ಒಪ್ಪಣ್ಣ ಶಾಲೆಗೆ ಹೋಪಗ ಒಂದು ದಿನ ರಜಾ ತಡವಾಯಿದು.
ಏವಗಳೂ ಹಾಂಗೆ ಆವುತ್ತಿಲ್ಲೆ, ಒಂದೊಂದು ದಿನ ಮಾಂತ್ರ ತಡವಪ್ಪದು.
ಆ ಒಂದು ದಿನ ಎಂತಾತು ಹೇದರೆ, ಮುನ್ನಾಣ ದಿನ ಜೋರು ಮಳೆ ಬಂದ ಲೆಕ್ಕಲ್ಲಿ ಆ ದಿನ ಬೆಳ್ಳ.
ಬೆಳ್ಳ ಹೇದರೆ ವಿಪರೀತ ಬೆಳ್ಳ. ಮಕ್ಕೊಗೆ ಬಿಡಿ, ದೊಡ್ಡವಕ್ಕೇ ಸಾರಡಿ ತೋಡು ದಾಂಟಿಕ್ಕಲೆ ಎಡಿಯ.
ಆಚಿಗೆ – ಮುಕಾರಿಗುಡ್ಡೆ ಆಗಿ ಹೋಯೇಕು ಮಾರ್ಗದ ಕರೆಗೆ. ಯೇವತ್ರಾಣ ಅಂದಾಜಿಗೆ ಸಮಯ ನೋಡಿ ಹೆರಡುದು ಇದಾ; ಬೆಳ್ಳ ಬಂದದು ನೆಂಪಿಲ್ಲೆ.
ಅರ್ದ ದಾರಿ ಎತ್ತುವಗಳೇ ನೆಂಪಾದ್ದು.
ಹಾಂಗೆ, ಮತ್ತೆ ಊರು ಸುತ್ತಿಗೊಂಡು ಎತ್ತುವಾಗ – ಕಸ ಹೆರ್ಕುದು ಕಳುದು, ಓದುವ ಗಂಟೆ ಕಳುದು, ಪ್ರಾರ್ಥನೆ ಕಳುದು, ಪಾಠ ಸುರು ಆಯಿದು.
ಅದೂ ಆರದ್ದು! ಬೊಬ್ಬೆ ಶ್ರೀನಿವಾಸ ಮಾಷ್ಟ್ರ ಗಣಿತ ಕ್ಲಾಸು!
ಬೊಬ್ಬೆ ಶ್ರೀನಿವಾಸ ಮಾಷ್ಟ್ರು ಹೇದರೆ – ತುಂಬಾ ಜೋರು ಹೇದು ಲೆಕ್ಕ.
ಮಕ್ಕೊ ಮಾಂತ್ರ ಅಲ್ಲ, ಪಾಪದ ದೊಡ್ಡೋರುದೇ ಅವರ ಕಂಡ್ರೆ ಹೆದರುಗು.
ಬೊಬ್ಬೆ ಹೇದರೆ ಅವರ ಕುಟುಂಬದ ಹೆಸರೂ ಅಲ್ಲ, ಕುಲದ ಹೆಸರೂ ಅಲ್ಲ, ಮನೆ ಹೆಸರೂ ಅಲ್ಲ. ಅವು ಅಷ್ಟು ಬೊಬ್ಬೆ ಹೊಡದೇ ಸಂಪಾಲುಸಿದ ಹೆಸರು ಅದು.
ಅವು ಮೆಲ್ಲಂಗೆ ಮಾತಾಡುದು ಹೇದರೆ ಆಣಿಮುಳ್ಳಿನ ಗರ್ಗಾಸು ಮಾಡಿದಷ್ಟು ಶಬ್ದ ಮಾಡ್ತಾಡ – ಮರ ಕೊಯಿತ್ತ ಸಂಕು ಒಂದೊಂದರಿ ಹೇಳುಲಿದ್ದು.
ಅವು ಸಾಮಾನ್ಯವಾಗಿ ಮಾಡ್ತದು ಸಮಾಜ ಪಾಠ. ಆದರೆ ಒಂದೊಂದು ವರ್ಶ ಕೆಲವು ಕ್ಲಾಸಿಂಗೆ ಗಣಿತವೂ ಪಾಠ ಮಾಡುಗು.
ಗಣಿತ ಪಾಠ ಸಿಕ್ಕಿದ ಮಕ್ಕೊಗೆ ಜಾತಕ ಸರಿ ಇಲ್ಲೆ – ಹೇಳಿಯೇ ಲೆಕ್ಕ ಆಡ, ಕುಂಬ್ರ ಜೋಯಿಶರು ಒಂದೊಂದರಿ ಹೇಳುಲಿದ್ದು.
ಏಕೇದರೆ, ಗಣಿತ ಪಾಠ ಅವರ ಆಸಕ್ತಿದೇ ಆದ ಕಾರ “ಅರದು ಅರದು” ಕುಡಿಶುಗು.
ಅರವದು ಹೇದರೆ, ಪಾಠವ ಮಾಂತ್ರ ಅಲ್ಲ, ಮಕ್ಕಳನ್ನೂ ಅರಗು ಹಿಡುದು.
ಅಷ್ಟು ಅರೆಯದ್ದೆ ಮಕ್ಕೊಗೆ ಅಭ್ಯಾಸ ಆಗೆಡದೋ?
ಹಾಂಗೆ, ಆರು ಕೊಟ್ಟ ಮನೆಕೆಲಸ ಮಾಡದ್ರೂ – ಶ್ರೀನಿವಾಸ ಮಾಷ್ಟ್ರ ಎದುರು ಹಾಕಲೆ ಆರುದೇ ತಯಾರಿಲ್ಲೆ.
ಪೋ!
~
ಹಾಂಗೆ – ಒಪ್ಪಣ್ಣ ಎತ್ತುವಾಗ ಅವರ ಗಣಿತ ಪಾಟ ಸುರು ಆಗಿತ್ತು.
ಒಂದೋಂದರಿ ಅವಕ್ಕೆ ಮೋಡ ಎಳಗಿರೆ ಮಗ್ಗಿ ಕೇಳುಲಿದ್ದು.
ಎರಡೊಂದ್ಲಿ ಎರಡಾ – ಹೇದು ಸುರು ಆದರೆ, ಇಪ್ಪತ್ತಿಪ್ಪಾತ್ಲಿ – ನಾನ್ನೂರಾ ಹೇಳುವಲ್ಲಿ ವರೆಗೆ!
ಇಪ್ಪತ್ತು ಮಗ್ಗಿ ಹೇಳಿ ಅಪ್ಪಗ – ಇಪ್ಪತ್ತು ಬೆತ್ತವೂ ಬೇಕಕ್ಕು.
ಮತ್ತೆ ಮತ್ತೆ ಹೊಸ ಬೆತ್ತ ಹುಡ್ಕಿ ಪುರೇಸುತ್ತಿಲ್ಲೆ – ಹೇದು ಅವ್ವೇ ಪೇಟೆಂದ ನಾಗರ ಬೆತ್ತ ತಂದವು. ಅದು ಬೇರೆ.
ಆ ದಿನವೂ ಮಗ್ಗಿ.
ಆತನ್ನೇ!
ಒಪ್ಪಣ್ಣ ಶಾಲೆ ಹತ್ತರೆ ಎತ್ತುವಗಳೇ ಎಡದ ಹುಬ್ಬು ಅದುರಿದ್ದತ್ತು. ಕ್ಲಾಸಿನ ಹತ್ತರೆ ಎತ್ತುವಗ ಅಂತೂ – ಸುದ್ದಿ ಕೇಳ್ತಿಲ್ಲೆ.
ಕ್ಲಾಸು ಮೌನ ಇರೆಕ್ಕಾರೆ ಎರಡೇ ಕಾರಣ – ಒಂದೋ ಮಕ್ಕೊ ಪೂರ ಪುಸ್ತಕ ಮಡುಸಿ ಆಟಕ್ಕೆ ಹೋಗಿರೆಕ್ಕು; ಅಲ್ಲದ್ದರೆ ಶ್ರೀನಿವಾಸ ಮಾಷ್ಟ್ರ ಹಾಂಗೆ ಆರಾರು ಮಾಷ್ಟ್ರು ಇರೆಕ್ಕು!
ಇದು ಎರಡ್ಣೇ ಕಾರಣ ಇದಾ!
ಹೆಗಲಿಲಿ ಒಂದು ಬೇಗು, ಕೈಲಿ ಒಂದು ಬುತ್ತಿ, ಮೋರೆಲಿಶ್ಟು ಬೆಗರು ಎಲ್ಲ ಹೊತ್ತೊಂದು ಕ್ಲಾಸಿನ ಬಾಗಿಲಿಲಿ ನಿಂದ ಒಪ್ಪಣ್ಣಂಗೆ ಸ್ವರವೇ ಬಾರ!
ಕ್ಲಾಸಿಲಿ ಇದ್ದಿದ್ದ ಒಳುದ ಭಾವಯ್ಯಂದ್ರೇ – ಸ್ಸಾರ್, ಸಾ..ರ್ – ಹೇದು ಬಾಕ್ಲು ತೋರ್ಸಿ ಹೇಳಿದವು.
ಬಾಗಿಲು ಹೊಡೆಂಗೆ ನೋಡಿದ ಶ್ರೀನಿವಾಸ ಮಾಷ್ಟ್ರು ಸೀತ ಬಂದವು.
ಬಡಾ ಬಡಾ ಬಡಾ – ಹೇದು ನೆಡಕ್ಕೊಂಡು ಬಪ್ಪಗಳೇ ಒಪ್ಪಣ್ಣಂಗೆ ಹೆದರಿ ಹೋತು.
- ಯಾಕೆ ಲೇಟೂ? ಹೇದು ಕೇಳುಗು.
- ಅಲ್ಲದ್ದರೆ, ಬೇಗ ಬರ್ಲಿಕ್ಕೆ ಆಗೂದಿಲ್ವಾ ಮಂಗ? – ಹೇಳಿ ಕೇಳುಗು.
- ಅಲ್ಲದ್ದರೆ, ಇಷ್ಟು ಲೇಟಾಗಿ ಬರ್ಬೇಡ – ಕತ್ತೆ ಮೇಯಿಲಿಕ್ಕೆ ಹೋಗು – ಹೇಳುಗು.
- ಅಲ್ಲದ್ದರೆ ಸಮಾ ನಾಕು ಬಿಗಿಗು.
ಆದ್ಸಾಗಲಿ, ಮನೆಲಿ ಹೇಳದ್ರೆ ಆತು – ಹೇದು ಧೈರ್ಯ ಮಾಡಿ ನಿಂದೆ.
ಸೀತ ಹತ್ತರೆ ಬಂದ ಶ್ರೀನಿವಾಸ ಮಾಷ್ಟ್ರು – ಹತ್ತೊಂಭತ್ ಮೂರ್ಲಿ? – ಹೇದು ಬೊಬ್ಬೆ ಹಾಕಿದವು.
ಒಪ್ಪಣ್ಣಂಗೆ – ಮೇಗೆ ಹೇಳಿದ ಯೇವದಾರು ಪ್ರಶ್ನೆ ಕೇಳುಗು – ಅದಕ್ಕೆ ಯೇವ ಉತ್ತರ ಹೇಳೇಕು – ಹೇದು ತಲೆಲಿ ತಿರುಗೆಂಡು ಇದ್ದತ್ತು.
ಇದು ನೋಡಿರೆ ಪ್ರಶ್ನೆ ಅದೇವದೂ ಅಲ್ಲ. ಅದೇವದೂ ಅಲ್ಲ ಹೇದರೆ ಬೇರೇವದೋ.
ಯೇವದು ಹೇದು ಆಲೋಚನೆ ಮಾಡ್ಳೂ ತಲೆ ಓಡಿದ್ದಿಲ್ಲೆ!
“ಮೂರ್ಲಿ ಎಷ್ಟೋ” – ಹೇದು ಇನ್ನೊಂದರಿ ಕೇಳಿದವು.
“ಹೇ°..?” ಹೇದೆ.
ಆದರೆ, ಅಷ್ಟಪ್ಪಗ ಅದಾಗಲೇ ಶ್ರೀನಿವಾಸ ಮಾಷ್ಟ್ರು ಎರಡು ಸರ್ತಿ ಹೇಳಿ ಆಗಿತ್ತು.
ಅವು ಎರಡು ಸರ್ತಿ ಹೇಳುದೇ ವಿಶೇಷ, ವಿಚಿತ್ರ. ಇನ್ನು ಮೂರ್ನೇ ಸರ್ತಿ ಹೇಳುಸಿರೆ ಅಂತೂ – ಬೇಪಲೇ ಬೇಡ!
ಕೆಂಪು ಕಣ್ಣು ಇನ್ನೂ ದೊಡ್ಡ ಆತು. ಕೆಂಪು ತೊಡಿಯ ಒಳಾಂದ ಕೆಂಪು ನಾಲಗೆ ಅದುರುದು ಮಾಂತ್ರ ಕಂಡತ್ತು.
“ಕಿವಿ ಕೇಳುದಿಲ್ವಾ?” ಹೇದು ನಾಗರ ಬೆತ್ತ ಎತ್ತಿದವು. ಅವು ಹೇಳಿದ್ದು ಎಷ್ಟು ಜೋರಿತ್ತು ಹೇದರೆ, ಆ ಬೊಬ್ಬೆಗೆ ನಿಜವಾಗಿಯೂ ಕೆಮಿ ಕೇಳದ್ದೆ ಅಕ್ಕು ಮಕ್ಕೊಗೆ!
ಇಷ್ಟೆಲ್ಲ ಅಪ್ಪಲೆ ಹೆಚ್ಚಿರೆ ಒಂದೂವರೆ ಸೆಕುಂಡು ಬೇಕಾಯಿದು! ಅಷ್ಟೇ!
ಹೋ, ಹತ್ತೊಂಭತ್ತರ ಮಗ್ಗಿ ಕೇಳಿಂಡಿದ್ದಿದ್ದವು. ಎರಡ್ಳಿ ವರೆಗೆ ಆಯಿದು, ಹತ್ತೊಂಭತ್ತು ಮೂರ್ಲಿ ಎಷ್ಟು – ಹೇದು ಮತ್ತಾಣೋನು ಆನು – ಎನ್ನತ್ರೆ ಅದರ ಕೇಳಿದ್ದು – ಹೇದು ಅರ್ತ ಅಪ್ಪಲೆ ಸಮಯ ಆತು!
ಗೆಂಟು ಗೆಂಟಾಗಿ ಅರುಶಿನ ಬಣ್ಣದ, ಸಮಾ ಎಳ್ಳೆಣ್ಣೆಯ ಪಾಕ – ಶೇಕ ಕೊಟ್ಟ ಒಪ್ಪ ನಾಗರ ಬೆತ್ತ ಮೇಲೆ ಹೋತು.
ತೂಗುಯ್ಯಾಲೆ ಬಾಬೆಯ ಕೂರ್ಸಿಗೊಂಡು ದೂ..ರ ಹೋಪ ಹಾಂಗೆ ಶ್ರೀನಿವಾಸ ಮಾಷ್ಟ್ರ ನಾಗರ ಬೆತ್ತವೂ ದೂ…ರ ಹೋತು.
ಹತ್ತೊಂಭತ್ತು ಒಂದ್ಲಿ ಹತ್ತೊಂಭತ್ತಾ, ಹತ್ತೊಂಭತ್ತೆರಡ್ಳಿ ಮೂವತ್ತೆಂಟಾ, ಹತ್ತೊಂಭತ್ಮೂರ್ಲಿ… ಸ್ವರ ಬಾರದ್ರೂ ನಾಲಗೆ ಹಂದಿತ್ತು ಒಪ್ಪಣ್ಣಂದು.
ಉಯ್ಯಾಲೆ ಒಪಾಸು ಬಪ್ಪ ಹಾಂಗೆ ಈ ಬೆತ್ತವೂ ಒಪಾ…ಸು ಬಂತು. ಹೋದಷ್ಟು ಮೆಲ್ಲಂಗೆ ಅಲ್ಲ – ಬಂದದು ಭಾರೀ ಬೇಗಲ್ಲಿ. ಜೊಯಿಂಕನೆ!
ಐವತ್ತೇಳು
– ಹೇದು ಒಪ್ಪಣ್ಣ ಹೇಳುದೂ, ಶ್ರೀನಿವಾಸ ಮಾಷ್ಟ್ರ ನಾಗರ ಬೆತ್ತ ಒಪ್ಪಣ್ಣನ ಕಾಲಿಂಗೆ ಒಪ್ಪ ಕೊಟ್ಟದೂ -ಒಟ್ಟಿಂಗೆ ಆತು.
ಪೆಟ್ಟು ಬಿದ್ದತ್ತು! ಒಪ್ಪಣ್ಣಂಗೆ! ಎಲ್ಲಿ? ಛೇ! ಇಡೀ ಕ್ಲಾಸಿನ ಎದುರು.
ಪೆಟ್ಟಿನ ಬೇನೆ ತಲೆಗೆ ಎತ್ತುವಂದ ಮೊದಲೇ ಇಷ್ಟು ಜೆನರ ಎದುರು ಪೊಳಿ ತಿಂದದು ಮರಿಯಾದಿ ಕಡಮ್ಮೆ ಆದ ಹಾಂಗೆ ಆತು.
ಎಲ್ಲೋರುದೇ ನೋಡಿಗೊಂಡಿದ್ದವು, ಎದುರಾಣ ಬೆಂಚಿನ ಬೀಸುರೇಶೆ, ಅಮ್ಮಾರ್ನಾತೆ, ಕೇ ಅಶ್ರಪ್ಪು, ರಮೇಸಾಡಿ, ಆಚ ಹೊಡೇಣ ಜಯಸೀಲ, ಪ್ರತಿಮ, ಬೀಪಾತು – ಎಲ್ಲೋರುದೇ ನೋಡಿಗೊಂಡು ಇದ್ದವು.
ಉತ್ತರ ಹೇಳಿರೂ ಪೊಳಿ ಬಿದ್ದರೆ ದುಕ್ಕ ಬಪ್ಪದು ಜಾಸ್ತಿಯೇ ಇದಾ.
ಆದರೆ ಆ ಉತ್ತರ ಒಂದು ಸೆಕೆಂಡು ಮೊದಲೇ ಬಂದಿದ್ದರೆ ಪೊಳಿ ಬೀಳ್ತಿತಿಲ್ಲೆ.
ತಲೆ ಬಗ್ಗುಸಿತ್ತು ನಾವು.
ಬಹುಷ ಸಾರಡಿ ತೋಡಿಲಿ ನೀರು ತುಂಬಿ ಮುಕಾರಿ ಗುಡ್ಡೆಲಿ ಆಗಿ ಬಚ್ಚಿ ಬಂದ ಕಾರಣ ತಡವಾತು – ಹೇದು ಅವಕ್ಕೂ ಅಂದಾಜಿ ಆತಾಗಿಕ್ಕು; ಎಂತದೂ ಕೇಳಿದ್ದವಿಲ್ಲೆ.
ಹ್ಮ್, ಹೋಗಿ ಕೂತ್ಕೊ – ಹೇಳಿದವು ಶ್ರೀನಿವಾಸ ಮಾಶ್ಟ್ರು, ಯಥಾ ದರ್ಪಲ್ಲಿ.
ಉತ್ತರ ಹೇಳದ್ದ ಬಡ್ಡು ಮಕ್ಕೊ ನಿಂದುಗೊಂಡೇ ಇದ್ದವು ಹಲವು, ನವಗೆ ಕೂಪಲೆ ಸಿಕ್ಕಿತ್ತು.
ಹಾಂಗಾಗಿ ಐವತ್ತೇಳು ಹೇಳಿದ್ದು ಶ್ರೀನಿವಾಸ ಮಾಶ್ತ್ರಿಂಗೆ ಕೇಳಿದ್ದು – ಹೇದು ಆತು. ಅದಿರಳಿ.
~
ಇದೊಂದು ಸಣ್ಣ ಹಳೇ ಘಟನೆ.
ಒಪ್ಪಣ್ಣನ ಮನಸ್ಸಿಂದ ಯೇವಗಳೋ ಮಸ್ಕಾಗಿ ಹೋಯಿದು.
ಆ ದಿನ ಇಡೀ ಅದೇ ಬೇಜಾರು ಇತ್ತು. ಚೆ, ಒಪ್ಪಣ್ಣಂಗೆ ಪೊಳಿ ಬಿದ್ದ ಸಂಗತಿ ಅಪ್ಪಂಗೆ ಗೊಂತಾಗದ್ರೆ ಸಾಕಿತ್ತು – ಹೇದು.
ಶ್ರೀನಿವಾಸ ಮಾಷ್ಟ್ರು ಹೇಳುಗೋ? ಹೇಳವಾಯಿಕ್ಕು. ಹೇಳಿರೆ ಎಂತ ಮಾಡುದು – ಅಪ್ಪು ಹೇಳುದು. ಹೇಳದ್ರೆ ಸುದ್ದಿ ತೆಗೇಕಾದ ಅಗತ್ಯ ಇಲ್ಲೆನೇ ಹೇಂಗಾರು – ಹೇದು ಸುಮ್ಮನೆ ಕೂದ್ಸು.
ಇಡೀ ದಿನ ಒಪ್ಪಣ್ಣಂಗೆ ಅದೇ ಬೇಜಾರು ಇದ್ದತ್ತು ಶಾಲೆಲಿ.
ಹತ್ತು ಪೆಟ್ಟು ತಿಂದು ಇಡೀ ಪಿರಿಡು ನಿಂದ ಮಕ್ಕೊಗೆ ಕ್ಲಾಸು ಮುಗುಶಿ ಅತ್ಲಾಗಿ ಹೋದ ಶ್ರೀನಿವಾಸ ಮಾಷ್ಟ್ರ ಹಿಂದಂದಲೇ ಈ ಸಂಗತಿ ಮರದ್ದು.
ನವಗೆ ಅದು ಮರವಲೆ ಸುಮಾರು ಸಮಯ ಹಿಡುದ್ದು.
~
ಸುಮಾರು ಸಮಯ ಹಿಡುದರೂ, ಈಗ ಸಂಪೂರ್ಣವಾಗಿ ಮರದು ಹೋಯಿದು.
ಈಗ ಶ್ರೀನಿವಾಸ ಮಾಷ್ಟ್ರ, ಅವರ ಉನ್ನತ ವ್ಯಕ್ತಿತ್ವ, ಅವರ ಮೃದು ಮನಸ್ಸು, ಅವು ಮಾಡಿದ ಪಾಠಂಗೊ – ಇದು ಈಗಳೂ ನೆಂಪಾವುತ್ತು.
ಅವು ಮಕ್ಕೊಗೆ ಶಿಸ್ತಿಲಿ ಪಾಟ ಮಾಡಿದ್ದೂ ನೆಂಪಾವುತ್ತು.
ಆದರೆ, ಈ ಬಡುದ್ದದು ನೆಂಪೇ ಆವುತ್ತಿಲ್ಲೆ.
ಒಂದು ವೇಳೆ ನೆಂಪಾದರೂ – ಮೋರೆಲಿ ಮುಗುಳು ಬಂದುಗೊಂಡೇ ನೆಂಪಪ್ಪದು. ಹ್ಹೆ – ಹೀಂಗೂ ಆಯಿದು ಒಂದರಿ – ಹೇದು.
ಅಲ್ಲ, ಒಪ್ಪಣ್ಣಂಗೆ ಮಾಂತ್ರ ಅಲ್ಲ, ಶ್ರೀನಿವಾಸ ಮಾಷ್ಟ್ರಿಂಗೂ ಈಗ ಅದು ನೆಂಪಿರ.
ಒಪ್ಪಣ್ಣನ ಕಂಡ ಕೂಡ್ಳೇ – ಬೈಲು ಹೇಂಗಿದ್ದು? ನೆಂಟ್ರುಗೊ ಎಲ್ಲ ಸೌಖ್ಯವೆಯೋ? – ಹೇದು ಕೇಳ್ತವಷ್ಟೇ ವಿನಃ, ನೀ ಯೇಕೆ ಹತ್ತೊಂಭತ್ತು ಮೂರ್ಲಿ ಹೇಳದ್ದು ಆ ದಿನ – ಹೇದು ಒಂದರಿಯೂ ಕೇಳಿದ್ದವಿಲ್ಲೆ.
~
ಇದೆಲ್ಲ ಮರದ ಸಂಗತಿಯೇ ಆದರೂ, ಒಪ್ಪಣ್ಣಂಗೆ ಈಗ ನೆಂಪಾತು.
ಏಕೇದರೆ – ಅದೆಲ್ಲಿಯೋ ಒಂದು ವೇದಪಾಠ ಶಾಲೆಲಿ ಒಬ್ಬರು ಗುರುಗೊ ಅಲ್ಯಾಣ ವಿದ್ಯಾರ್ಥಿಗೆ ಬಡುದ ಸಂಗತಿಯ ಆರೋ ಹೇಳಿದವು.
ಪೀಕ್ಲಾಟ ಮಾಡಿದ ಮಾಣಿಯ ಬೆನ್ನಿಂಗೆ ಎರಡು ಬಾರ್ಸುವ ವೀಡ್ಯ ಅಡ. ಆರೋ ಮೊಬೈಲಿಲಿ ಮಾಡಿದ್ದಾಡ.
ಮತ್ತೆ ನೋಡಿರೆ, ದೇವಸ್ತಾನಲ್ಲಿ – ರಾಜ° ಕೂಪಲೆ ಹೇದು ಮಡಗಿದ ಕುರ್ಶಿಲಿ ಆ ಮಾಣಿ ಹೋಗಿ ಕೂದ್ಸಾಡ. ಹಾಂಗೆ ಮಾಡಿದ್ದು ಎಂತಗೆ – ಹೇದು ಕೇಳಿ ಎರಡು ಬಿಗುದ್ದಾಡ.
ಇಲ್ಲಿ ನಾವು ಹಲವು ವಿಶಯಂಗೊ ಗಮನುಸೆಕ್ಕು:
- ಆ ಗುರುಗೊ ವಿದ್ಯಾರ್ಥಿಯ ಸಂಪೂರ್ಣ ಯೋಗಕ್ಷೇಮದ ಹೊಣೆ ಹೊತ್ತುಗೊಂಡಿದವು. ಅಲ್ದೋ?
- ಆ ಮಾಣಿಯ ವೆಗ್ತಿತ್ವ ರೂಪುಗೊಳ್ಳೇಕಾರೆ – ಅವ° ಒಂದು ಪರಿಪೂರ್ಣ ವೆಗ್ತಿ ಆಯೇಕಾರೆ ಅವ° ತಪ್ಪು ಮಾಡಿದಲ್ಲಿ ಗುರುಗೊ ತಿದ್ದೇಕು.
- ಆ ಮಾಣಿಗೆ ಅಂಬಗ ಅವು ಎರಡು ಬಿಗುದಿದ್ದರೂ, ಮಾಣಿ ಕಲ್ತು ಒಳ್ಳೆಯವ° ಆದರೆ ಕುಶಿ ಪಡುವ ಕೆಲವು ಜೆನಂಗಳಲ್ಲಿ ಆ ಗುರುಗಳೂ ಒಬ್ಬರು. ಅದು ನಿಘಂಟು.
- ಆ ಮಾಣಿಗೆ ಅಂಬಗ ಗುರುಗಳ ಮೇಗೆ ಹೆದರಿಕೆ, ಬೇಜಾರು ಬಂದಿದ್ದರೂ – ಇಂದು ಅವು ಇಬ್ರುದೇ ತುಂಬಾ ಅನ್ಯೋನ್ಯತೆಲಿ ಇಕ್ಕು.
- ಆ ಮಾಣಿಗೆ ಆ ದಿನ ಪೊಳಿ ಬಿದ್ದದು ಲಾಟಿಲಿ ಅಲ್ಲ, ಕೋಲಿಲಿ ಅಲ್ಲ, ಚೈನು-ಕತ್ತಿಲಿ ಅಲ್ಲ, ತನ್ನ ಕೈಲಿ ಬಡುದ್ದು. ಪ್ರೀತಿ ಇದ್ದ ಕಾರಣವೇ ಕೈಲಿ ಬಡಿವದು. ಸೇಡು ಇದ್ದರೆ ಎಂತಾರು ಆಯುಧ ಹಿಡಿತ್ತಿತವು.
- ಪೆಟ್ಟು ಕೊಡದ್ದೆ ಕಲುಶೇಕು ಹೇಳೇಆರೆ ಅದು ಸರ್ಕಾರಿ ಶಾಲೆಯೇ ಆಯೇಕಷ್ಟೆ. ಶಿಸ್ತು ಕಲಿಶಲೆ ಎಲ್ಲೋರುದೇ ಅವರವರ ಮಾರ್ಗ ಹಿಡುದೇ ಹಿಡಿತ್ತವು. ಅದರ್ಲಿ ಅತೀ ಸಾಮಾನ್ಯವಾಗಿ ಕಾಂಬದು ಪೆಟ್ಟು.
ಆದರೆ, ಒಪ್ಪಣ್ಣಂಗೆ ಆ ಸಂಗತಿ ಕೇಳಿ ಅನುಸಿದ ಕೆಲ್ವು ವಿಶಯಂಗೊ:
- ವೇದಪಾಠ ಶಾಲೆಲಿ ಗುರುಗೊ ಹಾಂಗೂ ಬಡುದ್ದದು ತಪ್ಪು; ಆಯಿಕ್ಕು. ಒಪ್ಪುವೊ°.
ಆದರೆ, ಬಡಿವದರ ವೀಡ್ಯ ಮಾಡಿದ ಮಹನೀಯ ಆರು? ಆ ಜೆನಕ್ಕೆ ನಿಜವಾಗಿಯೂ ಮನಸ್ಸು ಇದ್ದಿದ್ದರೆ – ಅಂಬಗಳೇ ಹೋಗಿ ಹೇಳುಲಾವ್ತಿತಿಲ್ಲೆಯೋ? - ಗುರುಗೊ ಬಡಿವಾಗ “ಅದು ಕ್ಷತ್ರಿಯನ ಕುರ್ಶಿ, ನೀನು ಬ್ರಾಹ್ಮಣ ಆಗಿ ಅಲ್ಲಿ ಕೂದ್ಸು ಎಂತಕೆ” – ಹೇದು ಕೇಳಿದ್ದವಾಡ.
ಇದು ಕ್ಷತ್ರಿಯರಿಂಗೆ ಮಾಡಿದ ಅಪಮಾನ ಅಡ.
“ಅದು ನಿನ್ನ ಬಾಳೆಲೆ ಅಲ್ಲ, ಆಚವನ ಬಾಳೆಲೆಂದ ಎಂತಕೆ ಉಂಡೆ?” – ಹೇದರೆ ಆಚವಂಗೆ ಮಾಡಿದ ಅಪಮಾನವೋ?
ಬ್ರಾಹ್ಮಣ ಆದವಂಗೆ ಅವನದ್ದೇ ಕರ್ತವ್ಯ ಇದ್ದು. ಕ್ಷತ್ರಿಯ ಆದವಂಗೆ ಅವನದ್ದೇ ಕರ್ತವ್ಯ ಇದ್ದು.
ಅವ° ಇವನ ಜಾಗೆಲಿ ಕೂದರೆ, ಇವ° ಅವನ ಜಾಗೆಲಿ ಕೂದರೆ – ಅತ್ತಿತ್ತೆ ಆತಿಲ್ಯೋ? ಆಚವನ ಕೆಲಸ ಇವ° ಮಾಡ್ಳೆ ಹೆರಟ್ರೆ ಇವ° ಮಾಡೇಕಾದ್ಸರ ಮಾಡುದು ಆರು?
ವೇದದ ಗುರುಗೊ ಆಗಿ ತನ್ನ ಶಿಶ್ಯರು ವೇದ ಕಲಿಯೇಕು ಹೇಳ್ತ ಹಂಬಲ ಇಪ್ಪದು ಸಹಜವೇ ಅಲ್ದೋ? - ಬೇಸಗೆ ರಜೆಲಿ ಮಾಡಿದ ವೀಡ್ಯ ಅದಾದರೆ, ಇಷ್ಟು ಸಮಯ ಎಂತಗೆ ಹುಗ್ಗುಸಿ ಮಡಗಿದ್ದು?
ಸಮಯ ನೋಡಿ ಹೆರ ಬಿಟ್ಟದೋ? ಎಂತ ಕತೆ? - ಆ ಗುರುಗೊ ಕೀಟ್ಳೆ ಮಾಣಿಗೆ ಬುದ್ಧಿ ಹೇಳದ್ದರೆ, ನಾಳೆ ಅವ ಸಮಾಜಕ್ಕೇ ಉಗ್ರವಾದಿ ಆಗಿ ಉಪದ್ರ ಮಾಡುವ ಸಾಧ್ಯತೆ ಇದ್ದತ್ತು. ಅಲ್ದೋ?
- ಮಾಣಿಯ ಅಪ್ಪಮ್ಮ “ಆ ಗುರುಗೊಕ್ಕೆ ಎಂತೂ ಮಾಡೆಡಿ, ಎನ್ನ ಮಗ ನಾಲ್ಕಕ್ಶರ ಕಲ್ತು ಉಶಾರಿ ಆಯಿದ°” – ಹೇದು ಹೇಳಿದ್ದದು ಸಮಾಜದ ಕಣ್ಣಿಂಗೆ ಕಾಣ್ತಿಲ್ಯೋ?
- ಸಾವಿರಾರು ರುಪಾಯಿ ಪೀಸು ಕಟ್ಟಿ ಹೋವುತ್ತ ಕೋನ್ವೆಂಟು ಶಾಲೆಗಳಲ್ಲಿ ಈಗಳೂ ಬೀಸುತ್ತವು. ಅದರ ನಿಲ್ಲುಸುಲೆ ಎಡಿಗಾಯಿದೋ?
ಅದೆಲ್ಲ ಬಿಡಿ, ಪಳ್ಳಿ ಶಾಲೆಲಿ ಇಲ್ಲೆಯೋ ಪೆಟ್ಟು? ಇದ್ದು. ಎಲ್ಲ ದಿಕ್ಕೆಯೂ ಹಳೆ ಕ್ರಮ ಇದ್ದು. ಶಿಸ್ತು ಕಲಿಶಲೆ ಇಪ್ಪ ದಾರಿಗೊ ಅದೆಲ್ಲ. ರಾಜದಂಡ – ಹೇದು ಹೆಸರಡ ಅದಕ್ಕೆ.
ಬದಲಾದ ದಾರಿ ಕ್ರಮೇಣ ಚಲಾವಣೆಗೆ ಬತ್ತಷ್ಟೆ.
~
ಇದೆಲ್ಲ ಕಾಂಬಗ ಒಪ್ಪಣ್ಣಂಗೆ ಅನುಸುದು – ದಾರಿಲಿ ನಿಂದುಗೊಂಡು ಮಾಣಿಗೆ ಹಾಂಗೆ ಬಡುದ್ದು ತಪ್ಪೇ ಆಗಿಕ್ಕು.
ಆದರೆ ಹೆರಾಣೋರು ಅಯ್ಯೋ ಉಳ್ಳೋ ಹೇದು ಬೊಬ್ಬೆ ಹೊಡದು ಹೇಳ್ತಾಗಿಂದ ಸಂಗತಿ ಎಂತೂ ಆಯಿದಿಲ್ಲೆ.
ಮಕ್ಕಳ ತಿದ್ದುವ ಸೂಕ್ಷ್ಮಂಗಳ ಆ ಗುರುಗೊ ರಜ್ಜ ಅಭ್ಯಾಸ ಮಾಡೇಕು.
ಸಮಾಜವ ತಿದ್ದುವ ಸೂಕ್ಷ್ಮವ ನಾವೆಲ್ಲೋರೂ ಅಭ್ಯಾಸ ಮಾಡೇಕು!
ಆರಾರು ಆರಿಂಗಾರು ಬಡಿತ್ತರೆ ಮೊಬೈಲು ತೆಗದು ರೆಕಾರ್ಡು ಮಾಡುದಲ್ಲ, ನೇರ ಹೋಗಿ ಮಾತಾಡೆಕ್ಕು – ಹೇದು.
ಶಿಕ್ಷೆಯ ರೆಕಾರ್ಡು ಮಾಡುವ ಬದಲು ಶಿಕ್ಷಣವ ರೆಕಾರ್ಡು ಮಾಡೀ ಹಂಚಿದ್ದರೆ ಸಾವಿರಾರು ಜೆನಕ್ಕೆ ಸಹಾಯ ಆವ್ತಿತು. ಅಲ್ದೋ?
ಏನೇ ಇರಳಿ, ಈ ಸಂಗತಿ ಬೇಗ ತಣುದರೆ ಒಳ್ಳೆದು.
ಆ ವಿದ್ಯಾರ್ಥಿಯ ಬಾಳು, ಹಾಂಗೇ ಆ ಸಣ್ಣ ಪ್ರಾಯದ ಗುರುಗಳ ಬಾಳು – ಎರಡುದೇ ಬೆಳಗೆಕ್ಕು.
ಎಲ್ಲೋರಿಂಗೂ ಒಳ್ಳೆದಾಗಲಿ. ದೂರು ಕೊಟ್ಟೋರು ಬೇಗ ಹಿಂದೆ ತೆಕ್ಕೊಳಲಿ – ಹೇದು ಹಾರೈಕೆ.
ಹರೇರಾಮ
~
ಒಂದೊಪ್ಪ: ಶಿಕ್ಷೆ ಬೇಗ ಮರೇಕು, ಶಿಕ್ಷಣ ಸದಾ ನೆಂಪೊಳಿಯೇಕು. ಹೀಂಗಾದರೆ ಸಮಾಜ ಬೆಳೆತ್ತು; ಅತ್ತಿತ್ತೆ ಆದರೆ ಸಮಾಜ ಒಡೆತ್ತು
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹಾಂಗೂ ಬಡುದ್ದದು ತಪ್ಪು; ಆಯಿಕ್ಕು………
ಕೈ ಬೇನೆ ಒಟ್ಟಿ೦ಗೆ ಕ೦ಡೂ,ಹೀ೦ಗೆ ಮಾಡಿದ್ದು ,
ಹೇಳಿ ಅರ್ಥಾಗದ್ದ ವಿಷ್ಯ .
ವಿಷಯ ಹೇ೦ಗೆ ಆಗಿದ್ದರೂ
ಎಲ್ಲರ ಎದುರು ಮಾಣಿ ನೋಡಿಪ್ಪಗ
ಬೇಜಾರ ಆತು ನಾವಗೆ.
ಆಧುನಿಕ ತಂತ್ರ ಜ್ಞಾನವ ಬೇಕಾದ್ದಕ್ಕೆ ಉಪಯೋಗಿಸದ್ದೆ ಬೇಡದ್ದಕ್ಕೆ ಉಪಯೋಗಿಸಿದ್ದಕ್ಕೆ ಒಳ್ಳೆ ಉದಾಹರಣೆ ಈ ಬೆಶಿ ಬೆಶಿ ಶುದ್ದಿ. ಮಗಂಗೆ ಮಾಶ್ಟ್ರು ಬಡುದ್ದಕ್ಕೆ ಅಬ್ಬೆ ಅಪ್ಪ ಪೋಲೀಸಿಂಗೆ ದೂರುಕೊಟ್ಟಿದವಿಲ್ಲೆಯಾಡ. ಬೇರಾರೋ ಬೇಡದ್ದವು ದೂರು ಕೊಟ್ಟದಾಡ. ಈ ದಲಿತೋದ್ಧಾರಕಂಗೆ ಎಂತಕೆ ಬೇಕಪ್ಪ ಉಸಾಬರಿ. ಅಂತೂ ಎಲ್ಲಾ ಕಡೆಯೂ ರಾಜಕೀಯ.
(ದಲಿತೋದ್ಧಾರಕಂಗೆ) ಅದು ಎಂಗಳ ಊರಿಂದು…. ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಹೇಳ್ತ ಜೆನ ಅದು …
ಸರಿಯಾದ ಮಾತು ಒಪ್ಪಣ್ಣ, ಶಿಕ್ಷೆ ಕೊಟ್ಟದರ ಮರೆಯದ್ರೆ ಶಿಕ್ಷಣ ತಲಗೆ ಹೋಗ .
ಇನ್ನೊಂದು ಗಮನುಸೆಕ್ಕಪ್ಪದು ಎಂತ ಹೇಳಿರೆ ಗುರುಗೋ ಪೆಟ್ಟುಕೊಟ್ಟದು ಮಾಣಿಯ ಚೆಡ್ಡಿಗೆ. ಯಾವುದೋ ಕೋಪಲ್ಲಿ ಕೊಡ್ತ ಪೆಟ್ಟು ಆಗಿದ್ದರೆ ಮಾಣಿಯ ವಸ್ತ್ರ ಇಲ್ಲದ್ದ ಬೆನ್ನಿಂಗೆ ಬೀಳ್ತಿತ್ತು.
ಬೇಡ ಹೇಳಿ ಕರೆಲಿ ಮಡಗಿದ ವೀಡ್ಯವ ನಿನ್ನೆ ಇರುಳು ನೋಡಿದೆ. ಆ ಗುರುಗಳ ಬೈಗಳಿಲಿ ಇದ್ದ ಕಳಕಳಿ ನೋಡಿ ಅವು ತಿದ್ದುಲೇ ಅಷ್ಟು ದಂಡನೆ ಮಾಡಿದ್ದು ಹೇಳಿ ಸ್ಪಷ್ಟ ಆತು . ” ನಿನ್ನ ಅಪ್ಪ ಕಿಚ್ಚಿನ ಎದುರು ಕಷ್ಟ ಬತ್ತ ,ನಿನಗೆ ಸೊಕ್ಕು ,ಅಬ್ಬೆ ಅಪ್ಪನ ಕಷ್ಟ ಗೊಂತಿದ್ದೋ ? ನೀನು ಆ ಕುರುಶಿಲಿ ಕೂಪಲೇ ಅರಸನೋ ? ಗುರು ಬಪ್ಪಗ ನಿನ್ನ ಒಟ್ಟಿಂಗೆ ಇದ್ದವ ಎದ್ದು ಹೋದ , ನೀನು ಎಳದು ಇಳುಶುವ ವರೆಗೂ ಕೂದಿತ್ತಿದ್ದೆ “…ಕಡೆಂಗೆ, ” ಒಳ ಹೋಗು ಉಣ್ಣು ,ಪಾಠ ಕಲಿ ” ಅವರ ಕೋಪ ಅವರ ನಿಯಂತ್ರಣಲ್ಲಿ ಇತ್ತು ಹೇಳ್ತದು ಸ್ಪಷ್ಟ … ಇಷ್ಟು ಪೆಟ್ಟಿನ ಹೆದರಿಕೆ ಇಲ್ಲದ್ರೆ ಸಮಾಜ ಎತ್ಲಾಗಿ ಹೋತಿಕ್ಕುಗೋ !!!
ಕೆಲವು ವಿಷಯಂಗೋ ತಪ್ಪಾದ ಕಾರಣಕ್ಕೆ ತಪ್ಪಾಗಿ ಉಪಯೋಗ ಆವ್ತು. ಇದೀಗ ವೇದ ಶಿಕ್ಷಣ ಮತ್ತೆ ಬ್ರಾಹ್ಮಣರ ಬಗ್ಗೆ ಇಪ್ಪ ಅಸಹನೆಯ ಅಭಿವ್ಯಕ್ತಿ ಆಗಿಕ್ಕು. ಇರಲಿ.