ಬೈಲಿನ ಸುಭಗಣ್ಣ ನಿತ್ಯ ಸಂಚಾರಿ ಹೇದು ಎಲ್ಲೊರಿಂಗೂ ಅರಡಿಗು ಅಲ್ಲದಾ?
ನಿಜಹೆಸರು ಸುಬ್ರಹ್ಮಣ್ಯ ಹೇದಿಪ್ಪಗ ವಾಹನ ಮಯೂರವೇ ಆಯೆಕ್ಕನ್ನೆ! ಮಯೂರದ ಮೇಲೆ ಇವು ಕೂದರೆ ಅದರ ಕತೆ ಎಂತಕ್ಕು ಹೇದು ಸುಭಗಣ್ಣ ಅವರ ತೂಕಕ್ಕೆ ತಕ್ಕ ವಾಹನಕ್ಕೇ “ಮಯೂರವಾಹನ” ಹೇದು ಹೆಸರು ಮಡಿಕ್ಕೊಂಡಿದವು.
ಅವು ಹೋಗದ್ದ ಜಾಗೆ ಇಲ್ಲೆ. ಇಂದು ಸುಳ್ಯ ಆದರೆ ನಾಳೆ ಕೊಡೆಯಾಲ ನಾಳ್ದು ಮಡಿಕೇರಿ ಆದರೆ ಆಚ ನಾಳ್ದು ತೆಂಕ್ಲಾಗಿ ಇಪ್ಪ ವಯನಾಡು!!
ಅಂತೂ ವಾಹನಕ್ಕೆ ಚಕ್ರ ಇಪ್ಪದಾ ಇವರ ಕಾಲಿಂಗಾ ಹೇದು ನಿಜ ಮಾಡ್ಲೆ ಇನ್ನೂ ಆಯಿದಿಲ್ಲೆ!! 😉
ಓ.. ಮನ್ನೆ ಯೇವತ್ರಾಣ ಹಾಂಗೇ ಕೊಡೆಯಾಲಕ್ಕೆ ಚಾಂಬಿದ್ದವು. ಆ ದಿನ ಬೈಲಿನ ದೊಡ್ಡಜ್ಜನ ಮಗಳಕ್ಕೊ, ಅಳಿಯಂದ್ರು, ಪುಳ್ಯಕ್ಕೊ ಎಲ್ಲ ಕೊಡೆಯಾಲಲ್ಲಿ ಇತ್ತಿದ್ದವಡ್ಡ!!
ಸುಭಗಣ್ಣ ದೊಡ್ಡಜ್ಜನ ದೊಡ್ಡಳಿಯನ್ನೇ!! ಅವು ತಪ್ಪುದು ಹೇಂಗೆ? ಯೇವುದೋ ಒಂದು ನೆಳವು ಸುಭಗಣ್ಣ ಕೊಡೆಯಾಲಕ್ಕೆ ಕಾಲು ಮಡುಗುತ್ತಾ ಇದ್ದವು ಹೇಳಿ ಹೇಳಿದ್ದು ಗೊಂತಪ್ಪಗ ದೊಡ್ಡಜ್ಜನ ಕುಂಞಿ ಮಗಳು ಸುಭಗಣ್ಣಂಗೆ ಪೋನು ಮಾಡಿ ಒಟ್ಟಿಂಗೆ ಸೇರಿಗೊಂಬಲೆ ಹೇಳಿತ್ತಡ್ಡ.
ಕೊಡೆಯಾಲದ ಬೆಶಿ ಒಂದು ಹೊಡೆಲಿ. ಜೋರಿಲಿ ದಿನಿಗೆಳಿದ್ದು ಬೇರೆ! ಬೆಶಿಲಿಯೇ ಬೆಶಿಲಿಲಿ ಎಲ್ಲೊರೂ ಇಪ್ಪಲ್ಲಿಗೆ ಹೋದವು.
ಇವರ ಬೆಶಿ ಗ್ರೇಶಿಯೋ ಹೇಳ್ತ ಹಾಂಗೆ ದೊಡ್ಡಜ್ಜನ ಕುಟುಂಬ ತಂಪು ಪಬ್ಬಾಸಿಲಿ ಲಾಯ್ಕ ಶ್ರುತಿಲಿ ‘ವೀಣಾ ಸಂಗೀತ’ ಕೇಳಿಗೊಂಡು ಕೂದಿತ್ತು!!! ಬೆಗರು ಉದ್ದಿಗೊಂಡು ಸುಭಗಣ್ಣಂದೇ ಕೂದವು. 🙂
ದೊಡ್ಡಜ್ಜನ ಪುಳ್ಯಕ್ಕೊ ಬೇಕಾದ್ದದರ ಹೇಳ್ತದರಲ್ಲಿ ಉಶಾರಿಗೊ. ಎಲ್ಲೊರಿಂಗೂ ಬೇಕು ಬೇಕಾದ್ದದು ಬಂತು.
ಸುಭಗಣ್ಣನ ಎದುರೂ ಬಣ್ಣ ಬಣ್ಣಕಿಪ್ಪ ಕುಪ್ಪಿಗ್ಳಾಸು ಬಂತು. ಹೆರಾಣ ಬೆಶಿ, ಸುಭಗಣ್ಣನ ಬೆಶಿಗೆ ಗ್ಳಾಸಿಲಿ ಇರ್ಸು ಕರಗುತ್ತದು ಬೇಡ ಹೇದು ಮದಾಲು ಪಟ ತೆಗದವು. 😉
ತಂಪಿನ ಜೆನಂಗೊ ಹತ್ತರೆ ಇಪ್ಪಗ ತಂಪಿನ ಜಾಗೆಲಿ ತಂಪು ತಂಪು ತಿಂಬಗ ಸುಭಗಣ್ಣಂಗೆ ಒಂದು ತಂ(ಇಂ)ಪಾದ ಶ್ಳೋಕ ಬಂತು!! ಮರವದು ಬೇಡ ಹೇದು ಮೊಬಿಳಿ ತೆಗದು ಬೈಲಿನ ವಾಟೆಸೊಪ್ಪು ಪುಟಲ್ಲೇ ಬರದಿಕ್ಕಿದವು!! ಪಟಸಮೇತ.
ಅದು ಹೀಂಗೆ ಬಂತು ಬೈಲಿನ ಪುಟಕ್ಕೆ:
ಅಧೋಭಾಗೇ ಕ್ಷೀರಸಾರಂ
ಮಧ್ಯಭಾಗೇ ಫಲಖಂಡಾನಿ ಚ|ತದುಪರಿ ಹಿಮಖಂಡಂ ಶುಷ್ಕಫಲಂ ಚೈವ
ಅಗ್ರತೋ ಅಗ್ನಿ-ಚೆರಿ ಫಲಭೂಷಿತಂ|ದಶಾಧಿಕ ಶತ ಮೌಲ್ಯಾನ್ವಿತಮೇತತ್
‘ಪಬ್ಬಾಸ್ ಪರ್ ಫೈಟ್’ ಇತ್ಯುಚ್ಯತೇ| 😊
110 ರುಪಾಯಿ ಐಸುಕ್ರೀಮಿಂದು ಸೇರಿ ಬಿಲ್ಲು ನೆಗ್ಗಿ ಉಶಾರು ಮಾಡಿದ್ದು ಎರಡ್ನೇ ಅಳಿಯ°. ಅಪ್ಪೂಳಿ! ದೊಡ್ಡಜ್ಜನ ಕುಟುಂಬ ಒಬ್ಬಂದ ಒಬ್ಬ° ಬಲ!!
ಪಟ+ಶ್ಲೋಕ ಬೈಲಿನಪುಟಲ್ಲಿ ನೇಲ್ಸಿಕ್ಕಿ ಸುಭಗಣ್ಣ ‘111 – ‘ಮೂರು ನಾಮ’ಕ್ಕೆ ಒಂದು ಕಮ್ಮಿ ಆದ ಲೆಕ್ಕಲ್ಲಿ ಕೊಶಿಲಿ ಹೆರಟ ಶ್ಲೋಕ 😂😂’ ಹೇದವು ಬಾಕಿದ್ದವರ ಬಿಟ್ಟಿಕ್ಕಿ ತಿಂದದಕ್ಕೆ ಬೇಜಾರಪ್ಪಲಾಗನ್ನೆ ಹೇಳಿ!! 😉
ಅಷ್ಟಪ್ಪಗ ನೆಗೆಮಾಣಿ ಬಂದವ° ಕೇಟ° “ಈ ಶ್ಲೋಕವ ದಿನಕ್ಕೆ ಒಂದರಿಯೋ ಮೂರು ಸರ್ತಿಯೋ ಜೆಪ ಮಾಡಿರೆ ಎಂತ ಮಣ್ಣಂಗಟ್ಟಿ ಸಿಕ್ಕುಗು ಹೇದು ಫಲಶ್ರುತಿ ಎಂತಾರು ಇದ್ದೋ? – ಯೇ ಚೆನ್ನೈಭಾವ?” ಹೇದು ಶಾಸ್ತ್ರಗೊಂತಿಪ್ಪ ಚೆನ್ನೈ ಭಾವನ ಹತ್ರೆ!
ಅವು ಅಂಬಗ ಒಂದು ಪೂಜೆಲಿ ಇತ್ತಿದ್ದವೋ ಏನೊ, ಮಾಣಿ ಹೇಳಿದ್ದು ಅಲ್ಲಿವರೆಗೆ ಕೇಳಿತ್ತಿಲ್ಲೆ. ತಂಪಿಲಿದ್ದ ಸುಭಗಣ್ಣಂಗೆ ಕೇಳಿತ್ತು ಅದು!! 😉
‘ಇದರಲ್ಲಿ ‘ಫಲ’ ಇಪ್ಪದು ಅಪ್ಪು. ‘ಶ್ರುತಿ’ ಇದ್ದೋ ಹೇದು ನವಗರಡಿಯ ‘ಹೇದು ಕೊಂಗಿ ಮಾಡಿದವು ಮಾಣಿಯ!
ಸುಭಗಣ್ಣನ ಶ್ಲೋಕ ಬಂದಪ್ಪಗ ಬೈಲಿಲಿ ರಜ್ಜ ಊಕು ಬಂತಿದಾ!! ಮುಳಿಯ ಭಾವ° ಭಾಮಿನಿಯ ಎಳಗಿಸಿದವು!
ಚುಬ್ಬ ಭಾವನ ಮದುವೆದಿನ ವರ
ದಿಬ್ಬಣವು ಹೆರಟತ್ತು ದಾರಿಲಿ
“ಪಬ್ಬ”ರಲ್ಲಿಗೆ ಹೋಗಿ ಕೂದವು ನಮ್ಮ ಸುಭಗಣ್ಣ|
ಕಬ್ಬುರಸ ಬೇಡಪ್ಪ ಪಿಜ್ಜವು
ರಬ್ಬರೇ, ವೈಟರನೆ ತಾರೈ
ಹುಬ್ಬು ಏರುಸುವಂತ ಪರಫೈಟಕ್ಕು ನವಗಿಂದು ||
ಒಂದು ಭಾಮಿನಿ ಬಂದಪ್ಪಗ ಬೈಲಿನ ಬಂಧುಗೊ ಎಲ್ಲ ಇನ್ನೂ ಬರಲಿ. ಬರಲಿ… ಹೇಳಿದವು. ಸುಭಗಣ್ಣ ಐಸುಕ್ರೀಮು ಇನ್ನೊಂದಾವರ್ತಿ ಬರಲಿ ಹೇದು ಹೇಳಿದವಾ ಹೇಳಿ ಗೊಂತಿಲ್ಲೆ. ನಮ್ಮಲ್ಲಿವರೆಗೆ ಬಯಿಂದಿಲ್ಲೆ.
ಮುಳಿಯ ಭಾವನ ಭಾಮಿನಿ ಇನ್ನೊಂದು ಬಂತು.
ಹೆಬ್ಬೆರಳಿನುಗುರೆಡೆಯ ಸುಣ್ಣದ
ಡಬ್ಬಿ ಹೊಳವದು ಕಂಡೆ ಹೆರಟದು
ಗಬ್ಬಲಡ್ಕದ ಭಾವ ಸೆಕೆ ತಡೆಯದ್ದೆ ಬೆಗರಿಳುಸಿ |
ಜುಬ್ಬ ವೇಷ್ಟಿಗೆ ಹೆಗಲಶಾಲಿನ
ಅಬ್ಬರವೆ!ಎತ್ಲಾಗಿ ಕೇಳಿರೆ
ಪಬ್ಬರಲ್ಲಿಗೆ ಮೂರು ನಾಮದ ಗಡಬಡದ ಜೆಪವೆ ||
ಅಷ್ಟಪ್ಪಗ ಆಚೊಡೆಂದ ಬಾಲಮಾವ° ಶಬ್ಧ ಸೇರ್ಸಿ ಬರದವದಾ..
ಉಬ್ಬಸವ ಬಿಡುದೆಂತಕಪ್ಪನೆ
ಚುಬ್ಬನೊಬ್ಬನೆ ಬಿಲ್ಲು ನೆಗ್ಗಿರೆ
ಒಬ್ಬರಾದರುಓರೆ ಕಣ್ಣಿಲಿ ಅತ್ತೆ ನೋಡಿದಿರಾ?
ಅಬ್ಬ ! ನಿಂಗಳೊ ! ಜೆತೆಲಿ ಸಿಕ್ಕಿರೆ
ಉಬ್ಬಿದಾ ಕೈ ಚೀಲ ಗಾಳಿಯ
ನೆಬ್ಬಿದಾ ಬರಿ ರಬ್ಬರಿನ ಚೀಕಟೆಯ ಬೋಲಕ್ಕು
ಇರುವಾರ ಮುಳಿಯ ಭಾವನ ಲಹರಿ ಬಂತು:
ಬಿಲ್ಲು ನೆಗ್ಗಿದವಂಗೆ ಮಿಥಿಲೆಲಿ
ಝಲ್ಲು ಗೆಜ್ಜೆಯ ಜವ್ವನೆಯ ಕೈ
ಮಲ್ಲಿಗೆಯ ಮಾಲೆಯದು ಬಿದ್ದಿದು ಹೇಳ್ತ ನೆಂಪಿಲಿಯೇ |
ಇಲ್ಲಿ ಪಬ್ಬನ ಅಂಗುಡಿಯ ಒಳ
ನಿಲ್ಲೆಡಿರೊ ಭಾವಯ್ಯರೇ ಮರ
ಗೆಲ್ಲು ಹಾರುವ ಮಂಗನಪ್ಪದು ಖಂಡಿತವು ಜೋಕೆ!||
ಇದರ ಎಲ್ಲ ನೋಡಿಗೊಂಡು ಇದ್ದ ಬಾಲಣ್ಣಂಗೆ ಬಾಲಮಾವನ ಪದ್ಯ ಕೇಳಿ ಅಪ್ಪಗ, “ಮಧುರಕಾನದ ಚಿತ್ರದ ಮಾಷ್ಟ್ರು, ಚಿತ್ರ ಬಿಟ್ಟು ಪದ್ಯ ಹಿಡುದರೆ, ಕತ್ತೆ ಆಟದ ಪಿಡಿಯ ಎಡೆಲಿ, ತುರ್ಪು ಕೇಳಿದ ಹಾಂಗೆ, ಫುಸ್ಸನೆ ನೆಗೆ ಹೆರಟು, ಚಾಯ ಕಪ್ಪು ಹಿಡುದ ಕೈಯುದೆ ನಡುಗಿ ಚಾಯ ಚೆಲ್ಲಿತ್ತು” ಹೇದವು. ಅದಕ್ಕೆ ಬಾಲಮಾವ°:
ಮಧುರಕಾನದ ಬಾಲಮಾವನ
ಎದುರೆ ನಿಲ್ಲೆಡಿ ಚಿತ್ರ ಬಿಡುಸುಗು
ಅದರ ನೆಡುಕೆಯೆ
ಕವನವನ್ನುದೆ ಬರವ ಕ್ರಮ ಇದ್ದು |
ಹೆದರೆಕಾದ್ದೇನಿಲ್ಲೆ ಆರುದೆ
ಮಧುರವಾಗಿಪ್ಪದೇ ಸಿಕ್ಕುಗು “
ಇದರ ಹೇಳಿದುದಾರು
ಕೇಳಿರೆ – ಆಚಕರೆ ಮಾವ |
ಆ ಹೊತ್ತಿಂಗೆ ನಮ್ಮ ಕೂಳಕ್ಕೂಡ್ಲು ಡಾಮೆಹೇಶಣ್ಣ ಎತ್ತಿದವು!!
ಅವು “ಪಬ್ಬಾಸ್ ಪಯೋಹಿಮ ಮಹಿಮೆ!” ಹೇದು ಉದ್ಘಾರ ತೆಗದು, ಜಿಹ್ವಾಮೋದಶ್ಚ ಸ್ವಾದಶ್ಚ ಶೀತಲಾನುಭವಸ್ತಥಾ! ಪಬ್ಬಾಸ್ ಪಯೋಹಿಮಸ್ತುತ್ಯಾ ಸಂತೋಷಸ್ಯ ವಿವರ್ಧನಮ್! ಹೇದು ಗುಣಗಾನ ಮಾಡಿದವು.
ನೆಗೆ ಮಾಣಿ ಐಸುಕ್ರೀಮು ಬಿಟ್ಟು ಅಂಗುಡಿ ಹೆಸರಿಂಗೆ ಹೋದ°! “ತಂಪುತಿಂಬನ ಪಬ್ಬ” ಹೇದು ಮಡಿಗಿಕ್ಕಿದ°.
ಹೋಪಲೆ ಕೇಳಿದ ಹಾಂಗೂ ಆತು ಅಂಗುಡಿಯ ಹೇಳಿದ ಹಾಂಗೂ ಆತು ಹೇದು ಅವನ ತರ್ಕ!! 😉
ಸುಭಗಣ್ಣಂಗೆ ಇದು ಕೊಶೀ ಆಗಿ ‘ನೆಗೆಮಾಣಿಯ ತಲಗೆ ಮಾಷ್ಟ್ರುಮಾವನ ಕೈಲಿಪ್ಪ ದಂಟಿಲ್ಲಿಯೇ ಇನಾಮು ಕೊಡೆಕಪ್ಪ! ‘ ಹೇದವು ಪ್ರೀ…ತಿಲಿ!;-)
ಆ ಹೊತ್ತಿಂಗೆ ಅಲ್ಲಿಗೆ ಬಂದ ಜಯತ್ತೆ ಸುಭಗಣ್ಣನ ಹತ್ರೆ ಶ್ಲೋಕಕ್ಕೆ ಅಂತಿಮಸಾಲು ಹೀಂಗೆ ಹಾಕೆಕ್ಕಿತ್ತು ಹೇದವು.
‘ಇತಿ ಒಪ್ಪಣ್ಣನ ಬೈಲಿನ ಸುಭಗಣ್ಣ(ವಿರಚಿತ) ಪಬ್ಬನ ತಂಪುತಿಂಬ ಪುರಾಣೇ …….”
ಬರೆತ್ತ ಕೆಲಸಲ್ಲಿ ಇದ್ದ ಬೆತ್ತಸರವು ಭಾವನೂ ಒಂದರಿ ತಂಪಾದ್ದು ಕೇಳಿ ಅಪ್ಪಗ ಇತ್ಲಾಗಿ ಬಂದವು. ‘ಇನ್ನು ಪಬ್ಬಾಸಿಂಗೆ ಹೋದರೆ ಸುಭಗ ಭಾವನ ಶ್ಲೋಕ ಹೇಳಿಯೇ ಐಸ್ ಕ್ರೀಂ ಬಾಯಿಗೆ ಹಾಕುದು. ಕೈನೀರು ತೆಗೆತ್ತ ಹಾಂಗೆ😜 ಆರ್ಡರ್ ಮಾಡಿದ ಕೂಡ್ಲೆ ಶ್ಲೋಕ ಹೇಳೆಕ್ಕು ಮತ್ತೆ ಬಂದ ಮೇಲೆ ಹೇಳಿಗೊಂಡು ಕೂದರೆ ನೀರಕ್ಕು😆 ‘ ಹೇದು ಎಲ್ಲೋರ ನೆಗೆ ಮಾಡ್ಸಿದವು.
ಶ್ಲೋಕವ ಪಬ್ಬನಲ್ಲಿಗೆ ಕೊಟ್ಟರೆ ಪ್ರಿಂಟು ತೆಗದು ಗೋಡಗಂಟುಸುಗು ಹೇದವು ಕಾಡೂರು ರಾಜಣ್ಣ.
ಅಷ್ಟಪ್ಪಗ ಬೊಳುಂಬು ಮಾವ° ಪೆನ್ನುತೆಗದು ಬರದವದಾ….
‘ಯಬ್ಬ’ ಎಂತ ಸೆಕೆಯು ಹೇಳಿ
ಜುಬ್ಬದಂಗಿ ಗುಬ್ಬಿ ತೆಗದು
ಪಬ್ಬದೇಸಿಯೊಳವೆ ಹೊಕ್ಕ ಸುಬ್ಬಬಾವನು |
ಹುಬ್ಬಬೆಗರಿನೊರಸಿಗೊಂಡು
‘ಕೊಬ್ಬಿನೈಸುಕ್ರೀಮು’ ತಿಂದು
ಗಬ್ಬಲಡ್ಕದೆಲೆಯ ಬಿಡುಸಿ ಸುಣ್ಣ ಉದ್ದಿದಾ|
ನೆಗೆಮಾಣಿ ಇಷ್ಟೆಲ್ಲ ನೋಡಿಗೊಂಡು ಇದ್ದವ° ಸುಮ್ಮನೇ ಕೂರ್ತನಾ! ಅವನೂ ಬರದ°:
ಮಂಗಳೂರಿನ ಪಬ್ಬನಲ್ಲಿಗೆ ಸುಬ್ಬಭಾವನು ಹೋದವೈ –
ತಂಪುಪೆಟ್ಟಿಗೆ ತುಂಬ ಕೆಂಪಿನ ಕುಪ್ಪಿಗ್ಲಾಸಿನ ಕಂಡವೈ|
ಮೇಲೆಕಂಡದರೊಂದುಭರ್ತಿದುತಂದು ಮಡಗಲೆ ಹೇದವೈ
ಬಿಲ್ಲು ನೋಡಿರೆ ದೇವ! ನೂರರ ಮೇಗೆ ಹತ್ತರ ಕೊಟ್ಟವೈ!ಪಬ್ಬದೇವರೆ ಪಬ್ಬದೇವರೆ ಪಬ್ಬದೇವರೆ – ತೊಂದರೇ!
ಯಬ್ಬದೇವರೆ ಯಬ್ಬದೇವರೆ ಯಬ್ಬದೇವರೆ – ದೇವರೇ!
ಅವ° ಬರದು ನಿಲ್ಸಿದ್ದೇ ತಡ, ಸುಭಗಣ್ಣ ಹಾರಿ ಬಿದ್ದು ಬಂದವು!!’ ಓಹೋ! ಯಬ್ಬದೇವರೆ ಯಬ್ಬದೇವರೆ
ಯಬ್ಬದೇವರೆ ದೇವರೇ – “ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ” ಉದ್ದಂ..ಡ ಬಿದ್ದತ್ತಯ್ಯ ನಾವು!!! ಎನ್ನದೂ ಒಪ್ಪಣ್ಣಂದೂ ಇಷ್ಟದ ಪದದ ರಾಗಲ್ಲಿ ಬರದ್ದದು ಪಷ್ಟಾಯಿದು ” ಹೇದವು.
ಬೈಲಿಲಿ ಇಷ್ಟೆಲ್ಲಾ ಮಾತಾಡಿಗೊಂಡು ಇಪ್ಪಗ ಸುಭಗಣ್ಣ ಸುರೂವಿಂಗೆ ಬರದ ಶ್ಲೋಕ ಸುಮ್ಮನೆ ಕೂರ್ತಾ!! ಬೈಲಿಂದ ಹೆರ ಹೋದ್ದದೇ ಹೋದ್ದದು.. ಲೋಕ ಇಡೀಕ ಹೋತು. ವಾಟೆಸೊಪ್ಪಿನ ಯಾವ ಗ್ರೂಪೂ ತಂಪಾಗದ್ದೆ ಒಳುದ್ದಿಲ್ಲೆ. ಮೂಡಕರೆಂದ ಪಡುವಲಾಗಿಂದ ಎಲ್ಲಾ ದಿಕ್ಕಂದ ಶುದ್ದಿ ಬಂತು. ಪಬ್ಬನಲ್ಲಿಗೆ ಶುದ್ದಿ ಎತ್ತಿದ್ದೋ ಇಲ್ಲೆಯೋ ಅಂತೂ ಪಬ್ಬನ ಹಬ್ಬ ಇಡೀ ವಾಟೆಸೊಪ್ಪಿಲಿ ಆತು!!
ಸುಭಗಣ್ಣನ ಶ್ಲೋಕ ಊರಿಡೀ ಹಬ್ಬಿ ಅಪ್ಪಗ ಆನೆಂತ ಕಮ್ಮಿ ಹೇದು ಜಾಣ ಐಸುಕ್ರೀಮು ತಿಂದ ಕಪ್ಪುಗಳ ಬೇಲೆನ್ಸು ಮಾಡಿದ ಪಟ ನೇಲ್ಸಿ ಬೇಲೆನ್ಸು ಮಾಡ್ತದು ಹೀಂಗಿದಾ ಹೇಳಿ ತೋರ್ಸಿದ°!! ಅವನ ಬಿಟ್ಟಿಕ್ಕಿ ಐಸುಕ್ರೀಮು ತಿಂದದರ ಬೆಶಿಲಿ ಅಷ್ಟು ತಿಂದದು ಹೇಳಿ ಕಾಣ್ತು!! 😉
ಪಟ ನೋಡಿದ ಚೆನ್ನೈ ಭಾವ° ‘ಬೇಲೆನ್ಸು ಬಾವನ ಮಗ ಅಪ್ಪು ಇವ° ಹೇದು ಸರ್ಟಿಫಿಕೇಟು ಕೊಟ್ಟವು.
ಮಗ° ಬೇಲೆನ್ಸು ಮಾಡಿದ್ದದರ ಕಂಡು ಕೊಶಿ ಆದರೂ ಖರ್ಚು ಮಾಡಿದ ಬೆಶಿ ಕಂಡತ್ತು ಅವನಪ್ಪನ ಮಾತಿಲಿ.. ‘ಮಗ° ಐಕ್ಕೀಮು ತಿಂದು ಖಾಲಿ ಕರಡಿಗೆಲಿ ಬೇಲೆನ್ಸು ಮಾಡ್ಲೆ ಕಲ್ತಿದ° ಹೇದು ಹೆಮ್ಮೆಪಡೆಕೋ ಅಲ್ಲ ಹೀಂಗೆಲ್ಲ ಬೇಡಂಕಟ್ಟೆಗೆ ಖರ್ಚು ಮಾಡಿ ಬೇಂಕು ಬೇಲೆನ್ಸು ಕಮ್ಮಿ ಮಾಡ್ತಾ ಇಪ್ಪದಕ್ಕೆ ಬೇಜಾರು ಮಾಡೆಕ್ಕೋ ಹೇಳ್ತ ಕನ್ಫೂಸಿಲ್ಲಿದ್ದವಡ ಬೇಲೆನ್ಸುಭಾವ° 😰’
ಇದೆಲ್ಲ ನೆಡದಪ್ಪಗ ಡಾಮಹೇಶಣ್ಣನೂ ಅವರ ಮನೆ ಹತ್ರೆ ಇಪ್ಪ ಗೋಪಾಲಭಾವನ ಹೋಟ್ಲಿಂಗೆ ಹೋದವಡ್ಡ! ಕಚ್ಚೆಜುಬ್ಬದ ಶಿಸ್ತಿನ ಹೋಟ್ಲು ಅದು! ಸಂಸ್ಕೃತಿಲಿಯೇ ಬಳುಸುತ್ತವಡ್ಡ.
ಅಲ್ಲಿ ಹೋಗಿ ಹನಿಮೂನ್ ಸ್ಪೆಶಲ್ ಐಸುಕ್ರೀಮು ತಿಂದು ಅವುದೇ ಬೈಲಿನ ಪುಟಲ್ಲಿ ಪಟ+ಶ್ಲೋಕ ನೇಲ್ಸಿದವು!!
ಗೋಲಯುಗಲಸಂಯುಕ್ತಂ
ನೌಕಾಕಾರಂ ಸುಸಾರಕಂ!
ಪಯೋಹಿಮಂ ಸಮಾಖ್ಯಾತಂ
ಮಧುಚಂದ್ರಂ ವಿಶಿಷ್ಟಕಂ!!
189 ರುಪಾಯಿ ಕೊಟ್ಟರೂ ಡಾಮಹೇಶಣ್ಣ ಕೊಶಿಲಿಯೇ ಶ್ಲೋಕ ಬರದವು!! ಐಸುಕ್ರೀಮು ಒಂದೇ ತಿಂದರೂ ಶ್ಲೋಕ ಎರಡು ಬಂತು.. 😉
ಸುವರ್ಣಗಂಧಸಂಯುಕ್ತಂ
ಫಲಖಂಡವಿರಾಜಿತಂ!
ನವಾಶೀತಶತೋಪೇತಂ
ಗೋಪಾಲಾಖ್ಯೇ ಸುಭೋಜಕೇ!
ನಮ್ಮ ಬೈಲಿನ ಯಾವಾಗಲೂ ನೋಡ್ತಾ ಇಪ್ಪ ಶ್ರೀವತ್ಸ ಜೋಶಿ ಅಣ್ಣಂಗೆ ಬೊಳುಂಬು ಮಾವ° ಬರದ ಚೀಟು ಸಿಕ್ಕಿತ್ತಡ್ಡ. ಅವು ಇರುವಾರ ಬರದು ಕಳ್ಸಿದವಡ್ಡ ಮಂಗ್ಳೂರು ಮಾಣಿ ಕೈಲಿ.
ಕಬ್ಬಿನಂತೆ ಸಿಹಿಯು ಇರುವ
ಹಬ್ಬವಾಯ್ತು ಪದ್ಯವೋದಿ
ಒಬ್ಬರಾದ್ರು ಮೆಚ್ಚಿರುವರು ಇದುವೆ ಸಾಕ್ಷಿಯು |
ಪಬ್ಬಸಾದ್ರು ಯಾವುದಾದ್ರು
ಉಬ್ಬಿಕೊಂಡ ಪರ್ಸು ಬೇಕು
ಕೊಬ್ಬಿನೈಸುಕ್ರೀಮು ತಿಂದು ಬಿಲ್ಲು ಕಟ್ಟಲು ||– Shrivatsa Joshi
ಸುಭಗಣ್ಣ ಐಸುಕ್ರೀಮು ತಿಂದದರಲ್ಲಿ ಉರಿಬೇಸಗೆಲಿ ಬೈಲಿಡೀ ತಂಪುದೇ, ಸಾಹಿತ್ಯಲ್ಲಿ ಚೀಪೆದೇ ಆತು. ಬೈಲ ಬಂಧುಗೊಕ್ಕೆ ಈ ಫ್ರುಟ್ಟುಸಲಾಡ್ ಬಳ್ಸುವಾ ಹೇಳಿ ಆತು. ಒಂದರಿ ತಂಪಿಂಗೆ ಓದಿಕ್ಕಿ ಆತೊ. ಇನ್ನು ಆರಾದರೂ ಪಬ್ಬನಲ್ಲಿಗೆ ಹೋದರೆ ಶ್ಲೋಕ ಬರದಿಕ್ಕಿ ಹೇದು ಸುಭಗಣ್ಣ ಕೇಳಿಗೊಂಡಿದವು. 🙂
- ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ! - April 4, 2020
- ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!! - January 29, 2018
- ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. - June 2, 2016
ಆನಿಂದು ಓದಿದ್ದಿದಾ ಶ್ರೀ ಅಕ್ಕ. ಭಾರೀ ಲಾಯಕ ಆಯಿದು. ಎಂತದೋ ಗಡಿಬಿಡಿಲಿ ಇಷ್ಟನ್ನಾರ ಓದಿದ್ದಿಲ್ಲೆ ಹೇಳಿ ಬೇಜಾರಾತು.
ಗೋಪಾಲಣ್ಣ,
ಶುದ್ದಿಗೊಕ್ಕೆ ಒಪ್ಪ ಕೊಡ್ಲೆ ತಡವು ಎಂತೂ ಇಲ್ಲೆ.
ಎನಗೂ ಬೈಲಿಂಗೆ ಇಳಿವಲೆ ಪುರುಸೋತ್ತು ಆಗಿತ್ತಿಲ್ಲೆ. ಕಟ್ಟಪ್ಪುಣಿಲಿ ಹೋಪದಿದಾ.. ಇಳಿವಲಪ್ಪಗ ಆರಾರು ದಿನಿಗೇಳ್ತವು 🙁
ಧನ್ಯವಾದಂಗೊ.
ಶ್ರೀ ಅಕ್ಕ ಬರದ ತಂಪು ಪುರಾಣ ಲಾಯಕಾಯಿದು. ಸುರುವಿಂದ ಕಡೇಂಗೆ ವರೆಗಿನ ವರದಿ ಓದಿಯಪ್ಪಗ ಗಡುಬಡು ತಿಂದಾಂಗೆ ಆತು. ಬೈಲಿಲ್ಲಿ ಈ ಸರ್ತಿ ಒಳ್ಳೆ ಬೆಳೆ ಬತ್ತ ಅಂದಾಜಿದ್ದು.
ಮಾವ,
ಧನ್ಯವಾದ. ಅಪ್ಪು, ಗಡುಬಡಿನ ರುಚಿ ಎಲ್ಲೋರೂ ಸೇರಿ ಬರ್ಸಿದವು.
ಲಾಯ್ಕ ಬೆಳೆ ಬೆಳವ ಮನಸ್ಸಿದ್ದು. ಬೇಕಾದ ಹಾಂಗೆ ಈಟು ಸಿಕ್ಕೆಕ್ಕೆ!! 😉
ಸಾವಯವ ಸಿಕ್ಕುತ್ತಿಲ್ಲೆ, ಗೋರ್ಮೆಂಟಿಂದು ನವಗೆ ಆವುತ್ತಿಲ್ಲೆ ಹೇಳ್ತ ಪರಿಸ್ಥಿತಿ.
ಶ್ರೀದೇವಿ, ಭಾರೀ ಚೊಕ್ಕಕೆ ಬಯಿಂದು ಈ ತಂಪು ಪ್ರಕರಣ.ಇದಲ್ಲಿ ನಮ್ಮೋರ ಹಳೆ ಪತ್ತಾಯಂದ ಶಬ್ಧಂಗೊ ಬೆಣ್ಚಿಗೆ ಬಂದದು ಕೊಶಿಯಾತು. ಉದಾಃ-ಮೂಗಿಲ್ಲಿ ನೆಳವು ಕೂದು ಶುದ್ದಿಯ ಎಳೆ ಸಿಕ್ಕುದು, ಊಕು ಹೀಂಗಿದ್ದೆಲ್ಲ. ಮತ್ತೆ ..ಪಬ್ಬಾಸ್ ಐಸ್ಕ್ರೀಂ ಗೆ ಜಾಹಿರಾತಾಗಿ ಬಯಲಿನವಕ್ಕೆಲ್ಲ ಬಾಯಿಲಿ ನೀರೂರುತ್ತ ಹಾಂಗೂ ಆತು. ಅಂತೂ ಗದ್ಯ,ಪದ್ಯ ಒಂದೇ ಕಡೆ, ಹಾಂಗೇ ಜೋಕುದೆ.
ಧನ್ಯವಾದ ವಿಜಯತ್ತೆ.
ಸುಭಗಣ್ಣ ಐಸ್ಕ್ರೀಂ ತಿಂದ ಲೆಕ್ಕಲ್ಲಿ ಬೈಲಿಂಗೆ ಒಂದು ಶುದ್ದಿಯೇ ಆತಿದಾ..
ಎಲ್ಲೋರ ಪೆನ್ನೂ ಹರುದತ್ತು 😉
ಸೂಪರ್, ನಾವುದೇ ಪಬ್ಬಾಸಿಂಗೆ ಹೋಯಿದು, ಆದರೆ ಸುಬಗಣ್ಣ ಅಲ್ಲಿಂದ ಶ್ಲೋಕ ಹೆರಡುಸಿದ್ದದು, ಎಲ್ಲೋರು ಅದಕ್ಕೆ ನೀಡಿದ ಪ್ರತಿಕ್ರಿಯೆ, ವ್ಹಾ…ರೈಸಿದ್ದು. ಭಾರೀ ಖುಶಿ ಆತು
ಕುಮಾರಣ್ಣ,
ಇನ್ನೊಂದರಿ ಒಟ್ಟಿಂಗೆ ಹೋಪ. ನಿಂಗೊ ಊರಿಂಗೆ ಬಪ್ಪದು ಯೇವ ನೆಳವೂ ಹೇಳ್ತಿಲ್ಲೆ ಇದಾ ನವಗೆ!! 😉
ಹೈಕ್ಳಾಸು ಪಬ್ಬಾಸು ಐಸ್ಕ್ರೀಮು ಹೊಡೆದ ಹಾಂಗಾತು. ಹೈವ ಭಾಷೆಯ ರುಚಿ ಹೇಳಿರೆ ಒಳ್ಳೆ ಕರೆಲಿ ಬಳ್ಸಿದ ಉಪ್ಪಿನಕಾಯಿ ನಕ್ಲೆ ಸಿಕ್ಕಿ ಊಟ ಪಷ್ಟ್ ಆದ ಹಾಂಗಾತು.
ಧನ್ಯವಾದ ಅಕ್ಕೊ.
ನಿಂಗಳ ಒಪ್ಪವೂ ರುಚಿ ಹೆಚ್ಚುಸಿತ್ತು.
Pattanga nodi kushi aatu
ಧನ್ಯವಾದ ಸಿರಿ ಅತ್ತಿಗೆ.
ಬೈಲಿಂಗೆ ಬತ್ತಾ ಇರಿ..
ಸುಭಗ ಭಾವ ಯೇವ ಗಳಿಗೆಲಿ ಪಬ್ಬಾಸು ಐಸ್ ಕ್ರೀಂ ತಿಂದು ತಂಪಾಗಿ ಒಂದು ಶ್ಲೋಕ ಹೆರಡಿಸಿದವೋ… ಅಲ್ಲಿಂದ ಲಾಗಾಯ್ತು ಇಡೀ ವಾಟ್ಸಪ್ ಲೋಕಲ್ಲಿ ವೈರಲ್ ಆಯ್ದು. ಒಟ್ಟಿಂಗೆ ಷಟ್ಪದಿಗಳ ಮಳೆ. ಈ ಗಲಾಟೆಯ ಶ್ರೀ ಅಕ್ಕ ಇಲ್ಲಿ ಬರದ್ದು ಇನ್ನೂ ಪಷ್ಟ್ ಆಯ್ದು 🙂
ಈಚ ಭಾವೋ,
ಒಳ್ಳೆ ಉರಿಸೆಕೆಲಿ ಊರಿಡೀ ಹಬ್ಬಿದ್ದು ಅಲ್ಲದಾ? ನಮ್ಮ ಬೈಲಿನ ಕೊಶಿ ಅದು.
ಮನೆಗೊಕ್ಕೆ ಹೋದಪ್ಪಗ ಬೆಶಿ ಕಾಸಿ ಕೊಡ್ತದರಂದ ತಂಪೇ ಲಾಯ್ಕ ಅಲ್ಲದೋ? ಎಂತ ಹೇಳ್ತಿ? 😉 😉
ಪಬ್ಬನ ತಂಪು ಪುರಾಣ ಭಾರೀ ಚೆಂದಕ್ಕೆ ವರ್ಣನೆ ಆಯಿದು…..
ತಂಪು ನುಂಗುವಾಗ ಬಿಲ್ಲು- ರೇಟು ನೆಂಪಾವುತಿಲ್ಲೆ…..
ಪಬ್ಬಬಾವ ಇದರ ಕಂಡರೆ ಡಬ್ಬ ಬೀಳುಗು….
ಅಪ್ಪಪ್ಪು ವಿದ್ಯಕ್ಕೊ,
ತಂಪು ಜಾಗೆಲಿ ತಂಪು ತಿಂಬಗ ಎಂತದೂ ನೆಂಪಾವುತ್ತಿಲ್ಲೆ. ಅದರಲ್ಲೂ ಬಿಲ್ಲು ನೆಗ್ಗುಲೆ ಸುಭಗಣ್ಣ ಇದ್ದರೆ ಮತ್ತೆ ಹೇಂಗೂ ನೆಂಪಾಗ. 😉
ಯ್ಯಬ್ಬ….ಶುದ್ದಿಲಿ ಪಬ್ಬಾಸಿಂಗೋಗಿ ಜುಬ್ಬಾಸಿಂದ ಮೊಬೈಲೆಳೆತ್ತಲ್ಲಿಂದ ಐಶಾರಾಮಿಲಿ ಐಸುಕ್ರೀಮು ತಿಂದು ಬೈಲಿಂಗೆ ಬಂದು ಪೆನ್ನು ತೆಗದು ಬರದ್ದದು, ಎಲ್ಲೋರು ಐಸುಕ್ರೀಮು ತಿಂದ ಕಪ್ಪುಗಳ ಬೇಲೆನ್ಸು ಮಾಡಿದ್ದರನ್ನೂ ಸೇರ್ಸಿ ನೆಗೆ ಮಾಣಿಗೆ ಹೊಟ್ಟೆಕುತ್ತಿದ್ದನ್ನೂ……ಅಯ್ಯಯ್ಯಪ್ಪನೇ…ರಾಮ ರಾಮ…. ಮುಳಿಯ ಬಾವನ ಚೂರ್ಣೀಕೆಯುದೆ… ಏವುದೂ ಬಿಟ್ಟಿದಿಲ್ಲೆ ಕತೆಲಿ!!!! ಜುಬ್ಬ ಬಾವನ ಪಬ್ಬಾಸ್ ಪುರಾಣ ಶಹಬ್ಬಾಸ್ ಆತಿದಾ. ಒಪ್ಪ ಒಪ್ಪ 😛 😛
ಚೆನ್ನೈ ಭಾವ,
ಧನ್ಯವಾದಂಗೊ.
ನವಗೂ ಒಂದರಿ ಪಬ್ಬಾಸಿಂಗೆ ಹೋಗೆಡದೊ? 😉
ಸುಭಗಣ್ಣ ನೂರಹತ್ತು ರೂಪಾಯಿ ಕೊಟ್ಟು ಐಸುಕ್ರೀಮು ತಿಂದದರಲ್ಲಿ ನಮಗೆ , ಬೈಲಿನ ನೆಂಟ್ರುಗೊಕ್ಕೆ ಅಂತೂ ಸಮಾರಾಧನೆ ಆತು…ಎಲ್ಲವೂ ಭಾರೀ ರುಚಿಯಿತ್ತು ….
ಧನ್ಯವಾದ ಇಂದಿರತ್ತೆ.. ನಿಂಗಳ ಮನಸ್ಸಿಂಗೂ ತಂಪಾದ್ದು ಕೊಶೀ ಆತು. 🙂