Oppanna.com

ಭೂತವ ಕಂಡಿದಿರಾ.???

ಬರದೋರು :   ಅಡ್ಕತ್ತಿಮಾರುಮಾವ°    on   22/06/2011    24 ಒಪ್ಪಂಗೊ

ನಿಂಗ ಆರದರೂ ಭೂತವ ಕಂಡಿದಿರಾ..? ಇಂತಹ ಅನುಭವ ಆಯಿದಾ ..?
ಆನು ನೋಡಿದ್ದೆ… ಎನಗೆ ಅಂತಹ ಅನುಭವ ಆಯಿದು.
ಇದು ಕಟ್ಟುಕತೆ ಅಲ್ಲ; ನಿಂಗ ಎಂತ ಹೇಳುತ್ತಿರೊ ಗೊಂತಿಲ್ಲೆ, ಇದಾ ಕಥೆ ಕೇಳಿ…

ಅದು  ಸುಮಾರು ಹಿಂದೆ 1981 ರಲ್ಲಿ ನಡದ ಘಟನೆ .!!
ದಶಂಬರ ತಿಂಗಳು.
ಎಲ್ಲಾ  ಕೃಷಿಕರ ಹಾಂಗೆ ಎಂಗಳ ಗೆದ್ದೆಲಿ ಕೂಡಾ ಏಣಿಲು ಬೆಳೆ ಕೊಯಿದು ಸುಗ್ಗಿ ಬೆಳೆ ಸುರು ಆಯಿದಷ್ಟೆ.
ಮೊದಲು ಹೇಂಗಿತ್ತು ಹೇಳಿದರೆ – ನೇಜಿ ಹಾಕಿ ನೆಡುದು ಅಥವಾ ಗೆದ್ದೆ ಬಿತ್ತಿ ಬೇಸಾಯ ಮಾಡುದು ಹೇಳಿ ಎರಡು ವಿಧ ಇತ್ತು.
ಇಂದು ನೇಜಿ ಹಾಕುತ್ತ ಅಬ್ಯಾಸವೇ ಬಿಟ್ಟು ಹೋಯಿದು, ಎಲ್ಲೋರೂ ನೇಜಿ ಹಾಕದ್ದೆ ಗೆದ್ದೆ ಬಿತ್ತಿ ಬೇಸಾಯ ಮಾಡುತ್ತವು.
ನೇಜಿ ನೆಡುವ ಕೆಲಸ ಇಲ್ಲೆ – ಹೇಂಗೂ ಕೆಲಸಕ್ಕೆ ಜನ ಸಿಕ್ಕುತ್ತವಿಲ್ಲೆ – ಹಾಂಗಿಪ್ಪಗ ಸುಲಾಬಲ್ಲಿ ಕೆಲಸ ಸುದಾರುಸುವಾ ಹೇಳಿ.
ಸುಗ್ಗಿ ಬೇಸಾಯ ಹೇಳಿರೆ ರಜ್ಜ ಕಷ್ಟದ ಬೇಸಾಯ ಹೇಳಿ ರೂಡಿ.
ಉದಿಯಪ್ಪಗ 5 ಗಂಟೆಗೆ ಎದ್ದು ಎತ್ತುಗೊಕ್ಕೆ, ಗೋಣಂಗೊಕ್ಕೆ ಕುಡುಮೆರುದು ಮಡ್ಡಿ ಕೊಡೆಕ್ಕು. ಮತ್ತೆ ಹೊಟ್ಟೆ ತುಂಬ ತಿನುಸೆಕ್ಕು ಬೆಣಚ್ಚಿ  ಬಿಟ್ಟ ಕೂಡಲೆ ಹೂಡುವ ಜನ ಬಂದು ಹೂಡಲೆ ಸುರು ಮಾಡುದು.
ಬೆಶಿಲು ಜೋರಾಯೆಕ್ಕಾರೆ ಎತ್ತುಗಳ ಬಿಟ್ಟಾತು. ಹೇಳಿದರೆ, ಸಾದರಣ 11 ಗಂಟೆಗೆ ಹೂಟೆ ಮುಗಾತು.
ಆನು ಕೂಡಾ ಹೀಂಗೆ ಮಾಡುವ ಕೃಷಿಕ°.

ಗೆದ್ದೆ ಹೂಡೆಕ್ಕರೆ  ಮೊದಲು ಗೆದ್ದಗೆ ನೀರು ಬಿಡೆಕ್ಕಾಲ್ಲದಾ?
ಹೋರಿಗೊಕ್ಕೆ ತಿಂಬಲೆ ಹಾಕಿ ಮೋಟಾರು ಬಿಡುಲೆ ಕೆರೆ ಹತ್ತರಂಗೆ ಹೋದೆ ಉದಿಯಪ್ಪಗ ಸಾದರಣ 5.30 ರ ಸಮಯ. ಚಳಿ ಜೋರಿತ್ತು.
ಆವಾಗ ಎಲ್ಲಾ ಸ್ವೆಟ್ಟರ್, ಅಂಗಿ ಎಲ್ಲಾ ಹಾಕುದು ಕಮ್ಮಿ, ಒಂದು ಹೊದಕ್ಕೆಯ ಹೊದ್ದುಗೊಂಡು ಹೋಪದಿದಾ! ಕೆಲಸ ಮಾಡುವಗ ಅದರ ಮಡುಸಿ ಕರೇಂಗೆ ಮಡಗಿತ್ತು.

ಹಾಂಗೆ ಮೋಟಾರ್ ಬಿಟ್ಟು ಮೇಗಾಣ ಗೆದ್ದೆ ಹುಣಿಗೆ ಹತ್ತಿದೆ. ಅದರಿಂದ ಮೇಗೆ ಹತ್ತರಣ ಪೊರ್ಬ್ಬುಗಳ ದೊಡ್ಡ ಗೆದ್ದೆ ಅದರ ಹೆಸರು “ಭೂತಾಳಮಾರು ” – ಹೇಳಿರೆ ‘ಭೂತಂಗಳ ಗೆದ್ದೆ’ ಹೇಳಿ!!
ಭಾರೀ ದೊಡ್ಡ ಗೆದ್ದೆ ಈಗಾಣ ಲೆಕ್ಕಲ್ಲಿ ಹೇಳುತ್ತರೆ 2 ಎಕ್ರೆಗಿಂತಲೂ ದೊಡ್ಡದು. ಆನು ನಿಂದ ಜಾಗೆಂದ ಆಚ ಹೊಡೆ ಹುಣಿಗೆ ಸಾದಾರಣ 100 ಫೀಟು ದೂರ ಅಕ್ಕು.
ಆನು ಹೇಳಿದ ಗೆದ್ದೆಗೆ ಗೊಬ್ಬರ ಹಾಕಿ ಅಂದು ಹೂಡಲೆ ಇತ್ತು. ಪೊರ್ಬುಗ 5  ಜನ ಅಣ್ಣ ತಮ್ಮಂದಿರು ಇತ್ತವು ಎಲ್ಲೋರೂ ಒಟ್ಟಿಂಗೆ ಬಂದು ಕೆಲಸ ಕೆಲಸ ಮಾಡಿಗೊಂಡಿತ್ತವು.

ಅಂದು ಒಳ್ಳೆ ತಿಂಗಳು ಬೆಣಚ್ಚಿ ಇತ್ತು.
ಆನು ಮೇಗಾಣ ಹುಣಿಗೆ ನೋಡುತ್ತೆ ಒಂದು ಜನ ಕಂಬಳಿ  ಹೋದ್ದುಗೊಂಡು ಎನಗೆ ಸಮಾನಾಂತರ ದೂರಲ್ಲಿ ಹೋತು. ರಜ್ಜ ಹೊತ್ತಪ್ಪಗ ಇನ್ನೊದು ಬಂತು ಹೀಂಗೆ 6 ಜನಂಗ ಬಂದವು.

ಆನು ಗ್ರೇಶಿದೆ ಇದು ಪೊರ್ಬ್ಬುಗಳೆ ಗೆದ್ದೆಲಿ ಗೊಬ್ಬರ ಹರಗಿ ಸರಿ ಮಾಡುಲೆ ಬಂದದಾದಿಕ್ಕು ಹೇಳಿ.
ರಜ್ಜ ಹೊತ್ತು ಅಲ್ಲಿ ನಿಂದು ನೋಡಿದೆ ಆ ವ್ಯಕ್ತಿಗ ಸಾದಾರಣ 100 ಪೀಟು  ದೂರದವರೇಗೆ ನೆಡಕ್ಕೊಂಡು ಹೋದವು..!!
ಅಲ್ಲಿಂದ ಬಲತ್ತಿಂಗೆ ತಿರುಗಿದ ಹಾಂಗೆ ಎನಗೆ ಕಂಡತ್ತು! ಹೇಳಿರೆ ಆನು ಇಪ್ಪ ಜಾಗಗೆ ಬತ್ತ  ನಮೂನೆ ಕಂಡತ್ತು.
ಆನು ಅಲ್ಲಿಯೇ ನಿಂದೆ ಎಂತಕ್ಕೂ ಅವು ಇಲ್ಲಿಗೆ ಬರಲಿ ಮತ್ತೆ ರಜ್ಜ ಮಾತಡುವಾ ಹೇಳಿ – ಸಾದರಣ 5 ಮಿನಿಟು ಕಳುತ್ತು ಆರನ್ನೂ ಕಂಡತ್ತಿಲ್ಲೆ. 10 ಮಿನಿಟಾತು ಊಹೂಂ ಆರೂ ಇಲ್ಲೆ.

ಛೆಲಾ ಕಥೆಯೇ!
ಎಲ್ಲಿಗೆ ಹೋದವು ಒಂದದಾದರೂ ಆನು ಇಪ್ಪಲ್ಲಿಯಂಗೆ ಬರೆಕ್ಕಾತಲ್ಲದಾ!! ಇಲ್ಲೆ ಬೈಂದವಿಲ್ಲೆ !!
ಇನ್ನು ಹೀಂಗೆ ಕಾದರೆ ಆಗ ಆನೇ ಅಲ್ಲಿಗೆ ಹೋಗಿ ನೋಡುತ್ತೆ ಹೇಳಿ ಟೊರ್ಚು ಹಿಡುಕ್ಕೊಂಡು ಅವು ಬಂದ ಜಾಗಗೆ ಹೋಗಿ ನೋಡಿದೆ. ಆರೂ ಇಲ್ಲೆ!!
ಅತ್ಲಾಗಿ ಇತ್ಲಾಗಿ ಬೆಣಚಿ ಹಾಕಿ ನೋಡಿದೆ ಆರೂ ಇಲ್ಲೆ..!!
ಎಲ್ಲೋ ತೋಡಿಂಗೆ ಹೋದಿಕ್ಕು ಹೇಳಿ ಆನು ಮನಗೆ ಬಂದೆ.

ಉದಿಯಾತು.
ಪೊರ್ಬ್ಬುಗ ಅವರ ಗೆದ್ದೆಲಿ ಹೂಡುತ್ತಾ ಇತ್ತಾವು. ಆನು ಸೀತಾ ಹೋಗಿ ಕೇಳಿಯೇ ಬಿಟ್ಟೆ “ದಾನೆ ನಿಕ್ಕುಳು ಇನಿ ಕಾಂಡೆನೇ ಬೇಕ ಬತ್ತುನೆ?” ಆವಾಗ ಒಂದು ಹೇಳಿತ್ತು “ಇದ್ದಿಯಪ್ಪಾ ಎಂಕುಳು ಇತ್ತೆ ಬತ್ನಾತೆ, ಕೋಡೆ ಗೊಬ್ಬರ ತುಂಬುದು ಬಚ್ಹಿಕಾರಣ ಕಾಂಡೆ ಲಕ್ಕುನಗ ಒಂತೆ ಕಡೆಸುಂಡು..”

ಛೆಲಾ ಇವು ಬಪ್ಪಗ ತಡವಾಯಿದು ಅಂಬಗ ಎನಗೆ ಕಂಡದು ಆರೂ?
ಎನಗಂತೂ ಒಂದರಿ ರೋಮಾಂಚನ ಆತು.. ಎಂತ ಆದಿಕ್ಕೂ…ಹಾಂಗೆ ಬೇರೆಯೋರ ಹತ್ತರೆ ಎಲ್ಲಾ ಕೇಳಿದೆ ಆವಾಗ ಒಂದು ಪ್ರಾಯಸ್ತ ಹೇಳಿತ್ತು – ಅಲ್ಲಿ ಹತ್ತರೆ ಇಪ್ಪ ವನಂದ ದಿನಾ “ಕಡಪ್ಪು”ಇದ್ದು. ಅದು ಇದರ ಮೊದಲು ಎಷ್ಟೋ ಜೆನಕ್ಕೆ ಕಂಡಿದು ಹೇಳಿತ್ತು.

ಈಗ ನಮ್ಮ ಬೋಚ° ಅದು ಎಲ್ಲಿಗೆ ಹೋತ್ಸು ಹೇಂಗೆ ಬಂತ್ಸು ಕೇಳಿರೆ ನವಗೆ ಅರಡಿಯ.
ನಿಂಗೊಗೆ ಆರಿಂಗಾರು ಗೊಂತಿದ್ದಾ???

ಸೂ:

  • ಇದು ಸತ್ಯ ಘಟನೆ, ಪ್ರತ್ಯಕ್ಷ ಅನುಭವ.

24 thoughts on “ಭೂತವ ಕಂಡಿದಿರಾ.???

  1. ಮಾವನ ಅನುಭವ,ಶರ್ಮಪ್ಪಚ್ಚಿ ಅನುಭವ ಇನ್ನೂ ಹಲವು ತರದ ಅನುಭವಂಗಳ ಹೇಳುದು ಕೇಳಿದ್ದೆ. ಹಾಂಗಾಗಿ ಎಷ್ಟೊಂದು ಜೆನಕ್ಕೆ ಒಂದೇ ತರದ ಅನುಭವಂಗೋ ಆದ ಕಾರಣ ಅದು ಇಪ್ಪದು ಆದಿಕ್ಕು ಹೇಳಿ ಅನ್ನಿಸುತ್ತು…

    ದೇವರ ಆನು ನೋಡಿದ್ದೆ… ನಮ್ಮೊಳ ಮತ್ತು ಎಲ್ಲೆಲ್ಲೂ ಇಪ್ಪ ದೇವರ ಆರಿಂಗೆ ಬೇಕಾರೂ ನೋಡುಲಕ್ಕು… ಅದಕ್ಕೆ ಒಂದು ಬಗೆಯ ದೃಷ್ಟಿ ಬೇಕಾದದ್ದು… ಆಸಕ್ತಿ ಇಪ್ಪವಕ್ಕೆ ಆ ದೃಷ್ಟಿಯ ಬೆಳೆಸುಲೇ ಸಹಾಯ ಮಾಡುವೆ…

  2. ಏಣಿಲು ಹೇಳಿದರೆ ಮಳೆ ಕಾಲಲ್ಲಿ ಮಾಡುವ ಭತ್ತದ ಬೆಳೆ ..ಮತ್ತೆ ಮಾಡುದು ಸುಗ್ಗಿ ಬೆಳೆ ಅಕೇರಿಗೆ ಮಾಡುವ ಬೆಳೆ ಕೊಳಕ್ಕೆ …ಕುಡುಮೆರುದು ಹೇಳಿರೆ ಕುಡು ಹೇಳುತ್ತ ಧಾನ್ಯ ವ ಗೊಂತಿದ್ದಾ ?Horse gramme ಹೇಳಿ ಇಂಗ್ಳೀಶ್ ಬಾಶೆಲಿ ಹೇಳುತ್ತವು ಅದರ ಬೇಶಿ ಅದಕ್ಕೆ ಅಕ್ಕಿ ತೌಡು ಸೇರ್ಸಿ ಅದರ ಒಣಕ್ಕೆಲಿ ಬತ್ತವ ಮೆರುದ ಹಾಂಗೆ ಮೆರಿವದು ಅದರ ಹೋರಿಗೊಕ್ಕೆ ತಿಂಬಲೆ ಕೊಡುದು ..ಆ ಮೇಲೆ ಹೂಡುಲೆ ಕೊಂಡುಹೋಪದು..ಕಡೆಸುಂಡು ಹೇಳಿದರೆ ತುಳುವಿಲಿ… ತಡವಾತು ಹೇಳಿ ನಾವು ಹೇಳುತ್ತಲ್ಲದ ಅದೂವೆ…ಕಡಪ್ಪು ಹೇಳಿದರೆ ಮೊದಲು ಕಾಡಿಲಿ ಯಾವಾಗಲೂ ಹುಲಿಗ ಹೋಪ ದಾರಿಯಾ ಹುಲಿ ಕಡಪ್ಪು ..ಹಾಂಗೆ ಭೂತಂಗ ಇತ್ಯಾದಿ ಹೋಪ ದಾರಿ ಹೇಳಿ ಇತ್ತಡ ..ಅದರನ್ನೇ ಕಡಪ್ಪು ಹೇಳಿ ತುಳುವಿಲಿ ಹೇಳುದು…ನಮ್ಮ ಭಾಶೆಲಿ ಕೂಡಾ ಚಾಲ್ತ್ತಿಲಿ ಇದ್ದು ..

  3. ಮಾವನ ಅನುಭವದ ಹಾಂಗೆ ಎನಗೂ ಒಂದು ಅನುಭವ ಆಯ್ದು, ಆದರೆ ಅದು ಎಂತರ ಹೇಳಿ ಇಷ್ಟನ್ನಾರ ನಿರ್ಧಾರ ಮಾಡ್ಲೆ ಎಡಿಗಾಯ್ದಿಲ್ಲೆ ! ಕೆಲವು ಅನುಭವಂಗಳೇ ಹಾಂಗೆ, ಆರು.. ಎಂತ.. ಹೇಂಗೆ.. ಹೇಳಿ ನವಗೆ ವಿವರ್ಸುಲೆ ಎಡಿತ್ತಿಲ್ಲೆ. ಅದರ ಬಗ್ಗೆ ತಲೆಕೆಡಿಸಿಗೊಂಡಷ್ಟೂ ಸಮಸ್ಯೆಯೇ ! 🙂
    ಈ ಕಥೆ ಓದಿಯಪ್ಪಗ ರೋಮಾಂಚನ ಆತು…. ಲಾಯ್ಕಾಯ್ದು…
    .
    ಏಣಿಲು , ಕುಡುಮೆರುದು, ಕಡೆಸುಂಡು, “ಕಡಪ್ಪು”– ಈ ನಾಲ್ಕು ಶಬ್ದಂಗಳ ಅರ್ಥ ಗೊಂತಾಯ್ದಿಲ್ಲೆ,ವಿವರ್ಸುತ್ತೀರಾ?

  4. ಲೇಖನಲ್ಲಿ ಸ್ವಂತ ಅನುಭವ ಹಂಚಿದ್ದು ಲಾಯಿಕ ಆಯಿದು.
    ಎನ್ನ ಅಜ್ಜ ಇಪ್ಪಗ ಹೇಳುಗು ” ಮನುಷ್ಯರಿಂದ ದೊಡ್ಡ ಭೂತ ಇದ್ದೋ?” ಹೇಳಿ.
    ಅಜ್ಜಿ ಹೇಳುಗು ” ಹೆದರಿಕೆ ಆದರೆ ಗಾಯತ್ರಿ ಜೆಪ ಮಾಡು” ಹೇಳಿ
    ಒಂದು ಸಣ್ಣ ಅನುಭವ:
    ಒಂದು ಮೂರ್ಸಂದಿ ಕಾಲಲ್ಲಿ ಎಂಗೊ ಕಾರಿಲ್ಲಿ ಎಂಗಳ ಊರಿನ ಒಂದು ಬದಿಗೆ ಹೋಗಿತ್ತೆಯೊ. ಅಲ್ಲಿಯಾಣ ಕಾರ್ಯಕ್ರಮ ಮುಗುಶಿ ಹೆರಡುವಾಗ ರೆಜ ಲೇಟ್ ಆಗಿ ಕತ್ತಲೆ ಆಗಿತ್ತು. ಗುಡ್ಡೆ ದಾರಿ, ವಾಹನ ಹೋವ್ತ ಮಾರ್ಗ. ವಾಪಾಸು ಬಪ್ಪಗ ಅದು ಎಂತ ಆತು ಗೊಂತಿಲ್ಲೆ. ಎಷ್ಟು ತಿರುಗಿರೂ ವಾಪಾಸು ಬಪ್ಪಲೆ ದಾರಿ ಸಿಕ್ಕ. ದೇವರ ಜೆಪ ಮಾಡಿ ಅತು.
    ಹಾಂಗೂ ಹೀಂಗೂ ತಿರುಗಿ ಕಡೇಂಗೆ ಮೈನ್ ಮಾರ್ಗಕ್ಕೆ ಎತ್ತಿತ್ತು. ನೋಡಿರೆ ಮೈನ್ ಮಾರ್ಗಂದ ಹೋದ ದಾರಿ ಬೇರೆ, ಬಂದ ದಾರಿ ಬೇರೆ.
    “ಗುಡ್ಡೆಲಿ, ದಾರಿ ತಪ್ಪುಸುತ್ತ ಭೂತ ಇದ್ದು” ಹೇಳಿ ಮೊದಲಾಣವು ಹೇಳಿದ್ದು ನೆಂಪು ಬಂತು.

  5. ಅಬ್ಬಾ…! ಭಯಂಕರ ಲೇಖನ…!
    ಲೇಖನ ಓದಿಯಪ್ಪಗ ಸಣ್ಣಾದಿಪ್ಪಗ ಅಜ್ಜಿ ಹೇಳಿದ ಭೂತದ ಕಥೆಗೊ ಎಲ್ಲಾ ನೆಂಪಾತು.
    ಎನಗೆ ಭೂತದ ಅನುಭವ ಆಗದ್ದರೂ ನಂಬುತ್ತೆ.

  6. ದೇವರು ಇದ್ದ ಹೇಳ್ತರೆ ಭೂತ ಪ್ರೇತಂಗೊ ಇಪ್ಪದೂ ಒಪ್ಪೆಕ್ಕಾದ್ದೇ…
    ಆನು ಕಂಡಿದಿಲ್ಲೆ.. ಕಾಂಬಲೂ ಸಾಕು ಹೇಳ್ಲೆಡಿಯ..
    ಒೞೇ ಲೇಖನ..:)

  7. ಮಾವನ ಲೇಖನವನ್ನೂ ಇಲ್ಲಿಪ್ಪ ಒಪ್ಪಂಗಳನ್ನೂ ಓದ್ಯಪ್ಪಗ ಪುಕು ಪುಕು ಆವ್ತಾ ಇದ್ದು.
    ಮುಳಿಯ ಕೃಷ್ಣಭಟ್ಟರ ‘ಅಪಘಾತದ ಆತ್ಮಗಳು’ ಕಥೆಯೂ ನೆಂಪಾತು.

  8. ಯಬೋ…!!!
    ಆನು ಇನ್ನು ಗೆದ್ದೆ ತೋಟಕ್ಕೆ ಇರುಳು ಒಬ್ಬನೇ ಹೋವುತ್ತಿಲ್ಲೆಪ್ಪಾ ಹೋವುತ್ತಿಲ್ಲೆ..
    ಪಷ್ಟು ನೆಗೆಮಾಣಿ, ಹಿ೦ದೆ ಪೆ೦ಗಣ್ಣ ಮದ್ಯಲ್ಲಿ ಆನು..
    ಹಾ೦ಗಾರೆ ಮಾ೦ತ್ರ ಒಟ್ಟು ಕೂಡಿ ಹೋಪದು….

    1. ಏ ಬೋಚ ಭಾವಾ,
      ಕಸ್ತಲೆಲಿ ನಿನ್ನ ಕ೦ಡು ಭೂತ ಹೆದರದ್ದ ಹಾ೦ಗೊ ಈ ಎರ್ಪಾಡು ?

  9. ದಾರಿಲಿ ನಡಕ್ಕೊಂಡು ಹೋಪವು ಆದಿಕ್ಕೊ?
    ನಿಂಗೊಗೆ ಭಯ ಆತು ಹೇಳಿ ಕಾಣುತ್ತು.

  10. ಮಾವ°,
    ನಿಂಗಳ ನಿಜ ಅನುಭವ ಕೇಳಿ ಎನಗೆ ನಿಜಹೆದರಿಕೆ ಆತು!!!
    ಎಷ್ಟು ಸರ್ತಿ ಹೀಂಗಿಪ್ಪದು ಇಲ್ಲೆ ಹೇಳಿದರೂ ಅವರವರ ಅನುಭವಕ್ಕೆ ಬಂದಪ್ಪಗ ಒಪ್ಪಲೇ ಬೇಕಾವುತ್ತು.

    ಎನಗೆ ಅಪ್ಪದು ಜೀವ ಇಪ್ಪ ಕೆಲವು ಮನುಷ್ಯರಿಂದ ದೊಡ್ಡ ಭೂತಪ್ರೇತಂಗ ಬಾಧೆಗ ಬೇರೆ ಯಾವುದೂ ಇಲ್ಲೆ ಹೇಳಿ ಅಲ್ಲದೋ ಮಾವ°.
    ಹಾಂಗಿರ್ತ ಮನುಷ್ಯರು ಕೊಡುವ ಬಾಧೆ ನೋಡಿದರೆ ನಮ್ಮ ಹತ್ತರೆ ಬಪ್ಪಲೆ ಯೇವ ಭೂತ ಪ್ರೇತಕ್ಕೂ ಪಾಪ ಕಾಂಗು.

    ನಿಂಗಳ ಅನುಭವ ಅಕ್ಷರಲ್ಲಿ ಹಾಂಗೆಯೇ ಬಯಿಂದು ಮಾವ°. ಬರದ್ದದು ಲಾಯ್ಕಾಯಿದು.

    1. ಈಗ ನರ ಭೂತಂಗಳದ್ದೆ ಕಾರ್ಬಾರ್..ಭೂತಂಗ ಆರಿಂಗೂ ಬಾಧೆ ಕೊಡುತ್ತವಿಲ್ಲೆ ..ಮೊದಲು ಎನ್ನ ಅಮ್ಮ ಹೇಳುಗು ಭೂತಂಗ ಹೇಳಿರೆ ಅವು ಆದಿವಾಸಿಗ ಜನಂಗೊಕ್ಕೆ ಹೆದರಿ ಅವು ಇರುಳು ಹೆರಡುದು ಹಗಲು ಭೂತಂಗ ಬಾರೀ ಅಪಾಯಕಾರಿಗ ಹೇಳಿ…!!

  11. ಮಾವಾ, ಎನಗೂ ಒ೦ದು ಅನುಭವ ಆಯಿದು.
    ಇಪ್ಪತ್ತು ವರುಷ ಹಿ೦ದೆ ಆನು ನೈನಿತಾಲ್ ನ ಹತ್ತರೆ ರುದ್ರಾಪುರ ಹೇಳುವ ಸಣ್ಣ ಪೇಟೆಲಿ ಉದ್ಯೋಗ ನಿಮಿತ್ತ ವಾಸ ಮಾಡಿಗೊ೦ಡಿತ್ತಿದ್ದೆ.
    ಎನಗೆ ಆ೦ಧ್ರದ ಶ್ರವಣ್ ಹೇಳುವ ಒಬ್ಬ° ದೋಸ್ತಿ. ಅವನ ಗುರ್ತದೋರ ಮನೆಲಿ ಪ್ರತಿದಿನ ಇರುಳು ಆರೋ ಬಾಗಿಲು ತಟ್ಟಿದ ಹಾ೦ಗೆ,ಮನೆಯ ಟೇರೇಸಿನ ಮೇಲೆ ನೆಡವ ಹಾ೦ಗೆ ಅನುಭವ ಆಗಿಗೊ೦ಡಿತ್ತು.ಹಾ೦ಗಾಗಿ ಹೆದರಿ ಅವ್ವು ಮನೆ ಬೀಗ ಹಾಕಿ ಬೇರೆ ಜಾಗೆಲಿ ವಾಸ ಮಾಡಿದವು.ಈ ಶುದ್ದಿ ಗೊ೦ತಾಗಿ ಎ೦ಗೊ ಇಬ್ರೂ ಪರೀಕ್ಷೆ ಮಾಡುಲೆ ಹೇಳಿ ಒ೦ದು ದಿನ ಕಸ್ತಲೆಗೆ ಆ ಮನೆಗೆ ಹೋದೆಯೊ°.ಹೆಚ್ಚು ಜನವಸತಿ ಇಲ್ಲದ್ದ ಜಾಗೆ ಅದು.ಹತ್ತರೆ ಮನೆಗಳೂ ಇಲ್ಲೆ.ಇರುಳು ಮಾತಾಡಿಗೊ೦ಡು,ಲೊಟ್ಟೆ ಬಿಟ್ಟುಗೊ೦ಡು ಇದ್ದರೂ ಶಬ್ದ ಕೇಳುತ್ತೋ ಹೇಳುವ ಸಣ್ಣ ಹೆದರಿಕೆ ಒಳಾ೦ದಲೆ ! ಇರುಳು ಲೈಟು ನ೦ದಿಸಿ ಮನುಗಿ ರಜಾ ಹೊತ್ತಿಲಿ ಬಾಗಿಲು ತಟ್ಟಿದ ಸ್ಪಷ್ಟ ಶಬ್ದ ! ಹೆರ ಮೆಟ್ಲು ಹತ್ತಿ ಟೇರೇಸಿ೦ಗೆ ಆರೊ ಹತ್ತಿ ಅಲ್ಲಿ ನಡೆದಾಡಿದ ಶಬ್ದ ಇಬ್ರಿ೦ಗೂ ಕೇಳಿದ್ದು.ಕೂಡಲೆ ಲೈಟು ಹೊತ್ತುಸಿ ಮನೆಯ ಹೆರ ಬ೦ದು ಟೇರೇಸಿ೦ಗೆ ಹೋಗಿ ನೋಡಿದೆಯ°,ಆರೂ ಇಲ್ಲೆ !! ತಿರುಗಿ ಬ೦ದಮೇಲೆ ಉದಿಯಾವರೆಗೆ ಒರಕ್ಕೂ ಬೈ೦ದಿಲ್ಲೆ,ಯೇವ ಶಬ್ದವೂ ಕೇಳಿದ್ದಿಲ್ಲೆ.
    ಈಗ ಭೂತದ ನ೦ಬಿಕೆ,ಹೆದರಿಕೆ ಮಾಯ ಆಯಿದು.ಆದರೆ ಸಣ್ಣಾಗಿಪ್ಪಗ ಅಜ್ಜಿ ಹೇಳಿಗೊ೦ಡಿದ್ದ ಭೂತ,”ರಣ”ದ ಕಥೆಗೊ,ಆಟಕ್ಕೆ ಹೋಪೋರಿ೦ಗೆ ದೊ೦ದಿ ಹಿಡುದು ಸ೦ಗಾತಕ್ಕೆ ಬ೦ದು ಮಾಯ ಆದ ವಿಚಿತ್ರ೦ಗೊ ಎಲ್ಲ ಮತ್ತೆ ನೆನಪ್ಪಾತು.

  12. ಇದಾ ಮಾವಾ ಒ೦ದು ಕತೆ ಆತನ್ನೆ!! ಆನು ಪರೀಕ್ಷೆ ಮುಗುದ ಕೂಡ್ಲೆ ನಿ೦ಗೊಳ ಮನೆಗೆ ಹಲಸಿನಹಣ್ಣು ತಿ೦ಬಲೆ ಬಪ್ಪದು ಹೇಳಿ ಲೆಕ್ಕಹಾಕಿದ್ದಲ್ದಾ,ಇನ್ನೀಗ ಈ ಕತೆ ಓದಿ ಚೂರು ಪುಕು ಪುಕು ಆವ್ತು..ಒ೦ದು ಹೊಡೆಲಿ ಹಲಸಿನಹಣ್ಣು ಇನ್ನೊ೦ದು ಹೊಡೆಲಿ ಭೂತ..ಯಾವದು ಭಾರ ಹೇಳಿ ಗೊ೦ತಾವ್ತಿಲ್ಲೆ..ಎ೦ತ ಮಾಡುದಪ್ಪಾ 😉

  13. ಆಸಕ್ತಿ ದಾಯಕ ವಿಷಯ. ಒಪ್ಪ೦ಗೊ.
    ಭೂತ ಮತ್ತು ಪ್ರೇತ ಬೇರೆ ಬೇರೆ ಅಲ್ಲದೊ? ಭೂತ ಹೇಳುವದು ದೈವಿಕ ಶಕ್ತಿಯ ಒ೦ದ೦ಶ ಅಲ್ಲದೊ? ಭೂತ ಶಿವನ ಸೇವಕರಾಡ. ಅದರಿ೦ದಾಗಿ ಶಿವ೦ಗೆ ಭೂತನಾಥ ಹೇಳ್ತ ಹೆಸರು ಬ೦ದದಾಡ.
    ಪ್ರೇತ ಹೇಳಿರೆ ಗತಿ ಸಿಕ್ಕದ್ದೆ ಅಲೆತ್ತಾ ಇಪ್ಪ ಆತ್ಮ೦ಗೊ ಅಡ. ಇದರಲ್ಲಿ ಮನುಷ್ಯ೦ಗೆ ಯಾವುದು ಉಪದ್ರ ಮಾಡ್ತು? ಭೂತವೋ ಪ್ರೇತವೋ? ಅಥವಾ ನಿಜವಾಗಿಯೂ ಉಪದ್ರ ಮಾಡುಗೊ? ಮಾಡ್ತರೆ ಎ೦ತಕೆ ಬೇಕಾಗಿ? ಅಷ್ಟಕ್ಕ್ಕೂ ನಿಜವಾಗಿಯುದೆ ಹೀ೦ಗಿಪ್ಪದು ಇದ್ದೊ? ಎನಗ೦ತೂ ಇಷ್ಟರವರೇ೦ಗುದೆ ಹೀ೦ಗಿಪ್ಪ ಅನುಭವ ಆಯಿದಿಲ್ಲೆ. ಹೀ೦ಗಿಪ್ಪದು ಕಾಣ್ತು ಹೇಳ್ತ ಜಾಗೆಗಳಲ್ಲಿ ಆನು ನೆಡು ಇರುಳು ೧೨ ಘ೦ಟೆ ಕಳುದ ಮತ್ತೆ ಎಷ್ತೋ ಸರ್ತಿ ಒಬ್ಬನೇ ಬೆಣಚ್ಚು ಕೂಡಾ ಇಲ್ಲದ್ದೆ ನೆಡಕ್ಕ೦ಡು ಹೋಪ ಸ೦ದರ್ಭ೦ಗೊ ಬಯಿ೦ದು.
    ನಾವು ನಮ್ಮ ಮನಸ್ಸಿನ ಒಳ ಅಚ೦ಚಲವಾಗಿ ದೇವರು ಹೇಳ್ತ ಪರಮೋನ್ನತ ಶಕ್ತಿಯ ನ೦ಬುತ್ತರೆ, ನಾವು ಯಾವುದೇ ಕೆಟ್ಟ ಶಕ್ತಿಗೊಕ್ಕೆ (ಹಾ೦ಗಿಪ್ಪದು ನಿಜವಾಗಿಯೂ ಇದ್ದರೆ) ಹೆದರೆಕಾದ ಅಗತ್ಯ ಇಲ್ಲೆ ಹೇಳಿ ಎನ್ನ ಅಭಿಪ್ರಾಯ.
    ಮೇಲಾಣ ಅನುಭವಲ್ಲಿ ವಿವರಿಸಿದ ವಿಷಯ ನೋಡಿರೆ, ಅದು ಭೂತ / ಪ್ರೇತವೇ ಆಯೆಕು ಹೇಳಿ ಎ೦ತ ಇಲ್ಲೆ. ಪುರ್ಬುಗೊ ಅಲ್ಲಾಯ್ಕು. ಒ೦ದುವೇಳೆ ಅಲ್ಲಿ ಕಟ್ಟಪ್ಪುಣಿಲಿ ನೆಡಕ್ಕೊ೦ಡು ಬೇರೆ ಎಲ್ಲಿಗಾರು ಎ೦ತಾರು ಬೇರೆ ಅಗತ್ಯಕ್ಕೆ ಹೋವ್ತ ಜನ೦ಗೊ ಅಪ್ಪಲೂ ಸಾಧ್ಯತೆ ಇದ್ದಲ್ಲದಾ?
    ಒ೦ದು ವೇಳೆ ಪ್ರೇತ ಹೇಳ್ತ ಅಮಾನುಷ ದುಷ್ಟ ಶಕ್ತಿಗೊ ಇದ್ದು ಹೇಳಿ ಆದರುದೆ, ನಾವು ಎ೦ತಕೆ ಹೆದರೆಕು? ಪ್ರೇತ೦ಗೊ ಅವರಷ್ಟಕ್ಕೆ ಇರಲಿ, ನಾವು ನಮ್ಮಷ್ಟಕ್ಕೆ ಇಪ್ಪೊ°..
    ಆನು ಇಷ್ಟರ ವರೇ೦ಗೆ ಹೀ೦ಗಿರ್ತ ವಿಷಯ೦ಗಳ ಸ್ವ೦ತವಾಗಿ ಅನುಭವಿಸಿದ್ದಿಲ್ಲೆ, ಆದ ಕಾರಣ ಆನು ಪ್ರೇತ೦ಗೊ ಇದ್ದು ಅಥವಾ ಇಲ್ಲೆ ಹೇಳಿ ಹೇಳ್ತಿಲ್ಲೆ.
    ಆಸಕ್ತಿದಾಯಕ ವಿಷಯ ಬೈಲಿಲ್ಲಿ ಕೊಟ್ಟದಕ್ಕೆ ಒಪ್ಪ೦ಗೊ

  14. ಆನು ಭೂತ ನೋಡಿದ್ದಿಲ್ಲೆ. ಆದರೆ ಆದರೆ ಎನ್ನ ಅಜ್ಜ ನೋಡಿದ್ದವಡ್ಡ ಹೇಳಿ ಅಮ್ಮ ಹೇಳಿಕೊಂಡಿತ್ತು. ಅವಗ ಅದರ ನಂಬುದಾ ಬಿಡುದಾ ಹೇಳಿ ಗೊತ್ತಾವುತ್ತಿತ್ತಿಲ್ಲೆ. ಈಗ ಮಾವನೂ ನೋಡಿದ್ದೆ ಹೇಳಿ ಹೇಳ್ತಾ ಇದ್ದವು.. ಆನು ನಂಬುತ್ತನೋ ಅಥವಾ ಬಿಡ್ತನೋ ಎನಗೇ ಗೊಂತಿಲ್ಲೆ. ಆದರೆ ನಂಬುವವರ ಮಾತ್ರ ವಿರೋಧಿಸುತ್ತಿಲ್ಲೆ.

  15. ಭೂತ,ಪ್ರೇತಂಗಳ ಕಂಡು ನಾಯಿಗ ವಿಚಿತ್ರ ಸ್ವರಲ್ಲಿ ಕೂಗುತ್ತವಡ… ನವಗೆ ಕಾಣದ್ದರೂ ನಾಯಿಗೊಕ್ಕೆ ಕಾಂಬದಾಯಿಕ್ಕು..

  16. ಕಥೆ ಭಾರಿ ಲಾಯಿಕ ಆಯಿದು ಮಾವ, ಆದರೆ ನವಗೆ ಕಥೆ ಓದಿ ಕೆಟ್ಟತ್ತನ್ನೆ ಹೇಳಿ ಆಯಿದು, ಇನ್ನು ಲಾಸ್ಟು ಬಸ್ ಇಳುದು ಮನೆಗೆ ಹೊಪದು ಹೆ೦ಗಪ್ಪ ? ಃ)

  17. ಮಾವನ ನಿಜ ಅನುಭವ ಒಂದರಿ ಹಳೆ ಕಾಲದ ನೆಂಪು ಮಾಡಿಸಿತ್ತು. ನಂಬಿದರೆ ನಂಬಿ ಇಲ್ಲದ್ರೆ ಬಿಡಿ ಹೇಳೆಕ್ಕಷ್ಟೆ. ಎನಗೆ ಭೂತದ ಅನುಭವ ಆಯ್ದಿಲ್ಲೆ ಹೇಳಿ ಆದರೂ ಈ ವಿಷಯ ಆನು ಖಂಡಿತಾ ನಂಬುತ್ತೆ. ಎಂಗಳ ನೆರೆಕರೆಲಿ ಗೆಜ್ಜೆ ಶಬ್ಧ ಕೇಳಿದ್ದು, ದಂಟು ಕುಟ್ಟಿಯೊಂಡು ಕಂಡಿದು ಮತ್ತೆ ವನದ / ಭೂತ ಕೊಟ್ಟಗೆ ಕರೇಂಗೆ ಹೋತು ಹೇಳಿ ಹೇಳ್ವ ದರ ಕೇಳಿದ್ದೆ. ನಮ್ಮ ಭೂಮಿಯ ಕಾವಲುಗಾರಕ್ಕೋ ಅವ್ವು. ನೇರ ಅಪಾಯ ಇಲ್ಲೆ ಹೇಳಿ ಆದರೂ ನಮ್ಮಂದ ಏನಾದರು ಅವಕ್ಕೆ ಧಾರ್ಮಿಕ ವಿಷಯಲ್ಲಿ ಅಚಾತುರ್ಯ ಅಥವಾ ನಾವು ತಪ್ಪಿ ಹೋದಲ್ಲಿ ನವಗೆ ನೆಂಪು ಮಾಡ್ಸಲೆ ಹೀಂಗೆ ಕಂಡು ಬಿದ್ದ ಹಲವು ಘಟನೆಗೊ ನಡದ್ದು ಹೇಳ್ವದು ಸತ್ಯ. ಒಂದರಿಯಂಗೆ ರೋಮಾಂಚನ ಅನುಭವ. ಹಲವು ದಿಕ್ಕೆ ಭೂತ ಕೋಲ ಅಪ್ಪಲ್ಲಿ ಇನ್ನೂ ಆಶ್ಚರ್ಯ ಹುಟ್ಟುಸುವ ಕತೆ ನಡೆತ್ತು. ನವಗೆ ಆ ಬಗ್ಗೆ ಸಂಪೂರ್ಣ ವಿಷಯ ಗೊಂತಿಲ್ಲದ್ದಿಪ್ಪಗ ಮಾತಾಡ್ಳೆ ಮುಜುಗರ, ಅಂಜಿಕೆ, ಅಧೈರ್ಯ ಆವ್ತು. ಆದರೆ, ಅನುಭವಸ್ತ ಹಿರಿಯರು ಭೂತದ ಹತ್ರೆ ಧೈರ್ಯವಾಗಿ ಪ್ರಶ್ನಿಸುತ್ತವು. ಅದು ಇನ್ನೂ ಆಶ್ಚರ್ಯ ಆವ್ತು.

    ಇನ್ನು ಪ್ರೇತ ಎದುರು ಬಂದರೆ ಹೇಂಗಿಕ್ಕು?! ಇನ್ನೂ ಶಾರೀರಿಕ / ಚಿತ್ತ ಅಪಾಯಕಾರಿ ಹಲವು ದೃಷ್ಟಾಂತ ನಡದ್ದು ಅಪ್ಪೋ.

    ಮಾವನ ಅನುಭವ ಕಥನ ಇಲ್ಲಿ ಹಂಚಿದ್ದಕ್ಕೆ ಧನ್ಯವಾದ ಸಹಿತ ಒಪ್ಪ.

  18. ಅಡ್ಕತ್ತಿಮಾರು ಮಾವನ ಅನುಭವ ಕೇಳಿ ಮೈ ಜುಂ ಆತು. ಕೆಲವೊಂದರಿ ಹೀಂಗಾವುತ್ತು. ಅದು ನಿಜವೋ, ಲೊಟ್ಟೆಯೋ ಹೇಳಿ ನವಗೆ ಹೇಳ್ಲೆ ಅರಡಿಯ. ಮಧೂರು ಆಯನಕ್ಕೆ ಹೋಪಗ ಕೋಟೆಕಣ್ಣಿ ಅಡ್ಕಲ್ಲಿ ಸೂಟೆಗೊ ಕಾಂಬಲೆ ಸಿಕ್ಕಿ ದಾರಿ ತಪ್ಪುಸುತ್ತು ಹೇಳಿ ಅಜ್ಜಂದ್ರು ಹೇಳ್ತು ಕೇಳಿದ್ದೆ. ಸೂಟೆಗೊ ಕಂಡೊಂಡಿದ್ದಿದ್ದು ನಿಜ. ಅದು ಆರಾದರು ಆಯನಕ್ಕೆ ಬತ್ತವರದ್ದೆ ಆಯಿಕ್ಕೊ ಹೇಳಿ. ಅಡ್ಕಲ್ಲಿ ದಾರಿ ತಪ್ಪಲೆ ಎಂತಾಯೆಕು. ಕತ್ಲೆಲಿ ಎಲ್ಲವುದೆ ಒಂದೇ ರೀತಿ ಕಾಣುತ್ತು. ಒಬ್ಬನೇ ಹೋಪಗ ರಜ ಹೆದರಿಕೆ ಆದರೆ, ಮನಸ್ಸಿಲ್ಲಿ ಎಂತೆಂತದೋ ಆಲೋಚನೆಗೊ ಬಂದು ದಾರಿ ತಪ್ಪುವದು ಆಯ್ಕೋ ಹೇಳಿ. ಅಂತೂ ಮಾವ ಬರದ ಶೈಲಿ ಲಾಯಕಾಯಿದು. ಅಡ್ಕದ ಅನುಭವಂಗೊ ಬೈಲಿಂಗೆ ಬತ್ತಾ ಇರಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×