಅಬ್ಬೇ…,ಆನು ಸಪ್ತಪದಿಯೂ ಮೆಟ್ಟಿದ್ದಿಲ್ಲೆ….,ನಿಂಗಳ ಆಶೀವರ್ಾದವೂ ತೆಕ್ಕೋಂಡಿದಿಲ್ಲೆ….,ಸರಿಯಾಗಿ ಮದುವೆಯೇ ಆಗದ್ದಿಪ್ಪಾಗ ಭಟ್ರುಗೊ, ಮಂತ್ರಂಗೋ…ಏವದೂ ಇಲ್ಲದ್ದ ರಿಜಿಸ್ತ್ರಿ ಮದುವೆಲಿ ಚತುಥರ್ೀಯೂ ಇಲ್ಲೆ, ಮಹಾಸತಿ ಅರುಂಧತಿಯ ನಕ್ಷತ್ರವನ್ನೂ ನೋಡಿದ್ದಿಲ್ಲೆ….ಹಾಂಗಾಗಿಯೇ ಎನ್ನ ಜೀವನ ಹೀಂಗಾದ್ದದು….ಅಬ್ಬೇ ಆನು ಪಾಪಿಯಲ್ಲ ಹೇದು ಒಂದೇ ಒಂದಾರಿ ಹೇದಿಕ್ಕು…ಮತ್ತೆ ಆನು ಹೋವುತ್ತೆ…,ಸಾಯ್ತೇ…” ಸುರಭಿಯ ಆವೇಶಭರಿತ ದುಃಖದ ಮತುಗಳ ಕೇಳಿ ಹರಿಣಿ ಒಂದಿಷ್ಟೂ ಸ್ಥಿಮಿತ ಕಳಕ್ಕೋಂಡಿದಿಲ್ಲೆ. ಆಳವಾದ ಕೆಸರಿನ ಹೊಂಡಂದ ಕೊಳಚೆ ನೀರು ಹೆರ ಹರಿದು ಹೋಗಿಯಪ್ಪಾಗ ಅದರೊಳ ಇಳಿದು ಅಡಿಲಿಪ್ಪ ಕೆಸರಿನ ಬಾಚಿ ತೆಗವಲೂ ಎದೆ ಗಟ್ಟಿ ಬೇಕು….ಆ ಕೆಲಸವ ಯಶಸ್ವಿಯಾಗಿ ಮುಗುಶಿ ಹೆರ ಬಂದು ಮತ್ತೆ ತೂಂಬಿನ ಕಟ್ಟಿ ಸಿಹಿನೀರಿನ ತುಂಬುಸುವೆ ಹೇಳ್ತ ಆತ್ಮ ವಿಶ್ವಾಸವೂ ಬೇಕು. ಆ ದೃಢ ವಿಶ್ವಾಸವೇ ಹರಿಣಿಯ ಕೈ ಹಿಡಿದು ನೆಡಶಿ ಹೂಗು ಹಾಸಿದ ದಾರಿಲಿ ತಂದು ಬಿಟ್ಟತ್ತು.

(ಇನ್ನೂ ಇದ್ದು)

 

 

 

8 thoughts on “ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,            (ಭಾಗ-15)

  1. ಸುಖಾಂತಕ್ಕೆ ಇನ್ನು ಒಂದೇ ಮೆಟ್ಟಿಲು ?

  2. ಸಸ್ಪೆನ್ಸು ಇನ್ನುದೆ ಹಾಂಗೇ ಇದ್ದು. ಎಂತದೋ ಸುರಭಿದೇ ಹೊಂದಾಣಿಕೆ ತಪ್ಪಿದ್ದೊ ಹೇಳಿ ಅನುಸುತ್ತು. ಮುಂದು worryಯಲಿ.

    1. ಮುಂದೆ `worry’ ಬೇಡ….ಮುಂದೆ `ಸರಿ’ಯಲಿ… ಆಗದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×