Oppanna.com

ಹುಡ್ಕಿ ಹುಡ್ಕಿ ಬಚ್ಚಿರೂ, ಗುಬ್ಬಚ್ಚಿ ಸಿಕ್ಕ..!!

ಬರದೋರು :   ಒಪ್ಪಣ್ಣ    on   20/09/2013    10 ಒಪ್ಪಂಗೊ

ಬೈಲಕರೆ ಬಬ್ಬುಮಾವನ ಬಬ್ಬಿನಂಗಡಿಯ ನಾಕು ಅಂಗುಡಿ ಅತ್ಲಾಗಿ ಇದ್ದದು ಅಂಗುಡಿಮಾವನ ಅಂಗುಡಿ.

ಈಗಾಣ ನಮುನೆ ಅಂಗುಡಿಗಳ ಸಾಲಿಂದಲ್ಲ ಅದು; ಹಳೇ ಕ್ರಮದ ಊರ ಅಂಗುಡಿ.

ದೂರಂದ ಕಂಡೋರಿಂಗೆ ಮನೆಯ ಹಾಂಗೇ ಕಾಂಗು, ಆದರೆ ಅದು ಅಂಗುಡಿ.
ಹಂಚಿನ ಮಾಡು, ಮರದ ಹಲಗೆಗಳ ಜೋಡುಸಿ ಮಡಗುತ್ತ ಬಾಗಿಲಿನ ಮುಖ್ಯದ್ವಾರ.

ಯೇವ ಹಲಗೆಯ ಎಲ್ಲಿ ಜೋಡುಸೇಕು ಹೇದು ಗೊಂತಪ್ಪಲೆ ಒಂದು-ಎರಡು-ಮೂರು ಹೇದು ಮಸಿಲಿ ಬರಕ್ಕೊಂಡಿಕ್ಕು. ಬಾಗಿಲೆಟ್ಟಿದ ಮತ್ತೆ ಆ ನಂಬ್ರಂಗೊ ಕಾಂಗು.
ಬಾಗಿಲು ದಾಂಟಿ ಒಳ ಹೋದಪ್ಪದ್ದೇ ಸಿಕ್ಕುತ್ತದು ಜೆಗಿಲಿ.
ಕರೇಲಿ ಒಂದು ಬೇಂಚು. ಬೇಂಚಿನ ಕರೆಲಿ ಒಂದು ಕುರುಶಿ. ಕುರುಶಿ ಕರೆಲಿ ಸೋಡದ ಕುಪ್ಪಿ.
ಅದರ ಎದುರೆಲ್ಲ ನಿಂಬಲೆ ತಕ್ಕ ಜಾಗೆ.
ಜೆಗಿಲಿಂದ ಒಳ ಬಾಜಿರದ ಕಂಬ ಇದಾ – ತರವಾಡು ಮನೆಲಿ ಇರ್ತ ನಮುನೆ.
ಬಾಜಿರದ ಕಂಬದ ಅಡಿಲೇ ಅಂಗುಡಿಮಾವ ಕುರ್ಶಿ ಮಡಗಿ ಕೂದುಗೊಂಬದು.
ಆ ಜೆಗಿಲಿಲಿ, ಅಲ್ಲಿಂದ ಒಳ ಇರ್ತ ಕೋಣೆಗಳಲ್ಲಿ, ಹಿಂದೆ ಇಪ್ಪ ಉಗ್ರಾಣಲ್ಲಿ – ಎಲ್ಲ ಸಾಮಾನುಗೊ.
ಕೋಣೆಲಿಡೀ ಗೋಣಿಚೀಲಂಗಳಲ್ಲಿ ಹತ್ತಾರು ಬಗೆ ಸಾಮಾನುಗೊ ಆದರೆ, ಅವರ ಮೇಜಿಲಿ – ಕುಪ್ಪಿಯ ಅಳಗೆಗಳಲ್ಲಿ ನವಗಪ್ಪ ಸಾಮಾನುಗೊ.
ಕುಪ್ಪಿಯ ಪಾತ್ರ ಆದರೂ ದಪ್ಪ ಆಗಿ, ಕಾಂಬಲೆ ಕಾಂಬುಅಜ್ಜಿಯ ಉಪ್ಪಿನಾಯಿ ಭರಣಿಯ ನಮುನೆ ಕಾಂಗು! ಶುಂಠಿಮಿಠಾಯಿ, ಅಕ್ರೋಟು, ಹುರಿಕಡ್ಳೆ, ನೆಲಕಡ್ಳೆ, ಬಿಸ್ಕೇಟು – ಈ ನಮುನೆದು ಎಲ್ಲ ಅಲ್ಲಿಪ್ಪದು.
ದೊಡ್ಡ ಸಾಮಾನುಗಳ ಕೊಡ್ಳೆ ಉಮೇಸ ಬರೆಕ್ಕಕ್ಕು, ಆದರೆ ಈ ನಮುನೆ ಸಾಮಾನುಗಳ ಅಂಗುಡಿಮಾವನೇ ಕೈಲಿ ಹೆರ್ಕಿ ತೆಗದು ಕೊಡುಗು.ಅಂಗುಡಿ ಒಳ ಮಾಂತ್ರ ಮಡಗುದಲ್ಲದ್ದೆ, ಹೆರ ಜಾಲಿಲಿ ಉಪ್ಪಿನ ಗೋಣಿಯ ಮಡಗಿದ ಒರೆಂಗೂ ಸಾಮಾನುಗಳೇ.
ಅಷ್ಟು ಸಾಮಾನು ಇದ್ದರೂ ಮುಗಿಗು.
ಇಡೀ ಬೈಲಿಂಗೆ ಅವರದ್ದೇ ಅಂಗುಡಿ ಸಾಮಾನಾಗೆಡದೋ?!
ಬರೇ ಸಾಮಾನುಗೊ ಮಾಂತ್ರ ಅಲ್ಲದ್ದೆ, ಹೇಳಿಕೆ ಕಾಗತಂಗೊ, ಆಟದ ನೋಟೀಸುಗೊ, ಜಾತ್ರೆ ಬೇನರುಗೊ – ಎಲ್ಲವುದೇ ಅವರ ಅಂಗುಡಿಲಿ ಇಕ್ಕು.
ಒಟ್ಟಿಲಿ ಆ ಅಂಗುಡಿ ಊರ ಜೀವಂತಿಕೆಯ ಲಕ್ಷಣ ಆಗಿದ್ದತ್ತು.
~
ಊರ ಜೀವಂತಿಕೆ ಪ್ರಶ್ನೆ – ಹೇಳಿದೆ ಅಲ್ಲದೋ – ಅಪ್ಪು.
ಆ ಅಂಗುಡಿಲಿ ನಿತ್ಯವೂ ಜೀವಿಗೊ ಇಲ್ಲದ್ದಿಲ್ಲೆ. ಅತಿಮೀರಿ ಜೆನಂಗೊ ಇಲ್ಲದ್ದಿಕ್ಕು, ಆದರೆ ಮನುಷ್ಯರು ಅಲ್ಲದ್ದ ಹಲವಾರು ಜೀವಿಗೊ ಆ ಅಂಗುಡಿಲಿ ಇತ್ತಿದ್ದವು.
ಆರು? – ಅದೇ – ಗುಬ್ಬಿ ಹಕ್ಕಿಗೊ !! 🙂
~
ಅಂಗುಡಿಮಾವ° ಕುರ್ಶಿಲಿ ಕೂದುಗೊಂಡಿಪ್ಪದು, ಸುಬ್ರಾಯ° ಸಾಮಾನು ಕಟ್ಟಿ ಕೊಡುದು – ಇದು ಆ ಅಂಗುಡಿಯ ಸಾಮಾನ್ಯ ದೃಶ್ಯ.
ಒಟ್ಟಿಂಗೆ ಗುಬ್ಬಚ್ಚಿಗೊ ಚಿಂವ್ ಚಿಂವ್ ಹೇಳಿಗೊಂಡು ಇಡೀ ಅಂಗುಡಿಯ ಒಳ-ಹೆರ ಹಾರಿಗೊಂಡಿಕ್ಕು, ಅಂಗುಡಿಮಾವ ಮಾತಾಡುವಾಗ ಹರಟೆ ಮಾಡ್ಳೆ.
ಮಾವ ಕೂದುಗೊಂಡು ಬರಕ್ಕೊಂಡೇ ಇದ್ದರೂ – ಗುಬ್ಬಚ್ಚಿಗೊ ಮೇಜಿನ ಕರೆಲಿ ಹಾರಿಗೊಂಡಿಕ್ಕು, ಎಂತಾ ಧೈರ್ಯ ಅವಕ್ಕೆ!!
ಅಷ್ಟಪ್ಪದ್ದೇ – ಯೇವದೋ ಒಂದು ಗುಬ್ಬಚ್ಚಿಗೆ ನಾಕು ಅಕ್ಕಿಕಾಳು ಬಿದ್ದದು ಕಂಡದಕ್ಕೆ – ಅದರ ಕುಟುಂಬದೋರ ಪೂರ ದಿನಿಗೆಳ್ತದೋ ಏನೋ,
ಅಪ್ಪದಾ – ಎಲ್ಲಿಯೋ ಇದ್ದ ಗುಬ್ಬಚ್ಚಿಗೊ ಪುರ್…ರನೆ ಬಂದು ಒಟ್ಟಾದವು.
ಹರಟೆ ಮಾಡೆಡಿರಾ°..” – ಹೇಳಿ ಮಾವ ಜೋರು ಮಾಡಿರೂ ಲಗಾವೇ ಇಲ್ಲೆ ಅವಕ್ಕೆ!
ಅಂಬಗಂಬಗ ಅಕ್ಕಿ ಬಿಕ್ಕಿ ತಿಂಬಲೆ ಕೊಟ್ಟು ಮಾವನೇ ಸಾಂಕಿದ್ದಲ್ಲದೋ – ಹಾಂಗೆ ಸಲುಗೆ ಬೆಳದ್ದು ಅವಕ್ಕೆ ಒಳ್ಳೆತ.
ಸಾಮಾನು ಕಟ್ಟಿಕೊಡ್ತ ಲೆಕ್ಕಲ್ಲಿ ಸುಬ್ರಾಯ° ಪಕ್ಕನೆ ಒಳ ಹೋದರೆ ಸಾಕು – ಅಲ್ಲಿ ಆರಾಮಕ್ಕೆ ಕೂದುಗೊಂಡಿದ್ದ ಗುಬ್ಬಚ್ಚಿಗೊ ಬರಾ…ನೆ ಹಾರಿ ಹೆರ ಬಂದವು.
ಸುಬ್ರಾಯಂಗೆ ಕೆಲಸ ಇಲ್ಲದ್ದರೆ ಮತ್ತೆ ಅಲ್ಲಿ ಅವರದ್ದೇ ಸಾಮ್ರಾಜ್ಯ ಅಲ್ಲೋ?
ಇಡೀ ಅಂಗುಡಿಯ ನೆಲಕ್ಕಲ್ಲಿ ಬಿದ್ದ ಅಕ್ಕಿ, ಕಾಳು, ಬೇಳೆ, ಎಲ್ಲವೂ ಅವರದ್ದೇ.
ಬೇಕಾದ ಹಾಂಗೆ ತಿಂದುಗೊಂಡು, ಆರಾ..ಮಲ್ಲಿ ಬೆಳದ್ದವು, ಮಕ್ಕಳ ಹಾಂಗೆ.
ಅಪ್ಪು, ಗುಬ್ಬಚ್ಚಿಗಳ ಮಕ್ಕಳ ಗುಂಪಿನ ಹಾಂಗೇ ನೋಡಿಗೊಂಡಿತ್ತವು ಹಳಬ್ಬರು.
ಮಾವನ ಅಂಗುಡಿಯ ಒಳ ಒಂದು ಇಟ್ಟೇಣಿ – ಮರದ ಏಣಿ – ಇದ್ದತ್ತಲ್ಲದೋ – ಅಟ್ಟಕ್ಕೆ ಹೋಪಲೆ, ಅದರ ಹಿಂದಾಣ ಹೊಡೆಲಿ ಇದ್ದ ರಜಾ ಜಾಗೆಲಿ ಗುಬ್ಬಚ್ಚಿಗೊ ಸಂಸಾರ ಮಾಡಿಗೊಂಡಿತ್ತವು.
ಮೀನು ಮಾರುವ ಅಂದುಮೋನು ಇಲ್ಲೆಯೋ – ಅದರ ಒಂದು ಕಳ್ಳ° ಪುಚ್ಚೆ ಇದ್ದು, ಕಪ್ಪುಬಣ್ಣದ್ದು.
ಮಾವ° ಅಂಗುಡಿಬಾಗಿಲು ಹಾಕಿ ಹೋದಮತ್ತೆ, ಆ ಕಳ್ಳಪುಚ್ಚೆ ಮೆಲ್ಲಂಗೆ-ಇರುಳು ಬಂದು ಏಣಿ ಹತ್ತಿ ಎಂತಾರು ಸಿಕ್ಕುತ್ತೋ – ನೋಡಿತ್ತಾಡ.
ಮರದಿನ ಪುನಾ ಬಂತು.
ಮತ್ತಾಣ ದಿನ ಗುಬ್ಬಚ್ಚಿಗೊಕ್ಕೆ ಗೊಂತಾತು – ಹೀಂಗೀಂಗೆ ಅಪಾಯ ಇದ್ದು – ಹೇದು.
ಇದ್ದರೆ ಎಂತ ಮಾಡುದು, ಪಾಪ; ಅವು ಹಾರಿ ಓಡುಗು, ಆದರೆ ಅವರ ಕುಂಞಿಗೊ? ಅವಕ್ಕೆ ಓಡ್ಳೆ ಇನ್ನೂ ಗೊಂತಿಲ್ಲೆನ್ನೇ!!
ಮರದಿನ ಉದಿಯಪ್ಪಗ ಮಾವ ಬಂದಪ್ಪದ್ದೇ – ಹರಟೆಯೇ ಹರಟೆ ಆಡ – ಮಕ್ಕಳ ಅರ್ಗೆಂಟಿನ ನಮುನೆ.
ಎಂತಪ್ಪಾ – ಹೇದು ಹೋಗಿ ನೋಡುವಾಗ ಏಣಿಯ ಒರುಂಕಿಲಿ ಇವರ ಸಂಸಾರದ ಮನೆಗೆ ಸಣ್ಣ ದಾರಿ ಇಪ್ಪದು ಕಂಡತ್ತಾಡ.
ಹೋ – ಎಂತದೋ ಅಪಾಯ ಕಂಡು ದೂರು ಹೇಳ್ತಾ ಇಪ್ಪದು – ಹೇದು ಮಾವಂಗೆ ಗೊಂತಾಗಿ, ಏಣಿಂದ ಅತ್ಲಾಗಿಂಗೆ ಆರಿಂಗೂ ಕಾಣದ್ದ ಹಾಂಗೆ / ಹೋಪಲೆಡಿಯದ್ದ ಹಾಂಗೆ ಒಂದು ಮರದ ಹಲಗೆಯ ಮುಚ್ಚಿ ಭದ್ರಮಾಡಿ ಕೊಟ್ಟವಾಡ.
ಮತ್ತೆ ಅರ್ಗೆಂಟು ಇಲ್ಲೇಡ.
ಮಾವ ತುಂಬ ಸಮೆಯ ಈ ಸನ್ನಿವೇಶವ ಹೇಳಿಗೊಂಡಿತ್ತಿದ್ದವು, ಗುಬ್ಬಚ್ಚಿಗೊ ದೂರು ಹೇಳಿದ ರೀತಿ, ಅರ್ಥ ಮಾಡುಸಿದ ರೀತಿಗಳ.

ಮಾವನ ಕೊನೆ ಒರೆಂಗೂ ಆ ಗುಬ್ಬಚ್ಚಿಗಳ ಸಂಸಾರ ಹಾಂಗೇ ಇದ್ದತ್ತು.

~

ಅ ಅಂಗುಡಿಲಿ ಸಾಮಾನು ತೆಕ್ಕೊಂಬಲೆ ಹೋಪ ಎಲ್ಲೋರಿಂಗೂ ಅಲ್ಯಾಣ ಗುಬ್ಬಚ್ಚಿಗಳ ಗುರ್ತ ಆಗಿತ್ತು.

ಅಲ್ಲಿ ಮಾಂತ್ರ ಅಲ್ಲ, ಎಲ್ಲಾ ಜೀನಸು ಅಂಗಡಿಗಳಲ್ಲಿ ದೃಶ್ಯ ಹೀಂಗೇ ಇದ್ದಿದ್ದ ಕಾರಣ ಆರಿಂಗೂ – ಹಕ್ಕಿ ಹಿಕ್ಕೆಯ ಅಂಗುಡಿ ಎನ ಬೇಡ – ಹೇದು ಕಂಡುಗೊಂಡಿತ್ತಿಲ್ಲೆ!
ಪಾರಿವಾಳದ ಹಾಂಗೆ ಕುರೆ ಹಕ್ಕಿಗೊ ಅಲ್ಲ ಈ ಗುಬ್ಬಚ್ಚಿಗೊ. ತುಂಬಾ ಮನಾರದ ಜೀವಿಗೊ.
~
ಅಂಗುಡಿಗಳಲ್ಲಿ ಮಾಂತ್ರ ಅಲ್ಲ, ದೊಡ್ಡದೊಡ್ಡ ಮನೆಮನೆಗಳಲ್ಲಿಯೂ ಇದ್ದತ್ತು.
ಪ್ರಶಾಂತ ವಾತಾವರಣದ ಮನೆಗಳಲ್ಲಿ ತುಂಬ ಗುಬ್ಬಚ್ಚಿಯ ಕಲರವ.
ಎಷ್ಟು ಹೇದರೆ, ಬಟ್ಯ ಅದರ ಮನೆ-ಹಕ್ಕಿ ಹೇಳಿಯೇ ಹೇಳಿಗೊಂಡಿದ್ದದು. ಮನೆಗಳಲ್ಲಿ ಇಪ್ಪ ಹಕ್ಕಿ, ಅತವ ಮನೆಗಳಲ್ಲೇ ಇಪ್ಪ ಹಕ್ಕಿ – ಹೇಳ್ತ ಅರ್ಥಲ್ಲಿ.

ಅಷ್ಟೂ ಅನ್ಯೋನ್ಯತೆ!!
~
ಅದೆಲ್ಲ ಹಳೆ ಕತೆ. ಈಗ?

ಶಶಿಕಲತ್ತೆಯ ಕೆಮರಕ್ಕೆ ಬಿದ್ದ ಗುಬ್ಬಚ್ಚಿ :-)
ಶಶಿಕಲತ್ತೆಯ ಕೆಮರಕ್ಕೆ ಬಿದ್ದ ಗುಬ್ಬಚ್ಚಿ 🙂
ಈಗ ಅಂಗುಡಿ ಮಾವನೂ ಇಲ್ಲೆ, ಅಂಗುಡಿಮಾವ ಅಂಗುಡಿಯೂ ಇಲ್ಲೆ.
ಅದೇ ಹರ್ಕಟೆ ಕಟ್ಟೋಣದ ಕರೆಲಿ ಹೊಸ ಟಯರೀಸು ಕಟ್ಟೋಣ ಇದ್ದು, ಅಲ್ಲಿ ಸುಬ್ರಾಯನ ಜೀನಸು ಅಂಗುಡಿ.
ಅಂಗುಡಿಲಿ ಸಾಮಾನುಗೊ ಇದ್ದು, ಬೇಕಾದ ನಮುನೆದು ಎಲ್ಲವೂ ಸಿಕ್ಕುತ್ತು, ಪೆಕೆಟುಗಳಲ್ಲಿ; ಹಾಂಗಾಗಿ, ನೆಲಕ್ಕಲ್ಲಿ ಅಕ್ಕಿಬಿಕ್ಕುತ್ತ ಪ್ರಶ್ನೆಯೇ ಇಲ್ಲೆ!!
ಕಸ್ತಲೆ ಕೋಣೆ ಇಲ್ಲೆ, ಗೂಡು ಕಟ್ಟುಲೆ ಜಾಗೆ ಇಲ್ಲೆ.
ಜಾಲಿಲ್ಲೆ, ಜಾಲಿಲಿ ಮರದ ನೆರಳಿಲ್ಲೆ, ನೆರಳಿಂಗೆ ಮರದ ಗೆಲ್ಲುಗಳೇ ಇಲ್ಲೆ.
ಒಟ್ಟಿಲಿ, ಗುಬ್ಬಚ್ಚಿಗಳೇ ಇಲ್ಲೆ!!
ಅಪ್ಪು, ಈಗ ಬೈಲಕರೆಯ ಅಂಗುಡಿಗಳಲ್ಲಿ ಗುಬ್ಬಚ್ಚಿಗಳೇ ಇಲ್ಲೆ.
ಪೈಶೆ ಕೊಡ್ತೋರುದೇ – ತೆಕ್ಕೊಂಬೋರುದೇ ಮಾಂತ್ರ!!
~
ಎಂತಗೆ ಹೀಂಗಾತು? ಇದಮಿತ್ಥಂ – ಹೇಳುಲೆ ನವಗರಡಿಯ.
ಆದರೆ, ಅರಡಿತ್ತೋರು ಹೇಳಿದ್ದರ ಪುನಾ ಹೇಳುಲೆ ಅರಡಿಗು! 😉
ಗುಬ್ಬಚ್ಚಿಗಳ ಸಂಖ್ಯೆ ಕಡಮ್ಮೆ ಅಪ್ಪಲೆ ನಾಲ್ಕೈದು ಕಾರಣಂಗೊ ಇದ್ದಾಡ, ಪೆರ್ಲದಣ್ಣ ಅಂದೊಂದರಿ ಹೇಳಿತ್ತಿದ್ದ.
1. ಕಾಡು:
ಮರಂಗೊ ಕಮ್ಮಿ ಆದಪ್ಪದ್ದೇ, ಗುಬ್ಬಚ್ಚಿ ಹೇಳಿ ಅಲ್ಲ, ಮರದ ಅವಲಂಬನೆಲಿ ಬದ್ಕುವ ಹಲವಾರು ಜೀವಿಗೊ ಕಡಮ್ಮೆ ಆವುತ್ತು.
ಅದರ್ಲಿ ಗುಬ್ಬಚ್ಚಿಯೂ ಒಂದು. ಗೂಡು ಕಟ್ಳೆ ಜಾಗೆ ಇಲ್ಲೆ, ತಿಂಬಲೆ ಬಿತ್ತುಗೊ ಇಲ್ಲೆ, ಹಣ್ಣು ಹಂಪಲುಗೊ ಇಲ್ಲೆ- ಪರಪರ ಮಾಡ್ಳೆ ಎಲೆಗೊ ಇಲ್ಲೆ.
ಎಂತದೂ ಇಲ್ಲೆ!! ಎಲ್ಲ ಕಾಲಿ ಕಾಲಿ.
2. ಕೋಂಗ್ರೇಟು ಕಾಡು
ಕಾಡು ಕಮ್ಮಿ ಆದ್ಸು ಒಂದು ದೋಷ ಆದರೆ, ಕೋಂಗ್ರೇಟು ಕಾಡು ಹೆಚ್ಚಾದ್ಸು ಇನ್ನೊಂದು ಕಾರಣ ಆಡ.
ಸಿಮೆಂಟು ನೆಲಕ್ಕ ಹೇದರೆ ಮನುಷ್ಯರಿಂಗೇ ಎಷ್ಟೋ ಜೆನಕ್ಕೆ ಆಗದ್ದೆ ಬತ್ತು. ಕಾಲು ಉಷ್ಣಲ್ಲಿ ಒಡವದೋ – ಬಿರಿವದೋ ಹಲವಾರು ಸಮಸ್ಯೆಗೊ.
ಇಷ್ಟು ದೊಡ್ಡ ಜೀವಿ ಮನುಷ್ಯರಿಂಗೇ ಹಾಂಗಾದರೆ, ಗುಬ್ಬಚ್ಚಿಗೊಕ್ಕೆ ಹೇಂಗಕ್ಕು!?
3. ಹವಾಮಾನ ವೈಪರೀತ್ಯ
ಕಾಲಕಾಲಕ್ಕೆ ಮಳೆ ಬೆಳೆ ಬಂದರೆ ತಿಂಬಲೆಂತಾರು ಸಿಕ್ಕುಗು.
ಈಗ ಮಳೆಗಾಲಲ್ಲಿ ಮಳೆ ಇಲ್ಲೆ, ಚಳಿಗಾಲಲ್ಲಿ ಚಳಿ ಇಲ್ಲೆ, ಸೆಕೆಗಾಲಲ್ಲಿ ನೀರಿಲ್ಲೆ!
ಎಂತಾರು ಮಾಡಿ ಬದ್ಕೇಕು ಹೇದು ಆದರೆ ಸಮಗಟ್ಟು ಅವಕಾಶವೂ ಇಲ್ಲೆ.
ಗೆದ್ದೆ ಬೇಸಾಯ ಮಾಡ್ತ ಕಾಲದ ಒರೆಂಗೂ ಸಮ ಇದ್ದತ್ತು. ಮುಂದೆ ಅಡಕ್ಕೆ-ರಬ್ಬರು ಹೇದು ಬೆಳದಪ್ಪಗ ಎಂತದೂ ತಿಂಬಲಿಲ್ಲೆ, ಈ ಗುಬ್ಬಚ್ಚಿಗೊಕ್ಕೆ! ಪಾಪ!!
 4. ವಾತಾವರಣ ಮಾಲಿನ್ಯ
ನಿತ್ಯನಿತ್ಯವೂ ವಾತಾವರಣ ಹಾಳಾಗಿಂಡು ಇದ್ದು. ಅಜ್ಜಂದ್ರಿಂಗೆ ಸಿಕ್ಕುತ್ತಷ್ಟು ಶುದ್ಧ ಗಾಳಿ ಸಿಕ್ಕುವ ಪುಣ್ಯ ನವಗಿಲ್ಲೆ.
ಮದಲಿಂಗೆ ಈಗಾಣಷ್ಟು ವಾಹನಂಗೊ, ಕಂಪೆನಿಗೊ ಇದ್ದತ್ತಿಲ್ಲೆ. ಭೂಮಾಲಿನ್ಯದ ಪಾಪತ್ವ ಅಜ್ಜಂದ್ರಿಂಗೆ ಇತ್ತಿಲ್ಲೆ.
ಇದು ಎಲ್ಲಾ ಜೀವಿಗಳ ಆರೋಗ್ಯದ ಮೇಗೆ ಪರಿಣಾಮ ಬೀರುತ್ತು ಹೇಳುದು ನಿಶ್ಚಿತ ಸತ್ಯ.
5. ಮೊಬೈಲು
ಅಖೇರಿಯಾಣದ್ದು – ಆದರೆ ಬಹುಮುಖ್ಯವಾದ್ಸು, ಈಗಾಣ ಕಾಲದ ಮೊಬೈಲು.
ಒಬ್ಬೊಬ್ಬನ ಕೈಲಿ ಎರಡೆರಡರ ಹಾಂಗೆ ಮೊಬೈಲು ತಿರುಗುತ್ತಪ್ಪೋ – ಅದಕ್ಕೆ ಓ ಆ ಟವರಿಂದ ಸಂಕೇತಂಗೊ ಬರೆಡದೋ?
ಆ ಸಂಕೇತಂಗೊ ಗಾಳಿಲೇ ಹೋಪದಲ್ಲದೋ?
ಅದು ಹೋಪದು ಕಾಲಿಜಾಗೆ ನೋಡಿಗೊಂಡು ಮಾಂತ್ರ ಅಲ್ಲ, ಸಿಮೆಂಟು, ಗುಡ್ಡೆ, ಬಂಡೆ, ಹೊಳೆ – ಎಲ್ಲಿ ಹೋದರಲ್ಲಿ ಮೊಬೈಲು ಸಂಕೇತಂಗೊ ಇರ್ತು.
ನಮ್ಮ ದೇಹದ ಮೂಲಕವೂ ಹೋವುತ್ತು.
ಇದರ ದುಷ್ಪರಿಣಾಮ ನಮ್ಮ ಮೇಗೆಯೂ ಇದ್ದೇ ಇದ್ದು, ಆದರೆ ದೊಡ್ಡ ದೇಹಕ್ಕೆ ಗೊಂತಾವುತ್ತಿಲ್ಲೆ, ಅಷ್ಟೆ.
ಆದರೆ, ಗುಬ್ಬಚ್ಚಿಗೊಕ್ಕೆ ಬೇಗ ಗೊಂತಾಯಿದು. ಮೊಬೈಲು ಸಂಕೇತಂಗೊ ಇದ್ದಲ್ಲಿ ಅಮ್ಮಗುಬ್ಬಚ್ಚಿಯ ಹೊಟ್ಟೆಲಿ ಮೊಟ್ಟೆ ಸರಿ ಬೆಳವಣಿಗೆ ಆವುತ್ತಿಲ್ಲೇಡ.
ಇಂಗ್ಲೇಂಡಿಲಿ ಗುಬ್ಬಚ್ಚಿಯ ಸಂಖ್ಯೆ ಕಡಮ್ಮೆ ಆದಪ್ಪಗ ಆರೋ ರಜ ಸಂಶೋಧನೆ ಮಾಡಿ ಈ ವಿಚಾರವ ಕಂಡುಗೊಂಡಿದವಾಡ.ಪಾಪದ ಗುಬ್ಬಚ್ಚಿ ಮೇಗೆ ಎಷ್ಟೆಲ್ಲ ಪ್ರಹಾರಂಗೊ!!

~

ನಮ್ಮ ಹಾಂಗೇ “ಗುಬ್ಬಚ್ಚಿಗಳ ಒಳಿಶೇಕು” ಹೇಳ್ತ ಮನೋಭೂಮಿಕೆಯೋರು ಒಟ್ಟು ಸೇರಿಗೊಂಡು, ದೊಡಾ ಕಾರ್ಯ ಮಾಡ್ತಾ ಇದ್ದವಾಡ.
ಅದೇವದೋ ಒಂದು ದಿನ “ವಿಶ್ವ ಗುಬ್ಬಚ್ಚಿಗಳ ದಿನ” ಹೇದು  ಆಚರಣೆ ಮಾಡ್ತವಾಡ!!
ಅದೇನೇ ಇರಳಿ, ಗುಬ್ಬಚ್ಚಿ ಗುಂಪಿನ ಆಟ ನೋಡಿದ ಎಂತೋನಿಂಗೂ ಕೊಂಡಾಟದ ಆಗದ್ದೆ ಇರ.
ಅಂತಾ ಹಕ್ಕಿಗಳ, ಹೊಂದಾಣಿಕೆ ಜೀವಿಗಳ ಒಳಿಶೇಕಾದ್ಸು ನಮ್ಮ ಕರ್ತವ್ಯ.
ಅಲ್ಲದ್ದರೆ, ನಮ್ಮಂದ ಮತ್ತಾಣೋರು ಗುಬ್ಬಚ್ಚಿಗಳ ಹುಡ್ಕೇಕಷ್ಟೇ.
ಹುಡ್ಕಿ ಹುಡ್ಕಿಯೇ ಬಚ್ಚುಗಷ್ಟೇ ವಿನಃ, ಗುಬ್ಬಚ್ಚಿ ಕಾಂಬಲೆ ಸಿಕ್ಕುದು ಸಂಶಯ ಇದ್ದು!
~
ಒಂದೊಪ್ಪ: ಬ್ರಹ್ಮಾಸ್ತ್ರಂಗೊ ಹೀಂಗೇ ಮುಂದುವರುದರೆ – ಇಂದು ಗುಬ್ಬಚ್ಚಿ, ನಾಳೆ ನಾವು…
ಪಟಃ ಬೈಲಿಲಿ ಎಲ್ಲಿಯೂ ಗುಬ್ಬಚ್ಚಿಯ ಪಟ ಹುಡ್ಕಿ ಹುಡ್ಕಿ ಸಿಕ್ಕದ್ದಪ್ಪಗ ಶಶಿಕಲತ್ತೆ ಹುಡ್ಕಿ ಕೊಟ್ಟದು. 😉

10 thoughts on “ಹುಡ್ಕಿ ಹುಡ್ಕಿ ಬಚ್ಚಿರೂ, ಗುಬ್ಬಚ್ಚಿ ಸಿಕ್ಕ..!!

  1. ಒಪ್ಪಣ್ಣ ಲಾಯಿಕಲ್ಲಿ ಬರದ್ದೆ… ಅ೦ಗಡಿ ಮಾವನ ಅ೦ಗಡಿ ಎ೦ಗೊ ಶಾಲೆಗೆ ಹೊಪಗ ನೀರ್ಚಾಲಿಲಿ ಇದ್ದತ್ತು.. ಹೀ೦ಗೆ ಗುಪ್ಪಚ್ಚಿ ಗಳೂ ಇತ್ತಿದ್ದವು..ಈಗ ಎಲ್ಲ ನೆನಪು ಮಾತ್ರ..ಅಲ್ಲಿಯೂ ಕಾಂಕ್ರೀತ್ ಕಟ್ಟಡ ಬಯಿ೦ದು..

  2. ಅಭಯ ಸಿಂಹ ಮಾಡಿದ “ಗುಬ್ಬಚ್ಚಿ”ಯ ಬಗ್ಗೆ ಇಪ್ಪ ಟೆಲಿ ಚಿತ್ರವ ನೆಂಪು ಮಾಡಿತ್ತು, ಒಪ್ಪಣ್ಣನ ಈ ಶುದ್ದಿ. ಅಂದ್ರಾಣ ಕಾಲಲ್ಲಿ ರೇಶನು ಅಂಗಡಿಗಳಲ್ಲಿ, ಹಳೆ ಜೀನಸು ಅಂಗಡಿಗಳಲ್ಲಿ, ಮನೆಗಳಲ್ಲಿ ಕಾಂಬಲೆ ಸಿಕ್ಕೆಂಡಿತ್ತು ಗುಬ್ಬಚ್ಚಿಗಳ ಹಿಂಡು ಹಿಂಡು. ಈಗಾಣ ಕಾಲಲ್ಲಿ ಒಂದೇ ಒಂದು ಕಾಣದ್ದದು ಬೇಜಾರಿನ ಸಂಗತಿ.

  3. ಅಕ್ಕಿ ಕಾಳು, ಎಲ್ಲರೂ ತ೦ದರೂ,
    ಅಡಿಗೆ -ಪಾತ್ರ ,ಮನಾರ ಮಾಡುವ ಕೆಲಸ ಮಾತ್ರ
    ಮಾಣಿಗುಬ್ಬಿಗಳಕೆಲಸವಡ.
    ಅಪ್ಪ ಅಲ್ಲದೋ ?ನಾವಗರಡಿಯ.
    ಬೈಲಿನ ಅಡುಗೆ ಸತ್ಯಣ್ನ೦ಗೆ ಗೊ೦ತಿಪ್ಪಲೂ ಸಾಕು.
    ಇಲ್ಲದ್ದರೆ ಅವರ ಸಣ್ಣ ಶ೦ಖ (ದ)ಊದುವ ,
    ಕೊರಳಿಲಿ ಮಸಿ ಆದ್ದು ಎಲ್ಲಿ೦ದ?

  4. ಗುಬ್ಬಿಗಳ ಹಾಂಗೆ ಈಗ ಕೆಪ್ಪೆಗಳನ್ನೂ ಕಾಂಬಲೆ ಸಿಕ್ಕ. ಗೆದ್ದೆ ಬೇಸಾಯ ಕಮ್ಮಿ ಆದ ಕಾರಣ ಮತ್ತೆ ಕೀಟ ನಾಶಕ ಬಳಸುವ ಕಾರಣ ಕೆಪ್ಪೆ ಸಂತಾನವೇ ಅಳಿದು ಹೋಯಿದು. ಕೆಪ್ಪೆಗೊ ಕಮ್ಮಿಯಾದ ಕಾರಣ ನುಸಿಗೊ ಹೆಚ್ಚಾಯಿದವು. (ನೀರಿಲ್ಲೂ ಭೂಮಿಲೂ ಬದುಕುವ ಕೆಪ್ಪೆಗೋ ನುಸಿಗಳ ಮರಿಗಳನ್ನೇ ತಿನ್ತವು). ಹಿಸ್ಕುಗೋ ಹೆಚ್ಚಾಯಿದವು. ಎಂತ ಕಾರಣ ಗೊಂತಿಲ್ಲೆ. ಬಹುಶ ಹಿಸ್ಕು ತಿಂಬ ಕಾಗೆ ಹ್ಹಾನ್ಗಿಪ್ಪ ಹಕ್ಕಿಗೋ ಕಮ್ಮಿ ಆದ ಕಾರಣವೋ ಎಂತದೋ. ಡೆಂಗ್ಯು ಚಿಕುನ್ ಗುನ್ಯ ಮಣ್ಣು ಮಸಿ ಎಲ್ಲ ರೋಗಂಗಳ ತಪ್ಪ ನುಸಿಗಳ ನಿಯಂತ್ರಣಕ್ಕೆ ಹತ್ತು ಹಲವು ಪ್ರಯೋಗ ಮಾಡಿ ಶೀರ್ಷಾಸನ ಹಾಕುವ ಸರಕಾರ ಕೆಪ್ಪೆಗಳ ಸಂತಾನ ಹೆಚ್ಚುಮಾಡುವ ಪ್ರಯೋಗ ಎಂತಕೆ ಮಾಡಲಾಗ? 😉

  5. ಅಕ್ಕಿ ಬತ್ತ ಇದ್ದ ಮನೆಗಳಲ್ಲಿ ಗುಬ್ಬಿಗೆ ಜಾಗ ಇತ್ತು.ಎನ್ನ ಅಜ್ಜನಮನೆಲಿ ನೋಡಿದ್ದು ನೆಂಪಾತು.ಗುಬ್ಬಿಯ ಗೂಡು ನಾಶ ಮಾಡುದು ಮಹಾಪಾಪ ಹೇಳಿ ಹಿರಿಯರ ನಂಬಿಕೆಃ-

    ಅಬ್ಬೆಯ ಬಡಿದವನ,ಗುಬ್ಬಿ ಗೂಡೆಳೆದವನ…..ಅಂತವರ ದೋಷ ತನಗೆಂದ’-ಹೇಳಿ ಒಂದು ಹಾಡು ಕೇಳಿದ್ದೆ.

    ಪೂರ್ತಿ ಆರಿಂಗಾದರೂ ಗೊಂತಿದ್ದರೆ ಬೈಲಿಲಿ ಹಾಕುಗೊ?

  6. ಲೇಖನ ಸಕಾಲಿಕ. ಸಣ್ಣದಿಪ್ಪಗ ಚಾವಡಿಲಿ, ಮುಖಮಂಟಪದ ದಾರಂದದ ಎಡೆಲಿ ಎಲ್ಲ ಗುಬ್ಬಚ್ಚಿಗ ಗೂಡು ಕಟ್ಟಿ ಚಿಲಿಪಿಲಿ ಮಾಡಿಗೊಂಡು ಇದ್ದದು ನೆನಪ್ಪಾವುತ್ತು. ಮೇಲಿನ ಗುಬ್ಬಚ್ಚಿ ಫೋಟೋ ತೆಗದ್ದು ಬೊಂಬಾಯಿಲಿ ಎನ್ನ ಅಕ್ಕನ ಮಗಳು ಸೌಮ್ಯ ಗಿಳಿಯಾಲ ಅವರ ಫ್ಲಾಟ್ ಲಿ . ಸೌಮ್ಯ ದಿನಾಗಳು ಅವರ ಬಾಲ್ಕನಿ ಲಿ ಅಕ್ಕಿ ಹರಗಿ ಮಡುಗುತ್ತು. ತುಂಬಾ ಗುಬ್ಬಚ್ಚಿಗಳುದೆ, ಗಿಳಿಗಳುದೆ ಬಂದು ತಿನ್ದಿಕ್ಕಿ ಹೋವುತ್ತವು. ನೋಡುಲೆ ತುಂಬಾ ಖುಷಿ ಅವುತ್ತು.

  7. ಮನುಷ್ಯರ ಐಷಾರಾಮಕ್ಕೆ ಪ್ರಕೃತಿಯ ವಿನಾಶ ಆಪ್ಪದು ನೋಡುವಾಗ, ಈ ಸೌಲಭ್ಯಕ್ಕೆ ನಾವು ಅರ್ಹರೋ ಹೇಳಿ ಯೋಚನೆ ಬತ್ತು. ಗುಬ್ಬಚ್ಚಿ ಸಂತತಿ ವಿನಾಶಲ್ಲಿ ಇದ್ದು, ಇದೇ ರೀತಿ ಮುಂದುವರುದರೆ ಇನ್ನು ಯಾವದೆಲ್ಲಾ ಸಂತತಿಗೊ ನಾಶ ಆವ್ತು ಗೊಂತಿಲ್ಲೆ.
    ಮನುಷ್ಯನ ಮೆದುಳಿನ ಕ್ಯಾನ್ಸರಿಂಗೆ ಮೊಬೈಲ್ ಸಿಗ್ನಲ್ ಕಾರಣ ಆದ ವರ್ತಮಾನ ಬೊಂಬಾಯಿಲಿ ವರದಿ ಆಯಿದು. ಇನ್ನು ಗುಬ್ಬಚ್ಚಿ ಯಾವ ಲೆಕ್ಕ?
    ಸಕಾಲಿಕ ಲೇಖನ.
    ಅಂಗುಡಿಮಾವನ ಅಂಗಡಿಯ ವಿವರಣೆ ಓದುವಾಗ ಕಣ್ಯಾರದ ಅಂದ್ರಾಣ ಅಂಗಡಿಗಳ ನೆಂಪು ಬಂತು. ಅಲ್ಲಿಯೂ ಇದೇ ದೃಷ್ಯ ಕಂಡದು ಇನ್ನು ಬರೇ ನೆಂಪು ಮಾತ್ರ.

  8. ಆನೀಗ ಓ ಈ ಮೊಬೈಲು ಮುಟ್ಟೇಕೋ ಬೇಡದೋ ಹೇದು ಚಳಿಕೂರ್ಸಿತ್ತನ್ನೇ ಈ ಶುದ್ದಿ!

    ಅಂಗುಡಿಮಾವನ ಅಂಗುಡಿ ದೃಶ್ಯ, ಗುಬ್ಬಚ್ಚಿಯ ಕಲರವ ಕಣ್ಣ ಮುಂದೆ ತಂದು ನಿಲ್ಲುಸಿ ಅಕೇರಿಗೊಂದಪ್ಪಲ್ಲಿ ಹೆಟ್ಟಿದ ಶುದ್ದಿಗೊಂದು ಒಪ್ಪ ಹೇಳಿತ್ತಿತ್ಲಾಗಿಂದ ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×