Oppanna.com

ಧರ್ಮ ಕೈ ಬಿಟ್ಟಿದಿಲ್ಲೆ

ಬರದೋರು :   ಗೋಪಾಲಣ್ಣ    on   09/03/2011    15 ಒಪ್ಪಂಗೊ

ಗೋಪಾಲಣ್ಣ

ರಾಮ ಭಟ್ರಿಂಗೆ ಅರುವತ್ತೈದು ವರ್ಷ ಪ್ರಾಯ.
ಅವಕ್ಕೆ ಒಬ್ಬ ಮಾಣಿ; ಇಬ್ಬರು ಕೂಸುಗೊ.
ಕೂಸುಗಳ ಮದುವೆ ಮಾಡಿ ಆತು; ಮಾಣಿಗೂ ಆತು.
ಇನ್ನು ಅವಕ್ಕೆ ನಿಶ್ಚಿಂತೆ ಹೇಳಿ ಊರವೆಲ್ಲ ಹೇಳಿದವು. ಅವೂದೆ ಹಾಂಗೇ ಗ್ರೇಶಿದವು.
ಅವರ ಮಗ ಸರ್ಕಾರೀ ಕಾಲೇಜಿಲಿ ಉಪನ್ಯಾಸಕ. ದಿನಾ ಮನೆಂದಲೇ ಹೋಗಿ ಬತ್ತ.
ಅವಂಗೆ ಮದುವೆ ಆದ ಕೂಸೂ ಒಳ್ಳೆ ಗುಣದ್ದು. ಸ್ನಾತಕೋತ್ತರ ಪದವಿ ಓದಿದ್ದರೂ ಕೆಲಸ ಆಯಿದಿಲ್ಲೆ. ಗೃಹಿಣಿ ಆಗಿ ಇಪ್ಪಲೆ ತಯಾರಾಗಿಕೊಂಡೇ ಅವರ ಮನೆಗೆ ಬಂದೋಳು.

ಇಷ್ಟೆ ಆಗಿದ್ದರೆ ಈ ಕತೆಲಿ ಎಂತ ವಿಶೇಷ?

ರಾಮಭಟ್ರ ಸೊಸೆ, ಸುಕನ್ಯಾ ರಿಜರ್ವ್ ಬೇಂಕಿಂಗೆ ಬರೆದ ಪರೀಕ್ಷೆಯ ಫಲಿತಾಂಶ ಬಂತು.
ಮದುವೆಂದ ಮೊದಲು ಬರದ್ದದು ಅದು; ಬೆಂಗಳೂರಿಲಿ ಸಂದರ್ಶನ ಆತು.
ಬೆಂಗಳೂರಿಂಗೆ ಮಗ-ಸೊಸೆ ಹೋಗಿ ಬಂದವು-ರಾಮ ಭಟ್ರು “ಹೊಸ ಮದುಮಕ್ಕೊ ಅಲ್ಲದೊ? ಹೋಗಿ ಬರಲಿ, ಕೆಲಸ ಸಿಕ್ಕುತ್ತೊ ಇಲ್ಲೆಯೊ?” ಹೇಳಿ ಹೇಳಿದವು ಹೆಂಡತಿಯ ಹತ್ತರೆ.

ಕೆಲಸಕ್ಕೂ ಸೇರುಲೆ ಕಾಗದ ಬಂತು.

ಅಷ್ಟರವರೆಗೆ ಆ ವಿಷಯ ತಲೆಗೆ ತೆಕ್ಕೊಳ್ಳದ್ದ ರಾಮ ಭಟ್ರು ಈಗ ಚಿಂತೆ ಮಾಡೆಕ್ಕಾತು.
ಪ್ರಕಾಶ ಹೇಳಿದ-“ಅಪ್ಪಾ,ಆ ಬೇಂಕು ಇಲ್ಲಿ ಎಲ್ಲಿಯೂ ಇಲ್ಲೆ. ಒಳ್ಳೆ ಕೆಲಸ. ಸುಕನ್ಯಾ ಸೇರಲಿ; ಎರಡು ತಿಂಗಳು ಕಳೆದ ಮೇಲೆ ಎನಗೂ ಅಲ್ಲಿಗೆ  ವರ್ಗ ಮಾಡಿಕೊಳ್ಳುತ್ತೆ”

“ಆತು-“ಹೇಳಿದವು ರಾಮಭಟ್ರು.
ಹೀಂಗೆ ಮಗ,ಸೊಸೆ ಬೆಂಗಳೂರಿಂಗೆ ಹೋದವು.
ರಾಮ ಭಟ್ರು ಅವರ ತೋಟವ ನೋಡಿಕೊಂಡು ಊರಿಲೇ ಇದ್ದಿದ್ದವು.

* * * * *

ಕಾಲ ಇದ್ದ ಹಾಂಗೆ ಇದ್ದರೆ  ಅದರ ಕಾಲ ಹೇಳುಲೆ ಎಡಿಗೊ?
ಮೂರು-ನಾಕು ವರ್ಷ ಕಳುದತ್ತು – ರಾಮ ಭಟ್ರಿಂಗೆ ಮೊದಲಾಣ ಹಾಂಗೆ ಎಡಿತ್ತಿಲ್ಲೆ.
ಕೆಲಸಕ್ಕೆ ಆಳುಗಳೂ ಸರೀ ಸಿಕ್ಕುತ್ತವಿಲ್ಲೆ. ಅಡಕ್ಕೆಯ ಕ್ರಯವೂ ಮೇಲೆ ಬಪ್ಪ ಲಕ್ಷಣ ಇಲ್ಲೆ.
ಅವರ ಅರ್ಧಾಂಗಿ ಶಾರದಮ್ಮಂಗೂ ಸೊಂಟಬೇನೆ ಹೆಚ್ಚಾತು. ಮಾಡುದೆಂತರ? ಕೂಸುಗೊಕ್ಕೆ ಬಂದು ಇವರ ಚಾಕರಿ ಮಾಡಲೆ ಎಡಿಗೊ? ಅವಕ್ಕೂ ಅವರ ಸಂಸಾರ ಇದ್ದು.

ಮಗಂಗೆ ಒಂದು ಮಗುವೂ ಆಗಿತ್ತು. ಅವ ಊರಿಂಗೆ ಬಪ್ಪ ಹಾಂಗೆ ಇಲ್ಲೆ. ಇಬ್ಬರಿಂಗೂ ಕೆಲಸಕ್ಕೆ ಹೋಪಲಿದ್ದನ್ನೆ?
ಪ್ರಕಾಶ ಫೋನು ಮಾಡಿದ-“ಅಪ್ಪಾ,ಇನ್ನು ನಿಂಗೊಗೆ ತೋಟ ನೋಡುಲೆ ಎಡಿಯ.ಅದರ ಆರಾರೂ ತೆಕ್ಕೊಳ್ತವೊ ಕೇಳಿ.ಅದರ ಮಾರುವೊ.ಬೆಂಗಳೂರಿಂಗೆ ಬನ್ನಿ.

ಶಾರದಮ್ಮಂಗೂ ಅದೇ ಸರಿ ಹೇಳಿ ಕಂಡತ್ತು.ಬೆಂಗಳೂರಿಂಗೆ ಹೋಗಿ,ಪುಳ್ಳಿಯ ಆಡಿಸಿಕೊಂಡು ಇಪ್ಪಲಕ್ಕು ಹೇಳಿ ಅವಕ್ಕೆ ಕುಶಿ.
ಸೊಸೆಗೂ ಕೆಲಸಕ್ಕೆ ಹೋಪಲೆ ಒಳ್ಳೆದಾತು-ಮನೆಲಿ ಜನ ಇದ್ದ ಹಾಂಗೆ ಅಕ್ಕು.ಆರಾರು ನೋಡಿಕೊಂಬದರಿಂದ ಅಜ್ಜಿ ನೋಡುದು ಒಳ್ಳೆದಲ್ಲದೊ-ಹೇಳಿ ಅವು ಹೇಳಿದವು.
ರಾಮ ಭಟ್ರು ಆ ದಿನ ಇರುಳು ಒರಗದ್ದೆ ಹೊಡಚ್ಚಿಕೊಂಡೆ ಕಳದವು.

* * * * * *

ಮರುದಿನವೇ ರಾಮ ಭಟ್ರು ನೆರೆಕರೆಲಿ ಈ ವಿಷಯ ಹೇಳಿದವು.
“ರಾಮಣ್ಣಾ….ನಿನ್ನ ತೋಟ ಒಳ್ಳೆದಿದ್ದು.ಕರೆಕಾಡೂ ಇದ್ದು.ಮೂವತ್ತು ಲಕ್ಷಕ್ಕೆ ಕಮ್ಮಿಗೆ ಆರಿಂಗೂ ಕೊಡೆಡ-“ಅವರ ಹಿತೈಷಿ ಕಿಟ್ಟಪ್ಪ ಮಾವ ಹೇಳಿದವು.
“ಅಪ್ಪು ಭಾವ,ಆರಾರೂ ಬ್ಯಾರಿಗೊ ತೆಕ್ಕೊಳ್ಳುಗೊ ಏನೊ?ನಮ್ಮ ಹತ್ತರೆ ಇಪ್ಪ  ಆರ ಹತ್ತರೆ ಅಷ್ಟು ಪೈಸೆ ಇದ್ದು?”
“ಬ್ಯಾರಿಗೊಕ್ಕೆ ಆದರೆ ಅವಕ್ಕೆ ಕೊಡು.ನಾವು ಬಂಙ ಬಂದು ಮಾಡಿದ್ದರ ಕಮ್ಮಿಗೆ ಕೊಡುದು ಸರಿಯೊ?”
“ಆತು,ಪೇಟೆಲಿ ಆರ ಹತ್ತರಾರೂ ಹೇಳಿ ನೋಡ್ತೆ.”
ಪೇಟೆಲಿ ಅಡಕ್ಕೆ ತೆಕ್ಕೊಂಬ ವ್ಯಾಪಾರಿಗಳ ಹತ್ತರೆ ಹೇಳಿದ ರಾಮಭಟ್ರು,ವಕೀಲರ ಕೆಮಿಗೂ ದಸ್ತಾವೇಜು ಬರವ ಪೈಗಳ ಕೆಮಿಗೂ ಈ ಸಂಗತಿ ಹಾಕಿದವು.
ಅವಕ್ಕಾದರೆ ತುಂಬಾ ಜನರ ಗೊಂತಿದ್ದು.ಆರಾದರೂ ಸಿಕ್ಕಿರೆ ಹೇಳದ್ದಿರವು.

ಅಂತೂ ರಾಮಭಟ್ರು ಹೋಪಲೆ ಮನಸ್ಸಿಲ್ಲದ್ದರೂ,ಒಂದಾರಿ ನಿರ್ಧಾರಕ್ಕೆ ಬಂದ ಮೇಲೆ ಜಾಗೆಗೆ ಹೆಚ್ಚು ಕ್ರಯ ಆರು ಕೊಡುಗು ಹೇಳಿ ನೋಡುಲೆ ಸುರು ಮಾಡಿದವು.ಎಂತಾ ಒಂದು ಬದಲಾವಣೆ!
ನಾಕು ದಿನ ಕಳೆದ ಮೇಲೆ ಜಾಗೆಯ ದಳ್ಳಾಳಿ ಒಬ್ಬ, ನಮ್ಮ ಹವಿಕನ ಕರಕ್ಕೊಂಡು ಬಂದ.
ಬಂದ ಜನ ಇಪ್ಪತ್ತೈದಕ್ಕೆ ಹೆಚ್ಚು ಕೊಡಲೆ ಸಾಧ್ಯ ಇಲ್ಲೆ ಹೇಳಿದ. ಮತ್ತೆ ಎಂಟು ಹತ್ತು ಜನ ಬಂದು ಇಪ್ಪತ್ತಮೂರು,ಇಪ್ಪತ್ತಾರು -ಹೀಂಗೆಲ್ಲ ಹೇಳಿದವು.
ರಾಮ ಭಟ್ರಿಂಗೆ ಅಷ್ಟಪ್ಪಾಗಳೆ ಬೊಡುದತ್ತು. ಪ್ರಾಯ ಆದ ಮೇಲೆ ಅವಕ್ಕೆ ರಕ್ತ ಒತ್ತಡ, ಈಗ ಊರು ಬಿಡೆಕ್ಕಾದ ಪ್ರಸಂಗ ಎಲ್ಲಾ ಸೇರಿ ತಲೆ ಬೆಶಿ ಆತು.

ಮಗನ ಹತ್ತರೆ ಹೇಳಿದವು-“ಆನು ಜಾಗೆಯ ಮೂರು ಕಾಸಿಂಗೆ ಇಡುಕ್ಕಿ ಬಪ್ಪದು ಹೇಂಗೆ?ಆನು ಬಂಙ ಬಂದು ಮಾಡಿದ ತೋಟ ಮಗಾ ಇದು.ಎಂತ ಮಾಡೆಕ್ಕು ಆನು?”

“ನಿಂಗೊಗೆ ಇಪ್ಪತ್ತಾರು ಸಿಕ್ಕಿರೆಂತ? ಮೂವತ್ತು ಸಿಕ್ಕಿರೆಂತ?ಪೈಸೆ ಹೆಚ್ಚು ಸಿಕ್ಕುಗು ಹೇಳಿ ಎಷ್ಟು ದಿನ ದೂಡುತ್ತೀ. ಒಂದು ರಜಾ ಕಮ್ಮಿ ಆದರೆ ಸಾರ ಇಲ್ಲೆ. ಆನು ಇಲ್ಲೆಯೊ?ನಿಂಗಳ ಪೈಸೆಯ ಆಶೆ ಎನಗಿಲ್ಲೆ. ನಿಂಗೊ ಇನ್ನಾದರೂ ಆರಾಮ ಇರಿ” ಪ್ರಕಾಶ ಹೇಳಿದ.
“ಅದೆಲ್ಲಾ ಆಗ…..ನೋಡುವೊ…”ಹೇಳಿ ಫೋನು ಮಡುಗಿದವು ರಾಮ ಭಟ್ರು.

“ಮಗಂಗೆ ಆಶೆ ಇಲ್ಲೆ. ಎನಗಾದರೆ ಹಾಂಗೊ? ಆನೇ ಗೈದು ಮಾಡಿದ್ದಿದು…..” ಅವರ ಮನಸ್ಸು ಮದಲಾಣದ್ದರ ನೆನೆಸಿತ್ತು.

* * * * * *

ರಾಮ ಭಟ್ರ ಅಪ್ಪ, ತಿಮ್ಮಪ್ಪ ಭಟ್ರು ಏನೂ ಸ್ಥಿತಿಗತಿ ಇಲ್ಲದ್ದ ಬ್ರಾಹ್ಮಣ.
ಪುತ್ತೂರಿನ ಹತ್ತರೆಯಾಣ ಅವರ ಊರಿನ ಬಿಟ್ಟು ,ಕೊಡೆಯಾಲದ ಹತ್ತರೆ ಗಂಜೀಮಠಲ್ಲಿ ಕೊಂಕಣಿಗರ ಜಾಗೆಯ ನೋಡುವ ರೈಟರ್ ಆಗಿ ನಿಂದವು.
ಅವು ಸುಮಾರು ಮೂವತ್ತು ವರ್ಷ ಅಲ್ಲಿ ಕೆಲಸ ಮಾಡಿಕ್ಕು.ರಾಮ ಭಟ್ರು,ಅವರ ನಾಕು ಜೆನ ತಂಗೆಕ್ಕೊ ಹುಟ್ಟಿದ್ದೇ ಅಲ್ಲಿ.

ಅರುವತ್ತರ ದಶಕ – ಅಡಕ್ಕೆಗೆ ತುಂಬಾ ಕ್ರಯ.
ರಾಮಭಟ್ರಿಂಗೆ ಊರಿಂಗೆ ಹೋಯೆಕ್ಕು,ತೋಟ ಮಾಡೆಕ್ಕು ಹೇಳಿ ಆಸೆ.
ಅವರ ಅಪ್ಪನ ಒಟ್ಟಿಂಗೆ ಗಂಜೀಮಠಲ್ಲಿದ್ದರೂ, ಅವಕ್ಕೆ ಅದೇ ಕನಸು. ಕೈಲಿ ಪೈಸೆ ಇಲ್ಲೆ.
ತಂಗೆಕ್ಕೊಗೆ ಏನಾದರೂ ದಾರಿ ಆಯೆಕ್ಕಷ್ಟೆ. ಹೇಂಗೆ ಸುಧಾರುಸುದೊ-ಒಂದೂ ಅರಡಿಯ.
“ನೋಡುವೊ ಮಗಾ, ಆನು ಆರಿಂಗೂ ಅನ್ಯಾಯ ಮಾಡಿದ್ದಿಲ್ಲೆ. ನಿನ್ನ ಕಾಲಕ್ಕೆ ನಿನಗೆ ದೇವರು ಒಳ್ಳೆದೇ ಕೊಡುಗು. ಗೇಣಿಗೆ ಎಲ್ಲಿಯಾದರೂ ತೋಟ ಸಿಕ್ಕುಗು…” ತಿಮ್ಮಪ್ಪ ಭಟ್ರ ಸಮಾಧಾನದ ಮಾತು.

ತನ್ನಷ್ಟಕ್ಕೆ ಎಲ್ಲಿ ಸಿಕ್ಕುತ್ತು?ಅವು ಆರ ಹತ್ತರೂ ಬಾಯಿ ಬಿಟ್ಟು ಕೇಳವು!
ಅಷ್ಟಪ್ಪಗ ಒಂದು ದಿನ ಅವರ ಯಜಮಾನ ಶೆಣೈ ಬಂದ.ದೊಡ್ಡ ಶ್ರೀಮಂತ ವ್ಯಾಪಾರಸ್ಥ.
ಭಟ್ರೆ,ಈ ಜಾಗ ಮಾರಾಟ ಮಾಡ್ತಿದ್ದೇನೆ, ನಿಮ್ಮದೇನಾದರೂ ಹೇಳಲಿಕ್ಕೆ ಉಂಟೊ?

ತಿಮ್ಮಪ್ಪ ಭಟ್ರು ಎಂತದೂ ಹೇಳಿದ್ದವಿಲ್ಲೆ. ಸುಮ್ಮನೆ ನಿಂದವು.

ಆದರೆ ಶೆಣೈ ಒಳ್ಳೆ ಜೆನ. ಅವರ ಸಮಾಧಾನ ಮಾಡಿದ..
ಇಷ್ಟು ವರ್ಷ ನಿಂಗೊ ಇಲ್ಲಿ ಕೆಲಸ ಮಾಡಿದ್ದಿ, ಒಂದು ಮುಡಿ ಭತ್ತ ಕೂಡಾ ಆಚೆ-ಈಚೆ ಆಯಿದಿಲ್ಲೆ ಹೇಳಿ ಹೊಗಳಿದ.
ಅದು ಆ ಕಾಲಲ್ಲೇ ಎರಡು ಲಕ್ಷದ ದೊಡ್ದ ಆಸ್ತಿ. ಅಷ್ಟು ವರ್ಷ ಕೆಲಸ ಮಾಡಿದ ತಿಮ್ಮಪ್ಪ ಭಟ್ರಿಂಗೆ ಹದಿನೈದು ಸಾವಿರ ಕೊಡುತ್ತೆ ಹೇಳಿ ಹೇಳಿದ.

ಮತ್ತೆ ಎರಡು ತಿಂಗಳು ಅವು ಅಲ್ಲಿತ್ತಿದ್ದವು.
ಮತ್ತೆ ಒಂದೆ ವಾರ ಇಪ್ಪದು ಜಾಗೆಯ ಕ್ರಯಚೀಟು ಮಾಡಿಸಿ, ಕೈ ಬದಲಲೆ!

ಅಷ್ಟಪ್ಪಾಗ ಒಂದು ಪುಢಾರಿಯ ಸವಾರಿ ಬಂತು.
“ಭಟ್ರೆ,ನಿಮಗೆ ಗೊತ್ತಿಲ್ಲವೊ ವಿಷಯ?”
“ಏನು?”
” ಸರ್ಕಾರದವರು ಕಾನೂನು ಮಾಡಿದ್ದಾರೆ-ಉಳುವವನೇ ಹೊಲದೊಡೆಯ ಅಂತ! ಇದೆಲ್ಲಾ ಇಂದಿರಮ್ಮನ ಕೃಪೆ!
ನೀವು ಸುಮ್ಮನೆ ನನ್ನ ಒಟ್ಟಿಗೆ ಬನ್ನಿ. ನಮ್ಮ ಪಾರ್ಟಿಯವರು ಒಕ್ಕಲುಗಳಿಂದ ಎಲ್ಲಾ ಡಿಕ್ಲರೇಶನ್ ಕೊಡಿಸ್ತಿದ್ದಾರೆ. ಈ ಜಾಗ ಎಲ್ಲಾ ನಿಮ್ಮದೇ ಆಗ್ತದೆ…”

ರಾಮಭಟ್ರಿಂಗೆ ಈ ಮಾತು ಕೇಳಿ ತುಂಬಾ ಆಸೆ ಆತು.
ಅಪ್ಪನ ಮೋರೆ ನೋಡಿದವು.
ಅವು ಅಪ್ಪನ ಎದುರು ಹೋವುತ್ತ ಮಗ ಅಲ್ಲ!

ಗೇಣಿ ಚೀಟು, ಇಳಿದಾರುವಾರ -ಎಂತದೂ ಬೇಡ, ಆನು ಈ ಜಾಗೆಲಿ ಇದ್ದೆ ಹೇಳಿ ಘೋಷಿಸಿರೆ ಆತು. ಜಾಗೆ ನವಗೇ!
ಧನಿಗೊಕ್ಕೆ ಪರಿಹಾರ ಹೇಳಿ ರಜಾ ಪೈಸೆ ಮಂಜೂರಾವುತ್ತು. ಎಷ್ಟೊ ಜನ ಹಾಂಗೆ ಮಾಡುತ್ತಾ ಇದ್ದದು ಅವಕ್ಕೆ ಗೊಂತಿಲ್ಲದ್ದೆ ಇಲ್ಲೆ.

ತಿಮ್ಮಪ್ಪ ಭಟ್ರು ಮೆಲ್ಲಂಗೆ ಹೇಳಿದವು-“ನಾನು ಇಲ್ಲಿ ಒಕ್ಕಲಲ್ಲ, ರೈಟರ್ ಮಾತ್ರ… ನನಗೆ ಧನಿ ಸಂಬಳ ಕೊಟ್ಟಿದ್ದಾರೆ….”
“ಭಟ್ರೆ, ಅದೆಲ್ಲ ಯಾರು ಕೇಳಿದ್ದಾರೆ ಈಗ? ನೀವು ಇಷ್ಟು ವರ್ಷ ಇಲ್ಲಿ ಇದ್ದದ್ದು ಹೌದಲ್ಲ? ಒಕ್ಕಲು ಎನ್ನುವುದಕ್ಕೆ ಯಾವ ರಿಕಾರ್ಡೂ ಬೇಡ. ನೀವು ಸುಮ್ಮನೆ ಡಿಕ್ಲರೇಶನ್ ಕೊಟ್ಟುಬಿಡಿ, ಮತ್ತೆಲ್ಲ ನಾವು ನೊಡಿಕೊಳ್ತೇವೆ.”

ತಿಮ್ಮಪ್ಪ ಭಟ್ರು ಒಪ್ಪಿದ್ದವಿಲ್ಲೆ. ಆನು ನಾಳೆ ಬತ್ತೆ ಹೇಳಿ ಅದರ ಕಳಿಸಿದವು.

ಮಗನ ಮೋರೆಯ ಓದಿದವರ ಹಾಂಗೆ-“ನೋಡು ಮಗಾ, ನವಗೆ ಮತ್ತಿದ್ದವರ ವಸ್ತು ಬೇಡ. ಇವು ಹೇಳುದರಲ್ಲಿ ಧರ್ಮ ಇಲ್ಲೆ. ನಾವು ಗೈದು ತಿಂಬವು; ನವಗೆ ಎಲ್ಲಿ ಆದರೆ ಎಂತ? ಹುಟ್ಟಿಸಿದ ದೇವರು ನಮ್ಮ ಕೈ ಬಿಡ” ಹೇಳಿದವು.

ರಾಮ ಭಟ್ರು ಮೆಲ್ಲಂಗೆ ಅಲ್ಲಿಂದ ಜಾರಿದವು.
ಈ ಅಪ್ಪ ಧರ್ಮ ,ಧರ್ಮ ಹೇಳಿ ಎನಗೆ ನೆಲೆ ಇಲ್ಲದ್ದ ಹಾಂಗೆ ಮಾಡಿದವು ಹೇಳಿ ಅಬ್ಬೆಯ ಹತ್ತರೆ ಬೈದವು.
ಅವರ ಅಬ್ಬೆ”ನಮಗೆ ಕೊಡೆಕ್ಕಾದರೆ ದೇವರ ಭಂಡಾರಲ್ಲಿ ಎಂತ ಕೊರತ್ತೆ ಇಲ್ಲೆ ಮಗಾ.. ನಮಗೆ ಬೇರೆ ಜಾಗೆ ಮಾಡುಲಕ್ಕು.. ನಮಗೆ ಕೋರ್ಟು,ನಂಬ್ರ ಎಲ್ಲ ಎಂತಗೆ?” ಹೇಳಿ ಅವರ ಸಮಾಧಾನ ಮಾಡಿದವು.

ಸರಿ, ಶೆಣೈ ಕೊಟ್ಟ ಹದಿನೈದು ಸಾವಿರ ತೆಕ್ಕೊಂಡು ತಿಮ್ಮಪ್ಪ ಭಟ್ರು ಅಲ್ಲಿಂದ ಹೆರಟವು.
ಅವರ ಊರಿಂಗೇ ಬಂದು ಎರಡು ಎಕರೆ ಬೆಟ್ಟು ಗದ್ದೆ ಮಾಡಿದವು. ಮಗನ ಹೆಸರಿಲೆ ಮಾಡಿದವು, ಅವಂಗೆ ಸಮಾಧಾನ ಆಗಲಿ ಹೇಳಿ.

ರಾಮ ಭಟ್ರು ಅಡಕ್ಕೆ ಸೆಸಿ ಹಾಕಿ ಬೆಳೆಸಿದವು.
ಮಕ್ಕಳ ಸಾಂಕುವಷ್ಟು ಪ್ರೀತಿಂದ!
ಜೀವನ ನಡೆಶಲೆ ಬೇಕಾಗಿ ಅಡಿಗೆಗೆ ಹೋಗಿ ಸುಧಾರಿಸಿದವು.
ಅವರ ಅಪ್ಪ, ಅಬ್ಬೆ, ತಂಗೆಕ್ಕೊ ಎಲ್ಲಾ ಕೈ ಜೋಡಿಸಿದವು – ತೋಟದ ಕೆಲಸಲ್ಲಿ!

ಬಾಳೆ ಬೆಳೆಶಿದವು; ದನ ಸಾಂಕಿದವು.
ಹೀಂಗೆ ದಿನ ಹೋದ್ದೇ ಗೊಂತಾಯಿದಿಲ್ಲೆ. ಮತ್ತೆ ಬೆಳೆ ಬಪ್ಪಲೆ ಸುರು ಮಾಡಿದ ಮೇಲೆ ಎಲ್ಲಾ ಬೇಕಾದ ಹಾಂಗೆ ಆತು.
ತಂಗೆಕ್ಕೊಗೂ ಮನೆ ಬಂತು.
ಇವಕ್ಕೂ ಸಂಸಾರ ಆತು, ಅಬ್ಬೆ ಅಪ್ಪನ ಕಾಲ ಕಳಾತು.
ಅವು ನಂಬಿದ ದೇವರು ಅವರ ಕೈ ಬಿಟ್ಟಿದ ಇಲ್ಲೆ.

* * * * * *

ಮೊದಲಾಣದ್ದರ ಎಲ್ಲಾ ನೆನೆಸಿ ರಾಮಭಟ್ರಿಂಗೆ ಅಂದ್ರಾಣ ತನ್ನ ವಿಚಾರಕ್ಕೆ ನಾಚಿಕೆ ಆತು.
ಅಷ್ಟು ದೊಡ್ಡ ಆಸ್ತಿ ತನ್ನದೇ ಆವುತ್ತರೂ ಬೇಡ ಹೇಳಿದ ಧರ್ಮಿಷ್ಠ ಎನ್ನ ಅಪ್ಪ!
ಈಗ ಆನೊ? ಕ್ರಯ ಹೆಚ್ಚು ಸಿಕ್ಕೆಕ್ಕು ಹೇಳಿ ಬೇರೆ ಧರ್ಮದವರಿಂಗಾದರೂ ಕೊಡುಲೆ ಹೆರಟಿದೆ!

ಅವಕ್ಕೆ ಅವರ ದೊಡ್ಡ ತಂಗೆಯ ಮಗನ ನೆಂಪಾತು “ಪಾಪ,ಒಳ್ಳೆ ಮಾಣಿ .ವಿದ್ಯೆ ಹತ್ತಿದ್ದಿಲ್ಲೆ, ಮನೆಲಿ ದೊಡ್ದ ಅನುಕೂಲವೂ ಇಲ್ಲೆ. ಅಡಿಗೆಗೆ ಹೋವುತ್ತ. ಅವಂಗೆ ಇಲ್ಲಿ ಬಂದು ಕೂಪಲೆ ಹೇಳಿದರೆ ಎಂತ?
ಜಾಗೆಯನ್ನೂ ನೋಡುಗು. ಊರಿಂಗೆ ಬಂದರೆ ಮನೆ ಹೇಳಿ  ನವಗೆ ನಾಲ್ಕು ದಿನ ಕೂಪಲೂ ಅಕ್ಕು. ಅಳಿಯಂಗೂ ಒಂದು ಉಪಕಾರ ಅಕ್ಕು. ತಂಗೆಗೂ ಕುಶಿ ಅಕ್ಕು. ಎಷ್ಟಾದರೂ ಅದೂ ಕೂಡ ಗೈದ್ದು, ಈ ಜಾಗೆಲಿ.
ಸುಮ್ಮನೆ ಪೈಸೆ ಸಿಕ್ಕುತ್ತು ಹೇಳಿ ಆರಾರಿಂಗೂ ಕೊಡುತ್ತು ಎಂತಗೆ? ಹಾಂಗೆ ಹೇಳಿ ಅಳಿಯಂಗೆ ರಿಕಾರ್ಡು ಮಾಡಿ ಕೊಡೆಕ್ಕು ಹೇಳಿ ಇಲ್ಲೆ.
ಎನ್ನ ಕಾಲದ ಮತ್ತೆ ಮಗ ಎಂತಾದರೂ ಮಾಡಲಿ…ಅಳಿಯಂಗೇ ಬಿಟ್ಟರೂ ಸಾರ ಇಲ್ಲೆ!”

– ಹೀಂಗೆ ನಿರ್ಧಾರ ಮಾಡಿದ ರಾಮಭಟ್ರು ತಂಗೆಯ ಮಗನ ಮೊಬೈಲಿಂಗೆ ಕರೆ ಮಾಡುಲೆ ಎದ್ದವು…

*~*~*~*

15 thoughts on “ಧರ್ಮ ಕೈ ಬಿಟ್ಟಿದಿಲ್ಲೆ

  1. ಕಥೆ ಓದಿಗೊಂಡು ಹೋದ ಹಾಂಗೆ ಏಕೋ ಕಣ್ಣಿಲಿ ಎರಡು ಹನಿ ನೀರು ನಿಂದತ್ತು.. ಇಂದು ರಾಮ ಭಟ್ರ ಪರಿಸ್ಥಿಗೆ ಬಂದೋರು ತುಂಬಾ ಜೆನ ಇದ್ದವು.. ಕಾರಣ ಬೇರೆ ಆದರೂ ಪರಿಸ್ಥಿತಿ ಅದೇ ನಮೂನೆ ಇಪ್ಪೋರೂ ಇದ್ದವು.. ಆದರೆ ಎಲ್ಲರೂ ರಾಮ ಭಟ್ರ ಹಾಂಗೆ ಯೋಚನೆ ಮಾಡ್ತವಾ ಅಲ್ಲ ಮಾಪ್ಳೆ ಆಗಲ್ಲಿ ಪುರ್ಬು ಆಗಲ್ಲಿ ಎನ್ನ ಜಾಗೆ ಒಳ್ಳೆ ರೇಟಿಂಗೆ ಹೋದರೆ ಸಾಕು ಹೇಳಿ ಲೆಕ್ಕಾಚಾರ ಹಾಕುತ್ತವೋ, ಗೊಂತಿಲ್ಲೆ.. ಹೃದಯಸ್ಪರ್ಶಿ ಕಥೆ ಕೊಟ್ಟದಕ್ಕೆ ಗೋಪಾಲಣ್ಣಂಗೆ ಧನ್ಯವಾದಂಗೋ!!

  2. ಅಂಬಗ ರಾಮ ಭಟ್ರು ಎಂತ ಮಾಡಿದ್ದವು? ಬೆಂಗಳೂರಿಂಗೆ ಬಂದಿದ್ರೆ ಒಂದಾರಿ ಅವರ ಕಾಂಬಲಾವುತ್ತಿತ್ತು.

  3. ಗೋಪಾಲ,
    ತುಂಬಾ ಸೊಗಸಾಗಿ ಬರದ್ದೆ. ಸತ್ಯ, ನಿಷ್ಠೆ, ನ್ಯಾಯ ಧರ್ಮಲ್ಲಿ ನೆಡದರೆ ದೇವರು ಕೈ ಬಿಡ ಹೇಳಿ ತೋರಿಸಿಕೊಟ್ಟಿದೆ.
    ಅಕೇರಿಗೆ, ಜಾಗೆಯ ಅರಾರಿಂಗೋ ಕೊಡ್ತ ಬದಲು ಸೋದರ ಅಳಿಯಂಗೆ ನೋಡ್ಲೆ ಕೊಟ್ಟದು ಹೇಳುವದು ಒಳ್ಳೆ ತ್ಯಾಗದ ಸಂಕೇತ ಆಗಿ ಬಂತು

  4. ಗೋಪಾಲಣ್ಣ, ತುಂಬಾ ಮನಮುಟ್ಟುತ್ತ ಹಾಂಗೆ ಕತೆ ಬರದ್ದಿ. ಈಗ ಎಲ್ಲಾ ಕಡೆಲೂ ಅಪ್ಪ ವಿಚಾರವೇ!!
    ಅಂದು ತಿಮ್ಮಪ್ಪ ಭಟ್ರು ಒಂದು ಕಾಲಲ್ಲಿ ತೋರ್ಸಿದ ಧರ್ಮದ ದಾರಿಯ ರಾಮ ಭಟ್ರು ಮರದ್ದವಿಲ್ಲೆನ್ನೆ!! ಆ ವಿಚಾರಂದ ಆಗಿ ಒಂದು ಭೂಮಿ ಇನ್ನೊಬ್ಬನ ಪಾಲಪ್ಪದು ತಪ್ಪಿತ್ತು. ಆದರೆ ರಾಮಭಟ್ರಿಂಗೆ ಜಾಗೆಯ ಕೊಡ್ಲೆ ಅಳಿಯ° ಇತ್ತಿದ್ದ° ಅವಂಗೆ ಕೊಟ್ಟವು. ಬೇರೆಯವ್ವು ಇಷ್ಟು ಪುಣ್ಯವಂತರು ಆಗಿಪ್ಪಲೆ ಸಾಧ್ಯ ಇಲ್ಲೆ ಅಲ್ಲದಾ? ಅವಕ್ಕೆ ಜಾಗೆಯ ಕೊಡ್ಲೆ ಪೈಕಿಯವ್ವು ಆರೂ ಸಿಕ್ಕದ್ದರೆ?

    ಗೋಪಾಲಣ್ಣ, {ಕಾಲ ಇದ್ದ ಹಾಂಗೆ ಇದ್ದರೆ ಅದರ ಕಾಲ ಹೇಳುಲೆ ಎಡಿಗೊ?} ಇದು ತುಂಬಾ ಕೊಶೀ ಆತು. ಈಗ ನಡೆತ್ತಾ ಇಪ್ಪ ಕಾಲವೂ ಬದಲುಗು ಅಲ್ಲದಾ?

    ತುಂಬಾ ಚೆಂದದ ಕತೆ ಕೊಟ್ಟಿದಿ ಗೋಪಾಲಣ್ಣ. ಧನ್ಯವಾದಂಗೋ.

  5. ಕಾನೂನು ಭಾಷೆಲಿ ವಿವರಿಸಲೆ ಸಾಧ್ಯ ಹೇಳುವ ಧೈರ್ಯ ಎನಗಿಲ್ಲೆ.
    ಅದು ಹೀಂಗೆ-೧೯೭೦ ಕ್ಕೂ ಮೊದಲು ನಮ್ಮ ಊರಿಲಿ ಒಂದು ಪದ್ಧತಿ ಚಾಲ್ತಿ ಇತ್ತು-ಒಬ್ಬ ಒಂದು ನಿರ್ದಿಷ್ಟ ಸಮಯಕ್ಕೆ[ಹತ್ತೋ,ಇಪ್ಪತ್ತೊವರ್ಷಕ್ಕೆ]ಒಂದು ನಿರ್ದಿಷ್ಟ ಮೊತ್ತವ ತೆಕ್ಕೊಂಡು ತನ್ನ ಕೃಷಿಭೂಮಿಯ ಇನ್ನೊಬ್ಬಂಗೆ ಕೊಡುದು.ಹೀಂಗೆ ಜಾಗೆ ತೆಕ್ಕೊಂಡವ ಅದರ ಕೃಷಿ ಮಾಡಿ ಅನುಭವಿಸಲಕ್ಕು.ಆ ಒಪ್ಪಿತ ಸಮಯದ ಮೇಲೆ ಜಾಗೆಯ ನಿಜವಾದ ಮಾಲಕ ಒಂದು ನಿರ್ದಿಷ್ಟ ಮೊತ್ತವ ವಾಪಸ್ಸು ಕೊಟ್ಟು ಜಾಗೆಯ ಮತ್ತೆ ತೆಕ್ಕೊಂಬಲಕ್ಕು.ಈ ಮೊತ್ತಕ್ಕೆ ಕಾಣ ಹೇಳಿ ಹೆಸರು.ಜಾಗೆಯ ಕೃಷಿಯ ಅಷ್ಟು ವರ್ಷ ಮಾಡಿದವ ಅಲ್ಲಿ ಏನಾದರೂ ಅಭಿವೃದ್ಧಿಯ ಕೆಲಸ ಮಾಡಿದ್ದರೆ,ಅವಂಗೆ ಹೆಚ್ಚು ಪೈಸೆ ಕೊಡೆಕ್ಕು-ಅದಕ್ಕೆ ಕೃತ ಹೇಳಿ ಹೆಸರು.ಇದೆಲ್ಲಾ ಮೊದಲೇ ಒಪ್ಪಂದ ಆಗಿರ್ತು.
    ಇದರ ಆನು ಸೂಚಿಸಿದ್ದು.
    ನಮ್ಮಲ್ಲಿ ವಕೀಲರು ಇದ್ದರೆ ಅದರ ಬಗ್ಗೆ ಹೆಚ್ಚು ವಿವರ ಕೊಡುಗು.ಈ ರೀತಿಯ ಲೀಸ್ ಮತ್ತೆ ಗೇಣಿಯ ಹಲವಾರು ಪ್ರಕಾರಂಗೊಮದ್ರಾಸು ಸರಕಾರಲ್ಲಿ ಇತ್ತಿದ್ದು.ಭೂ ಸುಧಾರಣೆಯ ಸಮಯಲ್ಲಿ ಅದರ ಬಗ್ಗೆ ಕಾಸರಗೋಡಿನ ಒಬ್ಬ ವಕೀಲರು ಸಣ್ಣ ಪುಸ್ತಕ ಬರದ್ದವು.ಆನು ಕೆಲವು ವರ್ಷ ಮೊದಲು ಓದಿದ ಕಾರಣ ಎಲ್ಲಾ ವಿಷಯ ನೆಂಪಿಲ್ಲೆ-ಕ್ಷಮಿಸಿ.

  6. ಕಥೆ ಭಾರೀ ಲಾಯಿಕ ಆಯಿದು ಗೋಪಾಲಣ್ಣ..
    ಸಾತ್ವಿಕ ಸ್ವಭಾವದ ರಾಮ ಭಟ್ರಿಂಗೆ ಎದುರಾದ ಪರಿಸ್ಥಿತಿಯ ಒತ್ತಡವ ಮೀರಿ ನಿಂಬಲೆ ಅಪ್ಪನ ಆದರ್ಶ, ಮಾರ್ಗದರ್ಶನ ಚೈತನ್ಯ ಕೊಟ್ಟತ್ತು.
    ತಾನು ಗೈದು ಅಭಿವೃದ್ಧಿಪಡಿಸಿದ ಭೂಮಿ ಅನ್ಯರಿಂಗೆ ಹೋಪದೂ ತಪ್ಪುತ್ತು; ಅಳಿಯಂಗೆ ಒಂದು ಆಸರೆಯೂ ಆವ್ತು ಹೇಳುವ ರೀತಿಲಿ ರಾಮ ಭಟ್ರು ತೀರ್ಮಾನ ತೆಕ್ಕೊಂಡದು ಅತ್ಯಂತ ಸೂಕ್ತ.

    ಸಮರ್ಥ, ಸಮೃದ್ಧ ಬರಹ. ಅಭಿನಂದನೆಗೊ.

    ‘ಇಳಿದಾರುವಾರ’ ಹೇಳಿರೆ ಎಂತರ ಹೇಳಿ ಎನಗೆ ಸ್ಪಷ್ಟ ಕಲ್ಪನೆ ಬಯಿಂದಿಲ್ಲೆ. ರಜ ವಿವರುಸಲೆ ಎಡಿಗೊ?

  7. ಹೀಂಗಿಪ್ಪ ಜೆನ ಈಗ ಕಥೆಗಳಲ್ಲೆ ಸಿಕ್ಕುಗಶ್ತೆ!

    1. ಇಂತವು ಖಂಡಿತಾ ಇದ್ದವು;ನಮ್ಮ ಸಮಾಜ ಅಷ್ಟು ಹಾಳಾಯಿದಿಲ್ಲೆ.-ಆನು ಇಂತಾ ಸತ್ಯ ಕತೆಗಳ ಕೇಳಿದ್ದೆ.

  8. ಗೋಪಾಲಣ್ಣ.
    ಕಥೆಯೋ ಅಲ್ಲ ಇ೦ದು ನಮ್ಮ ಸಮಾಜಲ್ಲಿ ನೆಡೆತ್ತಾ ಇಪ್ಪ ಒ೦ದು ನಿಜಘಟನೆಯೋ ಹೇಳಿ ಸ೦ಶಯ ಆತು.ಹಲವು ನೀತಿಗಳ ಒ೦ದು ಕಥೆಯೊಳ ಚೆ೦ದಕೆ ಜೋಡುಸಿ ಲಾಯ್ಕಕ್ಕೆ ಬರದ್ದಿ.
    ಉದ್ಯೋಗಕ್ಕೆ ಸೇರುಲೆ ಪೇಟೆಗೆ ಮೋರೆ ಮಾಡಿ ನಿ೦ಬ ಮಕ್ಕೊ,ಅಬ್ಬೆ ಅಪ್ಪನ ಮನಸ್ಸಿನ ಭಾವನೆಗೊ,ಒ೦ದು ತಲೆಮಾರಿನ ಹಿ೦ದಾಣ ಬದುಕಿನ ನೆ೦ಪು,ಎಲ್ಲದರಿ೦ದ ಹೆಚ್ಚು ಕಡೇ೦ಗೆ ತೆಕ್ಕೊ೦ಡ ನಿರ್ಧಾರ ಮನಸ್ಸಿಲಿ ಗಟ್ಟಿ ನಿ೦ಬ ಹಾ೦ಗೆ ಚಿತ್ರಣ ಆಯಿದು.ಮೂರು ಕಾಸಿ೦ಗೆ ಆರಾರಿ೦ಗೋ ಜಾಗೆ ಮಾರೊದರಿ೦ದ ಇದೇ ಯೋಗ್ಯ ಹೇಳಿ ಕ೦ಡತ್ತು.
    ಕೊಶಿ ಆತು ಓದಿ.

  9. ಗೋಪಾಲಣ್ಣ!
    ಸಮಕಾಲೀನ-ಸಕಾಲಿಕ ಕಥೆ.
    ಕಾನೂನಿನ ಲಾಭ ತೆಕ್ಕೊ೦ಬ ಲೋಭಿ ಅಪ್ಪದರಿ೦ದ ಗೈದು ತಿ೦ಬ ಧಾರ್ಮಿಕ ಆಯೆಕು ಹೇಳುವ ತಿಮ್ಮಪ್ಪ ಭಟ್ರ ಮಾತು ಮನಮುಟ್ಟಿತ್ತು.
    ಕಥೆಯ ಸುಖಾ೦ತ್ಯ ಮಾಡಿ ಒಳ್ಳೆ ನೀತಿಯ ತೋರುಸಿದ್ದಿ. ಕೊಶಿ ಆತು.

  10. ಒಳ್ಲೇದಾಯಿದು ಸುಭಗಣ್ಣ………

  11. ರಾಮ ಭಟ್ರು ಸರಿಯಾದ ತೀರ್ಮಾನವನ್ನೇ ತೆಕೊಂಡವು. ಕತೆಯ ಓಟ ಲಾಯಕಿದ್ದು. ಹವ್ಯಕ ಮನೆಗಳಲ್ಲಿ ನೆಡೆತ್ತ ಘಟನೆಗಳ ನೈಜ ಚಿತ್ರಣ ಕಥೆಲಿದ್ದ ಕಾರಣ ಮನಸ್ಸಿಂಗೆ ಒಳ್ಳೆ ನಾಟುತ್ತು ಗೋಪಾಲಣ್ಣ. ಮತ್ತೊಂದು ಉತ್ತಮ ಕತೆ ಕೊಟ್ಟದಕ್ಕೆ ಧನ್ಯವಾದಂಗೊ.

  12. ‘ರಾಮ ಭಟ್ರಿಂಗೆ ಅರುವತ್ತೈದು ವರ್ಷ ಪ್ರಾಯ.’ – ಎನಗೆ ಫಕ್ಕನೆ ನೆಂಪಾದ್ದು ಈ ರಾಮ ಭಟ್ರಿಂಗೂ ಬಾಲಣ್ಣ ನ ಪೋತಿ ಗೂ ಏನಾರು ನೆಂಟತನ ಇದ್ದು ಹೇಳಿ ಕಂಡು ಹಿಡುದಿರೋ ಹೇಳಿ. ನೋಡಿಯಪ್ಪಗ ಗೊಂತಾತು ಅವರಪ್ಪ ರೈಟ , ಗೋಡಾಕುಟರ ಅಲ್ಲಾ, ಪುದುಮನ ಸಂಬಂದ ಇಲ್ಲದ್ದವು ಹೇಳಿ.

    ಒಂದು ಬಡ ಹವ್ಯಕ ಕುಟುಂಬ ಚಿತ್ರಣ ಚಂದಕ್ಕೆ ಬರದ್ದಿ . ಕಷ್ಟಲ್ಲಿ ಮೇಗೆ ಬಂದು ಕುಟುಂಬ ಉದ್ಧರಿಸಿದ ಪ್ರತಿಯೊಬ್ಬಂಗೂ ಮನಸ್ಸಿಂಗೆ ನಾಟಿ, ಹಳೆ ನೆನಹು ಅಪ್ಪಲಿದ್ದು ಇದರ ಓದಿ.

    ಒಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×