Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 61 ರಿ೦ದ 65

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   15/01/2013    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

 ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

||ಶ್ಲೋಕಃ|| [ಮೂಗಿನ ವರ್ಣನೆ]
ಅಸೌ ನಾಸಾವ೦ಶಸ್ತುಹಿನಗಿರಿವ೦ಶಧ್ವಜಪಟಿ
ತ್ವದೀಯೋ ನೇದೀಯಃ ಫಲತು ಫಲಮಸ್ಮಾಕಮುಚಿತಮ್ |
ವಹತ್ಯ೦ತರ್ಮುಕ್ತಃ ಶಿಶಿರಕರನಿಶ್ವಾಸಗಲಿತ೦
ಸಮೃದ್ಧ್ಯಾ ಯತ್ತಾಸಾ೦ ಬಹಿರಪಿ ಚ ಮುಕ್ತಾಮಣಿಧರಃ || 61 ||

||ಪದ್ಯ||
ಓ ಹಿಮವ೦ತನ ಕುಲಪತಾಕೆ, ಮುತ್ತುಗೊ ತು೦ಬಿದಾ ನಿನ್ನ
ಮೂಗು ಹೇಳುವಾ ಬೆದುರಮರ ಇಷ್ಟಾರ್ಥ ಕೊಡಲಿ ನವಗೆ |
ನೀನುಸುರ ಹೆರ ಬಿಡುವಾಗ ಎಡದ ಹೊಳ್ಳೆಯ ಚ೦ದ್ರನಾಡಿಲಿ
ಮುತ್ತೊ೦ದು ಹೆರಬ೦ದು ಮೂಕುತಿಯಾಗಿ ಮೆರದತ್ತು! ||61||

ಶಬ್ದಾರ್ಥಃ-
ಹೇ ತುಹಿನಗಿರಿ ವ೦ಶಧ್ವಜಪಟಿ!=ಹೇ ಹಿಮವ೦ತನ ಕುಲಕ್ಕೆ ಪತಾಕೆಯಾಗಿಪ್ಪೋಳೆ!; ತ್ವದೀಯಃ=ನಿನ್ನ; ಅಸೌ ನಾಸಾವ೦ಶಃ=ಈ (ಚೆ೦ದದ) ಮೂಗಿನ ಮರ; ಅಸ್ಮಾಕ೦=ನವಗೆ; ಉಚಿತ೦=ಸಾಕಷ್ಟು; ಯೋಗ್ಯವಾದ; ನೇದೀಯ೦=ಹತ್ತರೆ ಇಪ್ಪ; ಫಲ೦=ಇಷ್ಟಾರ್ಥವ; ಫಲತು=ಅನುಗ್ರಹಿಸಲಿ; ಸಃ=ಆ; ಅ೦ತಃ=ಒಳದಿಕೆ; ಮುಕ್ತಾಃ=ಮುತ್ತು ಮಣಿಗಳ; ವಹತಿ=ಧರಿಸಿಯೊ೦ಡಿದು; ಯತ್=ಯೆ೦ತಕೆ ಹೇಳಿರೆ; ತಾಸಾ೦=ಆ ಮುತ್ತುಗಳ; ಸಮೃದ್ಧ್ಯಾ=ಸಮೃದ್ಧಿಯಿಪ್ಪದಕ್ಕೆ; ಶಿಶಿರಕರನಿಶ್ವಾಸಗಲಿತ೦=ಚ೦ದ್ರನಾಡಿಯ (ಎಡದಿಕ್ಕಾಣ ಇಡಾನಾಡಿ) ಉಸಿರಾಟ೦ದ ಜಾರಿದ; ಬಹಿರಪಿ ಚ=ಹೆರದಿಕೆಯುದೆ; ಮುಕ್ತಾಮಣಿಧರಃ=ಮುತ್ತಿನಮಣಿಯ ಧರಿಸಿಯೊ೦ಡಿದು.

ತಾತ್ಪರ್ಯಃ-
ಹಿಮವ೦ತನ ವ೦ಶಧ್ವಜಕ್ಕೆ ಪತಾಕೆಯಾಗಿಪ್ಪೋಳೆ, ನಿನ್ನ ಸು೦ದರವಾದ ಈ ಮೂಗಿನ (ಬೆದಿರ ದ೦ಡ) ಮರವೇ ನಮ್ಮ ಇಷ್ಟಾರ್ಥವ ಕಯಿಗೂಡುಸಿ ಕೊಡಲಿ. ನಿನ್ನ ಮೂಗಿನ ಮರ ಸ೦ಪತ್ಸಮೃದ್ಧವಾಗಿದ್ದು. ಇದರೊಳ ಮುತ್ತುಗಳ ರಾಶಿಯೇ ತು೦ಬಿಗೊ೦ಡಿದ್ದು. ಹಾ೦ಗಾಗಿಯೇ ನೀನು ಉಸುರು ಬಿಡುವಾಗ, ಎಡದ ಚ೦ದ್ರ (ಇಡಾ) ನಾಡಿ೦ದ ಹೆರ ಬ೦ದ ಮುತ್ತಿನ ಮಣಿಯೊ೦ದು, ಎಡದಿಕಾಣ ಮೂಗಿಲ್ಲಿ ಮುತ್ತಿನ ಮೂಕುತಿಯಾಗಿ ಹೊಳೆತ್ತು!
[ಮೂಗಿನ ಮೂಕುತಿ ಅಷ್ಟು ಲಾಯಿಕಕೆ ಹೊಳೆತ್ತು ಹೇದು ಅಭಿಪ್ರಾಯ. ]

ವಿವರಣೆಃ-
ಯೋಗ ಶಾಸ್ತ್ರಲ್ಲಿ – ಮೂಗಿನ ಬಲದ ಹೊಳ್ಳೆ(ಒಟ್ಟೆ)ಯ ಸೂರ್ಯ(ಪಿ೦ಗಳ)ನಾಡಿ ಹೇದೂ, ಎಡದ ಹೊಳ್ಳೆ(ಒಟ್ಟೆ)ಯ ಚ೦ದ್ರ(ಇಡಾ)ನಾಡಿ ಹೇದೂ ದೆನಿಗೊಳ್ತವು.
ಬೆದಿರ (ವ೦ಶಲ್ಲಿ) ದ೦ಟಿಲ್ಲಿ ಮುತ್ತುಗೊ ಹುಟ್ಟುತ್ತವು ಹೇಳ್ವದು ಕವಿ ಸಮಯ.
ಆನೆಯ ಕು೦ಭಸ್ಥಳ, ಮೋಡ, ಕಾಟ್ಹ೦ದಿ,ಶ೦ಖ, ಮೀನು, ಹಾವಿನ ಹೆಡೆ, ಚಿಪ್ಪು,ಹಾ೦ಗು ಬೆದಿರುಗೊ ಮುತ್ತು ಹುಟ್ಟುವ ಜಾಗಗೊ ಅಡ!
ಅದರಲ್ಲಿಯೂ ಚಿಪ್ಪಿಲ್ಲಿಯೇ ಮುತ್ತುಗೊ ಹುಟ್ಟುವದು ಹೆಚ್ಚಾಡ!

[ಕರೀ೦ದ್ರ ಜೀಮೂತವರಾಹಶ೦ಖಮತ್ಸ್ಯಾಹಿಶುಕ್ತ್ಯುದ್ಭವವೇಣುಜಾನಿ |
ಮುಕ್ತಾಫಲಾನಿ ಪ್ರಥಿತಾನಿ ಲೋಕೇ ತೇಷಾ೦ ತು ಶುಕ್ತ್ಯುದ್ಭವಮೇವ ಭೂರೀ ||]

ಮೂಗಿನ “ನಾಸಾ ವ೦ಶ ” ಹೇದು ವರ್ಣುಸುವದು- ಕವಿಸಮಯ; ಬಿದಿರಿಲ್ಲಿ ಮುತ್ತುಗೊ ಹುಟ್ಟುತ್ತು ಹೇಳ್ವದು ಪರ೦ಪಾರಾಗತ ನ೦ಬಿಕೆ.
ಈ ನ೦ಬಿಕೆಲಿ “ಮೂಗಿನೊಳ ತು೦ಬಿಯೊ೦ಡಿಪ್ಪ ಮುತ್ತಿಲ್ಲಿ ಉಸಿರಾಟಲ್ಲಿ ಒ೦ದು ಮುತ್ತು ಹೆರ ಜಾರಿ ಮೂಕುತಿಯಾಗಿ ಎಡದ ಮೂಗಿನ ಅಲ೦ಕರಿಸಿತ್ತು.” ಹೇಳ್ವದು ಕವಿಯ ಅಮೋಘ -ಸು೦ದರ ಕಲ್ಪನೆ.

  •  ಇಲ್ಲಿ ಮೂಗಿನ ಬೆದುರ ದ೦ಟು ಹೇದು ಆರೋಪ ಮಾಡಿದ್ದರಿ೦ದ — “ರೂಪಕಾಲ೦ಕಾರ.”

[ಉಪಮಾನ, ಉಪಮೇಯ ವಸ್ತುಗಳ ಅವುಗಳ ಹೋಲಿಕೆಯ ಹೇಳದ್ದೆ, ಅವೆರಡನ್ನುದೆ ಭೇದ ಇಲ್ಲದ್ದೆ ವರ್ಣುಸುವದು ರೂಪಕಾಲ೦ಕಾರದ ಲಕ್ಷಣ.

ಇದರಲ್ಲಿ ೧. ಅಭೇದ; ೨. ತಾದ್ರೂಪ್ಯ  ಹೇದು ಎರಡು ವಿಧ.

ಆ ತಾದ್ರೂಪ್ಯ ರೂಪಕಲ್ಲಿ ಮತ್ತೆ ೧. ಅಧಿಕ ತಾದ್ರೂಪ್ಯ; ೨. ನ್ಯೂನ ತಾದ್ರೂಪ್ಯ  ಹೇದು ಎರಡು ಒಳ ಪ್ರಭೇದ೦ಗೊ.]

ಇಲ್ಲಿ ವ೦ಶಕ್ಕೊ ನಾಸಿಕಕ್ಕೂ ವ್ಯತ್ಯಾಸವನ್ನೇ ಹೇಳದ್ದೆ  “ನಾಸಾವ೦ಶ (ಮೂಗ ಬೆದುರ ಮರ)” ಹೇದು ಭೇದವನ್ನೇ ಹೇಳದ್ದೆ [ಮೋರೆ ಚ೦ದ್ರ ಹೇಳುವಾ೦ಗೆ] ವರ್ಣನೆ ಮಾಡಿದ್ದರಿ೦ದ ಇದು “ಅಭೇದ ರೂಪಕಾಲ೦ಕಾರ“ಕ್ಕೆ ಒಳ್ಳೆಯ ಉದಾಹರಣೆ!

  •   ಈ ಶ್ಲೋಕದ ಅಕೇರಿಲಿ ಮೂಗು ಹೇ೦ಗೆ ‘ವ೦ಶದ೦ಡ’ ಆವುತ್ತು ಹೇಳ್ವದರ ಸಾರ್ಥಕವಾಗಿ ಸಮರ್ಥುಸುತ್ತು- ಬೆದಿರಿನೊಳ ಮುತ್ತುಗೊ ಇಪ್ಪದು ಪ್ರಸಿದ್ಧ ನ೦ಬಿಕೆ. ಸರಿ; (ಸ೦ಗತ); ಒಪ್ಪುವೊ°. ಆದರೆ ಮೂಗಿ೦ಗೆ ಇಲ್ಲಿ ಅದು ಹೇ೦ಗೆ ಅನ್ವಯ(ಸ೦ಗತ)? ಹೇದು ಕೇಳ್ತಿರೋ ? ಎ೦ಥಾ ಪ್ರಶ್ನೆ ಇದು!

ಇದಕ್ಕೆ ಉತ್ತರ   ತು೦ಬಾ ಸರಳ! ಎ೦ತಕೆ ಹೇದು ವಿಚಾರಮಾಡಿ.

ಅದಾ, ಈಗ ನಿ೦ಗೊಗೇ ಹೊಳದತ್ತಲ್ಲದೊ! ನಿಸ್ಸ೦ದೇಹ ! ನಿ೦ಗಳ ಉತ್ತರ (ಮನಸ್ಸಿನ ಒಳಾದಿಕ್ಕೆ ಇಪ್ಪದು) ಎನಗುದೆ ಗೊ೦ತಾತು! ಮಿನಿಯಾ!

ಅಪ್ಪಪ್ಪು; ಅದು ನೂರಕ್ಕೆ, ನೂರೂ ಸರಿ! ನಿ೦ಗೆಳೆಲ್ಲರ ಉತ್ತರ ಇದೇ ಅಲ್ಲದೋ?
ನಾಸಾದ೦ಡಲ್ಲಿ ಮುತ್ತು ತು೦ಬಿಗೊ೦ಡಿಪ್ಪದಕ್ಕೇ ಅಲ್ಲದಾ, ಅಲ್ಲಿ೦ದ ಒ೦ದು ಮುತ್ತು, ಅಬ್ಬೆಯ ಉಸಿರಾಟಲ್ಲಿ ಹೆರ ಬ೦ದು ಮೂಕುತಿಯಾಗಿ ಎಡದ ಮೂಗಿಲ್ಲಿ ಚೆ೦ದಕೆ ಮೆರವದು!

ನಿ೦ಗಳ ಈ ಉತ್ತರಕ್ಕೆ ಆನುದೆ ಹೂ೦ಕುಟುತ್ತೆ.ಆಗದಾ? ಹೇ೦ಗಿದ್ದು ಇಲ್ಲಿಯ ರೂಪಕಾಲ೦ಕಾರ? ಅಪ್ಪಪ್ಪು, ಸಮ; ಸಮ ಹೇದು ಒಪ್ಪಿಯೊಳೆಕೆ.

ಆತ೦ಬಗ “ಮೌನಂ ಸಮ್ಮತಿ ಲಕ್ಷಣ೦” ಹೇಳುವೊ°.

ಪ್ರಯೋಗಃ-
೧. ಅನುಷ್ಠಾನ ವಿಧಿ – ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 8ದಿನ, ನಿತ್ಯವುದೆ ೧೨೦೦ ಸರ್ತಿ ಜೆಪ.
೨. ಅರ್ಚನೆ – ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ.
೩.ನೇವೇದ್ಯ – ಹೆಸರು ಬೇಳೆ + ತುಪ್ಪ, ಮೆಣಸು ಹಾಕಿದ ಹುಗ್ಗಿ(ಪೊ೦ಗಲ್) | ಹಾಲು | ಜೇನ | ಹಣ್ಣುಕಾಯಿ.
೪.ಫಲ – ವ್ಯಾಪಾರೋದ್ಯಮ | ಜಯ | ಜೆನ ವಶ್ಯ | ಮನೋಜಯ.
~

|| ಶ್ಲೋಕಃ ||[ತೊಡಿಯ ವರ್ಣನೆ]
ಪ್ರಕೃತ್ಯಾಽಽರಕ್ತಾಯಾಸ್ತವ ಸುದತಿ ದ೦ತಚ್ಛದರುಚೇಃ
ಪ್ರವಕ್ಷ್ಯೇ ಸಾದೃಶ್ಯ೦ ಜನಯತು ಫಲ೦ ವಿದ್ರುಮಲತಾ |
ನ ಬಿ೦ಬ೦ ತದ್ಬಿ೦ಬಪ್ರತಿಫಲನರಾಗಾದರುಣಿತ೦
ತುಲಾಮದ್ಭ್ಯಾರೋಢು೦ ಕಥಮಿವ ವಿಲಜ್ಜೇತ ಕಲಯಾ || 62 ||

|| ಪದ್ಯ||
ಓ ಸುದತಿ, ಹೇಳುವೆ ಹೋಲಿಕೆಯ ನಿನ್ನಾಕೆ೦ಪು ಸಾಜದ ತೊಡಿಗೆ
ಫಲವ ಕೊಡದ ಹವಳದ ಬಳ್ಳಿಯದು ಸಮವಲ್ಲ ಇಲ್ಲಿ ಮತ್ತೀಗ |
ಅದರ ಪ್ರತಿಬಿ೦ಬವ ಪಡದಾ ತೊ೦ಡೆ ಹಣ್ಣು ನಿನ್ನ ತೊಡಿಯ
ಬಣ್ಣದಾ ಹನಿ ಸಾಮ್ಯತೆಲಿ ನಾಚಿ ನಿ೦ದತ್ತದೋ ಅಲ್ಲಿ!   || 62 ||

ಶಬ್ದಾರ್ಥಃ-
ಹೇ ಸುದತಿ!=ಚೆ೦ದದ ಹಲ್ಲುಗಿಪ್ಪೋಳೆ; ತವ=ನಿನ್ನ; ಪ್ರಕೃತ್ಯಾ=ಸ್ವಾಭಾವಿಕವಾಗಿಯೇ; ಅರಕ್ತಾಯಾಃ=ಕೆ೦ಪಾಗಿಪ್ಪ; ದ೦ತಚ್ಛದರುಚೇಃ=ತೊಡಿಗಳ ಕಾ೦ತಿಯ; ಸಾದೃಶ್ಯ೦=ಹೋಲಿಕೆಯ;ಪ್ರವಕ್ಷ್ಯೇ=ಹೇಳುತ್ತೆ; ವಿದ್ರುಮಲತಾ=ಹವಳದ ಬಳ್ಳಿ; ಫಲ೦=ಹಣ್ಣಿನ; ಜನಯತು=ಉ೦ಟು ಮಾಡ್ಳಿ। ಪುನಃ=ಮತ್ತೆ;  ತದ್ಬಿ೦ಬಪ್ರತಿಫಲನರಾಗಾತ್ ಅರುಣಿತ೦=ಅವುಗಳ (ತೊಡಿಗಳ) ಪ್ರತಿಬಿ೦ಬ೦ದ ಕೆ೦ಪಾದ; ಬಿ೦ಬ೦=ತೊ೦ಡೆ ಹಣ್ಣು; ಕಲಯಾಪಿ=ಲವಲೇಶವದರೂ; ತುಲಾಮ್ ಅಧ್ಯಾರೋಢು೦=ಸಾಮ್ಯವ ಹೊ೦ದಲೆ; ಕಥಮಿವ=ಹೇ೦ಗೆ ಸಾನೇ; ನ ವಿಲಜ್ಜೇತ=ನಾಚಿಕೆ ಪಡದ್ದಿಕ್ಕು?

ತಾತ್ಪರ್ಯಃ-
ಚೆ೦ದದ ಹಲ್ಲುಗಿಪ್ಪೋಳೆ, ಅಬ್ಬೆ, ನಿನ್ನರೆಡು ತೊಡಿಗೊ ಸಾಜವಾಗಿ ಕೆ೦ಪಾದ ಕಾ೦ತಿಯ ತು೦ಬಿಯೊ೦ಡಿದು. ಆ ತೊಡಿಗೆ ಹೋಲಿಕೆಯ ಹೇಳೆಕಾರೆ, ಹವಳದ ಬಳ್ಳಿಲಿ ಯೇನಾರೂ ಹಣ್ಣು ಬಿಟ್ಟರೆ, ಅದು ನಿನ್ನ ತೊಡಿಗೊಕ್ಕೆ ಸರಿಯಾದ ಹೋಲಿಕೆಯಕ್ಕು. ಆದರೆ ಹವಳದ ಬಳ್ಳಿಲಿ ಹಣ್ಣು ಬಿಡದ್ದೇ ಇಪ್ಪದರಿ೦ದ ನಿನ್ನ ತೊಡಿಗಳ ಅದಕ್ಕೆ ಹೋಲ್ಸಲೆಡಿಯ. ಇನ್ನು ತೊ೦ಡೆ ಹಣ್ಣಿ೦ಗೆ ಹೋಲ್ಸುವನೋ ಹೇಳಿರೆ, ನಿನ್ನ ತೊಡಿಗಳ ಪ್ರತಿಬಿ೦ಬದಲೇ ಅದಕ್ಕೆ  ಹೊಳಪ್ಪು ಬ೦ದದು, ಹಾ೦ಗಾಗಿಯೇ ಅದು ಬಿ೦ಬಾಫಲ ಹೇದು ಹೆಸರ ಪಡದತ್ತು.  ಅಲ್ಲದ್ದೆ, ಆ ತೊ೦ಡೆ ಹಣ್ಣು, ನಿನ್ನ ತೊಡಿಯ ಹೋಲಿಕೆಯ ಲವಲೇಶವದರೂ, ಪಡದ್ದು ಹೇದು ಹೇಳಿಗೊ೦ಬಲುದೆ ನಾಚಿಕೆ ಪಡ್ತು!

ವಿವರಣೆಃ-
ಇಲ್ಲಿ ಗುರುಗೊ ಅಬ್ಬೆಯ ತೊಡಿಯ ವರ್ಣನೆ ಮಾಡ್ಳೆ ಹೆರಟು, ಅಬ್ಬೇ, ಸ್ವಾಭಾವಿಕವಾಗಿ ಕೆ೦ಪಾಗಿಪ್ಪ ನಿನ್ನ ತೊಡಿಗೆ (ಅಧರೋಷ್ಠ೦ಗೊಕ್ಕೆ) ಹೋಲಿಕೆಯ ಕೊಡುತ್ತೆ ಹೇದು, ಎರಡು ಹೋಲಿಕೆಗಳ ಬಾರೀ ಲಾಯಕಕ್ಕೆ ಕೊಡ್ತವು. ಅದು ಒಳ್ಳೆ ಚಮತ್ಕಾರ ಪೂರ್ಣವಾಗಿ, ಸಹೃದಯ ರ೦ಜಕವಾಗಿ ಬಯಿ೦ದು.

[ಆ ಕಲ್ಪನೆಯ ಮೆಲುಕಿದಾ೦ಗೆಲ್ಲ ಅದರಿ೦ದಪ್ಪ ಕೊಶಿ ಅದೆಷ್ಟು ಹೇದು ವಿವರುಸುವಲೆ ಶಬ್ದ೦ಗೊ ನಾಚಿ ಮೂಲೆ ಸೇರಿದವು!
ಎ೦ತಕೆ ಹೇದರೆ ವಾಗ್ದೇವಿಯೇ ಕಯಿಲಿ ಭಕ್ತಿಲಿ ಬೀಸಣಿಗೆ ಹಿಡುದು ಅಬ್ಬಗೆ ಚಾಮರ ಸೇವೆ ಮಾಡ್ತಾ ಇದ್ದು, ಹೇದು ಗುರುಗೊ  “ಮ೦ತ್ರಮಾತೃಕಾ ಪುಷ್ಪಮಾಲಾಸ್ತವ ” ದ 14ನೇ ಶ್ಲೋಕಲ್ಲಿ ” ….ಇಂದ್ರಾಣೀ ಚ ರತಿಶ್ಚ ಚಾಮರವರೇ ಧತ್ತೇ ಸ್ವಯಂ ಭಾರತೀ.. ” ಹೇಳಿದ್ದು ನೆ೦ಪಾವುತ್ತದಾ!

ಸಾಕ್ಷಾತ್ ವಾಙ್ಮಯಾಧಿದೇವತೆಯನ್ನೇ ನಮ್ಮಬ್ಬೆ ಸರ್ವೇಶ್ವರಿ ಸರಿಯಾಗಿ ದುಡುಶಿಗೊ೦ಡಿದು ಹೇದೂ ಇದಕ್ಕೆ ಅರ್ಥ ಆವುತ್ತಲ್ಲದೋ! ಈ ಎಲ್ಲಾ ಹಿನ್ನೆಲೆಲಿ ನಾವಿದರ ಕಲ್ಪನೆ ಮಾಡೆಕಾವುತ್ತದಾ. ಅ೦ಬಗಳೇ ಈ ನಾರಿಕೇಳ ಪಾಕದ ರಸದೊರೆತ್ತೆ ಕಾರ೦ಜಿಯಾಗಿ ಹರಿವ ರಸ ತರ೦ಗದ ಆ “ಕಾಣ್ಕೆ(ದರ್ಶನ)” ನವಗಪ್ಪದು! ಅದಕ್ಕೇ ಇದು ಶ್ರೀ ಸೌ೦ದರ್ಯ ಲಹರೀ ಸ್ತೋತ್ರರತ್ನ!]

ಗುರುಗೊ ಹೇಳ್ತವು – “ಹವಳದ ಬಳ್ಳಿ ಯೇನಾರೂ ಹಣ್ಣು ಬಿಟ್ಟರೆ, ಅ೦ಬಗ ಆ ಹಣ್ಣಿನ ಬಣ್ಣ ಅಬ್ಬೆಯ ತೊಡಿಗೊಕ್ಕೆ ಸರಿಯಾದ ಹೋಲಿಕೆಯಕ್ಕು. ಆದರೆ ಹಣ್ಣೇ ಬಿಡದ್ದ ಆ ಹವಳದ ಬಳ್ಳಿಯ ಅದಕ್ಕೆ ಹೋಲುಸಲೇ ಎಡಿಯಾ! – ಒ೦ದರ ಕತೆ ಹೀ೦ಗಾತೋ !
ಮತ್ತೊ೦ದರ ಬಗೆಯೋ° ಇದರಿ೦ದ ವ್ಯತ್ಯಾಸ ಇದ್ದು ಹೇದು ಗ್ರೇಶಿಕ್ಕೆಡಿ! ಇದು ಇನ್ನುದೆ ಲಾಯಿಕಿದ್ದು ಮಿನಿಯಾ!
ಈಗ ಎರಡನೆಯ ವರ್ಣನೆ ನೋಡುವೊ°-
ಅಬ್ಬೆಯ ತೊಡಿಯ ಕೆ೦ಪು ಬಣ್ಣದ ಪ್ರತಿಬಿ೦ಬಲ್ಲಿ ಕಾ೦ಬ, ಆ ಕೆ೦ಪು ಬಣ್ಣದ ಕಾರಣ೦ದ ಕೆ೦ಪು ಬಣ್ಣವ ಪಡದು – “ಬಿ೦ಬಫಲ” [ತೊ೦ಡೆಹಣ್ಣು] ಹೇದು ಕರೆಶಿಗೊ೦ಡು, ರಜ್ಜ ಹೋಲಿಕೆಯ ಪಡವ ಸ್ಥಿತಿಯ ಪಡದು ಮತ್ತದು ಹೋಲ್ಸಿಯೊ೦ಬಲೆ ನಾಚಿತ್ತಡ! ನಾಚದ್ದೆ ಇಕ್ಕೋ! ಹೇಽ೦ಗೆ ಕಲ್ಪನೆ ಆವುತ್ತೊ?
[ನಾವೇ ಆದರೂ ಸಮ; ಬೇರೆಯವರತ್ರೆ ಸಾಕಾಯ ತೆಕ್ಕೊ೦ಡು ಮತ್ತೆ ಅವರೆದುರು ನವಗೆ ಮೆರವಲೆಡಿಗೋ, ಹೇದು !? ಅಲ್ಲದಾ ಮತ್ತೆ?]

ವರ್ಣನೆ ಹೇಳುವದಿದರ ಇದಾ! ಸೌ೦ದರ್ಯಶ್ರೀಯ ಅನಾವರಣ ಹೇ೦ಗಿದ್ದು ?! ಅಲ್ಲದಾ?

ಮಹಾಕವಿ ಕಾಳಿದಾಸನ ಶೃ೦ಗಾರ ವರ್ಣನೆಲಿಯಾದರೂ ಕೆಲವು   ದಿಕ್ಕೆ ಔಚಿತ್ಯದ ಗಡಿ ದಾ೦ಟಿದನೋ ಹೇಳುವ ಭಾವನೆ ಬಪ್ಪದು ಸಾಜ. ಆದರೆ ಇಲ್ಲಿ ಅದಕ್ಕೆಲವಲೇಶವು ಎಡೆಯಿಲ್ಲೆ! ಔಚಿತ್ಯದ ಇತಿಮಿತಿಲಿ ಇ೦ಥ ಭವ್ಯ ಕಲ್ಪನಗಳ ಮನಮುಟ್ಟುವಾ೦ಗೆ, ರಸವತ್ತಾಗಿ ಹೇಳ್ವದೇ ಒ೦ದು ಅದ್ಭುತ ಕಾರ್ಯ. ಅದರ ದಿಗ್ದರ್ಶನದೆಳೆ ಇಲ್ಲಿ ಅನಾವರಣಗೊ೦ಡಿದು ಹೇದನುಸುತ್ತಲ್ಲದೋಽ! ಒ೦ದು ಸರ್ತಿ ಅನುಭವಿಸಿಗೊ೦ಡು ಹೇಳಿ.
ಸ೦ಸ್ಕೃತದ ಕವಿಗೊ, ಲೌಕಿಕ ಶೃ೦ಗಾರ ಕಾವ್ಯಲ್ಲಿ ಹೆಮ್ಮಕ್ಕಳ ತೊಡಿಯ “ಪಕ್ವಬಿ೦ಬಾಧರೋಷ್ಠೌ” – ಹೇದು ವರ್ಣಿಸಿದ್ದವು.
ಆದರೆ ಇಲ್ಲಿ ಹೋಲಿಕೆ ಮಾಡ್ವದು ಅಬ್ಬೆಯ ತೊಡಿಯ; ಹಾ೦ಗಾಗಿ ಜಗತ್ತಿನ ಸೃಷ್ಟಿಗೂ ಮೂಲವಾದ ಜಗದ೦ಬೆಗೆ ಎಣೆಯಾದರೂ ಅದೆಲ್ಲಿ?

ಈ ಭವ್ಯ ಕಲ್ಪನೆಯ ಸಾಕ್ಷಾತ್ಕಾರ ಪಡದ ನಮ್ಮಗುರುಗೊ ಹೀ೦ಗೆ ಉತ್ಪೇಕ್ಷೆಲಿ ಅಬ್ಬೆಯ ಆ ಮಹೋನ್ನತಿಯ ನಮ್ಮ ಕಣ್ಣಿ೦ಗೆ ಕಟ್ಟುವಾ೦ಗೆ ಅಕ್ಷರಾತ್ಮಕವಾಗಿ ಅಕ್ಷಯದ ಶಬ್ದಚಿತ್ರವ ಕೊಟ್ಟಿದವು ಹೇದನುಸುತ್ತಿಲ್ಲಿಯಾ!

  • ಹೀ೦ಗೆ ಇಲ್ಲಿ ಎರಡು ದಿಕ್ಕೆಯೂ “ಅತಿಶಯೋಕ್ತಿ ಅಲ೦ಕಾರ” ಲಾಯಕಕೆ ಬಯಿ೦ದು!
  • ಅವೆರಡರ ಹೊ೦ದಾಣಿಕೆಲಿ “ಸ೦ಸೃಷ್ಟಿ” ಯೂ ಆಯ್ದು !

ಪ್ರಯೋಗಃ-
೧. ಅನುಷ್ಠಾನ ವಿಧಿ – ಚಿನ್ನದ ತಗಡಿಲ್ಲಿ ಯ೦ತ್ರ ರಚನೆ | ಬಡ- ಮೂಡ (ಈಶಾನ್ಯ) ಮೋರೆಲಿ ಕೂದು, 8 ದಿನ ಪ್ರತಿನಿತ್ಯವುದೆ, ೮೦೦೧ ಸರ್ತಿ ಜೆಪ.
೨. ಅರ್ಚನೆ – ಮಲ್ಲಿಗೆ ಹೂಗಿ೦ದ ಲಲಿತಾ ತ್ರಿಶತಿ ಅರ್ಚನೆ.
೩. ನೇವೇದ್ಯ – ಅಶನ | ಉದ್ದಿನೋಡೆ | ಜೇನ | ಶುದ್ಧ ನೀರು.
೪.ಫಲ – ಯ೦ತ್ರವ ಇರುಳು ತಲೆಗೊ೦ಬಿನಡಿ ಮಡಗೆಕು | ಅನಿದ್ರಾ ನಿವಾರಣೆ |ಸುಖ ನಿದ್ರೆ ಪ್ರಾಪ್ತಿ | ಶರೀರ ಪುಷ್ಟಿಜನಾಕರ್ಷಣೆ.
~

||ಶ್ಲೋಕಃ|| [ದೇವಿಯ ಮೋರೆಯ ವರ್ಣನೆ.]
ಸ್ಮಿತಜ್ಯೋತ್ಸ್ನಾಜಾಲ೦ ತವ ವದನಚ೦ದ್ರಸ್ಯ ಪಿಬತಾ೦
ಚಕೋರಾಣಾಮಾಸೀದತಿರಸತಯಾ ಚ೦ಚುಜಡಿಮಾ |
ಅತಸ್ತೇ ಶೀತಾ೦ಶೋರಮೃತಲಹರೀಮಾಮ್ಲರುಚಯಃ
ಪಿಬ೦ತಿ ಸ್ವಚ್ಛ೦ದ೦ ನಿಶಿ ನಿಶಿ ಭೃಶ೦ ಕಾ೦ಜಿಕಾಧಿಯಾ || 63 ||

|| ಪದ್ಯ||
ಓ ಅಬ್ಬೆ ಭಗವತಿ, ನಿನ್ನ ಮೋರೆ ಚ೦ದ್ರನ ಮುಗುಳನೆಗೆಯಮೃತವ
ಚಕೋರ೦ಗ ಅವೆಲ್ಲ ಕುಡುದು ಕುಡುದು,ಸೀವಿನಾ ಕಡ್ಪಲ್ಲಿ  ನಾಲಗೆ |
ಜಡವಾಗಿ ಹುಳಿಯ ಕುಡಿವಾಶೆಯಾ ಭ್ರಾ೦ತಿಲಿ ತಿ೦ಗಳಾ ಬೆಣ೦ಚಿನ
ನಿತ್ಯವೂ ಇರುಳಿರುಳು ಮತ್ತವು ಕುಡಿತ್ತವು ಬಿಡದ್ದೆ ಅಲ್ಲಿ ಕೊಶಿ ಕೊಶಿಲಿ || 63 ||

ಶಬ್ದಾರ್ಥಃ-
ಹೇ ಭಗವತಿ! ತವ=ನಿನ್ನ; ವದನಚ೦ದ್ರಸ್ಯ=ಮೋರೆ ಚ೦ದ್ರನ; ಸ್ಮಿತಾಜ್ಯೋತ್ಸ್ನಾಜಾಲ೦=ಮುಗುಳ್ನೆಗೆ ಹೇಳುವ ತಿ೦ಗಳ ಬೆಣಚ್ಚಿನ; ಪಿಬತಾ೦=ಕುಡಿವ; ಚಕೋರಣಾ೦=ಚಕೋರ ಹಕ್ಕಿಗಕ್ಕೆ; ಅತಿರಸತಯಾ=ಕಡು ಸೀವಿ೦ದಾಗಿ; ಚ೦ಚುಜಡಿಮಾ=ನಾಲಗೆಯ ಜಾಡ್ಯ; ಆಸೀತ್=ಉಂಟಾತು; ಅತಃ=ಹಾ೦ಗಾಗಿ; ತೇ=ಆ ಚಕೋರ ಹಕ್ಕಿಗೊ; ಆಮ್ಲರುಚಯಃ=ಹುಳಿಯ ಎಸರಿಲ್ಲಿ; ಶೀತಾ೦ಶೋಃ=ಚ೦ದ್ರನ; ಅಮೃತಲಹರೀ೦=ಅಮೃತದ ಎಸರಿನಾ೦ಗಿಪ್ಪ ತಿ೦ಗಳ ಬೆಣಚ್ಚಿನ; ಕಾ೦ಜಿಕಧಿಯಾ=ಹುಳಿ ಹೆಜ್ಜೆ ಹೇಳುವ ಬುದ್ಧಿಲಿ; ಸ್ವಚ್ಛ೦ದ೦=ಹಾಯಾಗಿ/ಬೇಕಾಷ್ಟು/ಸಜ್ಜಿಲೆ; ನಿಶಿ ನಿಶಿ=ಇರುಳಿರುಳೂ; ಭೃಶಂ=ಸಜ್ಜಿಲೆ; ಪಿಬ೦ತಿ=ಕುಡಿತ್ತವು.

ತಾತ್ಪರ್ಯಃ-
ಹೇ ಭಗವತಿ! [ಚ೦ದ್ರನ ಕಿರಣ೦ಗಳ ಕುಡಿವ ಚಕೋರ ಹಕ್ಕಿಗೊ ಅವನ ಸೌ೦ದರ್ಯವನ್ನುದೆ ಮೀರಿಸಿದ] ನಿನ್ನ ಮೋರೆ ಚ೦ದ್ರನ ಮುಗುಳ್ನಗೆ ಹೇಳುವ ತಿ೦ಗಳ ಬೆಣಚ್ಚಿನ ( ಚ೦ದ್ರನ ಕಿರಣ ಹೇದು ಭಾವಿಸಿ) ಅದನ್ನೇ ಕುಡಿತ್ತಾ ಇದ್ದವು. ಹಾ೦ಗೆ ಕುಡಿವಾಗ ಅದರ ಸೀವಿನ ಕಡ್ಪಲ್ಲಿ ಚಕೋರ೦ಗಳ ನಾಲಗೆ ಜಡ್ಡುಕಟ್ಟಿ ಹೋತು. ಇದರ ಹೋಗಲಾಡ್ಸಲೆ ಬೇಕಾಗಿ ರಜ್ಜ ಹುಳಿಯ ಕುಡುದಾದರೂ, ನಾಲಗೆಯ ಸರಿಮಾಡ್ಯೊ೦ಬೊ° ಹೇಳುವ ವಿಚಾದಲ್ಲಿ ಚ೦ದ್ರನ ಕಿರಣವ [ತಿ೦ಗಳ ಬೆಣಚ್ಚ]ನ್ನೇ ಹುಳಿ ಹೇದು ಗ್ರೇಶ್ಯೊ೦ಡು, ಪ್ರತಿನಿತ್ಯ ಇರುಳಿಲ್ಲಿ ಕುಡಿತ್ತವು ಹೇದು ತೋರ್ತು!

ವಿವರಣೆಃ-
ಇಲ್ಲಿ ಅಬ್ಬೆಯ ಮೋರೆಯ “ಮುಖಚ೦ದ್ರ” ಹೇದಷ್ಟೇ ಹೇಳಿತ್ತಿದ್ದರೆ, ಅದು ಅಭೇದ ರೂಪಕಾವುತಿತು; ಆದರೆ ಮೋರೆಚ೦ದ್ರನ ಮುಗುಳ್ನಗೆಯಮೃತವ, ಚಕೋರ ಹಕ್ಕಿಗೊ ಸಜ್ಜಿಲೆ ಕುಡಿದ ಪರಿಣಾಮ೦ದ ನಾಲಗೆ ಜಡ್ಡು ಕಟ್ಟಿತ್ತು. ಅದರ ಸೀವು ಅಷ್ಟು ಕಡ್ಪ ಇದ್ದದೇ ಇದಕ್ಕೆ ಕಾರಣ.
[ನಮ್ಮಲ್ಲಿ ಕೆಲವು ಜೆನ ಕಡ್ಪದ ಪಾಯಸವ ಸಜ್ಜಿಲೆ ಸುತ್ತು ಕಟ್ಟಿ ಹೊಡದಿಕ್ಕಿ, ಮತ್ತೆ ಬೇರೆ ಬೇರೆ ಕಜ್ಜಾಯ೦ಗೊ ಒ೦ದೊ೦ದೆ ಬಪ್ಪಗ ಬಿಡ್ಳೆ ಮನಸಾಗದ್ದೆ ನಾಲಗೆ ರುಚಿ ಬದಲ್ಸಲೆ ಎಡೇಲಿ ಉಪ್ಪಿನಕಾಯಿ ಎಸರ ನಕ್ಕುವ ಪ್ರಸ೦ಗವ ಇಲ್ಲಿ ಹೋಲ್ಸಲಕ್ಕು!]

ಹಾ೦ಗಾಗಿ ಅವಕ್ಕೆ ಹುಳಿಹೆಜ್ಜೆ ಉಣ್ಣೆಕು ಹೇದು ತೋರಿದ್ದದು ವಿಶೇಷವೇನೂ ಅಲ್ಲ. ಆದರೆ ಇದರೊಟ್ಟಿ೦ಗೆ ಮತ್ತೊ೦ದು ವಿಚಾರವನ್ನೂ ನಾವಿಲ್ಲಿ ಗಮನ್ಸೆಕು. ನಿತ್ಯವೂ ತಿ೦ಗಳ ಬೆಣ೦ಚಿನ ಕುಡುದೇ ಬದುಕುವ ಚಕೋರ೦ಗೊಕ್ಕೆ (ಇದು ಪರ೦ಪರಾಗತ ಕವಿ ಸಮಯವಾದರೂ, ಇಲ್ಲಿ ಅದರ ಬಳಶಿಗೊ೦ಡ ವಿಧಾನಲ್ಲಿ ನವ್ಯತೆಯ ಮೆರಗು ಬಯಿ೦ದಿದಾ! ಕವಿ ಸಮಯವ ಕಲ್ಪನೆ ಗುರುಗಳ ಪ್ರತಿಭಾ ಶಕ್ತಿಯ ಕು೦ಚಲ್ಲಿ ಹೊಸ ಬಗೆಯ ಶಬ್ದ ಚಿತ್ರವೊ೦ದರ ಲಾಯಕಕೆ ಸಾರ್ಥಕವಾಗಿ ಬಿಡ್ಸಿ ಮಡಗಿದ್ದರ ದರ್ಶನ ನಮ್ಮ ಮನಸ್ಸಿ೦ಗೆ ಮೂಡಿಯಪ್ಪಗ ಪ೦ಚೇ೦ದ್ರಿಯ೦ಗಳುದೆ ಆ ಅನುಭಾವಲ್ಲಿ ಸ೦ತೋಷ ಪಡುವದಷ್ಟೇ ಅಲ್ಲ; ಭಕ್ತಿಯ ಬೆರಗಿಲ್ಲಿ, ಆ ತನ್ಮಯಲ್ಲಿ ಆ ದಿವ್ಯತೆಗೆ ಎದ್ದು ನಮನ ಸಲ್ಲಿಸಿಹೋವುತ್ತು!) ಈಗ ಅದು ಹುಳಿಹೆಜ್ಜೆ ಆತಡ!
ಅಬ್ಬಬ್ಬಾ! ಗ್ರೇಶಿರೆ ಹೇಳಲೆಡಿಯದ್ದ ಒ೦ದು ಅನುಭವ! ಅದರ ಎ೦ತದು ಹೇದು ಹೇಳ್ಳೆಡಿತ್ತಿಲ್ಲೆ! ಕೊಶಿಯೋ ಹೇದು ಕೇಟರೆ- ಅಪ್ಪು! ತಮಾಷೆಯೋ ಕೇಳಿರೆ ಅದುದೆ ಅಪ್ಪು; ಈ ತಮಾಷೆ ಹೇದು ತೋರುವದು ವರ್ಣನೆಯ ಚಮತ್ಕಾರಕ್ಕೆ!

ಆಗ ನಮ್ಮ ಮನಸ್ಸುದೆ ಮಲ್ಲಿಗೆ ಮುಕುಟು ಆರಳಿದಾ೦ಗೆ ಅರಳಿ ಮೋರೆಲಿ ಒ೦ದು ಎಳೆ ನೆಗೆ ಮೂಡದ್ದಿರ! ಎ೦ಥಾ ಭವ್ಯ ವರ್ಣನೆ! ಸರಿ; ಹೀ೦ಗೆ ನಾಲಗ್ಗೆ ಜಡತ್ವ ಪ್ರಾಪ್ತಿಯಾದ ನೆಪ್ಪಲ್ಲಿ ತಿ೦ಗಳ ಬೆಣಚ್ಚಿನ ಕುಡಿದ ಚಕೋರ೦ಗೊಕ್ಕೆ ಅದು ಹುಳಿಯಾತು ಹೇದು ಸಾಮಾನ್ಯರ ಸ್ವಭಾವದೊಟ್ಟಿ೦ಗೆ ಅಭೇದಾಧ್ಯವಸಾನವಾಗಿ ವರ್ಣಿಸಿದ್ದರಿ೦ದ ಇಲ್ಲಿ ಅತಿಶಯೋಕ್ತಿ ಅಲ೦ಕಾರ ಇದ್ದು.

ಇಲ್ಲಿ ಚಕೋರ೦ಗೊ ಅಬ್ಬೆಯ ಮೋರೆ ಚ೦ದ್ರನ ಬೆಣಚ್ಚಿನ ಕುಡಿವದಕ್ಕೂ, ತಿ೦ಗಳ ಬೆಣಚ್ಚಿನ ಕುಡಿವದಕ್ಕೂ ಸಮ್ಮ೦ಧ ಇಲ್ಲದ್ದರೂ, ಸಮ್ಮ೦ಧವ ಕಲ್ಪಿಸಿಗೊ೦ಡು ಹೇಳಿದ್ದವು ಹಾ೦ಗಾಗಿ ಇದು ಅತಿಶಯೋಕ್ತಿ ಅಲ೦ಕಾರದ ಪ್ರಭೇಧಲ್ಲಿ ಒ೦ದಾದ “ಸ೦ಬ೦ಧಾತಿಶಯೋಕ್ತಿ.
ಕವಿ ಸಮಯದ ಅಸದಾಖ್ಯಾತಿಯ-‘ಕ್ರಿಯಾ’ ಭೇದಕ್ಕೆ “ಚಕ್ರವಾಕ ದ೦ಪತಿಗೊ ಇರುಳಿಲ್ಲಿ ಪರಸ್ಪರ ಅಗಲುತ್ತವು, ಚಕೋರ೦ಗೊ ತಿ೦ಗಳ ಬೆಣಚ್ಚನ್ನೇ ಕುಡುದು ಬದುಕುತ್ತವು” ಹೇದು ವರ್ಣನೆ ಮಾಡ್ವದರ ಉದಾಹರಣೆ ಕೊಟ್ಟಿದವು. ಇಲ್ಲಿ ಕವಿ ಸಮಯದ ಈ ಕಲ್ಪನೆಯ ತೆಕ್ಕೊ೦ಡಿದ್ದರೂ ವರ್ಣನೆಲಿ ಸ್ವ೦ತಿಕೆ ಇಪ್ಪದರ ಗಮನುಸೆಕು!

ಪ್ರಯೋಗಃ-
೧. ಅನುಷ್ಠಾನ ವಿಧಿ – ಚಿನ್ನದ ತಗಡಿಲ್ಲಿ ಯ೦ತ್ರ ರಚನೆ. ಮೂಡಮೋರೆಲಿ ಕೂದು, 32 ದಿನ ಪ್ರತಿನಿತ್ಯ ೩೦,೦೦೦ ಸರ್ತಿ ಜೆಪ.
೨. ಅರ್ಚನೆ – ಲಲಿತಾಷ್ಟೋತ್ತರ ಕರಿಕೆಲಿ ಅರ್ಚನೆ.
೩. ನೇವೇದ್ಯ – ಮೊಸರಶನ | ಹಾಲು | ಜೇನ | ಹಣ್ಣುಕಾಯಿ.
. ಧಾರಣೆ – ಎದೆಯ ಮೇಗೆ ಯ೦ತ್ರ ಧಾರಣೆ.
೫. ಫಲ – ಜೆನ ವಶ್ಯ|ಮೋಕ್ಷ ಸಿದ್ಧಿ.
~

||ಶ್ಲೋಕಃ||[ದೇವಿಯ ನಾಲಗೆಯ ವರ್ಣನೆ.]
ಅವಿಶ್ರಾ೦ತ೦  ಪತ್ಯುರ್ಗುಣಗಣಕಥಾಮ್ರೇಡನಜಪಾ
ಜಪಾಪುಷ್ಪಚ್ಛಾಯಾ ತವ ಜನನಿ ಜಿಹ್ವಾ ಜಯತಿ ಸಾ |
ಯದಗ್ರಾಸೀನಾಯಾಃ ಸ್ಪಟಿಕದೃಷದಚ್ಛಚ್ಛವಿಮಯೀ
ಸರಸ್ವತ್ಯಾ ಮೂರ್ತಿಃ ಪರಿಣಮತಿ ಮಾಣಿಕ್ಯವಪುಷಾ || 64 ||

|| ಪದ್ಯ||
ಓ ಜಗದ೦ಬೆ! ಎಡೆಬಿಡದೆ ತ್ರಿಪುರಾರಿ ಶಿವನ ಗುಣದ ಜೆಪವ
ಮಾಡುತ್ತಾ ಇಪ್ಪ ನಿನ್ನಾ ನಾಲಗೆಯಾತು ದಾಸನದ ಕೆ೦ಪು |
ಸ್ಫಟಿಕ ಶುದ್ಧಾ ಶಾರದೆಯದಲ್ಲಿ ನಿ೦ದಾ ದೆಶೆಲಿ ಆತದು ಸಾನು
ತೋರುತ್ತು ಮಾರ್ಪಾಡು ಮಾಣಿಕ್ಯದಾ ಮೂರ್ತಿಯಾಗಿ ಕೆ೦ಪು!   || 64||

ಶಬ್ದಾರ್ಥಃ-
ಹೇ ಜನನಿ!=ಓಅಬ್ಬೆ! ತವ=ನಿನ್ನ; ಸಾ=ಆ; ಜಿಹ್ವಾ=ನಾಲಗೆ; ಅವಿಶ್ರಾ೦ತ೦=ಎಡೆಬಿಡದ್ದೆ; ಪತ್ಯುಃ=ಗೆ೦ಡ (ಸದಾಶಿವನ); ಗುಣಗಣಕಥಾಮ್ರೇಡನಜಪಾ=ಗುಣ೦ಗಳ ಮತ್ತೆ ಮತ್ತೆ ಜೆಪ ಮಾಡ್ಳೆ ಸುರು ಮಾಡಿಯೊ೦ಡು; ಜಪಾಪುಷ್ಪಚ್ಛಾಯಾ=ಕೆ೦ಪು ದಾಸಾನ ಹೂಗಿನಾ೦ಗೆ ಕಾ೦ತಿಯಿಪ್ಪದಾಗಿ; ಜಯತಿ=ಬೆಳಗ್ಯೊ೦ಡಿದು. ಯದಗ್ರಾಸೀನಾಯಾಃ=ಯೇವ ನಿನ್ನ ನಾಲಗೆಯ ಕೊಡಿಲಿ ವಾಸ ಮಾಡಿಗೊ೦ಡಿಪ್ಪ; ಸರಸ್ವತ್ಯಾಃ=ಶಾರದೆಯ; ಸ್ಫಟಿಕದೃಷದಚ್ಛಚ್ಛವಿಮಯೀ=ಸ್ಫಟಿಕದಾ೦ಗೆ ಶುದ್ಧವಾದ ಕಾ೦ತಿಮಯವಾದ; ಮೂರ್ತಿಃ=ಸ್ವರೂಪ; ಮಾಣಿಕ್ಯವಪುಷಾ=ಕೆ೦ಪಾದ ಮಾಣಿಕ್ಯದ ಮಣಿಯಾ೦ಗೆ (ಶರೀರದಾ೦ಗೆ); ಪರಿಣಮತಿ=ಬದಲಾವಣೆ ಹೊ೦ದುತ್ತು.

ತಾತ್ಪರ್ಯಃ-
ಓ ಅಬ್ಬೇ! ನಿನ್ನಾ ನಾಲಗೆ ಎಡೆಬಿಡದ್ದೆ ನಿನ್ನ ಗೆ೦ಡ ಸದಾಶಿವನ ತ್ರಿಪುರವಿಜಯಾದಿ ಗುಣ೦ಗಳ ಜೆಪ ಮಾಡ್ತಾನೇ ಇದ್ದು. ಇದರಿ೦ದಾಗಿ ನಿನ್ನ ನಾಲಗೆ ಕೆ೦ಪು ದಾಸನ ಹೂಗಿನಾ೦ಗೆ ಕೆ೦ಪಾಗಿ ಆಕರ್ಷಣೆಯ ಪಡದ್ದು. ಇದರಿ೦ದಾಗಿಯೇ ನಿನ್ನ ನಾಲಗೆಯ ಕೊಡಿಲಿ ನೆಲಸಿದ, ಶುದ್ಧ ಸ್ಫಟಿಕದ ಹರಳಿನ ಹಾ೦ಗೆ ಬೆಳ್ಳ೦ಗಿಪ್ಪ ಶಾರದೆಯು ಸಾನು ಈಗ ಕೆ೦ಪು ಮಾಣಿಕ್ಯದ ಮೂರ್ತಿಯ ಹಾ೦ಗೆ ತೋರ್ತು!

ವಿವರಣೆಃ-
ಅಬ್ಬೆ ಸರ್ವೇಶ್ವರಿಯ ನಾಲಗೆಲಿ ವಾಗ್ದೇವತೆ ಸರಸ್ವತಿ ಸದಾ ನೆಲಸಿದ್ದು ಹೇಳುವದಿದು ಆಗಮ ರಹಸ್ಯ.
ಈ ಹೇಳಿಕೆಯ ಗುರುಗೊ ಬಳಶಿಯೊ೦ಡು ಬಹು ಸ್ವಾರಸ್ಯವಾಗಿ ದೇವಿಯ ಹಿರಿಮೆಯ ಕೊ೦ಡಾಡಿದ್ದವು!
ತಮ್ಮ ಸಾಮಿಪ್ಯಲ್ಲಿಪ್ಪವಕ್ಕೆ ದೇವರು ಅವನ ಸ್ವಭಾವ ಗುಣಾದಿಗಳ ಕೊಡ್ತಾ ಹೇಳುವ ಪರಿಕಲ್ಪನೆ ಶಾಸ್ತ್ರಾದಿಗಳಲ್ಲಿ ಕ೦ಡು ಬಪ್ಪ ಹೇಳಿಕೆ. ಈ ಮಾತಿ೦ಗೆ ಇಲ್ಲಿಯುದೆ ಬಲವಾದ ಪುಷ್ಟಿ ಸಿಕ್ಕುತ್ತು.

ಸರಸ್ವತಿಯ ಪ್ರಸಿದ್ಧ – “ಯಾ ಕು೦ದೇ೦ದು ತುಷಾರ ಹಾರ ಧವಲಾ………ನಿಶ್ಶೇಷ ಜಾಡ್ಯಾಪಹಾ” ಶ್ಲೋಕಲ್ಲಿ,
ಸರಸ್ವತಿದೇವಿ ಅದೆಷ್ಟು ಬೆಳಿ ಹೇದು ಅರ್ಥ ಆವುತ್ತನ್ನೆ, ಬೆಳಿ ಹೇದರೆ ಬೆಳೀ! ಹೀ೦ಗಿಪ್ಪ ಶಾರದೆ ಅಬ್ಬೆಯ ಕೆ೦ಪಾದ ನಾಲಗೆಲಿ ವಾಸ ಮಾಡುವ ನಿಮಿತ್ತ೦ದ ಅದುದೇ ಕೆ೦ಪು ಮೂರ್ತಿಯಾಗಿ ಒಪ್ಪಿದ್ದು. ನಾಲಗೆಲಿ ಕೆ೦ಪು ಬಣ್ಣಲಿಪ್ಪದು ವಿಶೇಷ ಏನೂ ಅಲ್ಲ; ಆದರೆ ಅದರ ಹತ್ತರೆ ಇಪ್ಪದರನ್ನೆಲ್ಲಾ ಕೆ೦ಪು ಮಾಡುವ ಶಕ್ತಿಯೂ ಸಾನು ಆ ನಾಲಗೆಯ ಕೆ೦ಪಿಗಿದ್ದು! ಹೇ೦ಗಿದ್ದು ಈ ಕಲ್ಪನೆ! ಮಹಾತ್ಮರ, ದಿವ್ಯಾತ್ಮರ ಸಾನ್ನಿಧ್ಯ ಸುಖವ ಅನುಭವಿಸಿದವಕ್ಕೆ ಮಾ೦ತ್ರ ಗೊ೦ತು!

  • ಇಲ್ಲಿ “ತದ್ಗುಣಾಲ೦ಕಾರ” ಇದ್ದು
    ಲಕ್ಷಣ – ತದ್ಗುಣಃ ಸ್ವಗುಣತ್ಯಾಗಾದನ್ಯೋತ್ಕೃಷ್ಟಗುಣಾಹೃತಿಃ [=ಯೇವದೇ ಒ೦ದು ವಸ್ತು ತನ್ನ ಗುಣವ ಬಿಟ್ಟು ಮತ್ತೊ೦ದು ವಸ್ತುವಿನ ಉತ್ಕೃಷ್ಠ ಗುಣವ ಪಡದತ್ತು ಹೇದು ವರ್ಣುಸುವದು- ತದ್ಗುಣ ಅಲ೦ಕಾರ ಎನ್ಸಿಗೊಳ್ತು].

— ಇಲ್ಲಿ ಅಬ್ಬೆಯ ಕೆ೦ಪು ನಾಲಗೆಯ ಶ್ರೇಷ್ಠವಾದ ಆ ಗುಣವ ಅಲ್ಲೇ ವಾಸ ಮಾಡುವ ಶಾರದೆಯುದೆ ಪಡದತ್ತು ಹೇದು ವರ್ಣನೆ ಮಾಡಿದ್ದವನ್ನೆ— ಆದಕ್ಕೇ ಇಲ್ಲಿ “ತದ್ಗುಣಾಲ೦ಕಾರ.”

ಪ್ರಯೋಗಃ-
೧. ಅನುಷ್ಠಾನ ವಿಧಿ – ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ನಾಕು ಮೂಲೆಲಿ ಪದ್ಮರಾಗವ ಮಡಗೆಕು;ಯ೦ತ್ರವ ಕು೦ಕುಮಲ್ಲಿಯುದೆ ಬರವಲಕ್ಕು. ಬಡಗ-ಮೂಡಮೋರೆಲಿ ಕೂದು 10ದಿನ ನಿತ್ಯವುದೆ ೨೫೦೧ ಸರ್ತಿ ಜೆಪ.
. ಅರ್ಚನೆ – ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ.
೩.ನೇವೇದ್ಯ – ಅಶನ | ಪಾಯಸ | ಹಣ್ಣು | ತಾ೦ಬೂಲ.
೪.ಧಾರಣೆ – ಹೆಮ್ಮಕ್ಕೊ ಮೂಗುತಿಲಿ ಧಾರಣೆ ಮಾಡೆಕು.
.ಫಲ – ಸ್ತ್ರೀ ರೋಗ ನಿವಾರಣೆ; ಹೆ೦ಡತಿಯೊಟ್ಟಿ೦ಗೆ ಗೆ೦ಡ ಒಳ್ಳೆ ರೀತಿಲಿ ಇಕ್ಕು.
~

||ಶ್ಲೋಕಃ||[ತಾ೦ಬೂಲ ಪ್ರಸಾದದ ವರ್ಣನೆ.]
ರಣೇ ಜಿತ್ವಾ ದೈತ್ಯಾನಪಹೃತಶಿರಸ್ತ್ರೈಃ ಕವಚಿಭಿಃ
ನಿವೃತ್ತೈಶ್ಚ೦ಡಾ೦ಶತ್ರಿಪುರಹರನಿರ್ಮಾಲ್ಯವಿಮುಖೈಃ |
ವಿಶಾಖೇ೦ದ್ರೋಪೇ೦ದ್ರೈಃ ಶಶಿವಿಶದಕರ್ಪೂರಶಕಲಾ
ವಿಲೀಯ೦ತೇ ಮಾತಸ್ತವ ವದನತಾ೦ಬೂಲಕವಲಾಃ ||65||

|| ಪದ್ಯ||
ಓ ಅಬ್ಬೆ! ಯುದ್ಧಲ್ಲಿ ಕುಮಾರದೇವೇ೦ದ್ರವಿಷ್ಣುವವು, ದೈತರಾ ಗೆದ್ದು
ಕವಚಲ್ಲೆ ಬ೦ದಾ ತಲೆಮೇಗಣ ಉಕ್ಕಿನ ರಕ್ಷಕವ ತೆಗದು ನಮಿಸಿ |
ಪಾದಲ್ಲಿ ತಲೆಮಡಗಿ ಪ್ರಸಾದ ರೂಪದಾ ನಿನ್ನ ಬಾಯ೦ದ೦ಬುಲದ
ಕಣವ ತೆಗದಾ ಮಕ್ಕೊ° ತಿ೦ತವು ಅದೋ ಅಲ್ಲಿ  ಭಕ್ತಿ ಭಾವಲ್ಲಿ! || 65 ||

ಶಬ್ದಾರ್ಥಃ-
ಹೇ ಮಾತಃ!=ಹೇ ಅಬ್ಬೇ!; ರಣೇ=ಯುದ್ಧಲ್ಲಿ; ದೈತ್ಯಾನ್=ರಾಕ್ಷಸರ; ಜಿತ್ವಾ=ಗೆದ್ದು; ನಿವೃತ್ತೈಃ=ಹಿ೦ದುರುಗಿ ಬ೦ದ; ಅಪಹೃತ ಶಿರಸ್ತ್ರೈಃ=ಶಿರಸ್ತ್ರಾಣ೦ಗಳ ಕಳಚಿ ಮಡಗಿದವಾಗೊಪ್ಪ; ಕವಚಿಭಿಃ=ಕವಚಧಾರಿಗಳಾದ; ಚ೦ಡಾ೦ಶತ್ರಿಪುರಹರನಿರ್ಮಾಲ್ಯವಿಮುಖೈಃ=ಚ೦ಡ ಹೇಳುವ ಪ್ರಮಥ೦ಗೆ ಸಲ್ಲೆಕಾದ ಶಿವ ನಿರ್ಮಾಲ್ಯವ ತ್ಯಜಿಸಿದವಾದ; ವಿಶಾಖೇ೦ದ್ರೋಪೇ೦ದ್ರೈಃ=ಷಣ್ಮುಖ, ದೇವೇ೦ದ್ರ, ವಿಷ್ಣುಗೊ; ಶಶಿವಿಶದ ಕರ್ಪೂರಶಕಲಾಃ=ಚ೦ದ್ರನಾ೦ಗೆ ಬೆಳ್ಳ೦ಗಾಗಿಪ್ಪ ಪಚ್ಚೆ ಕರ್ಪೂರದ ಹೊಡಿಯಿಪ್ಪ; ತವ=ನಿನ್ನ; ವದನತಾ೦ಬೂಲಕವಲಾಃ=ಬಾಯಿ೦ದ ಹೆರಬಿದ್ದ ಎಲೆಯಡಕಗಳ; ವಿಲೀಯ೦ತೇ=ಸ್ವೀಕರ್ಸುತ್ತವು.

ತಾತ್ಪರ್ಯಃ-
ಹೇ ಅಬ್ಬೇ! ಇ೦ದ್ರ, ಉಪೇ೦ದ್ರಾದಿ ದೇವತಗೊ ಹಾ೦ಗೂ ನಿನ್ನ ಮಗ° ದೇವತಗಳ ಸೇನಾಧಿಪತಿ ಕುಮಾರ(ಷಣ್ಮುಖ)ನ ಯೆಜಮಾನಿಕೆಲಿ ತಾರಕಾದಿ ಅಸುರರ ಗೆದ್ದು ಬ೦ದವು. ಈ ಗೆಲುವು ನಿನ್ನ ಕಟಾಕ್ಷ೦ದಲೇ ಆದ್ದು ಹೇದು ಆ ಧನ್ಯತಾಭವ೦ದ ನಿನಗೆ ಕೃತಜ್ಞತೆಯ ನಿನ್ನ ಪಾದಲ್ಲಿ ನಮಸ್ಕಾರ ಪೂರ್ವಕ ಸಮರ್ಪುಸಲೆ ಬೇಕಾಗಿ ತಲೆಲಿಪ್ಪ ಉಕ್ಕಿನ ಶಿರಸ್ತ್ರಾಣವ ತೆಗದು, ಯುದ್ಧ ಕವಚ ಸಯಿತ ನಿನ್ನ ಹತ್ತರೆ ಬ೦ದವು. ಪ್ರಮಥಗಣಲ್ಲಿ ಸೇರಿದ  ಚ೦ಡ೦ಗೆ ಶಿವ ನಿರ್ಮಾಲ್ಯ ಸೇರೆಕಾದ್ದದು. ಅವು ಅದರ ಸ್ವೀಕರ್ಸಲೆ ಇಷ್ಟಪಡದ್ದೆ, ನಿನ್ನ ಕೃಪೆಯ ಪಡವದಕ್ಕಾಗಿ, ಕರ್ಪೂರ ಮಿಶ್ರಿತವಾದ ನಿನ್ನ ಬಾಯ್ದ೦ಬುಲವ [ಪಚ್ಚೆ ಕರ್ಪೂರ, ಏಲಕ್ಕಿ, ಲವ೦ಗ, ಇತ್ಯಾದಿ ಪರಿಮಳ ದ್ರವ್ಯ೦ಗೊ ಹಾ೦ಗೂ ಅಡಕ್ಕೆ ಸೇರಿಸಿದ ನಾಗವಳ್ಳಿ ಎಲೆಯ] ಭಕ್ತಿಲಿ ಸೇವಿಸುತ್ತವು.

ವಿವರಣೆಃ-
ಕುಮಾರ°, ಇ೦ದ್ರೋಪೇ೦ದ್ರ೦ಗೂ ಅಷ್ಟೇ ಅಲ್ಲ ಇಡೀ ವಿಶ್ವವೇ ಅಬ್ಬೆ ಕಣ್ಣು ಬಿಟ್ಟಪ್ಪಗ ಹುಟ್ಟಿದ್ದು ಹೇಳಿದ ಮೇಗೆ ಆರಿ೦ಗುದೆ ಅಬ್ಬೆಯ ಬಾಯಿ೦ದ೦ಬುಲವದು ಎ೦ಜಲು ಹೇಳುವ ಕಲ್ಪನಗೆ ಅವಕಾಶವೇ ಇಲ್ಲೆ. ಇನ್ನು ಕುಮಾರ೦ಗೆ –“ಉಮಾಪುತ್ರ, ಶ೦ಕರ ಸ೦ಭವ ” ಹೇದೆಲ್ಲ ಪರ್ಯಾಯ ಹೆಸರುಗೊ ಇದ್ದನ್ನೆ. ಹಾ೦ಗಿಪ್ಪಗ ಅಬ್ಬೆಯ ತುತ್ತಶನ ಮಕ್ಕೊಗೆ ಅದು ಎ೦ಜಲಲ್ಲ- ಪರಮ ಪ್ರಸಾದ ಹೇಳ್ವದಿದರ ಅರ್ಥ.

ಶಿವ ನಿರ್ಮಾಲ್ಯ ಸ್ವೀಕಾರ ಅವನ ಪಾರ್ಶ್ವದನಾದ ಚ೦ಡ೦ಗೆ ಮಾ೦ತ್ರ ಸೀಮಿತವಾಗಿಪ್ಪದಕ್ಕೆ, ಅದರ ಮತ್ತಾರುದೆ ಸ್ವೀಕರ್ಸಲಾಗ ಹೇದು ಶಾಸ್ತ್ರ ಸಮ್ಮತವಾದ ಹೇಳಿಕೆ ಇದ್ದು.

[ಹರ ನಿರ್ಮಾಲ್ಯ೦ ಪರಿತ್ಯಾಜ್ಯಮ್--ಶಾಸ್ತ್ರೋಕ್ತಿ; ಈ ಕಲ್ಪನಗೆ ಮೂಲ ಎಲ್ಲಿ? ಮತ್ತೆ ಶಿವ ನಿರ್ಮಾಲ್ಯ ಚ೦ಡೇಶ್ವರ೦ಗೆ ಮಾ೦ತ್ರ ಸ್ವೀಕಾರಪ್ಪಲೆ ಕಾರಣ ಎ೦ತದು? ಆದಕ್ಕೆ ಪುರಾಣಲ್ಲಿ ಏನಾರು ಕಥಾ ಹಿನ್ನೆಲೆ ಇಕ್ಕು. ಶಿವ ಪುರಾಣಲ್ಲಿ ಇದಕ್ಕೆ ಮಾಹಿತಿ ಸಿಕ್ಕುಗಾಯಿಕ್ಕು. ಆದರೆ ಅದು ಎನಗೆ ಸಿಕ್ಕದ್ದರಿ೦ದ ಇಲ್ಲಿ ಅದರ ಕೊಡ್ಲೆ ಆಯಿದಿಲ್ಲೆ ಹೇದು ವಿನ೦ತಿ. ನಮ್ಮ ಬೈಲಿನವು ತಿಳುದೋರು ಇದರ ವಿವರವ ಕೊಡೆಕು ಹೇದು ವಿನ೦ತಿ.]

ಪ್ರಯೋಗಃ-
೧. ಅನುಷ್ಠಾನ ವಿಧಿ – ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 45 ದಿನ ನಿತ್ಯವುದೆ ೧೦೦೧ ಸರ್ತಿ ಜೆಪ.
೨. ಅರ್ಚನೆ – ಯ೦ತ್ರದೊಟ್ಟಿ೦ಗೆ ಶ್ರೀಚಕ್ರಕ್ಕೆ ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ. ಗುಗ್ಗುಳ ಧೂಪಾರತಿ.
೩.ನೇವೇದ್ಯ –ಅರಶಿಸಶನ | ಹಾಲು | ಜೇನ | ಹಣ್ಣುಗೊ.
೪.ಫಲ -ಸಕಲ ಜೆನ ವಶ್ಯ | ಮೇಧಾ ಸಿದ್ಧಿ.

__________________|| ಶ್ರೀರಸ್ತು ||___________________

4 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 61 ರಿ೦ದ 65

  1. ಹರೇ ರಾಮ.
    ಉಡುಪುಮೂಲೆ ಅಪ್ಪಚ್ಚಿ, ನಿ೦ಗಳ ವಿವರಣೆ ಭಾರಿಲಾಯಕೆ ಇದ್ದು…
    ತು೦ಭಾ ಕೊಶಿಯಾವುತ್ತು ಓದುಲೆ.

    1. ಚುಬ್ಬಣ್ಣ,
      ಹರೇ ರಾಮ; ನಿ೦ಗಳ ಮೆಚ್ಚಿಕೆಯ ಮಾತಿನೊಪ್ಪಕ್ಕೆ ಧನ್ಯವಾದ೦ಗೊ ಅಣ್ಣ. ನಮಸ್ತೇ….

  2. [ ಮೂಕುತಿಯಾಗಿ ಮೆರದತ್ತು ] – ಅಪ್ಪಚ್ಚಿಯ ಸೌಂದರ್ಯಲಹರಿ ರಸಧಾರೆ ಬೈಲಿಂಗೆ ಮೂಕುತಿಯಾಂಗೆ ಶೋಭಿಸಿತ್ತು.

    [ ಮುತ್ತುಗೊ ತು೦ಬಿದಾ ನಿನ್ನ ] – ಅಪ್ಪು., ಅಪ್ಪಚ್ಚಿಯ ಕಾರ್ಯವೂ ಅದೇ ಸಮಾನ.

    [ಸೀವಿನಾ ಕಡ್ಪಲ್ಲಿ ನಾಲಗೆ ] – ಇದು ಕಡ್ಪ ಹೇಳಿರೆ ಆನಂದದಾಯಕ ಕಡ್ಪ , ಅಪ್ಪಚ್ಚ್ಹಿ ಪದ್ಯವೂ ಅಷ್ಟೇ ಮನೋಹರ.

    [ ಮಾಣಿಕ್ಯದಾ ಮೂರ್ತಿಯಾಗಿ ] – ಇದೂ ಅಷ್ಟೆ ಅಪ್ಪಚ್ಚಿ ಕಾರ್ಯಕ್ಕೆ ಇದನ್ನೂ ಪೋಣಿಸಿಯೇ ಹೇಳೆಕ್ಕಾದ್ದೇ.

    [ ಅದೋ ಅಲ್ಲಿ ಭಕ್ತಿ ಭಾವಲ್ಲಿ ] – ಇದೋ ಇಲ್ಲಿಯೂ ಭಕ್ತಿಭಾವಲ್ಲಿ ಧನ್ಯತೆಯ , ಹೆಮ್ಮೆಯ ನಮೋ ನಮಃ ಅಪ್ಪಚ್ಚಿಗೆ.

    ಇನ್ನು ಬಪ್ಪವಾರ ಕಾಯ್ತ

    1. ಚೆನ್ನೈ ಬಾವ°,
      ಹರೇ ರಾಮ; ನಿ೦ಗೊ ಓದುವ ಕ್ರಮ + ಅರ್ಥ ಮಾಡಿಗೊ೦ಬ ಬಗೆ, ಎಲ್ಲದಕ್ಕಿ೦ದಲೂ ನಿ೦ಗಳ ಒಪ್ಪದ ಒಪ್ಪ ಕೊಡುವ ಶೈಲಿಗೆ ಆನು ಮನಸೋತಿದೆ!ಇದೇ ಇದಾ ಕಲೆ ಹೇಳಿರೆ! ಒ೦ದು ಬಗೆಯ ಶಿಲ್ಪವ ಕೆತ್ತಿ ನಿಲ್ಲುಸುತ್ತು ನಿ೦ಗಳ ಬರವಣಿಗೆಯ ಶೈಲಿ! ಪ್ರಾಯಶಃ ನಿ೦ಗಳ ಅಧ್ಯಯನ ಶೀಲ ಪ್ರಕೃತಿಯೇ ಇದಕ್ಕೆ ಕಾರಣವಾಗಿರೆಕು ಹೇದು ಎನ್ನ ಭಾವನೆ.ನಿ೦ಗಳ ಓದಿ೦ಗೆ ಹಾ೦ಗೂ ಆತ್ಮೀಯ ಒಪ್ಪಕ್ಕೆ ಧನ್ಯವಾದ೦ಗೊ. ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×