2012 ರಿಂದ 2015 – ಮೂರು ಒರಿಶ!
ಇನ್ನೊಂದು ವಾರಲ್ಲಿ ಕೆಲೆಂಡ್ರು ಬದಲುಲೂ ಆತು.
ವಾತಾವರಣ ಸುಮಾರು ಬದಲಿದ್ದು. ಬೈಲಿಲಿ ಸುಮಾರು ಜೆಂಬ್ರಂಗೊ, ಗೌಜಿಗೊ ಎದ್ದತ್ತು.
ಮನೆಲಿದ್ದ ಬಾಬೆಗೊ ಶಾಲೆಗೆ ಹೋಪಲೆ ಸುರು ಮಾಡಿದ್ದವು,
ಶಾಲೆಗೆ ಹೋಪೋರು ಕೋಲೇಜಿಂಗೆ ಹೋಪಲೆ ಸುರು ಮಾಡಿದ್ದವು,
ಕೋಲೇಜಿಂಗೆ ಹೋಗಿಂಡು ಇದ್ದೋರು ಕೆಲಸಕ್ಕೆ ಹೋಪಲೆ ಸುರು ಮಾಡಿದ್ದವು,
ಕೆಲಸಲ್ಲಿ ಇದ್ದೋರು ಮಗಳ ಮದುವೆ ಕಳುಶಿ ರಿಟೇರ್ಡು ಅಪ್ಪಲೆ ಆಗಿ ನಿಂದಿದವು!
ಮೂರು ಒರಿಶ ಹೇದರೆ ಸಣ್ಣ ಅವಧಿ ಏನಲ್ಲ!
~
ಮೂರು ಒರಿಶ ಹಿಂದೆ ಒಂದು ದೊಡಾ ಗಲಾಟೆ ಆಯಿದು, ನಮ್ಮ ದೇಶಲ್ಲಿ – ನೆಂಪಿದ್ದೋ?
ಇಡೀ ದೇಶಲ್ಲಿ ನಿರ್ಭಯಾ – ಹೇದು ಆ ಸಂಗತಿ ಪ್ರತಿಧ್ವನಿ ಆತು.
ಆಚಾರ ಬಿಟ್ಟ ಅನಾಗರಿಕರು ಬಸ್ಸಿಲಿ ಅತ್ಯಾಚಾರ ಮಾಡಿದ್ದದು, ಪಾಪದ ಕೂಸಿನ ಬಾಳು ಹಾಳು ಮಾಡಿದ್ದದು, ತೀವ್ರ ಸ್ತರದ ದೈಹಿಕ ಆಘಾತಂದ ಅದು ಆಸ್ಪತ್ರೆಗೆ ಸೇರಿದ್ದು, ಅದಕ್ಕಾಗಿ ಇಡೀ ದೇಶವೇ ಎದ್ದು ನಿಂದು ಕಣ್ಣೀರು ಹಾಕಿದ್ದು – ನೆಂಪಿಕ್ಕು ನಿಂಗೊಗೆ. ಸರಿಯಾಗಿ ಮೂರು ಒರಿಶ ಹಿಂದಾಣ ಮಾತು ಅದು.
(ಆ ಸಮೆಯಲ್ಲಿ ಬೈಲಿಲಿಯುದೇ ಆ ಶುದ್ದಿ ಬಯಿಂದು : https://oppanna.com/?p=28594)
ಶುದ್ದಿ ಓದಿಪ್ಪಿ ನಿಂಗೊ, ಅದಾಗಿ ಸರಿಯಾಗಿ ಮೂರು ಒರಿಶ ಆತು ಇಂದಿಂಗೆ.
~
ಮಾರ್ಗದ ಕರೆಲಿ ಬಸ್ಸಿಂಗೆ ಕಾದುಗೊಂಡು ಇದ್ದಿದ್ದ ಇಬ್ರು – ಒಂದು ಬಸ್ಸು ಬಂತು ಹೇದು ಕೈ ಹಿಡುದು ಹತ್ತಿದವು.
ಮಾಣಿಯ ತಲಗೆ ಎರಡ್ಡು ಮಡಗಿ ಅರೆಜ್ಜೀವ ಮಾಡುಸಿ, ಕೂಸಿನ ಎಳವಲೆ ನೋಡಿದವಡ.
ಪ್ರತಿರೋಧ ತೋರುಸಿದ ಕೂಸಿನ ಮೇಲೆ ಬಲಪ್ರಯೋಗ, ಆಯುಧ ಪ್ರಯೋಗ ಸುರು ಆತಾಡ.
ಎಡಿಗಾಷ್ತು ಹಿಂಸೆ ಕೊಟ್ಟು ಅಖೇರಿಗೆ ಓ ಅಲ್ಲೆಲ್ಲೋ ಪೊದೆಲು ಎಡಕ್ಕಿಲಿ ಇಡ್ಕಿಕ್ಕೊ ಹೋದವು ಖಂಡುಗೊ.
ಪಾಪ, ಮೈಲಿದ್ದ ಒಸ್ತ್ರ ಇಲ್ಲೆ, ದೇಹಲ್ಲಿದ್ದ ಶೀಲ ಇಲ್ಲೆ!
ನಿನ್ನೆ ವರೆಗೆ ಎಂತೂ ತೊಂದರೆ ಇತ್ತಿಲ್ಲೆ, ಇಂದು ಎಂತೂ ಒಳುದ್ದಿಲ್ಲೆ!
ಇದರಿಂದ ತೀವ್ರ ಗಾಯ ಆಗಿ, ನೆತ್ತರು ಕಟ್ಟದ್ದೆ, ತೀವ್ರ ಗಾಯ.
ಸುಮಾರು ಹೊತ್ತು ಸಹಾಯಕ್ಕಾಗಿ ಬೇಡಿ, ಕೊನೆಗೆ ಹೇಂಗೋ ಪೋಲೀಸು ಶ್ಟೇಷನಿಂಗೆ ಎತ್ತಿ, ಆಸ್ಪತ್ರೆಗೆ ಹೋಗಿ ಮದ್ದು ತೆಕ್ಕೊಂಬಲೆ ಸುರು ಆತು.
ಸಣ್ಣ ಆಸ್ಪತ್ರೆಲಿ ಮದ್ದು ಹಿಡಿಯದ್ದೆ, ಅಲ್ಲಿಂದ ದೊಡ್ಡ ಆಸ್ಪತ್ರೆಗೆ ಹೋಗಿ, ಅಲ್ಲಿಂದ ವಿಮಾನಲ್ಲಿ ಸಿಂಗಾಪುರ ವರೆಗೆ ಹೋಗಿ ಆತು.
ಆದರೆಂತ ಮಾಡುಸ್ಸು, ಜೀವ ಒಳುದ್ದಿಲ್ಲೆ.
ಯೇವದೋ ನಾಕು ಕಾಟುಗಳ ಪೈಶಾಚಿಕ ಕೃತ್ಯಂದಾಗಿ ಒಂದು ಕೂಸುಜೀವ ಅನ್ಯಾಯಲ್ಲಿ ಹೋತು.
ನಿರ್ಭಯವಾಗಿ ಇರೆಕ್ಕಾದ ಕೂಸುಗೊಕ್ಕೆ ಭಯ ಹುಟ್ಟುಸುವ ಈ ಸಂದರ್ಭಲ್ಲಿಯೂ, ಅವರ ಎದುರಿಸಿದ ಆ ಕೂಸಿಂಗೆ “ನಿರ್ಭಯಾ” – ಹೇದು ನಮಕರಣವೂ ಆತು.
ಮರಣಾ ನಂತರ ನಾಮಕರಣ ಆದ ಒಂದು ವಿಶೇಷ ಸಂದರ್ಭ.
ಸಾವಿಲಿಯೂ ನಿರ್ಭಯತೆಯ ತೋರುಸಿದ್ದತ್ತು ಪಾಪ!
~
ಆತು, ಘಟನೆ ಎಲ್ಲ ಕಳುತ್ತು. ಮುಂದೆ?
ಪೋಲೀಸುಗೊ ಹುಡ್ಕಲೆ ಸುರು ಮಾಡಿದವು. ಆ ಹೊತ್ತಿಲಿ ಸಂಚಾರ ಮಾಡಿದ ವಾಹನಂಗಳ ತನಿಕ್ಕೆ ಮಾಡಿ ಅಪ್ಪಾಗ ಕಳ್ಳ ವಾಹನ ಸಿಕ್ಕಿತ್ತು, ಅದರೊಟ್ಟಿಂಗೇ – ಕಳ್ಳಂಗಳೂ ಸಿಕ್ಕಿದವು.
ಅವು ಮಾಡಿದ ಪೈಶಾಚಿಕ ಕೃತ್ಯದ ಎಳ ಎಳೆ ವಿವರ ಸಿಕ್ಕಿದ್ದು ಅಷ್ಟಪ್ಪಗಳೇ.
ಪಾಪ – ನಿರ್ಭಯಾ!
~
ಅತ್ಯಾಚಾರಿಗಳ ಹಿಡುದು ಒಳ ಹಾಕಿ ಆತು.
ಒಂದು ಮನಿಶ್ಶ ಮೋರೆ ತೋರುಸುಲೆ ಎಡಿಯದ್ದೆ ಜೈಲಿಲೇ ಬಳ್ಳಿ ತೆಕ್ಕೊಂಡತ್ತು. ಮತ್ತೊಂದು ಎಂತೋ ಆಗಿ ಸತ್ತತ್ತು ಕಾಣ್ತು.
ಮತ್ತೊಂದರ ಹಿಡುದು ನೇಲುಸಿದವು.
ಅದೆಲ್ಲ ಸರಿ, ಆ ಖಂಡುಗಳ ಪೈಕಿ ಎಲ್ಲೋರುದೇ ತಿಹಾರ್ ಜೈಲಿಲಿ ಇದ್ದರೆ, ಒಂದು ಮಾಂತ್ರ ’ಮಕ್ಕಳ ಜೈಲಿಲಿ’ ಇದ್ದತ್ತು!!!!
ಅದೆಂತಕೆ!??
~
ಅದೆಂತಕೆ ಹೇದರೆ – ಆ ಪ್ರಾಣಿಗೆ ಅಪರಾಧ ಮಾಡುವಾಗ ೧೮ ಒರಿಶ ಪೂರ್ತಿ ಆಗಿದ್ದತ್ತಿಲ್ಲೆ – ಹೇದು.
ಮಾಡಿದ್ದು ಎಷ್ಟು ಘನಂದಾರೀ ಕೆಲಸ!?
ಮಾಡಿದ್ದು ಯೌವನ ಏರಿ ಬಂದ ಕೆಲಸ!?
ಮಾಡಿದ್ದದು ಜವ್ವನಿಗರೂ ಹೇಸಿಗೆ ಪಡುವ ಕೆಲಸ!?
ಆದರೂ – ಅದು ಬಾಲಾಪರಾಧಿಯೇ!
ಎಂತಗೆ? – ಅದಕ್ಕೆ ಹದಿನೆಂಟು ಹಿಡುದ್ದಿಲ್ಲೆ.
ಹಾಂಗಾಗಿ, ಅದಿನ್ನೂ ’ಮಕ್ಕಳ’ ಸಾಲಿಂಗೇ ಸೇರ್ತು.
ಬರೇ ಆರು ತಿಂಗಳಿಂಗೆ ಬದ್ಕಿತ್ತು ಆ ಪ್ರಾಣಿ, ಅಲ್ಲದ್ದರೆ ಅದುದೇ ಸಾಯ್ತಿತು ಒಳುದ ಕಳ್ಳಂಗಳ ಒಟ್ಟಿಂಗೆ. ಅಪ್ಪೋ.
~
ಮಕ್ಕೊಗೆ ಸಿಕ್ಕುತ್ತ ಎಲ್ಲ ಸೌಲಭ್ಯಂಗೊ, ಮಕ್ಕೊಗೆ ಸಿಕ್ಕುತ್ತ ವಿದ್ಯಾಭ್ಯಾಸ, ಊಟೋಪಹಾರ ಎಲ್ಲವನ್ನೂ ಅನುಭವಿಸಿತ್ತು ಆ ಕಳ್ಳ. ಕಾನೂನು ಪ್ರಕಾರ ಅದಿನ್ನೂ ’ಮಗು’ವೇ.
ಎತಾರ್ತಕ್ಕೆ – ಹದಿನೆಂಟು ಒರಿಶದ ಮಾಣಿಗೂ, ಅದರಿಂದ ಆರು ತಿಂಗಳು ಸಣ್ಣ ಮಾಣಿಗೂ – ದೈಹಿಕವಾಗಿ, ಮಾನಸಿಕವಾಗಿ ಭಯಂಕರ ವಿತ್ಯಾಸ ಏನಿಲ್ಲೆ.
ಹದಿನೆಂಟು ಕಳುದ ಮತ್ತೆಯೇ ಜೌವ್ವನ ಹೇಳ್ತರೆ – ಈಗ ಈ ಹದಿನೇಳೂವರೆ ಹಿಡುದ ಪ್ರಾಣಿ ಮಾಡಿದ್ದೌ ’ಬಾಲ’ಕರ ಕೆಲಸವೋ?
ಅಷ್ಟಕ್ಕೂ – ಬಸ್ಸಿಲಿ ಉಪದ್ರ ಮಾಡಿದ ಪೈಕಿ ದೈಹಿಕವಾಗಿ ಅತೀ ಉಪದ್ರ ಮಾಡಿದ್ದದು ಇದೇ ಮನಿಶ್ಶನೇ ಅಡ.
~
ಇಷ್ಟೆಲ್ಲ ಇದ್ದರೂ – ನಮ್ಮ ಕಾನೂನಿನ ಒಂದು ತೂಂಬಿಲಿ ಆಗಿ ಆ ಪ್ರಾಣಿ ಉಳುಚ್ಚಿಗೊಂಡು ಬದ್ಕಿತ್ತು, ಕಂಡು.
ಹಾಂಗಾಗಿ – ಈಗ ನಾವು ಆಲೋಚನೆ ಮಾಡೇಕಾದ ಸಮಯ ಬಯಿಂದು.
ಹಾಂಗಾರೆ, ಹದಿನೇಳೂವರೆ ಹಿಡುದ ಜೆನ ಮಾಡಿದ ಅತ್ಯಾಚಾರಕ್ಕೂ, ಹದಿನೆಂಟು ಹಿಡುದ ಮತ್ತೆ ಮಾಡಿದ ಅತ್ಯಾಚಾರಕ್ಕೂ – ಎರಡೂ ವಿತ್ಯಾಸ ಇದ್ದೋ?
ಬಾಲ – ಯೌವನ – ಕೌಮಾರ್ಯ ಇತ್ಯಾದಿ ವಿಚಾರಂಗೊ ಕೆಲೆಂಡ್ರು ನೋಡಿ ಬತ್ತಿಲ್ಲೆ.
ಅದು ನಮ್ಮ ಬುದ್ಧಿಮತ್ತೆ, ನಡವಳಿಕೆಗಳ ನೋಡಿ ಬಪ್ಪದು – ಅಲ್ದೋ?
ದೈಹಿಕ ಮಾನಸಿಕ ಬುದ್ಧಿಮತ್ತೆಯ ಮೇಗೆ ಅವಲಂಬಿತ ಆಗಿಪ್ಪಾದು. ಅಲ್ದೋ?
ಯೇವ ರೀತಿ “ಭಯೋತ್ಪಾದಕರಿಂಗೆ ಧರ್ಮ ಲೆಕ್ಕ ಇಲ್ಲೆ” – ಹೇದು ನಮ್ಮಲ್ಲಿ ಕೆಲವು ಜೆನ ಬೊಬ್ಬೆ ಹೊಡೆತ್ತವೋ – ಅದೇ ರೀತಿ “ಅಪರಾಧಿಗೊಕ್ಕೆ ವರ್ಶ ಲೆಕ್ಕ ಹಿಡಿವಲಾಗ” – ಹೇದು ಏಕೆ ಆರುದೆ ಮಾತಾಡ್ತವಿಲ್ಲೆ?
ಹದಿನೇಳೂವರೆ ಒರಿಶದ ಪಿಶಾಚಿ ಮಾಡಿದ ಅಪರಾಧಕ್ಕೂ – ಅದರ ಅಪರಾಧ ಮಾಂತ್ರ ನೋಡಿ ಶಿಕ್ಷೆ ಆಗಲಿ.
ಒಳುದ ಪ್ರಾಣಿಗಳ ಹಾಂಗೇ ಅದನ್ನೂ ಆದಷ್ಟು ಬೇಗ ನರಕಕ್ಕೆ ಕಳುಸಲಿ – ಹೇದು ಎಷ್ಟೋ ಲಕ್ಶ ಧ್ವನಿಗೊ ನಮ್ಮ ದೇಶಲ್ಲಿ ಪ್ರತಿಧ್ವನಿಸುತ್ತಾ ಇದ್ದು.
ಅಷ್ಟೂ ಜೆನರ ಒಟ್ಟಿಂಗೆ ನಮ್ಮ ಬೈಲಿಂದೂ ಒಂದು ಒತ್ತಾಯ. ಎಂತ ಹೇಳ್ತಿ?
ಒಂದೊಪ್ಪ: ಹದಿನೆಂಟರ ಮೊದಲು ಅಪರಾಧ ಮಾಡಿರೆ ಅಪರಾಧಿಗೇ “ನಿರ್ಭಯಾ” ಆವುತ್ತೋ?! ಛೇ!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒಪ್ಪಣ್ಣನೊಟ್ಟಿಂಗೆ ಆನುದೆ ಇದ್ದೆ. ಮಕ್ಕೊ ಮಕ್ಕಳ ಹಾಂಗಿರೆಕು. ಜವ್ವನಿಗರ ಹಾಂಗೆ ಮಾಡಿರೆ ಅವು ಜವ್ವನಿಗರೇ ಅಲ್ದೊ ?
ಬಾಲಾಪರಾಧಿ ಹೇದು ಹಣೆಪ್ಪಟ್ಟಿ ಇದ್ದರೂ ಅದು ಮಾಡಿದ ಅಪರಾಧ ಬಾಲಿಶವೋ ?!.ಹಾಂಗಿದ್ದವಕ್ಕೆ ಕಡ್ಪದ ಶಿಕ್ಷೆ ಅಗದ್ರೆ ಇನ್ನೂ ಇನ್ನೂ ಇಂತವು ತೊಟ್ಟಂಪಾಡಿಗೊ ಅಲ್ಲಲ್ಲ ಕಣಪ್ಪಿಟ್ಟಿಗೊ ಬೆಳವಲೆ ಪ್ರೋತ್ಸಾಹ ಕೊಟ್ಟಾಂಗಾಗದೋ!?.