Oppanna.com

ಚೇತೋಹಾರಿ ಕತೆಗಳ ‘ಕರಿಮಣಿಮಾಲೆ-ಪ್ರೊ| ವಿ. ಬಿ. ಅರ್ತಿಕಜೆ

ಬರದೋರು :   ಶರ್ಮಪ್ಪಚ್ಚಿ    on   20/11/2020    0 ಒಪ್ಪಂಗೊ

ಚೇತೋಹಾರಿ ಕತೆಗಳ ‘ಕರಿಮಣಿಮಾಲೆ

ಪ್ರೊ| ವಿ. ಬಿ. ಅರ್ತಿಕಜೆ

ಕರಾವಳಿ ಕರ್ನಾಟಕದ ಪ್ರತಿಭಾಶಾಲಿ ಕತೆಗಾರ್ತಿಯರಲ್ಲಿ ಪ್ರಸನ್ನಾ ವಿ. ಚೆಕ್ಕೆಮನೆಯವರ ಹೆಸರು ಮುಂಚೂಣಿಯಲ್ಲಿರುವುದು ಸರ್ವವಿದಿತ. ಸಣ್ಣಪುಟ್ಟ ಕವನ, ಕಥೆ, ಲೇಖನಗಳನ್ನು ಬರೆಯುವ ಮೂಲಕ ವಾಙ್ಮಯ ಪ್ರಪಂಚಕ್ಕೆ ಕಾಲಿರಿಸಿದ ಅವರು ಹಂತ ಹಂತವಾಗಿ ಮೇಲೇರಿ ಬಹುಮಾನ, ಪ್ರಶಸ್ತಿ ಹಾಗೂ ಪಾರಿತೋಷಕಗಳನ್ನು ಪಡೆಯುವ ಮೂಲಕ ಓದುಗರ ಹಾಗೂ ವಿಮರ್ಶಕರ ಪ್ರಶಂಸೆ, ಶ್ಲಾಘನೆಗಳಿಗೆ ಪಾತ್ರರಾಗಿರುವುದು ಸಹಜವೇ ಆಗಿದೆ. ಕನ್ನಡದಲ್ಲಿ ಒಂದು ಕಥಾಸಂಕಲನ ಹಾಗೂ ಒಂದು ಕವಿತಾ ಸಂಕಲನಗಳನ್ನು ಹೊರತಂದ ಪ್ರಸನ್ನಾ ಇತ್ತೀಚೆಗೆ ಕರಿಮಣಿಮಾಲೆ ಎಂಬ ಹವಿಗನ್ನಡ ಕಥಾಗುಚ್ಛವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. 
ಶಿಕ್ಷಣತಜ್ಞ, ಸಾಹಿತಿ ವಿ. ಬಿ. ಕುಳಮರ್ವ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ, ಸಾಹಿತಿ ವಿಜಯಾ ಸುಬ್ರಹ್ಮಣ್ಯ ಮುಂತಾದವರು ಇವರ ಕಥಾ ಕೌಶಲ್ಯವನ್ನು ಮುಕ್ತಕಂಠದಿಂದ ಕೊಂಡಾಡಿರುವುದು  ಸಹಜವೇ ಆಗಿದೆ. ಕೇವಲ ಕತೆಗಾಗಿ ಕತೆ (ಕಲೆಗಾಗಿ ಕಲೆ) ಎನ್ನುವ ಸಿದ್ಧಾಂತದಲ್ಲಿ ಲೇಖಕಿಗೆ ವಿಶ್ವಾಸವಿಲ್ಲ. ಕತೆ ಯಾವುದೇ ಇರಲಿ, ರೋಚಕತೆ, ರಂಜಕತೆ ಮತ್ತು ಸ್ವಾರಸ್ಯಗಳು ಮುಪ್ಪಿರಿಗೊಂಡ ಮೇಲೂ ಓದುಗರಿಗೆ ಸಂದೇಶವೊಂದನ್ನು ನೀಡಬೇಕು; ನೀತಿಯೊಂದನ್ನು ಸಾರಬೇಕು, ತನ್ಮೂಲಕ ಅವರ ಎದೆ ಕದವನ್ನು ತಟ್ಟಬೇಕು, ಚಿತ್ತಭಿತ್ತಿಯನ್ನು ಮುಟ್ಟಬೇಕು ಎನ್ನುವುದು ಅವರ ಗುರಿ. ಆದ್ದರಿಂದಲೇ ಸಂಕಲನದಲ್ಲಿರುವ ಯಾವ ಕತೆಯನ್ನು ಓದಿದರೂ ಅಲ್ಲೊಂದು ನಿಶ್ಚಿತವೂ ಸ್ಪಷ್ಟವೂ ಆದ ಉದ್ದೇಶವಿರುವುದನ್ನು  ನಾವು ಕಾಣಬಹುದು. ಕತೆಗಳು ಹವ್ಯಕ ಭಾಷೆಯಲ್ಲಿ ರಚಿತವಾದ್ದರಿಂದ ಕೇವಲ ಹವಿಗನ್ನಡ ಸೊಗಡು, ಸೊಗಸುಗಳನ್ನು ಒಳಗೊಂಡಿರುವುದು ಮಾತ್ರವಲ್ಲ,  ಹವ್ಯಕ ಜನಾಂಗದ ನುಡಿ- ನಡೆ- ಸದಾಚಾರ- ಸಂಸ್ಕೃತಿಗಳನ್ನು ತುಂಬ ಮಾರ್ಮಿಕವಾಗಿ ಪ್ರತಿಬಿಂಬಿಸುತ್ತವೆ. ದನಗಳಿಗೂ ಮನುಷ್ಯರಿಗೂ ಇರುವ ಭಾವನಾತ್ಮಕ ಸಂಬಂಧ, ಕುಟುಂಬಕ್ಕಾಗಿ ಹೆಣ್ಣು ಮಾಡುವ ತ್ಯಾಗ, ಪಾಲಿಗೆ ಬಂದದ್ದು ಪಂಚಾಮೃತ ಎನ್ನುವ ಸ್ತ್ರೀಯೊಬ್ಬಳ ನಂಬಿಕೆ, ಹಿರಿಯರಿಂದ ನಮಗೆ ಬಂದ ಸಂಪ್ರದಾಯ- ಆಚರಣೆಗಳ ಮಹತ್ವ, ದಾರಿ ತಪ್ಪುವ ಹುಡುಗಿಯರಿಗೆ ಮಾರ್ಗದರ್ಶನ ಮಾಡುವ ಘಟನಾವಳಿ ಮುಂತಾದುವನ್ನು ಲೇಖಕಿ ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕೇರಳದಲ್ಲಿ ಜನಪ್ರೀತಿ ಗಳಿಸಿದ ‘ಪರಯಿಪೆಟ್ಟ ಪಂದಿರುಕುಲಂ’ ಮಲೆಯಾಳ ಕಥಾ ಸರಣಿಯನ್ನು ರೋಚಕವಾಗಿ ಹವಿಗನ್ನಡಕ್ಕೆ ತಂದ ಲೇಖಕಿ ಪೌರಾಣಿಕ ಕಥೆಗಳನ್ನು ಕೂಡ ಹವ್ಯಕಕ್ಕೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಧುನೀಕರಣ, ಜಾಗತೀಕರಣ, ನಗರೀಕರಣಗಳ ದೆಸೆಯಿಂದ ಪಥಭ್ರಷ್ಟರಾಗಿ ದು:ಖ ಅನುಭವಿಸುವ ಬದಲು ಜೀವನದಲ್ಲಿ ನೆಮ್ಮದಿ, ಮನಶ್ಶಾಂತಿಗಳನ್ನು ಅರಸಿಕೊಂಡು ಹೋಗುವುದು ಸೂಕ್ತವೆಂದು ಅವರು ಸೂಚಿಸಿದ್ದಾರೆ. ಪ್ರತಿಯೊಂದು ಕತೆಯ ನಿರೂಪಣೆಯೂ ಸೊಗಸಾಗಿದ್ದು ಹವಿಗನ್ನಡದ ನುಡಿಗಟ್ಟು, ಗಾದೆ, ವಾಗ್ರೂಢಿಗಳನ್ನು ಬರೆಹಗಾರ್ತಿ ಬಹಳಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಿದ್ದಾರೆ. ನಿರೂಪಣೆಯಂತೂ ಸರಳ, ನೇರ ಹಾಗೂ ಮನೋರಂಜಕವಾಗಿದೆ. “ ನವಿಲುಗರಿ ಕುತ್ತಿದ ಕೃಷ್ಣನ ಪ್ರೀತಿಸುಲೆ ಹದಿನಾರು ಸಾವಿರದ ಎಂಟು ಹೆಮ್ಮಕ್ಕೊ ಇತ್ತಿದ್ದವು. ಈಗ ಈ ಕೃಷ್ಣನ ಪೂಜೆ ಮಾಡುವ ಎನ್ನ ಮದುವೆಪ್ಪಲೆ ಆರೂ ಇಲ್ಲೆ” ಎಂದ ಮನುವಿಗೆ “ಆನು ನಿಂಗಳ ಮದುವೆ ಆವ್ತೆ” ಎನ್ನುವ ಸವಾಲು ಹಾಕಿದ ಮಂಜರಿಯ ಚಿತ್ರಣವಂತೂ (ನವಿಲುಗರಿ) ಅದ್ಭುತ! 
ಪ್ರಸನ್ನಾ ವಿ. ಚೆಕ್ಕೆಮನೆಯವರ ಲೇಖನಿಯಿಂದ ಇಂತಹ ರಮ್ಯ, ಗಮನೀಯ ಕಥೆ- ಕಾದಂಬರಿಗಳು ಹರಿದು ಬರಲಿ. ಅವರು ಸಾಹಿತ್ಯರಂಗದಲ್ಲಿ ಇನ್ನಷ್ಟು ಔನ್ನತ್ಯಕ್ಕೆ ಏರಲಿ.


–  ಪ್ರೊ| ವಿ. ಬಿ. ಅರ್ತಿಕಜೆ.ಪುತ್ತೂರು-574201
9341914254

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×