Oppanna.com

ಹಾಸ್ಯ ತರಂಗ

ಬರದೋರು :   ಅರ್ತಿಕಜೆ ಮಾವ°    on   04/09/2014    6 ಒಪ್ಪಂಗೊ

ರಿಲೇಕ್ಸಿಂಗ್ :

ಸಿಖ್ಖ್ ಜನಾಂಗಕ್ಕೆ ಸೇರಿದ ಒಬ್ಬ° ಅರಾಮಲ್ಲಿ ಕೂದುಗೊಂಡಿತ್ತಿದ್ದ (ರಿಲೇಕ್ಸಿಂಗ್).

ಅಷ್ಟೊತ್ತಿಂಗೆ ಅಲ್ಲಿ ಇತ್ತಿದ್ದ ಬೇರೊಬ್ಬ° ಇಂಗ್ಲೀಷು ಮಾತಾಡುತ್ತ ಅವನ ಕಂಡು ಹತ್ತರೆ ಹೋಗಿ ಕೇಳಿದಾ – ಆರ್ ಯು ರಿಲೇಕ್ಸಿಂಗ್?

ಕೂಡ್ಳೆ ಈ ಸಿಖ್ಖ್ ಹೇಳಿದ° – “ನೋ ನೋ, ಐ ಆಮ್ ಜೈಲ್ ಸಿಂಗ್” 😀

~hasya taranga

 

ಅತ್ತೆ ಸೊಸೆ ಲಡಾಯಿ :

ಆ ಕಾಲ ಈ ಕಾಲ ಹೇಳಿ ಇಲ್ಲೆ. ಅತ್ತೆ ಸೊಸೆಯರೊಳ ಲಡಾಯಿ ಇಪ್ಪದೆ. ಅದು ಸರ್ವ ಸಾಮಾನ್ಯ. ಲಡಾಯಿ ಇಲ್ಲದ್ದರೆ ಅವು ಅತ್ತೆ ಸೊಸೆ ಅಪ್ಪದು ಹೇಂಗೆ?!

ಹಾಂಗೆ ಒಂದು ಮನೆಲಿ ಆತ್ತೆಗೂ ಸೊಸಗೂ ದಿನನಿತ್ಯ ಲಡಾಯಿ ಆಗಿಯೊಂಡಿತ್ತಿದ್ದು. ಒಂದು ದಿನ ಲಡಾಯಿ ತಾರಕಕ್ಕೇರಿತ್ತು. ಅದರ ನೋಡ್ಳೆ ಎಡಿಯದ್ದೆ ಅತ್ತೆ ಹತ್ತರೆ ಮನೆ ಎಜಮಾನ°, ಅದರ ಮಗ° – “ಎಂತಮ್ಮ ನಿನಗೆ ರಜವೂ ಗೊಂತಾವುತ್ತಿಲ್ಲೆಯೊ? ಅದು ಈ ಮನಗೆ ಮನ್ನೆ ಮನ್ನೆ ಬಂದದು. ನಿನಗೆ ಪ್ರಾಯವೂ ಆತು. ಹೋಗಿ ಹೋಗಿ ಅದರತ್ತರೆ ಎಂತಗೆ ಲಡಾಯಿ ಮಾಡ್ತೆ? ರಜ ಬಿಟ್ಟು ಕೊಟ್ಟು ಹೊಂದಿಯೊಂಡು ಹೋಪಲಾಗದೊ?

ಅಬ್ಬಗೆ ಇದರ ಕೇಳಿಯಪ್ಪಗ ಪಿತ್ತ ನೆತ್ತಿಗೇರಿತ್ತು. ಅದು ಕೋಪಲ್ಲಿ – “ಆನು ನಿನ್ನ ಹೊತ್ತು ಹೆತ್ತು ಸಾಂಕಿ ದೊಡ್ಡ ಮಾಡಿದ ಅಬ್ಬೆ. ಅದು ನಿನ್ನ ಹೆಂಡತ್ತಿ. ಮನ್ನೆ ಮನ್ನೆ ಬೇರೆ ಮನೆಂದ ಬಂದದು. ನೀನು ಹೆತ್ತ ಅಬ್ಬೆಯ ಪಕ್ಷ ವಹಿಸದ್ದೆ ಅದರ ಪಕ್ಷ ವಹಿಸಿ ಎನಗೆ ಉಪದೇಶ ಮಾಡ್ತೆನ್ನೆ! ನಿನಗೆ ಬುದ್ಧಿ ಕೆಟ್ಟಿದೋ?! ಅದರ ಪೆರಟಿಂಗೆ ಎನ್ನ ಪೆರಟು. ಅದು ಹಾಂಗೆ ಮಾತಾಡಿರೆ ಆನು ಸುಮ್ಮನೆ ಕೂರೆ”

ಮಗ° ಬಾಯಿ ಮುಚ್ಚಿದ°. ಮತ್ತೊಂದರಿ ಲಡಾಯಿ ಅಪ್ಪಗ ಅವ° ಅಬ್ಬೆಯ ಪಕ್ಷ ವಹಿಸಿದ°. – “ನೋಡು ಅಬ್ಬಗೆ ಪ್ರಾಯ ಆತು. ಹೊಂದಿಗೊಂಬಲೆ ಕಷ್ಟ. ನೀನೇ ಅವಕ್ಕೆ ಹೊಂದಿಗೊಂಡು ಹೋಯೆಕ್ಕು. ಎಷ್ಟಾದರೂ ಹಿರಿಯರಲ್ಲದೊ?!”

ಹೆಂಡತ್ತಿಗೆ ಎಲ್ಲಿಲ್ಲದ್ದ ಕೋಪ ಬಂತು. “ನಿಂಗೊ ಅಬ್ಬೆ ಮಗ° ಒಂದೇ. ಆನು ಹೆರಾಂದ ಬಂದೋಳು. ಹೆರವೆ. ಆನು ನಿಂಗಳ ಹೆಂಡತ್ತಿ, ನಿಂಗೊ ಎನ್ನ ಪಕ್ಷ ವಹಿಸದ್ದೆ ಅಬ್ಬಗೆ ವಕಾಲತ್ತು ಮಾಡ್ತೀರನ್ನೆ!. ನಿಂಗೊಗೆ ರಜಾರುದೆ ಬುದ್ಧಿ ಇದ್ದೋ?! ಎನಗೆ ನಿಂಗಳ ಬಿಟ್ಟರೆ ಆರು ಇದ್ದವು ಹೇಳಿ?! – ಹೇಳಿ ಹೇಳಿತ್ತು.

ಮತ್ತೆ ಅವ° ಉಸಿಲೆತ್ತಿದ್ದಾ°ಯಿಲ್ಲೆ.

ಮತ್ತೊಂದಾರಿ ಅತ್ತೆ ಸೊಸೆಯರೊಳ ಜೋರಿಂಗೆ ಲಡಾಯಿ ಆತು. ಅವ° ಯೋಚನೆ ಮಾಡಿದ. ಆರ ಪಕ್ಷ ನಿಂದರೂ ಕಷ್ಟ. ಅದಕ್ಕೆ ಸುಮ್ಮನೆ ಇಪ್ಪದೇ ಒಳ್ಳೆದು ಹೇಳಿ ತಳಿಯದ್ದೆ ಕೂದ°.

ಅದರ ನೋಡಿದ ಅತ್ತೆ ಸೊಸೆ ಇಬ್ರೂ ಅವನತ್ತರೆ ಬಂದು “ಎಂಗೊ ಇಲ್ಲಿ ಲಡಾಯಿ ಮಾಡ್ತಾ ಇದ್ದೆಯೊ°. ನೀನು ಆರ ಪಕ್ಷವೂ ವಹಿಸದ್ದೆ ಸುಮ್ಮನೆ ಕೂಯಿದೆ. ನೀನು ಹೀಂಗೆ ಮಾಡುವದು ಸರಿಯಲ್ಲ. ಆರ ಪಕ್ಷ ಆದರೂ ವಹುಸು. ಸುಮ್ಮನೆ ಇಪ್ಪಲೆ ಹೇಂಗೆ ಮನಸ್ಸ್ ಬತ್ತು ನಿನಗೆ?” – ಹೇಳಿ ಜೋರು ಮಾಡ್ಳೆ ಸುರುಮಾಡಿದವು. ಅವ° ಎಂತ ಮಾಡೆಕ್ಕು?! ನಿಂಗಳೇ ಹೇಳಿ. 😀

~

ಮಾಲೆ ಹಾಕು ಕೂಸೆ :

ಆಚಮನೆ ಈಚಣ್ಣನ ಮಗಳು ಕಾಮಾಕ್ಷಿಗೆ ಮದುವೆ ನಿಶ್ಚಯ ಆತು.

ಕೂಸು ಕಾಂಬಲೆ ರಜ ಕಪ್ಪು. ಸಪೂರ ಸಪೂರ. ಚೆಂದ ಇದ್ದು.

ಆದರೂ ಆರೂ ಒಪ್ಪಿತ್ತಿದ್ದವಿಲ್ಲೆ. ಕಡೇಂಗೆ ಹತ್ತರಾಣ ಊರಿನ ಶಂಕರ ಭಟ್ಟರ ಮಗ° ನೋಡ್ಳೆ ಬಂದ°.

ಅವ° ತುಂಬ ತೋರ, ದೊಡ್ಡ ಶರೀರ. ಕಪ್ಪು ಬಣ್ಣ,

ಶಂಕರ ಭಟ್ರಿಂಗೆ ಪೈಸಕ್ಕೆ ತೊಂದರೆ ಇಲ್ಲೆ. ಅಡಕ್ಕೆ ತೋಟ, ತೆಂಗಿನ ತೋಟ, ಗೆದ್ದೆ, ರಬ್ಬರು ತೋಟ ಎಲ್ಲ ಇಪ್ಪವ°. ಗಟ್ಟಿ ಕುಳವಾರು.

ಹಾಂಗೆ ಕೂಸಿಂಗೆ ಒಪ್ಪಿಗೆ ಆಗದ್ದರೂ ಮದುವೆ ನಿಶ್ಚಯ ಅತು. ಎಲ್ಲೋರ ಒತ್ತಾಯಕ್ಕೆ ಕೂಸು ತಲೆ ಆಡುಸಿತ್ತು.

ಮದುವೆ ಮಂಟಪಲ್ಲಿ ಎಂತಾತು ಗೊಂತಿದ್ದೋ?

ಮದುಮಕ್ಕಳ ಎದುರೆದುರು ನಿಲ್ಲುಸಿದವು, ತೆರೆಸೀರೆ ಹಿಡುದವು. ಭಟ್ರು ಮಂತ್ರ ಹೇಳಿದವು. ತೆರೆಸೀರೆ ಸರುದತ್ತು. ಭಟ್ರು ಕೂಸಿನತ್ರೆ ಮಾಲೆ ಹಾಕು ಹೇಳಿದವು.

ಅದು ಮಾಲೆ ಹಾಕಿದ್ದೇ ಇಲ್ಲೆ. ಹಾಂಗೇ ಹಿಡುಕ್ಕೊಂಡು ನಿಂದತ್ತು. ಜೆವ್ವನಿಗ ಪುರೋಹಿತ ಭಟ್ರು ರಜ ಜೋರಿಂಗೇ ಮಾಲೆ ಹಾಕು ಕೂಸೇ ಹೇಳಿ ಹೇಳಿದವು.

ಕೂಸು ಮಾಲೆ ನೆಗ್ಗಿ ಭಟ್ರ ಕೊರಳಿಂಗೇ ಹಾಕಿತ್ತು!!.

ಭಟ್ರಿಂಗೆ ಮದುವೆ ಆಗಿತ್ತಿಲ್ಲೆ. ಬೆಳಿಬೆಳಿಯಾಗಿ ಚೆಂದ ಇತ್ತಿದ್ದವು.

ಆಚ ಮದಿಮ್ಮಾಯನ ಸ್ಥಿತಿ ಈಗ ಎಂತ ಆತು ಗೊಂತಿಲ್ಲೆ! 😀

~

ನಂಬಿ ಸೋಮಯಾಜಿ :

ಉತ್ತರ ಕೇರಳಲ್ಲಿ ಒಬ್ಬನ ಅಡ್ಡ ಹೆಸರು ನಂಬಿ ಹೇಳಿ ಇತ್ತು. ಎಲ್ಲೋರು ಅವನ ನಂಬಿ, ನಂಬಿ ಹೇಳಿ ತಮಾಷೆ ಮಾಡಿಗೊಂಡಿತ್ತಿದ್ದವು.

ನನ್ನ ನಂಬಿ, ನಮ್ಮ ನಂಬಿ ಹೇಳಿಗೊಂಡಿತ್ತಿದ್ದವು.

ಅದರಿಂದ ಅವಂಗೆ ತುಂಬ ಬೇಜಾರ ಆಗಿಯೊಂಡಿತ್ತಿದ್ದು.

ಈ ಹೆಸರಿನ ಬದಲಾವಣೆ ಮಾಡಿ ಒಳ್ಳೆ ಹೆಸರು ಮಡಿಕ್ಕೊಳ್ಳೆಕು. ಅದಕ್ಕೆ ಎಂತ ಮಾಡುದು ಹೇಳಿ ಕೆಲವು ಆಪ್ತರ ಹತ್ರೆ ಕೇಳಿದ°.

ಅಷ್ಟಪ್ಪಗ ಆರೋ ಹಿರಿಯರು ಹೇಳಿದವು – “ಸೋಮಯಾಗ ಮಾಡಿರೆ ಸೋಮಯಾಜಿ ಹೇಳಿ ಹೆಸರು ಬತ್ತು. ಹಾಂಗಾಗಿ ಸೋಮಯಾಗ ಮಾಡುದು ಒಳ್ಳೆದು” ಹೇಳಿ.

ಇದು ಒಳ್ಳೆ ಉಪಾಯ ಹೇಳಿ ಕಂಡತ್ತು ಆ ನಂಬಿಗೆ.

ಆದರೆ ಸೋಮಯಾಗ ಮಾಡೆಕ್ಕಾದರೆ ಸಾವಿರಾರು ರುಪಾಯಿ ಖರ್ಚಿ ಮಾಡೆಕ್ಕನ್ನೆ. ಬೇರೆ ಉಪಾಯ ಕಾಣದ್ದೆ ಅವ° ಅಲ್ಲಿಂದ ಇಲ್ಲಿಂದ ಸಾಲ ಮಾಡಿ ಬಹಳಷ್ಟು ಖರ್ಚು ಮಾಡಿ ಸೋಮಯಾಗ ಮಾಡ್ಸಿದ.

ಅಂದಿಂದ ಅವನ ಎಲ್ಲೋರುದೆ ಸೋಮಯಾಜಿ ಹೇಳಿ ದೆನಿಗೊಂಬಲೆ ಶುರುಮಾಡಿದವು. ಅವಂಗೂ ಖುಷಿಯೋ ಖುಷಿ.

ಅಂತೂ ನಂಬಿ ಹೇಳುವ ಹೆಸರು ಹೋತನ್ನೆ ಹೇದು ಸಮಾಧಾನವೂ ಆತು.

ಕೆಲವು ಸಮಯ ಕಳಾತು.

ಒಂದು ದಿನ ಹತ್ತರಾಣ ಒಬ್ಬನ ಮನೆಲಿ ಭಾರೀ ದೊಡ್ಡ ಜೆಂಬ್ರ ಇದ್ದತ್ತು. ಅದಕ್ಕೆ ಈ ಸೋಮಯಾಜಿ ಹೋಗಿತ್ತಿದ್ದ°

ಅಲ್ಲಿಗೆ ಕೆಲವು ಬೇರೆ ಸೋಮಯಾಜಿಗಳೂ ಬಂದಿತ್ತಿದ್ದವು.

ಆರೋ – “ಆ ಸೋಮಯಾಜಿಯ ಬಪ್ಪಲೆ ಹೇಳಿ“ – ಹೇಳಿ ಹೇಳಿದವು.

ಆದರೆ ಏವ ಸೋಮಯಾಜಿಯ ದೆನಿಗೇಳೆಕ್ಕು ಹೇಳಿ ಗೊಂತಾಯಿದಿಲ್ಲೆ ಆ ಜೆನಕ್ಕೆ.

“ಆ ನಂಬಿ ಸೋಮಯಾಜಿಯ ದೆನಿಗೊಳಿ” – ಹೇಳಿದವು

ಅಂದಿಂದ ಅವಂಗೆ ‘ನಂಬಿ ಸೋಮಯಾಜಿ’ ಹೇಳಿ ಹೆಸರಾತು. ಕಾಶಿಗೆ ಹೋದರೂ ಶನೀಶ್ವರ ಬಿಡುತ್ತನೋ !! 😀

~

ನಾಮದ ಮಹಿಮೆ :

ಒಬ್ಬ° ಹರಿದಾಸ ‘ನಾಮದ ಮಹಿಮೆ’ ಹೇಳುವ ವಿಷಯಲ್ಲಿ ಹರಿಕಥೆ ಮಾಡಿಗೊಂಡು ದೇವರ ನಾಮದ (ಹೆಸರಿನ) ಮಹಿಮೆ ಎಷ್ಟು ಹೇಳಿ ವಿವರಿಸಿದ°.

ಹಾಂಗೆಯೇ ಮೋರೆಲಿ ಹಾಕುವ ಮೂರು ನಾಮಕ್ಕೂ ಬಹಳ ಶಕ್ತಿ ಇದ್ದು. ನಾವೇ ನಾಮ ಹಾಕಿಗೊಂಬಲಕ್ಕು. ಬೇರೆಯವಕ್ಕೆ ನಾಮ ಹಾಕಲಕ್ಕು. ಉದಿಯಪ್ಪಗ ಎದ್ದ ಹಾಂಗೆ ಮೋರೆಲಿ ನಾಮ ಹಾಕಿದವರ ನೋಡಿರೆ ಬಹಳ ಒಳ್ಳೆದು. ನಮ್ಮ ಅಂದ್ರಾಣ ಕಾರ್ಯ ಕೈಗೂಡುತ್ತು. ಅದರಿಂದ ಪುಣ್ಯ ಬತ್ತು ಹೇಳಿ ಹೇಳಿದ.

ಆ ಹರಿಕಥೆ ಕೇಳ್ಳೆ ಬಂದ ಒಬ್ಬನ ಮೇಲೆ ಹರಿದಾಸ° ಹೇಳಿದ ಈ ವಿಚಾರ ತುಂಬಾ ಪ್ರಭಾವ ಬೀರಿತ್ತು.

ಅವನ ಮನೆಯ ಎದುರು ಮೂರು ಜೆನ ಅಣ್ಣ ತಮ್ಮಂದ್ರು ಕುಂಬಾರಂಗೊ ಇತ್ತಿದ್ದವು. ವಿಷ್ಣುವಿನ ಭಕ್ತರಾದ ಅವು ದಿನವೂ ಮೋರೆಲಿ ಮೂರು ನಾಮ ಹಾಕಿಯೊಂಡಿತ್ತಿದ್ದವು.

ಹರಿಕತೆ ಕೇಳಿ ಬಂದ ಆಸಾಮಿ ಮರದಿನ ಉದಿಯಪ್ಪಗ ಎದುರು ಮನೆಯವರ ಮೂರು ನಾಮಂಗಳ ನೋಡೆಕ್ಕು ಹೇಳಿ ಗ್ರೇಶಿದ°.

ಆದರೆ ಅಂದು ಏಳುವಗ ತಡವಾತು. ಕುಂಬಾರಂಗೊ ಮದಲೇ ಎದ್ದು ಅಳಗೆ ಮಾಡ್ಳೆ ಬೇಕಾದ ಆವೆಮಣ್ಣು ತಪ್ಪಲೆ ಹೇಳಿ ಹೋಗಿತ್ತಿದ್ದವು.

ಇನ್ನೆಂತ ಮಾಡುದು ಹೇಳಿ ಅವ° ಕುಂಬಾರಂಗೊ ಮಣ್ಣು ತೆಗವಲ್ಲಿಗೆ ಹೋದ°.

ಕುಂಬಾರಂಗೊ ಅಂದು ಮಣ್ಣು ತೆಗವಗ ಅವಕ್ಕೆ ನಿಧಿ ಸಿಕ್ಕಿತ್ತು.

ಮೂರು ಕೊಡಪ್ಪಾನಲ್ಲಿ ಚಿನ್ನ.!

ಅವು ಚಿನ್ನದ ಕೊಡ ಹಿಡುಕ್ಕೊಂಡಿಪ್ಪಗ ನಾಮ ನೋಡ್ಳೆ ಬಂದ ಅವ ಕುಂಬಾರಂಗಳ ಮೋರೆಯನ್ನೇ ನೋಡಿದ°.

ಕುಂಬಾರಂಗೊ ಹೆದರಿ, ‘ಕಂಡತ್ತೋ’  ಹೇಳಿ ಕೇಳಿದವು.

ಇವ° ನೋಡಿದ್ದು ನಾಮಂಗಳ., ಕಂಡತ್ತು ಹೇಳಿದ°

ಅಯ್ಯನಮಂಡೇ! ನೋಡಿ ಬಿಟ್ಟ°ನ್ನೇ!! , ಕುಂಬಾರಂಗೊ ಕೇಳಿದವು – ‘ಮೂರೂ ಕಂಡತ್ತೊ”?!

ಅವ ಮೂರು ನಾಮಂಗಳ ನೋಡಿದ್ದ°. ಹಾಂಗೆ “ಮೂರೂ ಕಂಡತ್ತು” ಹೇಳಿದ°.

ಎಲ ಕತೆಯೆ!, ಇವ° ಬೇರೆಯವರ ಹತ್ತರೆ ಹೇಳಿರೆ ತೊಂದರೆ ಅಕ್ಕು, ಹಾಂಗಾಗಿ ಮೂರು ಜೆನವೂ ರಜ ರಜ ಚಿನ್ನವ ಅವಂಗೆ ಕೊಟ್ಟು ಆರ ಹತ್ರೆಯೂ ಹೇಳೆಡ ಹೇಳಿದವು.

ಅವ° ಆತು ಹೇಳಿ ಒಪ್ಪಿದ°.

ನಾಮದ ಮಹಿಮೆ ನೋಡಿ ! ಮೋರೆಲಿಪ್ಪ ಮೂರು ನಾಮವ ನೋಡಿದ್ದರಿಂದಲೇ ಅವಂಗೆ ಚಿನ್ನವೇ ಸಿಕ್ಕಿತ್ತು. ದೇವರ ನಾಮಸ್ಮರಣೆ ಮಾಡಿದ್ದರೆ ಅವಂಗೆ ಇನ್ನು ಎಂತ ಎಲ್ಲ ಸಿಕ್ಕುತೀತೋ! 😀

~

ನೆಲ್ಲಿಕ್ಕಾಯಿ ಹಲ್ವ :

ಆನು ಪುತ್ತೂರು ಫಿಲೋಮಿನಾ ಕಾಲೇಜಿಲಿ ಲೆಕ್ಚರರ ಆಗಿಪ್ಪಗ ಕಾಲೇಜಿಲ್ಲಿ ಭಾಷಣ ಮಾಡ್ಲೆ ಹೇಳಿ ಹಾಸ್ಯ ಸಾಹಿತಿ ನಾಡಿಗೇರ ಕೃಷ್ಣರಾಯನ ಬರ್ಸಿತ್ತಿದ್ದೆ.

ಅವ° ಹೇಳಿದ ಒಂದು ಹಾಸ್ಯ ಪ್ರಸಂಗ ನೆಂಪಾವುತ್ತು. ಅದು ಮರದೇ ಹೋವುತ್ತಿಲ್ಲೆ.

ಅವ° ಹೇಳಿದ್ದು ಬೇರೆಂತದೂ ಅಲ್ಲ. ನೆಲ್ಲಿಕ್ಕಾಯಿ ಹಲ್ವ ಮಾಡುವ ವಿಧಾನ. ಅವ° ಹೇಳಿದ ವಿಧಾನವ ಎನಗೆ ನೆಂಪಿದ್ದ ಹಾಂಗೆ ಹೇಳುತ್ತೆ..

ನಿಂಬೆ ಹಣ್ಣಿನ ಗಾತ್ರದ ಹತ್ತು ನೆಲ್ಲಿಕ್ಕಾಯಿಗಳ ತೊಳದು ತುರಿಮಣೆಲಿ ಲಾಯಕಲ್ಲಿ ಸಣ್ಣಕೆ ತುರಿಯೆಕು.

ತುರಿಯ ಒಂದು ತಟ್ಟೆಲಿ ಹಾಕಿ ಮಡಿಕ್ಕೊಳೆಕ್ಕು.

ಮತ್ತೆ ಬೇಕಪ್ಪ ವಸ್ತುಗೊ –

ಮೂರು ಕಪ್ ಗೋದಿ ಹುಡಿ, ಆರು ಕಪ್ ಸಕ್ಕರೆ, ಎರಡು ಕಪ್ ತುಪ್ಪ, ಅರ್ಧ ಚಮಚ ಕೇಸರಿ ಅಥವಾ ಕೇಸರಿ ಬಣ್ಣ, ಒಂದು ಚಮಚ ಏಲಕ್ಕಿ ಹೊಡಿ, ಮೂರು ಚಮಚ ಬೀಜದ ತುಂಡುಗೊ, ಎರಡು ಚಮಚ ಹಾಲು, ಆರು ಚಮಚ ನಿಂಬೆಹುಳಿ ಎಸರು.

ಮಾಡುವ ವಿಧಾನ – ಮುಖ್ಯವಾಗಿ ನೆಲ್ಲಿಕ್ಕಾಯಿ ತುರಿಯ ಹತ್ತರೆ ಮಡಿಕ್ಕೊಳ್ಳೆಕ್ಕು.

ಗೋದಿಹೊಡಿಯ ಮೂರು ಲೀಟರ್ ನೀರು ಹಾಕಿ ಲಾಯಕಲ್ಲಿ ಗಟ್ಟಿಕಟ್ಟದ್ದ ಹಾಂಗೆ ಕಲಸಿ ಅದರ ತೆಂಗಿನಕಾಯಿ ಹಾಲು ಹಿಂಡುವ ವಸ್ತ್ರಲ್ಲಿ ಅರಿಶಿ ಸ್ಟೌಲಿ ಮಡುಗಿದ ಬಾಣಲೆಲಿ / ಉರುಳಿಲಿ ಹಾಕಿ ಅದಕ್ಕೆ ಎರಡುವರೆ ಲೀಟರು ನೀರು ಹಾಕಿ ತೊಳಸೆಕು ಮತ್ತೆ ಸಕ್ಕರೆ ತುಪ್ಪ ಹಾಕಿ ಕಾಸೆಕ್ಕು . ಹದಾ ಕಿಚ್ಚಿಲ್ಲಿ ತೊಳಸುತ್ತಾ ಇರೆಕು.

ನೆಲ್ಲಿಕ್ಕಾಯಿ ತುರಿಯ ಹತ್ತರೆ ಮಡಿಕ್ಕೊಳ್ಳೆಕು. ಹಲ್ವ ಗಟ್ಟಿಯಾಗ್ಯೊಂಡು ಬಂದಪ್ಪಗ ನಿಂಬೆಹುಳಿ ಎಸರು, ಹಾಲು ಸೇರಿಸಿ ತೊಳಸೆಕು. ಹೊಡಿಮಾಡಿದ ಕೇಸರಿ ಬಣ್ಣ, ಏಲಕ್ಕಿ ಹೊಡಿ, ಬೀಜದ ತುಂಡುಗಳ ಹಾಕಿ ಲಾಯಕಲ್ಲಿ ಮೊಗಚ್ಚೆಕು. ಹಲ್ವ ತಳಬಿಟ್ಟೊಂಡು ಬಂದಪ್ಪಗ ಚೂರು ಹಲ್ವವ ತೆಗದು ಒಂದು ತಟ್ಟಗೆ ಹಾಕಿ ಕೈಗೆ ಹಿಡಿತ್ತೋ ಹೇಳಿ ನೋಡೆಕು. ಕೈಗೆ ಹಿಡಿತ್ತಿಲ್ಲೆ ಹೇಳಿ ಆದರೆ ಹಲ್ವವ ಸ್ಟೌವಿಂದ ತೆಗದು ತುಪ್ಪ ಉದ್ದಿದ ತಟ್ಟಗೆ ಹಾಕಿ ಹರಡೆಕ್ಕು. ಮತ್ತೆ ನೆಲ್ಲಿಕ್ಕಾಯಿ ತುರಿಯ ಹಲ್ವದ ತಟ್ಟಗೆ ಹಾಕದ್ದೆ ಗಿಳಿಬಾಗಿಲಿಂದ ಹೆರಾಂಗೆ ಇಡುಕ್ಕೆಕು. ಹಲ್ವವ ತುಂಡುಮಾಡಿ ತಿನ್ನೆಕ್ಕು. 😀

~~~

ಹಾಸ್ಯ ತರಂಗ

ಸಂಗ್ರಹ : ಅರ್ತಿಕಜೆ ಮಾವ°

 

 

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

6 thoughts on “ಹಾಸ್ಯ ತರಂಗ

  1. ನೆಲ್ಲಿಕ್ಕಾಯಿ ಹಲ್ವದ ರೀತಿಲಿ ಬೇರೆ ಹಲ್ವವುದೇ ಮಾಡ್ಲೆ ಎಡಿಗೋ ? ಮಾಬಲ ಹುಳಿ ,ನಿಂಬೇಹುಳಿ ,ಹುಣಸೇ ಹುಳಿ ,ಹಾಂಗೇ ಸೌತೆ ,ಧಾರಳೆ, ತೊಂಡೆ ,ಬದನೆ ಮೊದಲಾದ ತರಕಾರಿ ಗಳ ದ್ದೂ ಮಾಡಲೆಡಿಗೋ ಎಂತ್ಸೋ !

    * ಹಾ….ಸ್ಯ ತರಂಗ ತರಂಗ ವಾಗಿ ನೆಗೆ ಉಕ್ಕುಸುವ ಹಾ ಹಾ… ಸ್ಯ

  2. ಒ೦ದರಿದೊ೦ದು ಬಾರೀ ಲಾಯಕಿದ್ದು!

  3. “ನೆಲ್ಲಿಕ್ಕಾಯಿ ಹಲ್ವ”
    ಛೆ! ನೆಲ್ಲಿ ಕಾಯಿ ಸುಮ್ಮನೆ ಹಾಳಾವುತ್ತನ್ನೇ. ಬದಲಿಂಗೆ ಆ ನೆಲ್ಲಿಕಾಯಿಯ ಈಚೊಡೆಲಿ ಅಂಗೈಲಿ ಮಡಿಕ್ಕೊಂಡು, ಆಚ ಕೈಲಿ ಹಲ್ವ ಮಾಡ್ತಿತ್ತರೆ ಹಲ್ವ ಮಾಡುವ ಕ್ರಮ “ಕರತಲಾಮಲಕ” (ಅಂಗೈ ನೆಲ್ಲಿ) ಹೇಳ್ಲಾವುತಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×