Oppanna.com

ದೇವರ ಸ್ವಂತ ರಾಜ್ಯಲ್ಲಿ ದೋಣಿಮನೆ ವಿಹಾರ…

ಬರದೋರು :   ಸರ್ಪಮಲೆ ಮಾವ°    on   14/12/2010    11 ಒಪ್ಪಂಗೊ

ಸರ್ಪಮಲೆ ಮಾವ°
ಉಂಡೆಮನೆ ಮಾಣಿಯ ಬ್ರೈನ್ ವೇವ್!
ನಮ್ಮ ಊರಿನ ಮಕ್ಕೊ- ಒಪ್ಪಣ್ಣ ಒಪ್ಪಕ್ಕಂದಿರೆಲ್ಲ ಇಪ್ಪದು ಬೆಂಗಳೂರಿಲ್ಲಿ, ಐಟಿ ಬಿಟಿ, ಸಾಫ್ಟ್ ವೇರು ಹೇಳಿ “ದೊಡ್ಡ” ಕೆಲಸಲ್ಲಿ ಇಪ್ಪವು.
ಇವರ ಕೆಲಸಕ್ಕೆ ಹಗಲು ಇರುಳು ಹೇಳುವ ವೆತ್ಯಾಸ ಇಲ್ಲೆ; ದಿನಕ್ಕೆ ಎಂಟು ಗಂಟೆ ಕೆಲಸ ಹೇಳುವ ಲೆಕ್ಕಾಚಾರವೂ ಇಲ್ಲೆ; ವಾರ ಇಡೀ ಕೆಲಸ, ಕುದುರೆಯ ಕಣ್ಣಿಂಗೆ ಪಟ್ಟಿ ಕಟ್ಟಿದ ಹಾಂಗೆ.
ವಾರದ ಕಡೇಂಗೆ – ಶನಿವಾರ, ಆದಿತ್ಯವಾರ ತಿರುಗಾಟ. ಎಲ್ಲಿಯಾದರೂ ಹೋಟೆಲಿಂಗೊ, ಮಾಲಿಂಗೊ, ಇಲ್ಲದ್ದರೆ ಕಾಡಿಂಗೊ, ತೋಡಿಂಗೊ, ಹಳ್ಳಕ್ಕೊ, ಬೆಟ್ಟಕ್ಕೊ, ಅಥವಾ ರಿಸಾರ್ಟಿಂಗೊ, ಬೋಟಿಂಗೊ – ಹೀಂಗೆ ಎಲ್ಲಿಗಾದರೂ.
ಹೆಚ್ಚಾಗಿ ಅವರ ಫ್ರೆಂಡುಗಳ ಒಟ್ಟಿಂಗೆ ಹೋಪ ಕ್ರಮ.
ಆದರೆ ನಮ್ಮ ಉಂಡೆಮನೆ ಮಾಣಿಗೆ ಮದುವೆ, ಹನಿಮೂನು ಎಲ್ಲ ಕಳುದ ಮೇಲೆ – ಸಿಕ್ಕಿಂ, ಭೂತಾನ್, ಹಿಮಾಲಯ ಎಲ್ಲ ತಿರಿಗಿ ಬಂದ ಮೇಲೆ ಎಂತಾತು ಗೊಂತಿಲ್ಲೆ; ಅವನ ತಲೆಲಿ ಒಂದು ಹೊಸ ಯೋಚನೆ ಸುರುವಾತು
– ‘ಆನು ಮದುವೆ ಆದ ಕೂಡ್ಳೆ ಹನಿಮೂನು ಹೇಳ್ಯೊಂಡು, ಅಪ್ಪ, ಅಮ್ಮ, ತಮ್ಮ ಎಲ್ಲೋರನ್ನೂ ಬಿಟ್ಟು, ಹೆಂಡತಿಯ ಕಟ್ಯೊಂಡು ತಿರುಗಿಯೊಂಡು ಬಂದೆ. .
ಅಪ್ಪ ಅಮ್ಮನ ಮದುವೆ ಆದ ಕಾಲಲ್ಲಿ ಹನಿಮೂನು ಹೇಳಿ ಇತ್ತಿಲ್ಲೆಡ; ಆ ಮೇಲೆಯೂ ಅವು ತಿರುಗಲೆ ಹೇಳಿ ಹೋದ್ದು ಇಲ್ಲೆ..
ಆದ ಕಾರಣ ಅವಕ್ಕೂ ಒಂದು ತಿರುಗಾಟದ ಏರ್ಪಾಡು ಮಾಡಿದರೆ ಎಂತ’ – ಹೇಳಿ ಯೋಚನೆ ಬಂದ ಕೂಡ್ಲೆ ಅಮ್ಮನತ್ತರೆ ಕೇಳಿದ°, ಅಕ್ಕೊ ಹೇಳಿ. ಬೇಡ ಹೇಳುಗೋ?
ಉಂಡೆಮನೆ ಅತ್ತಿಗೆಯ ಒತ್ತಾಯ!
ಉಂಡೆಮನೆ ಅತ್ತಿಗ್ಗೆ ಖುಷಿಯೇ ಖುಷಿ! ಆದರೆ “ನಾವು ಮಾಂತ್ರ° ಹೋದರೆ ಗಮ್ಮತ್ತಾವುತ್ತಿಲ್ಲೆ, ಹೆಚ್ಚು ಜೆನ ಇದ್ದರೇ ಎಂಜೋಯ್ ಅಪ್ಪದು” ಹೇಳಿತ್ತು  ಅಮ್ಮ.
“ಸರಿ, ಬೇಕಾದವಕ್ಕೆಲ್ಲ ಹೇಳು. ಎಲ್ಲಾ ಏರ್ಪಾಡು ಆನೇ ಮಾಡುತ್ತೆ. ಜೆನ ಇಪ್ಪತ್ತರಿಂದ ಹೆಚ್ಚಪ್ಪಲಾಗ”, ಹೇಳಿದ° ಮಗ.
ಈ ಮಾತುಕತೆ ನೆಡದ್ದು ಜುಲಾಯಿ ಅಖೇರಿಗೆ. ಅಂದಿಂದ ಉಂಡೆಮನೆ ಅತ್ತಿಗೆಯ ಮೊಬೈಲು ಯಾವಾಗಲೂ ಎಂಗೇಜೆ. ಅಣ್ಣ ತಮ್ಮಂದಿಂರಿಂಗೆ, ಅಕ್ಕ ತಂಗೆಕ್ಕೊಗೆ  ಅತ್ತಿಗೆಯ ಫೋನೇ ಫೋನು!

ಬತ್ತಿಲ್ಲೆ ಹೇಳುವ ಪ್ರಶ್ನೆಯೇ ಇಲ್ಲೆ. “ಸೆಪ್ಟಂಬರ ೪ – ೫ಕ್ಕೆ ಕೇರಳಕ್ಕೆ ಹೋಪದು; ಹೋಪ ಬಪ್ಪ ಏರ್ಪಾಡು ಎಲ್ಲ ಮಾಣಿಯೇ ಮಾಡುತ್ತ°.
ವಿವರ ಎಲ್ಲ ಅವನೇ ಮತ್ತೆ ಹೇಳುತ್ತ°.” ಆಲೋಚನೆ ಮಾಡಿ ಹೇಳುತ್ತೆ, ಈಗಳೇ ಹೇಳ್ಳೆ ಸಾಧ್ಯ ಇಲ್ಲೆ, ಹೇಳಿದವಕ್ಕೆ ದಿನಕ್ಕೆರಡು ಸರ್ತಿ ಫೋನು – “ಪ್ರಯಾಣದ ಏರ್ಪಾಡು ಎಲ್ಲಾ ಆಯಿದು, ಬೆಂಗಳೂರಿಂದ ೯ ಜೆನ, ಮಂಗಳೂರಿಂದ ೧೧ ಜೆನ, ೩ ಮಕ್ಕೊ – ಒಟ್ಟು ೨೧ ಜೆನ ಹೇಳಿ ಲೆಕ್ಕ (ಎರಡು ಸಣ್ಣ ಮಕ್ಕೊ ಲೆಕ್ಕಕ್ಕಿಲ್ಲೆ.) ಬೆಂಗಳೂರಿಂದ ಟಿ.ಟಿ.(ಟೆಂಪೊ ಟ್ರಾವೆಲರ್), ಮಂಗಳೂರಿಂದ ರೈಲು.
ಟಿಕೆಟ್ ಬುಕ್ ಆಯಿದು. ೩ನೇ ತಾರೀಕು ಇರುಳು ಪ್ರಯಾಣ.
ಕೊಟ್ಟಾಯಮ್ಮಿಲ್ಲಿ ಉದಿಯಪ್ಪಗ ಒಟ್ಟಪ್ಪದು. ಬೇಕಾರೆ ಹೋಟ್ಳಿಲ್ಲಿ ರೂಮು ತೆಕ್ಕೊಂಡು ಫ್ರೆಶ್ ಅಪ್ಪದು. ಅಲ್ಲಿಂದ ಎರಡು  ಟಿ.ಟಿ.ಲಿ ದೋಣಿಗೆ ಹೋಪದು.
ಒಂದು ದಿನ ದೋಣಿಲಿ ಇಪ್ಪದು. ಮರದಿನ ವಾಪಾಸು ಬಪ್ಪದು.
“ಒಂದು ದಿನ ಇಡೀ ದೋಣಿಲಿ ಇಪ್ಪದು ಹೇಂಗೆ, ಎಲ್ಲೆಲ್ಲಿಗೆ ಹೋಪಲಿದ್ದು – ಒಂದೂ ಅರ್ಥ ಆಯಿದಿಲ್ಲೆ. ವಿವರ ಕೇಳಿದರೆ, “ಅದೆಲ್ಲ ಮಾಣಿ ಮೆಯಿಲ್ ಮಾಡ್ತ”, ಹೇಳಿತ್ತು ಅತ್ತಿಗೆ.
ಕೊಡೆಯಾಲಂದ ರೈಲ್ಲಿ ಹೋಪವು ಆರೆಲ್ಲ ಹೇಳುವ ವಿವರ ಸಿಕ್ಕಿತ್ತು. ಅವಕ್ಕೆ ಆರಿಂಗೂ ಹೆಚ್ಚಿನ ವಿವರ ಸಿಕ್ಕಿದ್ದಿಲ್ಲೆ.

ಕೊಡೆಯಾಲಂದ ಹೆರಟತ್ತು ರೈಲು ! ತುಂಬಿತ್ತು ಹೊಟ್ಟೆ!!
ಅಂತೂ ಸೆಪ್ಟಂಬರ ೩ನೇ ತಾರೀಕು ಬಂತು. ಮದಲೇ ಮಾತಾಡಿಯೊಂಡ ಹಾಂಗೆ ಮಂಗಳೂರಿಂದ ರೈಲ್ಲಿ ಹೋಪವು ಇರುಳು 7:45 ಕ್ಕೆ ರೈಲ್ವೇ ಸ್ಟೇಶನಿಲ್ಲಿ ಒಟ್ಟು ಸೇರದೊವು.
ಸರ್ಪಮಲೆ ಅತ್ತೆ, ಮಾವ , ಶಿಮ್ಲಡ್ಕ ಅಕ್ಕ, ಭಾವ,  ಚಕ್ರಕೋಡಿ ಅತ್ತಿಗೆ, ಶಾಸ್ತ್ರಿ ಡಾಕ್ಟ್ರು, ಹೆಂಡತಿ, ಮಗಳೊಟ್ಟಿಂಗೆ ಬಾಬುಕಟ್ಟೆ ಭಾವ – ಹೀಂಗೆ ಒಂಭತ್ತು ಜೆನ ಎಂಟೂವರೆಯ ರೈಲ್ಲಿ ಹೆರಟವು.
ಕಾಸ್ರೋಡಿಲ್ಲಿ ಕಳೆಯತ್ತೋಡಿ ಮಾಣಿ ಹೆಂಡತಿ ಮಕ್ಕಳೊಟ್ಟಿಂಗೆ (ಮಕ್ಕೊ ಇಬ್ರು-ಒಬ್ಬನ ಲೆಕ್ಕ) ರೈಲಿಂಗೆ ಹತ್ತಿದ°.
ಹೆಮ್ಮಕ್ಕೊ ಮದಲೇ ಮಾತಾಡ್ಯೊಂಡು ಇರುಳಾಣ ಊಟದ ಏರ್ಪಾಡಿನ ಮಾಡಿತ್ತಿದ್ದವು. ಚಕ್ರಕೋಡಿ ಅತ್ತಿಗೆಯ ಚಪಾತಿ, ಸಬ್ಜಿ, ಚಟ್ನಿ, ಸರ್ಪಮಲೆ ಅತ್ತೆಯ ತಾಳು, ಮಾವಿನ ಕಾಯಿ ಚಟ್ನಿ, ಬಾಬುಕಟ್ಟೆ ಪತ್ರೊಡೆ, ಹೋಳಿಗೆ, ನಾರಾಯಣ ಕಟ್ಟರ್,  ಕಳೆಯತ್ತೋಡಿಯ ಪಲಾವ್, ಸಲಾಡ್ – ಅಲ್ಲದ್ದೆ ಸೇಬು, ಬಾಳೆ ಹಣ್ಣು, ಚಕ್ಕುಲಿ, ಜ್ಯೂಸು, ಜೀರೆಕ್ಕಿ, ಏಲಕ್ಕಿ, ಇತ್ಯಾದಿ ಹಾಕಿದ ಕೊದಿಶಿ ತಣಿಶಿದ ರುಚಿಯಾದ ನೀರು.
ಉಂಬಲೆ ಬಾಳೆಲೆ, ಪೇಪರ್ ಪ್ಲೇಟು, ಪ್ಲೇಸ್ಟಿಕ್ ಸ್ಪೂನ್!
ಅಂತೂ ರೈಲ್ಲಿ ಭರ್ಜರಿ ಊಟ!!

ಉದಿಯಪ್ಪಗ ಐದೂವರಗೆ ಕೊಟ್ಟಾಯಮ್ಮಿಲ್ಲಿ ಇಳುದು ಸ್ಟೇಶನ್ ಹತ್ತರೆ ಒಂದು ಹೋಟ್ಳಿಲ್ಲಿ ದೊಡ್ಡ ರೂಮು ತೆಕ್ಕೊಂಡು ನಿತ್ಯ ಕರ್ಮಂಗಳ ಮುಗಿಶಿ, ಕಾಫಿ ತಿಂಡಿ ಅಪ್ಪಗ ಬೆಂಗಳೂರಿನ  ಟಿ.ಟಿ. ಬಂತು.
ಅದಲ್ಲಿ ಉಂಡೆಮನೆ ಅಣ್ಣ, ಅತ್ತಿಗೆ, ಮಗ, ಸೊಸೆ, ಸಣ್ಣ ಮಗ, ಪುಂಜತ್ತೋಡಿ ಎಂಜಿನಿಯರು ದಂಪತಿ, ಕೂಸು, ಅಲ್ಲದ್ದೆ ಉಂಡೆಮನೆ ಅತ್ತಿಗೆಯ ಇಬ್ರು ಫ್ರೆಂಡುಗೊ ಕೂಡಾ ಬಂದದು ಅತ್ತಿಗೆಯ ಭಾಗ್ಯ!, ಸೌಭಾಗ್ಯ!! – ಹೀಂಗೆ ಒಂಭತ್ತು ಜೆನ.
ಅವು ರೆಡಿ ಅಪ್ಪಗ ಕರಕ್ಕೊಂಡು ಹೋಪಲೆ ಬೋಟಿನವರ ಟಿ.ಟಿ. ಬಂತು. ಎರಡು ಟಿ.ಟಿ.ಲಿ ಜೆನ ಸರಿ ಆತು.

ವೆಂಬನಾಡು ಎಂಬ ಸಾಗರ!
ಹೋಪದು ಕುಮಾರಕಮ್ ಹಿನ್ನೀರಿಂಗೆ ಹೇಳಿ ಈಗ ಗೊಂತಾತು! ಈ ಹೆಸರು ಎಲ್ಲಿಯೋ ಕೇಳಿದ್ದೆ – ಹೇಳಿದವು ಸರ್ಪಮಲೆ ಮಾವ.
ಆದರೆ ಎಲ್ಲಿ, ಯಾವಾಗ ಹೇಳಿ ಅವಕ್ಕೆ ಬೇಗ ನೆಂಪಾತಿಲ್ಲೆ. ಅವರ  ಕಂಪ್ಯೂಟರ್ (ಶೋಲ್ಡರ್ ಟಾಪ್! – ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಹೇಳಿರೆ ಗೊಂತಿದ್ದನ್ನೆ?) ಬೇಗ ರೆಸ್ಪಾಂಡ್ ಮಾಡ್ತಿಲ್ಲೆ!
೨-೩ ಸರ್ತಿ ಟ್ರೈ ಮಾಡಿದ ಮೇಲೆ ಫೈಲು ಓಪನ್ ಆತು!! ವಾಜಪೇಯಿ ಪ್ರಧಾನಿ ಆಗಿಪ್ಪಗ, ೨೦೦೦ನೇ ಇಸವಿ ದಶಂಬರ ಕಡೇಂಗೆ, ವಾರ್ಷಿಕ ರಜೆಲಿ ಕೆಲವು ದಿನ ಕುಮಾರಕಮ್ಮಿನ ಒಂದು ರಿಸಾರ್ಟಿಲ್ಲಿ ಬಂದು ಕೂದ್ದದು, ಅಲ್ಲಿ ಕೂದೊಂಡು ಬರದ “ಕುಮಾರಕಮ್ ಮ್ಯೂಸಿಂಗ್ಸ್”ನ ಹೊಸ ವರ್ಷದ ದಿನ ಓದಿದ್ದು ಎಲ್ಲ ಮಾವಂಗೆ ನಿದಾನಕ್ಕೆ ಸರಿಯಾಗಿ ನೆಂಪಾತು.
ಆ ಲೇಖನಲ್ಲಿ ವಾಜಪೇಯಿ ಕುಮಾರಕಮ್ಮಿನ ಬಗ್ಗೆ ಈ ರೀತಿ ಹೇಳಿದ್ದವಡ: “ಸಮುದ್ರದಷ್ಟು ವಿಶಾಲವಾದ ವೆಂಬನಾಡು ಸರೋವರದ ಕರೇಲಿಪ್ಪ ಕುಮಾರಕಮ್ ರಿಸಾರ್ಟಿನ ಹಚ್ಚ ಹಸುರಿನ ಪರಿಸರ ಎನ್ನ ಕಣ್ಣಿಂಗೆ ಹಬ್ಬವೇ ಆತು.
ಇಲ್ಲಿಯ ಸ್ತಬ್ದ ಪ್ರಕೃತಿ ಸೌಂದರ್ಯ ಚಿಂತನೆಗೆ ಒಳ್ಳೆಯ ಹಿನ್ನೆಲೆ ಒದಗುಸುತ್ತು”, ಹೇಳಿ. ಈ ಚಿಂತನೆ ಹೇಳಿದರೆ ನವಗರಡಿಯ! ಚಿಂತೆ, ತಲೆಬೆಶಿ, ತಾಪತ್ರಯ ಹೇಳ್ತದು ಗೊಂತಿದ್ದು.
ಅದೆಲ್ಲ ಒಂದೆರಡು ದಿನದ ಮಟ್ಟಿಂಗೆ ಮರವಲೆ ಹೇಳಿ ಹೆರಟವಕ್ಕೆ ಚಿಂತನೆಯ ಚಿಂತೆ ಎಂತಗೆ?
ಈ ವರ್ಷ ಆಗಸ್ಟ್ ಕಡೇಂಗೆ ಈಗಾಣ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡಾ ಪತಿಯೊಟ್ಟಿಂಗೆ ಕುಮಾರಕಮ್ಮಿಂಗೆ ಬಂದು ಹೋಯಿದು! (ಚಿಂತನೆ ಮಾಡಿದ ಶುದ್ದಿ ಟಿವಿಲಿ ಆಗಲೀ, ಪೇಪರಿಲ್ಲಿ ಆಗಲೀ ಬಯಿಂದಿಲ್ಲೆ!)
ಕೇರಳದ ಈ ಹಿನ್ನೀರು ಪ್ರಸಿದ್ಧ. ಸಮುದ್ರಕ್ಕೆ ಸಮಾನಾಂತರವಾಗಿ ಕರಾವಳಿಲಿ ನೂರಾರು ಕಿಲೋಮೀಟರ್ ಉದ್ದಕ್ಕೆ ಇಪ್ಪ ಸಮುದ್ರದ ಹಾಂಗೆ ಕಾಂಬ ವೆಂಬನಾಡು ಸರೋವರ.
ಸಾಮಾನ್ಯ ೨೦೦ ಚದರ ಕಿಲೋಮೀಟರ್ ವಿಸ್ತೀರ್ಣ ಇಪ್ಪ ಶಾಂತ ಸರೋವರ; ನೀರಿಲ್ಲಿ ನಿಧಾನ ಚಲನೆ ಇದ್ದರೂ, ಸಮುದ್ರಲ್ಲಿಪ್ಪ ಹಾಂಗೆ ತೆರಗಳ ಅಬ್ಬರ ಇಲ್ಲೆ.
ಈ ವೆಂಬನಾಡು ಸರೋವರಲ್ಲಿಪ್ಪ ಸಣ್ಣ ಸಣ್ಣ ದ್ವೀಪ ಸಮೂಹವೇ ಕುಮಾರಕಮ್. ಕೊಟ್ಟಾಯಮ್ಮಿಂದ ಸಾಧಾರಣ ೧೫ ಕಿಲೋಮೀಟರ್ ಪ್ರಯಾಣ.
ದೋಣಿಮನೆ ಹೇಂಗಿದ್ದು?
ದೋಣಿ ಹತ್ತುವ ಜಾಗೆ ಬಂತು. ಸರೋವರಲ್ಲಿ ಒಂದೊಂದಾಗಿ ನಿಧಾನವಾಗಿ ಹೋಪ ದೋಣಿ ಮನಗೊ ಕಾಂಬಲೆ ಸುರುವಾತು.
ಉಂಡೆಮನೆ ಮಾಣಿಗೆ ಮದಲೆ ಇಲ್ಲಿಗೆ ಬಂದು ಗೊಂತಿದ್ದು. ಸಾಫ್ಟ್ ವೇರ್ ಫ್ರೆಂಡುಗಳ ಟೂರು ಏರ್ಪಾಡು ಮಾಡಿಯೂ ಅನುಭವ ಇದ್ದು.
ಅವ° ಮದಲೇ ಎಲ್ಲವನ್ನೂ ದೋಣಿಯವರತ್ತರೆ ಮಾತಾಡಿ ನಿಗಂಟು ಮಾಡ್ಯೊಂಡೇ ಬಯಿಂದ°. ದೋಣಿ ಬಂತು; ದೋಣಿಯ ಹಿನ್ನೀರಿನ ಕರೇಂಗೆ ತಂದು ನಿಲ್ಲಿಸಿ ಬಳ್ಳಿಲಿ ತೆಂಗಿನ ಮರಕ್ಕೆ ಗಟ್ಟಿಯಾಗಿ ಕಟ್ಟಿದವು.
ಎಲ್ಲೋರಿಂಗೂ ದೋಣಿ ಮನೆಯ ಒಳ ಹೋಪಲೆ ಅಂಬ್ರೇಪು. ಒಬ್ಬೊಬ್ಬನನ್ನೇ ಕೈ ಹಿಡುದು ದೋಣಿಯ ಜೆನವೇ ಹತ್ತಿಸಿತ್ತು. ಅದು ಎರಡು ಬೆಡ್ ರೂಮಿನ ಮನೆ.
ಎದುರು ದೊಡ್ಡ ಹಾಲ್ ಅಥವಾ ಡ್ರಾಯಿಂಗ್ ರೂಮ್. ಕೂಪಲೆ ಚೇರುಗೊ, ನೋಡ್ಳೆ ಟಿ.ವಿ.  ಅದರ ಎದುರು ಕೊಡೀಲಿ ಡ್ರೈವರನ ಸೀಟು. ಹಾಲಿಂದ ಹಿಂದೆ ಎಡದ ಸೈಡಿಲ್ಲಿ ಉದ್ದಕ್ಕೆ ಜೆಗಿಲಿ.
ಉಪ್ಪರಿಗ್ಗೆ ಹತ್ತಲೆ ಮೆಟ್ಳು. ಮೆಟ್ಳಿಂದ ಹಿಂದೆ ಎರಡು ಬೆಡ್ ರೂಮು. ಅದರ ಹಿಂದೆ ಡೈನಿಂಗ್ ಹಾಲ್. ಅದರ ಹತ್ತರೆ ಹಿಂದೆ ಕಿಚ್ಚನ್. ಮೇಲೆ ಮಾಳಿಗೆಲಿ ವಿಶಾಲಕ್ಕೆ ಇಪ್ಪ ಹಾಲ್.
ಸುತ್ತ ಕರೆ ಚಿಟ್ಟೆಯ ಹಾಂಗೆ ಇದ್ದು. ಸುತ್ತಕ್ಕೆ ಬೇಕಾದಷ್ಟು ಕುರ್ಶಿಗಳ ಮಡಿಗಿದ್ದವು. ಮುಂದಾಣ ಹೊಡೆಲಿ ಎದುರು ಸ್ಟೇಜಿನ ಹಾಂಗೆ ಇದ್ದು. ಎರಡೂ ಬೆಡ್ ರೂಮು ಏ.ಸಿ.; ಬಾತ್ ಎಟ್ಟಾಚ್ಡ್. ಬಾತ್ ರೂಮಿಲ್ಲಿ ಶವರ್, ಟಬ್, ಕಮೋಡ್ ಎಲ್ಲ ಇದ್ದು. ಒಟ್ಟಿಲ್ಲಿ ಹೇಳೆಕಾದರೆ, ಫೈವ್ ಸ್ಟಾರ್ ಅಲ್ಲದ್ದರೂ, ಲಾಯ್ಕಿನ ತ್ರೀ ಸ್ಟಾರ್ ಹೋಟ್ಳಿನ ಹಾಂಗಿತ್ತು. ಎಲ್ಲೋರಿಂಗೂ ಕುಶಿಯೇ ಕುಶಿ!
ರೂಮಿನ ಒಳ ಇದ್ದರೆ ನೀರಿನ ಮೇಗೆ ದೋಣಿಲಿ ಇಪ್ಪದು ಹೇಳುವ ಕಲ್ಪನೆಯೇ ಬತ್ತಿಲ್ಲೆ!.
ದೋಣಿಯ ಒಳ ಹೋದ್ದು ಉದಿಯಪ್ಪಗ ಹನ್ನೊಂದು ಗಂಟಗೆ. ಮರದಿನ ಅದೇ ಸಮಯದ ವರೆಗೆ, ಹೇಳಿರೆ ಒಂದು ದಿನಕ್ಕೆ, ದೋಣಿ ಬುಕ್ ಮಾಡಿದ್ದು. ಡ್ರೈವರ್ ಸೇರಿ ದೋಣಿಲಿ ಮೂರು ಜೆನ ಕೆಲಸದವು.
ದೋಣಿಗೆ ಬಸ್ಸಿನ ಎಂಜಿನ್. ಬಸ್ ಬಿಡ್ತ ಹಾಂಗೆ ಬಿಡುವದು ಹೇಳಿತ್ತು ಡ್ರೈವರ್. ಕೆಲವು ಹೆಮ್ಮಕ್ಕೊ ಮಕ್ಕೊ ಡ್ರೈವರ್ ಸೀಟಿಲ್ಲಿ ಕೂದು ಡ್ರೈವ್ ಮಾಡುವ ಪಟ ತೆಗೆಶಿಗೊಂಡವು.
ದೋಣಿ ಚೆಂದಕ್ಕೆ ಕ್ಲೀನಾಗಿ ಮಡಿಕ್ಕೊಂಡಿದವು. ಚಾಯವೋ, ಕಾಫಿಯೋ ಬೇಕೊ ಹೇಳಿ ಕೇಳಿ ಮಾಡಿ ಕೊಟ್ಟವು. ಕೆಲಸದವು ಲಾಯಿಕಿಲ್ಲಿ ನಾವು ಸಂತೋಷಲ್ಲಿ ಇಪ್ಪ ಹಾಂಗೆ ನೋಡಿಗೊಳ್ತವು.
ಹಗಲಿಡೀ ದೋಣಿ ನಿದಾನಕ್ಕೆ ಹೋಯ್ಕೊಂಡೇ ಇತ್ತು. ಮೂರ್ಸಂದಿ ಹೊತ್ತಿಂಗೆ ದೋಣಿಯ ಹಿನ್ನೀರಿನ ಕರೇಂಗೆ ತಂದು ನಿಲ್ಲಿಸಿ, ಮರಕ್ಕೆ ಎಳದು ಕಟ್ಟಿದವು.
ಇರುಳು ದೋಣಿ ಅಲ್ಲೇ ಇತ್ತು.
ಈ ಹಿನ್ನೀರಿಲ್ಲಿ ದೋಣಿ ಹೋಪಗ ಕಾಂಬ ಪ್ರಕೃತಿ ಸೌಂದರ್ಯವ ಸರಿಯಾಗಿ ವರ್ಣಿಸಿ ಹೇಳುವ ಶಕ್ತಿ ನವಗೆ ಇಲ್ಲೆ. ಆ ಸಂತೋಷವ ಅನುಭವಿಸೆಕ್ಕಷ್ಟೇ ಹೊರತು ವಿವರಿಸಿದರೆ ಆ ಅನುಭವ ಸಿಕ್ಕ!
(ಪಟ ನೋಡಿ ಅಂದಾಜು ಮಾಡಿ. ಕವಿಯಾದರೆ ಕವಿತೆ ಬರೆತ್ತಿತ.  ಮುಳಿಯ ಬಾವ ಭಾಮಿನಿ ಷಟ್ಪದಿಲೇ ಬರೆತ್ತಿತ! ನವಗೆ ಷಟ್ಪದಿ ಹೇಳಿದರೆ ಆರು ಸಾ ಲಿನ  ಪದ್ಯ ಹೇಳಿ ಅಷ್ಟೇ ಗೊಂತು.
ಆರನೇ ಕ್ಲಾಸಿಪ್ಪಗ ಅಮೈ ಮಾಷ್ಟ್ರ ಶರಷಟ್ಪದಿಲಿ ಬರವಲೆ ಸುಲಾಬ, ಅದು ಬಾಣದ ಹಾಂಗೆ ಹೋವುತ್ತು ಹೇಳಿ ಹೇಳಿದ್ದು ನೆಂಪಾವುತ್ತು. ಅದಕ್ಕೆ ಉದಾಹರಣಗೆ ಮಾಷ್ಟ್ರ ಅರ್ಧ ಷಟ್ಪದಿ – ಮೂರು ಗೀಟು –  ಬರದು ತೋರಿಸಿದ್ದು ನೆಂಪಿದ್ದು:
ಸುಬ್ಬರಮಣ್ಯನು
ಅಬ್ಬರದಿಂದಲಿ
ಗೊಬ್ಬರ ಹೊತ್ತನು ತೋಟಕ್ಕೆ – ಹೇಳಿ)
ದೋಣಿಯ ಸುತ್ತಿ ಸುತ್ತಿ ನೋಡಿ ತಿಳುಕ್ಕೊಂಡ ಮೇಲೆ ಎಲ್ಲೋರು ಮಾಳಿಗೆಲಿ ಸಭೆ ಸೇರಿದವು.
ಉಂಡೆಮನೆ ಮಾಣಿಯೇ ಸಭೆಯ ಸಮರ್ಥ ನಿರ್ವಾಹಕ. ಎಲ್ಲೋರಿಂಗೂ ಅಪ್ಪಂತ ಆಟಂಗೊ, ಜೋಕುಗೊ, ಪದ್ಯಂಗೊ ಸುರು ಆತು. ದೋಣಿ ನಿದಾನಕ್ಕೆ ಮುಂದೆ ಹೋವುತ್ತಾ ಇತ್ತು.
ಸುತ್ತ ನೋಡಿದರೆ ನೀರೇ ನೀರು. ಅಲ್ಲೊಂದು ಇಲ್ಲೊಂದು ಇದೇ ರೀತಿಯ ದೋಣಿಗೊ ಇದೇ ರೀತಿ ಹೋಯ್ಕೊಂಡಿಪ್ಪದು ಕಂಡೊಂಡಿತ್ತು.
ಅಲ್ಲದ್ದೆ ಈ ಸರೋವರಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ದ್ವೀಪಂಗೊ, ಅದಲ್ಲಿ ಮನಗೊ, ತೆಂಗಿನ ಮರಂಗೊ ಕಂಡೊಂಡಿತ್ತು. ಮಧ್ಯಾಹ್ನ ಊಟ ಆದ ಮೇಲೆ ತಿರುಗ ಎಲ್ಲೋರು ಸೇರಿ ಆಟಂಗೊ, ಸ್ಪರ್ಧಗೊ, ತಮಾಷಗೊ ಮುಂದುವರುದತ್ತು. ಈ ಕಾರ್ಯಕ್ರಮಂಗಳ ನಿರ್ವಹಣಗೆ ಮಾಣಿಗೆ ಮಾಣಿಯ ಅಮ್ಮನೂ, ಅಮ್ಮನ ಫ್ರೆಂಡೂ ಸಹಕರಿಸಿದವು.
ಹೊತ್ತೋಪಗ ದೋಣಿ ನಿಂದ ಮೇಲೆ ಅಂತಾಕ್ಷರಿ, ಹೌಸಿ ಹೌಸಿ, ಆಶು ಕವಿತೆ, ಆಶು ಭಾಷಣ, ನಗೆಹನಿಗೊ, ಬಹುಮಾನ ವಿತರಣೆ.
ಎಡೆಲಿ ತಿಂಬಲೆ ಚಿಪ್ಸ್, ಕಡ್ಳೆ, ಸ್ವೀಟುಗೊ, ಹಣ್ಣುಗೊ. ಹಿರಿಯ ನಾಗರಿಕರಿಂಗೆ (ಸೀನಿಯರ್ ಸಿಟಿಜನ್) ವಿಶೇಷ ಮರ್ಯಾದೆ! ಇಡೀ ಗ್ರೂಪಿಲ್ಲಿ ನಾಲ್ಕು ಜೆನ ಗಂಡಸರು ಮಾಂತ್ರ ಹಿರಿಯರು.
ಹೆಮ್ಮಕ್ಕಳಲ್ಲಿ ನಾಲ್ಕು ಜೆನ ಅವರಿಂದ ಮತ್ತಾಣ ಸ್ಥಾನಲ್ಲಿದ್ದವು! ಒಳುದವು ಜವ್ವನಿಗರು. ಆದರೆ ಎಲ್ಲಾ ಆಟಲ್ಲಿಯೂ ಪ್ರತಿಯೊಬ್ಬನೂ ಉತ್ಸಾಹಂದ ಭಾಗವಹಿಸಿದ್ದು ಎಲ್ಲೋರಿಂಗೂ ಸಂತೋಷ ಕೊಟ್ಟ ವಿಷಯ.
ಆ ಮೇಲೆ ಪ್ರತಿಯೊಬ್ಬನೂ ಈ ಪ್ರವಾಸದ ಬಗ್ಗೆ ಅವರವರ ಅಭಿಪ್ರಾಯ ಹೇಳಿದವು. ಎಲ್ಲೋರಿಂಗೂ ಇದೊಂದು ಮರವಲೆಡಿಯದ್ದ ಅನುಭವ! ಇಷ್ಟು ಜೆನ ನೆಂಟ್ರ ಒಟ್ಟು ಮಾಡಿ ಇಷ್ಟು ಲಾಯಿಕಿಲ್ಲಿ ಈ ಪ್ರವಾಸದ ಆಲೋಚನೆ ಮಾಡಿ ಏರ್ಪಾಡು ಮಾಡಿದ  ಉಂಡೆಮನೆ ಅತ್ತಿಗೆಯನ್ನೂ, ಮಾಣಿಯನ್ನೂ ಎಷ್ಟು ಹೊಗಳಿದರೂ ಸಾಲ ಹೇಳುವವೇ ಎಲ್ಲೋರು! ವರ್ಷಕ್ಕೆ ಎರಡು ಮೂರು ಸರ್ತಿ ಹೀಂಗೆ ಹೋಪಲೆ ರೆಡಿ ಹೇಳಿ ಪ್ರತಿಯೊಬ್ಬನೂ ಹೇಳಿದವು.
ಉಂಡೆಮನೆ ಮಾಣಿ ಮುಂದಾಲೋಚನೆ ಮಾಡಿ ಇರುಳಿಂಗೆ ಇನ್ನೊಂದು ದೋಣಿ ಮನೆಯನ್ನೂ ಮದಲೇ ಬುಕ್ ಮಾಡಿತ್ತಿದ್ದ.
ಹಾಂಗೆ ಇರುಳಿಂಗೆ ಮೂರು ಬೆಡ್ ರೂಮಿನ ಇನ್ನೊಂದು ದೋಣಿಯೂ ಹತ್ತರೆ ಬಂದು ನಿಂದತ್ತು. ಎಕ್‍ಸ್ಟ್ರಾ ಬೆಡ್ ಬೇಕಾಷ್ಟು ಕೊಟ್ಟವು. ಆದರೆ ಬೆಡ್ ರೂಮಿನ ಹೆರ ಮನುಗಲೆ ಎಡಿಯ, ಒಳವೇ ಬಾಗಿಲು ಹಾಕಿ ಮನುಗೆಕು ಹೇಳಿ ದೋಣಿಯವರ ರೂಲ್ಸ್.
ಐದು ಡಬಲ್ ಬೆಡ್ ರೂಮಿಲ್ಲಿ ೨೧ ಜೆನಕ್ಕೆ ಏನೂ ಕಷ್ಟ ಆಯಿದಿಲ್ಲೆ. ಉದಿಯಪ್ಪಗ ಮೀವಲೆ ಬೆಶಿ ನೀರು ಬೇಕಾದವಕ್ಕೆ ಕೊಟ್ಟವು.
ಊಟ ತಿಂಡಿಯ ಬಗ್ಗೆ ಉಂಡೆಮನೆ ಮಾಣಿ ಮದಲೇ ಅವಕ್ಕೆ ಸರಿಯಾಗಿ ತಿಳಿಶಿ ಹೇಳಿದ್ದ – ಯಾವದೇ ರೀತಿಯ ನಾನ್ ವೆಜ್ ಬೇಡ; ಪ್ಯೂರ್ ವೆಜ್ ಮಾಂತ್ರ ಹೇಳಿ.
ನಿಂಗೊಗೆ ಬೇಕಾದ ಹಾಂಗೆ ಮಾಡಿ ಕೊಡ್ಳಕ್ಕು, ನಿಂಗಳೇ ಮಾಡ್ಯೋಳ್ತರೂ ತೊಂದರೆ ಇಲ್ಲೆ ಹೇಳಿ ಮದಲೇ ಒಪ್ಪಿದ್ದವು. ಎಂತೆಂತ ಆಯೆಕ್ಕು, ಉಪ್ಪು, ಖಾರ ಎಷ್ಟಿರೆಕು, ಅಶನ ಎಷ್ಟು ಬೇಯೆಕ್ಕು ಹೇಳಿ ಡೈರೆಕ್ಷನ್ ಕೊಡ್ಳೆ
ಉಂಡೆಮನೆ ಅತ್ತಿಗೆಯ ನೇತೃತ್ವಲ್ಲಿ ಹೆಮ್ಮಕ್ಕಳ ಟೀಮೇ ಇತ್ತನ್ನೆ! ಆದ ಕಾರಣ ಏನೂ ತೊಂದರೆ ಆಯಿದಿಲ್ಲೆ. ಈ ದೋಣಿ ಮನಗಳಲ್ಲಿ ಸ್ಪೆಷಲ್ ತಿಂಡಿ ಹೇಳಿದರೆ ಕರಿಮೀನು ಹೊರುದ್ದದಡ.
ವೆಂಬನಾಡು ಹಿನ್ನೀರಿಲ್ಲಿ ಸಿಕ್ಕುವ ಕರಿಮೀನು ಭಾರೀ ರುಚಿ ಅಡ. ಅದು ಭಾರೀ ದುಬಾರಿ ಹೇಳುತ್ತವು. ಉಂಡೆಮನೆ ಅತ್ತಿಗೆ ಕರಿಮೀನಿನ ಬದಲು ಬಾಳೆ ಹಣ್ಣಿನ ಪೋಡಿಯೂ, ಉದ್ದ ಮೆಣಸಿನ ಪೋಡಿಯೂ ಮಾಡಿಸಿತ್ತು. ಕರಿಮೀನು ಹೊರುದ ಎಣ್ಣೆಲಿ ಮಾಡಿದ್ದೊ ಗೊಂತಿಲ್ಲೆ!!
( ಹೊರುದ ಎಣ್ಣೆ ಹೇಳುವಗ ಪೆರ್ಲ ಶಾಲೆಲಿ ಏಳನೇ ಕ್ಲಾಸಿಲ್ಲಿಪ್ಪಗ ಪುಂಡಿಕಾಯಿ ಮಾಷ್ಟ ಹೇಳಿದ್ದು ನೆಂಪಾತು! ಹೋಟ್ಳಿಲ್ಲಿ ಹೊರುದ ವಸ್ತುಗಳ ಹೆಚ್ಚು ತಿಂಬಲಾಗ ಹೇಳಿ; ಎಂತಕೆ ಹೇಳಿದರೆ ಅಲ್ಲಿ ಹೊರಿವ ಎಣ್ಣೆ ಆ ಹೋಟ್ಲಿನಷ್ಟೇ ಹಳತ್ತು!
ಸುರುವಿಂಗೆ ಉಪಯೋಗಿಸಿದ ಎಣ್ಣಗೆ ಎಣ್ಣೆ ಸೇರಿಸಿಯೊಂಡೇ ಹೋವುತ್ತೊವು! ಅದು ಒಳ್ಳೆದಲ್ಲ; ವಿಷ, ಹೇಳಿ.)
ಲಾಯಿಕಾಯಿದು ಹೇಳಿ ಎಲ್ಲೋರು ಲಾಯಿಕಿಲ್ಲಿ ತಿಂದವು. ಊಟಕ್ಕೆ ಕೊಯಿಶಕ್ಕಿ ಅಶನ, ತಾಳು, ಸಾರು, ಸಾಂಬಾರು, ಮಸರು, ಉಪ್ಪಿನಕಾಯಿ ಎಲ್ಲ ಮಾಡಿತ್ತಿದ್ದೊವು.
ಮರದಿನ ಉದಿಯಪ್ಪಗ ಬ್ರೇಕ್ ಫಾಸ್ಟ್ ಎರಡು ದೋಣಿಲಿ ಬೇರೆ ಬೇರೆ ಮಾಡಿದವು. ಒಂದು ಬೋಟಿಲ್ಲಿ ಪೂರಿ ಬಾಜಿ, ಇನ್ನೊಂದಲ್ಲಿ ಇಡ್ಲಿ ಚಟ್ನಿ, ಸಾಂಬಾರ್, ಅಲ್ಲದ್ದೆ ಕೇರಳದ ಪುಟ್ಟು (ಸೇಂಪ್ಲ್ ನೋಡ್ಳೆ).
ಎಲ್ಲಾ ಹೆಮ್ಮಕ್ಕಳೂ ಪುಟ್ಟು ಮಾಡುದು ಹೇಂಗೆ ಹೇಳಿ ಕೇಳಿ ತಿಳುಕ್ಕೊಂಡವು. ಪುಟ್ಟು ಮಾಡುವ ಪಾತ್ರವನ್ನೂ ನೋಡಿಗೊಂಡವು. ತಿಂಡಿ, ಕಾಫಿ ಆದ ಮೇಲೆ ಎರಡು ದೋಣಿಗಳೂ ಪ್ರಯಾಣ ಮುಂದುವರಿಸಿದವು.
ಈಗ ಜೆನ ಎರಡು ಪಾಲಾಗಿ ಎರಡು ದೋಣಿಲಿ ಪ್ರಯಾಣ. ಸಾದಾರಣ ಒಂದು ಗಂಟೆಲಿ ಆಲಪ್ಪುಳದ ಹತ್ತರಾಣ ಮುಹಮ್ಮ ಎಂಬಲ್ಲಿಗೆ ಎತ್ತಿತ್ತು. ಅಲ್ಲಿಗೆ ದೋಣಿ ಮನೆ ವಿಹಾರ ಮುಗಾತು.

ಕುಮಾರಕಮ್ ಪ್ರದೇಶಲ್ಲಿ ಸಾವಿರಾರು ಇಂತಹ ದೋಣಿ ಮನಗೊ ಇದ್ದು. ಒಂದು, ಎರಡು, ಮೂರು, ನಾಲ್ಕು ಬೆಡ್ ರೂಮುಗಳ ಬೇರೆ ಬೇರೆ ಡಿಸೈನಿನ ದೋಣಿಮನಗಳ ಕಾಣುತ್ತು.
ಒಟ್ಟು ಎಷ್ಟು ದೋಣಿ ಮನಗೊ ಇದ್ದು ಹೇಳಿ ದೋಣಿಯವರತ್ತರೆ ಕೇಳಿದರೆ ಒಂದೂವರೆ ಸಾವಿರಂದ ಎರಡು ಸಾವಿರದ ವರೆಗೆ ಇಕ್ಕು ಹೇಳುತ್ತವು. ಆರಿಂಗೂ ಸರಿಯಾದ ಸಂಖ್ಯೆ ಗೊಂತಿಲ್ಲೆ.
ಒಂದು ದಿನಕ್ಕೆ ಇಂತಹ ದೋಣಿ ಮನಗಳ ರೇಟು ನಾಲ್ಕೈದು ಸಾವಿರಂದ ೧೫-೨೦ ಸಾವಿರದ ವರೆಗೆ ಇಕ್ಕು ಹೇಳ್ತವು.
(ಆದರೆ ಕ್ರಿಸ್ಮಸ್, ಹೊಸ ವರ್ಷ, ಓಣಮ್, ದೀಪಾವಳಿ – ಇಂತಾ ಸಮಯಲ್ಲಿ ಕೆಲವು ತಿಂಗಳು ಮದಲೇ ಬುಕ್ ಮಾಡದ್ದರೆ ಸಿಕ್ಕ. ಸಿಕ್ಕಿದರೂ ಎರಡು ಮೂರು ಪಟ್ಟು ಹೆಚ್ಚು ಕೊಡೆಕಕ್ಕು!)
ಇದಲ್ಲಿ ಊಟ,ತಿಂಡಿ ಎಲ್ಲವೂ ಸೇರಿತ್ತು. ಈ ಗ್ರೂಪಿಂಗೆ ಒಬ್ಬೊಬ್ಬಂಗೆ ಒಂದೊಂದು ಸಾವಿರ ರುಪಾಯಿಯ ಹಾಂಗೆ ಉಂಡೆಮನೆ ಮಾಣಿ ಮದಲೇ ನಿಗಂಟು ಮಾಡಿತ್ತಿದ್ದ.
ಕಾಶ್ಮೀರದ ದಾಲ್ ಸರೋವರಲ್ಲಿಪ್ಪ ದೋಣಿ ಮನಗಳ ಬಗ್ಗೆ ನಮ್ಮಲ್ಲಿ ಹೆಚ್ಚಿನವಕ್ಕೆ ನೋಡದ್ದರೂ ಓದಿ ಗೊಂತಿಕ್ಕು. ಈಗ ದೋಣಿಮನೆ ನೋಡೆಕ್ಕಾದರೆ ಭಾರತದ ಉತ್ತರ ಕೊಡೀಂಗೆ ಹೋಯೆಕ್ಕು ಹೇಳಿ ಇಲ್ಲೆ.
ದಕ್ಷಿಣದ ಕೊಡೀಂಗೆ – ಹತ್ತರಾಣ ಕೇರಳಕ್ಕೆ ಹೋದರೆ ಸಾಕು. ಮುಹಮ್ಮಂದ ಸೀದಾ ಗುರುವಾಯೂರಿಂಗೆ ಹೋಗಿ, ಗುರುವಾಯೂರಪ್ಪನ ದರ್ಶನ ಮಾಡಿ, ಹೊತ್ತೋಪಗ ಆರು ಗಂಟಗೆ ಬೆಂಗಳೂರಿನವರ ಅಲ್ಲಿಂದಲೇ ಕಳಿಸಿಕೊಟ್ಟ ಕೊಡೆಯಾಲದ ಗ್ರೂಪು ಅಲ್ಲಿಂದ ತ್ರಿಶೂರಿಂಗೆ ಹೋಗಿ ಇರುಳಾಣ ರೈಲ್ಲಿ
ಹೆರಟು ಮರದಿನ (6ನೆ ತಾರೀಕು ಸೋಮವಾರ) ಉದಿಯಪ್ಪಗ ಐದು ಗಂಟಗೆ ಮಂಗಳೂರಿಂಗೆ ಎತ್ತಿತ್ತು.
ಶುಕ್ರವಾರ ಇರುಳು ಮನೆಂದ ಹೆರಟು, ಸೋಮವಾರ ಉದಿಯಪ್ಪಗ ಮನಗೆ ಎತ್ತುವಲ್ಲಿ ವರೆಗೆ ಎಲ್ಲಿಯೂ ಮಳೆ ಸಿಕ್ಕಿದ್ದೇ ಇಲ್ಲೆ.
ಮಳೆ ಗಾಳಿ ಬಂದಿದ್ದರೆ ಬಹುಶಃ ದೋಣಿ ವಿಹಾರ ಕಷ್ಟ ಆವುತಿತ್ತು.
ಈಗ (ಕ್ರಿಸ್ಮಸ್, ಹೊಸ ವರ್ಷದ ಆಚರಣಗೊ ಎಲ್ಲ ಕಳುದ ಮೇಲೆ) ಕುಮಾರಕಮ್ ದೋಣಿ ವಿಹಾರಕ್ಕೆ ಹೋಪಲೆ ಒಳ್ಳೆ ಸಮಯ.
ಎಲ್ಲವನ್ನೂ ಮದಲೇ ನಿಗಂಟು ಮಾಡಿಯೇ ಹೋಪದು ಒಳ್ಳೆದು. ಸಮಾನ ಮನಸ್ಸಿನ ೧೫-೨೦ ಜೆನ ಸೇರಿ ಹೋದರೆ ಪ್ರಯಾಣವೂ, ದೋಣಿ ವಿಹಾರವೂ ಹೆಚ್ಚು ಸಂತೋಷದಾಯಕ ಅಕ್ಕು!
ಯೋಚನೆ ಮಾಡಿ. ಸಾಧ್ಯ ಇದ್ದರೆ ಹೋಗಿ ಬನ್ನಿ..!
* * * * * * * *
ದೋಣಿವಿಹಾರದ ಪಟಂಗೊ:

11 thoughts on “ದೇವರ ಸ್ವಂತ ರಾಜ್ಯಲ್ಲಿ ದೋಣಿಮನೆ ವಿಹಾರ…

  1. ಸರ್ಪಮಲೆ ಮಾವ°.., ಬರದ್ದು ಲಾಯಕಾಯಿದು ನಿಂಗಳ ಪ್ರವಾಸದ ಕಥನವ. ಎನಗೆ ಕೇರಳಲ್ಲಿದ್ದ ಹಳೆ ದಿನಂಗ ಒಂದರಿ ಕಣ್ಣ ಎದುರು ಹೋತದಾ. ಅಂಬಗ ಹೀಂಗೇ ಇಪ್ಪ ದೋಣಿ ಮನೆಗಳಲ್ಲಿ ಹೋಯಿದಿಲ್ಲೇ. ಇನ್ನೊಂದರಿ ಹೋದಿಪ್ಪಗ ಹೋಯೆಕ್ಕು ಹೇಳಿ ಆತು. ಒಳ್ಳೆ ಮಾಹಿತಿಯೊಟ್ಟಿನ್ಗೆ ಅನುಭವ ಬರದ್ದದು ಲಾಯ್ಕಾಯಿದು. ಧನ್ಯವಾದಂಗಾ.

  2. ಮಾವಾ, ಈ ಲೇಖನ ಓದಿಯಪ್ಪಗ ಪ್ರವಾಸ ಎನಗೆ ಮಾಡೆಕ್ಕು ಹೇಳಿ ಆಶೆ ಆಯಿದು…ಸವಿವರವಾದ ಶುದ್ಧಿ ತಿಳಿಶಿದ್ದಕ್ಕೆ ಧನ್ಯವಾದಂಗೋ!!

  3. ಓದಿ ಅಭಿಪ್ರಾಯ ತಿಳಿಸಿದವಕ್ಕೆಲ್ಲ ಧನ್ಯವಾದಂಗೊ.

  4. lekhana bhaaree laaika aayidu. koodalliye pravaasa hogi banda haange aathu. heengondu gumpili hodare pravasada gammatthu bereye..! undemane maani matte atthigeya lavalavikeya yaavagaloo mechchekke..!! pravasada vivarava odi bhaaree khushee aathu.
    lekhanada madhye banda meenu karuda enneya shuddide laaika aayidu.. 🙂

  5. ಒಳ್ಳೆದಾಯಿದು.ಕೇರಳ ಪ್ರವಾಸ ವಿವರ ಸರೀ ಬಯಿಂದು.ಹೀಂಗೆ ಬರೆತ್ತಾ ಇರಿ.

  6. ಮಾವ° ಅದ್ಭುತ ಪ್ರವಾಸ ಕಥನ..ಖುದ್ದು ಆನೇ ಹೋಗಿ ಬಂದಾಂಗೆ ಆತು…ಒಟ್ಟೊಟ್ಟಿಂಗೆ ರಘುಭಾವನ ತ್ರಿಪದಿಗೊ(ಒಪ್ಪ) (ಹಾಂಗೆ ಹೇಳ್ಳೆ ಅಕ್ಕಾಯಿಕ್ಕು!) ಓಹ್‌… ಎಲ್ಲಾ ಲಾಯ್ಕ ಆಯಿದು..
    ಹೀಂಗೆ ಬರಕ್ಕೊಂಡಿರಿ….

  7. ಮಾವನ ಲೇಖನ ರೈಸಿದ್ದು.ನಿಂಗಳ ಒಟ್ಟಿ೦ಗೆ ಹೊಯಿದೆನೋ ಹೇಳಿ ಅನಿಸುವಷ್ಟು ಆತ್ಮೀಯವಾಗಿತ್ತು.ಧನ್ಯವಾದ.
    ಶರ ಷಟ್ಪದಿ ಹೇಳಿ ಒಂದಿದ್ದೋ? ಕಲಿಯೆಕ್ಕು ಹಾಂಗಾರೆ.

    ದೇವರ ನಾಡಿನ
    ಯೇವನು ನೋಡಿರ°
    ಮಾವನ ಜತೆಲೊ೦ದಷ್ಟು ಜೆನ

    ಉಂಡೆಯಮನೆಯವ°
    ತಂಡದ ನಾಯಕ°
    ಕಂಡಿದ°ಲೋಕವ ಗಟ್ಟಿಜೆನ

    ಮಾಣಿಯ ಹಿಂದೆಯೆ
    ಬಾಣದ ಹಾಂಗೆಯೆ
    ದೋಣಿಯ ಮನೆಯನು ಹತ್ತಿಜೆನ

    ಕರಿಮೀನೆಣ್ಣೆಲಿ
    ಕರುಕುರು ತಿಂಡಿಯ
    ಹೊರುದವು ಹೆಮ್ಮಕ್ಕಳು ಬೇಗ

    ಹಿರಿಯರ ಪದ್ಯವು
    ಕಿರಿಯರ ನಾಟ್ಯವು
    ಮರೆಯದ ಸಂತಸ ಗಮ್ಮತ್ತು

    ಗಗನವ ಮೀರಿದ
    ಅಗಣಿತ ಅನುಭವ
    ಮುಗಿಯುವ°ಮಾವಗೆ ಕೈಗಳನು

  8. ಬಾರೀ ಲಾಯಕಾಯಿದು ಲೆಖನ ಅಲ್ಲಲ್ಲ ಪ್ರವಾಸ ಕಥನ ಸುಬ್ಬರಮಣ್ಯನು ಗೊಬ್ಬರ ಹೊತ್ತದ೦ತೂ ನೆ೦ಪಾಗಿ ನೆ೦ಪಾಗಿ ನೆಗೆ ಬ೦ತು.ಕೆರಳಲ್ಲೆ ಕೆಲವು ವರ್ಷ(ಕಾಸರಗೋಡಿನ ಈಗಳೂ ಕೇರಳ ಹೆಳ್ತಿಲ್ಲಿಯೊ೦)ಕಳುದವ೦ ಆನು ಆದರೂ ವಾಜಪೇಯಿ ಅಜ್ಜ೦ ಹೊಗಳಿದ ಈ ಊರಿನ ಅಲ್ಲಲ್ಲ ಸರೋವರವ ನೋಡಿದ್ದಿಲ್ಲೆ ಈಗ ನೋಡಿದಹಾ೦ಗೇ ಆತು.ಈ ಲೆಕ್ಕಲ್ಲಿ ಸರ್ಪಮಲೆ ಮಾವ೦ಗೆ ಒ೦ದು ನಮಸ್ಕಾರ.ಒಪ್ಪ೦ಗಳೊಟ್ಟಿ೦ಗೆ.

  9. ದೋಣಿಮನೆ ವಿಹಾರದ ವಿವರಂಗೊ ಕಣ್ಣಿಗೆ ಕಟ್ಟಿದ ಹಾಂಗೆ ವಿವರವಾಗಿ ಬರದ್ದು ಲಾಯಿಕ ಆಯಿದು. ಪಟಂಗಳೂ ಒಂದಕ್ಕಿಂತ ಒಂದು ಲಾಯಿಕ ಬಯಿಂದು. ಒಂದರಿ ಹೋಯೆಕ್ಕು ಹೇಳಿ ಪ್ರೇರಣೆ ಆವ್ತಾ ಇದ್ದು.
    ಶ್ರೀಕೃಷ್ಣ ಶರ್ಮ. ಹಳೆಮನೆ

  10. ಸರ್ಪಮಲೆ ಮಾವನ ಲೇಖನ ಎಂಥಾ ಲಾಯಕಿಲ್ಲಿ ಓದುಸೆಂಡು ಹೋತು ಕೇಳಿ ಕಂಡ್ರೆ, ದೋಣಿ ವಿಹಾರ ಮಾಡಿದ ಹಾಂಗೆ ಆತು. ಪ್ರತಿಯೊಂದು ವಿಷಯಂಗಳನ್ನು ಬಿಡಿ ಬಿಡಿ ಆಗಿ, ತಮಾಷೆಗಳನ್ನು ಸೇರುಸಿ ಚೆಂದಕೆ ವಿವರುಸಿದ್ದವು ಮಾವ. ಎಂಗೊಗೆ ಅಂದು ಅವು ಪಾಠ ಮಾಡಿದ್ದು ಪುನ: ನೆಂಪಾತು. ಪಟಂಗಳೂ ಲಾಯಕಿದ್ದು. ಈ ಲೇಖನ ಓದಿದವು ಖಂಡಿತಾ ಒಂದು ಇಂಥಾ ಪ್ರವಾಸಕ್ಕೆ ಏರ್ಪಾಡು ಮಾಡುಗು. ಅವಿಭಕ್ತ ಕುಟುಂಬ ವ್ಯವಸ್ಥೆ ಕಡಮ್ಮೆ ಆವುತ್ತ ಈಗಾಣ ಕಾಲಲ್ಲಿ, ಅಪ್ಪ ಅಮ್ಮ, ಅಣ್ಣ ತಮ್ಮ, ಮನೆಯವು ಎಲ್ಲೋರು, ಬಂಧು ಮಿತ್ರರ ಒಟ್ಟಿಂಗೆ ಕೆಲವೊಂದರಿ ಇಂಥಾ ಪ್ರವಾಸಕ್ಕೆ ಹೋವುತ್ತ ಇದ್ದರೆ, ಅವರಲ್ಲಿ ಪ್ರೀತಿ ವಿಶ್ವಾಸ ಎಲ್ಲ ಬೆಳಗು. ಬೈಲಿಲ್ಲಿ ಮಾವನ ಪ್ರಥಮ ಲೇಖನ ರೈಸಿದ್ದು. ಹೀಂಗೆ ಬತ್ತಾ ಇರಳಿ. ಮಾಶ್ಟ್ರ ಶರ ಷಟ್ಪದಿ ಲಾಯಕಿತ್ತು. ಇನ್ನು ಮುಳಿಯ ಬಾವನ ಬಿಲ್ಲಿಲ್ಲಿ ಶರ ಷಟ್ಪದಿಗಳೂ ಹೊರಹೊಮ್ಮಲಿ.

  11. ಹಾಯ್!! ಎ೦ದಾ ಇದ್!!?? ಯಾತ್ರಾವಿವರಣ೦ ಅತಿ ಮನೋಹರಮಾಯಿರಿಕ್ಕುನ್ನು..!! 🙂
    ಪ್ರವಾಸಕಥನ ಭಾರೀ ಲಾಯ್ಕಾಯಿದು..ಪ್ರತಿಯೊಬ್ಬ ಮನುಷ್ಯನ ಜೀವನಲ್ಲಿಯುದೆ ನೋಡಲೇಬೇಕಾದ ೧೦೦ ಪ್ರವಾಸಿ ತಾಣ೦ಗಳಲ್ಲಿ ಕೇರಳವುದೆ ಒ೦ದಾಡ. (ಆನು ಹೇಳಿದ್ದಲ್ಲ ಆತಾ.. ಆರೊ ಬುಧ್ಧಿ ಇಪ್ಪವು ಹೇಳಿದ್ದದು.. 🙂 ) ಕೇರಳದ ಹಿನ್ನೀರುದೆ, ವಿಶ್ವಪ್ರಸಿದ್ಧ. ಸಾಮಾನ್ಯವಾಗಿ ವಿದೇಶಿ ಪ್ರವಾಸಿಗೊ ಬ೦ದರೆ ೨ ರಿ೦ದ ೫ ಜನ ಸೇರಿ ೧ ದೋಣಿ ಬಾಡಿಗೆಗೆ ತೆಕ್ಕೊ೦ಡು ೨೪ ಘ೦ಟೆ ಪ್ರವಾಸ ಮಾಡುವದು. ಇದರ ಒಟ್ಟಿ೦ಗೆ ನಾವು ಕೇಳಿರೆ ಸಣ್ಣ ಸಣ್ಣ ಹುಟ್ಟು ಹಾಕುವ ದೋಣಿ ಸಿಕ್ಕುತ್ತು, ಇಷ್ಟ ಇದ್ದರೆ ನವಗೆ ಅದರ್ಲಿ ಕೂದ೦ಡು ಹುಟ್ಟು ಹಾಕಿ ನೀರಿಲ್ಲಿ ಹೋಪಲಕ್ಕು. (ಈಜಲೆ ಲಾಯ್ಕ ಗೊ೦ತಿದ್ದರೆ ಒಳ್ಳೆದು.. 🙂 )
    ಒಳ್ಳೆ ಲೇಖನಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×