ಬೈಲಿಲಿ ಇಡೀ ಮೋಳಮ್ಮಂದೇ ಶುದ್ದಿ.
ಮನೆಗೆ ಬಂದೋರುದೇ ಅದರನ್ನೇ ಕೇಳುದು. ದಾರಿಲಿ ಸಿಕ್ಕಿದೋರುದೇ ಅದನ್ನೇ ಕೇಳುದು, ಜೆಂಬ್ರಕ್ಕೆ ಹೋದಲ್ಲಿಯುದೇ ಅದನ್ನೇ ಕೇಳುದು, ಪೋನು ಮಾಡಿದವುದೇ ಅದನ್ನೇ ಕೇಳುದು..!! 🙁
ಚೆ, ಅದು ಇರೆಕ್ಕಾತು ಹೇಳಿ ಯೇವತ್ತೂ ಅನುಸುದು – ನಿತ್ಯವೂ ಅನುಸುತ್ತಾ ಇದ್ದು ಒಪ್ಪಣ್ಣಂಗೆ.
ಇನ್ನೊಂದು ಮೋಳಮ್ಮ ಬಕ್ಕು ಹೇಳಿ ಎಲ್ಲೋರ ನಂಬಿಕೆ, ಒಪ್ಪಣ್ಣಂದೂ!
ನವರಾತ್ರಿ ಶುರು ಆಯಿದು.
ಕಳುದೊರಿಶ ಈ ವಾರ ನವರಾತ್ರಿಯ ಶುದ್ದಿಯನ್ನೇ ಮಾತಾಡಿದ್ದು!
(ಸಂಕೊಲೆ: ಇಲ್ಲಿದ್ದು https://oppanna.com/oppa/nava-navonmesha-shalini-navaratri)
ದುರ್ಗೆಯ ಆರಾಧನೆಯ ಗವುಜಿಯುದೇ ಒಟ್ಟಿಂಗೇ ಸುರು ಆಯಿದು.
ಒಂಬತ್ತು ದಿನ ಒಂಬತ್ತು ರೂಪಲ್ಲಿ ದುರ್ಗೆಯ ಕಂಡು, ಆರಾಧನೆ ಮಾಡಿ – ದುರ್ಗೆಯ ಕೊಶಿಪಡುಸುತ್ತ ಕಾರ್ಯ ನಾವು ಮಾಡ್ತು.
ಬಟ್ಟಮಾವ ದುರ್ಗಾಪೂಜೆಲಿ ಅಂಬೆರ್ಪು, ಬಟ್ಯಂಗೆ ಕೊರಗ್ಗನ ವೇಷ ಹಾಕುತ್ತ ಅಂಬೆರ್ಪು, ಎಡಪ್ಪಾಡಿಬಾವಂಗೆ ಗುರುಗಳ ಸಪ್ತಶತೀಪಾರಾಯಣ ಕೇಳ್ತ ಅಂಬೆರ್ಪು, ಮಾಷ್ಟ್ರುಮನೆ ಅತ್ತೆಗೆ ಶಾಮಲದಂಡಕ ಓದುತ್ತ ಅಂಬೆರ್ಪು, ದೀಪಕ್ಕಂಗೆ ಕುಂಕುಮಾರ್ಚನೆ ಮಾಡ್ತ ಅಂಬೆರ್ಪು, ಬಂಡಾಡಿಅಜ್ಜಿಗೆ ಅಯಿಗಿರಿ ನಂದಿನಿ ಹೇಳ್ತ ಅಂಬೆರ್ಪು, ಸುವರ್ಣಿನಿ ಅಕ್ಕಂಗೆ ತೊಳಶಿಗೆಡುವಿಂಗೆ ನೀರೆರೆತ್ತ ಅಂಬೆರ್ಪು – ಬೈಲಿನ ಎಲ್ಲೋರುದೇ ಈ ನವರಾತ್ರಿಲಿ ಅವರವರ ನಂಬಿಕೆಯ ಅಂಬೆರ್ಪಿಲಿ ಇದ್ದವು.
ಒಪ್ಪಣ್ಣಂಗೆ ಮೋಳಮ್ಮ, ಹಟ್ಟಿಯ ಶುದ್ದಿ ಇನ್ನುದೇ ತಲೆಂದ ಹೋಯಿದೇ ಇಲ್ಲೆ!
ಹಟ್ಟಿಂದ ತಲೆ ಹೆರ ಬತ್ತೇ ಇಲ್ಲೆ – ಅಲ್ಲ – ತಲೆಂದ ಹಟ್ಟಿ ಹೆರ ಬತ್ತೇ ಇಲ್ಲೆ!!
ಅದುವೇ ಸುತ್ತುತ್ತಾ ಇದ್ದು, ನಿತ್ಯ ನಿರಂತರ!!
ಹಾಂಗಾಗಿ, ಹಟ್ಟಿಗೇ ಸಂಬಂಧುಸಿದ ಶುದ್ದಿ ಈ ವಾರ ಮಾತಾಡುವೊ°.
~
ತರವಾಡುಮನೆ ಪಾತಿಅತ್ತಗೆ ಮೊಳಪ್ಪುಬೇನೆ ಜೋರಾಯಿದು!
ಜೋರು ಹೇಳಿರೆ ವಿಪರೀತ ಜೋರಡ. ಒಂದರಿ ಕೂದು ಎದ್ದರೆ ಅವಲಕ್ಕಿ ಬೆರುಸಿದ ಹಾಂಗೆ ಆವುತ್ತಡ, ಕಾಲಮೊಳಪ್ಪಿನ ಗೆಂಟಿಲಿ!
ಮದಲೇ, ಸೊಂಟಬೇನೆ ಇದ್ದ ಜೀವ ಅದು – ಕೆಲಸಂಗಳ ಒಟ್ಟಿಂಗೆ ಸೊಂಟಬೇನೆಯೂ ಇದ್ದೇ ಇತ್ತು, ಪ್ರಾಕಿಂದಲೇ!
ಸೊಂಟಬೇನೆ ಹೇಳಿತ್ತುಕಂಡ್ರೆ, ಅದೊಂದು ದೇಹದ ಭಾಗ – ಹೇಳುವಷ್ಟಕೆ ಆಗಿ ಹೋಯಿದು.
ಆದರೆ ಇದು ಈಗಾಣ ಮೊಳಪ್ಪುಬೇನೆ ಸೊಂಟಬೇನೆಯ ಹಾಂಗೆ ಪ್ರಾಕಿಂದ ಬಂದದಲ್ಲ.
ಕಳುದೊರಿಶ ಆ ಗೆಂಟುಬೇನೆ ಜೊರ ಬಂತಿದಾ – ಊರಿಡೀಕ; ಪಾತಿಅತ್ತಗೂ ಬಂದಿತ್ತು.
ಯೇವತ್ತಿನ ಹಾಂಗೆ ಅದಕ್ಕೆಂತರ ಮದ್ದು – ಹೇಳಿ ಉದಾಸ್ನ ಮಾಡಿದ್ದವೋ ಏನೋ! ಅಲ್ಲ ಇನ್ನು ರಂಗಮಾವ ತಂದ ಮದ್ದಿಲಿ ರಜ ರಜ ಕುಡ್ಕೊಂಡಿತ್ತಿದ್ದವೋ! ಉಮ್ಮಪ್ಪ!!
ಅಂತೂ ಆ ಜೊರ ಅಂಬಗಳೇ ಕಮ್ಮಿ ಆಗಿತ್ತು – ಆದರೆ ಗೆಂಟುಬೇನೆ ರಜ ಸಮೆಯ ಮುಂದರುತ್ತು!
ಸುಮಾರು ನಾಕೈದು ತಿಂಗಳು ಕಳುದು ಗೆಂಟುಬೇನೆ ಕಮ್ಮಿ ಆತು,
– ಆದರೆ ಈ ಒರಿಶ ಮತ್ತೆ ಅದು ಎಳಗಿದ್ದು! ಪಾಪ!!
ಗೆಂಟುಗೆಂಟುಗೊ ಎಲ್ಲ ಬೀಗಿ ಕೊಟ್ಟಿಗೆಯಷ್ಟಕೆ ಆಗಿ, ಕೂದರೆ ನಿಂಬಲೆಡಿಯ, ನಿಂದರೆ ಕೊಬಲೆಡಿಯ!
ಪುನಾ ಮೊದಲಾಣ ಹಾಂಗೆ ಆಯೆಕ್ಕಾರೆ ರಜ ಸಮೆಯ ಬೇಕು ಹೇಳಿ ಮಜಲುಕೆರಅಣ್ಣ ಮೊನ್ನೆ ನೋಡಿ ಹೇಳಿದವಡ! 🙁
~
ಈಗೀಗ ಪಾತಿ ಅತ್ತೆ ಮನೆಲಿ ಸುತ್ತುಬಪ್ಪದು ರಜ ಕಮ್ಮಿ.
ಎಡಿಯೆಕ್ಕೇ – ಎಂತ ಮಾಡುದು ಪಾಪ – ಬೇನೆಗೊ ಹಂದುಲೇ ಬಿಡ್ತಿಲ್ಲೆ! ಕೂರೆಕ್ಕು ಹೇಳಿ ಮನಸ್ಸಿಂಗೆ ಇಲ್ಲದ್ದರೂ – ಅನಿವಾರಿಯವಾಗಿ ಕೂದಲ್ಲೇ ಇರೆಕ್ಕಾದ ಪರಿಸ್ತಿತಿ!!
ಮನಸ್ಸು ಕೇಳ್ತೋ – ಇಷ್ಟು ಸಮೆಯ ಪಾದರಸದ ಹಾಂಗೆ ಓಡಿಓಡಿ ಕೆಲಸಮಾಡಿದ ಹೆಮ್ಮಕ್ಕೊಗೆ ಈಗ ಕಟ್ಟಿಹಾಕಿದ ಹಾಂಗಾಯಿದು. 🙁
ಕೈಸಾಲೆ ಹತ್ರಾಣ ಕೋಣೆಲಿ ಪಾತಿಅತ್ತೆಯ ಹಸೆ ಮಡುಸದ್ದೆ ಹತ್ತು ದಿನಂದ ಮೇಗೆ ಆತು.
ಬೇನೆ ಕಮ್ಮಿ ಅಪ್ಪನ್ನಾರ ಹೆಚ್ಚು ಓಡಾಡ್ಳಾಗ ಹೇಳಿದ್ದವಡ ಮಾಳಿಗೆಡಾಗುಟ್ರು.
ಆತಪ್ಪಾ, ಡಾಗುಟ್ರು ಹೇಳಿದಾಂಗೆ ಕೇಳದ್ರೆ ಡಾಗುಟ್ರಂಗೆ ಏನೂ ನಷ್ಟ ಇಲ್ಲೆ, ನವಗೇ ಇಪ್ಪದು.
ಡಾಗುಟ್ರು ಹೇಳಿದ್ದಕ್ಕೋ, ರಂಗಮಾವ ಜೋರುಮಾಡಿದ್ದಕ್ಕೋ – ಅಂತೂ ಈಗ ಪಾತಿಅತ್ತೆ ಮನೆಲಿ ಹಂದುದು ಕಮ್ಮಿ!
~
ಹನ್ನೆರಡು ದಿನದ ಆಟಿ ಪೂಜೆಗೆ ಒರಿಶಕ್ಕೂ ಪಾತಿ ಅತ್ತೆದೇ ಪರಿಕರ್ಮ. ರಂಗಮಾವಂದೇ ಪೌರೋಹಿತ್ಯ!
ಈ ಒರಿಶ ಮಾಂತ್ರ ಪಾತಿಅತ್ತಗೆ ಸೇರುಲೆ ಎಡಿಗಾಯಿದಿಲ್ಲೆ. ರಂಗಮಾವ ದುರ್ಗಾನಮಸ್ಕಾರ ಮಾಡುವಗ ಅಲ್ಲೇ ಕರೆಲಿ ಕೂದಂಡು ನಿತ್ಯವೂ ಬಾಯಿಲೇ ಇಪ್ಪ ಲಲಿತಾಸಹಸ್ರನಾಮವ ಹೇಳಿದವು. ರಂಗಮಾವನ ಜಾತವೇದಸೇ ಮುಗಿವಗ ಇವರ ಸಹಸ್ರನಾಮ ಮುಗಿಗು.
ಮೊದಲುದೇ ಹೇಳುಗು, ಆದರೆ ಬೇರೆ ಕೆಲಸಂಗಳ ಒಟ್ಟಿಂಗೆ, ಅಷ್ಟೆ.
ಈ ಒರಿಶ ದೇವರ ಪೂಜಗೆ ಬೇಕಾದ ಪರಿಕರ್ಮದ ಕಾರ್ಯ ಪೂರ ಶಾಂಬಾವಂದೇ!
ವಿದ್ಯಕ್ಕಂಗೆ ಅಷ್ಟೆಲ್ಲ ಅರಡಿಯ, ಅದಲ್ಲದ್ದೆ ಶುದ್ದವೂ ಸಾಲ!
ಹಾಂಗಾಗಿ ಅದು ಕೆಲಸಮಾಡೆಕ್ಕು ಹೇಳಿ ಆರುದೇ ಗ್ರೇಶಿದ್ದವುದೇ ಇಲ್ಲೆ!
~
ಹಾಂಗೆ, ಅಡಿಗೆಯೂ ವಿದ್ಯಕ್ಕನೇ ಮಾಡ್ಳಿಲ್ಲೆ.
ಹೆಚ್ಚುಕಮ್ಮಿ ಗೆಂಡುಬಿಡಾರದ ಹಾಂಗೇ ಆಯಿದದು. ಅಕ್ಕಿಕಡದ್ದು ಮಾಡದ್ದೆ ಕಾಲ ಆತು – ಕಡವಕಲ್ಲಿಲಿ ಸಾಲಿಗ ಕೂಯಿದು!
ಉದಿಯಪ್ಪಂಗೆ ರಜರಜ ಶಾಂಬಾವನೋ ಮಣ್ಣ ಅವಲಕ್ಕಿ ಮಾಡುಗು, ಒಗ್ಗರುಸುದು ಏನಾರು ಇದ್ದರೆ ರಂಗಮಾವನೇ ಮಾಡುಗು. ಉಪ್ಪು-ಮೆಣಸು ಅಂದಾಜಿ ಹೇಳುಲೆ ಪಾತಿ ಅತ್ತೆದೇ ಸೇರುಗು. ಬೇನುಸೊಪ್ಪು ತಪ್ಪದು, ಶುಂಟಿ ಒಕ್ಕುದು ಎಲ್ಲ ವಿನುದೇ ಮಾಡ್ತ.
ಅಂತೂ ಇಂತೂ ಮನೆಯ ರಥ ನೆಡೆತ್ತು!
ಇದರೆಡಕ್ಕಿಲಿ ಒಂದೆರಡುದಿನ ವಿದ್ಯಕ್ಕನತ್ತರೆ ಹಟ್ಟಿಗೆ ಹೋಪಲೆ ಹೇಳಿದನಡ ನಮ್ಮ ಶಾಂಬಾವ.
ಹಟ್ಟಿಗೆ ಹೋಪದು ಹೇಳಿರೆ ದನಗಳ ಚಾಕುರಿ ಮಾಡ್ತದು. ಅದುದೇ ಆಯೇಕನ್ನೆ?
ಎಡಿತ್ತಕಾಲಲ್ಲಿ ಪಾತಿ ಅತ್ತೆ ಮಾಡಿಗೊಂಡಿತ್ತು, ಮನಾರಕ್ಕೆ. ಈಗ ಬೇರೆ ಆರಿದ್ದವು!
ಹಾಂಗೆ ವಿದ್ಯಕ್ಕನ ಹತ್ತರೆ ಹೇಳಿದ!
ಷೆ, ಅದುವೇ ಅವ ಮಾಡಿದ ದೊಡ್ಡ ತಪ್ಪು.
ಆ ದಿನ ಮೋರೆ ಬೀಗುಸಿಗೊಂಡು ಹಟ್ಟಿಗೆ ಹೋದರೂ, ಬಂದ ಕೂಡ್ಳೇ ಅದರ ಅಪ್ಪನ ಮನಗೂ, ಅಕ್ಕನ ಮನಗೂ ಪೋನು ಮಾಡಿ ಹಟ್ಟಿಕೆಲಸ ಮಾಡಿದ ಬೇಜಾರವ ಹಂಚಿಗೊಂಡಿದಡ, ಪಾಪ!
~
ಈಗ ಕರವಲೆ ಮೂರು ದನಗಳೂ, ಒಂದು ಎಮ್ಮೆಯೂ ಇದ್ದು. ಪಾತಿ ಅತ್ತೆಯ ಕೊಂಗಾಟದ ದನಗೊ.
ವಿದ್ಯಕ್ಕಂಗೆ ಕರವಲೆ ಬತ್ತಿಲ್ಲೆಡ, ಬಾಲ್ದಿ ಮಡಿಕ್ಕೊಂಡು ಕೂಪಗ ದನ ಹಂದಿದ ಹಾಂಗೆ ಅಜನೆ ಅಪ್ಪದು ವಿದ್ಯಕ್ಕಂಗೆ.
ಪಾಪ, ಹೆದರಿ ಅಲ್ಲಿಂದ ಎದ್ದರೆ ಮತ್ತೆ ಹಟ್ಟಿಹೊಡೆಂಗೆ ಹೋವುತ್ತಿಲ್ಲೆ!
ದನಗೊ ಕರವಲೆ ಇಪ್ಪದು ಸೌಭಾಗ್ಯದ ಸಂಕೇತವೇ, ಆದರೆ ಎಡಿಯದ್ರೆ ಎಂತ ಮಾಡುದು!
ರಂಗಮಾವ ಹೆಚ್ಚಾಗಿ ಒಂದರ ಕರೆತ್ತವು. ಅವಕಾಶ ಆದರೆ ಇನ್ನೊಂದನ್ನೂ. ಮತ್ತೆ ಒಳುದ್ದರ ಕಂಜಿಗೆ ಅಗಿವಲೆ ಬಿಡುದು.
~
ಶಾಂಬಾವಂಗೆ ಈಗ ತೋಟದ ಜೆಬಾಬ್ದಾರಿ ಬಯಿಂದು.
ರಂಗಮಾವಂಗೆ ಹಟ್ಟಿಚಾಕಿರಿ ಮಾಂತ್ರ ಅಲ್ಲ, ತೋಟವುದೇ ಇದ್ದರೆ ಕಷ್ಟ ಆವುತ್ತಿದಾ..
ಮದಲಿಂಗೆ ಕೋಟಿಯೋ, ಪುತ್ತನೋ ಬಂದುಗೊಂಡು ಇತ್ತಿದ್ದವು, ಈಗ ಕೆಲಸಕ್ಕೇ ಜೆನ ಇಲ್ಲೆ.
ಅಪುರೂಪಕ್ಕೆ ಜೆನ ಬಂದರೆ, ನೂರುಗಟ್ಳೆ ಕೊಡೆಕ್ಕು!
ಹಾಂಗಾಗಿ, ಆಳುಗಳ ದಿನಿಗೆಳುವಗಳೂ ಯೋಚನೆ ಮಾಡೆಕ್ಕಿದಾ! – ಅಡಕ್ಕೆ ತೋಟಲ್ಲಿ ಪುರೇಸ ಅದು!!
ಇದರೆಡಕ್ಕಿಲಿ, ಮನೆಕೆಲಸಕ್ಕೆ ಆರಾರು ಜೆನ ಸಿಕ್ಕುಗೋ ಹೇಳಿ ಯೋಚನೆಮಾಡಿಗೊಂಡು ಇದ್ದ° ಶಾಂಬಾವ°.
ಈಗ ತೋಟಕ್ಕೇ ಕೆಲಸದೋರು ಸಿಕ್ಕುತ್ತವಿಲ್ಲೆ, ಹಾಂಗಿರ್ತಲ್ಲಿ ಇನ್ನು ಮನೆ ಒಳಂಗೆ ಕೆಲಸದೋರು ಸಿಕ್ಕುಗೋ..
– ರಂಗಮಾವಂಗೆ ಸಂಶಯ.
ಮೊದಲು ಪಾತಿಅತ್ತೆ ದುಡುಕ್ಕೊಂಡಿದ್ದಷ್ಟು ಒಂದು ಹೆಣ್ಣಾಳಿಂಗೇ ಎಡಿಯ – ಹೇಳ್ತ ಹೆಮ್ಮೆಯೂ, ಬೇಜಾರವೂ ಶಾಂಬಾವಂಗೆ ಬಂತು.
ಬಂದ ಹೆಣ್ಣು ಅಪ್ಪಷ್ಟು ಮಾಡ್ಳಿ, ಮತ್ತಾಣದ್ದು ಮನೆಯೋರು ಮಾಡುಗಿದಾ!
ಹಟ್ಟಿಗೆ ಹೋಪದು, ಉಡುಗಿ ಉದ್ದುದು, ಹೆಜ್ಜೆ ಮಡುಗುದು – ಇಷ್ಟರ ಹೆಣ್ಣು ಮಾಡಿರೆ, ಮತ್ತಾಣದ್ದರ ಇವನ ಹೆಂಡತ್ತಿ ಮಾಡುಗು – ಹೇಳಿ ಕಂಡತ್ತು.
ರಂಗಮಾವ ಸ್ವತಃ ಒಳ್ಳೆಯ ಕೆಲಸಗಾರ.
ಹಾಂಗಾಗಿ, ಮದಲಿಂಗೆ ಪಾತಿಅತ್ತೆ ಈ ಕಾರ್ಯಂಗಳ ಮಾಡುವಗ ಎಂತ ಪಾಪಪುಣ್ಯ ಕಂಡುಗೊಂಡು ಇತ್ತಿಲ್ಲೆ.
ಆದರೆ ಶಾಂಬಾವಂಗೆ ಅವನ ಹೆಂಡತ್ತಿಯ ಹಣೆಲಿ ರಜ ಬೆಗರಹನಿ ಕಾಂಬಗ ಕಣ್ಣಹನಿ ಇಳಿತ್ತೋ ಏನೋ!
~
ಒಟ್ಟಾರೆ ಆ ಮನೆಲಿ ದನಗಳ ಚಾಕ್ರಿ ಸಮಗಟ್ಟಿಂಗೆ ಆಗದ್ದೆ ಸುಮಾರು ಸಮಯ ಆತು.
ಹೊತ್ತೊತ್ತಿಂಗೆ ಅಕ್ಕಚ್ಚು ಸಿಕ್ಕದ್ರೆ ಅಭ್ಯಾಸ ಆದ ದನಗೊ ಕೆಲಕ್ಕೊಂಡು ಇರ್ತವು…
ಅದರ್ಲಿಯೂ ಆ ಕುತ್ತಕೊಂಬಿನ ಕೆಂಪುದನ ಜೋರು ಕೆಲವದು, ಬೈಲಿಂಗಿಡೀ ಕೇಳ್ತು.
ಈಗೀಗ ಹಾಂಗೆ ಕೆಲವದೂ ಕಮ್ಮಿ ಮಾಡಿದ್ದವು ದನಗೊ, ಅವಕ್ಕುದೇ ಗೊಂತಾಯಿದೋ ತೋರುತ್ತು! 😉
ಅಂತೇ ದನಗಳ ಹೀಂಗೆ ಕಟ್ಟಿಹಾಕಿ ಹಿಂಸೆ ಕೊಡುದರ ಕಾಣ್ತ ಪಾತಿಅತ್ತಗೆ ಉಂಬಲೂ ಮೆಚ್ಚುತ್ತಿಲ್ಲೆ ಒಂದೊಂದರಿ! 🙁 🙁
~
ಇದರೆಡಕ್ಕಿಲಿ ಒಂದು ಸಂಗತಿ ಆಯಿದು!
ಎನ್ನಂದ ದನಗಳ ನೋಡ್ಳೆಡಿತ್ತಿಲ್ಲೆ. ಅತ್ತೆಗೂ ಉಶಾರಿಲ್ಲೆ.
ಹಾಲಿಂಗೆ ದಕ್ಕಿತ ಒಂದರ ಮಡಿಕ್ಕೊಂಡು ಒಳುದ್ದರ ಕೊಡುವೊ° – ಹೇಳಿ ವಿದ್ಯಕ್ಕ ಈಗ ಶಾಂಬಾವನ ಕೆಮಿಕಚ್ಚಿಗೊಂಡು ಇದ್ದಡ, ಒಂದು ವಾರಂದ.
ಸುರುಸುರುವಿಂಗೆ ಅವಂಗೆ ಪಿಸುರು ಬಂದರೂ, ಮತ್ತೆ ಮತ್ತೆ ಅವಂಗೂ ಅಕ್ಕನ್ನೇ.. ಹೇಳಿ ಕಂಡತ್ತು.
ಈಗ ಅಂತೂ ಅವನೇ ಧೈರ್ಯಲ್ಲಿ ರಂಗಮಾವನ ಹತ್ತರೆ ವಾದ ಮಾಡ್ತನಡ.
ಅಮ್ಮಂಗೂ ನೋಡ್ಳೆಡಿಯ, ನಮ್ಮಂದಲೂ ಹರಿತ್ತಿಲ್ಲೆ!
ಗೊಬ್ಬರ ಬೇಕಾರೆ ಲೋರಿಲಿ ಲೋಡು ತಂದು ಹಾಕುಸುವೊ°, ಹಾಲು ಬತ್ತುಸಿರೆ ಪೆಕೆಟು ಹಾಲು ತಪ್ಪೊ°, ಗೋಮೂತ್ರ ಗೋಮಯಕ್ಕೆ ಹೇಂಗಾರೂ ಒಂದು ಸಾಕು,
ಈಗ ಇಪ್ಪದರ – ಸಾಂಕಲೆಡಿಯದ್ದರ ಎಲ್ಲ ಕೊಡುವೊ°,
ನಾವು ಹಟ್ಟಿಯ ಸಣ್ಣ ಮಾಡುವೊ° – ಹೇಳಿದನಡ.
~
ಮೊನ್ನೆ ಬೈಲಿಲೇ ನೆಡಕ್ಕೊಂಡು ಒಂದರಿ ತರವಾಡುಮನಗೂ ಹೋಗಿತ್ತಿದ್ದೆ.
ಎಲ್ಲೋರುದೇ ಕೆಲಸಲ್ಲಿ, ಪಾತಿಅತ್ತೆ ಮಾಂತ್ರ ಕೂದಲ್ಲೇ!
ಮದಲಿಂಗೆ ಇದು ತದ್ವಿರುದ್ಧ ಆಗಿಂಡಿತ್ತಲ್ಲದೋ – ಹೇಳಿ ಗ್ರೇಶಿ ಬೇಜಾರು ಆತೊಂದರಿ!
ಪಾತಿಅತ್ತಗೆ ಉಂಬಲೆ ಮೆಚ್ಚದ್ದೆ ಕೃಷ ಆಯಿದವು ಈಗ.
ದೇಹಕ್ಕೆ ಊನ ಬಂದರೆ ಮಜಲುಕೆರೆಲಿ ಮದ್ದಿದ್ದು, ಅಲ್ಲದ್ದರೆ ಡಾಗುಟ್ರುಗೊ ಇದ್ದವು ನಮ್ಮ ಬೈಲಿಲಿ!
ಆದರೆ ಮನಸ್ಸಿಂಗೇ ಊನ ಬಂದರೆ ಎಂತರ ಮಾಡುತ್ಸು?!
ಪಾತಿಅತ್ತಗೆ ಮನಸ್ಸಿಂಗೆ ಮೆಚ್ಚುತ್ತಿಲ್ಲೆ ಯೇವದುದೇ.
ದೊಡ್ಡ ತರವಾಡುಮನೆ, ಅದಕ್ಕೆ ದೊಡ್ಡ ಹಟ್ಟಿಯ ಶಂಬಜ್ಜ° ಕಟ್ಟುಸಿತ್ತವು.
ಯೇವ ಕಾಲಕ್ಕೂ ಅಳಿ ಇಲ್ಲದ್ದ ನಮುನೆಲಿ! ಪೂರ್ತಿ ಮರವೇ ಇಪ್ಪದು ಅದರ್ಲಿ!
ಮನೆಯ ಪಾಯಂದ ಒಂದಂಗುಲ ಆದರೂ ಎತ್ತರಲ್ಲಿಯೇ, ಮನೆಯ ಎಡತ್ತಿಂಗೆ, ಮನಗೆ ತಾಗಿಯೊಂಡೇ ಇಪ್ಪದು ಈ ಹಟ್ಟಿ.
ಬೈಲಕೆರೆ ಜೋಯಿಷಜ್ಜ ಹೇಳಿದ್ದು ಆಗಿರೇಕು – ವೃಷಭಾಯದ ದೊಡ್ಡ ಹಟ್ಟಿ!
ದೊಡ್ಡದನಗಳ ಕಟ್ಟುತ್ತ ದೊಡ್ಡದೊಂದು ಹಟ್ಟಿ, ಕರೆಲಿ ಒಂದು ಮರೆಕಟ್ಟಿ ಕಂಜಿಗಳ ಹಟ್ಟಿ, ಅದರಿಂದ ಅತ್ಲಾಗಿ ಒಂದು ಸಣ್ಣ ಕೋಣೆ – ಕೊಟ್ಟುಪಿಕ್ಕಾಸು ಸಾಮಾನು ಮಡುಗಲೆ.
ಹಟ್ಟಿ – ಗೊಬ್ಬರದ್ದು ಇದಾ, ಬಾಚಟ್ಟಿ ಅಲ್ಲ. ಸೊಪ್ಪೋ, ಬಜಕ್ಕರೆಯೋ ಮಣ್ಣ ಇಲ್ಲದ್ದೆ ಆಗ!
ಅಂಬಗಂಬಗ ಮೀಶೇಕು ದನಗಳ, ಅಲ್ಲದ್ದರೆ ಚೋರು ಹಿಡಿತ್ತು!
ಪಾತಿಅತ್ತೆ ಕೂದಲ್ಲೇ ಅಪ್ಪ ಮೊದಲು ರಂಗಮಾವನೇ ಮೀಶುಗು, ದನಗಳ ಮೈ ನೊಂಪಾಗಿ ಪಳಪಳ ಹೊಳಗು!
ಈಗ ನೋಡಿರೇ ಬೇಜಾರಾವುತ್ತು, ರಂಗಮಾವಂಗೆ!
~
ಎಷ್ಟೋ ದನಗ – ಕಂಜಿಗೊ ಆಡಿ ಬೆಳದ್ದವು ಅಲ್ಲಿ.
ಅಲ್ಯಾಣ ಕಂಜಿಗಳ ಎಷ್ಟೋ ಮನಗೆ ತೆಕ್ಕೊಂಡು ಹೋಯಿದವು..
ಪಾತಿ ಅತ್ತಗೆ ಕೊಶಿ ಕಂಡ ಕಂಜಿಗಳ, ಅತವಾ – ಬೇರೆಯವಕ್ಕೆ ಸಾಂಕಲೆ ಎಡಿಯದ್ದ ದನಂಗಳ ಬೇರೆ ದಿಕ್ಕಂದಲೂ ತಯಿಂದವು.
ಅಲ್ಲಿ ದನಗೊ ಕಮ್ಮಿ ಆದ್ದು ಹೇಳಿ ಇಲ್ಲೆ!
ಹಟ್ಟಿಂದ ಲಕ್ಷ್ಮೀದೇವರು ಮನಗೇ ಬಪ್ಪದು ವಿನಃ ಮನೆಂದ ಲಕ್ಷ್ಮಿ ಹಟ್ಟಿಗೆ ಹೋವುತ್ತಿಲ್ಲೆಡ, ಹಳೇ ಹಳ್ಳಿಲಿ ಒಂದು ಗಾದೆ ಇದ್ದು!
ಹಾಂಗೆ ಎಷ್ಟು ದನಗ ಇದ್ದರೂ ಅದೊಂದು ಹೊರೆ ಹೇಳಿ ಅನುಸಿದ್ದಿಲ್ಲೆ ಆ ಮನೆಯ ಮದಲಾಣೋರಿಂಗೆ!
ಈಗಾಣ ರಂಗಮಾವ-ಪಾತಿ ಅತ್ತಗುದೇ!
ಅಂದೊಂದರಿ, ಒಪ್ಪಣ್ಣ ಸಣ್ಣ ಇಪ್ಪ ಕಾಲಲ್ಲಿ – ರಜ್ಜ ಸಮೆಯ ಹಟ್ಟಿಲಿಯೇ ಎದುರು ಒಂದು ಇಳುಶಿಕಟ್ಟಿದ ಹಾಂಗೆ ಮಾಡಿ, ಕೆಲವು ಗಡಸುಗಳ ಅಲ್ಲಿ ಕಟ್ಟಿತ್ತವು,
ಪಾತಿಅತ್ತೆಯ ಸಂಗ್ರಹ ದೊಡ್ಡದಾಗಿ.
ಮತ್ತೆ ಕೆಲವು ದನಗಂಗಳ ಆರೋ ಸಾಂಕಲೆ ಕೇಳಿ ಅಪ್ಪಗ ಪುನಾ ಹಟ್ಟಿ ಮಾಂತ್ರ ಆತು!
ದೊಡ್ಡ ಸಂಸಾರವೇ ಇದ್ದು ಅಲ್ಯಾಣ ಹಟ್ಟಿಯ ದನಂಗೊಕ್ಕೆ!
~
ಆದರೆ ಈಗ ಅದರ ಎಲ್ಲವನ್ನುದೇ ತೆಗದು,
ಒಂದೋ, ಎರಡೋ ದನಗಳ ಮಡಿಕ್ಕೊಂಡು,
ಒಳುದ್ದರ ಆರಿಂಗಾರು ಕೊಟ್ಟು, ವಿದ್ಯಕ್ಕಂಗೆ ಸುಲಬ ಮಾಡೆಕ್ಕು ಹೇಳ್ತದು ಶಾಂಬಾವನ ಚಿಂತನೆ.
ಕೊಡುದು – ಯೇವದರ ಕೊಡುದು?
ಕೆಂಪಿಯನ್ನೋ? ಕಾಳಿಯನ್ನೋ? ನಂದಿನಿಯನ್ನೋ? ಚುಬ್ಬಿಯನ್ನೋ? – ಚೆ, ಒಂದೊಂದರ ತಳಿ ಒಂದೊಂದು ವಿಶಯಲ್ಲಿ ಶ್ರೇಷ್ಠ..
ಒಂದಕ್ಕೆ ಹಾಲು ಹೆಚ್ಚು, ಇನ್ನೊಂದಕ್ಕೆ ಹಾಲು ಮಂದ, ಮತ್ತೊಂದರದ್ದು ತುಪ್ಪ ಪರಿಮ್ಮಳ, ಮತ್ತೊಂದಕ್ಕೆ ಬತ್ತುದು ನಿದಾನ – ಇನ್ನೂ ಏನೇನೋ.
ಒಪ್ಪಣ್ಣಂಗೇ ಸರಿ ಅರಡಿಯ, ಪಾತಿ ಅತ್ತೆಯಷ್ಟು!
ಹಾಂಗಿಪ್ಪಗ, ಹಟ್ಟಿಂದ ಒಂದರ ಕೊಟ್ಟರೂ, ಹಟ್ಟಿಯ ಆ ಹೆಚ್ಚುಗಾರಿಕೆ ನಿಂಗು!
ಇದಕ್ಕೇ ಪಾತಿಅತ್ತಗೆ ಬೇಜಾರಾದ್ದು.
~
ಕಳುದವಾರ ಮಜಲುಕೆರೆ ಅಣ್ಣ ಬಂದಿತ್ತಿದ್ದವು, ಉದ್ದಲೆ.
ಅವೀಗ ವಾರ ಬಿಟ್ಟು ವಾರ, ಆಯಿತ್ಯವಾರ ಬತ್ತವು, ಪಾತಿಅತ್ತಗೆ ಕಮ್ಮಿ ಅಪ್ಪನ್ನಾರ..
ಜೋರಾದ್ದರ ನೋಡಿದ ಮತ್ತೆ ಪಾತಿಅತ್ತಗೆ ಶೇಕತೆಕ್ಕೊಂಬಲೆ ಹೇಳಿತ್ತಿದವು.
ಜೋರಿಪ್ಪಗ ಉದ್ದುತ್ತವಿಲ್ಲೆ ಅಡ, ಮದ್ದಿಲೇ ರಜಾ ಕಮ್ಮಿ ಆದ ಮೇಗೆ ಮತ್ತೆ ಉದ್ದುದಡ.
ರಜಾ ಕಮ್ಮಿ ಅಪ್ಪಲೆ ಸುರು ಮಾಡಿದ ಮತ್ತೆ ಒಂದರಿ ಹೇಳಿಕ್ಕಿದವಡ – ’ಪ್ರಾಯ ಆದ ಮೈ ನಿಂಗ್ಳದ್ದು, ಸ್ವಲ್ಪ ಸಮೆಯ ಬೇಕು ಸರಿ ಅಪ್ಪುಲೆ ’ ಹೇಳಿಗೊಂಡು!
ಮಜಲುಕೆರೆ ಅಣ್ಣ ನೋಡಿ ಹಾಂಗೆ ಹೇಳಿದಮೇಗೆ ಅಂತೂ ಪಾತಿಅತ್ತೆ ತುಂಬ ಬೇಜಾರುಮಾಡಿಗೊಂಡಿದವಡ.
ಅನಿವಾರ್ಯವಾಗಿ ಬೇಗ ಕೈಕ್ಕಾಲುಬೇನೆ ಸರಿ ಆಯೆಕ್ಕಾದ ಪರಿಸ್ತಿತಿ! 🙁
ತನಗೆ ಬೇಕಾಗಿ ಅಲ್ಲ, ಹಟ್ಟಿಗೆ ಬೇಕಾಗಿ.
ಬೇನೆ ಬೇಗ ಗುಣ ಆಗಲಿ ಹೇಳಿ ಪಾತಿ ಅತ್ತೆ ಹಟ್ಟಿ ಒಳಿವಲೆ ಬೇಕಾಗಿ ಕೇಳಿಗೊಳ್ತವಡ.
ಬೇಗ ಗುಣ ಆದರೆ ಆನೇ ಸಾಂಕುವೆ – ಹೇಳಿ ಮಗನ ಹತ್ತರೆ ಧೈರ್ಯಲ್ಲಿ ಹೇಳೆಕ್ಕಿದಾ!
ನವರಾತ್ರಿ ಇಡೀಕ ದುರ್ಗೆಯ ನೆಂಪಿಲೇ ಇರ್ತು, ದನಗಳ ಒಳಿಶಲೆ.
~
ಒಪ್ಪಣ್ಣನ ಹತ್ತರೆ ಮಾತಾಡುವಗ ಹೀಂಗಿರ್ತ ಯೋಚನೆಯೇ ಬಪ್ಪದು ಪಾತಿ ಅತ್ತಗೆ.
ಎಡಿಗಾದಷ್ಟು ಸಮಾದಾನ ಮಾಡುಸಿದೆ.
ಈಗ ಬೇಗ ಗುಣ ಆತು ಕಂಡ್ರೆ ಸರಿ, ಒಂದರಿಂಗೆ ಹಟ್ಟಿ ಒಳಿಗು. ಆದರೆ ಪಾತಿಅತ್ತೆಯ ಬೇಜಾರ ಅಲ್ಲಿಪ್ಪದಲ್ಲ,
ಆದರೆ ಪಾತಿಅತ್ತೆಯೇ ಅಳುದ ಮತ್ತೆ?
ಎಂತ ಮಾಡುದು; ಎಲ್ಲ ನಾವು ಪಡಕ್ಕೊಂಡು ಬರೆಕ್ಕು – ಹೇಳಿತ್ತು ಪಾತಿಅತ್ತೆ.
ಅದಕ್ಕೇ ಮಾಷ್ಟ್ರುಮಾವ ಮೊನ್ನೆ ಹೇಳಿದ್ದು – ಋಣಾನುಬಂಧ ರೂಪೇಣ ಪಶು-ಪತ್ನಿ-ಸುತ-ಆಲಯ – ಹೇಳಿಗೊಂಡು.
ಋಣಾನುಬಂಧದ ಪಟ್ಟಿಲಿ ಪಶುಗಳದ್ದು ಸುರೂವಿಂಗೆ ಇದ್ದು, ಬಾಕಿ ಎಲ್ಲವೂ ಮತ್ತೆಯೇ.
ಅದಪ್ಪು, ಹಟ್ಟಿ ಒಳಿಶೆಕ್ಕಾರೆ ಋಣಾನುಬಂಧ ಬೇಕಿದಾ.
ಅಂತೇ ಅಂತೇ ದನಗಳ ತಂದು ಕಟ್ಟಿರೆ ಹಟ್ಟಿ ಬೆಳೆಯ, ಅಂತೇ ದನಗಳ ಕೊಡ್ತೆ ಹೇಳಿರೆ ಹಟ್ಟಿ ಸಣ್ಣ ಆಗ, ಎಲ್ಲದಕ್ಕೂ ನಮ್ಮ ಯೋಗ ಹೇಂಗಿದ್ದೋ – ಹಾಂಗೇ ನಡವದಡ..
ಹೇಳಿದೆ ಪಾತಿಅತ್ತಗೆ ಸಮಾದಾನ ಮಾಡ್ಳೆ.
~
ಒಪ್ಪಣ್ಣ ಸಮಾದಾನ ಮಾಡಿರೆ ಪಾತಿಅತ್ತಗೆ ಸಮಾದಾನ ಅಕ್ಕೋ ಏನೋ!
ಆದರೆ ಆ ಹಟ್ಟಿ ಕಟ್ಟಿದ ಶಂಬಜ್ಜಂಗೆ? ಆ ಕಾಲಲ್ಲಿ ಅದರ ನೆಡೆಶಿಗೊಂಡು ಬಂದ ಕಾಂಬು ಅಜ್ಜಿಗೆ?
ಅಲ್ಲಿಯ ಒರೆಂಗೆ ಪಶು ಸಂಪತ್ತಿನ ಕೊಟ್ಟ ಅವರ ಕುಟುಂಬದ ತಲೆಗೊಕ್ಕೆ?
ಆರಿಂಗಾರು ಸಮಾದಾನ ಅಕ್ಕೋ?
ನಿತ್ಯಪೂಜಗೆ ಹಾಲುನೇವೇದ್ಯ ಮಾಡದ್ರೆ ಮನೆದೇವರ ಕೋಪ ಕಾಣದೋ?
ಚೆ, ಶಾಂಬಾವಂಗೆ ಇದೆಲ್ಲ ಯೇವಗ ಅರ್ತ ಆವುತ್ತೋ – ಹೇಳಿತ್ತು ಪಾತಿ ಅತ್ತೆ, ಹಟ್ಟಿಗೊಬ್ಬರಂದಾಗಿ ನೆಗೆನೆಗೆ ಮಾಡ್ತ ಗುಲಾಬಿಸೆಸಿಗಳ ನೋಡಿಗೊಂಡು.
ಎಲ್ಲ ಸರಿ ಅಕ್ಕು ಪಾತಿಅತ್ತೇ – ಹೇಳಿದ ಒಪ್ಪಣ್ಣ.
~
ತರವಾಡುಮನೆಯ ಭವ್ಯತೆ ಜೆರುದು ಬೀಳ್ತೋ – ಹೇಳಿ ಅನುಸಿ ಹೋತು ಒಂದರಿ!
ಪಾತಿಅತ್ತಗೆ ದುಃಖ ಬಂದೋಂಡೇ ಇತ್ತು…
ಒಪ್ಪಣ್ಣಂಗೂ.
ಒಂದೊಪ್ಪ: ಹಟ್ಟಿಸಣ್ಣಪ್ಪಲೆ ಮೂಲಕಾರಣ ಮನಸ್ಸು ಸಣ್ಣ ಆದ್ದದು – ಹೇಳಿದವು ಮಾಷ್ಟ್ರುಮಾವ°!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಎಲ್ಲವೂ ಬದಲಾಗ್ಯೊಂಡಿಪ್ಪ ಈ ಕಾಲಲ್ಲಿ ಹಟ್ಟಿ ಸಣ್ಣ ಆದ್ದದು ವಿಶೇಷವೇ ಅಲ್ಲ! ಮೂವತ್ತೋ, ನಲುವತ್ತೋ, ಐವತ್ತೋ ವರ್ಷ ಹಿಂದೆ ಇದ್ದಂತ ಮನಗೊ, ಹಟ್ಟಿಗೊ ಇಂದು ನಮ್ಮ ಊರಿಲ್ಲಿ ಹುಡುಕ್ಕಿದರೂ ನೋಡ್ಳೆ ಸಿಕ್ಕ. ನಮ್ಮ ಊರಿನ ಹಳ್ಳಿಯ ಮದಲಾಣ ಜೀವನವ ಇಂದ್ರಾಣ ಜೀವನಕ್ಕೆ ಹೋಲಿಸಿ, ಅದೇ ಒಳ್ಳೆದು ಅಥವಾ ಇದೇ ಒಳ್ಳೆದು ಹೇಳ್ಳೆ ಸಾಧ್ಯ ಇಲ್ಲೆ; ಅದು ಸರಿಯೂ ಅಲ್ಲ. “ಆ ಕಾಲವೊಂದಿತ್ತು, ಭವ್ಯವಾಗಿತ್ತು, ದಿವ್ಯವಾಗಿತ್ತು!” ಹೇಳಿ ಆನು ಹೇಳೆ! ಅಂದಿಂಗೆ ಅದೇ ಸುಖ, ಇಂದಿಗೆ ಇದೇ ಸುಖ!
ಒಪ್ಪಣ್ಣ ತರವಾಡು ಮನೆಯ ಹಟ್ಟಿ ಸಣ್ಣ ಅಪ್ಪ ಶುದ್ದಿ ಬರದ ಭಾಷೆಯ ಶೈಲಿ ಎಷ್ಟು ಕೊಶಿ ಆತು ಹೇಳಿರೆ, ಅದರ ಎರಡೆರಡು ಸರ್ತಿ ಓದಿ ಸಂತೋಷ ಪಟ್ಟೆ! ಒಪ್ಪಣ್ಣ ಶುದ್ದಿ ಹೇಳಿರೆ (ಅಲ್ಲ,ಕತೆ ಹೇಳಿರೆ?)ಕೇಳ್ಳೆ ಲಾಯಕ್ಕಾವುತ್ತು! ಬರಲಿ ಇನ್ನಷ್ಟು ಇಂತಾ ಶುದ್ದಿಗೊ ಒಪ್ಪಣ್ಣಂದ!
ellara mane vishaya tumba laikaidu……sharmappachchi helida hange…kelasakke janavu sikkadda.ee kalalli haalu karavadakkintha navu karavallinda tappade labha… belullu, hullu hindi, maddi heli ella lekkachara hakire tale halakku………allado? helida hange oppanno, majalakare annange mudlagina bhashe alla, paduvalagyana bhasheye matadudu,,,,,,,,
ಆನು ಹೇಳೆಕಾದ್ದರ ಎಲ್ಲ ಶ್ರೀಶಣ್ಣ ಹೇಳಿ ಆತು. ಒಪ್ಪಣ್ಣನ ಲೇಖನ ಎಂದಿನಂತೆಯೇ ಚೆಂದ ಆಯಿದು.
ಪೆರ್ಲದ ಆಶಕ್ಕ ಹೇಳಿದ ಹಾಂಗೆ, ವಿದ್ಯಕ್ಕನುದೆ, ಶಾಂಬಾವನುದೆ ಒಂದು ಸಣ್ಣ ಮಟ್ಟಿಂಗೆ ಟ್ರೇನಿಂಗು ತೆಕೊಂಡು ದನಗಳ ಸೇವೆ ಮಾಡಲಿ ಹೇಳಿ ಆಶಿಸುವೊ. ಅಷ್ಟಕ್ಕೂ ಎಡಿತ್ತಿಲ್ಲೆ ಹೇಳಿ ಆದರೆ (ವಿದ್ಯಕ್ಕ ಒಪ್ಪದ್ರೆ!)ಶಾಂಬಾವ ದನಗಳ ಖಂಡಿತಾ ಮಾಪಳಗವಕ್ಕೆ ಕೊಟ್ಟಿಕ್ಕದ್ದೆ ! ಹೇಳಿದ ಹಾಂಗೆ, ಪಾತಿ ಅತ್ತೆಯ ಕಾಲ ಬೇನೆ ಬೇಗ ಗುಣ ಆಗಲಿ.
ಬರದವು ಅದರ ಮಾಡಿ ತೋರ್ಸೆಕ್ಕು ಹೇಳಿರೆ ಕಾಲು ಚೊಟ್ಟೆ ಆದವ ಓಡುವವನ ವಿಮರ್ಶೆ ಮಾಡ್ಳಾಗ ಹೇಳಿದ ಹಾಂಗೆ.ಎಲ್ಲ ಕೆಲಸ ಎಲ್ಲೋರೂ ಮಾಡುದಲ್ಲ,ಕಂಡದರ ಹೇಳುದು ತಪ್ಪೂ ಅಲ್ಲ,ಎಲ್ಲೊರೂ ಸರಿಯೇ.ಇಂಥ ವೇದಿಕೆಲಿ ಚರ್ಚೆ ತಾರ್ಕಿಕ ಅಂತ್ಯಕ್ಕೆ ಬಾರ.ಆದರೂ ಸತ್ಯ ಸತ್ಯವೇ.
Lekhana layaka ayidu Oppanna.Danyavadango….
ಕೃಷಿಕರಾದ ಪ್ರತಿಯೋಬ್ಬಂದೆ ಆಲೋಚನೆ ಮಾಡಿಗೊಂಡು ಇಪ್ಪ ವಿಷಯ anno ……..ಕೊಟ್ಟಗೆ,ಕಾರ್ ಶೆಡ್ದ್ ಹೇಳಿ ಮಾರ್ಪಾಡು ಮಾಡ್ತಾ ಇದ್ದು ನಾವು. ದೊಡ್ಡ ಜಾತಿ ನಾಯಿ ಕೂಡ ಕಟ್ಟುತ್ತು ನೋಡಿದ್ದೆ ಆನು ….!!!!
ಹಟ್ಟಿ, ಕೆದೆ,ಕಿದೆ……….ಈ ಮೂರು ಶಬ್ದಂಗಳಲ್ಲಿ ಹವ್ಯಕ ಶಬ್ದ ಯಾವದು? ಮನೆಲಿ ಅಮ್ಮ ಯಾವಗಳು ಕೆದೆ ಹೇಳಿಯೇ ಹೇಳುದು(ಪುತ್ತೂರು ಸೀಮೆ)…….ಹಟ್ಟಿ …ಕನ್ನಡ, ಕೆದೆ…ಹವ್ಯಕ, ಕಿದೆ… ತುಳು ಹೇಳಿ ಎನ್ನ ಅಭಿಪ್ರಾಯ ಸರಿಯಾಗಿ ನವಗರಡಿಯ……
ಮನೆಲಿ “ಅಬ್ಬೆ” ಹೇಳ್ತ “ಕೆದೆ” ಯೆ ಹವ್ಯಕ ಅಲ್ಲದೋ ರಾಜಣ್ಣ…
ಇದನ್ನೂ ಕಾಲಕ್ಕೆ ತಕ್ಕ ಕೋಲ ಹೇಳಿ ಹೇಳೆಕಷ್ಟೇ.
ಒಪ್ಪಣ್ಣ…
ಲೇಖನ ಲಾಯ್ಕ ಆಯಿದು, ಚಿಂತನೆಗೆ ಹಚ್ಚುತ್ತು.
ಮನುಷ್ಯನ ಮನಸೇ ಸಣ್ಣ ಆದ ನಂತರ, ಹಟ್ಟಿಯೋ ಅಥವಾ ಬೇರೆ ಇತರ ವಿಚಾರಂಗೊ ಸಣ್ಣ ಆಗಿದ್ದೇ ಉಳಿಗೊ..
ಮೂರನೇ ತಲೆಮಾರಿನ ಜನಂಗಳೇ ಈಗ ಸಮಾಜಲ್ಲಿ ಇಪ್ಪಗ
ಪಾತಿ ಅತ್ತೆಯಂತವು ಸಿಕ್ಕುದು ತುಂಬಾ ಕಷ್ಟ…
ಪಾತಿ ಅತ್ತೆಯ ಹೊರತಾಗಿ ನೋಡಿದರೆ ಅದೇ ತಲೆಮಾರಿನ ಹಲವು ಜನಂಗೊ/ಹೆಮ್ಮಕ್ಕ ಕೂಡ ಸಣ್ಣ ಹಟ್ಟಿಗೇ ಜೈ ಹೇಳ್ತವು.
ಈಗಣ ನಮ್ಮ ಸಮಾಜದ ಪರಿಸ್ಥಿತಿಯೂ ಇದರಕ್ಕೆ ಪರೋಕ್ಷ ಕಾರಣ..ಹೇಳಿ ಅನುಸುತ್ತು ಎನಗೆ..
ಶುದ್ದಿ ಕೊಶಿಯಾತು…!
ನಮ್ಮೋರು ಈಗ ಊರಿಲಿ ಇಪ್ಪದು ಪ್ರಾಯಸ್ತ್ತರೆ ಅವಕ್ಕೆ ಕ್ರಿಶಿ ಮಾಡುಲೆ ಜನ ಸಿಕ್ಕದ್ದೆ ಸಿಕ್ಕಿದ ಕ್ರಯಕ್ಕೆ ಆಸ್ತ್ತಿ ಮಾರುವ ಕಾಲ…ನಾವು ಒಳುದರಲ್ಲದ ಬಾಕಿದ್ದದು.ದನ ಸಾಂಕುಲೆ ಕುಟುಂಬ ಸಾಂಕಿದ್ದಕ್ಕಿಂತ ಹೆಚ್ಹು ಖರ್ಚ್ಹು ಆಉತ್ತು.ಈಗಾಣ ಕಲಬೆರಕೆ ಆಹಾರಂದಾಗಿ ದನಗೊಕ್ಕೆ ಸರಿಯಾಗಿ ತನೆ ಕೂಡ ಆಉತ್ತಿಲ್ಲೆ.ಮಣ್ಣಿನ ಪಲವತ್ತತೆ ಹೆಚ್ಹುಸುಲೆ ಹಟ್ಟಿಗೊಬ್ಬರದಸ್ಟ್ಟುಒಳ್ಳೆದು ಬೇರೊಂದಿಲ್ಲೆ ಆದರೆ ಪೂರೆಇಸೆಕ್ಕನ್ನೆ???ನಾವು ಇಂದು ವಿಶಯುಕ್ತವಾದ್ದನ್ನೆ ತಿಂಬದು,ಕುಡಿವದು.ಹಾಂಗಿಪ್ಪದನ್ನೆ ಬೆಳೆಸಿದರೆ ಬದುಕ್ಕುದು ಹೇಳುತ್ತ ಕಲ್ಪ್ಪನೆ ಬಯಿಂದು.ಹಾಂಗಾಗಿ ಅಂತೂ ಲಾಭ ಬರೆಕ್ಕು ಹೇಳುವಗ ದನ ಕರ್ಚಿನ ಬಾಬು ಕಮ್ಮಿ ಕರ್ಚಿಲಿ ರಾಸಾಯನಿಕ ಹಾಕಿ ಬೆಳೆಸುತ್ತವು….ಆವಾಗ ಹಟ್ಟಿ ಸಣ್ಣಾಆಗದ್ದೆ ಇರುತ್ತ?????
ಹಾಲು ಕರವದು ಹೇಳಿರೆ ಈಗಾಣ ಮಿಶ್ರ ತಳಿ ದನಗಳ ಎರಡು ಹೊತ್ತು ಕರದರೆ ಸಾಕಾವುತಿಲ್ಲೆ, ಮೂರೊತ್ತೂ ಕರೇಕಾವುತ್ತು.
ದೇವರ ಪೂಜೆಯೋ, ಮನುಷ್ಯರು ಉಂಬದೋ ಹೊತ್ತು ತಪ್ಪಿರೆ ಎಂತಿಲ್ಲೆ ಆದರೆ ದನಗಳ ಕರವಗ ಅಜಾಗ್ರತೆ ಮಾಡಿರೆ ಮರದಿನ ಕೆಚ್ಚಲು ಬೀಗ್ಗು.
ಲೀಟರುಗಟ್ಟಲೆ ಕರದ ಹಾಲಿನ ಹಳತ್ತಿಂಗೆ ಮಡುಗುಲೆಡಿಯನ್ನೇ?
ಹಾಲಿನ ವಿಲೇವಾರಿ ಮಾಡದ್ದರೆ ನಷ್ಟ ಸಹಿಸುಲೆಡಿಯ.
ಬೇರೆ ಆದಾಯ ಇಲ್ಲದ್ದರೆ ಬತ್ತು ದನಗಳ ಸಾಂಕುಲೆ ಈಗಾಣ ಹಿಂಡಿ, ಬೆಳುಲು ಅದಕ್ಕಿಂತ್ಲೂ ಮುಕ್ಯವಾಗಿ ಆಳುಗಳ ಕೂಲಿ ಕೊಟ್ಟು ಸಾಂಕುದಂತೂ ಭಾರೀ ಕಷ್ಟ.
ಮೊದಲು ಗೆದ್ದೆ ಹೂಡುಲೆ ಎತ್ತುಗಳ ಸಾಂಕುಗು, ಈಗ ಈ ಮೇಲಾಣ ವಿಚಾರಂಗಳಿಂದ ಅದನ್ನೂ ಸಾಂಕುತ್ತವು ಇಲ್ಲೆ. ಗೆದ್ದೆ ಹೂಡುಲೆ ಟಿಲ್ಲರಿಲ್ಲಿ ಅಲ್ಲದ್ದರೆ ಟ್ರಾಕುಟ್ಟರಿಲ್ಲಿ ಎಡಿಗು ಆದರೆ ಹಾಲು ತಯಾರು ಮಾಡುವ ಯಂತ್ರ ಕಂಡು ಹಿಡಿವ ಬುದ್ಧಿಶಾಲಿಗೊ ಬೈಲಿಲ್ಲಿ ಆರಾರು ಇದ್ದವೋ?
ಈಗ ಕೆಲವು ಜಾತಿಗೆಟ್ಟವು ದನದ ಮಾಂಸವೂ ತಿಂತವಡ, ಹಾಂಗಿಪ್ಪವಕ್ಕೆ ದನದ ಮಹತ್ವವ ಒಳಿಶುದು ಹೇಂಗೆ? ಈಗ ತೆಂಕ್ಲಾಗಿ ಕೇರಳಲ್ಲಂತೂ ಗೌರ್ಮೆಂಟಿನೋರು ಗೆಂಡು ಕಂಜಿಯ ಲಾಭದಾಯಕವಾಗಿ (!!) ಸಾಂಕುದು ಹೇಂಗೆ ಹೇಳಿ ತರಬೇತಿ ಸುರು ಮಾಡಿದ್ದವು. ಹಾಂಗಿಪ್ಪಗ ಸಮಾಜ ಹೋಪ ಒಯ್ಲಿಂಗೆ ನಾವು ಬ್ರಾಮ್ಮರು ಕೊಚ್ಚಿ ಹೋಗದ್ದೇ ಒಳಿವದು ಹೇಂಗೆ?
ಕೈಕಾಲು ಗಟ್ಟಿ ಇಪ್ಪೋರು, ಎರಡು ದನ, ಎಪ್ಪತ್ತು ಸೆಂಟ್ಸು ಕಾಡು (ಸೊಪ್ಪಿಂಗೆ), ಇಪ್ಪತ್ತು ಸೆಂಟ್ಸು ಹುಲ್ಲು ಬೆಳವಲೆ, ನಂದಿನಿ (ಅಲ್ಲದ್ದರೆ ಮಿಲ್ಮಾ) ಕೊಡ್ತ ಸಬ್ಸಿಡಿ ಎಲ್ಲಾ ಪಡದು, ಮಕ್ಕೊಗೆ ಒಳ್ಳೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಬೇಕಾಷ್ಟು ತಿಂದು ಮಿಕ್ಕಿದ್ದರ ಮಾರಿ ಲಾಭ ಪಡಕ್ಕೊಂಬಲೆ ಒಂದು ಕೈ ನೋಡ್ತೀರೋ?
ಇದರ ಕೊಜಂಟಿ ಅದಕ್ಕೆ – ಅದರ ಕೊಜಂಟಿ ಇದಕ್ಕೆ – ಹಾಲು ಜೇನ ನಮಗೆ!
ಬೈಲಿಲ್ಲಿ ಇಪ್ಪವು ಎಲ್ಲಾ ಮಾತಾಡುಲೆ ಉಷಾರು ಇದ್ದವು, ಆದರೆ ಅವರಲ್ಲಿ ಎಲ್ಲೋರೂ ಉಂಬೋರಾದರೂ, ಹಾಲು ಕುಡಿವೋರಾದರೂ ಎಷ್ಟು ಜೆನ ನಿಜವಾಗಿ ಹಟ್ಟಿಗೆ ಇಳಿವವು ಇದ್ದವು? ಒಪ್ಪಣ್ಣನನ್ನೂ ಸೇರುಸಿ?
ಎಲ್ಲಾ ಕಡೆಯು ಹಟ್ಟಿ ಸಣ್ಣ ಆವ್ತಾ ಇದ್ದು.
ದನಗಳ ಹಟ್ಟಿ ಹೇಳಿರೆ ನಮ್ಮ ಮನೆಯ ಒಂದು ಭಾಗದ ಹಾಂಗೆ. ಒಂದು ನೋಟ ಅಲ್ಲಿಗೆ ಇರೆಕ್ಕೇ, ದನಗಳ ಸಾಂಕೆಕ್ಕು ಹೇಳಿ ಕೃಷಿಕರಿಂಗೆ ಇಲ್ಲದ್ದೆ ಇರ.ಆದರೆ ಈಗಾಣ ಪರಿಸ್ಥಿತಿ ಕೂಡಾ ಹಾಂಗೇ ಇದ್ದು. ಮನೆ ಮಕ್ಕೊ ಒಬ್ಬನೋ ಇಬ್ರೋ ಪೇಟೆಲಿ ಇರ್ತವು. ಪ್ರಾಯ ಆದವು ಮಾಡ್ಲೆ ಎಡಿಯದ್ದೆ ಪಾತಿ ಆತ್ತೆ ಹಾಂಗೆ ಅಸಬಡಿತ್ತವು. ಅವಕ್ಕೆ ನೋಡ್ಲೆ ಸಂಕಟ ಆವುತ್ತು, ಮಾಡ್ಲೆ ಎಡಿತ್ತಿಲ್ಲೆ, ಮಾಡ್ಸಲೆ ಜೆನ ಸಿಕ್ಕುತ್ತವಿಲ್ಲೆ. ಸಮಯಕ್ಕೆ ಸರಿಯಾಗಿ ಅವಕ್ಕೆ ಆಹಾರ ಒದಗುಸೆಕ್ಕು, ಕಂಜಿ ಹಾಕುವ ಸಮೆಲಿ, ಹಾಕಿದ ನಂತ್ರ ಜಾಗ್ರತೆಲಿ ನೋಡಿಗೊಳೆಕ್ಕು,
ಹಟ್ಟಿ ಬಿಟ್ಟು ಹೆರಾಂಗೆ ಮೇವಲೆ ಕಳುಸುವ ಹಾಂಗೆ ಇಲ್ಲೆ. ಹಿಂಡಿ, ಬೆಳುಲ್ಲು ರೇಟ್ ಕೇಳೆಕ್ಕೂ ಹೇಳಿ ಇಲ್ಲೆ
ಅಲ್ಲದ್ರೆ ಕೃಷಿಗೆ ಹಟ್ಟಿಗೊಬ್ಬರದಷ್ಟು ಒಳ್ಳೆ ಈಟು ಸಿಕ್ಕುಗೋ?. ದನ ಸಾಂಕಿರೆ ಹಾಲು ಮಾತ್ರ ಅಲ್ಲನ್ನೇ ಸಿಕ್ಕುವದು,
ಒಂದೊಪ್ಪ ಲಾಯಿಕ ಆಯಿದು.
ಒಪ್ಪಣ್ಣ,
ಲೇಖನಲ್ಲಿ ಹಟ್ಟಿ ಸಣ್ಣ ಮಾಡ್ತ ವಿಶಯದೊಟ್ಟಿಂಗೆ ಹಲವಾರು ಸೂಕ್ಷ್ಮ ವಿಚಾರಂಗಳನ್ನೂ ತಿಳಿಸಿದ್ದೆ. ಸಂತೋಷ ಆವುತ್ತು -ಹಟ್ಟಿ ಸಣ್ಣ ಅಪ್ಪದಕ್ಕೆ ಆಲ್ಲ, ವಿಶಯ ಪ್ರತಿಪಾದಿಸಿದ ರೀತಿಗೆ
*****
ಕೆಲವು ಹಳೇ ಶಬ್ದಂಗಳ ಪರಿಚಯ ಮಾಡಿದೆ:
ಪ್ರಾಕಿಂದಲೇ!
ಅಂಬಗಂಬಗ ಮೀಶೇಕು ದನಗಳ, ಅಲ್ಲದ್ದರೆ “ಚೋರು” ಹಿಡಿತ್ತು!
*****
ಎರಡು ಒಳ್ಳೆ ಗಾದೆ ಮಾತುಗೊ ಸಿಕ್ಕಿತ್ತು:
ಹಟ್ಟಿಂದ ಲಕ್ಷ್ಮೀದೇವರು ಮನಗೇ ಬಪ್ಪದು ವಿನಃ ಮನೆಂದ ಲಕ್ಷ್ಮಿ ಹಟ್ಟಿಗೆ ಹೋವುತ್ತಿಲ್ಲೆಡ, ಹಳೇ ಹಳ್ಳಿಲಿ ಒಂದು ಗಾದೆ ಇದ್ದು!
ಋಣಾನುಬಂಧ ರೂಪೇಣ ಪಶು-ಪತ್ನಿ-ಸುತ-ಆಲಯ – ಹೇಳಿಗೊಂಡು. ಇಲ್ಲಿ ಪಶುವಿಂಗೆ ಪ್ರಥಮ ಆದ್ಯತೆ-ಕೇಳಿ ಸಂತೋಷ ಆತು.
*****
ಒಳ್ಳೆ ಮಾಹಿತಿ ಸಿಕ್ಕಿತ್ತು:
ಜೋರಿಪ್ಪಗ ಉದ್ದುತ್ತವಿಲ್ಲೆ ಅಡ, ಮದ್ದಿಲೇ ರಜಾ ಕಮ್ಮಿ ಆದ ಮೇಗೆ ಮತ್ತೆ ಉದ್ದುದಡ.
ಡಾಗುಟ್ರು ಹೇಳಿದಾಂಗೆ ಕೇಳದ್ರೆ ಡಾಗುಟ್ರಂಗೆ ಏನೂ ನಷ್ಟ ಇಲ್ಲೆ, ನವಗೇ ಇಪ್ಪದು.
ಕೆಂಪಿಯನ್ನೋ? ಕಾಳಿಯನ್ನೋ? ನಂದಿನಿಯನ್ನೋ? ಚುಬ್ಬಿಯನ್ನೋ? – ಚೆ, ಒಂದೊಂದರ ತಳಿ ಒಂದೊಂದು ವಿಶಯಲ್ಲಿ ಶ್ರೇಷ್ಠ..
ಒಂದಕ್ಕೆ ಹಾಲು ಹೆಚ್ಚು, ಇನ್ನೊಂದಕ್ಕೆ ಹಾಲು ಮಂದ, ಮತ್ತೊಂದರದ್ದು ತುಪ್ಪ ಪರಿಮ್ಮಳ, ಮತ್ತೊಂದಕ್ಕೆ ಬತ್ತುದು ನಿದಾನ – ಇನ್ನೂ ಏನೇನೋ.
ಒಂದೊಂದು ದನಗಳ ವಿಶೇಷತೆಯ ಹೇಳಿದ್ದು ಭಾರೀ ಲಾಯಿಕ ಆಯಿದು.
ವೃಷಭಾಯದ ದೊಡ್ಡ ಹಟ್ಟಿ!
*****
ಒಳ್ಳೆ ಉಪಮೆಗೊ ಸಿಕ್ಕಿತ್ತು:
ಒಂದರಿ ಕೂದು ಎದ್ದರೆ ಅವಲಕ್ಕಿ ಬೆರುಸಿದ ಹಾಂಗೆ ಆವುತ್ತಡ,ಕಾಲಮೊಳಪ್ಪಿನ ಗೆಂಟಿಲಿ!
ಗೆಂಟುಗೆಂಟುಗೊ ಎಲ್ಲ ಬೀಗಿ ಕೊಟ್ಟಿಗೆಯಷ್ಟಕೆ ಆಗಿ…
ಇಷ್ಟು ಸಮೆಯ ಪಾದರಸದ ಹಾಂಗೆ ಓಡಿಓಡಿ ಕೆಲಸಮಾಡಿದ ಹೆಮ್ಮಕ್ಕೊ..
*****
ಪಾತಿ ಅತೆಗೆ ಹಟ್ಟಿ ಮತ್ತೆ ದನಗಳ ಬಗ್ಗೆ ಇಪ್ಪ ಒಲವು, ಆತ್ಮೀಯತೆ, ಬಾಂಧವ್ಯ ಕೆಲವು ವಾಕ್ಯಂಗಳಲ್ಲಿ ಎಷ್ಟು ಲಾಯಿಕ ಎದ್ದು ಕಾಣುತ್ತು:
ಅಂತೇ ದನಗಳ ಹೀಂಗೆ ಕಟ್ಟಿಹಾಕಿ ಹಿಂಸೆ ಕೊಡುದರ ಕಾಣ್ತ ಪಾತಿಅತ್ತಗೆ ಉಂಬಲೂ ಮೆಚ್ಚುತ್ತಿಲ್ಲೆ ಒಂದೊಂದರಿ!
ಬೇನೆ ಬೇಗ ಗುಣ ಆಗಲಿ ಹೇಳಿ ಪಾತಿ ಅತ್ತೆ ಹಟ್ಟಿ ಒಳಿವಲೆ ಬೇಕಾಗಿ ಕೇಳಿಗೊಳ್ತವಡ.
ಪಾತಿಅತ್ತಗೆ ಮನಸ್ಸಿಂಗೆ ಮೆಚ್ಚುತ್ತಿಲ್ಲೆ ಯೇವದುದೇ.
*****
ಕಡವಕಲ್ಲಿಲಿ ಸಾಲಿಗ ಕೂಯಿದು!-ಮನೆಯ ಅಡಿಗೆ ಕೋಣೆ ಪರಿಸ್ಥಿತಿ ಹೇಂಗಿದ್ದು ಹೇಳಲೆ ಇದು ಒಂದೇ ಸಾಲು ಸಾಕನ್ನೆ
*****
ಕೊಶೀ ಅದ್ದ ಒಪ್ಪಂಗೊ:
ದನಗೊ ಕರವಲೆ ಇಪ್ಪದು ಸೌಭಾಗ್ಯದ ಸಂಕೇತವೇ, ಆದರೆ ಎಡಿಯದ್ರೆ ಎಂತ ಮಾಡುದು!
ಹಟ್ಟಿಸಣ್ಣಪ್ಪಲೆ ಮೂಲಕಾರಣ ಮನಸ್ಸು ಸಣ್ಣ ಆದ್ದದು – ಹೇಳಿದವು ಮಾಷ್ಟ್ರುಮಾವ°!
ಆದರೆ ಮನಸ್ಸಿಂಗೇ ಊನ ಬಂದರೆ ಎಂತರ ಮಾಡುತ್ಸು?!
*****
ಒಪ್ಪಣ್ಣ ಭಾರೀ ಲಾಯ್ಕಾಯ್ದು!
{ವಿದ್ಯಕ್ಕಂಗೆ ಅಷ್ಟೆಲ್ಲ ಅರಡಿಯ, ಅದಲ್ಲದ್ದೆ ಶುದ್ದವೂ ಸಾಲ!}
😀
ತನು ಶುದ್ಧವೋ! ಮನ ಶುದ್ಧವೋ!!
{ವಿದ್ಯಕ್ಕಂಗೆ ಸುಲಬ ಮಾಡೆಕ್ಕು ಹೇಳ್ತದು ಶಾಂಬಾವನ ಚಿಂತನೆ.}:D
ನಾವು ಕೆಲವೊಂದು ಸರ್ತಿ ಭಾರೀ ತ್ಯಾಗಿಗ ಅಪ್ಪದು ಇದಾ!!
Chinthisekkada vishya.
Yenthara madudu. Lekhana odi mugushiyappga ondari manssiliye yella nentra hattiya nempu madigonde.
Yentha madudu. Kaluda 10 varshalli namma samjalli bhayankara badalavane aydu. 3-4 dinago madikkondu itthavu eega 1 saku heli theermana madthavu. Kelavu jana bedavae beda halu krayakke thappo heli kooydavu.
Nammalli kaleda ondu 10-15 varshanda maneli ippave kammi aagi hoydu. Praya 50-60 aada mele maneli aarude naduprayadavu illadre dangala nodigombadu aaru? Idarella nodidare manssali prashne mathra moodtha iddu. Utthra yenthra heli gonthavutthille 🙁
ಮನಸ್ಸು ಮುಟ್ಟುವ ಲೇಖನ,ಯೇವಗಾಣ ಹಾ೦ಗೆಯೇ.ಒಪ್ಪಣ್ಣನ ಲೇಖನ ಓದೋಗ ಮನಸ್ಸು ನಮ್ಮ ಬಾಲ್ಯವ ನೆಂಪು ಮಾಡುತ್ತು. ಒಂದು ತಲೆಮಾರಿನ ಹಿಂದಾಣ ಜೀವನ ಕಣ್ಣ ಮುಂದೆ ಬತ್ತು , ಒಟ್ಟಿ೦ಗೆ ವರ್ತಮಾನಕಾಲದ ಬದಲಾವಣೆಗಳುದೆ.
ಪದಪ್ರಯೋಗ೦ಗ ಅದ್ಭುತ .ಉದಾಹರಣೆಗೆ – ಕೈಸಾಲೆ ಶಬ್ದ ಓದಿ ಎದ್ದು ನಿಂದೆ ಒಂದರಿ,ಮರದೇ ಹೋಗಿತ್ತು ಅಜ್ಜಿಯ ಬಾಯಿಲಿ ಯೇವಗಳೂ ಇದ್ದ ಶಬ್ದ.ಉಪಯೋಗ ಇಲ್ಲದ್ದರೆ ಕಬ್ಬಿಣ ಕುಂಬು ಆದ ಹಾಂಗೆ ತಲೆಯೂ ಬಡ್ದು ಆವುತ್ತಾ ಇದ್ದನ್ನೇ.
ಜೀವನದ ದ್ವ೦ದ್ವಂಗಳ ನೆಡುಕೆ ನಾವು ಕಳೆದು ಹೊವುತ್ತಾ ಇದ್ದೋ? ಒಪ್ಪಣ್ಣಾ, ಮುಂದುವರಿಯಲಿ ಹೀಂಗೇ ಕೃಷಿ,ಹೆಚ್ಚಲಿ ಬೈಲಿನ ಕೊಶಿ.
ಅಪ್ಪು ಒಪ್ಪಣ್ಣ ಹಟ್ಟಿ ಸಣ್ಣ ಅಪ್ಪಲೆ ಕಾರಣ ಮನಸ್ಸುಸಣ್ಣ ಆದ್ದೆ.ಎಲ್ಲೋರಿಂಗೂ ಕಸ್ಟ್ಟ ಬಾರದ್ದೆ ಸುಖಲ್ಲಿ ಇರೆಕ್ಕು ಹೇಳಿಯೆ ಇಪ್ಪದು..!!ಇದಂತು ಎಲ್ಲೋರ ಮನೆಯ ಕಥೆ..ನೀನಂತೂ ತುಂಬಾ ಚೆಂದಕ್ಕೆ ಬರದ್ದೆ.ಎನಗಂತೂ ಈ ಸುದ್ದಿ ಎಡೇಲಿ ಆನುದೆ ಇದ್ದೆಯಾ ಹೇಳಿ.. ಕಾಣುತ್ತು..!!ಆನಂತೂ ಕೆದೆ ಸಣ್ಣ ಮಾಡುವ ಯೋಚನೆಲಿ ಇಪ್ಪದು ಸತ್ಯ…
ಮಾವ..
{ಇದಂತು ಎಲ್ಲೋರ ಮನೆಯ ಕಥೆ..} ಇದು ಸತ್ಯವಾದ ಮಾತು..
ಈ ಕತೆಲಿ ನಿಂಗೊ ಒಬ್ಬನೇ ಇಪ್ಪದಲ್ಲ .. ಸೂಕ್ಹ್ಮವಾಗಿ ನೋಡ್ಲೆ ಹೆರ್ತಾರೆ ಈ ರೀತಿ ಅಭಿಪ್ರಯದವು ಈ ಬೈಲಿಲಿ ಸುಮಾರು ಜನನ್ಗೋ ಸಿಕ್ಕುಗು.. ಆದರೆ ಎಂತ ಮಾಡುದು ಪರಿಸ್ಥಿತಿ ಹಾಂಗೆ ಆಯಿದು… ಈ ರೀತಿ ಆಗದ್ದ ಹಾಂಗೆ ಹೇಂಗೆ ಮಾಡಲೇ ಅಕ್ಕು ಹೇಳುದರ ಅವುಅವುವೆ ಆಲೋಚನೆ ಮದೆಕ್ಕು ಅಷ್ಟೇ ..
ಹಟ್ಟಿ ಸಣ್ಣ ಮಾಡದ್ದೆ ದೊಡ್ಡ ಆರದ್ರು (ಈಗನ ಸದ್ಯದ ಪರಿಸಿತ್ಹಿಥಿಲಿ) ಮಾಡಿದೋರು ಇದ್ದರೆ ಅಂಥವರ ಖಂಡಿತ ಮೆಚಕ್ಕು…