Oppanna.com

ಡೆಂಗ್ಯೂ ಬಂತಾಡ…,ಕಡೆತ್ತ ಕಲ್ಲು ಕವುಂಚಿತ್ತಾಡ…

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   22/08/2016    8 ಒಪ್ಪಂಗೊ

ಕನರ್ಾಟಕ ರಾಜ್ಯಲ್ಲಿಪ್ಪ ನೆಂಟ್ರುಗೊ ನಮ್ಮ ಮನೆಗೆ ಬಪ್ಪ ಮೊದಲು ಫೊನಾಯಿಸಿ, `ನಿಂಗಳ ಕಾಸರಗೋಡಿಲ್ಲಿ ಹರತಾಳವೋ, ಬಂದೋ ಗಿಂದೋ ಇಲ್ಲೇನ್ನೇ…ಎಂಗೋ ಬಂದು ಅರ್ಧಲ್ಲಿ ಕೆಣಿವಲಾಗನ್ನೇ ಅದಕ್ಕೆ ಕೇಳಿದ್ದು…‘ ಹೇಳಿ ಕೇಳುವ ಕ್ರಮ ಇದ್ದು. ಎಂಗೊ ಇಲ್ಲಿಂದ ಹಸುರು ಬಾವುಟ ಆಡ್ಸೀರೆ ಅವು ಅಲ್ಲಿಂದ ಬತ್ತವು. ಅವು ಬಂದಿಕ್ಕಿ ಊಟವೋ, ಕಾಪಿಯೋ, ಚಾಯವೋ ಕುಡುದಿಕ್ಕಿ ಬಾಯಿ ತುಂಬ ಮಾತಾಡಿ, ನೆಗೆಮಾಡಿ ಎಂಗೊಗೂ ಸಂತೋಷ ಕೊಟ್ಟು ಅವೂದೆ ಸಂತೋಷಂದ ಹೋವುತ್ತವೋ..? ಊಹೂಂ…, `ಅಯ್ಯೋ… ಮಾರಾಯ್ತೀ…,ಈ ಕಾಸರಗೋಡಿಲ್ಲಿ ನಿಂಗೊ ಹೇಂಗಪ್ಪಾ ಬದ್ಕುತ್ತದು? ಯೇವಾಗ ನೋಡಿರೂ ಗಲಾಟೆ, ಪೆಟ್ಟುಗುಟ್ಟು, ಹರತಾಳ…,ಮುಗಿವಲೆ ಹೇದು ಇಲ್ಲೆ…ಛೆ…ಛೆ…,ಇಲ್ಲಿ ಲೈಪೇ ಇಲ್ಲೆ…’ ಹೀಂಗೆಲ್ಲಾ ಹೇಳಿಕ್ಕಿ ಎಂಗೊ ಯಮ ಲೋಕದ ಹೊಸ್ತ್ಲಿಲ್ಲೇ ಕೂದೊಂಡಿದ್ದು ಹೇಳ್ತಾಂಗೆ ಎಂಗಳ ಮೇಲಂಗೆ ತೀಕ್ಷ್ಣವಾದ ಒಂದು ಕನಿಕರದ ನೋಟವ ಇಡ್ಕಿಕ್ಕಿ ಹೋಪ ಕ್ರಮ. ಅಂಬಗೆಲ್ಲ ಆನು ಮನಸ್ಸಿಲ್ಲೇ ನೆಗೆ ಮಾಡ್ಲಿದ್ದು. `ಅಯ್ಯೋ ಹುಲು ಮಾನವರೇ…,ಮನುಷ್ಯ ಹೇಳಿರೆ ಬರೇ ಅಭ್ಯಾಸದ ಬಲಿಪಶು ಹೇಳ್ತ ಸರಳ ಸತ್ಯವೂ ನಿಂಗೋಗೆ ಗೊಂತಾಗದ್ದೆ ಹೋತಾನೇ…,ಖಾರದ ಉಪ್ಪಿನಕಾಯಿ (ಸೀವು ಉಪ್ಪಿನಾಕಾಯಿಯೂ ಇದ್ದಾಡ, ಹಾಂಗಾಗಿ ಖಾರ ಹೇಳುವ ವಿಶೇಷಣ ಸೇಸರ್ಿದ್ದು) ಲಿ ಅಕಸ್ಮಾತ್ ಹುಳು ಆತು ಹೇಳಿ ಮಡುಗಿಯೋಂಬೊ. ಅದರಲ್ಲೇ ಹುಟ್ಟಿ ಅಲ್ಲೇ ಸಂಸಾರ ಮಾಡಿಯೊಂಡಿಪ್ಪ ಆ ಹುಳುಗೊ, `ಅಯ್ಯಪ್ಪೋ…ಕಣ್ಣುರೀ…,ಖಾರ ಸೈಸಲೆಡಿತ್ತಿಲ್ಲೇ…ಹೊಟ್ಟೆ ಉರೀ…ಒಂದಾರಿ ದಾಕುದಾರಕ್ಕಳ ದಿನುಗೋಳೀ…ಮದ್ದು ಕೊಡೀ…’ ಹೇಳಿ ಯೇವಗಾದ್ರೂ ಕೂಗಿದ್ದರ ನಾವು ಕೇಳಿದ್ದೋ? ಇಲ್ಲೇನ್ನೇ…? ಹಾಂಗೆ ಎಂಗಳೂದೆ. ಬಂದ್, ಹರತಾಳ, ಪೆಟ್ಟುಗುಟ್ಟು ಎಂಗೊಗೆ ಎಷ್ಟು ಅಭ್ಯಾಸ ಆಯಿದು ಹೇಳಿರೆ ಒಂದುವಾರವೋ ಹತ್ತು ದಿನವೋ ಈ ಊರಿನ ವಾತಾವರಣ ಶಾಂತವಾಗಿಯೇ ಸಾಗಿತ್ತು ಹೇಳಿಯಾದ್ರೆ ಎಂಗೊಗೆಲ್ಲ ರಜ್ಜ ಇರುಸು ಮುರುಸು ಅಪ್ಪಲಿದ್ದು. ಶಾಲೆಗೆ ಹೋಪ ಮಕ್ಕೊ `ಶಾಲೆಗೆ ಹೋಗೀ ಹೋಗೀ ಬಚ್ಚಿತ್ತು, ಎಂತಕಪ್ಪ ಈಗ ಹರತಾಳವೇ ಇಲ್ಲೆ…’ಹೇಳಿ ಹೇಳ್ಲೆ ಇದ್ದು. ಹಾಂಗಿದ್ದ ದಿನಂಗಳಲ್ಲಿ ಕಸ್ತಲಪ್ಪಗ ಬಪ್ಪ ಸ್ಥಳೀಯ ಪೇಪರುಗಳ (ಅಲ್ಲದಿದ್ರೆ ಎಂಗಳ ಮನೆಗೆ ಬರೀ `ವಾಣಿ’ ಗಳೇ ಬತ್ತದು) ತಂದು ಎಂಗೊ ಒಂದಕ್ಷರವನ್ನೂ ಬಿಡದ್ದೆ ಓದುತ್ತ ಕ್ರಮ ಇದ್ದು, ಎಲ್ಲಿಯಾರೂ….ಎಂತಾರೂ….ಕತ್ತಿ ಕುತ್ತು, ಪೆಟ್ಟು ಗುಟ್ಟು ಆದ ಶುದ್ಧಿ ಇದ್ದೋ…,ನಾಳಂಗೆ ಹರತಾಳವೋ ಮಣ್ಣೊ ಇಕ್ಕೋ ಹೇಳ್ತ (ಕೆಟ್ಟ) ಕುತೂಹಲ…

ಇಂತಿಪ್ಪ ಎಂಗಳ ಊರು ಈಗ ಕೆಲವು ದಿನಂದ ಬೇರೆಯೇ ಕಾರಣಕ್ಕೆ ಶುದ್ಧಿ ಆವುತ್ತಾ ಇದ್ದು. ಪೇಪರಿನ ಎದೂರಾಣ ಪುಟಲ್ಲೇ `ಕಾಸರಗೋಡು ಡೆಂಗ್ಯೂ ಕಪಿ ಮುಷ್ಟಿಯಲ್ಲಿ’, `ಡೆಂಗ್ಯೂ ದಾಳಿಯಿಂದ ತತ್ತರಿಸಿದ ಕಾಸರಗೋಡು’ ಹೇಳ್ತ ತಲೆಬರಹದಡಿಲಿ ರಂಗು ರಂಗಿನ ಶುದ್ಧಿಗೊ…., ಜಿಲ್ಲಾಸ್ಪತ್ರೆಲಿ ಇಪ್ಪವು ಪೂರಾ ಡೆಂಗ್ಯೂ ಹಿಡಿದವೇ ಆಡ…, ಮನುಶಲೆ ಜಾಗೆ ಇಲ್ಲದ್ದೆ ರೋಗಿಗೊ ಜೆಗುಲಿ ಕರೆಲಿ ಎಲ್ಲ ಮನುಗಿಯೋಂಡಿದವಾಡ… ಹಾಂಗೆ ಮನುಗಿದ ಒಂದು ರೋಗಿಯೊಟ್ಟಿಂಗೆ ನಾಯಿಯೂ ಚುರುಟಿಯೊಂಡ ಪಟವೂ ಪೇಪರಿಲ್ಲಿ ಬಂತದ (ಅದಕ್ಕೂ ಡೆಂಗ್ಯೂ ಪಗರಿದ್ದೋ ಗೊಂತಾಯಿದಿಲ್ಲೆ). ಆ ಜ್ವರ ಬಂದ್ರೆ ಇಡೀ ಮೈಲಿ ಬೆನೇ ಹೇಳಿರೆ ಗುದ್ದಿ ಹಣ್ಣು ಮಾಡಿದ ಹಾಂಗಾವುತ್ತಾಡ…, ಮುಗಿಲ್ಲಿಯೊ ಬಾಯಿಲಿಯೋ ನೆತ್ತರು ಕಾಲರ್ೆ ಸುರುವಾತು ಹೇಳಿರೆ ಮತ್ತೆ ಆ ರೋಗಿಯ ಕಥೆ ಗೋ…ವಿಂದ ಆಡ…ನಿನ್ನೆಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಸಿಗೆ ಖಾಲಿ ಇಲ್ಲೆಯಾಡ…. ಎಲ್ಲ ಡೆಂಗ್ಯೂ ರೋಗಿಗಳೇ… ಈ ಶುದ್ಧಿಗಳೆಲ್ಲ ಓದಿಯಪ್ಪಗ ಎನಗೆ ಪೆಜರ್ೀವ ಹಾರಿತ್ತದ. ನಿಧಾನ ವಿಷ ಹೇಳಿ ದಾಕುದಾರಕ್ಕೊ ಎಲ್ಲ ಹೇಳ್ತವು ಹೇದು ಆನು ಒಡೋಮಸ್ ಹೇಳ್ತ ಮುಲಾಮಿನ (ನುಸಿ ಕಚ್ಚಾದ್ದಾಂಗೆ ಮೈಗೆ ಬಳಿವಲೆ) ಮನೆಗೆ ತಂದೊಂಡೇ ಇತ್ತಿದ್ದಿಲ್ಲೆ. ಈ ಡೆಂಗ್ಯೂ ಭೂತದ ಪ್ರವೇಶ ಆದ ಮತ್ತೆ ಫೇರ್&ಲೌಲಿ ರೂಪದಶರ್ಿಯಾದ್ರೂ ನಾಚೇಕು ಆ ನಮೂನೆ ಆನು ಒಡೋಮಸ್ಸಿನ ಮೋರೇಂದ ಕಾಲಿನವರೇಂಗೆ ಮೆತ್ತಲೆ ಸುರು ಮಾಡಿದೆ (ನುಸಿ ಕಚ್ಚಿ ಬಪ್ಪ ರೋಗಂದ ಒಡೋಮಸ್ ಹಚ್ಚಿ ಬಪ್ಪ ರೋಗವೇ ಹೆಚ್ಚು ಸುರಕ್ಷಿತ ಹೇಳ್ತ ನಂಬಿಕೆ). ಮದಲೆಲ್ಲ ನಾಯಿಗೊ ಬೂದಿ ಕೊಟ್ಟಗೆಲಿ ಹೊಡಚ್ಚುಗಲ್ದೋ? ಈಗ ನಮ್ಮ ಮನೆಯ ಪ್ರತಿ ಕೋಣೆಯೂ ನುಸಿಬತ್ತಿಯ ಬೂದಿ ಗುಡಾಣ ಆಯಿದು. (ಅದರಲ್ಲಿ ಎಂಗೊ ಹೊಡಚ್ಚುತ್ತೊ ಇಲ್ಲ್ಯೋ ಹೇಳ್ತದು ನಿಂಗಳ ಕಲ್ಪನೆಗೆ ಬಿಟ್ಟ ವಿಷಯ). ನುಸಿ ಬಲೆ ಹಾಕಿ ಮನುಗಿರೆ ಒರಕ್ಕು ಬತ್ತಿಲ್ಲೆ ಹೇದು ಒಡೋಮಸ್ ಲೇಪನ, ನುಸಿಬತ್ತಿಯ ಹೊಗೆ, ಅದರೊಟ್ಟಿಂಗೆ ದಪ್ಪ ಕಂಬ್ಳಿ ಹೊದದು (ಡಬಲ್ ಪ್ರೊಟೆಕ್ಷನ್?) ಮನುಗಲೆ ಸುರು ಮಾಡಿದೆ. ಇದಿಷ್ಟು ಇಂದು ಬರೆವ ಲೇಖನಕ್ಕೆ ಹಿನ್ನೆಲೆ. ಮುಂದೆ ಓದಿ…

ಉದಿಯಪ್ಪಗ ಸುಮಾರು ಹತ್ತು ಘಂಟೆಯ ಹೊತ್ತು. ಕರೆಘಂಟೆಯ ಶಬ್ಧ ಆತು. ಬಾಗಿಲು ತೆಗೆದು ನೊಡಿದೆ. ಬಿಗಿತ್ತಕೆ ಹಾಕಿದ ಜೀನ್ಸು ಪೇಂಟು, ನೀಟಾಗಿ ಒಳಾಂಗೆ ಸಿಕ್ಸಿದ ಖಡಕ್ ಇಸ್ತ್ರಿಯ ಉದ್ದ ಕೈ ಅಂಗಿ ಹಾಕಿದ ಇಬ್ರು ನಿತ್ರಾಣ ಸಿಂಗಂಗೊ ಜೆಗಿಲಿಲಿ ನಿಂದೊಂಡಿದ್ದವು. ಎಂತಾಯೇಕು? ಹೇಳಿ ಕೇಳಿದೆ. ಅವರ ಗುರುತಿನ ಚೀಟಿಯ ತೋರುಸಿದವು. ನಗರ ಸಭೆಂದ ಬಂದ ಜೆ.ಎಚ್ಚ್.ಐ (ಜೂನಿಯರ್ ಹೆಲ್ತ್ ಇನಸ್ಪೆಕ್ಟರ್) ಗೊ ಹೇಳಿ ಗೊಂತಾತು. ಅವರ ಮಾತಿನ ಸಾರಾಂಶ ಇಷ್ಟು, ನಮ್ಮ ಮನೆಯ ರಜ್ಜ ಮುಂದೆ  ಒಂದು ಮನೆಲಿ ಡೆಂಗ್ಯೂ ರೋಗಿ ಇದ್ದಾಡ. ಹಾಂಗಾದ ಕಾರಣ ಸುತ್ತ ಮುತ್ತಲಿನ ಮನೆಗಳ (ರೋಗಿ ಇಪ್ಪ ಮನೆ ಅಲ್ಲ!) ಆಸು ಪಾಸಿನ ಸ್ವಚ್ಛತೆ ಹೇಂಗಿದ್ದು ಹೇಳಿ ತನಿಖೆಗೆ ಬಂದದಾಡ. ಆತು ಹೇಳಿದೆ. ಮನೆಯ ಮೇಲಿಪ್ಪ ನೀರಿನ ಟ್ಯಾಂಕಿ ತೋಸರ್ಿ ಹೇಳಿದವು. ಕರಕ್ಕೊಂಡೋದೆ. ಟ್ಯಾಂಕಿಗೆ ಮುಚ್ಚಿದ ನೆಟ್ಟಿನ ಮೇಲಂದಲೇ ಬಗ್ಗಿ ಬಗ್ಗಿ ನೋಡಿದವು. ಅವಕ್ಕೆಂತ ಕಂಡತ್ತಿಲ್ಲೆ(ನುಸಿ ಇದ್ದೋ ಹೇಳಿ ನೋಡಿದ್ದಾದಿಕ್ಕು). ಅವರ ಹುಬ್ಬು ರಜಾ ಗೆಂಟಾಕಿತ್ತದ. ಇಳಿದು ಕೆಳ ಬಂದೆಯೋಂ. ಮನೆಯ ಸುತ್ತಲೂ ನೋಡೇಕು ಹೇಳಿದವು ತೋಸರ್ಿದೆ. ಎಲ್ಲಿಯೂ ನೀರು ನಿಂದೊಂಡೋ, ಕಸದ ರಾಶಿಯೊ ಕಂಡತ್ತಿಲ್ಲೆ(ಪೇಟೆಲಿ ದಾರಿ ದಾರಿ ಪ್ಲೇಸ್ಟಿಕ್ಕು ರಾಶಿ ಬಿದ್ರೂ ಇವಕ್ಕೆ ಕಾಣ್ತಿಲ್ಲೆ). ಅವರ ಮೋರೆ ಮತ್ತಷ್ಟು ಪೀಂಟಿತ್ತು. ಹಿಂದಾಣ ಜಾಲಿಂಗೆ ಹೋಗಿ ಕಣ್ಣಿಂಗೆ ದುಬರ್ೀನು ಸಿಕ್ಸಿದವರ ಹಾಂಗೆ ನೋಡಿದವು. ಅಲ್ಲಿ ಮಾಡಿನಡಿಲಿ ಒಂದು ಭೀಮ ಗಾತ್ರದ ಕಡೆತ್ತ ಕಲ್ಲಿದ್ದು. ಅದು ನಿತ್ಯೋಪಯೋಗದ್ದಲ್ಲ. ನಮ್ಮಲ್ಲಿ ಎಂತಾರು ಜೆಂಬಾರ ಅಪ್ಪಾಗೆಲ್ಲ ಅಡಿಗೆ ಮುದ್ದಣ್ಣ ಬತ್ತಾನೇ? ಅವಂಗೆ ಹೋಳಿಗೆಗೆ ಕಡೇಕಾರೆ ಕಡೆತ್ತ ಕಲ್ಲೇ ಬೇಕು. ಹೇಂಗಿದ್ದ ಮಿಕ್ಸಿಯೋ, ಗ್ರೈಂಡರೋ ಕೊಟ್ರೂ ಅಂವ ಅದರ ಮುಟ್ಟಿಕ್ಕಂ. `ಸರಿಯಾದ ರುಚಿ ಬರೇಕಾರೆ ಕೈಲೇ ಕಡೇಕಿದ..‘ ಹೇಳುಗು. ಜೆಂಬಾರ ನಿಶ್ಚೈಸಿಕ್ಕಿ ಅಡಿಗೆ ಭಟ್ಟಕ್ಕೊ ಹೇಳಿದ ಹಾಂಗೆ ಕೇಳಿದ್ದಿಲ್ಲೆ ಹೇಳಿಯಾದ್ರೆ ಊಟಕ್ಕೆ ಬಂದವು ರುಚಿ ರುಚಿಯಾಗಿ ಉಣ್ಣೇಡದೋ ಹೇಳಿ…ಹಾಂಗಾಗಿ ಮುದ್ದಣ್ಣನ ಉಪಯೋಗಕ್ಕೆ ಹೇದೇ ಆ ಭಟಾರಿ ಕಡೆತ್ತ ಕಲ್ಲು ಅಲ್ಲಿ ಸ್ಥಾಪನೆಯಾದ್ದದು. ಈ ಜೆ.ಎಚ್.ಐ. ಗೊ ಇದ್ದವನ್ನೇ? ಅದರ ಹತ್ರಂಗೆ ಹೋಗಿ ಕಡೆತ್ತ ಗುಂಡಿನ ಗುಂಡಿಯೊಳಾಂದ ತೆಗದು ಮೇಗೆ ಮಾಡಿ ಬಗ್ಗಿ ನೋಡಿದವು. ಇಷ್ಟ್ರವರೆಂಗೂ ಪೀಂಟಿಯೊಂಡಿತ್ತಿದ್ದ ಅವರ ಮೋರೆ ಹೂಗಿನ ಹಾಂಗೆ ಅರಳಿತ್ತು!

ನೋಡಿಯಮ್ಮ ಇಲ್ಲಿ, ಇದುವೇ ಡೆಂಗ್ಯೂವಿನ ಲಾರ್ವ… ಈ ಊರಿನಲ್ಲಿ ಇಷ್ಟು ರೋಗ ಹರಡುತ್ತಿರುವಾಗ ಮುಂಜಾಗ್ರತಾ ಕ್ರಮದ ಬಗ್ಗೆ ನಾವು ಇಷ್ಟೆಲ್ಲಾ ಹೇಳಿದ್ರೂ ನೀವೂ ಹೀಗಾ ಮಾಡೋದು? ನೋಡಿ ಈ ಗುಂಡಿಯೊಳಗೆ ನೀರು ನಿಂತದ್ದಕ್ಕೇ ನುಸಿ ಮೊಟ್ಟೆ ಇಟ್ಟು ಮರಿಯಾಗಿದೆ…,ರೋಗ ಬಂದ ಮೇಲೆ ತಡೆಗಟ್ಟುವುದಂಕಿಂತಲೂ ಬಾರದಂತೆ ನೋಡುವುದೇ ಜಾಣತನ ಅಂತ ನಿಮ್ಗೂ ನಾವು ಹೇಳಿ ಕೊಡ್ಬೇಕಾ….?”

ಎನಗೆ ಎದೆ ಧಸಕ್ ಹೇಳಿತ್ತು. `ಯೋ…,ದೇವರೇ, ಇಷ್ಟೆಲ್ಲಾ ಜಾಗ್ರತೆ ಮಾಡೀರೂ ಇಲ್ಲಿಗೂ ಬಂತೋ ಈ ಪಿಶಾಚಿ…ಅಂಬಗ ಇನ್ನು ಆನೂದೆ ನಾಳೇಂದ ಜ್ವರಲ್ಲಿ ಮನುಗುತ್ತದೇ ಸೈ…ಅಯ್ಯೋ…,ನಾಡಿದ್ದು ಆದಿತ್ಯವಾರ ಎನ್ನ ವಾಟ್ಸ್ಯಾಪು ಗ್ರೂಪಿನ ಒಂದು ಸದಸ್ಯೆಯ ಮದುವೆ ಇದ್ದಾನೇ…? ಹೇಂಗೆ ಹೋಪದು…? ಅದರ ಮರುದಿನ ಇಲ್ಲಿಗೆ ಎನ್ನ ಫೇಸ್ ಬುಕ್ ಚೆಂಙಯಿಗೊ ಬತ್ತೆ ಹೇಳಿದ್ದವು…ಇವಕ್ಕೆಲ್ಲ ಎಂತ ಉತ್ತರ ಕೊಡ್ಲೀ…ಹೇ…ದೇವಾ…ಇದೆಂತಾ ಇಕ್ಕಟ್ಟಿನ ಪರಿಸ್ಥಿತಿ ತಂದು ಮಡುಗಿದೆಯೋ…ಶಿವನೇ ಶಂಭುಲಿಂಗಾ…’

`ಮೇಡಮ್, ಇಲ್ಲಿ ದಸ್ಕತ್ತು ಹಾಕಿ. ಬಿಸಿಲಿನಲ್ಲಿ ಸುತ್ತಾಡಿ ನಮ್ಮ ಹೆಣ ಬೀಳುವುದೊಂದು ಬಾಕಿ. ಆದಷ್ಟು ಬೇಗ ಈ ವರದಿ ಒಪ್ಪಿಸಿಬಿಟ್ಟರೆ ನಮಗೂ ನಿರಾಳ…” ಹೇಳಿದವು.

ಅವು ದಿನುಗೋಂಡಪ್ಪಗ ಆನು ಇಹಲೋಕಕ್ಕೆ ಬಂದೆ. `ದಸ್ಕತ್ತು’ ಹೇಳ್ತ ಆ ಶಬ್ಧ ಕೆಮಿಗೆ ಬಿದ್ದಪ್ಪಗ ಆನು ಚುರುಕಾದೆ. ಚಕಚಕನೆ ಅವು ಹೇಳಿದ್ದರ ಒಂದಕ್ಕೊಂದು ಕೊಂಡಿಮಾಡಿ ಬುದ್ಧಿ ಉಪಯೋಗಿಸಿ ಯೋಚಿಸಿದೆ,

“ಹಾಗಾದರೆ ಅದನ್ನು ಈಗಲೇ ತೆಗೆದು ಖಾಲಿ ಮಾಡೋದು ಒಳ್ಳೇದಲ್ವಾ?” ಕೇಳಿದೆ.

“ಅದು ನಮ್ಮ ಕೆಲಸ ಅಲ್ಲ ಮೇಡಮ್, ನಾವು ವರದಿ ಕೊಟ್ಟ ಮೇಲೆ ನಗರ ಸಭೆಯಲ್ಲಿ ಮೀಟಿಂಗು ಮಾಡ್ತಾರೆ. ನಂತರ ಬೆರೆಯವರು ಬರುತ್ತಾರೆ. ಅವರು ಔಷಧಿ ಸಿಂಪಡಿಸಿ ಇಲ್ಲೆಲ್ಲಾ ಸ್ವಚ್ಛ ಮಾಡಿ ಹೋಗ್ತಾರೆ” ಹೇಳಿದವು.

`ಅಲ್ಲಾ…, ಅ ಕಡೆತ್ತ ಕಲ್ಲು ಮಾಡಡಿಲಿ ಇಪ್ಪ ಕಾರಣ ಮಳೆ ಬಪ್ಪಾಗ ಸೀರಣಿ ಬಡುದು ನಾಕು ಹನಿ ಅದರೊಳಾಂಗೆ ಬಿದ್ದಿಪ್ಪಲೂ ಸಾಕು. ಆ ನೀರಿಲ್ಲಿ ನುಸಿ ಮೊಟ್ಟೆ ಮಡುಗಿಕ್ಕೋ..? ಅಂಬಗ ಒಂದ್ಸತರ್ಿ ಮೊಟ್ಟೆ ಮಡುಗುವಾಗ ಒಂದೇ ಮೊಟ್ಟೆಯಾ..? ಅಥವಾ ಒಳುದ ಎಲ್ಲಾ ಮೊಟ್ಟೆಗೊ ಜೊಳ್ಳಾಗಿ ಇದೊಂದೇ ಕುಂಞಿ ಆದ್ದದಾ..? ಮಾಡಿನಡಿಯ ಈ ಜಾಗೆ ರಜಾ ಅರೆಕಸ್ತಲಿನ ಹಾಂಗಿದ್ದಲ್ಲಿಯೂ ಇವಕ್ಕೆ ಬರಿಕಣ್ಣಿಂಗೇ ಆ ಕುಂಞಿ(ಲಾರ್ವ) ಕಂಡತ್ತಾ..?’ ಹೇಳಿ ಯೋಚಿಸಿದೆ. ಎಂತದಕ್ಕೂ ಆನೊಂದಾರಿ ನೋಡ್ತದು ಒಳ್ಳೇದು ಹೇಳಿ ಜಾನ್ಸಿಯೋಂಡೆ. ಆನು ದಸ್ಕತ್ತು ಹಾಕೇಕು ಹೇದು ಒಬ್ಬ ಎನ್ನತ್ರೆ ಹಿಡಿದ ಪುಸ್ತಕವನ್ನೂ ಪೆನ್ನನ್ನೂ ತೆಕ್ಕೊಂಡೆ.

“ನಾನೂ ಒಮ್ಮೆ ಆ ಡೆಂಗ್ಯೂ ಮರಿಯನ್ನು ನೋಡಬಹುದಾ?” ಹೇಳಿ ಕೇಳಿದೆ. ಆನು ಅಷ್ಟು ಕೇಳಿಯಪ್ಪದ್ದೆ ಪುನಃ ಅವರ ಹುಬ್ಬು ಗೆಂಟು ಹಾಕಲೆ ಸುರುವಾತು (ಹಾಕಿರೆ ಹಾಕಲಿ…ಎನಗೆಂತಾಡ..?)

“ನೋಡಿಕೊಳ್ಳಿ ನಿಮ್ಮದೇ ಕಲ್ಲು, ನಿಮ್ಮದೇ ರಿಸ್ಕು” ನಿರ್ಲಕ್ಷ್ಯಂದ ಹೇಳಿದವು.

ಆನು ಕಲ್ಲಿನತ್ರಂಗೆ ಹೋಗಿ ಬಗ್ಗಿ ನೋಡಿದೆ. ಸರೀ ಕಂಡತ್ತಿಲ್ಲೆ. “ನೋಡಿ ಸರ್, ಈ ಗುಂಡನ್ನು ತೆಗೆದು ಕೆಳಗಡೆ ಇಟ್ರೆ ಸ್ವಚ್ಛ ಮಾಡ್ಲಿಕೆ ಸುಲಭ ಅಲ್ವಾ…?” ಹೇಳಿದೆ.

“ಹೌದು ಮೇಡಮ್”

“ನಾನೇ ಎತ್ತೋದಾ ಹಾಗಾದ್ರೆ…?”(ಆ ಗುಂಡು ಸಾಧಾರಣ ಮೂವತ್ತು ನಲುವತ್ತು ಕೆ.ಜಿ. ಆದ್ರೂ ಭಾರ ಇಕ್ಕು. ಅದರ ಎತ್ತುವ ಪ್ರಯತ್ನಕ್ಕೆ ಕೈ ಹಾಕಲೆ ಎನಗೆಂತ ಮರುಳಾ?)

“ಛೆ..,ಛೆ…,ನೀವು ಯಾಕೆ ಎತ್ಲಿಕೆ ಹೋಗ್ತೀರಿ…?” ಹೇಳಿ ಅವಿಬ್ರೂ ಅದರ ಎತ್ತಿ ಗೋಡೆಗೆ ತಾಗ್ಸಿ ಮಡುಗಿದವು.

ಈಗ ಆನು ಅದರಲ್ಲಿಪ್ಪ ಕರಟ ತೆಕ್ಕೊಂಡು ಗುಂಡಿಯೊಳ ಇಪ್ಪ ನಾಕು ಚಮಚ ನೀರೂದೆ ಅದರಲ್ಲಿ ಅತ್ತಿತ್ತೆ ಓಡಿಯೊಂಡಿಪ್ಪ ಆ ಜೀವಿಯನ್ನೂ ತೆಗದು ಬೆಣಚ್ಚಿಪ್ಪಲ್ಲಿಗೆ ತೆಕ್ಕೊಂಡು ಹೋಗಿ ನೋಡಿದೆ. ಬರೇ ಕುಂಞಿ ಜಿರಳೆ! ಪಾಪ…ಜೀವ ಇದ್ರೆ ಬೇಡಿಯಾದ್ರೂ ತಿಂಬೆ ಹೇಳ್ತ ರೀತೀಲಿ ಪೆಡಚ್ಚಿಯೊಂಡಿತ್ತಿದ್ದು. ಈ ಹುಡುಗರ ಕಣ್ಣಿಂಗೆ ಇದು ಡೆಂಗ್ಯೂ ಕುಂಞಿಯ ಹಾಂಗೆ ಕಂಡದು ಸಾಕಪ್ಪ. ಈಗ ಎನ್ನ ಮೋರೆ ಹೂಗಿನ ಹಾಂಗೆ ಅರಳಿತ್ತು. ಅವರ ದಿನುಗೋಳಿ ತೋಸರ್ಿದೆ. ಅವರ ಮೋರೆ ಸುಟ್ಟ ಬದನೆಕಾಯಿ ಆತು. ಮಳೆ ಇಲ್ಲದ್ರೆ ಆಟಿ ತಿಂಗಳಿನ ರಣ ಬೆಶಿಲಿಲ್ಲಿ ಮನೆ ಮನೆಗೆ ನೆಡಕ್ಕೊಂಡು ಹೋವುತ್ತದು ಹೇಳಿರೆ ಸಣ್ಣ ಕೆಲಸವೋ? ಡೆಂಗ್ಯೂ ರೋಗಿ ಇಪ್ಪ ಹತ್ರಾಣ ಮನೆಲೇ ರೋಗಾಣು ಇದ್ದು ಹೇದು ಎಂಗಳ ಮನೆ ನಂಬ್ರ ಬರೆದು ಕೊಟ್ರಾತಾನೇ? ಎನ್ನ ದಸ್ಕತ್ತೂ ಬಿದ್ದತ್ತು ಹೇಳಿರೆ ಅವು ಹೇಳಿದ್ದರ ಆನೂ ಒಪ್ಪಿದೆ ಹೇಳಿ ಆತಿಲ್ಲ್ಯೋ? ಈ ವಿಷಯವ ಹೀಂಗೇ ಬಿಡ್ಲಾಗ ಹೇದು ಕಂಡತ್ತು.

“ಸರ್, ಈಗೇನೋ ಇದು ಜಿರಳೆ ಮರಿ ಅಂತ ಆಯಿತು, ಆದರೆ ಮುಂದೆ ಇದೇ ರುಬ್ಬು ಗುಂಡಿಯಲ್ಲಿ ನೀರು ತುಂಬಿ ಸೊಳ್ಳೆಗಳ ವಂಶಾಭಿವೃದ್ಧಿ ಆಗಲಾರದು ಎಂದು ಹೇಳುವ ಹಾಗಿಲ್ಲ ಅಲ್ವಾ? ನೀವೇ ಹೇಳಿದ ಹಾಗೆ ರೋಗ ಬಂದ ಮೇಲೆ ಮದ್ದು ಮಾಡುವುದಕ್ಕಿಂತ ಬಾರದಂತೆ ತಡೆಯುವುದೇ ಜಾಣತನ. ಹೌದಲ್ಲ?”

“ಹೌದು ಮೇಡಮ್, ನೀವು ಸರಿಯಾಗಿ ಹೇಳಿದ್ರಿ…,ನಾವು ಎಷ್ಟೆಷ್ಟೋ ಮನೆಗಳಿಗೆ ಹೋಗಿ ಸ್ವಚ್ಛತೆ, ಆರೋಗ್ಯ ಇತ್ಯಾದಿಗಳ ಬಗ್ಗೆ ಗಂಟಲು ಒಣಗುವಂತೆ ಬೈರಿಗೆ ಹಚ್ಚಿದ್ದಕ್ಕೆ ನೀವೊಬ್ಬರಾದ್ರೂ ಸರಿಯಾಗಿ ಅರ್ಥ ಮಾಡ್ಕೊಂಡ್ರಲ್ಲ…ಗುಡ್…ಗುಡ್…”

“ಹಾಗಾದರೆ…,ಈಗ ಈ ಕಡೆವ ಕಲ್ಲನ್ನೇ ಕವುಚಿ ಹಾಕಿಬಿಟ್ಟರೆ ಒಳ್ಳೇದಲ್ವೇ..ಸಾವಿರ ಸಾವಿರ ಜನರನ್ನು ರೋಗದ ಬಾಯಿಯಿಂದ ರಕ್ಷಿಸಿದ ಪುಣ್ಯ ನಿಮ್ಮದಾದೀತು...”

“ಹೌದು ಮೇಡಮ್…” ಆಗ ಠೇಂಕಾರಲ್ಲಿತ್ತಿದ್ದ ಅವರ ಸ್ವರ ಈಗ ಪಾತಾಳದ ಒಳಾಂದ ಬಂದ ಹಾಂಗೆ ಕೇಳಿತ್ತಪ್ಪ. ಜೇಡ ನೇಯ್ದ ಬಲೆಲಿ ಜೇಡನೇ ಸಿಕ್ಕಿ ಹಾಕಿಯೊಂಡತ್ತು. ಮನಸ್ಸಿಲ್ಲೇ ಕಿಸಕಿಸನೆ ನೆಗೆ ಮಾಡಿಯೋಂಡೆ. ಹೆರಾಂಗೆ ಭಾರೀ ಗಂಭೀರವಾಗಿ ಹೇಳಿದೆ,

“ಛೇ…,ಇಲ್ಲಿ ಕೆಲಸದವರೇ ಸಿಗುವುದಿಲ್ಲ…ನಾನೀಗ ಏನು ಮಾಡಲಿ…? ನಾನೊಬ್ಬಳೇ ಈ ಕಲ್ಲನ್ನು ಕವುಚಿ ಹಾಕಲು ಸಾಧ್ಯವಾಗುತ್ತಿದ್ರೆ…ಛೆ…” ಹೇಳಿಯೊಂಡೇ ಆನು ಕಡೆತ್ತ ಕಲ್ಲಿನ ಹತ್ರಂಗೆ ಬಗ್ಗಿದೆ.

“ಛೆ…ಛೆ…ಮೇಡಮ್…,ನಾವಿಬ್ಬರು ಇರೋವಾಗ ನೀವು ಯಾಕೆ?” ಹೇಳಿಕ್ಕಿ ಇಬ್ರೂದೆ ಕಲ್ಲಿನ ಹಂದುಸಲೆ ನೋಡಿದವು. ನರಪೇತಲ ನಾರಾಯಣಂಗೊಕ್ಕೆ ಎಡಿಗಾಯೇಕನ್ನೇ?

“ಮೇಡಮ್. ಇದು ಭಾರೀ ಭಾರ ಉಂಟು” ಹೇಳಿ ಮೋರೆ ಇಷ್ಟು ಕುಂಞಿ ಮಾಡಿಯೊಂಡು ಎನ್ನ ನೋಡಿದವು. ಆನು ಕಡೆತ್ತ ಕಲ್ಲಿನ ನೋಡಿದೆ. ಒಂದು ಯಕಃಶ್ಚಿತ್ ಹೆಂಗಸಿನೆದುರು ಸೋಲೊಪ್ಪಿಯೋಳೇಕನ್ನೆ ಹೇಳಿ ಅವಕ್ಕೆ ಕಂಡತ್ತೇನೋ? ಇಬ್ರೂದೆ ಹಲ್ಲುಮೂಟೆ ಕಚ್ಚಿ `ಹೂಂ…ಹೂಂ…’ ಹೇಳಿಯೊಂಡು ಕಲ್ಲಿನ ಆಡ್ಸಿಯೇ ಬಿಟ್ಟವು. ರಜ್ಜ ರಜ್ಜವೇ ಓರೆ ಆಗಿ `ಧಂ’ ಹೇಳುವ ಶಬ್ಧದೊಟ್ಟಿಂಗೆ ಕಲ್ಲು ಕವುಂಚಿತ್ತು. ಅದಕ್ಕೆ ಹಿಮ್ಮೇಳದ ಹಾಂಗೆ `ಪರಾಕ್’ ಹೇಳುವ ಶಬ್ಧವೂ ಕೇಳಿತ್ತದ. ಎಂತರ ಹೇಳಿ ನೋಡ್ತೆ…,ಅಯ್ಯೋ ದೇವರೇ…ಶಾಂತಂ ಪಾಪಂ…ಶಾಂತಂ ಪಾಪಂ…., ಫಕ್ಕನೆ ತಿರುಗಿ ನಿಂದೆ. ಒಬ್ಬನ ಪ್ಯಾಂಟಿನ ಹಿಂದೆ ಢಮಾರ್ ಆಗಿತ್ತಿದ್ದು.(ಆನು ಸುರುವಿಲ್ಲಿ ಈ ಜೆ.ಎಚ್ಚ್.ಐ ಗಳ ಬಗ್ಗೆ ಹೇಳುವಾಗ `ಬಿಗಿಯಾದ ಪ್ಯಾಂಟು’ ಹೇಳುವ ಶಬ್ಧ ಉಪಯೋಗ್ಸಿದ್ದು ಎಂತಕೆ ಹೇಳಿ ಈಗ ನಿಂಗೊಗೆ ಅಂದಾಜು ಆದಿಕ್ಕಲ್ದಾ?) ಪುಣ್ಯಕ್ಕೆ ಎಂಗಳ ಮನೆಲಿ ಸಣ್ಣ ಮಕ್ಕೊ ಆರೂ ಇಲ್ಲೆ. ಅಲ್ಲದಿದ್ರೆ ಅವರ ಬಾಯಿಂದ `ಶೇಮ್ ಶೇಮ್ ಪಪ್ಪಿ ಶೇಮ್’ ಹೇಳ್ತ ಸ್ಲೋ ಗನ್ನನ್ನೂ ಅಂವ ಹೊಡೆಸಿಯೋಳೇಕಾಗಿತ್ತಿದ್ದು. ಎನಗೆಂತ ವಿಷಯವೇ ಗೊಂತಾಯಿದಿಲ್ಲೆ ಹೇಳ್ತಾಂಗಿದ್ದ ಮುಖಭಾವಲ್ಲಿ ಆನು ಎನ್ನ ಕೆಲಸ (ಪುಸ್ತಕಲ್ಲಿ ಅವು ನಮ್ಮ ವಾಡರ್ು ಮತ್ತೆ ಮನೆ ನಂಬ್ರ ಹಾಕಿ ವರದಿ ಸಿದ್ಧ ಮಾಡಿತ್ತಿದ್ದವಲ್ದೋ? ಆನು ದಸ್ಕತ್ತು ಹಾಕಲೆ ಮಾಂತ್ರ ಬಾಕಿ ಇತ್ತಿದ್ದು. ಅವರದ್ದೇ ಪೆನ್ನಿಲ್ಲಿ ಅವು ಬರೆದ್ದದ್ರ ಮೇಲಂಗೆ ಅಡ್ಡ ಗೆರೆ ಹಾಕಿ ಪುಸ್ತಕವನ್ನೂ ಪೆನ್ನನ್ನೂ ಅವಕ್ಕೇ ಕೊಟ್ಟೆ.) ಮಾಡಿದೆ.

“ನಿಮ್ಗೆ ಬಾಯಾರಿಕೆ ಏನಾದ್ರೂ ಬೇಕಿತ್ತಾ?” ಕೇಳಿದೆ.

ಪ್ಯಾಂಟು ಹಗರಣದವಂ ಒಂದಾರಿ ಇಲ್ಲಿಂದೆ ರಟ್ಟೀರೆ ಸಾಕು ಹೇಳ್ತಾಂಗೆ ಅಂಗಿಯ ಹಿಂದಂದ ಕೆಳಾಂಗೆ ಎಳಕ್ಕೋಂಡು ಆಚವನನ್ನೂ ಎಳಕ್ಕೊಂಡೇ ಹೋದಂ. ಎನ್ನ ಮಾತು ಅವಕ್ಕೆ ಕೇಳದ್ದದೋ ಅಥವಾ ಕೇಳದ್ದ ಹಾಂಗೆ ಮಾಡಿದ್ದದೋ ಗೊಂತಾಯಿದಿಲ್ಲೆ.

ಬೈಲಿನ ಪ್ರಿಯ ನೆಂಟ್ರುಗಳೇ, ನಿಂಗೊ ಯೇವಗಾದ್ರೂ ಈ ಹೋಡೇಂಗೆ ಬಪ್ಪಲಿದ್ರೆ ನಮ್ಮಲ್ಲಿಗೂ ಬನ್ನಿ. ಕವುಂಚಿದ ಕಡೆತ್ತಕಲ್ಲಿನ ನೋಡಿ ಅಂದ್ರಾಣ ಘಟನೆಯ ಮೆಲುಕು ಹಾಕಿ ಹೊಟ್ಟೆತುಂಬಾ ನೆಗೆ ಮಾಡುವೊಂ.

 

 

 

 

 

8 thoughts on “ಡೆಂಗ್ಯೂ ಬಂತಾಡ…,ಕಡೆತ್ತ ಕಲ್ಲು ಕವುಂಚಿತ್ತಾಡ…

  1. ಶೀಲಕ್ಕ ಬರದ ಡೆಂಗ್ಯೂ ಕತೆ ಶೋಕಾಯಿದು. ಅವಕ್ಕೆ ಬೇಕಾದ ಹಾಂಗೆ ರಿಪೋರ್ಟ್ ಬರವವಕ್ಕೆ ಲಾಯ್ಕ ಪಾಠ ಆತು.
    ಕಡವ ಕಲ್ಲು ಕೌಂಚಿ ಆತು, ಇನ್ನು ಅಡಿಗೆ ಮುದ್ದಣ್ಣ ಬಪ್ಪಗ ಪುನಾ ನೇರ್ಪ ಮಡುಗುತ್ಸು ಆರು? ಛೆ!! 🙂

    1. ಧನ್ಯವಾದಂಗೊ ಶ್ರೀ ಅಕ್ಕ. ಅಪ್ಪು ಎನಗೂ ಅದೇ ಚಿಂತೆ .

  2. ಇದ… ಆನು ಸುಮ್ಮನೆ ಹೇಳುದಲ್ಲ… ಮದ್ದಿನ ಅಂಗಡಿಲಿ ಕೈಬೇವಿನ ಎಣ್ಣೆ ಸಿಕ್ಕುತ್ತು…. ಅದಕ್ಕೆ 50% ಕೈಬೇವಿನೆಣ್ಣೆಗೆ 50% ತೆಂಗಿನೆಣ್ಣೆ ಸೇರಿಸಿ ಮೈಗೆ ಉದ್ದಿಕೊಂಡರೆ ನುಸಿ ಕಚ್ಚುತ್ತಿಲ್ಲೆ…

    1. ಹೋ…ಅಪ್ಪಾ…? ಒಳ್ಳೆ ಸಲಹೆ ಶ್ಯಾಮಣ್ಣ. ಪ್ರಯತ್ನಿಸಿ ನೋಡ್ತೆ. ಮಾಂತ್ರ ಇರುಳು ಒರಗುವಾಗ ಹಚ್ಚಿಯೊಂಡ್ರೆ ಹಾಸಿಗೆ ಎಣ್ಣೆಮಯ ಆಗಿ ನುಸಿಯ ಬದಲು ನೈ ಎರುಗು ಬಂದು ಕಚ್ಚುಗಾನೆಯಪ್ಪಾ…?

  3. ಅಂತೂ ಕಡೆವ ಕಲ್ಲು ಕವುಂಚಿತ್ತು.dengue ಹೋತು,ಬಂದವೂ ಹೋದವು.ಸುಲಭಲ್ಲಿ ಕೆಲಸ ಆತು.ಒಳ್ಳೆ ಕತೆ.

  4. ಶೀಲಕ್ಕನ ಕೆಣಿ ಲಾಯಕಾಯಿದು. ಘಟನೆ ಕೇಳಿ ನೆಗೆ ಬಂದು ತಡೆಯ. ಇನ್ನಂಬಗ ಮುದ್ದಣ್ಣ ಅಡಿಗ್ಗೆ ಬಂದ್ರೆ ಕಡವ ಕಲ್ಲಿನ ಮೊಗಚ್ಚಿ ಹಾಕಲೆ ಜೆನವ ಒಟ್ಟಿಂಗೆ ಕರಕ್ಕೊಂಡು ಬರೆಕಾ ಹೇಳಿ.

    1. ಹ್ಹ ..ಹ್ಹ … ಕೆಣಿ ಮಾಡದ್ದೆ ಬದ್ಕಲೆಡಿಗೋ ಹೇಳಿ…, ಈ ಮಲೆಯಾಳಿಗಳ ಎಡಕ್ಕಿಲ್ಲಿ…? ಕಡೆತ್ತ ಕಲ್ಲಿನ ಕವುಂಚಿದ ಶುದ್ದಿ ಕೇಳಿಯೇ ಅಂವ ಬಾರಾದ್ರೆ ಎಂತ ಕೆಣಿ ಮಾಡ್ಲಕ್ಕು ಹೇಳಿ ಅರಡಿತ್ತಿಲ್ಲೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×