Oppanna.com

ನಿತ್ಯದೀಪ ಬೆಳಗುತ್ತ ಮನೆಲಿ ಕೇಂಡ್ಳು ನಂದುಸಿದವಡ..!

ಬರದೋರು :   ಒಪ್ಪಣ್ಣ    on   12/03/2010    9 ಒಪ್ಪಂಗೊ

ಮೊನ್ನೆ ಒಂದು ಸಣ್ಣ ಜೆಂಬ್ರ ಆತು ಆಚಕರೆ ತರವಾಡು ಮನೆಲಿ – ಪುಳ್ಳಿಮಾಣಿ ವಿನುವಿನ ನಾಲ್ಕನೇ ಹುಟ್ಟು ಹಬ್ಬ.
ಅವನ ಅಮ್ಮನ ಒತ್ತಾಯಕ್ಕೆ ಆ ಹುಟ್ಟುಹಬ್ಬದ ಆಲೋಚನೆ ಮಾಡಿ, ಮೊನ್ನೆ ಆ ಕಾರ್ಯ ನೆಡದ್ದಡ. ಎಂಗೊಗೆ ಎಲ್ಲ ಹೇಳಿಕೆ ಇತ್ತಿಲ್ಲೆ, ಆಚಕರೆಮಾಣಿಗೆ ಇತ್ತು, ಈ ಶುದ್ದಿ ವಿವರವ ಅವ° ಹೇಳಿದ್ದು ಎಂಗೊಗೆ!
ಎಂಗಳ ಬೈಲಿಂಗೇ ಹೊಸ ನಮುನೆ ಆಚರಣೆ ಅಲ್ಲದೋ – ಹಾಂಗಾಗಿ ಒಪ್ಪಣ್ಣಂಗೆ ಅದುದೇ ಒಂದು ಶುದ್ದಿಯೇ.”ಇದೆಂತ ಬಣ್ಣದ ಕಾಗತ ಕಟ್ಟಿದ್ದು, ಜೆಂಬ್ರ ಇದ್ದೋ ದೊಡ್ಡಮ್ಮಾ?” ಹೇಳಿ ಜಾಲಿಲೆ ಆಗಿ ನೀರ್ಚಾಲಿಂಗೆ ನೆಡಕ್ಕೊಂಡು ಹೋವುತ್ತ ಅಜ್ಜಕಾನಬಾವ° ಪಾತಿಅತ್ತೆಯ ಕೈಲಿ ಕೇಳಿದನಡ – ಮೊನ್ನೆ ಉದಿಯಪ್ಪಗ.
‘ಇಂದು ಹೊತ್ತೋಪಗ ಬರ್ತುಡೆ ಅಡ, ಪುಳ್ಳಿದು’ ಹೇಳಿ ಪಾತಿ ಅತ್ತೆ ಹೇಳಿದವಡ. ಚೆಕ್, ಇದೆಂತರ ಅಪ್ಪ! ಹೇಳಿ ಅಜ್ಜಕಾನ ಬಾವ ಆಶ್ಚರ್ಯ ಮಾಡಿಗೊಂಡು ತಲೆ ಅಡಿಂಗೆ ಹಾಕಿ ಪೇಟಗೆ ಹೋಗಿಯೇ ಹೋದ°!
~

ಕೆಲೆಂಡರಿಲಿ ಈ ತಿಂಗಳು ಎದುರು ಬಪ್ಪಗಳೇ ವಿದ್ಯಕ್ಕಂಗೆ ಸುರು ಆತಡ – ಮಗನ ಬರ್ತುಡೇಗೆ ಎಂತಾರು ಗೌಜಿ ಮಾಡೆಕ್ಕು ಹೇಳಿಗೊಂಡು.
ನಕ್ಷತ್ರಕ್ಕೆ ಅನುಸಾರವಾಗಿ ಒಂದು ಶಿವಪೂಜೆ ಮಾಡ್ಳಾಗದೋ – ಹೇಳಿ ರಂಗಮಾವನ ಆಲೋಚನೆ ಇತ್ತಡ. ಆದರೆ ಎಂತ ಮಾಡುದು, ಅದು ಕೆಲೆಂಡರು ಲೆಕ್ಕಲ್ಲಿ ಬಪ್ಪದಡ ಅಲ್ದೋ! ಆ ದಿನ ರಂಗಮಾವಂಗೆ ಬೇರೆಂತದೋ ಅಂಬೆರ್ಪು!
ಬೌಶ್ಷ ಅವರ ತಂಗೆ – ಮಾಲಚಿಕ್ಕಮ್ಮನಲ್ಲಿ ಒರಿಷಾವಧಿ ಪೂಜೆ ಆಗಿರೇಕು – ಹೋಗದ್ದೆ ನಿವುರ್ತಿ ಇಲ್ಲೆ ಇದಾ!
~

ಶಾಂಬಾವನ ಯೆಜಮಾಂತಿ ವಿದ್ಯಕ್ಕ° ಇದ್ದಲ್ಲದ, ಅದರ ಅಪ್ಪನ ಮನೆಲಿ ಮೂರು ಜೆನ ಕೂಸುಗೊ, ಒಬ್ಬ ಮಾಣಿ.
ಈ ವಿದ್ಯಕ್ಕ°- ಕೂಸುಗಳ ಪೈಕಿ ಅಕೇರಿಯಾಣದ್ದು, ಇದಕ್ಕೆ ಒಬ್ಬ ತಮ್ಮ, ರಾಮಜ್ಜನ ಕೋಲೇಜಿಲಿ ಕಲಿತ್ತದು. ಪಂಜೆಯ ಚಿಕ್ಕಮ್ಮಂಗೆ ಸರೀ ಗೊಂತಿದ್ದು, ಅವರ ಮಗಳ ಕ್ಲಾಸಡ!
ಇಬ್ರು ಅಕ್ಕಂದ್ರು!  ಒಂದರ ಬೆಂಗ್ಳೂರಿಂಗೆ ಕೊಟ್ಟದು, ಇನ್ನೊಂದರ ಅಮೇರಿಕಕ್ಕೆ ಕೊಟ್ಟದು.
ಬೆಂಗ್ಳೂರಿಂಗೆ- ಹೇಳಿದ ಕೂಡ್ಳೆ ಆ ಊರಿಂಗೆ ಕೊಟ್ಟದು ಹೇಳಿ ಗ್ರೇಶೆಡಿ, ಎಂಗೊ-ಹಳಬ್ಬರು ಹೇಳ್ತ ಕ್ರಮ ಅದು, ಬೆಂಗ್ಳೂರಿಂಗೆ ಕೊಟ್ಟದು ಹೇಳಿರೆ ಮಾಣಿ ಬೆಂಗ್ಳೂರಿಲಿ ಇಪ್ಪದು ಹೇಳಿ ಅರ್ತ, ಅಷ್ಟೆ! 😉
ಅದರ ಗೆಂಡಂಗೆ ಸೊಂತ ಆಪೀಸು ಇದ್ದಡ, ಈ ತೆರಿಗೆ ಲೆಕ್ಕಾಚಾರ ಎಲ್ಲ ಬರೆತ್ತ ನಮುನೆಯ ಆಪೀಸು. ಕಾರಿದ್ದು ಅವಕ್ಕೆ, ಮೊನ್ನೆ ಬಂದಿತ್ತು ನಮ್ಮ ಊರಿಂಗೂ…!
ಅವರ ಮೂಲ ವಿಟ್ಳಸೀಮೆ. ಅಪುರೂಪಕ್ಕೆ – ಮದೂರಿಂಗೋ ಮತ್ತೊ ಹೋವುತ್ತರೆ – ಬತ್ತವು ಇತ್ಲಾಗಿಯುದೇ!

ಇನ್ನೊಂದು, ಎರಡ್ಣೇ ಅಕ್ಕ° ಅಮೇರಿಕಲ್ಲಿ ಇಪ್ಪದಿದಾ – ಗೆಂಡ ಸೋಪ್ಟುವೇರಡ.
ನೂಯೋರುಕು ಹೇಳ್ತಲ್ಲಿ ಒಂದು ಕಂಪೆನಿ ಇದ್ದಡ, ಅಲ್ಲಿ ಕಂಪ್ಯೂಟರಿಲಿ ಕೆಲಸ ಮಾಡುದು, ಒರಿಶಕ್ಕೊಂದರಿ ಊರಿಂಗೆ ಬಪ್ಪದು.
ಕಳುದೊರಿಶ ಬಂದಿಪ್ಪಗ ಈ ತಂಗೆ ಮನಗೆ ಬಯಿಂದು!
ಬೆಳಿ ಬಣ್ಣದ ಕಾರಿಲಿ ಅದೇ ಬಣ್ಣದ ಅವರ ಇಬ್ರು ಮಕ್ಕಳೂ ಕೂದು ಬಂದಿತ್ತಿದ್ದವು.
ಎರಡುದಿನ ಕೂದ್ದರ್ಲಿ ಸೆಕೆಬೊಕ್ಕೆ ಬಂದು – ಕಿತಾಪತಿ ಆಯಿದು!
ಎಂತ ಮಾಡುದು – ತರವಾಡುಮನೆಲಿ ಏಸಿ ಮಾಡುಸಿದ್ದವಿಲ್ಲೆ ರಂಗಮಾವ°!
~

ಅಕ್ಕಂದ್ರು ತೀರಾ ಅನುಕೂಲ ಇರ್ತ ಮನಗೆ ಹೋಯಿದವು.
ಅನುಕೂಲ ಇಪ್ಪ ಮನಗೆ ಹೋದ್ದರಿಂದಲೂ ಜಾಸ್ತಿ, ಈಗ ಒಳ್ಳೆತ ಅನುಕೂಲಕ್ಕೆ ಇದ್ದವು.
ಪೇಟೆ ಬಿಡಾರಲ್ಲಿ ಇಬ್ರೇ ಜೀವನ ಮಾಡಿಗೊಂಡು, ಮಕ್ಕಳ ಬೆಳೆಸಿಗೊಂಡು, ಅವರ ಓದುಸಿಗೊಂಡು ಅಕ್ಕಂದ್ರು ಚೆಂದಕೆ ಬದುಕ್ಕುದರ ಕಂಡು  ವಿದ್ಯಕ್ಕಂಗೆ ತನ್ನ ಜೀವನ ಏನೇನೂ ಅಲ್ಲ – ಹೇಳಿ ಆಯ್ಕೊಂಡು ಇತ್ತು.
ದೊಡ್ಡಮನೆ, ಹಳೆಕಾಲದ ವೆವಸ್ತೆಗೊ, ಕರಿಕರಿ ಅಡಿಗೆಕೋಣೆ, ತಚಿಪಿಚಿ ಹಟ್ಟಿಕರೆ, ನುಸಿ ಕಚ್ಚುವ ತೋಟ – ಷೇ ಷೇ – ಎಷ್ಟೆಲ್ಲಾ ರಗಳೆಗೋ! ಅಕ್ಕಂದ್ರಿಂಗೆ ಎಂತಾ ಸ್ವಾತಂತ್ರ್ಯ!
~

ಶಂಬಜ್ಜನ ಕಾಲದ ಆ ಹೆಸರಿಂದಾಗಿಯೇ ವಿದ್ಯನ ಸಂಬಂದ ಮುಂದುವರುದ್ದಡ.
ಶಾಂಬಾವಂಗೆ ಅಂಗುಡಿ ಇದ್ದಲ್ಲದೋ, ಸೊಂತದ್ದು – ಹಾಂಗಾಗಿ ಗಟ್ಟಿಕುಳವಾರುದೇ ಅಪ್ಪು ಹೇಳ್ತ ಲೆಕ್ಕಲ್ಲಿ ವಿದ್ಯಕ್ಕ° ಒಪ್ಪಿತ್ತು. ಈ ಮನಗೆ ಬಂದು ರಜ್ಜ ಸಮಯ ಸರೀ ಇತ್ತು.

ಯೇವಗ ಅಕ್ಕಂದ್ರ ಜೀವನದ ಒಂದೊಂದೇ ಹಂತಂಗಳ ಈ ವಿದ್ಯಕ್ಕ ತನ್ನ ಜೀವನಕ್ಕೆ ಅನುಪಾತುಸಲೆ ಸುರು ಮಾಡಿತ್ತೋ – ಅಷ್ಟಪ್ಪಗ ಸುರು ಆತದಾ, ಒಂದೊಂದೇ ಕೊಂಕುಗೊ.
ಅಕ್ಕನ ಮನೆಲಿ ಟೀವಿ ಇದ್ದು, ನಮ್ಮಲ್ಲಿಗೂ ಆಯೆಕು. ಅಕ್ಕನ ಮನೆಲಿ ಗೇಸು ಇದ್ದು, ನಮ್ಮಲ್ಲಿದೇ ಆಯೆಕು.. – ಪಾಪ ಕೈಂದ ಹರಿವದರ ಶಾಂಬಾವ° ಮಾಡಿದ°! ಅದರಿಂದ ಮೇಗೆ ಇನ್ನೆಂತರ!!
ಈ ಹಟಂದಾಗಿ ತರವಾಡುಮನೆಗೆ ಟೀವಿ, ಪ್ರಿಜ್ಜು, ಓಷಿಂಗು ಮಿಶನು, ಪೋನು – ಎಲ್ಲ ಬಂದು ಬಿದ್ದತ್ತು, ಅದು ಬೇರೆ!!
ಮುದ್ದಿನ ಹೆಂಡತ್ತಿಗೆ ಬಂಙ ಅಪ್ಪಲಾಗನ್ನೇ! ಪಾತಿ ಅತ್ತೆಗೆ ಹೇಂಗಿದ್ದರೂ ಆವುತ್ತು!!
~
ಅಕ್ಕಂದ್ರಿಂಗೆ ತನ್ನ ಮನೆ ತಲೆಬೆಶಿಗೊ ಎಲ್ಲ ಮುಗುದು ರಜ ಪುರುಸೊತ್ತು ಅಪ್ಪಗ, ಈ ತಂಗಗೆ ಪೋನು ಮಾಡ್ತದು ಕೆಲಸ.
ಎಂತ ಇಲ್ಲೆ, ಅಂತೇ ಮಾಡಿದ್ದು – ಹೇಳಿ ಸುರು ಮಾಡಿರೆ ಮುಕ್ಕಾಲುಗಂಟೆ ಅಲ್ಲದ್ದೆ ಮುಗಿಯ.
ಪಾತಿಅತ್ತೆಗೆ ನಗುಮುಖ ಆದ ಕಾರಣ ಪಿಸುರೇ ಬಾರ – ಅದು ಬೇರೆ ವಿಶ್ಯ.
ಅಂತೂ ಈ ಮುಕ್ಕಾಲು ಗಂಟೆಯುದೇ ಅಕ್ಕಂದ್ರ ಜೀವನ ಪದ್ಧತಿಯ ಬಗೆಗೇ ವಿಚಾರುಸುಗು ಈ ವಿದ್ಯಕ್ಕ°.

ಉದಿಯಪ್ಪಗಾಣ ತಿಂಡಿಗೊ – ಅರ್ದ ಬೇಶಿ ತುಂಬುಸಿದ ಸೇಮಗೆಗಳ ಒಗ್ಗರುಸುದೋ – ಓಂಗಿ ಬಾತುಗಳೋ ಹೀಂಗೆಂತಾರು – ಹೇಂಗೆ ಮಾಡುದು, ಎಂತೆಲ್ಲ ಹಾಕೆಕು ಹೇಳ್ತರ ಕೇಳುದು, ಪೇಟೆತಿಂಡಿಗಳ ಮಾಡ್ತ ವಿದಾನಂಗಳ  ಕೇಳಿ ಕಲಿವದು, ಮಕ್ಕೊಗಿಪ್ಪ ಹೊಸ ನಮುನೆ ಆಟದ ಸಾಮಾನುಗೊ, ಮಕ್ಕಳ ಒಸ್ತ್ರಂಗೊ, ಮಕ್ಕಳ ಆಟಂಗೊ, ಗೆಂಡ ಹಾಕುತ್ತ ಉದ್ದಚಡ್ಡಿಗೊ (ಎಬೆ, ಆಳುಗಳ ಹಾಂಗೆ ಮುಂಡುಸುತ್ತುಲಾಗ – ಹೇಳಿ ಅಂದೇ ಹೇಳಿದ್ದಡ ಶಾಂಬಾವನತ್ರೆ!), ಚೂಡಿದಾರದ ಹೊಸ ಹೊಸ ಪೇಶನುಗೊ – ಇದೆಲ್ಲ ಅಕ್ಕಂದ್ರತ್ರೆ ಕೇಳಿ ಕೇಳಿ ತಿಳ್ಕೊಂಗು.
ಅಕ್ಕಂದ್ರು ಅಂತೂ ಬಾರೀ ಚೆಂದಕೆ ವಿವರುಸುಗು ಬೇರೆ!
ಅವು ವಿವರುಸಿದಷ್ಟೂ ವಿದ್ಯಕ್ಕಂಗೆ ಕೊದಿ ಏರುಗು. ಅದಕ್ಕೆ ಅದೇ ಆಸಕ್ತಿಯ ವಿಶಯಂಗೊ!

ಮನೆಯ ಒಳ ಎಂತ ಆವುತ್ತಾ ಇದ್ದು, ದೇವರ ಕೋಣೆ ಹೇಂಗಿದ್ದು, ಹಟ್ಟಿಲಿ ಹೊಸ ಕಂಜಿ ಎಂತ ಮಾಡ್ತು, ಈ ಒರಿಶ ನೆಟ್ಟಿ ಎಂತರ ಮಾಡಿದ್ದು – ಯೇವದೂ ಅರಡಿಯ ಅದಕ್ಕೆ!
ಆ ಬಗ್ಗೆ ಗೊಂತೇ ಇಲ್ಲೆ! ಅದರ್ಲಿ ಆಸಕ್ತಿಯೇ ಇಲ್ಲೆ!!
~ಓ ಮೊನ್ನೆ, ದಶಂಬ್ರಲ್ಲಿ ಅಮೇರಿಕದ ಅಕ್ಕನ ಮಗಳ ಹುಟ್ಟಿದ ದಿನ ಬಂತಡ.
ಪೋನು ಮಾಡುದು ಎಷ್ಟೊತ್ತಿಂಗೆ ಅಕ್ಕಪ್ಪಾ – ಹೇಳಿ ಯೋಚನೆ ಮಾಡಿ ಮಾಡಿ, ಮತ್ತೆ ನೆಡು ಮದ್ಯಾನ್ನ, ರಂಗಮಾವನ ಮಾದ್ಯಾನ್ನಿಕೆಯ ಹೊತ್ತಿಂಗೆ ಒತ್ತಿತ್ತಡ.
ಅವಕ್ಕೆ ನೆಡಿರುಳು ಇದಾ, ಹುಟ್ಟು ಹಬ್ಬ ಸುರು ಅಪ್ಪ ಸಮೆಯ. ಎಷ್ಟಾರೂ ಹುಟ್ಟಿದ ದಿನ ಸುರುಅಪ್ಪಗಳೇ ಪೋನು ಮಾಡಿರೆ ಕೊಶಿ ಅಲ್ಲದೋ – ಹಾಂಗೆ ’ವಿಶ್ಷು’(wish) ಮಾಡಿತ್ತಡ – ಸಂತೋಷದ ಹುಟ್ಟುಹಬ್ಬ ಆಗಲಿ – ಹೇಳ್ತ ನಮುನೆ.
ಇಂಗ್ಳೀಷಿಲೇ ಇದು ಹೇಳಿದ್ದಕ್ಕೆ ಆ ಹೊಡಿ ಕೂಸಿಂದು ’ಸೇಂಕ್ಯೂ’ ಹೇಳಿ ಉತ್ತರ ಬಂತಡ – ಧನ್ಯವಾದಂಗೊ ಹೇಳ್ತಲೆಕ್ಕಲ್ಲಿ.
ಆ ಕೂಸು ಅಲ್ಲಿಯೇ ಶಾಲಗೆ ಹೋಪದಡ, ಹೆಚ್ಚುಕಮ್ಮಿ ಇಂಗ್ಲೀಶೇ ಜೀವನ, ನಮ್ಮ ಬಾಶೆ ಅರಡಿತ್ತೇ ಇಲ್ಲೆ.
ಅದು ತುಂಬ ಉಶಾರಿ ಅಡ, ವಿದ್ಯಕ್ಕ ಒಂದೊಂದರಿ ಹೊಗಳುಲೆ ಸುರು ಮಾಡುಗು ಅದರ!

ಆ ದಿನ ಹುಟ್ಟಿದ ದಿನದ ಲೆಕ್ಕಲ್ಲಿ ಮಾಡಿದ್ದಲ್ಲದೋ  – ಅದರ ಮರದಿನ ಇರುವಾರ (ಪುನಾ) ಪೋನು ಮಾಡಿತ್ತಡ, ಎಂತಾರು ಗಮ್ಮತ್ತು ಮಾಡಿದಿರೋ ಹೇಳಿಗೊಂಡು. ಅಕ್ಕ° ಹೇಳುಲೆ ಸುರು ಮಾಡಿತ್ತು, ಬರ್ತುಡೇ ದಿನ ಹೊತ್ತಪ್ಪಗಾಣ ಗೌಜಿಯ.
ಅಕ್ಕನ, ಬಾವನ ಪ್ರೆಂಡುಗೊ, ಮಗಳ ಪ್ರೆಂಡುಗೊ ಎಲ್ಲೊರುದೇ ಬಂದಿತ್ತಿದ್ದವಡ. ಹೊತ್ತೋಪಗಾಣ ಹೊತ್ತಿಂಗೆ ಅವರ ಮನೆಲಿಡೀ ಜೆನ ಅಡ.

ಮಗಳಿಂಗೆ ಹದಿಮೂರು ಒರಿಶ ಆದ ಕೊಶಿಗೆ ಸಣ್ಣ ಕೇಕು ತುಂಡರುಸುತ್ತ ಕಾರ್ಯ ಆತಡ, ಬಂದವೆಲ್ಲ ಅದರ ತಿಂದು, ಅದಾಗಿ ಹೊಟ್ಟೆ ತುಂಬುಸಿ, ಎಂತೆಂತದೋ ಒಸಗೆ (ಗಿಪ್ಟು ಹೇಳುದಡ ಅದಕ್ಕೆ – ಉಮ್ಮಪ್ಪ ನವಗರಡಿಯ) ಮಾಡಿ, ಹಾರೈಸಿ ಹೆರಟವಡ.
ಏಕೋ ಅದರ ಕೇಳಿದ ಮತ್ತೆ ವಿದ್ಯಕ್ಕಂಗೆ ತನ್ನ ಮಗಂಗೂ ಬರ್ತುಡೇ ಮಾಡೆಕ್ಕು ಹೇಳಿ ಕಾಂಬಲೆ ಸುರು ಆತೋ ಏನೋ!

ಅಂದಿಂದ ಒಂದು ಏರ್ಪಾಡು ಮನಸ್ಸಿಲಿ ಮಾಡಿಗೊಂಡೇ ಇತ್ತು. ಈ ತಿಂಗಳು ಸುರು ಅಪ್ಪಗ ಅಂತೂ ಶಾಂಬಾವಂಗೆ ನಿತ್ಯ ಕಿರಿಕಿರಿ ಕೊಡ್ಳೆ ಸುರುಮಾಡಿತ್ತು, ಬರ್ತುಡೇ ಲೆಕ್ಕಲ್ಲಿ.
ಅದೆಂತ ಬೇಡ, ನಮ್ಮ ಊರಿಲಿ ಸರಿ ಆಗ – ಹೇಳಿರೂ ಕೇಳಿದ್ದಿಲ್ಲೆ.

ವಿನು ಈಗ – ಆ ಮಾರ್ಗದ ಕರೆ ಇಂಗ್ರೋಜಿಯವರ, ಅದೇ ಇಂಗ್ರೋಜಿ ಕರೆಲಿ ಶಾಲೆ ಇದ್ದಲ್ಲದೋ – ಅದಕ್ಕೆ ಹೋಪದಡ, ಅಂಗನವಾಡಿಯ ನಮುನೆದಕ್ಕೆ.
ವಿದ್ಯಕ್ಕ° ಆ ಶಾಲೆಯವಕ್ಕೆ ಕೇಳಿತ್ತಡ, ‘ನಾಳ್ತು ಎಂಗಳ ಮಗನ ಬರ್ತುಡೇ, ನಿಂಗೊ ಅದರ ಆಚರಣೆ ಮಾಡಿ ಕೊಡ್ತಿರೋ’ ಹೇಳಿಗೊಂಡು.

ಓ ಧಾರಾಳ – ಹೇಳಿ ಒಪ್ಪಿದವಡ ಆ ಶಾಲೆಯವು! ಎಷ್ಟಾರೂ ಅವರ ಸಂಪ್ರದಾಯಂಗೊ ಅಲ್ಲದೋ!
ಬರ್ತುಡೇ ದಿನ ಹೇಂಗೆ ಅಲಂಕಾರ ಮಾಡೇಕು – ಎಂತೆಲ್ಲ ಇರೇಕು, ಹೇಂಗೇಂಗೆ ಮಾಡೇಕು – ಹೇಳಿಕೊಟ್ಟವಡ ಇಂಗ್ರೋಜಿ ಶಾಲೆಯವು.
ಅದರ ಉಸ್ತುವಾರಿ ನೋಡ್ಳೆ ಒಂದು ಜೆನ ಖುದ್ದು ಬಯಿಂದಡ, ಸಾಮಾನ್ಯ ಗುರಿಕ್ಕಾರನ ನಮುನೆದು.
ಆ ಜೆಂಬ್ರದ ದಿನ ಬಣ್ಣದ ಕಾಗತ ಕಟ್ಟಿರೇಕಡ. ಕಾಗತದ ಪ್ಲೇಟಿಲಿ ಕೊಡ್ಳೆ ಸೀವುದೇ, ಚಿಪ್ಸುದೇ, ಮತ್ತೆಂತಾರು ತಿಂಡಿಗಳುದೇ ತಂದಿರೆಕಡ. ತುಂಡುಸುಲೆ ಕೇಕು ತಂದಿರೆಕಡ – ಮಗ, ಸೊಸೆ, ಆ ಗುರಿಕ್ಕಾರ ಮಾತಾಡ್ತು ಈ ರಂಗಮಾವಂಗೂ, ಪಾತಿಅತ್ತೆಗೂ ಕೇಳಿತ್ತಿದ್ದು.ರಂಗಮಾವಂಗೂ, ಪಾತಿಅತ್ತೆಗೂ ಏನೇನೂ ಮನಸ್ಸಿತ್ತಿಲ್ಲೆ. ಆದರೂ ಎಂತ ಮಾಡುದು, ಬೇಡ ಹೇಳ್ತ ನಮುನೆ ಎಡಿಗಾದಷ್ಟೂ ಹೇಳಿದವು. ಮತ್ತೆ ಎಂತರ ಬೇಕಾರೂ ಆಗಲಿ – ಹೇಳಿ ಬಿಟ್ಟವು.
ಓ ಅಲ್ಲಿ, ದನಗಳ ಹಟ್ಟಿಹಿಂದೆ ಪಾತಿಅತ್ತೆ ಕೇಳಿತ್ತು ‘ಇದೂ.. ಕೇಕುವಿಂಗೆ ಮೊಟ್ಟೆ ಹಾಕುತ್ತವಡ, ಅಪ್ಪೋ?’ ಹೇಳಿ.
ರಂಗಮಾವ ಎಂತದೂ ಮಾತಾಡದ್ರೂ ಪಾತಿ ಅತ್ತಗೆ ಅರ್ತ ಆಗಿತ್ತು. ರಂಗಮಾವಂಗೂ!!
ಹಟ್ಟಿಕರೆಲಿ ಮಾತಾಡಿರೆ ಆರಿಂಗೂ ಕೇಳುಲಿಲ್ಲೆ ಇದಾ, ಅಲ್ಲಿಗೆ ಹೋಪದು ಇವಿಬ್ರೇ – ಆ ಮನೆಲಿ!
~

ಬರ್ತುಡೇ ಬಂದೇ ಬಂತು! ಅಂದು ಶುಕ್ರವಾರ.
ರಂಗಮಾವ ಅವರ ತಂಗೆ ಮನಗೆ – ಮಾಲಚಿಕ್ಕಮ್ಮನಲ್ಲಿಗೆ – ಪೂಜಗೆ ಹೋಗಿತ್ತಿದ್ದವು.

ಮನೆಲಿ ಹೀಂಗೀಂಗೆ ಹೇಳಿ ರಂಗಮಾವ ಹೇಳಿದ್ದವಿಲ್ಲೆ ಅಲ್ಲಿ. ಮದ್ಯಾನ್ನ ಪೂಜೆ ಮುಗುಶಿ, ಉಂಡಿಕ್ಕಿ ಹೆರಡುವಗ ಪಾಲಾರುಮಾಣಿಯ ಬೈಕ್ಕು ಸಿಕ್ಕಿತ್ತು. ಸೀತ ಬದಿಯಡ್ಕ ಒರೆಂಗೆ ಅವನೊಟ್ಟಿಂಗೆ ಬಂದು, ಅಲ್ಲಿಂದ ರಪಕ್ಕ ಬಸ್ಸಿಲಿ ಬಂದಕಾರಣ ನಾಕುಗಂಟೆ ಹೊತ್ತಿಂಗೆ ಮನೆಗೆ ಎತ್ತಿ ಆಗಿತ್ತು! ಪುಳ್ಳಿಯ ಬರ್ತುಡೇ ಆಚರಣೆ ರಂಗಮಾವಂಗೂ ನೋಡ್ಳೆ ಸಿಕ್ಕಿತ್ತು, ಗ್ರೇಶದ್ದೆ ಬಂದ ಭಾಗ್ಯ!?

ನಾಕು-ನಾಕುವರೆ ಹೊತ್ತಿಂಗೆ ಎತ್ತಿತ್ತು, ಅವರ ಶಾಲೆಂದ ಒಂದು ದಿಬ್ಬಣ.
ಎರಡು ಜೆನ ಟೀಚರುಗೊ(ಮಿಸ್ಸುಗೊ), ಒಂದು ಪೀಯೊನು, ಮತ್ತೆ ಇಪ್ಪತ್ತೈದು ಮಕ್ಕೊ- ಗಲಗಲ ಮಾಡ್ಳೆ!ಏನೂ- ಆಸರಿಂಗೆ ಬೇಕೋ ಹೇಳಿ ಕೇಳುವ ಮನಸ್ಸು ಪಾತಿಅತ್ತಗೆ ಬಂತು, ಆದರೆ ವಿದ್ಯಕ್ಕ ‘ಹಾಯ್….’ ಹೇಳಿ ಮುಂದೆ ಹೋದಮತ್ತೆ ಎಂತೂ ಮಾತಾಡ್ಳೆ ಹೋಯಿದಿಲ್ಲೆ. ರಂಗಮಾವ ಎಲೆತಿಂದುಗೊಂಡು ಕರೆಲಿ ನಿಂದವು.
ಶಾಂಬಾವ ಒಂದು ಪೇಂಟಂಗಿ ಹಾಯ್ಕೊಂಡು, ಕೈಗೆ ವಾಚು ಕಟ್ಟಿಗೊಂಡು ಅರೆಕುಶೀಲಿ ನಿಂದುಗೊಂಡಿತ್ತಿದ್ದ°. ಮಗನ ಬರುತ್ತುಡೇ ಯ ಗೌಜಿ ಒಂದು ಹೊಡೆಲಿ ಆದರೆ, ಮನೆಗಾಗದ್ದ ಹೊಸತ್ತರ ಮಾಡ್ತ ವೇದನೆ ಇನ್ನೊಂದು ಹೊಡೆಲಿ! ಅಪ್ಪಮ್ಮನ ನೆತ್ತರೇ ಅಲ್ಲದೋ ಅವನ ಮೈಲಿ ಹರಿತ್ತದು!!

ವಿದ್ಯಕ್ಕಂಗೆ ಮಾಂತ್ರ ಕಂಬಕ್ಕೆ ಕಟ್ಟಿದ ಕೊಡಿ(=ಬಾವುಟ)ಯ ಹಾಂಗೆ ಆಗಿತ್ತು! ಕುಶಿಯೋ ಕುಶಿ. ಮಗನ ಬರ್ತುಡೇ, ಅಕ್ಕನ ಮಗಳ ಬರ್ತುಡೇಯಷ್ಟೇ ಗೌಜಿಲಿ, ಅದೇ ನಮುನೆಲಿ!! ವಿನುವಿಂಗೂ.. ಅವನ ಕ್ಲಾಸಿನವು ಎಲ್ಲೊರುದೇ ಮನಗೆ ಬಂದರೆ ಕುಶಿಯೇ ಅಲ್ಲದೋ!!

ಜೋಯಿಯ ಮಗನೂ ಇದ್ದು, ಐತ್ತನ ಮಗನೂ ಇತ್ತು!!chaussure nike pas cher
ಎಲ್ಲರುದೇ ಒಳ ಬನ್ನಿ  – ಶಾಂಬಾವ ದೊಡಾಕೆ ಹೇಳಿದ°, ಒಳಾಣ ಜೆಗಿಲಿಕರೆಲಿ ಬಂದವೆಲ್ಲ ಸಾಲಾಗಿ ಕೂದುಗೊಂಡವು.
~ಬಂದ ಕೂಡ್ಳೆ ಅವರ ಕೆಲಸ ಸುರು!
ವಿನುವಿನ ಇನ್ನೂ ಆಯೆತಮಾಡಿ, ಚೆಂದ ಕಾಂಬ ಹಾಂಗೆ ಮಾಡಿದವಡ.
ಶುಬತ್ತೆಯ ಹಾಂಗೆ ಪೌಡ್ರು, ಕಾಡಿಗೆ ಎಲ್ಲ ಹಾಕಿ ಬೆಣ್ಣೆಮುದ್ದೆಯ ಹಾಂಗೆ ಮಾಡಿದವಡ. ಪಾತಿಅತ್ತಗೆ ಅವನ ಒಂದರಿ ಕೊಂಗಾಟಮಾಡುವ° ಹೇಳಿ ಕಂಡತ್ತಡ.

ಒಂದು ಷ್ಟೂಲಿನ ತಂದು ಜೆಗಿಲಿ ಕರೆಯ ಮಣ್ಣಚಿಟ್ಟೆಯ ಹತ್ತರೆ ಮಡಗಿದವು.
ಅದರ ಮೇಗೆ ಕೇಕು – ಅರೀಶಿನ ಬಣ್ಣದ್ದು. ಅದರ ಕರೆಲಿ ಒಂದು ಪೀಶಕತ್ತಿ, ರಂಗಮಾವನ ಎಲೆಮರಿಗೆಯ ಉಳೆಕ್ಕೊಂಬು ಅಲ್ಲ, ನೀಲಿ ಹಿಡಿಯ ಪಳಪಳ ಹೊಳೆತ್ತದು!
ಶಂಕು ಆಕಾರದ ಬಣ್ಣಬಣ್ಣದ ಟೊಪ್ಪಿಯ ತೆಗದು ನಾಕೈದು ಮಕ್ಕಳ ತಲಗೆ ಹಾಕಿದವಡ.

ಶಂಕು ಆಕಾರದ ಬಣ್ಣಬಣ್ಣದ ಟೊಪ್ಪಿ
– ಈ ಎಲ್ಲ ಸಾದನಂಗಳ ಅವ್ವೇ ತಂದದಡ!ವಿನು ಬಂದು ಕೇಕಿನ ಹತ್ತರೆ ನಿಂದನಡ.
ಅವನ ಆಚೀಚ ಹೊಡೆಲಿ ಅಪ್ಪಮ್ಮ! ಮಕ್ಕೊ ಎಲ್ಲ ಅವರ ಎದುರು.
ರಂಗಮಾವ ದಳಿಗೆ ಎರಗಿ ಕೂದುಗೊಂಡವು, ಪಾತಿಅತ್ತೆ ದಾರಂದಕ್ಕೆ ಎರಗೆ ನಿಂದುಗೊಂಡಿತ್ತು!!
ಮತ್ತೆ ಹುಟ್ಟುಹಬ್ಬದ ಆಚರಣೆ ಸುರು! – ಮೇರಿಟೀಚರಿನ ನೇತೃತ್ವಲ್ಲಿ!!
~

ಮದಲಿಂಗೆ, ಗಾಳಿ ಊಪಿ ಕೇಂಡ್ಳು ನಂದುಸುಲೆ.
ಉರುಟು ಕೇಕಿನ ಮೇಗೆ “ವಿನುವಿಂಗೆ ನಾಲ್ಕೊರಿಶ” ಹೇಳ್ತ ಅರ್ತ ಬಪ್ಪದರ ಬರದಿತ್ತವಡ, ಅದರ ಸುತ್ತಕೆ ಹೊತ್ತುಸಿದ ನಾಲ್ಕು ಕೇಂಡ್ಳಿನ ಊಪಿ ನಂದುಸೆಕ್ಕಡ ಅವ°. ಎಲ್ಲರೂ ಚಪ್ಪಾಳೆ ತಟ್ಟೆಕ್ಕಡ – ಮೇರಿಟೀಚರು ಹೇಳಿತ್ತು.
ವಿನುವಿನ ಶಾಲೆಯ- ಕೆಲವು ಬಾಯಮ್ಮಂಗಳೂ, ಕೆಲವು ಮಕ್ಕಳೂ, ಏವ ಜಾತಿಯೋ – ಎಲ್ಲ ಬಂದವು, ಮನೆ ಒಳ ಹೆರ ಒಂದೇ ಮಾಡಿ ಚಾಂದ್ರಾಣ ಏಳುಸಿದವು – ಚಪ್ಪಾಳೆ ತಟ್ಟಿದವು.

‘ವಿನುವಿಂಗೆ ಸಂತೋಶದ ಹುಟ್ಟಿದ ದಿನ’ ಹೇಳಿ ಮೂರುಸರ್ತಿ ರಾಗಕ್ಕೆ ಹೇಳಿದವಡ ಎಲ್ಲೊರುದೇ. ವಿದ್ಯಕ್ಕಂದೇ ಸೇರಿ.
ಕೇಂಡು ಉರುಗಿ ನಂದುಸಿಕ್ಕಿ ಕೇಕಿನ ತುಂಡುಸುದಡ. ಹೊಳೆತ್ತ ಪೀಶಕತ್ತಿಲಿ – ಎರಡು ನೀಟಕೆ ಗೆರೆ ಹಾಕಿ..
– ವಿನುವಿಂಗೆ ಅದರ ಮೊದಲೇ ಹೇಳಿಕೊಟ್ಟಿತ್ತಿದ್ದವು.ತುಂಡುಸಿದ ಕೂಡ್ಳೆ ರೋಸಮ್ಮನ ಪುಳ್ಳಿ, ಇವನ ಕ್ಲಾಸಿನ ಕೂಸು – ಎದುರು ನಿಂದುಗೊಂಡು ಇವನ ಬಾಯಿಗೆ ಕೇಕಿನ ತುಂಡು ತಿನುಸಿತ್ತಡ. ಎಲ್ಲ ಚಪ್ಪಾಳೆ ತಟ್ಟಿ ಕುಶೀಲಿ ಕೊಣುದವು. (ಪಾತಿ ಅತ್ತೆಗಂತೂ ಇದೆಲ್ಲ ಎಂತಾಳಿಯೇ ಗೊಂತಾಯಿದಿಲ್ಲೆ. ಅದರ ಅಜ್ಜಿಯಕ್ಕಳ ತೊಟ್ಳು ಮದುವೆ ನೆಂಪಾತೋ ಏನೋ!) ಚಪ್ಪಾಳೆಯ ಗೌಜಿಲಿ ಇದೆಲ್ಲ ಕ್ಷಣಮಾತ್ರಲ್ಲಿ ಆಗಿ ಹೋತು!
ಇಡೀ ಪರಿಸರಲ್ಲಿ ಪುಗ್ಗೆಯೋ (ದೊಡ್ಡಬಾವ ಓ ಮೊನ್ನೆ ಹೇಳಿದ ಬಣ್ಣದ್ದಲ್ಲ!), ಬಣ್ಣದ ಕಾಗತವೋ, ಕ್ರೋಟನು ಎಲೆಯೋ, ತರ್ಮೋಕ್ಸು ಹೊಡಿಯೋ – ಎಂತೆಲ್ಲ ಇತ್ತು. ಸಣ್ಣ ಮಂಟಪದ ಹಾಂಗೆ ಮಾಡಿ – ಅದರೊಳ ಇಷ್ಟೆಲ್ಲ ಒಯಿವಾಟುಗೊ.

ಅವನ ಶಾಲೆಲಿ ಹೇಳಿಕೊಟ್ಟ ಹಾಂಗೇ ಮಾಡಿದವು ಎಲ್ಲರೂ! ಮೇರಿಟೀಚರಿಂದು ಖುದ್ದು ಉಸ್ತುವಾರಿ ಆದ ಕಾರಣ ಕ್ರಮ ತಪ್ಪುಲೆ ಸಾಧ್ಯವೇ ಇಲ್ಲೆ! ಕ್ರಮದ ಮಟ್ಟಿಂಗೆ ನಮ್ಮ ಕಾವೇರಿಕಾನ ಗುರಿಕ್ಕಾರಮಾವನ ಹಾಂಗೆಯೇ ಕಂಡುಗೊಂಡಿತ್ತು!ಕೇಕಿನ ತುಂಡಿನ ಎಲ್ಲೊರಿಂಗೂ ತಿನ್ಸೇಕಡ, ಮೇರಿಟೀಚರು ಹೇಳಿತ್ತು.
ಪುಳ್ಳಿಮಾಣಿಗೆ ಅಜ್ಜಿಯ ಬಾರೀ ಪ್ರೀತಿ. ಒಂದು ತುಂಡಿನ ಸೀತ ತೆಕ್ಕೊಂಡು ಪಾತಿಅತ್ತೆಯ ಹತ್ರೆ ಹೋದನಡ, ತಟುಪುಟು ಮಾಡಿಗೊಂಡು!
ಈ ಎಲ್ಲ ಚೆಂದ ನೋಡಿಗೊಂಡು ದಾರಂದದ ಎರಗಿ ನಿಂದ ಪಾತಿಅತ್ತೆಗೆ ಗಾಬೆರಿಯೋ ಗಾಬೆರಿ!! ಎಂತ ಮಾಡುದು!!
ಕೇಕು ಹೇಳಿರೆ ಮೊಟ್ಟೆದು, ತಿಂತ ಕ್ರಮವೇ ಇಲ್ಲೆ ನಮ್ಮೋರು! ಪುಳ್ಳಿಮಾಣಿಯ ಲೆಕ್ಕದ ಗೌಜಿಲಿ ಸ್ವತಃ ಅವನೇ ಕೊಶೀಲಿ ಕೊಡ್ತಾ ಇಪ್ಪದು!

ಆದರೂ ಮನೆಕ್ರಮ ಬಿಟ್ಟು ಪಾಪ ಕಟ್ಟಿಗೊಂಬದು ಬೇಡ ಹೇಳಿಗೊಂಡು ‘ಎನಗೆ ಹಲ್ಲುಬೇನೆ ಮುದ್ದೂ..’ ಹೇಳಿತ್ತಡ ಪಾತಿಅತ್ತೆ. ಆದರೂ ಕೇಳಿದ್ದನಿಲ್ಲೆ ಈ ಪುಳ್ಳಿಮಾಣಿ. ಅಜ್ಜಿಗೆ ಹಲ್ಲುಬೇನೆ ಆದರೆ ಒತ್ತಾಯ ಮಾಡೆಡ ಮಗಾ ಹೇಳಿ ಆ ಪರಿಸ್ಥಿತಿ ಅರ್ತ ಆದ ಶಾಂಬಾವ ಒಪಾಸು ದಿನಿಗೆಳಿದನಡ. ಏಯ್, ಅವ° ಎಲ್ಲಿಂದ ಬಿಡ್ಳೆ?!

ಪ್ರೀತಿಯವಕ್ಕೆ ಕೇಕು ಕೊಡೆಕಡ, ಮೇರಿ ಟೀಚರು ಹೇಳಿದ್ದು ಅವಂಗೆ. ಅಜ್ಜಿಗೆ ಕೊಡೆಕ್ಕು ಹೇಳಿ ಅಂಬಗಳೇ ಲೆಕ್ಕ ಹಾಕಿದ್ದ ಅವ°.
ಸರಿ, ಒತ್ತಾಯ ಮಾಡಿ ಬಾಯಿಗೆ ಹಿಡುದ ಪುಳ್ಳಿಂದ ಬಿಡುಸುಲೆ ಸಾಧ್ಯವೇ ಆತಿಲ್ಲೆ ಪಾತಿಅತ್ತಗೆ.
ಬಾಯಿ ಒಡದ ಹಾಂಗೆ ಮಾಡಿ ಕೈ ಎದುರು  ಹಿದುದತ್ತು. ಪುಳ್ಳಿ ಸಂತೋಷಲ್ಲಿ ಆ ಕೈ ಎಡೆಲಿಪ್ಪ ತೊಡಿಗೆ ತುರುಕ್ಕುಸಿದ°.
ಬಾಯಿ ಒಳ ಹೋಗದ್ದ  ಹಾಂಗೆ ಪಾತಿಅತ್ತೆ ನೋಡಿಗೊಂಡಿದು. ಬಾಯಿಗೆ ಹಾಕಿದ ಕೊಶಿಲಿ ಪುಳ್ಳಿಮಾಣಿ ಇನ್ನೊಂದು ತುಂಡು ಹಿಡ್ಕೊಂಡು ಅಮ್ಮನತ್ರೆ ಹೆರಟ°..!

ಇದರ ಎಲ್ಲ ನೋಡ್ತ ರಂಗಮಾವಂಗೆ ‘ನಾರಾಯಣಾ…’ ಹೇಳಿಹೋತು. ಪಾತಿಅತ್ತೆಗೆ ನಮ್ಮ ಕ್ರಮಂಗಳ ಮೇಗೆ ಇಪ್ಪ ಗೌರವಂಗಳ, ಪುಳ್ಳಿಯ ಮೇಗೆ ಇಪ್ಪ ಪ್ರೀತಿಯ – ಎರಡ್ರನ್ನೂ ಯೋಚನೆ ಮಾಡಿಗೊಂಡು ಕೂದವು. ಎಲೆತಿಂದು ಸುಮಾರು ಹೊತ್ತಾತಲ್ಲದೋ – ತುಪ್ಪಲೆ ಹೇಳಿ ತೊಂಡೆಚೆಪ್ಪರದ ಬುಡಕ್ಕೆ ಹೋದವು. ಅಲ್ಲೇ ಅತ್ಲಾಗಿ ಪಾತ್ರತೊಳೆತ್ತಲ್ಲಿ ಪಾತಿಅತ್ತೆ ತೊಡಿ, ಬಾಯಿ ತೊಳಕ್ಕೊಂಬದು ಕಂಡತ್ತು! ಪುಳ್ಳಿ ಕೊಡುವಗ ಎಲ್ಲಿಯೋ ರಜ ಮುಟ್ಟಿಹೋಗಿದ್ದರೆ ಅದನ್ನೂ ತೊಳಕ್ಕೊಂಬಲೆ ಬಂದದಾಗಿತ್ತು ಪಾತಿ ಅತ್ತೆ. ಪುಳ್ಳಿಗೆ ಬೇಜಾರಪ್ಪಲಾಗ ಹೇಳ್ತ ಪಾತಿಅತ್ತೆಯ ಮನಸ್ಸು ರಂಗಮಾವಂಗೆ ಅರ್ತ ಆತು!!

~ಪೇಟೆಂದ ತಂದ ರಜ ತಿಂಡಿಗೊ ಇದ್ದಲ್ಲದೋ, ಅದರ ಎಲ್ಲ ಹೆರ ತಂದು ಹರಗಿ ಮಡಗಿದ° ಶಾಂಬಾವ°. ಎಲ್ಲೊರು ತಟ್ಟೆ ಒಡ್ಡಿಗೊಂಡು ಬಪ್ಪಲೆ, ಮೇರಿಟೀಚರು ಬಳುಸುಲೆ. ಬವತಿ ಬಿಕ್ಷಾಂದೇಹಿ – ಹೇಳ್ತ ನಮುನೆಲಿ.
ಎಲ್ಲೊರುದೇ ಜಾಲಿಲಿ ನಿಂದುಗೊಂಡು ತಿಂದವು, ಸಾಲಾಗಿ ಮಡಗಿದ – ತಿಂತದರ ಬೇಕಾದಷ್ಟು ಹಾಯ್ಕೊಂಡು.
ಹೊತ್ತೋಪಗಾಣ ಹಶು ಬೇರೆ ಮಕ್ಕೊಗೆ.

ಎಲ್ಲೊರಿಂಗೂ ಆದ ಮೇಗೆ ಮನೆಯೋರು – ಹೇಳಿರೆ ಶಾಂಬಾವ°, ವಿದ್ಯಕ್ಕ°. ಅವರೊಟ್ಟಿಂಗೆ ಮೇರಿಟೀಚರುದೇ.
“ಮೇಡಂ ನಿಮಿಗೆ ಇನ್ನೊಂದು ಹೋಳಿಗೆ” ಹೇಳಿ ಕನ್ನಡ್ಕವ ಕಪ್ಪು ಪಟ್ಟೆನೂಲಿಂಗೆ ನೇಲುಸಿಗೊಂಡು ಇದ್ದ ಮೇರಿ ಟೀಚರಿಂಗೆ ಬಳುಸಿದನಡ ಶಾಂಬಾವ. “ಇಲ್ಲ, ಬೇಡ ಬೇಡ” ಹೇಳಿಗೊಂಡು ಅದರ ಹಾಳೆ ತಟ್ಟೆಂದ ಕೆರಿಶಿಗೆ ವಾಪಾಸು ಹಾಕಿತ್ತಡ.
“ಅಯ್ಯೋ ಅದರ ಶುದ್ದವೇ” ಹೇಳಿ ಅಲ್ಲೇ ನೋಡಿಗೊಂಡಿದ್ದ ಪಾತಿಅತ್ತೆ ಪರಂಚಿತ್ತು, ರಂಗಮಾವಂಗೆ ಕೇಳ್ತಹಾಂಗೆ.

ಈ ನಮುನೆಯ ತೀರಾ ಹೊಸ ಆಚರಣೆ ಇದ್ದ ಕಾರಣ ನೆರೆಕರೆಯವಕ್ಕೆ ಜಾಸ್ತಿ ಹೇಳಿದ್ದನಿಲ್ಲೆ, ಶಾಂಬಾವ°.
ಒಳ್ಳೆದೇ ಆತು ಹೇಳಿ ಗ್ರೇಶಿಗೊಂಡವು ನೆರೆಕರೆಯವು. ರಂಗಮಾವ ಆಟಿ ದುರ್ಗಾನಮಸ್ಕಾರ ಉತ್ತಾನದ ಹೇಳಿಕೆ ಹೇಳುವ ಸಮೆಯ ನೆಂಪಾತು.
ಹೇಳಿಕೆ ಹೋದ ಎಲ್ಲಾ ಮನೆಂದಲೂ ಬಕ್ಕು. ಚೆಂದಲ್ಲಿ ಕಳಿಗು. ಆ ಹೇಳಿಕೆ ಹೇಳುವಗ ನಮ್ಮ ಸಂಸ್ಕೃತಿಯ ಧೈರ್ಯ ಇರ್ತು ರಂಗಮಾವಂಗೆ. ಆದರೆ ಇದರ ಹೇಳಿಕೆ ಆರಿಂಗೆ ಹೇಳುಲೂ ಧೈರ್ಯ ಇತ್ತಿಲ್ಲೆ, ಶಾಂಬಾವಂಗೆ.

ವಿದ್ಯಕ್ಕನ ಇಬ್ರು ಅಕ್ಕಂದ್ರಿಂಗೆ ಹೇಳಿಕೆ ಇತ್ತು, ಆದರೆ ಅವು ಬಪ್ಪದು ಹೇಂಗೆ ಬೇಕೇ? ವಿದ್ಯಕ್ಕನ ತಮ್ಮ ಆ ದಿನ ಮದ್ಯಾನ್ನಕ್ಕೆ ಬಂದು ಉಂಡಿಕ್ಕಿ ಹೋಯಿದ°, ಹೊತ್ತಪ್ಪಗ ಮನೆಲಿ ಎಂತದೋ ಅಂಬೆರ್ಪು ಇದ್ದು ಹೇಳಿಗೊಂಡು.

~
ನಮ್ಮದೇ ಅಲ್ಲದ್ದ ಕಲ್ಪನೆಗೊ, ಅದರ ದಿನ ನಮ್ಮದೇ ಅಲ್ಲದ್ದ ಆಚರಣೆಗೊ – ಇದರ ಎಲ್ಲ ಕಂಡು ಪಾತಿಅತ್ತೆಗೆ ಕಲಿವದು ತುಂಬಾ ಇದ್ದಪ್ಪ ಹೇಳಿ ಅನಿಸಿತ್ತು.
ಎಷ್ಟೋ ತಲೆಮಾರುಗೊ ಆ ಮನೆಲಿ ಬಂದು ಹೋಯಿದು. ಇಷ್ಟರವರೆಂಗೆ ಅದೆಷ್ಟು ಜೆನರ ಹುಟ್ಟಿದ ದಿನ ಎಷ್ಟು ಸರ್ತಿ ಬಂದು ಹೋಯಿದೋ ಏನೋ, ಆ ತರವಾಡು ಮನೆಲಿ. ಅದೊಂದು ದೊಡ್ಡ ವಿಶಯವೇ ಅಲ್ಲ ಅವಕ್ಕೆ. ಈಗಾಣದ್ದಕ್ಕೆ ಇಷ್ಟೆಲ್ಲ ಗೌಜಿ ಆಡಂಬರ! ಇಷ್ಟರ ಒರೆಂಗೆ ಆ ಮನಗೆ ಬಾರದ್ದೇ ಇದ್ದ ಆ ಹುಟ್ಟುಹಬ್ಬದ ವಿಚಾರ ಈಗ ಬಂದದು ದೊಡ್ಡ ವಿಶೇಷವೇ!!
ವಿನುವಿನ ನಕ್ಶತ್ರ ಲೆಕ್ಕಲ್ಲಿ ದಿನ ನೋಡಿ, ಆ ದಿನ ಶಿವಲಿಂಗ ಸಾಲಿಗ್ರಾಮದ ತಲಗೆ ಬೊಂಡ ನೀರೆರದು, ನಾಕು ಜೆನ ಬಟ್ಟಕ್ಕೊಗೆ ದಕ್ಷಿಣೆಕೊಟ್ಟು ಅವರ ಕೈಲಿ ರುದ್ರ ಹೇಳುಸಿ, ಹತ್ತು ಜೆನ ನಮ್ಮೋರಿಂಗೆ ಉಣುಸಿ ತನ್ಮೂಲಕ ಕೊಶಿ ಪಡಕ್ಕೊಂಬ ಯೋಚನೆ ರಂಗಮಾವಂಗೆ ಬಂದದು.
ಅಮೇರಿಕಲ್ಲಿಪ್ಪ ಆಚರಣೆಯ ಮಾಡಿ, ಕೇಕು ತುಂಡುಸಿ, ಅದರ ಕ್ಲಾಸಿನ ಮಕ್ಕೊಗೆ ಹಂಚಿ, ಮೇರಿಟೀಚರಿಂಗೆ ಹೋಳಿಗೆ ಬಳುಸಿಗೊಂಡು ಕೊಶಿಪಡಕ್ಕೊಂಬ ಯೋಚನೆ ವಿದ್ಯಕ್ಕಂಗೆ ಬಂದದು.ನೋಡಿ, ಒಂದೇ ತಲೆಮಾರಿಲಿ ಎಷ್ಟು ವಿತ್ಯಾಸ ಆಗಿ ಹೋತು!
~

ಆ ದಿನದ ಕಾರ್ಯ ಮುಗಾತು. ಅಮೇರಿಕದ ಅಕ್ಕನತ್ರೆ ಪೋನಿಲಿ ಇರುಳು ಹೇಳಿಯೇ ಹೇಳಿತ್ತು. ಕಾರ್ಯ ಎಂತೆಲ್ಲ ಮಾಡಿದ್ದು,

ತರವಾಡು ಮನೆಗೆ ತಂದ ಕೇಕು - ಅಕ್ಕಂದ್ರಿಂಗೆ ತೋರುಸಲೆ ವಿದ್ಯಕ್ಕ° ಪಟ ತೆಗದು ಮಡಗಿದ್ದು!

ವಿನು ಆ ದಿನ ಎಂತೆಲ್ಲ ಮಾಡಿದ ಹೇಳ್ತ ವಿವರಂಗಳ ಕೊಟ್ಟೇ ಕೊಟ್ಟತ್ತು. ಮನಸ್ಸು ಹಗುರ ಅಪ್ಪಷ್ಟು ಹೇಳಿತ್ತು, ತನ್ನ ಮನೆಯುದೇ ಆ ಕೇಕು ತುಂಡುಸುತ್ತಷ್ಟು ಆಧುನಿಕ ಹೇಳಿ ಅದರ ಅಕ್ಕಂದ್ರಿಂಗೆ ಮನನ ಮಾಡಿ ಕೊಟ್ಟತ್ತು!ಕಾರ್ಯ ಮುಗಾತು. ಬಿದ್ದ ಕಸವುಗಳ ಒತ್ತರೆ ಆತು. ಕೇಕಿನ ಮೂರಿ ಮತ್ತೂ ಎರಡು ದಿನ ಇತ್ತು.
ಪಾತಿಅತ್ತೆಗೆ ಅದರ ಪರಿಮ್ಮಳ ಕೇಳಿರೆ ಹೊಟ್ಟೆತೊಳಸುತ್ತ ಹಾಂಗೆ ಆಯ್ಕೊಂಡಿತ್ತು. ಪುಳ್ಳಿಗೆ ಬೇಕಾಗಿ ಸಹಿಸಿಗೊಂಡು ಇತ್ತು!

“ಇನ್ನು ಒಂದೊರಿಶಕ್ಕೆ ಎಂತದೂ ತೊಂದರೆ ಇಲ್ಲೆ – ಅಬ್ಬ!” ಹೇಳಿ ರಂಗಮಾವ° ಹೇಳಿದ್ದು ಪಾತಿಅತ್ತಗೆ ಕೇಳಿತ್ತಡ – ಆಚಕರೆ ಮಾಣಿ ಬೇಜಾರಲ್ಲಿ ಹೇಳಿದ°.
ಕೇಕು ಮಡಗಿಯೇ ಹುಟ್ಟುಹಬ್ಬ ಆಯೆಕ್ಕಾರೆ ಶಾಲೆಲೇ ಮಾಡಿಕ್ಕಲಾವುತಿತು – ಮನೆಯ ಮನೆಯ ಹಾಂಗೇ ಮಡಿಕ್ಕೊಂಬಲಾವುತಿತು. ಅಲ್ಲದೋ?

ನವಗೆ ಆಚರಣೆ ಮಾಡ್ತರೆ ನಮ್ಮದೇ ದಾರಾಳ ಇದ್ದು. ಸುಮ್ಮನೆ ಆರಾರದ್ದು ಎಂತಕೆ ಪ್ರತಿತೆಗವದು?
ಹುಟ್ಟಿದ ದಿನ ಅಷ್ಟೊಂದು ಆಚರಣೆ ಮಾಡ್ಳೇ ಬೇಕು ಹೇಳಿ ಕಂಡ್ರೆ ಅದೇ ದಿನ ಎಂತಾರು ನೆಂಪೊಳಿವಂತಾದ್ದು, ನಮ್ಮದೇ ಆದ್ದು ಮಾಡ್ಳಾಗದೋ?
ಒಂದರಿ ದೇವಸ್ಥಾನಕ್ಕೆ ಹೋಗಿ, ಆರತಿ ಮಾಡುಸಿಗೊಂಡು ಬಂದು, ನೆಂಟ್ರುಗಳ ಪೈಕಿ ಬಂಙಲ್ಲಿಪ್ಪ ಮಕ್ಕೊಗೆ ಕಲಿವಲೆ ಇಂತಿಷ್ಟು ಸಕಾಯ ಮಾಡ್ತೆ – ಹೇಳಿ ಗ್ರೇಶಿಗೊಂಡರೆ ಎಷ್ಟು ಒಳ್ಳೆದು – ಸುಮ್ಮನೇ ಒಂದು ಕೆರಿಶಿ ಕೇಕು ತಂದು ಹಾಳು ಮಾಡಿ ಬಿಕ್ಕುದಕ್ಕೆ!

ಹುಟ್ಟಿದ ದಿನ ಎಡಿಗಾರೆ ಜ್ಯೋತಿ ಬೆಳಗೆಕ್ಕೇ ಹೊರತು ಕೇಂಡ್ಳಿನ ಜ್ಯೋತಿ ನಂದಿ ಭವಿಷ್ಯವನ್ನೇ ಕಸ್ತಲೆಲಿ ಸಂಕೇತಿಸಿಗೊಂಬದಲ್ಲ! ಎರಡು ಆರತಿ ಬೆಳಗಿ ಬೆಳಕಿನ ಸಂಕೇತಿಸಿಗೊಳೆಕ್ಕು. ಎಂತ ಹೇಳ್ತಿ?
~

ಪುಳ್ಳಿಮಾಣಿಯ ಹುಟ್ಟುಹಬ್ಬಕ್ಕಾಗಿ ಭವ್ಯಪರಂಪರೆ, ಶುದ್ಧ ಸಂಸ್ಕೃತಿ ಇದ್ದ  ಆ ತರವಾಡುಮನೆಗೆ ಮೊಟ್ಟೆ ಹಾಕಿದ ಕೇಕು ತಂದವು, ಅದರ ಅಶುದ್ದ ಮಾಡಿದವು ಹೇಳಿ ಕೆಲಾವು ಜೆನ ಗುಸುಗುಸು ಮಾಡಿಗೊಂಡು ಇದ್ದವು ಈಗ.
ಆಚರಣೆ ಮಾಡೆಕ್ಕು ಹೇಳಿಗೊಂಡು ಯೇವಯೇವದೋ ಊರಿನ ಆಚರಣೆಯ ಪ್ರತಿತೆಗದರೆ, ನಮ್ಮ ಊರಿಂಗೆ ಅನರ್ತ ಆಗಿ ಹೋಕು – ಮಾಷ್ಟ್ರಮನೆ ಅತ್ತೆ ಕೊಟ್ಟ ಕಾಪಿ ಕುಡ್ಕೋಂಡು ಮಾಷ್ಟ್ರುಮಾವ ಹೇಳಿದವು.
ಅಪ್ಪಾದ್ದೇ. ನವಗೆ ಆಚರಣೆ ಮಾಡ್ತರೆ ನಮ್ಮದೇ ಆದ ಹಬ್ಬ-ಹರಿದಿನಂಗೊ ತಲೆಂದ ಮೇಗೆ ಇದ್ದು. ಆರಾರ ಅನುಕರಣೆಯ ಆಚರಣೆ ನವಗೆಂತಗೆ? ನಮ್ಮದರ ಮದಾಲು ನೇರ್ಪಕ್ಕೆ ಮಾಡುವೊ. ಉಳುದ್ದದರ ನಮ್ಮದೇ ರೀತಿಲಿ ಸ್ವೀಕಾರ ಮಾಡಿ ಆಚರುಸುವೊ.

ಎಂತ ಹೇಳ್ತಿ?

ಒಂದೊಪ್ಪ: ತಲೆತಲಾಂತರಂದ ಬೆಳಗಿ ಬಂದ ನಮ್ಮ ಸಂಸ್ಕೃತಿಗೆ ಇಂಗ್ರೋಜಿಯ ಗಾಳಿ ಬೀಸಿ ಬೆಣಚ್ಚು ನಂದುವ ಮದಲು – ನಾವು  ನಮ್ಮ ಸಂಸ್ಕಾರ ಜ್ಯೋತಿಯ ನಿರಂತರ ಬೆಳಗೆಕ್ಕಲ್ಲದೋ?

9 thoughts on “ನಿತ್ಯದೀಪ ಬೆಳಗುತ್ತ ಮನೆಲಿ ಕೇಂಡ್ಳು ನಂದುಸಿದವಡ..!

  1. ಒಪ್ಪಣ್ಣನ ಲೇಖನ ಚಿಂತನೆಗೆ ಎಡೆ ಮಾಡಿ ಕೊಟ್ಟಿದು. ದೀಪ ಹೊತ್ತುಸಿ ಕತ್ತಲು ಓಡುಸೆಕ್ಕಾದ್ದೇ, ಹೊರತು ಹೊತ್ತಿಸಿದ ದೀಪವ ನಂದಿಸಿ ಕತ್ತಲೆಲಿ ಇರೆಕ್ಕಾದ್ದು ಅಲ್ಲ.”ತಮಸೋಮಾ ಜ್ಯೋತಿರ್ಗಮಯ” ಹೇಳುವದು ನಮ್ಮ ಸಂಸ್ಕ್ರುತಿ
    ಮಕ್ಕೊ ಬೇರೆ ಕಡೆ ನೋಡಿ, ಅಲ್ಲಿ ಮಾಡಿದ ಹಾಂಗೇ ಎನ್ನ ಹುಟ್ಟು ಹಬ್ಬ ಕೂಡಾ ಮಾಡೆಕ್ಕು ಹೇಳಿ ಅಪ್ಪ ಅಮ್ಮನ ಹತ್ರ ಹೇಳುತ್ತವು.ಅನುಕರಣೆ ಅವರ ಗುಣ. ಅದು ತಪ್ಪೋ ಸರಿಯೋ ಹೇಳೆಕ್ಕಾದ್ದು ಅವರ ಹೆತ್ತವು. ಎಂಗಳ ನೆರೆಲಿ ಬೆಂಗಳೂರಿನ ಸರೋಜಮ್ಮ ಹೇಳುವವು ಇದ್ದವು. ದೇವರಿಂಗೆ ಆರತಿ ಮಾಡಿ ಪುಳ್ಳಿಯಕ್ಕಳ ಮಣೆಲಿ ಕೂರಿಸಿ ಅವಕ್ಕೂ ಆರತಿ ಮಾಡಿ, ಅವರ ಪ್ರೆಂಡ್ ಗೊಕ್ಕೆ ಸಿಹಿ ತಿಂಡಿ ಕೊಟ್ಟು ಆಚರಿಸಿಗೊಂಡು ಇತ್ತಿದ್ದವು. ಇದರ ನೋಡಿದ ಎಂಗಳ ನೆರೆಯ ಬೇರೆ ಮಕ್ಕೊ ಕೂಡಾ ಇದರ ಅನುಕರಣೆ ಮಾಡಿತ್ತಿದ್ದವು.
    ಈಗ ಕಾನ್ವೆಂಟಿಂಗೆ ಹೋದವು ಅಮ್ಮನ ಮಮ್ಮಿ ಹೇಳಲೆ ಸುರು ಮಾಡಿದ್ದವು. “ಅಬ್ಬೆ” ಹೋಗಿ ಅಮ್ಮ ಬಂತು, “ಅಮ್ಮ” ಹೋಗಿ “ಮಮ್ಮಿ” ಬಂತು. ಇನ್ನು ಎಂತ ಬತ್ತು ಹೇಳಿ ನೋಡೆಕ್ಕಷ್ಟೆ.

  2. ಒಪ್ಪಣ್ಣ ಹುಟ್ಟು ಹಬ್ಬ ಹೇಂಗೆ ಆಚರಿದನೋ ಎಂತೋ, ಕೇಂಡ್ಲು ನಂದಿಸಿದನಾ?…ದೀಪ ಹೊತ್ತಿಸಿದನೋ.?…ಕೇಕು ತುಂಡು ಮಾಡಿದನೋ?…ಉಮ್ಮಪ್ಪ ಎನಗರಡಿಯ…….

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಒಪ್ಪಣ್ಣ…ಯುಗಾದಿಯ ಒಟ್ಟೊಟ್ಟಿಂಗೆ ನಿನ್ನ ಹುಟ್ಟ ಹಬ್ಬದೆ ಬಯಿಂದು.. ನಿನ್ನ ಜೀವನ ಇಡೀ ಸೀವೇ ಇರಲಿ…

  3. ಮೇರಿ ಅಮ್ಮನ ಕಂಟ್ರೇಕ್ಟಿಲ್ಲಿ “ಹುಟ್ಠು ಹಬ್ಬ”ದ ಆಚರಣೆ ಲಾಯಕಿಲ್ಲಿ ನಡದತ್ತು. ಭಾರ್ ಗ್ರೇಂಡು ಆಗಿತ್ತು. ಅಂಬಗ ಬರ್ತ್ ಡೇ ಗೆ ಪಟ ಕವರೇಜು, ವಿಡಿಯೋ ಕವರೇಜು ಇತ್ತಿಲ್ಲೆಯೋ ?

    ಹಟ್ಟಿ ಕರೆಲಿ ಪಾತಿ ಅತ್ತೆ “ಕೇಕಿಂಗೆ ಮೊಟ್ಟೆ ಹಾಕುತ್ತವಾಡ ಅಪ್ಪೋ” ಕೇಳಿದ್ದದು, ಕೇಕು ಕೊಡುವಗ ಹಲ್ಲು ಬೇನೆ ಹೇಳಿ ತಪ್ಪುಸೆಂಡದು,
    ಮೇರಿ ಟೀಚರು ಹೋಳಿಗೆ ತೆಗದು ಪುನ: ಕೆರಿಶಿಗೆ ಹಾಕಿದ್ದದು, ಎಲ್ಲಾ ಕಲ್ಪನೆ ಮಾಡಿ ನೆಗೆ ಬಂದು ತಡೆಯ. ಒಪ್ಪಣ್ಣಾ. ಲಾಯಕಾಯಿದು ಒಪ್ಪಣ್ಣಾ. ಕಡೇಣ ಒಪ್ಪ ನಿಜವಾಗಿಯೂ ವಿಚಾರ ಮಾಡೆಕಾದ ಸಂಗತಿಯೇ.

    1. ಆ ದಿನ ಹಳೆಮನೆ ಅಣ್ಣಂಗೆ ಕಂಬುಳಕ್ಕೆ ಹೋಪಲಿತ್ತೋ ತೋರುತ್ತು.
      ಹಾಂಗಾಗಿ ಇದರದ್ದು ಎಂತ್ಸೂ ಸುದ್ದಿ ಇಲ್ಲೆ..!!! 😉

  4. @ತಾರಣಿ: ಎ೦ಗಳ ಊರಿಲಿ ಒಬ್ಬ ಮಾಣಿ ತ೦ಗೀಸು ಚೀಲ ನೇಲುಸಿಯೋ೦ಡು ಶಾಲೆಗೆ ಬಪ್ಪಲೆಡಿಯ ಹೇಳಿ ಅಪ್ಪ೦ಗೆ ತಾಕೀತು ಮಾಡಿದ್ದಡ°

  5. ಹುಟ್ಟು ಹಬ್ಬ- ಹೆಸರೇ ಯಾವಭಾಷೆಯಲ್ಲಿ ಬರೆದರೂ ನಮ್ಮದಲ್ಲ. ಈ ಪರಿಕಲ್ಪನೆ life is an Icecream taste it before it melt. ಎನ್ನುವ ಭಾವನೆಯ ಮರ. ನಮ್ಮದು ಚತುರ್ಥ ಪುರುಷಾರ್ಥದಲ್ಲಿ ಉಳಿದ ಮೂರನ್ನು ಬಳಸುವ ತತ್ತ್ವಶಾಸ್ತ್ರ.
    ಶ್ರೀಮಠದ ಶಿಷ್ಯಗಣದಲ್ಲೂ ” ಈ ಸಡಗರ ಇರುವುದು, ಯೋಚನೀಯ ಮತ್ತು ಶೋಚನೀಯ. ” ಹುಟ್ಟಿಸುವ ಹಬ್ಬ “!! ಎಲ್ಲರಿಗೂ ಸಂತೋಷಪ್ರದ ಆದರೆ ಈ…
    ಸಾವಿನರಮನೆಗೆ ಹೋಗುವ Q ಸೇರಿ, ಒಂದೊಂದೇ ಹೆಜ್ಜೆ ಕೋಣಸವಾರಿಯವನಿಗೆ ಹತ್ತಿರವಾಗುವ, ವರ್ಷದ ಈ ದಿನದ ಬಗ್ಗೆ ಹಿಗ್ಗು
    ಏಕೋ ನಾನರಿಯೆ.

    1. ಎಂತ ಮಾಡುದು ಶ್ರೀಕಾಂತಣ್ಣ,
      ಒಟ್ಟಾರೆ ಅದೊಂದು ’ಸಾಮಾಜಿಕ ಆಚರಣೆ’ ಆಗಿ ಹೋಯಿದು.
      ಇರಳಿ, ತೊಂದರೆ ಇಲ್ಲೆ – ಆ ದಿನ ನೆಂಪೊಳಿವ ಕೆಲಸ ಮಾಡಿರೆ ಒಳ್ಳೆದು.
      ಎಂತ ಹೇಳ್ತಿ?

  6. ಖಂಡಿತವಾಗಿಯೂ ತುಂಬ ಗಹನವಾಗಿ ವಿಚಾರ ಮಾಡುವ ಸಂಗತಿ ಇದು.

    ಒಂದು ಸಣ್ಣ ಘಟನೆ : ಲೇಖನದಲ್ಲಿ ಹೇಳಿದ ಹಾಗೆ ಒಂದು ಮನೆಯಲ್ಲಿ ಹುಟ್ಟು ಹಬ್ಬದ ಆಚರಣೆ. ಆದರೆ ಅವರು ನಮ್ಮ ಸಂಸ್ಕೃತಿ, ನಮ್ಮ ತನ ಎಲ್ಲವನ್ನು ಒಪ್ಪುವವರು. ಆ ಮನೆಯ ಮಗುವಿನ ಹುಟ್ಟು ಹಬ್ಬದಲ್ಲಿ ಕೇಕ್ ಕಟ್ ಮಾಡಿದರೆ ಹೇಗೆ? ಅಲ್ವಾ? ಅದಕ್ಕೆ ಅವರು ಮಾಡಿದ್ದು ಏನು ಗೊತ್ತಾ? ಮೈಸೂರ್ ಪಾಕ್ ತಂದರು. ಎಲ್ಲರಂತೆ ದೀಪ ನಂದಿಸಿದರು, ಕೇಕ್ ಬದಲು ಮೈಸೂರ್ ಪಾಕ್ cut ಮಾಡಿದರು, ಅದನ್ನು ಹಂಚಿದರು.

    ಈ ಮೇಲಿನ ಘಟನೆಯ ಮುಖಂತರ ಒಂದು ವಿಷಯ ಗೊತ್ತಾಯಿತು. ನಾವು ಅಂಧಾನುಕರಣೆಯನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂದು. ದೀಪವನ್ನು ನಂದಿಸುವುದು ನಮ್ಮ ಸಂಸ್ಕೃತಿಯಲ್ಲೇ ಇಲ್ಲ. ನಾವು ಯಾಕೆ ಆ ರೀತಿಯ ಆಚರಣೆಗೆ ಒಳಗಾಗುತ್ತಿದ್ದೇವೆ? ಇದರ ಹಿಂದೆ ಯವ ಶಕ್ತಿಯ ಕೈವಾಡವಿದೆ ಎಂದು ಸ್ವಲ್ಪ ಆಳವಾಗಿ ಯೋಚಿಸಿದಾಗ ನಮಗೆ ತಿಳಿಯುತ್ತದೆ.

    ಆಧುನಿಕತೆಯ ಬೆನ್ನು ಹತ್ತಿ ನಾವಿಂದು ಸಾಗುತ್ತಿದ್ದೇವೆ. ಎಲ್ಲರೂ ಮಾಡುವಾಗ ನಾವು ದೀಪ ಉರಿಸಿದರೆ, ಬಂದಿರುವ ಜನ ಎನಂದುಕೊಂಡಾರು, ಜಗತ್ತೇ ಇಷ್ಟು ಮುಂದೆ ಹೋಗಿರುವಾಗ ಹಳೆಯ ಪದ್ಧತಿಗಳೆಲ್ಲ ಆಚರಣೆ ಮಾಡಿದರೆ, ನಾವು ಸಮಾಜದಲ್ಲಿ ಇನ್ನು ಹಿಂದೆ ಉಳಿದವರಂತೆ ಅಗೋದಿಲ್ವೇ? ನಮ್ಮ standard ಕಡಿಮೆ ಅಗೊಲ್ಬೇ? ಈ ರೀತಿಯ ಹುಚ್ಚು ಹುಚ್ಚು ಪ್ರಶ್ನೆಗಳು. ಈ ರೀತಿಯ ಭವನೆಗಳಿಂದಲೇ ನಮ್ಮ ಪಧ್ಧತಿಗಳು ನಾಶವಾಗಿ ಹೋಗುತ್ತಿವೆ.

    ಆಧುನಿಕತೆಯ ಪರಿಣಾಮ ಹೇಗಿದೆ ಎಂದು ಸಣ್ಣ ಘಟನೆ ನೆನಪಿಗೆ ಬರುತ್ತೆ – ಹಲವು ವರ್ಷಗಳ ಹಿಂದೆ ನಡೆದಿದ್ದು. ಹಳ್ಳಿಯ ಹುಡುಗ ಪೇಟೆಗೆ ಓದಲು ಬಂದ. ಒಂದು ದಿನ ತರಗತಿ ನಡೆಯುತ್ತಿರಬೇಕಾದರೆ, ವಯಸ್ಸಾದ ಹರಕು ಸೀರೆಯುಟ್ಟ ಹಳ್ಳಿ ಹೆಂಗಸೊಬ್ಬಳು ಆ ಶಾಲೆಗೆ ಬಂದಳು. ಒಬ್ಬ ಹುಡುಗನನ್ನು ನೋಡಬೇಕಿತ್ತು ಎಂದು ವಿನಂತಿಸಿಕೊಂಡಳು. ತರಗತಿಯಿಂದ ಆ ಹುಡುಗನನ್ನು ಕರೆಸಲಾಯಿತು. ಹುಡುಗ ಬಂದು ಸರಸರನೆ ಆಕೆಯೋದಿಗೆ ಮಾತನಾಡಿಕೊಂಡು ತರಗತಿಗೆ ಮರಳಿದ. ಗುರುಗಳು ಸಹಜವಾಗಿ ಅವನನ್ನು ವಿಚರಿಸಿದರು – ಬಂದಿದ್ದವರು ಯಾರು? ಎಂದು. ಹುಡುಗ ಉತ್ತರಿಸಿದ – ” ಹಳ್ಳಿಯಲ್ಲಿ ನಮ್ಮ ಹೊಲದಲ್ಲಿ ಕೆಲಸಮಾಡುವ ಹೆಂಗಸು” ಎಂದು. ಆದರೆ ಬಂದಿದ್ದ ಹೆಂಗಸಿನ ಪರಿಚಯವಿದ್ದ ಆ ಹುಡುಗನ ಸಹಪಾಠಿಯೋಬ್ಬ ತಟ್ಟನೆ ಎದ್ದು ಹೇಳಿದ ” ಅಲ್ಲ ಸರ್, ಅವನ ತಾಯಿ ಅದು!” ತನ್ನ ಸಹಪಠಿಗಳ ಎದುರು ಹರಕುಟ್ಟ ಅಶಿಕ್ಶಿತ ಹಳ್ಳಿ ಗಮಾರಳ ಮಗ ತಾನೆಂದಲ್ಲಿ ಆ ವಿದ್ಯಾರ್ಥಿಗೆ ಎಂಥ ನಾಚಿಕೆಗೇಡು! ಅದಕ್ಕಾಗಿ ಅವಳು ತಾಯಿಯೇ ಅಲ್ಲ ತನ್ನ ಪ್ರತಿಷ್ಟೆಗೆ ಅಡ್ಡ ಬರಲುತಾಯಿಗೆ ಎಲ್ಲಿಯ ಅಧಿಕಾರ?. ಇದು ಆಢುನಿಕತೆ ಅಥವಾ ಅಂಧನುಕರಣೆಯ Side effect.

    ನಾವು ನಮ್ಮ ಹಿರಿಯರು ಕಳೆದ ೧೦ ಸಹಸ್ರ ವರ್ಷಗಳಿಂದ ನಮಗೆ ಈ ನಾಡಿಗೆ ನೀಡಿದ ಪಧ್ಧತಿಗಳನ್ನು ಮರೆತು, ಬದಿಗೆ ಸರಿಸಿ ನಾವು ಈಗ ಹೊಸದೊಂದು ಸ್ವಭಾವ, ಪಧ್ಧತಿಯನ್ನು ರೂಪಿಸುಕೊಳ್ಳುವತ್ತ ಹೊರಟಲ್ಲಿ ಅದರಿಂದ ನಮಗೇ ಮಾರಕವಾಗಿ ಪರಿಣಮಿಸುತ್ತದೆ. ಪಾಶ್ಚಾತ್ಯರ ಭೌತಿಕ ನಾಗರಿಕತೆಯ ಬೆನ್ನುಹತ್ತಿದರೆ ಇನ್ನು ಮುಂಬರುವ ಮೂರು ಪೀಳಿಗೆಗಳಲ್ಲಿ ನಮ್ಮ ಜನಂಗವು ನಾಮಾವಶೇಷವದೀತು. ಏಕೆಂದರೆ ಈ ರೀತಿಯ ಸಣ್ಣ ಬಂಧವ್ಯ, ಪಧ್ಧತಿಗಳ ಆಧಾರದಲ್ಲೆ ಈ ದೇಶ ಇವತ್ತಿಗೂ ತಲೆ ಎತ್ತಿ ನಿಂತಿರುವುದು. ಇದುವೇ ನಮ್ಮ ರಾಷ್ಟ್ರದ ಬೆನ್ನೆಲೆಬು. ಅದನ್ನೇ ನಾವು ಮುರಿದರೆ ಹೇಗೆ? ಅಲ್ಲವೇ?

    ಜಗತ್ತು ಸಾವಿರ ಯೋಚಿಸಲಿ, ಆದರೆ ನಮ್ಮತನವನ್ನು ನಾವು ಜಗತ್ತಿಗೆ ಕಲಿಸೋಣ, ಹುಟ್ಟುಹಬ್ಬದಲ್ಲಿ ಜ್ಯೋತಿ ಬೆಳಗಿಸಿ, ಜಗತ್ತಿಗೆ ಬೆಳಕು ಕೊಡೋಣ.

    ತುಂಬಾ ಒಳ್ಳೆಯ ವಿಚರವನ್ನು ಒಪ್ಪಣ್ಣ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಪ್ರತಿಯೊಬ್ಬ ಓದುಗರು ಇನ್ನು ಮುಂದೆ ನಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡೋದಾದರೆ, ದೀಪ ನಂದಿಸಿ ಅಲ್ಲ, ದೀಪ ಬೆಳಗಿಸಿ ಎಂದು ಸಂಕಲ್ಪ ಮಾಡಿದರೆ ನಿಜವಾಗಿ ಒಪ್ಪಣ್ಣನ ಕಳಕಳಿಗೆ ತಕ್ಕ ಸ್ಪಂದನೆ ತೋರಿದಂತಾಗುತ್ತದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×