- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
*****************************************************************
(ಇಲ್ಯಾಣವರೆಗೆ…)
ಉದಿಯಪ್ಪಗಾಣ ಸೂರ್ಯನ ಬೆಶಿಲು ಎದುರಾಣ ಗಿಳು ಬಾಗಿಲಿಂಗೆ ಹಾಕಿದ ವಸ್ತ್ರದ ಎಡೇಂದ ಓರೆ ಆಗಿ ಒಳ ಬೀಳ್ತಾ ಇದ್ದು. ವಸ್ತ್ರ ಹೇಳಿದ ಕೂಡ್ಲೆ ಒಗದ ವಸ್ತ್ರವ ಆರೊ ಒಣಗುಲೆ ಹಾಕಿದ್ದವಾ ಹೇಳಿ ಕೇಳೆಡಿ. ಅದಕ್ಕೆ ಇಂಗ್ಲಿಷಿಲಿ ‘ಕರ್ಟನ್’ ಹೇಳಿ ಹೇಳ್ತವಡ. ಇದು ಪಚ್ಚೆ ಕಲರಿಂದು. ಹೆರಂದ ತಂಪು ತಂಪು ಗಾಳಿ ಮೆಲ್ಲಂಗೆ ಬೀಸುತ್ತ ಇದ್ದು. ನಿನ್ನೆ ಕಸ್ತಲಪ್ಪಗ ಮಳೆ ಬಂದದಲ್ಲದಾ, ಹಾಂಗಾಗಿ ಉದಿಯಪ್ಪಗಳೆ ತಂಪು ತಂಪು. ಸಾಲದ್ದಕ್ಕೆ ಮಣ್ಣಿನ ಪರಿಮ್ಮಳದೆ ಇದ್ದು. ಹೆರ ಬಹುಶ ಮಲ್ಲಿಗೆ ಬಳ್ಳಿಲಿ ಹೂಗು ಬಿಟ್ಟಿರೆಕ್ಕು… ಮಲ್ಲಿಗೆ ಹೂಗಿನ ಪರಿಮ್ಮಳ ಬತ್ತಾ ಇದ್ದು. ಆದರೆ ಅದರ ಒಂಟ್ಟಿಂಗೆ ಟಿಂಚರಿಂದೊ ಎಂತದೊ ಮದ್ದಿಂದುದೇ ವಾಸನೆ ಮಿಕ್ಸ್ ಆಯಿದು.
ದಾಸಪ್ಪ° ಕಣ್ಣು ಒಡದು ನೋಡಿತ್ತು. ಎಲ್ಲಿದ್ದೆ ಹೇಳಿ ಅದಕ್ಕೆ ಅಂದಾಜಾಯಿದಿಲ್ಲೆ. ಮಂಚದ ಮೇಲೆ ಮನಿಕ್ಕೊಂಡಿದ್ದು. ಬೆಳಿ ಕಲರಿನ ಹಾಸಿಗೆ. ಮೆಸ್ತಂಗೆ ಮೆಸ್ತಂಗೆ ಲಾಯಿಕಿದ್ದು.
“ಹೇಗಿದ್ದೀರಿ ಮಾಸ್ಟ್ರೇ?”
ಸ್ವರ ಕೇಳಿದ ಹೊಡೇಂಗೆ ತಲೆ ತಿರುಗಿಸಿ ನೋಡಿತ್ತು ದಾಸಪ್ಪ ಮಾಷ್ಟ°. ವಿಶ್ವನಾಥ ರೈ ಡಾಕ್ಟ್ರ°. ಮಾಷ್ಟ° ಎದ್ದು ಕೂಪಲೆ ನೋಡಿತ್ತು.
“ಏಳ್ಬೇಡಿ… ಏಳ್ಬೇಡಿ… ಮಲ್ಕೊಳ್ಳಿ…”
“ಎ…ಈ… ನಾನೆಂತ ಇಲ್ಲಿ?” ದಾಸಪ್ಪಂಗೆ ಅಂದಾಜಾತು. ಮನಿಕ್ಕೊಂಡಿಪ್ಪದು ಆರತಿ ನರ್ಸಿಂಗು ಹೋಮಿನ ಕೋಣೆಯ ಒಳಾಣ ಮಂಚದ ಹಾಸಿಗೆ ಮೇಲೆ.
“ಮಲ್ಕೊಳ್ಳಿ ಮಾರಾಯ್ರೆ… ನೀವು ಈಗ ನಮ್ಮ ನರ್ಸಿಂಗು ಹೋಮಿನಲ್ಲಿ ಇದ್ದೀರಿ.” ಡಾಕ್ಟ್ರ° ಹೇಳಿತ್ತು.
ಮಾಷ್ಟ° ಡಾಕ್ಟ್ರನ ಮೋರೆಯನ್ನೆ ಮಿಕಿ ಮಿಕಿ ನೋಡಿತ್ತು. ಕಸ್ತಲಪ್ಪಗಾಣ ಕತೆ ಅದಕ್ಕೆಂತ ಇನ್ನು ನೆಂಪಾಯಿದಿಲ್ಲೆಯೋ?
“ಎಂತ ಮಾಷ್ಟ್ರೆ ನಿಮ್ಮ ಅವಸ್ತೆ?. ಆ ಹುಡುಗ ಇಲ್ಲದೇ ಇರ್ತಿದ್ರೆ ನೀವು ಇಷ್ಟೊತ್ತಿಗೆ ಮೇಲೆ ಇರ್ತಿದ್ರೆ.”
ದಾಸಪ್ಪಂಗೆ ಡಾಕ್ಟ್ರನೆ ಕತೆ ಹೇಳೆಕ್ಕಷ್ಟೆ… ಮತ್ತೆ ಆರು ಹೇಳೆಕ್ಕು?
**************************************************************************************
ಕಾರ್ಗಾಂಡ ಕಸ್ತಲೆ. ಇನ್ನೆಂತ ಮಳೆ ಬಪ್ಪಲೆ ಹೆಚ್ಚು ಹೊತ್ತಿಲ್ಲೆ. ಮಿಂಚು ಗುಡುಗು ಜೋರಾಯಿದು. ಮಾಷ್ಟನ ಮನೆ ಜಾಲಿನ ಎದುರು, ಗೇಟಿನ ಎದುರು ನಿಂದ ನಾಣಿಗೆ ಎಂತ ಮಾಡುದು ಹೇಳಿ ಗೊಂತಾವ್ತಾ ಇಲ್ಲೆ. ಶಾಲೆಲಿ ಮಾಷ್ಟ° ಬಡುದು ಅಪ್ಪಗ ಒಂದು ಪಿಸುರು ಎಳಗಿದ್ದು ಅಪ್ಪು. ಆದರೆ ಎಂತ ಮಾಡೆಕ್ಕು ಹೇಳಿ ಆಗ ಗೊಂತಾಯಿದಿಲ್ಲೆ. ‘ಬಡವನ ಸಿಟ್ಟು ದವಡೆಗೆ ಮೂಲ’ ಹೇಳಿ ಅವಾಗಾವಗ ಅಬ್ಬೆ ಹೇಳುದು ಅವಂದೆ ಕೇಳಿದ್ದ°.’ ಬಡವಾ ನೀ ಮಡಗಿದಂಗೆ ಇರು’ ಹೇಳ್ತದೂ ಗೊಂತಿದ್ದು. ಹಾಂಗೇಳಿ ತಪ್ಪೇ ಮಾಡದ್ದ ಮೇಲೆ ಮಾಷ್ಟ° ಬಡಿವಲಕ್ಕ? ಒಪ್ಪಿಗೊಂಬಲೆ ಅವ ತಯಾರಿಲ್ಲೆ. ಅಂಗಿ ಚಡ್ಡಿ ಎಳದು ಹಾಕಿ ನಿಂದದು ಆರೂ ಹೇಳಿಕೊಟ್ಟು ಮಾಡಿದ್ದಲ್ಲ. ಆ ಹೊತ್ತಿಂಗೆ ಹಾಂಗೆ ಮಾಡೆಕ್ಕು ಹೇಳಿ ಅವಂಗೆ ಅನಿಸಿತ್ತು, ಮಾಡಿದ°. ಮತ್ತೆ ಮಾಷ್ಟನ ಪ್ರತಿಕ್ರಿಯೆ ನೋಡುವಗ ಮಾಡಿದ್ದು ಸರಿ ಹೇಳಿ ಜಾನ್ಸಿದ°. ಆ ಒಂದು ಗರ್ವಲ್ಲೆ ಮಾಷ್ಟನ ಮನೆವರೆಗೆ ಬಂದು ನಿಂದಿದ°.
ಆದರೆ ಈಗೆಂತ ಮಾಡುದು? ಈ ಮಾಷ್ಟ° ಮನೆ ವಳ ಸೇರಿಕೊಂಡಿದು. ಹೆರೆ ಬಪ್ಪ ಅಂದಾಜಿ ಕಾಣ್ತಿಲ್ಲೆ. ಈಗ ನಿಂದು ಎಂತ ಮಾಡುದು? ಉದಿಯಾಂದ ಎಂತ ತಿಂದಿದಿಲ್ಲೆ. ಅದೆಂತ ದೊಡ್ಡ ಸಂಗತಿ ಅಲ್ಲ. ಹಶು ಕಟ್ಟಿ ಕೂಪಲೆ ಅವಂಗೆ ಗೊಂತಿದ್ದು. ಈ ಹೊತ್ತು ಹೊತ್ತಿಂಗೆ ತಿಂಬವು ಇದ್ದವಲ್ಲದಾ ಅವಕ್ಕಾದರೆ ಹೊಟ್ಟೆಗೆ ಹೊತ್ತಿಂಗೆ ಸರೀ ಬೀಳದ್ರೆ ಮರ್ಲು ಹಿಡುದ ಹಾಂಗೆ ಆವುತ್ತು. ಆಗ ಆ ಲಿಂಗಪ್ಪ° ಈ ದಾರಿಲಿ ಹೋಪಗ ಅದರೊಟ್ಟಿಂಗೆ ಹೋತಿಕ್ಕುಲಾವುತಿತ್ತೋ ಏನೋ.
ಈಗ ನಡು ರಾತ್ರಿ. ಎಂತ ಮಾಡುದು? ಅಬ್ಬೆಗೂ ವಿಶಯ ಗೊಂತಿಲ್ಲೆ. ಎಂತಾತಪ್ಪ ಹೇಳಿ ಅದಕ್ಕೆ ಹೆದರಿಕೆ ಅಪ್ಪಲೆ ಇದ್ದು. ಇಲ್ಲಿಂದಲೇ ಮನೆಗೆ ಹೋಪ° ಹೇಳಿ ಗ್ರೇಷಿರೆ ಈ ಕಸ್ತಲೆಲಿ ಹೋಪದೇಂಗೆ?
ಮಿಂಚುತ್ತು… ಗುಡುಗುತ್ತು… ಸಿಡ್ಲುದೆ ಬಡಿವಲೆ ಸುರುವಾಯಿದು… ಮಳೆ ಬಂದರೆ?
ಮಾಡುದೆಂತರ? ಇನ್ನೆಲ್ಲಿಗೂ ಹೋಪ ಹಾಂಗೆ ಇಲ್ಲೆ… ಇನ್ನು ಒಂದೇ ದಾರಿ… ಸೀದ ಮಾಷ್ಟನ ಬಾಗಿಲನ್ನೆ ಬಡಿವದು… ಬಾಗಿಲು ತೆಗದರೆ ಒಳ ಹೋಪದು. ಇಲ್ಲದ್ರೆ ಅಲ್ಲೇ ಮಾಡಕರೆ ನಿಂಬದು… ಎಂತ ಮಾಷ್ಟ ಕೊಲ್ಲುಗಾ? ನೋಡುವ° ಎಂತಾವ್ತು ಹೇಳಿ. ನಾಣಿ ಮಾಷ್ಟನ ಬಾಗಿಲು ಬಡಿವ ನಿರ್ದಾರ ಮಾಡಿದ°.
ಹಾಂಗೆ ಗೇಟು ತೆಗವಲೆ ಕೈ ಮಡುಗುವಗ, ಮಾಷ್ಟ° ಬಾಗಿಲು ತೆಗವ ಶಬ್ದ ಕೇಳಿತ್ತು. ನಿಂದು ನೋಡಿದ°. ಮಾಷ್ಟ° ದಾರಂದಕ್ಕೆ ಕೈಕೊಟ್ಟು ನಿಂದದು ಮಿಂಚಿನ ಬೆಣ್ಚಿಲಿ ಕಂಡತ್ತು. ಗೇಟು ತೆಗದ°. ಮುಂದೆ ಕಾ
ಲು ಮಡುಗುವಗ ಮಿಂಚಿನ ಬೆಣ್ಚಿಲಿ, ಮಾಷ್ಟ° ಅವನನ್ನೆ ನೋಡ್ತಾ ಇಪ್ಪ ಹಾಂಗೆ ಕಂಡತ್ತು.
ಇನ್ನೊಂದು ಕಾಲು ಮುಂದೆ ಮಡುಗಿದ°. ‘ಪಟಾರ್’ ಹೇಳಿ ಒಂದು ಸಿಡ್ಲು ಬಡುದತ್ತು. ಎಲ್ಲಿಯೋ ಹತ್ತರೆಯೇ ಬಿದ್ದಿರೆಕ್ಕು. ಒಂದು ಸಲ ಎದೆ ಜಿಗ್ಗ ಆತು… ಮುಂದೆ ನಡದ°… ಒಂದು ಹೆಜ್ಜೆ ಮುಂದೆ ನಡದ್ದನೋ ಇಲ್ಲೆಯೋ… ಮಾಷ್ಟ° ಒಂದು ಆರ್ಭಟಿ ಕೊಟ್ಟು ಮುಂದೆ ಬೀಳುದು ಮಿಂಚಿನ ಬೆಣ್ಚಿಲಿ ಕಂಡತ್ತು.
ರಪ್ಪ ಮುಂದೆ ಹಾರಿದ° ಮಾಷ್ಟನ ಹತ್ತರಂಗೆ. ಮಾಷ್ಟ° ಬಿದ್ದಿದು…. ರಪ ರಪ ಮಳೆ ಬಡಿವಲೆ ಸುರು ಆತು.
ಬಗ್ಗಿ ಮಾಷ್ಟನ ನೋಡಿದ°. ಮಾಷ್ಟಂದು ಉಸ್ಕು ಡಮ್ ಇಲ್ಲೆ… “ಸಾರ್… ಸಾರ್…” ಹೇಳಿ ದಿನುಗಿದ°. ಇಲ್ಲೆ, ಮಾಷ್ಟ ಹಂದುತ್ತಿಲ್ಲೆ… ಮಾಷ್ಟಂಗೆ ಎಂತದೋ ಆತು ಹೇಳಿ ಗೊಂತಾತು. ನಾಣಿಗೆ ಎಲ್ಲವುದೆ ಒಂದೇ ಸಲಕ್ಕೆ ಮರತ್ತೋತು. ಈಗ ಎಂತಾರು ಮಾಡೆಕ್ಕು. ಎಂತ ಮಾಡುದು?
ರಪಕ್ಕ ಗೇಟಿಂದ ಹೆರ ಓಡಿದ°. ಮಾರ್ಗಲ್ಲಿ ಓಡುಲೆ ಸುರು ಮಾಡಿದ°. ಆ ಕಸ್ತಲೆಲಿ, ಮಳೆ ಜೋರ್ರೋ ಹೇಳಿ ಬತ್ತಾ ಇದ್ದು. ದಾರಿ ಕಾಣ್ತಿಲ್ಲೆ… ಅವಾಗಾವಗ ಬೀಳುವ ಮಿಂಚಿನ ಬೆಂಣ್ಚಿ ಮಾಂತ್ರ.
ಮಣ್ಣಿನ ಮಾರ್ಗ ಅದು. ಮಳೆಗೆ ಜಾರ್ಲೆ ಸುರು ಆಯಿದು. ಮಾರ್ಗೆಲ್ಲಿ ಹೊಂಡ ಇದ್ದಾ… ಗುಂಡಿ ಇದ್ದಾ ಕಾಣ್ತಿಲ್ಲೆ… ಆದರೂ ಓಡಿದ°.
ಟಕ್ಕ ಡಂಕಿತ್ತು ಕಾಲು ಒಂದು ಕಲ್ಲಿಂಗೆ… ಬಿದ್ದ°… ಅಲ್ಲಿಂದಲೇ ಮೂರು ಸುತ್ತು ಉರುಳಿದ°… ಮಣ್ಣಿನ ಮಾರ್ಗಲ್ಲಿ…. ಮೈಗೆ ಕಲ್ಲು ಗೀರಿತ್ತು… ಮೊದಲೆ ಮಾಷ್ಟನ ಪೆಟ್ಟಿನ ಗಾಯಂಗ, ಮೇಲಂದ ಕಲ್ಲು ಗೀರಿತ್ತು. ಮೈಗೆ ರಜಾ ಕೆಸರು ಮೆತ್ತಿತ್ತು….ಮಳೆ ನೀರು ತಾಗುವಗ ಉರಿವಲೆ ಸುರು ಆತು… ಕಾಲು ಹೆಬ್ಬೆಟ್ಟಿಲಿ ಜೋರು ಬೇನೆ ಅಪ್ಪಲೆ ಸುರು ಆತು… ಡಂಕಿದ ಪೆಟ್ಟು….
ಆದರೆ ನಾಣಿಗೆ ಕ್ಯಾರಿಲ್ಲೆ. ಮತ್ತೆ ಎದ್ದು ಓಡಿದ°. ಓಡುತ್ತಾ ಇದ್ದ. ಒಟ್ಟಿಂಗೆ ತಲೆದೇ ಓಡುತ್ತ ಇದ್ದು.
ಆರತಿ ಮನೆ ಹತ್ರಂಗೆ ಎತ್ತಿ ಅಪ್ಪಗ ತಲೆಯೊಳ ಜಿಗ್ಗ ಹೇಳಿ ಬೆಣ್ಚಿ ಬಿದ್ದ ಹಾಂಗೆ ಆತು. ಅಪ್ಪು… ಆರತಿಯ ಅಪ್ಪ ಡಾಕ್ಟ್ರ ಅಲ್ಲದಾ?
ಆರತಿಯ ಮನೆ ಗೇಟಿನ ರಪ್ಪ ಹಾರಿದ°. ಬಾಗಿಲಿನ ಹತ್ರಂಗೆ ಎತ್ತಿದ್ದೇ ಬಡ ಬಡ ಬಡಿವಲೆ ಸುರು ಮಾಡಿದ°.
ಬಾಗಿಲ ಕರೆಲಿ ಒಂದು ಕರಡಿಗೆ ನಮುನೆದು ಇದ್ದು. ಅದರ ನಡುವಿಲಿ ಒಂದು ಗುಬ್ಬಿ ಇದ್ದು, ಕೆಂಪು ಬಣ್ಣದ್ದು. ಅದರ ಒತ್ತಿದರೆ ಒಳದಿಕ್ಕೆ “ಟ್ರಿಂಗ್” ಹೇಳಿ ಶಬ್ದ ಆವುತ್ತು. ಎಲೆಟ್ರಿ ಕರೆಂಟಿಲಿ ಅದು ನಡವದು. ಅವಾಗ ಒಳ ಇಪ್ಪವಕ್ಕೆ ಆರೋ ಬಯಿಂದವು ಹೇಳಿ ಗೊಂತಾವ್ತು. ಆದರೆ ಹಾಂಗೊಂದು ಯೆವಸ್ತೆ ಇದ್ದು ಹೇಳಿ ನಾಣಿಗೆ ಎಂತ ಗೊಂತು? ಅವಂಗೆ ಗೊಂತಿಪ್ಪದು ಒಂದೇ, ಬಾಗಿಲು ಬಡುದರೆ ಒಳ ಇಪ್ಪವಕ್ಕೆ ಗೊಂತಾವುತ್ತು ಹೇಳಿ.
ಒಳ ಇಪ್ಪವು ಆರೋ ದಡ ಬಡ ಓಡಿಕೊಂಡು ಬಂದವು. ಒಳಂದ ಬಾಗಿಲು ತೆಗದು “ಯಾರು? ಯಾರು?” ಹೇಳಿ ಗಾಬರಿಲಿ ಕೇಳಿದವು. ಆರೋ ಹೆಮ್ಮಕ್ಕ.
ನಾಣಿ ನೋಡಿದ°. ಹೆಮ್ಮಕ್ಕ, ನೋಡ್ಲೆ ಚೆಂದದ ಹೆಮ್ಮಕ್ಕ, ಬಹುಶ ಆರತಿಯ ಅಬ್ಬೆ ಇಕ್ಕು.
“ಮ…ಮಾ…. ಮಾಷ್ಟ್ರು…..” ಜೋರು ಉಸುಲು ತೆಗೆತ್ತಾ ಇದ್ದ°. ಓಡಿಕೊಂಡು ಬಂದದಲ್ಲದಾ?
“ಯಾರು… ಯಾರು… ಎಂತಾಯ್ತು…??”
ಅಷ್ಟಪ್ಪಗ ಹಿಂದಂದ ವಿಶ್ವನಾಥ ರೈ ಡಾಕ್ಟ್ರನೂ ಎದ್ದಿಕ್ಕಿ ಬಂತು.
“ಯಾರು..ನೀನು.. ಎಂತಾಯ್ತು…??”
ಹಿಂದಂದ ಆರತಿದೆ ಪ್ರತ್ಯಕ್ಷ ಆತು. ಅದಕ್ಕೆ ಕೂಡ್ಲೆ ಗೊಂತಾತು.. ಇದು ನಾಣಿ ಅಲ್ಲದಾ? ಈಗ ಎಂತಾತು ಇವಂಗೆ. ಶಾಲೆಲಿ ಇಡಿ ದಿನ ಹೆಡ್ಮಾಷ್ಟನ ಕೋಣೆ ಎದುರು ನಿಂದದು ಗೊಂತಿದ್ದು ಅದಕ್ಕೆ. ಆದರೆ ಮತ್ತೆ ಇವ° ಮಾಷ್ಟನ ಹಿಂದೇ ಹೋದ್ದು ಅದಕ್ಕೆ ಗೊಂತಿಲ್ಲೆ. ಆದರೆ ಅದು ಶಾಲೆಲಿ ನಡದ ಎಲ್ಲ ಕತೆಯನ್ನುದೆ ಮನೆಲಿ ಅಪ್ಪಂಗೆ ಹೇಳಿದ್ದು.
“ಅಪ್ಪಾ… ಅದು ನಾಣಿ” ಹೋ ನಾಣಿಯಾ? ಡಾಕ್ಟ್ರಂಗೆ ಕೂಡ್ಲೆ ಗೊಂತಾತು. ಆರತಿ ಕತೆ ಎಲ್ಲ ಹೇಳಿದ್ದಲ್ಲದಾ?
“ನಿಲ್ಲು… ಎಂತಾಯ್ತು ಹೇಳು… ನೀನು ನಾಣಿ ಅಲ್ವಾ?”
“ಮಾಷ್ಟ್ರು… ದಾ… ದಾಸಪ್ಪ ಮಾಷ್ಟ್ರು…” ನಾಣಿ ಇನ್ನುದೇ ಉಸುಲು ಬಿಡ್ತಾ ಇದ್ದ°.
ಎಂತಾತಪ್ಪ… ಆ ದಾಸಪ್ಪಮಾಷ್ಟ ಇವನ ಓಡಿಸಿಕೊಂಡು ಬಂತಾ ಹೇಂಗೆ? ಇವರ ಲಡಾಯಿ ಇನ್ನೂ ಮುಗುದ್ದಿಲ್ಲೆಯಾ ಹೇಳಿ ಕಾಣ್ತು.
“ಎಂತಾಯ್ತು ಮಾರಾಯಾ ಮಾಷ್ಟ್ರಿಗೆ?”
“ಮಾಷ್ಟ್ರು ಬಿದ್ದಿದ್ದಾರೆ…. ಅಂಗಳದಲ್ಲಿ…”
“ಬಿದ್ದಿದ್ದಾರ? ಎಲ್ಲಿ?”
“ಅವ್ರ… ಮನೆ ಅಂಗಳದಲ್ಲಿ… ಬಿದ್ದಿದ್ದಾರೆ…”.
“ಅವ್ರ ಮನೆ ಅಂಗಳದಲ್ಲಿಯಾ? ನೀನ್ಯಾಕೆ ಅಲ್ಲಿಗೆ ಹೋದದ್ದು?”
“ಸ… ಸಾರ್… ಅದೆಲ್ಲ ಮತ್ತೆ ಹೇಳ್ತೇನೆ… ಮಾಷ್ಟ್ರು ಬಿದ್ದಿದ್ದಾರೆ, ಅಲ್ಲಾಡುದಿಲ್ಲ… ಮಳೆಯಲ್ಲಿ ಸಾರ್…. ಎಂತಾದ್ರೂ ಮಾಡಿ ಸಾರ್…”
ಡಾಕ್ಟ್ರಂಗೆ ಗೊಂತಾತು ಇದು ಮಾತಾಡ್ಲೆ ಹೊತ್ತಲ್ಲ. ಅಷ್ಟೊತ್ತಿಂಗೆ ಶಾಂತಾರಾಮಂದೆ ಎದ್ದಿಕ್ಕಿ ಬಯಿಂದು. ಅದಕ್ಕೆ ಗೊಂತಾತು. ಓಡಿತ್ತು ಅದು ಡಾಕ್ಟ್ರನ ಮೆಡಿಕಲ್ಲು ಕಿಟ್ಟು ತಪ್ಪಲೆ. ಮೆಡಿಕಲ್ಲು ಕಿಟ್ಟು ಹೇಳಿರೆ ಒಂದು ಪೆಟ್ಟಿಗೆ, ಚರ್ಮದ್ದು. ಆದಲ್ಲಿ ಡಾಕ್ಟ್ರಂಗೆ ಅರ್ಜಂಟಿಂಗೆ ಬೇಕಪ್ಪ ಮದ್ದುಗ ಯಾವಾಗಳು ತುಂಬಿಸಿ ಮಡಿಕ್ಕೊಂಡಿರ್ತು. ಎಂತೆಂತಾ ಮದ್ದುಗಳ ತುಂಬಿಸಿಕೊಳ್ಳೆಕ್ಕು ಹೇಳಿ ಶಾಂತಾರಾಮಂಗೆ ಗೊಂತಿದ್ದು.
ಡಾಕ್ಟ್ರ° ಕಾರಿನ ಬೀಗ ಕೈ ತೆಕ್ಕೊಂಡು ಬಪ್ಪಗ ಶಾಂತಾರಾಮ ಕಿಟ್ಟಿನ ಕಾರಿನ ಒಳ ಮಡುಗಿ, ದೊಡ್ಡ ಗೇಟಿನ ತೆಗದತ್ತು.
“ನೀನ್ಸಾ ಬಾ” ಡಾಕ್ಟ್ರ ಹೇಳಿದ ಕೂಡ್ಲೆ ಕಾರಿಲಿ ಹಿಂದಾಣ ಸೀಟಿಲಿ ಕೂದತ್ತು. ನಾಣಿದೆ ಕಾರಿಂಗೆ ಹತ್ತುಲೆ ಓಡಿಕೊಂಡು ಬಂದ°.(ಆರತಿಯ ಕಾರಿಲಿ ಕೂಪಲೆ ಒಂದು ಚಾನ್ಸು ಅಲ್ಲದ?)
“ನೀನೆಂತಕೆ? ನೀನಿಲ್ಲೆ ಇರು” ಡಾಕ್ಟ್ರ° ಡರ್ರನೆ ಕಾರು ಸ್ಟಾಟು ಮಾಡಿ ಗಡಗಡನೆ ಮಾಷ್ಟನ ಮನೆ ಹೊಡೆಂಗೆ ಓಡಿಸಿತ್ತು.
ಅಬ್ಬ… ನಾಣಿಗೆ ಒಂದರಿ ಬಿಡುಗಡೆ ಆದಾಂಗೆ ಆತು. ಮೆಲ್ಲಂಗೆ ಹೋಗಿ ಅಲ್ಲೆ ಇದ್ದ ಒಂದು ಮರದ ಬೆಂಚಿ ಮೇಲೆ ಕೂದ°, ತಲೆ ತಗ್ಗುಸಿ. ಡಾಕ್ಟ್ರನಲ್ಲಿಗೆ ಮದ್ದಿಂಗೆ ಬಪ್ಪವು ಎಲ್ಲ ಆ ಬೆಂಚಿಲೇ ಕೂಪದು, ಡಾಕ್ಟ್ರಂಗೆ ಕಾದುಕೊಂಡು. ಎದುರಾಣ ಗೋಡೆಲಿ ಒಂದು ದೊಡ್ಡ ಪಟ ಇದ್ದು, ಒಂದು ಪುಟ್ಟು ಬಾಬೆ ತೋರು ಬೆರಳಿನ ಬಾಯಿಗೆ ಮಡುಗಿ “ಶ್… ಶಬ್ದ ಮಾಡೆಡಿ” ಹೇಳುವ ಹಾಂಗೆ.
ರಜ ಹೊತ್ತಪ್ಪಗ ಎದುರು ಆರೋ ನಿಂದಾಂಗೆ ಆತು. ತಲೆ ಎತ್ತಿ ನೋಡಿದ°.
ಆರತಿ…. ಬಲದ ಕೈಲಿ, ಒಂದು ತಟ್ಟೆಲಿ ನಾಲ್ಕು ಕದಳಿ ಬಾಳೆ ಹಣ್ಣು, ಎರಡು ಏಪುಲು, ಒಂದು ಲೋಟೆಲಿ ತುಂಬ ಬೆಶಿ ಹಾಲು. ಎಡದ ಕೈಲಿ ಒಂದು ಉಣ್ಣೆ ಶಾಲು.
ಅದರ ಹಿಂದಂದ ಆರತಿಯ ಅಬ್ಬೆ ನಿಂದುಕೊಂಡು ಇದ್ದು.
**************************************************************************************************************
“ಗೊತ್ತಾಯ್ತಲ್ಲ ಮಾಷ್ಟ್ರೆ? ಅವ್ನು ಇಲ್ಲದೆ ಇರ್ತಿದ್ರೆ ನೀವೀಗ ಮೇಲೆ ಇರ್ಬೇಕಿತ್ತು. ನೋಡಿ ನೀವೀಗ ಒಂದ್ಸಲ ಮಂಗ್ಳೂರಿಗೆ ಹೋಗಿ ಕೆಎಂಸಿಯಲ್ಲೋ ಅಥವಾ ವೆನ್ಲಾಕಿನಲ್ಲೋ ಹಾರ್ಟು ಟೆಸ್ಟ್ ಮಾಡ್ಸಿ ಬರ್ಬೇಕು ನೋಡಿ…. ಈಗ್ಲೇ ಗೊತ್ತಾದ್ದು ಒಳ್ಳೇದಾಯ್ತು…. ಇನ್ಮೇಲೆ ಟೆನ್ಷನ್ ಎಲ್ಲ ತೆಕ್ಕೊಳ್ಬಾರ್ದು ಆಯ್ತಾ?” ಡಾಕ್ಟ್ರ° ಕತೆ ಹೇಳಿ ಮುಗುಶಿತ್ತು.
ಮಾಷ್ಟ° ರಜಾ ಹೊತ್ತು ಸುಮ್ಮನೆ ಕೂದತ್ತು. ಮತ್ತೆ ಕೇಳಿತ್ತು “ಅವ್ನೀಗ ಎಲ್ಲಿದ್ದಾನೆ?”
“ಅವ್ನಾ? ಪಾಪ ನಿಮ್ಮ ಪೆಟ್ಟಿನ ಗಾಯ, ಇಲ್ಲಿಗೆ ಓಡಿ ಬರುವಾಗ ಬಿದ್ದು ಮೈಯಲ್ಲಿ ಗಾಯ, ಕಾಲಿಗೆ ಡಂಕಿದ್ದು ಹೆಬ್ಬೆರಳಿನ ಟೊಪ್ಪಿ ರಟ್ಟಿ ಗಾಯ…. ಎಲ್ಲ ಕ್ಲೀನ್ ಮಾಡಿ ನಮ್ಮ ಶಾಂತಾರಾಮ ಕಾಲಿಗೆ ಪ್ಲಾಸ್ಟರು ಹಾಕಿ ಅವ್ನನ್ನು ರಾತ್ರಿಯೇ ಮಳೆ ಬಿಟ್ಟ ಕೂಡ್ಲೆ ಮನೆಗೆ ಕರ್ಕೊಂಡು ಹೋಗಿ ಬಿಟ್ಟು ಬಂದಿದ್ದಾನೆ ನೋಡಿ”
ತಲೆ ತಗ್ಗುಸಿ ಕೂದ ಮಾಷ್ಟನ ಕಣ್ಣಿಂದ ಎರಡು ಹನಿ ನೀರು ಜಾರಿ ಕೆಳಂಗೆ ಬಿದ್ದದು ಆರಿಂಗೆ ಕಾಣದ್ರೂ, ಬಾಗಿಲಿನ ಹಿಂದೆ ನಿಂದು ನೋಡಿಕೊಂಡಿತ್ತ ಆರತಿಗೆ ಕಂಡಿದು.
****************************************************************************************************************
ಹದಿನೈದು ದಿನ ಕಳುದ್ದು. ದಾಸಪ್ಪ ಮಾಷ್ಟ° ಶಾಲೆಗೆ ಬಾರದ್ದೆ ಹದಿನೈದು ದಿನ ಕೂಡಾ ಆತು. ಕೊಡೆಯಾಲದ ಡಾಕ್ಟ್ರ° ಹೇಳಿದ್ದದಡ “ನೀವು ಹದಿನೈದು ದಿನ ರೆಸ್ಟು ತೆಕ್ಕೊಳ್ಬೇಕು” ಹೇಳಿ.
ನಾಣಿ ಎರಡು ದಿನ ಬಿಟ್ಟು ಶಾಲೆಗೆ ಬಪ್ಪಲೆ ಸುರು ಮಾಡಿದ್ದ°. ಈಗ ಅವ ಹರುದ ಅಂಗಿ ಚಡ್ಡಿ ಹಾಕುದಲ್ಲ. ಹೊಸಾ ಬೆಳಿ ಅಂಗಿದೆ, ಹೊಸಾ ಕಾಕಿ ಚಡ್ಡಿದೆ ಹಾಕುದು. ಎಲ್ಲಿಂದ ಹೇಳಿ ನಿಂಗೊಗೆ ಆಶ್ಚರ್ಯ ಅವ್ತಾ ಇದ್ದಾ? ಅದು ಅವಂಗೆ ಆರತಿಯ ಗಿಫ್ಟು. “ಎನ್ನಂದಾಗಿ ಅವಂಗೆ ಪೆಟ್ಟು ಬಿದ್ದದು. ಹಾಂಗಾಗಿ ಅವಂಗೆ ಎಂತಾರೂ ಗಿಫ್ಟು ಕೊಡೆಕ್ಕು” ಹೇಳಿ ಆರತಿ ಅಪ್ಪನ ಹತ್ತರೆ ಸ್ತ್ರೈಕು ಮಾಡಿತ್ತಡ. ಕೊಂಡಾಟದ ಮಗಳಿಂಗೆ ಬೇಜಾರು ಅಪ್ಪಲಾಗ ಹೇಳಿ ವಿಶ್ವನಾಥ ರೈ ಡಾಕ್ಟ್ರ° ಹೂವಯ್ಯ ಟೈಲರಿನ ಹತ್ತರೆ ಅಂಗಿ-ಚಡ್ಡಿ ಹೊಲಿಸಿ ನಾಣಿಗೆ ಕೊಡುಸಿದ್ದು.
ದಿನೇಸಂದೆ ಈಗ ಶಾಲೆಗೆ ಬತ್ತಿಲ್ಲೆ. ಎಂತಾತು ಅದಕ್ಕೆ? ದಿನೇಸನ ಅಬ್ಬೆ ಸುಗುಣ ಶಾಲೆಗೆ ಬಂದು ಹೆಡ್ಮಾಷ್ಟನ ಹತ್ತರೆ ಅದರ ಟೀಸಿ ಕೇಳಿ ತೆಕ್ಕೊಂಡು ಹೋಯಿದಡ. ಇನ್ನು ಮುಂದಾಂಗೆ ಅದು ಅದರ ಅಜ್ಜನ ಮನೆಂದ ಶಾಲೆ ಹೋಪದಡ. ಹಾಂಗೆ ಸುಗುಣ ಹೆಡ್ಮಾಷ್ಟನ ಹತ್ತರೆ ಹೇಳುವಗ ಬಬಿತ ಟೀಚರು ಹೆಡ್ಮಾಷ್ಟನ ಕೋಣೆಲಿ ಇತ್ತಿದ್ದಡ. ಬಬಿತ ಟೀಚರಾ? ಅದು ದೊಡ್ಡ ಬೀಬೀಸಿ…. ಊರಿಂಗಿಡಿ ಸಾರಿಕೊಂಡು ಬಕ್ಕು.
****************************************************************************************************************
ಮಕ್ಕ ಎಲ್ಲವುದೇ ಕ್ಲಾಸಿನ ಒಳ ಕೂಯಿದವು. ನಾಣಿದೆ ಅವನ ಜಾಗೆಲಿ ಕೂಯಿದ°.
ದಾಸಪ್ಪ ಮಾಷ್ಟ° ಕ್ಲಾಸಿನ ಒಳ ಬಂತು. ಪುಸ್ತಕವ ಮೇಜಿನ ಮೇಲೆ ಮಡುಗಿ, ಕುರ್ಶಿಲಿ ಕೂದತ್ತು. ಒಟ್ಟಿಂಗೆ ಎರಡು ರಟ್ಟಿನ ಪೆಟ್ಟಿಗೆದೇ ಇದ್ದು. ಆದರೆ ಆಶ್ಚರ್ಯ, ಎಂತ !!!?… ಅದರ ಕೈಲಿ ಬೆತ್ತ ಇಲ್ಲೆ!!!
ಹಾಜರಿ ಪುಸ್ತಕಲ್ಲಿ ಎಲ್ಲ ಹೆಸರು ದಿನಿಗಿಕ್ಕಿ ಆತು. ಅಮೇಲೆ ದಪ್ಪದ ಕಪ್ಪು ಫ್ರೇಮಿನ ಕನ್ನಡ್ಕದ ಮೇಲಂದ ಗುಮ್ಮೆ ಹಕ್ಕಿ ನೋಡಿದಾಂಗೆ ಒಂದರಿ ಇಡೀ ಕ್ಲಾಸಿನ ನೋಡಿತ್ತು.
ಅದರ ಕಣ್ಣು ನಾಣಿಯ ಮೇಲೆ ನಿಂದತ್ತು.
“ನಾರಾಯಣ… ಎದ್ದು ನಿಲ್ಲು…” (ಎಂತ ಬಂತಪ್ಪ ಗ್ರಾಚಾರ?)
ನಾಣಿ ಎದ್ದು ನಿಂದ°. ಆದರೆ ಅವಂಗೆಂತ ಹೆದರಿಕೆ ಇಲ್ಲೆ ಈಗ. ಸೀದ ಮಾಷ್ಟನ ಮೋರೆ ನೋಡಿಕೊಂಡೇ ನಿಂದ°.
“ಬಾ. ಇಲ್ಲಿ…”
ನಾಣಿ ಮಾಷ್ಟನ ಹತ್ತರಂಗೆ ಹೋದ°.
“ನೋಡು… ಈ ಪೆಟ್ಟಿಗೆ ಉಂಟಲ್ವಾ… ಅದ್ರಲ್ಲಿ ಇರೂದನ್ನು ಎಲ್ಲ ಮಕ್ಕಳಿಗೂ ಒಂದೊಂದು ಕೊಡು.” ನಾಣಿಗೆ ಮಾಷ್ಟನ ವಾರ್ಡ್ರು.
ನಾಣಿ ಎರಡು ರಟ್ಟಿನ ಪೆಟ್ಟಿಗೆ ಕೈಗೆ ತೆಕ್ಕೊಂಡ°. ಒಂದರ ಬಿಡಿಸಿ ನೋಡಿದ. ಎಂತ ಇದ್ದು ಒಳ?
ಪೆನ್ಸಿಲು…!!! ಎಂತಾ..? ಪೆನ್ಸಿಲಾ..? ಅಪ್ಪು ಹೇಳಿರೆ..! ಪೆನ್ಸಿಲೇ..! ಹೊಸಾ ಪೆನ್ಸಿಲು, ಕೆಂಪು ಬಣ್ಣದ್ದು, ಕಪ್ಪು ಉದ್ದದ ಗೀಟು ಇಪ್ಪದು, ಹಿಂದಾಣ ಹೊಡೆಲಿ ಒಂದು ಇಂಚು ಉದ್ದಕ್ಕೆ ಕಪ್ಪು ಬಣ್ಣ ಇಪ್ಪದು, ಚಿನ್ನದ ಕಲರಿಲಿ ‘ನಟರಾಜ’ ಹೇಳಿ ಇಂಗ್ಲಿಷಿಲಿ ಬರಕ್ಕೊಂಡಿಪ್ಪ ಪೆನ್ಸಿಲು. ಒಂದೆರಡಲ್ಲ, ತುಂಬ ಇದ್ದು.
ನಾಣಿ ಎಲ್ಲ ಮಕ್ಕೊಗೂ ಒಂದೊಂದು ಪೆನ್ಸಿಲು ಹಂಚಿದ°.
“ಸಾರ್… ಉಳ್ದದ್ದು?”
“ಎಷ್ಟು ಉಳ್ದಿದೆ?”
ನಾಣಿ ಲೆಕ್ಕ ಮಾಡಿದ° ” ಸಾರ್… ಹದಿನಾಲ್ಕು ಉಳ್ದಿದೆ”
“ಅದಷ್ಟೂ ನಿಂಗೆ”
ಈಗ ಪ್ರತೀ ತಿಂಗಳುದೆ ಸುರುವಾಣ ತಾರೀಕಿಂಗೆ ದಾಸಪ್ಪ ಮಾಷ್ಟ ಎರಡು ಪೆಟ್ಟಿಗೆ ತುಂಬ ಪೆನ್ಸಿಲು ತತ್ತಡ. ನಾಣಿ ಅದರ ಮಕ್ಕೊಗೆ ಹಂಚುದಡ. ಒಳುದ ಪೆನ್ಸಿಲು ಎಲ್ಲವುದೆ ನಾಣಿಗೆ. ಈಗ ಒಂದನೇ ತಾರೀಕು ಯಾವ ಮಕ್ಕಳುದೆ ದಾಸಪ್ಪ ಮಾಷ್ಟನ ಕ್ಲಾಸು ತಪ್ಪುಸುತ್ತವಿಲ್ಲೆಡ.
ಪೆಟ್ಟು ಕೊಡುದು ಹೇಂಗೆ ಹೇಳಿಯೇ ಈಗ ಮರತ್ತು ಹೋಯಿದಡ, ದಾಸಪ್ಪ ಮಾಷ್ಟಂಗೆ.
“ಶಾಲೆ ಕಲ್ತಾದ ಮೇಲೆ ನಾಣಿ ಪೆನ್ಸಿಲಿನ ಅಂಗಡಿ ಇಡುವುದು, ನಾನು ಅವ್ನ ಅಂಗಡಿ ಹತ್ರ ಪೆನ್ಸಿಲು ಮೊನೆ ಮಾಡುವ ಅಂಗಡಿ ಇಡುವುದು” ಹೇಳಿ ತೋಡಕರೆ ಬಾಬು ಈಗ ಯಾವಾಗಳೂ ನಾಣಿಯ ಕುಶಾಲು ಮಾಡಿಕೊಂಡು ಇರ್ತು.
****************************************************************************************************************
ಸಂತೋಷಃ ಪರಮೋ ಲಾಭಃ ಸತ್ಸಂಗಃ ಪರಮಾ ಗತಿಃ|
ವಿಚಾರಃ ಪರಮಂ ಜ್ಞಾನಂ ಕ್ಷಮೋ ಹಿ ಪರಮಂ ಸುಖಂ |
ಸಂತೋಷವೇ ಪರಮ ಲಾಭವು, ಸತ್ಸಂಗವೆ ಉತ್ತಮ ಸ್ಥಾನವು
ಜಿಜ್ಞಾಸೆಯೇ ಪರಮ ಜ್ಞಾನ, ಕ್ಷಮೆಯೇ ಪರಮ ಸುಖ.
****************************************************************************************************************
ಇಲ್ಲಿಗೆ “ಪೆನ್ಸಿಲು” ಹೇಳ್ತ ಕಥೆ ಮುಗುತ್ತು.
ಇದಕ್ಕೆ ಒಪ್ಪ ಕೊಟ್ಟ ಎಲ್ಲೋರಿಂಗೂ ಎನ್ನ ಧನ್ಯವಾದಂಗ. ಆದರೆ ಒಪ್ಪಣ್ಣನ ಒಪ್ಪವೇ ಬಯಿಂದಿಲ್ಲೆನ್ನೆ. ಒಪ್ಪಣ್ಣನ ಒಪ್ಪದ ನಿರೀಕ್ಷೆಲಿ ಇದ್ದೆ.
ಒಟ್ಟು ಎಷ್ಟು ಜೆನಂಗ ಈ ಕತೆಯ ಓದಿದ್ದಿ ಹೇಳಿ ಎನಗೆ ಕುತೂಹಲ ಇದ್ದು. ಓದಿದೋರು ಒಪ್ಪ ಕೊಡ್ಲೆ ಆಗದ್ರೆ ಲೈಕ್ ಬಟನ್ ಒತ್ತುತ್ತಿರಾ?
ಹಾಂಗೆ ಒಪ್ಪ ಅಲ್ಲದ್ದೆ ಈ ಕಥೆಯ ವಿಮರ್ಶೆಯನ್ನು ಎದುರು ನೋಡುತ್ತ ಇದ್ದೆ. ಅದರಂದ ಮುಂದಾಣ ಕತೆ ಬರವಗ ತಪ್ಪುಗಳ ತಿದ್ದಿಕೊಂಬಲಾವುತ್ತು.
ನಿಂಗ ಹೇಳುವ ವಿಶಯಲ್ಲಿ ಎನ್ನ ಸಹ ಮತ ಇದ್ದು. ಆದರೆ ಈ ಕತೆಲಿ ಹವ್ಯಕ ಆಡು ಭಾಷೆಯನ್ನೆ ಉಪಯೋಗುಸುವಗ ಸಂಬೋಧನೆಗ ಹಾಂಗೇ ಬರೆಕ್ಕಲ್ಲದಾ? ನಿಂಗಳ ೫೦ ವರ್ಷ ಹಿಂದೆ ಕರಕ್ಕೊಂಡು ಹೋಪಗ ಆ ಕಾಲದ ರೀತಿಗೆ ಹೋಯೆಕ್ಕಲ್ಲದಾ? ಇಲ್ಲದ್ರೆ ಅಶನಲ್ಲಿ ಕಲ್ಲು ಸಿಕ್ಕಿದ ಹಾಂಗಕ್ಕು… 🙂
ನಮ್ಮ ಮಾತಿನ ರೀತಿ ಆದಿಪ್ಪಲೂ ಸಾಕು. ಆದರೆ ಮಾಸ್ಟ್ರ ಅವ, ಅದು ಹೇಳಿ ಸಂಬೋಧಿಸುವದಿಕ್ಕಿಂತ ಅವು ಹೇಳುವದು ಚೆಂದ ಅಲ್ಲದೊ?
Innanaddu ‘pen’nno??
super endingu.tumba chandaydu
ಧನ್ಯವಾದಂಗೋ…
🙂
sukhaantya appaaga ussappa aatu. ondu olle kiruchitra maadule olleya kathe .
ಓದಿಯೇ ಉಸ್ಸಪ್ಪ ಆದ್ದೋ ಎಂತ?
ಒಪ್ಪ ಕುಶಿ ಅತು.
🙂
ಅಬ್ಬಬ್ಬಾ…!
ಕಥೆಲಿ ಸುಮಾರು ಟ್ವಿಸ್ಟು ಇದ್ದರೂ ಕಡೇಂಗೆ ಕ್ಲೈಮೇಕ್ಸಿಲಿ ಎಲ್ಲರೂ ಒಟ್ಟಾದವನ್ನೇ… ಅದು ತುಂಬಾ ಇಷ್ಟ ಆತು…
ಒಟ್ಟಾರೆ ಹೇಳೆಕ್ಕಾರೆ, “ಸೂ………….ಪರು”
ಹಾಂಗೇ ಈ ಒಪ್ಪದ ಕಥೆ ಬರೆದ ಶ್ಯಾಮಣ್ಣಂಗೆ ಈ ಕಡೆಂದ ಒಂದು ಪ್ರೀತಿಯ ಒಪ್ಪಂಗೊ <3
ಮುಂದಾಣ ಕಥೆಗಾಗಿ ಕಾದೊಂಡಿರ್ತೆ… 🙂
ಮುಣ್ಚಿಕಾನ ಭಾವನ ಒಪ್ಪಕ್ಕೆ ಧನ್ಯವಾದಂಗೋ…
ಮುಂದಾಣ ಕತೆಗೆ ಆನುದೇ ಕಾದೊಂಡು ಇದ್ದೆ… ಪೆನ್ನಿನ ಒಳ ಇದ್ದು ಹೇಳ್ಲಕ್ಕು… ಹೆರ ಬರೆಕ್ಕಲ್ಲದ? 🙂
ರಸಮಯ ನಿರೂಪಣೆ, ವಸ್ತು,ನಾಟಕೀಯತೆ,ನೀತಿ,ಭಾಷಾ ಸೌ೦ದರ್ಯ ಎಲ್ಲವೂ ಸಮಪಾಕ ಆಗಿ ರ೦ಜನೆ ಕೊಟ್ಟತ್ತು.
ಚಿತ್ರ೦ಗೊ ಕಥೆಗೆ ಮೆರುಗು ಕೊಟ್ಟತ್ತು.
ಲಾಯ್ಕ ಇದ್ದು ಹೇಳ್ಯೊ೦ಡು ”ಲೈಕ್” ಒತ್ತಿತ್ತು..
ಅದು ಸರೀ…ಇನ್ನಾಣ ಕಥೆ ಎ೦ತರ?
ಅದೇ.. ಇನ್ನಾಣ ಕತೆ ಎಂತರ? ಅದೇ ಸಮಸ್ಯೆ ಈಗ…
🙂
ಅಂತೂ ನಾಣಿ ಮಾಣಿ ಆದರೂ ವಿವೇಚನೆಂದ ವರ್ತಿಸಿ ಬ್ರಾಮ್ಹಣ ಹೇಳುದರ ನಿರೂಪಿಸಿದ .
ನಾಣಿಯ ವ್ಯಕ್ತಿ ಚಿತ್ರಣ , ಆ ಪರಿಸರ ಅವನ ಪೆನ್ಸಿಲ್ ಉದುರಿದ ಒಟ್ಟೆ /ಒತ್ತೆ ಚಡ್ಡಿ ,ಮತ್ತೊಂದು ತೆಗವಲೆ ಎಡಿಯದ್ದ ಬಡತನ ಹೀ೦ಗಿಪ್ಪ ಪ್ರತಿಯೊಂದು ವಿಷಯವೂ ಬಡ ಬ್ರಾಮ್ಹಣನ ಪಾಡಿನ ನೈಜವಾಗಿ ಚಿತ್ರಿಸುವಲ್ಲಿ ಶ್ಯಾಮಣ್ಣನ ಕತೆ ಯಶಸ್ವಿ ಆಯಿದು ಹೇಳಿ ಎನ್ನ ಅಭಿಪ್ರಾಯ . ಚಿಮಿಣಿ ದೀಪ ಮತ್ತೆ ‘ಎಲೆಟೃ’ಯ ವಿವರೆಣೆಯು ಅಸ್ಟೇ ಸಹಜವಾಗಿತ್ತು .
ಎನಗೆ ರಜ್ಜ ಅಸಹಜ ಹೇಳಿ ಕಂಡದು ಆ ಕಾಲಲ್ಲಿ ಆರತಿ ಶಾಲಗೆ ಕಾರಿಲಿ ಬಪ್ಪದು, ಅಸ್ತಪ್ಪಗಣ ಕಾಲಕ್ಕೆ ಉಪಯೋಗಿಸಿದ ‘ಬುಕ್ ಸ್ಟಾಲ್ ‘(ಅಂಗಡಿ ) ಹೇಳುವ ಪದ , ನಾಣಿ ಬಡುದ ಮಾಸ್ತರನ ೧0 ನಿಮಿಷ ನೋಡುದು (ಟಿ ವಿ ಧಾರಾವಾಹಿಗಳಲ್ಲಿ ನೋಡಿದ ಹಾಂಗೆ ) ,ನಾಣಿ ಹೋದ ಶಾಲೆಯ ಪರಿಸರವುದೇ , ಅದರ ಹತ್ತರೆ ಇಪ್ಪ ನರ್ಸಿಂಗ್ ಹೋಂ ಇತ್ಯಾದಿ . 50 ವರ್ಷ ಮೊದಲು ಅಲ್ಲ , ಇಂದಾದರು ಹಾಂಗಿಪ್ಪಲ್ಲಿ ಆರಾರು ಡಾಕ್ಟರಕ್ಕೋ ನರ್ಸಿಂಗ್ ಹೋಂ ಹಾಕುವ ಧೈರ್ಯ ಮಾಡುಗೋ ಹೇಳಿ ಎನಗೆ ಕoಡುಗೊಂಡಿತ್ತು . ಮತ್ತೆ , ಎಲ್ಲಾ ಮಕ್ಕಳ ಎದುರೆ ಒಳುದ ಪೆನಸಿಲ್ನ ನಾಣಿಗೆ ತೆಕ್ಕೊಮ್ಬಲೆ ಹೇಳುವುದು — ಮಾಸ್ತ್ರಕ್ಕಳ ಸ್ತಾನಕ್ಕಿಪ್ಪ ಗೌರವ ಅಲ್ಲ ಹೇಳಿ ಎನ್ನ ಭಾವನೆ . ಕ್ಲಾಸಿಲಿ ಬಡವ / ಶ್ರೀಮಂತ , ಉಶಾರು / ದಡ್ಡ ಎಲ್ಲಾರನ್ನು ಮಾಸ್ತ್ರಕ್ಕೋ ಒಂದೇ ರೀತಿ ಕಾಣಡದ ?
ಎನಗೆ ಅಸ್ಟೆಲ್ಲ ಕೊರತೆ ಕಂಡರೂ ಕತೆಯ ಓದುಲೇ ರಸಭಂಗ ಆಯಿದಿಲ್ಲೆ . ಮತ್ತೆ , ಯಾವುದೇ ಕತೆಯ ಆಕರ್ಷಣೆ ಕತೆಗೆ ಇಪ್ಪ ಚಿತ್ರಂಗೊ. ಮಕ್ಕಳಿಂದ ಮುದುಕ್ಕರ ವರೆಗೂ ಚಿತ್ರವ ಇಷ್ಟ ಪಡದ್ದೊವು ಇಲ್ಲೆ . ಹಾಂಗಾಗಿ ಕತೆಯೊಟ್ಟಿಂಗೆ ಚಿತ್ರ ಇದ್ದದು ಒಂದು ಆಕರ್ಷಣೆ ಸರಿ . ಎಲ್ಲೋರು ಶಾಮಣ್ಣಂಗೆ ಹಸುರು ಸಿಗ್ನಲ್ಲೇ ತೋರುಸಿದದವಲ್ಲದಾ ?
ಚೆಂದಕ್ಕೆ, ಉದ್ದದ ಒಪ್ಪ ಬರದ್ದಿ. ಕತೆ ಅಲ್ಲದ.. ಅಸಹಜತೆ ಕೆಲವು ಸಲ ಬಪ್ಪಲೂ ಸಾಕು… ಇನ್ನಾಣದ್ದರಲ್ಲಿ ಸರಿ ಮಾಡ್ಲೆ ನೋಡುದು.
ಒಪ್ಪ ಕುಶಿಯಾತು ಆತಾ…
🙂
ಭಾರೀ ಲಾಯ್ಕಿನ ಕಥೆ. ಓದಿ ಮನಸ್ಸು ತುಂಬಿತ್ತು. ನಾಣೀ ವಿಜಯ.
( ನಾಣೀ ವಿಜಯ.)
ಹ ಹಾ… ಒಂದು ಯಕ್ಷಗಾನ ಬರವನೋ ನಾಣೀ ವಿಜಯ. ಹೇಳಿ?
ಒಪ್ಪ ಕುಶಿಯಾತು ಆತಾ…
🙂
ಆನೂ ಒಬ್ಬ° ಮಾಷ್ಟ್ರ° ಆಗಿ ಕಥೆಯ ಓದಿ ಅನುಭವಿಸಿದೆ.
ತುಂಬಾ ಸೂಪರ್.
ಆ ಹಳೆಯ ಜಮಾನಾದ ನಟರಾಜ ಪೆನ್ಸಿಲೂ, ಕಥೆಯೂ ತುಂಬಾ ಒಳ್ಳೆದಾಯಿದು.
ಶ್ಯಾಮಣ್ಣ ಹೇಳ್ತ ಇನ್ನಷ್ಟು ಕಥೆಗೊಕ್ಕೆ ಕಾದುಗೊಂಡು ಇರ್ತೆ.
ಮಾಷ್ಟ್ರನ ಖಳನಾಯಕ ಮಾಡಿದೆ ಹೇಳಿ ಬೇಜಾರಿಲ್ಲೆನ್ನೆ?
🙂
ಕಥೆ ಲಾಯಿಕ ಆಯಿದು ಶ್ಯಾಮಣ್ಣಾ…..
ಧನ್ಯವಾದಂಗೋ..
🙂
ಶ್ಯಾಮಣ್ಣಾ, ಆನು ಮನ್ನೆಯೇ ಹೇಳಿದ್ದೆ, ಮಾಣಿ ನಾಣಿ ದಾಸಪ್ಪ ಮಾಶ್ಟ್ರಿಂಗೆ ಸಹಾಯ ಮಾಡುಗು ಹೇಳಿ. ಆನು ಗ್ರೇಶಿದ ಹಾಂಗೇ ಆತು. ನಾಕು ಕಂತುಗಳೂ ತುಂಬಾ, ತುಂಬಾ ಚೆಂದಕೆ ಬಂತು. ದಾಸಪ್ಪನ ಗುಣ ಬದಲಾದ್ದು ತುಂಬಾ ಸಂತೋಷ ತಂತು. ನಾಣಿಗೆ ಶಾಲು, ಹಣ್ಣು, ಅಂಗಿ ಚಡ್ಡಿ ಆರತಿ ಕೊಡುಸಿದ್ದದು ಕೇಳಿ ಕೊಶಿ ಆತು. ಎಡೆಲಿ ಒಂದರಿ ಕೊಡೆಯಾಲದ ಕೆ ಎಂ ಸಿ ಆಸ್ಪತ್ರೆ ಹೇಳಿ ಬಯಿಂದು, ಐವತ್ತು ವರ್ಷ ಹಿಂದೆ ಅದು ಇತ್ತಿಲ್ಲೆಯೊ ಹೇಳಿ. ತೊಂದರೆ ಇಲ್ಲೆ, ಕಥೆ ಅಂತೂ ಸೂಪರು. ಹೀಂಗಿಪ್ಪ ಹಲವಾರು ಕತೆಗೊ ಶ್ಯಾಮಣ್ಣನ ಲೇಖನಿಂದ ಹೊರಹೊಮ್ಮಲಿ, ಬೈಲಿನ, ನೆರೆಕರೆಯವರ ಮನ ತಣಿಸಲಿ.
ಗೋಪಾಲ ಭಾವ ಸುರುವಿಂದಲೇ ಕತೆಗೆ ಕಾದು ಕೂತು ಕತೆ ಒಪ್ಪ ಕೊಟ್ಟವು. ತುಂಬ ಕುಶಿಯಾತು ಆತ ಭಾವ…
🙂
ತುಂಬಾ ಲಾಯಕ ಆಯಿದು.
ಭಾಷೆಯ ಸಹಜತೆ, ಗ್ರಾಮೀಣ ಶೈಲಿ, ಕಾದಂಬರಿಯ ಸ್ಟೈಲು, ಸುಭಾಷಿತಂಗ ಎಲ್ಲವೂ ಸೇರಿ ಕಥೆ ಅದ್ಭುತ!
ಮಹೇಶಣ್ಣನ ಒಪ್ಪ ಓದಿ ಕುಶಿಯಾತು…
🙂
ಕಥಾವಸ್ತು ಸಣ್ಣದಾದರೂ ನಿರೂಪಣೆ ಲಾಯ್ಕಾಯ್ದು. ಮೊದಲ ಎರಡು ಭಾಗ ಕುತೂಹಲ ಒಳಿಸಿಕೊಂಡು ಸರಾಗ ಓದಿಸಿಕೊಂಡು ಹೋತು.
ಮೂರನೇ ಭಾಗ ಚೂರು ಎಳೆದ ಹಾಂಗೆ ಭಾಸ ಆತು.
ನಾಣಿ ಶಾಲೆ ಬಿಟ್ಟು ಅಷ್ಟು ಹೊತ್ತು (ಮಧ್ಯರಾತ್ರಿ) ಆದ್ರೂ ಮನೆಗೆ ಬಾರದ್ದಿಪ್ಪಗ ಅವನ ಅಮ್ಮಂಗಾದ ತಳಮಳ, ಹುಡುಕಾಟವನ್ನೂ ಬರೆದಿದ್ದರೆ ಕಥೆ ಇನ್ನೂ ಸಹಜ ಭಾವನೆ ಮೂಡಿಸುತ್ತಿತ್ತೇನೋ ಹೇಳಿ ಕಾಣ್ತು.
ನಾಲ್ಕನೇ ಭಾಗಲ್ಲಿ ದಾಸಪ್ಪ ಮಾಷ್ಟ್ರನ ಮನಪರಿವರ್ತನೆ ಒಳ್ಳೆ ರೀತಿಲಿ ಮೂಡಿದ್ದು. ಆದರೆ ಮಾಡಿಕೊಂಡ ಪ್ರಾಯಶ್ಚಿತ್ತ ವಾಸ್ತವಕ್ಕೆ ಹತ್ತರೆ ಇಪ್ಪ ಹಾಂಗೆ ಮಾಡ್ಲಾವ್ತಿತ್ತು ಹೇಳಿ ಕಾಣ್ತು.
ನಿಂಗಳ ವಿಮರ್ಶೆಯ ಮನಸ್ಸಿಲಿ ಮಡಿಕ್ಕೊಳ್ತೆ, ಇನ್ನಾಣ ಕತೆ ಬರವಗ.
ಒಪ್ಪ ಕುಶಿಯಾತು
🙂
ಕಥೆಯ ನಾಲ್ಕೂ ಭಾಗಂಗಳ ಓದಿದ್ದೆ. ಕಥೆ, ಬರದ ಶೈಲಿ ಎಲ್ಲವೂ ತುಂಬಾ ಲಾಯ್ಕಿತ್ತು ಶಾಮಣ್ಣಾ. ಹೀಂಗೇ ಮುಂದೆದೇ ನಿಂಗಳ ಕಥೆಗಳ ಓದುವ ಸದವಕಾಶ ಎಂಗೊಗೆ ಸಿಗಲಿ ಹೇಳಿ ಹಾರೈಸುತ್ತೆ.
ನೋಡುವ… ಬರವ ಅವಕಾಶ ಎನಗೆ ಸಿಕ್ಕಲಿ ಹೇಳಿ ಹಾರೈಸುತ್ತೆ.
ಒಪ್ಪ ಕುಶಿಯಾತು
🙂
ಮೆಗಾ ಧಾರಾವಾಹಿಯಾಗಿ ಬಕ್ಕು ಹೇಳಿ ಗ್ರೇಶಿರೆ ಸಡನ್ನು ನಿಲ್ಸಿದ್ದಾ ? ಮುಗುಶುಲೆ ಅರ್ಜೆಂಟು ಮಾಡಿದ್ದೆಂತಕ್ಕೆ ಶ್ಯಾಮಣ್ಣಾ ? ಹಳೇ ಕನ್ನಡ ಸಿನೆಮಲ್ಲಿ ಅಪ್ಪಾಂಗೆ ರಾಕ್ಷಸನ ಹಾಂಗಿಪ್ಪ ಮನುಷ್ಯ ಪ್ರತಿಸ್ಪರ್ಧಿ ಹೇಳಿ ಗ್ರೇಶಿದ ಜನದ ಮಾನವೀಯತೆಗೆ ಕರಗಿಹೋಗಿ ಬದಲಾಗಿ ಉತ್ತಮೋತ್ತಮ ಮನುಷ್ಯ ಆದ್ದದು ಸಮಾಧಾನವೇ. ಆದರೆ ಈ ಮನುಷ್ಯ ಪ್ರತೀವರ್ಷವುದೇ ಬರೇ ಪೆನ್ಸಿಲು ಹಂಚಿರೆ ಹೇಂಗಕ್ಕು? ಮಕ್ಕೊಗೆ ಬೊಡಿಯದಾ? ಪೆನ್ಸಿಲುಮಾಷ್ಟ್ರ° ಹೇಳಿ ಹೆಸರುದೆ ಮಡುಗವಾ? ಪಾಪ । ನಾಣಿ ಬರೇ ಸಾಧು, “ಏ, ಪ್ರತೀವರ್ಷವೂ ನಿನಿಗೇ ಹೆಚ್ಚು ಪೆನ್ಸಿಲಾ? ನಾನ್ನಿನ್ನ ಫ್ರೆಂಡಲ್ವಾ? ಏ,ನನಿಗೂ ಕೊಡ ಇನ್ನುಸ್ವಲ್ಪ ” ಹೇಳಿ ಅವನ ದೋಸ್ತಿಗೊ ನಾಣಿಯ ಗಿರ್ಗಾಣ್ಸವಾ? ನಾಣಿ ಮುಂದೆ ಬರೇ ಪೆನ್ಸಿಲ್ಲಿ ಬರವದಲ್ಲನ್ನೆ ,ಪೆನ್ನಿಲಿಯೂ ಬರೆಯಕ್ಕನ್ನೆ! ಬರೇಪೆನ್ಸಿಲು ಕೊಡುವ ಬದಲಿಂಗೆ ಪುಸ್ತಕವೋ ಎಂತಾರು ಕೊಡ್ಲಾವುತ್ತಿತ್ತೋ ಏನೋ,ಅಲ್ಲದಾ? ಇಲ್ಲದ್ರೆ,ನಾಣಿಯೇ ಹೆಚ್ಚಿಪ್ಪ ಪೆನ್ಸಿಲುಗಳ ಜನತಾ ಬುಕ್ಕುಸ್ಟಾಲಿಂಗೆ ಕೊಟ್ಟು ಬದಲಿಂಗೆ ಪುಸ್ತಕ ತೆಕ್ಕೊಳ್ತನೋ ಏನೋ! ಶಾಲೆ ಮುಗುದ ಮೇಲೆ ಮಡುಗುವ ಅಂಗಡಿಗೆ ಈಗಳೇ ಸಂಗ್ರಹಮಾಡಿರೆ ಆ ಪೆನ್ಸಿಲುಗೊ ಕುಂಬಾಗದೋ?
ಕತೆ ಮಾತ್ರ ಸೂ…ಪರ್! ಎನಗಂತೂ ವಿಟ್ಲದ ಒಳಒಳಾಣ ಮಾರ್ಗಂಗಳ ಇನ್ನೊಂದು ಸರ್ತಿ ನೋಡಿ ಬಂದ ಹಾಂಗಾತು. ಮನಸಿನ ಬಾಲ್ಯಕ್ಕೆ ಕೊಂಡೋದ್ದಕ್ಕೆ ತುಂಬಾ…ತುಂಬಾ… ತ್ಯಾಂಕ್ಸ್ ಶ್ಯಾಮಣ್ಣಾ !
ಈ ಇಂದಿರತ್ತೆಯ ಒಪ್ಪ ನೋಡುವಗ, ನಿಂಗ ಎಂತಾರೂ ಆನು ಕಲ್ತ ಶಾಲೆಲೇ ಕಲ್ತದೋ ಹೇಂಗೆ?
ಒಪ್ಪ ಕುಶಿಯಾತದ.
🙂
ಒಳ್ಳೆ ನೀತಿ ಕತೆ. ಬೈಲಿಲಿ ಹೀಂಗಿರ್ತ ಸಾಹಿತ್ಯ ಇದುವೇ ಮದಾಲು ಕಾಣುತ್ತ್ತು. ಕಥಾ ವಸ್ತು, ನಿರೂಪಣಾ ಶೈಲಿ ಲಾಯಿಕಿದ್ದು. ಐವತ್ತು ವರ್ಷ ಮದಲಾಣ ಜೀವನ ಚಿತ್ರವ ಕಣ್ಣಿಂಗೆ ಕಟ್ಟುತ್ತ ನಮುನೆಲಿ ಬರವದು ಸುಲಭ ಇಲ್ಲೆ. ಓದಿಯಪ್ಪಗ ನಾವು ಆ ಕಾಲಕ್ಕೆ ಬಂದಿಳಿದ ಅನುಭವ ಕೊಟ್ಟತ್ತು.
ಅಭಿನಂದನೆಗೊ ಶಾಮಣ್ಣ.
ಟೀಕೆ ಮಾವನೂ ಸುರೂವಿಂದಲೇ ಒಪ್ಪ ಕೊಟ್ಟವು.. ತುಂಬಾ ಧನ್ಯವಾದಂಗೋ..
🙂
ನೆಗೆಚಿತ್ರ ಶಾಮಣ್ಣಂಗೆ ಅಭಿನಂದನೆಗೊ.
ಅತಿ ಸುಂದರ ನಿರೂಪಣೆಲಿ, ಹಳ್ಳಿ ಚಿತ್ರಣಲ್ಲಿ ಬಂದ “ಪೆನ್ಸಿಲು” ಕತೆ ಪಷ್ಟಾಯಿದು ಹೇಳ್ತರಲ್ಲಿ ಎರಡು ಮಾತಿಲ್ಲೆ.
ಪೆನ್ಸಿಲಿನ ಪ್ರತಿ ತುಂಡನ್ನೂ ಬೈಲಿಲಿ ಶುದ್ದಿ ಹೇಳಿದ ಕೂಡ್ಳೇ ನಾವು ಓದಿದ್ದು.
ಈ ಪೆನ್ಸಿಲು ಎಷ್ಟು ತುಂಡಾವುತ್ತು ನೋಡುವೊ, ಎಲ್ಲ ಅನುಭವಿಸಿ ಚೆಂದಕೆ ಒಪ್ಪ ಕೊಡುವೊ – ಹೇದು ಕಾದು ಕೂದ್ಸು ಇದಾ.
ಅಮೋಘ ಕತೆಗೆ ಒಪ್ಪಂಗೊ.
ನಾಣಿ, ಕಿಟ್ಟಣ್ಣ, ಆರತಿ, ದಿನೇಸ°, ದಾಸಪ್ಪ, ಹೂವಯ್ಯ ಟೈಲರು, ಬಾಬು, ನಟರಾಜ ಪೆನ್ಸಿಲು, ಎಡತ್ತು-ಬಲತ್ತಿಂಗೆ ತಿರುಗುತ್ತ ಮಾರ್ಗಂಗೊ, ಎಲೆಟ್ರಿ, – ಎಲ್ಲವೂ ಹೃದ್ಯ-ಸಹಜ-ಸುಂದರ ಆಗಿ ಬಯಿಂದು.
ದರ್ಪದ ಮಾಷ್ಟ್ರು ಸಾಧು ಆದ್ಸು, ನಾಣಿಯ ಬೆಲೆ ಅರ್ತದು – ಚೆಂದಕೆ ಪ್ರಕಟ ಆಯಿದು.
ಬೈಲಿನ ಅಮೂಲ್ಯ ಸಾಹಿತ್ಯ ನಿಧಿಲಿ ಈ ಪೆನ್ಸಿಲಿನ ನಾಲ್ಕು ಬಾಗಂಗಳುದೇ ಇದ್ದು – ಹೇಳ್ತದು ಬೈಲಿನ ಅಭಿಪ್ರಾಯ.
ಇನ್ನೂ ಹಲವು ಕತೆಗೊ ಬರಳಿ, ಇದೇ ನಾಣಿಯ ಕತೆ ಆದರೂ ಆಗದ್ದಿಲ್ಲೆ, ಬೇರೆ ಆದರೂ ಅಕ್ಕು.
ಚೆಂದದ ನೆಗೆಚಿತ್ರಂಗೊ ಎಡಕ್ಕಿಲಿ ಇರಳಿ.
ಕಾದೊಂಡಿರ್ತೆಯೊ°.
ಹರೇರಾಮ
ಆರು ಏವದೇ ಶುದ್ದಿ ಆಗಲೀ, ಕವನ ಆಗಲೀ, ಕತೆ ಆಗಲೀ ಬರದರೂ, ಅದಕ್ಕೆ ಒಪ್ಪಣ್ಣ ನ ಒಪ್ಪಂಗಳ ನಿರೀಕ್ಷೆ ಮಾಡ್ತವು. ಎಂತಕೆ ಹೇಳಿರೆ ಈ ಬೈಲಿನ ಸುರು ಮಾಡಿದ್ದು ಒಪ್ಪಣ್ಣನೇ ಅಲ್ಲದ?
ಒಪ್ಪ ಓದಿ ಕುಶಿ ಆತದಾ…
🙂
ಅಬ್ಬಬ್ಬ!!!! …
[ಎಂತ?… ಕತೆ ಮುಗಾತನ್ನೇ ಹೇದು ಹೇಳಿದನೋ ಗ್ರೇಶಿದಿರೋ ?!! ಅಲ್ಲ, ಅಲ್ಲ. ಕತೆ ಕೊಂಡೋದ ಕ್ರಮಪ್ಪ .. – ಸೂಪರ್].
ಕಳದವಾರದ ವರ್ತಮಾನ ನೋಡಿರೆ ದಾಸಪ್ಪ ಮಾಷ್ಟ್ರನ ಕನಸು ಆದಿಕ್ಕೋದು ಒಂದು ಅನುಮಾನ ಆತು. – ಅದೂ ಅಲ್ಲ.
ಇಲ್ಲಿ ಪುಟ ಬಿಡಿಸಿದ ಕೂಡ್ಳೆ ದಾಸಪ್ಪ ಮಾಸ್ಟ್ರ ಆಸ್ಪತ್ರೇಲಿ ಇದ್ದು. ಅಂಬಗ ಊಹನೆ ಸತ್ಯ ಆತು ಹೇದು ಒಳಂದೊಳ ಕೊಶಿ ಆತು – ಆನು ಗ್ರೇಶಿದ್ದೇ ಸರಿ ಹೇದು – ಆದರೆ ಅದೂ ಅಲ್ಲ !
ನಾಣಿಯೂ ನಾವಾರೂ ಗ್ರೇಶಿದಾಂಗೆ ಮಾಡಿದ್ದನಿಲ್ಲೆ! – ವಿಚಿತ್ರ ., ಆದರೂ ಸತ್ಯ !
ದಾಸಪ್ಪ ಮಾಸ್ಟ್ರನ ಆಸ್ಪತ್ರೆಂದ ನಾಣಿಯ ಕತಗೆ ಲಿಂಕ್ ಮಾಡಿದ ಕ್ರಮ ಲಾಯಕ ಆಯ್ದು. ಸೇಂಕುಬಿಟ್ಟುಗೊಂಡ ನಾಣಿ ಡಾಕುಟ್ರಂಗೆ ಹೇಳ್ತ ಕ್ರಮ ರೈಸಿದ್ದು.
ಗರ್ವದ ನಾಣಿ ಎಂತ ಮಾಡಿಕ್ಕಿಗೋ… ಏನಕ್ಕೋ .. , ದಿನೇಸಂಗೆ ಒಂದು ಗತಿ ಆದಿಕ್ಕುಗೋ, ದಾಸಪ್ಪ ಕೆಲಸ ಬಿಟ್ಟಿಕ್ಕುಗೋ.. …. ಇತ್ಯಾದಿ ಇತ್ಯಾದಿ ಕುತೂಹಲವ ಪ್ರತಿಹಂತಲ್ಲಿ ಕೆರಳಿಸಿಗೊಂಡು ಅಕೇರಿವರೇಗೂ ಗಹನವಾಗಿ ರಹಸ್ಯವಾಗಿ ಕೊಂಡೋದ ಶ್ಯಾಮಣ್ಣನ ‘ಪೆನ್ಸಿಲು’ – A+1.
ಚೆನ್ನೈ ಭಾವಂದು ಸುರೂವಿಂದಲೇ ವಿಮರ್ಶಾತ್ಮಕ ಒಪ್ಪಂಗೋ, ನಿಜಕ್ಕೂ ಕುಶಿ ಕೊಡುವಂತಾದ್ದು… 🙂
ಪ್ರತಿಯೊಂದು ಪಾತ್ರವನ್ನೂ, ಘಟನೆಗಳನ್ನೂ ಎಳೆ ಎಳೆಯಾಗಿ ಬಿಡುಸಿ ನಿರೂಪಿಸಿದ ಶೈಲಿ ತುಂಬಾ ಲಾಯಿಕ ಆಯಿದು.
ಎಲ್ಲಾ ಘಟನೆಗಳೂ ಕಣ್ಣೆದುರೇ ಬಂದು ನಿಂದ ಹಾಂಗೇ ಆತು. ಪ್ರತಿಯೊಂದು ಕಂತನ್ನೂ ಕುತೂಹಲದ ಹಂತಲ್ಲಿ ನಿಲ್ಲುಸಿ, ಮುಂದೆ ಎಂತ ಆವುತ್ತು ಹೇಳಿ ನಿರೀಕ್ಷೆಗೆ ಎಡೆ ಮಾಡಿ ಕೊಟ್ಟತ್ತು.
ನಾಣಿಯ ಮೇಲೆ ಅನುಕಂಪ, ಮಾಷ್ಟ್ರನ ಮೇಲೆ ಪಿಸುರು ಬಪ್ಪದು ಒಂದು ಕಡೆ ಆದರೆ, ಕೆಲವೊಂದು ಘಟನೆಗೊ ಕಣ್ಣಿಲ್ಲಿ ನೀರು ಬರಿಸಿತ್ತು.
ನಿಂಗಳ ಹಾಂಗಿಪ್ಪೋರು ಕೊಡುವ ಒಪ್ಪ ಓದಿ ಅಪ್ಪಗ ಇನ್ನುದೇ ಕತೆ ಬರವ ಹೇಳಿ ಕಾಣ್ತು. ಒಪ್ಪ ಓದಿ ಕುಶಿ ಆತು. 🙂
Aanu kathe odidde. Maneyavakku odi helidde.. Ella heludu kathe ishtu bega mugutha heli..! Daasappa olle manushya aathanne. Naanige pencil ille helta korate theerithanne.. Kathe sukhanthya athu.
ನಿಂಗಳ ಒಪ್ಪಕ್ಕೆ ಧನ್ಯವಾದಂಗೋ. ಒಪ್ಪ ಓದಿ ಕುಶಿ ಆತು. 🙂