Oppanna.com

ರಾವಣ – ಜರಾಸಂಧ – ಕೀಚಕ – ಯಮ….!

ಬರದೋರು :   ಒಪ್ಪಣ್ಣ    on   11/04/2014    5 ಒಪ್ಪಂಗೊ

ಎಲ್ಲ ಸಂದರ್ಭಕ್ಕೂ, ಎಲ್ಲ ಕಾಲಘಟ್ಟಕ್ಕೂ, ಎಲ್ಲ ಸನ್ನಿವೇಶಕ್ಕೂ ನಮ್ಮ ಹಳೆಕಾಲದ ವೆಗ್ತಿತ್ವಂಗಳನ್ನೇ ಉದಾಹರಿಸಲೆ ಸಿಕ್ಕುದು ಒಂದು ವಿಶೇಷ ಆದರೂ ವಿಚಿತ್ರದ ಸಂಗತಿಯೇ ಅಲ್ಲದೋ?
ಮನ್ನೆ ರಂಗಮಾವನ ಹತ್ತರೆ ಕೂದುಗೊಂಡು ಮಾತಾಡುವಾಗ ಈ ಸಂಗತಿ ಮತ್ತೊಂದರಿ ನಿಜ ಆತು. ಅದೂ, ಈ ಓಟಿನ ಸಮೆಯಲ್ಲಿ! ಅದು ಹೇಂಗೆ?
~

ಈಗ ಓಟಿನ ಸಮೆಯ. ಇಂತಾದಿನ ಓಟು ಹೇದು ನಿಘಂಟಾದ ಮತ್ತೆ ಗುಣಾಜೆ ಮಾಣಿ ನಮ್ಮ ಕೈಗೆ ಸಿಕ್ಕಿದ್ದನಿಲ್ಲೆ. ಗುಣಾಜೆಮಾಣಿ ಸಿಕ್ಕದ್ದರೆ ನವಗೆ ಎಂತದೋ ಬಾಕಿ ಆದ ಹಾಂಗೆ ಅಪ್ಪದಿದಾ! ರೇಡ್ಯಕ್ಕೆ ಬೆಟ್ರಿ ಇಲ್ಲದ್ದರೆ ಮಾಷ್ಟ್ರುಮಾವಂಗೆ ಹೇಂಗಾವುತ್ತೋ, ಹಾಂಗೆ.
ಗುಣಾಜೆಮಾಣಿ ಸಿಕ್ಕದ್ದರೂ ಓಟಿನ ವೆವಸ್ತೆ ಆಗಿಂಡೇ ಇದ್ದತ್ತಪ್ಪೋ. ಅದಿರಳಿ.
ಈ ಓಟಿನ ಗಲಾಟೆ ಎಡಕ್ಕಿಲೇ ಮನ್ನೆ ಇದರೆಡಕ್ಕಿಲಿ ಒಂದರಿ ತರವಾಡುಮನೆಗೆ ಹೋಗಿ ಬಂದೆ.
ಅಲ್ಯಾಣ ದರೆಕರೆಲಿ ಇದ್ದಿದ್ದ ಕಾಟುಮಾವಿನ ಮರಲ್ಲಿ ಹಣ್ಣಾಗಿ ಉದುರುಲೆ ಸುರು ಆದ್ಸರ ನಾಕು ತೆಕ್ಕಂಡು ಬಪ್ಪಲೇದು. ಗೊಜ್ಜಿ ಮಾಡಿ ಗೊರಟು ತಿಂಬಲೆ, ಬೋಚಬಾವನ ಓಡುಸಲೆ – ಅದೊಂದು ಕೊಶಿ ಅಲ್ಲದೋ; ಹಾಂಗೆ.

ಹಾಂಗೆ ಹಣ್ಣು ಹೆರ್ಕಲೆ ಹೋದೋನು ಸೀತ ಎದ್ದಿಕ್ಕಿ ಬಪ್ಪಲೆಡಿತ್ತೋ, ಅಲ್ಲಿಂದ ತರವಾಡುಮನೆಗೆ ಹೋಗಿ, ರಜ್ಜ ಹೊತ್ತು ಕಾಲುನೀಡಿ ಕೂದಿಕ್ಕಿ ಬಪ್ಪದು ಮರಿಯಾದಿ. ಹಾಂಗೇ ಹೋಪಗ ರಂಗಮಾವ° ಕಾಯಿಸೊಲ್ಕೊಂಡು ಇತ್ತಿದ್ದವು.
ಕಾಯಿ ಎಂತಕಿಪ್ಪದು – ಇರುಳಾಣ ಅಡಿಗ್ಗೆ ಅಲ್ಲ, ಗೋಟುಕಾಯಿಯ ಎಣ್ಣೆಮಾಡ್ಳೆ. ಒಪ್ಪಣ್ಣ ಎತ್ತಿದ ಮತ್ತೆ ರಜಾ ಹೊತ್ತು ಮಾತಾಡಿಗೊಂಡೇ ಸೊಲುದರೂ, ಮತ್ತೆ ಅದರ ಕರೆಲಿ ಮಡಗಿ ಮಾತಾಡ್ಳೆ ಸುರುಮಾಡಿದವು.
ಓಟು, ಓಟಿಂಗೆ ನಿಂದೋರು, ಊರಿಲಿ ನಿಂದೋರು, ಮೇಗೆ ಪ್ರಧಾನಿ ಅಪ್ಪೋರು, ಟೀವಿಲಿ ಹಾರ್ತೋರು, ಪೇಪರಿಲಿ ಬರೆತ್ತೋರು – ಎಲ್ಲೋರ ಬಗ್ಗೆಯೂ ಒಂದೊಂದರಿ ಮಾತಾಡಿ ಹೋತು.
ಎಲ್ಲೋರಿಂಗೂ ರಾಜ್ಯಭಾರ ಅರಡಿಯ. ಕೆಲವು ಜೆನಕ್ಕೆ ಆ ಗುಣ ಹೆಚ್ಚು ಹೊಂದಿರ್ತು. ರಾಜ್ಯಭಾರ ಮಾಡೇಕಾರೆ ಮದಲು ಮುಖ್ಯವಾಗಿ ನಾಲ್ಕು ವೆಗ್ತಿತ್ವಂಗಳ ಗುಣ ಹೊಂದಿರೇಕು – ಹೇಳಿದವು ರಂಗಮಾವ°. ಆರು ಆ ನಾಲ್ಕು ಜೆನ?
ರಾಜಕೀಯದ ಮೂಲದೇವತೆಗೊ – ಆ ನಾಲ್ಕು ಜೆನಂಗಳೇ – ರಾವಣ, ಜರಾಸಂಧ, ಕೀಚಕ, ಯಮ.
ನಾಲ್ಕೂ ಜೆನಂಗಳೂ ಅಸಾಧ್ಯ ಬಲವಂತರೂ, ಪ್ರಸಿದ್ಧವೂ ಆಗಿಪ್ಪೋರು. ಎಲ್ಲೋರಿಂಗೂ ಅವರದ್ದೇ ಆದ ಧನಾತ್ಮಕ ಅಂಶಂಗಳೂ ಇದ್ದು, ಋಣಾತ್ಮಕ ಅಂಶಂಗಳೂ ಇದ್ದು. ಅದೆಂತರ? ಒಂದೊಂದೇ ವಿವರ್ಸಿಗೊಂಡು ಹೋದವು ರಂಗಮಾವ°.

~

ಧನಾತ್ಮಕ ಅಂಶಂಗೊ ಯೇವದೆಲ್ಲ?

ರಾವಣ:
ಅತ್ಯುತ್ತಮ ಸಂಘಟಕ. ಚೆದುರಿ ಹೋಗಿದ್ದ ರಾಕ್ಷಸ ಗಣಂಗಳ ಇಡೀ ಒಟ್ಟು ಸೇರ್ಸಿ, ಒಂದು ರಾಜ್ಯ ಹೇಳಿ ಸ್ಥಾಪನೆ ಮಾಡುವ ಮಟ್ಟಕ್ಕೆ ಸಂಘಟನಾ ಚತುರ°. ದೈವಭಕ್ತ°. ಶಿವನ ತಪಸ್ಸುಮಾಡಿ ಒಲುಸಿಗೊಂಡು ಆತ್ಮಲಿಂಗವ ಪಡಕ್ಕೊಂಡ ಮಹನೀಯ. ಸುಮಾರು ಶ್ಲೋಕಂಗಳ, ಸ್ತುತಿಗಳ ಹಾಡಿ ದೇವರ ಒಲುಸಿಗೊಂಡ ಮಹಾ ದೈವಭಕ್ತ°.

ಜರಾಸಂಧ:
ಮಹಾನ್ ಶಕ್ತಿಶಾಲಿ. ಜರೆ ಹೇಳ್ತ ರಾಕ್ಷಸಿಯ ಮಗ°. ಹುಟ್ಟುವಾಗಳೇ ಬೇರೆಬೇರೆ ಆಗಿ ಹುಟ್ಟಿದ ಕಾರಣ, ದೇಹವ ಒಂದುಮಾಡಿ ಸೇರ್ಸಿದ್ದಾಡ. ಹಾಂಗಾಗಿ, ಆರಿಂದಲೂ ಬೇರೆ ಮಾಡ್ಳೆಡಿಯ. ಒಂದು ವೇಳೆ ಬೇರೆಮಾಡಿರೂ ಮತ್ತೆ ಒಂದಾಗಿ ಸೇರಿ ಜೀವ ಬತ್ತು. ಒಂದರಿಯಂಗೆ ನಾಶ ಮಾಡಿರೂ, ಮತ್ತೆ ಧೂಳಿಂದ ಎದ್ದು ಬಪ್ಪ ಹಾಂಗೆ. ಆರಿಂದಲೂ ನಾಶಮಾಡ್ಳೆಡಿಯದ್ದ ಒಂದು ಸಂದರ್ಭ.

ಕೀಚಕ:
ಉತ್ತರನ ಆಸ್ಥಾನಲ್ಲಿ ಮಂತ್ರಿ ಆಗಿದ್ದಿದ್ದ ಜಗಜಟ್ಟಿ. ಇವನ ಹೆದರಿಕೆಗೇ ಉತ್ತರನ ರಾಜ್ಯಕ್ಕೆ ಆರುದೇ ಬಾರದ್ದದು. ತನ್ನ ಶಕ್ತಿಗೆ ಹೆದರಿಯೇ ಎದುರಾಳಿಗೊ ದೂರವೇ ನಿಂದುಗೊಂಬ ಸಾಮರ್ಥ್ಯ. ಅದಾ –  ಇವ ಸತ್ತ ಹೇದು ಗೊಂತಾದ ಮತ್ತೆಯೇ ದುರ್ಯೋಧನ ಗೋಗ್ರಹಣ ಮಾಡಿದ್ದದು ಇದಾ!

ಯಮ:
ನೇರ, ನಿಷ್ಠುರವಾದಿ. ಧರ್ಮ-ಕರ್ಮಂಗಳ ಬಗ್ಗೆ ಪ್ರಕಾಂಡ ಜ್ಞಾನಿ. ಜೀವಲೋಕದ ಆರೇ ಆಗಲಿ, ಯೇವದೇ ತಪ್ಪು ಮಾಡಿರೂ ತಕ್ಕ ಶಾಸ್ತಿ ಮಾಡುವ ಬದ್ಧತೆ. ಯಾವದೇ ಮುಲಾಜಿಲ್ಲದ್ದೆ, ಸಮಯ ಮುಗುದೋರ ನಿಲ್ಲುಸದ್ದೆ ಮೇಲೆ ಕರಕ್ಕೊಂಬ ಯಮನಿಯಮ. ತಾನು ತಪ್ಪುಮಾಡದ್ದೆ, ಲೋಕದ ಜೆನಂಗಳ ತಪ್ಪು-ಒಪ್ಪುಗಳ ತಿದ್ದುವ ಸಾಮರ್ತಿಗೆ ಹೊಂದಿಗೊಂಡ ಧರ್ಮದೇವರು.

ಇದೆಲ್ಲವೂ ಈ ನಾಲ್ಕು ವೆಗ್ತಿತ್ವಂಗಳ ಒಳ್ಳೆ ಲಕ್ಷಣಂಗೊ.
ಇದೇ ನಾಲ್ಕು ವೆಗ್ತಿಗೊಕ್ಕೆ ಇನ್ನೊಂದು ಮೋರೆಯೂ ಇದ್ದಾಡ. ಋಣಾತ್ಮಕವಾದ ವೆಗ್ತಿತ್ವಂಗೊ. ಅದೆಂತರ?
~

ಋಣಾತ್ಮಕ ಅಂಶಂಗೊ ಯೇವದೆಲ್ಲ?

ರಾವಣ:
ರಾಜ್ಯಾಧಿಕಾರದ ಒಟ್ಟಿಂಗೇ ಹಾಂಕಾರವೂ ಬಂತು. ಸೂರ್ಯಚಂದ್ರರಿಂದ ತೊಡಗಿ, ಇಡೀ ಪ್ರಪಂಚವೇ ತಾನು ಹೇಳಿದ ಹಾಂಗೆ, ತನ್ನ ಆಜ್ಞೆಪ್ರಕಾರ ನೆಡೇಕು – ಹೇದು ಬಯಸಿದೋನು. ಅಷ್ಟೇ ಅಲ್ಲದ್ದೆ, ಪರಸ್ತ್ರೀಯ ಸಂಗ ಬಯಸಿ, ಸೀತಾಪಹರಣದ ಹಾಂಗಿಪ್ಪ ಹೀನ ಕಾರ್ಯ ಮಾಡಿದ್ದ°.

ಜರಾಸಂಧ:
ಕುಂಞಿಕೃಷ್ಣನ ಮಾವ° ಕಂಸ. ಅವನ ಚಡ್ಡಿದೋಸ್ತು ಈ ಜರಾಸಂಧ, ಅಥವಾ ಮಾಗಧ. ಲೋಕಕ್ಕೆ ಕಂಟಕ ಆಗಿಂಡು, ಮಕ್ಕೊಗೆ ಉಪದ್ರ ಆಗಿಂಡು ಬೆಳದೋನೇ ಈ ಜರಾಸಂಧ.

ಕೀಚಕ:
ಬಲಶಾಲಿ ಆಗಿದ್ದರೂ, ಹೆಣ್ಣುಮರುಳು ಇದ್ದಕಾರಣ ಹೆಸರು ಹಾಳುಮಾಡಿಗೊಂಡ. ಪಾಂಡವ ಪತ್ನಿ ದ್ರೌಪದಿಯ ಬಯಸಿದ ಕಾರಣ ಭೀಮನ ಕೈಲಿ ಹತನಾಯೇಕಾಗಿ ಬಂತು.

ಯಮ:
ಆಯುಷ್ಯ ತೀರಿತ್ತು ಹೇದು ನಿಘಂಟು ಮಾಡಿದ್ದೇ, ಆ ಮನುಷ್ಯನನ್ನೇ ಮುಗುಶಿ ಬಿಡ್ತ°. – ಇದಿಷ್ಟು ಆ ನಾಲ್ಕು ವೆಗ್ತಿತ್ವಂಗಳ ಋಣಾತ್ಮಕ ಅಂಶಂಗೊ.

~
ರಾಜಕೀಯಲ್ಲಿ ಪ್ರಸಿದ್ಧಿಗೆ ಬರೆಕ್ಕಾದೋನಿಂಗೆ ರಾವಣ-ಜರಾಸಂಧ-ಕೀಚಕ-ಯಮ ನಾಲ್ಕೂ ಜೆನರ ಗುಣಂಗೊ ಬೇಕು. ಆದರೆ, ಆ ನಾಲ್ಕು ಜೆನರ ಯೇವಯೇವ ಗುಣಂಗಳ ಆದರ್ಶವಾಗಿ ತೆಕ್ಕೊಳ್ತವೋ, ಅವಕ್ಕವಕ್ಕೆ ಬಿಟ್ಟದು- ಹೇದು ನೆಗೆಮಾಡಿದವು ರಂಗಮಾವ°.
ಕಾಟುಮಾವಿನಣ್ಣು ಗೊಜ್ಜಿ ಮಾಡ್ಳೆ ಹಿಡ್ಕೊಂಡು ನಾವು ಹೆರಟತ್ತು ಮನೆ ಹೊಡೆಂಗೆ..
~

ಅಪ್ಪನ್ನೇ, ನಾಲ್ಕು ಜೆನಂಗೊಕ್ಕೆ ಎಂಟು ವೆಗ್ತಿತ್ವಂಗೊ.
ಒಳ್ಳೆ ರಾಜಕಾರಣಿ ಹೇದರೆ ರಾವಣನ ಹಾಂಗೆ ಸಂಘಟಕನೂ, ಜರಾಸಂಧನ ಹಾಂಗೆ ಮತ್ತೆ ಮತ್ತೆ ಧೂಳಿಂದ ಎದ್ದು ಬಪ್ಪ ಛಲವೂ, ಕೀಚಕನ ಹಾಂಗೆ ಬಾಹುಬಲವೂ, ಯಮನ ಹಾಂಗೆ ಧರ್ಮನಿಷ್ಠೆಯೂ ಇಪ್ಪಲಕ್ಕು.
ಅದೇ, ಇನ್ನೊಬ್ಬ ರಾಜಕಾರಣಿಗೆ ರಾವಣನ ಹಾಂಗೆ ಪರಸ್ತ್ರೀ ಮೋಹ, ಜರಾಸಂಧನ ಹಾಂಗೆ ದರ್ಪ – ಅಹಂಕಾರ, ಕೀಚಕನ ಹಾಂಗೆ ಅತ್ಯಾಚಾರ-ಅನಾಚಾರಂಗೊ, ಯಮನ ಹಾಂಗೆ ಜೀವಹರಣ – ನಾಲ್ಕು ಕೆಟ್ಟ ಹವ್ಯಾಸವೂ ಇಪ್ಪಲಕ್ಕು.

ರಾಜಕಾರಣಿ ಅಪ್ಪದು ಒಳ್ಳೆದೇ.
ಆದರೆ, ನಮ್ಮ ಆದರ್ಶ ಯೇವದು – ಹೇದು ನಿರ್ಣಯಮಾಡಿಗೊಂಡು, ಆ ಮೂಲಕ ಸಮಾಜಕ್ಕೆ ಒಳ್ಳೆ ಕೊಡುಗೆ ಕೊಡುದು ನಮ್ಮ ಕರ್ತವ್ಯ. ಅತಿಯಾದರೆ ಯೇವದೂ ಒಳ್ಳೆದಲ್ಲ. ಉಪ್ಪು-ಹುಳಿ-ಕಾರ-ಕೈಕ್ಕೆ ಇದೆಲ್ಲವೂ ಒಂದು ಹದಹಾಳಿತಲ್ಲಿ ಪಾಕಲ್ಲಿದ್ದರೆ ಒಳ್ಳೆದು; ಅದು ಜಾಸ್ತಿ ಅಪ್ಪಲಾಗ. ಎಲ್ಲವನ್ನೂ ಹದಲ್ಲಿ ಕೊಂಡೋಪ ಒಬ್ಬ° “ರಾಜಕೀಯ” ಅರಡಿತ್ತ ರಾಜಕಾರಣಿಯ ಅಗತ್ಯ ದೇಶಕ್ಕಿದ್ದು.

ಎಲ್ಲೋರುದೇ ಆಲೋಚನೆ ಮಾಡಿ ಆ ಜೆನರ ಆರುಸಿ ಕಳುಸುವೊ°.

ಎಲ್ಲೋರ ಅಭಯ “ಸುಭದ್ರ” ಭಾರತಕ್ಕಾಗಿ ಇರಳಿ.

ಹರೇರಾಮ.
~

ಒಂದೊಪ್ಪ: ವ್ಯಕ್ತಿಗಳ ಆದರ್ಶವಾಗಿ ತೆಕ್ಕೊಂಬ ಬದಲು ಅವರ ವ್ಯಕ್ತಿತ್ವಂಗಳ ಆದರ್ಶವಾಗಿ ಕಾಣೇಕು. ಅಲ್ಲದೋ?

5 thoughts on “ರಾವಣ – ಜರಾಸಂಧ – ಕೀಚಕ – ಯಮ….!

  1. ನಾಲ್ಕೂದೆ ವಿಭಿನ್ನ ವ್ಯಕ್ತಿತ್ವಂಗ. ಬರಹ ಒಳ್ಳೆದಾಯಿದು.
    ಒಂದು ಸಣ್ಣ ತಿದ್ದುಪಡಿ. ಜರಾಸಂಧ ಕಂಸನ ಚಡ್ಡಿದೋಸ್ತಿ ಅಲ್ಲ, ಕಂಸನ ಮಾವ. ಜರಾಸಂಧಂಗೆ ಅವಳಿ ಹೆಣ್ಣು ಮಗಳಕ್ಕ (ಆಸ್ತಿ, ಪ್ರಾಸ್ತಿ). ಅವರ ಕಂಸಂಗೆ ಮದುವೆ ಮಾಡಿ ಕೊಟ್ಟದು ಜರಾಸಂಧ ಯ ಮಾಗಧ.
    ಮಾಗಧ ವಧೆ ಪ್ರಸಂಗದ ಒಂದು ಪದ ಈ ಸಂದರ್ಭಲ್ಲಿ ನೆಂಪು ಬಂತಿದ:
    ತಿಳಿಯದಾದಿರೆ ಎಮ್ಮ ಕಂಸಗೆ
    ಆಳಿಯನೀತನು ನಮಗೆ ಮೊಮ್ಮನು

  2. ವ್ಯಕ್ತಿ-ವ್ಯಕ್ತಿತ್ವ!!!
    ಅಬ್ಬಾ!

  3. ಹೊಸಾ ನಮೂನೆಯ ಶುದ್ದಿ, ಚುನಾವಣೆಯ ಸಂದರ್ಭಕ್ಕೆ ಹೇಳಿ ಮಾಡುಸಿದ ಹಾಂಗಿದ್ದು. ಹೀಂಗಿಪ್ಪವು ಬಂದರೆ ನಮ್ಮ ದೇಶ ರಾಮರಾಜ್ಯ ಅಕ್ಕೊ ?

  4. ಇದರ ಒಟ್ಟಿಂಗೆ ಶಕುನಿಯ ಗುಣವೂ ಸೇರಿರೆ ಚೊಕ್ಕ ಅಕ್ಕು.

  5. ಯಪ್ಪ!!! ಅದ್ಭುತ ದೃಷ್ಟಿಕೋನ ಒಪ್ಪಣ್ಣಂದು. ಅಲ್ಲ ಅಲ್ಲ … ರಂಗಮಾವಂದು. ಒಂದೊಪ್ಪಕ್ಕೊಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×