- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2015 ರ ಕಥಾ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕ ಶ್ರೀ ಲಕ್ಷ್ಮೀ ಮಚ್ಚಿನ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
ನಿ ಹಿಂಗ ನೋಡಬ್ಯಾಡ ನನ್ನ..
ನಿ ಹಿಂಗ ನೋಡಬ್ಯಾಡ ನನ್ನ.. ದೂರಲ್ಲಿ ಮಡುಗಿದ ರೇಡಿಯಲ್ಲಿ ಸಣ್ಣಕ್ಕೆ ಪದ್ಯ ಕೇಳಿಗೊಂಡಿತ್ತು.
ಈಗೀಗ ಪಾಚತ್ತೆಗೆ ಎಷ್ಟು ಕೆಮಿ ಕೇಳ್ತು ಹೇಳಿ ಇಡೀ ಊರಿಂಗೆ ಗೊಂತಿದ್ದು. ಇತ್ತಿತ್ಲಾಗಿ ಏನೂ ಜ್ಞಾನ ಇಲ್ಲದ್ದ ಹಾಂಗೆ ಮಾಡ್ತು. ಎಷ್ಟು ಸರ್ತಿ ಹೇಳಿದರೂ ತಲೆಗೆ ತೆಕ್ಕೊಳ್ತಿಲ್ಲೆ. ಕೇಳದ್ದ ಹಾಂಗೇ ಮಾಡ್ತು. ಮೊನ್ನ ಒಪ್ಪಣ್ಣ ಭಾವನ ಮನೆಲಿ ತಿಥಿ ಊಟಕ್ಕೆ ಹೋದ ಜನ ಬಾರ್ಸದ ಮಾಣಿಯ ಎಲ್ಲಿ ಮನುಗಿಸಿದ್ದಿ ಹೇಳಿ ಕೇಳಿದ್ದು. ಅದೇ ದಿನ ಪಾಯ್ಸ ಉಂಬಗ ಅದಕ್ಕೆ ಉಪ್ಪಿನಕಾಯಿ ಬೆರುಶಿ ತಿಂದುಗೊಂಡು ಪಾಯಸಕ್ಕೆ ಉಪ್ಪು ಕಮ್ಮಿ ಹೇಳಿ ಅಡುಗೆಯವಕ್ಕೆ ಹೋಗಿ ಬದಿಕ್ಕಿದೆ ಬಂದಡ. ಹಾಂಗಾಗಿ ಅದರ ಉಸಾಬರಿಯೇ ಬೇಡ ಹೇಳಿ ಎಲ್ಲರೂ ಕೂಯಿದವು.
ನಿ ಹಿಂಗ ನೋಡಿದರೆ ನನ್ನ . . ತಿರುಗಿ ನಾ ಹೆಂಗ ನೋಡಲಿ ನಿನ್ನ. . ಪದ್ಯ ಅದರಷ್ಟಕ್ಕೇ ಆಯಿಕ್ಕೊಂಡಿತ್ತು. ಹತ್ತರೆ ಮಡುಗಿದ ಹಳೆ ಮೊಬೈಲಿನ ಕೈಲಿ ತೆಕ್ಕೊಂಡು ನೋಡಿತ್ತು. ಎಂತ ಕಂಡತ್ತಿಲ್ಲೆ. ಒತ್ತಿ ನೋಡಿತ್ತು. ಬೆಣಚ್ಚಿ ಬಂತು. ಅಂಬಗ ಬೆಟ್ರಿ ಮುಗುದ್ದಿಲ್ಲೆ. ಸರಿ ಇದ್ದೊಗೊಡೆಗೆ ಹೇಳಿ ಗ್ರೇಶಿತ್ತು.
ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ, ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲಿ ಆಚೆಯ ದಂಡಿ . .
ಪದ್ಯ ಆಯ್ಕೊಂಡೇ ಇತ್ತು. ಕೆದೆಂದ ಕಪಿಲೆ ಉಂಬಾ ಹೇಳಿ ದಿನಿಗೇಳುದುದೇ ಪಾಚತ್ತೆ “ಬಂದೆ ಮಗಳೇ ..”ಹೇಳಿ ಕೆದಗೆ ಹೋಪದುದೇ ಸರಿ ಆಯಿದು. ಆದರೆ ಅಲ್ಲಿ ಹೋಗಿ ನೋಡಿದರೆ ಕಪಿಲೆ ಇಲ್ಲೆ. ಮನುಗಿದ್ದ ಹೇಳಿ ಜಾನ್ಸಿ ಬಗ್ಗಿದರೆ ಅಲ್ಲೂ ಇಲ್ಲೆ. ಬಳ್ಳಿ ಬಿಡಿಸಿಗೊಂಡು ಹೋದಿಕ್ಕಾ ಹೇಳಿ ಲೆಕ್ಕ ಹಾಕಿತ್ತು.
…
ಅವನ ಎಲ್ಲರುದೇ ಅಕ್ಕಚ್ಚು ಭಾವ ಹೇಳಿಯೇ ದಿನುಗೆಳುದು. ಎಂತಕೆ ಹೇಳಿದರೆ ಅವಂಗೆ ದನ ಸಾಂಕುದು ಹೇಳಿದರೆ ಭಾರೀ ಪ್ರೀತಿ. ಎಲ್ಲಿಗಾದರೂ ಊಟಕ್ಕೆ ಹೋದರೆ ಅಲ್ಲಿಂದ ಒಂದು ಕಟ್ಟ ಹುಲ್ಲು ತೆಕ್ಕಂಡು ಬಕ್ಕು. ಆಚೀಚ ಮನೆಯ ಅಕ್ಕಚ್ಚು ಅದು ಅವಂಗೇ. ಆ ನೇವಸದ ಎದೆಯ ತೆಕ್ಕೊಂಡು, ಊರಿಡಿ ಸುಂಯ್ ಸುಂಯ್ ಹೇಳಿ ಉಸುರು ತೆಗಕ್ಕೊಂಡು ದಿನಾ ಹೋಗಿ ಉದಿಯಪ್ಪಗಳೇ ಬಾಲ್ದಿ ಹಿಡಿದು ಅಕ್ಕಚ್ಚು ತಂದು ಮನೆಲಿಪ್ಪ ಕಪಿಲ್ದಿ ದನಕ್ಕೆ ಕೊಡೊಗು. ದನದ ಮೇಲಣ ಪ್ರೀತಿಂದ ಅವನ ಮೇಲೆಯೂ ಊರವಕ್ಕೆ ಪ್ರೀತಿ. ಹಾಂಗಾಗಿ ಹೆಸರು ಕೂಡಾ ಅಕ್ಕಚ್ಚು ಭಾವ ಹೇಳಿ. ಪಾಚತ್ತೆಯ ಅವ° ಕಟ್ಟಿಗೊಂಡು ಈಗಂಗೆ ಮೂವತ್ತೈದು ವರ್ಷ ಅಕ್ಕು. ಮದುವೆ ಆಗಿ ಹತ್ತು ವರ್ಷ ಮಕ್ಕ ಆಯಿದಿಲ್ಲೆ. ಹೇಳದ್ದ ಹರಕ್ಕೆ ಇಲ್ಲೆ. ಹೋಗದ್ದ ದೇವಸ್ಥಾನ ಇಲ್ಲೆ. ಕುಡಿಯದ್ದ ಕಷಾಯ ಇಲ್ಲೆ. ಮಾಡದ್ದ ಮದ್ದು ಇಲ್ಲೆ. ಹಿಡಿಯದ್ದ ಕಾಲು ಇಲ್ಲೆ. ಆರೋ ಹೇಳಿದವಡ, ಉಪ್ಪಿನಂಗಡಿ ಹತ್ರಣ ಕಾಂಚನದ ಹತ್ರೆ ಒಂದು ಪೂಜಾರ್ತಿ ಮಕ್ಕ ಆಗದ್ದವಕ್ಕೆ ಮದ್ದು ಕೊಡ್ತು ಹೇಳಿ. ಹಾಂಗೆ ಅಲ್ಲಿ ಹೋಗಿ ಬಂದು ಎರಡೇ ತಿಂಗಳಿಲಿ ಪಾಚತ್ತೆ ಬಸಳೆ ದೊಂಪದ ಬುಡಲ್ಲಿ ಕೂದು ವಾಕರಿಕೆ ಮಾಡಿ ಕಕ್ಕಿದ್ದು ಹತ್ರಣ ಮನೆಯವಕ್ಕೇ ಮೊದಲು ಗೊಂತಾದ್ದು. ಅಕ್ಕಚ್ಚು ಭಾವಂಗೂ ಅಷ್ಟೇ. ಮಕ್ಕ ಇಲ್ಲೆಯಾ ಹೇಳಿ ಜನ ಕೇಳಿ ಕೇಳಿ ಸಾಕಾಯ್ದು. ಹಾಂಗಾಗಿ ಇಡೀ ಊರಿಂಗೆ ಗೊಂತಾಗಲಿ ಹೇಳಿ ಕಕ್ಕುವ ಶಬ್ದ ಕೇಳಿದರೂ ಒಳ ಒಳವೇ ಖುಷಿ ಪಟ್ಟು ರಜ ಹೊತ್ತು ಬಿಟ್ಟೇ ಸುಂಯ್ ಸುಂಯ್ ಹೇಳಿ ದಮ್ಮು ತೆಕ್ಕೊಂಡು ಹೋದ°.
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ, ನಾ ತಡಿಲಾರೆ ಅದು ಯಾಕ ನೋಡತೀ, ಮತ್ತ ಮತ್ತ ನೀ ಇತ್ತ |ತಂಬಳ ಹಾಕದ ತುಂಬಾ ಕೆಂಪು ಗಿಣಿ ಗದಕ ಹಣ್ಣಿನ ಹಂಗ| ಇದ್ದಂತ ತುಟಿಯ ಬಣ್ಣೆತ್ತ ಹಾರಿತು, ಯಾವ ಘಳಿಗೆ ಹಿಂಗ?
ಪದ್ಯ ಸಣ್ಣಕ್ಕಾದರೂ ರೇಡಿಯಲ್ಲಿ ಕೇಳಿಗೊಂಡೇ ಇತ್ತು. . . ಹೆಣ್ಣು ಹೆತ್ತತ್ತು ಹೇಳಿ ಹಂಗುಸುಲೆ ಅತ್ತೆ ಇಲ್ಲೆ. ಹಾಂಗಾಗಿ ಮನಗೆ ಐಶ್ವರ್ಯ ಬಂದಾಂಗೆ ಆತು ಹೇಳಿ ಹಾಂಗೇ ಹೆಸರು ಮಡಗಿದವು. ನೆಲಲ್ಲಿ ಮಡುಗಿದರೆ ಕಾಗೆ ಕೊಂಡೋವ್ತು, ಮೇಲೆ ಮಡುಗಿದರೆ ಕುದ್ಕ ಕೊಂಡೋವ್ತು ಳಿ ಜಾಗ್ರತೆಲಿ ಸಾಂಕಿದವು. ಮಗಳ ಕಾನ್ವೆಂಟಿಂಗೆ ಹಾಕೆಕ್ಕು ಹೇಳಿ ಗೆಂಡ ಹೆಂಡತ್ತಿ ಇಬ್ರುದೇ ಇರುಳಣ ಊಟ ಬಿಟ್ಟವು, ಅದರಲ್ಲಿ ಒಳುದ ಪೈಸವ ಫೀಸ್ ಕಟ್ಟಿದವು. ತಮಿಳುನಾಡಿನ ಬಡ್ಡಿ ವ್ಯಾಪಾರಿಗಳತ್ರೆ ಸಾಲ ಮಾಡಿ ೧೦ನೇ ವರೆಗೆ ಓದ್ಸಿದವು. ಇನ್ನು ಕೈಲಿ ಆವ್ತಿಲ್ಲೆ ಹೇಳಿ ಅಕ್ಕಚ್ಚು ಭಾವ ಕೈ ಚೆಲ್ಲಿದ°. ಆದರೆ ಐಶ್ವರ್ಯ ಅಪ್ಪ ಅಮ್ಮನ ಪ್ರೀತಿ ಕಷ್ಟ ಬೇನೆ ಅರ್ಥೈಸಿ ಒಳ್ಳೆ ಮಾರ್ಕ್ ತೆಗತ್ತು. ಕಾಲೇಜಿಲಿ ಫ್ರೀ ಸೀಟು ಸಿಕ್ಕಿತ್ತು. ಸೈನ್ಸೇ ಆಯೆಕ್ಕು ಹೇಳಿ ಹಠ ಮಾಡಿ ಅದರಲ್ಲೂ ಮಾರ್ಕು ತೆಗತ್ತು. ಇಂಜಿನಿಯರಿಂಗ್ ಮಾಡ್ಸುದು ಕನಸೇ ಸರಿ. ಅಟ್ಟಲ್ಲಿ ಕಟ್ಟಿ ಮಡುಗಿದ ಅಡಕ್ಕೆಯೂ ಇಲ್ಲೆ, ಮಾರುವ ಹೇಳಿದರೆ ತೋಟವೂ ಇಲ್ಲೆ. ಕೆದೆಲಿ ಕಟ್ಟಿದ ಒಂದು ದನವೇ ಅಷ್ಟೋ ಇಷ್ಟೋ ಖರ್ಚಿಗೆ ಪೈಸ ತಪ್ಪದು. ಅವರಿವರ ಮನಗೆ ಅಡಕ್ಕೆ ಸೊಲಿವಲೆ ಹೋಗಿ ಉಂಬಲೆ ತಪ್ಪದು. ಹಾಂಗಿಪ್ಪಗ ಇಂಜಿನಿಯರಿಂಗ್. ಓ ದೇವಾ ಎನಗೆ ಎಂತಕೆ ಹೀಂಗಿಪ್ಪ ಶಿಕ್ಷೆ ಕೊಡ್ತೆ. ಶಿವರಾತ್ರಿ ದಿನ ನಿನ್ನ ದೇವಸ್ಥಾನಲ್ಲಿ ಒಂದು ಸುತ್ತು ಹಾಕಿದ ಪುಣ್ಯವಾದರೂ ಎನಗೆ ಇದ್ದೂಳಿ ಆದರೆ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡೆಡ, ಸಹಾಯ ಮಾಡು ಹೇಳಿ ಪ್ರಾರ್ಥನೆ ಮಾಡಿ ತುಳಸಿಗೆ ನೀರು ಎರದ°.
ಈ ಗತ್ತಗಲ್ಲ ಹನಿ ಕಣ್ಣು ಕಂಡು, ಮಾರಿಗೆ ಮಾರಿಯ ರೀತಿ, ಸವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ,ನೀ ಹಿಂಗ ನೋಡಬ್ಯಾಡ ನನ್ನ . . .
ಪದ್ಯ ಮುಗುದ್ದಿಲ್ಲೆ. ಆ ದಿನ ಹೊತ್ತೋಪಗ ನಿಜಕ್ಕೂ ಒಳ್ಳೆ ಸುದ್ದಿ ಕೇಳಿದ°. ಸಿಇಟಿಲಿ ನೂರರ ಒಳ ರೇ೦ಕು ಬಂದಿತ್ತು. ಹಾಂಗಾಗಿ ಒಳ್ಳೆ ಕಾಲೇಜಿಲಿ ಸೀಟು ಅದೂ ಗಾರ್ಮೆಂಟು ಸೀಟು ಸಿಕ್ಕುತ್ತು ಹೇಳಿ ಐಶ್ವರ್ಯ ಹೇಳಿತ್ತು. ದಾವಣಗೆರೆಲಿ ಕಾಲೇಜು ಹೇಳಿ ಆತು. ಖರ್ಚಿಗೆ ಬೇಕನ್ನೆ ಹೇಳಿ ಪಾಚತ್ತೆ ಅದರ ಹಳತ್ತು, ಇದ್ದ ಒಂದೇ ಒಂದು ಕರಿಮಣಿಯ ಮಾರಿ ಪೈಸ ಒಟ್ಟು ಮಾಡಿತ್ತು. ಅಕ್ಕಚ್ಚು ಭಾವನತ್ರೆ ಒಟ್ಟೆ ಚೆಂಬು ಕೂಡಾ ಇಲ್ಲೆ ಹೇಳಿ ಅದಕ್ಕೆ ಗೊಂತಿದ್ದು. ಮಗಳ ಕಾಲೇಜು ವಿದ್ಯಾಭ್ಯಾಸ ಮುಗಿವ ಮೊದಲೇ ಉಬ್ಬಸ ಖಾಯಿಲೆಂದ ಅಕ್ಕಚ್ಚು ಭಾವ ಈ ಲೋಕ ಬಿಟ್ಟು ಪಾಚತ್ತೆಯ ಮುಂಡೆ ಮಾಡಿದ°.
—
ಇಬ್ಬನಿ ತೊಳೆದರು ಹಾಲು ಮೆಟ್ಟಿದ ಕವಲಿ ಕಾಂತಿಯ ಹಣ್ಣು | ಹೊಳೆ ಹೊಳೆವ ಹಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು . .
ಪದ್ಯ ಆಯ್ಕೊಂಡೇ ಇತ್ತು. ಮಗಳು ಈಗೀಗ ಪೈಸ ಕೇಳ್ತಿಲ್ಲೆ. ಖರ್ಚಿಗೆ ಎಂತ ಮಾಡ್ತು ಗೊಂತಿಲ್ಲೆ. ಕೇಳಿದರೆ ಫ್ರೆಂಡ್ಸ್ ಕೊಡ್ತವು ಹೇಳ್ತು. ಅಷ್ಟು ಖರ್ಚು ,ಮಾಡುವ ಫ್ರೆಂಡ್ಸ್ ಆರಪ್ಪ ಈ ದರಿದ್ರ ಕುಟುಂಬಲ್ಲಿ ಹುಟ್ಟಿದ ಕೂಸಿಂಗೆ ಹೇಳಿ ಗ್ರೇಶಿಗೊಂಡು ತಲೆ ಬಾಚಿಗೊಂಡು ಒಂದೊಂದೇ ಹೇನು ಕುಟ್ಟಿಗೊಂಡಿತ್ತು ಪಾಚತ್ತೆ.
—
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ, ಹುಣ್ಣಿಮಿ ಚಂದಿರನ ಹೆಣ ಬಂತೋ ಮುಗಿಲಾಗ ತೆಲತಾ ಹಗಲ.. .
ಪದ್ಯ ಮುಂದುವರ್ದು. ಕ್ಯಾಂಪಸ್ ಸೆಲೆಕ್ಷನ್ನಿಲಿ ಐಶ್ವರ್ಯಂಗೆ ಒಳ್ಳೆ ಕಂಪನಿಯೇ ಸಿಕ್ಕಿತ್ತು. ಇನ್ನು ಎನ್ನ ಕಷ್ಟದ ದಿನಂಗ ಎಲ್ಲ ದೂರ ಆತು ಹೇಳಿ ಗ್ರೇಶಿದ ಪಾಚತ್ತೆ ದೇವರ ಫೊಟೊದ ಹತ್ತರೆ ತುಪ್ಪದ ದೀಪ ಹೊಸ್ಸಿತ್ತು. ಮೂರು ಸರ್ತಿ ನಮಸ್ಕಾರ ಮಾಡಿತ್ತು. ಮಗಳು ಬಂತು. ಖುಷಿಲಿ ಗಟ್ಟಿ ಹಿಡ್ಕೊಂಡತ್ತು. ಪಾಚತ್ತೆಗೆ ಗೊಂತೇ ಇಲ್ಲ. ಮಗಳು ಕೂಗೆಡ ಅಮ್ಮ ಹೇಳಿ ಹೇಳಿ ಕಣ್ಣೊರೆಸುವಾಗಳೇ ಗೊಂತಾದ್ದು ಕಣ್ಣಿಂದ ಬಿದ್ದ ಹನಿ ಹನಿ ನೀರು ಮಗಳ ತಲೆಯ ಮೇಲೆ ಕೆಸವಿನ ಎಲೆಯ ಮೇಲೆ ಹನಿ ಕೂದ ಹಾಂಗೆ ಆಯಿದು ಹೇಳಿ. ಇದು ಖುಷಿಲಿ ಬಂದ ಕಣ್ಣ ಹನಿಯಾ, ದುಃಖ ತಡೆಯದ್ದೆಯಾ ಗೊಂತಿಲ್ಲೆ. ಇಷ್ಟಕ್ಕೂ ಇದೆಲ್ಲ ಸಂಭ್ರಮ ನೋಡ್ಲೆ ಅಕ್ಕಚ್ಚು ಭಾವ ಮೊದಲೇ ಹೋಗಿ ಸ್ವರ್ಗಲ್ಲಿ ಜಾಗೆ ರಿಸರ್ವ್ ಮಾಡಿ ಮಡುಗಿದ್ದ. ನಾಳೆ ಅಪ್ಪನ ತಿಥಿ. ಕಾಗಗೆ ಅಶನ ಮಡುಗೆಕ್ಕು ಹೇಳಿ ಪಾಚತ್ತೆ ಹೇಳಿತ್ತು. ಅಪ್ಪನ ಬೆಗರಿಳುದು ಆದ ಕಪ್ಪು ಜನಿವಾರವನ್ನೂ, ಅಕ್ಕಚ್ಚು ತಪ್ಪಲೆ ಹೋಪಗ ತಲಗೆ ಕಟ್ಟಿಗೊಂಬ ಬರಾಸನ್ನೂ ಗ್ರೇಶಿ ಐಶ್ವರ್ಯಂಗೂ ಕಣ್ಣು ತುಂಬಿತ್ತು. ಪಾಚತ್ತೆಗೆ ಎರಡು ದಿನ ಇಡೀ ಊರಿಲಿ ಬೇರೆ ಕೆಲಸವೇ ಇಲ್ಲೆ. ಮಗಳಿಂಗೆ ಕಂಪನಿಲಿ ಕೆಲಸ ಸಿಕ್ಕಿದ್ದೇ ಸುದ್ದಿ. ಊರಿನ ಹೆಮ್ಮಕ ಮುಸುಡು ತಿರುಗ್ಸಿದವು. ಪಾಚತ್ತೆ ಕೊಡುವ ಇಷ್ಟು ಒಳ್ಳೆ ಸುದ್ದಿ ಅವಕ್ಕೆ ಅಗತ್ಯ ಇಲ್ಲೆ. ಮಗಳು ಆರ ಒಟ್ಟಿಂಗಾದರೂ ಓಡಿ ಹೋದರೆ ಅದು ಅವಕ್ಕೆ ಗುಸುಗುಸು ಮಾತಾಡ್ಲೆ ಸುದ್ದಿ.
——
ಅಟ್ಟುಂಬಳಲ್ಲಿ ಕೂದುಗೊಂಡು ಊರ ಹೆಮ್ಮಕ್ಕ ನಾಕು ಜನ, ನಿನಗೆ ವಿಷಯ ಗೊಂತಿದ್ದಾ… ಪಾಚತ್ತೆ ಮಗಳು ಕಾಗದ ಬರೆಯದ್ದೆ ನಾಲ್ಕು ತಿಂಗಳಾತಡಾ. ಸಣ್ಣಕ್ಕ ಹೇಳಿದ್ದು ಒಳಾಣ ಕೋಣೆಲಿ ತೆಳ್ಳವು ಎರಕ್ಕೊಂಡಿದ್ದ ಹೆಮ್ಮಕ್ಕೊಗೆ ಕೇಳಿದ್ದಿಲ್ಲೆ. “ಎಂತಾ ಪಾಚತ್ತೆ ಮಗಳಿಂಗೆ ನಾಕು ತಿಂಗಳಾ ?” ಕೇಳಿಯೇ ಬಿಟ್ಟತ್ತು. ಆಗದ್ದೇ ಇಕ್ಕ. ಆರೊಟ್ಟಿಂಗೆ ಹೋಯಿದಾ ಏನೋ. ಜಾತಿಯಾ ನೀತಿಯಾ. ಈಗಣ ಕಲ್ತ ಕೂಸುಗೊಕ್ಕೆ. ಎಲ್ಲ ನಮ್ಮ ಕಾಲಕ್ಕೆ ಆತು ಅಕ್ಕ. ಅಬ್ಬೆ ಅಪ್ಪ ನೋಡಿದ ಮಾಣಿಯ ತಲೆ ಆಡ್ಸದ್ದೇ ಮದುವೆ ಅಪ್ಪದು. ಜೀವನ ಪೂರ್ತಿ ಅವರ ಚಾಕರಿ ಮಾಡಿಗೊಂಡು ಮಕ್ಕಳ ಕುಂಡೆ ತೊಳಕ್ಕೊಂಡು ಕೂಪದು. ಈಗ ಹಾಂಗೆಲ್ಲ ಇಲ್ಲೆಳಿ ಹೇಳಿತ್ತು. ಹಾಂಗಲ್ಲ ಮಾರಾಯ್ತಿ ಕಾಗದ ಹಾಕದ್ದೆ ನಾಲ್ಕು ತಿಂಗಳಾತು ಹೇಳಿ ಅದರ ಸುಮ್ಮನಾಗ್ಸಿದವು. ಅಷ್ಟೇಯೋ ಹೇಳಿ ಅದು ಒಳ ಹೋಗಿ ಬೆಲ್ಲ ನೀರಿನ ಕಾಫಿ ಮಾಡ್ಲೆ ಶುರು ಮಾಡಿತ್ತು.
—–
ಕೆಲಸ ಹೇಳಿ ಹೋದ ಮಗಳು ಕೆಲವು ತಿಂಗಳು ಪೈಸ ಕಳುಸಿಗೊಂಡಿತ್ತು. ಹಾಂಗಾಗಿ ಮಾಡಿದ ಸಾಲ ರಜ ಕಮ್ಮಿ ಆತು. ಮುಂದಣ ಸರ್ತಿ ಸ್ಕೀಮಿಲಿ ಹೊಸ ಸೀರೆ ತೆಕ್ಕೊಳೆಕ್ಕು ಹೇಳಿ ಪಾಚತ್ತೆ ಜಾನ್ಸಿತ್ತು. ಅದರ ಎಡೆಲಿ ರಜ್ಜ ಉಬ್ಬಸ ಅದಕ್ಕೂ ಬಂದಾಂಗೆ ಇತ್ತು. ಹಾಂಗಾಂಗಿ ಹತ್ರಣ ಮನೆ ಕೂಸಿನ ಹತ್ರೆ ಮಗಳಿಂಗೆ ಕಾಗದ ಬರೆಶಿತ್ತು. ಆದರೆ ದಿನ ಕೆಲವು ಕಳುದರೂ ಉತ್ತರ ಬಂದಿಲ್ಲೆ. ಎಡ್ರೆಸ್ ತಪ್ಪಿಕ್ಕೂಳಿ ಗ್ರೇಶಿ ಬೇರೆಯೋರ ಹತ್ರೆ ಬರೆಶಿತ್ತು. ಅದಕ್ಕೂ ಎಂತ ಸುದ್ದಿ ಇಲ್ಲೆ. ಎಂತಾತು ಮಗಳಿಂಗೆ ಹೇಳಿ ಹುಡ್ಕಿಗೊಂಡು ಹೋಪ ಹೇಳಿರೆ ಮಗಳಿದ್ದದು ಹೈದ್ರಾಬಾದಿಲಿ. ಭಾಷೆ ಬತ್ತಾ. ಕೈಲಿ ಪೈಸವೂ ಮುಗುದ್ದು. ಅಂಗಡಿ ಕೊಂಬತ್ತನತ್ರೆ ಸಾಲ ತೆಕ್ಕೊಂಡು ಚೀಟಿಲಿ ಎಡ್ರೆಸ್ ಹಿಡ್ಕೊಂಡು ಹೈದ್ರಾಬಾದ್ ರೈಲು ಹತ್ತಿತ್ತು.
ಊರೀಡಿ ಹುಡ್ಕುವಗ ಮಗಳು ಕೆಲಸ ಮಾಡ್ತಿದ್ದೆ ಹೇಳಿದ ಕಂಪನಿ ಸಿಕ್ಕಿತ್ತು. ಅಲ್ಲಿ ಸೆಕ್ಯುರಿಟಿ ಗಾರ್ಡ್ ಒಳ ಬಿಟ್ಟಿದಿಲ್ಲೆ. ನಟ್ಟುವವು ಹೇಳಿ ದೂರ ಓಡ್ಸಿತ್ತು. ಭಾಷೆ ಗೊಂತಿಲ್ಲೆ, ಹೇಳುದು , ಕೇಳುದು ಹೇಂಗೆ. ಆಟಿನ ಕನ್ನಡ ಆ ತೆಲುಗಂಗೆ ಎಂತ ಗೊಂತಾವ್ತು. ಓಡ್ಸಿತ್ತು ಅತ್ಲಗಿ. ಹೊತ್ತೋಪಗವರೆಗೆ ಗೇಟಿನ ಬುಡಲ್ಲಿ ಕಾದತ್ತು. ಗೇಟಿನ ಒಳಂದ ಬೇರೆ ಬೇರೆ ಕಾರು, ಟೆಂಪೋಲಿ ಜನ ಹೋದವು. ಮಗಳು ಸಿಕ್ಕಿದ್ದಿಲ್ಲೆ. ಮನುಗುದು ಎಲ್ಲಿ. ಅಲ್ಲಿ ಕೂಪಲೂ ಬಿಟ್ಟವಿಲ್ಲೆ. ರಜ ದೂರ ಹೋಗಿ ಸಿಕ್ಕಿದ ಮೋರಿಯ ಅಡಿಲಿ ಮನುಗಿತ್ತು. ಮರದಿನವೂ ಅದೇ ಪ್ರಯತ್ನ. ಏನೂ ಫಲ ಕೊಟ್ಟಿದಿಲ್ಲೆ. ರೈಲ್ವೇ ಸ್ಟೇಶನ್ಲಿ ವಾಪಾಸು ಊರಿಂಗೆ ಹೋಪದು ಹೇಳಿ ಬಂತು. ಪೈಸ ಇಲ್ಲೆ. ಭಿಕ್ಷೆ ಬೇಡಿತ್ತು. ಊರಿಂಗೆ ಬಂದರೆ ಸ್ಮಶಾನ ಮೌನ.
—
ವರ್ಷ ಕೆಲವು ಕಳುತ್ತು. ಜೀವ ಇದ್ದೂಳಿ ಅಷ್ಟೇ. ಮಗಳು ಬಕ್ಕೂಳಿ ಜೀವನ ಮಾಡಿಗೊಂಡಿತ್ತು.
ಅತ್ತರೆ ಅತ್ತು ಬಿಡು ಹೊನಲು ಬರಲಿ , ನಾಕ್ಯಾಕ ಮರಸತಿ ದುಃಖ. ಎದೆ ಬಿರಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ. ನೀ ಹಾಂಗೆ ನೋಡಿದರೆ ನನ್ನ ತಿರುಗಿ ನಾ ಹೇಂಗೆ ನೋಡಲಿ ನಿನ್ನ. . .
ರೇಡಿಯೊದ ಪದ್ಯ ಮುಗಿವದುದೆ ಪಾಚಕ್ಕ ಮನುಗಿದ್ದು ಏಳದ್ದುದೇ ಸರಿ ಆತು. ಮರದಿನ ಹತ್ರಣ ಮನೆಯವ್ವೇ ಎಲ್ಲ ಶಾಸ್ತ್ರ ಮಾಡಿದವು.
—-
ಪಾಚತ್ತೆ ಸತ್ತು ಇಂದಿಂಗೆ ೪೫ ದಿನ ಆತು ಹೇಳುವಾಗ ಕಿಟ್ಟಣ್ಣ ಭಾವನ ಮನೆಯ ಕಾಲಿಂಗ್ ಬೆಲ್ ಆತು. ಜೀನ್ಸ್ ಪ್ಯಾಂಟ್ ಹಾಕಿದ ಒಂದು ಹೆಮ್ಮಕ್ಕ ಕೂಲಿಂಗ್ ಗ್ಲಾಸ್ ತಲೆಗೆ ಏರ್ಸಿತ್ತು. ಹತ್ತರೆ ಒಬ್ಬ ನಿಂದೊಂಡು ಇತ್ತಿದ್ದ. ದೂರಲ್ಲಿ ಕಾರು ಇತ್ತು. ಇಲ್ಲಿ ಪಾಚತ್ತೆ ಮನೆ ಎಲ್ಲಿ ಹೇಳಿ ಕನ್ನಡಲ್ಲಿ ಕೇಳಿದವು. ಅವಕ್ಕೆ ಗುರ್ತ ಆಯಿದಿಲ್ಲೆ ಹೇಳಿ ಅಂದಾಜಪ್ಪಗ ಆನು ಐಶ್ವರ್ಯ ಹೇಳಿ ಪರಿಚಯ ಹೇಳಿತ್ತು. ಅವು ಇಬ್ರುದೇ ಮೇಲೆ ಮಹಡಿ ಮನೆ ಕಟ್ಟಿದ್ದವುಳಿ ಹೇಳಿಕ್ಕಿ ಕಿಟ್ಟಣ್ಣ ಬಾಗಿಲು ಹಾಕಿದ. ಇಷ್ಟು ಸಮಯ ಹೆತ್ತಬ್ಬೆಯ ಮರದು ಬೇರೆ ಜಾತಿಯ ಹುಡುಗನ ಕಟ್ಟಿಗೊಂಡು ಸತ್ತ ಮೇಲೆ ಹುಡ್ಕಿಗೊಂಡು ಬಂದ ಐಶ್ವರ್ಯನ ಮೇಲೆ ಅವಂಗೆ ಅಸಹನೆ ಉಂಟಾಯ್ದೂಳಿ ಬಾಗಿಲು ಹಾಕಿದ್ದರಲ್ಲೇ ಗೊಂತಾತು. ಉಂಬಲೆ ಗತಿ ಇಲ್ಲದ್ರುದೇ ಮಾನ ಮರ್ಯಾದೆಗೆ ಹೆದರಿಗೊಂಡಿದ್ದ ಅಮ್ಮ ಮಗಳು ಬೇರೆ ಜಾತಿಯವನ ಕಟ್ಟಿಗೊಂಡ್ರೆ ಸುಸೈಡ್ ಮಾಡಿಗೊಂಗು ಹೇಳಿ ಗುಟ್ಟು ಮಾಡಿದ್ದು ಇಂದು ಇಂಥ ಸ್ಥಿತಿಗೆಕಾರಣ ಆತು.
ಅಷ್ಟೊತ್ತಿಂಗೆ ಐಶ್ವರ್ಯನ ಮಗಳು ಕೇಳಿತ್ತು – “ಮಮ್ಮಿ ನಿನ್ಯಾವಾಗ ಅಪ್ಪನ ಒಟ್ಟಿಂಗೆ ಮಹಡಿ ಮನೆ ಕಟ್ಟುದು” !!
ಶಾಸ್ತ್ರಿಗಳೇ ಕಥೆ ರೈಸಿದ್ದು.ಅಭಿನಂದನೆ.
ಲಕ್ಷ್ಮಿ ಅಕ್ಕ, ಅಲ್ಲ ಅಲ್ಲ, ಅಣ್ಣ, ಕಥೆ ಸೂಪರ್ ಆಯಿದು. ಬೇಂದ್ರೆ ಅಜ್ಜನ ಕವನವ ಎಡೆ ಎಡೆಲಿ ಪೋಣಿಸಿ ಬರದ ಶೈಲಿ ಸುಂದರ. ಕಥಾ ವಸ್ತು ಬದುಕಿಂಗೆ ತುಂಬಾ ಹತ್ರ ಇದ್ದು. ಗ್ರೇಶಿಅಪ್ಪಗ ತುಂಬಾ ಬೇಜಾರಾತು. ಅಭಿನಂದನೆಗೊ.
ಭಿನ್ನ ನಿರೂಪಣೆಯ ಕಥೆ ಪಷ್ಟಾಯಿದು.. ಅಭಿನಂದನೆಗೋ…
ಹೊಸತನದ ಕಥೆ.ಲಾಯಿಕಾಯಿದು.
ಹೊಸ ಶೈಲಿಲಿ ಕಥೆ ಲಾಯಿಕಾಯಿದು .ಅಭಿನಂದನೆಗೊ
ಕತೆ ಲಾಯ್ಕಾಯಿದು – ಅಭಿನಂದನೆಗೊ.
ಪತ್ರಕರ್ತರಾಗಿಪ್ಪ ಲಕ್ಷ್ಮಿ ಮಚ್ಸಿನರ ಲೇಖನಂಗಳ ಪರಿಚಯ ಇತ್ತು, ಈಗ ತಾನು ಒಳ್ಳೆ ಕತೆಗಾರನೂ ಅಪ್ಪು ಹೇಳಿ ನಿರೂಪಿಸಿದ್ದವು. ಒಳ್ಳೆ ತಂತ್ರಗಾರಿಕೆ.
ಲಾಯಕ ಆಯಿದು ಕತೆ. ನಮ್ಮ ಸಮಾಜಲ್ಲಿ ಅನಿವಾರ್ಯವೋ ಏನೋ ಹೇಳಿ ನಡೆವ ವಿಷಯ ಎತ್ತಿ ಬರೆದ್ದು ಒಳ್ಳೆದಾಯಿದು. ಅದಕ್ಕೆ ಬೇಂದ್ರೆಯ ಸಾಲುಗಳ ಜೋಡಿಸಿದ್ದು ಮೆರುಗು ಕೊಟ್ಟಿದು . ಬೇಂದ್ರೆ ಇದರ ಬರೆದ್ದು ಬೇರೆ ಸಂದರ್ಭಲ್ಲಿ .ಅವಕ್ಕೆ ಹುಟ್ಟಿದ ಮಗು ಸತ್ತ ಸಂದರ್ಭಲ್ಲಿ ಅಡ. ಆದರೆ ಇದು ಈ ಕತೆಗೂ ಹೊಂದಿಕೆ ಆಯಿದು.ಅಭಿನಂದನೆ ಮಚ್ಚಿನದ ಅಣ್ಣ .
ವಿಶಿಷ್ಟ ನಿರೂಪಣಾ ತಂತ್ರದ ಒಟ್ಟಿಂಗೆ ನಮ್ಮ ಸಮಾಜಲ್ಲಿ ನೆಡೆತ್ತಾ ಇಪ್ಪ ವಿಷಯವ ಕಥಾವಸ್ತುವಾಗಿ ತೆಕ್ಕೊಂಡು ಬರದ ಈ ಕಥೆ ನಿಜಕ್ಕೂ ಜಯಿಸಿದ್ದು . ಲಕ್ಷ್ಮೀ ಮಚ್ಚಿನರು ಪತ್ರಕರ್ತರಾಗಿ ಹೆಸರು ಮಾಡಿದವು ,ಒಳ್ಳೆ ಕಥೆಗಾರರೂ ಅಪ್ಪು ಹೇಳಿ ಗೊಂತಾತು. .ಅಭಿನಂದನೆಗೋ .