ಊದು ವನಮಾಲಿ ಮುರಳಿಯಾ
ಇಂದೆಂತ ಕೃಷ್ಣಂಗೆ ಅದರ ನೆಂಪೇ ಮತ್ತೆ ಮತ್ತೆ ಮನಸಿಂಗೆ ಬತ್ತು. ದ್ವಾರಕೆಯ ಅಂತಃಪುರದ ಹಾಸಿಗೆ ಮನುಗಿರೂ ಅವನ ಮನಸಿಲ್ಲಿ ಮೂಡಿ ಬಪ್ಪ ರೂಪ ಅದರದ್ದೇ..ಮಲ್ಲಿಗೆಯ ಬಣ್ಣವನ್ನೇ ಮೈಲಿ ತುಂಬಿ ಕೊಂಡಿದದು. ಕಣ್ಣಿಂಗೆ ಹಾಕಿದ ಕಾಡಿಗೆಲೇ ಅವನ ಎದೆಲೊಂದು ಪ್ರೇಮ ಕವನವೂ ಬರಗದು. ವೃಂದಾವನದ ತಂಪುಗಾಳಿಲೆಲ್ಲ ಅದರ ಇಂಪು ನೆಗೆಯೇ ಕೇಳಿದಾಂಗಪ್ಪದು. ಬೆಳಿ ಬೆಳಿ ನೊರೆಯ ಹಾಂಗೆ ಹರಿವ ಯಮುನೆಯ ನೀರಿಲ್ಲಿ ಅದರ ಗೆಜ್ಜೆ ಶಬ್ದವೇ ಕೇಳಿದಾಂಗಪ್ಪದು.
ಅದೆಲ್ಲಿದ್ದೀಗ….?ಅವನ ಪ್ರೇಮಸಾಫಲ್ಯದ ಮೂರ್ತರೂಪವೇ ಅದು. ಉದಿಯಪ್ಪಾಣ ಸೂರ್ಯನ ಬಣ್ಣದ ಮೋರೆ ಮಾಡಿಂಡು ಅವನ ಹತ್ತರೆ ನಿಂದು
“ಎನಗೆ ನಿನ್ನಂದ ಹೆಚ್ಚಿನವು ಆರೂದೆ ಇಲ್ಲೆ ಈ ಭೂಮಿಲಿ ಗೊಂತಿದ್ದಾ ವನಮಾಲೀ” ಹೇಳಿ ಗುಟ್ಟು ಹೇಳಿ ಓಡಿ ಹೋಪಲೆ ಹೆರಟದರ ಜೆಡೆ ಹಿಡುದು ನಿಲ್ಲಿಸಿ “ಎನ್ನ ಕಣ್ಣು ನೋಡಿ ಹೇಳು” ಹೇಳಿ ಹೇಳಿಕ್ಕಿ ಅದರ ಪ್ರೀತಿಯ ನೋಟಕ್ಕೆ ಸೋತು ಹೋದ್ದದು ಅವನೇ. ಯಮುನೆಯ ಕರೆಲಿ ಅವ° ಮಾಡುವ ನೃತ್ಯಕ್ಕೆ ಜತೆಯಾಗಿ ಇದ್ದದು ಅದರ ಗೆಜ್ಜೆಯ ಶಬ್ದವೆ..
ಒಂದು ಕ್ಷಣ ಕೃಷ್ಣಂಗೆ ಪಶ್ಚಾತ್ತಾಪ ಆತು.“ರಾಧೇ….ಎನ್ನ ಪ್ರೀತಿಯ ರಾಧೇ….ನೀನೆಲ್ಲಿದ್ದೆ?”ಶ್ಯಾಮನ ಮನಸು ರಾಧೆಯ ಹುಡ್ಕಿಂಡು ವೃಂದಾವನದ ಯಮುನೆಯ ಕರೆಂಗೆ ಎತ್ತಿತ್ತು.
“ನೀನೆಲ್ಲಿದ್ದರೂ,ನಿನಗೆಷ್ಟು ಕೆಲಸದ ಒತ್ತಡ ಇದ್ದರೂ ನಿನ್ನ ಮನಸಿನ ಮೂಲೆಲಿ ಒಂದು ನವಿಲುಗರಿಯ ಹಾಂಗೆ ಆನಿದ್ದೇಳಿ ಗೊಂತಿಲ್ಲೆಯಾ ರಂಗಾ..” ಅವನ ಎದೆಯೊಳಾಂದಲೇ ಅದರ ದೆನಿ ಕೇಳಿದಾಂಗಾತು. ರಾಧೆಯ ನೆಂಪು ಮತ್ತೆ ಮತ್ತೆ ಸಂಪಗೆ ಹೂಗಿನ ಪರಿಮಳದಾಂಗೆ ಅವನ ಮನಸಿಲ್ಲಿ ತುಂಬಿ ಬೇರೆಲ್ಲಾ ಮರದೋತು.
ಅಕ್ರೂರ ಬಂದು ಮಥುರೆಯ ಬಿಲ್ಲಹಬ್ಬಕ್ಕೆ ಹೇಳಿಕೆ ಹೇಳಿ ಒಟ್ಟಿಂಗೆ ಕರಕ್ಕೊಂಡು ಹೋವ್ತೇಳಿ ಹಠ ಮಾಡಿಯಪ್ಪಗ ಕೃಷ್ಣಂಗೆ ಅವನೊಟ್ಟಿಂಗೆ ಹೋಗದ್ದೆ ಬೇರೆ ದಾರಿಯೇ ಇಲ್ಲದ್ದಾಂಗಾತು. ಹೋಪ ಮುನ್ನಾಳ ದಿನ ಯಮುನೆಯ ಕರೆಲಿ ರಾಧೆಯ ಕಾಲಿಲ್ಲಿ ತಲೆ ಮಡುಗಿ ಮನುಗಿದವಂಗೆ ಅದರ ಕಣ್ಣು ತುಂಬಿಕೊಂಡು ಕಾಂಬಗ ಎದೆಲಿ ಎಂತೋ ಸಂಕಟಾತು.
“ಎನ್ನ ರಾಧೆಗೆ ಎಂತಾತು?ಎಂತಕೆ ಬೇಕಾಗಿ ಈ ಕಣ್ಣು ತುಂಬಿತ್ತು? ಯೇವಗಲೂ’ ಯಮುನೆಯ ಅಲೆಯೋ ಹೆಚ್ಚು ಚೆಂದ ಎನ್ನ ನೆಗೆಯೋ’ ಹೇಳಿ ಕೇಳುವ ನಿನ್ನ ದುಃಖ ಈ ವನಮಾಲಿಯತ್ರೆ ಹೇಳ್ಲಾಗದಾ? ಎನ್ನ ಶಕ್ತಿಯೇ ನೀನು. ನಿನ್ನ ಉಸಿಲಿಲ್ಲಿ ಎನ್ನ ಉಸಿಲುದೆ ಇಪ್ಪದೂಳಿ ನಿನಗೆ ಗೊಂತಿಲ್ಯಾ? ನೀನು ಹೀಂಗೆ ಕಣ್ಣ ನೀರು ಹಾಕಿರೆ ಎನಗೆ ತಡವಲೆಡಿಗಾ?” ಅದರ ಕಣ್ಣನೀರಿನ ಅವನ ಉತ್ತರೀಯಲ್ಲಿ ಉದ್ದಿಕ್ಕಿ ಎದೆಗೊತ್ತಿದ ಕೃಷ್ಣ.
“ನೀನಿನ್ನು ಈ ಗೋಕುಲಕ್ಕೆ ವಾಪಸ್ ಬತ್ತಿಲ್ಲೆ ಹೇಳಿಪ್ಪ ವಿಶಯ ಎನಗೆ ಗೊಂತಿಲ್ಲೇಳಿ ಝಾನ್ಸಿದೆಯಾ?ಅದಕ್ಕೇ.….”
ಈಗ ಅವನ ದೊಂಡೆಂದ ದೆನಿ ಹೆರಟಿದಿಲ್ಲೆ.ಮಥುರೆ ಮಾತ್ರ ಅಲ್ಲ. ಇಡೀ ವಿಶ್ವವೇ ಅವನ ಕಾಯ್ತಾಯಿದ್ದು ಹೇಳಿ ಆ ಲೀಲಾ ಮಾನುಷ ವಿಗ್ರಹಂಗೆ ಗೊಂತಿಲ್ಲೆಯಾ? ಅಂದರೂ ಅದು ಈ ವೃಷಭಾನುವಿನ ಮಗಳಿಂಗೆ ಹೇಂಗೆ ಗೊಂತಾತು?
ಅದರ ದೃಷ್ಟಿಗೆ ದೃಷ್ಟಿ ಸೇರ್ಸಿ ಮಾತಾಡ್ಲೆ ಅವಂಗೆ ಎಡ್ತಿದಿಲ್ಲೆ. ಯಮುನೆಯ ನೀರಿಲ್ಲಿ ಹೊಳವ ಚಂದ್ರನ ಬೆಣಚ್ಚನ್ನೇ ನೋಡಿಂಡು ಕೂದ. ಎಂತ ಹೇಳಿ ಇದರ ಸಮದಾನ ಮಾಡೆಕೂ ಹೇಳಿ ಅರಡಿಯದ್ದೆ ಸುಮ್ಮನೇ
“ರಾದೇ..” ಹೇಳಿ ಮೆಲ್ಲಂಗೆ ದೆನಿಗೇಳಿದ.
ಅರ್ಧ ಕಟ್ಟಿ ಮಡುಗಿದ ಕಾಡು ಹೂಗುಗಳ ಮಾಲೆಯ ಜೋಡ್ಸಿ ತಂದು ಅವನ ಕೊರಳಿಂಗೆ ಹಾಕಿತ್ತದು.
“ಒಳುದ ಹೂಗುಗಳ ಬೇರೆ ಆರಾರು ಕಟ್ಟಿ ನಿನ್ನ ಕೊರಳಿಂಗೆ ಹಾಕಲಿ ವನಮಾಲೀ..ಎನ್ನ ಲೆಕ್ಕದ್ದು ಇಷ್ಟೇ ಸಾಕಲ್ಲದಾ?”….
ಅದರ ಕೈಯ ಮೆಲ್ಲಂಗೆ ಹಿಡ್ಕೊಂಡ ಅವ°.
“ಬೇರೆ ಆರು ಎಷ್ಟು ಚೆಂದದ ಹೂಗುಗಳ ತಂದು ಮಾಲೆ ಮಾಡಿ ಹಾಕಿರೂ ನೀನು ಹಾಕಿದ ಈ ಮಾಲೆಯ ಹತ್ರಂಗೂ ಬಾರ ರಾದೇ….ಉದಿಯಪ್ಪಗ ಅರಳುವ ಕೆಂಪು ತಾವರೆ ಹೂಗಿನ ಎಸಳಿಲ್ಲಿ ಹೊಳವ ಹನಿ ನೀರಿನಷ್ಟೇ ಪರಿಶುದ್ಧ ನಿನ್ನ ಪ್ರೀತಿ .ಅದಕ್ಕೆ ಯೇವದನ್ನೂ ಹೋಲಿಕೆ ಮಾಡ್ಲೆಡಿಯ. ಅಂದರೂ ಆನು ಸೋತು ಹೋಯಿದೆ. ದೊಡ್ಡ ದೊಡ್ಡ ಕೆಲಸಂಗೊ ಮುಂದೆ ಎನ್ನ ಕಾಯ್ತಾಯಿದ್ದು. ಈ ಗೋಕುಲ ಬಿಟ್ಟು ಹೋಗದ್ದೆ ಎನಗೆ ಬೇರೆ ದಾರಿಯೇ ಇಲ್ಲೆ. ನಿನ್ನ ಹೇಂಗೆ ಕರಕ್ಕೊಂಡು ಹೋಪದಾನು? ಹಾಂಗೆ ಹೇಳಿ ನಿನ್ನ ಈ ನಿಷ್ಕಲ್ಮಶ ಪ್ರೀತಿ ಎನಗೆ ಬೇರೆಲ್ಲಿ ಸಿಕ್ಕುಗು?ಬಿಟ್ಟಿಕ್ಕಿ ಹೋಪಲೂ ಮನಸು ಬತ್ತಿಲ್ಲೆ” ಅವನ ದೆನಿಲಿಪ್ಪ ದೈನ್ಯತೆ ಅದಕ್ಕೆ ಅರ್ಥಾತು.
“ನೀನು ಹೋಗಲೇ ಬೇಕು.ಧರ್ಮ ರಕ್ಷಣೆಯೇ ನಿನ್ನ ಬದುಕಿನ ಧ್ಯೇಯ ಹೇಳಿ ಅಂದು ಗರ್ಗ ಮುನಿಗೊ ಅಪ್ಪನತ್ರೆ ಹೇಳುದರ ಕೇಳಿದ್ದೆ ಆನು.ನಿನ್ನ ಕರ್ತವ್ಯ, ಜವಾಬ್ದಾರಿ ಎಲ್ಲದರ ಎಡೆಲಿ ಆನು ನಿನ್ನೊಟ್ಟಿಂಗೆ ಇದ್ದರೆ ನಿನಗೆ ಕಷ್ಟವೇ ಹೇಳಿ ಎನಗೆ ಗೊಂತಿದ್ದು. ನಿನ್ನ ಮನಸಿನ ಮೂಲೆಲಿ ನವಿಲು ಗರಿಯಷ್ಟು ಜಾಗೆ ಸಾಕೆನಗೆ. ಈ ಯಮುನೆಯ ಕರೇಲಿ ನಿನ್ನ ಹೆಸರಿನನ್ನೇ ಉಸಿಲು ಮಾಡಿಂಡು,ನಿನ್ನ ನೆಂಪುಗಳನ್ನೇ ಹಾಸಿ ಹೊದಕ್ಕೊಂಡು ನಿನಗೆ ಸದಾ ಒಳ್ಳೆದಾಗಲೀ ಹೇಳಿ ಜೆಪ ಮಾಡಿಂಡು ಆನಿಲ್ಲೇ ಇರ್ತೆ”.
ಅದರ ಮಾತು ಕೇಳಿಯಪ್ಪಗ ರಾಧಾಲೋಲನ ಕೈಲಿಪ್ಪ ಮುರಳಿ ಜಾರಿ ನೆಲಕ್ಕಕ್ಕೆ ಬಿದ್ದತ್ತು. ಅವನ ತಾವರೆ ಎಸಳಿನ ಹಾಂಗಿದ್ದ ಕಣ್ಣಿಂದಲೂ ಒಂದು ಹನಿ ಮುತ್ತಿನ ಹಾಂಗೆ ಕೆಳ ಇಳುದತ್ತು.ಅದರ ಕಂಡದುದೆ ರಾಧೆ ಅದರ ಸೆರಗಿಲ್ಲಿ ಉದ್ದಿಕ್ಕಿ ಅವನ ಹೆಗಲಿಂಗೆ ಅಂಟಿ ನಿಂದು ಮೆಲ್ಲಂಗೆ ಕೆಮಿಲಿ ಹೇಳಿತ್ತು
“ಊದು ವನಮಾಲಿ ಮುರಳಿಯಾ..ನಿನ್ನ ಕರ್ತವ್ಯದ ಎಡೆಲೂ ಇದರ ಮರವಲಾಗ”
ಎದೆಯ ಸಂಕಟ ಹೆರ ತೋರ್ಸದ್ದೆ ಅವ° ಮುರಳಿಯ ತುಟಿಗೆ ಮಡುಗಿ ಉಸಿಲು ಸೇರ್ಸಿ ಮೋಹನ ರಾಗವ ಮೋಹಕವಾಗಿ ಊದಿದ. ಅದರ ಕೇಳಿ ಯಮುನೆಯ ನೀರು ಕೂಡ ಮುಂದೆ ಹೋಗದ್ದೆ ಅಲ್ಲೇ ನಿಂದತ್ತಾ ಹೇಳಿ ಕಾಣ್ತು. ಇಡೀ ವೃಂದಾವನದ ಎಲ್ಲಾ ಜೀವಜಾಲಂಗಳೂ ಆ ಧ್ವನಿಯ ಕೇಳಿ ಮೈ ಮರದವು. ಅವನ ರಾಧೆಗೆ ಬೇಕಾಗಿ ಮಾತ್ರ ಕೊಳಲೂದಿದ ಕಾರಣ ಆದಿಕ್ಕು ಅಂದು ಅಷ್ಟು ಚೆಂದಾದ್ದದು.
ಕೊಳಲೂದಿ ನಿಲ್ಸಿಕ್ಕಿ ಆ ಕೊಳಲನ್ನೂ,ತಲೆಲಿಪ್ಪ ನವಿಲು ಗರಿಯನ್ನೂ ರಾಧೆಯ ಕೈಲಿ ಮಡುಗಿದ ಅವ°
“ಇಂದೇ ಅಕೇರಿ.. ಇನ್ನೆಂದಿಂಗೂ ನಿನ್ನ ಮುರಳೀಧರ ಕೊಳಲೂದುತ್ತಾಯಿಲ್ಲೆ ರಾದೇ..ಇನ್ನವ ಮುರಳೀಧರ ಅಲ್ಲ….ಬರೀ ಕೃಷ್ಣ ಮಾಂತ್ರ. ನೀನೆನ್ನೊಟ್ಟಿಂಗೆ ಇಲ್ಲದ್ದಿಪ್ಪಗ ಈ ನವಿಲು ಗರಿಯ ಅಲಂಕಾರವೂ ಬೇಡ ಎನಗೆ”
ರಾಧೆಯ ಕಣ್ಣೀರು ಯಮುನಾ ನದಿಂದಲೂ ಹೆಚ್ಚಾಗಿ ಹರಿವದು ಕಾಂಬಗ ಗಾಳಿಗೆ ಕೂಡ ಬೀಸಲೆ ಮನಸು ಬಾರದ್ದ ಹಾಂಗಾತ ಕಾಣ್ತು. ಕೈಲಿಪ್ಪ ನವಿಲುಗರಿಯ ತೆಗದು ಪುನಃ ಅವನ ತಲೆಲಿ ಮಡುಗಿ ಅವನ ಕೊರಳಪ್ಪಿ ಹೇಳಿತ್ತು ರಾಧೆ “ಇದರ ತೆಗೆಡ. ಎನ್ನ ನೆಂಪಿಂಗೆ ಬೇಕಾಗಿ ಇದೊಂದು ನಿನ್ನ ತಲೆಲಿ ಇರ್ಲಿ” ಅಷ್ಟು ಹೇಳಿದ ಅದು ಅಶ್ರುಧಾರೆ ಹರಿಸಿಯೇ ಅವನ ಕಳ್ಸಿಕೊಟ್ಟದು. ಮುರಳಿ ಅದರ ಕೈಲಿ ಅವನ ನೆಂಪಾಗಿ,ತಂಪಾಗಿ ಅವನ ಪ್ರೀತಿಯ ಪ್ರೀತಿಯ ಕಾಣಿಕೆಯಾಗಿ….
ಅದೇ ರಾಧೆ ..ಈಗ ಎಂತ ಮಾಡ್ತಾದಿಕ್ಕು?ಅದರ ಕಾಣದ್ದೆ ಎಷ್ಟು ವರ್ಷಾತೋ?
“ಊದು ವನಮಾಲೀ ಮುರಳಿಯಾ” ಆರೋ ಹತ್ತರೆ ನಿಂದು ಹೇಳಿದಾಂಗಾತು ಕೃಷ್ಣಂಗೆ.ಆಲೋಚನೆಯ ಸರಪ್ಪುಳಿ ತುಂಡಾಗಿ ಆರು ಹಾಂಗೆ ಹೇಳಿದ್ದು ಹೇಳಿ ಸುತ್ತೂದೆ ನೋಡಿದ.ಈ ಲೋಕದ ಪ್ರೀತಿಯ ಭಾವವ ಎಲ್ಲ ಕೊರಳಿಲ್ಲಿ ತುಂಬಿಕೊಂಡ ರಾಧೆ ಎನ್ನತ್ರೆ ಕೊಳಲೂದುಲೆ ಹೇಳಿದ್ದರೇ…..
ಅಷ್ಟಪ್ಪಗ ತಂಪು ಗಾಳಿ ಬೀಸಿ ಬಂತು.ಆ ಗಾಳಿ ಹೊತ್ತು ತಂದ ಪರಿಮಳಕ್ಕೆ ಅವ° ಮನಸೋತ. ಮನಸಿನ ಬೇಜಾರು ದೂರಾಗಿ ಅವನ ಹೃದಯಲ್ಲಿ ಸಂತೋಷ ತುಂಬಿತ್ತು.
ತುಂಬಾ ವರ್ಷ ಮದಲು ರಾಧೆಗೆರಗಿ ಕೂದು ಕೊಳಲೂದುವ ಅವನತ್ರೆ ರಾದೆ ಕೇಳಿದ್ದತ್ತು
“ನೀನೆಕೆ ಎನ್ನ ಮದುವೆ ಆವ್ತಿಲ್ಲೆ?”
ರಜವೂ ಹಿಂದೆ ಮುಂದೆ ಆಲೋಚನೆ ಮಾಡದ್ದೆ ಕೃಷ್ಣ ಹೇಳಿದ
“ನಾವಿಬ್ರಿದ್ದರೆ ಮದುವೆ ಅಪ್ಪಲಾವ್ತಿತು. ಆದರೆ ಎಂತ ಮಾಡುದು?ಎನ್ನ ಮೈ ಮನಸು ಪೂರ ನೀನೇ ತುಂಬಿದ್ದೆ. ನಿನ್ನ ಮೈ ಮನಸು ಕೂಡ ಎನ್ನದೇ. ಅಷ್ಟಪ್ಪಗ ನಾವಿಬ್ರೂ ಒಂದೇ ಅಲ್ಲದಾ? ಮತ್ತೆ ಹೇಂಗೆ ಮದುವೆ ಅಪ್ಪದು?”
ಯಮುನೆಯ ಅಲೆಗೊ ಕೂಡ ಸೋತು ಹೋಪಷ್ಟು ಚೆಂದಕೆ ನೆಗೆ ಮಾಡಿತ್ತು ರಾಧೆ
“ನೀನಿನ್ನು ಈ ಮಾತು ಮರವಲಾಗ. ಆನು ನಿನ್ನೊಟ್ಟಿಂಗೆ ಇಲ್ಲದ್ರೆ ಬೇಜಾರು ಮಾಡ್ಲಾಗ. ನಿನಗೆ ನೆಂಪಾಗದ್ರೆ ನಮ್ಮ ಮಾತಿಂಗೆ ಸಾಕ್ಷಿಯಾದ ಈ ತಂಪು ಗಾಳಿಯ ಕಳ್ಸುವೆ ಆನು. ಆ ಗಾಳಿ ಬಪ್ಪಗ ನಿನ್ನೊಳ ಆನಿದ್ದೇಳಿ ನೆಂಪು ಮಾಡ್ಯೊಂಡರೆ ಸಾಕು. ಈ ಪ್ರಪಂಚಲ್ಲಿ ಪ್ರೇಮದ ಶಾಶ್ವತ ಮೂರ್ತಿಗೊ ಹೇಳಿ ನಮ್ಮ ಗುರುತಿಸುಗಲ್ಲದಾ?”
ರಾಧೆಯ ಆ ಮಾತಿನ ಈ ಗಾಳಿ ಬಂದು ನೆಂಪು ಮಾಡಿಯಪ್ಪಗ ಕೃಷ್ಣನ ಮೋರೆಲಿ ನೆಗೆಯ ಬೆಣಚ್ಚು ಕಂಡದು.
‘ನೀನು ಹತ್ತರೆ ಇಪ್ಪಗ ಆನೊಂದರಿ ಕೊಳಲೂದುತ್ತೆ ‘
ಹೇಳಿ ಅವ° ಕೊಳಲಿಂಗೆ ಬೇಕಾಗಿ ಪರಡಿದ. ಇಲ್ಲೆ..ಕೊಳಲು ಸಿಕ್ಕಿದ್ದಿಲ್ಲೆ. ಅದಿನ್ನು ಸಿಕ್ಕ…. ಅದು ರಾಧೆಯ ಸ್ವಂತ.. ಈ ಮಾಧವನೂ ರಾಧೆಯ ಸ್ವಂತವೇ….ಆದರೂ ಮುರಳಿ ಅಲ್ಲಿ..ಮಾಧವ ಇಲ್ಲಿ..
ರಾಧೇ….“ಎನಗೆನ್ನ ರಾಧೆ ಬೇಕು..ರಾಧೆಗೆರಗಿ ನಿಂದು ಕೊಳಲೂದೆಕು….” ಮನಸಿಲ್ಲಿ ಅದನ್ನೇ ಹೇಳ್ತಾ ಆಕಾಶ ನೋಡಿದ ಕೃಷ್ಣ.. ಅಷ್ಟಮಿಯ ಚಂದ್ರ ಕೃಷ್ಣನ ಮೋರೆ ನೋಡ್ಲೆ ಮನಸಿಲ್ಲದ್ದೆ ಕರಿ ಮುಗಿಲಿನ ಸೆರಗಿನ ಹಿಂದೆ ಹುಗ್ಗಿದ.
~~~***~~~
ಪ್ರಸನ್ನಾ ವಿ.ಚೆಕ್ಕೆಮನೆ
ಧರ್ಮತ್ತಡ್ಕ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಹವಿಗನ್ನಡಲ್ಲಿ ಮೂಡಿಬಂದ ಕತೆ,ನಿರೂಪಣೆ ಮನೋಜ್ಞವಾಗಿದ್ದತ್ತು
ನಿಂಗಳ ಮೆಚ್ಚುಗೆಗೆ ಧನ್ಯವಾದ ಅಣ್ಣಾ
ರಾಧಾಕೃಷ್ಣರ ಕಥೆ ತುಂಬಾ ಲಾಯ್ಕ ಆಯಿದು ರಾಧೆಯ ಪ್ರೀತಿ ಗ್ರೇಶಿದರೆ ಕಣ್ಣು ಮಂಜಾವುತ್ತು.ರಾಧೆ ನೀನು ಗ್ರೇಟ್.
ಅಪ್ಪು.. ರಾಧೆಯ ತ್ಯಾಗ, ಕೃಷ್ಣನ ಪ್ರೇಮ ಎರಡೂ ಜಗತ್ತಿಂಗೆ ಮಾದರಿ.ಕತೆ ಮೆಚ್ಚಿದ ನಿಂಗೊಗೆ ಧನ್ಯವಾದ ಅಕ್ಕಾ..
ರಾಧಾಕೃಷ್ಣರ ಒ(ಲವ್ವಿ)ನ ಕಥೆ ನಮ್ಮ ಭಾಷೆಲಿ ತುಂಬಾ ಚೆಂದಕೆ ಬಯಿಂದು. ನಿರೂಪಣೆ ತುಂಬಾ ಲಾಯಕಾಯಿದು.
ಧನ್ಯವಾದ ಅಣ್ಣಾ.. ಒಪ್ಪಣ್ಣ ನೆರೆಕರೆಯವರ ಪ್ರೋತ್ಸಾಹವೇ ಎನಗೆ ಹವ್ಯಕ ಭಾಷೆಲಿ ಬರವಲೆ ಪ್ರೇರಣೆ..
ನಿಂಗಳ ಏವುತ್ರಾಣ ಶೈಲಿ/ಧಾಟಿ ಅಲ್ಲದ್ದ ಚೆಂದಕ್ಕೆ ಬರದ ಈ ಶುದ್ದಿಗೊಂದು ಒಪ್ಪ.
ಧನ್ಯವಾದ ಭಾವಾ..ರಾಧೆ,ಕೃಷ್ಣ ನ ಪ್ರೀತಿಯ ಹವ್ಯಕ ಭಾಷೆಲಿ ಬರವ ಪ್ರಯತ್ನ ಮಾಡಿದ್ದು.
ಚೆಂದದ ಬರಹ ಪ್ರಸನ್ನ.
ಧನ್ಯವಾದ ಅತ್ತೇ..
ರಾಧಾ ಕಾ ಕ ಶಾಮ್ ಹೋ ತೋ ಮೀರಾ ಕ ಭೀ ಶಾಮ್. ಲೇಖನ ಓದಿ ಮತ್ತೊಂದರಿ ಮಥುರೆ, vrindavana , ನಿಧಿವನ, ಬರ್ಸಾನಾ, ಗೋಕುಲ ಕ್ಕೆ ಹೋಗಿ ಬಂದ ಹಾಂಗೆ ಆತು.
ಧನ್ಯವಾದ ಅಣ್ಣಾ.ರಾಧೆಯ ನೆಂಪು ಸದಾ ಕೃಷ್ಣಂಗೆ ಇದ್ದರೆ ಅವನ ಭಾವ ಹೇಂಗಿಕ್ಕು ಹೇಳುದರ ಬರವ ಪ್ರಯತ್ನ ಮಾಡಿದ್ದು..ಮುರಳಿಯೂ,ಮಾಧವನೂ ರಾದೆಯ ಸ್ವಂತ ಅಲ್ಲದಾ?.
ತುಂಬಾ ಲಾಯಿಕಕೆ ಮೂಡಿ ಬಯಿಂದು ರಾಧಾಕೃಷ್ಣರ ಪ್ರೇಮ ಸಲ್ಲಾಪ.ಅಭಿನಂದನೆಗೊ ಪ್ರಸನ್ನಾ..ತುಂಬಾ ಖುಷಿ ಆತು.
ಧನ್ಯವಾದ.. ಹವ್ಯಕ ಭಾಷೆಲಿ ಬರವಗ ಹೇಂಗಕ್ಕೋ ಝಾನ್ಸಿದ್ದೆ.ನಿಂಗೊ ಎಲ್ಲೋರು ಮೆಚ್ಚಿದ್ದು ಕೊಶಿಯಾತು.
ರಾಧೆಯ ಪ್ರೀತಿ ಅನನ್ಯ
ಪ್ರಸನ್ನರ ಕಥೆ ಮನನ
ಧನ್ಯವಾದ ಪಂಕಜಕ್ಕಾ
ಹವ್ಯಕ ಭಾಷೆಲಿ ಬರದ ರಾಧಾಲೋಲನ ಕಥೆ ಲಾಯಿಕ ಇದ್ದು
ಕತೆ ಮೆಚ್ಚಿದ ನಿಂಗೊಗೆ ಧನ್ಯವಾದ ಅಣ್ಣಾ..
ಕತೆ ಮೆಚ್ಚಿದ ನಿಂಗೊಗೆ ಧನ್ಯವಾದ ಅಣ್ಣಾ…