Oppanna.com

ನೀರಿಂಗ್ಸುವ ಬಗ್ಗೆ ಇನ್ನೊಂದೆರಡು ಮಾತುಗೊ

ಬರದೋರು :   ನೀರ್ಕಜೆ ಮಹೇಶ    on   20/08/2010    9 ಒಪ್ಪಂಗೊ

ನೀರ್ಕಜೆ ಮಹೇಶ

ನಮ್ಮ ಹೆಮ್ಮೆಯ ಒಪ್ಪಣ್ಣ ಬೈಲಿಲಿ ನೀರುಂಗ್ಸುವ ಬಗ್ಗೆ ಲೇಖನ ಬರದ್ದು ಭಾರಿ ಲಾಯಿಕ ಆಯಿದು. ಈ ಲೇಖನವ ಒಪ್ಪಣ್ಣನ ಲೇಖನಕ್ಕೆ ಬರದ ’ಟೀಕೆ’ ಹೇಳಿ ತಿಳ್ಕೊಂಬಲಕ್ಕು.. ಕವಿಗೊ ಎಲ್ಲ ವೇದ, ಭಾರತಕ್ಕೆಲ್ಲ ಟೀಕೆ ಬರೆತ್ತವಲ್ಲದ ಹಾಂಗೆ.. ಹಾಂಗೆ ಹೇಳಿ ಆನು ಎಂತರ ಕವಿ ಹೇಳಿ ಕೇಳೆಡಿ ಇನ್ನು.. ಸುಮ್ಮನೆ ತಮಾಶೆಗೆ ಹೇಳಿದೆ ಅಷ್ಟೆ..
ಮೊದಲಿಂಗೆ, ಬೈಲಿನ (ಇಲ್ಲಿ ಇದರ ಅರ್ಥ ಬಯಲು ಸೀಮೆ ಅಥವಾ ಬೆಟ್ಟಗಳ ಮಧ್ಯೆ ಇಪ್ಪ ದೊಡ್ಡ ದೊಡ್ಡ ಬಯಲು ಪ್ರದೇಶ) ಅಂತರ್ಜಲಕ್ಕೂ ನಮ್ಮ ಮಲೆನಾಡಿನ ಅಂತರ್ಜಲಕ್ಕೂ ಇಪ್ಪ ಇತ್ಯಾಸ (ಒಪಣ್ಣನ ಭಾಷೆ) ಎಂತರ ಹೇಳಿ ನೋಡುವ :
೧. ಬೈಲಿಲಿ ಹರಿದು ಹೋಪ ನೀರು ಕಮ್ಮಿ ಎಂತಕ್ಕೆ ಹೇಳಿರೆ ಇಲ್ಲಿ ಇಳಿಜಾರು ಕಮ್ಮಿ ಮತ್ತೆ ನೀರು ಇಂಗುಲೆ ವಿಶಾಲ ಭೂಮಿ ಇರ್ತು, ಅನುಕೂಲ ಇರ್ತು. ಆದರೆ ಮಲೆನಾಡಿಲಿ ಹಾಂಗಲ್ಲ. ಇಲ್ಲಿ ಎಲ್ಲಿ ನೋಡಿರೂ ಏರು ತಗ್ಗು. ಒಂದೂ ಎತ್ತರದ ಬೆಟ್ಟ, ಗುಡ್ಡೆ, ಕೆಳ ತಗ್ಗು ಗುಂಡಿ, ತೋಡು ಇತ್ಯಾದಿ.  ಹೀಂಗಿಪ್ಪ ಕಾರಣ ಬೆಟ್ಟಲ್ಲಿ ನೀರು ಹರುದು ಕೆಳ ಬಪ್ಪ ರಭಸ ಜಾಸ್ತಿ.
೨. ಬೈಲಿಲಿ ಅಂತರ್ಜಲ ಹೆಚ್ಚು ಕಮ್ಮಿ ಒಂದೇ ಎತ್ತರಲ್ಲಿ (ಅಥವಾ ಗುಂಡಿಲಿ) ಇರ್ತು. ಆದರೆ ಮಲೆನಾಡಿಲಿ ಗುಡ್ಡೆಲಿ ಅಂತರ್ಜಲ ಮೇಲೆ ಇರ್ತು, ಗುಂಡಿಲಿ ಅಥವಾ ತೋಡಿನ ಹತ್ತರೆ ಅಂತರ್ಜಲ ಕೆಳ ಇರ್ತು. (ಇದೆಂತ ಉಲ್ಟ ಬರದ್ದನ್ನೇ ಹೇಳಿ ತಿಳಿಯೆಡಿ. ಇಪ್ಪದೇ ಹಾಂಗೆ ಅದು. ನಮ್ಮ ಸಾಮಾನ್ಯ ಜ್ನಾನ ಹೇಳುದು ನೀರು ಎಲ್ಲಿದ್ದರೂ ಒಂದೇ ಮಟ್ಟಲ್ಲಿ ಇರೆಕ್ಕನ್ನೆ ಹೇಳಿ. ಆದರೆ ಅದು ಹಾಂಗೆ ಇರ್ತಿಲ್ಲೆ. ಭೂಮಿಯಡಿ ಮಣ್ಣು ಇಲ್ಲದ್ದೆ ಬರೇ ನೀರಿನ ಪಾತ್ರೆ ಇದ್ದರೆ ಹಾಂಗೆ ಇರ್ತಿತ್ತೋ ಏನೋ? ಆದರೆ ಹಾಂಗೆ ಇಲ್ಲೆನ್ನೆ.. ಬೆಟ್ಟಲ್ಲಿ ಇಪ್ಪ ನೀರು ಅಲ್ಲಿ ಇಂಗಿದರೆ ಅದು ಅಲ್ಲೇ ಒಂದು ದೊಡ್ಡ ಪಾತ್ರೆಗೆ ಹಾಕಿದ ಹಾಂಗೆ. ಅದಕ್ಕೂ ಕೆಳಾಣ ನೀರಿನ ಪಾತ್ರೆಗೂ ಅಷ್ಟು ಬೇಗ ಸಂಪರ್ಕ ಆವುತ್ತಿಲ್ಲೆ. ಎಂತಕ್ಕೆ ಹೇಳಿರೆ ಭೂಮಿಯ ಅಡಿಲಿ ನೀರಿನ ಚಲನೆ ಅತಿ ನಿಧಾನ. ಈ ಬಗ್ಗೆ ಹೆಚ್ಚು ಮಾಹಿತಿ ಶ್ರೀ ಪಡ್ರೆ ಪುಸ್ತಕಲ್ಲಿ ಇದ್ದು.)
೩. ಮಲೆನಾಡಿನ ಬೆಟ್ಟಲ್ಲಿ ಮಳೆಗಾಲಲ್ಲಿ ಇಂಗಿದ ನೀರು ಬೇಸಗೆಲಿ ಕೆಳಣ (ಕೊಳಕ್ಕೆ) ಭೂಮಿಲಿ ಒರತೆಯಾಗಿ ಬತ್ತು. ಬಯಲು ಸೀಮೆಲಿ ಅಲ್ಲಲ್ಲಿ ಇಂಗಿದ ನೀರು ಅಲ್ಲೇ ಇರ್ತು. ಮಳೆಗಾಲಲ್ಲಾದರುದೆ, ವೈಶಾಖಲ್ಲಾದರುದೆ.
೪. ಬಯಲು ಸೀಮೆಲಿ ನೀರುಂಗ್ಸುವ ಗುಂಡಿ ಎಲ್ಲಿ ಮಾಡಿರೂ ಒಂದೇ. ತೋಟಲ್ಲಾದರೂ ಅಕ್ಕು ಗೆದ್ದೆಲಾದರೂ ಅಕ್ಕು, ಮನೆ ಹತ್ತರಾದರೂ ಅಕ್ಕು. ಆದರೆ ಮಲೆನಾಡಿಲಿ ಮೇಲಣ ಗುಡ್ಡೆಲಿ ನೀರಿಂಗ್ಸಿದರೆ ಮಾತ್ರ ಬೇಸಗಲೆ ಅದು ಕೊಳಕ್ಕೆ ಜಾಗೆಲಿ ಸಿಕ್ಕುತ್ತು. ಹಾಂಗಾಗಿ ಕೊಳಕ್ಕೆ ಜಾಗೆಲಿ ಮಳೆಗಾಲಲ್ಲಿ ನೀರಿಂಗ್ಸುದಕ್ಕೆ ಅರ್ಥವೇ ಇಲ್ಲೆ. ಹಾಂಗೆ ಮಾಡಿರೆ ತೋಟಲ್ಲಿ ನೀರು ಎರ್ಕಿ ಕೊಳದು ಹೋಕಷ್ಟೆ.
ಈ ವ್ಯತ್ಯಾಸಗಳಿಂದ ನವಗೆ ತಿಳಿವದು ಎಂತ? ಒಟ್ಟಾರೆ ನೀರಿಂಗ್ಸುದರೆ ಅದರಿಂದ ಪೈಸೆ ನಷ್ಟ ಅಕ್ಕಷ್ಟೆ. ಭೂಮಿಯ ರಚನೆ ನೋಡಿಯೊಂಡು ನೀರಿಂಗ್ಸೆಕ್ಕು. ಹಾಂಗಾರೆ ಪ್ರಯೋಜನ ಅಕ್ಕು. ನಮ್ಮ ಮಲೆನಾಡಿನ ಬೆಟ್ಟ ಗುಡ್ಡೆ ಪ್ರದೇಶದ ಬಗ್ಗೆ ಹೇಳ್ತಾರೆ ಕೆಳಣ ಕ್ರಮಂಗ ಉಪಯೋಗ ಅಕ್ಕು :
೧. ಬೆಟ್ಟಲ್ಲಿ ಎಷ್ಟು ಎತ್ತರಲ್ಲಿ ಸಾಧ್ಯವೋ ಅಷ್ಟು ಎತ್ತರಲ್ಲಿ, ಕೊಳಕ್ಕೆಂದ ಎಷ್ಟು ದೂರಲ್ಲಿ ಸಾಧ್ಯವೋ ಅಷ್ಟು ದೂರಲ್ಲಿ ಇಂಗುಗುಂಡಿಗಳ ಮಾಡೆಕ್ಕು.
೨. ಬೆಟ್ಟಲ್ಲಿ ಜಾಸ್ತಿ ಇಳಿಜಾರು ಇಪ್ಪಲ್ಲಿ ಅಡ್ಡಡ್ಡ ಕಣಿ ತೆಗದು ನೀರಿಂಗ್ಸೆಕ್ಕು.
೩. ಬೆಟ್ಟಲ್ಲಿ ಎಲ್ಲಾರು ಸ್ವಾಭಾವಿಕ ತಗ್ಗು ಪ್ರದೇಶ (ಅಥವಾ ಕಣಿವೆ ಪ್ರದೇಶ) ಇದ್ದರೆ ಅಲ್ಲಿ ಒಂದು ಕಟ್ಟ ಕಟ್ಟಿ ನೀರು ಎರ್ಕ್ಸಿದರೆ ಅದು ಭಾರಿ ಉಪಯೋಗ ಅಕ್ಕು.
೪. ಬೆಟ್ಟಲ್ಲಿ ಬಜವು ಮಾಡುದರ ನಿಲ್ಸೆಕ್ಕು. ಸೊಪ್ಪು ಕಡಿವದರ ಸಾಧ್ಯವಾದಷ್ಟು ನಿಲ್ಸೆಕ್ಕು. ಅರರೆ, ಇವ ಎಂತ ಹೇಳುದು, ಸೊಪ್ಪು ಕಡಿಯದ್ದರೆ ಕೃಷಿ ಮಾಡುದು ಎಂತರ ಹೇಳಿ ಕೇಳುವಿ. ಆನು ಹೇಳುದು ಹೀಂಗೆ – ಕೋಳಿ ಚಿನ್ನದ ಮೊಟ್ಟೆ ಮಡುಗುತ್ತು ಹೇಳಿ ಅದರ ಹೊಟ್ಟೆ ಬಗೆದರೆ ಎಂತ ಸಿಕ್ಕುತ್ತು? ಹಾಂಗೆಯೇ ಇದು. ನಮ್ಮ ಹಳೇ ತಲೆಮಾರಿಲಿ ಬೇಕಾಷ್ಟು ಕಾಡು ಇದ್ದ ಕಾರಣ ಸೊಪ್ಪು ಕಡುದಷ್ಟೂ ಕಾಡು ಬೆಳಕ್ಕೊಂಡು ಇತ್ತು. ಹಾಂಗಾಗಿ ಅದರ ಬಗ್ಗೆ ಅಷ್ಟು ಯೋಚನೆ ಮಾಡುವ ಅಗತ್ಯ ಇತ್ತಿಲ್ಲೆ. ಈಗ ಹಾಂಗಲ್ಲ. ಸೊಪ್ಪು ಕಡುದು ಕಡುದು ಬೆಟ್ಟ ಎಲ್ಲ ಖಾಲಿ. ಕೋಳಿ ಹೊಟ್ಟೆ ಬಗುದಾ ಹಾಂಗೆಯೇ. ಇದಕ್ಕೆ ಪರಿಹಾರ ಹೇಳ್ರೆ ಕೆಲವು ವರ್ಷಗಳ ಕಾಲ ಸೊಪ್ಪು ಕಡಿವದರ ನಿಲ್ಸೆಕ್ಕು. ಹೇಳ್ರೆ ಬೆಟ್ಟಲ್ಲಿ ಪುನಹ ಹಸುರು ತುಂಬುವ ವರೆಗೆ. ನಂತರ ಸೊಪ್ಪು ಕಡೀಲಕ್ಕು, ಆದರೆ ಎಲ್ಲ ಬೋಳ್ಸುಲಾಗ. ಲೆಕ್ಕದ್ದು.
ಇನ್ನು ಒಪ್ಪಣ್ಣನ ಲೇಖನಲ್ಲಿ ಒಂದು ತಪ್ಪು ತಿಳುವಳಿಕೆ ಇದ್ದು. ಮರಂಗೊ ನೀರಿಂಗ್ಸುತ್ತು ಹೇಳಿ. ಅದು ತಪ್ಪಲ್ಲ ಆದರೂ ಪೂರ್ತಿ ಸರಿಯಲ್ಲ. ಮರಂಗೊ ನೀರಿಂಗ್ಸುತ್ತಿಲ್ಲೆ. ಮರದ ಬಜವು ನೀರಿಂಗ್ಸುದು (ಎಂತ ಮಾರಾಯ.. ಮರ ಇಲ್ಲದ್ದೆ ಬಜವು ಎಲ್ಲಿಂದ ಬತ್ತು ಹೇಳಿ ಕೇಳೆಡಿ ಇನ್ನು. ಮರ ಇದ್ದರೆ ಸಾಲ ಅದರ ಬಜವು ಇರೆಕ್ಕು ಹೇಳುದು ಎನ್ನ ಉದ್ದೇಶ ಅಷ್ಟೆ.). ಹಾಂಗೆ ಹೇಳಿ ಮರ ಇಪ್ಪದು ಇಲ್ಲದ್ದೆ ಇಪ್ಪದಕ್ಕಿಂತ ಎಷ್ಟೋ ಮೇಲು. ಬಜವು ಇದ್ದರೆ ಇನ್ನೂ ಒಳ್ಳೆದು ಹೇಳಿ ಅಷ್ಟೆ. ಎಂಗಳ ಮನೆ ಹತ್ತರೆ ನೆರೆಕರೆಯವರ ಬೆಟ್ಟ ಇದ್ದು. ಅಲ್ಲಿ ಸೊಪ್ಪು ಕಡಿಶದ್ದೆ ಸೊಂಪು ಕಾಡು ಬೆಳದ್ದು. ಆದರೆ ಎಂತ ಮಾಡುದು ಹತ್ತರಾಣ ಜೋಕುಳುಗೊ ಬಜವಿಂಗೆ ಬತ್ತವು. (ಇಗೀಗ ಅದುದೆ ಕಮ್ಮಿ ಆಯಿದು ಹೇಳುವ. ಬಜವು ಮಾಡುಲೆ ಡಿಗ್ನಿಟಿ ಅಡ್ಡ ಬತ್ತು ಇತ್ತಿತ್ಲಾಗಿ) ಮಳೆಗಾಲಕ್ಕಪ್ಪಗ ನೀಟಾಗಿ ಖಾಲಿ ಮಾಡಿರ್ತವು. ಮತ್ತೆ ಮಳೆ ಬಪ್ಪಗ ಹೋಗಿ ನೋಡಿರೆ ಮಣ್ಣು ಎಲ್ಲ ಕೊಚ್ಚಿ ಹೋಪದು ಕಾಣುತ್ತು. ಕಾರಣ ಇಷ್ಟೆ. ಮಣ್ಣಿನ ಕವಚ ಆಗಿಪ್ಪ ಬಜವು ಇಲ್ಲೆ. ಮಣ್ಣು ಕೊಚ್ಚುತ್ತು, ನೀರುದೆ ಇಂಗುತ್ತಿಲ್ಲೆ. ಹಾಂಗೆ ಅಪ್ಪಲಾಫ಼. ಅದ್ದಕ್ಕೇ ಸೊಪ್ಪು ಕಡಿವದಾದರೂ ಅಕ್ಕು, ಹದವಾಗಿ, ಆದರೆ ಬಜವು ಮಾಡುದರ ನಿಲ್ಸೆಕ್ಕು. ಇನ್ನು ಇತ್ತೀತ್ಲಾಗಿ ಸೊಪ್ಪು ಬಜವು ಮಾಡುಲೆ ಜನ ಇಲ್ಲದ್ದೆ ಕೆಲವು ಕಡೆ ಸೊಪ್ಪಿನ ಬೆಟ್ಟ ಹಸಿರಾದ್ದುದೆ ಇದ್ದು. ಆ ಲೆಕ್ಕಲ್ಲಿ ನೋಡಿರೆ ಕೂಲಿಗಳ ಸಮಸ್ಯೆ ಒಳ್ಳೆದೇ ಮಾಡಿತ್ತು.. 🙂
ಮತ್ತೆ ಇನ್ನೊಂದು ಹುಲ್ಲು. ಬಜವು ಇಲ್ಲದ್ದಲ್ಲಿ ದಟ್ಟವಾಗಿ ಹುಲ್ಲು ಬೆಳದಿದ್ದರೂ ಅಕ್ಕು. ಅದುದೆ ಬಜವಿನ ಕೆಲಸವನ್ನೇ ಮಾಡ್ತು.
ಈ ವಿಷಯಂಗೊ ಎಲ್ಲ ಸಾಂಪ್ರದಾಯಿಕ ಕೃಷಿಕರ ಮಟ್ಟಿಂಗೆ ಅಸಂಬಧ್ಧ ಆವುತ್ತು. ಅವು ನಂಬಿಯೊಂಡು ಬಂದಿದ್ದ ವಿಷಯಂಗೊ ಸರಿ ಇಲ್ಲೆ ಹೇಳಿ ಒಪ್ಪಿಕೊಂಬಲೆ ಕಷ್ಟ ಆವುತ್ತು. ಅದಕ್ಕೆ ಆನು ಹೇಳುದು ಶ್ರೀ ಪಡ್ರೆಯಂಥ ಅನುಭವಸ್ಥರ ನೋಡಿ ಮತ್ತೆ ಸ್ವತಹ ಮಾಡಿ ಕಲಿಯೆಕ್ಕು ಹೇಳಿ.
ಇನ್ನೊಂದು ನೀರಿಂಗ್ಸುವ ಬಗ್ಗೆ ಸಾಮಾನ್ಯವಾಗಿ ಇಪ್ಪ ತಪ್ಪು ಕಲ್ಪನೆ : ಯೇವದೇ ಗುಂಡಿ/ಕೆರೆ ಇದ್ದರೂ ಅದು ಇಂಗು ಗುಂಡಿ ಆವುತ್ತು. ಇದು ತಪ್ಪು. ಗೆದ್ದೆ ಕರೆಲಿ, ಕೊಳಕ್ಕೆಲಿ ಇಪ್ಪ ಗುಂಡಿಗೊ ಕೆರೆಗೂ ನೀರು ಸಂಗ್ರಹಿಸುಲೆ. ಇಂಗ್ಸುಲೆ ಅಲ್ಲ. ಆದರೆ ಬಯಲು ಸೀಮೆಲಿ ಮಾತ್ರ ಇದು ನೀರುಂಗ್ಸುಲೆ ಉಪಯೋಗ ಅಕ್ಕು. ಹಾಂಗೆ ಹೇಳಿ ಅದರಂದ ಎಂತ ಹಾನಿ ಇಲ್ಲೆ. ಅದರ ಉಪಯೋಗ ಬೇರೆಯೇ ಹೇಳಿ ಅಷ್ಟೆ.
ಹಾಂಗಾರೆ ತೋಡಿಂಗೆ ಕಟ್ಟ ಕಟ್ಟುವ ಬಗ್ಗೆ? ಇದು ಸರಿಯಾದ ಕ್ರಮ. ಎಂತಕೆ ಹೇಳಿರೆ ಕಟ್ಟ ಕಟ್ಟುದು ಬೇಸಗೆ ಸುರು ಅಪ್ಪಗ. ಹರುದು ಹೋಪ ನೀರು ಹಾಳಾಗದ್ದೆ ಭೂಮಿಲೇ ಇಂಗಲಿ ಹೇಳಿ. ಮಳೆ ನೀರು ಇಂಗುಲೆ ಅಲ್ಲ. ಇದಕ್ಕೂ ಮಳೆಗಾಲಲ್ಲಿ ಮಾಡುವ ನೀರಿಂಗ್ಸುವಿಕೆಗೂ ವ್ಯತ್ಯಾಸ ಇದ್ದು. ಎರಡರ ಉದ್ದೇಶ ಒಂದೇ ಆದರೂ ಅದು ಕೆಲಸ ಮಾಡುವ ವಿಧಾನಂಗೊ ಬೇರೆ ಬೇರೆ.
ಹಾಂಗಾಗಿ ಒಟ್ಟಾರೆ ಹೇಳುದಾದರೆ ಎಲ್ಲರುದೇ ನೆಲ ಜಲ ಉಳ್ಸೆಕ್ಕು. ಹೇಂಗೆ? :
೧. ಮಳೆಗಾಲಲ್ಲಿ ಬೆಟ್ಟಲ್ಲಿ ನೀರಿಂಗ್ಸಿ
೨. ಬೇಸಗೆಲಿ ತೋಡಿಂಗೆ ಕಟ್ಟ ಕಟ್ಟಿ.
೩. ಆದಷ್ಟು ಹಸಿರಿನ ಬೆಳೆಶಿ.
೪. ವರ್ಷ ಪೂರ್ತಿ ನೀರು ಬೇಡುವ ಬೆಳೆಗಳ (ಅಡಕ್ಕೆ) ಹದವಾಗಿ ಬೆಳೆಯಿರಿ. ಇದ್ದಲ್ಲೆಲ್ಲ ಅಡಕ್ಕೆ ಸೆಸಿ ಹಾಕಿ ಪೈಸೆ ಮಾಡುವ ಆಸೆ ಬೇಡ.. ಚಿನ್ನದ ಮೊಟ್ಟೆ ಮಡುಗುವ ಕೋಳಿ ನೆಂಪಿದ್ದಲ್ಲದ?
ಇದೆಲ್ಲಾ ವಿವರಂಗೊ ಶ್ರೀ ಪಡ್ರೆ ಪುಸ್ತಕಲ್ಲಿ (ನೆಲ ಜಲ ಉಳಿಸಿ) ಇದ್ದು. ಕೃಷಿ ಬಗ್ಗೆ, ನೀರಿನ ಬಗ್ಗೆ ಆಸಕ್ತಿ ಇಪ್ಪವೆಲ್ಲ ಈ ಪುಸ್ತಕವ ಒಂದರಿ ಖಂಡಿತ ಓದೆಕ್ಕು.

9 thoughts on “ನೀರಿಂಗ್ಸುವ ಬಗ್ಗೆ ಇನ್ನೊಂದೆರಡು ಮಾತುಗೊ

    1. ಓ,ಹೀಂಗೂ ಇದ್ದಾ ಭಾವಾ..ಆನು ಗ್ರೆಶಿದ್ದು ನೀರಿಂಗಿ WHYಶಾಖ .

  1. ಲೇಖನ ಒಳ್ಳೆ ಮಾಹಿತಿ ಕೊಟ್ಟಿದು ಅಪ್ಪಚ್ಚಿ… ಒಟ್ಟಿನ ಮೇಲೆ ಒಪ್ಪಣ್ಣನ ಬಯಲಿಲಿ ಮೊನ್ನೆಂದ ನೀರಿಂಗ್ಸುವ ಬಗ್ಗೆಯ ಸುದ್ದಿ! 🙂

  2. ನೀರ್ಕಜೆ ತಮ್ಮ ಬರದ ಲೇಖನಲ್ಲಿ ಮಲೆನಾಡು ಮತ್ತೆ ಬಯಲು ಪ್ರದೇಶಂಗಳಲ್ಲಿ ನೀರು ಹೇಂಗೆ ಇಂಗುಸೆಕಾದ್ದು ಹೇಳಿ ಕೊಟ್ಟ ಮಾಹಿತಿ ತುಂಬಾ ಲಾಯಿಕ್ ಆಯಿದು.
    ಸಮುದ್ರ ಕರೇಲಿ ಎಂಗಳ ಅವಸ್ಥೆಯೂ ಒಂದು ನಮೂನೆ ಹೀಂಗೇ. ಮಳೆ ಬಂದ ಕೂಡ್ಲೆ ಎಲ್ಲಾ ನೀರು ತೋಡಿಲ್ಲಿ ಹರುದು ಹೋಪಲೆ ಆತು. ಬಾವಿಗಳಲ್ಲಿ ನೀರು ಸಮಲುತ್ತಷ್ಟು ತುಂಬುತ್ತು. ಮಳೆ ಬಿಟ್ಟು ಎರಡು ದಿನ ಆದರೆ ನೀರಿನ ಮಟ್ಟ ಕೆಳ ಇಳಿತ್ತು. ಇದಕ್ಕಿಂತ ತಗ್ಗಿನ ಪ್ರದೇಶ ಹೇಳಿರೆ ಸಮುದ್ರವೇ. ಸಮುದ್ರ ಮತ್ತೆ ಬಾವಿಯ ನಡುವೆ ಇಪ್ಪದು ಮಳೆಗಾಲಲ್ಲಿ ನೀರು ಎರ್ಕಿ ನಿಂಬ ಗದ್ದೆ ಹಾಂಗಿಪ್ಪ ಸಮ ತಟ್ಟು ಜಾಗೆಗೊ.
    ಇಲ್ಲಿ ನೀರು ಇಂಗುಸುವದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಡೆಕಾದ್ದು, ಇಪ್ಪ ನೀರಿನ ಸರಿಯಾದ ಉಪಯೋಗ ಮಾತ್ರ ಹೇಳಿ ಕಾಣುತ್ತು ಎನಗೆ.

    1. ನೀರಿನ ಪ್ರತಿ ಹನಿ ಮತ್ತೆ ಕರೆಂಟಿನ ಪ್ರತಿ ಯುನಿಟ್ಟು ಉಳಿತಾಯ ಮಾಡಿದರೆ ಹೊಸತ್ತು ತಯಾರು ಮಾಡಿದಷ್ಟೇ ಗುಣ ಇದ್ದು,ಅಲ್ಲದೋ ಅಪ್ಪಚ್ಚಿ,

      1. ಖಂಡಿತಾ ಅಪ್ಪು. ನಾವು ಮಾಡುವದರೊಟ್ಟಿಂಗೆ ನಮ್ಮ ಮಕ್ಕೊಗೂ ಕಲಿಶಿ ಕೊಡೆಕ್ಕಾದ್ದು ಇಂದ್ರಾಣ ಅನಿವಾರ್ಯತೆ ಕೂಡಾ

  3. ಬಜವಿನ ಬಗ್ಗೆ ಅಪ್ಪಚ್ಚಿ ಹೇಳಿದ್ದು ಸರಿ.. ಎ೦ಗಳ ಗುಡ್ಡೆಲಿ ಈ ಸಮಸ್ಯೆ ಈಗ ಇಲ್ಲೆ- ಎ೦ತಕ್ಕೆ ಹೇಳಿರೆ ಬಜವು ಬರು೦ಬುಲೆ ಆರೂ ಬತ್ತವಿಲ್ಲೆ.. ಎಲ್ಲ ಉದಿಯಪ್ಪಗಾಣ ಬಸ್ಸಿಲಿ ಇನ್ಫೊಸಿಸ್ ಗೆ ಕೆಲಸಕ್ಕೆ ಹೋವುತ್ತವು… ಇನ್ಫೊಸಿಸ್ ಲಿ ಅವಕ್ಕೆಲ್ಲ ಎ೦ತ ಕೆಲಸ? ಉಮ್ಮ ಎನಗೊ೦ತಿಲ್ಲೆ…

    1. ಚೆಮ್ಬರ್ಪಿಲಿಲ್ಲೆ ಜನ ಬಜವು ಬರು೦ಬುಲೆ
      ಎಲ್ಲೋರಾ ಮನೆಲೀಗ ಇದ್ದು ಗ್ಯಾಸು ಒಲೆ
      ಬಸ್ಸು ಹತ್ತಿದ ಜೆನ ಎಲ್ಲಿಗೋಡಿದವು
      ಇನ್ಫೋಸಿಸಿನ ಒಳ ಗ್ಲಾಸು ತೊಳಸಿದವು

  4. ಭಾವಾ,
    ಒಳ್ಳೆ ಮಾಹಿತಿ.ಒಪ್ಪಣ್ಣನ ಲೇಖನಕ್ಕೆ ರಜಾ ಭಿನ್ನಮತ ಇದ್ದರೂ, ನಿಂಗೊ ಹೇಳೊದೂ ಸರಿಯಿಕ್ಕು.ಮರಂಗಳ ಬೇರುಗೋ ಮಣ್ಣಿನ ನುಸುಲು ಮಾಡುವ ಕಾರಣ ಮಣ್ಣಿನ ಉಸಿರಾಟ ಸುಗಮ ಆಗಿ ನೀರು ಅಡಿಂಗೆ ಹೋಪಲೆ ಸಹಕಾರಿ ಅಕ್ಕು.ಇನ್ನು ಬಜವು ನಮ್ಮ ತಲೆ ಕಸವಿನಹಾಂಗೆ ಅಲ್ಲದೋ.ಬೋಳುಮಂಡೆಗೆ ಸೂರ್ಯನ ಬೆಶಿಲು ಹೆಚ್ಚು ಸುಡುಗಲ್ಲದೋ? ಅಂತೂ ಬೈಲಿಲಿಜೋಡಾಟ ರೈಸಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×