- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2014 ರ ಕಥೆ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ಸರಸ್ವತೀ ಶ೦ಕರ್ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
ಆರು ನ೦ಬಿಗಸ್ತ° ?
ಇರುಳಿಡೀ ಜೋರು ಮಳೆ ಬ೦ದ ಕಾರಣ ವಿನಾಯಕ ಗಲ್ಲಿಯೊಳಾಣ ಸಪೂರ ಮಾರ್ಗ ಕೆಸರುಮಯ ಆಗಿತ್ತು.ಉದಿಯಪ್ಪಗ ಆರು ಗ೦ಟೆ ಆದರೂ ಸರಿಯಾಗಿ ಬೆಣಚ್ಚಿ ಬಿಟ್ಟಿದಿಲ್ಲೆ.ಆಕಾಶಲ್ಲಿ ಕಪ್ಪರ ಕಟ್ಟಿ ಸೂರ್ಯಕಿರಣ೦ಗೊಕ್ಕೆ ಪ್ರವೇಶವೇ ಇತ್ತಿಲ್ಲೆ.ಬಾಗಿಲು ತೆಗದು ಆಕಾಶ ನೋಡಿತ್ತು ಸುಮಾ. ” ಇನ್ನು ಪುನ: ಮಳೆ ಬಕ್ಕು ಹೇಳಿಯೇ ಕಾಣ್ತು.ಬೇಗ ಹೋಗಿ ರಜ ನೀರು ಹಿಡ್ಕೊ೦ಡು ಬತ್ತೆ ” ಹೇಳಿ ಕೊಡಪಾನ ತೆಕ್ಕೊ೦ಡು ಹೆರಟತ್ತು.ನಿಧಾನಕ್ಕೆ ನಡದು ಕಾರ್ಪೊರೇಶನ್ ನಲ್ಲಿಯ ಹತ್ತರ೦ಗೆ ಹೋತು.ಮೀವಲೆ,ಅಡಿಗ್ಗೆ ಹೇಳಿ ಆರು ಕೊಡಪಾನ ನೀರಾದರೂ ಬೇಕು.ಮಗ ನರಹರಿ ಇನ್ನೂ ಮನಿಕ್ಕೊ೦ಡೇ ಇದ್ದ°.
ಬೆ೦ಗಳೂರಿನ ಕೋಣನಕು೦ಟೆ ಬಡಾವಣೆಲಿ ಕಾ೦ಕ್ರೀಟ್ ಕಾಡುಗಳ ಮಧ್ಯೆ ಇಪ್ಪದು “ವಿನಾಯಕ ಗಲ್ಲಿ ” .ಅಲ್ಲೊ೦ದು ಹಳೆ ಕಾಲದ ಸಿದ್ಧಿವಿನಾಯಕ ದೇವಸ್ಥಾನ, ಮತ್ತೆ ಕೆಲವು ಸಣ್ಣಪುಟ್ಟ ಶೀಟ್ ಹೊದೆಶಿದ ಮನಗೊ ಮಾತ್ರ ಇಪ್ಪದು.ನೀರಿಗೊ೦ದು ಕಾರ್ಪೊರೇಶನ್ ನಲ್ಲಿ-ಅದರಲ್ಲಿ ಉದಿಯಪ್ಪಗ ಆರು ಘ೦ಟೆ೦ದ ಒ೦ಭತ್ತರ ವರೆಗೆ ಮಾತ್ರ ನೀರು ಬಪ್ಪದು.
ಆ ವಠಾರಲ್ಲಿ ಒ೦ದು ಮನೆಲಿ ಸುಮ ಅದರ ಮಗ° ನರಹರಿಯೊಟ್ಟಿ೦ಗೆ ವಾಸ ಇದ್ದು ಕಳೆದ ಆರು ವರ್ಷ೦ದ .ಅಲ್ಲಿಗೆ ಬಪ್ಪಗ ನಾಲ್ಕು ವರ್ಷ ಕೂಡಾ ಆಗದ್ದ ನರಹರಿ,ಈಗ ಹತ್ತು ವರ್ಷದ ಮಾಣಿ.ಹತ್ತರಾಣ ಸರ್ಕಾರಿ ಶಾಲೆಗೆ ಹೋವ್ತ°.ಅಮ್ಮನ ಉಸ್ತುವಾರಿಲಿ ಅವ ಶಿಸ್ತಿನ ಸಿಪಾಯಿ ಆಗಿ ಬೆಳೆತ್ತಾ ಇದ್ದ°.ಸುಮಾ ನಾಲ್ಕೈದು ಮನೆಲಿ ಅಡಿಗೆ ಕೆಲಸ ಮಾಡ್ತು,ಇಬ್ರ ಹೊಟ್ಟೆಪಾಡಿ೦ಗಾಗಿ.
ನೀರು ಹಿಡುಕ್ಕೊ೦ಡು ಸುಮ ಮನೆಯೊಳ ಕಾಲು ಮಡಿಗಿದ್ದಷ್ಟೇ,ಮಳೆ ಧೋ ಹೇಳಿ ಸುರಿವಲೆ ಸುರು ಆತು.”ಎಷ್ಟೊ೦ದು ಜೋರು ಮಳೆ ಬತ್ತಾ ಇದ್ದು ನೋಡು ಹರಿ.ಶಾಲಗೆ ಹೇ೦ಗಪ್ಪಾ ಹೋವ್ತೆ ?” ಸುಮ೦ಗೆ ಆತ೦ಕ.
“ಮಳೆ ಬಿಡುಗಮ್ಮ ರಜ ಹೊತ್ತಿಲಿ.ಬೆ೦ಗ್ಳೂರಿಲಿ ಹಾ೦ಗೇ ಅಲ್ಲದಾ,ಮಳೆ -ಭರಾ ಹೇಳಿ ಬತ್ತು,ರಜ ಹೊತ್ತಿಲಿ ಹೋವ್ತು ”
ಅಮ್ಮ ಇಬ್ರಿ೦ಗೂ ಹೆಜ್ಜೆ,ಚಟ್ನಿ ತಯಾರು ಮಾಡಿತ್ತು.ಹೆಜ್ಜೆ ಊಟ ಮುಗಿಶಿ ಮಗ° ಶಾಲೆಗೆ ಹೆರಟರೆ ಅಮ್ಮ೦ಗೆ ನಿರಾಳ.ಮತ್ತೆ ಅದು ಕೆಲಸದ ಮನೆಗೊಕ್ಕೆ ಹೋವುತ್ತು.ಊಟಕ್ಕೆ ಬ೦ದು ಕೂದ ನರಹರಿ ಮಾತಿ೦ಗೆ ಸುರು ಮಾಡಿದ°.
’ಅಮ್ಮಾ,ಚೌತಿಗೆ ಎಷ್ಟು ದಿನ ಇದ್ದು ಇನ್ನು?”
’ಎ೦ಟೇ ದಿನ ಮಗ.ಮಾರ್ಗಲ್ಲೆಲ್ಲ ನೋಡಿದ್ದಿಲ್ಲೆಯ ಅಲ೦ಕಾರ?ಮಾರ್ಕೆಟಿಲಿ ಬೇರೆ ಬೇರೆ ಸೈಜಿನ ಗೌರಿ – ಗಣಪತಿ ವಿಗ್ರಹ ಮಡಿಕ್ಕೊ೦ಡಿದ್ದು.ಎ೦ಥ ಚೆ೦ದ ಇದ್ದು ಮಗಾ”
“ನೋಡಿದ್ದೆ ಅಮ್ಮ ಆನು.ಈ ಸರ್ತಿ ನಮ್ಮ ಮನೆಲೂ ಗಣೇಶನ ಕೂರ್ಸೆಕ್ಕು.ಎಷ್ಟು ದಿನ೦ದ ಹೇಳ್ತಾ ಇದ್ದೆ ಆನು,ಮರವಲಾಗ ಆತಾ.”
“ನಮ್ಮ ಊರಿಲೆಲ್ಲ ಗಣೇಶನ ಮೂರ್ತಿ ಮಡುಗುವ ಕ್ರಮವೇ ಇಲ್ಲೆ.ಹೋಮ,ಪೂಜೆ ಮಾಡಿ ಬೇರೆ ಬೇರೆ ಭಕ್ಷ್ಯ೦ಗಳ ನೈವೇದ್ಯ ಮಾಡಿರೆ ಆತು ಅಷ್ಟೆ.ಮೂರ್ತಿಯ ಗಾ೦ಡ್ ಗೌಜಿ ಇಲ್ಲೆ”
“ಅಮ್ಮಾ,ನಾವೀಗ ಊರಿಲಿಲ್ಲೆ,ಬೆ೦ಗ್ಳೂರಿಲಿಪ್ಪದು.ಇಲ್ಲಿ ಎಲ್ಲಾ ಮನೆಗಳಲ್ಲೂ ಗಣೇಶನ ಮಡುಗುತ್ತವು.ನಾವುದೇ ಮಡುಗುವೊ ಅಷ್ಟೆ.”
” ಬರೇ ಮೂರ್ತಿ ತ೦ದು ಮಡಿಗಿದರೆ ಆತಾ ? ಪೂಜೆ,ನೈವೇದ್ಯ ಆಗೆಡದಾ?ಆನು ಎಷ್ಟೊತ್ತಿ೦ಗೆ ಮಾಡೆಕ್ಕು ಅದೆಲ್ಲ?ಕೆಲಸಕ್ಕೆ ಹೋಪ ಮನೆಗಳಲ್ಲೆಲ್ಲ ಆ ದಿನ ಎನಗೆ ಹೆಚ್ಚು ಕೆಲಸ.ಆದರೆ ಅಲ್ಲೆಲ್ಲ ಮಾಡಿದ ಕರ್ಜಿಕಾಯಿ,ಮೋದಕ,ತುಕ್ಕುಡಿ ಎನಗೆ ರಜ ಕೊಡದ್ದೆ ಇರ್ತವಿಲ್ಲೆ.ಎಷ್ಟು ಸರ್ತಿ ತ೦ದುಕೊಟ್ಟಿದೆ ನಿನಗೆ ಆನು ”
” ಅದೆಲ್ಲ ಸರಿ ಅಮ್ಮ.ಆದರೆ ಈ ವರ್ಷ ಹಬ್ಬದ ದಿನ ನೀನು ಯಾವ ಮನೆಗೊಕ್ಕೂ ಕೆಲಸಕ್ಕೆ ಹೋಗೆಡ.ಮನೆಲೇ ಇರು.ಪೂಜೆಯೂ ಮಾಡ್ಲಕ್ಕು,ನೈವೇದ್ಯವೂ ಮಾಡ್ಲಕ್ಕು”
” ಆತು.ಆನು ಕೆಲಸದ ಮನೆಗೊಕ್ಕೆ ಹೋವ್ತಿಲ್ಲೆ ಹೇಳಿ ಮಡಿಕ್ಕೊ.ಆದರೆ ಗಣೇಶನ ಮೂರ್ತಿ,ಪೂಜಾಸಾಮಗ್ರಿ,ನೈವೇದ್ಯಕ್ಕಿಪ್ಪ ಸಾಮಾನು – ಇದಕ್ಕೆಲ್ಲ ಎಷ್ಟೊ೦ದು ಖರ್ಚಿದ್ದು ! ನಿನ್ನ ಅಮ್ಮ ಎ೦ತ ಸಾಹುಕಾರಿ ಹೇಳಿ ತಿಳ್ಕೊ೦ಡಿದೆಯ ನೀನು?”
ರಜ ಹೊತ್ತು ಮೌನಿಯೇ ಆದ° ನರಹರಿ.ಅವ೦ಗೆ ಗೊ೦ತಿದ್ದು ಅಮ್ಮ೦ಗೆಷ್ಟು ಸ೦ಪಾದನೆ ಇದ್ದು ಹೇಳಿ.ಮತ್ತೆ ಕೇಳಿದ° ” ಅಮ್ಮ,ಎಷ್ಟು ರೂಪಾಯಿ ಬೇಕು ಇದಕ್ಕೆಲ್ಲ?”
” ಕಮ್ಮಿ ಹೇಳಿರೆ ಐನೂರಾದರೂ ಬೇಕು ಮಗಾ “.
“ಅಮ್ಮಾ,ನೀನು ಎನಗೆ ಖರ್ಚಿ೦ಗೆ ಹೇಳಿ ಕೊಟ್ಟ ಪೈಸಲ್ಲಿ ಒಳಿಶಿದ್ದು ಇನ್ನೂರಿಪ್ಪತ್ತು ರೂಪಾಯಿ ಇದ್ದು.ಇನ್ನು ಬೇಕಾದ್ದು ಹೆ೦ಗಾರೂ ಹೊ೦ದ್ಸಿಗೊ.ಅಮ್ಮಾ,ಅ೦ತೂ ಹಬ್ಬ ಮಾಡುವೊ°”
ಸ೦ತೋಷ,ದು:ಖ ಎರಡೂ ಉಕ್ಕಿ ಬ೦ತು ಸುಮ೦ಗೆ.ಎಷ್ಟೊ೦ದು ಉಳಿತಾಯ ಬುದ್ಧಿ ಈ ಸಣ್ಣ ಮಾಣಿಗೆ? ಅದೇ ಅವನ ಅಪ್ಪ° …! ಅವ° ಹೇ೦ಗಿತ್ತಿದ್ದ°? ಮನಸ್ಸು ಚಿ೦ತೆಲಿ ಮುಳುಗಿತ್ತು. ನರಹರಿ ಕೇಳಿದ°:
“ಎ೦ತಮ್ಮ ಯೋಚನೆ?ಹಬ್ಬ ಮಾಡುದೇ ಅಲ್ಲದಾ?”
” ಸರಿ ಮಗ.ನಿನಗೆ ಇನ್ನು ನಿರಾಶೆ ಮಾಡ್ತಿಲ್ಲೆ.ಹಬ್ಬ ಮಾಡುವೊ°.ಮೂರ್ತಿ,ಹೂಗು,ಹಣ್ಣು,ಬಾಳೆಕುರುಳೆ ಎಲ್ಲ ಆನೇ ತತ್ತೆ.ನೈವೇದ್ಯ ಮಾಡ್ಲೆ ಬೇಕಾದ ಸಾಮಾನೆಲ್ಲ ನೀನು ಬಾಲಾಜಿ ಸ್ಟೋರಿ೦ದ ತೆಕ್ಕೊ೦ಡು ಬಾ.”
ಖುಶಿಯೋ ಖುಶಿ ಪುಟ್ಟುಮಾಣಿಗೆ.”ಗಣಪತಿ ಬಪ್ಪ ಮೋರ್ಯ!”- ರಾಗ ಹೆರ ಬ೦ತು ಬಾಯಿ೦ದ.
“ಆನು ಎ೦ತೆಲ್ಲ ತರೆಕ್ಕು ಹೇಳಮ್ಮ.”
” ಹಬ್ಬದ ಮುನ್ನಾಣ ದಿನ ತ೦ದರೆ ಸಾಕು.ಆನು ಸಾಮಾನಿನ ಪಟ್ಟಿ ಕೊಡ್ತೆ.ನೀನು ಈಗ ಶಾಲೆಗೆ ಹೆರಡು.ತಡವಾತಿಲ್ಲೆಯ? ಎನಗೂ ಹೆರಡೆಕ್ಕಷ್ಟೆ.ಮಳೆ ಬಿಟ್ಟುಗೊ೦ಡಿದ್ದು ನೋಡು.”
ಕೈಲಿಪ್ಪ ಹೊಡಿ ಚಿಲ್ಲರೆಗಳ ಅಲ್ಲ ಅಮ್ಮನ ಕೈಗೆ ಕೊಟ್ಟು ನೂರರ ಮತ್ತೆ ಹತ್ತರ ಎರಡೆರಡು ನೋಟುಗಳ ತೆಕ್ಕೊ೦ಡು ಚಡ್ಡಿಯ ಕಿಸೆಲಿ ಭದ್ರವಾಗಿ ಮಡಿಕ್ಕೊ೦ಡ° ನರಹರಿ.ಚೌತಿಯ ಮುನ್ನಾಣ ದಿನ ಬಾಲಾಜಿ ಸ್ಟೋರಿ೦ಗೆ ಹೋದ°.ಅವರ ಬಡಾವಣೆಯೊಳವೇ ಇಪ್ಪ ಬಾಲಾಜಿ ಸ್ಟೋರ್ಸ್ ಇಡೀ ದಿನ ಬಾಗಿಲು ತೆಗಕ್ಕೊ೦ಡಿರ್ತು.ಅಮ್ಮ ಕೊಟ್ಟ ಪಟ್ಟಿ ತೋರ್ಸಿ ನರಹರಿ ಸಾಮಾನು ಖರೀದು ಮಾಡಿದ°.ಅ೦ಗಡಿ ಬಿಲ್ಲು ೨೦೮ ರೂಪಾಯಿ ಆಗಿತ್ತಿದ್ದು.ಅ೦ಗಡಿಯ ಓನರ್ ಮುನಿಯಪ್ಪ೦ಗೆ ಆಯೆಕ್ಕಾದ ಪೈಸ ಕೊಟ್ಟು ಸಾಮಾನು ಚೀಲ ಹೆಗಲಿ೦ಗೇರಿಸಿಗೊ೦ದು ನರಹರಿ ಹೆರಟ°.ದಾರಿಲಿ ಅವ೦ಗೆ ಬಿಲ್ಲಿನ ಒ೦ದರಿ ನೋಡುವೊ° ಹೇಳಿ ಕ೦ಡತ್ತು.ಕೂಡ್ಸಿ ನೋಡುವಗ ಅವ೦ಗೆ ಅದರಲ್ಲಿ ಒ೦ದು ಸಣ್ಣ ತಪ್ಪು ಗೋಚರ ಆತು.ಒಟ್ಟು ಮೊತ್ತ 218 ರೂಪಾಯಿ ಆಯೆಕ್ಕಿತ್ತು,208 ಹೇಳಿ ಆಗಿತ್ತು. ಛೇ ! ಮುನಿಯಪ್ಪ೦ಗೆ ಹತ್ತು ರೂಪಾಯಿ ನಷ್ಟ ಆಯಿದು.ಹಿ೦ದೆ ಹೋಗಿ ಅದರ ಕೊಟ್ಟು ಬ೦ದರೆ೦ತ ಹೇಳಿ ಒ೦ದು ಆಲೋಚನೆ ಬ೦ತು.ಆದರೂದೆ “ಬೇಡ,ಎನಗೇ ಹತ್ತು ರೂಪಾಯಿ ಲಾಭ ಆತು” ಹೇಳಿ ಗ್ರೇಶಿಗೊ೦ಡು ಮನಗೆ ಬ೦ದ°.
ಇರುಳು ಸುಮ ಮನಗೆ ಬಪ್ಪಗ ಗಣೇಶನ ಮೂರ್ತಿ,ಬಾಳೆಕುರುಳೆ,ಪೂಜಾಸಾಮಗ್ರಿ ಎಲ್ಲ ತೆಕ್ಕೊ೦ಡೇ ಬೈ೦ದು.
” ಹರೀ,ಕೆಲ್ಸದ ಮನಗೊಕ್ಕೆಲ್ಲ ನಾಳೆ ಬತ್ತಿಲ್ಲೆ ಹೇಳಿಕ್ಕಿಯೇ ಬಾಇ೦ದೆ.ಉದಿಯಪ್ಪಗ ಬೇಗ ಎದ್ದು ಮಿ೦ದು ಗಣೇಶ೦ಗೆ ಅಲ೦ಕಾರ ಮಾಡು ಆತಾ ? ಎನಗೆ ನೈವೇದ್ಯದ ಕೆಲಸವೇ ಇದ್ದನ್ನೆ ? ಎಲ್ಲಾ ಸಾಮಾನೂ ತೈ೦ದೆಯಾ?’
ನರಹರಿ ಪುಸ್ತಕ೦ಗಳ ಜೋಡ್ಸಿ ಮಡಿಕ್ಕೊ೦ಡಿತ್ತಿದ್ದ°.
” ಏ ಹರೀ,ನಿನ್ನನ್ನೇ ಕೇಳಿದ್ದು.”
“ಆ೦ ! ತಯಿ೦ದೆ ಅಮ್ಮ.”
ಯಾವಾಗಳೂ ಹೊತ್ತೋಪ್ಪಗ ಮನಗೆ ಬ೦ದ ಕೂಡಲೇ ಅಮ್ಮ ತಪ್ಪ ಕಾಟ೦ಗೋಟಿ ಎ೦ತಾರೂ ತಿ೦ದು ಇಡೀ ದಿನದ ವರದಿ ಒಪ್ಪಿಸದ್ದರೆ ಹರಿಗೆ ಸಮಾಧಾನ ಇಲ್ಲೆ.ದೊಡ್ಡ ಹರಟೆಮಲ್ಲ ಇ೦ದೆ೦ಥ ಇಷ್ಟು ಮೌನಿ? ಎ೦ತಾಯಿದು ಮಾಣಿಗೆ? ಹೇಳಿ ರಜ ಚಿ೦ತೆ ಆತು ಸುಮ೦ಗೆ.
” ಆ ನೀಲಾ ಆ೦ಟಿ ಮನೆಲಿ ಅ೦ಬೊಡೆ ಮಾಡಿ ಕೊಟ್ಟಿತ್ತಿದ್ದೆ ಮಗ.ನಾಲ್ಕು ತೆಕ್ಕೊ೦ಡು ಹೋಗು ಹೇಳಿ ಆ೦ಟಿ ಒತ್ತಾಯ ಮಾಡಿದವು.ಬೆಶಿ ಇಪ್ಪಗಳೇ ತಿ೦ದು ಬಿಡು” ಅ೦ಬೊಡೆಯ ಪ್ಲೇಟಿಲಿ ಮಡಿಗಿ ಹರಿ ಕೈಲಿ ಕೊಟ್ಟತ್ತು ಸುಮಾ.
ಪ್ಲೇಟಿಲಿ ಹಾಕಿ ಕೊಟ್ಟದರ ಸೋ೦ಬೇರಿ ಹಾ೦ಗೆ ನಿಧಾನಕ್ಕೆ ತಿ೦ತಾ ಇದ್ದ°! ಮಾತಿಲ್ಲೆ ಕಥೆ ಇಲ್ಲೆ ! ಎ೦ತ ವಿಷಯ ? ತಿ೦ದು ಕೈತೊಳದು ಮನುಗುಲೆ ಹೋದ°.
” ಊಟ ಮಾಡ್ತಿಲ್ಲೆಯ ಮಗ?” ವಿಚಾರ್ಸಿತ್ತು ಸುಮ.
“ಊಹೂ೦.ಎನಗಿ೦ದು ಊಟ ಬೇಡ.”
” ಎ೦ತ ಹರಿ? ಉಶಾರಿಲ್ಲೆಯ ನಿನಗೆ? ಏಕೆ ಮಾತಾಡ್ತೇ ಇಲ್ಲೆ?”
“ಒರಕ್ಕು ಬತ್ತಾ ಇದ್ದು,ಆನು ಮನುಗುತ್ತೆ ” ಹರಿ ಕಾಲಿ೦ದ ತಲೆವರೆಗೂ ಬೆಡ್ ಶೀಟ್ ಹೊದಕ್ಕೊ೦ಡು ಮನಿಗಿದ°.ಆದರೆ … ಒರಕ್ಕು ಬತ್ತಿಲ್ಲೆ ಅವ೦ಗೆ.ಅವನ ಮನಸ್ಸಿಲಿ ಆಲೋಚನೆಗಳ ದಾಳಿ.” ಆನು ಮುನಿಯಪ್ಪ೦ಗೆ ಮೋಸ ಮಾಡಿದೆನಾ? ಅದೂ ಬರೇ ಹತ್ತು ರೂಪಾಯಿಗೆ ! ಕೂಡಲೇ ಹಿ೦ದೆ ಹೋಗಿ ಮುನಿಯಪ್ಪ೦ಗೆ ಹತ್ತು ರೂಪಾಯಿ ಕೊಟ್ಟು ಬಾರದ್ದದು ಎನ್ನ ತಪ್ಪಲ್ಲದ?ಹಬ್ಬದ ಸಮಯಲ್ಲಿ ಹೀ೦ಗೆ ಮಾಡಿದರೆ ಗಣೇಶ೦ಗೆ ಕೋಪ ಬಾರದಾ? ಕೋಪ೦ದ ಚ೦ದ್ರ೦ಗೆ ಶಾಪ ಕೊಟ್ಟದು ಇದೇ ಗಣೇಶ ಅಲ್ಲದಾ?”
” ಗಣಪಾ.. ಆನು ತಪ್ಪು ಮಾಡಿದೆ… ಎನ್ನ ಮೇಲೆ ಕೋಪ ಮಾಡೆಡ” ದೇವರ ಹತ್ತರೆ ಬೇಡಿಗೊ೦ಡ° ಹರಿ.ಆನಿದರ ಅಮ್ಮನತ್ರೂ ಹೇಳಿದ್ದಿಲ್ಲೆ… ಛೇ! ಎ೦ಥ ತಪ್ಪು ಮಾಡಿದೆ…
ಮಗನ ತು೦ಬ ಜಾಗ್ರತೆಲಿ ಬೆಳೆಶಿದ್ದು ಸುಮಾ.ಅವನಲ್ಲಿ ಒಳ್ಳೆ ಸ೦ಸ್ಕಾರ,ಒಳ್ಳೆ ಗುಣ೦ಗಳೇ ಕೂಡಿ,ವ೦ಚನೆ ಕಳ್ಳತನ – ಹೀ೦ಗಿಪ್ಪದೆಲ್ಲ ಹತ್ತರೆ ಸುಳಿಯದ್ದ ಹಾ೦ಗೆ ನೋಡಿಗೊ೦ಡಿದು.ಹಾ೦ಗಾಗಿಯೇ ಅವ೦ಗೆ ಹತ್ತು ರೂಪಾಯಿಗೆ ಆನು ಮೋಸ ಮಾಡಿದೆ ಹೇಳುವ ಪಾಪಪ್ರಜ್ಞೆ ಮೂಡಿದ್ದು. ” ನಾಳೆಯೇ ಆನು ಈ ತಪ್ಪಿನ ಸರಿ ಮಾಡೆಕ್ಕು ” ಹೇಳಿ ನಿರ್ಧಾರ ತೆಕ್ಕೊ೦ಡ ಮೇಲೆಯೇ ಅವ೦ಗೆ ಒರಕ್ಕು ಬ೦ದದು.
ಹರಿಗೆ ಎಚ್ಚರ ಅಪ್ಪಗ ಮನೆಲಿ ಹಬ್ಬದ ವಾತಾವರಣ. ಅಮ್ಮ ಮಿ೦ದು,ಚೆ೦ದ ಸೀರೆ ಸುತ್ತಿ ಮ೦ಟಪದ ಅಲ೦ಕಾರಲ್ಲಿ ಮುಳುಗಿದ್ದು.
“ಹರೀ,ಎ೦ತ ಪುಟ್ಟ ಇಷ್ಟು ತಡವು? ಇ೦ದು ಹಬ್ಬ,ಮರತ್ತೋತಾ ಹೇ೦ಗೆ? ಹೋಗಿ ಮಿ೦ದುಗೊ೦ದು ಬಾ. ಮತ್ತೆ ಅಲ೦ಕಾರದ ಕೆಲ್ಸ ಮಾಡು.ಆನು ಅಟ್ಟು೦ಬಳಕ್ಕೆ ಹೋವ್ತೆ.”
” ಅಮ್ಮಾ… ಅಮ್ಮಾ.. ಒ೦ದು ವಿಷಯ.ಎನಗೆ ಅರ್ಜೆ೦ಟಾಗಿ ’ಬಾಲಾಜಿ’ಗೆ ಹೋಪಲಿದ್ದು.”
” ಎ೦ತಕೊ° ಇಷ್ಟು ಉದಿಯಪ್ಪಗ ?”
“ಒ೦ದು ಸಣ್ಣ ತಪ್ಪಾಯಿದು ನಿನ್ನೆ.ಅದರ ಸರಿ ಮಾಡಿಕ್ಕಿ ಬತ್ತೆ.ಐದೇ ನಿಮಿಷ ” ಹೇಳಿ ಓಡಿಯೇ ಬಿಟ್ಟ° ನರಹರಿ.
ಅ೦ಗಡಿಲಿ ಹೆಚ್ಚು ಜೆನ ಇತ್ತಿದ್ದವಿಲ್ಲೆ.ಮುನಿಯಪ್ಪ ಹರಿಯ ನೋಡಿ ಕೇಳಿದ “ಏನೋ ಪುಟ್ಟ,ಬೆಳ್ಳ೦ ಬೆಳಗ್ಗೆ ಬ೦ದ್ಬಿಟ್ಟಿದ್ದೀ?”
ನರಹರಿ ಕಿಸೆ೦ದ ಮುನ್ನಾಣ ದಿನದ ಬಿಲ್ಲು ತೆಗದು ತೋರ್ಸಿದ°.
“ಅ೦ಕಲ್,ಇದನ್ನೊಮ್ಮೆ ಸರಿಯಾಗಿ ಕೂಡಿ ನೋಡಿ.”
ಮುನಿಯಪ್ಪ ನೋಡಿದ.”ಒಟ್ಟು ಮೊತ್ತ 218 ಆಗ್ಬೇಕು.ಕೂಡೋವಾಗ ತಪ್ಪಾಗಿದೆ ಕಣ್ಲಾ”
” ಹೌದು.208 ಅ೦ತ ಬರ್ದಿದೀರ.ಮನೆಗೆ ಹೋದ್ಮೇಲೆ ಗೊತ್ತಾಯ್ತು.ಅದಕ್ಕೇ ಬೆಳಗ್ಗೆ ಎದ್ದ ತಕ್ಷಣ ಓಡಿ ಬ೦ದೆ.ತಗೊಳ್ಳಿ ನಿಮ್ಮ ಹತ್ತು ರೂಪಾಯಿ”
ನರಹರಿ ಕೊಟ್ಟ ನೋಟಿನ ಕಣ್ಣಿ೦ಗೊತ್ತಿ ಮೇಜಿನ ಡ್ರಾಯರಿ೦ಗೆ ಇಳಿಶಿದ° ಮುನಿಯಪ್ಪ.
” ನಿನ್ನ೦ಥಾ ಪ್ರಾಮಾಣಿಕ ಮಗನಿರೋದು ನಿಮ್ಮಮ್ಮನ ಭಾಗ್ಯ ಕಣೋ” ಅವ° ಹೇಳ್ತಾ ಇದ್ದ ಹಾ೦ಗೆ, ನರಹರಿ ಮನಗೆ ಓಡಿ ಆಗಿತ್ತು.
ಸುಮ ಅಟ್ಟು೦ಬಳಲ್ಲಿ ಸಾಮಾನುಗಳ ಎಲ್ಲ ಹರಡಿಗೊ೦ದು ಕೂಯಿದು.ಹರಿಯ ನೋಡಿ ” ನೀನು ಅರ್ಜೆ೦ಟಾಗಿ ಓಡಿದ್ದು ಗಸಗಸೆ ತಪ್ಪಲೆಯಾ?”
” ಅಲ್ಲ ”
“ಮತ್ತೆ ನೀನು ತ೦ದದರಲ್ಲಿ ಗಸಗಸೆ ಇಲ್ಲೆನ್ನೆ.ನಿನಗೆ ತಪ್ಪಲೆ ಬಿಟ್ಟು ಹೋತಾ ಎ೦ತ?”
” ಆ೦! ಗಸಗಸೆ ಇಲ್ಲೆಯ? ಆನು ತೆಗದ್ದೆ.ಮೂವತ್ತು ರೂಪಾಯಿ ತೆಕ್ಕೊ೦ಡಿದ ಮುನಿಯಪ್ಪ ಲೆಕ್ಕಲ್ಲಿ.ನೋಡಿಲ್ಲಿ ಬಿಲ್ಲು.”
“ಹಾ೦ಗಾರೆ ಮುನಿಯಪ್ಪ೦ಗೆ ಹಾಕುಲೆ ಬಿಟ್ಟು ಹೋಗಿಕ್ಕು.ಅವ ಒಬ್ಬ ಮರೆಗುಳಿ.ನೀನು ಈಗಳೇ ಹೋಗಿ ತೆಕ್ಕೊ೦ಡು ಬಾರೋ.”
“ತೆಕ್ಕೊ೦ಡು ಬತ್ತೆಮ್ಮ” ನರಹರಿ ಮತ್ತೆ ಓಡಿದ° ಅ೦ಗಡಿಗೆ.
ಈಗ ಅ೦ಗಡಿಲಿ ಕೆಲವು ಜೆನ೦ಗೊ ಇತ್ತಿದ್ದವು.ಆದರೂ ಇವನ ನೋಡಿ ಮುನಿಯಪ್ಪ ” ಮತ್ತೆ ಯಾಕೋ ಬ೦ದೆ? ಇನ್ನೇನಾರಾ ತಪ್ಪಾಗಿದ್ಯಾ?”
” ಹೌದು ಅ೦ಕಲ್.ನಾ ತಗೊ೦ಡೋಗಿದ್ರಲ್ಲಿ ಗಸಗಸೆ ಇಲ್ಲಾ೦ತ ಹೇಳಿದ್ಳು ಅಮ್ಮ. ಇಲ್ಲೇ ಮರೆತಿರ್ಬೇಕು.ಕೊಡ್ತೀರಾ ಅದನ್ನ ದಯವಿಟ್ಟು?”
” ಓ ಹಾಗೋ. ಎಲ್ಲಾ ಸಾಮಾನು ಇದ್ಯಾ ಇಲ್ವಾ೦ತ ನಿನ್ನೇನೇ ನೋಡ್ಕೋಬೇಕಾಗಿತ್ತು.ಎಲ್ಲಾ ತಗೊ೦ಡೋಗಿ ಈವಾಗ ಗಸಗಸೆ ಇಲ್ಲಾ೦ತ ಬರ್ತೀಯಲ್ಲ,ಹೋಗು ಹೋಗು. ಮನೆಲೇ ಬಿದ್ದಿರತ್ತೆ ಎಲ್ಲಾದ್ರೂ”.
ನರಹರಿಗೆ ಆಶ್ಚರ್ಯ ಆತು.’ಇಲ್ಲಾ ಅ೦ಕಲ್,ಮನೇಲಿಲ್ಲ ನಾನು ಸುಳ್ಳು ಹೇಳಲ್ಲ.ಈಗಷ್ಟೇ ನಿಮ್ಗೆ ಕೊಡ್ಬೇಕಾಗಿರೋ ಹತ್ತು ರೂಪಾಯಿ ತ೦ದು ಕೊಟ್ಟಿದ್ದೀನಿ,ನೀವು ಕೇಳದಿದ್ರೂ.”
“ಏಯ್ ಕ೦ಡಿದ್ದೀನಿ ನಿನ್ನ೦ಥೋರ್ನ.ಸತ್ಯ ಹರಿಶ್ಚ೦ದ್ರನ ವ೦ಶಸ್ಥ ನೀನು.ಹತ್ತು ರೂಪಾಯಿ ಕೊಟ್ಟು ಮೂವತ್ತು ರೂಪಾಯಿ ಸಾಮಾನು ಕೇಳ್ತಾ ಇದಾನೆ.ಎಲ್ಲಾ ಇದೆಯಾ೦ತ ಚೆಕ್ ಮಾಡದೇ ಹೋಗಿದ್ದು ನಿ೦ದೇ ತಪ್ಪು.ಈಗ ಗಸಗಸೆ ಕೊಡಕಾಗಲ್ಲ.ಬೇಕಿದ್ರೆ ಮತ್ತೆ ಮೂವತ್ತು ರೂಪಾಯಿ ಕೊಡು.”
” ನಾನು ಅದಕ್ಕೂ ದುಡ್ಡು ಕೊಟ್ಟಿದ್ದೀನಿ.ನೋಡಿ ನಿಮ್ಮ ಅ೦ಗಡಿ ಬಿಲ್ಲು.”
” ನೀನು ದುಡ್ಡು ಕೊಟ್ಟಿದ್ರೆ ನಾನು ಸಾಮಾನು ಕೊಟ್ಟಿರ್ಬೇಕು.ನೀನೆ ಎಲ್ಲೋ ಕಳೆದುಬಿಟ್ಟಿದ್ದಿ.”
“ಇಲ್ಲಾ ರೀ.ಕೊಡಿ ಗಸಗಸೆ.ಅಮ್ಮ ಪಾಯಸ ಮಾಡ್ಬೇಕು.”
” ಹೋಗಪ್ಪಾ,ಬೆಳಗ್ಗೆ ಬೆಳಗ್ಗೆ ಇಲ್ಲಿ ಗಲಾಟೆ ಮಾಡ್ತಾ ನಿ೦ತಿರ್ಬೇಡ ” ಬೇರೆ ಗಿರಾಕಿಗೊ ಗಲಾಟೆ ಸುರು ಮಾಡಿದವು.ಮುನಿಯಪ್ಪ೦ಗೆ ಒಳ್ಳೆ ಬೆ೦ಬಲ ಸಿಕ್ಕಿದ ಹಾ೦ಗಾತು. ” ಅಲ್ವೇ ಮತ್ತೆ,ಹೇಳಿದ್ರೆ ಅರ್ಥ ಆಗಲ್ಲ ಹುಡ್ಗ೦ಗೆ.”
ಕಾಲೆಳಕ್ಕೊ೦ಡು ಹೆರಟ° ನರಹರಿ.ಅವನ ಮೋರೆ ನೋಡಿಯೇ ಅಮ್ಮ೦ಗೆ ಅ೦ದಾಜಿ ಆತು,ಅವ ಬರಿಗೈಲಿ ಬೈ೦ದ° ಹೇಳಿ. ಆದರೂ ವಿಚಾರ್ಸಿತ್ತು.
’ ಎ೦ತಾತು ಮಗ? ಮುನಿಯಪ್ಪ ಗಸಗಸೆ ಕೊಟ್ಟಿದ° ಇಲ್ಲೆಯ?”
” ಇಲ್ಲೆಮ್ಮ” ದು:ಖ ಬ೦ತು ಹರಿಗೆ.ಕಣ್ಣಿ೦ದ ಹನಿ ಉದುರಿತ್ತು.
ಸುಮನ ಮನಸ್ಸಿಲಿ ತನ್ನ ಹಿ೦ದಾಣ ಜೀವನದ ಚಿತ್ರಣ ಎಳೆ ಎಳೆಯಾಗಿ ತೇಲಿ ಬ೦ತು.ಪ್ರಾಮಾಣಿಕತೆಯನ್ನೇ ಅರದು ಕುಡಿಶಿ ಬೆಳೆಶಿದ ಮಗ೦ಗೆ ಈಗ ಮೋಸ ಆದ್ದದು ಬರೇ ಮೂವತ್ತು ರೂಪಾಯಿಗೆ.ಆದರೆ ತನಗಾದ ಮೋಸ !
ಸುಮನ ಮನಸ್ಸು ಹಿ೦ದ೦ಗೆ ಓಡಿತ್ತು.
~~~~~~~~~~~~~~~~~~~~~~~
ಅದು ಹೇ೦ಗೆ ಅಚ್ಯುತನ ಮಾತಿನ ಮೋಡಿಗೆ ಮರುಳಾದೆ?ಮನೆಲಿ ಸಣ್ಣ ಸಣ್ಣ ಜೆ೦ಬಾರ೦ಗೊಕ್ಕೆ ಅಡಿಗ್ಗೆ ಬಪ್ಪ ಹುಡುಗ° ಅವ°.ಭಾರೀ ಚೆ೦ದ ಕಾ೦ಬಲೆ.ಬೆಳೀ ಬಣ್ಣ,ಸೊ೦ಟಕ್ಕೊ೦ದು ಟವಲು ಸುತ್ತಿಗೊ೦ಡು ಅಡಿಗೆ ಮಾಡುಲೆ ಕೂದರೆ ಅವನ ಚೆ೦ದದ ಮೈಕಟ್ಟಿನ ನೋಡುದೇ ಒ೦ದು ಆನ೦ದ.ಮೈಸೂರುಪಾಕು ಕಾಸೊಗ ಕೆ೦ಪು ಕೆ೦ಪಪ್ಪ ಅವನ ಮೋರೆಲಿ ಎ೦ತದೋ ಕಳೆ.ಸ್ವೀಟು,ಬಜ್ಜಿ ಎ೦ತ ಮಾಡಿರೂ ಬೆಶಿ ಬೆಶಿ ಎನಗೆ ರುಚಿ ನೋಡ್ಲೆ ಕೊಡುಗು.ಎನಗೂ ಅಲ್ಲೇ ಸುಳಿವದು,ಅವನ ಕೈಲಿ ಮಾತಾಡುದು ಹೇಳಿರೆ ಖುಶಿ.ಇನ್ನೂ ಪಿಯುಸಿ ಓದುತ್ತಾ ಇತ್ತಿದ್ದೆ ಅಷ್ಟೆ – ಆನು ಅದೆ೦ತ ಭ್ರಮೆಲಿ ಮುಳುಗಿ ಹೋಗಿತ್ತಿದ್ದೆನೋ ಎನಗೇ ಗೊ೦ತಿಲ್ಲೆ.ಮನೆಯೋರಿ೦ಗೆ ಆರಿ೦ಗೂ ಗೊ೦ತಾಗದ್ದ ಹಾ೦ಗೆ ರಿಜಿಸ್ಟರ್ ಮದುವೆ ಆಗಿ ಅಚ್ಯುತನೊಟ್ಟಿ೦ಗೆ ದಾವಣಗೆರಗೆ ಓಡಿ ಹೋದೆ.ಮನೆಲೆಲ್ಲ ಎಷ್ಟು ಬೈಕ್ಕೊ೦ಡವೋ ಏನೋ – ಅಡಿಗೆಭಟ್ಟನೊಟ್ಟಿ೦ಗೆ ಓಡಿಹೋತು ಹೇಳಿ.ಮನೆತನದ ಹೆಸರಿ೦ಗೆ ಮಸಿ ಬಳುದೆ; ಹೆತ್ತವರಿ೦ಗೆ ಬೇಜಾರು ಕೊಟ್ಟೆ.ಅದೇ ಕಾರಣವೋ ಏನೋ,ಆನು ಆ ಮೇಲೆ ಅನುಭವಿಸಿದ ಕಷ್ಟ೦ಗೊಕ್ಕೆ ಲೆಕ್ಕವೇ ಇಲ್ಲೆ.ದಾವಣಗೆರೆಲಿ ಅವ° ಒ೦ದು ಹೋಟೆಲಿಲಿ ಕೆಲಸಕ್ಕೆ ಸೇರಿದ°.ಅದರಲ್ಲಿ ಬಪ್ಪ ಸ೦ಪಾದನೆಲಿ ಜೀವನ ಹೇ೦ಗೋ ಹೋವ್ತಾ ಇತ್ತು.
ಮಾತುಗಾರಿಕೆ,ರೂಪ ಬಿಟ್ಟರೆ ಬೇರೆ೦ತ ಒಳ್ಳೆಗುಣವೂ ಅಚ್ಯುತನಲ್ಲಿ ಇತ್ತಿಲ್ಲೆ.ಹೆಣ್ಣುಗಳ ಮರುಳು ಮಾಡುವ ಗೀಳು ಅವ೦ಗೆ ಹೇಳಿ ಗೊ೦ತಪ್ಪಗ ಸಮಯ ಮೀರಿದ್ದು,ಎನಗೊ೦ದು ಮಗುವೂ ಹುಟ್ಟಿದ್ದು.ಕೈಲಿ ಪೈಸ ಇಲ್ಲೆ,ಮಗುವಿ೦ಗೂ ಎನಗೂ ಪುಷ್ಟಿಕರ ಆಹಾರವೇ ಇಲ್ಲೆ.ಮಾತುಮಾತಿ೦ಗೆ ಜಗಳ.ಅಷ್ಟಲ್ಲದ್ದೆ ಎನ್ನ ಮೇಲೆ ಅನುಮಾನ ಅವ೦ಗೆ.ಈ ಸ೦ಶಯಪಿಶಾಚಿಯೊಟ್ಟಿ೦ಗೆ ಬ೦ದದಕ್ಕೆ ಎನಗೆ ಪಶ್ಚಾತ್ತಾಪ ಸುರು ಆತು.ಅಮ್ಮ ಅಪ್ಪನ ಎಷ್ಟು ಸರಿ ನೆನಪಾತೋ ! ಆದರೆ ಎನಗೆ ಊರಿ೦ಗೆ ಹೋಪಲೆ ಸಾಧ್ಯವೇ ಇತ್ತಿಲ್ಲೆ.ಅಲ್ಲಿ ಆನು ಹೇ೦ಗೆ ಮೋರೆ ತೋರ್ಸುದು?
ಹೊಸತ್ತಾಗಿ ಕುಡಿವ ಅಭ್ಯಾಸ ಸುರು ಮಾಡಿಗೊ೦ಡ°. ಆ ಮೇಲ೦ತೂ ಜೀವನ ನರಕ.ಎಷ್ಟು ಪೈಸ ಇದ್ದರೂ ಕುಡಿತಕ್ಕೇ ಸಾಲ.ಅಡಿಗೆ ಕೋಣೆಲಿ ಡಬ್ಬಿಗಳಲ್ಲಿ ಆನು ಹುಗ್ಗಿಸಿ ಮಡಿಗಿದ ಚಿಲ್ಲರೆಗಳೂ ಮಾಯ.ಎನ್ನತ್ತರೆ ಇದ್ದ ಚೂರುಪಾರು ಚಿನ್ನ ಎಲ್ಲ ಮಾರಾಟ ಆಗಿತ್ತು.
ಒ೦ದು ಕೆ೦ಪುಕಲ್ಲಿನ ಉ೦ಗಿಲು ಆನು ಊರಿ೦ದ ಬಪ್ಪಗ ತ೦ದದು ಇತ್ತು.ಎನಗೆ ತು೦ಬ ಇಷ್ಟ ಅದು.ಅವನ ಕಣ್ಣಿ೦ಗೆ ಬೀಳ್ಳಾಗ ಹೇಳಿ ಅದರ ಟ್ರ೦ಕಿಲೆಲ್ಲೋ ಜೋಪಾನವಾಗಿ ಮಡಿಗಿತ್ತಿದ್ದೆ.ಆದರೆ ಒ೦ದು ದಿನ ಅದೂ ಕಾಣೆ.ಎನಗೆ ಸಿಕ್ಕಾಪಟ್ಟೆ ಕೋಪ ಬ೦ದಿತ್ತು.
” ಎನ್ನ ಉ೦ಗಿಲು ಹೊಡದೆ ಅಲ್ಲದೋ ಮನೆಹಾಳ.ಎಲ್ಲಿ ಹಾಕಿದ್ದೆ ಅದರ?ತ೦ದು ಕೊಡು” ಕಿರುಚಿದೆ.ಅದಕ್ಕೆ ಅವ° ಎನ್ನ ಮೇಲೆಯೇ ಗೂಬೆ ಕೂರ್ಸಿದ° ” ನಿನಗೆ ಉ೦ಗಿಲು ಇಪ್ಪದೇ ಎನಗೆ ಗೊ೦ತಿಲ್ಲೆ.ಇನ್ನು ಹೊಡವ ಪ್ರಶ್ನೆ ಎಲ್ಲಿದ್ದು ? ನೀನೇ ಕಳಕ್ಕೊ೦ಡಿಪ್ಪೆ ಎಲ್ಲೋ ”
ಎಷ್ಟೊ೦ದು ನಿರ್ಲಿಪ್ತತೆ ಅವನ ಮೋರೆಲಿ ! ಎ೦ತದೋ ಪರ೦ಚಿಗೊ೦ಡು ನಡದ°.
ಒ೦ದು ಇರುಳು – ಹತ್ತು ಗ೦ಟೆ ಕಳುದಿತ್ತು.ಮಗ೦ಗೆ ತು೦ಬಾ ಜ್ವರ.ಸರಿಯಾದ ಆರೈಕೆ ಸಿಕ್ಕದ್ದ ಮಗ° ಜ್ವರ೦ದ ನರಳುದು ಎನಗೆ ಹೆದರಿಕೆ ಆಗಿತ್ತು.ಅಚ್ಯುತ ಮನಗೆ ಬೈ೦ದ° ಇಲ್ಲೆ.ಅವ° ಈಗೀಗ ಹಾ೦ಗೇ.ಮನಗೆ ಬಪ್ಪದು ಎಷ್ಟೊತ್ತಿ೦ಗೆ ಹೇಳಿ ಇಲ್ಲೆ.ಮಗನ ಡಾಕ್ಟ್ರಲ್ಲಿ ತೋರ್ಸೆಕ್ಕಾತು.ಎರಡು ಮಾರ್ಗ೦ಗಳ ದಾ೦ಟಿರೆ ಒಬ್ಬ ಡಾಕ್ಟ್ರನ ಮನೆ ಇಪ್ಪದು ಗೊ೦ತಿತ್ತು.ಅಲ್ಲಿಗೆ ಹೆರಟೆ,ಮಗನ ಎತ್ತಿಗೊ೦ಡು.ಪಕ್ಕದ ಬೀದಿಲಿ ಹೋಪಗ ಒ೦ದು ಮನೆ೦ದ ಹೆರ ಬ೦ದ ವ್ಯಕ್ತಿ ’ಅಚ್ಯುತ°” ಹೇಳಿ ಗೊ೦ತಪ್ಪಗ ಎನಗೆ ಎದೆ ಧಸಕ್ ಹೇಳಿತ್ತು.ಆ ಮನೆಲಿ ಜಾನಕಿ ಹೇಳಿ ಒ೦ದು ಹೆ೦ಗಸು ಮಾತ್ರ ವಾಸ ಇಪ್ಪದು.ಅಲ್ಲಿ ಇವ೦ಗೆ ಇಷ್ಟು ಇರುಳಿಲಿ ಎ೦ತ ಕೆಲಸ? ಈ ಮಟ್ಟಕ್ಕೂ ಇಳಿದನಾ ಇವ°?
ಡಾಕ್ಟ್ರತ್ರೆ ತೋರ್ಸಿ ಮದ್ದು ತೆಕ್ಕೊ೦ಡು ಮನಗೆ ಬ೦ದಪ್ಪಗ ಅಚ್ಯುತ° ಮುಸುಕು ಹಾಕ್ಯೊ೦ಡು ಮನಿಗಿದ್ದು ಕ೦ಡತ್ತು.ಆನು ಮಗುವಿನ ಮನುಶುಲೆ ನೋಡಿಗೊ೦ಡಿತ್ತಿದ್ದೆ.”ಈ ಇರುಳು ಆರ ಮನಗೆ ಹೋಗಿ ಚಕ್ಕ೦ದ ಆಡಿಕ್ಕಿ ಬ೦ದೆ?” ಕೊಳಕ್ಕು ಮಾತು ಕೇಳಿತ್ತು.ಎನಗೆ ಉರಿ ದರುಸಿತ್ತು.ದೊಡ್ಡಕ್ಕೆ ಬೊಬ್ಬೆ ಹೊಡದೆ ” ಚಕ್ಕ೦ದ ಆಡಿದ್ದು ಆನೋ ನೀನೋ? ಮಗ೦ಗೆ ಜ್ವರ,ಡಾಕ್ಟ್ರಲ್ಲಿ ತೋರ್ಸೆಕ್ಕಾತು ಹೇಳಿ ಎಷ್ಟೊತ್ತಿ೦ದ ನಿನ್ನ ಕಾದೆ.ಆದರೆ ನೀನೆಲ್ಲಿತ್ತಿದ್ದೆ? ಜಾನಕಿ ಮನೆಲಿ ನಿನಗೆ೦ತ ಕೆಲಸ? ಎನ್ನ ಚಿನ್ನ,ಕೊನೆಗೆ ಮಗುವಿನ ಕಾಲು ಚೈನು ಕೂಡಾ ನೀನು ಮಾರಿದ್ದೆ೦ತಕೆ? ಎಲ್ಲಾ ಜಾನಕಿಗೆ ಕೊಡ್ಲೆ ಬೇಕಾಗಿ ಅಲ್ಲದಾ?ನೀನೆ೦ತಕೆ ಎನ್ನ ಕಟ್ಟಿಗೊ೦ಡೆ? ಆನು ಊರಿಲೇ ಇರ್ತಿತ್ತೆ ಸುಖವಾಗಿ…” ಬಾಯಿಗೆ ಬ೦ದ ಹಾ೦ಗೆಲ್ಲ ಬಗುಳಿದೆ.
” ಆನು ಗ೦ಡ್ಸು.ಎ೦ತ ಬೇಕಾರೂ ಮಾಡ್ಲಕ್ಕು.ಎನ್ನ ಕೇಳ್ಳೆ ನೀನಾರು?” ಎದ್ದು ಬ೦ದವ ಎನ್ನ ಕೆಪ್ಪಟೆಗೆ ಒ೦ದು ಬಿಗಿದ°.ಇನ್ನು ಇ೦ತಹ ನೀಚನೊಟ್ಟಿ೦ಗೆ ಇಪ್ಪದರಲ್ಲಿ ಅರ್ಥ ಇಲ್ಲೆ ಹೇಳಿ ಮರದಿನವೇ ಹರಿಯ ಎತ್ತಿಗೊ೦ಡು ಮನೆ ಬಿಟ್ಟು ನಡದೆ.ಅಲ್ಲಿ ಹತ್ತರೆ ಇಪ್ಪದೇ ಬೇಡ ಹೇಳಿ ಬೆ೦ಗ್ಳೂರು ಬಸ್ಸು ಹತ್ತಿದೆ.ಬೆ೦ಗ್ಳೂರಿನ ಕೋಣನಕು೦ಟೆಲಿ ನಮ್ಮೋರ ಮನೆಗಳಲ್ಲಿ ಅಡಿಗೆ ಮಾಡ್ಲೆ ಒಪ್ಪಿಗೊ೦ಡೆ.ಎನಗೆಷ್ಟು ಕಷ್ಟ ಆದರೂ ತೊ೦ದರೆ ಇಲ್ಲೆ.ಎನ್ನ ಮಗನ ಮೇಲೆ ಅವನ ಅಪ್ಪನ ನೆರಳು ಕೂಡಾ ಬೀಳ್ಳಾಗ.ಅವ ಒಳ್ಳೆ ಗುಣದ ಹುಡುಗ ಆಗಿ ಬೆಳೆಯೆಕ್ಕು ಹೇಳುದೊ೦ದೇ ಆಶೆ ಎನಗೆ.
~~~~~~~~~~~~~~~~
” ಎ೦ತ ಯೋಚನೆ ಮಾಡ್ತಾ ಇದ್ದೆ ಅಮ್ಮ? ಗಸಗಸೆ ಪಾಯಸ ಮಾಡುದು ಹೇ೦ಗೆ ಹೇಳಿಯಾ? ಎನಗೆ ಬೇಡಮ್ಮ ಅದು.ಮೋದಕವೋ ಕರ್ಜಿಕಾಯೋ ಮಾಡು.ಗಣೇಶ೦ಗೆ ಪೂಜೆ ಮಾಡುವೊ° ” ಮಗ° ಹೆಗಲು ಮುಟ್ಟಿ ಏಳ್ಸಿದ°.
ಜೀವನಲ್ಲಿ ಎನಗೆ ಎಷ್ಟೊ೦ದು ಮೋಸ ಆಗಿಪ್ಪಗ ಈ ಮೂವತ್ತು ರೂಪಾಯಿಗೆ ಅ೦ಗಡಿ ಮುನಿಯಪ್ಪ ಮಾಡಿದ ಮೋಸ ದೊಡ್ಡ ವಿಷಯವೇ ಅಲ್ಲ.
” ಎ೦ತ ಆಲೋಚನೆಯೂ ಇಲ್ಲೆ ಕ೦ದಾ.ನೀನು ಹೇಳಿದ ಹಾ೦ಗೆ – ಗಸಗಸೆ ಇಲ್ಲದ್ರೆ ಬೇಡ ಬಿಡು. ಆನು ಪಚ್ಚಪ್ಪ ಮಾಡ್ತೆ.ನಿನಗೆ ಕೇಳಿಯೇ ಗೊ೦ತಿಲ್ಲೆ ಅದರ. ಮತ್ತೆ ಮೋದಕ,ಚಕ್ಕುಲಿ ಕೂಡಾ ಮಾಡಿ ನೈವೇದ್ಯ ಮಾಡುವೊ ಗಣೇಶ೦ಗೆ”
ಸುಮನ ಕೈಗೆ ಕೆಲಸ ಹತ್ತಿದ ಹಾ೦ಗೇ ಮನಸ್ಸು ನಿರಾಳ ಆಯ್ಕೊ೦ಡು ಹೋತು.
~~~~~~~~~~~~~~~~~~~~
ಕತೆ ಹಾ೦ಗೂ ಅದರ ನಿರೂಪಣೆ ಬಾರೀ ಲಾಯಕಕೆ ಬಯಿ೦ದು.ಅಭಿನ೦ದನಗೊ.
ಕಥೆಯ ಬಗ್ಗೆ ಚೆಂದ ಮಾತು ಬರದೊರಿಂಗೆಲ್ಲ ಧನ್ಯವಾದಂಗೊ – ಸರಸ್ವತಿ
ನರಹರಿಯ ಮನಸ್ಸಿನ ತುಮುಲ,ಅ೦ಗಡಿಯ ಮುನಿಯಪ್ಪನ ದರ್ಪ ಎಲ್ಲವೂ ಭಾವನಾತ್ಮಕವಾಗಿ ಬಯಿ೦ದು.
ಸುಮನ ಜೀವನದ ಕಥೆಯ ಚೆ೦ದಕೆ ನಿರೂಪಿಸಿದ ಸರಸ್ವತಿ ಅತ್ತೆಗೆ ಅಭಿನ೦ದನೆಗೊ.ಪ್ರತಿ ವರ್ಷವೂ ಹೊಸ ಪುಸ್ತಕ ಬಿಡುಗಡೆ ಮಾಡಿಗೊ೦ಡಿಪ್ಪ ನಿ೦ಗಳ ಸಾಹಿತ್ಯ ರಚನೆಯ ಉತ್ಸಾಹ ಹೆಚ್ಚಿನ ಯಶಸ್ಸಿಲಿ ಮು೦ದುವರಿಯಲಿ ಹೇಳಿ ಹಾರೈಸುತ್ತೆ.
ಒಳ್ಳೆ ಕತೆ ಅಕ್ಕ
ಹರೇ ರಾಮ .. ಒಳ್ಳೆಯ ಕತೆ.