Oppanna.com

ಹಳ್ಳಿಮನೆ ಆಸ್ತಿ ಭಾಗ ಎರಡಾತು, ಪೇಟೆ ಮನೆ ಆಸೆಯೂ ಎರಡು ಭಾಗ ಆತು..!

ಬರದೋರು :   ಒಪ್ಪಣ್ಣ    on   07/02/2014    14 ಒಪ್ಪಂಗೊ

ಇಲ್ಲಿವರೆಗೆ: ಹಚ್ಚಹಸುರಿನ ದೊಡಾ ಜಾಗೆ! ಅಡಕ್ಕೆ, ತೆಂಗು, ಹಲವು ಬಗೆಯ ಗೆಡುಗಳ ನಂದನವನ ನೆಕ್ರಾಜೆ!!
ನೆಕ್ರಾಜೆ ಅಪ್ಪಚ್ಚಿಗೆ ಇವೆಲ್ಲದರ ಮಕ್ಕಳ ಹಾಂಗೆ ಸಾಂಕುದು ಕೆಲಸ, ಅವರ ತಮ್ಮಂಗೆ ಪೇಟೆ ಕೆಲಸ.
ಪೇಟೆ ಸಂಪರ್ಕ ಹೆಚ್ಚಪದ್ದೇ, ಕ್ರಮೇಣ ಅವಕ್ಕೆ ಪೇಟೆರುಚಿ ಹತ್ತಿಗೊಂಡತ್ತು.
ಹಳ್ಳಿ ದೂರ ಅಪ್ಪಲೆ ಸುರು ಆತು.
ಮುಂದೆ?

~

ಅದೊಂದು ದಿನ, “ನವಗೆ ಪಾಲಾಯೇಕು” ಹೇಳಿದವಾಡ ನೆಕ್ರಾಜೆ ಅಪ್ಪಚ್ಚಿಯ  ತಮ್ಮ!
ಅನ್ಯೋನ್ಯತೆಲೇ ನೆಡದ ಸಂಸಾರದ ಎಡಕ್ಕಿಲಿ ಈ ಪಾಲುಪಂಚಾತಿಗೆ ಎಲ್ಲಿಂದ ಬರೆಕ್ಕು?
ಅಣ್ಣ ಗ್ರೇಶದ್ದೇ ಇದ್ದ ಒಂದು ಸಂಗತಿ ಅದು.
ಸಣ್ಣ ಪ್ರಾಯಂದಲೇ ಜಾಗೆಯ ಜೆಬಾದಾರಿಕೆಯ ವಹಿಸಿಗೊಂಡ ಮತ್ತೆ ಇಂದಿನ ಒರೆಂಗೂ ಜಾಗ್ರತೆಲಿ ಕಟ್ಟಿ ಬೆಳೆಶಿದ ಸಾಮ್ರಾಜ್ಯ ಅದು.
ಪಾಲು ಮಾಡುದು ಹೇದರೆ ಬೇಜಾರವೇ ಅಲ್ಲದೋ? ಅಪ್ಪು.

ಬೇಜಾರಲ್ಲೇ ಅಣ್ಣನೂ ಆಲೋಚನೆ ಮಾಡಿದವು, “ಆದರೆ ಪಾಲಪ್ಪದು ತಪ್ಪಲ್ಲನ್ನೇ – ಎಲ್ಲ ಮನೆಗಳಲ್ಲಿಯೂ ಆವುತ್ತು.
ತಮ್ಮನ ಸಂಸಾರಕ್ಕೆ ಸ್ವಾಯತ್ತತೆ ಬೇಕೋ ಏನೋ..” – ಸಮ ಹಾಂಗಾರೆ..
ನಾಲ್ಕು ದೊಡ್ಡೋರ ದಿನಿಗೇಳಿ, ನ್ಯಾಯ ಪೂರ್ವಕವಾಗಿ ಪಾಲುದೇ ಆತು.
ಕೆರೆ ಇಪ್ಪ ಮೇಗಾಣ ಹೊಡೆ ತಮ್ಮಂಗೆ; ಹೊಳೆ ಇಪ್ಪ ಕೆಳಾಣ ಹೊಡೆ ಅಣ್ಣಂಗೆ – ಹೇದು ನಿಜ ಆತು.
ತಮ್ಮಂಗೆ ಒಳ್ಳೆ ಜಾಗೆಯೇ ಅಣ್ಣನ ಮನಸ್ಸಿಲಿ ಇದ್ದದು. ಇಬ್ರೂ ಒಪ್ಪಿಗೊಂಡವು.

ತಮ್ಮಂಗೆ ಚೆಂದದ ಮನೆ ಕಟ್ಟಿಯೇ ಕೊಡೆಕ್ಕು – ಹೇದು ಅಣ್ಣನ ಆಶೆ.
ಹಾಂಗೆ, ಒಳ್ಳೆ ದಿಕ್ಕೆ ಆಯ ನೋಡಿ ನೀಕ ತೆಗದೂ ಆತು.
ಕೆರೆಯ ಬಲತ್ತಿಂಗೆ ಎತ್ತರದ ಮೂಡಮೋರೆಯ, ತೆಂಕುಕಟ್ಟಿನ ಜಾಗೆ.
ಇಲ್ಲಿ ಮನೆ ಕಟ್ಟಿರೆ ಅಭಿವೃದ್ದಿ ಒನಕ್ಕೆಲಿ ಬರದ ಹಾಂಗೆ – ಹೇದು ಸ್ವತಃ ಜೋಯಿಷಪ್ಪಚ್ಚಿಯೇ ಹೇಳಿದವು.
ತಮ್ಮ ಅಭಿವೃದ್ಧಿ ಆವುತ್ತರೆ ಇನ್ನೆಂತ ತಲೆಬೆಶಿ!

ಮನೆಕಟ್ಳೆ ಬೇಕಾದ ಸಾಮಾನುಗೊ ಜಾಲಿಲಿ ಬಂದು ಬೀಳುಲೆ ಸುರು ಆತು.
ನೀಕದ ಬಗ್ಗೆ, ಆಯದ ಬಗ್ಗೆ, ಕೆಲಸ ವಿಶ್ಯ – ಇದೆಲ್ಲವನ್ನೂ ತಮ್ಮನ ಹತ್ತರೆ ವಿಮರ್ಶೆಗೆ ಹೆರಡುದೂ ಆತು.
ಆದರೆ ತಮ್ಮಂಗೆ ಇದೇವದರ್ಲಿಯೂ ಆಸಕ್ತಿ ಇಲ್ಲಲೇ ಇಲ್ಲೆ.
ಅಂಬಗ ತಮ್ಮನ ಆಸಕ್ತಿ ಯೇವದು?
ಪೇಟೆಯ ಮೇಗೆ. ಪೇಟೆ ಜೀವನದ ಮೇಗೆ. ಇದು ಮತ್ತೆಯೇ ಅಲ್ಲದೋ ಅಣ್ಣಂಗೆ ಅಂದಾಜಿ ಆದ್ಸು.

~

ಪಾಲಾದ ಸಮೆಯಂದಲೇ – ಆ ಜಾಗೆಗೆ ಗಿರಾಕಿ ಬಕ್ಕೋದು ನೋಡಿಗೊಂಡಿತ್ತಿದ್ದ° ತಮ್ಮ.
ಅಣ್ಣನ ಕಣ್ಣುಕಟ್ಟಿಂಗೆ ಬೇಕಾಗಿ ಮನೆ ಕಟ್ಟುವ ಕೆಲಸದ ಮೇಗೆ ಆಸಕ್ತಿ ಇದ್ದ ಹಾಂಗೆ ತೋರುಸಿಗೊಂಡರೂ, ಮನಸ್ಸಿನ ಒಳ ಗಿರಾಕಿಗಳ ಬಗ್ಗೆಯೇ ಯೋಚನೆ ಇದ್ದತ್ತು.
ಪೇಟೆಲಿ ಜಾಗೆ ತೆಗದು, ಮನೆ ಕಟ್ಟಿ ಕೂಪಷ್ಟು ಪೈಶೆಯ ಒಂದರಿಯೇ ಕೊಟ್ಟು ಜಾಗೆ ತೆಗೇಕಾದರೆ ಹೆರಾಣೋರೇ ಆಯೆಕ್ಕಟ್ಟೆ ಇದಾ!
ಪೇಟೆಲಿ ಸಣ್ಣ ಜಾಗೆಯೂ ನೋಡಿ ಆಯಿದು; ಮಾತುಕತೆಯೂ ಮಾಡಿ ಆಯಿದು.
ಊರಿನ ಜಾಗೆಗೆ ಕ್ರಯಚ್ಚೀಟು ಆದ ಕೂಡ್ಳೇ ಆ ಜಾಗೆ ಮಾಡಿಗೊಂಬ ನಮುನೆ ಎಗ್ರಿಮೆಂಟುದೇ ಆಯಿದು.

ಹಾಂಗೇ ಆತುದೇ – ತೆಂಕ್ಲಾಗಿಯಾಣ ಒಂದು ಚೇಟ ಬಂದು ಹೇಳಿದಷ್ಟಕ್ಕೆ ಕ್ರಯ ಮಾಡಿತ್ತು.
ಕಾಡು ತುಂಬಿದ ಕುತ್ತ ಗುಡ್ಡೆ, ನೀರಿಂಗೆ ಬರ ಇಲ್ಲದ್ದ ನಮುನೆಯ ಕೆರೆ, ಪ್ರಶಾಂತ ವಾತಾವರಣ, ರಜ್ಜ ದೂರ ನೆಡದರೆ ಒಂದು ಹೊಳೆ- ಇದೆಲ್ಲವೂ ಇಪ್ಪ ಜಾಗೆಗೆ ತೆಂಕ್ಲಾಗಿ ಇದರ ನಾಲ್ಕು ಪಾಲು ಕೊಡೆಡದೋ?
ಮಾತುಕತೆ ಆತು, ಒಂದು ವಾರಲ್ಲಿ ಪೈಶೆ ವೆವಹಾರವೂ ಮುಗಾತು.

~

ಅಣ್ಣಂಗೆ ಈ ಯೇವ ಸಂಗತಿಯೂ ಅರಡಿಯ.
ಎಡಕ್ಕಿಲಿ ಮಲೆಯಾಳ ಮಾತಾಡ್ತ ಚೇಟಂಗೊ ನಾಲ್ಕು ಬಂದು ಹೋದ್ಸು ಗೊಂತಾದರೂ, ಅವು ಎಂತಕೆ ಬಂದದು ಹೇದು ಅರಾಡಿಯ.
ಒಂದು ಸರ್ತಿ ಕೇಳಿದ್ದದಕ್ಕೆ – ಮೇಗಾಣ ಮಜಲು ಗೆದ್ದೆಲಿ ಶುಂಟಿ ಬೆಳೆಶಲೆ ಕಂತ್ರಾಟು ಕೇಳುಲೆ ಬಂದದು – ಹೇಳಿದ್ದನಾಡ!
“ಇದಾ, ಶುಂಟಿಗೆ ಜಾಗೆ ಬಿಡೆಡ, ಮಣ್ಣಿನ ಸಾರ ಶುಂಠಿಲಿ ಹೋವುತ್ತು; ಮತ್ತೆ ಬರೇ ಜೇಡಿಮಣ್ಣು ಒಳಿತ್ತು” – ಹೇದು ಅನುಭವದ ಬುದ್ಧಿವಾದ ಹೇಳಿದವಾಡ.
ಆದರೆ ಆದ್ಸೆಂತರ?!

~

ನೆಕ್ರಾಜೆ ಅಪ್ಪಚ್ಚಿ ಗ್ರೇಶದ್ದದೇ ಆಗಿ ಹೋತು.
ಮಾರಾಟದ ವಿಚಾರ ಪೂರಾ ಇತ್ಯರ್ಥ ಆದ ಮತ್ತೆ ಅಣ್ಣನ ಹತ್ತರೆ ಬಂದು
“ಹೀಂಗೀಂಗೆ, ಎನಗೆ ಇಲ್ಲಿ ಇಪ್ಪಲೆ ಮನಸ್ಸಿಲ್ಲೆ, ಸಂಸಾರದ ಒಟ್ಟಿಂಗೆ ಪೇಟೆಲಿರ್ತೆ. ಹಾಂಗಾಗಿ ಎನ್ನ ಪಾಲಿನ ಜಾಗೆ ಮಾರಿದೆ” – ಹೇಳಿದನಾಡ.
ನೆಕ್ರಾಜೆ ಅಪ್ಪಚ್ಚಿಗೆ ಭೂಮಿಯೇ ಬಾಯಿಬಿರುದ ಹಾಂಗಾತು.
“ಹಾಂಗೆ ಮಾಡಿಕ್ಕೆಡಾ” – ಹೇದು ಎಡಿಗಾಷ್ಟು ಸಮದಾನಲ್ಲಿ ಹೇಯಿದವು, ಯೇಯ್.. ಪ್ರಯೋಜನ ಆತಿಲ್ಲೆ.
ನಿನಗೆ ಬೇಡದ್ರೆ ಎನಗೇ ಕೊಡು, ಆನೇ ನೋಡಿಗೊಂಡು ಬತ್ತೆ ಹೇಳಿದವು. ಏಯ್!

ಜಾಗೆ ಪಾಲುಮಾಡಿ ತಮ್ಮಂಗೆ ಕೊಡುವಗಳೂ ಬೇಜಾರಾಯಿದಿಲ್ಲೆ; ಅಪ್ಪನ ಜಾಗೆ ನಮ್ಮೊಳವೇ ಇರ್ತನ್ನೇ – ಹೇದು ಗ್ರೇಶಿಗೊಂಡವು.
ಆದರೆ ಈಗ? ಏಕಾಏಕಿ ಅದರ ಮಾರಿಯೇ ಬಿಟ್ಟದೋ? ಅಷ್ಟು ಅಂಬೆರ್ಪಿಲಿ ಮಾರೇಕಾದರೆ ಪಾಲು ಮಾಡೇಕಾತೋ?
ಬರೇ ಪೈಶೆ ಮಾಂತ್ರ ಪಾಲಿಲಿ ಬೇಕಾಗಿದ್ದರೆ ಜಾಗೆಯ ಒಪ್ಪಿಗೊಂಡದೆಂತಕೆ?
ಜಾಗೆ ಅಣ್ಣಂಗೆ ಆತು, ಎನಗೆ ಪೈಶೆ ಮಾಂತ್ರ ಸಾಕು – ಹೇಳುಲಾವುತಿತಿಲ್ಲೆಯೋ?
ಸ್ವಂತ ಮಕ್ಕಳ ಹಾಂಗೆ ಸಾಂಕಿದ ಜಾಗೆಯ ಆರೋ ಜಾಗೆಯ ಘನತೆ ಗೊಂತಿಲ್ಲದ್ದ ಮೂರ್ನೇ ವೆಗ್ತಿಗೆ ಕೊಟ್ಟದೆಂತಕೆ?
ಅನ್ಯಾಯವಾಗಿ ಜಾಗೆಯ ಎರಡು ತುಂಡು ಮಾಡಿ – ಒಂದು ತುಂಡಿನ ಹೆರಮಾಡಿದನ್ನೇ? – ಅಣ್ಣಂಗೆ ಕರುಳು ಹಿಂಡಿದ ಹಾಂಗೆ ಆಗಿತ್ತು.
ಆಗಿತ್ತು, ಆಗಿಂಡೇ ಇದ್ದು, ಮುಂದೆಯೂ ಆವುತ್ತಾ ಇದ್ದು.

ಈ ಬೇಜಾರಲ್ಲೇ ತಮ್ಮನ ಹತ್ತರೆ ಮಾತು ಬಿಟ್ಟವು.

~
ಹೆಂಡತ್ತಿ ಮಕ್ಕಳ ಕೂಡಿ ಮನೆ ಬಿಟ್ಟು ಜಾಲಿಂಗಿಳುದು – ಸೀತ ಹೋಗಿಯೇ ಬಿಟ್ಟ° ತಮ್ಮ.
ಅಂದಿಂದ ಇಂದಿನ ಒರೆಂಗೂ – ಅವಿಬ್ರೂ ಮಾತೇ ಆಡಿದ್ದವಿಲ್ಲೆ.
ಅಣ್ಣಂಗೆ ಬೇಕಾದ್ಸೆಲ್ಲವೂ ಇದ್ದು; ಆದರೆ ಈ ತಮ್ಮನ ಮೇಗೆ ಬೇಜಾರ ಇಳುದ್ದಿಲ್ಲೆ.

~

ಜಾಗೆ ತೆಗದ ಚೇಟಂದು ನಿತ್ಯವೂ ಬೇಲಿ ಜಗಳ.ಈ ಶುದ್ಧ ನೀರಿಂಗೆ ಇನ್ನು ವಿಷ ಬೀಳುಗೋ?
ಗುಡ್ಡೆ ಬೋಳುಮಾಡಿ ಆಚೊರಿಶ ರಬ್ಬರು ಹಿಡಿಶಿತ್ತಾಡ.
ರಬ್ಬರಿಂಗೆ ಎಂಡೋಸಲ್ಪಾನಿನ ನಮುನೆ ವಿಷದ ಮದ್ದುದೇ ಬಿಡ್ತಾಡ.
ಅದರ ಜಾಗೆಂದ ಕೆಳ ಇಪ್ಪ ಇವರ ಜಾಗೆಗೆ ನೀರಿಲಿ ಎಂಡೋಸಲ್ಪಾನು ಬತ್ತು – ಹೇದು ನೆಕ್ರಾಜೆ ಅಪ್ಪಚ್ಚಿಯ ಚಿಂತೆ.
ಹೀಂಗೆ ಎನ್ನ ಜಾಗೆಗೆ-ನೀರಿಂಗೆ ವಿಷ ಹಾಕುವ ಬದಲು ಒಂದೇ ಸರ್ತಿ ಎನ್ನ ಬಟ್ಳಿಂಗೆ ವಿಷ ಹಾಕಿ ಕೊಲ್ಲು ಮಾರಾಯನೇ – ಹೇಳಿ ಒಂದೆರಡು ಸರ್ತಿ ಹೇಳಿಯೂ ಬಿಟ್ಟಿದವಾಡ.
ಅವರ ಜಾಗೆಲಿಪ್ಪ ಎರಡು ನಾಗನಕಲ್ಲು ಎಂತಾತೋ? ಉಮ್ಮಪ್ಪ!
ಕೆರೆಯ ಮಾದು ಒಡದ್ದರ ಸರಿಮಾಡಿದ್ದೂ ಇಲ್ಲೆ ತೋರ್ತು; ಈ ಒರಿಶಂದ ಅಷ್ಟು ನೀರು ನಿಂಗು ಹೇಳಿಯೂ ಧೈರ್ಯ ಇಲ್ಲೆ.
ಹೆರಿಯೋರು ಮಾಡಿಕೊಟ್ಟ ಜಾಗೆಯ ಭದ್ರತೆಲಿ ನೋಡಿ ಬೆಳೆಶಿಗೊಂಡು ಬಂದರೂ ತಮ್ಮನ ಮನಸ್ಸಿನ ವಿಶಾಲ ಮಾಡಿ ಒಳಿಶುಲೆ ಎಡಿಗಾಯಿದಿಲ್ಲೆನ್ನೆ!
ಮೇಲೆ ನಿಂದು ನೋಡ್ತ ಪಿತೃಗೋಕ್ಕೆ ಎಂತ ಹೇಳಿ ಉತ್ತರ ಹೇಳುದು ಹೇಳಿ ನೆಕ್ರಾಜೆ ಅಪ್ಪಚ್ಚಿಯ ಮನಸ್ಸಿನ ಮೌನಲ್ಲಿ ಕಣ್ಣೀರ ಕೆರೆ ತುಂಬಿಗೊಂಡಿತ್ತು.

ಈ ಚೇಟನ ಉಪದ್ರಂಗಳ ಕಾಂಬಗ ತಮ್ಮನ ತಪ್ಪಿನ ಗ್ರೇಶಿ ಗ್ರೇಶಿ ಉರುದು ಬತ್ತು ಅಣ್ಣಂಗೆ.

~

ಪೇಟೆಲಿ ನೋಡಿ ಮಡಗಿದ ಸಣ್ಣ ಜಾಗೆಲಿ ಸಂಸಾರ ಸುರು ಮಾಡಿಯೇ ಬಿಟ್ಟ° ತಮ್ಮ.
ಜಾಗೆಯ ಕ್ರಯಕ್ಕೆ ತೆಗದು, ಸಣ್ಣ ಮನೆಯನ್ನೂ ಕಟ್ಟಿ ಅಪ್ಪಗ ಕೈಲಿಪ್ಪದು ಕಾಲಿ ಆತು!
ಇನ್ನು ಉಂಬಲೆಂತ ಮಾಡುದು? ಕೆಮ್ಕದ ಕರೆಲಿ ಅಡಕ್ಕೆ ಬ್ಯಾರಿ ಇಲ್ಲೆಯೋ – ಅದರ ಕೈಲಿ ಕೆಲಸಕ್ಕೆ ಸೇರಿದ°.
ಇಪ್ಪ ಜಾಗೆಯ ಮಾರಿ ಇನ್ನೊಂದು ತೋಟ ಮಾಡುವ ಹೇದರೆ ಆ ಜಾಗೆಗೆ ಕ್ರಯ ಈಗಂದ ಮೂರು ಪಟ್ಟು ಇಲ್ಲೆಯೋ?
ಅಣ್ಣನ ಕಣ್ಣೋಟಲ್ಲೇ ಜಾಗ್ರತೆಗೆ ಬೆಳದ ತಮ್ಮಂಗೆ ಸ್ವಂತ ಜೆಬಾದಾರಿಕೆ ತೆಕ್ಕೊಂಡು ಕೆಲಸ ಮಾಡ್ಲೆ ಅರಡಿಗೊ?
ಬೇರೆಂತರ ಮಾಡುಸ್ಸು? ಗೊಂತಿಪ್ಪ ಕೆಲಸವ ಮಾಡ್ಲೆ ಹೆರಟ. ಪೇಟೆಲಿ ಹೀಂಗಿರ್ಸಲ್ಲಿ ಮರಿಯಾದಿ ನೋಡುಲೆ ಇದ್ದೋ?
ಈಗ ಒಂದೊಂದರಿ ಪೇಟೆಲಿ ನೆಡಕ್ಕೊಂಡು ಹೋಪಗ ಆ ಬ್ಯಾರಿ ಅಡಕ್ಕೆ ಅಂಗುಡಿಲಿ ಕೋಕ ಕೆರಸಿಗೊಂಡು ಕೂಪದು ಕಾಣ್ತು ಈ ಅಣ್ಣಂಗೆ.

ಕಂಡಿಗಟ್ಳೆ ಸ್ವಂತ ಅಡಕ್ಕೆಯ ಕೆರಸೆಕ್ಕಾಗಿದ್ದ ತನ್ನ ತಮ್ಮ ಈಗ ಆರಾರ ಅಂಗುಡಿಲಿ ಅಡಕ್ಕೆ ಕೆರಸಿಗೊಂಡು ಹೊತ್ತು ಕಳೆತ್ತಾನ್ನೇ – ಹೇದು ಅಣ್ಣಂಗೆ ಮತ್ತೂ ಬೇಜಾರಪ್ಪದಿದ್ದು.

ಅವನ ತಪ್ಪು ಅವಂಗೇ ಅರ್ತ ಆಗಲಿ ಹೇದು ತಮ್ಮನ ಹತ್ತರೆ ಮಾತು ಬಿಟ್ಟಿದವು ಅಣ್ಣ.
ಅಣ್ಣ ಮಾತಾಡದ್ದೆ ಕೂದ್ದರ್ಲಿ ತಮ್ಮಂಗೆಷ್ಟು ಬೇಜಾರಾಯಿದೋ ಅರಡಿಯ, ಆದರೆ ಈ ಅಣ್ಣಂಗೆ ಮಾಂತ್ರ ಬೇಜಾರಾಗಿಂಡೇ ಇದ್ದು.
ಪ್ರತಿ ಸರ್ತಿ ಮನೆ ಹೊಸ್ತಿಲಿಂಗೆ ಬಂದು ತಲೆ ಎತ್ತಿ ನೋಡುವಾಗ ಗುಡ್ಡೆ ಕಾಣ್ತಲ್ಲದೋ – ಎಷ್ಟು ಸರ್ತಿ ಆ ಗುಡ್ಡೆ ಕಾಣ್ತೋ, ಅಷ್ಟೂ ಸರ್ತಿ ತಮ್ಮ ಅದರ ಮಾರಿಕ್ಕಿ ಹೋದ್ಸು ನೆಂಪಾಗಿ ಬೇಜಾರ ಬೆಳಕ್ಕೊಂಡೇ ಹೋವುತ್ತು.

~

ಹೀಂಗಿರ್ತ ಎಷ್ಟೋ ಅಣ್ಣ-ತಮ್ಮಂದ್ರು ನಮ್ಮ ಊರಿಲಿ ಬಾಳಿ ಬೆಳಗಿ ಕಳುದು ಹೋಳಾಗಿ ಹೋಯಿದವು.
ಇಂತಾ ತಪ್ಪುಗೊ ಇನ್ನೂ ಮಾಡಿಗೊಂಡೇ ಇದ್ದವು.
ಇನ್ನಾಣೋರು ಆದರೂ ಮಾಡ್ಳಾಗ ಹೇದು ಎಲ್ಲೋರಿಂಗೂ ಅರಡಿಯೇಕು. ಅದಕ್ಕೇ ಈ ಶುದ್ದಿ ನೆಂಪಾತು.

~

ಒಂದೊಪ್ಪ: ಅಪ್ಪ° ಕೊಟ್ಟ ಜಾಗೆಯ ಮರವದೂ ಒಂದೇ, ಅಮ್ಮ ಕೊಟ್ಟ ಸಂಸ್ಕಾರವ ಮರವದೂ ಒಂದೇ.

14 thoughts on “ಹಳ್ಳಿಮನೆ ಆಸ್ತಿ ಭಾಗ ಎರಡಾತು, ಪೇಟೆ ಮನೆ ಆಸೆಯೂ ಎರಡು ಭಾಗ ಆತು..!

  1. ಇದು ಇನ್ದು ನಡೆತ್ತಾ ಇಪ್ಪಘಟನೆಗೊ , ಬೆಸರದ ಸನ್ಗತಿ ಆದರೆ ಪರಿಹಾರ ??

  2. ಮಾಪಳೆ ಅಂಗಡಿಲಿ ಕೋಕ ಕೆರಸುವ ತಮ್ಮನ ಅವಸ್ಥೆ ಗ್ರೇಶಿ ಬೇಜಾರಾತು. ಚೆ. ತಮ್ಮ ಅಣ್ಣನ ಒಟ್ಟಿಂಗೆ ಇದ್ದೊಂಡು ಕೃಷಿಯ ನೇರ್ಪಕೆ ಮಾಡಿದ್ದಿದ್ರೆ ಎಷ್ಟು ಒಳ್ಳೆದಾವ್ತಿತು. ದೂರದ ಗುಡ್ಡೆ ನೊಂಪು ಕಾಣ್ತು ಹೇಳುವದು ಸುಮ್ಮನೆ ಅಲ್ಲ. ಒಪ್ಪಣ್ಣನ ಒಪ್ಪ ಶುದ್ದಿಗೊಂದು ಒಪ್ಪ.

  3. ಈ ವಿದಳನಕ್ಕೆ-ಬದಲಾವಣೆಗೆ ಎನು ಪರಿಹಾರ?

  4. ಭಾವಪೂರ್ಣ ಬರಹ.ಒಳ ಅಡಕವಾಗಿಪ್ಪ ವಿಚಾರ ಪ್ರತಿಯೊಬ್ಬನ ಮನಸ್ಸಿಲಿ ಇರೆಕ್ಕಾದ್ದದು.
    ”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” ಹೇಳ್ತ ಕವಿವಾಣಿ ನೆ೦ಪಾತು ಶುದ್ದಿ ಓದೊಗ.
    ಧನ್ಯವಾದ ಒಪ್ಪಣ್ಣ.

  5. ನಿಂಗಳ ಈ ಲೇಖನ .. ಈ ವೆಬ್ಸೈಟ್ ತುಂಬಾ ಒಪ್ಪ ಇದ್ದು .. ಖುಷಿ ಆತು .. ಹೀಂಗೆ ಮುಂದುವರಿಯಲಿ…

  6. ಎಲ್ಲವು ಬದಲಾವಣೆ. ಎಂತದಕ್ಕೆ ಹೇಳಿ ಗೊಂತಿಲ್ಲೆ. ಒೞೆದು ಕೆಟ್ಟದು ಹೇಳಿ ನೋಡುವ ವ್ಯವಧಾನ ಇಲ್ಲೆ. ಸುಲಭದ ಬದುಕು ಆಯಕ್ಕು. ಪರಿಣಾಮ ಮೇಗಾಣದ್ದು.

  7. ಇದು ಬರೀ ನೆಕ್ರಾಜೆ ಮನೆ ವಿಷಯ ಅಲ್ಲ.ಇ೦ದು ನಮ್ಮ ದೇಶಲ್ಲಿ ನಡೆತ್ತಾ ಇಪ್ಪ ಗ೦ಭೀರ ಮಾತ್ರ ಅಲ್ಲ.ಭೀತಿಯವಿಷಯ.ನಮ್ಮ ಆಸ್ತಿಯೂ ಸ೦ಪತ್ತೂ ಪರರ ಪಾಲಾವುತ್ತಾ ಇದ್ದು
    ಹೀ೦ಗೇ ಬೆಶಿಲು ಕುದುರೆಯ ಬೆನ್ನು ಹತ್ತಿ ಹೋದರೆ ಇನ್ನು ಕೆಲವೇ ವರ್ಷಲ್ಲಿ ನಾವು ನೆಲೆ ಇಲ್ಲದ್ದೆ ನಿರಾಶ್ರಿತರಾಯೆಕ್ಕಕ್ಕು.ಇದ್ದ ಆಸ್ತಿಯ ಮಾರೆಕ್ಕಾದರೆ ಮೊದಲೇ ಒ೦ದರಿ ಆಲೋಚನೆ ಮಾಡಿ ನೋಡಿ.

  8. ಭಾರೀ ಲಾಯ್ಕ ಆಯಿದು.ಇದೇ ವಿಷಯಲ್ಲಿ ಆನು ಬರೆದ ಒಂದು ಕತೆ -ರಾಜಿ ಹೇಳಿ ಒಪ್ಪಣ್ಣ.ಕೋಮ್ ಲಿ ಇದ್ದು.ಒಪ್ಪಣ್ಣನಷ್ಟು ಭಾವಪೂರ್ಣವಾಗಿ ಬರೆವಲೆ ಆರಿಂಗೆ ಸಾಧ್ಯ?ಒಪ್ಪಣ್ಣಂಗೆ ಅಭಿನಂದನೆಗೊ.

  9. ಹರೇರಾಮ, ಕರುಳು ಹಿಂಡುವ ನಿಜವಾಗಿ ನಮ್ಮಲ್ಲಿ ಅಪ್ಪಂತ ಶುದ್ದಿ. ಒಮ್ಮತಲ್ಲಿ,ಒರ್ಮೈಸೆಂಡು ,ಒಡ-ಹುಟ್ಟುಗಳ,ಮನೆಮಕ್ಕಳ,ಸತ್ಯ-ನ್ಯಾಯ-ಧರ್ಮಲ್ಲಿ ಮುಚ್ಹು-ಮರೆ ಇಲ್ಲದ್ದೆ ನೋಡಿಗೊಂಡಿದ್ದಿದ್ದ ಹೆರಿಯೋರಿಂಗೆ{ಅಣ್ಣ ಆಗಿಕ್ಕು,ಅಪ್ಪ ಆಗಿಕ್ಕು} ! ಅವರ ಒಪ್ಪ ಮಾತಿಲ್ಲಿ ತಪ್ಪು ಹುಡುಕ್ಕುವ ಕಿರಿಯೊವು! ಬಿಡುಸಿ ಮಡಗಿದ ಉದಾಹರಣೆ. ಅದರ ಓದುವಗ ಕಣ್ಣೀರು ಲಾಪ್ ಟಾಪಿಂಗೆ ಬಿದ್ದತ್ತಿದ. ನಮ್ಮಲ್ಲಿ ಹೀಂಗಿಪ್ಪದು,ಹೆಣ್ಣುಸಂಸಾರಕ್ಕಪ್ಪ ಅತ್ಯಾಚಾರ,ಇದೆಲ್ಲಾ ವಿಷ ಏರ್ತಾಂಗೆ ಏರ್ತಾ ಇದ್ದು. ಇದಕ್ಕೆಂತ ಪರಿಹಾರ? ಇದರೆಲ್ಲ ಹೇಂಗೆ ನಿಗ್ರ್ಹಹಿಸಲಕ್ಕು?

    1. ಎಲ್ಲ ಸಮಸ್ಯೆಗಳ ಒಬ್ಬನೆ ತಡವಲೆ ಸಾಧ್ಯ ಇಲ್ಲೆ. ಇದಕ್ಕೆ ಇ೦ದ್ರಾಣ ತೆರೆದ ಆರ್ಥಿಕತೆ ತಡೆಯಕ್ಕಾದರೆ,ಎಲ್ಲರೂ ಸಾಮೂಹಿಕ ಕೊಡೆಯ ನೆರಳಿ೦ಗೆ ಬಪ್ಪಾ೦ಗೆ ಆಯೆಕ್ಕು.ಎಲ್ಲಿ ದುಡಿದರೂ ಒ೦ದೇ ಕಡೆ ಕೂಡಿಕಳೆದರೆ ಮಾತ್ರ ಸಾಮಾನ್ಯ ಪರಿಹಾರ ಸಿಕ್ಕುಗು ಹೇಳಿ ಕಾಣುತ್ತು.ಅದಕ್ಕಾಗಿ ನಾವು ಟ್ರಸ್ಟ ನಮೂನೆಲಿ ಟ್ರಸ್ಟ ಮಡಗಿ ಕೆಲಸ ಮಾಡಿದರೆ,ನಿತ್ಯ ಕೆಲಸವೂ ಅಕ್ಕು. ಸಾಮಾನ್ಯರಿ೦ಗೂ ಸಾಧನೆ ಮಾಡುವ ಕಾಲವು ಬಕ್ಕು.ಈ ಬೈಲು ಇಪ್ಪಾ೦ಗೆ ಒ೦ದು ದೊಡ್ದ ಹೊರಬೈಲು -ಎಲ್ಲಾ ನೋಡಿಕೊ೦ಬ ರೀತಿ ಬ೦ದರೆ,,ಎಲ್ಲರಿ೦ಗೂ ಅವರ -ಅವರ ಲೆಕ್ಕಾಚಾರ ,ಕೆಲಸ ,ನೆಮ್ಮದಿ ಸಿಕ್ಕುಗು ಹೇಳಿ ಕಾಣುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×