Oppanna.com

ಶವಾಲಂಕಾರ – ಕೇಶವಾಲಂಕಾರ..!!

ಬರದೋರು :   ಒಪ್ಪಣ್ಣ    on   18/02/2011    40 ಒಪ್ಪಂಗೊ

ಬೈಲಿಂಗೆ ಗುರುಗಳ ಆಶೀರ್ವಾದ ಸಿಕ್ಕುತ್ತು, ಎಲ್ಲೋರಿಂಗೂ ಅರಡಿಗು.
ಆಶೀರ್ವಾದದ ಒಟ್ಟಿಂಗೇ, ಅವರ ಚಿಂತನೆಗೊ, ಅವರ ಆಶೀರ್ವಚನಂಗೊ ಸಿಕ್ಕಲಿ ಹೇಳ್ತದೂ ಬೈಲಿನೋರ ಆಶೆ!
ಅನುಷ್ಠಾನ, ಅಧ್ಯಯನ, ಚಿಂತನ, ಮಾರ್ಗದರ್ಶನ – ಇವುಗಳಿಂದಾಗಿ ಬಪ್ಪಂತಾ ಮುತ್ತುಮಾತುಗೊ ಬೈಲಿನ ಎಲ್ಲೋರಿಂಗೂ ಸಿಕ್ಕಿಗೊಂಡಿರಳಿ ಹೇಳ್ತದು ಎಲ್ಲೋರಿಂಗೂ ಇಪ್ಪ ಹಾರಯಿಕೆ.
~
ಮೊನ್ನೆ ಗುರುಗೊ ಬೈಲಿಂಗೆ ಬಂದಿತ್ತಿದ್ದವಿದಾ!
– ಅವಕಾಶ ಅಪ್ಪ ಎಲ್ಲೋರುದೇ ಹೋಗಿ ಮಂತ್ರಾಕ್ಷತೆ ತೆಕ್ಕೊಂಡು ಬಯಿಂದವು.
ನಮ್ಮ ಬೈಲಿಂದ ಹೋಪ ವೆವಸ್ತೆ ಇತ್ತು, ಆರಾರು ಬತ್ತವು – ಹೇಳ್ತರ ಮೊದಲೇ ಮಾತಾಡಿಗೊಂಡು ವಾಹನದ ವೆವಸ್ತೆ ಗುರಿಕ್ಕಾರ್ರು ಮಾಡಿತ್ತಿದ್ದವು, ಆ ದಿನಕ್ಕೆ ಅನುಕೂಲ ಆವುತ್ತ ನೆರೆಕರೆ ನೆಂಟ್ರುಗೊ ಸೇರಿಗೊಂಡಿದವು,
ಬೇರೆ ದೊಡ್ಡ ಅಂಬೆರ್ಪು ಎಂತ್ಸೂ ಇಲ್ಲದ್ದ ಕಾರಣ ನಾವುದೇ ಜೀಪಿಲಿ ಹಿಂದೆ ಕೂದಂಡು ಹೋಗಿತ್ತಿದ್ದು. 🙂
~
ಅಂದು ಚೆಂದದ ಕಾರ್ಯಕ್ರಮ, ಬಂದ ಎಲ್ಲೋರುದೇ ಸೇರಿಗೊಂಡು ನೆಡೆಸ್ಸು.
– ಸ್ವಾಗತ, ಆಸರಿಂಗೆ, ಸುದರಿಕೆ, ಊಟ, ಬಳುಸುತ್ತದು, ಉಣ್ತದು – ಎಲ್ಲದರಲ್ಲಿಯೂ ಎಡಿಗಾದ ಹಾಂಗೆ ಸೇರಿಗೊಂಡೆಯೊ°.
ಮಾಣಿ ಮಠ ಅಂತೂ ವಟುಮಾಣಿಯ ಹಾಂಗೆ ಲಕ್ಷಣ ಕಂಡೊಂಡಿತ್ತು.
ದಿನದ ಎಲ್ಲಾ ಕಾರ್ಯಕ್ರಮವೂ ಲಾಯಿಕಾಯಿದು, ಗುರುದೇವರ ಆಶೀರ್ವಾದಂದಾಗಿ.
– ಆ ಕೊಶಿದಿನದ ಕೊಶಿ ಕಾರ್ಯಕ್ರಮಲ್ಲಿ ಎಲ್ಲೋರಿಂಗೂ ತುಂಬ ಕೊಶಿ ಆದ್ಸು ನಮ್ಮ ಗುರುಗಳ ಆಶೀರ್ವಚನ!

ನಮ್ಮ ಗುರುಗೊ, ಚುಬ್ಬಣ್ಣನ ಹತ್ತರೆ ಮಂದಸ್ಮಿತ ತೋರುಸಿದ್ದು

~
ಯೇವದೇ ದಿನದ, ಯೇವದೇ ಕಾರ್ಯಕ್ರಮ ಆಗಿರಳಿ – ಆ ದಿನಕ್ಕೆ ಒಂಬುತ್ತ ಹಾಂಗೆ ಸಮಸ್ತರಿಂಗೂ ಮನಸ್ಸಿಂಗೆ ಸಿಕ್ಕುತ್ತ ಹಾಂಗೆ ಆಶೀರ್ವಚನ ಮಾಡ್ತದು ನಮ್ಮ ಗುರುಗಳ ವೈಶಿಷ್ಠ್ಯ.
ಇಂಪಾದ ಶಾರೀರಲ್ಲಿ, ಮುದವಪ್ಪ ವಿಷಯಂಗಳ ಉಪಮೆ-ಉಪಕತೆ-ರೂಪಕಂಗಳ ಒಟ್ಟಿಂಗೆ ಹೇಳಿಗೊಂಡು, ನೇರವಾಗಿ ಮನಸ್ಸಿನೊಳಂಗೇ ಇಳಿತ್ತ ಹಾಂಗೆ ಹೇಳುದೇ ಗುರುಪೀಠದ ಶೆಗ್ತಿ!
ಗುರುಗಳ ಆಶೀರ್ವಚನ ಕೇಳುಲೆ ಹೇಳಿಗೊಂಡೇ ಎಷ್ಟೋಜೆನ ಉದಿಯಾಂದ ಕಾವದಿದ್ದು.
ಜೆನಂಗೊ ಎಷ್ಟೇ ಗಜಿಬಿಜಿ ಹರಟೆ ಇರಳಿ, ಆಶೀರ್ವಚನಕ್ಕಪ್ಪಗ ತನ್ನಷ್ಟಕೇ ಮವುನ ಆವುತ್ತದು ನಿತ್ಯಪವಾಡ!
ಒಂದೊಂದರಿ ನಾವು ಬೈಲಿಲಿ ಆ ಶುದ್ದಿಗಳ ಮಾತಾಡಿದ್ದೂ ಇದ್ದು.

ಅಂದ್ರಾಣ ಆಶೀರ್ವಚನದ ಎಡಕ್ಕಿಲಿ ಒಳ್ಳೆ ಸತ್ವ ಸಿಕ್ಕಿತ್ತು, ಅದರ ಬೈಲಿಂಗೆ ಹೇಳುವೊ ಹೇಳಿ ಅನುಸಿತ್ತು. ಆಗದೋ?
~
ಮಂದ್ರಲ್ಲೇ ಗುರುಸ್ಮರಣೆ ಆರಂಭ ಮಾಡಿ,
ಚಂದ್ರಮುಖಲ್ಲಿ ಹದಾನೆಗೆ ಮಡಿಕ್ಕೊಂಡು ಆಶೀರ್ವಚನ ಮುಂದರುಸಿ,
ಇಂದ್ರಾಣ ವಿಶಯಕ್ಕೆ ಹಂತಹಂತವಾಗಿ ಬಂದವು.
ಒಂದೊಂದಿನ ಒಂದೊಂದು ವಿಷಯ. ಎಲ್ಲವೂ ರತ್ನತುಲ್ಯ!

ಮನುಷ್ಯಂಗೆ ಸ್ಥಾನ, ಸ್ಥಾನದ ಆಶೆ, ಹೆಸರಿನ ಆಶೆ ಎಲ್ಲೆಲ್ಲ ಇರ್ತು – ಹೇಳ್ತ ಬೇಜಾರದ ವಿಶಯವ ನೆಗೆನೆಗೆವಿನೋದದ ಎಡೆಲಿ, ಉದಾಹರಣೆ ಸಹಿತ ವಿವರುಸಿಗೊಂಡು ಹೋದವು.
ಗುಂಡಪ್ಪಜ್ಜನ ಮಂಕುತಿಮ್ಮ ಹೇಳಿದ ಯೇವದೋ ಒಂದೆರಡು ಪದ್ಯಂಗಳ ಉದಾಹರಣೆ ತೆಕ್ಕೊಂಡವು, ಶಬ್ದ ಶಬ್ದ ವಿಂಗಡುಸಿ ಚೆಂದಕೆ ವಿವರಣೆ ಕೊಟ್ಟೊಂಡು ಆಶೀರ್ವಚನ ಮುಂದರುಸಿದವು.
~
ಸಬೆಲಿ ಎದುರೇ – ಮೂರ್ನೇ ಸಾಲಿಲಿ – ಗೂಂಟಪೇನಿನ ಕರೆಲಿ ಕೂದಂಡು ಎಂಗೊ ಎಲ್ಲೋರುದೇ ಕೇಳಿಗೊಂಡೇ ಇತ್ತಿದ್ದೆಯೊ°.
ಎದುರಾಣ ಸಾಲಿಲೆ ಎಂಗಳ ಎದುರೆ ಆಗಿ ಎಡಪ್ಪಾಡಿ ಬಾವ°, ಗುರಿಕ್ಕಾರ್ರು ,ಚೆಂಬರ್ಪುಅಪ್ಪಚ್ಚಿ, ಜೆಡ್ಡುಮಾವ°, ಮಧ್ಯಸ್ಥಮಾವ°, ಅರವಿಂದಪ್ಪಚ್ಚಿ ಇದ್ದಿದ್ದವು; ಅವರಿಂದ ಅತ್ಲಾಗಿ ಇದ್ದಿದ್ದ ಸಾಗರದ ಸತ್ಯಮಾವಂಗೆ ಒಪ್ಪಣ್ಣನ ಕಂಡಿದಿಲ್ಲೆ. 😉
ಎಂಗೊ – ಅಜ್ಜಕಾನಬಾವ°, ಚುಬ್ಬಣ್ಣ, ಜೆಡ್ಡುವೈದ್ಯರು, ಚೆನ್ನಬೆಟ್ಟಣ್ಣ, ಮಾರ್ಗದಮಾವ° – ಎಲ್ಲೋರುದೇ ಒಂದೇ ಸಾಲು!
ಕೂದ್ದದು ಎದುರೇ ಆದ ಕಾರಣ ಎಂತಾರು ಕುಣುಕುಣು ಮಾಡಿಕ್ಕಲೆ ಗೊಂತಿಲ್ಲೆ! ಎದೂರಾಣವು ಹಾಂಗೆ ಮಾಡಿರೆ ಬೇಗ ಗೊಂತಪ್ಪದು, ಕ್ಳಾಸಿಲಿ ಆದ ಹಾಂಗೆ! 😉

ಇದರೆಡಕ್ಕಿಲಿ ಎಂತಾದ್ಸು ಹೇಳಿತ್ತುಕಂಡ್ರೆ – ಮಂಕುತಿಮ್ಮ, ಮಂಕುತಿಮ್ಮ ಹೇಳಿ ಎರಡುಮೂರು ಸರ್ತಿ ಹೇಳುವಗ ಹಿಂದೆಕೂದ ಬೋಸಬಾವ° ಮಾತಾಡುಸಿ ಕೇಳಿದ, ಅವ° ಎಲ್ಲಿ ಕೂಯಿದ°? – ಹೇಳಿಗೊಂಡು!
ಈಗ ಸುಮ್ಮನೆ ಕೂದುಗೊ, ಮತ್ತೆ ಹೇಳ್ತೆ – ಹೇಳಿದೆ ರಜ ಜೋರಿಲಿ!
– ಎಷ್ಟು ಬೇಡ ಹೇಳಿರೂ ಒಂದು ಸಣ್ಣ ಕುಣುಕುಣು ಆತು!

ಹರಟೆ ಕೇಳಿಅಪ್ಪದ್ದೇ, ಎದುರೆ ಕೂದ ಜೆಡ್ಡುಮಾವ° ಪುಚುಕ್ಕ್ – ಹೇಳಿಗೊಂಡು, ಕಪ್ಪುಕರೆ ದೊಡ್ಡಕನ್ನಡ್ಕದ ಎಡೆಲಿ ದೊಡ್ಡಕಣ್ಣು ಮಾಡಿ ತಿರುಗಿದವು!
ಆಶೀರ್ವಚನದ ಎಡಕ್ಕಿಲಿ ಎಂತ ಶಬ್ದ ಬಂದರೂ ಅವಕ್ಕೆ ಕಣ್ಣು ಕೆಂಪಪ್ಪದು.
ಬರೇ ಮಾತಾಡಿರೇ ಕೋಪ ಬಕ್ಕು, ಮಾತಾಡುಸಿರೆ ಎಂತ ಮಾಡುಗೊ – ಉಮ್ಮ, ಬೆಂಗುಳೂರಿನ ರಾಧಕ್ಕನ ಹತ್ರೇ ಕೇಳೆಕ್ಕಟ್ಟೆ!
ಈ ತಲಬೆಶಿಬೇಡ ಹೇಳಿಗೊಂಡು ಜೆಡ್ಡುಅತ್ತೆ ಆಗಳೇ ಹೆಮ್ಮಕ್ಕಳ ಹೊಡೆಲಿ ಕೂದುಗೊಂಡಿದವು.
ಅದಿರಳಿ.
ಆಶೀರ್ವಚನ ಮುಂದುವರುಕ್ಕೊಂಡೇ ಇತ್ತು..
~
ಒಂದು ಘಟನೆ ತೆಕ್ಕೊಂಡು ಅದಕ್ಕೆ ವಿವರವಾದ ಹಿನ್ನೆಲೆ-ಮುನ್ನೆಲೆ ಕೊಟ್ಟು, ಹದವಾದ ವಿಚಾರಂಗಳ ತಿಳುಸಿಗೊಂಡು ಇತ್ತಿದ್ದವು.
ಮಂತ್ರಿಗೊ ಆದರೆ ಬರದ್ದರ ಓದುಗು, ಗುರುಗೊ ಹಾಂಗಲ್ಲ ಇದಾ – ಮನಸ್ಸಿಲೇ ಅರದು, ಕಡದು, ಬೆಣ್ಣೆಯಂತಾ ಚಿಂತನೆಗಳ ಶಿಷ್ಯಸಮೂಹಕ್ಕೆ ಆಶೀರ್ರೂಪಲ್ಲಿ ಕೊಡ್ತವು.
~
ಆ ಬೆಣ್ಣೆಯನ್ನುದೇ ಹಾಂಗೇ ತೆಕ್ಕೊಂಬ ಬದಲು, ಅದರ ತುಪ್ಪ ಮಾಡಿ ಸ್ವೀಕರುಸಿದರೆ, ಮುಗಿವಲಪ್ಪಗ ಎಷ್ಟೋ ಹೋಳಿಗೆ ಮನಸ್ಸಿಂಗೆ ಹೋಗಿರ್ತು!
ಅಪ್ಪು, ಇಡೀ ಆಶೀರ್ವಚನ ಕೇಳ್ತದು ಒಂದು ಕೊಶಿ ಆದರೆ, ಆಶೀರ್ವಚನಲ್ಲಿ ಬತ್ತ ಒಂದೊಂದು ಸತ್ವವ ತೆಗದು ನಿಧಾನಕ್ಕೆ ಮನನ ಮಾಡ್ತದು ಇನ್ನೊಂದು ಕೊಶಿ.
ಆ ಮಾತುಗಳಲ್ಲಿ ಒಂದೇ ವಿಶಯ ಅಲ್ಲ, ಹತ್ತಾರು-ನೂರಾರು ಕವಲುಗೊ ಇರ್ತು.
ಅವರ ಒಂದೊಂದು ವಿಶಯಕ್ಕೆ ನಮ್ಮ ತಲೆಲಿ ಒಂದೊಂದು ಮಹಾಭಾರತ ನೆಡವಲೆ ಸುರು ಆವುತ್ತು.
ಅಲ್ಲದೋ?
~
ಇಂದ್ರಾಣ ಆಶೀರ್ವಚನಲ್ಲಿ ಬಂದ ಒಂದು ಸಣ್ಣ ವಿವರಣೆ ಒಪ್ಪಣ್ಣನ ಮನಸ್ಸಿಲಿ ನಿಂದುಗೊಂಡತ್ತು.
ಹಲ್ಲಿನೆಡಕ್ಕಿಂಗೆ ಎರಟಿಮಧುರ (ಜ್ಯೇಷ್ಠಮಧು) ತುಂಡು ಸಿಕ್ಕಿಗೊಂಡ ಹಾಂಗೆ – ಅದೇ ಮನಸ್ಸಿಲಿ ಸಿಕ್ಕಿಗೊಂಡು ಇತ್ತು!
~
ವಿಶಯ ಮುಂದೆ ಹೋತು, ಚೆಂದದ ಆಶೀರ್ವಚನ ಮುಗಾತು.
ಚೆಂದಲ್ಲಿ ಕೂದು ಕೇಳಿದ ಎಲ್ಲೋರುದೇ ಎದ್ದು, ಚೆಂದದ ಸಾಲು ಮಾಡಿದವು – ಮಂತ್ರಾಕ್ಷತೆ ತೆಕ್ಕೊಂಬಲೆ.
~
ಗುರ್ತದೋರ, ಅತ್ಲಾಗಿತ್ಲಾಗಿಯಾಣೋರತ್ರೆ ಮಾತಾಡಿ – ನೋಡಿಗೊಂಡು ಇದ್ದ ಹಾಂಗೇ ಸಾಲು ತುಂಬ ಉದ್ದ ಆತು – ಕಾವೇರಿಕಾನ ಮಾಣಿಯ ತಲೆಕಸವಿನ ಹಾಂಗೆ! 😉
ಈಗ ನಿಂದರೆ ಅಸಲಾಗ – ಕಾಲುಬಚ್ಚುಗು, ಸಾಲು ಮುಗಿವಲಪ್ಪಗ ನಿಂಬ – ಹೇಳಿದ ಅಜ್ಜಕಾನಬಾವ,
ಅವಂಗೆ ನಿಂದುಗೊಂಬದು ಹೇಳಿರೆ ಮನಿಕ್ಕೊಂಬದರಿಂದ ಹೆಚ್ಚು ಉದಾಸ್ನ. 🙂

ಹಾಂಗೆ ಕರೆಲಿ ನಿಂದುಗೊಂಡು ಲೋಕಾಭಿರಾಮ ಮಾತಾಡಿಗೊಂಡು ಇತ್ತಿದ್ದೆಯೊ ಬೈಲಿನೋರು.
ಅಷ್ಟಪ್ಪದ್ದೇ, ಮೈಕ್ಕದ ದಡಬಡ ಒಂದರಿ ಕೇಳಿತ್ತು ಹೇಳಿ ತಿರುಗಿ ನೋಡಿದೆಯೊ –
ಕೈಲಿ ಎರಡು ಧರ್ಮಭಾರತಿ ಸುರುಟಿ ಹಿಡ್ಕೊಂಡು ಮೈಕ್ಕದ ಹತ್ತರೆ ಬಂದ ಶಾರದತ್ತೆ ಎಲ್ಲೋರಿಂಗೂ ಕೇಳ್ತ ನಮುನೆ ಜೋರು ಹೇಳಿದವು:
ಗುರುಗಳ ಆಶೀರ್ವಚನಂಗೊ ಹರೇರಾಮ ಬೈಲಿಲಿ ಸಿಕ್ಕುತ್ತು, ಎಲ್ಲೋರುದೇ ಅಲ್ಲಿ ಕೇಳ್ಳಕ್ಕು!
(ಸಂಕೊಲೆ: http://hareraama.in/av )

ಎಂಗಳ ಹತ್ತರೆಯೇ ನಿಂದುಗೊಂಡಿದ್ದ ಕಾಯರ್ಪಾಡಿಅತ್ತೆ ಹೇಳಿಗೊಂಡವು – ಓ, ಅಂಬಗ ಮನೆಗೆ ಹೋಗಿ ಪುನಾ ಕೇಳೆಕ್ಕು – ಹೇಳಿಗೊಂಡು.
ಅಪ್ಪು, ಈಗ ಅವರಲ್ಲಿಗೆ ಬ್ರೋಡುಬೇಂಡು ಬರುಸಿದ್ದವು ಮಾವ, ಹಾಂಗಾಗಿ ಬೈಲುಗೊಕ್ಕೆ ಬಪ್ಪಲಾವುತ್ತು.
ಈ ಸರ್ತಿ ಮಾವಂಗೆ ಬ್ರೋಡುಬೇಂಡು ಬಿಲ್ಲಿನೊಟ್ಟಿಂಗೆ ಮೊಬಯಿಲು ಬಿಲ್ಲುದೇ ಬಂದಿಕ್ಕುಗು.
– ಅದಾಗಲೇ – ಅತ್ತೆ ಮೊಬೈಲು ಓನುಮಡಗಿ ಮಗಳಿಂಗೆ ಇಡೀ ಆಶೀರ್ವಚನ ಕೇಳುಸಿದ್ದವು, ಇನ್ನು ಅವರ ಮನೆಲಿ ಅತ್ತಿಗೆ ಬೈಲು ಓನು ಮಡಗಿ ಪುನಾ ಕೇಳುಸುಗೋ ಏನೋ!
ಏನೇ ಆಗಲಿ, ಅತ್ತೆ ಧೈರ್ಯಲ್ಲಿ ಇದ್ದ ಹಾಂಗೆ ಕಂಡತ್ತು! 😉

ಈ ಬೈಲಿನ ಎಲ್ಲೋರಿಂಗೂ ಆಶೀರ್ವಚನಂಗೊ ಸಿಕ್ಕುತ್ತ ಹಾಂಗೆ ಮಾಡಿದ್ದು ತುಂಬ ಒಳ್ಳೆದಾತು – ಹೇಳಿ ಮಾತಾಡಿಗೊಂಡವು.
ಮಂತ್ರಾಕ್ಷತೆ ಸಿಕ್ಕಿತ್ತು, ಪ್ರಸಾದವೂ ಸಿಕ್ಕಿದ ಮತ್ತೆ, ಹೆರಟಿಕ್ಕಿ ಬೈಲಿನ ಹೊಡೆಂಗೆ ಹೆರಟೆಯೊ.
– ಗುರುಗಳ ಆಶೀರ್ವಚನವನ್ನೇ ಶುದ್ದಿ ಮಾತಾಡಿಗೊಂಡು.
~
ಅದಾ, ಎರಟಿಮಧುರದ ವಿಶಯ ಅಲ್ಲೇ ನಿಂದತ್ತು!
ಆಶೀರ್ವಚನಲ್ಲಿ ಪ್ರಸ್ತಾಪ ಆದ ಒಂದು ಸಣ್ಣ ವಿಶಯ ಎಂತರ ಹೇಳಿತ್ತುಕಂಡ್ರೆ:
ಅಲಂಕಾರಲ್ಲಿ ಎರಡು ವಿಧ ಅಡ – ಒಂದು ಶವಾಲಂಕಾರ, ಇನ್ನೊಂದು ಕೇಶವಾಲಂಕಾರ.
ಎರಡಕ್ಕೂ ವಿತ್ಯಾಸ ಹಿಡಿವದು ಭಾರೀ ಕಷ್ಟ ಅಡ.
ಒಂದರಲ್ಲಿ ನಮ್ಮೊಳ ಇಪ್ಪ ಪರಮಾತ್ಮ ಕೇಶವನ- ಅಲಂಕಾರ ಮಾಡ್ತದು, ಇನ್ನೊಂದರಲ್ಲಿ ನಮ್ಮ ಈ ದೇಹವ ಅಲಂಕಾರ ಮಾಡಿಗೊಂಬದು.
– ಇದರ ಬಗ್ಗೆ ತುಂಬ ವಿವರಣೆ ಕೊಟ್ಟು ಹೇಳಿತ್ತಿದ್ದವು ಗುರುಗೊ.
ಒಪಾಸು ಜೀಪಿಲೆ ಬಪ್ಪಗ ಇದರನ್ನೇ ಯೋಚನೆ ಮಾಡಿಗೊಂಡು ಬಂದೆ.
~
ಕೇಶವಾಲಂಕಾರ:
ನಮ್ಮ ಶರೀರದ ಒಳ ಇಪ್ಪದು ಕೇಶವನ ಅಂಶ.
ಕೇಶವ ಹೇಳಿತ್ತುಕಂಡ್ರೆ ದೇವರು!
ನಮ್ಮ ಆಂತರ್ಯಲ್ಲಿ ಇರ್ತ ದೇವರಿಂದಾಗಿ ನಾವು ಇಪ್ಪದು.
ದೇಹೋ ದೇವಾಲಯಃಪ್ರೋಕ್ತೋ – ಹೇಳಿದಾಂಗೆ, ನಿತ್ಯವೂ ಆಂತರ್ಯ ಶುದ್ಧಲ್ಲಿ ಇರೇಕು,
ನಿತ್ಯ ಪೂಜೆ ಮಾಡೇಕು,
ದೇವರ ಧ್ಯಾನ ಮಾಡೇಕು,
ನೈವೇದ್ಯ ಮಾಡೇಕು,
ಅಲಂಕಾರವನ್ನೂ ಮಾಡೇಕು – ಹೇಳ್ತದು ಇದರ ಸತ್ವ.

ಒಪ್ಪಣ್ಣಂಗೆ ಪಕ್ಕನೆ ನೆಂಪಾದ್ಸು ಕಾಂಬುಅಜ್ಜಿಯ!
ನಿತ್ಯ ಮಿಂದು ಮಡೀಲಿ ದೇವರ ನೆಂಪುಮಾಡಿಗೊಂಡು, ಮೋರೆಗೆ (ಅಡ್ಡ) ಕುಂಕುಮದ ಕಡ್ಡಿನಾಮ ಎಳಕ್ಕೊಂಡು, ಕೆಪ್ಪಟೆಕರೆಂಗೆ ಅರುಶಿನ ಉದ್ದಿಗೊಂಡು, ದಾಸನವೋ – ಹಬ್ಬಲಿಗೆಯೋ – ಗೆಂಟಿಗೆಯೋ; ಎಂತಾರು ಜೊಟ್ಟಿಂಗೆ ಸೂಡಿಗೊಂಡು ಲಕ್ಷಣವಾಗಿ ಕಾಂಗು!
ಅವರ ಒಳ ಇರ್ತ ದೇವರನ್ನೇ ಅಲಂಕಾರ ಮಾಡ್ತದು ಹೇಳ್ತ ಕಲ್ಪನೆಲಿ, ಇವಿಷ್ಟರ ಒಂದುದಿನವೂ ಬಿಡದ್ದೆ ಇದರ ಜೀವನಶೈಲಿಯ ಒಂದು ಅಂಗ ಆಗಿ ಮಾಡಿತ್ತಿದ್ದವು.
ಬೆಶಿನೀರು ಇದ್ದರೂ ಇಲ್ಲದ್ದರೂ ಮೀವದು ಮೀಗು, ಮನೆಲಿದ್ದರೂ, ಹೋದಲ್ಲಿ ಇದ್ದರೂ – ದೇವರ ನೆಂಪುಮಾಡುದು ಮಾಡಿಗೊಂಗು!
ಹೂಗು ಚೆಂದ ಇದ್ದರೂ, ಇಲ್ಲದ್ದರೂ – ತಲಗೆ ಒಂದು ಹೂಗು ಮಡುಗಲೇ ಬೇಕು – ಹೇಳ್ತ ಪದ್ಧತಿಲಿ ಮಡಿಕ್ಕೊಂಡಿತ್ತದು.
ಈ ರೀತಿಲಿ ಕಾಂಬುಅಜ್ಜಿ ಆಂತರ್ಯದ, ಅದರೊಟ್ಟಿಂಗೆ ಹೆರಾಣ ’ಚೆಂದ ಹೆಚ್ಚುಮಾಡಿಗೊಂಡು’ ಇತ್ತಿದ್ದವು.
ಶಂಬಜ್ಜಂಗುದೇ ಅದುವೇ ಕೊಶಿ ಇತ್ತೋ ಏನೋ! 😉

ನಮ್ಮ ಬಟ್ಟಮಾವಂದೇ ಹಾಂಗೆಯೇ – ಪ್ರಸೀದ ಪ್ರಸಾದಾಂ ದೇಹಿ – ಹೇಳಿಗೊಂಡು ಮಲ್ಲಿಗೆ ಮಾಲೆಯ ಒಂದು ತುಂಡೋ – ಅಲ್ಲದ್ದರೆ ಸಿಂಗಾರವೋ – ತೆಗದು ಜೊಟ್ಟಿಂಗೆ ಸಿಕ್ಕುಸೆಂಗು. ಆಂತರ್ಯದ ದೇವರಿಂಗಾಗಿ.

ಶವಾಲಂಕಾರ:
ದೇಹಕ್ಕೆ ಆಂತರ್ಯಲ್ಲಿ ಆತ್ಮ ಇದ್ದು ಹೇಳಿ ಗ್ರೇಶಿರೆ ಅದು ಜೀವ.

ಶವಾಲಂಕಾರದ ವಿವಿಧ ಸಾಧನಂಗೊ...

ಈ ದೇಹ ಎನ್ನ ಸೌಂದರ್ಯದ ಸಾಧನ ಅಷ್ಟೇ – ಹೇಳಿ ಗ್ರೇಶಿರೆ ಅದು ಶವ. ಅಲ್ಲದೋ?
ಇದರ ಕಾಂಬಲೆ ಚೆಂದ ಮಾಡಿದಷ್ಟು ಎನ್ನ ಹೆಸರು ಜಾಸ್ತಿ ಆವುತ್ತು, ಹಾಂಗಾಗಿ ಚೆಂದ ಮಾಡಿಗೊಳ್ತ ಕೆಟ್ಟುಂಕೆಣಿಗಳ ಮಾಡಿಗೊಳ್ತವು.
ಎಂತ ಸಿಕ್ಕಿತ್ತೋ ಅದರ ಉದ್ದಿ ಮೈಯ ಬೆಳಿ ಮಾಡಿಗೊಂಡು,
ಕೆಂಪು ಪೈಂಟುಮೆತ್ತಿಗೊಂಡು ತೊಡಿಗೆ ಇಲ್ಲದ್ದ ಆಕಾರ ಕೊಟ್ಟುಗೊಂಡು,
ಲಕ್ಷಣವಾಗಿಪ್ಪ ದಪ್ಪ ಹುಬ್ಬಿನ ಕಣ್ಣಿಂಗೆ ಕಾಣದ್ದಷ್ಟು ತೆಳುವಿಂಗೆ ಮೈಮೆ-ಕಪ್ಪು ಮಾಡಿಗೊಳ್ತದು ಕಾಣ್ತು.
ಎಲ್ಲಾ ನೈಸರ್ಗಿಕ ಸೌಂದರ್ಯವ ಕರೆಂಗೆ ಮಡಗಿ, ಹೊಸತ್ತಾದ ’ಇಲ್ಲದ್ದ’ ಚೆಂದವ ಬರುಸಿಗೊಂಡು..
– ಒಂದರಿ ಬರುಸಿರೆ ಆತೋ – ಸಮಯ ಕಳುದು ಪುನಾ ನೈಸರ್ಗಿಕಕ್ಕೆ ತಿರುಗುತ್ತಿಲ್ಲೆಯೋ – ಪುನಾ ಹಾಳುಮಾಡಿಗೊಂಡತ್ತು…

ಹೀಂಗೇ ನೆಡೆತ್ತು ಸಿನೆಮದವರ ಅಲಂಕಾರ!
ಅವರ ಅಜ್ಜಿಯಕ್ಕಳೂ ಎಂತ ಮಾತಾಡ್ತವಿಲ್ಲೆ ಕಾಣ್ತು ಅದಕ್ಕೆ!
ತಲಗೆ ಹೂಗುಸೂಡುದು ಬಿಡಿ – ಕಿಲ್ಪು ಹಾಕಿ ತಲೆಕಸವು ಕಟ್ಟುತ್ತವೂ ಇಲ್ಲೆ!
ಪ್ಲೇಷ್ಟಿಕಿನ ಟಂಗೀಸಿನ ನಮುನೆ ಕಾಣ್ತ ಪೈಂಟು ಕೊಟ್ಟು ಹರಾಗಿ ಬಿಡುಸೆಂಗು.
ಎಣ್ಣೆ ಹಾಕಿದರೆ ಪಸೆ ಆವುತ್ತಿದಾ – ಅದಕ್ಕೆ ಬಣ್ಣ ಬಣ್ಣದ ನಮುನೆ ನಮುನೆದು – ಎಂತದೋ ಎಸಿಡು ಎರಗು – ಕೆಂಪಿಂದು, ನೀಲಿದು, ಪಚ್ಚೆದು – ಎಂತೆಲ್ಲ- ನವಗರಡಿಯ! 🙁
ಕುಪ್ಪಿ ಮಾಂತ್ರ ಬೇರೆಬೇರೆ ಅಡ, ಒಳ ಇರ್ತದು ಎಲ್ಲ ಒಂದೇ ನಮುನೆಡ, ಅಜ್ಜಕಾನ ಬಾವ ಹೇಳಿದ, ಅವಂಗೆ ಹೇಂಗೆ ಗೊಂತೋ! 😉

ಕಾಂಬುಅಜ್ಜಿ ಆಂತರ್ಯದ ದೇವರಿಂಗೆ ಬೇಕಾಗಿ ಅಲಂಕಾರ ಮಾಡಿಗೊಂಡಿತ್ತಿದ್ದವು.
ಮಂಗಳಕರ ಅಲಂಕಾರ ಅದು. ಅವರ ನೋಡೊಗಳೇ ಒಂದು ಗವುರವ ಬಕ್ಕು.
ಪಾತಿಅತ್ತೆಯ ಕಾಲದವ್ವೂ ತಕ್ಕಮಟ್ಟಿಂಗೆ ಮುಂದರೆಸೆಂಡು ಬಂದವು ಅದರ.
ಮತ್ತಾಣೋರು ಮಾಂತ್ರ ರೂಪವ ಕುರೂಪ ಮಾಡ್ಳೇ ನೋಡ್ತಾ ಇದ್ದವು.

ಕೇಶವಾಲಂಕಾರ ಸ್ವಾಲಂಕಾರ ಆಗಿ, ಕೊನೆಕೊನೆಗೆ ಶವಾಲಂಕಾರವೇ ಆಗಿಬಿಟ್ಟಿದು.

~

ಅದೇನೇ ಇರಳಿ,
ಆಶೀರ್ವಚನಲ್ಲಿ ಬಂದ ಸಣ್ಣ ವಿಶಯ ತಲೆಲಿ ತಿರುಗಲೆ ಸುರು ಆಗಿತ್ತು, ಹಾಂಗೆ ಬೈಲಿಂಗೆ ಹೇಳುವೊ ಹೇಳಿ ಕಂಡತ್ತು.
ಹೀಂಗಿರ್ತ ನೂರಾರು ವಿಶಯಂಗೊ ಆ ದಿನ ಬಯಿಂದು.. ಅಲ್ಲವನ್ನೂ ಒಂದೊಂದು ಶುದ್ದಿ ಮಾಡಿರೆ, ಗುರುಗಳ ಒಂದು ಆಶೀರ್ವಚನ
ಒಪ್ಪಣ್ಣಂಗೆ ಒಂದೊರಿಶಕ್ಕೆ ಸಾಕೋ – ಹೇಳಿ ಕಂಡು ಆಶ್ಚರ್ಯವೂ, ಕೊಶಿಯೂ ಆತು.

ಸ್ವಾಲಂಕಾರದ ವಿಚಾರಕ್ಕೆ ಒಂದು ಹೊಸ ರೂಪ ಸಿಕ್ಕಿದ ಕೊಶಿ ಒಪ್ಪಣ್ಣಂಗೆ ಆಗಿಂಡೇ ಇತ್ತು.
ಇಷ್ಟೆಲ್ಲ ಶುದ್ದಿ ಮಾತಾಡಿರೂ, ಶುಬತ್ತೆಮಗಳು ಕೇಶವಾಲಂಕಾರಂದ ಬದಲು ಕೇಶಾಲಂಕಾರ ಸುರು ಮಾಡದ್ರೆ ಸಾಕು!

ಒಂದೊಪ್ಪ:
ಕೇಶವನ ಅಲಂಕಾರ ಮಾಡಿರೆ ಶವ ಸರ್ವಾಲಂಕಾರವೂ ಆಗಿಬಿಡ್ತು, ಆದರೆ ಶವಾಲಂಕಾರ ಎಷ್ಟುಮಾಡಿರೂ ಕೇಶವಾಲಂಕಾರ ಆಗ!

ಸೂ:
ಶ್ರೀಗಳ ಪ್ರವಚನವ ಹರೇರಾಮ ಬೈಲಿಲಿ ಕೇಳುಲಾವುತ್ತು: http://hareraama.in/av

40 thoughts on “ಶವಾಲಂಕಾರ – ಕೇಶವಾಲಂಕಾರ..!!

  1. ಹೃದಯಲ್ಲಿ ಕೇಶವ ಇದ್ದರೆ ನಾವು ‘ಶಿವ’ (ಮಂಗಲಮಯ)
    ಇಲ್ಲದ್ದರೆ ‘ಶವ’ (ಅಮಂಗಲಮಯ)

  2. gurugala aasheervachanada vishayave ondu shuddi.
    eega hechhinavakku shavaalankarave beku.
    keshavaalankara kadamme aidu.
    idara odi aadaru elloru tilukkomba hange madide allada oppanno.
    hange ondoppavu kushi aathu.

  3. ನೆನಪು ಮಾಡಿದ್ದದಕ್ಕೆ ಧನ್ಯವಾದಂಗೋ ಒಪ್ಪಣ್ಣ….

    ಕೇಶವಾಲಂಕಾರ ಮಾಡುದು ಹೆಂಗೂ ಮರತ್ತು ಹೋಗಿತ್ತಿದ್ದು….. ಕೇಶವನ ಮೂಲ ಸ್ವರೂಪ ಹೇಳಿರೆ “ಆನಂದ” ಅಲ್ಲದ! ಆ ಸ್ವರೂಪಲ್ಲಿ ಅವನ ಇಪ್ಪಲು ಕೂಡ ಬಿಟ್ಟುಗೊಂಡು ಇತ್ತಿದ್ದಿಲ್ಲೆಯ….. ಇನ್ನು ಪ್ರಯತ್ನ ಮಾಡೆಕ್ಕು….

    1. ನೀರಮೂಲೆ ಜಯಶ್ರೀಅಕ್ಕಾ, ನಮಸ್ಕಾರಂಗೊ.
      ಬೈಲಿಂಗೆ ಬಂದು, ಶುದ್ದಿ ಓದಿ, ಒಪ್ಪ ಕೊಟ್ಟದು ತುಂಬಾ ಕೊಶಿ ಆತು… 🙂
      ಬೈಲಿಂಗೆ ಬನ್ನಿ, ಶುದ್ದಿ ಬರೆಯಿ..

  4. ಅ೦ತರ೦ಗ-ಬಹಿರ೦ಗ ಅಲ೦ಕಾರ೦ಗಳ ಸೂಕ್ಶ್ಮವ ಗುರುಗಳ ಆಶೀರ್ವಚನ ಕೇಳಿ,ಎಡಕ್ಕಿಲಿ ಕುಶಾಲು ಸೇರುಸಿ ಬೈಲಿ೦ಗೆ ವಿವರಿಸಿದ ರೀತಿ ಭಾರೀ ಲಾಯ್ಕಾಯಿದು ಒಪ್ಪಣ್ಣಾ.ಅರ್ಥ ಮಾಡಿ, ಅನುಸರಿಸೆಕ್ಕಾದ ಮಾತುಗೊ.

  5. ಒಪ್ಪಣ್ಣೋ…..!!!!
    ತುಂಬಾ ಚೆಂದದ ಶುದ್ದಿ. ನಮ್ಮ ಜೀವನದ ಶಾಶ್ವತ ಸತ್ಯವ ಸಂಸ್ಥಾನ ಆಶೀರ್ವಚನಲ್ಲಿ ಹೇಳಿದ ವಿಷಯವ ಮಥನ ಮಾಡಿ ಬೆಣ್ಣೆ ಕಡದು ತುಪ್ಪ ಮಾಡಿ ಹೋಳಿಗೆಯ ಒಟ್ಟಿಂಗೆ ತಿಂಬಲೆ ಕೊಟ್ಟಿದೆ. ಎಂಗೊಗೆ ನೀನು ಕೊಟ್ಟ ತುಪ್ಪಹಾಕಿದ ಹೋಳಿಗೆಗೆ ಹಸರು ಸೀವು ಸೇರ್ಸಿ ತಿಂದ ಹಾಂಗೆ ಆತು!!!:-):-)

    ನಮ್ಮ ಜೀವನದ ಉದ್ಧಾರಕ್ಕಾಗಿ ಗುರುಗೋ ಬೇರೆ ಬೇರೆ ರೀತಿಲಿ ನವಗೆ ಉಪದೇಶ ಮಾಡ್ತಾ ಇದ್ದವು. ನಿನ್ನ ಹಾಂಗೆ ಅದರ ಬೆಣ್ಣೆ ತೆಗದು ತುಪ್ಪ ಮಾಡಿ ನಿತ್ಯ ಉಪಯೋಗ ಮಾಡಿಗೊಂಬಲೆ ಎಡಿಗಾದರೆ ನಮ್ಮ ಜನ್ಮ ಸಾರ್ಥಕ ಅಕ್ಕು ಅಲ್ಲದಾ?
    ಒಂದರಿ ಗುರು ಭೇಟಿಗೆ ಹೋಗಿ ಬಂದ ಹಾಂಗೇ ಆತು ನೀನು ವಿವರಿಸಿದ್ದದರಲ್ಲಿ!!! :-):-)

    ಬೋಸ ಭಾವನ ಹತ್ತರೆ ಮೊದಲೇ ಹೇಳೆಕ್ಕಾತು, ಸಂಶಯ ಬಂದದರ ಅಕೇರಿಗೆ ಕೇಳೆಕ್ಕು ಹೇಳಿ!! 😉 ಪಾಪ!! ಜೆಡ್ಡು ಮಾವಂಗೆ ಸುಮ್ಮನೇ ಕೋಪ ಬರ್ಸಿದ ಹಾಂಗೆ ಆತು!! 🙂

    ನಿನ್ನ ಹಲ್ಲೆಡಕ್ಕಿಲಿ ಸಿಕ್ಕಿದ ಎರಟ್ಟಿಮಧುರ ನಿನಗೆ ಮಾಂತ್ರ ಮಧುರ ಆದ್ದದಲ್ಲ, ಎಂಗೊಗೆಲ್ಲ ಆತು ನೋಡು!!!!
    ನೀನು ಹೇಳುದು ಸರಿಯೇ!!! ಕಾಂಬು ಅಜ್ಜಿಯ ಹಾಂಗೆ ಇಪ್ಪೋರಲ್ಲಿ ನವಗೆ ನೋಡುವಾಗಲೇ ದೈವತ್ವ ಕಾಣ್ತಲ್ಲದಾ? ಅವರ ನೋಡಿ ಅಪ್ಪಗಳೇ ತನ್ನಷ್ಟಕ್ಕೇ ನವಗೆ ಗೌರವ ಮನಸ್ಸಿಲಿ ತುಂಬಿಗೊಳ್ತು.

    ದೇವರ ವಾಸ ಸ್ಥಾನ ನಮ್ಮ ದೇಹವೇ ಹೇಳ್ತದಕ್ಕೆ ಸುಮಾರು ದಿಕ್ಕೆ ನಮ್ಮ ಪುರಾಣ ಗ್ರಂಥಂಗಳಲ್ಲಿ ಹೇಳಿದ್ದವು. ಹೇಳಿದ್ದದು ಬೇರೆ ಬೇರೆ ರೀತಿ ಆದರೆ ತತ್ವ ಒಂದೇ!!!
    ಶ್ರೀ ಶಂಕರಾಚಾರ್ಯರು ಶ್ರೀ ಸೌಂದರ್ಯಲಹರಿಯ 27ನೇ ಶ್ಲೋಕಲ್ಲಿ ಹೇಳಿದ್ದವಲ್ಲದಾ…

    ಜಪೋ ಜಲ್ಪಃ ಶಿಲ್ಪಂ ಸಕಲಮಪಿ ಮುದ್ರಾವಿರಚನಾ
    ಗತಿಃ ಪ್ರಾದಕ್ಷಿಣ್ಯಕ್ರಮಣಮಶನಾದ್ಯಾಹುತಿವಿಧಿಃ ।
    ಪ್ರಣಾಮಃ ಸಂವೇಶಃ ಸುಖಮಖಿಲಮಾತ್ಮಾರ್ಪಣದೃಶಾ
    ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್ ॥

    ಹೇಳಿದರೆ, ಆತ್ಮ ಸಮರ್ಪಣೆಯ ಭಾವಂದ ಬಪ್ಪ ಎನ್ನ ಎಲ್ಲಾ ಮಾತುಗೋ ನಿನ್ನ ಜಪ ಆಗಲಿ. ಎನ್ನ ಕೈಂದ ಅಪ್ಪ ಎಲ್ಲಾ ಕೆಲಸ ಕಾರ್ಯಂಗಳೂ ನಿನ್ನ ಮುದ್ರೆಗಳ ವಿವರ್ಸಲಿ. ಆನು ನಡದ್ದೆಲ್ಲವೂ ನಿನಗೆ ಪ್ರದಕ್ಷಿಣೆಯಾಗಲಿ. ಆನು ತಿಂಬಂಥ ಆಹಾರ (ಪಂಚೇಂದ್ರಿಯಲ್ಲಿ ಗ್ರಹಿಸಿಗೊಂಬದು, ಮಾನಸಿಕವಾಗಿ, ಬೌದ್ಧಿಕವಾಗಿ) ಎಲ್ಲವೂ ನಿನಗೆ ಹೋಮದ ಆಹುತಿಯಾಗಲಿ. ಆನು ಮನುಗುದೆಲ್ಲ ನಿನಗೆ ಪ್ರಣಾಮ ಮಾಡುದಾಗಲಿ. ಮತ್ತೆ ಆನು ಮಾಡುವ ಎಲ್ಲಾ ಕಾರ್ಯಂಗಳೂ ನಿನ್ನ ಪೂಜೆಯ ಭಾಗಂಗಳೇ ಆಗಲಿ ಹೇಳಿ!!!
    ಇದು ಒಂದನ್ನೇ ಆನು ಹೆರ್ಕಿದ್ದು!! ಹೀಂಗಿಪ್ಪದು ಇನ್ನುದೇ ಇದ್ದು!!! 🙂

    ನಮ್ಮ ಶರೀರವನ್ನೇ ದೇವಾಲಯವಾಗಿ ನೆನೆಸಿ ನಮ್ಮ ಆಂತರ್ಯಲ್ಲಿ ಇಪ್ಪ ದೇವರ ನಮ್ಮ ಕೆಲಸ ಕಾರ್ಯಂಗಳಿಂದ, ನಮ್ಮ ರೀತಿ ನೀತಿಗಳಿಂದ, ನಮ್ಮ ಸರಳತೆಂದ ಆತ್ಮಾರ್ಥವಾಗಿ ತೃಪ್ತಿ ಪಡ್ಸೆಕ್ಕು ಹೇಳಿ ಹೇಳಿದ್ದಲ್ಲದಾ?
    ನೀನು ಹೇಳಿದ ಹಾಂಗೆ ಕೇಶವಾಲಂಕಾರ ಸ್ವಾಲಂಕಾರ ಆದ್ದದು ಈಗ ಇನ್ನೊಬ್ಬನ ಮೆಚ್ಚುಸುಲೆ ಇಪ್ಪ ಶವಾಲಂಕಾರ ಮಾತ್ರವೇ ಆಯಿದು ಅಲ್ಲದಾ?!!

    ಒಂದೊಪ್ಪ ಲಾಯ್ಕಾಯಿದು.

    1. ಸೌಂದರ್ಯದ ಬಗ್ಗೆ ಇಪ್ಪ ಶುದ್ದಿಯ ಒಪ್ಪಲ್ಲಿ ಸೌಂದರ್ಯಲಹರಿಯ ಸುಂದರ ಶ್ಲೋಕ!!
      ಅರ್ಥಸಹಿತ ಬೈಲಿಂಗೆ ತಿಳುಶಿದ್ದು ಇನ್ನೂ ಕೊಶಿ ಆತು.

      ಅಕ್ಕಾ, ಸೌಂದರ್ಯಲಹರಿ ಬೈಲಿಂಗೆ ಹೇಳ್ತಿರೋ? 🙂

      1. ಒಪ್ಪ ನಿನಗೆ ಕೊಶಿ ಆದ್ದದು ಎನಗೆದೆ ಕೊಶಿ ಆತು ಒಪ್ಪಣ್ಣಾ. 🙂

        [ಸೌಂದರ್ಯಲಹರಿ ಬೈಲಿಂಗೆ ಹೇಳ್ತಿರೋ?]

        ಒಪ್ಪಣ್ಣ, ಸೌಂದರ್ಯಲಹರಿಯ ಆನು ಅರ್ಥೈಸಿಗೊಂಡ ಹಾಂಗೆ ಬೈಲಿಂಗೆ ಹೇಳುಲಕ್ಕು. ಎನ್ನ ಪುರುಸೊತ್ತಿಲಿ ಬರವಲೆ ಪ್ರಯತ್ನ ಮಾಡ್ತೆ ಆತೋ. ಧನ್ಯವಾದ. 🙂

  6. ಇದರ ಓದಿ ಅಪ್ಪಗ ವಿಡಿಯೋ ಮಾವಂದ್ರ ವಿದಿಯೊ ನೋಡುದಕ್ಕಿಂತಲೂ ಹೆಚ್ಹು ಖುಷಿ ಆತು . ಗುರುಗಳ ಪ್ರವಚನವ ಒಪ್ಪಣ ಅವನದ್ದೇ ಆದ ಶೈಲಿಲಿ ಬರದು ಎನ್ನ ಹಾನ್ಗಿಪ್ಪೋರು ಓದಿಅಪ್ಪಗ ಮಕ್ಕೊಗೆ ಹೇಳಿಕೊದ್ಲೆ ಬೇಕಾದ ಉಪಮಾಲಂಕಾರ, ರೂಪಕಾಲಂಕಾರ ಎಲ್ಲವುದೇ ಸಿಕ್ಕಿತ್ತು .
    ಕೆಲವೆಲ್ಲ ತಿಳಿ ಹಾಸ್ಯದ ಹಾಂಗೆ ನವಗೆ ಮೇಲ್ನೋಟಕ್ಕೆ ಕಂಡರೂ ಅದರ ಪರಿಸ್ತಿತಿಯ ಗಮ್ಭ್ಹೀರತೆ ನವಗೆ ನೆಗೆ ಬರುಸ .”ಅವಂಗೆ ನಿಂದುಗೊಂಬದು ಹೇಳಿರೆ ಮನಿಕ್ಕೊಂಬದರಿಂದ ಹೆಚ್ಚು ಉದಾಸ್ನ” ೪ ದಿನ ಏಳುಲೆದಿಯದ್ದೆ ಮನುಗಿ ಅಪ್ಪಗ ಇದು ಗೊಂತಪ್ಪದು . ಅಸ್ತಪ್ಪಗ ನವಗೆ ನಿಂದುಗೊಮ್ಬಲೇ ಮನಿಕೊಮ್ಬದಕ್ಕಿತ ಹೆಚ್ಚು ಉದಾಸಿನ ಆವುತ್ತಿಲೆಯ? ಗುರುಗಳ ಸಮಕ್ಷಮಲ್ಲಿ ಇದ್ದುಗೊಂಡು ಮಂಕುತಿಮ್ಮ ಎಲ್ಲಿ ಹೇಳಿ ಕೇಳುದು ದೀಪದ ಅಡಿಲಿ ಕಸ್ತಲೆ ಹೇಳುವ ಪ್ರಸಂಗ ಅಲ್ಲದ?

    1. ಭಾಗ್ಯತ್ತಿಗೇ..
      ಉಪಮಾಲಂಕಾರ ರೂಪಕಾಲಂಕಾರಂಗೊ ನಿಂಗೊಗೆ ಕೊಶಿ ಆತು, ಅದರ ನೋಡಿ ಬೈಲಿಂಗೇ ಕೊಶಿ ಆತು.

      ಆದರೆ ರೂಪಕಾಲಂಕಾರ ಹೇಳಿತ್ತುಕಂಡ್ರೆ, ರೂಪತ್ತೆಯ ಅಲಂಕಾರವೋ – ಕೇಳಿಗೊಂಡಿತ್ತಿದ್ದ, ಮೊನ್ನೆ ನೆಗೆಮಾಣಿ.. 😉

    1. ಓ!, ಶುದ್ದಿಂದ ಶುದ್ದಿಮೂಲಕ್ಕೆ ಸಂಕ! ಕೊಶಿ ಆತು ಚೆನ್ನಬೆಟ್ಟಣ್ಣ.
      ಮೊನ್ನೆಯೇ ಸಂಕಹಾಕೆಕ್ಕು ಹೇಳಿ ಇತ್ತಿದ್ದೆ, ಒಪ್ಪಣ್ಣಂಗೆ ಇದೆಲ್ಲ ಅರಡಿಯ! 🙁

  7. ಗುರುಗಳ ಆಶೀರ್ವಚನಾಮೃತವ ಸೊಗಸಾಗಿ ವಿವರ್ಸಿದ್ದಿ. ಎಡೆಡೆಲಿ ನೆಗೆಯೂ ಸೇರಿ ಪಷ್ಟಾಯಿದು ಶುದ್ದಿ.

    1. ಧನ್ಯವಾದಂಗೊ, ಅನುಶ್ರೀ .. 🙂
      ನಿಂಗಳ ಹಾಂಗೆ ಲಿಕಾರ್ಡು(record) ಮಾಡ್ತ ಸವುಕರಿಯ ಇಲ್ಲದ್ದೆ ಸೋತತ್ತು ನಾವು! 😉

  8. ಲೇಖನ ಲಾಯ್ಕಾಯಿದು. ಈಗೀಗ ಅಲಂಕಾರ ಮಾಡುದು ಹೇಳಿರೆ ಮೇಕಪ್ಪು ಮಾಡುದೇ. ಎರಡೂ ಅಲಂಕಾರಂಗಳ ಹೋಲಿಕೆ ಮಾಡಿ ಬರದ್ಸು ಕೊಶಿ ಆತು.

    1. ರಾಧಕ್ಕಾ..
      ಜೆಡ್ಡುಮಾವ ಜೋರುಮಾಡಿದ್ದರ ಅವಕ್ಕೆ ಹೇಳಿಕ್ಕೆಡಿ, ಇನ್ನಾಣ ಸರ್ತಿ ಒಪ್ಪಣ್ಣನ ಹತ್ತರೆ ಬಿಡವು! 😉

      1. ಇನ್ನೊಂದರಿ ಓದಿದೆ. ಭಾರೀ ಲಾಯ್ಕಾಯ್ದು. ಬರೇ ಸಿನೆಮಾದೊರ ಮಾಂತ್ರ ಎಂತಕ್ಕೆ ಹೇಳುದು. ಈಗಾಣ ಹೆಚಿನ ಮಕ್ಕೊ ಹಾಂಗೆ… ಅಲಂಕಾರದ ಮಟ್ಟಿಂಗೆ. ಮತ್ತೆ ವಾತಾವರಣವೊ ಹಾಂಗೆ ಇದ್ದು. ಹೊಸ ಪೀಳಿಗೆಗೆ ಆದರ್ಶ ಸಿನೆಮಾದೊವೆ ಅಲ್ಲದೊ? TV ಹಾಳು ಮಾಡಿತ್ತು ಮಾರಾಯ ನಮ್ಮ. ನೊಡದ್ದೆಯೊ ಆವ್ತಿಲ್ಲೆ, ನೋಡಿದರೆ ಹೀಂಗಾವ್ತು.

  9. ಭಲೇ! ಅದ್ಭುತ.!! ವಿಸ್ಮಯ!!!. ಆದರೂ ಸತ್ಯ.

    ಓದುವಾಗ ಕತೆ ಕಣ್ಣಿಲ್ಲಿ ಕಂಡಂಗೆ ಆತೊಂದರಿ .

    1. ಚೆನ್ನೈಬಾವಾ..
      ಮೊನ್ನೆ ಅವರ ಆಶೀರ್ವಚನ ನೇರವಾಗಿ ಕೇಳೆಕ್ಕಾತು. ಚೆ! ಪಷ್ಟಾಗಿತ್ತು.
      ಕೂದೋರಿಂಗೆಲ್ಲರಿಂಗೂ, ಅಷ್ಟೇ ಅಲ್ಲದ್ದೆ – ಕಾಯರ್ಪಾಡಿ ಅತ್ತಿಗೆಗೂ ಕಣ್ಣಿಂಗೆ ಕಟ್ಟಿದ ಹಾಂಗಾಗಿತ್ತಡ!

  10. ಅದ್ಭುತವಾಗಿದ್ದು. ಮನ್ನೆ ಇಲ್ಲಿ ಗುರುಗಳ ಒಪ್ಪದ ರೆಕಾರ್ಡ್ ಕೇಳಿದ್ದು ನೆಂಪಾತು.

  11. ಒಳ್ಲೇಯ ಲೇಖನ ಒಪ್ಪಣ್ನ.ಧನ್ಯವಾದಂಗೊ……

  12. ಒಪ್ಪಣ್ಣಾ, ಶುದ್ದಿ ಹೇಳಿರೆ ಶುದ್ದಿಯೇ.
    ಪ್ರಾಸಬದ್ಧವಾಗಿ ಇಪ್ಪ ಎರಡು ಶಬ್ದಂಗೊ, ಒಂದಕ್ಷರ ವೆತ್ಯಾಸಲ್ಲಿ, ಎಷ್ಟೊಂದು ಅರ್ಥ ಬದಲಿಸಿತ್ತು ಅಲ್ಲದಾ. ನಮ್ಮ ಜೀವನವೂ ಹೀಂಗೆ ಅಲ್ಲದಾ. ಉಸಿರು ಹೇಳ್ತು ಒಂದು ನಿಂದರೆ ಶವವೇ ಅಲ್ಲದಾ. ಶರೀರ ಮಾಧ್ಯಮವಾಗಿ ಧರ್ಮ ಸಾಧನೆ ಮಾಡೆಕ್ಕು ಹೇಳುವದೂ ಇದಕ್ಕೇ ಅಲ್ಲದಾ. ಬಾಹ್ಯಾಲಂಕಾರ ಹೆರಾಣಾವಕ್ಕೆ ಚೆಂದ ಕಾಂಬಲೆ ಆದರೆ, ಆಂತರ್ಯದ ಅಲಂಕಾರ ಆತ್ಮೋನ್ನತಿಗೇ ಅಲ್ಲದಾ. ಇದೇ ಆತ್ಮ, ಪರಮಾತ್ಮನಲ್ಲಿ ಲೀನ ಆಯೆಕ್ಕಾದ್ದಲ್ಲದಾ.
    ಶ್ರೀ ಗುರುಗಳ ಪ್ರವಚನ ಹೇಳಿರೆ ಹಾಂಗೆಯೇ. ಎಲ್ಲರ ಕಣ್ಣು ತೆರೆಸುವ ವಚನಂಗೊ. “ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ”

    [ತುಪ್ಪ ಮಾಡಿ ಸ್ವೀಕರುಸಿದರೆ, ಮುಗಿವಲಪ್ಪಗ ಎಷ್ಟೋ ಹೋಳಿಗೆ ಮನಸ್ಸಿಂಗೆ ಹೋಗಿರ್ತು!]
    [ಹಲ್ಲಿನೆಡಕ್ಕಿಂಗೆ ಎರಟಿಮಧುರ (ಜ್ಯೇಷ್ಠಮಧು) ತುಂಡು ಸಿಕ್ಕಿಗೊಂಡ ಹಾಂಗೆ]
    ತುಪ್ಪ, ಹೋಳಿಗೆ, ಎರಟಿ ಮಧುರ ಎಲ್ಲವನ್ನೂ ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದಂಗೊ

    ತಿಳಿಹಾಸ್ಯಂಗೊ ಕೊಶೀ ಆತು:
    [ಕಾವೇರಿಕಾನ ಮಾಣಿಯ ತಲೆಕಸವಿನ ಹಾಂಗೆ! ;-)]
    [ಅವಂಗೆ ನಿಂದುಗೊಂಬದು ಹೇಳಿರೆ ಮನಿಕ್ಕೊಂಬದರಿಂದ ಹೆಚ್ಚು ಉದಾಸ್ನ.]
    [ಮಂಕುತಿಮ್ಮ, ಮಂಕುತಿಮ್ಮ ಹೇಳಿ ಎರಡುಮೂರು ಸರ್ತಿ ಹೇಳುವಗ ಹಿಂದೆಕೂದ ಬೋಸಬಾವ° ಮಾತಾಡುಸಿ ಕೇಳಿದ, ಅವ° ಎಲ್ಲಿ ಕೂಯಿದ°? – ಹೇಳಿಗೊಂಡು!]

    1. ಶರ್ಮಪ್ಪಚ್ಚೀ..
      ಆತ್ಮೋನ್ನತಿಯ ಬಗೆಗೆ ಗುರುಗೊ ತುಂಬ ಚೆಂದಕ್ಕೆ ಹೇಳಿದ್ದವು, ಒಪ್ಪಣ್ಣಂಗೆ ಅಷ್ಟೆಲ್ಲ ಅರಡಿಗಾಯಿದಿಲ್ಲೆ 🙁
      ನಮ್ಮೆಲ್ಲರ ಕಣ್ಣು ತೆರೆಸಿದ ಗುರುವಾಣಿಗೆ ನಮೋನಮಃ..

      ಶುದ್ದಿಲಿ ನಿಂಗೊಗೆ ಕೊಶಿಕೊಟ್ಟ ಗೆರೆ ನೋಡಿ ಒಪ್ಪಣ್ಣಂಗೂ ಕೊಶಿ ಆತು! 🙂

    1. ಶಾಂಬಾವಾ..
      ಧನ್ಯವಾದಂಗೊ.

      ನಿಂಗೊ ಶುದ್ದಿ ಬರೆತ್ತಿರೋ? ಬರೆತ್ತರೆ ಬೈಲಿಲಿ ರಿಜಿಸ್ತ್ರಿ ಆಗಿಬಿಡಿ!
      ಬನ್ನಿ, ಒಟ್ಟಿಂಗೆ ಮಾತಾಡುವೊ°…

  13. Thumba olle lekhana. Nammali idu eega hecchaidu. Opuuthe ondu hanthadavarege alankara ok. Aadare ee Sleve less, Hair Clouring idella madidare avara bantetthigala hange kanthu.

    Noduvaga gawrava battha hange dress madekku.

    Matthe jembarangokke hopaga adshtu mundu/veshti kattire olledu. Jeans yella hagippalli hakulaga.

    1. { Matthe jembarangokke hopaga adshtu mundu/veshti kattire olledu }
      ಅದ್ಭುತ ಸಲಹೆ ಮಾಣಿ..
      ಹೇಳಿದಾಂಗೆ, ಬೈಲಿಲಿ ಮೇಗೆ ಇಪ್ಪ ’ಭಾಷೆ’ ಕೊಳಿಕ್ಕೆಲಿ ನಿನಗೆ ಕನ್ನಡಲ್ಲೇ ಬರವಲಕ್ಕನ್ನೆ?

  14. “ನಮ್ಮ ಶರೀರದ ಒಳ ಇಪ್ಪದು ಕೇಶವನ ಅಂಶ.”—ಬೋಸನ್ಗೆ ಎನ್ತಾರೂ ಡವುಟು ಬೈನ್ದಿಲ್ಯೋ? ಎಲ್ಲಿದ್ದ ಹೆಳಿ, ಆರಿದು ಕೇಶವ ಹೆಳಿ 😉 ನಿನಗೆ ಹೊಟ್ಟೆ ಮಾನ್ತ್ರ ಇಪ್ಪೊದಲ್ದ! ರೀತತ್ತೆಗೆ ತುಮ್ಬಾ ವಿಷಯ ಗೊನ್ತಿಪ್ಪ ಹಾನ್ಗಿದ್ದು!

    ಒಪ್ಪನ್ನ ನಿನ್ನ ಈ ಚಿನ್ತನೆ ಲಾಯ್ಕ ಆಯ್ದು.
    ಕೆಲವರಿನ್ಗೆ “ಚಿನ್ತೆ” ಆಯ್ದು! ಹೆಮ್ಮಕ್ಕೊಗೆ ಹೆಳಿ ಬಾಯ್ಬಿತ್ತು ಹೆಳೆಕ್ಕಾವ್ತು, ಇಲ್ಲದ್ರೆ ಎನ್ನ ಬಜೀ ಗೆನ್ಟ ಹೆಳಿ ಆಲೊಚನೆ ಮಾಡುಗು!

    ನಮನಗಳು.

    1. ಅರ್ಗೆಂಟುಮಾಣೀ..
      ನೀ ಯೇಕೋ° ಹೀಂಗೆ? ಬೈಲಿಲಿ ಎಲ್ಲೋರುದೇ ಮಾತಾಡುವಾಗ್ ನೀ ಹೀಂಗೆ ಅರ್ಗೆಂಟು ಮಾಡಿರೆ ಆವುತ್ತೋ?

  15. ಗುರುಗಳ ಮಾತುಗಳ ಒಪ್ಪಣ್ಣನ ಬಾಯಿಲಿ, ಒಪ್ಪಣ್ಣನ ಭಾಷೆಲಿ, ಒಪ್ಪಣ್ಣನ ಶೈಲಿಲಿ ಕೇಳಿ ಭಾರೀ ಕೊಶಿ ಆತು. ನಿಜ. ಗುರುಗಳ ಮಾತುಗೊ, ಪ್ರತಿಯೊಂದು ವಾಕ್ಯವೂ ಅರ್ಥಗರ್ಭಿತ. ಎಂತಹ ಪ್ರಾಸ ಬದ್ದ ಮಾತುಗೊ. ಕೇಶವ, ಶವ. ಅಲಂಕಾರದ ವಿಷಯ ಕೇಳಿ ಅಪ್ಪಗ, ಅಪ್ಪದು ಹೇಳಿ ಕಂಡತ್ತು. ಶವಾಲಂಕಾರಕ್ಕೆ ಬೇಕಾದ ಸಾಮನುಗಳ ಚಿತ್ರವನ್ನೇ ಕೊಟ್ಟು ಮನಸ್ಸಿಂಗೆ ತಟ್ಟುತ್ತ ಹಾಂಗೆ ಮಾಡಿದ್ದ.

    ಒಪ್ಪಣ್ಣ ಮಾಡಿದ ವಿವರಣೆ ಲಾಯಕಿದ್ದು. ಗೂಂಟಪೇನಿನ ಕರೆಲಿ ಕೂದಂಡು ಗುರುಗಳ ಭಾಷಣ ಕೇಳಿದ ವಿಷಯ. ಆ ಗಾಡ ಮೌನದ ಎಡೆಲಿ, ಗುರುಗಳ ಮಾತುಗೊ. ಅದರೆಡೆಲಿ ಪೇನಿನ ಗುರ್ರ್ ಶಬ್ದ ಮಾಂತ್ರ ಕೇಳ್ತಾ ಇರ್ತು ಅಲ್ಲದೊ ಒಪ್ಪಣ್ಣ ? ಅಜ್ಜಕಾನಬಾವಂಗೆ ನಿಂದುಗೊಂಬದು ಹೇಳಿರೆ ಮನಿಕ್ಕೊಂಬದರಿಂದ ಹೆಚ್ಚು ಉದಾಸ್ನ. ಎರಟಿಮಧುರದ ಹಾಂಗಿರ್ತ ವಿಷಯ,ಎಲ್ಲವೂ ಅದ್ಹುತ. ಕಾಯರ್ಪಾಡಿಅತ್ತೆ ಮೊಬೈಲು ಓನುಮಡಗಿ ಮಗಳಿಂಗೆ ಗುರುಗಳ ಇಡೀ ಆಶೀರ್ವಚನವ ಕಂಪ್ಯೂಟರಿಂದ ಕೇಳುಸಿದ್ದದು ಕೇಳಿ ನೆಗೆ ಬಂದು ತಡೆಯ. ಮಾವಂಗೆ ಬ್ರಾಡ್ ಬ್ಯಾಂಡು, ಮೊಬೈಲ್ ಬಿಲ್ಲು ಸರೀ ಬಂದಿಕ್ಕು !
    ಕಡೆಣ ಮಾತು, ಶವಾಲಂಕಾರ ಎಷ್ಟುಮಾಡಿರೂ ಕೇಶವಾಲಂಕಾರ ಆಗ! ಅಪ್ಪು ಒಪ್ಪಣ್ಣಾ. ಎಂತಾ ಮಾತು. ಆದರೂ, ಮೈಕಪ್ಪಿನ ಮುಚ್ಚಲೆ ಬೇಕಲ್ದೊ ಮೇಕಪ್ಪು ?

    1. ಬೊಳುಂಬುಮಾವಾ..
      ಯೇವತ್ರಾಣ ಹಾಂಗೆ ಚೆಂದದ ಒಪ್ಪ ಕೊಟ್ಟಿದಿ ಮಾವ°. ಕೊಶಿ ಆತು.
      ಶುದ್ದಿ ಹೇಳಿದ್ದರ ಸಂಪೂರ್ಣವಾಗಿ ವಿಮರ್ಶೆಮಾಡ್ತದು ಒಪ್ಪಣ್ಣಂಗೆ ಕೊಶಿಯೇ ಅಪ್ಪದಿದಾ..!

      ಗೂಂಟಪೇನಿನ ಶುದ್ದಿ ತೆಗದಪ್ಪಗ ನೆಂಪಾತದ, ಅದರ ಶೆಬ್ದ ಜೋರಿತ್ತು, ಕುರ್ಬಾಯಿಯ ಹಾಂಗೆ.
      ಶಾಮಿಯಾನದ ಕಿಟ್ಟಣ್ಣನ ದಿನಿಗೆಳುಸಿ, ಅದರ ಜೆಡ್ಡುಮಾವನೇ ನಿಲ್ಲುಸಿದ್ದು. ಹರಟೆ!
      ಅದಾದಮತ್ತೆ ಎಂತೂ ಶಬ್ದ ಇತ್ತಿಲ್ಲೆ, ಹಾಂಗಾಗಿ ಬೋಸಬಾವಂಗೆ ಒರಕ್ಕು ಬಾರದ್ದದು! 😉

  16. ಈಗ ಪೇಟೆಗೆ ಹೋದರೆ ಬೇರೆ ಬೇರೆ ನಮೂನೆ ಕೇಶಾಲಂಕಾರ ,ಕೇಶಾಲಂಕಾರ ಲ್ಲಿ competetion ಓ ಹೇಳುವ ಹಾಂಗೆ ಇರ್ತು

    1. ಅತ್ತೆ, ನಿಂಗೊ ಹೆರಿಯೋರು. ಹೂಗು ಸೂಡಿ ಲಕ್ಷಣಲ್ಲಿ ಇರ್ತಿ, ಆದರೆ ಈಗಾಣೋರಿಂಗೆ ಹೇಳ್ತದಾರು?
      ಕೇಶಾಲಂಕಾರವೂ ಮಾಡ್ತವು, ಶಾಲುಅಲಂಕಾರವೂ ಮಾಡ್ತವು! 🙁

  17. ಪ್ರಾಸಬದ್ಧವೂ ಅರ್ಥಪೂರ್ಣವೂ ಆದ ಮಾತು.
    ಮಾನವಂಗಲ್ಲ ಅಲಂಕಾರ,
    ಒಳ ಇಪ್ಪ ಮಾಧವಂಗೆ !ಅಲ್ಲದೊ?

    1. ಗೋಪಾಲಣ್ಣನ ಒಪ್ಪ ಕೊಶಿ ಆತು. ಮಾಧವನಿಂದ ಮಾನವ ಹೇಳ್ತದರ ಮರದರೆ ಹೀಂಗೆಲ್ಲ ಅಕ್ಕು – ಹೇಳ್ತದು ಸಾರಾಂಶ ಅಲ್ಲದೋ? 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×