Oppanna.com

ಆಟಿಲಿ ಅಸಕ್ಕಪ್ಪಗ ಅಟ್ಟಲ್ಲಿಪ್ಪ ಪುಳಿಂಕೊಟೆ . .

ಬರದೋರು :   ಒಪ್ಪಣ್ಣ    on   20/07/2012    16 ಒಪ್ಪಂಗೊ

ಆಡಿ ಆಡಿ ಆಟಿ ಬಂತು.
ಈಗಂತೂ ಮಳೆಗಾಲದ ಮಳೆ; ಒಂದು ಜಾತಿ ಮಳೆ.
ಆಟಿಲಿ ಮಳೆ ಬಿಟ್ರೆ ಬೇರೆಂತೂ ವಿಶೇಷವೇ ಇಲ್ಲೆಯೋ – ಕಾಂಬ ಹಾಂಗೆ.
ಹೇಂಗೂ ಹೊಸ ಜೆಂಬ್ರಂಗೊ, ಗೌಜಿಗೊ ಆಟಿಲಿ ಇಲ್ಲೆ; ಹಳೆ ಜೆಂಬ್ರಂಗೊ ಕಳುದ್ದರ ಸಮ್ಮಾನಂಗೊ ಮಾಂತ್ರ ಇಕ್ಕಷ್ಟೆ.

ಆಟಿ ಅಮಾವಾಸ್ಯೆ ಹೇದರೆ ಸಾಕು, ಮದುವೆ ಆದ ಎಲ್ಲಾ ಮದುಮ್ಮಾಯಂದ್ರಿಂಗೆ ಬೆರಳು ತೊರುಸಲೆ ಸುರು ಆವುತ್ತಾಡ ಚೆನ್ನೈಭಾವ° ನೆಗೆಮಾಡುಗು. ಅಪ್ಪೋ?
ಉಮ್ಮಪ್ಪ; ಒಪ್ಪಣ್ಣಂಗರಡಿಯ.
– ಮೊನ್ನೆ ಮೊನ್ನೆ ಮದುವೆ ಆದ ಚುಬ್ಬಣ್ಣನೋ, ಬಂಡಾಡಿಪುಳ್ಳಿಯೋ, ಗಣೇಶಮಾವನೋ, ಆಚಮನೆ ಪುಟ್ಟಣ್ಣನೋ – ಆರಾರು ಹೇಳೇಕು! 🙂

~
ಶಂಬಜ್ಜನ ತಿತಿ ಕಳಾತಲ್ಲದೋ ಓ ಮೊನ್ನೆ; ತರವಾಡುಮನೆಲಿ – ಹಾಂಗೆ ಬೈಲಿನ ಹತ್ತರಾಣ ನೆರೆಕರೆ ಒಂದಾರಿ ಸೇರಿದ್ದತ್ತು.
ಹೆಗಲಚೀಲ ತಂದ ಬಟ್ಟಮಾವಂಗೆ ಈ ಸರ್ತಿ ಚೀಲ ತುಂಬಿದ್ದಕ್ಕೆ ನೆಗ್ಗಲೆ ಬಂಙ ಆಗಿ ಮತ್ತೆ ಚೆನ್ನೈಭಾವ° ಬೈಕ್ಕಿಲಿ ಬಿಟ್ಟದಾಡ.
ಶಂಬಜ್ಜ° ಧಾರಾಳಿಯೇ ಆಗಿತ್ತವು; ಹಾಂಗೇ ಅವರ ತಿತಿಗೆ ರಂಗಮಾವನೂ ಏನೂ ಕಮ್ಮಿ ಮಾಡ್ತವಿಲ್ಲೆ!
ತಿತಿ ಮುಗಿವಾಗ ಹೇಂಗೂ ತಡವಾವುತ್ತು; ಈ ಒರಿಶವೂ ತಡವಾಗಿತ್ತು.
ಹಾಂಗೆ, ಪಂಜಕ್ಕೆ ಎತ್ತಿಗೊಂಬಲೆ ಎಡಿಯ ಹೇದು ಮಾಲಚಿಕ್ಕಮ್ಮ ಆ ದಿನ ನಿಂದತ್ತು.
ಮಾತಾಡ್ಳೆ ಸಂಗಾತಕ್ಕೂ ಆತು ಹೇಳಿಗೊಂಡು ಮದಲೇ ಒತ್ತಾಯ ಮಾಡಿಗೊಂಡಿದ್ದ ಪಾತಿಅತ್ತೆಗೂ ಕೊಶಿ ಆತು.

~

ಪಾತಿಅತ್ತೆ ಉಂಡ್ಳಕಾಳು ಮಾಡಿರೆ ಎಲ್ಲೋರಿಂಗೂ ಸಿಕ್ಕುಗು

ತಿತಿಯ ಮಜ್ಜಾನಕ್ಕೆ ಹೋಪಲೆ ನವಗೆ ಆತಿಲ್ಲೆ; ತೋಟಕ್ಕೆ ಮದ್ದು ಬಿಡ್ಳೆ ಆನಂದ ಬಂದಿದ್ದತ್ತು.
ಸುಂದರ ಬರ್ಪೆ ಬರ್ಪೆ ಹೇಳಿದ್ದೇ ಸರಿ, ಬೆಳಿಕ್ಕಿರಿ ಬಂದು ಮಳೆ ಬಪ್ಪಲೆ ಸುರು ಆತು, ಬಯಿಂದೇ ಇಲ್ಲೆ – ಕೈಕೊಟ್ಟತ್ತು.
ಇನ್ನು ಕಾದರಾಗ ಹೇದು ಆನಂದನ ಬಪ್ಪಲೆ ಮಾಡಿದ್ದು. ಆನಂದ ಬಂದದು ತಿತಿದಿನವೇ ಬಂದು ಎತ್ತಿತ್ತು.
ತರವಾಡುಮನೆಲಿ ‘ತಿತಿ ಉಂಡು’ ಹೇದರೆ ಆನಂದ ಕೇಳುಗೊ?
ಮರ ಹತ್ತಿತ್ತು, ಮದ್ದು ಬಿಟ್ಟತ್ತು. ‘ಆನಂದ ಬಂತು; ಆನಂದ ತಂತು’ – ಹೇದು ದೊಡ್ಡಜ್ಜ° ನೆಗೆಮಾಡ್ಳಿದ್ದು ಒಂದೊಂದರಿ.
ಅದಿರಳಿ.

ಅಂತೂ – ನಾವು ತಿತಿ ದಿನ ಹೊತ್ತೋಪಗ ತರವಾಡುಮನೆಗೆ ಎತ್ತಿತ್ತು.
ಇರುಳಿಂಗೆ ಮನೆಯೋರು ಮಾಂತ್ರವೇ; ಆದರೆ ಮಾಲಚಿಕ್ಕಮ್ಮ ಇದ್ದಿದ್ದವು.

~

ಮಾಲಚಿಕ್ಕಮ್ಮಂದೇ ಪಾತಿಅತ್ತೆಯುದೇ – ಇಬ್ರುದೇ ಮಾತಿಲಿ ಬಲವೇ.
ಮಾತಿಲಿ ಬಲ – ಹೇದರೆ ರೂಪತ್ತೆಯ ಹಾಂಗೋ ಗ್ರೇಶಿಕ್ಕೆಡಿ.
ರೂಪತ್ತೆ ಮಾತಾಡುದು ಹತ್ತೇ ಶೆಬ್ದ ಆದರೂ, ದೊಡ್ಡಸ್ತಿಕೆ ಪೂರ ಕಾಣ್ತ ಹಾಂಗೆ ವೆವಸ್ತೆ ಮಾಡಿಗೊಳ್ತು.
ಆದರೆ, ಪಾತಿಅತ್ತೆ ಎಷ್ಟೂ ಹೊತ್ತು ಮಾತಾಡಿರೂ ಆರಿಂಗೂ ಬೇನೆ ಆಗ; ರಜವೂ ದೊಡ್ಡಸ್ತಿಕೆ ಕಾಣ.
ಮಾಲ ಚಿಕ್ಕಮ್ಮಂದೇ ಅದೇ ನಮುನೆದು ಆದ ಕಾರಣ ಪಾತಿ ಅತ್ತೆಗೆ ಒಳ್ಳೆ ಸಂಗಾತ. 🙂

ತಿತಿ ದಿನ ಇರುಳಾಣ ಊಟಕ್ಕೆ ನಾವು ಹೋದ ಕಾರಣ ಇವರ ಮಾತುಗಾರಿಕೆ ಸಮಕ್ಕೆ ನವಗೆ ತಿಳಿವಲಾತು.
ತಿತಿಗೆ ಜೆನ ಎಷ್ಟು, ಪರಾಧಿನಕ್ಕೆ ಆರೆಲ್ಲ – ಇತ್ಯಾದಿ ಸುಕದುಕ್ಕ ಮಾತಾಡಿಕ್ಕಿ ಊಟ ಸುರು.
ಕೇಬೇಜು, ಬೀನುಸು, ಕುಂಬ್ಳೋಡು ತಾಳಿಂದ ತೊಡಗಿ ಹಸರ ಪಾಚದ ಒರೆಂಗೆ, ಮೊಸರು ಮಜ್ಜಿಗೆಯ ಒರೆಂಗುದೇ ಊಟವೇ ಊಟ. ಮಜ್ಜಾನದ ಊಟ ಆದ ಕಾರಣ ಒಲೆಂದ ಇಳುಗಿದ ಬೆಶಿ ಇದ್ದತ್ತಿಲ್ಲೆ; ಹದಾಬೆಶಿ, ಊಪಿ ತಣಿಶೇಕಾದ ಅಗತ್ಯವೂ ಇದ್ದತ್ತಿಲ್ಲೆ. ಎಲ್ಲೋರುದೇ ಕೂದು ಊಟ ಆತು.

ಉಂಡಾಗಿ ಹೆರಡೆಕ್ಕು ಗ್ರೇಶುವಗ – ಮಾಲಚಿಕ್ಕಮ್ಮ ಪಾತಿಅತ್ತೆಯ ಸಂಭಾಶಣೆ ಸುರು ಆತು.
ತೀರಾ ಹೆಮ್ಮಕ್ಕಳ ಮಾತುಕತೆ ಅಲ್ಲದ್ದೆ, ರಜ ಆಸಕ್ತಿ ವಿಶಯಂಗೊ ಬಂದ ಕಾರಣ ಬೈಲಿಂಗೊಂದು ಶುದ್ದಿ ಅಕ್ಕೋದು ಕೆಮಿಕೊಟ್ಟು ಕೇಳಿಂಡು ಕೂದತ್ತು ನಾವುದೇ.
ಅಂತೇ ಕೆಮಿಕೊಟ್ಟು ಕೂಯಿದಿಲ್ಲೆ, ಅಡಕ್ಕೋಳು ಬಾಯಿಗೆ ಹಾಕಿ ಅಗುಕ್ಕೊಂಡು ಕೂಯಿದು! 🙂
ಒಂದು ಅಡಕ್ಕೋಳು ಮುಗುದಪ್ಪಗ ಮಾತುಕತೆಯೂ ಮುಗುತ್ತು. ಬೈಲಿಂಗೆ ಒಂದು ಶುದ್ದಿಗೆ ಆಹಾರವೂ ಆತು.
ನಾವು ಮೆಲ್ಲಂಗೆ ಮನೆ ಹೊಡೆಂಗೆ ಹೆರಟತ್ತು.

ಅಂಬಗ ಅವು ಮಾತಾಡಿಗೊಂಡ ಶುದ್ದಿ ಎಂತರ?
ಪೂರ್ತಿ ಹೇದರೆ ಬೈಲಿನೋರಿಂಗೆ ಶುದ್ದಿ ಕೇಳಲೆ ಒಂದು ವಾರ ಬೇಕಕ್ಕು. ಹಾಂಗಾಗಿ ಅವು ಮಾತಾಡಿಗೊಂಡ ಶುದ್ದಿಯ ಮುಖ್ಯಪಟ್ಟದರ ಮಾಂತ್ರ ಹೇಳಿಗೊಂಡು ಹೋವುತ್ತೆ. ಆಗದೋ?
~

ಬಂಧಂಗೊ ಇಪ್ಪ ಮಾನವೀಯತೆಲಿ ಅಸಕ್ಕವುದೇ ಇರ್ತು, ಇದ್ದೇ ಇರ್ತು.
ಬರೋನೆ ಮಳೆ ಬಂದರೆ ಏಕತಾನತೆಂದಾಗಿ ಅಸಕ್ಕ ಅಪ್ಪದು ಜಾಸ್ತಿ!
ಮನೆ ಬಿಟ್ಟು ದೂರ ಮೆಸ್ಸಶನ ಉಣ್ತ ಮಾಣಿಗೆ ಅಮ್ಮನ ನೆಂಪಪ್ಪಲೆ ಮಳೆಯ ಶೆಬ್ದವೇ ಕಾರಣ.
ಹೋಷ್ಟೆಲಿನೋರ ಕತೆ ಬಿಡಿ; ಮನೆಲೇ ಇಪ್ಪೋರಿಂಗುದೇ – ಬೇರೆಂತೂ ಕೆಲಸ ಮಾಡ್ಳೆಡಿತ್ತಿಲ್ಲೆ.
ಬೇಸಾಯದ ಕಾರ್ಯ, ಅಡಕ್ಕೆ ಬಿಡ್ತ ಕಾರ್ಯ, ಜೆಂಬ್ರದ ಕಾರ್ಯ ಎಡೆಡೆಲಿ ಇದ್ದರೂ –ಪುರುಸೋತಿಲೇ ಸಮಯ ಕಳೆತ್ತು. ಅಲ್ಲದೋ?
ಅಷ್ಟಪ್ಪಗ ತಲಗೆಂತ ಕೆಲಸ? ನಿದ್ರಯಾ ಕಲಹೇನವಾ – ಹೇದು ಅಪ್ಪಲಾಗ;
ಏನಾರು ಆಲೋಚನೆ ಮಾಡುದು; ನೆಂಪು ಮಾಡುದು, ಹಳತ್ತರ ಗ್ರೇಶುದು, ಬೇಜಾರು ಮಾಡುದು, ಉದಾಸಿನ ಮಾಡುದು, ಅಸಕ್ಕು ಮಾಡಿಗೊಂಬದು. ಅಲ್ಲದೋ?
ಅದಕ್ಕೆಯೋ ಏನೋ – ಆಟಿ ಮಳೆಗಾಲಲ್ಲಿ ಹೊಸ ಮದುಮ್ಮಾಳಿಂಗೆ ಅಪ್ಪನಮನೆ ನೆಂಪು ಬರುಸಿ, ಕರಕ್ಕೊಂಡು ಬಂದು ಸಮ್ಮಾನ ಮಾಡುಸುದು. ಹಾಂಗೇ ಸುರು ಆದ್ದದಾಯಿಕ್ಕು ಒಂದು  ಕಾಲಲ್ಲಿ.
ಉಮ್ಮಪ್ಪ! ಅದಿರಳಿ.

~
ಸಾಮಾನ್ಯವಾಗಿ ಮನಸ್ಸಿಂಗೆ ಅಸಕ್ಕಪ್ಪಗ ಹೊತ್ತು ಕಳವಲೆ ಎಂತಾರು ಕಾರ್ಯಂಗೊ ಮಾಡ್ತವು.
ಶಂಬಜ್ಜ° ಚೇರೆಮರದ ಬೀಣೆ ತಂದು ಮಡಗಿದ್ದರಲ್ಲಿ ಎಶಿಮುಚ್ಚಲು, ಅಡಕ್ಕೆ ಮರದ ಸಲಕ್ಕೆಲಿ ದಾಣೆ – ಹೀಂಗೆಂತಾರು ಮಾಡಿಗೊಂಡಿತ್ತವು. ಆದರೆ, ಕಾಂಬುಅಜ್ಜಿಗೆ ಇದೆಲ್ಲ ಎಡಿಗೋ?!
ಕಾಂಬುಅಜ್ಜಿಯ ಕೈಗುಣ ಅಡಿಗೆಲಿ ತೋರ್ಸುಗು! ನಮುನೆ ನಮುನೆ ತಿಂಡಿಗೊ, ಮುರ್ಕುಗೊ, ಹೊತ್ತೋಪಲೆ ತಿಂಬಂತ ತಿಂಡಿಗೊ – ಎಲ್ಲವುದೇ ಬಂದುಗೊಂಡಿತ್ತು. ಆಟಿ ತಿಂಗಳಿಲೇ ಸುರು ಅಕ್ಕು ಈ ಕಾರ್ಯಂಗೊ.
ಅಂಬಗ ’ಅಸಕ್ಕಪ್ಪಗ ತಿಂಬಲೆ’ ಎಂತೆಲ್ಲ ತಿಂಡಿಗಳ ಮಾಡುಗು? ಮತ್ತೆಂತರ – ಶಾಂತಾಣಿ, ಪುಳಿಂಕೊಟ್ಟೆ, ಉಂಡ್ಳಕಾಳು, ಬೇಳೆ ಸುಟ್ಟಾಕುದು – ಹೀಂಗೇ ಏನಾರು.
ಮೊನ್ನೆ ಮಾಲಚಿಕ್ಕಮ್ಮನೂ, ಪಾತಿಅತ್ತೆಯೂ ಕೂದು ಮಾತಾಡಿಗೊಂಡಿದ್ದದು ಇದೇ ಶುದ್ದಿಗಳ.

~

ಕಳುದ ಛಳಿಗಾಲಲ್ಲಿ ಹೆರ್ಕಿ ತಂದ ಹುಳಿಯ ಬೇಸಗೆಲಿ ಗುದ್ದಿ, ಬಿತ್ತು ತೆಗದು, ಮೆರುದು, ಉಪ್ಪಾಕಿ ಉಂಡೆಮಾಡಿ ಮಣ್ಣಳಗೆಲಿ ತುಂಬುಸಿ ಮಡಗ್ಗು. ಹೀಂಗೆ ಮಾಡುವಗ ಅದರ ಬಿತ್ತು ಸಿಕ್ಕುತ್ತಲ್ಲದೋ? – ಅದರ ಇಡ್ಕವು. ಜಾಗ್ರತೆಲಿ ತೆಗದು ಮಡಗ್ಗು.
ಎಂತಕೆ? “ಪುಳಿಂಕೊಟ್ಟೆ” ಮಾಡ್ಳೆ.
ಹುಳಿಬಿತ್ತಿನ ಪುಳಿಂಕೊಟ್ಟೆ ಮಾಡ್ಸು ಹೇಂಗೆ? ಬೋಚಬಾವಂಗೂ ಗೊಂತಿಕ್ಕು.
ಹದಾ ಕಿಚ್ಚಿಲಿ, ಬಾಣಲೆಲಿ ಹಾಕಿ ಹೊರುದರಾತು. ಎಷ್ಟು ಹೊತ್ತು? ಹದಾಕೆ, ಅದರ ಪರಿಮ್ಮಳ ಬಪ್ಪನ್ನಾರ. ಅಷ್ಟೇ.
ಪುಳಿಂಕೊಟ್ಟೆ ತೆಯಾರು. ಹೊರುದ ಹುಳಿಬಿತ್ತಿಂಗೆ ಪುಳಿಂಕೊಟ್ಟೆ ಹೇಳುಸ್ಸು, ಸ್ಥಳೀಯ ತುಳು / ಮಲೆಯಾಳದ ಪ್ರಭಾವ ಆಯಿಕ್ಕೋ ಏನೋ, ಪಾತಿಅತ್ತೆಗೂ ಅರಡಿಯ; ಮಾಲಚಿಕ್ಕಮ್ಮಂಗೂ ಅರಡಿಯ. ಒಪ್ಪಣ್ಣಂಗೂ.

~

ತರವಾಡುಮನೆಲಿ ಮದಲಿಂಗೇ ಹಲಸಿನಣ್ಣು ಧಾರಾಳ.
ಗೆದ್ದೆಯ ಕಟ್ಟಪುಣಿ ಕರೆಲಿ, ಸಾರಡಿ ತೋಡಕರೆಲಿ, ಗುಡ್ಡೆಲಿ, ತೋಟದ ತಲೆಲಿ – ತುಳುವ, ಬರಿಕ್ಕೆ, ಜೇನಬರಿಕ್ಕೆ – ಹಲವು ಜಾತಿಯ ಹಲಸುಗೊ ಇದ್ದತ್ತು. ಸೊಳೆ ಹೊರಿವದಕ್ಕೆ ಅಪ್ಪ ನಮುನೆಯ ತೆಳ್ಳಂಗೆ ಸೊಳೆಯ ತುಳುವನಿಂದ ತೊಡಗಿ, ಬೆಂದಿಗೆ ಲಾಯಿಕ ಅಪ್ಪ ದಪ್ಪ ಸೊಳೆಯ ಬರಿಕ್ಕೆಯ ಒರೆಂಗೆ- ಹಲವು ಜಾತಿಯ ಸಂಗ್ರಹ ಮಾಡಿ ನೆಡುಸಿದ್ದವು.

ಎಲ್ಲಾ ಸೊಳೆಯ ಎಂತದೇ ಮಾಡ್ಳಿ, ಅದರ ಬೇಳೆ ಮಾಂತ್ರ ಇಡ್ಕಿಕ್ಕವು ಕಾಂಬುಅಜ್ಜಿ. ಎಂತಗೆ?

ಬೇಳೆಗೆ ಉಪ್ಪು, ನೀರು ಹಾಕಿ ಅಟ್ಟಿನಳಗೆಲಿ ಲಾಯಿಕ ಬೇಶಿಕ್ಕಿ, ಎರಡು ದಿನ ಒಣಗುಸಿರೆ ಶಾಂತಾಣಿ ಆತು. ಮಾಷ್ಟ್ರಮನೆ ಅತ್ತೆ ಸಣ್ಣ ಇಪ್ಪಾಗ ಪ್ರೀತಿಲಿ ಕಾಂಬುಅಜ್ಜಿ ಹಾಂಗೇ ದಿನಿಗೆಳಿಂಡಿದ್ದದಡ. ಶಾಂತಾಣಿ ಹೇದರೆ ಕಾಂಬು ಅಜ್ಜಿಗೆ ಅಷ್ಟೂ ಪ್ರೀತಿ! 🙂

ಒಂದರಿ ಬೇಶಿ ತಣಿಲಿಲಿ ಒಣಗುಸಿದ ಶಾಂತಾಣಿ ಮುಗಿವನ್ನಾರವೂ ತಿಂಗು! ಒಬ್ಬನೇ ತಿನ್ನವು, ಒಟ್ಟಿಂಗಿಪ್ಪ ಮಕ್ಕೊಗೆ ಎಲ್ಲೋರಿಂಗೂ ಕೊಟ್ಟೇ ತಿಂಗಷ್ಟೆ. 🙂

ಅಕೇರಿ ಅಕೇರಿಗೆ ಕಾಂಬುಅಜ್ಜಿಯ ಹಲ್ಲು ಪೂರ ಹೋಗಿ, ಎಂತದೂ ತಿಂಬಲೆಡಿಯ. ಅಂಬಗಳೂ ಶಾಂತಾಣಿಯ ಕೊದಿ ಬಿಟ್ಟಿದವಿಲ್ಲೆ.
ಬೇಶಿ ಒಣಗುಸಿದ ಎರಡ್ಣೇ ದಿನ ಹದಾ ಮೆಸ್ತಂಗೆ ಆಗಿ, ಕಾಂಬು ಅಜ್ಜಿಗೆ ಕೊಶೀ ಆಗಿಕ್ಕು.

~
ಬೇಳೆಯ ಬೇಶಿ, ಗುದ್ದಿ – ಹೊಡಿ ಮಾಡಿ ಬೆಲ್ಲ-ಕಾಯಿಸುಳಿ ಹಾಕಿದ ಉಂಡೆಯ ತಟ್ಟಿ ತೆಳ್ಳವಿನ ಹಿಟ್ಟಿಲಿ ಅದ್ದಿ ಕಾವಲಿಗೆಲಿ ಕಾಸುಗು.
ಅದಕ್ಕೇ ಬೇಳೆರೊಟ್ಟಿ ಹೇಳುಗು. ಚೀಪೆಚೀಪೆ ಇಪ್ಪ ಕಾರಣ ಮಕ್ಕೊ-ಪುಳ್ಯಕ್ಕೊಗೂ ರುಚಿ ಹಿಡುಶಿ, ಕೊದಿ ಬರುಶಿ ತಿನುಸುಗು.
ಒಂದು ಹೊತ್ತಪ್ಪಗಾಣ ಏರ್ಪಾಡಿಂಗೆ ಸಮ ಇದು. ಒಂದರಿ ಮಾಡಿರೆ ಆ ದಿನಕ್ಕೇ ಅದರ ರುಚಿ; ಅದೇ ದಿನ ಮುಗಿಯೇಕು.

~

ತೊಗರಿ ಬೆಳೆತ್ತ ಊರಿಲಿ ಬೇಳೆ ಹೇದರೆ ತೊಗರಿ ಬೇಳೆ. ಕಡ್ಳೆ ಬೆಳೆತ್ತ ಊರಿಲಿ ಬೇಳೆ ಹೇದರೆ ಕಡ್ಳೆ ಬೇಳೆ.
ನಮ್ಮ ಊರಿಲಿ ಬೇಳೆ ಹೇದರೆ ಹಲಸಿನ ಕಾಯಿ ಬೇಳೆ – ಪೆಲತ್ತರಿ.
ಹಾಂಗೆ, ಬೇಳೆ ಹಿಟ್ಟಿಂಗೆ ಚೀಪೆ ಸೇರುಸಿದ ಉಂಡೆಯ ಕಣಕದೊಳ ಮಡಗಿ ಲಟ್ಟುಸಿ ಬೇಶಿರೆ “ಬೇಳೆ ಹೋಳಿಗೆ” ತೆಯಾರು. ಕಾಂಬು ಅಜ್ಜಿ ಬೇಳೆಹೋಳಿಗೆ ಮಾಡ್ಳೆ ಕೂರ್ತ ’ಸು’ ಶುದ್ದಿ ಕೇಳಿರೆ ಶಂಬಜ್ಜ° ಒಲೆಬುಡಲ್ಲೇ ಕೂದುಗೊಂಗಡ; ಕಾಂಬುಅಜ್ಜಿ ನೆಗೆಮಾಡ್ಳಿತ್ತು ಕೆಲವು ಸರ್ತಿ!
ಒಂದು ಸರ್ತಿ ಹೋಳಿಗೆ ಮಾಡಿರೆ ಎರಡು ದಿನದ ’ಅಸಕ್ಕ’ ಅಪ್ಪದಕ್ಕೆ ಸಾಕು. ಆದರೂ, ಬೆಶಿ ಬೆಶಿ ಹೋಳಿಗ್ಗೆ ತುಪ್ಪ ಕೂಡಿ ತಿಂಬಲೇ ರುಚಿ. ಅಲ್ಲದೋ?
~

ಬೇಳೆಯ ಇಷ್ಟೆಲ್ಲ ಒಯಿವಾಟು ಮಾಡುವಷ್ಟು ಪುರ್ಸೊತ್ತಿಲ್ಲೆಯೋ? ಅದಕ್ಕೊಂದು ಉಪಾಯ ಇದ್ದು. ಎಂತರ?
ಸೌದಿ ಒಲೆಯ ಕೆಂಡಕ್ಕೆ ಹಾಕಿರೆ ನಾಕೂವರೆ ನಿಮಿಷಲ್ಲಿ ಟುಸ್-ಟುಸ್ ಶೆಬ್ದ ಕೇಳಿಂಡು “ಬೇಳೆ ಸುಟ್ಟಾಕಿದ್ದು” ತೆಯಾರಾತು.
ಅಬ್ಬಿಕೊಟ್ಟಗೆ (ಬೆಶಿನೀರ ಕೊಟ್ಟಗೆ)ಗೆ ಕಿಚ್ಚು ಹಾಕಿ, ಒಂದರಿಯಾಣ ಸೌದಿ ಹೊತ್ತಿದ ಮತ್ತೆ ಕೆಂಡ ಒಳಿತ್ತಿದಾ – ಪಾತಿಅತ್ತೆ ಒಂದೊಂದು ದಿನ ಹಾಕಲಿದ್ದು. ರಜ ಹೊತ್ತು ಕಳುದು ಒಲೆಂದ ತೆಗದ ಆ ಬೇಳೆಯ ರಜಾ ಗುದ್ದಿ, ಆ ಚೋಲಿ ತೆಗದು ಒಂದು ತಟ್ಟೆಲಿ ಹಾಕಿ ತಕ್ಕು. ಸರೀ ಸುಟ್ಟು ಸಿಕ್ಕಿದ ಬೇಳೆಯ ಪಷ್ಟು ಹೆರ್ಕುದೇ ಒಂದು ಜಗಳ ಮಕ್ಕೊಗೆ.

~

ಇದೇ ಒಲಗೆ ಒಂದೊಂದರಿ ಗೆಣಂಗುದೇ ಹಾಕುತ್ತ ಕ್ರಮ ಇದ್ದಾಡ.
ಗಬ್ಲಡ್ಕ ಹೊಡೆಲಿ ಇದರ ಹಾವಳಿ ರಜ ಜೋರಿದ್ದಾಡ.

~

ಓ ಆ ಕಟ್ಟಪುಣಿ ಕೊಡೀಲಿ ಹೊರಿವಲೆ ಲಾಯಿಕಪ್ಪ ಹಲಸಿನ ಮರ ಇದ್ದು ಹೇಳಿತ್ತಿದ್ದೆ ಅಲ್ಲದೋ?
ಆ ಮರದ ಕಾಯಿಯ ಕೊಯಿವಲೆ ರಂಗಮಾವಂಗೆ ಆರೂ ನೆಂಪು ಮಾಡೆಡ. ಎಂತಗೆ? “ಸೊಳೆ ಹೊರುದ್ದು” ಹೇದರೆ ರಂಗಮಾವಂಗೆ ಕೊದಿ! 🙂
ಹಾಂಗೆ, ಆ ತೆಳೂ ಸೊಳೆಯ ಲಾಯಿಕಕ್ಕೆ ಒಂದೇ ಸಪುರಕ್ಕೆ ಕೊರದು ಕೊಡ್ಳೆ ರಂಗಮಾವನೇ ಆಯೇಕು.
ಹಾಂಗೆ, ರಂಗಮಾವ° ಕೊರದು ಕೊಟ್ಟದರ ತೆಂಙಿನೆಣ್ಣೆಲಿ ಹೊರುದು “ಸೊಳೆಹೊರುದ್ದು” ಮಾಡಿ ಮಡಗ್ಗು ಕಾಂಬುಅಜ್ಜಿ.
ರಂಗಮಾವನೂ ಸೇರಿ, ಎಲ್ಲೋರುದೇ ತಿಂದು ಮುಗುಶುಗು. ಆ ಸಮೆಯಲ್ಲಿ ಹೋದರೆ ನವಗೂ ಸಿಕ್ಕುಗು.
ರಂಗಮಾವ ಈಗಳೂ ಕೊರದು ಕೊಡುಗು, ಹೊರಿಯಲೆ ಕಾಂಬುಅಜ್ಜಿ ಇಲ್ಲೆ, ಪಾತಿಅತ್ತೆ ಹೊರಿಗು. ಒಪ್ಪಣ್ಣಂಗೆ ಸಿಕ್ಕುಗು! 🙂

~
ಉಂಡ್ಳಕಾಳು ಹೇದರೆ ಆರಿಂಗೆ ಅರಡಿಯ?
ಇರ್ನೀರಾಯರ ಗುಳಿಗೆಂದ ರಜವೇ ದೊಡ್ಡ ದೊಡ್ಡ ಮಾತ್ರೆಗೊ! ಅಸಕ್ಕಪ್ಪದಕ್ಕೆ ಇಪ್ಪ ಮಾತ್ರೆ – ಹೇಳಿಯೇ ರಂಗಮಾವ° ಇದರ ನೆಗೆಮಾಡುದು. 🙂
ಉಪ್ಪಿಲಿ ಹಾಕಿ ಮಡಗಿದ ಸೊಳೆಯ ತೆಗದು, ಪರಿಷ್ಕರಿಸಿ, ಹಿಟ್ಟು ಮಾಡಿ, ಕುಂಞಿ ಕುಂಞಿ ಉಂಡೆ ಮಾಡಿಗೊಂಡು, ಎಣ್ಣೆಲಿ ಹೊರುದರೆ ಅದಕ್ಕೆ “ಉಂಡ್ಳ ಕಾಳು” ಹೇಳ್ತವು. ಕಾಂಬು ಅಜ್ಜಿ ಉಂಡ್ಳಕಾಳು ಮಾಡ್ತರೆ ಪ್ರತಿ ಕಾಳಿನ ಮಧ್ಯವೂ ಒಂದು ಕೊಬ್ಬರಿ ತುಂಡು ಮಡಗ್ಗು; ಆದರೆ ಪಾತಿ ಅತ್ತೆಗೆ ಅದು ಅಷ್ಟು ಇಷ್ಟ ಇಲ್ಲೆ.

~

ಉಂಡ್ಳಕಾಳು ಹೊರಿವಲೆ ಹೇಂಗೂ ಒಲೆಮೇಗೆ ಎಣ್ಣೆ ಮಡಗಿರೆ ನಾಕು ಹಪ್ಪಳವೂ ಹೊರಿಗು. ಹೊತ್ತೋಪಗಾಣ ಕಾಪಿಗೆ ಇದೊಂದು ಪೂರಣ! ಬೇಕಾರೆ ಎರಡು ಕಾಯಿಹೋಳುದೇ ಸೇರುಗು.
ಹಲಸಿನ ಕಾಯಿ ಹಪ್ಪಳವೋ, ಗೆಣಂಗಿನ ಹಪ್ಪಳವೋ, ಎಂತಾರು ಹಪ್ಪಳಂಗೊ ಮನೆಲಿ ಇಕ್ಕಿದಾ.

ಹಪ್ಪಳ ಸಾಲದ್ದರೆ ನಾಕು ಸೆಂಡಗೆಯೂ ಹೊರಿಗು.
ಸಾಬಕ್ಕಿ, ನೀರುಳ್ಳಿ ಇತ್ಯಾದಿಗಳಲ್ಲಿ ಸೆಂಡಗೆ ಮಾಡಿ ಕಟ್ಟಿ ಮಡಗಲೆ ಕಾಂಬುಅಜ್ಜಿಗೆ ಮರೆಯ ಅಡ.
ಪಾತಿಅತ್ತೆಯೂ, ಮಾಲಚಿಕ್ಕಮ್ಮನೂ ನೆಂಪುಮಾಡಿ ನೆಗೆಮಾಡಿಗೊಂಡವು.

ಊಟಕ್ಕಾತು ಹೇಳಿಗೊಂಡು ಬಾಳ್ಕು ಮೆಣಸು ಹೊರಿಗಿದಾ. ಮಜ್ಜಿಗೆ ಮೆಣಸು ಹೇಳಿಯೂ ಹೇಳ್ತವದರ. ಹಾಂಗಾಗಿ ಮಜ್ಜಿಗೆ ಆಗದ್ದೋರು ಒಂದರಿ ಉರಿಮುಸುಡು ಮಾಡಿ ನೋಡಿಂಗು.

~

ಹಪ್ಪಳ ಹೊರಿವದು ಗೊಂತಿದ್ದು. ಗೆಣಂಗು ಸುಟ್ಟಾಕುದೂ ಗೊಂತಿದ್ದು.
ಹಾಂಗೇ, ಹಪ್ಪಳ ಸುಟ್ಟಾಕುತ್ತವು, ಗೊಂತಿದ್ದೋ? ಶುಬತ್ತೆ ಮಗಳಿಂಗೆ ಗೊಂತಿರ; ಆದರೆ ತರವಾಡುಮನೆ ವಿನುವಿಂಗೆ ಗೊಂತಿದ್ದು.

ಹೆಜ್ಜೆ ಒಲೆಲಿರ್ತ ಕೆಂಡಲ್ಲಿ ಲಾಯಿಕಕ್ಕೆ ಹಪ್ಪಳವ ಮಡಗಿ, ಎರಡೂ ಹೊಡೆಂಗೆ ಕೆಂಡ ಚಾಂಟುಸಿ, ಅರೆಕಂದು, ಕರಿಕರಿ ಅಪ್ಪನ್ನಾರ ಸುಟ್ಟರೆ ಎಂತಾ ಪರಿಮ್ಮಳ! ಛೇ!!
~

ಹಾ! ಇನ್ನೊಂದು ಮರದತ್ತು.
ತರಕಾರಿ ಗೆದ್ದೆಲಿ ಕೆಂಬುಡೆ ಆಗಿರ್ತು ಅಲ್ಲದೋ, ಅದರ ಒಂದೊಂದೇ ಕೊರದು ಉಪಯೋಗ ಮಾಡುಗು ಅಟ್ಟುಂಬೊಳ.
ಪಾಯಿಸವೋ, ತಾಳೋ, ಕೊದಿಲೋ – ಹೀಂಗೆಂತಾರು.
ಆದರೆ, ಅದರ ಬಿತ್ತು ಎಂತ ಮಾಡುಗು? ಶುಬತ್ತೆ ಆದರೆ ತೆಗದ್ದು ಇಡ್ಕುಗು; ಕಾಂಬು ಅಜ್ಜಿ ಹಾಂಗೆ ಮಾಡವು.
ಮನಾರಕ್ಕೆ ಅದರ ಸೂಂಗು ಎಲ್ಲ ತೆಗದು, ತೊಳದು ಒಣಗುಸಿ ಮಡಗ್ಗಿದಾ.
ಆ ಒಣಕ್ಕು ಬಿತ್ತಿನ ತೆಗದು ಬಾಣಲೆಗೆ ಹೊರುದು, ರಜ ಉಪ್ಪುನೀರುದೇ ಕೊಟ್ರೆ – ಹೀಂಗೇ ಅಸಕ್ಕಪ್ಪಗ ತಿಂಬಲೆ ಪಷ್ಟಕ್ಕು.

~

ಮೊನ್ನೆ ಮಾಲಚಿಕ್ಕಮ್ಮನೂ, ಪಾತಿ ಅತ್ತೆಯೂ ಮಾತಾಡಿಗೊಂಡದು ಇದನ್ನೇ.
ಹಳೆಕಾಲಲ್ಲಿ ಕಾಂಬುಅಜ್ಜಿ ಮಾಡಿಗೊಂಡಿದ್ದ ತಿಂಡಿಗಳ ಪಟ್ಟಿಯ ಮಾಲಚಿಕ್ಕಮ್ಮ ಹೇಳಿದ ಹಾಂಗೇ ಪಾತಿಅತ್ತೆಯೂ ಅವರ ಹಿಂದಾಣ ದಿನಂಗಳ ನೆಂಪುಮಾಡಿಗೊಂಡವು.
ಒಂದು ಅಡಕ್ಕೋಳು ಮುಗಿವನ್ನಾರ ಅಲ್ಲಿತ್ತಿದ್ದು ನಾವು; ಮತ್ತೆ ಮೆಲ್ಲಂಗೆ ಹೆರಟೂ ಆತು. ಮಾಲಚಿಕ್ಕಮ್ಮ, ಪಾತಿಅತ್ತೆಯವರ ಹೆಮ್ಮಕ್ಕಳ ಮಾತುಕತೆಗೆ ಕೆಮಿಕೊಟ್ಟದಕ್ಕೆ ಅಭಾವ° ಕೋಂಗಿಮಾಡುಗು ನಮ್ಮ. ಆದರೆ, ಬೈಲಿಂಗೆ ಒಂದು ಶುದ್ದಿ ಆತಿಲ್ಲೆಯೋ?
ಅಸಕ್ಕಪ್ಪಗ ಎಂತೆಲ್ಲ ತಿಂಬಲೆಡಿವ ಹಲವು ಸಂಗತಿಗಳ ಪಟ್ಟಿಮಾಡಿಗೊಂಡತ್ತು.
ಹೆರಟು ಮನೆಗೆತ್ತುವನ್ನಾರ ನಾವು ಪಟ್ಟಿಮಾಡಿಗೊಂಡೇ ಮನೆಗೆತ್ತಿತ್ತು.

~

ಹಳೆಕಾಲದೋರಿಂಗೆ ಪುರ್ಸೊತ್ತು ಜಾಸ್ತಿ. ಹಾಂಗಾಗಿ ಅಸಕ್ಕು ಜಾಸ್ತಿ. ಅಸಕ್ಕಿನ ಹೋಗುಸಲೆ ಹೀಂಗಿರ್ತ ಮನೆ ತಿಂಡಿಗಳೂ ಜಾಸ್ತಿ. ಅಸಕ್ಕು ಕಳೆತ್ತ ತಿಂಡಿಯ ತಿಂತ ಕೊದಿಯೂ ಜಾಸ್ತಿಯೇ.
ಈಗಾಣೋರಿಂಗೆ ಹೀಂಗಿರ್ಸ ಹಳೆಕಾಲದ ತಿಂಡಿ ತಿಂತ ಕೊದಿಯೂ ಇಲ್ಲೆ; ತಿಂಡಿಗಳ ಮಾಡ್ಳೆ ಗೊಂತೂ ಇಲ್ಲೆ; ಅಸಕ್ಕೂ ಇಲ್ಲೆ; ಅಸಕ್ಕಪ್ಪಲೆ ತಕ್ಕ ಪುರ್ಸೊತ್ತೇ ಇಲ್ಲೆ! ಅಪ್ಪೋ?!

ಈಗ ಏನಿದ್ದರೂ ಬೇಕರಿ ತಿಂಡಿಗಳ ತಂದತ್ತು, ತೊಟ್ಟೆ ಬಿಡುಸಿತ್ತು, ಬಾಯಿಗೆ ಹಾಕಿತ್ತು. ಕೈ ತೊಳದತ್ತು – ತಿಂದದರ ಮರದತ್ತು.
ಅದರ ಉಪ್ಪು ಕಾರ ಮೂರಿಯ ಚೇಷ್ಟೆಯ ಎಡೆಲಿ ಹಳೆತಿಂಡಿಗೊಕ್ಕೆ “ಟೇಷ್ಟೇ” ಇಲ್ಲೆ. ಅಪ್ಪೋ?!

ಪುಳಿಂಕೊಟ್ಟೆಯೇ ಆಗಿರಲಿ, ಶಾಂತಾಣಿಯೇ ಆಗಿರಲಿ, ಸಂಪೂರ್ಣ ಸಾವಯವ ಆಹಾರಂಗೊ. ಬಾಯಿಗೆ ರುಚಿ ಇದ್ದರೂ, ಮೈಗೆ ಹಿಡಿಯದ್ದ ಹಿಂಗಿರ್ಸ ತಿಂಡಿಗಳ ತಿಂತ ಎಡೆಲಿ ಹಳೆ ಕಾಲದ ಗವುಜಿಗಳ ನೆಂಪು ಮಡುಗುವನೋ?
ಎಲ್ಲ ಮಾಲಚಿಕ್ಕಮ್ಮಂದ್ರೂ, ಪಾತಿ ಅತ್ತೆಕ್ಕಳೂ ಮನಸ್ಸು ಮಾಡಿ ಮಕ್ಕೊಗೆ ಇದರ ಟೇಷ್ಟು ಬರುಸಿರೆ ಚೇಷ್ಟೆಯ ಆಹಾರಂಗೊ ತಿಂಬದು ಕಮ್ಮಿ ಅಕ್ಕು.

ಎಂತ ಹೇಳ್ತಿ?

ಒಂದೊಪ್ಪ: ಹಳೆತಿಂಡಿಯೇ ಆಗಿರಳಿ; ಹೊಸ ತಿಂಡಿಯೇ ಆಗಿರಳಿ. ಅಸಕ್ಕಪ್ಪಗ ತಿನ್ನೇಕು – ಹಶು ಅಪ್ಪಗ ತಿಂಬಲಾಗ.

16 thoughts on “ಆಟಿಲಿ ಅಸಕ್ಕಪ್ಪಗ ಅಟ್ಟಲ್ಲಿಪ್ಪ ಪುಳಿಂಕೊಟೆ . .

  1. ಎನಗೆಲ್ಲ್ ಅ ಸೌಕರ್ಯ ಮಾಡಿಯೊಂಬಲೆ ಉದಾಸಿನ ಬಿಡ್ತಿಲ್ಲೆ ಒಪ್ಪಣ್ಣಾ

  2. ಚೆಲಾ!!! ಶುದ್ದಿ ಓದುವಗಳೇ ಉಂಡ್ಳಕಾಳು, ಪುಳಿಂಕೊಟೆ ಗ್ರೇಶಿ ಬಾಯಿಲಿ ನೀರು ಬಂತನ್ನೆ!! ಪಷ್ಟಾಯ್ದು ಶುದ್ದಿ ಒಪ್ಪಣ್ಣ!!

  3. ಉ೦ಡ್ಲ ಕಾಳಿ೦ಗೆ,ಗೋಟು ಕಾಯಿಗೆ ,ಬೇಡಿಕೆ ಇಪ್ಪ ಹಾ೦ಗೆ,ಗಾ೦ಧಾರಿ ಮೆಣಸು ಮಡಗಿ ನೋಡೆಕ್ಕು.ಮಕ್ಕಳ ಗು೦ಪು ಸೇರಿ ಉ೦ಡೆ ಕಟ್ಟುವಾಗ,ಅದರಲಿ ಮೆಲ್ಲ ಆರಿ೦ಗು ಗೊ೦ತ್ತಾಗದ ಹಾ೦ಗೆ ಒಬ್ಬ ,ಗಾ೦ಧಾರಿ ಮೆಣಸು ಮಡಗೆಕ್ಕು. ಆರಿ೦ಗೆ ಸಿಕ್ಕುತ್ತೋ ,ಅದರ ರುಚಿಯ ಅವನ ಮೋರೆಲಿ ,ರಜ ದೂರಲ್ಲಿ ನಿ೦ದು ನೋಡೆಕ್ಕು. ಅದರ ರುಚಿಯೆ ಬೇರೆ. ದೂರ ನಿಲ್ಲದ್ದೆ, ನೋಡಿದರೆ,ನಾವು ಅದಕ್ಕೆ ಜವಾಬು ಕೊಡುತ್ತಿಲ್ಲೆ.( ವಿ.ಸೂ. ಸಲಹೆ ಮಕ್ಕಳ ವಿಭಾಗಕ್ಕೆ ಮಾತ್ರ). ಅಸಕ್ಕಪ್ಪಗ ,ನೋಡಿ ತಿನ್ನೆಕ್ಕು ಹೇಳಿ ಸೇರಿಸೋದೋ?

  4. ಒಪ್ಪಣ್ಣನ ಲೇಖನ ಉತ್ತಮವಾಗಿ ಮೂಡಿ ಬಯಿಂದು.
    “ಎಲ್ಲ ಮಾಲಚಿಕ್ಕಮ್ಮಂದ್ರೂ, ಪಾತಿ ಅತ್ತೆಕ್ಕಳೂ ಮನಸ್ಸು ಮಾಡಿ ಮಕ್ಕೊಗೆ ಇದರ ಟೇಷ್ಟು ಬರುಸಿರೆ ಚೇಷ್ಟೆಯ ಆಹಾರಂಗೊ ತಿಂಬದು ಕಮ್ಮಿ ಅಕ್ಕು.”
    ಅಪ್ಪು. ಖಂಡಿತ ಕಡಮ್ಮೆ ಆವುತ್ತು. ಆನು ಆದರ್ಶ ಮಾತೆ ಹೇಳಿ ಪೂಜಿಸುವ ಒಬ್ಬರು ಅಮ್ಮ ಇದ್ದವು. ಅವು “ಉಂಡು ತೃಪ್ತಿ ಪಡುವುದಕ್ಕಿಂತ ಜಾಸ್ತಿ ಉಣ್ಣಿಸಿ ತೃಪ್ತಿ ಪಡುವವು”. ಅವು ಮಕ್ಕೊಗೆಲ್ಲ ಹಲವು ತಿಂಡಿ ಮಾಡಿ ಟೇಸ್ಟ್ ಬರುಸುದರಲ್ಲಿ ತುಂಬಾ ಉಷಾರಿ. ಆದರೂ ಕಾಲದ ಪ್ರಭಾವಂದ ಮಕ್ಕೊಗೆ ಬಣ್ಣ ಬಣ್ಣದ ತೊಟ್ಟೆ ತಿಂಡಿಯೇ ಒಳ್ಳೆದು ಹೇಳಿ ಅನ್ನಿಸುತ್ತು. ಮಕ್ಕೊಗುದೆ ರಜ ಆರೋಗ್ಯಕರ ಆಹಾರದ ಬಗ್ಗೆ ತಿಳುವಳಿಕೆ ನೀಡುತ್ತಾ ಇದ್ದರೆ ಎಲ್ಲೋರ ಸಹಕಾರ ಇದ್ದರೆ ಖಂಡಿತ ಕಡಮ್ಮೆ ಮಾಡುಲಕ್ಕು.

  5. ಲೇಖನ ಓದಿ ಅಪ್ಪಗ ಸಣ್ಣದಿಪ್ಪಗ ತಿಂದುಗೊಂಡಿದ್ದ ಪುಳಿಂಕೊಟೆ,ಸಾಂತಾಣಿ ನೆಂಪಾತು..ಮನೆಲಿ ಮಾತ್ರ ತಿಂದುಗೊಂಡಿದ್ದದಲ್ಲ,ಶಾಲೆಯ ಚೀಲದ ಕಿಸೆಲಿ ಹಾಕಿಗೊಂಡು ಹೋಗಿ ಅಲ್ಲಿಯೂ ಅಸಕ್ಕಪ್ಪಗ(ಪಾಠದ ಮಧ್ಯೆ) ತಿಂದುಗೊಂಡಿದ್ದತ್ತು.. ಈಗ ಅದರ ನೆಂಪು ಮಾತ್ರ ಉಳುದ್ದು..
    ಲಾಯಿಕ್ಕಾಯಿದು ಒಪ್ಪಣ್ಣ ಬರದ್ದು..

  6. ಪಾತಿ ಅತ್ತೆಗೆ ಅಂಬಗ ಸೊಳೆ ಹಾಕುಲೆ ಹಲಸಿನಕಾಯಿ ಬೆಳದು ಸಿಕ್ಕಿದ್ದೊ? ಊರಿಲಿ ಮಳೆ ಸುರು ಅಪ್ಪಗ ಹಲಸಿನಕಾಯಿ ಬೆಳದ್ದಿಲ್ಲೆ ಹೇಳಿ ತಲೆಬೆಶಿ ಮಾದಿಕೊಂಡು ಇತ್ತಿದ್ದವು ದೊಡ್ಡಜ್ಜನ ಮನೆಲಿ..ಒಪ್ಪಣ್ಣನ ಶುದ್ದಿ ಕೇಳಿಯಪ್ಪಗ ಪುಳಿಂಕೊಟೆ ಚಡ್ಡಿ ಕಿಸೆಲಿ ಹಾಕಿಯೊಂಡು ಶಾಲೆಗೆ ಹೋದ ನೆನಪು ಬಂತು..ಶುದ್ಧಿಗೆ ಒಂದು ಒಪ್ಪ..

  7. ಈ ಸರ್ತಿ ಆಟಿಲಿ ಮಳೆಯೇ ಇಲ್ಲೆ ಒಪ್ಪಣ್ಣಾ…ಲೇಖನ ಲಾಯಕ ಆಯಿದು.ಧನ್ಯವಾದ೦ಗೊ…

  8. ಮನೆಗಳ ಮನಗಳ। ಒಳಗೂ ಹೊರಗೂ। ಜಿನುಗುತಿರುವ ಹನಿಸೋನೆಗಳು॥
    -ಮಳೆಗಾಲಲ್ಲಿ ಅಸಕ್ಕ ಅಪ್ಪದರ ಕಡೆಂಗೋಡ್ಲು ಶಂಕರ ಭಟ್ರು ಸಾಂಕೇತಿಕವಾಗಿ ವರ್ಣಿಸಿದ್ದು,ಬಾಲ್ಯಕಾಲದ ಮಳೆಗಾಲ -ಎಲ್ಲವನ್ನೂ ನೆನೆಪಿಸಿದ ಬರಹ.ಈ ವರ್ಷ ಮಳೆ ಕಮ್ಮಿಯೇ.
    ಒಪ್ಪಣ್ಣನ ಬರಹ ಲಾಯ್ಕ ಆಯಿದು.

  9. ಆಟಿಲಿ ಜಿಟಿ ಜಿಟಿ ಮಳೆ ಬಂದುಗೊಂಡಿಪ್ಪಗ ಬೆಶ್ಚಂಗೆ ಕೂದೊಂಡು, ಸುಟ್ಟಾಕಿದ ಹಪ್ಪಳವೋ, ಉಂಡ್ಲಕಾಳೋ ತಿಂದುಗೊಂಡು ಕೇಸೆಟ್ಟು ಮಡಗಿ ಬಲಿಪಜ್ಜನ ಪದವನ್ನೂ, ಶೇಣಿ ಅಜ್ಜನ ಅರ್ಥವನ್ನೂ ಕೇಳೊಗ ಅಸಕ್ಕ ಎಲ್ಲ ಹಾರಿ ಹೋವುತ್ತು.

  10. ಬೇಸಗೆಲಿ ಆಹಾರ ಹಾಳಾಗದ್ದ ಹಾಂಗೂ ಆತು, ಮಳೆಗಾಲಲ್ಲಿ ಅಸಕ್ಕ ಅಪ್ಪಗ ತಿಂದರೆ ಹೊಟ್ಟೆ ಹಾಳಾಗದ್ದ ಹಾಂಗು ಆತು. ಎಲ್ಲವನ್ನೂ ಜೋಪಾನ ಮಾಡಿ ಮಡುಗಿ ಕಾಲ ಕಾಲಕ್ಕೆ ಸರಿಯಾಗಿ ಉಪಯೋಗಿಸುವ ಬುದ್ಧಿವಂತಿಕೆಗೆ ಮೆಚ್ಚೆಕ್ಕು.
    ಸಮಯೋಚಿತ ಲೇಖನ. ಒಂದೊಪ್ಪಲ್ಲಿ ಕೊಟ್ಟದು ಹಿತವಾದ, ಪಾಲಿಸೆಕ್ಕಾದ ಸತ್ಯ.

  11. ಸಣ್ಣಾಗಿಪ್ಪಗ ಎಂಗೊಗೆ ಹಪ್ಪಳಕ್ಕೆ ರೇಶನ್ನು..ಇಲ್ಲದ್ರೆ ಕಂಡಾಪಟ್ಟೆ ತಿಂಗು..
    ಹೇಮಾರುಸಲೆ ಬೇಳೆಗೆ ಮಣ್ಣು ಒದ್ದುವ ಶುದ್ದಿ ಬಿಟ್ಟು ಹೋತೋ ಒಪ್ಪಣ್ಣಂಗೆ!
    ಉಂಡ್ಲಕಾಳು ಕಾಂಬಗ ಬಾಯಿಲಿ ನೀರು ಬಂತಿದಾ..

  12. ಹೆರ ಮಾಡಿ೦ದ ಮಳೆ ನೀರು ಧಾರಾಕಾರವಾಗಿ ಇಳಿವಗ ಮನೆಯ ಒಳ ಇಸಿಚೇರಿಲಿ ಕೂದು, ಸುಟ್ತುಹಾಕಿದ ಹಲಸಿನ ಹಪ್ಪಳದೊಟ್ಟಿ೦ಗೆ ಕಾಯಿಸುಳಿ ತಿ೦ದ ಹಾ೦ಗಾತು,ಈ ಶುದ್ದಿ ಓದಿಯಪ್ಪಗ.
    ಪಾತಿ ಅತ್ತೆ ಏನೇ ಹೇಳಲಿ ಉ೦ಡ್ಳಕಾಳಿನ ಒಳ ಗೋಟುಕಾಯಿ ತು೦ಡು ಬೇಕಪ್ಪಾ.

  13. ಓದುವಾಗ ಎನ್ನ ಅಮ್ಮ ಮಾಡಿಗೊ೦ಡು ಇದ್ದ ತಿ೦ಡಿಗೊ ನೆನಪ್ಪಾತು ..ಅಮ್ಮ ತು೦ಬಾ ಸೊಳೆ ಹೊರುದು ಮಡುಗುಡು.ಉ೦ಡಲಕಾಳು ಮಾಡುದು ಎಲ್ಲ ನೆನಪ್ಪಗಿ ಕುಶಿ ಆತು. . .ಈಗ ಸೊಳೆ ಹೊರುದ್ದು ತಿನ್ನೆಕ್ಕಾದರೆ ತ೦ಗಿ ಮನೆಗೆ ಹೊಯಕ್ಕು. ಕಡೆ ಒಪ್ಪ ನಿಜವಾಗಿ ಅಪ್ಪು .ಓಟ್ಟು ಶುದ್ದಿ ಓದುವಾಗ ಉ೦ಡಲಕಾಳು,ಸೊಳೆಹೊರುದ್ದು. ತಿ೦ದಶ್ಟೂ ಕುಶಿ ಆತು.

  14. ಒಪ್ಪಣ್ಣನ ಶುದ್ದಿ ಓದಿ ಬಾಯಿಲಿ ನೀರು ಹರುದತ್ತು. ವಾಹ್! ಅದೆಷ್ಟು ನಮುನೆಯ ಮಳೆಗಾಲದ ತಿಂಡಿಗೊ. ಜಡಿಕುಟ್ಟಿ ಮಳೆ ಬತ್ತಾ ಇಪ್ಪಗ, ಒಲೆ ಎದುರ ಚಳಿ ಕಾಸೆಂಡು, ಉಂಡ್ಳ ಕಾಳು ಹಲಸಿನ ಹಪ್ಪಳ ತಿಂಬಲೆ ಅದೆಂತ ಕೊಶಿ. ಎಲ್ಲವನ್ನುದೆ ಈಗ ಮನಸ್ಸಿಲ್ಲಿ ಗ್ರೇಶಿಯೇ ಕೊಶಿ ಪಡೆಕಷ್ಟೆ. ಸುಟ್ಟು ಹಾಕುವೊ ಹೇಳಿರೆ ಈಗ ಒಲೆ ಇಲ್ಲೆ, ಕೆಂಡ ಇಲ್ಲೆ. ಪೇಟೆಲಿಪ್ಪವಕ್ಕುದೆ ಹೀಂಗಿಪ್ಪ ಕರುಕುರು ತಿಂಡಿಗಳ ಮನೆಲಿ ಮಾಡಿ ಮಕ್ಕಳ “ಬೇಕರಿ ಮರುಳಿ”ನ ರಜಾ ಮಟ್ಟಿಂಗೆ ಕಡಮ್ಮೆ ಮಾಡ್ಳೆ ಎಡಿಗು ಹೇಳಿ ಎನ್ನ ಅಭಿಪ್ರಾಯ.

    ತಿತಿಯ ದಿನ ಇರುಳು, ಭಾವಂದ್ರು, ಮಾವಂದ್ರು, ಪುಳ್ಳಿ ಮಕ್ಕೊ ಎಲ್ಲ ಸೇರಿ ಆಗೆಂಡಿದ್ದಿದ್ದ ಗಮ್ಮತ್ತು ನೆಂಪು ಆತು.
    ಈಗ ಅಸಕ್ಕಪ್ಪಲೆ ತಕ್ಕ ಪುರ್ಸೊತ್ತೇ ಇಲ್ಲೆ! ಸರಿಯಾಗಿ ಹೇಳಿದೆ ನೋಡು.
    ತಿಂಡಿಗಳ ಅಸಕ್ಕಪ್ಪಗ ತಿನ್ನೇಕು – ಹಶು ಅಪ್ಪಗ ತಿಂಬಲಾಗ ಹೇಳ್ತ ಕಡೇಣ ಒಪ್ಪ, ಮಕ್ಕೊಗೆ ಒಳ್ಳೆ ಸಂದೇಶ.

  15. ಪಾತಿ ಅತ್ತೆ ಮಾಡಿ ಮಡಿಗಿದ ಉಂಡ್ಳಕಾಳಿನ ಫೋಟೋ ನೋಡಿ ಬಾಯಿಲಿ ನೀರು ಬಂತು.
    ಹಾಂಗೆ ಶುಧ್ಧಿಲಿ ಬರದ ಎಲ್ಲಾ ತಿಂಡಿಗೊ, ಕರುಕುರುಗಳ ಎಲ್ಲಾ ನೆಂಪಾಗಿ ಆಶೆ ಅವ್ತು.
    ಸೊಳೆ ಹೊರುದ್ದದು ಹೇಳುವಗ ಇನ್ನೂ ಆಶೆ ಆವ್ತು.
    ಒಟ್ಟಾರೆ ಇಂದ್ರಾಣ ಶುಧ್ಧಿ ರುಚಿಯೋ ರುಚಿ.
    ಇನ್ನಾಣ ವಾರ ಇನ್ನೆಂತ ಶುಧ್ಧಿ ಇದ್ದೊ?
    ~ಸುಮನಕ್ಕ…

  16. ಆಟಿ ಮಳಗೆ ಸಾಂತಾಣಿ ಪುಳಿಂಕೊಟ್ಟೆ ಚೀನಿಬಿತ್ತು ಹಪ್ಪಳ ಸೆಂಡಗೆ ಶುದ್ದಿ ತಲೆಮಂಡಗೆ ಮುದ ಕೊಟ್ಟತ್ತು ಎಂಬುದೀಗ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×