Oppanna.com

ಆಟಿ ಬಂತು, ಕಳೆಂಜ ಬಕ್ಕೋ…?

ಬರದೋರು :   ಒಪ್ಪಣ್ಣ    on   22/07/2016    4 ಒಪ್ಪಂಗೊ

ಜೋಯಿಶಪ್ಪಚ್ಚಿ ಕರ್ಕಾಟಕ ಮಾಸ -ಹೇಳುದರ ಬಟ್ಯ ಆಟಿ ಹೇಳುಗು. ಸೂರ್ಯ ಬಾನಲ್ಲಿ ಕರ್ಕಾಟಕ ರಾಶಿಲಿ ಇಪ್ಪ ತಿಂಗಳದು.
ನಮ್ಮ ಊರಿಲಿ ಅದರಿಂದ ಮದಲೇ ಮಳೆ ಸುರು ಆಗಿರ್ತು; ಆಟಿಲಿ ಮಳೆಗಾಲ ಮುಂದುವರಿತ್ತು. ಮಳೆ ಬಾರದ್ದರೆ ಸೂರ್ಯನ ಬೆಶಿಲು ಭಯಂಕರ ಕಾಯ್ತು – ಉರಿ.
ಆಟಿಯ ಬೆಶಿಲಿಂಗೆ ಆನೆಬೆನ್ನುದೇ ಒಡಗು – ಹೇದು ಶಂಬಜ್ಜನ ಪಳಮ್ಮೆ ಇದ್ದತ್ತು ಒಂದು.
ಅದಕ್ಕೆ ಸರೀ ಆಗಿ – ಆಟಿಲಿ ಮಳೆಯೂ ಕಡಮ್ಮೆಯೇ. ಆಟಿಟರ್ದೊ ಅರೆಗ್ಗಾಲ – ಹೇದು ಬಟ್ಯ ಹೇಳುದು ಅದಕ್ಕೇ.
ಒಂದರಿ ಮಳೆ ಬಂದು ಬಿಟ್ಟ ಬಗೆ ಅಲ್ದೋ – ಹಾಂಗಾಗಿ.
ಬೆಶಿಲು-ಮಳೆಯ ಸಂಗಮವೇ ಆಟಿ ಸಮೆಯ ಆಗಿಕ್ಕು.

ಹೀಂಗೆಲ್ಲ ಅನಿಶ್ಚಿತತೆ ಇಪ್ಪ ಕಾರಣವೇ ಆಟಿ ಹೇದರೆ ಅನಿಷ್ಟ ಹೇದು ನಮ್ಮ ಅಜ್ಜಂದ್ರಿಂಗೆ ಅನುಸಿದ್ದೋ ಏನೊ; ಆಟಿಲಿ ಏನೂ ವಿಶೇಷ ಶುಭಕಾರ್ಯ ಮಾಡ್ಳಿಲ್ಲೆ. ಎಂತಾರು ಮಾಡ್ತರೂ ಆಟಿಂದ ಮೊದಲೇ ಸುರುಮಾಡಿ, ಮತ್ತೆ ಮುಂದುವರುಸುತ್ತದು. ಅಥವಾ, ಆಟಿ ಬಿರಿವನ್ನಾರ ಪೂರ್ತಿ ಕಾದು ಮತ್ತೆ ಸೋಣೆಲಿ ಸುರುಮಾಡ್ತದು ಕ್ರಮ.
~
ಬಂದರೆ ಧೋ-ಧೋ ಮಳೆ. ಬಾರದ್ರೆ ಉರಿ ಬೆಶಿಲು.
ಬಟ್ಟಮಾವಂಗೂ ಎಲ್ಲಿಗೂ ಹೋಪಲಿಲ್ಲೆ, ಜೋಯ್ಷಪ್ಪಚ್ಚಿಗೂ – ಆರಿಂಗೂ ಮೂರ್ತ ಹೇಳುಲಿಲ್ಲೆ, ಸತ್ಯಣ್ಣಂಗೂ ಎಲ್ಲಿಯೂ ಅಡಿಗೆ ಹೇಳಿಕೆ ಬಂದದಿಲ್ಲೆ.
ಬೈಲಿಲಿ ಆರಿಂಗೂ – ಮಾಡ್ಳೆ ಕೆಲಸ ವಿಶೇಷ ಎಂತೂ ಇಲ್ಲೆ. ರಜರಜ ಇಪ್ಪದನ್ನೂ ಸಮಯ ನೋಡಿ ಮಾಡಿ ಆವುತ್ತು.
ಇದು ನವಗೆ ಮಾಂತ್ರ ಅಲ್ಲ, ಬೂತಕಟ್ಟುತ್ತ ಕೋಟಿಗೂ ಅನ್ವಯ ಆವುತ್ತು. ಈಗ ನೇಮ ಆಗಲೀ ತಂಬಿಲ ಆಗಲಿ – ಎಲ್ಲಿಯೂ ಇಲ್ಲೆ.

ಹೀಂಗಿರ್ತ ಸಮಯ ಮಾಡುದಾದರೂ ಎಂತದು!?
ಆಟಿಲಿ ಮಾಡ್ಳೆ ಹೇಳಿಯೇ ಕಲ್ಪನೆಗೆ ಬಂದ ಒಂದು ನಲಿಕೆಯ ಪ್ರಾಕಾರ – ಆಟಿಕಳೆಂಜ.
~
ಹೆಸರೇ ಹೇಳ್ತ ಹಾಂಗೆ ಆಟಿ ತಿಂಗಳಿಲಿ ಬಪ್ಪ ಕಳಂಜ ಅದು.
ಇದು ಒಂದು ಮಾಯಕದ ರಾಜಕುಮಾರ ಹೇಳ್ತ ಕಲ್ಪನೆ. ಮಳೆಗಾಲ ಸಹಜವಾಗಿ ಬಪ್ಪ ರೋಗಂಗಳ ನಿವಾರಣೆ, ಕಷ್ಟನಷ್ಟಂಗಳ ನಿವಾರಣೆಗಾಗಿ ಆಟಿಲಿ ಅವತರಿಸಿ ಬಪ್ಪದಾಡ ಅದು. ಹಟ್ಟಿಗೆ, ಮನೆಗೆ ಬಪ್ಪ ಮಾರಿಯ ಕಳೆತ್ತು. ಕಳಂಜ ಹೇದು ಅದರ ಹೆಸರು ಆಗಿಕ್ಕು. ಓ ಅಲ್ಲಿ ಮುಂಡುಗಾರು ಹತ್ತರೆ ಅದೇ ಹೆಸರಿನ ಊರುದೇ ಇದ್ದು.

ಪುಂಡುವೇಶದ ನಮುನೆ ಕಾಂಬ ತೂಷ್ಣಿಯ ಅಲಂಕಾರ, ತೆಂಗಿನ ತಿರಿಯ ಮೈಗೆಲ್ಲ ಅಂಗಿಯ ನಮುನೆ ಹಾಕಿಂಡು, ಅರುಶಿನ-ಕೆಂಪು-ಕಪ್ಪು ಮೋರೆಗೆ ಮೆತ್ತಿಂಡು, ಕೈಲಿ ಒಂದು ಒಲಿಯ ಕೊಡೆ – ಮಳಗೂ ಆತು, ಗುರ್ತಕ್ಕೂ ಆತು ಹೇಳ್ತ ನಮುನೆಲಿ – ಅದರ ವೇಷ. ಒಟ್ಟಿಂಗೆ ಒಂದು ದುಡಿ ಬಡಿವ ಜನ.
ಸಾಮಾನ್ಯವಾಗಿ ಆಟಿಕಳಂಜ ವೇಶ ಕಟ್ಟಿ ಜಾಸ್ತಿ ಮಾತಾಡ್ಳಿಲ್ಲದ್ದ ಕಾರಣ ಅಜಿಲರ ಕುಟುಂಬದ ಸಣ್ಣ ಹುಡುಗ ಕಟ್ಟುದು. ದುಡಿ ಬಡಿವಲೆ ಪ್ರಾಯದ, ಊರೆಲ್ಲ ಪರಿಚಯ ಇಪ್ಪ ಜೆನ ಬಕ್ಕು.
ಆಟಿ ತಿಂಗಳ ಶೆಂಕ್ರಾಂತಿ ಕಳುದ ಮೂರು ದಿನಕ್ಕೆ ಕಳೆಂಜ ಮನೆ ಹೆರಡುದು. ಮನೆ-ಮನೆ-ಮನೆ-ಮನೆ ನಡಕ್ಕೊಂಡೇ ಪ್ರಯಾಣ.

ಪ್ರತೀ ಮನೆಗೆ ಹೋಗಿ, ಅಜ್ಜ ದುಡಿ ಬಡಿವಗ, ಪುಳ್ಳಿ ಕಳಂಜ ವೇಶಧಾರಿ ಕೊಣಿಸ್ಸು.
ನಿಂದಲ್ಲೇ ರಜರಜ ಕೊಣುದು ತಿರು-ತಿರು-ತಿರುಗಿ ತೆಂಗಿನ ಒಲಿಯ ಅಗಾಲಕ್ಕೆ ಹರಡುಸುಗು.
ಡುಡೂಂಡುಕ್-ಡುಡೂಂಡುಕ್-ಡುಡೂಂಡುಕ್ – ಹೇಳುವ ಒಂದೇ ತಾಳಲ್ಲಿ ದುಡಿ ಬಡಿವಾಗ “ಕಳೆಂಜೆ ಕಳೆಂಜೆನೋ, ಕಳೆಂಜೆ ಏರೇನಾ ಮಗೆನೋ…” – ಹೇದು ಪಾಡ್ದನವೂ ಹೇಳುಗು. ಒಂದರಿಯಾಣ ಕೊಣಿಯಾಣ ಆದ ಮತ್ತೆ ದೊಡಾ ಕೆರಿಶಿಲಿ ಅದಕ್ಕೆ ಭತ್ತ / ಅಕ್ಕಿ, ಕಲ್ಲುಪ್ಪು, ಮೆಣಸು, ಧಾನ್ಯಂಗೊ, ಪೈಶೆ – ಎಲ್ಲವನ್ನೂ ಮಡಗಿ ಕೊಡ್ತ ಮರಿಯಾದಿ.
ಅದೆಲ್ಲವನ್ನೂ ಅಜ್ಜ ಅದರ ಜೋಳಿಗೆಲಿ ತುಂಬುಸಿಗೊಂಡು, ಕಳಂಜನ ಕರಕ್ಕೊಂಡು ಇನ್ನಾಣ ಮನೆಗೆ ಹೋಕು.
~
ಒಪ್ಪಣ್ಣ ಸಣ್ಣಾಗಿಪ್ಪಗ ಕೋಟಿ ಅದರ ಪುಳ್ಳಿಯ ಕರಕ್ಕೊಂಡು ಬೈಲಿಂಗೆ ಬಂದುಗೊಂಡಿತ್ತು.
ಒಪ್ಪಕ್ಕ ಅದರ “ಡಂಙಟಕ್ಕ” ಹೇಳಿಗೊಂಡು ಇದ್ದದು.
ಡಂಙಟಕ್ಕ ಬಂತು – ಹೇದರೆ ಜಾಲಿಲಿ ಆಡಿಗೊಂಡಿದ್ದರೂ ಸೀದಾ ಅಟ್ಟುಂಬೊಳಾಂಗೆ ಓಡುಗು. ರಜಾ ದೊಡ್ಡಪ್ಪಗ ಅದರ “ಆಟಿಕಳೆಂಜ” ಹೇಳಿಯೇ ಗುರ್ತ ಹಿಡಿವಲೆ ಸುರುಮಾಡಿತ್ತು. ಅಷ್ಟಪ್ಪಗಳೂ ಹೆದರಿಕೆ ಪೂರ್ತ ಹೋಗಿದ್ದತ್ತಿಲ್ಲೆ.
ಏನಾರು ಲೂಟಿಮಾಡಿಗೊಂಡು ಇದ್ದರೆ “ಇದಾ, ಒಪ್ಪಣ್ಣಂಗೆ ಲೂಟಿಮಾಡಡ, ಆಟಿಕಳಂಜ ಬಕ್ಕು” – ಹೇದು ಹೆದರ್ಸಲೆ ಲಾಯ್ಕ ಆಗಿಂಡು ಇದ್ದತ್ತು.

ತರವಾಡುಮನೆಲಿ ಕೋಟಿಗೆ ಹೇಂಗೂ ಮಾಮೂಲು ಪುಗೆರೆ ತಿಂಬ ಗುರ್ತವೇ ಇದ್ದನ್ನೇ. ಅಲ್ಲಿಗೆ ಹೋದರೆ ಸುಮಾರು ಹೊತ್ತು ಡಂಙಟಕ್ಕ ಕೇಳ. ಕೋಟಿಗೆ ಎಲೆತಿಂದು-ತುಪ್ಪಿ-ಮಜ್ಜಿಗೆನೀರು ಕುಡುದು – ಪುನಾ ಎಲೆತಿಂದು ಆಯೆಕ್ಕಿದಾ. ಅಷ್ಟು ಹೊತ್ತು ಅದರ ಪುಳ್ಳಿಗೂ ಕೂಪಲೆ ಸಿಕ್ಕುತ್ತು ಪಾಪ.
ಅದರ ಪುಳ್ಳಿ ನೃತ್ಯ ಕಲಿವದೇ ಕಳಂಜನ ಮೂಲಕ ಆಡ – ಶಂಬಜ್ಜ ಒಂದರಿ ಹೇಳಿತ್ತಿದ್ದವು.
ಆಗಿಕ್ಕು, ತುಳುನಾಡಿನ ದೈವಾರಾಧನೆಯ ಮೂಲಕವೇ ಈ ಆಟಿಕಳಂಜ ಹೇಳ್ತ ಕಲ್ಪನೆ ಮೂಡಿದ್ದಾಗಿಕ್ಕು. ಅವ್ವೇ ಕಟ್ಟುದುದೇ.
~
ಇಡೀ ಸಮಾಜವ ಪ್ರತ್ಯಕ್ಷವಾಗಿ ಕಂಡುಗೊಂಡು, ಊರವರ ಅನುಕೂಲವ ಹಾರೈಸಿಗೊಂಡು, ಮನೆಮನೆಗೆ ಭೇಟಿಮಾಡಿಗೊಂಡು – ಎಲ್ಲ ಚೆಂದಕಿರಿ – ಹೇಳುವ ಹಾರೈಕೆ – ಆಟಿಕಳಂಜಂದು.
ಈಗೀಗ ಆಧುನಿಕತೆಯ ಗಾಳಿಗೆ ಕಳಂಜನೂ ಇಲ್ಲೆ. ಒಲಿಯ ಕೊಡೆಯೂ ಇಲ್ಲೆ. ದುಡಿಯೂ ಇಲ್ಲೆ.
ಕಾಲ ಬದಲಪ್ಪಗ ಇದೆಲ್ಲವೂ ಇಲ್ಲದ್ದೆ ಆವುತ್ತು.
ಅದರೊಟ್ಟಿಂಗೆ ಸಮಾಜದ ಸ್ವಾಸ್ಥ್ಯ ಹಾರೈಕೆಯೂ ಇಲ್ಲದ್ದೆ ಅಪ್ಪಗ ನಿಜವಾಗಿಯೂ ಬೇಜಾರಾವುತ್ತು.

ಅಲ್ಲದೋ?
~
ಈಗ ಪುನಾ ಆಟಿ ಬಂತು.
ಆಟಿ ಪ್ರತಿ ಒರಿಶ ಬತ್ತಾ ಇದ್ದು. ಆದರೆ, ಆಟಿಕಳೆಂಜ?
ಕೋಟಿಗೆ ರಜಾ ಮೊಳಪ್ಪು ಬೇನೆ, ದೂರ ನೆಡವಲೆ ಎಡಿತ್ತಿಲ್ಲೆ. ಪುಳ್ಳಿಗೆ ಈಗ ಪೇಟೆಲಿ ಅಂಗುಡಿಲಿ ಕೆಲಸ.
ಯೇವ ರೀತಿ ಬಟ್ಟಮಾವನ ಮನೆಲಿ ಪುಳ್ಳಿಗೆ ಬೇರೆ ಆಸಕ್ತಿಯೋ, ಇಲ್ಲಿ ಕೋಟಿಯ ಮನೆಲಿಯೂ ಹಾಂಗೇ ಆಯಿದು!!

ನಮ್ಮ ಊರಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಈ ಆಟಿಕಳೆಂಜ – ಸದಾ ಬಂದುಗೊಂಡಿರಲಿ. ನಮ್ಮ ಮೂಲನೆಲದ ಸಂಸ್ಕಾರವ ಯೇವತ್ತೂ ನೆಂಪುಮಾಡುಸುತ್ತಾ ಇರಲಿ. ಬೈಲ ಸ್ವಾಸ್ಥ್ಯದ ಬೆಳವಣಿಗೆಗೆ ಆಟಿಕಳೆಂಜನದ್ದೂ ಕೊಡುಗೆ ಇರಲಿ.
ಎಂತ ಹೇಳ್ತಿ?

ಎಲ್ಲೋರುದೇ ಸೇರಿ ಆಟಿಕಳೆಂಜನ ನೆಂಪುಮಾಡುವೊ, ದಿನಿಗೆಳುವೊ°..

ಆಟಿಕಳೆಂಜಾ, ಎಲ್ಲಿದ್ದೇ? ಬೇಗಬಾ.. ಒಪ್ಪಕ್ಕ ಲೂಟಿಮಾಡ್ತಾ ಇದ್ದೂ... 🙂

~
ಒಂದೊಪ್ಪ: ಕೋಟಿಯೂ ಆಟಿಕಳೆಂಜನೂ ಒಟ್ಟುಸೇರಿರೆ ಕೋಟಿಮೌಲ್ಯದ ಸಂಸ್ಕೃತಿ ನೆಂಪಕ್ಕು.

4 thoughts on “ಆಟಿ ಬಂತು, ಕಳೆಂಜ ಬಕ್ಕೋ…?

  1. ತುಳು ಸ೦ಸ್ಕ್ರತಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ನಿಮ್ಮ ಬ್ಲಾಗ್ ಚೆನ್ನಾಗಿ ಮೂಡಿಬ೦ದಿದೆ

  2. ಆಟಿ ಕಳಂಜ ಓದಿಯಪ್ಪಗ ಹೋದ ವರ್ಷ ನಮ್ಮಲ್ಲಿಗೆ ಬಂದ ಆಟಿ ಕಳಂಜನ ನೆಂಪಾತು. ಎನ್ನತ್ರೆ ಅದರ ಪಟ ಇರೆಕು. ನೋಡ್ತೆ… ಬೈಲಿಲ್ಲಿ ಹಾಕುತ್ತದ್ರಾ ಒಟ್ಟಿಂಗೆ ಅದು ಹೇಳಿದ ಮಾತುಗಳನ್ನು ಬರೆತ್ತೆ ಆಗದೋ?

  3. ಒಳ್ಳೆ ಶುದ್ದಿ. ಒಪ್ಪಣ್ಣ. ಇನ್ನೊಂದು ಸೋಣೆ ತಿಂಗಳಾಣ ತುಳು ನಲಿಕ್ಕೆ ‘ಸೋಣೆಜೋಗಿ’ ಹೇಳಿಯಿದ್ದು. ಅದುದೇ ಈ ಕಳಂಜನ ಕೋಣಿಶುತ್ತವೆ ಕೊಣಿಶುದು. ಮತ್ತೊಂದು ‘ಮರದೆ’ ಹೇಳಿದ್ದು. ಅದು ಕನ್ನೆ ತಿಂಗಳಿಲ್ಲಿ. ಅದರ ಮಲೆಯರು ಕೊಣಿಶುದು.

  4. ಆಟಿ ಕಳಂಜನ ನೆಂಪು ಮಾಡಿದ್ದು ಲಾಯಕಾಯಿದು. ಮಳೆಗಾಲಲ್ಲಿ ಜಾಲು ಹಾಳಪ್ಪಲಾಗ ಹೇಳಿ ಹಾಕಿದ ಮಡಲು ಸೋಗೆಯ ಮೇಗೆ ಕಳಂಜ ಸುತ್ತು ತಿರುಗಿ ಕೊಣುದಪ್ಪಗ ಆಗೆಂಡಿದ್ದಿದ್ದ ಉರುಟು ವೃತ್ತಾಕಾರದ ಜಾಗೆಲಿ, ಅದು ಕೊಣುದ ಹಾಂಗೇ ಕೊಡೆ ತಿರುಗುಸಿ ಕೊಣುದ್ದದು ನೆಂಪಾತು. ಡುಡೂಂಡುಕ್-ಡುಡೂಂಡುಕ್-ಡುಡೂಂಡುಕ್ ತಾಳ ಸರಿಯಾಗಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×