ಹಲವೂ.. ಒರಿಶ ಆತು, ರಾಮನವಮಿ ದಿನ ಬಲ್ನಾಡಜ್ಜನ ಮನೆಗೆ ಹೋಯೇಕು – ಹೇದು ಗ್ರೇಶುತ್ಸು.
ಪ್ರತಿ ಒರಿಶವೂ ಒಂದಲ್ಲ ಒಂದು ಗೌಜಿ ಗಡಿಬಿಡಿ ಬಂದು ಹೋಪಲೇ ಎಡಿಗಾವುತ್ತಿಲ್ಲೆ.
ಹಾಂಗೇದು ಇಂಜಿನಿಯರು ಮಾವ° ಕಾಗತ ಕಳುಸದ್ದೆ ಇಲ್ಲೆ, ಪ್ರತಿ ಸರ್ತಿಯೂ ಇಂಥಾ ದಿನ ರಾಮನವಮಿ ಇದ್ದು, ಬರೇಕು – ಹೇದು ಕಾರ್ಡು ಕಾಗತಲ್ಲಿ ಬರದು ಹೇಳಿಕೆ ಕಳುಸಿಯೇ ಕಳುಸುಗು.
ಪ್ರತಿ ಒರಿಶದಂತೆ ಈ ಒರಿಶವೂ ಬಯಿಂದು. ಪ್ರತಿ ಒರಿಶದಂತೆ ಈ ಒರಿಶವೂ “ಎಡಿಗಾರೆ ಹೋಯೇಕು” – ಹೇದು ಗ್ರೇಶುದೇ. ಆದರೆ, ಈ ಸರ್ತಿ ಹೋಯೇಕು ಹೇದು ಮನಸ್ಸು ಹೇಳ್ತಾ ಇದು – ಹೆಚ್ಚಿನಂಶವೂ ಹೋವುತ್ತಾ ಇದ್ದು ನಾವು. ನಿಂಗೊ ಬತ್ತಿರೋ?
ಹೋಯೇಕು ಹೇದು ನಾವು ಗ್ರೇಶುದಕ್ಕೂ ಒಂದು ಕಾರಣ ಇದ್ದು. ನಾವು ಹೋಗದ್ದರೂ ಬೈಲಿಂದ ಹಲವು ಜೆನ ಇದರಿಂದ ಮದಲೇ ಹೋದೋರು ಅಲ್ಯಾಣ ರಾಮನವಮಿಯ ಭವ್ಯತೆಯ ವಿವರ್ಸಿದ್ದು ಕೇಳಿ ಅಪ್ಪಾಗ ಕೆಮಿ ಅರಳಿದ್ದಿದ್ದು ಒಪ್ಪಣ್ಣಂಗೆ. ಕಾನಾವಣ್ಣಂಗೆ ಪ್ರತಿ ಒರಿಶವೂ ಹೋಗದ್ದೆ ಕಳಿಯ ಅಲ್ಲಿಗೆ. ಹಾಂಗೆ ಹೋದೋನು ಬಂದಿಕ್ಕಿ ನಾಲ್ಕು ದಿನ ಕತೆ ಹೇಳುಗು – ಬಲ್ನಾಡು ಅಜ್ಜನ ಮನೆಯ ರಾಮನವಮಿಯ ಶುದ್ದಿಗಳ!
ಹಲವು ಮರದರೂ, ನೆಂಪೊಳುದ್ಸರ ಈ ವಾರ ಮಾತಾಡುವೊ°. ನಿಂಗೊಗೆ ನೆಂಪಾದ್ಸಿದ್ದರೆ, ಬಿಟ್ಟು ಹೋದ್ಸಿದ್ದರೆ ಸೇರ್ಸಿಕ್ಕಿ. ಆತೋ?
~
ಬಲ್ನಾಡಜ್ಜನ ವ್ಯಕ್ತಿತ್ವವೇ ಹಾಂಗೇ – ದೂರಂದ ಕಾಂಬಗಳೇ ಎದ್ದು ಕೈಮುಗಿವೊ ಹೇದು ಕಾಣ್ತ ನಮುನೆದು. ಸನಾತನ ಧರ್ಮವನ್ನೇ ಜೀವಿಸುತ್ತವು ಅವು. ದಶರಥನ ಹಾಂಗಿಪ್ಪ ಗಾಂಭೀರ್ಯತೆ, ಕೌಸಲ್ಯೆಯ ಪ್ರಸನ್ನತೆ, ರಾಮನ ನಮುನೆಯೇ ಸಾಧು ವ್ಯಕ್ತಿತ್ವ ಆಡ.
ಬಲ್ನಾಡಜ್ಜಂಗೆ ಅರಡಿಯದ್ದ ವಿಷಯ ಇಲ್ಲೆಡ. ಹೆರಿಯವರಂದ ಹಿಡುದು ಕಿರಿಯವಕ್ಕೆ ಕೂಡಾ ಅಪ್ಪಂತಾ ವಿಷಯಂಗ ಅವರ ಹತ್ರೆ ಇದ್ದಡ. ಮನೆ ಕಾರ್ಯಕ್ರಮಂಗೊಕ್ಕೆ ಅಲಂಕಾರಂಗಳ ಹೆರಂದ ತಪ್ಪ ಕ್ರಮ ಎಂತೂ ಇಲ್ಲೆಡ. ಪರದೆ ಕಟ್ಟುಲೆ ಮನೆಲಿದ್ದ ಒಸ್ತ್ರಂಗಳೇಡ. ಅಂತೇ ಇಡ್ಕುವ ರಟ್ಟೋ ಮಣ್ಣ ಇದ್ದರೆ ಅದರ ಒಂದು ಆಯೆತ ಕತ್ತರ್ಸಿ ಅದರಲ್ಲಿ ಒಂದು ಚುಟುಕವೋ, ಶ್ಲೋಕವೋ ಎಂತಾರು ಬರದು ಚಪ್ಪರಲ್ಲಿ ಅಲ್ಲಲ್ಲಿ ನೇಲ್ಸುಗುಡ. ಅಪ್ಪು, ಬಲ್ನಾಡಜ್ಜ° ಸ್ವತಃ ಬರಹಗಾರರು. ಹಲವು ಚುಟುಕಂಗಳ ಎಸ್ ಬಿ ಹೇಟ್ ಹೇಳ್ತ ಹೆಸರಿಲಿ ಬರದ್ದವು. ಗುರುಗೊ ಬಲ್ನಾಡಜ್ಜನ ಕಂಡಪ್ಪಗ ಒಂದು ಆಶುಚುಟುಕ ಮಾಡ್ಲೆ ಹೇಳುಗು. ಅಂಬಗಳೇ ಒಂದರ ರೂಪುಸಿ ಬಲ್ನಾಡಜ್ಜ° ಪೀಠಕ್ಕೆ ಒಪ್ಪುಸುಗು. ಅಷ್ಟು ಶ್ರದ್ಧೆ ಅವಕ್ಕೆ ಪೀಠಲ್ಲಿ.
ಮನೆಲಿ ಇಪ್ಪ ವಸ್ತುಗ ಯಾವುದೂ ಹಾಳಪ್ಪಲೂ ಇಲ್ಲೆಡ. ಬಲ್ನಾಡಜ್ಜನ ಕೈಲಿ ಎಲ್ಲವೂ ಒಂದು ಹೊಸ ರೂಪ ಪಡಕ್ಕೊಳ್ತಡ. ದಿನಕ್ಕೊಂದು ಹೇಳುವ ನಮುನೆಲಿ ಹೊಸತ್ತೆಂತಾದರೂ ಮಾಡಿಯೇ ಮಾಡ್ತವಡ. ಒಟ್ಟೆಕರಟಂದ ಹಿಡುದು ಪ್ಲೇಷ್ಟಿಕ್ ಪೈಪ್ಪಿನ ವರೆಗೆ ಎಲ್ಲವೂ ಎಂತಾದರೂ ರೂಪ ಕಾಂಗಡ. ಅಂದು ಗುರುಗೋ ಬಂದಿಪ್ಪಗ ಪ್ಲೇಷ್ಟಿಕ್ ಪೈಪ್ಪಿನ ಕೊಂಬು ಮಾಡಿ ಸ್ವಾಗತ ಮಾಡಿದ್ದದರ ಅಮೈ ಭಾವ° ನೆಂಪು ಮಾಡ್ತವು ಸಿಕ್ಕಿ ಅಪ್ಪಗ! ರಾಮನವಮಿಗೆ ಅಪ್ಪಗ ಮರೆಯದ್ದೆ ಹಾಳೆ ಬೀಸಾಳೆ ಮಾಡಿ ಮಡುಗುಗಡ. ಸೆಕೆಸಮೆಯಲ್ಲಿ ಕಾರ್ಯಕ್ರಮ ಅಪ್ಪಗ ಮನೆಗೆ ಬಂದವ್ವು ತಂಪಿಲಿ ಇರೆಕ್ಕು ಹೇಳ್ತ ದೊಡ್ಡ ಮನಸ್ಸು ಅವರದ್ದಡ. ಅದೂ ಕೈಲಿ ತಿರುಗುಸಿ ಬೀಸುವ ನಮುನೆದಡ ಕಾನಾವಣ್ಣ ಹೇಳಿದ್ದು. ಅವಂಗೂ ಪ್ರತಿ ಸರ್ತಿ ಒಂದು ಮನೆಗೆ ಕೊಡ್ತವಾಡ ಅಜ್ಜ ಪ್ರೀತಿಲಿ.
~
ಈ ಒರಿಶ ಬಲ್ನಾಡಜ್ಜ ಹೊಸತ್ತು ಮಾಡಿದ್ದವಡ. ಎಂತರ? ಅದೇ ರಾಮಚಕ್ರ!
ರಾಮನ ಸಂಖ್ಯೆ ಏಳಲ್ಲದಾ? ರಾಮ ಹೇಳುವ ಅಕ್ಷರದ ಮಾತ್ರೆಗಳೇ ಏಳು ಹೇಳಿ ಬತ್ತಡ ಅಂದು ಮಾಷ್ಟ್ರುಮಾವ° ಹೇಳಿದ್ದು ನೆಂಪಾತು. ಅದೇ ಏಳು ನಮ್ಮ ಜೀವನಲ್ಲಿ ಬೇಕು. ನಾವು ಬದುಕ್ಕಿಲಿ ಏಳಿಗೆ ಕಾಣೆಕ್ಕು ಹೇಳಿ ರಾಮನ ಉದ್ದೇಶವೂ ಅದೇ ನವಗೆ ಮಂತ್ರವೂ ಹೇದು ರಾಮನ ಸಂಖ್ಯೆ ಏಳು ಬತ್ತ ನಮುನೆದು ಒಂದು ರಾಮಚಕ್ರ ಮಾಡಿದ್ದವಡ. ಅದರಲ್ಲಿ ಯಾವ ನಾಲ್ಕು ಅಂಕೆಗಳ ಕೂಡ್ಸಿದರೂ ಮೊತ್ತ ಏಳೇ ಬಪ್ಪದಡ.(ಪಟ ನೇಲ್ಸಿದ್ದು) ಉದ್ದ, ನೀಟ, ಅಡ್ಡ, ಅಗಲ ಎಲ್ಲ ಮಾಡಿ ನೋಡಿ ಬೇಕಾರೆ! ಬಲ್ನಾಡಜ್ಜ° ನಮ್ಮ ಹೆಮ್ಮೆಯ ಆಸ್ತಿ ಅಲ್ಲದೋ?
ಅವರ ಮನೆಯ ಹೆಸರೇ ‘ಪಂಚವಟಿ’. ಪ್ರಸನ್ನಮೂರ್ತಿ ಶ್ರೀರಾಮ ಆರಾಧ್ಯ ದೈವ ಆದ ಕಾರಣ ಮಕ್ಕೊಗೂ ಅದೇನಮುನೆ ಹೆಸರುಗೊ ಮಡಗಿದ್ದವಾಡ. ಭಜನೆ, ದೈವಭಕ್ತಿ ಅಂದಿಂದಲೇ ಅವರ ಜೀವನಕ್ರಮಲ್ಲಿ ಸೇರಿ ಹೋದ ಕಾರಣ ಮಕ್ಕೊ-ಪುಳ್ಯಕ್ಕೊಗೂ ಅದೇ ಸಂಸ್ಕಾರ ತುಂಬಿ ಬಯಿಂದು. ಎಷ್ಟೇ ಅಂಬರ್ಪಿನ ಇಂಜಿನಿಯರು ಆದರೂ ಭಜನೆಗೆ ಮೃದಂಗ ತಾಳ ಹಾಕುಸ್ಸು ರಕ್ತಗತ ಆಗಿದ್ದು ಅವರ ಮನೆಲಿ. ಇದು ಸರಿಯಾಗಿ ಎದ್ದು ಕಾಂಬದು ರಾಮನವಮಿಯ ದಿನವೇ ಆಡ.
~
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆರಾಧನೆ ಬಲ್ನಾಡಜ್ಜನ ಮನೆಲಿ ಮದಲಿಂದಲೂ ಇದ್ದದೇ ಅಡ. ವಿಶಿಷ್ಟವಾಗಿ ಗೌಜಿ ಮಾಡಿ ಆ ದಿನವ ಮಕ್ಕಳಿಂದ ಹಿಡುದು ದೊಡ್ಡೋರವರೆಂಗೆ ಎಲ್ಲೋರುದೇ ನೆಂಪು ಮಡಗುತ್ತ ನಮುನೆಲಿ ಆಚರಣೆ ಮಾಡ್ತವಾಡ.
ರಾಮನವಮಿಯ ದಿನ ಉದಿಯಪ್ಪಗಳೇ ಭಜನಾ ಕಾರ್ಯಕ್ರಮ ಇರ್ತು. ಸಂಕೀರ್ತನೆಲಿ ಭಕ್ತಿಯೇ ಪ್ರಧಾನ. ವಿಶೇಷವಾಗಿ ಶ್ರೀರಾಮನ ಕಾರುಣ್ಯವ, ಅವನ ಹಿರಿಮೆಯ ಗುಣಗಾನ ಮಾಡುವ ಭಜನಾ ಹಾಡುಗೊ ಸೂರ್ಯೋದಯಂದ ಆ ಮನೆಲಿ ಕೇಳ್ತಾ ಇರ್ತು. ಮಧ್ಯಾಹ್ನದ ಹೊತ್ತಿಂಗೆ – ಶ್ರೀರಾಮನ ಜನುಮ ನಕ್ಷತ್ರ ಬಪ್ಪಾಗ ಬಲ್ನಾಡಜ್ಜ° ಮುಂದೆನಿಂದು ಭಕ್ತೀಲಿ ಒಂದು ಆರತಿ ಮಾಡುಗು ಮನೆದೇವರ ಕೋಣೆಲಿ. ಉದಿಯಾಂದ ಮಾಡಿದ ಭಜನೆಯ ಒಟ್ಟಿಂಗೆ ತಾಳವಾದ್ಯ ಸೇರಿದ ಅಮೋಘ ಆರತಿ. ಅಷ್ಟಪ್ಪಗ ರಾಮಂಗೆ ಹಾಕಿದ ಹೂಗು ಒರಿಶವೂ ಅಷ್ಟಪ್ಪಗ ಮುಡಿಂದ ಕೆಳಬಿದ್ದು ಪರಿಪೂರ್ಣತೆಯ ತೋರ್ಸುದು ಕಾಣ್ತಾಡ. ಆರತಿ ಆದಪ್ಪಗ ಬಲ್ನಾಡಜ್ಜ° ಅಲ್ಲಿಪ್ಪ ಎಲ್ಲ ಪುಳ್ಯಕ್ಕಳ ಹಣೆಗೆ ದೇವರ ಪ್ರಸಾದ ಹಾಕುಗಡ. ಹೆರಿಯರ ಆಶೀರ್ವಾದ ಎಲ್ಲ ಮಕ್ಕೊಗೆ ಸಿಕ್ಕಿದರೆ ಅದೇ ಸಾಕು ಅವರ ಜೀವನ ಸಾರ್ಥಕ ಮಾಡ್ಳೆ. ಇದಾಗಿ ಮನಸ್ಸು-ಹೊಟ್ಟೆ ತುಂಬುತ್ತ ನಮುನೆಲಿ ಪ್ರೀತಿಯ ಉಪಚಾರ ಸಹಿತದ ಪ್ರಸಾದ ಭೋಜನ.
ಉಂಡಾದಿಕ್ಕಿ ರಜ್ಜ ಟೀವಿ ನೋಡುವ ಹೇದರೆ ಬಲ್ನಾಡಜ್ಜನ ಮನೆಲಿ ಆ ದಿನ ಟೀವೀರಾಯರು ರಜೆ ಹೇದು ಬೋರ್ಡ್ ನೇಲ್ಸಿದ್ದು ಕಾಂಗಷ್ಟೇ ಹೇಳಿತ್ತಿದ್ದ ಕಾವಿನಮೂಲೆ ಮಾಣಿ. ಅಂಗುಡಿ ಯೆಜಮಾನಕ್ಕೊಗೆ ಶುಭಕಾರ್ಯಲ್ಲಿ ರಜೆ ಮಾಡುದಿದ್ದರೆ ಒಂದು ಬೋರ್ಡ್ ಹಾಕುತ್ತವಲ್ಲದೋ ಅದೇ ನಮುನೆದು ಒಂದು ಬೋರ್ಡ್ ಬಲ್ನಾಡಜ್ಜ° ಸ್ವತಃ ಬರದು ನೇಲ್ಸಿ ಮಡುಗುಗಡ!
ಇದಿಷ್ಟೂ ದೊಡ್ಡೋರಿಂಗೆ ಆತು, ಅಂಬಗ ಸಣ್ಣ ಮಕ್ಕಳ ತೊಡಗುಸುವಿಕೆಗೆ ಎಂತ ಇದ್ದು? ಅದುವೇ ಹನುಮದಾಗಮನ!
ಮೊದಲೇ ಗೊಂತುಮಾಡಿದ ಒಬ್ಬ ಮನೆ ಅಳಿಯನೋ, ಹತ್ತರಾಣ ಸಂಬಂಧಿಕನೋ ಆರಾರು ಒಬ್ಬ ಹನುಮಂತನ ಮೂರ್ತಿಯ ಹೊತ್ತುಗೊಂಡು ಓ ಆ ಗುಡ್ಡೆತಲೆಂದ ಮನೆಗೆ ಬಪ್ಪದು. ಹನುಮಂತ ಮನೆಗೆ ಬಪ್ಪ ಸಂಭ್ರಮ. ಇಲ್ಲಿಯೂ ಇಪ್ಪ ತಾಳವಾದ್ಯಂಗ ಪೂರಾ ಸೇರಿ ಗೌಜಿಯೋ ಗೌಜಿ. ಹನುಮನ ಒಟ್ಟಿಂಗೆ ಆ ದಿನ ಅಲ್ಲಿ ಸೇರಿದ ಪುಳ್ಳರುಗೊ ಎಲ್ಲೋರುದೇ – ಒಂದೊಂದು ಗೆಲ್ಲು ಹಿಡ್ಕೊಂಡು ರಾಮಸೇವಕಾರಾಗಿ ಜೈಕಾರ ಹಾಕಿಗೊಂಡು ಒಟ್ಟಿಂಗೆ ಸೇರಿಗೊಂಬದು. ಅವನ ಪಾದತೊಳೆಶಿ ಎದುರುಗೊಂಬ ಗೌಜಿ, ಮನೆಒಳ ಮಾಡಿಗೊಂಬ ಹಿರಿಮೆ – ಇದೆಲ್ಲವನ್ನೂ ತಾನೇ ಖುದ್ದು ಎದುರು ನಿಂದು ಬಲ್ನಾಡಜ್ಜ ಮಾಡ್ತವಾಡ. ಹನುಮ ಬಂದಪ್ಪಗ ಅವನ ಸಂಪ್ರೀತಿ ಮಾಡೆಡದೊ? ಅದಕ್ಕೆದೇ ಆತು, ಮಕ್ಕೊಗೆ ಕೊಶಿ ಕೊಡ್ಲೂ ಆತು ಹೇದು ಒಂದು ಸಣ್ಣ ಕಾರ್ಯಕ್ರಮ. ಹನುಮನ ಎದುರು ಕಲ್ಲಿಂಗೆ ಕಾಯಿ ಒಡವದು. ಮಕ್ಕೊ ಒಬ್ಬೊಬ್ಬ° ಆಗಿ ಬಂದು ಕಾಯಿ ಒಡವಗ ಇಂಜಿನಿಯರ್ ಮಾವ° ಎಲ್ಲ ಚೆಂಡೆ ಅವರ ಗತಿಗೆ ತಕ್ಕ ಹಾಂಗೆ ನುಡ್ಸಿ, ಮಕ್ಕಳ ಪ್ರೋತ್ಸಾಹ ಮಾಡುದರ ನೋಡುದೇ ಒಂದು ಚೆಂದಡ. ಮಕ್ಕೊಗೆ ಆರ ಕಾಯಿ ಹೇಂಗೆ ಒಡದತ್ತು? ಒಂದರಿಯಂಗೇ ಒಡದತ್ತಾ? ಹೇಳಿ ನೋಡ್ತದು ಗೌಜಿ. ಇಡ್ಕುವ ವಸ್ತುದೇ ಹಾಳಾಗದ್ದೆ ಮಾಡುವ ಬಲ್ನಾಡಜ್ಜ° ಇಷ್ಟು ಕಾಯಿ ಒಡದ್ದದರ ಎಂತ ಮಾಡುಗು? ಅದರ ಒಣಗಿಸಿ ಎಣ್ಣೆ ತೆಗಗು. ಮಾಡುವ ಪ್ರತಿ ಕೆಲಸಲ್ಲಿ ಹಲವು ಕೆಲಸವ ಮಾಡಿ ಮುಗಿಶುವ ಏರ್ಪಾಡೂ ಅರಡಿಗು ಅವರ ಅನುಭವಲ್ಲಿ!
ಅದಾಗಿ ಒಂದು ಸಭಾಕಾರ್ಯಕ್ರಮ. ಊರಿಲಿ ವಿಶೇಷ ಸಾಧನೆ ಮಾಡಿದ ಹೆರಿಯೋರ ಕರಕ್ಕೊಂಡು ಬಂದು, ಅವರ ಗುರುತಿಸಿ, ಒಂದು ಸನ್ಮಾನ ಮಾಡ್ತದು ಆ ಸಭೆಯ ಒಟ್ಟು ಸಾರಾಂಶ ಆಡ. ಒಂದು ದೊಡ್ಡ ಸಂಘವೋ ಸಂಸ್ಥೆಯೋ ಮಾಡೇಕಾದಷ್ಟು ಕೆಲಸವ ಶುದ್ದಿಲ್ಲದ್ದೆ ಒಂದು ಮನೆಯೊಳ, ಅದೆಷ್ಟೋ ಒರಿಶಂದ ಮಾಡ್ತಾ ಇಪ್ಪ ಬಲ್ನಾಡಜ್ಜಂಗೆ ನಮೋನಮಃ.
ತಾನೂ ಖುಷಿಪಡುದರ ಒಟ್ಟಿಂಗೆ ಒಟ್ಟಿಂಗಿಪ್ಪ ಹತ್ತು ಜೆನರ ಖುಷಿ ಕಾಂಬದು ಬಲ್ನಾಡಜ್ಜನ ದೊಡ್ಡತನ. ಮಕ್ಕಳಿಂದ ಹಿಡುದು ಹೆರಿಯೋರ ಒರೆಂಗೆ – ಎಲ್ಲೋರುದೇ ಸಂತೋಷಿಗೊ ಆ ದಿನ!
ಮಕ್ಕೊಗೆ ಒಂದು ನಮುನೆ ಕೊಶಿ, ಅಜ್ಜಂಗೆ ಒಂದು ನಮುನೆ ಆತ್ಮಾನಂದ. ಭಜನಾ ಲಾಲಿತ್ಯ, ಅದರ ಇಂಪಿಂದಾಗಿ ಆಸ್ತಿಕ ಪ್ರಬುದ್ಧರಿಂಗೆಲ್ಲೋರಿಂಗೂ ತನ್ಮಯತೆ. ಒಟ್ಟಿಲಿ ರಾಮನ ನವಮಿ ದಿನ ಎಲ್ಲೋರುದೇ ಸಂತೋಷಲ್ಲಿ ಇರ್ತ ಕೊಶಿ ಬಲ್ನಾಡಜ್ಜನ ಮನೆಲಿ ಕಾಣ್ತು.
~
ನಮ್ಮ ಊರೊಳ, ನಮ್ಮ ಮನೆಗಳಲ್ಲೇ ಇಂಥಾ ಅಪೂರ್ವ ಆಚರಣೆಗೆ ನೆಡೆತ್ತಾ ಇಪ್ಪ ಸಂಗತಿ ನಿಜಕ್ಕೂ ಅದ್ಭುತ ಅಲ್ಲದೋ?
ಎಡಿಗಾರೆ ಈ ಸರ್ತಿ ಹೋಯೇಕು ಹೇದು ಇದ್ದು. ಹೇಂಗೆ ಅನುಕ್ಕೂಲ ಒದಗಿ ಬತ್ತು ಗೊಂತಿಲ್ಲೆ. ಕಾವಿನಮೂಲೆ ಮಾಣಿಯ ಬೈಕ್ಕಿಲಿ ಹಿಂದಾಣ ಸೀಟು ಜಾಗೆ ಇದ್ದೋ? ಕಾನಾವು ಡಾಗುಟ್ರ ಕಾರಿನ ಹಿಂದಾಣ ಸೀಟು ಜಾಗೆ ಇದ್ದೋ? ಅಮೈ ಭಾವನ ಕರಿಕಾರಿಲಿ ಒಂದು ಸೀಟಿದ್ದೋ – ಕೇಳಿ ನೋಡಿ ಆಯೇಕು. ಎಡಿಗಾರೆ, ರಾಮ ಎತ್ತುಸಿರೆ ಒಂದು ಗಳಿಗೆ ಹೋಗದ್ದೆ ಕಳಿಯ.
~
ಒಂದೊಪ್ಪ: ಸಂವತ್ಸರ ಕಾಮಂದಾದರೂ, ತತ್ವಾದರ್ಶ ರಾಮಂದಿರಳಿ.
~
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ರಾಮನವಮಿ ಸುದ್ದಿ ಓದಿ ಕುಶಿ ಅತು. ಮರುದಿನ ಕೆ.ಎಸ್. ಭಗವಾನ್ ರಾಮನ ಬಗ್ಗೆ ಮನಸ್ಸು ಬಂದ ಹಾಂಗೆ ಹೇಳಿದ ಸುದ್ದಿ ಓದಿ ಬೇಸರವೂ ಆತು.
ಎಸ್ ಬಿ ಹೇಟ್ ಅವರ ಚುಟುಕುಗಳ ಓದಿದ್ದೆ. ಆರುದೆ ಅದರ ಹೇಟ್ ಮಾಡವು, ಲಾಯಕಿರ್ತು.
ರಾಮನವಮಿಯ ಇಷ್ಟು ಗೌಜಿಲಿ ಆಚರಣೆ ಮಾಡುವುದರ ಕೇಳಿ ಕೊಶಿಯಾತು. ಎಲ್ಲೋರಿಂಗೂ ಒಟ್ಟಿಂಗೆ ಸೇರಿ ರಾಮಧ್ಯಾನ ಮಾಡ್ಳೆ ಒಳ್ಳೆ ಅವಕಾಶ. ಒಪ್ಪಣ್ಣನ ಶುದ್ದಿಗೊಂದೊಪ್ಪ.
ಹರೇ ರಾಮ
ನಮೋ ನಮಃ. ಹರೇ ರಾಮ
ಹರೇ ರಾಮ. ಒಪ್ಪಣ್ಣನ ಶುದ್ದಿ ಓದಿಯಪ್ಪಗಳೇ ಒಳ್ಳೆ ಕೊಶಿಲಿ ಮನಸ್ಸು ತುಂಬಿ ಬತ್ತು. ಇನ್ನು ಹೋದರೆ…! ಬಲ್ನಾಡು ಅಜ್ಜನ ಆನುದೆ ಮಾತಾಡ್ಸಿ ಗುರ್ತ ಮಾಡಿಯೊಂಡಿದೆ. ಅವು ಕೊಟ್ಟ ಚುಟುಕುಗಳ ಪುಸ್ತಕ ಇದ್ದು.ಶ್ರೀ ರಾಮ ಚಂದ್ರನ ಹಾಂಗು ಶ್ರೀಗುರುಗಳ ಅನುಗ್ರಹಂದ ಅವು ನೂರುಕಾಲ ಹೀಂಗೇ ಇರಳಿl