Oppanna.com

ಕೋಟಿರುದ್ರ ಗೋಕರ್ಣಲ್ಲಿ.. ಹಬ್ಬದ ಗೌಜಿ ವೈದಿಕರಲ್ಲಿ…!

ಬರದೋರು :   ಒಪ್ಪಣ್ಣ    on   08/01/2010    11 ಒಪ್ಪಂಗೊ

ವೈದಿಕರೆಲ್ಲರೂ ಮತ್ತೊಂದರಿ ಒಟ್ಟಾಯಿದವು..!
ಈ ಸರ್ತಿ ನಭೂತೋ – ಹೇಳ್ತ ನಮುನೆಯ ಜೀವಮಾನದ ಕಾರ್ಯಕ್ಕೆ ಬೇಕಾಗಿ.
ನಮ್ಮ ಗೋಕರ್ಣಕ್ಕೆ ಬೇಕಾಗಿ. ಗೋಕರ್ಣಮಂಡಲದ ಶಾಪ ವಿಮೋಚನೆಗೆ ಬೇಕಾಗಿ.
ಎಷ್ಟೋ ಒರಿಷಂದ ಕೊಳಕ್ಕು ನೀರು ಕುಡ್ಕೊಂಡು ಇದ್ದಿದ್ದ ಗೋಕರ್ಣದ ಆತ್ಮಲಿಂಗವ ಪರಿಪೂರ್ಣವಾಗಿ ಸಂತೃಪ್ತಿಮಾಡ್ಳೆ ನಮ್ಮ ಗುರುಗೊ ಹಾಕಿದ ಮೊದಲ ಹೆಜ್ಜೆಯ ಸಫಲಗೊಳಿಸಲೆ ಬೇಕಾಗಿ.
ಲೋಕ ಕಲ್ಯಾಣಕ್ಕೆ ಬೇಕಾಗಿ..!
ನವಗೆ ಬೇಕಾಗಿ.

ಅದೆಂತರ ಅಂಬಗ? ನೋಡಿಕ್ಕುವ°…

ಗೋಕರ್ಣದ ಶುದ್ದಿಯ ರಜಾ ಮಾತಾಡುವಗ ಪೂರ್ವಾಪರ ತಿಳ್ಕೊಂಬದು ಒಳ್ಳೆದಲ್ಲದೋ?
ಹಾಂಗಾಗಿ ಹಿಂದಂತಾಗಿ ಹೋಗಿ ನೋಡುವೊ, ರಜಾ. ಆಗದೋ?

ಪುರಾಣ:
ಗೋಕರ್ಣ ಹೇಳಿರೆ ’ದನದ ಕೆಮಿ’ ಹೇಳಿ ಅರ್ತ.
ಎಂತಕೆ ಆ ಹೆಸರು ಬಂತು?
ರಾಮಾಯಣ ಕಾಲಲ್ಲಿ ರಾವಣ ಶಿವನ ಒಲುಸಿ ಆತ್ಮಲಿಂಗವ ಸಂಪಾಲುಸಿಗೊಂಡ.
’ಲಂಕೆಯ ಒರೆಗುದೇ ಈ ಲಿಂಗವ ಕೆಳಮಡುಗುಲಾಗ, ಮಡಗಿರೆ ಮತ್ತೆ ಪೊರ್ಪುಲೆಡಿಯ’ ಹೇಳ್ತ ಶರ್ತ ಹಾಕಿ ಶಿವ° ಅನುಗ್ರಹಿಸಿದನಡ.
ಉತ್ತರದ ಕೈಲಾಸಂದ ದಕ್ಷಿಣದ ಲಂಕೆಗೆ ನೆಡಕ್ಕೋಂಡು ಹೋಪದಿದಾ, ’ಅಶೋಕೆ’ಯ ಹತ್ರೆ ಎತ್ತುವಗ (ಗೋಕರ್ಣದ ಹತ್ತರೆ ಅಶೋಕೆ ಹೇಳಿ ಒಂದು ಜಾಗೆ ಇದ್ದು) ಸಂಧ್ಯಾ ಕಾಲ ಉಂಟಾತು.
ಅವ ಎಂತ ರಾಕ್ಷಸನೇ ಆದರೂ, ನಿತ್ಯಾನುಷ್ಠಾನ ಸರಿಯಾಗಿ ಮಾಡುಗು – ಬ್ರಾಹ್ಮಣ ಋಷಿಯ ಮಗ ಅಲ್ದೋ? ಹಾಂಗಾಗಿ! ಸಮುದ್ರ ತೀರಲ್ಲಿ ಅರ್ಘ್ಯಕೊಟ್ಟು ಸಂಧ್ಯಾವಂದನೆ ಮಾಡಿಕ್ಕುವೊ° ಹೇಳಿ ಕಂಡತ್ತು ರಾವಣಂಗೆ.
ಕೈಲಿಪ್ಪ ಲಿಂಗವ ಮಡಗಲೆ ಗೊಂತಿಲ್ಲೆ – ಶಿವನ ಶರ್ತವೇ ಅದು ಅಲ್ದೋ?!

ಓ ಅಲ್ಲೆ ಅತ್ಲಾಗಿ ಒಬ್ಬ ಮಾಣಿ ಹೊಯಿಗೆಲಿ ಆಡಿಗೊಂಡು ಇತ್ತಿದ್ದನಾಡ! “ಏ ಮಾಣಿ, ಒಂದು ಗಳಿಗೆ ಇದರ ಹಿಡ್ಕಬ್ಬೋ! ಒಂದು ತೂಷ್ಣಿಲಿ ಅರ್ಘ್ಯ ಬಿಟ್ಟು ಬತ್ತೆ. ಕೆಳ ಮಡಗೆಡ ಮಿನಿಯಾ°..!” ಹೇಳಿದನಡ.
’ಮೂರು ಸರ್ತಿ ದಿನಿಗೆಳ್ತೆ ಮಾವ! ಬಾರದ್ರೆ ಕೆಳ ಮಡಗಿಕ್ಕಿ ಹೋಪೆ’ ಹೇಳಿದನಡ ಆ ಮಾಣಿ. ’ಅಕ್ಕು ಕುಂಞಿ…’ ಹೇಳಿಕ್ಕಿ ರಾವಣ ಸಮುದ್ರಲ್ಲಿ ರೆಜಾ ಮುಂದೆ ಹೋದ°.
ಪಡುಕಡಲಿನ ಪಡುಹೊಡೆಲಿ ಮುಳುಗುತ್ತ ಕೆಂಪು ಸೂರ್ಯನ ಎದುರು ಮೋರೆ ಮಾಡಿ, ಎರಡೂ ಕೈ ಜೋಡುಸಿ, ಸಮುದ್ರದ ನೀರು ತೆಗದು ಹಿಡ್ಕೊಂಡು “ಓಂ ಭೂರ್ಭುವಸ್ಸುವಃ., ತತ್ಸವಿತುರ್ವರೇಣ್ಯಂ…..” ಹೇಳಿ ಅರ್ಘ್ಯ ಕೊಟ್ಟೋಂಡು ಇಪ್ಪಾಗ, …
ಆತ್ಮಲಿಂಗ ಹಿಡ್ಕೊಂಡ ಮಾಣಿಗೆ ಅಂಬೆರ್ಪು ಜೋರಾತು.! ಹೊಯಿಗೆಲಿ ಆಡ್ತ ಮಾಣಿಗೆ ’ಇದರ ಹಿಡ್ಕೊಂಡು ಅಂತೇ ನಿಲ್ಲು’ ಹೇಳಿರೆ ಮನಸ್ಸು ಕೇಳುಗೋ?! ನಿಂಗಳೇ ಹೇಳಿ..!
ಮಂತ್ರ ಅರ್ದಲ್ಲಿದ್ದು ಹೇಳಿಯೂ ನೋಡದ್ದೆ ರಾವಣನ ದಿನಿಗೆಳಿದ – ’ರಾವಣಾ, ರಾವಣಾ, ರಾವಣಾ’ ಹೇಳಿ ಒಂದೇ ಉಸಿರಿಲಿ ಮೂರು ಸರ್ತಿ – ಈ ಅಂಬೆರ್ಪು ಮಾಣಿ!!
ಅರ್ಘ್ಯ ಬಿಟ್ಟದೂ ಅಲ್ಲ, ಓಡಿಗೊಂಡು ಬಂದದೂ ಅಲ್ಲ – ಹೇಳ್ತ ಅರ್ತದ ಆಚಕರೆ ಮಾಣಿಯ ಗಾದೆಯ ಹಾಂಗಾತು ರಾವಣನ ಪರಿಸ್ಥಿತಿ. ಅಂತೂ ಓಡಿಓಡಿ ಓ ಅಲ್ಲಿಂದ ನೋಡಿಗೊಂಡು ಬಪ್ಪ ಮೊದಲೇ ಈ ಮಾಣಿಗೆ ಅನಾಹುತ(!) ಮಾಡಿ ಆಯಿದು.!
ಆತ್ಮಲಿಂಗ ನೆಲಕ್ಕಲ್ಲಿ.!!
ಮಡಗಿದ ಕೂಡ್ಳೇ ಅದು ಪ್ರತಿಷ್ಠೆ ಆದ ಹಾಂಗೇ. ಮತ್ತೆ ಹಂದ! ಲಂಕೆಲಿ ಸ್ಥಾಪನೆ ಮಾಡ್ತ ಆಲೋಚನೆ ಇದ್ದ ಶಿವಭಕ್ತ ರಾವಣ ಇದರ ಗಡಿಬಿಡಿಲಿ ತೆಗವಲೆ ಹೆರಟನಡ, ಆ ರಭಸಲ್ಲಿ ಆತ್ಮಲಿಂಗವೇ ಪೀಂಟಿ ದನದ ಕೆಮಿಯ(ಗೋ-ಕರ್ಣ) ಹಾಂಗೆ ಆತಷ್ಟೆ ಹೊರತು, ಮೇಗೆ ಬಯಿಂದೇ ಇಲ್ಲೆ. ಅಷ್ಟು ಗಟ್ಟಿ ಆಗಿ ಬೇರೂರಿತ್ತು. ಇನ್ನೂ ಪೀಂಟುಸಿದ್ದರೆ ಬಂಗಾರಪ್ಪನ ಮೋರೆಯ ನಮುನೆ ಆವುತಿತೋ ಏನೋ! ತೀರಾ ಆ ರೂಪ ಬಪ್ಪದು ಬೇಡ ಹೇಳಿ ಅಲ್ಲಿಗೇ ಬಿಟ್ಟು ಹೋದ° ರಾವಣ.
ಮಾಣಿಯ ರೂಪಲ್ಲಿ ಗೆಣವತಿ ದೇವರು ಬಂದದಡ. ರಾವಣಂಗೆ ಅರ್ಘ್ಯ ಬಿಟ್ಟು ಅಪ್ಪ ಮೊದಲೇ ನೆಲಕ್ಕಲ್ಲಿ ಮಡಗಿ ಅಲ್ಲೇ ಸ್ಥಾಪನೆ ಮಾಡ್ಳೇ ಅಲ್ಲಿ ಪ್ರತ್ಯಕ್ಷ ಆದ್ದಡ.
ಇದು ಪುರಾಣ.
ಇತಿಹಾಸದ ಮಜಲಿಲಿ ನೋಡಿರೆ, ಆ ಆತ್ಮಲಿಂಗದ ಪರಿಸರ ವೆವಸ್ತೆಗೆ ಒಳಪ್ಪಟ್ಟು, ಬಂದವಸ್ತಿಂಗೆ ಬಂತು ಕ್ರಮೇಣ.

ಇತಿಹಾಸ:
ನಮ್ಮ ಆದಿ ಗುರುಗೊ ಶಂಕರಾಚಾರ್ಯರು ’ನಮ್ಮ ಆತ್ಮಲ್ಲಿ ದೇವರ ಅಂಶ ಇಪ್ಪದು’ ಹೇಳ್ತ ಅದ್ವೈತ ಮತವ ಪ್ರಚಾರ ಮಾಡಿಗೊಂಡು ಭಾರತವ ನಾಕು ಸರ್ತಿ ಸುತ್ತಿದವಡ. ರೂಪತ್ತೆ ಮಗ° ಹೋದ ಹಾಂಗೆ ವಿಮಾನಲ್ಲಿ ಅಲ್ಲ – ನೆಡಕ್ಕೊಂಡೇ. ಎಂಟನೇ ಶತಮಾನಲ್ಲಿ ಆದ ಶುದ್ದಿ ಅಡ ಇದು, ಮಾಷ್ಟ್ರುಮಾವ° ಹೇಳಿದ್ದು.  ಸಿಂಧೂ(ಹಿಂದೂ) ಧರ್ಮಕ್ಕೆ ಚ್ಯುತಿ ಬಂದಿತ್ತಡ ಅಂಬಗ. ಉತ್ತರಲ್ಲಿ ಎಲ್ಲ ಅರಾಜಕತೆ ಇದಾ! ಒಟ್ಟಾರೆ ಅವ್ಯವಸ್ತೆ. ಹುಂಡು ರಾಜಂಗೊ, ಅವರವರ ಕಾನೂನುಗೊ, ಧರ್ಮಂಗೊ. ಒಟ್ಟಾಗಿ ಗಟ್ಟಿಗೆ ಒಂದು ಧೃಡತೆ ಇತ್ತಿಲ್ಲೆ ಅಡ. ಹಾಂಗೆ ದೊಡ್ಡ ದೊಡ್ಡ ಪಂಡಿತರ ವಾದಲ್ಲಿ ಸೋಲುಸಿ ಅದ್ವೈತ ಮತ ಒಪ್ಪುಸಿ, ಅದರ ಪ್ರಚಾರಕ್ಕೆ ಕಾರಣ ಆಯಿದವು. ಭಾರತದ ಮೂಲೆ ಮೂಲೆಲಿ ಅದ್ವೈತ ಪೀಠ ಸ್ಥಾಪನೆ ಮಾಡಿದ್ದವು. ಒರಕ್ಕು ತೂಗಿಯೊಂಡು ಇದ್ದ ಜೆನರಲ್ಲಿ ಧಾರ್ಮಿಕ ಶ್ರದ್ಧೆ ಜಾಸ್ತಿ ಅಪ್ಪಲೆ ಕಾರಣ ಆಗಿತ್ತಿದ್ದವು. ಸಾವಿರಾರು ಶಿಷ್ಯರ ತಯಾರು ಮಾಡಿ ಧರ್ಮ ಮುಂದುವರಿವಲೆ ಬೇಕಾದ ವೆವಸ್ತೆ ಮಾಡಿದವಡ. ಅತ್ಯಂತ ಸಣ್ಣ ಪ್ರಾಯಲ್ಲಿ ಇಡೀ ದೇಶವೇ ತಲೆ ಬಾಗುವ ಹಾಂಗಿಪ್ಪ ಕೆಲಸ ಮಾಡಿದವು…
ಮುಂದೆ ಸಂಚಾರಲ್ಲಿ ಇದೇ ಅಶೋಕೆ ಹೇಳ್ತ ಜಾಗೆಯ ಹತ್ರೆ ಬಪ್ಪಗ, ಅಲ್ಯಾಣ ಪ್ರಶಾಂತತೆ ನೋಡಿಗೊಂಡು ಇಲ್ಲಿಯೂ ಒಂದು ಧರ್ಮಕೇಂದ್ರ ಮಠ ಆಯೆಕ್ಕು ಹೇಳ್ತ ಯೋಚನೆ ಬಂದು ಸ್ಥಾಪನೆ ಮಾಡಿದವು.!
ಶಂಕರಾಚಾರ್ಯರು ಅವರ ಶಿಷ್ಯ ವಿದ್ಯಾನಂದಾಚಾರ್ಯರ ಮೂಲಕ ಸುರೇಶ್ವರಾಚಾರ್ಯರಿಂಗೆ ದೀಕ್ಷೆಕೊಟ್ಟು ಈ ಅಶೋಕೆ ಮಠಲ್ಲಿ ಉಳುಸಿಗೊಂಡವು.
ಇಡೀ ಪರಶುರಾಮ ಸೃಷ್ಠಿಯ – “ಮಾಂಡವೀ ಹೊಳೆಂದ ಚಂದ್ರಗಿರಿ ಹೊಳೆಯ ಒರೆಂಗೆ ಇರ್ತ ಗೋಕರ್ಣ ಮಂಡಲದ” ಸಮಸ್ತಾಧಿಕಾರವ – ಈ ಮಠಕ್ಕೆ ಒಲುಸಿ ಕೊಟ್ಟವಡ.
ಸಮಾಜಕ್ಕೆ ಅದೊಂದು ಗುರುಪೀಠ ಅಷ್ಟೇ ಅಲ್ಲ – ಆಧ್ಯಾತ್ಮದ ನೆಲೆಲಿ ನಿರ್ದೇಶಿಸಲೆ ಗುರುಪೀಠವೂ ಅಪ್ಪು, ರಾಜಕೀಯ ನೆಲೆಲಿ ನಿರ್ದೇಶಿಸಲೆ ರಾಜಪೀಠವೂ ಅಪ್ಪು!
(ಎಡಪ್ಪಾಡಿ ಬಾವಂಗೆ ಇದರ ಬಗ್ಗೆ ರಜ್ಜ ಜಾಸ್ತಿ ಗೊಂತಿದ್ದು. ಹೆಚ್ಚಿನ ವಿವರ ಬೇಕಾರೆ ಕೇಳಿ, ಅವು ಕೈಗೆ ಸಿಕ್ಕಿರೆ!)
ಅಲ್ಲಿಂದ ಮತ್ತೆ, ಮುಂದಂಗೆ ಎಷ್ಟೋ ಸಮಯ ಅದೇ ಅಶೋಕೆ ಹೇಳ್ತ ಜಾಗೆಲಿ ಆ ಮಠ ಬೆಳಗಿಯೊಂಡು ಇತ್ತಡ.
ಧರ್ಮಾಧಿಕಾರದ ಸಮಸ್ತ ಅಧಿಕಾರವುದೇ ಆ ಮಠಕ್ಕೆ ಇತ್ತು.
ಊರಿಲಿ ಮಳೆ ಬೆಳೆ ಚೆಂದಕೆ ನೆಡಕ್ಕೊಂಡು ಬಂದುಗೊಂಡಿತ್ತು!!

ಶ್ರೀ ಸಂಸ್ಥಾನ ಮಹಾಬಲದೇವ, ಗೋಕರ್ಣ
ಶ್ರೀ ಸಂಸ್ಥಾನ ಮಹಾಬಲದೇವ, ಗೋಕರ್ಣ

ಮಠದ ಕೇಂದ್ರಸ್ಥಾನಲ್ಲಿ ಇಪ್ಪ – ಪುರಾಣಕಾಲಲ್ಲಿ ಸ್ಥಾಪನೆ ಆದ – ಆ ಆತ್ಮಲಿಂಗಕ್ಕೆ ದೇವಸ್ಥಾನದ ರೂಪ ಕೊಟ್ಟತ್ತು, ಅಶೋಕೆಯ ಮಠ.
ಪೂಜೆ, ಪುರಸ್ಕಾರ ಎಲ್ಲ ನಿತ್ಯವೂ ನೆಡಕ್ಕೊಂಡು ಬಂತು. ಆ ಮಠದ ಶಿಷ್ಯವೃಂದ ಲಿಂಗದ ಪೂಜಾ ಕೈಂಕರ್ಯ ನೆಡೆಶಿಗೊಂಡು ಬಪ್ಪಲೆ ವೆವಸ್ತೆ ಆತು.
ಅಶೋಕೆಯ ಹತ್ತರೆ ಅಗ್ರಹಾರ (ಬಟ್ಟಕ್ಕಳ ಮನೆ ಇರ್ತ ಜಾಗೆ), ವ್ಯಾಪಾರಕೇಂದ್ರ, ಸಂಪರ್ಕ ಮಾರ್ಗಂಗೊ – ಎಲ್ಲ ವ್ಯವಸ್ಥಿತವಾಗಿ ಇತ್ತು.
ಒಟ್ಟಿಲಿ ಗೋಕರ್ಣ ಹೇಳಿತ್ತುಕಂಡ್ರೆ – ಎಲ್ಲ ಅನುಕೂಲ ಇದ್ದ ಒಂದು ಅದ್ಭುತ ವೆವಸ್ತೆ ಆಗಿತ್ತು!!!
ಒಂದು ಮಂಡಲದ – ಗೋಕರ್ಣ ಮಂಡಲದ ಕೇಂದ್ರಬಿಂದು ಆಗಿತ್ತು!
ಪುರಾಣಲ್ಲಿ ಯೇವ ರೀತಿ ಪ್ರಾಮುಖ್ಯ ಆಗಿತ್ತೋ, ಇತಿಹಾಸಲ್ಲೂ ಅದೇ ನಮುನೆ ಪ್ರಮುಖ ಕೇಂದ್ರ ಆಗಿತ್ತು.

ಆ ಕೇಂದ್ರ ಸ್ಥಾನದ ಮೂಲ ಅದೇ ಅಶೋಕೆ ಮಠ ಆಗಿತ್ತಾದರೂ, ಕಾರಣಾಂತರಂದಾಗಿ ಮುಂದೆ ಆ ಮಠ ಅಲ್ಲಿಂದ ಹೆರಡುವ ಬಗೆಗೆ ಯೋಚನೆ ಮಾಡಿತ್ತು.
ಮುಖ್ಯವಾಗಿ ಹತ್ತರೆಯೇ ಇಪ್ಪ ಗೋಮಂತಕ (ಗೋವಾ)ಲ್ಲಿ ಪೋರ್ಚುಗೀಸರ ಧರ್ಮವಿರೋಧಿ ಕಾರ್ಯಂಗೊ.
ಗೋವಾಲ್ಲಿ ಇದ್ದ ಸುಮಾರು ಹಿಂದೂ ದೇವಾಲಯ, ಮಠವ ಅದಾಗಲೇ ನೆಲಸಮ ಮಾಡಿ ಧರ್ಮಾಂತರ ಮಾಡ್ತ ಕಾರ್ಯ ಮಾಡಿಗೊಂಡಿತ್ತಿದ್ದವು ಧರ್ಮಾಂಧ ಪೋರ್ಚುಗೀಸರು.
ಎಷ್ಟೋ ಕೊಂಕಣಿಗೊ ’ಬದುಕ್ಕಿರೆ ಬೇಡಿ ತಿಂಬೆ’ ಹೇಳಿ ಕೊಡೆಯಾಲ ಪ್ರಾಂತ್ಯಕ್ಕೆ ಓಡಿ ಹೋದವು.
ಇದೇ ಅಶೋಕೆ ಮಠಕ್ಕುದೇ ಅಲ್ಲಿಂದ ಜಾಸ್ತಿ ದೂರ ಏನಿಲ್ಲೆ! ಹಾಂಗಾಗಿ ಮಠ, ತನ್ನ ಉಳಿವಿಂಗೆ ಬೇಕಾಗಿ ಕೆಳದಿಯ ರಾಜಾಶ್ರಯಕ್ಕೆ ಹೋತಡ.
ಅಶೋಕೆಯ ಸುಂದರ ಕರಾವಳಿಯ ಗೋಕರ್ಣಂದ ಮಲೆನಾಡಿನ ’ನಗರ’ ಕ್ಕೆ ಈ ಮಠ ವಲಸೆ ಹೋತು.
ಮುಂದೊಂದು ದಿನ ಶರಾವತಿ ನದಿಯ ವಿಕೋಪಕ್ಕೆ ಕಾರಣ ಆದ ಆ ನಗರಂದ ಹೊಸದಾದ ನಗರಕ್ಕೆ ಹೋತಡ, ಅದೇ ಈಗಾಣ ಹೊಸನಗರ.
ಅಶೋಕೆಲಿ ಆದಿಶಂಕರಾಚಾರ್ಯರಿಂದ ಆರಂಭ ಆದ ಆ ಮಠ ಎಷ್ಟೋ ಶಂಕರರ ಅವಿಚ್ಚಿನ್ನ ಪರಂಪರೆಲಿ ಈಗ ಹೊಸನಗರಲ್ಲಿ ಬೆಳಗುತ್ತಾ ಇದ್ದು.

ಒರ್ತಮಾನ (ವರ್ತಮಾನ):

ಮಠ ಬೆಳಗುತ್ತಾ ಇದ್ದು, ಸಂಶಯವೇ ಇಲ್ಲೆ. ಆದರೆ, ಮಠವೇ ಕಟ್ಟಿ ಬೆಳೆಸಿದ ದೇವಸ್ಥಾನ?
ಅಂದು ಮಠಂದಲೇ ನಿಯೋಜನೆಗೆ ಒಳಪಟ್ಟ ಕೆಲವು ಶಿಷ್ಯರ ’ಸ್ವಂತಮನೆ’ ಆಗಿ ಬಿಟ್ಟತ್ತು.
ಹೊಟ್ಟೆ ತುಂಬ ತುಂಬಿ, ಅವರ ಬಾವ, ಅಳಿಯ, ಎಲ್ಲೊರು ಬಂದು ದೊಡ್ಡ ಒಂದು ತರವಾಡುಮನೆಯ ವಾತಾವರಣ ಉಂಟಾಗಿ ಬಿಟ್ಟತ್ತು ಅಲ್ಲಿ. ಆತ್ಮಲಿಂಗಂದ ಶಕ್ತಿಂದಲೂ, ಅಲ್ಲಿಪ್ಪವರ ಆತ್ಮದ ಶಕ್ತಿಯೇ ಜಾಸ್ತಿ ಹೇಳಿ ಅಪ್ಪಲೆ ಸುರು ಆತು.
ಹಿರಿಯೋರ ಆತ್ಮಕ್ಕೆ ಶಾಂತಿ ಸಿಕ್ಕಲಿ ಹೇಳಿಗೊಂಡು ಆ ಜಾಗೆಗೆ ಹೋದರೆ, ಹೋದವನ ಆತ್ಮಕ್ಕೇ ಚಿರ-ಅಶಾಂತಿ ಸಿಕ್ಕುತ ಅವ್ವೆವಸ್ತೆ ಆತು ಅಲ್ಲಿ.
ಒಂದರಿ ಹೋದವ° ಪುನ ಹೋಪಲೆ ಯೋಚನೆಯೂ ಮಾಡದ್ದಷ್ಟು ಹಾಳಾಗಿ ಹೋತು. ಧರ್ಮಕ್ಕೆ ಮತ್ತೆ ಚ್ಯುತಿ ಬಂದಿತ್ತು.
ಇತಿಹಾಸ, ಪುರಾಣ – ಎರಡರಲ್ಲಿಯೂ ವಿಶೇಷ ಸ್ಥಾನ ಪಡಕ್ಕೊಂಡ ಗೋಕರ್ಣ, ಹೇಳಿ ಸುಕ ಇಲ್ಲದ್ದಷ್ಟು ಹಾಳಾತು. ಪ್ರಸಿದ್ದಿ ಇದ್ದರೂ ಜೆನ ಹೋಗವು.
ಬರೇ ಅಲ್ಯಾಣ ಬಟ್ಟಕ್ಕಳೂ, ಅವರ ಹೆಂಡತ್ತಿ ಮಕ್ಕಳೂ, ಸುರುವಾಣ ಸರ್ತಿಯಾಣ ಯಾತ್ರಾರ್ಥಿಗಳೂ ಮಾಂತ್ರ ಬಕ್ಕಷ್ಟೇ! ಎರಡ್ನೇ ಸರ್ತಿ ಅಲ್ಲಿಗೆ ಬಾರವಿದಾ! ಅದು ಖಂಡಿತ!!
ಇನ್ನೂ ರಜ ಸಮಯ ಬಿಟ್ಟಿದ್ದರೆ, ಅಂದು ರಾವಣನ ಕೈಲಿ ಏಳುಸುಲೆ ಎಡಿಯದ್ದ ಆತ್ಮಲಿಂಗವ – ಇಂದು ಈಗಾಣ ರಾವಣಂದ್ರು ಏಳುಸುತಿತವೋ ಏನೋ!
ಕೆಲವು ಬಟ್ಟಕ್ಕಳ ಕೈಲಿ ನಲುಗಿ ಹೋದ ಆತ್ಮಲಿಂಗಕ್ಕೆ ಇಲ್ಲಿಂದ ಎಲ್ಲಿಗಾರು ಎದ್ದು ಹೋಪ ಹೇಳಿ ಕಂಡುಗೊಂಡು ಇತ್ತೋ ಏನೋ!
ಅಂದ್ರಾಣ ಕಾಲಲ್ಲಿ ಗೋಕರ್ಣಮಂಡಲ ಈಗ ಗೋಕರ್ಣ ಅಂಚೆ ಅಗಿ ಬಿಟ್ಟಿದು! ಗ್ರೇಶಿರೆ ಬೇಜಾರಾವುತ್ತು ಬಾವ!!

ಆ ಸಮಯಲ್ಲಿ ಆಯಿದು – ಕಳುದೊರಿಷ ಕರ್ನಾಟಕ ಸರಕಾರ ಒಂದೊಳ್ಳೆ ಕೆಲಸ ಮಾಡಿದ್ದು! ಎಷ್ಟು ಒಳ್ಳೆ ಕೆಲಸ ಹೇಳಿತ್ತು ಕಂಡ್ರೆ, ಮುಖ್ಯಮಂತ್ರಿ ಯೆಡಿಯೂರಪ್ಪ ಜೀವಮಾನದ ಪುಣ್ಯ ಕಟ್ಟಿಗೊಂಡತ್ತು.
ಅನಾದಿಕಾಲಂದಲೂ ನಮ್ಮ ಗುರುಪೀಠದ ವಶಲ್ಲೇ ಇತ್ತಿದ್ದ – ತೀರಾ ಇತ್ತೀಚೆಗೆ ಐದುಪೈಸೆ ರಾಜಕೀಯಂದಾಗಿ ಆರಾರ ಕೈಗೆ ಹೋಗಿದ್ದ- ಗೋಕರ್ಣ ದೇವಸ್ಥಾನದ ಆಡಳ್ತೆ ಒಪಾಸು ಮಠಕ್ಕೆ ಕೊಡ್ತ ತೀರ್ಮಾನ.

೮ನೇ ಶತಮಾನಲ್ಲಿ ಆದಿ ಶಂಕರಾಚಾರ್ಯರು ಭಾರತ ಇಡೀ ಸುತ್ತಿ ಧರ್ಮಪ್ರಜ್ಞೆ ಬರುಸಿ, ಹಿಂದುತ್ವ ಉಳುಶಿತ್ತಿದ್ದವು. ಈಗ ಅದೇ ಅವಿಚ್ಚಿನ್ನ ಪರಂಪರೆಲಿ ಇಪ್ಪ ೩೬ನೇ ಶಂಕರರು ಮತ್ತೆ ಭಾರತ ಸುತ್ತಿ ಧರ್ಮಪ್ರಜ್ಞೆ ಬೆಳೆಸುಲೆ ಪ್ರಯತ್ನ ಪಟ್ಟೋಂಡು ಇದ್ದವು.
ಇಡೀ ದೇಶ ಹೆಮ್ಮೆ ಪಟ್ಟೋಂಡಿಪ್ಪ ಕೆಲಸ ಸಣ್ಣ ಪ್ರಾಯಲ್ಲೇ ಮಾಡಿಗೊಂಡಿಪ್ಪದು ಶಿಷ್ಯಂದ್ರಿಂಗೆ ಹೆಮ್ಮೆಯ ವಿಚಾರ.
ಗೋಕರ್ಣ ಪುನರುತ್ಥಾನದ ಜೆವಾಬ್ದಾರಿಯ ಅದ್ಭುತವಾಗಿ ಆರಂಬ ಮಾಡುಲೆ ಶಿಷ್ಯವೃಂದವ ನಿಯೋಜನೆ ಮಾಡಿದವು. ಎಲ್ಲ ಕೆಲಸ ಸುಸೂತ್ರವಾಗಿ ಆವುತ್ತಾ ಇದ್ದು.

ಒರಿಷಾನುಕಾಲ (ವರ್ಷಾನುಕಾಲ) ಕುರೆ ನೀರು ಕುಡುದು, ಅದರಲ್ಲೇ ಮಿಂದುಗೊಂಡು ಇದ್ದ ಆತ್ಮಲಿಂಗದ ಪುಣ್ಯಪಾವಿತ್ರ ಮತ್ತೆ ಪಡಕ್ಕೊಂಡು ಬಪ್ಪಲೆ ವೆವಸ್ಥೆಗಳ ಆರಂಭ ಮಾಡಿದವು.
ಥೇಟ್ – ಬದಿಯಡ್ಕದ ಅದ್ರಾಮನ ಮೀನು ವ್ಯಾಪಾರದ ಹಾಂಗೆ – ಆಗಿತ್ತಿದ್ದ ಗೋಕರ್ಣದ ಬಟ್ಟಕ್ಕೊಗೆ ಬೆಶಿ ಮುಟ್ಟುಸಿ ರಜ ನೇರ್ಪ ಮಾಡ್ಳೆ ಹೆರಟವು.
ಕೃಷ್ಣ ಬಸ್ಸಿಲಿ ಹರುದರುದು ಕೊಡ್ತ ಟಿಕೇಟು ನಮುನೆಯ ’ಟೋಕನು’ಗಳ ಎಲ್ಲ ನಿಲ್ಲುಸಿ ಒಂದು ವೆವಸ್ತೆಗೆ ತಂದು ನಿಲ್ಲುಸಿದವು.
ಈ ಸರ್ತಿಯಾಣ ಶಿವರಾತ್ರಿಯ ಒಂಬತ್ತು ದಿನ ಅಂತೂ ಅದ್ಭುತವಾಗಿ ನೆಡದತ್ತಡ.
ಲಾಬವೇ ಇಲ್ಲದ್ದೆ, ದೊಡ್ಡದೊಡ್ಡ ವೆವಸ್ಥೆಗಳ ಆರಂಭ ಮಾಡ್ಳೆ ಸುರು ಮಾಡಿದವು.
ಎಲ್ಲ ಆರಿಂಗೆ ಬೇಕಾಗಿ?
ನವಗೆ ಬೇಕಾಗಿ!
ಸಮಾಜಕ್ಕಾಗಿ!!

Gokarna Temple
ಗೋಕರ್ಣ ದೇವಸ್ಥಾನ, ಅಶೋಕೆ ಮಠ

ಅದೆಲ್ಲ ಇರಳಿ,
ಗೋಕರ್ಣಲ್ಲಿ ಸದ್ಯಕ್ಕೆ ಎಂತ ಗೌಜಿ ಆವುತ್ತಾ ಇದ್ದು? ಅದೇ ಕೋಟಿರುದ್ರ!!!
ಒಂದಲ್ಲ, ಎರಡಲ್ಲ – ಒಂದು ಕೋಟಿ ಸರ್ತಿ ರುದ್ರಪಾರಾಯಣ…!

ನಮ್ಮೋರ ಮನೆಗಳಲ್ಲಿ ಶಿವ ಪೂಜೆ ಮಾಡ್ತವಲ್ದೋ?
ಶಿವಪೂಜೆ ಎಡಕ್ಕಿಲಿ ’ರುದ್ರ’ ಹೇಳ್ತವು, ಗೊಂತಿದ್ದೋ?
ಹನ್ನೊಂದು ಅನುವಾಕ (ಅಧ್ಯಾಯ) ಇಪ್ಪ ಶಿವನ ಕುರಿತಾದ ಮಂತ್ರಗುಚ್ಛ!!
ಶಿವನ ವಿವಿಧ ಹೆಸರುಗಳೋ, ಅವನ ವರ್ಣನೆಗಳೋ, ಅವನ ವಿವಿಧ ರೂಪಂಗಳೋ – ಇದೆಲ್ಲ ಇಪ್ಪ ಒಂದು ಸಂಕಲನ ಅಡ – ಆಚಮನೆ ದೊಡ್ಡಣ್ಣ ಹೇಳಿದ°. ಅದರ ಹೇಳಿರೆ ಯಶಸ್ಸು ಸಿಕ್ಕುತ್ತು ಹೇಳಿ ನಂಬಿಕೆ.
ಮಳೆಬಾರದ್ರೆ ಮಳೆ ಬಪ್ಪಲೆ, ಮಳೆ ಹೆಚ್ಚು ಬಂದರೆ ನಿಂಬಲೆ, ಬೇರೇನೋ ತೊಂದರೆ ಆದರೆ ತಡವಲೆ -ಎಲ್ಲ ಈ ರುದ್ರವ ಹೇಳಿಗೊಂಡು ರುದ್ರಂಗೆ (ಶಿವಂಗೆ) ಅಭಿಶೇಕ ಮಾಡ್ತವು. ರುದ್ರವ ಒಂದು ಉರು (ಸರ್ತಿ) ಪೂರ್ತಿ ಹೇಳುಲೆ ಹತ್ತರತ್ತರೆ ಇಪ್ಪತ್ತು ನಿಮಿಶ ಬೇಕಾವುತ್ತಡ, ನಮ್ಮ ಊರಿನ ಬಟ್ಟಮಾವಂದ್ರಿಂಗೆ.

ಮಾಷ್ಟ್ರುಮಾವನಲ್ಲಿ ಓ ಮೊನ್ನೆ ಏಕಾದಶ ರುದ್ರ ಮಾಡುಸಿದವು, ಏಕಾದಶ(೧೧) ಆವುರ್ತಿಲಿ ಶಿವಂಗೆ ಅಭಿಶೇಕ. ನಾಕು ಜೆನ ಬಟ್ಟಮಾವ ಮೂರು ಉರು (ಸರ್ತಿ) ಹೇಳುಲೆ ಅಡ.
ಗಣೇಶಮಾವ ಕಳುದರಿಷ ಶತರುದ್ರ ಮಾಡುಸಿದ್ದವು. (೧೧ ಜೆನರ ೧೧ ಉರು ಅಪ್ಪಗ ಶತರುದ್ರ ಹೇಳಿ ಲೆಕ್ಕ. ಅಪ್ಪಲೆ ೧೨೧ ಉರು ಆದರೂ ’ಶತ’ರುದ್ರ ಹೇಳುದು.) ಗಣೇಶಮಾವನಲ್ಲಿ ಅದು ಇನ್ನೂರು ಕಳುದ್ದು ಹೇಳಿ ಆರೋ ಹೇಳಿದ ನೆಂಪು. ಬಟ್ಟಮಾವಂದ್ರು ಪೂರ ಅವಕ್ಕೆ ಚೆಂಙಾಯಿಗಳೆ ಅಲ್ದೋ? ಬಂದವೆಲ್ಲ ಮಣೆ ಮಡಿಕ್ಕೊಂಡು ಕೂದವಿದಾ, ಉದಾಕೆ!
ಶತರುದ್ರಕ್ಕೆ ಮೂರೂವರೆ – ನಾಕು ಗಂಟೆ ಬೇಕಾವುತ್ತಡ. ಉದಿಯಪ್ಪಗ ಎಂಟೆಂಟೂವರೆಗೆ ಸುರು ಆದರೆ ಹನ್ನೆರಡಕ್ಕೆ ಮುಗಿತಾಯ.
ಮೂಡ್ಳಾಗಿ ಯೇವದೋ ಒಂದು ಕುಟುಂಬುದೋಷ ನಿವೃತ್ತಿಗೆ ’ಸಹಸ್ರ ರುದ್ರ’ ಮಾಡುಸುದು ಹೇಳಿ ನಿಜ ಮಾಡಿದವಡ, ಪಂಜಚಿಕ್ಕಯ್ಯ ಹೇಳಿದ್ದು.
ಸಾವಿರ ಉರು ಹೇಳಿರೆ ಆತೆಷ್ಟು! ಹಾಂಗಾಗಿ ಹತ್ತು ಸರ್ತಿ ಶತರುದ್ರ ಮಾಡಿದ್ದು. ತಿಂಗಳಿಂಗೊಂದು ಮಾಡಿ ಹತ್ತು ತಿಂಗಳಿಲಿ ಮುಗುಶಿಗೊಂಡವು.

ಆದರೆ ಇದು – ಕೋಟಿ ರುದ್ರ!
ಹತ್ತುಸಾವಿರದ ಸಾವಿರ!
ಈ ಕೆಲಸಕ್ಕೆ ಖಂಡಿತವಾಗಿಯೂ ಸಾವೇ ಇರ!

ಎಷ್ಟು ಬಟ್ಟಮಾವಂದ್ರು ಬೇಕು!! ಎಷ್ಟು ಸಮಯ ಬೇಕು!!! ನಮ್ಮ ಕೈಂದ ಹರಿಗೋ ಇದು – ಹೇಳಿ ಕೆಲವು ಜೆನ ಮೂಗಿನ ಮೇಲೆ ಬೆರಳು ಮಡಿಕ್ಕೊಂಡು ಕೇಳಿದವು.
ಎಡಿಯದ್ದ ಕೆಲಸವೋ? ಏಕೆ ಎಡಿಯದ್ದೆ!! ಹೇಳಿ ಎಡಪ್ಪಾಡಿ ಬಾವ° ಬೀಪಿಲಿ ಹೇಳಿದ.
ಒಬ್ಬನೇ ಆದರೆ ಒಂದು ಕೋಟಿ ಸರ್ತಿ ಹೇಳೆಕ್ಕು. ಅದೇ, ನೂರು ಜೆನ ಬಟ್ಟಕ್ಕೊ ಆದರೆ ಒಂದು ಲಕ್ಷ ಸರ್ತಿ ಹೇಳೆಕ್ಕು. ಹಾಂಗೆಯೇ, ಸಾವಿರ ಜೆನ ಆದರೆ ಹತ್ತುಸಾವಿರ ಸರ್ತಿ ಹೇಳೆಕ್ಕು.
ಲಕ್ಷ ಜೆನ ಬಟ್ಟಕ್ಕೊ ಆದರೆ ನೂರು ಸರ್ತಿ ಹೇಳೆಕ್ಕು.. ಕೋಟಿ ಜೆನ ಬಟ್ಟಕ್ಕೊ ಸೇರಿರೆ ಒಂದೊಂದೇ ಸರ್ತಿ ಹೇಳಿರೆ ಮುಗಾತು – ಎಷ್ಟು ಸುಲಾಬ..!!! ಹೇಳಿ ಅವನ ವಾದ!
ನಿಜವಾಗಿಯೂ ಅಪ್ಪಾದ ವಿಶಯವೇ ಅದು.
ಕೋಟಿ ಜೆನ ಆಗ, ಲಕ್ಷ ಆದರೂ ಇದ್ದನ್ನೆ ನಾವೇ. ಎಲ್ಲೊರುದೇ ಸೇರಿರೆ ಎಡಿಯದ್ದ ಕೆಲಸ ಅಲ್ಲಲೇ ಅಲ್ಲ.
ಎಲ್ಲ ಗೃಹಸ್ಥ ಲೌಕಿಕರೂ ವೈದಿಕರಾದರೆ, ಎಲ್ಲೊರುದೇ ರುದ್ರಪಾರಾಯಣ ಮಾಡುವ ಹಂತಕ್ಕೆ ಬಂದರೆ, ಲಕ್ಷ ಬಟ್ಟಕ್ಕೊ ತೆಯಾರಾದವಿಲ್ಲೆಯೋ!!
ಹತ್ತು ಸರ್ತಿ ಗೋಕರ್ಣಕ್ಕೆ ಹೋಗಿ ಹತ್ತತ್ತು ಉರು ಹೇಳಿರೆ ಮುಗಾತು, ಒಬ್ಬಂದು ನೂರಾವುತ್ತು. ಎಲ್ಲೊರದ್ದು ಸೇರಿರೆ ಕೋಟಿ ಆಗಿಯೇ ಹೋತು!
ಅಲ್ಲದೋ?

ಸುಮಾರು ಜೆನ ಮೊದಲು ಅರಡಿಯದ್ದವುದೇ ಕಿಳಿಂಗಾರಿಂಗೋ, ಕೋಣಮ್ಮೆಗೋ, ಮಂಜಳಗಿರಿಗೋ ಮತ್ತೊ ಹೋಗಿ ’ಸಿಕ್ಕಿದ್ದು ಭಾಗ್ಯ’ ಹೇಳಿಗೊಂಡು ರುದ್ರ ಕಲ್ತುಗೊಂಡು ಬತ್ತಾ ಇದ್ದವು. ಸಹಸ್ರಮಾನದ ಕಾರ್ಯ ಅಲ್ದೋ ಅದು! ಹಾಂಗೆ. ಎಲ್ಲಾ ವೈದಿಕರುದೇ ಇದು ಒಂದು ಹಬ್ಬವೇ. ರುದ್ರ ಕಲ್ತು, ಬಾಯಿಪಾಟ ಮಾಡಿ, ಗೋಕರ್ಣಲ್ಲಿ ಜೆಮೆ ಆಗಿ, ಒಟ್ಟಿಂಗೆ ಕೂದು, ರುದ್ರ ಪಾರಾಯಣ ಮಾಡಿ, ಉಂಡು, ಸಮುದ್ರದ ಕರೆಲಿ ತಿರುಗಿ, ಊರಿಂಗೆ ಬಪ್ಪದು – ಅದೊಂದು ಹಬ್ಬವೇ!
ಊರೂರಿಂದ ಒಟ್ಟಾಗಿ ಗೋಕರ್ಣಕ್ಕೆ ಹೋಗಿ, ರುದ್ರ ಹೇಳಿ ಬಪ್ಪದು ಈಗಾಣ ಹೊಸಾ ಶುದ್ದಿ.

ಓ ಮೊನ್ನೆ ಪಂಜ ಹೊಡೆಂದಲೂ ಒಂದು ಬಸ್ಸು ಜೆನ ಹೋಯಿದಡ. ಎರಡು ದಿನ ಇದ್ದು ಬಂದದೋ ಹೇಳಿ ಕಾಣ್ತು. ಅಜ್ಜಕಾನ ಬಾವಂಗೆ ಕಲ್ಮಡ್ಕ ಅನಂತ ಹೇಳಿದ್ದಡ.
ಎಂಗಳ ಬೈಲಿಂದ ಸದ್ಯ ಹೋಪಲಿದ್ದು, ಯೇವತ್ತು ಹೇಳಿ ನೋಡೆಕ್ಕಷ್ಟೆ. ಮಂಜಳಗಿರಿ ಬಟ್ಟಮಾವಂಗೆ ಅನುಪ್ಪತ್ಯ ಎಲ್ಲ ಮುಗುದು, ಪುರುಸೊತ್ತಾಯೆಕ್ಕಷ್ಟೆ – ರುದ್ರಪಾಟ ಮುಂದುವರಿಯೆಕ್ಕಾರೆ. ಅಲ್ಲದ್ದೆ, ಈ ಕೋರಿಕ್ಕಾರು ಮಾವ, ಮಾರ್ಗದ ಮಾವಂಗೆ ಎಲ್ಲ ಹೋಪಲೆ ಗೊಂತಿಲ್ಲೆ. ಹಾಂಗಾಗಿ ಇಡೀ ಬೈಲೇ ಅವಕ್ಕೆ ಕಾದು ನಿಂದಿದು!
ಬನ್ನಿ, ನಿಂಗಳುದೇ ಸೇರಿಗೊಳ್ಳಿ, ಎಂಗಳ ಬಸ್ಸಿಲಿ ಜಾಗೆ ಇದ್ದು.
ಎಲ್ಲೊರುದೇ ಒಂದುಉರು ಆದರೂ ಹೇಳಿಕ್ಕಿ ಬಪ್ಪ!
ಸಹಸ್ರಮಾನದ ಕಾರ್ಯಲ್ಲಿ ನೆಂಪೊಳಿವ ಕೆಲಸ ಮಾಡುವೊ.!

ಭವಿಷ್ಯ:
ಭವಿಷ್ಯ ಅತ್ಯಂತ ಸ್ಪಷ್ಟ.
ಗೋಕರ್ಣ ಮತ್ತೆ ಬೆಳಗುತ್ತು.
ಪುರಾಣದ ಪ್ರಾಮುಖ್ಯತೆಯೂ, ಇತಿಹಾಸದ ಪ್ರಾಧಾನ್ಯತೆಯೂ, ಒರ್ತಮಾನದ ಪಾವಿತ್ರ್ಯತೆಯೂ – ಬತ್ತು.
ವಿಶ್ವದ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿ ಗೋಕರ್ಣ ಇರ್ತು.
ನಮ್ಮ ಗುರುಗಳ ಆಲೋಚನೆಯಂತೆ, ವಿದೇಶೀಯರು ಇನ್ನೂ ಜಾಸ್ತಿ ಬತ್ತವು – ಆದರೆ, balenciaga schoenen verkoop ಆಧ್ಯಾತ್ಮ ಪಾಠ ಹೇಳುಸಿಗೊಂಬಲೆ!
ದೊಡ್ಡದಾದ ಯೋಗ-ಆಧ್ಯಾತ್ಮ ಶಾಲೆ ಮಾಡುವ ಏರ್ಪಾಡುದೇ ಇದ್ದಡ ಅಲ್ಲಿ – ಎಡಪ್ಪಾಡಿ ಬಾವ° ಹೇಳಿದ್ದು.!!

ಆಗಲಿ, ಒಟ್ಟಾರೆಯಾಗಿ ಈಗಾಣ ಕೋಟಿರುದ್ರ ಎಲ್ಲೋರಿಂಗೂ ರುದ್ರ ಕಲುಶಿತ್ತು.  ಎಲ್ಲೊರನ್ನುದೇ ವೈದಿಕರನ್ನಾಗಿ ಮಾಡುಸಿತ್ತು. ಎಲ್ಲೊರಿಂಗೂ ಹಬ್ಬದ ಗೌಜಿ ಕೊಡುಸಿತ್ತು.
ಲೌಕಿಕರ ವೈದಿಕರಾಗಿ ಮಾಡಿದ ಈ ಕೋಟಿರುದ್ರಕ್ಕೆ ಒಪ್ಪಣ್ಣನ ನಮಸ್ಕಾರಂಗೊ! ಅದರ ಹಿಂದೆ ಇಪ್ಪ ’ಗುರುಸಂಕಲ್ಪ’ಕ್ಕೆ ಅಭಿವಾದನೆಗೊ.
(ಕಲಿವ ಶುದ್ದಿ, ಕಲ್ತ ಶುದ್ದಿ, ಅಲ್ಲಿಗೆ ಹೋಗಿ-ಬಪ್ಪ ಶುದ್ದಿ ಎಲ್ಲ ಇನ್ನೊಂದರಿ ಮಾತಾಡುವ°)

ಒಪ್ಪಣ್ಣಂದ್ರೇ, ಗೋಕರ್ಣಲ್ಲಿ ಕೋಟಿ ಪೂರ್ತಿ ಅಪ್ಪ ಮೊದಲು ರುದ್ರ ಕಲ್ತುಗೊಳ್ಳಿ.
ಕೋಟಿರುದ್ರದ ಕೋಟಿಬಿಂದುವಿಲಿ ಒಂದು ನಿಂಗಳದ್ದುದೇ ಇರಳಿ.

ಮರೇಡಿ, ಮರದು ನಿರಾಶರಾಗೆಡಿ.
ಅಲ್ಲದೋ?

ಒಂದೊಪ್ಪ: ಸಾವಿರ ಜೆನ ಬಟ್ಟಕ್ಕೊ ಕೋಟಿ ಬರ್ತಿಮಾಡುದರಿಂದಲೂ, ಕೋಟಿಜೆನ ಒಂದೊಂದೇ ಹೇಳಿ ಬರ್ತಿಮಾಡಿರೆ ಕೋಟಿರುದ್ರ ಹೆಚ್ಚು ಫಲಪ್ರದ ಅಕ್ಕು. ಎಂತ ಹೇಳ್ತಿ!

11 thoughts on “ಕೋಟಿರುದ್ರ ಗೋಕರ್ಣಲ್ಲಿ.. ಹಬ್ಬದ ಗೌಜಿ ವೈದಿಕರಲ್ಲಿ…!

  1. ಲಾಯ್ಕಾಯಿದು. ಗೋಕರ್ಣದ ಕತೆಯ ಚೆಂದಕ್ಕೆ ವಿವರುಸಿ ಬರದ್ದಿ. ವರ್ತಮಾನದ ಈ ಆಡಳಿತಲ್ಲಿ ಭವಿಷ್ಯದ ಕನಸು ಖಂಡಿತಾ ನನಸಕ್ಕು. ‘ಒಂದೊಪ್ಪ’ ತುಂಬಾ ಲಾಯ್ಕಿದ್ದು.

  2. ರಾವಣ ಗಣಪತಿಯ ತಲಗೆ ಮೇಟ ಕೊಟ್ಟ ಕಥೆ ಹೇಳಿದ್ದಿಲ್ಲೇ ಒಪ್ಪಣ್ಣ
    ಹಾಂಗದ ಗೋಕರ್ಣ ಗಣಪತಿ ಯ ತಲೆ ೧ ಹೊಡೆಲಿ ಚಟ್ಟೆ ಆದ್ದು !!!!

  3. ಒಪ್ಪಣ್ಣ,

    ನಿನ್ನ ಹೊಸ ಜಾಗೆಲಿ ಸೊಗಸಾಗಿ ಕೋಟಿ ರುದ್ರದ ಬಗ್ಗೆ ಬರದ್ದೆ. ಗೋಕರ್ಣದ ಕಥೆ ಗೊಂತಿದ್ದದೆ ಆದರೂ, ಒಪ್ಪಣ್ಣನ ಬಾಯಿಲಿ ಕೇಳಲೆ ಬಹಳ ಒಳ್ಳೆದಾವುತ್ತು. ನಿನ್ನ ವಿಭಿನ್ನ ಹಾಸ್ಯ ಮಿಶ್ರಿತ ಶೈಲಿ ಒಳ್ಳೆ ಓದುಸೆಂಡು ಹೋವುತ್ತು. ಕಳುದ ವರ್ಶದ ವರಗೆ ಇದ್ದ ಗೋಕರ್ಣದ ಅವ್ಯವಸ್ಥೆ, ಅಲ್ಯಾಣ ಬಟ್ಟಕ್ಕಳ ಹಿಡಿದೆಳೆದು ತಿಂಬ ಕಾರು-ಬಾರು ನೋಡಿ ಇನ್ನು ಆ ಕಡೆ ಹೋವುತ್ತದೇ ಬೇಡ ಹೇಳಿ ಗ್ರಹಿಸೆಂಡು ಇದ್ದಿದ್ದೆ. ನೀನು ಹೇಳಿದ ಹಾಂಗೆ ಗುರುಗಳ ಕೃಪೆಂದ ಗೋಕರ್ಣ ಮತ್ತೆ ಬೆಳಗಲಿ.

  4. ಬಾವ,
    ಗೋಕರ್ಣ ಪುರಾಣ, ವರ್ತಮಾನ, ಭವಿಷ್ಯದ ಜೊತೆಗೆ ಪ್ರಸ್ತುತ ಅಗತ್ಯದ ವಿವರ್ಸಿದ ಈ ಲೇಖನ ತುಂಬಾ ಲಾಯಿಕ್ಕ ಇದ್ದು.
    ಒಂದರಿ ಎಲ್ಲರೂ ಮಾಡೆಕ್ಕಾದ ಕಾರ್ಯ. ಹೋಪ ಆಗದಾ?

  5. ಸುದ್ದಿ ವಿವರಿಸಿ ಹೇಳಿದ್ದಕ್ಕೆ ಸಂತೋಷ, ಸಣ್ಣ ಇಪ್ಪಾಗ ಬೆಳಿ ಚೆಂಡಿ ಹರ್ಕು ಸುತ್ತಿ ತಲೆಆದ್ಸಿಗೊನ್ದು ರುದ್ರ ಹೇಳಿದ್ದು ಎಲ್ಲ ನೆಮ್ಪಾತು.ಊರ್ಲಿ ಇಲ್ಲದ್ದೆ ಒಂದು ಗೌಜಿ ಮಿಸ್ಸಾಉತ್ತೈದ್ದು

  6. ಶಾಲೆಗೆ ಹೋಪಗ ದೊಡ್ಡ ರಜೆಲ್ಲಿ ಪೆರಡಾಲ ದೇವಸ್ಥಾನಕ್ಕೆ ಮಂತ್ರ ಪಾಠಕ್ಕೆ ಹೋದ್ದದು ನೆಂಪು ಆವುತ್ತು ಒಪ್ಪಣ್ಣ. ಐ ವಿ ಭಟ್ರು, ಶಾಸ್ತ್ರಿ ಅಜ್ಜ, ನವಕಾನ ಮಾಶ್ರಜ್ಜ ಮತ್ತೆ ಭಟ್ಟ ಮಾವಂದ್ರು ಇವ್ವೆಲ್ಲ ಸೇರಿ ನವಗೆಲ್ಲ ನಾಲಗೆ ತೆರಚ್ಚುವ ಹಾಂಗೆ ಮಾಡಿದ್ದದು ನಮ್ಮ ಪುಣ್ಯ!

    1. ಹ್ಮ್, ಅದಪ್ಪು.
      ಚೆಂಡಿಬೈರಾಸು ತಿರ್ಪಿ ದೊಡ್ಡಬಾವಂಗೆ ಬಡುದ್ದಿರಾಡ ನಿಂಗೊ. ಅಪ್ಪೋ?
      ಅವು ಈಗಳೂ ಒಂದೊಂದರಿ ಹೇಳಿ ಬೇಜಾರು ಮಾಡ್ತವು… ;-(

  7. sooper oppanno.ondarinda ondu sooper aagi batta iddu.nijavagiyu lokoddhara akku heli kaantu.innadaru subhiksha barali.esto jena rudra kaltu gokarnakke hogi rudra heli bandavu.innu tumba jena kalitta iddavu.antu halu harate hodadu hottu kalavadarinda idondu punya karya allada oppanno.jembrangalalli nammora sabheli maatadude alli koosidda estu praya, enta madtu adakke estavuttu heenge halavaaru
    prashnego.idara bitre berentu vishayave ille.eega mantra koti rudrada shuddi matadudu keluttu hange kushi aatu.namma gurugo sankalpa madiddu neraverutta iddu.koti rudrandagi ellora baindalu mantra keluvantagali.innadaru mantra devaru heluva bhakti barali allada oppanno shubhavagali hare raama.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×