ಇದು ಮಳೆಕಾಲದ ಮಳೆಯೋ – ಪೋಕಾಲದ ಮಳೆಯೋ; ಚೆಂಡಿ ಚೆಂಡಿಯೇ – ಹೇದು ಒಪ್ಪಕ್ಕ ಪರಂಚುದು ಕೇಳುತ್ತು.
– ಸ್ಕೂಟಿಲಿ ಟುರೂನೆ ಹೋಪಲೆ ಬಂಙ ಆವುತ್ತಾಡ.
ಮಳೆ ಬಂದದರ್ಲಿ ಒಂದರಿಯೇ ಸಮಾಕೆ ಬಂದು – ಮುಗಿವನ್ನಾರ ಸೊರುಗಿ – ಬಿಟ್ಟು ಹೋಯೇಕು ಹೇಳ್ತದು ಮದಲಿಂದ ಇದ್ದ ಹಂಬಲಿಕೆ.
ಈಗ ಹಾಂಗಾವುತ್ತೇ ಇಲ್ಲೆ. ನೆಂಪಪ್ಪಗ ಒಂದೊಂದರಿ ಬಪ್ಪದು. ಸ್ಕೂಟಿ ಶ್ಟಾಟು ಮಾಡುವಾಗ ಇಲ್ಲೆ, ಗೇರು ಹಾಕುವಗ ಮಳೆ ಸೊರುಗಿತ್ತು; ನಿಲ್ಲುಸಿ ರೈನುಕೋಟು ಹಾಕುವಗ ಪುನಾ ಬೆಶಿಲು!
ಹೀಂಗೆ ಮಳೆ ಬೈಲಿಲಿ ಎಲ್ಲೋರಿಂಗೂ ಬಂಙವೇ.
ಅದಕ್ಕೇ – ಮಳೆ ಬತ್ತ ಮದಲೇ ಮುಗುದಿಕ್ಕಲಿ – ಹೇದು ಚೂಂತಾರು ಭಾವ ಅಂಬೆರ್ಪು ಮಾಡಿ ಮನೆ ಒಕ್ಕಲು ಆಗಿಂಡದು.
~
ಜೆಂಬ್ರ, ಏರ್ಪಾಡು, ಪೌರೋಹಿತ್ಯ, ಅಡಿಗೆ, ಸುದರಿಕೆ,– ಹೇದು ನಾವು ಹಲವೂ ಶುದ್ದಿಗಳ ಮಾತಾಡಿದ್ದು ಬೈಲಿಲಿ.
ಜೆಂಬ್ರ ಎಳಗುಸುತ್ತ ಅವಿಭಾಜ್ಯ ಅಂಗಂಗೊ ಅವೆಲ್ಲ.
ಜೆಂಬ್ರವ ಒಂದು ಮನೆಯೋರು ಎಳಗುಸುತ್ತದಾದರೂ, ಈ ಎಲ್ಲ ಅವಿಭಾಜ್ಯ ಅಂಗಂಗೊ ಅದೇ ಉದ್ದೇಶಂದ ಸೇರಿಗೊಳ್ತವು.
ಮನೆಯೋರ ಪರವಾಗಿ ಪೂಜೆ ಮಾಡ್ತ ಬಟ್ಟಮಾವ, ಬಂದ ಸೇರಿದ ಎಲ್ಲೋರಿಂಗುದೇ ಹೊಟ್ಟೆ ತುಂಬುಸಿ ಕಳುಸುತ್ತ ಅಡಿಗೆಯೋರು, ಬೇಕುಬೇಕಾದ ಹಾಂಗೆ ಹೇಳಿಕೊಡ್ತ ಗುರಿಕ್ಕಾರಮಾವ – ಎಲ್ಲೋರುದೇ ಮನೆಯೋರ ಪರವಾಗಿಯೇ ಕಾರ್ಯಮಾಡ್ತದು.
ಅಡಿಗೆಯೋರ ಬಗ್ಗೆ, ಮಂತ್ರ ಹೇಳ್ತ ಬಟ್ಟಮಾವಂದ್ರ ಬಗ್ಗೆ, ಚರಣಕಾಣಿಕೆ ತೆಕ್ಕೊಳ್ತ ಗುರಿಕ್ಕಾರಮಾವನ ಬಗ್ಗೆ – ಎಲ್ಲೋರಿಂಗೂ ಗುಮನ ಇರ್ತು.
ಆದರೆ ಸುದರಿಕೆಯೋರ ಬಗ್ಗೆ? ಮಾತಾಡುಸ್ಸು ಕಮ್ಮಿಯೇ ಅಪ್ಪೋ. ನಾವು ಬೈಲಿಲಿ ಒಂದರಿ ಮಾತಾಡಿರೆ ಹೇಂಗೆ!?
ಅದೇ ಇಂದ್ರಾಣ ಶುದ್ದಿ.
~
ದೊಡ್ಡಜ್ಜನ ಮನೆಗೆ ಅಪುರೂಪಕ್ಕೆ ನಿಂಗೊ ಒಂದರಿ ಹೋಗಿನೋಡಿ –
ಮನೆ ಜಾಲಕರೆಂಗೆ ಎತ್ತುವಗಳೇ ಹನ್ನೆರಡು ಜೆನ ಒಟ್ಟಿಂಗೆ ಏನು, ಏನು, ಏನು – ಕೇಳ್ತವು.
ಕೈಕಾಲು ತೊಳದು ಬೆಂಚಿನ ಕರೆಲಿ ಕೂಪಗಳೇ ಎರಡು ಚೆಂಡಿಹರ್ಕು ತಂದು ಕೊಡ್ತವು ಕೂಚಕ್ಕಂಗೊ.
ಹಿಂದಂದಲೇ ಎರಡು ಗ್ಲಾಸು ಮಜ್ಜಿಗೆ ನೀರೂ, ನಾಕು ಗ್ಲಾಸು ಬೆಶಿನೀರೂ, ಎಂಟೂವರೆ ತುಂಡು ಬೆಲ್ಲವೂ – ಎಲ್ಲವೂ ಬಂದುಬಿಡ್ತು.
ದೊಡ್ಡಜ್ಜನ ಮನೆಲಿ ಮಾಂತ್ರ ಅಲ್ಲ, ಮದಲಿಂಗೆ ಎಲ್ಲ ಮನೆಗಳಲ್ಲಿಯೂ ಹಾಂಗೇ. ಅದು ಹೃದಯಲ್ಲಿಪ್ಪ ಆತಿಥ್ಯ ಕಾರ್ಯಕ್ಕೆ ಬಪ್ಪದು.
ನಿತ್ಯಕ್ಕೆ ಹೋದರೆ ಮಾಂತ್ರವೋ? ಅಲ್ಲ. ದೊಡ್ಡಜ್ಜನ ಮನೆ ಜೆಂಬ್ರಕ್ಕೂ ಅದೇ ಕತೆ.
ಸೇರಿದ ಎಲ್ಲೋರಿಂಗುದೇ ಸುದರಿಕೆ ಮಾಡ್ತ ತವಕ.
ಮುನ್ನಾಣ ದಿನ ಬೆಂದಿಗೆ ಕೊರವಲೆ ಪೀಶಕತ್ತಿ, ಮೆಟ್ಟುಕತ್ತಿ ಹೇದು ಹತ್ತೈವತ್ತು ಜೆನ; ಚಾಯ ಕುಡಿಯಲಪ್ಪಗ ಮತ್ತೆ ಐವತ್ತು ಜೆನ.
ಮರದಿನ ಆಸರಿಂಗೆ ಕೊಡ್ಳೆ ಉದ್ದಲಂಗದ ಕೂಚಕ್ಕಂಗೊ.
ಸೆಂಟು ಉದ್ದಲೆ ಪೇಂಟಂಗಿಯ ಕುಂಞಿಮಾಣಿ; ಚೋಕ್ಲೇಟುಕೊಡ್ಳೆ ಕಳಕಳ ಅಂಗಿಯ ಕುಂಞಿಭಾವ;
ಕೊಚ್ಚುಸಳ್ಳಿಗೆ ಕೊಚ್ಚುತ್ತ ಬೆಳಿ ಅಂಗಿ ಮಾವಂದ್ರು,
ಪ್ರುಟ್ಸಲಾಡು ಹಣ್ಣು ಕೊಚ್ಚಲೆ ಪಟ್ಟೆ ಸೀರೆ ಹೆಮ್ಮಕ್ಕೊ,
ಸಭೆಯ ಕುರ್ಶಿ ಮಡುಸಿ, ಉಡುಗಿ, ಹಂತಿ ಹಾಕಿ ಬಳುಸುಲಪ್ಪಗ ನೂರೈವತ್ತು ತುಂಡು ಜವ್ವನಿಗರು;
ಅವಕ್ಕೆ ಮೇಲುಸ್ತುವಾರಿಗೆ ಕೊಟ್ಟೆಮಡಲ ಅಜ್ಜ,
ಚೆಂದದ ಹಂತಿಗೊ, ಅಡಿಗೆ ಕೋಣೆಂದ ಬಂದ ಶಾಕಪಾಕಂಗಳ ಹಂತಿಲಿ ಬಳುಶಿ, ಮುಗುಶಿ, ಒಳುದ್ಸರ ಒಪಾಸು ಅಡಿಗೆಕೋಣೆಗೆ ಎತ್ತಿಸಿ,
ಕೈತೊಳದು ಶಾಲಿಲಿ ಉದ್ದಿಗೊಂಬನ್ನಾರ – ಎಲ್ಲವುದೇ ಬಂದು ಸೇರಿದ ಜವ್ವನಿಗರದ್ದೇ ಕಾರ್ಬಾರು.
ಇದೇ ಜವ್ವನಿಗರೇ ಮೂರ್ನೇ ಹಂತಿಗೆ ಮೂರು ಕೆರಿಶಿ ಹೋಳಿಗೆ ಮುಗುಶುದು.
ಅವಿಭಕ್ತ ಕುಟುಂಬ ಆದರಂತೂ – ಹೇಳುದೇ ಬೇಡ.
ಆ ಮನೆಯ ದೊಡ್ಡಬಾವನ ಹೆಂಡತ್ತಿಯ ದೊಡ್ಡಣ್ಣನಿಂದ ತೊಡಗಿ, ಸಣ್ಣ ಭಾವನ ಹೆಂಡತ್ತಿಯ ಸಣ್ಣ ತಂಗೆಯ ಒರೆಂಗೆ – ಎಲ್ಲೋರುದೇ ಸುದರಿಕೆಯೇ!
ಪರಸ್ಪರ ಗುರ್ತ ಪರಿಚಯ ಆಗಿ – ಆ ಮೂಲಕ ನೆಂಟಸ್ತಿಕೆಯ ವ್ಯಾಪ್ತಿ ಬೆಳವದು; ಹತ್ತಾರು ಹೊಸ ಮೋರೆಯ ಪರಿಚಯ ಅಪ್ಪದು – ಎಲ್ಲವುದೇ ಅಲ್ಲಿಯೇ.
~
ಎಲ್ಲ ಮನೆಲಿಯೂ, ಎಲ್ಲ ಜೆಂಬ್ರಂಗಳಲ್ಲಿಯೂ ಮದಲಿಂಗೆ ಇದರ ಕಾಂಬಲೆ ಇದ್ದತ್ತು.
ಆದರೆ, ಬೇಜಾರದ ಶುದ್ದಿ – ಈಗ ಇದು ಅಪುರೂಪ ಆವುತ್ತಾ ಇದ್ದು.
ಈಗ ಹೇಂಗೆ?
ಜೆಂಬ್ರಕ್ಕೆ ನೆಂಟ್ರುಗೊ ಎತ್ತುದೇ ಹನ್ನೆರಡೂವರೆಗೆ. ಅಲ್ಲಲ್ಲ, ಹನ್ನೆರಡು ವರೆ ಹೇದರೆ ರಜ ಬೇಗವೇ ಆತು – ಒಂದೂವರೆಗೆ.
ಗುರಿಕ್ಕಾರ್ರ ಅಪ್ಪಣೆ ತೆಕ್ಕೊಂಡು ಮನೆ ಎಜಮಾನ “ಊಟಕ್ಕಾತು” ಹೇದು ನೀರು ಮಡಗಲಪ್ಪಗ – ನೆಂಟ್ರು ಬಂದು ಸೇರುವ ಹೊತ್ತು.
ಪಕ್ಕನೆ ತಡವಾದರೆ ಕೆಲವು ಸರ್ತಿ ಹಂತಿಗೆ ಬಾಳೆ ಹಾಕಿ ಅಪ್ಪದೂ ಇದ್ದು.
ಹಾಂಗೆ, ಬಂದ ಹಾಂಗೇ ಸೀತ ಉಂಬಲೆ ಕೂದತ್ತು. ಹಂತಿ ಸಣ್ಣದಾದರೆ ಆಚ ಹೊಡೆಲಿ ಬಪ್ಪೆ ಇದ್ದೋ ನೋಡಿದ್ದು; ಓಡಿಗೊಂಡು ಉಣ್ತ ನಮುನೆದು.
ಅದೇ ಒಳ್ಳೆದು ಹೇದು ತೋರಿರೆ ಅಲ್ಲಿಗೆ ಹೋತು. ಪಕ್ಕನೆ ಗೀರೈಸೋ ಪಲಾವೋ ಎಂತಾರು ಹಾಕಿಂಡತ್ತು, ರಜ ಸಾರನ್ನ ಹೋಳಿಗೆ ಉಂಡತ್ತು.
ಬಟ್ಳಿನ ಓ ಅಲ್ಲಿ ಕರೇಲಿ ಅತ್ತೆ ಇಡ್ಕಿತ್ತು.
ಹೆರಡ್ಳಪ್ಪಗ ಶ್ರದ್ಧೆಲಿ ಎಜಮಾನನ ಹತ್ತರೆ “ಹೇಳಿಕ್ಕಿ ಹೆರಡುದು” ಒಂದಿದ್ದು.
ಈಚೋನು ಬಯಿಂದ° ಹೇದು ಗೊಂತಪ್ಪಲೆ; ಅಲ್ಲದ್ದರೆ ಈ ಜೆನ ಬಯಿಂದನಿಲ್ಲೆ ಹೇದು ಇನ್ನಾಣ ಸರ್ತಿ ಕಾಗತ ಕೊಡದ್ರೆ!!
ಒಂದೂವರೆಗೆ ಎತ್ತಿದವು; ಎರಡು ಗಂಟೆಗೆ ಹೆರಟವು.
ಮೂರ್ತಕ್ಕೆ ಇಪ್ಪವ ತೀರ್ತಕ್ಕಿಲ್ಲೆ, ತೀರ್ಥಕ್ಕಿಪ್ಪೋನು ಮೂರ್ತಕ್ಕಿಲ್ಲೆ – ಹೇದು ತರವಾಡುಮನೆ ರಂಗಮಾವ° ಒಂದೊಂದರಿ ಪರಂಚುದು ಅಂತೇ ಅಲ್ಲ ಇದಾ!
ನೆಂಟ್ರುಗೊ ಬಂದು ಸೇರುದೇ ಕಮ್ಮಿ – ಸುದರಿಕೆಗೆ ಜೆನ ಎಲ್ಲಿಂದ?
~
ಇದಕ್ಕೇ ನಮ್ಮ ಸಮಾಜಲ್ಲಿ ಹೊಸತ್ತೊಂದು ವೆವಸ್ತೆ ಹುಟ್ಟಿಗೊಂಡದು, “ಸುಧರಿಕೆಯವು”.
ಅಡಿಗೆಯವು, ಪೌರೋಹಿತ್ಯದವು – ಹೇದು ಮದಲಿಂದಲೇ ಇದ್ದು; ಈಗ ಈ ತಲೆಮಾರಿಲಿ ಹೊಸತ್ತಾಗಿ ಸುರು ಆದ್ಸು ಇದು – ಸುಧರಿಕೆಯವು ಹೇದು.
ಜೆಂಬ್ರಲ್ಲಿ ಮೊದಲು ಭಾವಯ್ಯಂದ್ರು ಸುದರಿಕೆ ಮಾಡಿದ ಹಾಂಗೇ ಮಾಡ್ತವು. ಅರುಶಿನ ಸಮವಸ್ತ್ರ ಹಾಕಿಂಡು, ಹಾರಿ ಹಾರಿ ಕೆಲಸ ಮಾಡ್ತವು.
ಜೆಂಬ್ರಕ್ಕೆ ಎತ್ತಿಗೊಂಬದೇ, ಕಾಪಿ ತಂದು ಕೊಡ್ತವು.
ಇಡ್ಳಿ ತಿಂಬಲೆ ಕೂಪಲೇ ಪುರುಸೊತ್ತಿಲ್ಲೆ, ಬೇಕಾಷ್ಟು ಬಳುಸುತ್ತವು.
ಮುನ್ನಾಣದಿನ ಬೆಂದಿಗೆ ಕೊರದು ಕೊಡುದು, ಮರದಿನ ಕಾಪಿ ತಿಂಡಿ ವೆವಸ್ಥೆ, ಬಂದೋರಿಂಗೆ ಆಸರಿಂಗೆ ವೆವಸ್ತೆ, ಮಧ್ಯಾಹ್ನದ ಅಡಿಗೆಗೆ ಬೇಕಾದ ಸಕಾಯ, ಕೊಚ್ಚುಸಳ್ಳಿ ಕೊಚ್ಚುದು, ಪ್ರುಟ್ಸುಲಾಡು ಬಿಡುಸುದು, ಮಧ್ಯಾಹ್ನದೂಟಕ್ಕೆ ಬಳುಸುದು – ಎಲ್ಲವುದೇ ಮಾಡುಗು.
ಆದರೆ, ಇದೇವದೂ ಹೃದಯಲ್ಲಿಪ್ಪದಲ್ಲ, ಸಂಬಳಕ್ಕಾಗಿಪ್ಪ ಆತಿಥ್ಯ.
ಜೆಂಬ್ರದ ಮುನ್ನಾಣ ದಿನ ಹೊತ್ತೋಪಗ ನಾಕುಗಂಟೆಂದ “ಡ್ಯೂಟಿ” ಸುರು ಆವುತ್ತು; ಜೆಂಬ್ರದ್ದಿನ ನಾಕು ಗಂಟೆಗೆ ಡ್ಯೂಟಿ ಮುಗುತ್ತು – ಹೇದು ಸುದರಿಕೆ ಶಾಮಣ್ಣ ಹೇಳುಗು.
ನಾಕು ಗಂಟೆಯ ಒಳದಿಕ್ಕೆ ಎಂತೆಲ್ಲ ಮಾಡ್ಳಿದ್ದೋ – ಎಲ್ಲವನ್ನೂ ಮಾಡಿತ್ತು.
ನಾಕಂಟೆಗೆ ಏಳುನೂರು ರುಪಾಯಿ ಎಣುಸಿ ಕಿಸಗೆ ಹಾಕಿಂಡು – ಬೈಕ್ಕಿಲಿ ಹೆರಟತ್ತು.
ಬಟ್ಟಮಾವನ ಹಾಂಗೆ ದೊಂಡೆ ಹರಿಯೇಕಾದ್ಸಿಲ್ಲೆ, ಅಡಿಗೆ ಸತ್ಯಣ್ಣನ ಹಾಂಗೆ ಒಲೆಕರೆಲಿ ಬೇಯೇಕಾದ್ಸಿಲ್ಲೆ.
ರಜ ಚುರ್ಕು ಇದ್ದರೆ ಆತು, ಅಷ್ಟೇ!
~
ಸುದರಿಕೆ ಬಾವಂದ್ರಿಂಗೆ ಅಶನದ ದಾರಿ ಆತು ಹೇಳ್ತದು ಸಂತೋಷದ ಸಂಗತಿಯೇ ಆದರೂ, ಆ ಅನಿವಾರ್ಯತೆಯ ಸಮಾಜಲ್ಲಿ ನಾವೇ ತಂದುಗೊಂಡದು ಹೇಳ್ತರ ನಾವು ಒಪ್ಪಿಗೊಂಬಲೇ ಬೇಕು. ಸ್ವಾವಲಂಬಿ ಸಮಾಜ ಇರೇಕಾರೆ ಸ್ವಸಹಾಯ ಪದ್ಧತಿ ಇರೇಕು ಹೇದು ಕಂಡುಗೊಂಡಿದವು ಶಂಬಜ್ಜನ ಹಾಂಗಿರ್ತ ಹೆರಿಯೋರು.
ಆದರೆ, ಈಗಾಣ ಧಾವಂತಲ್ಲಿ ಅದೇವದಕ್ಕೂ ಪುರುಸೊತ್ತಿಲ್ಲದ್ದೆ, ಪರಸ್ಪರ ಕೈಜೋಡುಸುತ್ತ ಪರಿಕಲ್ಪನೆಯೇ ಕಾಣೆ ಅಪ್ಪ ಹಂತಕ್ಕೆ ಬಯಿಂದು.
ಅದಕ್ಕೆ ಸರಿಯಾಗಿ, ಅದೆಲ್ಲವನ್ನೂ ಧನೀಕರಣಗೊಳಿಶಿಗೊಂಬಲೆ “ಸುಧರಿಕೆ”ಯ ಹಾಂಗಿರ್ತ ದಕ್ಷಿಣೆ ಇಲ್ಲದ್ದ ಕಾರ್ಯವೂ ಈಗ ದಕ್ಷಿಣೆ ಇಪ್ಪ ಸರುವೀಸುಗೊ ಆಗಿ ಪರಿವರ್ತನೆ ಆಯಿದು.
ಅಲ್ಲದೋ?
ನಮ್ಮ ಪೈಕಿ ಜೆಂಬ್ರಕ್ಕೆ ಬಂದ ಸುದರಿಕೆ ಅಣ್ಣಂದ್ರ ಒಟ್ಟಿಂಗೆ ನಾವುದೇ ಸೇರಿಗೊಂಬೊ; ಚೆಂದಕೆ ಸುದರಿಕೆ ಮಾಡುವೊ°.
ಅಲ್ಲದ್ದರೆ, ನಮ್ಮಂದ ಮತ್ತಾಣ ತಲೆಮಾರಿಂಗೆ ಅದೊಂದು ಸೇವೆ ಹೇಳ್ತದೇ ಮರದು ಹೋಕು. ಎಂತ ಹೇಳ್ತಿ?!
~
ಒಂದೊಪ್ಪ: ಸಮಾಜ ಸೋಮಾರಿ ಆದಷ್ಟು ಸ್ವಾವಲಂಬನೆ, ಸ್ವಸಹಾಯ ಕಮ್ಮಿ ಆವುತ್ತು.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಅಧ್ಬುತ ಶುದ್ಧಿ..ಕಾಲಕ್ಕೆ ಸರಿಯಾಗಿ ಬರದ್ದಕ್ಕೆ ಒಂದು ಒಪ್ಪ..ನಾವು ಮಾಡಿರೆ ನಮ್ಮಲ್ಲಿಯ್ಯೂ ಮಾಡುಗು ಹೇಳ್ತದು ಸತ್ಯವೆ..ಆದರೆ ಆಧುನಿಕತೆಯ ಗೋಜಿಲಿ ನಮ್ಮ ನೆರೆಕರೆಯ ಪ್ರೀತಿ ವಿಶ್ವಾಸ ನಾವೆ ಕಳ್ಕೊಳ್ತಾ ಇದ್ದೋ ಹೇಳಿ ಅನುಸುತ್ತು..ಬರುಬರುತ್ತ ಯುವ ಪೀಳಿಗೆಯವುದೆ ಪೇಟೆಗೆ ಹೋದ ಮೇಲೆ ಜೆಂಬ್ರಕೆ ವಸ್ತ್ರ ಸುತ್ತುದೆ ಕಮ್ಮಿ ಹಾಂಗಿಪ್ಪಾಗ ಬೆಳಿ ವಸ್ತ್ರ ಕಾಂಬದು ಹೇಂಗೆ..ಕೆಲವೊಂದು ಸರ್ತಿ ನಾವು ಮಾಡಿದರು ಎಂತಕೆ ಮಾಡಿದೆ ಹೇಳಿ ಇಪ್ಪ ಭಾವನೆಯೂ ಬತ್ತು ಕೆಲವೊಂದು ಕಡೆಲಿ..ಜನ ಇಕ್ಕು ನಾವು ಉಂಬ ಹೇಳುವವೆ ಜಾಸ್ತಿ ಯಾರುದೆ ಜವಬ್ಧಾರಿ ತೆಕ್ಕೊಂಬಲೆ ತಯಾರಿ ಇಲ್ಲೆ..ಹೀಂಗೆ ಆದರೆ ನಮ್ಮ ಸಂಬಂಧ ಕಡಿಮೆ ಆಗ್ತಾ ಬಕ್ಕು..ನೆರೆಕರೆಯ ನಿಜ ಸ್ವರೂಪ ಇಲ್ಲದ್ದೆ ಅಕ್ಕು..ಸತ್ಯವೆ ಒಪ್ಪಣ್ಣಾ ಸೇವೆ ಪ್ರೀತಿ ವಿಶ್ವಸ ಹೇಳ್ತ ವಿಷಯವೆ ಮರತ್ತು ಹೋಕು..ನಾವು ಮಾಡುವ ನಮ್ಮಲ್ಲಿ ಮಾಡುವ ಅವಕಾಶವ ಕಲ್ಪಿಸಿಕೊಡುವ..
ನಾವು ಹೋಗಿ ಮಾಡಿದರೆ ನಮ್ಮಲ್ಲಿಯೂ ಮಾಡ್ತವು. ನಮ್ಮಲ್ಲಿ ಮಾಡಿದೋರಲ್ಲಿಂಗೆ ನಾವು ಹೋಗಿಯೇ ಹೋವ್ತು. ಎಂಗಳಲ್ಲಿ ಇಷ್ಟರವರೆಗೆ ಜನ ಮಾಡೆಕ್ಕಾಯಿದಿಲ್ಲೆ. ಎಂಗಳ ನೆರೆಕರೆಗೆ ಧನ್ಯವಾದಂಗೊ.
ದೈಹಿಕ ಶ್ರಮವ ನಾವು ಮರವದು ನಮ್ಮ ಅವನತಿಗೆ ಪಂಚಾಂಗ ಹಾಕಿದಾಂಗೆ. ಸುದರಿಕೆ ಮಾಡಿದರೆ ಜಂಬ್ರದ ಮನೆಯೋರಿಂಗೆ ಅದರ ಪ್ರಯೋಜನ ಸಿಕ್ಕುಗು; ಆದರೆ ಲಾಂಗು ಟರ್ಮು ಪ್ರಯೋಜನ ಕೆಲಸ ಮಾಡಿದೋನಿಂಗೇ – ಅದರ್ಲಿ ಸಂಶಯವೇ ಇಲ್ಲೆ – ನಮ್ಮ ಕೌಶಲ್ಯ ಹೆಚ್ಚಕ್ಕು, ಆರೋಗ್ಯ ಒಳ್ಳೆದಕ್ಕು. ಆನು ಚಾನ್ಸು ಸಿಕ್ಕಿದರೆ ಬಿಡ್ತಿಲ್ಲೆ.
ವಸಂತ ಕಜೆ
ವಸಂತಣ್ಣ, ಪ್ರತಿಯೊಬ್ಬನೂ ನಿಂಗಳ ಈ ದಾರಿಲಿಯೇ ಯೋಚನೆ ಮಾಡಿರೆ ನಮ್ಮ ನೆಂಟ್ರುಗೊಕ್ಕೆ ಜೆಂಬ್ರ ಸುಧಾರ್ಸುದು ಹೂಗು ನೆಗ್ಗಿದಷ್ಟೇ ಸಲೀಸಾಗಿ ಹೋಕು.’ ನಾ ನಿನಗಿದ್ದರೆ ನೀ ನನಗೆ ‘ ಹೇಳಿ ಎಲ್ಲೋರು ಸಹಕರಿಸಿದರೆ ಅನುಪತ್ಯಂಗೊ ಆತ್ಮೀಯವಾಗಿರ್ತು. ಮಾಡಿದ್ದರಲ್ಲಿ ಕೊರತೆ ಕಂಡುಹುಡುಕುವವು ಹೀಂಗೆ ಕೈ ಜೋಡುಸುಗಾ ? ಆನು ಹೋಗಿಯೇ ಆಯೆಕ್ಕು ಹೇಳಿ ಇಲ್ಲೆನ್ನೆ- ಬೇರೆಯವು ಇದ್ದವನ್ನೆ ಸುದರಿಕೆಗೆ ಹೇಳಿ ಗ್ರೇಶುವವರ ಎಂಥ ಮಾಡುದು? ಹಾಲು ತಂದು ತುಂಬುಸುಲೆ ಹೇಳಿದ ರಾಜನ ಕಥೆಯ ಹಾಂಗಾದರೆ ಕಷ್ಟ ಅಷ್ಟೆ.
ಸುದರಿಕೆಗೆ ಜೆನ ಮಾಡುವದು ಇತ್ತೀಚೆಗೆ ಸಾಮಾನ್ಯ ರೂಢಿ ಆಗಿ ಹೋಯಿದು. ಬಂದವಕ್ಕೆ ಉಪಚಾರ ಮಾಡ್ಲೆ ಪೈಕಿಯವು ಇಲ್ಲದ್ದಿಪ್ಪಗ ಕೊರತ್ತೆ ಆಗದ್ದ ಹಾಂಗೆ ನೋಡಿಗೊಂಬ ಮಟ್ಟಿಂಗೆ ಇದು ಒಳ್ಳೆಯ ವ್ಯವಸ್ಥೆ ಹೇಳ್ಲಕ್ಕು. ಆದರೆ ನೆಂಟರೊಳದಿಕೆ ಇಪ್ಪ ಆತ್ಮೀಯತೆಯ ನಾವು ಅವರಲ್ಲಿ ನಿರೀಕ್ಷೆ ಮಾಡ್ಲೆ ಸಾಧ್ಯ ಇಲ್ಲೆ. ಮೊನ್ನೆ ಒಂದು ಜೆಂಬಾರಲ್ಲಿ ಸುದರಿಕೆಯವು ಎಲ್ಲಾ ಕೆಲಸ ಮುಗುಶಿ, ಒಳುದ ಸಾಮಾನಿನ ಸರಿಯಾಗಿ ಕಟ್ಟಿ, ಜೀಪಿಂಗೆ ಹಾಕುವದು ಕಾಂಬಗ ಕೆಲಸಲ್ಲಿಪ್ಪ ಅವರ ಶ್ರದ್ಧೆಯ ಮೆಚ್ಚೆಕ್ಕಾವ್ತು. ಕಲಿವಿಕೆ ಇಲ್ಲದ್ದೆ ಕೆಲಸ ಸಿಕ್ಕದ್ದ ಎಷ್ಟೊ ಕೈಗೊಕ್ಕೆ ಕೆಲಸ ಆತು, ಅವರ ಸಂಸಾರಕ್ಕೊಂದು ದಾರಿಯೂ ಆತು.
ಎಂಗಳ ಸುರತ್ಕಲ್ ಹೊಡೆಲಿ, ಇರುಳು ಮೇಲಾರಕ್ಕೆ ಕೊರವಲೆ ಬರೆಕು ಹೇಳಿರೆ ನಿರೀಕ್ಷೆಂದಲೂ ಜಾಸ್ತಿ ಜೆನಂಗೊ ಸೇರುತ್ತವು. ಆದರೆ ಅಪೀಸು ಇಪ್ಪ ದಿನಂಗಳಲ್ಲಿ ಮಧ್ಯಾಹ್ನಕ್ಕೆ ಇವು ಸುದರಿಕೆಗೆ ಸಿಕ್ಕುವದು ಕಷ್ಟವೇ ಸರಿ.
kalaya tasmeyi namaha. avashyakate anivaryate namminda edellavannu madutsu.
ee talemaringe namma sudarikeya seve mugidatho ? elle. sudarikeyavara ottinge navude sudarike seve madidare mundana talemaringe gontakku.elladre sudarikeya kelasa khayamakku. seve bari bayimatakku.
ಹೋಗದ್ದೆ ಕಳಿಯದ್ದ ಜೆಂಬ್ರಂಗಳ ಹೇಳಿಕೆ ಬಂದಪ್ಪಗಳೇ “ಸುದರಿಕೆಗೆ ಜೆನ ಮಾಡಿದ್ದೋ ” ಹೇಳಿ ಕೇಳುವಲ್ಲಿಯಂಗೆ ಎತ್ತಿದ್ದು ಈಗ ಪರಿಸ್ಥಿತಿ. ‘ಜೆನ ಮಾಡಿದರೆ ರಗಳೆ ಇಲ್ಲೆ ಈಗ ಸುದರಿಕೆ ಮಾಡ್ಲೆ ಆರೂ ಸೇರ್ತವಿಲ್ಲೆ ‘ ಹೇಳಿ ದೂರಿನ ಕುಂಡೆಚ್ಚಂಗೆ ಹಾಕಿ ಬಲ್ಲಾಳಕ್ಕೊ ಜಾರಿಗೊಂಬದು ಹೆಚ್ಚಾಯಿದು ಈಗ. ನಮ್ಮದೇ ಸುದರಿಕೆ ಹೇಳಿ ಮಾಡಿತ್ತೋ ಜವ್ವನಿಗರು ಮೆಲ್ಲಂಗೆ ಪೀಂಕಿಗೊಂಡು ಪ್ರಾಯಸ್ಥರನ್ನೇ ಕಳುಸುತ್ತವು- [ಎಲ್ಲೋರು ಅಲ್ಲ!] ಅಂತೂ ಕೆಲಸ ಮಾಡ್ಳೆ ಕಂಡುಕಟ್ಟುವವು ಹೆಚ್ಚಾಯ್ದವು. ಒಂದನೇ ಹಂತಿಗೆ ಉಂಬಲೆ ಕೂದರೆ ಎರಡನೇ ಹಂತಿಗಾದರೂ ಬಳುಸುಗು ಹೇಳಿ ಗ್ರೇಶಿದರೆ ಉಂಡು ಕೈತೊಳದು ಅಲ್ಲಿಂದಲೇ ಪದ್ರಾಡು! ಹೀಂಗಿಪ್ಪವರ ನಂಬಿಗೊಂಡು ಜೆಂಬ್ರತೆಗದವು ಸುದರಿಕೆಗೆ ಜೆನ ಮಾಡದ್ರೆ ಕತೆ ಗೋವಿಂದ! ‘ ದಿನಾ ದುಡಿವದೇ ಆತು- ಅನುಪತ್ಯಲ್ಲಿ ಆದರೂ ಕಾಲುಬಿಡೂಸಿ ಕೂದು ಪಂಚಾಯಿತಿಕೆ ತೆಕ್ಕೊಂಡು ಆರಾಮಲ್ಲಿ ಇಪ್ಪಲಕ್ಕು ಹೇಳಿ ಗ್ರೇಶಿರೆ ಅದೂ ಆವ್ತಿಲ್ಲೆ – ಬಂದವಕ್ಕೆ ಆಸರಿಂಗೆ ಕೊಡೆಕ್ಕನ್ನೇ ‘- ಹೀಂಗೆ ಪರಂಚುವವರ ನೋಡಿದ್ದೆ – ಇಂಥಾ ನೆಂಟ್ರುಗೊ ಇಪ್ಪದಾದರೆ ಸುದರಿಕೆಗೆ ಬಾಡಿಗೆಜೆನ ಮಾಡುದು ಅನಿವಾರ್ಯವೇ ಅಲ್ಲದಾ.
ಜಂಬರದ ಮುನ್ನಾಣ ದಿನದ ಗೌಜಿ, ಜಂಬರದ ದಿನದ ಗೌಜಿ ಗಮ್ಮತ್ತಾಯಕ್ಕಾರೆ ನಮ್ಮ ಸುಧರಿಕೆಯೋರೇ (ಬಾಡಿಗೆಯೋರಲ್ಫ್ಲ) ಒಟ್ತಿಂಗೆ ಬೇಕು. ಇದರ ತಿಳ್ಕೊಂಡರೆ ಸಾಕು.
ಚೆಂದದ ಹಂತಿಗೊ, ಅಡಿಗೆ ಕೋಣೆಂದ ಬಂದ ಶಾಕಪಾಕಂಗಳ ಹಂತಿಲಿ ಬಳುಶಿ, ಮುಗುಶಿ, ಒಳುದ್ಸರ ಒಪಾಸು ಅಡಿಗೆಕೋಣೆಗೆ ಎತ್ತಿಸಿ, ————- ಇದರ ಬಗ್ಗೆ ನಮ್ಮ ನೈಜೀರೀಯಾ ಭಾವ ,ಕಳೆದ ವಾರ ಒ೦ದು ಕಡೆ ಮಾಡಿದ ಕೆಲಸವ ಕ೦ಡು ,ನೈಜತೆಯ ವಾಪಸ್ಸು ತೋರಿಸಿ ಕೊಟ್ಟ ಹಾ೦ಗೆ ಆತು. ಎರಡೂ ಕೈಲಿ ಅವ ಅಶನದ ಹೆಡಗೆಯ ಅನಾಮತ್ತಾಗಿ ನೆಗ್ಗಿದ ,ಪ್ರಿ೦ಟ್ ತೆಗೆದಾ ಹಾ೦ಗೆ ಆತು.
ಲಾಯಕ ಆಯಿದು ಬರದ್ದದು . ಈಗಾಣ ಜೆಮ್ಬ್ರಂಗ ಹೇಳಿರೆ ಹೀನ್ಗೆಯೇ . ಬರೀ ಆಡಂಬರ ಮಾಂತ್ರ ಹೇಳಿ ಆಯಿದು ಈಗೀಗ!
ಸುಧರಿಕೆಯ ಭಾವಂದ್ರ ಒಟ್ಟಿಂಗೆ ಭಾವಂದ್ರೂ, ಅಕ್ಕಂದ್ರೂ , ಎಲ್ಲಾ ಹತ್ರಾಣ ನೆಂಟ್ರೂ, ನೆರೆಕರೆಯವೂ ಎಲ್ಲೋರೂ ಒಟ್ಟು ಸೇರಿರೆ ಜೆಂಬಾರ ಇನ್ನೂ ಚೆಂದಕೆ ಕಳಿಗು ಹೇಳುವ ಒಪ್ಪಣ್ಣನ ಮಾತು ಒಪ್ಪ ಮಾತು. ಚೆನ್ನೈ ಭಾವ ಹೇಳಿದ ಹಾಂಗೆ ನೀಲಿ ಗೆರೆಯ ಮಾತುಗೊ ಚೊಕ್ಕ ಆಯಿದು.
ಈಗಾಣ ಕಾಲಲ್ಲಿ, ಹೆರಡ್ಳಪ್ಪಗ ಶ್ರದ್ಧೆಲಿ ಎಜಮಾನನ ಹತ್ತರೆ “ಹೇಳಿಕ್ಕಿ ಹೆರಡುದು” ಒಂದು ಕ್ರಮ ಇದ್ದು.
ಈಚೋನು ಬಯಿಂದ° ಹೇದು ಗೊಂತಪ್ಪಲೆ; ಅಲ್ಲದ್ದರೆ ಈ ಜೆನ ಬಯಿಂದನಿಲ್ಲೆ ಹೇದು ಇನ್ನಾಣ ಸರ್ತಿ ಕಾಗತ ಕೊಡದ್ರೆ!! ಈ ಆಲೋಚನೆ ಸೂಪರ್ ಆಯಿದು ಒಪ್ಪಣ್ಣ.
ಮುಳಿಯ ಭಾವಯ್ಯ, ಪಲ್ಯ, ಅವಿಲು, ಮೆಣಸು ಕಾಯಿ ಎಲ್ಲ ಕಾಲಿ ಮಾಡಿಕ್ಕಿ ಮತ್ತಾಣ ಐಟಮ್ಮಿಂಗೆ ಕಾಯ್ತಾ ಇಪ್ಪಗ ಹೊಸ “ಭಾಮಿನಿ”ಯ ಆಲೋಚನೆ ಮಾಡ್ತಾ ಇದ್ದನೋ ಹೇಳಿ ಕಾಂಬ ಊಟದ ಫೊಟೊ ಶುದ್ದಿಗೆ ರಂಗು ಕೊಟ್ಟತ್ತು.
Sangathi appaadde..
ದೈಹಿಕವಾದ ಕೆಲಸ ಮಾಡುಲೆ ಅಳುಕುವ ಜವ್ವನಿಗರು ಇಪ್ಪ ಕಾರಣ ಜೆಂಬ್ರ ಸುಧರಿಸುದು ಕಷ್ಟ ಆತು. ಅದಕ್ಕೆ ಈ ಏರ್ಪಾಡು.ಅದರಲ್ಲಿ ಹಾಳು ಇಲ್ಲೆ. ನಾಕು ಜೆನಕ್ಕೆ ಉಪಕಾರ ಆತು. ಬಂದವಕ್ಕೂ ಬೇಕಾದ್ದು ಸಿಕ್ಕಿತ್ತು.
ಈಗ ತುಂಬಾ ಜನ ಬಪ್ಪದು ಊಟಕ್ಕೆ ಅಪ್ಪಗ. ಮತ್ತೆ ಸುಧರಿಕೆ ಹೇಂಗೆ ಅಕ್ಕು? ಮನೆಯವ ಎಲ್ಲರ ಹತ್ತರೆ ಮಾತಾಡೆಕು ಹೇಳುದು ಸರಿ; ಉಪಚಾರ ಮಾಡೆಕು,ನೆಂಟರು ಸುಧರಿಕೆ ಮಾಡಿ ಬಂದವರ ವಿಚಾರಿಸೆಕ್ಕು ಎಲ್ಲಾ ಸರಿ.
ನೆಂಟರೇ ಪರಕೀಯರ ಹಾಂಗೆ ಊಟಕ್ಕಪ್ಪಗ ಹೋವ್ತ ಕಾಲ-ಮಾಡುದೆಂತರ? ಹಾಂಗಾಗಿ ‘ಸುಧರಿಕೆ ಭಾವಯ್ಯಂದ್ರು’ ಬೇಕು. ಅವರೊಟ್ಟಿಂಗೆ ನೆಂಟರೂ ಸೇರೆಕು-ಹೀಂಗೆ ನಡೆಯಲಿ.-ಒಪ್ಪಣ್ಣ ಹೇಳಿದ ಹಾಂಗೆ!
ಓ ಆ ಮೇಗೆ ನೀಲಿ ಪೆನ್ನಿಲ್ಲಿ ಬರದ್ದದು ಒಳ್ಳೆತ ರೈಸಿದ್ದು. ಕಣ್ಣಿಲ್ಲಿ ಕಂಡ ಅಪ್ಪಟ ಸತ್ಯ ಅಕ್ಷರಲ್ಲಿ ಓದಿ ಮೆಲುಕು ಹಾಕ್ಯೊಂಡತ್ತು.
ಓಯ್.. ಆ ಪಟ ಎಲ್ಲಿಯಾಣದ್ದು. ಬೈಲ ನೆಂಟ್ರುಗೊ ಒಟ್ಟಿಂಗೆ ಕೂಯ್ದವು!
ಅಕೇರಿಗೆ ನೀಲಿ ಪೆನ್ನಿಲ್ಲಿ ದಪ್ಪಕೆ ಬರದ್ದದು ಚೊಕ್ಕ ಆಯ್ದು. ಶುದ್ದಿ ಚಿಂತನೀಯ. ಹರೇ ರಾಮ.