Oppanna.com

ಕೋಲೇಜಿನ ಮಾಷ್ಟ್ರ° ಇಂಜಿನಿಯರು ಕಲುಶಿದ ಶುದ್ದಿ..

ಬರದೋರು :   ಒಪ್ಪಣ್ಣ    on   24/12/2010    27 ಒಪ್ಪಂಗೊ

ಸುಬ್ರಮಣ್ಯದ ಸ್ರಷ್ಟಿಯ ಶುದ್ದಿ ಕಳುದ ವಾರ ಮಾತಾಡಿದ್ದು.
ದ್ವಾದಶಿಂದ ದ್ವಾದಶಿಗೆ ನೆಡೆತ್ತ ವಿವಿಧ ಆಚರಣೆಗೊ, ಅದಾಗಿ ಬತ್ತ ಕಿರಿಶಷ್ಠಿಯ ಶುದ್ದಿ, ನೆಗೆಮಾಡುಸುತ್ತ ಪೋಕ್ರಿ ಆನೆಯ ಶುದ್ದಿ – ಎಲ್ಲೋರಿಂಗೂ ಕೊಶಿ ಆಯಿದು.
ಈ ಚಳಿಗೆ ಕಂಬುಳಿಯ ಶುದ್ದಿ ಹೇಳುಲೆ ಬಿಟ್ಟು ಹೋಯಿದು ಹೇಳಿ ಸದ್ಯಮದುವೆ ಆದ ಪುಚ್ಚಪ್ಪಾಡಿ ಮಾಣಿ ಜೋರುಮಾಡಿದ°, ಒಪ್ಪಣ್ಣನ! 😉
ಅದಿರಳಿ,
ನಾವು ಈ ಶುದ್ದಿ ಮಾತಾಡಿಗೊಂಡು ಇದ್ದ ಹಾಂಗೇ ಆಚಮನೆ ದೊಡ್ಡಣ್ಣನೂ ಒಪ್ಪಕ್ಕನೂ ಸೀತ ಸುಬ್ರಮಣ್ಯಕ್ಕೆ ಹೋಗಿ ಬಂಡಿಉತ್ಸವ ನೋಡಿ ಪಟತೆಕ್ಕೊಂಡು ಬಯಿಂದವು. (ಒಪ್ಪಕ್ಕ° ಬೈಲಿಂಗೆ ಹಾಕುತ್ತೋ ಏನೋ! ಉಮ್ಮಪ್ಪ)
~
ಬೈಲಿಲಿ ಎಲ್ಲಾ ಶುದ್ದಿಯೂ ಬತ್ತು.
ಒಳ್ಳೆದೂ ಬಕ್ಕು, ಕುಶಾಲುದೇ ಬಕ್ಕು, ಬೆಗುಡುದೇ ಬಕ್ಕು, ನೆಗೆಯೂ ಬಕ್ಕು, ಬೇಜಾರವೂ ಬಕ್ಕು, ಗಂಭೀರವೂ ಬಕ್ಕು!
ಇದರೆಲ್ಲ ಯೋಚನೆ ಮಾಡಿಗೊಂಡು ಕೂಪಗ ಅನುಸಿತ್ತು, ಬೈಲಿಲಿ ಯೇವಯೇವದೋ ಊರಿನ ಶುದ್ದಿಗಳ ಎಲ್ಲ ಮಾತಾಡಿದ್ದು ನಾವು.
ನಮ್ಮ ಊರಿಲೇ ಒಂದು ಒಳ್ಳೆ ಕೆಲಸ ಆವುತ್ತರೆ ಹೇಳದ್ದೆ ಕೂಪದೆಂತಕೆ?! ಅಲ್ಲದೋ?!

ರಾಮಜ್ಜನ ಕೋಲೇಜು - ದೂರಂದ ನೋಡುವಗ ಹೀಂಗೆ ಕಂಡದಡ, ಚಿತ್ರ ಬಿಡುಸಿದವಂಗೆ.

~
ರಾಮಜ್ಜನ ಕೋಲೇಜಿಲೇ ಕಲ್ತು ಬೆಂಗುಳೂರಿಂಗೆ ಹೆರಟ ಬಿಂಗಿಪುಟ್ಟನ ಗೊಂತಿದ್ದಲ್ಲದೋ.
ಈಗ ಬೆಂಗುಳೂರಿಲಿ ಒಂದು ಕೋಣೆಲಿ ಇಪ್ಪದಡ.
ಓ ಮೊನ್ನೆ ನೆಕ್ರಾಜೆ ಬದ್ಧಲ್ಲಿ ಸಿಕ್ಕಿತ್ತಿದ್ದ°. ತುಂಬ ಮಾತಾಡಿದ.
ಸಣ್ಣ ಮನೆಯ ಸಣ್ಣ ಕೋಣೆ ಅಡ.
ನೆಕ್ರಾಜೆ ದೇವರಕೋಣೆಯಷ್ಟಕೆ ಆ ಇಡೀ ಮನೆ ಇಪ್ಪದಡ!
ಕೋಣೆ ಹೇಳಿರೆ ಬರೇ ಸಣ್ಣ ಕೋಣೆ ಅಡ, ಈ ಊರಿನ ಹಾಂಗೆ ಅಲ್ಲಲೇ ಅಲ್ಲಡ. ಸುರುಸುರುವಿಂಗೆ ಎಲ್ಲವುದೇ ಕಷ್ಟ ಆವುತ್ತಡ –

ಹೀಂಗೇ ಮಾತಾಡುವಗ ರಾಮಜ್ಜನ ಕೋಲೇಜಿನ ಒಂದು ವಿಶೇಷದ ಶುದ್ದಿ ಬಂತು. ನಿಂಗೊಗೆ ಹೇಳುವೊ° ಹೇಳಿ ಕಂಡತ್ತು.
ಒಪ್ಪಣ್ಣಂಗೆ ಕೊಶೀ ಆಯಿದು. ನಿಂಗೊಗೂ ಆವುತ್ತೋ ಏನೋ
– ನೋಡಿಕ್ಕಿ.
~

ನಮ್ಮ ಊರಿಲಿ ಪ್ರತಿಷ್ಟಿತ ಕೋಲೇಜುಗಳಲ್ಲಿ ರಾಮಜ್ಜನ ಕೋಲೇಜುದೇ ಒಂದು.
ಪಾಪದ ಮಕ್ಕೊಗೆ ಕಲಿಯಲೆ ಬೇಕಾಗಿ ಎಷ್ಟೋ ಶ್ರಮವಹಿಸಿ ಅಂಬಗಾಣ ಚಿಂತಕರು, ಮುತ್ಸದ್ಧಿಗೊ ‘ನಮ್ಮದೇ ಒಂದು ಆಯೆಕು‘ ಹೇಳಿ ಕಟ್ಟಿದ ಒಂದು ವಿದ್ಯಾ ಸಂಸ್ಥೆ. ಅಲ್ಲಿಂದ ಮತ್ತೆ ಎಷ್ಟೋ ಜೆನಕ್ಕೆ ವಿದ್ಯಾದಾನ ಮಾಡಿದ್ದು. ಒಳ್ಳೆಯ ಹೆಸರು ಇಪ್ಪ ಕಾರಣ ಅತ್ಯಂತ ಬುದ್ಧಿವಂತರ ಮಕ್ಕೊ ಎಲ್ಲ ಅಲ್ಲಿಗೇ ಹೋಗಿ ಕಲಿವದಡ.
ಬುದ್ಧಿವಂತರೇ ಹೋಗಿ ಕಲಿತ್ತ ಕಾರಣ ಅದು ಒಳ್ಳೆ ಹೆಸರು ಒಳಿಶಿಗೊಂಡು ಬಯಿಂದು!

ಒಂದು ತಲೆಮಾರು ಮದಲಿಂಗೆ ಮಾಷ್ಟ್ರುಮಾವ° ಕಲಿವಗಳೇ ಹಾಂಗೆಡ.
ಕೆಲವೊರಿಶ ಮದಲೇ ಬೇಂಕಿನಪ್ರಸಾದ° ಕಲಿವಗಳೂ ಹಾಂಗೆಡ..
ಕಳುದೊರಿಶ ಬಿಂಗಿಪುಟ್ಟ° ಕಲಿವಗಳೂ ಹಾಂಗೆಡ..
ಇನ್ನು ಮುಂದಕ್ಕೂ ಹಾಂಗೇ ಇರ್ತಡ..
– ಹೆಚ್ಚಿನ ಎಲ್ಲ ಕ್ಲಾಸುಗಳಲ್ಲಿಯುದೇ ನಮ್ಮ ಭಾಷೆ ಧಾರಾಳಡ – ಹಾಂಗಾಗಿ ಒಪ್ಪಣ್ಣಂಗೂ ರಜ ಆ ಕೋಲೇಜು ಹೇಳಿರೆ ಕೊಶಿ!
~

ವಿದ್ಯಾಲಯ ಹೇಳಿರೆ ಅದೊಂದು ಹೊಳೆಯ ಹಾಂಗೆಡ..
ಅಲೆಅಲೆಯಾಗಿ ಬಪ್ಪ ಪ್ರವಾಹ ಹೊಸನೀರಿನ ತೆಕ್ಕೊಂಡೇ ಬಕ್ಕು!
ನೀರಿಲಿ ವಿದ್ಯಾರ್ಥಿಗಳೂ ಇಕ್ಕು, ಮಾಷ್ಟ್ರಕ್ಕಳೂ ಇಕ್ಕು, ಮೆನೇಜುಮೆಂಟುದೇ ಇಕ್ಕು!

ಎಲ್ಲ ದಿಕ್ಕಂಗುದೇ ಇದು ಅನ್ವಯಿಸುತ್ತು – ರಾಮಜ್ಜನ ಕೋಲೇಜಿಂಗುದೇ.

ಅಂದೊಂದು ಕಾಲಲ್ಲಿ ಸ್ವಂತ ಆಸ್ತಿಯ ಸ್ವತಃ ಅಡವು ಮಡಗಿ ಕೋಲೇಜು ಕಟ್ಟಿದ ರಾಮಜ್ಜ° ಈಗ ಪ್ರಾಯ ಆಗಿ ಮನೆಮಟ್ಟಿಂಗೆ ಇದ್ದವು,
ಹಾಂಗಾಗಿ ಕೋಲೇಜಿನ ಜೆಗಿಲಿಲಿ ಅವರ ಕಾಂಬಲೆ ಸಿಕ್ಕುದು ಕಮ್ಮಿ.
ಕಲಿತ್ತ ಮಕ್ಕೊಗೆ ಓದಲೆ ಹೇಳಿಗೊಂಡು ಹತ್ತೈವತ್ತು ಸಾವಿರ ಪುಸ್ತಕಂಗೊ ಇಪ್ಪ ಗ್ರಂಥಾಲಯವ ನಮ್ಮ ದೊಡ್ಡಗುರುಗಳೇ ಉದ್ಘಾಟನೆಮಾಡಿ ಕೊಟ್ಟಿದವಡ..
ಪಾಂಡಿತ್ಯದ ಹಳೇ ಮಾಷ್ಟ್ರಕ್ಕೊ – ಅರ್ತಿಕಜೆ ಅಜ್ಜ°, ಕಾರಂತ ಮಾಷ್ಟ್ರು, ಮೂಡಿತ್ತಾಯ° ಮಾಷ್ಟ್ರು, ದೋಸೆಮನೆ ಅಜ್ಜ° – ಅವು ಇವೆಲ್ಲ ರಿಟೇರ್ಡು ಹೇಳಿಗೊಂಡು ಮನೆಗೆ ಹೆರಟವು – ಅವರ ಜಾಗಗೆ ಕಪ್ಪು ತಲೆಕಸವಿನ ಜವ್ವನಿಗರು ಬಯಿಂದವು.
ಒಸ್ತ್ರ ಸುತ್ತುತ್ತ ಅಕೇರಿಯಾಣ ಮಾಷ್ಟ್ರ° ವೇದವ್ಯಾಸರುದೇ ಮೊನ್ನೆ ಟಾಟಾ ಹೇಳಿ ಬೆಳಿಒಸ್ತ್ರ ಮೇಲೆ ಕಟ್ಟಿಗೊಂಡು ಮನಗೆ ಹೆರಟವಡ!
ಕನ್ನಡ್ಕದ ಕಲ್ಮಡ್ಕತ್ತೆ ಪೆನ್ಶನು ಎಣುಸಿಗೊಂಡು ಬಾಳೆಕಾನದ ಮನೆ ಕೆಳಾಚಿ ತೋಡಕರೆಲಿ ಮನೆ ಮಾಡಿ ಕೂಯಿದವಡ!
ನೋಡಿಗೊಂಡು ಇದ್ದ ಹಾಂಗೇ ಅವು ಪುತ್ತೂರಿಲಿ ಕೂದು ಪುತ್ತೂರತ್ತೆ ಆದವಲ್ಲದೋ!
ಕೊಳಚ್ಚಿಪ್ಪುಬಾವಂಗೆ ಅವು ಕೋಲೇಜಿಂಗೆ ಹೋಪದೇ ಕಾಣ್ತಿಲ್ಲೆಡ!
ನಮ್ಮ ಭಾಷೆಯ ನಮ್ಮಷ್ಟೇ ಸಲೀಸಾಗಿ ಮಾತಾಡ್ತ ನೇಮಣ್ಣನ ಹಾಂಗಿರ್ತ ಪೀಯೊನುಗೊ ಸೈಕ್ಕಾಲು ಹಿಡ್ಕೊಂಡು ಮನಗೆ ಹೋಪಲೆ ಕಾದುನಿಂದಿದವು. ಈಗ ಸ್ಕೂಟ್ರು ತಪ್ಪ ಜಯರಾಮ ಅದರ ಜಾಗೆಲಿ ಕೆಲಸ ಮಾಡ್ತಡ.

ಹಾಂಗೆ, ನೆಟ್ಟುಮಾಡಿದ ಅಕೇಶಿಯ ಗುಡ್ಡೆಯ ಶ್ರೀರಾಮುಲುವಿನ ತಲೆಯ ಹಾಂಗೆ ಕಾಲಿ ಮಾಡಿ, ಅದರಲ್ಲಿ ಎಡಿಗಾದಷ್ಟು ಕೋಂಗ್ರೇಟು ಕಾಡು ನೆಟ್ಟವು – ಅಕೇಶಿಯಂದ ಹೆಚ್ಚು ಪಸಲು ಕೋಂಗ್ರೇಟು ಗೆಡುಗೊ ಕೊಡ್ತು ಹೇಳಿಯೋ ಏನೋ!
ಈಗ ಬೆಂಗುಳೂರಿನ ರಿಂಗು ರೋಡಿನ ಹಾಂಗಿರ್ತದು ಒಂದು ಮಾಡಿ, ಗುಡ್ಡೆತಲೆಲಿ ನಿಂದರೆ ಇಡೀ ಕೋಲೇಜುಗಳ ಜೆಗಿಲಿಗೊ ಕಾಣೆಕ್ಕು ಹೇಳಿ ಭಕ್ತರು ಹೇಳಿದ್ದಕ್ಕೆ ಬಾಕಿ ಒಳುದ ರಜ ಹಸುರುಬಲ್ಲೆಯನ್ನೂ ಗರ್ಪಿದವಡ!
ಪರಿಸರಭಕ್ತರು ನೋಡಿಯೇ ಬಾಕಿ!
ಅಲ್ಲಿ ಪ್ರಿನ್ಸುವಾಲ° ಕುರ್ಶಿಲಿ ಆರು ಕೂಪದು ಹೇಳ್ತದು ಅಂದಿಂದ ತಲೆಬೆಶಿ ಇತ್ತಡ, ಅಂತೂ ಇಂತೂ ಓ ಮೊನ್ನೆ ಮಾದವಟ್ರು ಕೂದವು.
– ಕೋಲೇಜು ಮೊದಲಾಣ ಹಾಂಗೇ – ಬಾರೀ ಲಾಯಿಕಲ್ಲಿ ನೆಡಗು ಹೇಳಿ ಎಲ್ಲೊರೂ ಮಾತಾಡಿಗೊಂಬಲೆ ಸುರು ಮಾಡಿದವು.
~

ಹಳೆಕಾಲದ ಹಾಂಗೆ ಕೆಲವೇ ಕೆಲವು ಪಾಟಂಗೊ ಅಲ್ಲ, ಈಗ ಹೊಸಹೊಸತ್ತು ಬಂದು ಸೇರಿಗೊಂಡಿದಡ..
ಸುರುವಿಂಗೆ ಪೀಯೂಸಿ (ಪ್ಲಸ್ಟೂ) ಕೋಲೇಜು ಮಾಡಿದ್ದವಲ್ಲದೋ –
ಅದಾದ ಮತ್ತೆ ಡಿಗ್ರಿ ಮಾಡೆಡದೋ – ಹಾಂಗೆ ಸುಮಾರು ವಿಶಯಲ್ಲಿ ಡಿಗ್ರಿ ಮಾಡೆಕ್ಕಾದ ಕೋರ್ಸುಗಳ ಕಟ್ಟಿದವು,
ಈಗಾಣ ಆಧುನಿಕ ವಿಶಯಂಗೊ ಸೇರಿಗೊಂಡ ಹಾಂಗೆ ಕೆಲವೆಲ್ಲ ಪಾಟಂಗೊ ಸುರು ಆಯಿದಡ!
ಕಾನೂನು ಕೋಲೇಜು ಒಂದರ ಕಟ್ಟಿದವು, ನಮ್ಮೋರಿಂಗೆ ನಂಬ್ರ ತೆಗೆತ್ತರೆ ಬೇಕಾರೆ ಹೇಳಿಗೊಂಡೋ ಯೇನೋ! 😉
ನಮ್ಮ ಮಕ್ಕೊ ಸಾರೋದ್ಧಾರ ಬೆಂಗುಳೂರಿಂಗೆ ಹೋಪ ಮೊದಲು ಇಂಜಿನಿಯರು ಆಯೆಕ್ಕಲ್ಲದೋ – ಹಾಂಗೆ ಇಂಜಿನಿಯರು ತಯಾರಪ್ಪಲೆ ಇಂಜಿನಿಯರು ಕೋಲೇಜು ಕಟ್ಟಿದವು.
– ಇದರ ಅಬಿವುರ್ದಿಯ ಬಗ್ಗೆ ಹೇಳಿಗೊಂಡು ಹೋದರೆ ಅದುವೇ ಒಂದು ಶುದ್ದಿ ಅಕ್ಕು.
ಸುಮಾರು ಹೊಸಹೊಸ ವೆವಸ್ತೆಗೊ, ಹೊಸ ಕೋಲೇಜುಗೊ, ಹೊಸ ಮಕ್ಕೊ, ಹೊಸ ಮಾಷ್ಟ್ರಕ್ಕೊ ಬತ್ತಾ ಇದ್ದವು, ಅದುವೇ ಒಂದು ಕೊಶಿ!
ದೇವರು ಒಳ್ಳೆ ಅನುಗ್ರಹ ಕೊಟ್ಟಿದವು ಆ ಕೋಲೇಜಿನ ಮೇಗೆ.
~

ಆ ಕೋಲೇಜಿಲಿ ನೂರಾರು ಮಾಷ್ಟ್ರಕ್ಕೊ ಇದ್ದವು, ಎಲ್ಲೊರುದೇ ಒಂದೊಂದು ವಿಶಯಲ್ಲಿ ಉಶಾರಿಯೇ. ಮಕ್ಕಳ ಅಬಿವುರ್ದಿಗೆ ಸಕಾಯ ಮಾಡುವೋರೇ!
ಮಕ್ಕೊಗೆ ಯೇವ ನಮುನೆ ಬೆಳವಲೆ ಮಾಷ್ಟ್ರಕ್ಕೊ ಬೇಕೋ – ಅದೇ ನಮುನೆ ಮಾಷ್ಟ್ರಕ್ಕೊ ಬೆಳವದು ಮಕ್ಕಳಿಂದಾಗಿ.
ನೇರವಾಗಿ, ಅತವಾ ಪರೋಕ್ಷವಾಗಿ ಮಕ್ಕಳೇ ಮಾಷ್ಟ್ರಕ್ಕೊಗೆ, ಮಾಷ್ಟ್ರಕ್ಕಳೇ ಮಕ್ಕೊಗೆ.
ಈ ಪರಸ್ಪರ ಅವಲಂಬನ ಇಂದು ನಿನ್ನೇಣದ್ದಲ್ಲ, ಗುರುಕುಲದ ಕಾಲದ್ದು!
ಮದಲಿಂಗೆ ಇಪ್ಪದು ಸರಿ, ಇಂದಿನಒರೆಂಗುದೇ ಅದು ಮುಂದರುದ್ದು ನಮ್ಮ ಭಾರತದ ಹೆಮ್ಮೆ.
~

ಅದೆಲ್ಲ ಇರಳಿ, ನಾವೆಂತರ ಮಾತಾಡ್ಳೆ ಹೆರಟದು ಹೇಳಿತ್ತುಕಂಡ್ರೇ:
ಆ ಕೋಲೇಜಿಲಿ ಒಬ್ಬ ಮಾಷ್ಟ್ರ° ಇದ್ದವು. ಕೋಲೇಜಿಲಿ ಇದ್ದವು ಹೇಳಿ ಅಷ್ಟೇ ಗೊಂತಿಪ್ಪದು. ಯೇವ ಕೋಲೇಜಿಲಿ ಹೇಳಿ ಒಪ್ಪಣ್ಣಂಗೆ ಅರಡಿಯ!
– ಬಿಂಗಿಪುಟ್ಟಂಗೆ ಸರೀ ಗೊಂತಿದ್ದು.
ಆ ಮಾಷ್ಟ್ರಂಗೆ ಮಕ್ಕಳ ಕಂಡ್ರೆ ವಿಶೇಷ ಮಮತೆ. ಉಶಾರಿಮಕ್ಕಳ ಕಂಡ್ರೆ ಇನ್ನೂ ಉಶಾರಿ ಮಾಡುವೊ° ಹೇಳಿ ಕಾಂಬದು.
ಪಾಪದ ಮಕ್ಕಳ ಕಂಡ್ರೆ ಇವರ ಕಲಿಶಿ ಬೆಳೆಶುವೊ° ಹೇಳಿ ಕಾಂಬದು.
ಮಕ್ಕೊಗೆ ಪೈಸಕ್ಕೆ ತತ್ವಾರ ಆದರೆ ಸ್ವಂತ ಗಿಸೆಂತ ಪೈಸೆ ತೆಗದು ಕೊಡ್ತದು – ಇದೆಲ್ಲ ನಿತ್ಯ ನಡೆತ್ತ ಸಂಗತಿ.
ಆದರೆ ಎಲ್ಲಿಯೂ, ಯೇವತ್ತಿಂಗೂ ಇದರ ಹೆರಂಗೆ ಗೊಂತು ಮಾಡುಸವು ಆ ಮಾಷ್ಟ್ರ°.
~
ಈಗ ಅಲ್ಲ, ಐದೊರಿಶ ಹಿಂದಾಣ ಸಂಗತಿ – ಒಂದು ವಿದ್ಯಾರ್ಥಿ – ಕಲಿವಲೆ ಒಳ್ಳೆ ಉಶಾರಿ ಇತ್ತಡ.
ಒರಿಶಕ್ಕೆ ನಲುವತ್ತು ಸಾವಿರವೋ – ಉಮ್ಮ, ಅಂತೂ ಒರಿಶಕ್ಕೆ ನಾಕೈದು ಕಂಡಿ ಪೈಸೆ ಸೊರುಗೆಕ್ಕಡ ಆ ಮಾಣಿ ಕಲಿತ್ತ ಪಾಟಕ್ಕೆ!
ಎಂತ್ಸರ ಮಾಡುತ್ಸು, ಮನಸ್ಸಿದ್ದು, ಪೈಸೆ ಇಲ್ಲೆ!
ಲೋನು ಸಿಕ್ಕಿದ್ದಿಲ್ಲೆ, ಮನೆಲಿ ಇಲ್ಲೆ, ನೆಂಟ್ರಪೈಕಿ ಕೇಳುವ ಹಾಂಗಿಲ್ಲೆ, ಪೈಸೆಕ್ಕಾರಂಗೊ ಮಾತಾಡುಸುತ್ತವಿಲ್ಲೆ – ಒಟ್ಟಾರೆ ಉಶಾರಿಮಕ್ಕೊಗೆ ಸಿಕ್ಕುತ್ತ ಸೀಟು ಸಿಕ್ಕಿದ್ದು, ಆದರೆ ಸೇರಿ ಕಲ್ತು ಮುಂದೆಬಪ್ಪಲೆ ಪೈಶೆ ಇಲ್ಲೆ! 🙁
ಚೆ, ಎಂತಾ ಪರಿಸ್ಥಿತಿ!
ರೂಪತ್ತೆಮಗಳಿಂಗೆ ತದ್ವಿರುದ್ಧ – ಪೈಸೆ ಇದ್ದು, ಆದರೆ ಮಾರ್ಕೂ ಇಲ್ಲೆ, ಮನಸ್ಸೂ ಇಲ್ಲೆ.. 😉
~

ಮನೆಲಿ ಇದ್ದಾ ಚಿನ್ನದ ಹೊಡಿಗಳ ಬೇಂಕಿಂಗೆ ಸೊರುಗಿ ಸುರೂವಾಣ ಒರಿಶದ ಪೈಸೆ ಕಟ್ಳೆತಕ್ಕ ಮಾಡಿದ° ಆ ಮಾಣಿ!
ಈ ಒರಿಶಕ್ಕೆ ಸರಿ, ಬಪ್ಪೊರಿಶ?
ಬೀಸುವ ದೊಣ್ಣೆಂದ ತಪ್ಪಿತ್ತನ್ನೆ, ಮತ್ತೆ ಒಳುದ್ದರ ನೋಡುವೊ° ಹೇಳಿ ಆ ಮಾಣಿ ಸೇರಿಯೇ ಬಿಟ್ಟ°!
~
ಸೇರಿದ ದಿನಂದಲೇ ಆ ಮಾಷ್ಟ್ರಂಗೆ ಈ ಮಾಣಿಯ ಕೊಶಿ ಆತಡ!
– ಇವನ ಬೆಳವಣಿಗೆ ಮೇಗೆ ಒಂದು ಕಣ್ಣು ಮಡಗಿಯೇ ಮಡಗಿತ್ತವಡ.

ಒಂದು ದಿನ ಮಾಣಿ ಆ ಮಾಷ್ಟ್ರನತ್ತರೆ ಮಾತಾಡ್ತ ಪರಿಸ್ಥಿತಿ ಬಂತು.
ಮಾಣಿ ಮನಬಿಚ್ಚಿ ಅವನ ಕಷ್ಟಸುಕಂಗಳ ಹೇಳಿದ°. ಕಲಿಯೆಕ್ಕು ಹೇಳ್ತ ಆಸೆ ಇಪ್ಪದು, ಕಲಿಯಲೆ ಎಡಿಯದ್ದೆ ಮನೆಲಿ ಕೂಪ ಯೋಚನೆ ಮಾಡಿದ್ದು, ಕೋಲೇಜಿಂದ ಸೀಟು ಸಿಕ್ಕಿದ್ದು, ಪೈಸೆ ಇಲ್ಲದ್ದು, ಚಿನ್ನಂಗಳ ಅಡವು ಮಡಗಿದ್ದು, ಹೊಸಡಕ್ಕೆಯ ಸೊಲುದು ಬರಗಿ ಪೀಸು ಕಟ್ಟಿದ್ದು – ಎಲ್ಲವುದೇ!
ಈ ಒರಿಶಕ್ಕೆ ಆತು, ಬಪ್ಪೊರಿಶಕ್ಕೆ ಎಂತದೋ! -ಹೇಳ್ತ ಅನಿಶ್ಚಿತತೆಯೂ ಆ ಮಾಣಿಯ ಮಾತಿಲಿ ಇದ್ದತ್ತು.
ಇಷ್ಟು ಕಷ್ಟ ಇದ್ದರೂ ಓದುತ್ತದು ಕಮ್ಮಿ ಮಾಡಿದ್ದನಿಲ್ಲೆ, ತೊಂಬತ್ತಕ್ಕೆ ಹತ್ತರೆ ಮಾರ್ಕು ಇತ್ತಡ, ಎಲ್ಲದರ್ಲಿದೇ!
ಮಾಣಿಯ ಪೂರ್ವಾಪರ ಪೂರ ಕೇಳಿದ ಮಾಷ್ಟ್ರಂಗೆ ಬಯಂಕರ ದುಕ್ಕ ಬಂತು!

ಕಷ್ಟಲ್ಲಿರ್ತ ಮಾಣಿಯಂಗೊಕ್ಕೆ ಸಕಾಯ ಮಾಡದ್ದ ಮನಿಶ° ಎಂತಕಿಪ್ಪದು ಹೇಳಿ ಕಂಡತ್ತೋ ಏನೋ –
ಇನ್ನು ಮುಂದಾಣ ವಿದ್ಯಾಭ್ಯಾಸ ಪೂರ ಎನ್ನ ಕರ್ಚು ಮಾಣಿ – ಹೇಳಿದವಡ ಆ ಮಾಷ್ಟ್ರ°.
ಸುರವಿಂಗೆ ನಾಚಿಗೆಲಿ ಬೇಡಾಳಿ ಕಂಡ್ರುದೇ – ಮತ್ತೆ ಆ ಮಾಣಿ ಒಪ್ಪಿಗೊಂಡ°.
ಕಲ್ತು ಕೆಲಸ ಸಿಕ್ಕಿದ ಮತ್ತೆ ತೀರುಸುವ ಮಾತಾತು.
ಮುಜುಗರ, ನಾಚಿಗೆ, ಕೊಶಿ – ಎಲ್ಲವೂ ಆಯ್ಕೊಂಡು ಮಾಷ್ಟ್ರನ ಕೋಣೆಂದ ಹೆರ ಬಂದ°.
~
ಅಲ್ಲಿಂದ ಮತ್ತೆ ಆ ಮಾಣಿಯ ಪೀಸು, ಪುಸ್ತಗ, ಅದು ಇದು – ವಿದ್ಯಾಭ್ಯಾಸದ ಸಮಸ್ತ ಭಾರವನ್ನೂ ಆ ಮಾಷ್ಟ್ರನೇ ಹೊತ್ತದು.
ಪೈಸೆ ಹೊಂದುಸುತ್ತ ತಲೆಬೆಶಿ ಇಲ್ಲದ್ದೆ ಆರಾಮಲ್ಲಿ, ಮಾನಸಿಕ ನೆಮ್ಮದಿಲಿ ಮಾಣಿ ಕಲ್ತುಬಿಟ್ಟ°!
ಮೊದಲಿಂದಲೂ ಹೆಚ್ಚಿಗೆ ಮಾರ್ಕು ಬಂತು!!
ಯಶಸ್ವಿಯಾಗಿ ಮಾಣಿಯ ವಿದ್ಯಾಭ್ಯಾಸ ಆತು. ಒಳ್ಳೆತ ಮಾರ್ಕುದೇ ಬಂತು.
~

ಆ ಉಪಕಾರ ಸ್ಮರಣೆಯ ಮಾಣಿಯೂ ನೆಂಪು ಮಡಗಿದ್ದ°.
ಪ್ರತಿ ಪರೀಕ್ಷೆಯ ಪಲಿತಾಂಶವನ್ನುದೇ ತಪ್ಪದ್ದೆ ಹೇಳಿಗೊಂಡಿತ್ತಿದ್ದ°.
ಅಡಿಮರೆಯದ್ದೆ ನೆಂಪಿಲಿ ತನ್ನ ಜೆವಾಬ್ದಾರಿಯ ಗಮನುಸಿಗೊಂಡು, ಉಶಾರಿಮಾಣಿಯಾಗಿ ಕಲ್ತುಗೊಂಡು ಇತ್ತಿದ್ದ°.
ಕಳುದೊರಿಶ ಆ ಮಾಣಿಗೆ ಕಲ್ತಾತು.
ಕೋಲೇಜಿಂಗೆ ಈಗ ಕಂಪೆನಿಗೊ ಬತ್ತವಡ , ಹಾಂಗೆ ಕಂಪೆನಿಗೊ ಬಂದು ಉಶಾರಿ ಮಕ್ಕಳ ಹೆರ್ಕಿ, ತೆಕ್ಕೊಂಡೋವುತ್ತವಡ. ಅಲ್ಲದೋ?
ಹಾಂಗೆ ಈ ಮಾಣಿಯನ್ನೂ ಹೆರ್ಕಿದವಡ.
ಆದರೆ ಈ ಮಾಣಿ – ಆನು ಈ ಕೋಲೇಜಿಲೇ ಮಾಷ್ಟ್ರ° ಆಗಿ ಕೆಲಸ ಮಾಡ್ತೆ – ಹೇಳಿ ತನ್ನ ಕೃತಜ್ಞತೆಯ ತೋರುಸಿದನಡ.

ಬೆಂಗುಳೂರಿಂಗೆ ಹೋಗಿದ್ದರೆ ಆ ಮಾಷ್ಟ್ರನ ಸಾಲ ಬೇಗ ತೀರ್ತಿತು.
– ಸಾಲ ಬೇಗ ತೀರ್ತಿತು, ಆದರೆ ಮಾಷ್ಟ್ರನ ವೃತ್ತಿಯ ಸಾರ್ಥಕ್ಯ ಸಿಕ್ಕುತಿತಿಲ್ಲೆ.
ಆ ಮಾಣಿಗೆ ಆ ಕೋಲೇಜಿಲಿ ಮಾಷ್ಟ್ರ° ಆಗಿ, ಇವನ ಹಾಂಗೇ ಇರ್ತ ಕೆಲವು ಮಕ್ಕಳ ಹುಡ್ಕಿ ಕಲಿಶಿ ಬೆಳೆಶೆಕ್ಕು ಹೇಳ್ತದು ಯೋಚನೆ.
~
ಬಿಂಗಿಪುಟ್ಟ° ಆ ಮಾಣಿಯ ಕಷ್ಟಂಗಳ ತುಂಬ ಚೆಂದಕೆ ವಿವರುಸಿದ°
– ರಜ ರಜ ಸೊಂತ ಅನುಬವವೂ ಇದ್ದಲ್ಲದೋ.
ಹಾಂಗೆ ಅವ° ಹೇಳುವಗ ಮಾಷ್ಟ್ರನ ಬಗೆಗೆ ಅಭಿಮಾನ ಬಂದುಗೊಂಡಿದ್ದದು ಕಂಡತ್ತು.
~
ಹೇಳಿದಾಂಗೆ,
ಈ ಮಾಷ್ಟ್ರ ಆ ಮಾಣಿಯ ಇಂಜಿನಿಯರು ಕಲುಶಿದ ಶುದ್ದಿ ಹೆರ ಆರಿಂಗೂ ಗೊಂತಿಲ್ಲೆ ಆತೋ.
ಕಲಿವಿಕೆ ಮುಗಿವನ್ನಾರ ಇಬ್ರುದೇ ಆರ ಹತ್ತರೆಯೂ ಹೇಳಿದ್ದವಿಲ್ಲೆ.
– ಹೇಳುಲಾಗ ಹೇಳಿ ಮಾಷ್ಟ್ರನೇ ಹೇಳಿತ್ತಿದ್ದವಡ!
~
ಈಗಾಣ ಕಾಲಲ್ಲಿಯೂ ಇಂತೋರು ಇದ್ದವೋ?
ಒಂದು ಸಣ್ಣ ಐದುಪೈಸೆ ಉಪಕಾರ ಮಾಡಿ ಊರುತುಂಬ ಹೇಳಿಗೊಂಡು ಬಪ್ಪವು ಇಪ್ಪದು ಈಗ.
ಇನ್ನೊಬ್ಬಂಗೆ ಕಷ್ಟಕಾಲಲ್ಲಿ ಮಾಡಿದ ಉಪಕಾರವ ಸಾವನ್ನಾರ ಊರಿಂಗಿಡೀ ಹೇಳಿಗೊಂಡು ಬಪ್ಪವಕ್ಕೆ ಆ ಮಾಷ್ಟ್ರ° ಮಾದರಿ ಅಲ್ಲದೋ?
ವಿದ್ಯಾದಾನ ಮಹಾದಾನ – ಹೇಳ್ತದು ನಮ್ಮ ಸಂಪ್ರದಾಯ.
ಅದರ ಮಾಡಿತೋರುಸಿದ ಈ ಮಾಷ್ಟ್ರನ ನಾವೆಲ್ಲ ನೆಂಪು ಮಡಿಕ್ಕೊಂಬ.

~
ಒಂದು ದೀಪಲ್ಲಿ ಇನ್ನೊಂದು ದೀಪವ ಹೊತ್ತುಸಿರೆ, ಎರಡು ದೀಪಕ್ಕೂ ಏನೂ ನಷ್ಟ ಇಲ್ಲೆ!
ಬೆಣಚ್ಚು ಲಾಭವೇ ಅಪ್ಪದು –
ಒಳ್ಳೆ ಮಕ್ಕೊಗೆ ಒಳ್ಳೆ ಮಾಷ್ಟ್ರಕ್ಕೊ ಸಿಕ್ಕಿಯೇ ಸಿಕ್ಕುತ್ತವು.
ಒಳ್ಳೆ ಮಾಷ್ಟ್ರಕ್ಕೊಗೆ ಒಳ್ಳೆ ಮಕ್ಕೊ ಸಿಕ್ಕಿಯೇ ಸಿಕ್ಕುಗು! – ಹೇಳಿದವು ಹತ್ತರೆಯೇ ಕೂದಿದ್ದ ಮಾಷ್ಟ್ರುಮಾವ°.
~

ಆಗಲಿ ಆ ಮಾಣಿ ಮಾಷ್ಟ್ರ° ಆಗಿ, ಇನ್ನೂ ಹೆಚ್ಚು ಹಣತೆಗಳ ಹೊತ್ತುಸಲಿ.
ಮಾಣಿಗೂ, ಮಾಷ್ಟ್ರಂಗೂ, ನವಗೂ, ಎಲ್ಲೊರಿಂಗೂ ದೇವರು ಒಳ್ಳೆದು ಮಾಡ್ಳಿ.
ರಾಮಜ್ಜನ ಕೋಲೇಜು ಇನ್ನೂ ಅಂತಾ ನೂರಾರು ಜವ್ವನಿಗರ ಸಮಾಜಕ್ಕೆ ಕೊಡ್ಳಿ.
ಅಲ್ಲದೋ?

ಒಂದೊಪ್ಪ: ದಾನ ಮಾಡೆಕ್ಕಾರೆ ಅನುಕೂಲ ಮುಖ್ಯ ಅಲ್ಲ, ಮನಸ್ಸು ಮುಖ್ಯ.

ಸೂ: ಮಾಣಿಯ ಹೆಸರುದೇ, ಮಾಷ್ಟ್ರನ ಹೆಸರುದೇ ಮರದ್ದು ಭಾವ! 🙂

27 thoughts on “ಕೋಲೇಜಿನ ಮಾಷ್ಟ್ರ° ಇಂಜಿನಿಯರು ಕಲುಶಿದ ಶುದ್ದಿ..

  1. ಒಳ್ಳೆಯ ಮಾಷ್ಟ್ರಕ್ಕೊ ಮಾಂತ್ರ ಅಲ್ಲ,ಹಂಗಿಪ್ಪವು ಕೆಲವು ಜೆನ ಇದ್ದವು,ಎಂಗಳ ಅನಂತ ಇಲ್ಲೆಯೋ,ವರ್ಷಲ್ಲಿ ಒಂದೆರಡು ಮಕ್ಕಳ ಖರ್ಚನ್ನ್ನಾದರೂ ನೋಡಿಯೊಳದ್ದರೆ ಅವಂಗೆ ಒರಕ್ಕು ಬತ್ತಿಲ್ಲೆ.ಹಾಂಗೆ ಹೇಳಿ ಈ ವಿಷಯ ಆರಿಂಗೂ ಗೊಂತೂ ಇಲ್ಲೆ.ನವಗೆ ಎಡಿಗಾದಷ್ಟು ಮಕ್ಕೊಗೆ ಯಾವದೇ ರೀತಿಲಿಯಾದರೂ ಸಹಾಯ ಮಾಡಿರೆ ಊರು ಉದ್ಧಾರ ಅಕ್ಕು.

  2. ಓಹ್, ಕೇರಳ ರಾಜ್ಯ ಮಟ್ಟಲ್ಲಿ ಇಂಜಿನಿಯರಿಂಗಿಲ್ಲಿ ನಿನಗೆ ರೇಂಕು ಬಂದಿದ್ದಿದ್ದ ಸುದ್ದಿ ಕೇಳಿ ಕೊಶೀ ಆತು. ಹೃತ್ಪೂರ್ವಕ ಅಭಿನಂದನೆಗೊ. ಅಷ್ಟು ಸೌಕರ್ಯ ಇಲ್ಲದ್ರೂ ಕಷ್ಟಲ್ಲಿ ಕಲ್ತು ರೇಂಕು ಬಂದ ಈ ವಿಷಯವ ಬೈಲಿಲ್ಲಿ ಗೊಂತಿಲ್ಲದ್ದವಕ್ಕೆ ತಿಳುಸಿಕೊಟ್ಟದು ನಿನ್ನ ಅಧಿಕ ಪ್ರಸಂಗ ಖಂಡಿತಾ ಅಲ್ಲ. ಒಳ್ಳೆ ವಿಷಯಂಗಳ ತಿಳಿತ್ತದು, ತಿಳುಸುತ್ತದು ನಿಜವಾಗಿಯೂ ಒಳ್ಳೆದೇ. ಆ ಮಲೆಯಾಳಿ ನಂಬೂದಿರಿ ಲೆಕ್ಚರರ್ ಒಳ್ಳೆ ಕೆಲಸ ಮಾಡಿದ. ಈಗಳುದೆ ಅಂತಹ ಹಲವಾರು ಜೆನ ಮಹಾನುಭಾವಂಗೊ ಇರ್ತವು. ಇದ್ದವು.

    1. ಅಭಿನ೦ದನೆಗೆ ಧನ್ಯವಾದ೦ಗೊ. ಆದರೆ ಇಲ್ಲಿ ಅದಕ್ಕಿ೦ತಲೂ ಪ್ರಾಮುಖ್ಯತೆ ಅವರ ಒಳ್ಳೆತನಕ್ಕೆ ಅಲ್ಲದೊ ಮಾವಾ..

  3. ಶ್ರೀ ಗುರುಭ್ಯೋ ನಮಃ
    ಆನು ಎನ್ನ ಇ೦ಜಿನಿಯರಿ೦ಗ್ ಮಾಡಿದ್ದದು ಕೇರಳದ ಒ೦ದು ಕೋಲೇಜಿಲ್ಲಿ. ಆನು ಕಲಿತ್ತಾ ಇಪ್ಪಗಳುದೆ ಎ೦ಗೊ ಭಾರೀ ಸೌಕರ್ಯಲ್ಲಿ ಎ೦ತ ಇತ್ತಿದ್ದಿಲ್ಲೆ. ಆನು ಅದರ ಎಲ್ಲಿಯುದೆ ತೋರಿಸಿಗೊ೦ಡು ಕೂಡಾ ಇತ್ತಿದ್ದಿಲ್ಲೆ. ಆದರುದೆ ನವಗೆ ಎ೦ತ ಮಾಡ್ಳು ನಿವೃತ್ತಿ ಇಲ್ಲದ್ದ್ದ ಕೆಲವು ಸ೦ದರ್ಭ೦ಗಳಲ್ಲಿ ನಾವು ಎಷ್ಟು ಮುಚ್ಚಿ ಮಡುಗಿಯೊ೦ಡರುದೆ ಕೆಲವು ಸರ್ತಿ ಅದು ಹೆರಬೀಳ್ತಲ್ಲದಾ.. ಹಾ೦ಗೆ ಎನ್ನ ಪರಿಸ್ಥಿತಿ ಒ೦ದರಿ ಎನ್ನ ಲೆಕ್ಚರರ್ (ಒಬ್ಬ ಮಲಯಾಳಿ ನ೦ಬೂದಿರಿ) ಕ೦ಡು ಹಿಡುದವು. ಅವು ಎನಗೆ ನೇರವಾಗಿ ಪೈಸೆ ಕೊಟ್ಟು ಸಹಾಯ ಮಾಡದ್ರುದೆ ಎನಗೆ ಕೆಲಸ ಮಾಡ್ಳೆ ಹಲವು ಅವಕಾಶ ಮಾಡಿ ಕೊಡ್ಳೆ ಸುರು ಮಾಡಿದವು. ರಜಾದಿನ೦ಗಳಲ್ಲೂ, ಶನಿವಾರ, ಆದಿತ್ಯವಾರ೦ಗಳಲ್ಲೂ ಎನಗೆ ಹಲವು ಪ್ಲಾನು ಬರೆತ್ತ, ಎಸ್ಟಿಮೇಶನ್ ಮಾಡ್ತ, ಸರ್ವೇ ಮಾಡ್ತ ಕೆಲಸ೦ಗಳ ಹಿಡುದು ಕೊಟ್ಟವು. (ಆನು ಅದರ ಮೊದಲು ಇದೇ ಇ೦ಜಿನಿಯರಿ೦ಗ್ ವಿಶಯಕ್ಕೆ ಸ೦ಬ೦ಧಪಟ್ಟ ೨ ವರ್ಶದ ಕೋರ್ಸ್ ಮಾಡಿತ್ತಿದ್ದೆ) ಎನಗೆ ಅವು ಮಾಡ್ತ ಸಕಾಯವುದೆ ಆರ ಹತ್ರುದೆ ಹೇಳಿದ್ದವಿಲ್ಲೆ. ಆನು ಇ೦ಜಿನಿಯರಿ೦ಗ್ ಕಲಿತ್ತ ಸಮಯಲ್ಲಿ ಒ೦ದೇ ಒ೦ದು ಪಾಠ ಪುಸ್ತಕ ಕೂಡ ಕ್ರಯಕೊಟ್ಟು ತೆಗದ್ದದಿಲ್ಲೆ. ಲೈಬ್ರರಿಲಿ ಎನಗೆ ಸಿಕ್ಕದ್ದ ಪುಸ್ತಕ೦ಗಳ ಕೂಡ ಅವು ಎನಗೆ ಸ೦ಗ್ರಹಿಸಿ ಕೊಟ್ಟ೦ಡಿತ್ತಿದ್ದವು. ಆನು ಕೇರಳ ರಾಜ್ಯ ಮಟ್ಟಲ್ಲಿ rank ಬ೦ದದಕ್ಕೆ ಎನ್ನ ಪ್ರಯತ್ನ ಎಷ್ಟಿದ್ದೋ ಅವರ ಆಶೀರ್ವಾದವುದೆ, ಸಕಾಯವುದೆ ಅಷ್ಟೇ ಕಾರಣ. ಎನಗೆ rank ಬ೦ತು ಹೇಳಿ ಎಷ್ಟೋ ದಿಕ್ಕೆ ಸಿಕ್ಕಿದ ಸಮ್ಮಾನ೦ಗಳಿ೦ದಲುದೆ ಎನಗೆ ಹೆಚ್ಚು ಬೆಲೆಬಾಳುವದು ಎನಗೆ rank ಸಿಕ್ಕಿದಮತ್ತೆ ಸುರೂಗಾಣ ಸರ್ತಿ ಅವು ಎನ್ನ ಕ೦ಡಪ್ಪಗ ಅವರ ಕಣ್ಣಿಲ್ಲಿ ಕ೦ಡ ಆನ೦ದಭಾಷ್ಪ.. ಬೇರೆ ಯಾವ ಸಮ್ಮನವುದೆ ಅದರಷ್ಟು ಬೆಲೆಬಾಳ.. ಎನ್ನ್ನ ವಿದ್ಯಾಭ್ಯಾಸ ಮುಗುದ ಮತ್ತೆ ಅವರ ಅದೇ ಸ೦ಸ್ಥೆಲಿ ಎನ್ನ ಯೋಗ್ಯತೆಗೆ ಹೊ೦ದುತ್ತ ಕೆಲಸ ಕೇಳ್ಳೆ ಹೋದಪ್ಪಗ management ನವು ಡೊನೇಷನ್ ಕೇಳಿದವು, ನಮ್ಮ ಹತ್ತರೆ ಪೈಸೆ ಎಲ್ಲಿದ್ದು? ಈ ಗುರುಗೊ ಎನಗೆ ಮಾ೦ತ್ರ ಅಥವಾ ನಮ್ಮವಕ್ಕೆ ಮಾ೦ತ್ರ ಅಲ್ಲ ಹೀ೦ಗೆ ಸಕಾಯ ಮಾಡುವದು (ಅದುದೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ್ದೆ) ಕಲಿವಲೆ ಮನಸ್ಸು ಇಪ್ಪ, ಆದರೆ ಅದಕ್ಕೆ ಬೇಕಾದ ಆರ್ಥಿಕ ಪರಿಸ್ಥಿತಿ ಇಲ್ಲದ್ದ ಎಷ್ಟೋ ಜನಕ್ಕೆ ಈಗಳುದೆ ಎಲೆಮರೆಯ ಕಾಯಿಯಾಗಿ ಸಕಾಯ ಮಾಡ್ತಾ ಇದ್ದವು. ಅವರ ಚರಣಾರವಿ೦ದ೦ಗೊಕ್ಕೆ ಎನ್ನ ಸಾಷ್ಟಾ೦ಗ ಪ್ರಣಾಮ೦ಗೊ. ಹಾ೦ಗಿರ್ತ ಎಷ್ಟೋ ಜನ೦ಗೊ ಈಗಳುದೆ ಇಪ್ಪ ಕಾರಣವೇ ಇಷ್ಟಾದರೂ ಮಳೆ, ಬೆಳೆ ಆವ್ತಾ ಇಪ್ಪದು.
    ಈ ಶುದ್ದಿಯ ಓದಿಯಪ್ಪಗ ಈ ಗುರುಗಳ ವಿಶಯವ ಬೈಲಿಲ್ಲಿ ಹ೦ಚಿಗೋಳೆಕು ಹೇಳಿ ತೋರಿತ್ತು.. ಅಧಿಕ ಪ್ರಸ೦ಗ ಆಯಿದಿಲ್ಲೆ ಹೇಳಿ ತೋರ್ತು ಅಲ್ಲದಾ.. 🙂

    1. ಗಣೇಶ ಭಾವ,ಒಳ್ಳೆ ಒಪ್ಪ ಕೊಟ್ಟಿ .ಒಪ್ಪಣ್ಣನ ಲೇಖನಕ್ಕೆ ಪೂರಕವಾಗಿ ಇದ್ದು.ಇಂದು ಒಳ್ಳೆ ಜೆನ ಕಮ್ಮಿ ಆದ ಕಾರಣ ಅಕಾಲಲ್ಲಿ ಮಳೆ ಬಂದು ತೊಂದರೆ ಬಪ್ಪದೋ ಹೇಳಿ ಗ್ರೇಶಿತ್ತಿದ್ದೆ. ಅಲ್ಲ,ಒಳ್ಳೆ ಜೆನ ಎಲೆಮರೆಯ ಕಾಯಿ ಆಗಿದ್ದವು ಗೆಳೋದು ಸತ್ಯ.

  4. Naavu havyakaru ondu education fund suru maadidare kashtallippavakke upayoga akku. Baddi illadde saala koduva vyavasthe maadekku. Odi kelasa sikkida matte hana vaapasu fundinge koduva hange ireku. Adarinda tumba janakke upakara akku. Aanu pyse kodle tayaridde.

  5. ಕೋ ಗುರುಃ? (ಗುರು ಹೇಳಿರೆ ಆರು?)
    ಶಿಷ್ಯಹಿತಾಯ ಉದ್ಯತಃ ಸತತ೦ (ಶಿಷ್ಯರ ಹಿತಕ್ಕಾಗಿ ಯಾವಾಗಳೂ ತನ್ನ ತೊಡಗಿಸಿಯೊ೦ಡವ) ಹೇಳಿ ಶ೦ಕರಾಚಾರ್ಯರು ಹೇಳಿದ್ದವಡ.

    ಶಿಕ್ಷಕ ನಿಜವಾದ ಅರ್ಥಲ್ಲಿ ಶಿಕ್ಷಕ ಅಪ್ಪದು ಅವನ ಜೀವನವೇ ಶಿಷ್ಯರಿ೦ಗೆ ಒ೦ದು ಪಾಠದ ಹಾ೦ಗೆ ಸಿಕ್ಕಿರೆ ಅಡ (ಕಲಾ೦ ಮಾಷ್ಟ್ರ ಭಾಷಣಲ್ಲಿ ಕೇಳಿದ್ದದು)

    ಇದಕ್ಕೆರಡಕ್ಕೂ ಒ೦ದು ಒಳ್ಳೆ ಉದಾಹರಣೆ ಸಿಕ್ಕಿದ ಹಾ೦ಗೆ ಆತು ಒಪ್ಪಣ್ಣ!

  6. ಒಪ್ಪಣ್ಣ, ವಿದ್ಯಾದಾನ ಮಹಾದಾನ ಹೇಳಿ ನೀನು ಉಲ್ಲೇಖ ಮಾಡಿದೆ. ನಿಜವಾದ ಮಾತು.
    ವಿದ್ಯೆ ದಾನ ಮಾಡಿದಷ್ಟೂ ಹೆಚ್ಚುದಡ್ಡ. ಅದರಲ್ಲಿಯೂ ಮಾಷ್ಟ್ರಕ್ಕೊಗೆ ಅದು ಕೊಟ್ಟು ಮುಗಿಯದ್ದಷ್ಟು ಅಕ್ಷಯ ಪಾತ್ರೆಯ ಹಾಂಗೆ ಆವುತ್ತಡಪ್ಪ. ಅನುಭವದವ್ವು ಹೇಳ್ತ ಮಾತು. ನಮ್ಮ ಮಾಷ್ಟ್ರುಮಾವನ ನೋಡಿ ಅಪ್ಪಗ ಅದು ಸತ್ಯವೇ ಹೇಳಿ ಆವುತ್ತು.
    ಈ ವಾರದ ಶುದ್ದಿಲಿ ಬಪ್ಪ ರಾಮಜ್ಜನ ಕೋಲೇಜಿಲಿ ಮಾಂತ್ರ ಹೀಂಗಿಪ್ಪ ಮಾಷ್ಟ್ರಕ್ಕೋ ಸಿಕ್ಕುಗಿದಾ. ಮತ್ತೆ ಎಲ್ಲಿಯಾದರೂ ಕೆಲವು ಸರಕಾರೀ ಶಾಲೆಗಳಲ್ಲಿ ಇಕ್ಕು ಹೀಂಗೇ ಇಪ್ಪ ಮಾಷ್ಟ್ರಕ್ಕ. ಅವಕ್ಕೆ ಸಿಕ್ಕುವ ನಿಗಧಿತ ಸಂಬಳಲ್ಲಿ, ಅವರ ಕರ್ಚುಗೋ ಅಲ್ಲದ್ದೆ, ಕೆಲವು ಮಕ್ಕಳ ಜವಾಬ್ದಾರಿ ವಹಿಶುಗು.

    ರಾಮಜ್ಜನ ಕೊಲೇಜಿಲಿ ಕೆಲವು ಜೆನ ಮಾಷ್ಟ್ರಕ್ಕಳ ಕಂಡು, ಕೇಳಿ ಗೊಂತಿದ್ದು. ಅವರ ಬಾಯಿಲಿ ಅವ್ವಾಗಿ ಹೇಳದ್ದರೂ ನೆನಪ್ಪಿಸಿಗೊಂಬ ಮಾಕ್ಕೋ ಇದ್ದವು. ಹಾಂಗಾಗಿ ಗೊಂತಪ್ಪದು. ಒಬ್ಬರು ಮೊನ್ನೆ ಒಂದು ಕತೆ ಹೇಳಿದವು. ಒಂದು ಕೂಸು, ಮನೆಲಿ ಕಲಿಶುವ ತಾಕತ್ತು ಇಲ್ಲದ್ದ ಮನೆದು. ಒಂದು ಆಶ್ರಮದ ಹಾಂಗೆ ಇರ್ತ ಒಂದು ದಿಕ್ಕೆ ಇರ್ತು, ಅದು ಪೈಸೆ ಹಾರ್ಸುತ್ತು ಹೇಳಿ ಬಾಕಿದ್ದೋರ ದೂರು. ಆರೂ ಅದರ ಹತ್ತರೆ ಕೇಳಿದ್ದವಿಲ್ಲೇ, ಒಂದು ದಿನ ರಾಮಜ್ಜನ ಶಾಲೆಯ ಒಬ್ಬ° ಮಾಷ್ಟ್ರ° ಅಲ್ಲಿಗೆ ಯಾವಾಗಲೂ ಧರ್ಮಾರ್ಥ ಕಲಿಶುಲೇ ಹೋಗಿಯೊಂಡಿದ್ದೋನು, ಆ ಕೂಸಿನ ಹತ್ತರೆ ಮಾತಾಡಿ ಅದರ ವಿಶ್ವಾಸಕ್ಕೆ ತೆಕ್ಕೊಂಡು ಕೇಳಿದಾಡ. ನೀನು ಪೈಸೆ ಎಂತಕ್ಕೆ ‘ತೆಕ್ಕೊಂಬದು’ ಬಾಕಿದ್ದ ಮಕ್ಕಳದ್ದು ಹೇಳಿ? ಅಂಬಗ ಆ ಕೂಸು ಹೇಳಿತ್ತಡ್ಡ, ಎಂಗಳ ಶಾಲೆಲಿ ಕಲಿಯುವಿಕೆಗೆ ಸಂಬಂಧಿಸಿ, ಎನ್ನ ಕುತೂಹಲವ ತಣಿಶುಲೆ ಇಪ್ಪಂಥಾ ಕ್ಲಾಸ್ ಗೋ ಆವುತ್ತು. ಆದರೆ ಅದಕ್ಕೆ ಕೊಡ್ಲೆ ಎನ್ನ ಹತ್ತರೆ ಪೈಸೆ ಇರ್ತಿಲ್ಲೆ. ಅದಕ್ಕೆ ಇಲ್ಲಿ ಪೈಸೆ ಇಪ್ಪೋರ ಹತ್ತರಂದ ತೆಗೆತ್ತೆ ಹೇಳಿತ್ತಡ್ಡ. ಇದರ ಕೇಳಿ ಮಾಷ್ಟ್ರಂಗೆ ಬೇಜಾರಾಗಿ, ಶಾಲೆಗೆ ಹೋಗಿ ವಿಚಾರ್ಸಿ ಅಪ್ಪಗ ಆ ಕೂಸು, ಶಾಲೆಲಿ ನಡದ ಎಲ್ಲಾ ವಿಶೇಷ ಕ್ಲಾಸ್ ನ್ಗೆ ಹೋದ್ದದು ಅಪ್ಪು ಹೇಳಿ ಆತಡ್ಡ. ಮಾಷ್ಟ್ರ° ಕೂಡ್ಲೇ ಆ ಕೂಸಿನ ವಿದ್ಯಾಭ್ಯಾಸದ ಖರ್ಚಿನ ವಹಿಶಿಗೊಂಡು, ಅದಕ್ಕೆ ಕಲಿವಲೆ ಬೇಕಾದ್ದದಕ್ಕೆ, ಅದರ ಕ್ಲಾಸ್ ನ ಸಂಬಂಧಪಟ್ಟವಕ್ಕೆ ಪೈಸೆ ಎತ್ತುಸಿ ಆ ಕೂಸು ಕಲಿವ ಏರ್ಪಾಟು ಮಾಡಿದಡ್ಡ. ನಂತರ ನಡದ ಎಲ್ಲಾ ಪರೀಕ್ಷೇಲಿ ಅದು ಒಳ್ಳೆ ಮಾರ್ಕು ತೆಗದ್ದಡ್ಡ . ಈ ವರ್ಷ ಹತ್ತನೆಲಿ ಇದ್ದಡ್ಡ ಆ ಕೂಸು. ಆ ಕೂಸಿನ ಮುಂದಾಣ ದಾರಿಯೂ, ಈ ಮಾಣಿಯ ಹಾಂಗೆ ಬೆಳಗಲಿ ಅಲ್ಲದಾ? ಅದುದೆ ಉಪಕಾರ ಮಾಡಿದ ಮಾಷ್ಟ್ರನ ಮರೆಯದ್ದೆ ಇರಲಿ ಹೇಳಿ ಹಾರೈಕೆ.
    ಇದು, ಬರೇ ಮಾಷ್ಟ್ರಕ್ಕೋ ಮಾಂತ್ರ ಅಲ್ಲ ನಮ್ಮ ಎಲ್ಲೋರ ಒಂದು ಆದ್ಯತೆ ಆಯೆಕ್ಕು ಕಲಿವ ಆಸಕ್ತಿ ಇದ್ದು, ಕಲಿವಲೆ ಕಷ್ಟ ಇಪ್ಪ ಮಕ್ಕೊಗೆ ಅವರ ದಾರಿ ಸುಗಮ ಮಾಡಿ ಕೊಡುದು. ಒಪ್ಪಣ್ಣ ಹೇಳಿದ ಹಾಂಗೆ, ಒಂದು ದೀಪಂದ ಇನ್ನೊಂದು ದೀಪ ಹೊತ್ತುಸಿದರೆ ಬೆಣಚ್ಚು ಲಾಭ ಹೇಳಿ.
    ದೀಪಂದ ದೀಪ ಹೊತ್ತುಸಿ ನಮ್ಮ ಸುತ್ತ ಜ್ಞಾನದ ಜ್ಯೋತಿಗ ತುಂಬಿ ಸಮಾಜ ಬೆಳಗಿದರೆ ಎಲ್ಲೋರಿಂಗೂ ಹೆಮ್ಮೆ ಅಲ್ಲದಾ?
    ಆ ಜ್ಯೋತಿಯ ಪ್ರಭೆಲಿ ಭಾರತ ಬೆಳಗಲಿ.
    ಒಂದೊಪ್ಪ ಲಾಯ್ಕಾಯಿದು. ದಾನ ಮಾಡೆಕ್ಕಾದರೆ ಅನುಕೂಲ ಮುಖ್ಯ ಅಲ್ಲ ಮನಸ್ಸು ಬೇಕಪ್ಪದು. ಉಪಕಾರದ ಮನಸ್ಸು ಇದ್ದಪ್ಪಗ ಅನುಕೂಲ ತನ್ನಿಂತಾನೆ ಆವುತ್ತು.

  7. [ಇನ್ನು ಮುಂದಾಣ ವಿದ್ಯಾಭ್ಯಾಸ ಪೂರ ಎನ್ನ ಕರ್ಚು ಮಾಣಿ – ಹೇಳಿದವಡ ಆ ಮಾಷ್ಟ್ರ°
    ಆನು ಈ ಕೋಲೇಜಿಲೇ ಮಾಷ್ಟ್ರ° ಆಗಿ ಕೆಲಸ ಮಾಡ್ತೆ]
    ಮಾಮರವೆಲ್ಲೋ ಕೋಗಿಲೆಯೆಲ್ಲೋ, ಏನೀ ಸ್ನೇಹಾ ಸಂಬಂಧ !!!
    ಮಾಷ್ಟ್ರನ ಸಂಬಂಧಿಕ ಅಲ್ಲ ಮಾಣಿ, ಆದರೂ ಅವನ ಕಷ್ಟಕ್ಕೆ ಸ್ಪಂದಿಸಿ ಅವನ ಒಬ್ಬ ಒಳ್ಳೆ ಪ್ರಜೆ ಮಾಡೆಕ್ಕು ಹೇಳುವ ಅವರ ದೊಡ್ಡ ಗುಣಕ್ಕೆ ನಮೋ ನಮಃ
    “ಫಲವ ನಿರೀಕ್ಷೆಸೆಡ, ಮಾಡುವ ಕೆಲಸವ ಶ್ರದ್ಧೆಲಿ ಮಾಡು” ಹೇಳುವ ಗೀತೆಯ ಸಾರವ ಸಮಾಜಕ್ಕೆ ತೋರಿಸಿಕೊಟ್ಟ ಮಾಷ್ಟ್ರ, “ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ” ಹೇಳಿ ಅವರ ದಾರಿಯನ್ನೇ ಅನುಸರಿಸಿದ ಶಿಷ್ಯ. ಹೃದಯ ತುಂಬಿ ಬಂತು. ಒಪ್ಪಣ್ಣನ ಲೇಖನಕ್ಕೆ ಧನ್ಯವಾದಂಗೊ.

    ***
    ತಮಾಶೆಯಾಗಿ ಕೊಶಿ ಕೊಟ್ಟರೂ ವಾಸ್ತವಕ್ಕೆ ತುಂಬ ಹತ್ತರೆ ಆದ ಸಾಲುಗೊ:
    [ಕಾನೂನು ಕೋಲೇಜು ಒಂದರ ಕಟ್ಟಿದವು, ನಮ್ಮೋರಿಂಗೆ ನಂಬ್ರ ತೆಗೆತ್ತರೆ ಬೇಕಾರೆ ಹೇಳಿಗೊಂಡೋ ಯೇನೋ]
    [ರೂಪತ್ತೆಮಗಳಿಂಗೆ ತದ್ವಿರುದ್ಧ – ಪೈಸೆ ಇದ್ದು, ಆದರೆ ಮಾರ್ಕೂ ಇಲ್ಲೆ, ಮನಸ್ಸೂ ಇಲ್ಲೆ.]
    ***
    [ವಿದ್ಯಾದಾನ ಮಹಾದಾನ – ಹೇಳ್ತದು ನಮ್ಮ ಸಂಪ್ರದಾಯ.
    ಅದರ ಮಾಡಿತೋರುಸಿದ ಈ ಮಾಷ್ಟ್ರನ ನಾವೆಲ್ಲ ನೆಂಪು ಮಡಿಕ್ಕೊಂಬ]
    ಹೀಂಗೆ ಹೇಳಿಕ್ಕಿ ಒಪ್ಪಣ್ಣ [ಮಾಣಿಯ ಹೆಸರುದೇ, ಮಾಷ್ಟ್ರನ ಹೆಸರುದೇ ಮರದ್ದು ಭಾವ!] ಹೇಳಿದ್ದು ಎಂತಕೆ ಅರ್ಥ ಆಯಿದಿಲ್ಲೆ !!!
    ***
    ಒಂದೊಪ್ಪ ಮತ್ತೆ ಈ ಸಾಲು [ಒಂದು ದೀಪಲ್ಲಿ ಇನ್ನೊಂದು ದೀಪವ ಹೊತ್ತುಸಿರೆ, ಎರಡು ದೀಪಕ್ಕೂ ಏನೂ ನಷ್ಟ ಇಲ್ಲೆ!]-ತುಂಬಾ ಕೊಶೀ ಆತು

    [ಅಡಿಮರೆಯದ್ದೆ ] ಒಂದು ಹಳೆ ಶಬ್ದವ ಪರಿಚಯ ಮಾಡಿಕೊಟ್ಟೆ
    ***

    1. @ ಪ್ರದೀಪ ಮುಣ್ಚಿಕಾನ ಮತ್ತೆ ಗೋಪಾಲಕೃಷ್ಣ S.K.
      ನಿಂಗೊಗೆ ಇದು ಯಾವ ಕಾಲೇಜ್ ಗೊಂತಾಯೆಕ್ಕಾರೆ ಕಷ್ಟ ಇಲ್ಲೆ.
      “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಹೇಳಿ ಒಂದು ಜಯಘೋಷ ಮಾಡಿಂಡು ಹೆರಡಿ
      ಕಾಲೇಜ್ ಸಿಕ್ಕುಗು.

  8. Thumba olle lekhana.

    Namma samajalli hinge obbange ibringe sahaya madtha vyavasthe iddu.

    Aadare nammalli ondu vyavasthithavagi ondu samstheya roopalli sahaya madtha vedike srushti ayekku.

    Navage nachike ayekku. Puttur vivekananda bitre bere yava college kooda nammadu heli heligombale ille. Eega gurugo banda mele rajja belavanige aydu.

    Lingayath avara nodi navu kaliyekku.

    Namma Mathakke ondu Medical College, Engineering college ayekku.

    Matthe Putturina MLA Havyakare ayekku. Yellaru jathi jathi heli koopaga navude heradadre nale namma tholudu hakugu.

    Namma kade athi hecchina sankeli Havyakaru ippadu helire Putturli. Hangagi Putturina MLA obba havyakare ayekku. Ambaga namma samjada uddara sadya.

  9. adappu, paata maadi innoo heccina saarthakate padakkombale saadhya…. vidyaarthigokke namma jnaanava hamchudu manassinge khushi kodtu.
    illi ningo helida maaniya bagge santhosha aatu. eegaana kaalalli haangidda maashtra matte vidyaarthi ippadu aparoopave ! devaru olledu maadali 🙂

  10. ಒಪ್ಪಣ್ಣ, ಬರದ್ದದು ಭಾರೀ ಕೊಷಿ ಆತು. ಈಗಾಣ ಕಾಲಲ್ಲಿಯೂ ಹೀಂಗಿಪ್ಪ ಘಟನೆ ನೆಡೆತ್ತು ಹೇಳುದೇ ಒಂದು ಆಶ್ಚರ್ಯದ ಸಂಗತಿ.
    ರಾಮಜ್ಜನ ಕೋಲೇಜಿನ ಹಳೆ ಮಾಷ್ಟ್ರಕ್ಕಳ ನೆಂಪು ಮಾಡಿದ್ಸು ಕೊಷಿ ಆತು. ನೇಮಣ್ಣಂಗೆ ಸರಿಯಾಗಿ ನಮ್ಮ ಭಾಷೆ ಬಂದೊಂಡಿತ್ತು. ನಮ್ಮವರ ಮಾಣಿಯಂಗೊ, ಕೂಸುಗಳ ನೋಡಿರೆ ಅದಕ್ಕೆ ಗೊಂತಕ್ಕು. ‘ಎಂತ ಅಣ್ಣೋ?’ ಹೇಳಿಯೇ ಮಾತಾಡ್ಸುಗು.

  11. ಒಬ್ಬ ಮಾಷ್ಟ್ರು, ತಾನು ಪಾಠ ಮಾಡಿ ಗೌರವ ಸಂಪಾದುಸುದರೊಟ್ಟಿಂಗೆ, ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಯ ಸಂಪೂರ್‍ಣ ಖರ್ಚು ಭರಿಸಿ, ಮೇಲಕ್ಕೆ ತಪ್ಪದು ಹೇಳಿರೆ, ದೊಡ್ಡ ತ್ಯಾಗವೇ ಸರಿ. ಹಲವಾರು ಸಾವಿರ ಸುರಿದು, ಯಾವುದೇ ಫಲಾಪೇಕ್ಷೆ ಇಲ್ಲದ್ದೆ ಈ ರೀತಿ ಸಮಾಜಕ್ಕೆ ಇನ್ನೊಬ್ಬನ ತಯಾರು ಮಾಡಿ ಕೊಡುವದು ಅನುಕರಣೀಯ ಗುಣ. ಹೀಂಗಿಪ್ಪವರ ಸಮಾಜ ಗೌರವಿಸಿದರೆ, ಬೇರೆಯವಕ್ಕೂ ಸ್ಪೂರ್ತಿ ಸಿಕ್ಕುಗು.
    ಇದರ ಫಲವ ತೆಕ್ಕೊಂಡ ಮಾಣಿ ಸರಿಯಾಗಿ ಅರ್ಥ ಮಾಡಿ, ತನಗೆ ಜಾಸ್ತಿ ಸಂಬಳ ಸಿಕ್ಕುವ ಕೆಲಸವ ಬಿಟ್ಟು ತನ್ನ ಗುರುವಿನ ಹಾದಿ ಹಿಡುದ್ದದು ಅವನ ಒಳ್ಳೆ ಆದರ್ಶ ಗುಣ.
    [ದಾನ ಮಾಡೆಕ್ಕಾರೆ ಅನುಕೂಲ ಮುಖ್ಯ ಅಲ್ಲ, ಮನಸ್ಸು ಮುಖ್ಯ] ಸರಿಯಾಗಿ ಹೇಳಿದೆ ಒಪ್ಪಣ್ಣ.
    ಧಾರಾಳ ಅನುಕೂಲ ಇಪ್ಪವೆಲ್ಲಾ ಸಕಾಯ ಮಾಡ್ಲೆ ಮುಂದೆ ಬತ್ತವಿಲ್ಲೆ ಹೇಳುವದು ಅಷ್ಟೇ ಸತ್ಯ.
    ಕಲಿವಲೆ ಹುಷಾರು ಇದ್ದೊಂಡು ಅನುಕೂಲ ಇಲ್ಲದ್ದವು ನಮ್ಮಸಮಾಜಲ್ಲಿ ಹಲವಾರು ಮಕ್ಕೊ ಇಕ್ಕು. ಶ್ರೀ ಮಠದ “ವಿದ್ಯಾ ಬಂಧು” ಈ ದಿಸೆಲಿ ಕಾರ್ಯ ಪ್ರವೃತ್ತ ಅಯಿದು.

  12. ದಾರಿ ಬೇಕಾರೆ ಬೊಸ ಭಾವ೦ ಹೇಳುಗು.ಸರ್ತ ಡೆಡ್ ಎ೦ಡು ಲೆಪ್ಟು ಡೆಡೆ೦ಡು ರೈಟು ಹೇಳಿ ಹೇಳಿ ಕೊಟ್ಟು ಅವ೦ಗೆ ಅಬ್ಯಾಸ ಇದ್ದು.ಇನ್ನು ಹಾ೦ಗಿಪ್ಪ ಮಾಷ್ಟ್ರುಗಳು ವಿದ್ಯಾರ್ಥಿಗಳೂ ಇಪ್ಪಕಾರಣ ಬಹುಶಹ ಇ೦ದು ಈ ರಾಜಕೀಯದವರ ಎಡೆಲಿಯೂ ನಮ್ಮ ಹಾ೦ಗಿಪ್ಪವು ಜಿವನ ಮಾಡಿಯೊ೦ಡಿಪ್ಪದು.ಒಪ್ಪಣ್ಣ೦ಗೆ ಒ೦ದು ಒಪ್ಪ ಒಪ್ಪ.ಒಪ್ಪ೦ಗಳೊಟ್ಟಿ೦ಗೆ

    1. ಆನು ರೈಟು ಹೋಗಿ, ಲೆಫ್ಟ್ ಪುನಾ ತಿರುಗಿ.. ಮತ್ತೆ ಸರಿ ತಿರುಗಿ ಸೀದ ಹೇಗಿ, ರೈಟು ತಿರುಗಿ.. ಮುನ್ದೆ ಹೋದೆ.. ಕಡೇ೦ಗೆ ಎಲ್ಲಿ ಎತ್ತಿತ್ತು ಹೇಳಿ ಮರದತ್ತು, ಎಲ್ಲಿಗೆ ಹೋಯೆಕು ಹೇಳುತ್ತು ಮರತ್ತತ್ತು .. 🙁

  13. ಒಳ್ಳೆಯ ಲೇಖನ ಒಪ್ಪಣ್ಣ… ಮಾಷ್ಟ್ರ° ಮಮಕಾರವುದೇ ಮಾಣಿಯ ಕೃತಜ್ಞತೆಯುದೇ ಕಂಡು ತುಂಬಾ ಕೊಶಿ ಆತು. ಈಗಾಣ ಎಲ್ಲಾ ಮಾಷ್ಟ್ರಕ್ಕಳುದೇ ( ಮಕ್ಕಳುದೇ 😉 ) ರಾಮಜ್ಜನ ಕೋಲೇಜಿನ ಮಾಷ್ಟ್ರ° ರೀತಿ ಇದ್ದರೆ ನಮ್ಮ ದೇಶ ಕೆಲವೇ ವರಿಶಲ್ಲಿ ಉದ್ಧಾರ ಅಕ್ಕು. ಹಾಂಗಿಪ್ಪ ಇನ್ನುದೇ ಅಸಂಖ್ಯಾತ ಜೆನ ಮಾಷ್ಟ್ರ°ಕ್ಕ ಬರಲಿ ಹೇಳಿ ಹಾರೈಸುತ್ತೆ.
    ಮತ್ತೆ ಈ ರಾಮಜ್ಜನ ಕೋಲೇಜು ಎಲ್ಲಿ ಇಪ್ಪದು ಹೇಳಿ ತಿಳಿಸುವೆಯಾ ಒಪ್ಪಣ್ಣ…?
    ಒಪ್ಪಂಗಳೊಟ್ಟಿಂಗೆ… 🙂

    1. { ರಾಮಜ್ಜನ ಕೋಲೇಜು ಎಲ್ಲಿ ಇಪ್ಪದು }
      ಚೆ ಚೆ, ಇದೆಂತ ಹೀಂಗೆ ಕೇಳಿ ಒಪ್ಪಣ್ಣನ ಸಿಕ್ಕುಸಿ ಬೀಳುಸುತ್ತದು..?!

      ಇದಾ –
      ನಾವು ಆ ಕೋಲೇಜು ಕಂಡದು ಕೆಲವು ಒರಿಶ ಮದಲೇ ಇದಾ – ರಜ ಅತ್ತಿತ್ತೆ ಹೋಗಿಪ್ಪಲೂ ಸಾಕು, ಅರಡಿಯ!
      ಒಂದು ಕೆಲಸ ಮಾಡಿ – ನಮ್ಮ ಸರ್ಪಮಲೆ ಮಾವನ ಹತ್ತರೆ ಕೇಳಿಕ್ಕಿ -ಅವು ನಿತ್ಯ ಅಲ್ಲಿಗೆ ಹೋವುತ್ತವು.
      ಸರಿಯಾಗಿ ಹೇಳುಗು. 😉

      1. ಆನು ನಿಂಗಳ ಸಿಕ್ಕಿಸಿ ಬೀಳಿಸುಲೆ ಕೇಳಿದ್ದಲ್ಲ. ಸುಮ್ಮನೆ ಅರಡಿವಲೆ ಅಷ್ಟೆ. ಈ ಲೇಖನ ಓದಿಯಪ್ಪಗ ರಾಮಜ್ಜನ ಕೋಲೇಜು ಒಂದು ಒಳ್ಳೆಯ ಕೋಲೇಜು ಆದಿಕ್ಕು ಹೇಳಿ ತೋರಿತ್ತು. ಮುಂದೆ ಆರಾದರೂ ಆ ಕೋಲೇಜಿಂಗೆ ಹೋಪವು ಇದ್ದರೆ ಅಡ್ರೆಸ್ಸು ಕೊಡೆಕ್ಕನ್ನೆ..!!!

    2. { ರಾಮಜ್ಜನ ಕೋಲೇಜು ಎಲ್ಲಿ ಇಪ್ಪದು }…
      ಇದಾ.. ಹೇಚ್ಚು ದೂರ ಇಲ್ಲಾ…
      ಓ ಅಲ್ಲೆ ಮಾರ್ಗಲ್ಲಿ ಮು೦ದೆ ಹೋಗಿ, ಬಲತ್ತು ತಿರುಗಿರಾತಿದಾ, ಹಾ೦ಗೆ ರಜ್ಜಾ ಒಳ ಹೋದರಾತು… 😉

  14. ಮನಸ್ಸು ತುಂಬಿ ಬಂತು ಒಪ್ಪಣ್ಣಾ,ಸಮಾಜಲ್ಲಿ ಬದುಕ್ಕೊಗ,ತನಗೆ ಎಂತ ಸಿಕ್ಕುಗು ಹೇಳಿ ಮೂರು ಹೊತ್ತೂ ಯೋಚನೆ ಮಾಡುವವರ ಎಡೆಲಿ ಈ ಮಾಷ್ಟ್ರು ಇದ್ದವನ್ನೇ,ಲೋಕ ಪೂರ್ತಿ ಹಾಳಾಯಿದಿಲ್ಲೇ ಹಾಂಗಾರೆ,ಅಲ್ಲದೋ? ಆ ಮಾಣಿಯನ್ನೂ ಮೆಚ್ಚೆಕ್ಕಾದ್ದೆ.ಇಂತಹವರ ಸಂಖ್ಯೆ ಬೆಳೆಯಲಿ,ತಾನು ಹೊತ್ತಿ ಸುತ್ತೆಲ್ಲ ಬೆಣಚ್ಚಿ ಕೊಡುವ ದೀಪದ ಹಾಂಗೆ ಬದುಕ್ಕುವ ಬುದ್ಧಿಯ ಪರಮಾತ್ಮ ನವಗೂ ದಯಪಾಲಿಸಲಿ ಹೇಳಿ ಹಾರೈಸುವ°.

  15. ನಿಜ ಕಥೆ ಕೇಳಿ ಮನಸ್ಸು ತುಂಬಿ ಬಂತು. ಬಡ ಪ್ರತಿಭೆಗಳ ಗುರುತಿಸಿ ಅವಕ್ಕೆ ಸಹಾಯ ಮಾಡಿ ಒಂದು ಒಳ್ಳೆ ಗುರಿ ತೋರುಸುವ ಗುರುಗೊ ಇಪ್ಪದು ನಿಜವಾಗಿಯೂ ಸಂತೋಷದ ಸಂಗತಿ. ಹಾಂಗಿರ್ತ ಗುರುಗಳ ಸಂತತಿ ಸಾವಿರ ಆಗಲಿ. ಟ್ಯೂಶನ್ನು, ಡೊನೇಶನ್ನು ಹೇಳಿ ಬುದ್ದಿವಂತ ಮಕ್ಕೊಗೆ ಬೇಡದ್ರೂ ಟ್ಯೂಶನ್ನು ಕೊಟ್ಟು ಕಟ್ಟ ಕಟ್ಟ ಪೈಸೆ ಎಣುಸುವವು, ಕಾಲೇಜಿನ ಡೊನೇಶನ್ ಪೈಸೆಲಿ ಸ್ವಂತ ದೊಡ್ಡ ಬಂಗಲೆ ಕಟ್ಟುಸುವವು, ಐಶಾರಾಮದ ಕಾರಿಲ್ಲಿ ತಿರುಗುತ್ತವು, ಆರಾರ ಪೈಸೆಲಿ ಗಮ್ಮತ್ತು ಮಾಡುತ್ತವು ಈ ಲೇಖನ ಓದಿರೆ ಒಪ್ಪಣ್ಣ ಬರದ್ದಕ್ಕೆ ಸಾರ್ಥಕ ಅಕ್ಕು. ಒಪ್ಪಣ್ಣ, ಕಲಿವಲೆ ಬಂದ ಆ ಪ್ರತಿಭಾವಂತ ಬಡ ಮಾಣಿ, ಪೇದೆ ಕೆಲಸಕ್ಕೆ ಸೇರ್ಲೆ ಅರ್ಜಿ ಹಾಕಲೆ ಬಂದಿಪ್ಪಗ ಆ ಗುರುಗಳ ಭೇಟಿ ಆತು ಹೇಳಿ ಎನಗೆ ಗೊಂತಿದ್ದ ಘಟನೆ. ಪೇಪರಿಲ್ಲಿಯೂ ಬಯಿಂದು. ಎಂತದೇ ಆಗಲಿ, ಒಳ್ಳೆ ಕಾರ್ಯ, ಒಳ್ಳೆ ಲೇಖನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×