Oppanna.com

ಉಪಾಯ

ಬರದೋರು :   ಗೋಪಾಲಣ್ಣ    on   11/04/2011    15 ಒಪ್ಪಂಗೊ

ಗೋಪಾಲಣ್ಣ

ಶಿವಣ್ಣಂಗೆ ಅಂದು ತುಂಬಾ ಕೆಲಸ.ಉದಿಯಪ್ಪಗ ಐದು ಘಂಟೆಗೇ ಎದ್ದಾಯಿದು. ಕಾಫಿ,ಚಾಯ,ಅವಲಕ್ಕಿ,ಸಜ್ಜಿಗೆ[ಉಪ್ಪಿಟ್ಟು] ಮಾಡೆಕ್ಕು,ಮಧ್ಯಾನ್ನಕ್ಕೆ ಸಾವಿರ ಜನಕ್ಕೆ ಅಡಿಗೆ ಆಯೆಕ್ಕು. .
ಸಕಾಯಕ್ಕೆನಾಲ್ಕು ಜೆನ ಇದ್ದವು- ಬರೀ ಹೆಸರಿಂಗೆ ಅಷ್ಟೆ. ಕಾಯಿ ಕಡೆದು ಕೊಡುಗು, ಹೇಳಿದ ಕೆಲಸ ರಜಾ ಮಾಡುಗು-ಅಷ್ಟೆ.

ಇನ್ನು ಅಡಿಗೆ ಸುರು ಆಯೆಕ್ಕು.

ದೇವರ ನೆನೆಸಿಕೊಂಡು ಒಂದು ಕಾಯಿಯ ತೆಗೆದು ಕರೆಲಿ ಮಡುಗಿದ, ಶಿವಣ್ಣ.
ಅದು ಅವಂಗೆ ಮತ್ತೆ ಮನೆಗೆ ತೆಕ್ಕೊಂಡೋಪ ಬಾಬತ್ತು. ಅದು ಮೊದಲಾಣವರ ಕ್ರಮ ಅವ ಅನುಸರಿಸುತ್ತದು.
ಮತ್ತೆ ಕಾಯಿ ಒಡೆದು ಅಡಿಗೆ ಸುರು ಹಚ್ಚುತ್ತದು.

ಅಂದು ತಿಮ್ಮಪ್ಪ ಭಟ್ರ ಮಗಳ ಮದುವೆ.
ಮುನ್ನಾಣ ದಿನ ಇರುಳು ಹೋಳಿಗೆ ಮಾಡಿ ಮುಗಿಸುವಾಗ ನಾಕು ಘಂಟೆ-ಐದು ಘಂಟೆಗೆ ಎದ್ದೂ ಆತು, ಮಿಂದೂ ಆಯಿದು.
ಏಳಲೆ ಎಡಿತ್ತಿಲ್ಲೆ ಹೇಳಿ ಹೇಳುವ ಕ್ರಮ ಅಡಿಗೆಯವರದ್ದಲ್ಲ.
ಎಡೆ-ಎಡೆಲಿ ಮನೆಯವರೋ, ಅವರ ನೆಂಟ್ರೋ ಬಂದು ಕಾಪಿ ಮಾಡಿ,ಚಾಯ ಮಾಡಿ-ಹೇಳುಗು. ಕೆಲವರಿಂಗೆ ತಲೆಗೆ ಎಣ್ಣೆ ಬೇಕು-ಹೇಳಿ ಅಡಿಗೆ ಕೊಟ್ಟಗೆಗೆ ಬಕ್ಕು.
ಅವರ ಬೇಕು ಬೇಡ ಎಲ್ಲಾ ಸಮಾಧಾನಲ್ಲಿ ಗಮನಿಸೆಕ್ಕು, ಅಲ್ಲಿ ಯಾವ ಸಾಮಾನು, ಸಟ್ಟುಗ, ಉರುಳಿ, ಪಾತ್ರೆ ಇಲ್ಲೆಯೋ ಮನೆಯ ಯಜಮಾಂತಿಯ ಹತ್ತರೆ ಅದರ ಕೇಳಿ ತೆಕ್ಕೊಳ್ಳೆಕ್ಕು.
ನಾಯಿಯೋ, ಪುಚ್ಚೆಯೋ ಸಾಮಾನಿಂಗೆ ಬಾಯಿ ಹಾಕದ್ದ ಹಾಂಗೆ ನೋಡೆಕ್ಕು-ಹೀಂಗೆ ಐದು ಜೆನಕ್ಕೂ ಕೆಲಸದ ಗೌಜಿ.

ಆದರೆ ಯಾವ ಮಾಯಲ್ಲೋ ಎಲ್ಲಾ ಕೆಲಸ ಚಕಚಕ ಆತು.
ತಿಂಡಿ,ಕಾಪಿ,ಚಾಯ ಆತು. ದಿಬ್ಬಾಣದವಕ್ಕೆ,ಮನೆಯವಕ್ಕೆ ಎಲ್ಲರಿಂಗೂ ಆತು. ಶಿವಣ್ಣನೂ ತಿಂದ.
ಮಧ್ಯಾನ್ನಕ್ಕೆ ಮೇಲಾರ, ಸಾರು, ಸಾಂಬಾರು, ಕಾಸಂಬರಿ, ಕೋಸಂಬ್ರಿ, ಅವಿಲು, ನಾಕು ತಾಳು, ಕಲಸು, ಮೆಣಸ್ಕಾಯಿ, ಪೋಡಿ, ಎರಡು ಪಾಯಸ- ಇನ್ನೂ ಎಷ್ಟೊ ಬಗೆ ಆತು.
ಅಶನ ರಾಶಿ ಬಿದ್ದತ್ತು.ಹಪ್ಪಳ ಹೊರಿದರೆ ಆತು,ಊಟಕ್ಕಪ್ಪಗ.

‍* * *

ಅಲ್ಲಿಯ ವರೆಗೆ ತಿಮ್ಮಪ್ಪ ಭಟ್ರ ಮನೆಗೆ ಜೆಂಬ್ರದ ಅಡಿಗೆಗೆ ಕಿಟ್ಟಪ್ಪಣ್ಣ ಬಂದೊಂಡಿದ್ದ.
ಕಳುದ ವರ್ಷ ಅವರ ಅಪ್ಪನ ತಿತಿಗೆ ಅಡಿಗೆ ಮಾಡುವಾಗ ಸಾರು ಕೊದಿಲು ಎಲ್ಲದಕ್ಕೂ ಉಪ್ಪು ಹಾಕಿದ್ದು ಜಾಸ್ತಿ ಆಗಿ ಎಲ್ಲರೆದುರು ಮನೆಯವರ ಮರ್ಯಾದೆ ಹೋಯಿದು.
ಹಾಂಗಾಗಿ ಈಗ ಮದುವೆಗೆ ಅವಂಗೆ ಹೇಳಿಕೆ ಇದ್ದರೂ ಅಡಿಗೆಗೆ ಇಲ್ಲೆ.

ಕಿಟ್ಟಪ್ಪಣ್ಣ ಬಂದು ಅಡಿಗೆ ಕೊಟ್ಟಗೆಲೇ ಹೊಣಕ್ಕೊಂಡು ಇದ್ದಿದ್ದ. ಬಡುಸಲೆ ಸೇರಿಕೊಂಡು, ಸಾಮಾನು ಆಚೀಚೆ ಕೊಟ್ಟೊಂಡು-ಮನೆಯವರ ಹತ್ರೆ ಕುಶಾಲು ಮಾಡಿಕೊಂಡು ಇತ್ತಿದ್ದ.
ಎಲ್ಲರಿಂಗೂ ಅವನ ಮಮಕಾರ ನೋಡಿ ಸಂತೋಷ ಆತು.

ಆದರೆ ಅವ ಒಳಂದೊಳ ಕತ್ತಿ ಮಸಕ್ಕೊಂಡಿದ್ದದು ಆರಿಂಗೂ ಗೊಂತಾಯಿದಿಲ್ಲೆ.

ಎಂತದೋ ಸಾಮಾನು ತೆಗೆವ ನೆವನಲ್ಲಿ ಬಂದ ಕಿಟ್ಟಪ್ಪಣ್ಣ – ಒಂದಷ್ಟು ಉಪ್ಪಿನ ಮೇಲಾರಕ್ಕೆ ಸೊರುಗಿ, ಆರಿಂಗೂ ಗೊಂತಾಗದ್ದ ಹಾಂಗೆ ಜಾರಿದ!
ಆದರೂ ಅಲ್ಲಿಯೇ ಬೇರೆ ಕೆಲಸ ಮುಂದುವರಿಸಿ, ಎಂತಾವುತ್ತು ಹೇಳಿ ನೋಡಿಕೊಂಡಿತ್ತಿದ್ದ!

* * *

ಧಾರೆ ಆಗಿ, ಮಂತ್ರಾಕ್ಷತೆ ಆಗಿಕೊಂಡಿತ್ತಿದ್ದು.
ಇನ್ನು ಊಟಕ್ಕೆ ಆತು.
ಎಲ್ಲಾ ಪಾತ್ರೆಯ ಒಂದಾರಿ ನೋಡಿ ಅಪ್ಪಗ ಶಿವಣ್ಣಂಗೆ ಮೇಲಾರಕ್ಕೆ ಒಗ್ಗರಣೆ ಹಾಕಿದ್ದಿಲ್ಲೆ ಹೇಳಿ ಗೊಂತಾತು.

ಕೂಡಲೇ ಒಗ್ಗರಣೆಗೆ ತಯಾರು ಮಾಡಿ ಹಾಕಿದ.
ಒಗ್ಗರಣೆ ಹಾಕುವಾಗ ಬಂದ ವಿಚಿತ್ರ ಶಬ್ದ-ಅದೊಂದು ರೀತಿ,ವರ್ಣಿಸಲೆ ಎಡಿಯದ್ದು– ಅನುಭವಿಯಾದ ಶಿವಣ್ಣಂಗೆ ಬೇಗ ಗೊಂತಾತು.
ಮೇಲಾರಕ್ಕೆ ಉಪ್ಪು ಹೆಚ್ಚಾಯಿದು!

ಹಸ್ತೋದಕ ಹಾಕಲಿಪ್ಪ ಊಟಕ್ಕೆ ಮಾಡಿದ್ದರ, ಅಡಿಗೆಯವು ರುಚಿ ನೋಡುಲಾಗ – ಈಗ ಬೇರೆ ಮೇಲಾರವ ಮಾಡಲೂ ಎಡಿಯ.
ಆರಪ್ಪ ಹೀಂಗೆ ಉಪ್ಪು ಹಾಕಿದ್ದು? ಒಟ್ಟಿಂಗೆ ಬಂದವರ ಹತ್ತರೆ ಮೆಲ್ಲಂಗೆ ಕೇಳಿ ನೋಡಿದ. ಅವಕ್ಕೆ ಗೊಂತಿಲ್ಲೆ.
ಮನೆಯವಕ್ಕೆ ಗೊಂತಾದರೆ ಕಷ್ಟ. ಅವರ ನೆಂಟ್ರಿಂಗೆ ಗೊಂತಾದರೆ ಬೊಬ್ಬೆ ಹಾಕಿ ಕೂಪಲೆ ಬಿಡವು.
ಇಷ್ಟು ದಿನ ಕೆಲಸ ಮಾಡಿ ಪಡೆದ ಹೆಸರು ದಂಡ ಆತು!

ಒಲೆಯ ಬೆಶಿ, ಮನಸ್ಸಿನ ಬೆಶಿ ಎರಡೂ ಸೇರಿ ಬೆಗರು ಬಿಚ್ಚಿತ್ತು ಅವಂಗೆ.
ಅಷ್ಟಪ್ಪಾಗ ಅವಂಗೆ ಅವನ ಅಪ್ಪ ಎಲ್ಲಿಯೊ ಅಡಿಗೆಯವು ಮಾಡಿದ ಒಂದು ಉಪಾಯದ ಬಗ್ಗೆ ಹೇಳಿದ್ದು ನೆಂಪಾತು.

ಕಾಲೋಚಿತಕ್ಕೈದಿದಾ ತೃಣವೇ ಪರ್ವತವಲ್ಲವೇ-ಹೇಳಿ ಸೋಮೇಶ್ವರ ಶತಕಲ್ಲಿ ಹೇಳಿದ್ದು ಲೊಟ್ಟೆ ಅಲ್ಲ!
ಅಡಿಗೆ ಕೊಟ್ಟಗೆ ಜಾಲ ಕರೆಲಿ ಇತ್ತು – ಶಿವಣ್ಣ ಅಲ್ಲಿಂದ ತೋಟಕ್ಕೆ ಇಳಿದ. ಒಂದು ಬಾಳೆಯ ದಂಡಿನ ಕಡುದು ತಂದ, ಮೇಗಾಣ ಚೋಲಿಯ ಎಲ್ಲಾ ತೆಗೆದ.
ದಂಡಿಂಗೆ ಕತ್ತಿಲಿ ಅಲ್ಲಲ್ಲಿ ಗಾಯ ಮಾಡಿ-ಅಡಿಗೆ ಕೊಟ್ಟಗೆಗೆ ತಂದ.ಎಲ್ಲರೂ ನೋಡಿಕೊಂಡಿದ್ದ ಹಾಂಗೆ.

ಅದರ ಮೇಲಾರಕ್ಕೆ ಮುಂಗಿಸಿ ಮಡುಗಿದ.
ನಾಕೈದು ಜೆನ ಕೇಳಿ ಅಪ್ಪಗ-“ಅದೆಲ್ಲಾ ಮತ್ತೆ ಹೇಳುತ್ತೆ,ಈಗ ಬಡುಸಿ,ಉಂಡಾಗಲಿ” ಹೇಳಿ ಶಿವಣ್ಣ ಒಂದು ಕರೆಲಿ ಬೆಗರು ಉದ್ದಿಕೊಂಡು ಕೂದೊಂಡ.

ತಾಳುಗೊ,ಅವಿಲು,ಅಶನ, ಸಾರು,ಕಲಸು,ಮೆಣಸ್ಕಾಯಿ ಎಲ್ಲಾ ಹೋತು.
ಸಾಂಬಾರು ಆದ ಮೇಲೆ ಮೇಲಾರ ಬಳುಸಿದವು.
ಉಪ್ಪು ಹದ ಆಯಿದು. ಹೆಚ್ಚಿದ್ದ ಉಪ್ಪಿನ ಬಾಳೆ ದಂಡು ಎಳಕ್ಕೊಂಡಿದು!

ಶಿವಣ್ಣ ದಂಡಿನ ತೆಗೆದು ಇಡುಕ್ಕಿದ.
ಶಿವಣ್ಣ ಕಿಟ್ಟಪ್ಪಣ್ಣನ ದೂರ ಕರಕ್ಕೊಂಡು ಹೋಗಿ,ಜೋರು ಮಾಡಿ ಕೇಳಿದ.-“ಕಿಟ್ಟಪ್ಪ,ಸತ್ಯ ಹೇಳು-ಈ ತೆಂಗಿನಮರದ ಸಾಕ್ಷಿಯಾಗಿ ಹೇಳು-ಮೇಲಾರಕ್ಕೆ ಉಪ್ಪು ಸೊರುಗಿದ್ದು ನೀನೇ ಅಲ್ಲದೊ?”

ಕಿಟ್ಟಪ್ಪಣ್ಣ-“ಅಪ್ಪು ಶಿವಣ್ಣ,ಎನ್ನ ಕೈಂದಲೇ ಹೀಂಗೆ ಬಂದೋತು.ತಪ್ಪಾತು….”ಹೇಳಿ ಕ್ಷಮೆ ಕೇಳಿದ.
“ನಿನ್ನ ಕ್ಷಮಿಸೆಕ್ಕಾದ್ದು  ಆನಲ್ಲ.ತಿಮ್ಮಪ್ಪಣ್ಣನ ಹತ್ತರೆ ಕ್ಷಮೆ ಕೇಳು.ನೀನು ಮಾಡಿದ್ದು ಎಂತಾ ದೊಡ್ಡ ತಪ್ಪು ಹೇಳಿ ನಿನಗೆ ಗೊಂತಿದ್ದೊ?
ನಾವು ಪೈಸೆ ತೆಕ್ಕೊಂಡು ಕೆಲಸ ಮಾಡುವಾಗ ಮನೆಯವರ ಮರ್ಯಾದೆ ಹೋಪ ಹಾಂಗೆ ಮಾಡುಲಕ್ಕೊ?
ನಿನಗೆ ಎನ್ನ ಮೇಲೆ ಕೋಪ ಇಲ್ಲೆ ಹೇಳಿ ಎನಗೆ ಗೊಂತಿದ್ದು. ನಾವು ಎಷ್ಟೋ ವರ್ಶಂದ ಒಟ್ಟಿಂಗೆ ಕೆಲಸ ಮಾಡಿದವರು.ಆದರೂದೆ ತಿಮ್ಮಪ್ಪಣ್ಣನ ಮೇಗಾಣ ಕೋಪಲ್ಲಿ ನೀನು ಎನ್ನ ಹೊಟ್ಟೆಯ ಮೇಲೂ ಬಡಿವ ಹಾಂಗೆ ಮಾಡಿದೆ ಅನ್ನೆ?”

ಕಿಟ್ಟಪ್ಪಣ್ಣ ನಾಚಿಕೆ, ದುಃಖ ಎಲ್ಲಾ ಸೇರಿ ಶಿವಣ್ಣನ ಕೈ ಹಿಡ್ಕೊಂಡ.-“ಆತು,ಆನು ಒಪ್ಪಿಗೊಳ್ತೆ…..”ಹೇಳಿದ.

* * *

ಈ ವಿಷಯ ತಿಮ್ಮಪ್ಪ ಭಟ್ರಿಂಗೆ ಗೊಂತಾದ್ದು ಹೊತ್ತೋಪಗ.
ಎಲ್ಲಾ ಸರಿ ಮಾಡಿ ಮರ್ಯಾದೆ ಒಳಿಶಿದ ಶಿವಣ್ಣಂಗೆ ವೇಷ್ಟಿ ಕೊಟ್ಟು ಸಮ್ಮಾನವನ್ನೇ ಮಾಡಿದವು.
ಕಿಟ್ಟಪ್ಪಣ್ಣ ಕ್ಷಮೆ ಕೇಳಿ ಅಪ್ಪಗ-“ಒಳ್ಳೆ ದಿನ ನಿನ್ನ ರಾಗದ್ವೇಷ ತೋರಿಸಿದೆಯನ್ನೆ? ಶುಭ ಕಾರ್ಯ ಮಾಡಿ, ಇಂದು ಆನು ಎಂತ ಕೊಳಕ್ಕು ಮಾತಾಡೆ. ನಿನಗೆ ದೇವರು ಒಳ್ಳೆ ಬುದ್ಧಿ ಕೊಡಲಿ.ಇನ್ನು ನೀನು ಎನ್ನಲ್ಲಿಗೆ ಬರೆಕ್ಕಾದ ಅಗತ್ಯ ಇಲ್ಲೆ”ಹೇಳಿದವು.

ಕಿಟ್ಟಪ್ಪಣ್ಣ ತಲೆ ತಗ್ಗಿಸಿಕೊಂಡು ಜಾಗೆ ಖಾಲಿ ಮಾಡಿದ!

*~*~*

ಸೂ: ಇದೊಂದು ಸತ್ಯ ಘಟನೆಂದ ಪ್ರೇರಿತ ಕತೆ. ಪಾತ್ರಂಗೊ ಕಾಲ್ಪನಿಕ.

15 thoughts on “ಉಪಾಯ

  1. ಲಾಯ್ಕಾಯ್ದು. ಹೀ೦ಗಿಪ್ಪ ಸುಮಾರು ಕತೆ ಎನ್ನ ಅಪ್ಪನ ಡೇಟಾಬೇಸಿಲಿ ಇದ್ದು 🙂

    1. ಮತ್ತೆ೦ತಕೆ ತಡ ಗಿರಿಭಾವ? ಬರಳಿ ಬೈಲಿ೦ಗೂ..ಎ೦ಗೊಗೆ ಒಳ್ಳೆ ಕತೆ ಕೇಳುವ,ಓದುವ ಆಸೆ.

      1. ಓ, ಧಾರಾಳ. ಈಗ ಆನು ಇಪ್ಪದು ಬೆ೦ಗ್ಳೂರಿಲಿ. ಅಪ್ಪ ಮನೆಲಿ. ಆದಷ್ತು ಬೇಗ ಎನ್ನ ನೆ೦ಪಿಲಿ ಇಪ್ಪದರ ಬರತ್ತೆ. ಒಳುದ್ದು ಅಪ್ಪನತ್ರೆ೦ದ ಬರೆಕಷ್ತೆ. (ಅಪ್ಪ೦ಗೆ ಕ೦ಪೀಟ್ರಿಲಿ ಬರವಲೆಡಿಯ :-), ಕೈಲಿ ಬರದುಕೊಡ್ಳೆ ಹೇಳಿರೆ “ಎನಗೆಡಿಯ” ಹೇಳುಗು 🙂 ). ಅಪ್ಪನತ್ರೆ ಹೀ೦ಗೆ ಮಾತಾಡುವಗ ರೆಕಾರ್ಡು ಮಾಡಿ, ಅದರ ಆನು ಬರೆಯೆಕ್ಕು. ಕೆಲಸ ಸುಮಾರು ಇದ್ದು. ಆದರೂ ಬರತ್ತೆ.

  2. ಎಲ್ಲರಿಂಗೂ ಧನ್ಯವಾದ.
    ಅಡುಗೆ ಮಾಡುತ್ತವರ ಕಷ್ಟವ ಕೆಲವು ಸರ್ತಿ ತಿಳಿಯದ್ದೆ ನೆಗೆ ಮಾಡುದು ನಡೆತ್ತು.ದಿನಾ ಅಡುಗೆ ಮಾಡುವಾಗ ತಪ್ಪಿ ಹೆಚ್ಚು ಕಮ್ಮಿ ಅಪ್ಪದು ಸಹಜ ಹೇಳಿ ನಾವು ಆವಾಗ ಆಲೋಚಿಸೆಕ್ಕು.

  3. ಅಡಿಗೆಯೋರು ಒರಕ್ಕು ಕೆಟ್ಟು ಮಾಡುವ ಅಡಿಗೆ ರಜ ಲಾಯೆಕಾಗದ್ದರೂ ನಾವು ಚಿರಿಪಿರಿ ಮಾಡ್ತಲ್ಲದಾ? ಆನು ಈ ಬಗ್ಗೆ ಆಲೋಚನೆಯೇ ಮಾಡಿತ್ತಿದ್ದಿಲ್ಲೆ. ಒಳ್ಳೆ ಒಂದು ಜ್ಞಾನೋದಯ ಆತು.

  4. ಕತೆ ಲಾಯಿಕ ಆಯಿದು.
    ಒಬ್ಬನ ಮೇಗಿನ ನಂಜಿನ ತೀರ್ಸಲೆ ಹೋಗಿ ಅಲ್ಲಿಯಾಣ ಮನೆ ಯೆಜಮಾನನ ಸಂಬಂಧವನ್ನೇ ಕಳಕ್ಕೊಳೆಕ್ಕಾಗಿ ಬಂತು. ಹೀಂಗಿಪ್ಪವು ಇದ್ದವು ಹೇಳಿ ಗೊಂತಾದ್ರೆ ಇನ್ನೊಂದು ಸರ್ತಿ ಅವರ ಯಾವದೇ ಕೆಲಸಕ್ಕೆ ದೆನುಗೊಳವು

  5. ಸುರುವಿಂಗೆ ಅಡುಗೆಕೊಟ್ಟಗೆಯ ವರ್ಣನೆ ಲಾಯಕಾಯಿದು. ಕಿಟ್ಟಪ್ಪಣ್ಣನ ಹಾಂಗ್ರುತ್ತ ನಂಜಿನವು ಎಡೆ ಎಡೆಲಿ ಇರ್ತವು. ಆರಿಂಗುದೆ ಹಾಂಗಿರ್ತ ಮನಸ್ಸಿಪ್ಪಲಾಗಪ್ಪ. ಶಿವಣ್ಣನ ಅನುಭವ ನಿಜವಾಗಿಯು ಅದ್ಭುತ. ಒಗ್ಗರಣೆ ಹಾಕುವಾಗ ಬಂದ ಶಬ್ದಲ್ಲಿಯೇ ಉಪ್ಪು ಹೆಚ್ಚಾಯಿದು ಹೇಳಿ ಕಂಡು ಹಿಡುದ. ಅವ ಮಾಡಿದ ಉಪಾಯವೂ ಲಾಯಕಿತ್ತು. ಕಥೆ ನೈಜವಾಗಿ ಬಯಿಂದು. ಗೋಪಾಲಣ್ಣಂಗೆ ಮತ್ತೊಂದು ಉತ್ತಮ ಕಥೆ ಕೊಟ್ಟದಕ್ಕೆ ಧನ್ಯವಾದಂಗೊ.

  6. ಗೋಪಾಲಣ್ಣ,
    ಕಥೆಯ ಒಳ್ಳೆಯ ನೀತಿಯೊಟ್ಟಿ೦ಗೆ ಮೇಲಾರದ ಉಪ್ಪಿನ ಅ೦ಶವ ಕಮ್ಮಿ ಮಾಡುವ ವಿಧಾನವೂ ಗೊ೦ತಾತದ.ಕಿಟ್ಟಪ್ಪಣ್ಣನ ನೋಡಿ ಸಮಾಜಲ್ಲಿ ಹೇ೦ಗಿಪ್ಪ ಜೆನ೦ಗ ಎಲ್ಲ ಇರ್ತವಪ್ಪಾ ಹೇಳಿ ಕ೦ಡತ್ತು.
    ಭಾರೀ ಲಾಯ್ಕಾಯಿದು.

  7. ONDU JAMBARALLI JANA LEKKANDA HECHAAYDU HELI MANE YEJAMAANANE HOLIGE KERISHIGE SEEME ENNE MELLANGE PARIMALA BAPPANGE ERADANADA ,MATTE MAADIDA HOLIGE BADUSUVA HAANGE ILLLLE HELI BADUSADDE KOODANDA,
    SATYA GHATANE .

  8. ನಿಜಕ್ಕೂ ಬಾಳೆ ದಂಡು ಉಪ್ಪಿನ ಎಳಕ್ಕೊಳ್ತಾ?… ಎನಗೆ ಗೊಂತಿಲ್ಲೆ.. ಹಾಂಗೆ ಕೇಳಿದ್ದು…

    1. ಅಪ್ಪು.ಬೇಯಿಸಿದ ಬಟಾಟೆಯೂ ಹೀಂಗೆ ಉಪ್ಪು ಎಳಕ್ಕೋಳುತ್ತು.ಅದು ತರಕಾರಿಗಳ ಸಾಮಾನ್ಯ ಗುಣ. ಒಂದೊಂದಕ್ಕೆ ಹೆಚ್ಚು,ಒಂದೊಂದಕ್ಕೆ ಕಮ್ಮಿ ಇಕ್ಕು.
      ಯಾವುದಕ್ಕೆ ಯಾವುದು ಆವುತ್ತೊ ಆ ಉಪಾಯ ಮಾಡೆಕ್ಕು.
      ಇಲ್ಲಿ ಮೇಲಾರದ ರುಚಿ ,ಸ್ವಾದ ಹಾಳಾಗದ್ದೆ ಇಪ್ಪಲೆ ಶಿವಣ್ಣ ಹೀಂಗೆ ಮಾಡಿದ.

  9. ಒಳ್ಳೇದಾಯಿದು ಗೋಪಾಲಣ್ಣ, ಒಳ್ಳೇ ಕತೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×