Oppanna.com

ಮಾರ್ಗ ನಮ್ಮದಲ್ಲ, ವಾಹನ ನಮ್ಮದಲ್ಲ, ಸಮಯ ನಮ್ಮದಲ್ಲ, ಆದರೆ…

ಬರದೋರು :   ಒಪ್ಪಣ್ಣ    on   19/02/2016    7 ಒಪ್ಪಂಗೊ

ಒಪ್ಪಣ್ಣ ಪುತ್ತೂರಿಂಗೆ ದಿನಾಗುಳೂ ಹೋಪಲಿರ್ತಿಲ್ಲೆ ಆದರೂ – ಅಪುರೂಪಕ್ಕೆ ಎಂತಾರು ಜೆಂಬ್ರವೋ, ಒಯಿವಾಟೋ – ಬೈಲಿಲಿ ಆರಿಂಗಾರು ಇದ್ದರೆ, ಅವರ ಬೈಕ್ಕಿಲಿಯೋ, ಕಾರಿಲಿಯೋ ಮಣ್ಣ ಹೋಪಲಿದ್ದರೆ – ಪುತ್ತೂರಿಂಗೆ ಎತ್ತುತ್ತು.
ಹಾಂಗೆ ಎತ್ತಿರೆ ಒಂದು ದಿನ ಪುತ್ತೂರು ಭಾವನಲ್ಲಿ ನಿಂದಿಕ್ಕಿ ಬಪ್ಪ ಕ್ರಮವೂ ಇಲ್ಲದ್ದಲ್ಲ.
ಪುತ್ತೂರು ಬಾವ ಈಗ ಹೆಸರಿಲಿ ಮಾಂತ್ರ ಪುತ್ತೂರು ಮಡಿಕ್ಕೊಂಡಿದವು. ವಾಸ ಪೂರ ಊರು ಬಿಟ್ಟು ಹೆರದಿಕ್ಕೆಯೇ ಆಯಿದು.
ಅವು ಊರಿಂಗೆ ಬಪ್ಪದೂ ಅಪುರೂಪವೇ ಆದ ಕಾರಣ ಅವಕ್ಕುದೇ ಪುತ್ತೂರು ನಮ್ಮ ಹಾಂಗೇ ಅಪ್ರೂಪ.
ಮೊನ್ನೆ ಆನು ಪುತ್ತೂರಿಂಗೆ ಹೋಗಿದ್ದ ದಿನವೇ ಪುತ್ತೂರು ಬಾವನೂ ಬಂದಿದ್ದ ಕಾರಣ – ಮಾತಾಡ್ಳೆ ಸಿಕ್ಕಿದವು.
ಆ ದಿನ ಅವರ ಮನೆಗೆ ಹೋಪಲೆ ಒತ್ತಾಯ ಮಾಡಿ, ಮರದಿನ ಅವರ ಸಂಸಾರದ ಒಟ್ಟಿಮ್ಗೆ ದೇವಸ್ಥಾನಂಗಳ ನೋಡಿಕ್ಕಿ, ಅದರ ಮತ್ತಾಣ ದಿನ ಒಪ್ಪಣ್ಣ ಮನೆಗೆ ಬಂದದಾತು.

~

ಕಾರಿನ ಕೃಷ್ಣಪ್ಪು ಹೇದರೆ ಪುತ್ತೂರಿನ ಒಂದು ಬಾಡಿಗೆ ಕಾರಿನ ಜೆನ. ಈಗಾಣ ಆಧುನಿಕ ಬಾಡಿಗೆದಾರರ ಹಾಂಗಲ್ಲ, ಹಳೇ ನಮುನೆ ಜೆನ. ರಜ್ಜ ನಿಧಾನಿ ಆದರೆ ಸಮದಾನಿ. ಪುತ್ತೂರು ಬಾವಂಗೆ – ಇಷ್ಟು ನಿಧಾನಕ್ಕೆ ಹೋವುತ್ತರೆ ಕಾರಿನ ಪೆಟ್ರೋಲಿಂಗೆ ಎಂತಕೆ ಪೈಶೆ ಕೊಡುದು, ಎತ್ತಿನ ಗಾಡಿ ಆಗದೋ – ಹೇದು ಅನುಸುತ್ತು.
ಆದರೆ, ಮಾವಂಗೆ ಹಾಂಗಲ್ಲ – ಅವಕ್ಕೆ ನಿಧಾನಕ್ಕೇ ಹೋಯೇಕು. ಅದಿರಳಿ.
ಆ ಕೃಷ್ಣಪ್ಪುದೇ ಈ ಪುತ್ತೂರು ಬಾವನ ಕಾಂಬದು ಅಪುರೂಪವೇ!

ಮೊನ್ನೆ ನೆಡುಗಳ ಮದುವೆಗೆ ಊರಿಂಗೆ ಬಂದ ಪುತ್ತೂರು ಬಾವಂಗೆ ಸಂಸಾರ ಸಮೇತ ಸುಬ್ರಮಣ್ಯ ದೇವರ ಕಂಡಿಕ್ಕಿ ಬಪ್ಪೊ – ಹೇದು ಕಂಡತ್ತು;
ಹಾಂಗೆ ಒಪ್ಪಣ್ಣ ಆ ದಿನ ನಿಂದು ಮರದಿನ ಅವರ ಒಟ್ಟಿಂಗೆ ಹೋಗಿ ಬಪ್ಪೊ ಹೇದು ತೀರ್ಮಾನ ಆತು.
ಕೃಷ್ಣಪ್ಪು ಕಾರು ಆದರೆ ಮಾಂತ್ರ ಆನು ಬಪ್ಪದು ಹೇದು ಮಾವನೂ ಹೇಳಿದ ಕಾರಣ ಕೃಷ್ಣಪ್ಪುಗೆ ಪೋನು ಮಾಡಿ ಅದೇ ಕಾರಿನ ವೆವಸ್ತೆ ಮಾಡಿಯೂ ಆತು.
ಅಂತೂ – ಕೃಷ್ಣಪ್ಪು ಕಾರಿಲಿ ಆ ಸುಬ್ರಮಣ್ಯಕ್ಕೆ ಹೋದ್ಸು.

ಅಪುರೂಪಕ್ಕೇ ಕೃಷ್ಣಪ್ಪುವಿನ ಹೇಳ್ತ ಕಾರಣ ಅವಕ್ಕೆ ಈಗಾಣ ಒರ್ತಮಾನ ಎಲ್ಲ ಅರಡಿಯ ಅದರದ್ದು. ಹತ್ತು ಅರುವತ್ತೊರಿಶ ಆಗಿದ್ದರೂ ಲಟ್ಟ ಜೆನ ಆಗಿ ಇದ್ದತ್ತು ಅದು ಕಾಂಬ ಮಟ್ಟಿಂಗೆ. ಈಗ ಪ್ರಾಯ ಆದ್ಸು ಗೊಂತಾವುತ್ತು, ಗುರ್ತವೇ ಸಿಕ್ಕದ್ದ ಹಾಂಗಾಯಿದು.
ತಲೆಗೆ ಕಪ್ಪು ಬಣ್ಣ ಮೆತ್ತಿ ನಾಜೂಕಿಲಿ ಬಾಚಿಗೊಂಡು ಸದಾ ಯೌವನ್ನಲ್ಲಿ ಇದ್ದಿದ ಕೃಷ್ಣಪ್ಪು ಈಗ ಬೆಳಿ ತಲೆಯ, ಚೆದುರಿದ, ಇಸ್ತ್ರಿ ಇಲ್ಲದ್ದ ಅಂಗಿಯ, ಮುಪ್ಪು ಅಡರಿಗೊಂಡು ಇಪ್ಪ ಮೋರೆಯ ಜೆನ ಆಗಿ ಹೋಯಿದು!
ಪುತ್ತೂರು ಬಾವಂಗೆ ಗುರ್ತವೇ ಸಿಕ್ಕಿದ್ದಿಲ್ಲೆ ಅದರ ಪಕ್ಕನೆ. ಕಾರಿಂಗೆ ಹತ್ತುವಗ ಮಾತಾಡುದಲ್ಲದ್ದರೆ – ಕೃಷ್ಣಪ್ಪು ನಿಂಗಳ ಕಳುಸಿಕೊಟ್ಟತ್ತೋ, ಅದು ಬತ್ತಿಲ್ಲೆಯೋ – ಹೇದು ಕೇಳ್ತಿತ ಭಾವಯ್ಯ!

~

ಕಾರು ಹೆರಟತ್ತು. ಪುತ್ತೂರು ಬಾವನ ಸಂಸಾರ ದ ಒಟ್ಟಿಂಗೆ ಒಪ್ಪಣ್ಣಂದೇ ಇಪ್ಪದಾತು. ಎಂಗೊ ಎಂಗಳಷ್ಟಕೇ ಮಾತಾಡುವಾಗ – ಕೃಶ್ಣಪ್ಪು ಅದರಷ್ಟಕ್ಕೇ ಕಾರು ಓಡುಸಿಗೊಂಡು ಇದ್ದತ್ತು. ಯೇವ ಮಾತುಕತೆಗೂ ಕೆಮಿ ಕೊಟ್ಟಿದಿಲ್ಲೆ. ಅಥವಾ, ಕೆಮಿ ಕೊಟ್ರೂ ಅದು ಎಡೇಲಿ ಬಾಯಿ ಹಾಕಲಿಲ್ಲೆ, ಅದಾತು ಅದರ ಕೆಲಸ ಆತು.
ಕಾರು ನಿಧಾನಕ್ಕೆ ಹೋತು. ಗೋರ್ಮೆಂಟು ಬಸ್ಸುಗೊ ಹಲವು ಎಂಗಳ ದಾಂಟಿ ಹೋತು. ಸುಮಾರು ಜೆನ ಜೋರು ನೆಡೆತ್ತವು ಕಾರು ದಾಂಟಿ ಮುಂದೆ ಹೋದವೋ ಏನೋ! ಉಮ್ಮಪ್ಪ.
ಪುತ್ತೂರು ಬಾವಂಗೆ ಸಹನೆ ರಜ ರಜವೇ ಅರುದು ಮೂಗು ಕೆಂಪಪ್ಪಲೆ ಸುರು ಆತು. ಇಷ್ಟು ಹೊಸ ಕಾರು ಇದ್ದುಗೊಂಡು ಏಕೆ ಇದು ಹೋವುತ್ತಿಲ್ಲೇದು!
ಸುಬ್ರಮಣ್ಯಕ್ಕೆ ಮಜ್ಜಾನ ಪೂಜೆಗೆ ಎತ್ತುಗೋ ಅಲ್ಲ ಇರುಳಿಂಗೋ – ಹೇದು ಕೇಳುಲೆ ಸುರುಮಾಡಿದ, ಗುಟ್ಟಿಲಿ.
ರಜ ದೂರ ಹೋಪಗ ಅವನೇ ಬೆಶಿ ತಣಿವಲೆ – “ದಾನೆ ಕೃಷ್ಣಪ್ಪೂ, ಮತ್ತೆಂತ ಸುದ್ದಿ” – ಹೇದು ಮಾತಾಡ್ಸುಲೆ ಸುರು ಮಾಡಿದ.

ನೆಗೆ ಮೋರೆಲೇ ಮಾತಾಡ್ಳೆ ಪ್ರಯತ್ನ ಮಾಡಿತ್ತು. ಆದರೂ ಯೇವದೇ ಆಸಕ್ತಿ ಇಲ್ಲದ್ದ ಹಾಂಗಿಪ್ಪ ಉತ್ತರಂಗೊ ಕೊಟ್ಟುಗೊಂಡು ಇದ್ದದು ಅಂದಾಜಿ ಅಪ್ಪ ಹಾಂಗಾತು.

~

ಕೃಷ್ಣಪ್ಪು ರಜ ದೈವಭಕ್ತ. ಒರಿಶಂಪ್ರತಿ ಅದು ಶಬರಿಮಲೆ ಗೆ ಅಯ್ಯಪ್ಪನ ಕಾಂಬಲೆ ಹೋಪ ಸಂಗತಿ ಪುತ್ತೂರು ಬಾವಂಗೆ ಗೊಂತಿತ್ತು.
ಆ ಬಗ್ಗೆ ಮಾತಾಡ್ಳೆ ಸುರು ಮಾಡಿರೆ, ಸ್ವಾಮಿಯ ಕರುಣೆ, ಅದರಿಂದಾಗಿ ಆದ ಬದಲಾವಣೆ – ಎಲ್ಲವನ್ನುದೇ ಬಹು ಉತ್ಸಾಹಲ್ಲಿ ಹೇಳುಲಿದ್ದು.
ಹಾಂಗೆ, ಆ ವಿಷಯವನ್ನೇ ನೋಟ ಮಡಗಿ ಮಾತಾಡುಸಿದ.
ಕೃಷ್ಣಪ್ಪು ಸಾಮಾನ್ಯವಾಗಿ ದಶಂಬ್ರ ಅಕೇರಿ – ಜೆನವರಿ ಸುರೂವಿಂಗೆ ಆಗಿ ಹೋಪದು ಕ್ರಮ. ಹಾಂಗೆ ಮೊನ್ನೆ ದಶಂಬ್ರದ ಪ್ರಯಾಣದ ಅನುಭವದ ನಿರೀಕ್ಷೆಲಿ ಹೇಂಗಾತು ಈ ಸರ್ತಿ ಶಬರಿಮಲೆ? – ಕೇಳಿದ ಪುತ್ತೂರು ಭಾವ.
“ಈ ಸರ್ತಿ ಹೋಪಲೆ ಆಯಿದಿಲ್ಲೆ” – ಹೇಳಿತ್ತು ಕೃಷ್ಣಪ್ಪು. ಸುಮ್ಮನೆ ಕೂದತ್ತು.

~

ಪುತ್ತೂರು ಬಾವಂಗೆ ಬಯಂಕರ ಆಶ್ಚರ್ಯ. ಶ್ಶೆಲಾ, ಅದೆಂತ ಹಾಂಗೆ? – ಕೇಳಿದ ಒಂದೇ ಪೆಟ್ಟಿಂಗೆ.
ಕಳುದ ಒರಿಶ ಎನಗೆ ಗ್ರಹಸ್ಥಿತಿ ಸರಿ ಇತ್ತಿಲ್ಲೆ, ಎನ್ನ ಜೀವ್ನಾಕ್ಕೆ ಹಿಡುದ್ದಿಲ್ಲೆ – ಹೇಳಿತ್ತು. ಮತ್ತೆ ಸುಮ್ಮನಾತು.
ಎಂತಾತು, ಎಂತೆಲ್ಲ ಲೋಸು ಬಂತು – ಹೇದು ಕೇಳುಸ್ಸು ಬೇಡ ಹೇಳಿಯೋ ಏನೋ, ಸಮದಾನ ಮಾಡ್ತ ಹಾಂಗೆ ಪುತ್ತೂರು ಬಾವ ಮಾತಾಡಿದ “ತೊಂದರಿಲ್ಲೆ, ೨೦೧೬ ಹೊಸ ಒರಿಶ ಬಂತಲ್ಲದೋ, ಈ ಒರಿಶ ಸರಿ ಅಕ್ಕು” – ಹೇದು.
ಇಲ್ಲೆ, ಈ ಒರಿಶವೂ ಸರಿ ಆಗ. ಅಪ್ಪಲೆ ಸಾಧ್ಯವೇ ಇಲ್ಲೆ – ಹೇಳಿತ್ತು ಕೃಷ್ಣಪ್ಪು. ಪ್ರತಿ ಮಾತಿಂಗೂ ಅದರ ಧ್ವನಿ ಸಾಂದ್ರ ಆಗಿಂಡೇ ಹೋತು.

ಹ್ಹೆ, ಹಾಂಗೆ ಗ್ರೇಶುಲಾಗ. ದಿನ ಒಳ್ಳೆದಾಗಿಂಡೇ ಹೋಪದಲ್ಲದೋ – ಧೈರ್ಯಲ್ಲಿ ಮುಂದೆ ಹೋದರಾತು – ಹೇಯಿದ.

~

ಅಷ್ಟಪ್ಪಗ ಕೃಷ್ಣಪ್ಪು ಹೇಳಿತ್ತು – “ಇಲ್ಲೆ, ಎನ್ನ ಮಗ ತೀರಿಗೊಂಡತ್ತು. ಇಂದಿಂಗೆ ೪೮ ದಿನ ಹಿಂದೆ” – ಹೇದು
ಮುಂದೆ ಐದು ನಿಮಿಷ ಮೌನ. ಅಂಬಗಂಬಗ ಗೇರು ಬದಲುಸುವಾಗ ಕೈ ಕಣ್ಣಕರೆಂಗೆ ಹೋಗಿಂಡು ಇದ್ದತ್ತು.
ದೊಡ್ಡ ಕೂಲಿಂಗು ಗ್ಲಾಸು ಇದ್ದತ್ತು ಈ ಸರ್ತಿ, ಅದೇ ಉದ್ದೇಶಕ್ಕೆಯೋ ಏನೋ!
ಎಂಗೊಗೆ ಎಲ್ಲೋರಿಂಗೂ ಹೆದರಿ ಒಂದರಿಯೇ ನಡುಗಿತ್ತು ಅದು ಹೇಳುಸ್ಸು ಕೇಳುವಾಗ; ಆಶ್ಚರ್ಯ ಸಹಿತ ಕರುಣೆಯೂ ಬಂತು. ಪಾಪ!
ಸರಿಯಾಗಿ ಲೆಕ್ಕ ಹಾಕಿರೆ ಜೆನವರಿ ಒಂದನೇ ತಾರೀಕು! ೨೦೧೬ ಆರಂಭ ಆದ ದಿನವೇ, ಅಯ್ಯೋ! ಅನುಸಿತ್ತು ಎಂಗೊಗೆ ಎಲ್ಲೋರಿಂಗೂ.

ಸುಮಾರು ಐದು ಹತ್ತು ನಿಮಿಷ ಆರಿಂಗೂ ಮಾತೇ ಹೆರಡ. ಸುಮ್ಮನೆ ಕಾರು ಮುಂದುಎ ಹೋಗಿಂಡು ಇದ್ದತ್ತು ಅಷ್ಟೇ. ಅದೂ ನಿಧಾನಕ್ಕೆ.
ದಾಯ್ತ ಆಯಿನೆ – ಕೇಳಿದವು ಮಾವ, ಸುಮಾರು ಹೊತ್ತು ಕಳುದ ಮತ್ತೆ.
ಎಕ್ಸಿಡೆಂಟು – ಹೇಳಿತ್ತು, ಪುನಾ ಸುಮ್ಮನಾತು.

~

ಎನ್ನ ತುಂಬ ಇಷ್ಟಪಟ್ಟಿತ್ತು ಆ ಮಗ. ಎನಗೆ ಬೇಕಾದ್ದೆಲ್ಲ ಮಾಡಿಗೊಂಡು ಇತ್ತು. ಎನ್ನ ದಾರಿಲೇ ಅದು ನೆಡೇಕು ಹೇದು ಈ ಸರ್ತಿ ಶಬರಿಮಲೆ ಗೆ ಅದನ್ನೂ ಕರಕ್ಕೊಂಡು ಹೋಪಲೆ ಏರ್ಪಾಡೂ ಮಾಡಿತ್ತಿದ್ದೆ. ಇರುಮುಡಿ ಕಟ್ಟುವ ಕ್ರಮದ ಮುನ್ನಾಣ ದಿನ – ಒಂದು ಬಾಡಿಗೆ ಬಂತು. ದಶಂಬ್ರ ಮೂವತ್ತೊಂದಕ್ಕೆ.
ಇರುಳು ಒರಕ್ಕು ಕೆಡ್ತ ಕೆಲಸ ಹೇದು ಮಗನ ಕಳುಸಿದೆ. ಹೊಸ ಒರಿಶದ ಪಾರ್ಟಿ ಮಾಡ್ತ ನಾಕು ಜೆನ ಆಣುಗೊ ಒಂದು ಕಾರಿಲಿ ಹೋಗಿಂಡಿದ್ದವು ಅವರ ಆಯ ತಪ್ಪಿ ಎನ್ನ ಮಗನ ಕಾರಿಂಗೆ ಹೆಟ್ಟಿತ್ತು. ದೇವರು ಮಗನ ತೆಕ್ಕೊಂಡು ಹೋದವು. ಒಳ್ಳೆ ಜೆನಂಗಳ ದೇವರು ಎಂತಕೆ ಬೇಗ ಕರಕ್ಕೋಳ್ತ? – ಕೇಳಿತ್ತು ಮಾವನತ್ರೆ.

ಎಂಗೊ ಎಲ್ಲೋರಿಂಗೂ ಕಣ್ಣುಕಸ್ತಲೆ ಬಂದ ಹಾಂಗಾತು.

ಈ ಸರ್ತಿ ಶಬರಿಮಲೆ ಗೆ ಮಗನ ಕರಕ್ಕೊಂಡು ಹೋಗಿ ಬಂದ ಮತ್ತೆ ಬಪ್ಪೊರಿಶಂದ ಇಡೀ ಸಂಸಾರದ ಉಸ್ತುವಾರಿ ಮಗಂಗೆ ಕೊಟ್ಟು ತಾನು ವಿಶ್ರಾಂತ ಜೀವನ ಮಾಡುಸ್ಸು – ಹೇದು ಆಲೋಚನೆ ಮಾಡಿತ್ತಾಡ ಕೃಷ್ಣಪ್ಪು. ಆ ಪ್ರಕಾರ ಎಲ್ಲ ಸಿದ್ಧತೆ ಮಾಡಿದ್ದತ್ತು. ಕಲಿಯಲೆ ಉಶಾರು ಸಾಲದ್ದ ಮಗಂಗೆ ಹೊಸ ಕಾರು ತೆಗಶಿ ಕೊಟ್ಟು, ಮೆಲ್ಲಂಗೆ ಹೋಪಲೆ ಅಂಬಗಂಬಗ ಬುದ್ಧಿವಾದ ಹೇಳಿಗೊಂಡು, ತಾನು ಬಾಡಿಗೆಗೆ ಹೋಪ ಮಾಮೂಲಿನವರ ಹತ್ತರೆ ಪದೇಪದೇ – ಇನ್ನು ಎನ್ನ ಮಗ, ಇನ್ನು ಎನ್ನ ಮಗ – ಹೇಳಿಗೊಂಡು, ತನಗೆ ಎಡಿಗಾಷ್ಟು ಪ್ರಚಾರ, ಪ್ರಸಾರ ಕೊಟ್ಟು..
ಒರಗುಲೆ ಹೋದೋನಿಂಗೆ ಪುನಾ ಕೆಲಸ ಬಂದ ಹಾಂಗಾತು. ವಿಶ್ರಾಂತಿಗೆ ಹೋಪಗ ಪುನಾ ಕೆಲಸ ಮಾಡೆಕ್ಕಾಗಿ!
ಕೃಷ್ಣಪ್ಪುವ ದಯನೀಯ ಸ್ಥಿತಿ ಕಂಡರೆ ಆರಿಂಗಾರೂ ಬೇಜಾರಕ್ಕು. ಪುತ್ರಷೋಕಂ ನಿರಂತರಂ – ಇದೇ ಬೇಜಾರಲ್ಲಿ ಅದು ಈಗ ಇಪ್ಪ ಹಾಂಗೆ ಆದ್ಸು ಹೇದು ಒಪ್ಪಣ್ಣಂಗೆ ಅರಡಿಗಾತು.
2016 ಮಾಂತ್ರ ಅಲ್ಲ, ಇನ್ನು ಎಷ್ಟು ಸಮಯ ಕೃಷ್ಣಪ್ಪು ಇರ್ತೋ – ಅಷ್ಟೂ ಸಮಯ ಅದಕ್ಕೆ ನೆಮ್ಮದಿ ಇರ! ಛೇ!!

~

ಪಾಪ!
ವಿಧಿ ಎಷ್ಟು ಕ್ರೂರ ಒಂದೊಂದರಿ.
ನಾವು ಗ್ರೇಶಿದ ಹಾಂಗೆ ಯೇವದೂ ನೆಡೆತ್ತಿಲ್ಲೆ. ಹಾಂಗಾಗಿ, ನಾವು ಜಾಗ್ರತೆ ಇರೆಕ್ಕು.
ಮಾರ್ಗ ನಮ್ಮದಲ್ಲ – ಸರ್ಕಾರದ್ದು,
ಕಾರುದೇ ನಮ್ಮದಲ್ಲ – ಕಂಪೆನಿದು,
ಸಮಯ ನಿಘಂಟು ಮಾಡುಸ್ಸು ನಾವಲ್ಲ – ದೇವರು.
ಮತ್ತೆ ನಮ್ಮದೇವದು? ಜೀವ!
ಜೀವ ಒಂದು ನಮ್ಮದು ಅಪ್ಪೋ ಅಲ್ದೋ
ಅದರ ಒಳಿಶೇಕು.

ಹಾಂಗಾಗಿ, ಮಾರ್ಗ-ವಾಹನ-ಸಮಯ ಎಲ್ಲವನ್ನೂ ಗಮನುಸಿಗೊಂಡು ಜಾಗ್ರತೆಲಿ ಹೋಯೇಕು – ಹೇದು ಪುತ್ತೂರು ಬಾವಂಗೆ ಅವರ ಅಪ್ಪ ದೇವಸ್ಥಾನಲ್ಲಿ ನೆಡಕ್ಕೊಂಡು ಹೋಪಗ ಬುದ್ಧಿವಾದ ಹೇಳುಸ್ಸು ಒಪ್ಪಣ್ಣಂಗೆ ಕೇಳಿತ್ತು.

~

ಅದಾಗಿ ಊರಿಂಗೆ ಬಂದಪ್ಪಗ ಸುಳ್ಯದ ಮಾಷ್ಟ್ರ ಸಂಗತಿ ಗೊಂತಾತು. ಅವುದೇ ಅವಗಢಲ್ಲಿ ತೀರಿಗೊಂಡದು! ಅದಾಗಿ ಕುಂಬ್ಳೆಲಿ ಒಂದು ಕಾರು. ಅದರ ಬೆನ್ನಿಂಗೇ ಮೈಸೂರು ಮಾರ್ಗಲ್ಲಿ ಇನ್ನೊಂದು.

ಎಷ್ಟು ವಾಹನ ಅವಗಢ. ರಜ್ಜ ಜಾಗ್ರತೆ ಇದ್ದರೆ ಇದರ ತಡವಲೆ ಎಡಿಯದೋ? ತಪ್ಪು ಬೈಕ್ಕಿಂದು ಆಗಿಕ್ಕು ಅಥವಾ ಲೋರಿದು ಆಗಿಕ್ಕು. ವಾಹನ ಆರದ್ದೂ ಅಲ್ಲ – ಆದರೆ ಜೀವ ನಮ್ಮದೇ ಅಲ್ದೋ? ಮಾರ್ಗಲ್ಲಿ ಗಡಿಬಿಡಿ ಮಾಡಿಗೊಂಡು ಕ್ರ್‍ಇಷ್ಣಪ್ಪುವ ಸಂದರ್ಭ ಆರಿಂಗೂ ಬಪ್ಪದು ಬೇಡ. ವೃದ್ಧಾಪ್ಯದ ಅಪ್ಪಮ್ಮನೂ, ಮನೆಲಿಪ್ಪ ಸಂಸಾರವನ್ನೂ ನೆಂಪುಮಾಡಿಗೊಂಡು ಮಾರ್ಗಲ್ಲಿ ಎಚ್ಚರಲ್ಲಿ ಹೋಯೇಕು. ಅವಗಢಂಗಳ ತಪ್ಪುಸೇಕು – ಹೇದು ಒಪ್ಪಣ್ಣಂಗೆ ತುಂಬ ತಲೆಲಿ ತಿರುಗಿಂಡು ಇದ್ದತ್ತು.

ಪುತ್ತೂರು ಬಾವಂಗೂ ಮಾವಂಗೂ ಇದ್ದ ಅಭಿಪ್ರಾಯ ವಿತ್ಯಾಸ ಕೃಷ್ಣಪ್ಪುವಿಂಗೂ ಅದರ ಮಗಂಗೂ ಇದ್ದಿಕ್ಕು! 
ಕೃಷ್ಣಪ್ಪು ನಿಧಾನಕ್ಕೇ ಓಡುಸುದು ಆಗಿಕ್ಕು, ಆದರೆ ಇನ್ನೂ ಓಡುಸುತ್ತಾನೇ ಇದ್ದು.

ಒಂದೊಪ್ಪ: ಅಪಘಾತಲ್ಲಿ ತಪ್ಪಿಲ್ಲದ್ದೆ ತೀರುವವರದ್ದೇ ಹೆಚ್ಚು ಸಂಖ್ಯೆ. ಆರದ್ದೋ ತಪ್ಪಿಂಗೆ ಆರೋ ಜೀವ ಕೊಡುಸ್ಸು!

7 thoughts on “ಮಾರ್ಗ ನಮ್ಮದಲ್ಲ, ವಾಹನ ನಮ್ಮದಲ್ಲ, ಸಮಯ ನಮ್ಮದಲ್ಲ, ಆದರೆ…

  1. (ಜೀವ ಒಂದು ನಮ್ಮದು ಅಪ್ಪೋ ಅಲ್ದೋ)
    ಅಲ್ಲ …. ಜೀವವೂ ನಮ್ಮದಲ್ಲ… ಎಲ್ಲವೂ ಈ ಪ್ರಕೃತಿಗೆ ಸೇರಿದ್ದು… ನಮ್ಮದು ಹೇಳಿ ಎಂತದು ಇಲ್ಲೇ.

  2. ಅಪ್ಪು. ಕೆಲವೊಂದರಿ ಆರಾರ ತಪ್ಪಿಂಗೆ ಆರದ್ದೊ ಪಾಪದವರ ಜೀವ ಹೋವ್ತ ಹಾಂಗಾವ್ತು. ಅತಿ ವೇಗಲ್ಲಿ ವಾಹನಲ್ಲಿ ಹೋಪವರ, ಮಾರ್ಗದ ನಿಯಮಂಗಳ ಪಾಲುಸದ್ದವರ ಕಣ್ಣು ತೆರಸಲಿ ಈ ಶುದ್ದಿ. ಕೃಷ್ಣಪ್ಪುವ ಶುದ್ದಿ ಓದಿ ಕಣ್ತುಂಬಿ ಬಂತು.

  3. ಕಣ್ತುಂಬಿ ಬಂತು ಶುದ್ದಿ ಓದಿ. ಎಂತರ ಹೇಳ್ಸಿನ್ನು. ಹರೇ ರಾಮ

  4. ತುಂಬ ಮನನೀಯವಾದ ಲೇಖನ. ಮಾರ್ಗ ಸರಿ ಇದ್ದರೂ ಇಲ್ಲದ್ದರೂ ಅವಘಡ ತಪ್ಪಿದ್ದಿಲ್ಲೇ . ಇದೇಕೆ ಹೀಂಗೆ? ಚಾಲಕರ ಅನಾಸ್ಥೆ, ಅತ್ಯಾತುರ, ಮಾರ್ಗದ ದುರವಸ್ಥೆ ಇದರಿಂದಾಗಿ ಅವಘಡ ಅಪ್ಪದು.

  5. sakaalika, ಮೋದಿ ಅಜ್ಜ ಸ್ವಚ್ಹ ಭಾರತದ ಹಾಂಗೆ ಈ ಬಗ್ಗೆಯೂ ಒಂದು ಆ೦ದೋಲನ ಶುರು ಮಾಡಲಿ , ವಾಹನ ಅವಘದಹ೦ಗೊ kami aagali.

  6. ಮನಸ್ಸು ತಟ್ಟೆಕ್ಕಾದ ಲೇಖನ…..

    ಕೆಸರಿಲಿ ಬೆಳದರು
    ಹಸೆಮಣೆಗೋಕು
    ಕುಸುಮದ ಜೀವನದೆಸಳುಗಳು |
    ಹೊಸಕದೆ ಮಡುಗಿರು
    ಮಸಣದ ಯಾತ್ರೆಗು
    ಹೆಸರಿಲಿಯೇನಿರ ಹಣೆಬರಹ ॥

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×